ಬೆಂಗಳೂರು: ಸದ್ಯ ನಡೆಯುತ್ತಿರುವ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಮಹತ್ವದ ವರ್ಚುವಲ್ ಸಭೆಯನ್ನು ಸೋಮವಾರ ನಡೆಸಲಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಕುರಿತು ಭಾರತದ ಧೋರಣೆ, ಏಷ್ಯಾದಲ್ಲಿ ಚೀನಾ ವರ್ತನೆ ಸೇರಿ ಅನೇಕ ವಿಚಾರಗಳು ಚರ್ಚೆ ಆಗಲಿದೆ. ಈ ಹಿಂದೆ ಅಮೆರಿಕದ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ನೀಡಿದಂತೆ ಮತ್ತೊಂದು ಎಚ್ಚರಿಕೆ ನೀಡಲಿದ್ದಾರೆಯೇ ಅಥವಾ ಈ ವಿಚಾರಗಳಲ್ಲಿ ಭಾರತದ ಸಹಕಾರ ಬೇಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಮೋದಿ ಹಾಗೂ ಬೈಡನ್ ಸಭೆಯ ಕುರಿತು ಅಮೆರಿಕದ ಶ್ವೇತ ಭವನ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಈ ಹೇಳಿಕೆ ಹೊರಡಿಸಿದ್ದು, ಏಪ್ರಿಲ್ 11ರ ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾರತದ ಪ್ರದಾನಿ ನರೇಂದ್ರ ಮೋದಿಯವರ ಜತೆಗೆ ವರ್ಚುವಲ್ ಸಭೆ ನಡೆಸಲಿದ್ದಾರೆ. ನಮ್ಮ ಸರ್ಕಾರಗಳು, ಆರ್ಥಿಕತೆ, ನಾಗರಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸಬಲಗೊಳಿಸಲು ಈ ಸಭೆ ಎಂದು ಪ್ರಾರಂಭದಲ್ಲಿ ಹೇಳಿದ್ದಾರೆ. ಈ ಸಭೆಯಲ್ಲಿ ಕೋವಿಡ್-19 ಮಹಾಮಾರಿಯನ್ನು ಎದುರಿಸುವುದು, ಹವಾಮಾನ ವೈಪರೀತ್ಯವನ್ನು ತಡೆಗಟ್ಟುವುದು, ಜಾಗತಿಕ ಆರ್ಥಿಕತೆಯನ್ನು ಸದೃಢಗೊಳಿಸುವುದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ, ಪ್ರಜಾಪ್ರಭುತ್ವ ಹಾಗೂ ಸಮೃದ್ಧತೆಯನ್ನು ಉತ್ತೇಜಿಸಲು ಮುಕ್ತ, ಸೂತ್ರಗಳ ಆಧಾರದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಸ್ಥಾಪಿಸಲು ಇಬ್ಬರೂ ನಾಯಕರು ಸಭೆ ನಡೆಸಲಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಚೌಕಟ್ಟ ಅಭಿವೃದ್ಧಿಗೊಳಿಸಲು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯ ನೀಡುವ ಕುರಿತ ಚರ್ಚೆಗಳನ್ನು ನಾಯಕರು ಮುಂದುವರಿಸಲಿದ್ದಾರೆ. ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸಿರುವ ಅಮಾನವೀಯ ಯುದ್ಧ ಹಾಗೂ ಜಾಗತಿಕ ಆಹಾರ ಸರಬರಾಜು ಮತ್ತು ಉತ್ಪನ್ನ ಮಾರುಕಟ್ಟೆ ಮೇಲೆ ಈ ಯುದ್ಧದ ನಕಾರಾತ್ಮಕ ಪರಿಣಾಮಗಳ ಕುರಿತು ಆತ್ಮೀಯ ಮಾತುಕತೆಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೆ ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತದ ನಿಲುವು ರಷ್ಯಾ ಪರವಾಗಿ ಇಲ್ಲವಾದರೂ ಅಮೆರಿಕ ಪರವಾಗಿಯಂತೂ ಇಲ್ಲ ಎನ್ನುವುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ರಷ್ಯಾವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸುವ ಸಲುವಾಗಿ ಅಮೆರಿಕ ಪ್ರೇರಿತವಾಗಿ ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ 10 ಬಾರಿ ಪ್ರಸ್ತಾವನೆಗಳನ್ನು ಮಂಡಿಸಲಾಗಿದೆ. ರಷ್ಯಾ ದೇಶವು ಉಕ್ರೇನ್‌ನಲ್ಲಿ ನಡೆಸಿರುವ ನಾಗರಿಕರ ಮೇಲಿನ ದಾಳಿಯನ್ನು ಭಾರತ ಖಂಡಿಸಿದೆಯಾದರೂ ಈ ಎಲ್ಲ ಪ್ರಸ್ತಾವನೆಗಳ ಸಂದರ್ಭದಲ್ಲೂ ಅನುಪಸ್ಥಿತಿ ಆಗಿದೆ. ಇದು ಅಮೆರಿಕಕ್ಕೆ ಮುಜುಗರ ಉಂಟು ಮಾಡಿದೆ.
ದಲೀಪ್ ಸಿಂಗ್ ನೀಡಿದ್ದ ಎಚ್ಚರಿಕೆ
ಕೆಲ ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಅಮೆರಿಕದ ಆರ್ಥಿಕ ವಿಚಾರಗಳ ಕುರಿತು ಭದ್ರತಾ ಸಲಹೆಗಾರ ದಲೀಪ್ ಸಿಂಗ್, ಉಕ್ರೇನ್ ಹಾಗೂ ರಷ್ಯಾ ವಿಚಾರದಲ್ಲಿ ಭಾರತದ ನಿಲುವಿನಿಂದಾಗಿ ಭವಿಷ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು. ಇದು ಎಚ್ಚರಿಕೆ ಅಲ್ಲ ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ತಳ್ಳಿ ಹಾಕಿದ್ದರಾದರೂ ಇದು ಎಚ್ಚರಿಕೆ ಎಂದೇ ಪರಿಗಣಿತವಾಗಿದೆ. ಇದೀಗ ಬೈಡೆನ್ ಮಾತುಕತೆ ವೇಳೆ ಅವರೂ ಎಚ್ಚರಿಕೆ ಸ್ವರೂಪದಲ್ಲಿ ಮಾತನಾಡುತ್ತಾರೆಯೇ ಅಥವಾ ಭಾರತದ ಸಹಕಾರವನ್ನು ಬೇಡುತ್ತಾರೆಯೇ ಕಾದುನೋಡಬೇಕಿದೆ. ಇದು ಭಾರತ- ಅಮೆರಿಕದ ಭವಿಷ್ಯದ ಸಂಬಂಧಗಳ ಮೇಲೆಯೂ ಪರಿಣಾಮ ಬೀರುತ್ತದೆ.
ಮತ್ತಷ್ಟು ಓದಿಗಾಗಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 76 ಸಾವಿರ ಟನ್ ಇಂಧನ ನೆರವು
ಎರಡನೆಯದಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಮೃದ್ಧಿಯ ಕುರಿತು ಬೈಡೆನ್ ಪ್ರಸ್ತಾಪಿಸಲಿದ್ದಾರೆ. ಇದು ಪರೋಕ್ಷವಾಗಿ ಚೀನಾ ಕುರಿತ ಚರ್ಚೆ. ಚೀನಾವು ಏಷ್ಯಾದ ವಿವಿಧ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಅನೇಕ ಪ್ರಯತ್ನ ಮಾಡುತ್ತಿದೆ. ಸಣ್ಣ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಿ ತನ್ನ ನಿಯಂತ್ರಣಕ್ಕೆ ಪಡೆಯುವ ಉದಾಹರಣೆಗಳಾಗಿ ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಸ್ಥಿರತೆಯೇ ಕಣ್ಣ ಮುಂದಿದೆ. ಜತೆಗೆ, ಉಕ್ರೇನ್ ಯುದ್ಧದ ಕುರಿತಂತೆ ಚೀನಾವು ನೇರವಾಗಿ ರಷ್ಯಾಕ್ಕೆ ಬೇಂಬಲ ನೀಡಿರುವುದು ಅಮೆರಿಕ ಕಣ್ಣನ್ನು ಕೆಂಪಾಗಿಸಿದೆ. ಏಷ್ಯಾದಲ್ಲಿ ಚೀನಾವನ್ನು ಕಟ್ಟಿಹಾಕಬೇಕೆಂದರೆ ಭಾರತದ ಸಹಕಾರ ಅಮೆರಿಕಕ್ಕೆ ಮುಖ್ಯವಾಗಿರುವುದರಿಂದ ಬೈಡೆನ್ ಮಾತುಕತೆಯು ಮತ್ತಷ್ಟು ಮಹತ್ವ ಪಡೆದಿದೆ.
ಬೈಡೆನ್-ಮೋದಿ ಸಭೆಯ ಹಿನ್ನೆಲೆಯಲ್ಲಿಯೇ 2+2 ಸಚಿವರ ಮಟ್ಟದ ಸಭೆಯೂ ನಡೆಯಲಿದೆ ಎಂದು ಶ್ವೇತಭವನ ಮಾಧ್ಯಮ ಪ್ರಕಟಣೆ ತಿಳಿಸಿದೆ. ಅಂದರೆ ಅಮೆರಿಕ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹಾಗೂ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಲಿದ್ದಾರೆ.
ಮತ್ತಷ್ಟು ಓದಿಗಾಗಿ: Explainer: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದೇಕೆ?