ಬೆಂಗಳೂರು: ಕರಾವಳಿಯ ಉತ್ತರಕನ್ನಡದಲ್ಲಿ ನಿರಂತರ ಮಳೆಯಿಂದಾಗಿ (Karnataka Weather Forecast) ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು (Rain News) ಗಂಭೀರಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಹೊನ್ನಿಕೊಪ್ಪದಲ್ಲಿ ಘಟನೆ ನಡೆದಿದೆ. ಅಟೆಲ್ ಸಾಬ್ ಅತ್ತಾರ್ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಪಕ್ಕದ ಮನೆಯ ಸಾತವ್ವ ಭೀಮಣ್ಣ(50) ಎಂಬುವವರಿಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್
ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿದ್ದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಎರಡನೇ ಬಾರಿಗೆ ಕುಡಚಿ ಉಗಾರಖುರ್ದ್ ಮಧ್ಯದ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಸೇತುವೆ ಇದಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿರೋ ಸೇತುವೆಯಲ್ಲಿ ನಿತ್ಯ ನೂರಾರು ಬಸ್ ಹಾಗೂ ವಾಹನಗಳು ಓಡಾಡುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಬಾಗಲಕೋಟೆ, ಜಮಖಂಡಿಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕಿಸಲಿದೆ. ಕುಡಚಿ ಠಾಣಾ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸೇತುವೆಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಯಲ್ಲಮ್ಮ ದೇವಸ್ಥಾನ ಜಲಾವೃತ
ಮಹಾರಾಷ್ಟ್ರದ ಪುಣೆಯಲ್ಲಿ ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ಮೀರ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಕಲಬುರಗಿಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಸ್ಥಾನ ಜಲಾವೃತಗೊಂಡಿದೆ. ಸೊನ್ನ ಬ್ಯಾರೆಜ್‌ನಿಂದ ಭೀಮಾನದಿಗೆ 1 ಲಕ್ಷ 20 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಇತ್ತ ಮಹಾರಾಷ್ಟ್ರದ ಮಹಾಮಳೆಗೆ ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಳಗೊಂಡಿದೆ. ಭೀಮಾ ನದಿ ಒಡಲು ಅಪಾಯದ ಮಟ್ಟ ಮೀರಿ ಉಕ್ಕಿಹರಿಯುತ್ತಿದೆ. ಭೀಮಾನದಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್‌ನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಭೀಮಾ ನದಿ ತೀರದ ದೇಗುಲಗಳು ಜಲಾವೃತಗೊಂಡಿದೆ. ವಿರಾಂಜನೇಯ ಹಾಗೂ ಕಂಗಳೇಶ್ವರ ಎರಡು ದೇವಾಲಯಗಳು ಮುಳುಗಡೆಯಾಗಿದೆ. ಇತ್ತ ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದರೂ ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಬ್ಯಾರೇಜ್ ಮುಂಭಾಗದ ಭೀಮಾ ನದಿ ತೀರದಲ್ಲಿಯೇ ಮೀನು ಹಿಡಿಯುವ ಹುಚ್ಚು ಸಾಹಸ ಮಾಡುತ್ತಿದ್ದಾರೆ.
ದಾವಣಗೆರೆಯಲ್ಲಿ ತುಂಗಾ ನಾಲೆ ಒಡೆದು ಸಾವಿರಾರು ಎಕರೆ ಬೆಳೆ ನಾಶ
ದಾವಣಗೆರೆಯಲ್ಲಿ ತುಂಗಾ ನಾಲೆ ಒಡೆದು ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಬೆಳೆ ನೀರು ಪಾಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡ ರೈತರು ಆತಂಕದಲ್ಲಿದ್ದಾರೆ. ನ್ಯಾಮತಿ ತಾಲೂಕಿನ ಬಸವನಹಳ್ಳಿಯಲ್ಲಿನ ತುಂಗಾ ಕಾಲುವೆ ಒಡೆದ ಪರಿಣಾಮ ಬೆಳೆಗಳು ಜಲಾವೃತಗೊಂಡಿದೆ. ತುಂಗಾ ಮೇಲ್ದಂಡೆ ನಾಲೆ ಒಡೆದು ಸಾವಿರಾರು ಎಕರೆ ಜಮೀನು ಜಲಾವೃತ ಪರಿಣಾಮ ರೈತರಲ್ಲಿ ಆತಂಕ ಹೆಚ್ಚಿದೆ. ಮಣ್ಣು ಸಮೇತ ಜಮೀನುಗಳಿಗೆ ಕಾಲುವೆ ನೀರು ನುಗ್ಗಿ, ಅಡಿಕೆ, ತೆಂಗು, ಭತ್ತ, ಹತ್ತಿ ಸೇರಿದಂತೆ ಅನೇಕ ತರಕಾರಿ ಬೆಳೆ ಕಳೆದುಕೊಂಡಿದ್ದಾರೆ.
ಕರಾವಳಿಗೆ ಭಾರಿ ಮಳೆ ಎಚ್ಚರಿಕೆ
ಆಗಸ್ಟ್ 29ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಬೆಳಗಾವಿ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿ.ಮೀ ಸಂಭವಿಸುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಬರುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ