ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಹಿಜಾಬ್(Hijab)-ಕೇಸರಿ ಶಾಲು ವಿಷಯದ್ದೇ ಚರ್ಚೆ, ವಿವಾದ. ಹಿಜಾಬ್ ಬೇಕೊ, ಕೇಸರಿ ಶಾಲೂ ಇರಬೇಕೊ ಅಥವಾ ಎಲ್ಲರೂ ಶಾಲಾ ಸಮವಸ್ತ್ರವನ್ನಷ್ಟೆ(Uniform) ಧರಿಸಬೇಕೊ ಎನ್ನುವ ಚರ್ಚೆಯ ಮಧ್ಯೆಯೇ, ಮಹಾರಾಷ್ಟ್ರದಲ್ಲೊಬ್ಬ ಬಾಲಕ ಸಮವಸ್ತ್ರದಿಂದಾಗಿ ಹೆತ್ತವರ ಮಡಿಲು ಸೇರಿದ್ದಾನೆ.
ಮುಂಬೈ ನಿವಾಸಿ ಅರವಿಂದ್ ಪಾಠಕ್ ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಸೋಮವಾರ ರಾತ್ರಿ ವಾರಾಣಸಿಗೆ ಪ್ರಯಾಣ ಮಾಡುತ್ತಿರುವ ರೈಲಿನಲ್ಲಿ ಸುಮಾರು 10 ವರ್ಷದ ಹುಡುಗ ಶಾಲೆಯ ಸ್ಪೋರ್ಟ್ಟ್ ಯೂನಿಫಾರ್ಮ್ ಧರಿಸಿ ಪ್ರಯಾಣಿಸುತ್ತಿರುವುದನ್ನು ನೋಡಿದ್ದಾರೆ. ಎಷ್ಟು ಹೊತ್ತು ನೋಡಿದರೂ ಅವನೊಬ್ಬನೇ ಕಂಡಿದ್ದಾನೆ, ಪೋಷಕರು ಇರಲಿಲ್ಲ. ಏನೋ ಎಡವಟ್ಟಾಗಿರಬೇಕು ಎಂದುಕೊಂಡು ಆತನನ್ನು ಮಾತನಾಡಿಸಿದಾಗ ಅವನು ತನ್ನ ಊರಿನ ಹಾಗೂ ಪೋಷಕರ ಹೆಸರು ಹೇಳಿದ್ದಾನೆ. ತನ್ನ ಊರು ಪೆಡಗಾಂವ್ ಎಂದಿದ್ದಾನೆ. ಆದರೆ ಆತನ ಯೂನಿಫಾರ್ಮ್ ಮೇಲೆ ಮುದ್ರಿಸಲಾಗಿದ್ದ ಚಿಹ್ನೆಯನ್ನು ಓದಿದಾಗ ಅದರಲ್ಲಿ ರಾಮ್‌ಶೇಠ್ ಠಾಕೂರ್ ಪಬ್ಲಿಕ್ ಸ್ಕೂಲ್, ಖರ್‌ಘರ್ ಎಂದು ಬರೆದಿತ್ತು.
ತಡರಾತ್ರಿಯಲ್ಲಿ ಫೋನ್ ಸ್ವೀಕರಿಸಿದ ಪ್ರಿನ್ಸಿಪಾಲ್
ಇಷ್ಟರ ವೇಳೆಗಾಗಲೇ ರೈಲು ಮುಂಬೈಯಿಂದ 580 ಕಿ.ಮೀ. ದೂರದಲ್ಲಿ, ಮಧ್ಯ ಪ್ರದೇಶದಲ್ಲಿ ಸಾಗುತ್ತಿತ್ತು. ಶಾಲೆಯ ಹೆಸರನ್ನು ಇಂಟರ್‌ನೆಟ್‌ನ್ಲಿ ಹುಡುಕಿದಾಗ ಅದರಲ್ಲಿ ಲ್ಯಾಂಡ್‌ಲೈನ್ ದೂರವಾಣಿ ಸಂಖ್ಯೆ ತಿಳಿಯಿತು. ಸಮಯ ಅದಾಗಲೇ ರಾತ್ರಿ 9 ಆಗಿದ್ದರಿಂದ, ಈ ಇಳಿಹೊತ್ತಿನಲ್ಲಿ ಯಾರಾದರೂ ಲ್ಯಾಂಡ್‌ಲೈನ್ ಕರೆ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಪಾಠಕ್‌ಗೆ ಇರಲಿಲ್ಲ. ನೋಡೋಣ ಎಂದು ಡಯಲ್ ಮಾಡಿದರೆ ಅಚ್ಚರಿಯೆಂಬಂತೆ ಶಾಲೆಯ ಪ್ರಾಂಶುಪಾಲೆ ರಾಜ್ ಅಲೋನಿಯೇ ಕರೆ ಸ್ವೀಕರಿಸಿದರು. ಬಾಲಕನ ಅದೃಷ್ಟಕ್ಕೆ ಪ್ರಾಂಶುಪಾಲರು ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದರು.
ಬಾಲಕನ ಪರಿಚಯವೇ ಇಲ್ಲ
ತಮ್ಮ ಶಾಲೆಯ ಯೂನಿಫಾರ್ಮ್ ಧರಿಸಿರುವ ಬಾಲಕನೊಬ್ಬ ರೈಲಿನಲ್ಲಿದ್ದಾನೆ ಎಂಬುದನ್ನು ಕೇಳಿದ ಪ್ರಾಂಶುಪಾಲರು ಪಠಾಕ್ ಅವರಿಗೆ ತಮ್ಮ ವಾಟ್ಸ್‌ಅಪ್ ಸಂಖ್ಯೆ ನೀಡಿದ್ದಾರೆ. ಬಾಲಕನ ಫೋಟೊವನ್ನು ತರಿಸಿ ನೋಡಿದರೆ ಎಲ್ಲೂ ನೋಡಿದ ನೆನಪೇ ಆಗಲಿಲ್ಲ. ಕೊನೆಗೆ ಶಾಲೆಯ ಬಸ್ ಚಾಲಕನಿಗೆ ಫೋಟೊ ಕಳಿಸಿ ಕೇಳಿದರು, ಆತನೂ ನೋಡಿಲ್ಲ ಎಂದ. ಬಹುಶಃ ಕರೊನಾ ಸಮಯದಲ್ಲಿ ಆನ್‌ಲೈನ್ ತರಗತಿ ಇದ್ದಿದ್ದರಿಂದ ಬಸ್ ಚಾಲಕನಿಗೆ ಗೊತ್ತಿರಲಿಕ್ಕಿಲ್ಲ ಎಂದುಕೊಂಡು ಶಾಲೆಯ ಸಿಬ್ಬಂದಿಯಿದ್ದ ವಾಟ್ಸ್‌ಅಪ್ ಗ್ರೂಪ್‌ಗೆ ಫೋಟೊ ಕಳಿಸಿ ಕೇಳಿದರು. ಅಲ್ಲಿಯೂ ಯಾರಿಗೂ ತಿಳಿಯಲೇ ಇಲ್ಲ. ಕೊನೆಗೆ ಪಾಠಕ್ ಅವರಿಗೆ ಕರೆ ಮಾಡಿ ಬಾಲಕನ ಜತೆಗೇ ಪ್ರಾಂಶುಪಾಲೆ ಮಾತನಾಡಿದರು. ಅವನಿಗೂ ಶಾಲೆಯ ಕುರಿತು ಪರಿಚಯವೇ ಇರಲಿಲ್ಲ.
ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ಹ್ಯೂಮನ್ ಲೈಬ್ರರಿ!
ನಿನ್ನ ಬಳಿ ಈ ಟೀ ಷರ್ಟ್ ಹೇಗೆ ಬಂದಿತು ಎಂದು ಕೇಳಿರು. ತನ್ನ ತಾಯಿ ಒಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಹೋಗುತ್ತಾರೆ. ಅಲ್ಲಿಯ ಮಾಲೀಕರು ಕೊಟ್ಟಿದ್ದು ಎಂದು ಬಾಲಕ ಹೇಳಿದ. ತನ್ನ ಶಾಲಾ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿದ ಪ್ರಾಂಶುಪಾಲೆ ಕೂಡಲೆ ಖರ್‌ಘರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ಕೂಡಲೆ ಪೊಲೀಸರು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದರು.
ಮಧ್ಯಪ್ರದೇಶದ ಖಾಂಡ್ವಾ ನಿಲ್ದಾಣದಲ್ಲಿ ಬೆಳಗಿನ ಜಾವ ರೈಲು ಸ್ಥಗಿತಗೊಳಿಸಿ ರೈಲ್ವೆ ಪೊಲೀಸರು ತೆರಳಿದರು. ಅಷ್ಟರ ವೇಲೆಗೆ ಬಾಲಕನಿಗೆ ಅಗತ್ಯವಿದ್ದ ಆಹಾರ, ನೀರು ಕೊಟ್ಟಿದ್ದರು. ಮತ್ತೆಲ್ಲೂ ಹೋಗದಂತೆ ಸುರಕ್ಷಿತವಾಗಿಸಿಕೊಂಡಿದ್ದರು. ಇಷ್ಟರ ವೇಳೆಗೆ ಬಾಲಕನ ಪೋಷಕರು ಖರ್‌ಘರ್ ಠಾಣೆಗೆ ಆಗಮಿಸಿ ಬಾಲಕ ಕಳೆದು ಹೋಗಿದ್ದಾನೆ ಎಂದು ದೂರು ನೀಡಿದ್ದರು. ಖರ್‌ಘರ್ ಸಮೀಪದ ಪೆಡಗಾಂವ್‌ನಲ್ಲಿರುವ ಅಜ್ಜಿಯ ಮನೆಗೆಂದು ತೆರಳಿದ ಬಾಲಕ ವಾಪಸಾಗಿಲ್ಲ, ಹುಡುಕಿಕೊಡಿ ಎಂದು ಕೇಳಿದ್ದರು. ಬಾಲಕ ಮಾನಸಿಕವಾಗಿ ಅಸ್ಥಿರನಾಗಿದ್ದಾನೆ ಎಂದು ಆತನ ತಾಯಿ ತಿಳಿಸಿದ್ದಾರೆ. ಒಟ್ಟಿನಲ್ಲಿ, ಕಳೆದು ಹೋಗಿದ್ದ ಬಾಲಕನೊಬ್ಬ ಶಾಲೆಯ ಸಮವಸ್ತ್ರದಿಂದಾಗಿ ಪೋಷಕರ ಮಡಿಲಿಗೆ ಹಿಂದಿರುಗಿದ.