ವಾಷಿಂಗ್ಟನ್: ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸುವ ವಿಷಯದಲ್ಲಿ ಭಾರತಕ್ಕೆ ಸ್ವಲ್ಪ ಭಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಸಿಇಒಗಳ ಸಭೆ ಉದ್ದೇಶಿಸಿ ಮಾತನಾಡಿದ ಬೈಡನ್ ಅವರು, ಪುಟಿನ್ ಆಕ್ರಮಣಶೀಲತೆಗೆ ಪ್ರತಿಕ್ರಿಯೆಯಾಗಿ ನಾವು ನ್ಯಾಟೋ ಹಾಗೂ ಪೆಸಿಫಿಕ್ ಪ್ರದೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಕ್ವಾಡ್ ದೇಶಗಳ ಪೈಕಿ ಸ್ವಲ್ಪ ಭಯದಲ್ಲಿರುವ ಭಾರತವನ್ನು ಹೊರತುಪಡಿಸಿ ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಕೂಡ ಪ್ರಬಲವಾಗಿ ನಿಂತಿವೆ ಎಂದು ಹೇಳಿದರು.
ಪುಟಿನ್ ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನನ್ನ ಬಗ್ಗೆ ಅವರೂ ತಿಳಿದುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ. ಅವರು ನ್ಯಾಟೋವನ್ನು ವಿಭಜಿಸಲು ಸಾಧ್ಯವಾಗುತ್ತದೆ ಎಂದು ತಿಳಿದಿದ್ದಾರೆ. ಆದರೆ, ನ್ಯಾಟೋ ಸ್ಥಿರವಾಗಿ ಉಳಿಯುತ್ತದೆ ಎಂದು ಪುಟಿನ್ ಯಾವತ್ತೂ ಯೋಚಿಸಲಿಲ್ಲ. ಅವರ ಕಾರಣದಿಂದಾಗಿಯೇ ನ್ಯಾಟೋ ಹಿಂದೆಂದಿಗಿಂತಲೂ ಹೆಚ್ಚು ಪ್ರಬಲವಾಗಿದೆ ಎಂದು ಬೈಡನ್ ಹೇಳಿದರು.
ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಭಾರತ ಈವರೆಗೂ ಖಂಡಿಸಿಲ್ಲ. ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ವಿಚಾರದಲ್ಲೂ ಭಾರತ ತಟಸ್ಥವಾಗಿಯೇ ಉಳಿದುಕೊಂಡಿದೆ.