ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದಲ್ಲಿರುವ ಕ್ರೌರ್ಯದ ಬಗ್ಗೆ ಮಾತನಾಡುವಾಗ ಒಂದು ವಿಷಯ ಪ್ರಸ್ತಾಪಿಸಿದ್ದರು. ʼʼನಾನು ಸಮಾಜಕ್ಕೆ ಯಾವುದೇ ಸಂದೇಶ ನೀಡುವ ನಿಟ್ಟಿನಲ್ಲಿ ಈ ಚಿತ್ರ ನಿರ್ದೇಶಿಸುತ್ತಿಲ್ಲ. ಅಕಸ್ಮಾತ್ ನಾನು ಹಿಟ್ಲರ್‌ನ ಕಥೆ ಹೇಳಲು ಇಚ್ಛಿಸಿದರೆ ಅದರಲ್ಲಿ ಸಂದೇಶ ಹುಡುಕಲು ಸಾಧ್ಯವಿಲ್ಲ. ಅದೇ ರೀತಿ ಈ ಸಿನಿಮಾ ಕೂಡ. ಇದು ಕೇವಲ ರಾಕಿಯ ಕಥೆ. ಇದು ನಾನು ಬರೆದ ಒಬ್ಬ ತಾಯಿ ಮಗನ ಕಥೆ ಅಷ್ಟೇ. ನಾನು ಮನೋರಂಜನೆಗಾಗಿ ಮಾಡುತ್ತಿರುವುದೇ ಹೊರತು ಯಾವುದೇ ಸಂದೇಶ ನೀಡುವ ಕಾರಣಕ್ಕೆ ಅಲ್ಲ.ʼʼ
ಇದು ಕೇವಲ ಮನೋರಂಜನೆಯ ದೃಷ್ಟಿಯಿಂದ ನೋಡಬೇಕಾದ ಕಥೆ ಎಂದು ಪ್ರಶಾಂತ್ ಹೇಳಿದ ಮಾತನ್ನು ಗಮನಿಸಿದಾಗ ತಿಳಿಯುತ್ತದೆ. ಆದರೆ, ಪ್ರೇಕ್ಷಕರಿಗೆ ತಾವು ಚಿತ್ರದಿಂದ ಏನು ಪಡೆಯಬಹುದು ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಅದು ತಪ್ಪು ಎಂದು ಹೇಳಲಾಗುವುದಿಲ್ಲ. ಒಂದು ಪ್ರೇಮಕಥೆಯಲ್ಲಿ ಭಾವನೆಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾಜಿಕ ಕಳಕಳಿಯೊಂದಿಗೆ ಮಾಡಿದ ಚಿತ್ರ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಮುಖ್ಯವಾಗುತ್ತದೆ. ನೈಜ ಘಟನೆ ಆಧಾರಿತ ಸಿನಿಮಾಗಳು ಫ್ಯಾಕ್ಟ್‌ಗಳಿಗೆ ಎಷ್ಟು ಹತ್ತಿರದಲ್ಲಿದೆ ಎಂಬುದು ಪ್ರಮುಖವಾಗುತ್ತದೆ. ಹೀಗೆ ಒಂದೊಂದು ಸಿನಿಮಾಗಳಲ್ಲಿ ಒಂದೊಂದು ಗುಣಗಳಿರುತ್ತವೆ. ಎಲ್ಲಾ ಸಿನಿಮಾಗಳನ್ನು ಒಂದೇ ಕನ್ನಡಕದಲ್ಲಿ ನೋಡಲು ಅಗುವುದಿಲ್ಲ.
ಹಾಗಿದ್ದರೆ ಕೆಜಿಎಫ್ ಅನ್ನು ಹೇಗೆ ನೋಡಬಹುದು?
ಇದೊಂದು ʼrawʼ ಸಿನಿಮಾ. ರೌಡಿಸಂ ಪ್ರಧಾನವಾಗಿರುವ ಸಿನಿಮಾ. ಬಡತನದ ಹಿನ್ನೆಲೆ ಇರುವ ಧೈರ್ಯವಂತ ಹುಡುಗ, ತನ್ನ ತಾಯಿಯ ಕಷ್ಟಗಳನ್ನು ನೋಡಿಕೊಂಡು ಬೆಳೆದು, ಅಂಡರ್‌ವರ್ಲ್ಡ್ ಸೇರಿ ಮುಂದೆ ಕೆಜಿಎಫ್ ಮೇಲೆ ಹೇಗೆ ರಾಜ್ಯಭಾರ ಮಾಡುತ್ತಾನೆ ಎಂಬುದೇ ಪ್ರಮುಖ ಕಥೆ. ಮೇಲ್ನೋಟಕ್ಕೆ ಕೇವಲ ಹೊಡೆದಾಟ, ರೌಡಿಸಂ, ರಕ್ತಪಾತ, ಕ್ರೌರ್ಯ ತುಂಬಿಕೊಂಡಂತೆ ಕಾಣುವ ಕೆಜಿಎಫ್ ಚಿತ್ರದಲ್ಲೂ ನಾವು ಈ ಕೆಳಗಿನ ಅಂಶಗಳನ್ನು ಗುರುತಿಸಬಹುದು.
- ದೃಢಸಂಕಲ್ಪ
ರಾಕಿಯಂತಹ ಪಾತ್ರವನ್ನು ಸೃಷ್ಟಿಸಿದ್ದೇ ಬೆರಗು ಮೂಡಿಸುವಂಥದ್ದು. ರಾಕಿ ಒಬ್ಬ ರೌಡಿಯಂತೆ ಕಂಡರೂ ಆತನಲ್ಲೊಂದು ದೃಢಮನಸ್ಸಿದೆ. ಆತ ತನ್ನ ಗುರಿಯನ್ನು ಸಣ್ಣ ವಯಸ್ಸಿನಲ್ಲೇ ನಿರ್ಧರಿಸಿದ್ದ. ಜೀವನಪರ್ಯಂತ ಗುರಿಯನ್ನು ಸಾಧಿಸುವತ್ತ ಸಾಗಿದ. ತಾನು ಅಂದುಕೊಂಡಿದ್ದನ್ನು ಜೀವನದಲ್ಲಿ ಪಟ್ಟುಹಿಡಿದು ಸಾಧಿಸುವ ಛಲ ಅಳವಡಿಸಿಕೊಳ್ಳುವುದು ಸುಲಭವಲ್ಲ. - ಡ್ರೀಮ್ ಬಿಗ್
ರಾಕಿ ಕಂಡ ಕನಸು ಸಾಧಾರಣದ್ದಲ್ಲ. ʼಕ್ಯಾ ಚಾಹಿಯೇ ರೆ ತೆರೆಕೋ?ʼ ಎಂದು ಕೇಳಿದಾಗ ʼದುನಿಯಾʼ ಎಂದು ನೀಡುವ ಉತ್ತರವೇ ಅದಕ್ಕೆ ಸಾಕ್ಷಿ. ನಾವು ಕಾಣುವ ಕನಸು ಯಾವತ್ತೂ ದೊಡ್ಡದಾಗಿರಬೇಕು, ಆಗ ನಾವು ಸಾಧಿಸಲು ಸಾಧ್ಯವಾಗುತ್ತದೆ. - ದಾರಿ ಹೇಗೇ ಇರಲಿ..ಪಯಣ ಸಾಗುತಿರಲಿ..
ರಾಕಿ ನಡೆದುಬಂದ ಹಾದಿಯಲ್ಲಿ ಕಷ್ಟಗಳ ಸುರಿಮಳೆಯೇ ಇತ್ತು. ಆದರೂ ರಾಕಿ ಮಾತ್ರ ತಾನು ಅಂದುಕೊಂಡಿದನ್ನು ಸಾಧಿಸುವ ದಾರಿಯಲ್ಲಿ ನಿರಂತರವಾಗಿ ಸಾಗುತ್ತಿದ್ದ. - ತಾಯಿಗಿಂತ ದೊಡ್ಡ ದೇವರಿಲ್ಲ
ತನ್ನ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಕಿ ಶ್ರಮಿಸಿದ. ತಾಯಿಯನ್ನೇ ದೇವರು ಎಂದು ಪೂಜಿಸಿ ಆಕೆಯ ಮಾತನ್ನು ಗೌರವಿಸಿದ. - ಕಲ್ಲು ಕೂಡ ಕರಗುವುದು ಪ್ರೀತಿಗೆ
ರಾಕಿ ಎಷ್ಟೇ ದೊಡ್ಡ ರೌಡಿಯಾದರೂ ಆತನ ಮನಸ್ಸು ಪ್ರೀತಿಗೆ ಶರಣಾಗುತ್ತದೆ. ಪ್ರೀತಿಯಲ್ಲಿ ರಾಕಿ ತನ್ನ ಪ್ರೇಯಸಿಯ ಮಾತಿಗೆ ಗೌರವ ನೀಡುತ್ತಾನೆ. - ಯಾರನ್ನು ನಂಬುವುದು?
ಒಂದು ಸಾಮ್ರಾಜ್ಯವನ್ನು ಆಳುವ ಯೋಚನೆಯಲ್ಲಿ ಮುನ್ನುಗ್ಗಿದರೆ ಅದಕ್ಕೆ ಅಡ್ಡಗಾಲು ಹಾಕುವವರು ಅನೇಕರು. ಯಾರ ವಿರುದ್ಧ ಯಾರು ರಾಜಕೀಯ ತಂತ್ರ ಹೂಡುತ್ತಾರೆ? ಯಾರು ಯಾರಿಗೆ ಮಿತ್ರರಾಗುತ್ತಾರೆ? ಯಾರ ವಿರುದ್ಧ ಷಡ್ಯಂತ್ರ ನಡೆಸುತ್ತಾರೆ? ಆಳಲು ಹೊರಡುವವನು ಇದನ್ನೆಲ್ಲ ಗಮನಿಸಲೇಬೇಕು. - ತನ್ನವರ ಕೈ ಬಿಡಲಿಲ್ಲ
ರಾಕಿ ತನ್ನನ್ನು ನಂಬಿ ಬಂದವರ ಕೈ ಬಿಡಲಿಲ್ಲ. ಅವರ ದುಃಖಕ್ಕೆ ಸ್ಪಂದಿಸಿದ, ಕಷ್ಟಗಳನ್ನು ದೂರಾಗಿಸಿದ, ಕೆಜಿಎಫ್ ಅವರಿಗೆ ಸೇರುವಂತೆ ಮಾಡಿದ. ಸಾವಿನ ಮನೆಗೆ ತಾನೊಬ್ಬನೇ ಹೊರಟು ನಿಂತ, ತನ್ನವರನ್ನು ಸುರಕ್ಷಿತವಾಗಿರಲು ವ್ಯವಸ್ಥೆ ಮಾಡಿದ. - ಎಲ್ಲದಕ್ಕೂ ಒಂದು ಅಂತ್ಯವಿದೆ
ರಾಕಿ ತನ್ನ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಛಲದಲ್ಲಿ ತಾನು ಆಯ್ದುಕೊಂಡ ಹಾದಿ ಹೇಗಿತ್ತು? ಆ ಹಾದಿಯಲ್ಲಿ ಹೋದರೆ ನಮ್ಮ ಜೀವನದ ಅಂತ್ಯ ಹೇಗಿರಬಹುದು? ಎಂದು ಯೋಚಿಸಬೇಕು. ರಾಕಿಯ ಜೀವನದ ಅಂತ್ಯ ನಮ್ಮದೂ ಆಗಬಹುದು. ಇದನ್ನು ನೆನಪಿನಲ್ಲಿಡಬೇಕು.
ಹೆಚ್ಚಿನ ಓದಿಗಾಗಿ: Explainer: ನೆಟ್‌ಫ್ಲಿಕ್ಸ್ ಭಾರತದಲ್ಲಿ ಚಂದಾದಾರರನ್ನು ಕಳೆದುಕೊಳ್ಳುತ್ತಿರುವುದೇಕೆ?