ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಘೋಷಿಸಿರುವ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸುತ್ತಿದೆ, ಆದ್ರೆ, ಈ ಮಧ್ಯೆ, ಅಂತರಾಷ್ಟ್ರೀಯ ನ್ಯಾಯಾಲಯ (International Court of Justice) ದಲ್ಲಿ ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ರಷ್ಯಾ ವಿರುದ್ಧ ಮತ ಚಲಾಯಿಸಿದ್ದಾರೆ.
ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾಗಿರುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್, ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ಬುಧವಾರ ರಷ್ಯಾಗೆ ತಾಕೀತು ನೀಡಿದೆ. ಅಲ್ಲದೆ ರಷ್ಯಾ ಸೇನೆ ಬಳಕೆ ಬಗ್ಗೆ ಐಸಿಜೆ ಅತೀವ ಕಳವಳ ವ್ಯಕ್ತಪಡಿಸಿದೆ.
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿನ ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಅವರನ್ನು ಸರ್ಕಾರ ಹಾಗೂ ವಿವಿಧ ಮಿಷನ್‌ಗಳ ಸಂಪೂರ್ಣ ಬೆಂಬಲದೊಂದಿಗೆ ಐಸಿಜೆಗೆ ನಾಮನಿರ್ದೇಶನ ಮಾಡಲಾಗಿತ್ತು. ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗಿತ್ತು.
ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಚಲಾಯಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನ್ಯಾ. ಭಂಡಾರಿ ಅವರು ರಷ್ಯಾ ವಿರುದ್ಧ ಮತ ಚಲಾಯಿಸಿರುವುದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಭಾರತದ ಅಧಿಕೃತ ನಿಲುವಿಗಿಂತ ವಿಭಿನ್ನವಾಗಿದೆ.