ನವದೆಹಲಿ: ಉಕ್ರೇನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನಗಳಿಗೆ ಯಾವುದೇ ರೀತಿಯ ಕೊಡುಗೆ ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಅವರು ರಷ್ಯಾ ವಿದೇಶಾಂಗ ಸಚಿವರಿಗೆ ತಿಳಿಸಿದ್ದಾರೆ.
ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಸರ್ಗೈ ಲಾವ್ರೊವ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜತೆ ಶುಕ್ರವಾರ ಮಾತುಕತೆ ನಡೆಸಿದರು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಲಾವ್ರೊವ್ ಸುಮಾರು 40 ನಿಮಿಷಗಳ ಕಾಲ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಕೂಡಲೇ ಹಿಂಸಾಚಾರ ನಿಲ್ಲಿಸಿ: ಪ್ರಧಾನಿ ಮೋದಿ ಸಲಹೆ!
ರಷ್ಯಾ ವಿದೇಶಾಂಗ ಸಚಿವರ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಹಿಂಸಾಚಾರವನ್ನು ನಿಲ್ಲಿಸುವಂತೆ ಈ ಹಿಂದೆ ನೀಡಿದ್ದ ಸಲಹೆಯನ್ನೇ ಪ್ರಧಾನಿ ಮೋದಿ ಅವರು ಸರ್ಗೈ ಲಾವ್ರೋವ್ ಭೇಟಿ ಸಂದರ್ಭದಲ್ಲೂ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್, ಅಂತಾರಾಷ್ಟ್ರೀಯ ಸಮಸ್ಯೆಗಳ ವಿಚಾರದಲ್ಲಿ ತರ್ಕಬದ್ಧ ಮತ್ತು ನ್ಯಾಯಯುತವಾದ ನಿಲುವು ಹೊಂದಿರುವ ಭಾರತ ಶಾಂತಿ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ. ಅಗತ್ಯ ಬಿದ್ದಲ್ಲಿ ತನ್ನ ಪಾತ್ರ ನಿಭಾಯಿಸಲಿದೆ ಎಂದು ತಿಳಿಸಿದರು.
ನಮೋಗೆ ʼವೈಯಕ್ತಿಕ ಸಂದೇಶʼ ಕಳುಹಿಸಿದ ಪುಟಿನ್!
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಯಕ್ತಿಕ ಸಂದೇಶ ಕಳುಹಿಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅವರಿಂದ ಬಂದಿರುವ ವೈಯಕ್ತಿಕ ಸಂದೇಶವನ್ನು ಮೋದಿ ಅವರಿಗೆ ತಲುಪಿಸಲು ಬಯಸಿರುವುದಾಗಿ ಸರ್ಗೈ ಲಾವ್ರೊವ್ ತಿಳಿಸಿದ್ದಾರೆ.