Site icon Vistara News

Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!

ಜಾಗತಿಕ ಮಿಲಿಟರಿ ವೆಚ್ಚ ಕಳೆದ ವರ್ಷ ದಾಖಲೆ ಮಟ್ಟ ಮುಟ್ಟಿದೆ. ಕಳೆದ ವರ್ಷದ ಮಿಲಿಟರಿ ವೆಚ್ಚ ಮೊದಲ ಬಾರಿಗೆ 2 ಲಕ್ಷ ಕೋಟಿ ಡಾಲರ್‌ ದಾಟಿದೆ. ಅಂದರೆ 1.53 ಕೋಟಿ ಕೋಟಿ ರೂಪಾಯಿಗಳಿಗಿಂತಲೂ ಅಧಿಕ. 2021ರಲ್ಲಿ ಎಲ್ಲ ದೇಶಗಳು ಒಟ್ಟಾಗಿ 2.113 ಲಕ್ಷ ಕೋಟಿ ಡಾಲರ್‌ನಷ್ಟು ಹಣವನ್ನು ಶಸ್ತ್ರಾಸ್ತ್ರಗಳ ಮೇಲೆ ವ್ಯಯಿಸಿವೆ. ಇದು ಅದರ ಹಿಂದಿನ ವರ್ಷದ ವೆಚ್ಚಕ್ಕಿಂತ 0.7%ದಷ್ಟು ಹೆಚ್ಚು.
ಈ ಮಾಹಿತಿಯನ್ನು ನೀಡಿರುವವರು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಅಧ್ಯಯನ ಸಂಸ್ಥೆ (ಸಿಪ್ರಿ). ಕಳೆದೆರಡು ವರ್ಷಗಳ ಕೋವಿಡ್‌ ಪ್ರೇರಿತ ಆರ್ಥಿಕ ಕುಸಿತದ ನಡುವೆಯೂ ದೇಶಗಳು ಆಯುಧಗಳ ಮೇಲೆ ಇಷ್ಟೊಂದು ವೆಚ್ಚ ಮಾಡಿರುವುದು ಹುಬ್ಬೇರಿಸುವಂತಿದೆ.

ಭಾರತ ಮೂರನೇ ಸ್ಥಾನ

ವಿಶಿಷ್ಟ ಸಂಗತಿ ಎಂದರೆ ಈ ವೆಚ್ಚದಲ್ಲಿ ರಷ್ಯವನ್ನು ಭಾರತ ಮೀರಿಸಿದೆ. ಈ ವೆಚ್ಚದಲ್ಲಿ ರಷ್ಯ ನಾಲ್ಕನೆ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದ ವೆಚ್ಚ 76.6 ಶತಕೋಟಿ ಡಾಲರ್‌ (5.9 ಲಕ್ಷ ಕೋಟಿ ರೂ.) ಇದು ಅದರ ಹಿಂದಿನ ವರ್ಷಕ್ಕಿಂತ 0.9% ಹೆಚ್ಚು. ರಷ್ಯಾದ ವೆಚ್ಚ 2.9%ದಷ್ಟು ಹೆಚ್ಚಿದ್ದು, 65.9 ಶತಕೋಟಿ ಡಾಲರ್‌ ಖರ್ಚು ಮಾಡಿದೆ.

ರಷ್ಯಾದ ಭಯ
ಇದಕ್ಕೆ ಮುಖ್ಯ ಕಾರಣ ಉಕ್ರೇನ್‌ ಮೇಲೆ ರಷ್ಯಾ ಮಾಡಿದ ದಾಳಿ. ರಷ್ಯಾಕ್ಕೆ ಅಂಜಿದ ಯುರೋಪಿಯನ್‌ ದೇಶಗಳೆಲ್ಲವೂ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿವೆ. 2011 ಮತ್ತು 2014ರ ನಡುವೆ ಮಿಲಿಟರಿ ವೆಚ್ಚದಲ್ಲಿ ಇಳಿಕೆ ಕಂಡುಬಂದಿತ್ತು. ಅದರ ನಂತರ ವರ್ಷಗಳಲ್ಲಿ ಈ ವೆಚ್ಚ ಏರುತ್ತ ಬಂದಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಲು ಆರಂಭಿಸಿದ ಬಳಿಕವಂತೂ, ಕಂಗಾಲಾಗಿರುವ ಹೆಚ್ಚಿನ ಯುರೋಪಿಯನ್‌ ದೇಶಗಳು ತಮ್ಮ ಮಿಲಿಟರಿ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸಿವೆ.
ರಷ್ಯಾ 65.9 ಶತಕೋಟಿ ಡಾಲರ್‌ ಖರ್ಚು ಮಾಡಿದ್ದು ಇದು ಆ ದೇಶದ ಒಟ್ಟು ಜಿಡಿಪಿಯ 4.1%. ಅತ್ಯಧಿಕ ತೈಲ ಮತ್ತು ಅನಿಲ ಆದಾಯ ಅದಕ್ಕೆ ನೆರವಾಗಿದೆ. ಫೆಬ್ರವರಿಯಲ್ಲಿ ಉಕ್ರೇನ್‌ನ ಪಕ್ಕದಲ್ಲಿ ಸೈನ್ಯವನ್ನು ನಿಲ್ಲಿಸತೊಡಗಿದ ಕ್ಷಣದಿಂದ ಇದು ಹೆಚ್ಚಿದೆ. ಮಿಲಿಟರಿ ವೆಚ್ಚದಲ್ಲಿ ಜಾಗತಿಕವಾಗಿ ರಷ್ಯಾದ ಸ್ಥಾನ ಮೂರನೆಯದು.
ಇದೇ ವೇಳೆಗೆ, ಪುಟ್ಟ ದೇಶ ಉಕ್ರೇನ್‌ನ ಮಿಲಿಟರಿ ವೆಚ್ಚ ಕೂಡ 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಂಡ ಬಳಿಕ 72%ದಷ್ಟು ಏರಿದೆ. ಕಳೆದ ವರ್ಷ 5.9 ಶತಕೋಟಿ ಡಾಲರ್‌ ವೆಚ್ಚ ಮಾಡಿದ್ದು, ಇದು ಆ ದೇಶದ ಜಿಡಿಪಿಯ 3.2%.

ಅಮೆರಿಕ ಲೀಡರ್‌
ಅತಿ ಹೆಚ್ಚು ಸೇನಾ ವೆಚ್ಚ ಮಾಡುವ ದೇಶ ಅಮೆರಿಕ. ಕಳೆದ ವರ್ಷ ಇದರ ಖರ್ಚು 801 ಶತಕೋಟಿ ಡಾಲರ್.‌ ಕಳೆದ ಒಂದು ದಶಕದಲ್ಲಿ ಮಿಲಿಟರಿ ಅಧ್ಯಯನ ಮತ್ತು ಅಭಿವೃದ್ಧಿಯಲ್ಲಿ ಆ ದೇಶ 24% ಹೆಚ್ಚು ತೊಡಗಿಸಿಕೊಂಡಿದೆ. ವೆಚ್ಚ ಆ ಹಿಂದಿನ ವರ್ಷಕ್ಕಿಂತ 6.4%ದಷ್ಟು ಕಡಿಮೆಯಾಗಿದ್ದರೂ, ಮುಂದಿನ ತಲೆಮಾರಿನ ತಂತ್ರಜ್ಞಾನಗಳ ಬಗ್ಗೆ ಆ ದೇಶ ಹೆಚ್ಚು ಗಮನ ಹರಿಸಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ

ಚೀನಾ ಎರಡನೇ ಸ್ಥಾನ
ಸೇನಾ ವೆಚ್ಚದಲ್ಲಿ ಎರಡನೇ ಸ್ಥಾನದಲ್ಲಿ ಚೀನಾ ಇದೆ. ಅದರ ವೆಚ್ಚ 293 ಶತಕೋಟಿ ಡಾಲರ್.‌ ಕಳೆದ ಸಲಕ್ಕಿಂತ ಈ ಸಲ 4.7%ದಷ್ಟು ಏರಿಸಿದೆ. ಚೀನಾದ ಸುತ್ತಮುತ್ತಲಿನ ದೇಶಗಳು ಕೂಡ ಚೀನಕ್ಕೆ ಬೆದರಿ ತಮ್ಮ ತಮ್ಮ ಸಾಮರ್ಥ್ಯವನ್ನು ಏರಿಸಿಕೊಳ್ಳುತ್ತಿವೆ. ಉದಾಹರಣೆಗೆ ಜಪಾನ್‌ (7 ಶತಕೋಟಿ ಡಾಲರ್-‌ 7.3% ಏರಿಕೆ), ಆಸ್ಟ್ರೇಲಿಯ (31.8 ಶತಕೋಟಿ ಡಾಲರ್-‌ 4% ಏರಿಕೆ). ಬ್ರಿಟನ್‌ ಐದನೇ ಸ್ಥಾನದಲ್ಲಿದೆ (68.4 ಶತಕೋಟಿ ಡಾಲರ್).‌ ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ (55.6 ಶತಕೋಟಿ ಡಾಲರ್‌) ಇದೆ.

ಅತ್ಯಧಿಕ ವೆಚ್ಚ ಮಾಡಿದವರು (ಶತಕೋಟಿ ಡಾಲರ್‌)

ದೇಶ ವೆಚ್ಚ
ಅಮೆರಿಕ 801
ಚೀನಾ 293
ಭಾರತ 76.6
ರಷ್ಯ 65.9
ಬ್ರಿಟನ್‌ 68.4
ಸೌದಿ ಅರೇಬಿಯ 55.6


Exit mobile version