ಬೆಂಗಳೂರು: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ನಡುವೆ ಮಹತ್ವದ ವರ್ಚುವಲ್ ಮಾತುಕತೆ ನಡೆದಿದ್ದು, ಭಾರತ ತನ್ನ ನಿಲುವನ್ನು ಹಾಗೆಯೇ ಉಳಿಸಿಕೊಂಡಿದೆ.
ಪ್ರಧಾನಿ ಮೋದಿ ಮಾತನಾಡಿ, ಉಕ್ರೇನ್ನಲ್ಲಿ(Ukraine) ನಡೆಯುತ್ತಿರುವ ನಾಗರಿಕರ ಹತ್ಯೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು. ಇತ್ತೀಚೆಗೆ ಬೂಚಾ(Bucha) ನಗರದ ಹತ್ಯಾಕಾಂಡವೂ ಸೇರಿ ಎಲ್ಲ ನಾಗರಿಕ ಹತ್ಯೆಗಳನ್ನೂ ಬಲವಾಗಿ ಖಂಡಿಸುತ್ತೇವೆ. ಈ ಹತ್ಯೆಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂಬ ಮಾತಿಗೆ ಈಗಲೂ ಬದ್ಧವಾಗಿದ್ದೇವೆ ಎಂದು ಪುನರುಚ್ಛರಿಸಿದರು. ರಷ್ಯಾ ಹಾಗೂ ಉಕ್ರೇನ್ ನಡುವೆ ನೇರ ಮಾತುಕತೆಗಳು ನಡೆದು ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ ಎಂದರು.
ಎರಡು ಪ್ರಜಾಪ್ರಭುತ್ವ ದೇಶಗಳು ಪರಸ್ಪರ ಉತ್ತಮ ಸಂಬಂಧಗಳನ್ನು ಹಾಗೂ ಸಂವಾದಗಳನ್ನು ಮುಂದುವರಿಸಬೇಕು ಎಂಬ ಆಶಯದೊಂದಿಗೆ ಬೈಡೆನ್ ತಮ್ಮ ಮಾತನ್ನು ಆರಂಭಿಸಿದರು. ಉಕ್ರೇನ್ಗೆ ಭಾರತ ಒದಗಿಸುತ್ತಿರುವ ಮಾನವೀಯ ನೆರವಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಷ್ಯಾ ಯುದ್ಧದಿಂದಾಗಿ ಆಗುತ್ತಿರುವ ಅಸ್ಥಿರತೆಗಳನ್ನು ನಿರ್ವಹಣೆ ಮಾಡಲು ಭಾರತ ಹಾಗೂ ಅಮೆರಿಕ ಸಂವಾದಗಳು ಮುಂದುವರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಶ್ವೇತಭವನ ವಕ್ತಾರರು ಪ್ರಶ್ನೆಗಳಿಗೆ ಉತ್ತರಿಸಿದರು. ಭಾರತವು ರಷ್ಯಾ ವಿರುದ್ಧ ನಿಲುವು ತಳೆಯಲು ಒತ್ತಡ ಹೇರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇತ್ತೀಚಿನ ದಿನಗಳಲ್ಲಿ ಭಾರತವು ಅನೇಕ ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ನಾಗರಿಕರ ಹತ್ಯೆಗಳನ್ನು ಖಂಡಿಸಿದೆ ಹಾಗೂ ಸ್ವತಂತ್ರ ತನಿಖೆಗೆ ಬೆಂಬಲ ನೀಡಿದೆ. ಔಷಧ, ಇನ್ನಿತರೆ ವಸ್ತುಗಳು ಸೇರಿ ಉಕ್ರೇನ್ಗೆ ಅನೇಕ ನೆರವನ್ನೂ ಭಾರತ ನೀಡುತ್ತಿದೆ. ಭಾರತವು ತನ್ನ ನಿರ್ಧಾರವನ್ನು ತಾನೇ ಕೈಗೊಳ್ಳುತ್ತದೆ. ಆದರೆ ನಾವು ಸಂವಾದವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಅಂದರೆ ರಷ್ಯಾ ವಿರುದ್ಧ ನೇರವಾಗಿ ನಿಲುವು ವ್ಯಕ್ತಪಡಿಸಲು ಮನವೊಲಿಸುವ ಪ್ರಯತ್ನವನ್ನು ಅಮೆರಿಕ ನಡೆಸಿದೆಯಾದರೂ ಭಾರತವು ತನ್ನ ನಿಲುವನ್ನು ಬದಲಾಯಿಸಿಕೊಂಡಿಲ್ಲ. ಆದರೆ ಉಕ್ರೇನ್ನಲ್ಲಿನ ನಾಗರಿಕರ ಹತ್ಯೆಗಳನ್ನು ಖಂಡಿಸುವಲ್ಲಿ ಹೆಚ್ಚಿನ ನಿಖರತೆ ಇರುವುದು ಅಮೆರಿಕಕ್ಕೆ ಅಲ್ಪಮಟ್ಟಿಗಿನ ಸಂತಸ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತ ತನ್ನ ನಿರ್ಧಾರ ಕೈಗೊಳ್ಳುತ್ತದೆ
ಭಾರತವು ತನ್ನ ಅಭಿಪ್ರಾಯವನ್ನು ನೇರಾನೇರ ವ್ಯಕ್ತಪಡಿಸಿದೆ ಎಂದಿರುವ ಶ್ವೇತಭವನದ(White House) ವಕ್ತಾರರು, ರಷ್ಯಾ ತನ್ನದೇ ಸಮಸ್ಯೆಗಳನ್ನು ಹೊಂದಿದೆ. ರಷ್ಯಾ ಹಾಗೂ ಚೀನಾ ಸಂಬಂಧದ ಕುರಿತೂ ಭಾರತ ತನ್ನದೇ ವಿಚಾರಗಳನ್ನು ಹೊಂದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಈಗಾಗಲೆ ಒತ್ತಡದ ಸ್ಥಿತಿ ಎದುರಿಸುತ್ತಿದೆ. ರಷ್ಯಾ ಹಾಗೂ ಚೀನಾದ ನಡುವೆ ಗಾಢವಾದ ಸಂಬಂಧಗಳು ಭಾರತಕ್ಕೆ ಎಂದು ಗೋಚರಿಸುತ್ತವೆಯೋ ಆಗ ಭಾರತದ ಆಲೋಚನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಬೈಡೆನ್ ನಡುವಿನ ವರ್ಚುವಲ್ ಸಭೆಯ ನಂತರ ಎರಡೂ ದೇಶಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಪರಸ್ಪರ ಸಭೆಗಳನ್ನು ನಡೆಸಿದರು. ಯುದ್ಧವನ್ನು ಸ್ಥಗಿತಗೊಳಿಸುವಂತೆ ಎಲ್ಲ ದೇಶಗಳೂ ಒತ್ತಾಯ ಮಾಡಬೇಕು ಎಂಬ ವಿಚಾರವು ಅಮೆರಿಕ ಕಡೆಯಿಂದ ಈ ಸಭೆಗಳಲ್ಲೂ ಚರ್ಚೆ ಆಯಿತು ಎನ್ನಲಾಗಿದೆ.
ರಷ್ಯಾ ವಿರುದ್ಧ ಸ್ಪಷ್ಟವಾದ ನಿಲುವನ್ನು ಹೊಂದಬೇಕು ಹಾಗೂ ಆ ದೇಶವನ್ನು ವಿಶ್ವ ಸಮುದಾಯದಿಂದ ಏಕಾಂಗಿ ಮಾಡಬೇಕೆಂಭ ನಿಟ್ಟಿನಲ್ಲಿ ವಿಶ್ವಸಂಸ್ಥೆ ಹಂತದಲ್ಲಿ 10 ಪ್ರಸ್ತಾವನೆಗಳನ್ನು ಈಲ್ಲಿವರೆಗೆ ಮಂಡಿಸಲಾಗಿದೆ. ಅಮೆರಿಕ ಒತ್ತಾಸೆ ಮೇರೆಗೆ ಮಂಡಿಸಲಾದ ಈ ಎಲ್ಲ ಪ್ರಸ್ತಾವನೆಗಳಿಗೆ ಮತದಾನದ ಸಂದರ್ಭದಲ್ಲೂ ಭಾರತ ಗೈರು ಹಾಜರಾಗಿದೆ. ಇದು ಅಮೆರಿಕಕ್ಕೆ ಮುಜುಗರ ಉಂಟುಮಾಡಿದೆ. ಹಾಗಾಗಿ ಭಾರತ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲು ಅಮೆರಿಕ ವಿವಿಧ ಮಾರ್ಗಗಳ ಮೂಲಕ ಒತ್ತಾಯ ಮಾಡುತ್ತಲೇ ಬಂದಿದೆ. ಅದರ ಮುಂದುವರಿದ ಭಾಗವೇ ಈ ವರ್ಚುವಲ್ ಸಭೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ರಷ್ಯಾದೊಂದಿಗೆ ಭಾರತದ ಸಂಬಂಧಗಳು ದಶಕಗಳಿಗೂ ಹಿಂದಿನಿಂದಲೂ ಗಾಢವಾಗಿದೆ. ಜತೆಗೆ, ರಷ್ಯಾವನ್ನು ಕಟ್ಟಿ ಹಾಕಲು ಉಕ್ರೇನ್ನಲ್ಲಿ ನ್ಯಾಟೊ ಪಡೆಗಳನ್ನು ನಿಯೋಜಿಸುವ ಹುನ್ನಾರದ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವುದು ಭಾರತಕ್ಕೆ ತಿಳಿದಿದೆ. ತನ್ನ ಸುರಕ್ಷತೆಗಾಗಿ ರಷ್ಯಾ ನಡೆಸುತ್ತಿರುವ ಯುದ್ಧದ ಕುರಿತು ಭಾರತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉಕ್ರೇನ್ನಲ್ಲಿ ನಾಗರಿಕರ ಮೇಲಿನ ದಾಳಿ ಹಾಗೂ ಹತ್ಯಾಕಾಂಡವನ್ನು ಬಲವಾಗಿ ಖಂಡಿಸಿದೆ.
ಸಭೆಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಶ್ವೇತ ಭವನ, Covid-19 ಎದುರಿಸುವುದು, ಜಾಗತಿಕ ಆಹಾರ ಸುರಕ್ಷತೆ ಸೇರಿ ಅನೇಕ ವಿಚಾರಗಳಲ್ಲಿ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಎಲ್ಲ ದೇಶಗಳ ಸಾರ್ವಭೌಮತೆಯನ್ನು ಗೌರವಿಸಬೇಕೆಂಬುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದಾಗಿ ವಿಶ್ವದ ಆಹಾರ ಸರಬರಾಜು ವ್ಯವಸ್ಥೆ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಚರ್ಚೆ ನಡೆಸಿದ್ದಾರೆ. ಮುಂದಿನ ತಿಂಗಳು 24ರಂದು ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಸಮ್ಮೇಳನದಲ್ಲಿ ಮೋದಿ ಹಾಗೂ ಬೈಡೆನ್ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಓದಿಗಾಗಿ: ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ
ಕನ್ನಡಿಗ ನವೀನ್ ನೆನಪು
ಉಕ್ರೇನ್ನಲ್ಲಿನ ನಾಗರಿಕರ ಹತ್ಯೆಗಳನ್ನು ಖಂಡಿಸಿದ ಪ್ರಧಾನಿ ಮೋದಿ, ಯುದ್ಧಗ್ರಸ್ಥ ಪ್ರದೇಶಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದನ್ನು ಸ್ಮರಿಸಿದರು. ಅವರುಗಳನ್ನು ಭಾರತಕ್ಕೆ ವಾಪಸ್ ಕರೆತರಲು ಸಾಕಷ್ಟು ಶ್ರಮ ವಹಿಸಲಾಯಿತು, ಅದರಲ್ಲಿ ಸಫಲವೂ ಆದೆವು. ಆದರೆ ಇಷ್ಟೆಲ್ಲ ಪ್ರಯತ್ನದ ನಡುವೆ ಒಬ್ಬ ಭಾರತೀಯ ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಮೋದಿ ಬೇಸರ ವ್ಯಕ್ತಪಡಿಸಿದರು. ರಷ್ಯಾ ಬಾಂಬ್ ದಾಳಿಗೆ ಕರ್ನಾಟಕದ ಹಾವೇರಿ ಮೂಲದ, ಉಕ್ರೇನ್ನಲ್ಲಿ MBBS ವ್ಯಾಸಂಗ ಮಾಡುತ್ತಿದ್ದ ನವೀನ್ ಗ್ಯಾನಗೌಡ್ರ ಮೃತಪಟ್ಟಿದ್ದರು. ನಂತರ ಭಾರತದ ವಿದೇಶಾಂಗ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಯತ್ನದಿಂದ ನವೀನ್ ಮೃತದೇಹವನ್ನು ತರಲಾಗಿತ್ತು. ಕರ್ನಾಟಕ ಸೇರಿ ಇಡೀ ದೇಶವೇ ನವೀನ್ ಸಾವಿಗೆ ಕಂಬನಿ ಮಿಡಿದಿತ್ತು.