Site icon Vistara News

Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

Rain News

ಕೋಲಾರ: ಆಂಧ್ರಪ್ರದೇಶದ ವಿಜಯವಾಡದಲ್ಲಿ (Rain News) ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ವ್ಯಾಪಕ ಮಳೆಯಿಂದ ರಸ್ತೆಗಳಲ್ಲಿ ರಭಸವಾಗಿ ನೀರು ತುಂಬಿ ಹರಿಯುತ್ತಿದ್ದು, ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಹಗ್ಗ ಕೊಟ್ಟು ಯುವಕನನ್ನು ಬಚವ್‌ ಮಾಡಿದ್ದಾರೆ.

ಕೆಲ ಗಂಟೆಗಳ ಕಾಲ ದ್ವಿಚಕ್ರ ವಾಹನಗಳು ರಸ್ತೆಗೆ ಬರದಂತೆ, ಜನರು ರಸ್ತೆಗಿಳಿಯದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ಎಲ್ಲಾ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸದಂತೆ ಪೊಲೀಸರು ಆದೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿಗಳಿಂದ ಸರ್ವಿಸ್ ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೊಣಕಾಲಿನಷ್ಟು ನೀರು ನಿಂತು ಅವಾಂತರವೇ ಸೃಷ್ಟಿಯಾಗಿದೆ.

ನಗರ ಪ್ರವೇಶಿಸುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪೂರ್ವಾನುಮತಿ ಇಲ್ಲದೆ ನಗರದೊಳಗೆ ಬೆಂಗಾವಲು ವಾಹನಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ. ಮೊಘಲ್ ರಾಜ್ ಪುರಂನಲ್ಲಿ ಬಂಡೆಗಳು ಮುರಿದು ಬಿದ್ದಿವೆ. ಪ್ರಮುಖ ಬೀದಿಗಳಲ್ಲಿ ಅಗ್ನಿಶಾಮಕ ವಾಹನಗಳ ಮೂಲಕ ನೀರು ತೆಗೆಯುವ ಪ್ರಯತ್ನ ಮಾಡುತ್ತಿದೆ. ಹಳೇ ಪೇಟೆಯಲ್ಲಿನ ಹೊರಹರಿವಿನ ಚರಂಡಿ ತುಂಬಿ ಹರಿಯುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ. ನಿಡಮನೂರಿನಿಂದ ಟ್ಯಾಂಕ್ಸಾಳದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗಿದೆ.

ಇದನ್ನೂ ಓದಿ: Road Accident : ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಬೈಕ್‌ ಸವಾರ ಸ್ಪಾಟ್‌ ಡೆತ್‌; ಕರೆಂಟ್‌ ಶಾಕ್‌ನಿಂದ ಒದ್ದಾಡಿ ಪ್ರಾಣಬಿಟ್ಟ ವೃದ್ಧೆ

ಕಲಬುರಗಿಯಲ್ಲಿ ಮಳೆ ಅಬ್ಬರಕ್ಕೆ ಜನರು ಕಂಗಾಲು

ಇತ್ತ ಕಲಬುರಗಿಯಲ್ಲಿ ರಾತ್ರಿಯಿಡಿ ಸುರಿದ ಧಾರಾಕರ ಮಳೆಗೆ ಸೇಡಂ ತಾಲೂಕಿನ ಹೊಸಳ್ಳಿ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹಲವು ಭಾಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪಿಡಿಎ ಕಾಲೇಜು ಬಳಿ ಇರುವ 10ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿತ್ತು.

ಚಿಂಚೊಳ್ಳಿ ತಾಲೂಕಿನಾದ್ಯಂತವು ವರ್ಷಧಾರೆಯಿಂದಾಗಿ ಚಂದ್ರಂಪಳ್ಳಿ ಜಲಾಶಯ ತುಂಬಿ ಹರಿಯುತ್ತಿದೆ. ಚಂದ್ರಂಪಳ್ಳಿ ಜಲಾಶಯದಿಂದ ನೀರು ಬಿಡುಗಡೆಯಿಂದಾಗಿ ಮಿರಿಯಾಣ ಹಾಗೂ ತೆಲಂಗಾಣದ ತಾಂಡೂರು ರಸ್ತೆ ಜಲಾವೃತಗೊಂಡು, ಸಂಪರ್ಕ ಕಡಿತಗೊಂಡಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾವ್ ಗ್ರಾಮಕ್ಕೆ ಜಲದಿಗ್ಬಂಧನ ಹಾಕಲಾಗಿದೆ.

ಮಳೆಯ ಆರ್ಭಟಕ್ಕೆ ಹಲವು ಹಳ್ಳಕೊಳ್ಳಗಳು ಭರ್ತಿಯಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ‌ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇರುವ ಚಿಕ್ಕನಿಂಗದಳ್ಳಿ ಗ್ರಾಮದ ಕೆರೆಭರ್ತಿಯಾಗಿದೆ. ಕುಂಚಾವರಂ ವನ್ಯಜೀವಿ ಧಾಮದ ಕೆರೆ ತುಂಬಿ ಹರಿಯುತ್ತಿದೆ. ಇನ್ನು ತುಂಬಿ ಹರಿಯುತ್ತಿರುವ ಕಾಗಿಣ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿ ಪ್ರಮಾಣ ಹೆಚ್ಚುತ್ತಿದೆ. ತುಂಬಿ ಹರಿಯುತ್ತಿರುವ ನದಿ ದಡದಲ್ಲೆ ಚಾಲಕರು ಲಾರಿ ತೊಳೆಯುತ್ತಿರುವ ದೃಶ್ಯ ಕಂಡು ಬಂತು. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೋಲಿಸ್ ಭದ್ರತೆ ವಹಿಸಲಾಗಿದೆ.

ಕಲಬುರಗಿ ಸುರಿಯುತ್ತಿರುವ ಭಾರಿ ಮಳೆಗೆ ಬೋಗಾವತಿ ನದಿ ತುಂಬಿ ಹರಿದಿದೆ. ಪರಿಣಾಮ ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ, ಗಂಗನಪಳ್ಳಿ ಗ್ರಾಮದ ಸೇತುವೆ ಜಲಾವೃತವಾಗಿದೆ. ಸೇತುವೆ ಜಲಾವೃತ ಪರಿಣಾಮ ಪೋಲಕಪಳ್ಳಿ, ಗಂಗನಪಳ್ಳಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ ಬೋಗಾವತಿ ನದಿ ನೀರಿನ ಅರ್ಭಟಕ್ಕೆ ಗಂಗನಪಳ್ಳಿ ಗ್ರಾಮದ ಗಂಗಾ ಮಾತೆ ದೇವಿಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಚಿಂಚೋಳಿ ತಾಲ್ಲೂಕಿನ ತಾಜಲಾಪೂರ, ಗಾರಂಪಳ್ಳಿ, ಗರಗಪಳ್ಳಿ, ಇರಕಪಳ್ಳಿ ಸೇತುವೆಗಳು ಜಲಾವೃತ. ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

ಯಾದಗಿರಿಯಲ್ಲಿ ಮನೆಯೊಳಗೆ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ಶನಿವಾರ ರಾತ್ರಿಯಿಂದ ಸುರಿದ ವರುಣನ ಅಬ್ಬರಕ್ಕೆ ಮನೆಯೊಳಗೆ ನೀರು ನುಗ್ಗಿದೆ. ನೀರು ಹೊರಹಾಕಲು ದೋರನಹಳ್ಳಿ ಗ್ರಾಮದ ಜನರು ಸಂಕಷ್ಟ ಎದುರಿಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಮಾಪಮ್ಮಳ ಮನೆಯಲ್ಲಿ ನವಜಾತ ಶಿಶುವೊಂದಿಗೆ ಬಾಣಂತಿ ಪರದಾಡಿದರು. ಅದೆ ರೀತಿ ಪಗಲಾಪುರನ ತಾತ್ಕಾಲಿಕ ಸೇತುವೆ ಜಲಾವೃತವಾಗಿದೆ. ಸೇತುವೆ ಹಾಳಾದ ಹಿನ್ನಲೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಮಳೆ ಅಬ್ಬರದಿಂದ ತಾತ್ಕಾಲಿಕ ಪಗಲಾಪುರ ಸೇತುವೆಯೂ ಜಲಾವೃತ ಸಂಪರ್ಕ ಕಡಿತಗೊಂಡಿದೆ. ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ ಅಬ್ಬರಕ್ಕೆ ವಂಕಸಂಬ್ರದ ರಸ್ತೆ ಜಲಾವೃತಗೊಂಡಿದೆ. ವಂಕಸಂಬ್ರದಿಂದ ತೋರಣತಿಪ್ಪಗೆ ಸಂಪರ್ಕದ ರಸ್ತೆಯಲ್ಲಿ ಉಕ್ಕಿ ಹರಿಯುವ ನೀರಿನಲ್ಲೇ ಜನರು ಓಡಾಡುವಂತಾಗಿದೆ. ಮತ್ತೊಂದೆಡೆ ಮನೆ ಗೋಡೆಗಳು ಕುಸಿದ ಬಿದ್ದಿದೆ. ನಿರಂತರ ಮಳೆಯಿಂದ ಬೊರಬಂಡಾ ಗ್ರಾಮದ ಎರಡು ಮನೆಗೋಡೆಗಳು ಕುಸಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version