ಹೊಸದಿಲ್ಲಿ: 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಹೃದಯಾಘಾತದ (Heart Attack) ಸಾವುಗಳು (Heart Failure, heart attack death) 2018 ಮತ್ತು 2022ರ ನಡುವೆ 40%ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಹೃದಯಾಘಾತದ ಸಾವುಗಳಲ್ಲಿ 26%ರಷ್ಟು ಹೆಚ್ಚಳ ಕಂಡುಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದ ವಾರ್ಷಿಕ ವರದಿ (NCRB records) ʼಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು’ ಇದರಲ್ಲಿ ಈ ಆತಂಕಕಾರಿ ಅಂಕಿ ಅಂಶಗಳು ಕಂಡುಬಂದಿವೆ.
2022ರಲ್ಲಿ 32,410 ಜನರ ಸಾವಿಗೆ ಕಾರಣವಾದ 32,457 ಹೃದಯಾಘಾತ ಘಟನೆಗಳು ಸಂಭವಿಸಿವೆ. 2018ರಲ್ಲಿ 25,764 ಹೃದಯಾಘಾತದ ಸಾವುಗಳು ಸಂಭವಿಸಿವೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ, ಹೃದಯಾಘಾತದ ಸಾವುಗಳು 2018ರಲ್ಲಿ 2,371 ಇತ್ತು. 2022ರಲ್ಲಿ ಅದು 3,329ಕ್ಕೆ ಏರಿದೆ. 30 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತದ ಸಾವುಗಳು 23,392ರಿಂದ 29,081ಕ್ಕೆ ಏರಿದೆ ಎಂದು ವರದಿ ಹೇಳಿದೆ.
ಎನ್‌ಸಿಆರ್‌ಬಿ ಹಠಾತ್ ಸಾವುಗಳ ಪ್ರಕರಣಗಳ ಅಡಿಯಲ್ಲಿ ಹೃದಯಾಘಾತದ ಸಾವುಗಳನ್ನು ಎಣಿಕೆ ಮಾಡುತ್ತದೆ. ಹಿಂಸಾಚಾರವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣದಿಂದ ದಿಡೀರ್ ಎಂದು ಸಂಭವಿಸುವ ಅನಿರೀಕ್ಷಿತ ಸಾವುಗಳ ಲೆಕ್ಕವಿಡುತ್ತದೆ. ದೇಶಾದ್ಯಂತ ಹಠಾತ್ ಸಾವಿನ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ 23%ರಷ್ಟು ಹೆಚ್ಚಿವೆ. 2018ರಲ್ಲಿ 46,003ರಿಂದ 2022ರಲ್ಲಿ 56,653ಕ್ಕೆ ಅದು ಏರಿದೆ.
2022ರಲ್ಲಿ, ಹಠಾತ್ ಸಾವುಗಳು ಒಟ್ಟು ಅಪಘಾತದ ಸಾವುಗಳಲ್ಲಿ 13.4%ನಷ್ಟಿದೆ. ಟ್ರಾಫಿಕ್ ಅಪಘಾತಗಳ ನಂತರ ಇದು ಎರಡನೇ ಸ್ಥಾನದಲ್ಲಿದೆ. ಅಪಘಾತದ ಸಾವುಗಳಲ್ಲಿ ಇದು 46%ದಷ್ಟಿದೆ. 2014ರಿಂದ ದೇಶದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಹಠಾತ್ ಸಾವಿನ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. 2012ಕ್ಕೆ ಹೋಲಿಸಿದರೆ 2022ರಲ್ಲಿ ಹಠಾತ್ ಸಾವಿನ ಪ್ರಕರಣಗಳು ದ್ವಿಗುಣಗೊಂಡಿದೆ.
ಹಠಾತ್ ಸಾವುಗಳಲ್ಲಿ ಹೃದಯಾಘಾತ ಗಮನಾರ್ಹ ಪಾಲನ್ನು ಹೊಂದಿದೆ. 2012ರಿಂದ ಹೃದಯಾಘಾತದ ಸಾವಿನಲ್ಲೂ ಜಿಗಿತ ಕಂಡುಬಂದಿದೆ. ಸಾವುನೋವುಗಳು 2012ರಲ್ಲಿ 18,522ರಿಂದ 2022ರಲ್ಲಿ 32,410ಕ್ಕೆ ಅಂದರೆ 75%ರಷ್ಟು ಹೆಚ್ಚಾಗಿದೆ.
2012ರಿಂದ ಮಹಾರಾಷ್ಟ್ರವು ರಾಜ್ಯಗಳಲ್ಲಿ ಅತಿ ಹೆಚ್ಚು ಹೃದಯಾಘಾತ ಸಾವುಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರದ ಹೊರತಾಗಿ ಕಳೆದ 10 ವರ್ಷಗಳಲ್ಲಿ ಕೇರಳವು ಗಮನಾರ್ಹ ಏರಿಕೆಯನ್ನು ವರದಿ ಮಾಡಿದ ಮತ್ತೊಂದು ರಾಜ್ಯ. ಕಳೆದ ಕೆಲವು ವರ್ಷಗಳಿಂದ, ಭಾರತದಾದ್ಯಂತ ವರದಿಯಾದ ಹೃದಯಾಘಾತ ಸಾವುಗಳಲ್ಲಿ ಅರ್ಧದಷ್ಟಕ್ಕೆ ಈ ಎರಡು ರಾಜ್ಯಗಳು ಕಾರಣವಾಗಿವೆ.
ಕೋವಿಡ್-19 ನಂತರ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದು ವರದಿಯಾಗಿವೆ. ಆದರೆ ಅಂತಹ ಸಾವುಗಳಿಗೆ ಕಾರಣವನ್ನು ಖಚಿತಪಡಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಜ್ದಾ ಅಹ್ಮದ್ ಅವರು ದೇಶದಲ್ಲಿ ಕೋವಿಡ್ ಲಸಿಕೆ ಮತ್ತು ಹೃದಯಾಘಾತದ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದರು.
ಕೋವಿಡ್-19 ರ ನಂತರ ಹೆಚ್ಚುತ್ತಿರುವ ಹೃದಯ ಸ್ತಂಭನ ಪ್ರಕರಣಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (NIE) ಅಧ್ಯಯನವನ್ನು ನಡೆಸಿವೆ. ಮೇ- ಆಗಸ್ಟ್ 2023ರ ಅವಧಿಯಲ್ಲಿ 19 ರಾಜ್ಯಗಳು/UTಗಳಾದ್ಯಂತ ಇರುವ 47 ತೃತೀಯ ಆರೈಕೆ ಆಸ್ಪತ್ರೆಗಳಲ್ಲಿ ಇದನ್ನು ನಡೆಸಲಾಗಿದೆ.
18-45 ವರ್ಷ ವಯಸ್ಸಿನ, ಯಾವುದೇ ಕೊಮೊರ್ಬಿಡಿಟಿ ಕಾಯಿಲೆಗಳಿಲ್ಲದ ಜನರ ಹಠಾತ್ ಸಾವುಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಕೋವಿಡ್- 19 ವ್ಯಾಕ್ಸಿನೇಷನ್, ಸೋಂಕು, ಕೋವಿಡ್-19 ನಂತರದ ಪರಿಸ್ಥಿತಿಗಳು, ಕುಟುಂಬದ ಆರೋಗ್ಯ ಇತಿಹಾಸ, ಧೂಮಪಾನ, ಮಾದಕವಸ್ತು ಬಳಕೆ, ಮದ್ಯಸೇವನೆ, ತೀವ್ರ ದೈಹಿಕ ಚಟುವಟಿಕೆ ಇತ್ಯಾದಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ. ಕೋವಿಡ್- 19 ಲಸಿಕೆಯು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಅಧ್ಯಯನವು ತಿಳಿಸಿದೆ. ಹಠಾತ್ ಸಾವಿನ ಕುಟುಂಬದ ಇತಿಹಾಸ ಮತ್ತು ಕೆಲವು ಜೀವನಶೈಲಿ ನಡವಳಿಕೆಗಳು ಈ ಹಠಾತ್ ಸಾವಿನ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದಿದೆ.
ಇದನ್ನೂ ಓದಿ: ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ