Site icon Vistara News

KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು

ಕೆಜಿಎಫ್‌ 2 ಹಿಂದೆಂದೂ ಕಾಣದಷ್ಟು ಕ್ರೇಜಿಯಾಗಿ ಮುನ್ನುಗ್ಗುತ್ತಿರುವ ಕನ್ನಡ ಸಿನೆಮಾ. ಕನ್ನಡ ಸಿನೆಮಾವೊಂದನ್ನು ಹೀಗೆ ಪ್ಯಾನ್‌ ಇಂಡಿಯಾ ಫಿಲಂ ಆಗಿಸುವಲ್ಲಿ ನಾವು ಕಲಿಯಬೇಕಾದ ಪಾಠಗಳು ಯಾವುವು?

1. ದೊಡ್ಡದೊಂದು ಕನಸು

ಕನ್ನಡದ ಹೆಚ್ಚಿನ ನಿರ್ಮಾಪಕರು, ನಿರ್ದೇಶಕರು ಅಲ್ಪತೃಪ್ತರು. ದೊಡ್ಡ ಕನಸುಗಳಿದ್ದವರು ಅದನ್ನು ನನಸಾಗಿಸಲು ದಾರಿ ಕಾಣದೆ ಪರದಾಡುತ್ತಿರುತ್ತಾರೆ. ಒಂದು ಬಾಹುಬಲಿ, ಒಂದು ಕೆಜಿಎಫ್‌ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್‌ ಪಿಕ್ಚರ್‌ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ಯಾನ್‌ ಇಂಡಿಯಾ ತಾರಾಗಣದಿಂದ ಹಿಡಿದು ಹತ್ತಾರು ಸಾವಿರ ಥಿಯೇಟರ್‌ಗಳಲ್ಲಿ ರಿಲೀಸ್‌ ವರೆಗೆ ಎಲ್ಲ ಬಗೆಯ ಟಿಪ್ಸ್‌ ಆಂಡ್‌ ಟ್ರಿಕ್ಸ್‌ ತೆಗೆದುಕೊಳ್ಳಬೇಕು.

2. ಕಥೆ-ಚಿತ್ರಕಥೆ-ಸಂಭಾಷಣೆ

ಅಂಡರ್‌ವರ್ಲ್ಡ್‌ ಸಿನಿಮಾಗಳಿಗೆ ಸ್ವಲ್ಪ ಎಮೋಷನ್‌ ಬೆಸೆದ ಚಿತ್ರಗಳು ʼಓಂʼ ಕಾಲದಿಂದಲೂ ಕ್ಲಿಕ್‌ ಆಗುತ್ತ ಬಂದಿವೆ. ಕೆಜಿಎಫ್‌ ಸಕ್ಸಸ್‌ಗೆ ಮುಖ್ಯ ಕಾರಣ ಚಿತ್ರದ ಕಥೆ. ಒಂದು ಚಿತ್ರಕಥೆ, ಸ್ಕ್ರಿಪ್ಟ್ ಹೇಗಿರಬೇಕು ಎಂದು ಪ್ರಶಾಂತ್‌ ನೀಲ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅನವಶ್ಯಕ ಕಥೆಯ ಎಳೆಗಳನ್ನು ಮಧ್ಯ ಸೇರಿಸುವ ಪ್ರಯತ್ನ ಮಾಡಿಲ್ಲ. ರಾಕಿ ನಡೆದ ಹಾದಿ ಹಾಗು ಅದರ ಸುತ್ತ ನಡೆಯುವ ಘಟನೆಗಳನ್ನೇ ಪ್ರಮುಖವಾಗಿಟ್ಟಿದ್ದಾರೆ. ಅನವಶ್ಯಕ ದೃಶ್ಯಗಳೂ ಇಲ್ಲ. ಹೀರೋಗೆ ಎಲ್ಲಿ ಬಿಲ್ಡಪ್‌ನ ಅವಶ್ಯಕತೆ ಇದೆಯೋ ಅಲ್ಲಿ ನೀಡಿದ್ದಾರೆ. ಸಂಭಾಷಣೆ ಕೂಡ ಆ ಪಾತ್ರಕ್ಕೆ, ಆ ಸನ್ನಿವೇಶಕ್ಕೆ ಹೊಂದುವಂತಿದೆ. ಕೆಜಿಎಫ್‌ ಸಿನಿಮಾದಲ್ಲಿ ತೀರಾ ಉದ್ದ ಸಂಭಾಷಣೆ ಇಲ್ಲ. ಅಲ್ಲಿರುವ ಒನ್‌ಲೈನರ್ಸ್‌, ಪಂಚಿಂಗ್‌ ಡೈಲಾಗ್‌ ಗಮನ ಸೆಳೆಯುತ್ತವೆ.

3. ಹೊಂದುವ ತಾರಾಗಣ

ಒಂದು ಪಾತ್ರವನ್ನು ಸೃಷ್ಟಿಸಿದಾಗ ಅದಕ್ಕೆ ಹೊಂದುವಂತಹ ಸೂಕ್ತ ನಟ, ತಾರೆಯನ್ನು ಆಯ್ದುಕೊಳ್ಳುವುದು ಒಬ್ಬ ನಿರ್ದೇಶಕನ ಜವಾಬ್ಧಾರಿ. ಪ್ರಶಾಂತ ಆ ಕೆಲಸದಲ್ಲಿ ಪರಿಣಿತರಾಗಿದ್ದಾರೆ. ರಾಕಿ ಪಾತ್ರದ ಆದಿಯಾಗಿ ಕೆಜಿಎಫ್‌ನಲ್ಲಿ ಬರುವ ಸಾಮಾನ್ಯ ಕೆಲಸಗಾರರ ವರೆಗೂ ಸೂಕ್ತ ನಟ/ನಟಿಯರನ್ನು ಆಯ್ದುಕೊಂಡಿದ್ದಾರೆ. ಗರುಡ, ಅಧೀರ, ರಮಿಕಾ ಸೇನ್‌ ಹೀಗೆ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ. ಆ ಪಾತ್ರವನ್ನು ನಿಭಾಯಿಸುವ ಅರ್ಹತೆ ಹೊಂದಿದವರನ್ನೇ ಆರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅದ್ಭುತ ನಟರಿದ್ದಾಗ ಸಂಜಯ್‌ ದತ್ತ್‌ ಅಥವಾ ರವೀನಾ ಟಂಡನ್ ಯಾಕೆ? ಎಂಬ ಪ್ರಶ್ನೆ ಮೂಡಿತ್ತು. ಆದರೆ‌ ನಿರ್ದೇಶಕನ ಮನಸ್ಸಿನಲ್ಲಿ ಯಾವ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂಬುದು ಸ್ಪಷ್ಟವಾಗಿರಬೇಕು. ಅದನ್ನು ನಿರ್ದೇಶಕ ಪ್ರಶಾಂತ್ ಕೆಜಿಎಫ್‌ನಲ್ಲಿ ಸಾಬೀತು ಮಾಡಿದ್ದಾರೆ.

4. ಸತತ ಪ್ರಮೋಷನ್‌

ಹಿಂದೆಂದೂ ಕಾಣದ ಪ್ರಮೋಷನ್‌ ಕೆಲಸವನ್ನು ಕೆಜಿಎಫ್‌ 2ನ ಹಿನ್ನೆಲೆಯಲ್ಲಿ ಕಾಣಬಹುದಾಗಿತ್ತು. ದೇಶದ ನಾನಾ ಪಟ್ಟಣಗಳಿಗೆ ಹೋಗಿ ಚಿತ್ರತಂಡ ಪ್ರಮೋಷನ್‌ ಮಾಡಿದೆ, ಇಂಟರ್‌ವ್ಯೂಗಳನ್ನು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಜನರ ಹೃದಯದ ಮಿಡಿತವನ್ನು ಚೆನ್ನಾಗಿ ಅರಿತುಕೊಂಡು, ಸೋಷಿಯಲ್‌ ಮೀಡಿಯಾ ಅಥವಾ ಮೀಡಿಯಾಗಳ ಮೂಲಕ ಆಕರ್ಷಕ ಕಾರ್ಯಕ್ರಮಗಳನ್ನು ಮಾಡಿ, ತಂಡದವರು ಸಂದರ್ಶನಗಳನ್ನು ನೀಡಿ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಬೇಕು. ಈ ವಿಷಯದಲ್ಲಿ ಕೆಜಿಎಫ್ ತಂಡ ಗೆದ್ದಿದೆ.

5. ಭರವಸೆಯ ಚಿತ್ರತಂಡ

ಚಿತ್ರ ತೆರೆಯ ಮೇಲೆ ಹೇಗೆ ಮೂಡುತ್ತದೆ ಎನ್ನುವುದು ತೆರೆಯ ಹಿಂದೆ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಕೆಜಿಎಫ್‌ನ ಛಾಯಾಗ್ರಾಹಕ ಭುವನ್‌ ಗೌಡ ಆದಿಯಾಗಿ ಪ್ರತಿಯೊಬ್ಬರೂ ಪ್ರಶಾಂತ್‌ ಅವರ ಕಲ್ಪನೆಯನ್ನು ತೆರೆಯ ಮೇಲೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಒಂದು ಸಣ್ಣ ಕಲ್ಲು ಬೀಳುವುದರಿಂದ, ದೊಡ್ಡ ಆಕ್ಷನ್ ದೃಶ್ಯದವರೆಗೂ ಪ್ರತಿಯೊಂದು ಸನ್ನಿವೇಶವನ್ನೂ ಪ್ರೇಕ್ಷಕರು ಗಮನಿಸುತ್ತಾರೆ. ಅದಕ್ಕೆ ತಕ್ಕಂತೆ ಚಿತ್ರತಂಡ ಕಾರ್ಯ ನಿರ್ವಹಿಸಿದೆ. ಪ್ರಶಾಂತ್‌ ನೀಲ್‌ ಪ್ರತಿಭೆ ಇರುವವರಿಗೆ ಅವಕಾಶ ನೀಡುವಲ್ಲಿ ಹಿಂದೇಟು ಹಾಕಿಲ್ಲ. 18 ವರ್ಷದ ಯುವಕನಿಗೆ ಕೂಡ ಎಡಿಟಿಂಗ್‌ನಂತಹ ದೊಡ್ಡ ಜವಾಬ್ಧಾರಿ ನೀಡಿದ್ದು ಗಮನಾರ್ಹ.

6. ಪ್ಯಾನ್‌ ಇಂಡಿಯಾ ತಾರಾಗಣ

ಚಿತ್ರದ ಹೀರೋ ಕನ್ನಡಿಗ ಯಶ್.‌ ಆದರೆ ಚಿತ್ರದ ಇತರ ದೊಡ್ಡ ಪಾತ್ರಗಳಲ್ಲಿ ಹಿಂದಿ ರವೀನಾ ಟಂಡನ್‌, ಸಂಜಯ್‌ ದತ್‌, ದಕ್ಷಿಣ ಭಾರತದ ಅಪೀಲ್‌ ಇರುವ ಪ್ರಕಾಶ್‌ ರೈ ಮುಂತಾದವರಿದ್ದಾರೆ. ಇವರಿಗೆ ಇಡೀ ಭಾರತೀಯ ಚಿತ್ರರಂಗದ ವೀಕ್ಷಕರಲ್ಲಿ ಐಡೆಂಟಿಟಿ ಇದೆ. ಇದು ಚಿತ್ರ ಎಲ್ಲ ಕಡೆಗೂ ರೀಚ್‌ ಮಾಡಿಸಲು ಸುಲಭವಾಗಿದೆ.

7. ಕಠಿಣ ಪರಿಶ್ರಮ

ಒಂದು ಕನಸು ನನಸಾಗಲು ರಾಕಿ ತನ್ನ ಮಾತು ಉಳಿಸಿಕೊಳ್ಳಲು ಪಡುವಷ್ಟೇ ಕಷ್ಟ ಪಡಬೇಕಾಗುತ್ತದೆ. ನಿರಂತರವಾಗಿ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪೂರ್ತಿ ಮನಸ್ಸನಿನಿಂದ ದುಡಿದಾಗ ಕೆಜಿಎಫ್‌ನಂತ ಸಿನಿಮಾಗಳು ಇನ್ನಷ್ಟು ಬರಲು ಸಾಧ್ಯ.

ಇದನ್ನೂ ಓದಿ: KGF ನಮಗೆ ಕಲಿಸುವ 8 ಪಾಠಗಳು..

Exit mobile version