ನವದೆಹಲಿ: ಭಾರತದ ಬಹುತೇಕ ರೆಸ್ಟೊರೆಂಟ್‌ಗಳಲ್ಲಿ ಚಿಕನ್ ಮಂಚೂರಿಯನ್ (Chicken Manchurian) ಅತ್ಯಂತ ಬೇಡಿಕೆಯ ಡಿಶ್. ಭಾರತ ಮಾತ್ರವಲ್ಲದೇ, ದಕ್ಷಿಣ ಏಷ್ಯಾದಲ್ಲೇ ಈ ಡಿಶ್‌ಗೆ ವ್ಯಾಪಕ ಬೇಡಿಕೆ ಇದೆ. ಆದರೆ, ದಿ ನ್ಯೂಯಾರ್ಕ್ ಟೈಮ್ಸ್ (The New York Times) ಈ ಚಿಕನ್ ಮಂಚೂರಿಯನ್ ಬಗ್ಗೆ ಮಾಡಿದ ಟ್ವೀಟ್‌ವೊಂದು, ಸೋಷಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ನೆಟ್ಟಿಗರ ನಡುವಿನ ಕದನಕ್ಕೆ ಕಾರಣವಾಗಿದೆ.
ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಚಿಕನ್ ಮಂಚೂರಿಯನ್ ತಯಾರಿಸುವ ಮಾಹಿತಿಯನ್ನು ಒಳಗೊಂಡ ಲೇಖನವನ್ನು ಟ್ಯಾಗ್ ಮಾಡಿ, a stalwart of Pakistani Chinese cooking ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನೊಂದಿಗೆ ಚಿಕನ್ ಮಂಚೂರಿಯನ್ ಮಾಲೀಕತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಚರ್ಚೆಗಳು ಶುರುವಾಗಿವೆ.
ಚಿಕನ್ ಮಂಚೂರಿಯನ್ ರೆಸಿಪಿ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ಮಾಡಿರುವ ಟ್ವೀಟ್
ಭಾರತೀಯ ನೆಟ್ಟಿಗರು ನ್ಯೂಯಾರ್ಕ್ ಟೈಮ್ಸ್ ತಪ್ಪು ಮಾಹಿತಿಯನ್ನು ನೀಡಿದೆ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಅಲ್ಲದೇ, ಚಿಕನ್ ಮಂಚೂರಿಯನ್ ಮೊದಲು ತಯಾರಿಸಿದ್ದೇ ಭಾರತದಲ್ಲಿ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದ ನೆಟ್ಟಿಗರು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಚಿಕನ್ ಮಂಚೂರಿಯನ್ ಮೂಲ ಪಾಕಿಸ್ತಾನದ್ದು ಎಂದು ವಾದಿಸಿದ್ದಾರೆ.
ಈ ಎರಡೂ ವಾದಗಳ ಮಧ್ಯೆ ಅರ್ಥ ಸತ್ಯ ಮತ್ತು ಸುಳ್ಳು ಇದೆ. ಕೆಲವು ವರದಿಗಳ ಪ್ರಕಾರ, ಮುಂಬೈನಲ್ಲಿ ಈಗಲೂ ರೆಸ್ಟೆರೊಂಟ್‌ಗಳನ್ನು ಹೊಂದಿರುವ ಚೀನಾ ಮೂಲದ ಬಾಣಸಿಗ ನೆಲ್ಸನ್ ವಾಂಗ್ ಅವರು ಈ ಚಿಕನ್ ಮಂಚೂರಿಯನ್ ಮೊದಲಿಗೆ ಪರಿಚಯಿಸಿದ್ದಾರೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕೂಡ ವರದಿ ಮಾಡಿದೆ. ನೆಲ್ಸನ್ ವಾಂಗ್ ಅವರು ಭಾರತದಲ್ಲಿ ನೆಲಿಸಿದ್ದ ಚೀನಾ ಬಾಣಸಿಗರ ಮೂರನೇ ತಲೆಮಾರಿನ ವ್ಯಕ್ತಿಯಾಗಿದ್ದಾರೆ.
ಮತ್ತೆ ಕೆಲವು ವರದಿಗಳು, ಚಿಕನ್ ಮಂಚೂರಿಯನ್ ಪಾಕಿಸ್ತಾನದಲ್ಲಿ ಮೊದಲಿಗೆ ತಯಾರಿಸಲಾಯಿತು ಎಂದು ಹೇಳಿವೆ. 1970ರ ದಶಕದಲ್ಲಿ ಪಾಕ್ ಬಾಣಸಿಗ ಅಲಿ ಸಿಕಂದರ್ ತಾಹಿರ್ ಎಂಬಾತ, ಚೀನಿ ಶೈಲಿಯಲ್ಲಿ ಚಿಕನ್ ಮಂಚೂರಿಯನ್ ತಯಾರಿಸಿದನಂತೆ. ಈತ ಮೊದಲು ಕರಾಚಿಯ ಚೀನಿ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಖಾದ್ಯಗಳು, ಮಸಾಲೆಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಚಿಕನ್ ಮಂಚೂರಿಯನ್ ಸಿದ್ಧಪಡಿಸಿದ. ಮುಂದೆ ಈ ಚಿಕನ್ ಮಂಚೂರಿಯನ್ ಭಾರತಕ್ಕೂ ಕಾಲಿಟ್ಟು ಪ್ರಸಿದ್ಧಿಯಾಯಿತು ಎಂದು ಹೇಳಲಾಗುತ್ತಿದೆ. ಆದರೆ, ನಿರ್ದಿಷ್ಟವಾಗಿ ಇದು ಪಾಕಿಸ್ತಾನ ಅಥವಾ ಭಾರತದ್ದೇ ಎಂದು ಹೇಳುವುದಕ್ಕೆ ದಾಖಲೆಗಳಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: Fried Chicken: ಹೊಂಬಣ್ಣದ ಗರಿ ಗರಿ ಫ್ರೈಡ್ ಚಿಕನ್ ಮನೆಯಲ್ಲೇ ಮಾಡಲು ಐದು ಸೂತ್ರಗಳು!
ಚಿಕನ್ ಮಂಚೂರಿಯನ್ ಇತಿಹಾಸ ಏನೇ ಇರಲಿ. ಆದರೆ, ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನಿ ನೆಟ್ಟಿಗರಿಬ್ಬರೂ ಚಿಕನ್ ಮಂಚೂರಿಯನ್ ಮೇಲೆ ತಮ್ಮ ಮಾಲೀಕತ್ವವನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ!