ತಜ್ಞರು ಹೇಳುವ ಪ್ರಕಾರ, ಕಾಮನ್ ಸೆನ್ಸ್ ಪ್ರಕಾರ ಕೂಡ, ಪುರುಷರಲ್ಲಿ ಹೃದಯಾಘಾತ ಹೆಚ್ಚು. ಮಹಿಳೆಯರಲ್ಲಿ ಕಡಿಮೆ. ಆದರೆ ಈ ನಂಬಿಕೆಯನ್ನು ಮರಳಿ ಪರಿಶೀಲಿಸಬೇಕಾದ ಕಾಲ ಬಂದಿದೆ. ಮುಂಬಯಿಯ ಕಾರ್ಡಿಯಾಲಜಿಸ್ಟ್ ಅಜಯ್ ಚೌರಾಸಿಯಾ ಎಂಬವರು ಹೇಳುವಂತೆ, 1990ರಲ್ಲಿ ಈ ಪ್ರಮಾಣ 80:20ರಷ್ಟಿರಬಹುದು. ಆದರೆ 2000ದ ಹೊತ್ತಿಗೆ ಅದು 60:40ಕ್ಕೆ ಬಂದಿತ್ತು. ಈಗ ಅದು ಬಹುತೇಕ ಸಮ ಸಮ ಪ್ರಮಾಣದಲ್ಲಿಯೇ ಇರಬಹುದು.
ಮೂವತ್ತು ವರ್ಷ ಪ್ರಾಕ್ಟೀಸ್ ಮಾಡಿರುವ ಕಾರ್ಡಿಯಾಲಜಿಸ್ಟ್ಗಳ ಪ್ರಕಾರ, ಮೂರು ದಶಕಗಳ ಹಿಂದೆ ನಾಲ್ಕು ತಿಂಗಳಿಗೊಮ್ಮೆ ಒಬ್ಬ ಮಹಿಳೆ ಹೃದಯದ ಸಮಸ್ಯೆ ಎಂದು ಬಂದರೆ ಹೆಚ್ಚು. ಈಗ ಪ್ರತಿದಿನ ಈ ಸಮಸ್ಯೆಯನ್ನಿಟ್ಟುಕೊಂಡು ಕನಿಷ್ಠ ಒಬ್ಬ ಮಹಿಳೆ ಕ್ಲಿನಿಕ್ಗೆ ಹಾಜರಾಗುತ್ತಾರೆ.
ಯಾಕೆ ಈ ಬದಲಾವಣೆ? ಬದಲಾಗುತ್ತಿರುವ ಜೀವನಶೈಲಿ, ಒತ್ತಡವೇ ಇದೆಲ್ಲಕ್ಕೆ ಕಾರಣ.
ಕಾರಣಗಳು ಹೀಗಿವೆ
- ದುಡಿಯುವ ಮಹಿಳೆಯರು ಇಂದು ಪುರುಷರಿಗಿಂತ ಹೆಚ್ಚು ಒತ್ತಡವನ್ನು ಎದುರಿಸುತ್ತಿದ್ದಾರೆ. ಕಚೇರಿ ಹಾಗೂ ಮನೆ ಎರಡೂ ಕಡೆ ಅಪ್ಪಚ್ಚಿ ಆಗುತ್ತಿದ್ದಾರೆ.
- ಮೊದಲಿಗಿಂತ ಹೆಚ್ಚು ಮಹಿಳೆಯರು ಇಂದು ಸ್ಮೋಕ್ ಮಾಡುತ್ತಾರೆ, ಆಲ್ಕೋಹಾಲ್ ಸೇವಿಸುತ್ತಾರೆ.
- ಮೆನೋಪಾಸ್ ಬಳಿಕ ಮಹಿಳೆಯರ ದೇಹದಲ್ಲಿ ಕೊಲೆಸ್ಟರಾಲ್ ಹೆಚ್ಚುತ್ತದೆ, ಅದರಲ್ಲೂ ಟ್ರೈಗ್ಲಿಸರೈಡ್ಗಳು. ಇವು ಕಾರ್ಡಿಯೋವ್ಯಾಸ್ಕುಲಾರ್ ರಿಸ್ಕ್ ಹೆಚ್ಚಿಸುತ್ತವೆ.
- ಮಧುಮೇಹ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಹೃದಯದ ಸಮಸ್ಯೆಯನ್ನು ಉಂಟುಮಾಡುತ್ತದೆ. ಈಗಾಗಲೇ ಒಂದು ಹೃದಯಾಘಾತ ಆಗಿರುವ ಸ್ತ್ರೀಯರಲ್ಲಿ ಮಧುಮೇಹ ಇದ್ದರೆ, ಎರಡನೇ ಹೃದಯಾಘಾತದ ರಿಸ್ಕ್ ಎರಡು ಪಟ್ಟು.
- ಚಯಾಪಚಯ ಕ್ರಿಯೆ ಸರಿಯಾಗಿ ಆಗದೇ ಇರುವ, ಪದೇ ಪದೇ ಪಚನಕ್ರಿಯೆ ಸಮಸ್ಯೆ ಎದುರಿಸುವ ಸ್ತ್ರೀಯರಲ್ಲಿ ಹೃದಯದ ಕಾಯಿಲೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅನಿಯಮಿತ ಕಚೇರಿ ಸಮಯ ಹಾಗೂ ಮನೆಗೆಲಸದ ನಡುವೆ ಬ್ಯಾಲೆನ್ಸ್ ಮಾಡಲು ಹೆಣಗಾಡುವವರಲ್ಲಿ ಇದು ಸಾಮಾನ್ಯ.
- ಹೃದಯಾಘಾತದ ಲಕ್ಷಣಗಳು ಪುರುಷ- ಸ್ತ್ರೀಯರಲ್ಲಿ ಬೇರೆ ಬೇರೆ. ಪುರುಷರು ಎದರಿಸುವ ತೀವ್ರ ಎದೆ ನೋವನ್ನು ಮಹಿಳೆಯರು ಎದುರಿಸುವುದಿಲ್ಲ. ಎದೆನೋವನ್ನು ಒತ್ತಡ, ಬಿಗಿತ ಎಂದು ಇವರು ವಿವರಿಸುವುದು ಜಾಸ್ತಿ. ಲಕ್ಷಣಗಳನ್ನು ಮೊದಲೇ ಗುರುತಿಸದೇ ಹೋಗುತ್ತಾರೆ.
- ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಹೃದಯದ ರಕ್ತನಾಳಗಳು ಸಣ್ಣವು, ಸೂಕ್ಷ್ಮ, ಹಗುರ. ಹೀಗಾಗಿ ಆಂಜಿಯೋಪ್ಲಾಸ್ಟಿ ಮುಂತಾದವು ಕಷ್ಟಕರ. ಸರ್ಜರಿ ನಂತರದ ಕಾಂಪ್ಲಿಕೇಶನ್ನುಗಳು ಹೆಚ್ಚು.
ಸ್ತ್ರೀಯರು ಏನು ಮಾಡಬೇಕು?
- ಧೂಮಪಾನ ಬೇಡ. ನೇರವಾಗಿ ಅಥವಾ ಸೆಕೆಂಡ್ಹ್ಯಾಂಡ್ ಸ್ಮೋಕಿಂಗ್ ಕೂಡ ಬೇಡ. ಇದು ಪುರುಷ ಸ್ಮೋಕರ್ಗಳಿಗಿಂತ ಹೃದಯದ ಕಾಯಿಲೆಯ ರಿಸ್ಕ್ ದುಪ್ಪಟ್ಟು ಮಾಡುತ್ತದೆ.
- ರಭಸದ ವಾಕಿಂಗ್ನಂಥ ಬಿರುಷಿನ ವ್ಯಾಯಾಮಗಳು ದಿನದಲ್ಲಿ ಕನಿಷ್ಠ ಅರ್ಧ ಗಂಟೆ ಅಗತ್ಯ. ಎಲಿವೇಟರ್ಗಿಂತ ಮೆಟ್ಟಿಲುಗಳು, ದೂರದಲ್ಲಿ ಗಾಡಿ ಪಾರ್ಕ್ ಮಾಡಿ ನಡೆಯುವುದು ಮುಂತಾದವನ್ನು ಮಾಡಿ.
- ಆರೋಗ್ಯಕರ ಆಹಾರ ಸೇವಿಸಿ. ಸಂಪೂರ್ಣ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳು, ಮೀನು ಅಗತ್ಯವಾಗಿ ಸೇವಿಸಬೇಕು.
- ಒತ್ತಡ ಕಡಿಮೆ ಮಾಡಿಕೊಳ್ಳಿ. ಡಿಪ್ರೆಶನ್ಗೆ ಚಿಕಿತ್ಸೆ ಪಡೆಯಿರಿ. ಯಾವಾಗಲೂ ಒತ್ತಡದಲ್ಲಿರುವುದು ಅಥವಾ ಖಿನ್ನರಾಗಿರುವುದು ನಿಮ್ಮ ಹೃದಯಾಘಾತದ ರಿಸ್ಕನ್ನು ಏರಿಸುತ್ತದೆ. ಸಾಕಷ್ಟು ನಿದ್ರೆ ಮಾಡಿ. ಸಣ್ಣಪುಟ್ಟ ವಿಶ್ರಾಂತಿಯ ತಂತ್ರಗಳನ್ನು ಕಲಿಯಿರಿ. ಧ್ಯಾನ- ಯೋಗಗಳನ್ನು ಸೂಕ್ತ ರೂಪದಲ್ಲಿ ಬಳಸಿಕೊಳ್ಳಿ.
ಇದನ್ನೂ ಓದಿ: ಗಂಟೆಗಟ್ಲೆ ಬಿಂಜ್ ವಾಚಿಂಗ್ ಮಾಡಿದ್ರೆ ರಕ್ತ ಹೆಪ್ಪುಗಟ್ಟಬಹುದು ಹುಷಾರ್!
ಮಹಿಳೆಯರ ಹಾರ್ಟ್ ಅಟ್ಯಾಕ್ ಲಕ್ಷಣಗಳು
ಅಟ್ಯಾಕ್ಗೆ ಒಂದು ತಿಂಗಳ ಮೊದಲು
ಅಸಹಜ ಸುಸ್ತು
ನಿದ್ತೆ ಅಸ್ತವ್ಯಸ್ತ
ಉಸಿರಾಟದ ತೊಂದರೆ
ಅಜೀರ್ಣ
ಆತಂಕ
ಹೃದಯ ಬಡಿತ ವೇಗ
ತೋಳುಗಳ ಶಕ್ತಿಕುಂದುವಿಕೆ
ಲಕ್ಷಣಗಳು: ಹಾರ್ಟ್ ಅಟ್ಯಾಕ್ ವೇಳೆ
ಉಸಿರಾಟದ ತೊಂದರೆ
ಸುಸ್ತು
ಅಸಹಜ ಸುಸ್ತು
ತಲೆ ತಿರುಗುವಿಕೆ
ವಾಕರಿಕೆ
ತೋಳುಗಳ ಶಕ್ತಿಕುಂದುವಿಕೆ