ವಾಷಿಂಗ್ಟನ್: ಹೆಚ್ಚುತ್ತಿರುವ ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನ್‌ಗೆ 800 ದಶಲಕ್ಷ ಡಾಲರ್ ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರ ಒದಗಿಸಿಕೊಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಈ ಮಿಲಿಟರಿ ನೆರವಿನ ಪ್ಯಾಕೇಜಿನಲ್ಲಿ ಭಾರಿ ಗನ್ನುಗಳು, 1.44 ಲಕ್ಷ ರೌಂಡ್ ಮದ್ದುಗುಂಡುಗಳು, ಡ್ರೋನ್‌ಗಳು ಸೇರಿವೆ. ಅಲ್ಲಿಗೆ ಅಮೆರಿಕದ ಇದುವರೆಗಿನ ನೆರವು 260 ಕೋಟಿ ಡಾಲರ್ ದಾಟಿದೆ. ಈ ನೆರವು ನೇರವಾಗಿ ಯುದ್ಧಗ್ರಸ್ತ ಡೊನ್ಬಾಸ್ ಪ್ರಾಂತ್ಯಕ್ಕೆ ಹೋಗಲಿದೆ.
ʼʼನಾವು ಈ ವಿಷಯದಲ್ಲಿ ಅಸಕ್ತಿ ಕಳೆದುಕೊಂಡಿದ್ದೇವೆ, ಪಶ್ಚಿಮದ ಒಗ್ಗಟ್ಟು ಸಡಿಲವಾಗಿದೆ ಎಂದು ಪುಟಿನ್ ಭಾವಿಸಿದ್ದಾರೆ. ಆದರೆ ಅದು ತಪ್ಪು ಭಾವನೆ ಎಂದು ನಾವು ರುಜುವಾತುಪಡಿಸಲಿದ್ದೇವೆʼʼ ಎಂದು ಬೈಡೆನ್ ಹೇಳಿದ್ದಾರೆ. ಇದಲ್ಲದೆ, ಅಮೆರಿಕದ ಬಂದರುಗಳಿಂದ ರಷ್ಯಾ ನೆರವಿನ ವಾಣಿಜ್ಯ ನೌಕೆಗಳನ್ನು ಹೊರಗಿಡಲೂ ಅವರು ಸೂಚಿಸಿದ್ದಾರೆ.
ಇದರ ಜೊತೆಗೆ 500 ದಶಲಕ್ಷ ಡಾಲರ್ ನೇರ ಹಣದ ನೆರವನ್ನೂ ಉಕ್ರೇನ್ ಸರಕಾರಕ್ಕೆ ಬೈಡೆನ್ ಘೋಷಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ದಾಳಿ ಆರಂಭವಾದ ನಂತರದ ಎರಡು ತಿಂಗಳಲ್ಲಿ 100 ಕೋಟಿ ಡಾಲರ್ ಮೊತ್ತವನ್ನು ಅಮೆರಿಕ ಒದಗಿಸಿದೆ.
ಒಟ್ಟಾರೆಯಾಗಿ ಉಕ್ರೇನ್‌ಗೆ 1360 ಕೋಟಿ ಡಾಲರ್‌ಗಳನ್ನು ಒದಗಿಸಲು ಅಮೆರಿಕದ ಸಂಸತ್ತು ಉದ್ದೇಶಿಸಿದ್ದು, ಅದರಲ್ಲಿ 650 ಕೋಟಿಯಷ್ಟು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಫೆಬ್ರವರಿಯಿಂದ ಇಲ್ಲಿಯವರೆಗೂ 340 ಕೋಟಿ ಡಾಲರ್‌ಗಳಷ್ಟು ಭದ್ರತಾ ಸಹಕಾರ ಒದಗಿಸಲಾಗಿದೆ.
ಕಳೆದ ವಾರ, ತಮ್ಮ ದೇಶ ಉಕ್ರೇನ್‌ಗೆ ಸಾಕಷ್ಟು ಮದ್ದುಗುಂಡುಗಳನ್ನು ಒದಗಿಸುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುದೇವ್ ಹೇಳಿದ್ದರು. ಸಶಸ್ತ್ರ ಟ್ಯಾಂಕ್‌ಗಳು ಸೇರಿದಂತೆ ಭಾರಿ ಆಯುಧಗಳನ್ನು ಕಳಿಸುವ ವಾಗ್ದಾನವನ್ನು ಡಚ್ ಪ್ರಧಾನಿ ಮಾರ್ಕ್ ರುಟ್ ಅವರು ಉಕ್ರೇನ್‌ಗೆ ನೀಡಿದ್ದರು.
ಇದನ್ನೂ ಓದಿ: Russia-Ukraine War: ಮಾರಿಯೋಪೋಲ್ ನಗರ ಕೈವಶವಾಗಿದೆ ಎಂದು ಘೋಷಿಸಿದ ಪುಟಿನ್