ಕಲಬುರಗಿ: ಉತ್ತರ ಒಳನಾಡಿನಲ್ಲಿ ಮಳೆಯು (Rain alert) ಅಬ್ಬರಿಸುತ್ತಿದೆ. ಅದರಲ್ಲೂ ಕಲಬುರಗಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮನೆ ಗೋಡೆ ಕುಸಿದು ಮಹಿಳೆ ಸಾವು
ಮಳೆ ಅವಾಂತರಕ್ಕೆ ಮನೆ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಸಕೀನಾಬಿ ನದಾಫ್ (70) ಮೃತ ದುರ್ದೈವಿ. ಮನೆ ಗೋಡೆ ಕುಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಕೀನಾಬಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪರಿಚಿತ ಮಲ್ಲಿಕಾರ್ಜುನ ಅವರ ಮನೆ ಮುಂಭಾಗದ ಕಟ್ಟೆ ಮೇಲೆ ಮಹಿಳೆಯರ ಜತೆ ಮಾತನಾಡುತ್ತಾ ಕುಳಿತಿದ್ದಾಗ, ಮಲ್ಲಿಕಾರ್ಜುನ ಅವರ ಮನೆ ಗೋಡೆಕುಸಿದು ಬಿದ್ದಿತ್ತು. ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದರೆ, ವೃದ್ಧೆ ಮೃತಪಟ್ಟಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಾದಗಿರಿದಲ್ಲಿ ಮನೆಗಳಿಗೆ ನುಗ್ಗಿದ ನೀರು
ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಮೊಟ್ನಳ್ಳಿ ಗ್ರಾಮದಲ್ಲಿರುವ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದಲ್ಲಿರುವ ರಸ್ತೆಗಳು ಜಲಾವೃತಗೊಂಡಿದೆ. ತೆಲಂಗಾಣ ಸಂಪರ್ಕ ಕಲ್ಪಿಸುವ ಗುರುಮಠಕಲ್ ತಾಲೂಕಿನ ನಂದೆಪಲ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಿರಂತರ ಮಳೆ ಪರಿಣಾಮ ಚಿಂತನಹಳ್ಳಿ ಜಲಪಾತ ಉಕ್ಕಿ ಹರಿಯುತ್ತಿದೆ. ಶ್ರೀ ಗವಿಸಿದ್ದೇಶ್ವರ ಗರ್ಭ ಗುಡಿಯ ಮೇಲ್ಭಾಗದಲ್ಲಿ ಹರಿಯುವ ಜಲಪಾತ ಇದಾಗಿದೆ.
ರಾಯಚೂರಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕೆರೆಕೋಡಿ ಕಿತ್ತು ಹೋಗಿದೆ. ಕೆರೆ ಕೋಡಿ ಕಿತ್ತು ಹೋದ ಹಿನ್ನೆಲೆಯಲ್ಲಿ ರಸ್ತೆಗೆ ನೀರು ನುಗ್ಗಿದೆ. ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಬಳಿ ಘಟನೆ ನಡೆದಿದೆ. ರಸ್ತೆಗೆ ನೀರು ನುಗ್ಗಿದ ಹಿನ್ನೆಲೆ ವಾಹನ ಸವಾರರು ಪರದಾಡಿದರು.ಇತ್ತ ಕೆರೆ ಕೋಡಿ ಒಡೆದು ಅಕ್ಕ ಪಕ್ಕದ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ವಿಟೋಜಿ ಎಂಬುವವರ ಹತ್ತಿ ಹೊಲಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.
ಗುಡುಗು, ಗಾಳಿ ಸಹಿತ ಅಬ್ಬರಿಸಲಿದೆ ಮಳೆ
ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಪ್ರತ್ಯೇಕವಾಗಿ ಭಾರಿ ಮಳೆ (Rain News) ಹಾಗೂ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಚದುರಿದ ಸ್ಥಳಗಳಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿಯಲ್ಲಿ ವ್ಯಾಪಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಬೆಳಗಾವಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Pot Holes: ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್‌ಗೆ ಡಿಕೆಶಿ ಖಡಕ್ ಸೂಚನೆ; 15 ದಿನಗಳ ಗಡುವು
ಬೆಂಗಳೂರಿನಲ್ಲಿ ಹಗುರ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇಲ್ಲೆಲ್ಲ ವ್ಯಾಪಕ ಮಳೆ
ಉತ್ತರ ಕನ್ನಡ, ಬೀದರ್, ಕಲಬುರಗಿ ಮತ್ತು ವಿಜಯಪುರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಬಳ್ಳಾರಿ ಹಾಗೂ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೀನುಗಾರರಿಗೂ ಎಚ್ಚರಿಕೆ
ಸೆಪ್ಟೆಂಬರ್ 4ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರತೀರದಲ್ಲಿ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ