ಬೆಂಗಳೂರು: ದೇಶಾದ್ಯಂತ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ಪಿಎಫ್‌ಐ ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಬೆನ್ನಿನಲ್ಲಿಯೇ, ದಿಡೀರ್ ಮಾಸ್ಟರ್ ಸ್ಟ್ರೋಕ್ ನೀಡಿದ ಕೇಂದ್ರ ಸರ್ಕಾರ ಬುಧವಾರ ಪಿಎಫ್‌ಐ ಅನ್ನು ಬ್ಯಾನ್ (PFI BANNED)ಮಾಡಿದೆ. ಪಿಎಫ್‌ಐ ಬ್ಯಾನ್ ಕುರಿತು ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಯಾವ್ಯಾವ ನಾಯಕರು ಏನು ಹೇಳಿದ್ದಾರೆ?
ಅತ್ಯಂತ ಸಮರ್ಥನಿರ್ಧಾರ: ನಳಿನ್ ಕುಮಾರ್ ಕಟೀಲ್
ವಿದೇಶಿ ದೇಣಿಗೆ ಮೂಲಕ ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‍ಐ ನಿಷೇಧ ಸಮರ್ಥ ನಿರ್ಧಾರ ಮತ್ತು ಇದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಪಿಎಫ್‍ಐ ನಾಯಕರು ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹೊಂದಿದ್ದರು. ಕೇಂದ್ರ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು, ಐದು ವರ್ಷಗಳ ವರೆಗೆ ನಿಷೇಧಿಸಿದೆ. ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹಿನ್ನೆಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ ಎಂದರು.
ಮೋದಿಯವರ ದಿಟ್ಟ ನಿರ್ಧಾರ: ವಿಜಯೇಂದ್ರ
ನವರಾತ್ರಿಯ ಮೂರನೇ ದಿನ ಬಂಧ ಶುಭಸುದ್ದಿಯಿದು. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದಕ್ಕಾಗಿ ಪಿಎಫ್‌ಐ ಹಾಗೂ ಅದರ ಸಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ದೇಶದ್ರೋಹಿಗಳನ್ನು ಹಾಗೂ ಅವರ ಕಾನೂನುಬಾಹಿರ ಚಟುವಟಿಕೆ ನಿಷೇಧಿಸುವಲ್ಲಿ ಪಿಎಂ ನರೇಂದ್ರ ಮೋದಿ ಅವರು ದಿಟ್ಟವಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಂಸದ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | PFI BANNED | ದೇಶ ವಿಭಜಕ ಶಕ್ತಿಗಳ ನಿಷೇಧದಲ್ಲಿ ರಾಜಕಾರಣ ಬೇಡ; ಸಿ.ಟಿ ರವಿ
ಮೈಸೂರು ದಸರಾವನ್ನು ಟಾರ್ಗೆಟ್ ಮಾಡಿದ್ದರು: ಎಸ್.ಟಿ ಸೋಮಶೇಖರ್
ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಬೇಕೆಂದು ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಬ್ಯಾನ್ ಮಾಡಿದೆ. ಸಂಘಟನೆ ಬ್ಯಾನ್ ಮಾಡುವ ಅವಶ್ಯಕತೆ ಇತ್ತು ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಟಾರ್ಗೆಟ್ ಮಾಡಿದ್ದರು. ಆ ಮಾಹಿತಿ ಆಧಾರದ ಮೇಲೆ ಕೆಲವರನ್ನು ಮಂಗಳವಾರ ಬಂಧಿಸಲಾಗಿದೆ. ದಸರಾಗೆ ಯಾವುದೇ ತೊಂದರೆ ಆಗುವುದಿಲ್ಲ. ಕರ್ನಾಟಕ ಪೊಲೀಸ್ ಇಲಾಖೆ ಶಕ್ತಿಶಾಲಿಯಾಗಿದ್ದು, ಮೈಸೂರಿನಲ್ಲಿ 4ರಿಂದ 5 ಸಾವಿರ ಪೊಲೀಸರನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದೇವೆ ಎಂದರು. ಪಿಎಫ್‌ಐ ಬ್ಯಾನ್ ಮಾಡಿರುವುದು ಸಂತೋಷ ತಂದಿದೆ. ಶಾಂತಿ ಸುವ್ಯವಸ್ಥೆ ಕದಡುವವರನ್ನು ಗುರುತಿಸಿ ಬಂಧಿಸಿದ್ದಾರೆ.
ದೇಶವನ್ನು ಒಡೆಯುವ ಕೆಲಸದಲ್ಲಿ ಪಿಎಫ್‌ಐ: ಶಾಸಕ ಎಸ್.ಎ ರಾಮದಾಸ್
ಯುಪಿಎ ಸರ್ಕಾರ ಇದ್ದಾಗ ದೇಶದ್ರೋಹಿ ಕಾರ್ಯ ಮಾಡುತ್ತಿದ್ದ ಸಿಮಿ ಸಂಘಟನೆಗಳನ್ನು ಬ್ಯಾನ್ ಮಾಡಿದ್ದರೂ, ದೇಶದ್ರೋಹ ಮಾಡುತ್ತಿದ್ದವರನ್ನು ಬಂಧಿಸಿರಲಿಲ್ಲ. ಹೀಗಾಗಿ ಅವರು ಪಿಎಫ್‌ಐ ಹೆಸರಿನಲ್ಲಿ ಮುಂದುವರಿಸಿಕೊಂಡು ಬಂದಿದ್ದರು. ಈಗ ದೇಶವನ್ನು ಒಡೆಯುವಂತಹ ಕೆಲಸದಲ್ಲಿ ತೊಡಗಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ್ದು, ಹಲವರನ್ನು ಬಂಧಿಸಲಾಗಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ದೇಶದ 270 ಕಡೆ ದಾಳಿ ಆದಾಗ ಹಲವು ದಾಖಲೆಗಳು ಸಿಕ್ಕಿವೆ. ಒಂದು ಗಂಟೆಯಲ್ಲಿ 150 ಕೋಟಿಯನ್ನು ಒಬ್ಬ ಡ್ರಾ ಮಾಡಿದ್ದಾನೆ. ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಹಣ ಡ್ರಾ ಮಾಡಿದ್ದು, ವಿದೇಶಿ ಸಂಘಟನೆಗಳು ಪಿಎಫ್‌ಐ ಹೆಸರಿನಲ್ಲಿ ದೇಶವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿತ್ತು. ಪಿಎಫ್‌ಐ ಬ್ಯಾನ್ ಮಾಡಿರುವುದಕ್ಕೆ ಪ್ರಧಾನಿಗಳಿಗೆ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಭಾರತ್ ಥೋಡೋ ಹೆಸರಿನಲ್ಲಿ ದೊಡ್ಡ ಕಾರ್ಯ ನಡೆಯುತ್ತಿದೆ. ಭಾರತ್ ಜೋಡೋ ಆಗಬೇಕು ಎಂದರೆ ಇಂತಹ ಥೋಡೋಗಳ ವಿರುದ್ಧ ಕ್ರಮವಾಗಬೇಕು. ತಾಯಿ ಭಾರತಾಂಬೆಯನ್ನು ರಕ್ಷಣೆಯನ್ನು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಯಾರು ಭಾರತವನ್ನು ಪ್ರೀತಿ ಮಾಡುತ್ತಾರೆ ಅವರು ಪಿಎಫ್‌ಐ ಬ್ಯಾನನ್ನು ಸ್ವಾಗತಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | PFI BANNED | ಪಿಎಫ್‌ಐ ಸಂಘಟನೆ ವಿದೇಶಿ ರಿಮೋಟ್ ಕಂಟ್ರೋಲ್: ಸಿಎಂ ಬೊಮ್ಮಾಯಿ