ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ

ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.

VISTARANEWS.COM


on

kitthale chitte short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
manju chelluru

:: ಮಂಜು ಚೆಳ್ಳೂರು

’ಕೆ’ – ಅವಳು ತನ್ನ ಇನ್‌ಸ್ಟಾಗ್ರಾಮ್ ಐಡಿಗೆ ಇಟ್ಟುಕೊಂಡಿದ್ದ ಹೆಸರು. ಅದರ ಪ್ರೊಫೈಲಿಗೆ ತನ್ನದೊಂದು ಫೋಟೋ ಕೂಡ ಇಟ್ಟಿರಲಿಲ್ಲ. ಕಪ್ಪು ಹಂಸವೊಂದರ ಚಿತ್ರ. ಕಣ್ಣುಗಳು ಮಾತ್ರ ಬಿಳಿಬಿಳಿ.

’ಸಜ್ಜೆಸ್ಟೆಡ್ ಫಾರ್‍ ಯು’ ಪಟ್ಟಿಯಲ್ಲಿ ಹತ್ತಾರು ಸಲ ಅವಳ ಪ್ರೊಫೈಲ್ ಬಂದಿದ್ದರೂ ಆಸಕ್ತಿ ವಹಿಸಿರಲಿಲ್ಲ. ಆಕಸ್ಮಾತ್ ಅವಳು ತನ್ನ ಫೋಟೋ ಇಟ್ಟಿದ್ದರೆ ಆಸಕ್ತಿ ವಹಿಸುತ್ತಿದ್ದೆ. ಕೊನೆಗೊಂದು ದಿನ ಅವಳೇ ಫಾಲೋ ಮಾಡಿದ್ದಳು. ಇದ್ಯಾವುದೋ ಫೇಕ್ ಐಡಿ ಎಂದುಕೊಂಡು ಪ್ರೊಫೈಲ್ ಚೆಕ್ ಮಾಡಿದೆ. ಒಂದಷ್ಟು ಫೋಟೋಗಳು ಗಮನ ಸೆಳೆದವು. ಸುತ್ತುವರೆದು ಹಾರಾಡುತ್ತಿರುವ, ವೈರುಗಳ ಜಾಲದಲ್ಲಿ ಸಿಕ್ಕಿಬಿದ್ದಂತೆ ಕಾಣುವ ಕಾಗೆ, ತಂತಿ ಬೇಲಿಯ ಮೇಲೆ ಕುಳಿತ ಗುಬ್ಬಿ, ಮೆಟ್ರೋ ಸ್ಟೇಶನ್‌ನ ಗಾಜಿನ ಕಿಟಕಿಗಳಲ್ಲಿ ಏನೋ ಚಿಂತೆಯಲ್ಲಿರುವಂತೆ ಕೂತ ಪಾರಿವಾಳ – ಎಲ್ಲವೂ ಕಪ್ಪು ಬಿಳಿಪು. ನನಗೂ ಕಪ್ಪು ಬಿಳುಪು ಫೋಟೋಗಳು ಇಷ್ಟ. ಹಾಗಾಗಿ ಅವಳ ಪ್ರೊಫೈಲ್ ಇಷ್ಟವಾಯಿತು.  ಅದ್ಯಾಕೋ ಅಲ್ಲಿದ್ದ ಫೋಟೋಗಳನ್ನು ನೋಡಿದಾಗ ಈ ಪ್ರೊಫೈಲ್‌ ಒಬ್ಬ ಹೆಣ್ಣಿನದೇ ಎನಿಸಿತ್ತು. ಫಾಲೋ ಮಾಡಿದೆ. ಆಗಾಗ ಅವಳು ಹಾಕುತ್ತಿದ್ದ ಫೋಟೋಗಳಿಗೆ ಲೈಕ್ ಮಾಡುತ್ತಿದ್ದೆ.

ಅದಾಗಿ ಎಷ್ಟೋ ದಿನಗಳ ಮೇಲೆ ನಾನೊಂದು ಫೋಟೋ ಪೋಸ್ಟ್ ಮಾಡಿದ್ದೆ. ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ನಿಲ್ಲಿಸಿದ್ದ ಕಣ್ಣು ಮೂಗು ಬಾಯಿಗಳಿಲ್ಲದ ಗೊಂಬೆಯ ಚಿತ್ರ. ಅದಕ್ಕೆ ಅವಳದೇ ಮೊದಲ ಲೈಕು. ಇನ್ ಬಾಕ್ಸಿಗೆ ಮೆಸೇಜೂ ಬಂತು – ನೀವು ಇವತ್ತು ಹಾಕಿದ ಫೋಟೋ ಇಷ್ಟ ಆಯ್ತು. ನಾನು ’ತ್ಯಾಂಕ್ಯೂ’ ಜೊತೆಗೆ ಖುಷಿಯ ಇಮೋಜಿ ಸೇರಿಸಿದ್ದೆ. ನಂಗೂ ನಿಮ್ಮ ಫೋಟೊಗಳು ತುಂಬ ಇಷ್ಟ. ಅದ್ಯಾಕೆ ಬರೀ ಬ್ಲಾಕ್ ಅಂಡ್ ಫೋಟೋಗಳನ್ನೇ ಪೋಸ್ಟ್ ಮಾಡ್ತೀರಿ – ಮಾತು ಮುಂದುವರಿಸುವ ಇರಾದೆಯಲ್ಲಿ ಕೇಳಿದ್ದೆ. ಯಾಕೆ ಗೊತ್ತಿಲ್ಲ. ಐ ಹ್ಯಾವ್ ದಿಸ್‌ ಸ್ಟ್ರೇಂಜ್ ಅಫಿನಿಟಿ ಟುವರ್ಡ್ಸ್ ಬ್ಲಾಕ್ ಅಂಡ್ ವೈಟ್ ಫೋಟೋಸ್ – ಎಂದಿದ್ದಳು. ಸೇಮ್‌ ಹೇರ್‍, ನಂಗೂ ಇಷ್ಟಾನೇ, ಆದ್ರೆ ಯಾಕೆ ಅಂತ ನಂಗೂ ಗೊತ್ತಿಲ್ಲ – ಕೈಚೆಲ್ಲುವ ಇಮೋಜಿ ಸೇರಿಸಿದ್ದೆ. ಹೀಗೆ ಶುರುವಾದ ಮಾತುಕತೆ ಅರ್ಧ ಗಂಟೆವರೆಗೆ ಮುಂದುವರಿಯಿತು.  ನಿಮ್ಮ ಆ ಫೋಟೋದ ಕಂಪೋಸಿಶನ್ ಚೆನ್ನಾಗಿದೆ, ಈ ಫೋಟೋದ ಕಲರ್‍ ಗ್ರೇಡಿಂಗ್ ಚೆನ್ನಾಗಿದೆ, ಇದನ್ನ ಮೆಜೆಸ್ಟಿಕ್ಕಿನ್ ಸ್ಕೈವಾಕ್ ಮೇಲೆ ನಿಂತು ತೆಗೆದಿದ್ದು, ಆ ಫೋಟೋ ತೆಗೆಯುವಾಗ ಜನರಿಂದ ಬೈಸಿಕೊಂಡಿದ್ದೆ, ಮೊಬೈಲ್‌ ಕ್ಯಾಮೆರಾಗೆ ಎಷ್ಟೇ ಲಿಮಿಟೇಶನ್ಸ್ ಇದ್ರೂ ತಕ್ಕಮಟ್ಟಿಗಿನ ಆರ್ಟಿಸ್ಟಿಕ್ ಇಮೇಜಸ್ ಕ್ರಿಯೇಟ್ ಮಾಡಬಹುದಲ್ವಾ? ಕ್ವಾಲಿಟಿ ನಮ್ಮ ಕೈಲಿಲ್ಲ, ಕಂಪೋಸಿಶನ್ ಅಷ್ಟೆ ನಮ್ ಕೈಲಿರೋದು, ನಾನು ಸ್ನಾಪ್‌ಸೀಡ್ ಬಳಸೋದು, ಓಹ್ ಇನ್ಮೇಲೆ ನಾನೂ ಬಳಸ್ತೀನಿ, ಬೇರೇನು ಹವ್ಯಾಸ? ಓಹ್ ನೀವೂ ಸಾಹಿತ್ಯಪ್ರೇಮಿನಾ, ಇಂಗ್ಲಿಷ್ ತುಂಬ ಓದ್ತೀರಾ? ನನಗ್ಯಾಕೋ ಅವರು ಅಷ್ಟು ಸೇರಲ್ಲ, ಆಕ್ಚುಲಿ ತುಂಬ ಸೆಲಬ್ರೇಟ್ ಆಗ್ತಿರೋರು ಇಷ್ಟ ಆಗಲ್ಲ, ಒಬ್ಬ ರೈಟರ್‍ ನನಗಷ್ಟೆ ಅರ್ಥ ಆಗಿದಾನೆ ಅನ್ನಿಸ್ಬೇಕು, ಅವಾಗ್ಲೇ ಅವರು ಹತ್ತಿರ ಆಗೋದು, ನಂದೊಂಥರ ವಿಚಿತ್ರ ಕಲ್ಪನೆ ಬಿಡಿ, ಹ್ಹಹ್ಹ – ಹೀಗೆ ಎಲ್ಲವೂ ಫೋಟೋಗ್ರಫಿಯ ಸುತ್ತ, ಸಿನಿಮಾ, ಸಾಹಿತ್ಯದ ಸುತ್ತ ನಡೆದ ಮಾತುಕತೆ. ಆ ಕಡೆ ಮಾತಾಡುತ್ತಿರುವ ಜೀವ ಹುಡುಗಿಯದೆ ಎಂದುಕೊಂಡಿದ್ದರಿಂದ ಅಷ್ಟೊತ್ತು ಮಾತಾಡಿದ್ದೆ.  ಕೊನೆಗೆ – ಸರಿ ಬ್ರೋ ಇಷ್ಟೆಲ್ಲಾ ಮಾತಾಡಿದ್ರಿ ನಿಮ್ ನಿಜವಾದ್‌ ಹೆಸರೇನು ಗೊತ್ತಾಗ್ಲಿಲ್ಲ?! – ಎಂದು ಟ್ರಿಕ್ ಪ್ಲೇ ಮಾಡಿದೆ. ಹುಡುಗಿಯಾಗಿದ್ದರೆ ಜೋರಾಗಿ ನಗುತ್ತಾಳೆ ಎಂದುಕೊಂಡಿದ್ದೆ. ಆದರೆ ಆ ಕಡೆಯಿಂದ ಐದು ನಿಮಿಷ ಯಾವುದೇ ಉತ್ತರ ಬರಲಿಲ್ಲ. ಮೆಸೇಜ್ ನೋಡಿದ್ದಳು ಕೂಡ. ಕಿರಿಕಿರಿ ಆಯಿತು. ಏನು ಮಾಡಬೇಕು ತೋಚದೆ ಮೊಬೈಲ್ ಪಕ್ಕಕ್ಕಿಟ್ಟೆ. ಮತ್ತೆ ಮತ್ತೆ ತೆಗೆದು ನೋಡಿದೆನಾದರೂ ಎಷ್ಟೊತ್ತಾದರೂ ಉತ್ತರ ಬರದಿದ್ದಾಗ ಲಾಕ್ ಮಾಡಿ ಮಲಗಿಕೊಂಡೆ.

ಬೆಳಗ್ಗೆ ಎದ್ದಾಗ ಇನ್ ಬ್ಯಾಕ್ಸಿನಲ್ಲಿ ಉದ್ದ ಮೆಸೇಜ್ –

’ನಂಗೊತ್ತು ನೀವು ನಾನು ಹುಡುಗಿ ಅಂದುಕೊಂಡೇ ಅಷ್ಟೊತ್ತು ಮಾತಾಡಿದ್ದು. ಇರಲಿ. ನನ್ನ ಹೆಸರು ಕವಿತಾ. ಇಪ್ಪತ್ತೇಳು ವಯಸ್ಸು. ರಾಯಚೂರು ಕಡೆಯ ಒಂದು ಊರು. ಒಂದು ಸಾಫ್ಟ್‌ವೇರ್‍ ಕಂಪನೀಲಿ ಉದ್ಯೋಗ. ಅದರ ಬಗ್ಗೆ ಅಂಥ ಆಸಕ್ತಿಯೇನಿಲ್ಲ. ಹುಟ್ಟಿದ ಊರಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಇಂಜಿನಿಯರಿಂಗ್ ಮಾಡಿದ್ದು. ನೀವು ಎಲ್ಲ ಉತ್ತರಗಳನ್ನೂ ಪರೋಕ್ಷವಾಗಿ ಪಡೆಯುವ ತ್ರಾಸು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಒಂದೇ ಸಲಕ್ಕೆ ಒದರಿಬಿಟ್ಟೆ. ನಿಮ್ಮ ಫೋಟೋಗಳ ಮೇಲಿರುವಷ್ಟು ಆಸಕ್ತಿ ನಿಮ್ಮ ಮೇಲೆ ಖಂಡಿತ ಇಲ್ಲ. ಆದರೂ ಇಂಥ ಫೋಟೋಗಳನ್ನು ತೆಗೆದ ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ನಿಮಗೆ ತೊಂದರೆ ಇಲ್ಲದಿದ್ದರೆ ನನ್ನ ರೀತಿ ಒಂದೇ ಸಲಕ್ಕೆ ಎಲ್ಲವನ್ನೂ ಒದರಬಹುದು’

ಟಫ್‌ ಹುಡುಗಿ ಎನಿಸಿತು. ಅವಳ ಭಾಷೆ, ಅದರ ಸ್ಪಷ್ಟತೆ ಆಶ್ಚರ್ಯ ಹುಟ್ಟಿಸಿತು. ನಾನೂ ಉದ್ದವಾಗಿ ನನ್ನ ಪರಿಚಯ ಮಾಡಿಕೊಂಡೆ. ಹುಟ್ಟಿದ ಊರು ಧಾರವಾಡದ ಬಗ್ಗೆ, ಕಲಿತು ಕೆಲಸ ಮಾಡುತ್ತಿರುವ ಪತ್ರಿಕೋದ್ಯಮದ ಬಗ್ಗೆ ಹೇಳಿಕೊಂಡೆ. ಆದರೆ ನನಗಿಲ್ಲದ ಹವ್ಯಾಸಗಳನ್ನು ಆರೋಪಿಸಿಕೊಂಡಿದ್ದೆ, ಅವಳಿಗಿಂತ ಎರಡು ವರ್ಷ ಚಿಕ್ಕವನಿದ್ದಿದ್ದನ್ನು ಮುಚ್ಚಿಟ್ಟಿದ್ದೆ, ಫೋಟೋಗ್ರಫಿ, ಸಾಹಿತ್ಯದ ಕುರಿತು ಮಹಾ ಆಸಕ್ತಿ ಇದ್ದವನಂತೆ ಹೇಳಿಕೊಂಡಿದ್ದೆ. ಪ್ರತಿ ವಾಕ್ಯದಲ್ಲೂ ಇಂಪ್ರೆಸ್ ಮಾಡುವ ಇರಾದೆ ಮೇಲುಗೈ ಪಡೆದಿತ್ತು.

——

ಅದಾದಮೇಲೆ ಮಾತಿಗೆ ಮಾತಿನ ಬಳ್ಳಿ ಬೆಳೆಯುತ್ತ ಹೋಯಿತು. ಆಗಾಗ ಅದು ವಾರಗಟ್ಟಲೆ ತುಂಡಾಗಿಯೂ ಬಿಡುತ್ತಿತ್ತು. ಯಾಕೆಂದರೆ ಅವಳು ತನ್ನ ಬಯೋದಲ್ಲಿ ಬರೆದುಕೊಂಡಂತೆ ’ಹಂಡ್ರೆಡ್ ಸೀಸನ್ಸ್ ಪರ್‍ ಡೇ’ ಆಗಿದ್ದಳು. ಕೆಲವೊಮ್ಮೆ ತಾಸುಗಟ್ಟಲೆ ಮಾತು, ಕೆಲವೊಮ್ಮೆ ಎರಡೇ ಮಾತಿಗೆ ಕೊನೆ, ಇನ್ನು ಕೆಲವೊಮ್ಮೆ ಇನ್‌ಸ್ಟಾದಿಂದಲೆ ಕಾಣೆ. ಆಗೆಲ್ಲ ನನಗೆ ವಿಚಿತ್ರ ಚಡಪಡಿಕೆ. ಏನೂ ಮಾಡುವಂತಿರಲಿಲ್ಲ. ನಂಬರ್‍ ಕೇಳುವ ಧೈರ್ಯ ಮಾಡಿದ್ದೆ. ಸ್ಪಷ್ಟ ನಿರಾಕರಿಸಿದ್ದಳು. ’ನೀವು ನಂಬರ್‍ ಕೇಳಿದಿರಿ ಅಂತ ನಿಮ್ಮನೇನು ಜಡ್ಜ್‌ ಮಾಡುವುದಿಲ್ಲ. ಇಲ್ಲೇ ಚೆನ್ನಾಗಿದೆ. ವಾಟ್ಸಾಪ್ ನನಗೆ ಸೇರಿಬರುವುದಿಲ್ಲ’ ಎಂದು ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಳಾದರೂ ನನ್ನ ಮನಸು ಮುರುಟಿಹೋಗಿತ್ತು. ಅದಾಗಿ ಒಂದಷ್ಟು ದಿನ ಮಾತಾಡಿಸಲಿಕ್ಕೆ ಹೋಗಲಿಲ್ಲ. ಅವಳು ಮಾತಾಡಿಸಿದರೂ ಒನ್ ವರ್ಡ್ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದೆ. ನನ್ನ ತಂತ್ರ ಕೆಲಸ ಮಾಡಿತು. ಒಂದು ದಿನ ಇನ್‌ಬಾಕ್ಸಿಗೆ ಅವಳ ನಂಬರ್‍ ಬಂದು ಬಿತ್ತು. ನಾನದಕ್ಕೆ ತ್ಯಾಂಕ್ಸ್‌ ಹೇಳಿದಾಗ ಸುಮ್ಮನೆ ನಗುವ ಸ್ಮೈಲಿ ಹಾಕಿದ್ದಳು. ಆ ನಂಬರಿನ ವಾಟ್ಸಾಪಿನಲ್ಲೂ ಅದೇ ಕಪ್ಪುಹಂಸ, ಬಿಳಿಬಿಳಿ ಕಣ್ಣುಗಳು.  ಅವಳು ಹೇಗಿದ್ದಾಳೆ ಎಂದು ನೋಡುವ ನನ್ನ ಆಸೆಗೆ ಅಲ್ಲಿಯೂ ತಣ್ಣೀರು. ತನ್ನ ರೂಪದ ಬಗ್ಗೆ ಕೀಳರಿಮೆ ಇರಬಹುದು ಎಂದುಕೊಂಡೆ. ಆದರೂ ಮನಸೊಳಗೆ ಅವಳನ್ನು ನೋಡುವ ಬಯಕೆ. ಹಾಗಂತ ಬಾಯಿಬಿಟ್ಟು ಕೇಳುವಹಾಗಿಲ್ಲ. ’ಯಾಕೆ ನೀವು ನಿಮ್ಮ ಡೀಪಿಗೆ ನಿಮ್ಮ ಫೋಟೋ ಇಟ್ಟಿಲ್ಲ?’ ಎಂದು ಕೇಳಿದರೂ ನನ್ನ ಉದ್ದೇಶ ಅವಳಿಗೆ ಅರ್ಥವಾಗಿಬಿಡುತ್ತದೆ. ಕೆಲವೊಮ್ಮೆ ಅವಳ ಸೂಕ್ಷ್ಮತೆ ಬಗ್ಗೆ ಕಿರಿಕಿರಿ. ಆದರೆ ಅದರೊಟ್ಟಿಗೆ ಆ ಸೂಕ್ಷ್ಮತೆಯೇ ಅವಳ ಮೇಲಿನ ಕುತೂಹಲಕ್ಕೆ ಕಾರಣ ಎಂದು ಹೊಳೆಯುತ್ತಿತ್ತು. ಅದಲ್ಲದೆ ಅವಳೊಂದಿಗೆ ಮಾತಾಡುತ್ತ ಮಾತಾಡುತ್ತ ನನ್ನ ಭಾಷೆ ಸೂಕ್ಷ್ಮವಾಗುತ್ತಿರುವುದು ಗಮನಕ್ಕೆ ಬಂತು. ಮೊದಲಾದರೆ ಐನೂರು ಪದಗಳ ಸುದ್ದಿಯನ್ನು ಎಡಿಟ್ ಮಾಡಿ ಮುನ್ನೂರು ಪದಗಳಿಗೆ ಇಳಿಸಲು ಹೆಣಗಾಡುತ್ತಿದ್ದವನು ಈಗ ಇನ್ನೂರು ಪದಗಳಿಗೂ ಇಳಿಸಬಲ್ಲವನಾಗಿದ್ದೆ.

’ಭಾಷೆಯ ಮೇಲೆ ಇಷ್ಟೊಂದು ಹಿಡಿತ ಇದೆ. ಯಾಕೆ ನೀವು ಏನಾದರೂ ಬರೆಯಬಾರದು?’ – ಕೇಳಿದ್ದೆ.

’ಬರೆದು?’

’ಪಬ್ಲಿಷ್ ಮಾಡಬಹುದು’

’ಅದ್ರಿಂದ ಏನು ಪ್ರಯೋಜನ?’

’ನಾಲಕ್ ಜನ ಓದುತ್ತಾರೆ’

’ಓದಿ ಏನು ಪ್ರಯೋಜನ?’

ಮುಂದೆ ಮಾತನಾಡಿ ಪ್ರಯೋಜನ ಇಲ್ಲ ಎನಿಸಿ ಸುಮ್ಮನಾದೆ. ಸಿಟ್ಟೂ ಬಂದಿತ್ತು. ಎಷ್ಟೊತ್ತು ಏನೂ ಮಾತಿಲ್ಲ. ಅವಳೇ ಮೆಸೇಜ್ ಮಾಡಿದಳು –

’ನಿಮ್ಮ ಕಾಳಜಿ ಇಷ್ಟವಾಯಿತು. ನನಗೆ ಓದುವುದೇ ಸುಖ. ನೀವು ಏನಾದರೂ ಬರೆದಿದ್ರೆ ಕಳಿಸಿ’

’ಭಾನುವಾರ ಒಂದು ಕವಿಗೋಷ್ಠಿಯಿದೆ. ಬಂದರೆ ನನ್ನ ಕವಿತೆ ಕೇಳಬಹುದು’

’ಓದಲು ಕೇಳಿದೆ ನಾನು’

’ಕೇಳಿದರಷ್ಟೆ ನನ್ನ ಕವಿತೆ ಇಷ್ಟ ಆಗುವುದು’

’ಸರಿ’

ಅದಾದ ಮೇಲೆ ಮಾತು ನಿಂತು ಹೋಯಿತು. ಗರ್ವದ ಹುಡುಗಿ ತಾನೇ ಮಾತಾಡಿಸುವವರೆಗೂ ಮಾತಾಡಿಸಬಾರದು ಎಂದು ಪಣ ತೊಟ್ಟೆ.

—–

ಕವಿಗೋಷ್ಠಿಯ ದಿನ.  ನನ್ನ ಕವಿತೆಗೆ ಚಪ್ಪಾಳೆ ಸುರಿಮಳೆ. ಅದರಲ್ಲೂ ಜಾಸ್ತಿ ಹುಡುಗಿಯರು ಸೇರಿದ್ದ ಸಭಾಂಗಣ. ಹಿಗ್ಗಿ ಹೀರೇಕಾಯಿ ಆಗಿದ್ದೆ. ಮಾತಾಡಿಸಲು ಬಂದ ಹುಡುಗಿಯರು ಮತ್ತಷ್ಟು ಇಂಪ್ರೆಸ್ ಆಗುವಂತೆ ಮಾತಾಡುತ್ತ ಉತ್ಸಾಹದಿಂದ ನಂಬರ್‍ ಕೊಡುತ್ತ ಓಡಾಡುತ್ತಿದ್ದೆ. ನನ್ನ ಮೊಬೈಲ್ ವೈಬ್ರೇಟ್ ಮಾಡಿತು. ಅವಳ ಮೆಸೇಜು –

’ಕೇಳಿದೆ, ಸ್ವಲ್ಪವೂ ಇಷ್ಟವಾಗಲಿಲ್ಲ’

’ಹೇಯ್ ಬಂದಿದೀರಾ?! ವಾವ್!! ಎಲ್ಲಿದೀರ? ಪ್ಲೀಸ್ ಹಾಗೇ ಹೋಗ್ಬೇಡಿ. ಐ ಶುಡ್ ಮೀಟ್ ಯು’

’ಇಷ್ಟು ಎಕ್ಸೈಟ್ ಆಗುವಷ್ಟು ಚಂದ ಇಲ್ಲ ನಾನು. ಅಭಿಮಾನಿಗಳ ಗುಂಪು ಕರಗಿದ ಮೇಲೆ ಬನ್ನಿ. ಫೌಂಟನ್ ಹತ್ತಿರ’

ನಾನು ಕಳಿಸಿದ್ದ ಮೆಸೇಜ್ ನೋಡಿಕೊಂಡೆ. ನಾಚಿಕೆಯಾಯಿತು. ಎಲ್ಲರಿಗೂ ಬಾಯ್ ಹೇಳಿ ಅಲ್ಲಿಂದ ಕಾಲ್ಕಿತ್ತು ಫೌಂಟನ್ ಕಡೆಗೆ ಬಂದೆ. ಫೌಂಟನ್‌ನ ನೀರು ಸದ್ದು ಮಾಡುತ್ತ ಸುರಿಯುತ್ತಿತ್ತು.  ಅದರ ಗುಲಾಬಿ ಅಲ್ಲಲ್ಲಿ ಗುಂಪಾಗಿ ನಿಂತಿದ್ದ ಜನರಿಗೆಲ್ಲಾ ಅಷ್ಟಿಷ್ಟು ಮೆತ್ತಿಕೊಂಡಿತ್ತು. ಅವಳಿಗಾಗಿ ಸುತ್ತ ನೋಡಿದೆ. ಆ ಗುಲಾಬಿ ಪ್ರಭೆಯಾಚೆಗಿನ ಮೂಲೆಯಲ್ಲೊಂದರಲ್ಲಿ ಪುಟ್ಟ ಆಕೃತಿಯೊಂದು ಮಾಸ್ಕ್‌ ಹಾಕಿಕೊಂಡು ನಿಂತಿತ್ತು. ಅದರ ನೆರಳು ಉದ್ದ ಬೆಳೆದು ಜನರ ಕಾಲುಗಳಿಗೆ ಸಿಕ್ಕಿಕೊಂಡಿತ್ತು. ಅದು ಅವಳೇ ಎನಿಸಿತು. ಹತ್ತಿರಕ್ಕೆ ಬಂದೆ. ಅವಳ ಒಂದು ಕೈನ ಬೆರಳುಗಳು ಮೊಬೈಲ್‌ ಹಿಡಿದುಕೊಂಡು ಏನೋ ಸ್ಕ್ರಾಲ್ ಮಾಡುತ್ತಿದ್ದವು. ಇನ್ನೊಂದು ಕೈನವು ಹೆದರಿಕೊಂಡ ಮಗುವಿನ ಬೆರಳುಗಳಂತೆ ಮಡಚಿಕೊಂಡಿದ್ದವು.

’ಹಾಯ್’ ಎಂದದ್ದೆ ಬೆಚ್ಚಿದಳು. ಕಪ್ಪು ಹಂಸದ ಬಿಳಿಬಿಳಿ ಕಣ್ಣು ನೆನಪಾದವು.

’ಮಾಸ್ಕ್ ಯಾಕೆ ಹಾಕ್ಕೊಂಡಿದೀರ? ಕರೋನ ಮುಗ್ದೋಗಿದ್ಯಲ್ಲ?’

’ಇಲ್ಲಾ ಅದೂ ಅದೂ… ಧೂಳು… ಅಲರ್ಜಿ… ಆಗ್ಬರಲ್ಲ… ಸೋ…’

ಮಾಸ್ಕ್‌ ಬಿಚ್ಚಿ ಸಣ್ಣಗೆ ನಡುಗುವ ಕೈಗಳಲ್ಲಿ ಬ್ಯಾಗಿನೊಳಕ್ಕಿಟ್ಟುಕೊಂಡಳು. ಸಣ್ಣ ಮೂಗು, ಸಣ್ಣ ಬಾಯಿ, ತುಸು ದಟ್ಟ ಹುಬ್ಬುಗಳು. ಬಾದಾಮಿ ಕಣ್ಣುಗಳು. ಕೂದಲು ಹಿಂದಕ್ಕೆ ಕಟ್ಟಿದ್ದಳು.

’ಕವಿತೆ ನಿಜಕ್ಕೂ ಇಷ್ಟ ಆಗ್ಲಿಲ್ವಾ?’

’ಹ್ಞಾ ಆಯ್ತು. ಆದ್ರೆ ಅಷ್ಟೊಂದಲ್ಲ. ಬಟ್ ಚೆನ್ನಾಗಿದೆ. ನಾನ್ ಸುಮ್ನೆ… ತಮಾಷೆಗ್ ಹೇಳ್ತಾರಲ್ಲ… ಹಾಗ್ ಹೇಳ್ದೆ ಅಷ್ಟೆ.’

ಮೆಸೇಜುಗಳಲ್ಲಿ ಅಷ್ಟು ಕಾನ್ಫಿಡೆಂಟಾಗಿ ಸ್ಪಷ್ಟವಾಗಿ ಮಾತಾಡುತ್ತಾಳೆ. ಆದರೆ ಎದುರಿಗಿದ್ದಾಗ ಯಾಕಿಷ್ಟು ಒಂದು ರೀತಿ ಗೊಂದಲಕ್ಕೆ ಬಿದ್ದವಳ ಹಾಗೆ ಮಾತಾಡುತ್ತಾಳೆ ಎಂದು ಆಶ್ಚರ್ಯವಾಯಿತು. ಪದಗಳನ್ನು ನುಂಗುವುದು, ಒಂದು ವಾಕ್ಯ ಮುಗಿಯುವ ಮುನ್ನವೇ ಇನ್ನೊಂದು ಶುರು ಮಾಡುವುದು, ಕೇಳದ ಪ್ರಶ್ನೆಗೂ ಉತ್ತರ ನೀಡುವುದು – ಪಾಪದ ಹುಡುಗಿ ಎನಿಸಿತು.

’ಬನ್ನಿ ಕಾಫಿಗ್ ಹೋಗಣ. ಇಲ್ಲೊಂದ್ ಒಳ್ಳೆ ಕಾಫಿ ಶಾಪ್ ಇದೆ’

ಕ್ಷಣ ತಬ್ಬಿಬ್ಬಾದಳು.

’ನಿಮಗೆ ಇಷ್ಟ ಇಲ್ಲ ಅಂದ್ರೆ ಬೇಡ’

’ಹೇಯ್ ಹಾಗೇನಿಲ್ಲಾ. ಬನ್ನಿ ಬನ್ನಿ ಹೋಗಣ’

ಇನ್‌ಸ್ಟಾದಲ್ಲಿ ಮಾತನಾಡಿದಷ್ಟು ರಫ್‌ ಅಲ್ಲದ ಹುಡುಗಿ. ಪ್ರತಿ ಹೆಜ್ಜೆಯನ್ನೂ ಅಳೆದು ತೂಗಿ ನೆಲಕ್ಕೆ ನೋವಾಗಿಬಿಡುತ್ತದೇನೋ ಎನ್ನುವಂತೆ ಇಡುತ್ತಿದ್ದಳು. ಕಾಫಿಶಾಪಿನಲ್ಲೂ ಅಷ್ಟೆ- ಅವಳು ಎಳೆದ ಚೇರು ಚೂರೂ ಸದ್ದಾಗಲಿಲ್ಲ, ಕುಡಿದು ಇಟ್ಟ ಕಾಫಿ ಕಪ್‌ ದನಿ ಮಾಡಲಿಲ್ಲ. ಮಾತುಗಳಾದರೂ ಕಿವಿಗೊಟ್ಟೇ ಕೇಳಬೇಕು – ಇಲ್ಲದಿದ್ದರೆ ಅವಳ ತುಟಿಗಳು ಒಂದಕ್ಕೊಂದು ಬಡಿಯುವುದಷ್ಟೆ ನಿಜ. ಅವಳ ಸದಾಗಾಬರಿ ಕಣ್ಣುಗಳೋ ನನ್ನ ಬಿಟ್ಟು ಬೇರೆಲ್ಲ ನೋಡುತ್ತಿದ್ದವು. ಜಾಸ್ತಿ ಮಾತಾಗಲಿಲ್ಲ. ಅಲ್ಲಿಂದ ಬೀಳ್ಕೊಡುವಾಗ ’ಮೀಟ್ ಆಗಿದ್ದು ಖುಷಿ ಆಯ್ತು’ ಎಂದು ಕೈ ಕೊಟ್ಟೆ. ಅವಳು ಮತ್ತೆ ತಬ್ಬಿಬ್ಬಾದಳು. ’ಸಾರಿ ಸಾರಿ’ ಎಂದು ನಾನು ಬೆಚ್ಚಿದ ಪರಿಗೆ, ’ಹೇಯ್ ಪರವಾಗಿಲ್ಲ’ ಎಂದು ಧೈರ್ಯ ತಂದುಕೊಂಡು ಕೈ ಚಾಚಿದಳು.  ಅವಳ ಅಂಗೈ ಇನ್ನೂ ಬೆವರುತ್ತಿತ್ತು. ಸೋಜಿಗವೆಂದರೆ ಅದ್ಯಾಕೋ ಒಂದೆರಡು ಸೆಕೆಂಡ್ ಜಾಸ್ತಿಯೇ ನನ್ನ ಕೈ ಹಿಡಿದುಕೊಂಡಳು!

ರೂಮಿಗೆ ಬಂದು ಮಲಗುವಾಗ ಬಂದ ಅವಳ ಮೆಸೇಜು ನೋಡಿ ಅತ್ಯಾಶ್ಚರ್ಯ.

’ನಿಮ್ಮ ಕವಿತೆಯಷ್ಟು ಕಪಟ ಇಲ್ಲ ನಿಮ್ಮ ಕೈಗಳು. ನಿಮ್ಮನ್ನ ನಂಬಬಹುದು’

’ವಾಟ್‌?!’

’ಏನಿಲ್ಲಾ ಬಿಡಿ’

’ಕೆಲವೊಂದ್ಸಲ ನಿಮ್ ಮಾತೇ ಅರ್ಥ ಆಗಲ್ಲ’

’ಹ್ಮ. ನಿಜಾ. ಎನಿವೇ. ನೀವ್ ಸಿಕ್ಕಿದ್ದು ತುಂಬಾನೇ ಖುಷಿ. ಗುಡ್ ನೈಟ್‌. ಸ್ವೀಟ್ ಡ್ರೀಮ್ಸ್‌’

ನಿಜಕ್ಕೂ ಏನೂ ಅರ್ಥ ಆಗಲಿಲ್ಲ.

—-

ಅದೊಂದು ಹ್ಯಾಂಡ್‌ಶೇ‌ಕ್  ಮೋಡಿ ಮಾಡಿಬಿಟ್ಟಿತ್ತು. ಆಮೇಲಿನ ಮಾತುಗಳು ಯಾವತ್ತೂ ತುಂಡಾಗಲಿಲ್ಲ. ರಾತ್ರಿ ಶಿಫ್ಟ್ ಮುಗಿಸಿಕೊಂಡು ಬರುವಷ್ಟೊತ್ತಿಗೆ ಅವಳ ಐದಾರು ಮೆಸೇಜು ಕಾದಿರುತ್ತಿದ್ದವು.  ನಾನಾದರೂ ಅವಳೊಂದಿಗೆ ಹಂಚಿಕೊಳ್ಳಲು ದಿನಕ್ಕೊಂದಾದರೂ ಸ್ವಾರಸ್ಯ ಹುಡುಕಿಟ್ಟುಕೊಂಡಿರುತ್ತಿದೆ. ದಿನಗಳು ಉರುಳಿದ್ದು ಗೊತ್ತಾಗಲಿಲ್ಲ, ಅವಳು ನನಗೆ ಮೊದಲ ಬಾರಿ ’ಕಣೋ’ ಎಂದದ್ದು ನಾನು ಅವಳಿಗೆ ’ಕಣೇ’ ಎಂದದ್ದು ಯಾವಾಗ ಅಂತಲೂ ಅರಿವಿಗೆ ಬರಲಿಲ್ಲ. ವಿಚಿತ್ರವೆಂದರೆ ನನ್ನ ಭಾಷೆ ಸ್ಪಷ್ಟವಾಗುತ್ತ ಸಂಕ್ಷಿಪ್ತವಾಗುತ್ತ ಸಾಗಿದಂತೆ ಅವಳ ಭಾಷೆ ಅವಳ ಮಾತಿನ ಭಾಷೆಯಂತೆ ಛಿದ್ರಛಿದ್ರವೂ ಉದ್ದವೂ ಆಗತೊಡಗಿತು. ಮೊದಲಾದರೆ ಒಂದೇ ಮೆಸೇಜಿನಲ್ಲಿ ಎಲ್ಲವನ್ನೂ ಆದಷ್ಟು ಕಮ್ಮಿ ವಾಕ್ಯಗಳಲ್ಲಿ ಹೇಳುತ್ತಿದ್ದಳು.

ಎರಡನೆ ಭೇಟಿಗೆ ತ್ರಾಸು ಪಡಬೇಕಾಗಲಿಲ್ಲ. ’ಈ ಭಾನುವಾರ ಏನು ಪ್ಲಾನ್?’ ಎಂದು ಕೇಳಿದ್ದೇ – ’ಸಿಗಣ ಬಿಡು. ನೀನ್ ಪೀಠಿಕೆ ಹಾಕೋ ಅವಶ್ಯಕತೆ ಇಲ್ಲ’ ಎಂದು ನಕ್ಕಿದ್ದಳು. ಅವಳಿಷ್ಟದಂತೆ ಅವಳ ನೆಚ್ಚಿನ ಹಳೆಯ ಬ್ಲಾಸಮ್ ಬುಕ್ ಹೌಸಿನ ಪೋಯೆಟ್ರಿ ಸೆಕ್ಷನ್‌ನ ಮೂಲೆಯಲ್ಲಿ ಸಿಗುವುದೆಂತಾಯಿತು.. ನಾನು ಹೋಗುವುದಕ್ಕೆ ಮುಂಚೆಯೇ ಅಲ್ಲಿದ್ದಳು. ಅದು ತನ್ನ ಮನೆಯೇನೋ ಎನ್ನುವಂತೆ ಒಂದು ಚೇರ್‍ ಹಾಕಿಕೊಂಡು ಯಾವುದೋ ಕವಿತೆ ಪುಸ್ತಕ ಹಿಡಿದು ಆರಾಮಾಗಿ ಓದುತ್ತಿದ್ದಳು. ಅವತ್ತಿನ ಅವಳ ನಡವಳಿಕೆ ಕವಿಗೋಷ್ಠಿಯ ದಿನ ಸಿಕ್ಕ ಸದಾಗಾಬರಿ ಹುಡುಗಿ ಇವಳೇನಾ ಎನ್ನುವಂತಿತ್ತು. ಇಡೀ ಬುಕ್ ಸ್ಟಾಲ್ ತನ್ನ ಊರೇನೋ ಎನ್ನುವಂತೆ ಪರಿಚಯಿಸಿದಳು. ಅಲ್ಲಿರುವ ಎಲ್ಲರಿಗೂ ಹೆಸರಿಟ್ಟು ಮಾತನಾಡಿಸಿದಳು, ಉಭಯಕುಶಲೋಪರಿ ವಿಚಾರಿಸಿದಳು. ನನ್ನ ಅಲ್ಲಿಂದ ಬೀಳ್ಕೊಡುವ ಮುನ್ನ ನಾನು ಕೊಟ್ಟ ಕೈಯನ್ನು ನಿಮಿಷ ಹೊತ್ತು ಹಾಗೇ ಹಿಡಿದುಕೊಂಡಿದ್ದಳು.

ಮನೆಗೆ ಬರುವವರೆಗೂ ನನ್ನ ಕೈ ನೋಡಿಕೊಂಡೆ. ಏನು ವಿಶೇಷವಿದೆ ಅದರಲ್ಲಿ ಎನ್ನುವುದೇ ಅರ್ಥವಾಗಲಿಲ್ಲ. ಅದು ಅರ್ಥವಾಗುವುದಕ್ಕೆ ನಾನು ಅವಳಿಗೆ ನನ್ನ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕಾಯಿತು. ನಿವೇದನೆಯೂ ನಾನು ಕಲ್ಪಿಸಿಕೊಂಡಿದ್ದಷ್ಟು ಕಷ್ಟವಾಗಲಿಲ್ಲ.

ಅಷ್ಟೊತ್ತಿಗೆ ಕಾಲ್ ಮಾಡಿ ಮಾತಾಡುವಷ್ಟು ಹತ್ತಿರವಾಗಿದ್ದೆವು. ಮಾತು ಶುರುವಾದರೆ ಇಡೀ ಜಗತ್ತು ಸುತ್ತಿ ಬರುತ್ತಿತ್ತು.  ಅವತ್ತೊಂದು ರಾತ್ರಿ ಹೀಗೇ ಮೂರು ಗಂಟೆಯವರೆಗೆ ಮಾತಿನಲ್ಲಿ ಮುಳುಗಿದ್ದೆವು. ಬಾಯ್ ಹೇಳಿ ಕಾಲ್ ಕಟ್ ಮಾಡುವ ಹೊತ್ತಿಗೆ ನನಗೇನನ್ನಿಸಿತೋ ’ನಾನ್ ಏನೋ ಹೇಳಬೇಕು’ ಎಂದವನು ಒಳಗಿದ್ದದ್ದನ್ನೆಲ್ಲಾ ಒಂದೇ ಉಸಿರಿಗೆ ಹೇಳಿಬಿಟ್ಟೆ. ಏನೂ ಹೇಳದೆ ಕಾಲ್ ಕಟ್ ಮಾಡಿದಳು. ಕಂಗಾಲಾಗಿ ಮತ್ತೆ ಮತ್ತೆ ಕಾಲ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸಾರಿ ಕೇಳಿದ ಮೆಸೇಜುಗಳಿಗೂ ಉತ್ತರ ಇಲ್ಲ. ಇಡೀ ರಾತ್ರಿ ನಿದ್ದೆಯಿಲ್ಲದೆ ಅವಳ ಮೆಸೇಜು ಬರಬಹುದೆಂದು ಕಾಯುತ್ತಿದ್ದೆ. ಬೆಳಗಿನ ಜಾವಕ್ಕೆ ನಿದ್ದೆ ಹತ್ತಬೇಕು ಮೊಬೈಲ್ ಸದ್ದು ಮಾಡಿತು. ಅವಳ ಮೆಸೇಜು –

’ನೀನು ಸಿಕ್ಕ ದಿನ ನನಗೊಂದು ಕನಸು ಬಿತ್ತು. ಹಾಗೆ ನೋಡಿದರೆ ನಾನು ಎಷ್ಟೋ ವರ್ಷಗಳಿಂದ ಕಾಣುತ್ತ ಬಂದಿರುವ ಕನಸದು. ಆದರೆ ಅವತ್ತಿನ ಕನಸಿನ ಕೊನೆಯಲ್ಲಿ ನೀನಿದ್ದೆ’

’ಏನ್ ಹೇಳ್ತಿದೀಯ?!’

’ಕಿತ್ತಳೆಬನವೊಂದರಲ್ಲಿ ನಾನೊಂದು ಕಿತ್ತಳೆಯಾಗಿ ಹುಟ್ಟಿದ್ದೆ. ಅಂದು ಸುರಿದ ಮಳೆಗೆ ಅಲ್ಲಲ್ಲಿ ನೀರಿನ ಗುಂಡಿಗಳು ಏರ್ಪಟ್ಟಿದ್ದವು. ಅವುಗಳಲ್ಲಿ ನನ್ನ ಪ್ರತಿಬಿಂಬ ಕಣ್ಣು ಕುಕ್ಕುವಷ್ಟು ಮೋಹಕವಾಗಿತ್ತು. ಸಂತೋಷದಲ್ಲಿ ನಗುತ್ತಿದ್ದೆ. ಆಗ ಒಂದು ಬಿರುಸು ಕೈ ನನ್ನಿಡೀ ಮೈಗೆ ಕೈ ಹಾಕಿತು. ಗಿಡದಿಂದ ಕಿತ್ತು ತನ್ನ ವಶಕ್ಕೆ ತೆಗೆದುಕೊಂಡಿತು. ನನ್ನ ಚರ್ಮ ಚರಪರ ಸುಲಿದು ಬಲವಾಗಿ ಹಿಚುಕುತ್ತಾ ರಸ ಕುಡಿಯತೊಡಗಿತು. ಎಷ್ಟು ಕಿರುಚಿದರೂ ಕೇಳುತ್ತಿಲ್ಲ. ನೋವಿನರಿವಾಗುವಷ್ಟರಲ್ಲಿ ಸಿಪ್ಪೆ ಸಿಪ್ಪೆಯಾಗಿ ತಿಪ್ಪೆಯೊಂದರಲ್ಲಿ ಬಿದ್ದಿದ್ದೆ. ಆ ವಾಸನೆಯ ನರಕದಲ್ಲಿ ನನ್ನಂಥ ಎ‌ಷ್ಟೋ ಸಿಪ್ಪೆಗಳು. ಆ ಸಿಪ್ಪೆಗಳೂ ಅರಚುತ್ತಿವೆ. ದಾರಿಹೋಕರು ನಮ್ಮ ತಿಪ್ಪೆ ಹಾದು ಹೋಗುತ್ತಿದ್ದಾರೆ. ಯಾರಿಗೂ ನಮ್ಮ ದನಿ ಕೇಳಿಸುತ್ತಿಲ್ಲ. ಅಷ್ಟೊತ್ತಿಗೆ ನೀನು ಎಲ್ಲಿಗೋ ಹೊರಟಿದ್ದವನು ಅಚಾನಕ್ಕು ನನ್ನತ್ತ ಗಮನ ಹರಿಸಿದೆ. ನನ್ನೇ ನೋಡುತ್ತ ನಿಂತೆ. ನಿನಗೆ ನನ್ನ ನೋವು ಹೇಳಿಕೊಳ್ಳಲು ಎಷ್ಟು ಪ್ರಯತ್ನಪಟ್ಟೆ. ನಿನಗೇನೂ ಕೇಳಿಸುತ್ತಿಲ್ಲ. ಆದರೆ ನಿನ್ನ ನುಣುಪಾದ ಕೈಗಳಿಂದ ನನ್ನ ಎತ್ತಿಕೊಂಡೆ. ಎಷ್ಟು ಹಿತವಾಯಿತು ಗೊತ್ತೆ?! ಅಷ್ಟಕ್ಕೆ ಬಿಡಲಿಲ್ಲ ನೀನು. ನನ್ನ ಒಂದೊಂದೇ ಸಿಪ್ಪೆಗಳನ್ನು ಜೋಡಿಸಿ ವಾಪಸ್ಸು ಹಣ್ಣಿನ ರೂಪ ಕೊಡಲು ಪ್ರಯತ್ನಿಸತೊಡಗಿದೆ. ನಾನು ಇನ್ನೇನು ಹಣ್ಣಾಗುತ್ತೇನೆ ಎನ್ನುವಷ್ಟೊತ್ತಿಗೆ ಕನಸು ಮುಗಿದುಹೋಯಿತು. ಕನಸಿನಿಂದೆದ್ದಾಗ ನಾನು ನಿಜಕ್ಕೂ ಹಣ್ಣಾಗಿದ್ದೆ, ಹಣ್ಣಲ್ಲ ಚಿಟ್ಟೆಯಾಗಿದ್ದೆ, ಕಿತ್ತಳೆ ಚಿಟ್ಟೆಯಾಗಿದ್ದೆ!’

ಏನು ಉತ್ತರಿಸಬೇಕು ತೋಚಲಿಲ್ಲ. ಅವಳೇ ಮಾತು ಮುಂದುವರಿಸಿದಳು –

’ನಾನು ರಿಯಾಲಿಟಿಗಿಂತ ಕನಸುಗಳನ್ನೇ ನಂಬುತ್ತೇನೆ. ನಿನಗೆ ಜೊತೆಯಾಗುವುದಾದರೆ ಈ ಕನಸನ್ನು ನಂಬಿಯೇ ಜೊತೆಯಾಗುತ್ತೇನೆ. ಓಕೇನಾ?’

’ಓಕೆ’ ಎಂದು ತೋಳು ಚಾಚುವ ಸ್ಮೈಲಿ ಸೇರಿಸಿದೆ.

ಅವಳ ಕನಸಿಗೆ ನಾನು ಕಾಲಿಟ್ಟು ಅವಳು ಚಿಟ್ಟೆಯಾದಳು. ಆದರೆ ಚಿಟ್ಟೆಯ ಜೀವ ಎಷ್ಟು ಸೂಕ್ಷ್ಮ ಎನ್ನುವುದು ಅಂದೇ ಹೊಳೆಯಬೇಕಿತ್ತು ನನಗೆ.

—-

ಆಮೇಲಿನ ಒಂದಷ್ಟು ದಿನಗಳು ನಿಜಕ್ಕೂ ಉಲ್ಲಾಸದಾಯಕವಾಗಿದ್ದವು. ನನ್ನ ಕೈಗಳ ಮೇಲೆ ಹುಚ್ಚು ಮೋಹ ಅವಳದು. ಯಾವಾಗಲೂ ಕೈಹಿಡಿದು ನಡೆಯಬೇಕು, ಮೊದಲ ತುತ್ತನ್ನು ತನಗೆ ತಿನ್ನಿಸಿಯೇ ತಿನ್ನಬೇಕು, ತುಟಿಯಂಚಿಗೆ ಅಂಟಿದ ಅಗುಳಾಗಲಿ ರೆಪ್ಪೆಯಾಚೆಗೆ ಸರಿದ ಕಪ್ಪನ್ನಾಗಲಿ ನನ್ನ ಬೆರಳುಗಳೇ ಒರೆಸಬೇಕು, ಮೆಟ್ರೋದಲ್ಲಿ ನಿಂತಾಗ ಅವಳ ಆಧಾರಕ್ಕೆಂದು ನನ್ನ ಕೈಯೊಂದು ಮೀಸಲಾಗಿರಬೇಕು – ನನ್ನ ಕೈಗಳ ಸ್ಪರ್ಶ ಸಿಕ್ಕುವ ಯಾವ ಅವಕಾಶವನ್ನೂ ಅವಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಊಟವಾದ ಮೇಲಂತೂ ನನ್ನ ಕೈಯ ಒಂದೊಂದೆ ಬೆರಳು ತಿಕ್ಕಿ ತೊಳೆಯುವುದನ್ನು ಎಷ್ಟು ಸಂಭ್ರಮಿಸುತ್ತಿದ್ದಳು!

ಅಂದು ಇಬ್ಬರೂ ಲಾಲ್ ಬಾಗಿನ ನಿರ್ಜನ ಮೂಲೆಯೊಂದರ ಬೆಂಚಿನ ಮೇಲೆ ಕೂತಿದ್ದೆವು. ನನ್ನ ಕೈಹಿಡಿದು ಅದರೊಂದಿಗೆ ಆಟವಾಡುತ್ತಿದ್ದಳು. ನಾನು ಇನ್ನೊಂದು ಕೈಯಲ್ಲಿ ಮೊಬೈಲ್‌ ಹಿಡಿದು ’ಹವ್ ಟು ಆಸ್ಕ್‌ ಫಾರ್‍ ಫಸ್ಟ್ ಕಿಸ್’ ಎಂಬ ಸರ್ಚಿಗೆ ಬಂದ ಲೇಖನಗಳನ್ನು ನೋಡುತ್ತಿದ್ದೆ. ಅವಳು ನನ್ನ ಬೆರಳುಗಳ ನಟಿಕೆ ತೆಗೆಯುತ್ತಿದ್ದವಳು ಇದ್ದಕ್ಕಿದ್ದಹಾಗೆ ವೇಗ ಜಾಸ್ತಿ ಮಾಡಿದಳು. ಜೋರಾಗಿ ಹಿಚುಕತೊಡಗಿದಳು. ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ನೋಡುವಷ್ಟರಲ್ಲಿ ಅವಳು ಅಲ್ಲಿಂದೆದ್ದು ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು ಒಂದು ಕಡೆಗೆ ಜೋರಾಗಿ ಬೀಸಿದಳು. ಅಲ್ಲಿ ನಿಂತಿದ್ದ ಮದ್ಯವಯಸ್ಕನೊಬ್ಬನ ತೋಳಿಗೆ ಬಿತ್ತು. ಅವನು ತನ್ನ ಪ್ಯಾಂಟ್‌ ಜಿಪ್ ಏರಿಸಿಕೊಳ್ಳುತ್ತ ಓಡಿದ. ’ಏಯ್ ನಿಲ್ಲೋ ನಾಯಿ’ ಎಂದು ಕೂಗಿದಳು. ಅವಳ ಕೂಗು ಕೇಳಿ ಪ್ರಣಯದಲ್ಲಿದ್ದ ಪ್ರೇಮಿಗಳು ಓಡಿಬಂದರು. ನನಗೀಗ ಅರ್ಥವಾಯಿತು – ಆ ಮದ್ಯವಯಸ್ಕ ಅವರನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.

ಇವಳ ಕಣ್ಣು ಕೆಂಪಾಗಿದ್ದವು. ಮೈ ಕಂಪಿಸುತ್ತಿತ್ತು. ’ಹೇಯ್ ಸಮಾಧಾನ’ ಎಂದು ಮುಟ್ಟಲು ಹೋದರೆ ಹಿಂದೆ ಸರಿದಳು. ನೀರಿನ ಬಾಟಲ್ ಕೈಗಿಟ್ಟೆ. ಗಟಗಟ ಇಡೀ ಬಾಟಲ್ ನೀರು ಖಾಲಿ ಮಾಡಿದಳು.  ನಾನು ಏನೂ ಮಾತಾಡಿಸಲಿಲ್ಲ. ಸುಮಾರು ಹೊತ್ತು ಬುಸುಗುಡುತ್ತ ಕೂತಿದ್ದಳು. ಕತ್ತಲಾಗತೊಡಗಿತು. ಅಲ್ಲಿಂದ ಅವಳನ್ನು ಕರೆದುಕೊಂಡು ಅವಳ ಪೀಜಿಗೆ ಬಿಟ್ಟೆ. ಆ ಕಣ್ಣುಗಳ ಕೆಂಪು ಅಷ್ಟೊತ್ತಾದರೂ ಆರಿರಲಿಲ್ಲ. ಪ್ರತಿ ಸಲ ಹೇಳುವ ಹಾಗೆ ’ಹುಷಾರಾಗ್ ಹೋಗು’ ಎಂದು ಹೇಳಲಿಲ್ಲ. ಪದೇ ಪದೆ ಕಾಲ್ ಮಾಡಿ ”ರೀಚ್ ಆದ್ಯಾ?’’ ಅಂತಲೂ ವಿಚಾರಿಸಲಿಲ್ಲ. ಮನೆಗೆ ಬಂದ ಮೇಲೆ ಮೆಸೇಜ್ ಹಾಕಿ ತಿಳಿಸಿದೆ. ಅದಕ್ಕವಳ ಮೆಸೇಜು ’ಹ್ಮ’ ಅಂತಷ್ಟೆ ಇತ್ತು. ತಾನಾಗೇ ಸಮಾಧಾನ ಆಗುತ್ತಾಳೆ, ಸಮಾಧಾನ ಮಾಡಲು ಹೋದಷ್ಟು ಕಿರಿಕಿರಿ ಮಾಡಿಕೊಳ್ಳುತ್ತಾಳೆ ಎಂದುಕೊಂಡು ’ಗುಡ್ ನೈಟ್’ ಹೇಳಿ ಮಲಗಿದೆ.

ಮರುದಿನ ಬೆಳಗ್ಗೆ ಅವಳ ಮೆಸೇಜು.

’ಸಾರಿ. ನನ್ನಿಂದ ನೀನೂ ಡಿಸ್ಟರ್ಬ್ ಆಗ್ಬಿಟ್ಟೆ. ನೀನು ನನ್ನ ಲಾಲ್‌ಬಾಗಿಗೆ ಕರೆಸಿದ್ದ ಉದ್ದೇಶ ನನಗೆ ಗೊತ್ತಿತ್ತು. ನೀನು ಕೊಡುತ್ತೀಯ ಅಂತ ಕಾಯುತ್ತಿದ್ದೆ. ಅಷ್ಟೊತ್ತಿಗೆ ಆ ನಾಯಿ ಬಂದು ಎಲ್ಲ ಹಾಳುಮಾಡಿತು’

’ಇಟ್ಸ್ ಓಕೆ. ನಿನಗೆ ಮನಸಾಗುವವರೆಗೂ ನಾನೇನೂ ಮಾಡುವುದಿಲ್ಲ’

’ನೀನು ಮಾಡುವುದಲ್ಲ ಅದು. ಇಬ್ಬರೂ ಸೇರಿ ಮಾಡುವುದು. ನಿನಗೆ ಮನಸಿದ್ದರೆ ನಾಳೆ ನಿನ್ನ ರೂಮಿಗೆ ಬರುತ್ತೇನೆ’

’ಆರ್‍ ಯು ಸ್ಯೂರ್‍?!’

’ಸ್ಯೂರ್‍ ಮೈ ಡಿಯರ್‍ ಸಾಫ್ಟ್ ಹ್ಯಾಂಡ್ಸ್‌’

ಮೈಯೆಲ್ಲಾ ಕಂಪನವಾಗತೊಡಗಿತು.

—-

ಅದು ಮೊದಲ ಬಾರಿ – ಅವಳು ತನ್ನ ಕಾಣುವಿಕೆ ಬಗ್ಗೆ ಅಷ್ಟು ಆಸಕ್ತಿ ವಹಿಸಿದ್ದು. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದಳು. ಹುಬ್ಬು ತೀಡಿಸಿಕೊಂಡಿದ್ದಳು, ಕಣ್ಣಿಗೆ ಕಾಡಿಗೆ ಸವರಿದ್ದಳು. ನನಗಿಷ್ಟವೆಂದು ತಿಳಿ ನೀಲಿ ಬಣ್ಣದ ಕುರ್ತಿ ಧರಿಸಿದ್ದಳು. ಮೊದಲೆಲ್ಲ ಅವಳ ಮೈಯಿಂದ ಬೇಬಿ ಸೋಪಿನ ವಾಸನೆ. ಆದರಿಂದು ಪರ್ಫ್ಯೂಮಿನ ಪರಿಮಳ. ನನ್ನೊಳಗಿನ ಆಸೆಗಳೆಲ್ಲ ಮುಗಿಬಿದ್ದು ಉದ್ರೇಕಗೊಂಡವು. ಹಸಿದ ಹುಲಿಯಂತೆ ಅವಳ ಮೇಲೆರಗಿದೆ. ಅವಸರವಸರದಲ್ಲಿ ಅವಳನ್ನು ತಿಂದು ಮುಗಿಸಿದೆ. ಅಕ್ಷರಶಃ ತಿಂದು ಮುಗಿಸಿದೆ. ಇಲ್ಲದಿದ್ದರೆ ನನಗೆ ನನ್ನದೇ ದೇಹದಿಂದುಕ್ಕಿದ ಜೀವರಸದ ಬಗ್ಗೆ ಹೇಸಿಗೆ ಹುಟ್ಟುತ್ತಿರಲಿಲ್ಲ. ಅದನ್ನು ತೊಳೆದುಕೊಂಡು ಬಾತ್ರೂಮಿನಿಂದ ಹೊರಬಂದಾಗ ಮೊಣಕಾಲು ಮುದುಡಿ ಮಗುವಿನಂತೆ ಮಲಗಿದ್ದಳು. ಕೈಗಳು ಮುದುಡಿಕೊಂಡು ನಡುಗುತ್ತಿದ್ದವು. ಅವುಗಳೊಂದಿಗೆ ಅವಳ ಮೈಮೇಲೆ ನಾನು ಮೂಡಿಸಿದ ಗುರುತುಗಳೂ ನಡುಗುತ್ತಿದ್ದವು. ಅವಳ ಕಪಾಳದುದ್ದಕ್ಕೂ ಕಣ್ಣೀರು ಹರಿದು ದಿಂಬಿನೊಂದು ಭಾಗ ಒದ್ದೆಯಾಗಿತ್ತು. ಆ ಒದ್ದೆಯಿಂದ ಬರುತ್ತಿದೆ ಎಂಬಂತೆ ಬೇಬಿಸೋಪಿನ ವಾಸನೆ ಬಂದು ನನ್ನ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಕಣ್ಣೊರೆಸಲು ಹೋದೆ. ಕೈ ಜಾಡಿಸಿದಳು. ಏನು ಮಾಡಬೇಕು ತೋಚಲಿಲ್ಲ. ಸುಮ್ಮನೆ ಪಕ್ಕ ಕೂತೆ. ಎದ್ದು ಕೂತಳು. ಮೌನವಾಗಿ ಬಟ್ಟೆ ಹಾಕಿಕೊಂಡು ಹೊರಟುನಿಂತಳು. ನಾನು ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಕಾಲ್ ಮಾಡಿದರೆ ಕಟ್ ಮಾಡಿದಳು. ಇಡೀ ರಾತ್ರಿ ಕಾಲ್ ಮಾಡುತ್ತಲಿದ್ದೆ. ಪ್ರಯೋಜನವಾಗಲಿಲ್ಲ.

ಅವಳು ಕನಸೆಂದು ಹೇಳಿದ ನಿಜವನ್ನು ಅರ್ಥ ಮಾಡಿಕೊಂಡಿದ್ದೆ. ಅವಳ ಹಿನ್ನೆಲೆ ಕೆದಕಿ ನೋವುಂಟು ಮಾಡದಿರುವ ಎಚ್ಚರವಹಿಸಿದ್ದೆ. ಆದರೆ ಏನು ಪ್ರಯೋಜನ? ನನ್ನ ನುಣುಪು ಕೈಗಳ ಮೇಲೆ ಹುಟ್ಟಿದ್ದ ಅವಳ ನಂಬಿಕೆಯನ್ನ ನಾನೇ ಒಡೆದುಹಾಕಿದ್ದೆ.

ಮೂರು ದಿನ ಹೀಗೇ ಕಳೆದವು – ನಾನು ಕಾಲ್ ಮಾಡುವುದು ಅವಳು ಕಟ್ ಮಾಡುವುದು. ನನ್ನ ಸಾಲು ಸಾಲು ಮೆಸೇಜುಗಳನ್ನು ಕಳಿಸಿದ ತಕ್ಷಣ ನೋಡುತ್ತಿದ್ದಳು. ಆದರೆ ಯಾವುದಕ್ಕೂ ಉತ್ತರವಿಲ್ಲ ನಾಲ್ಕನೇ ಮುಂಜಾವಿನಲ್ಲಿ ಒಂದು ಕೆಟ್ಟ ಕನಸು. ಎದ್ದಾಗ ಮೈಪೂರ ನಡುಗುತ್ತಿತ್ತು. ಮುಖ ಪೂರ್ತಿ ಕಣ್ಣೀರಲ್ಲಿ ತೊಯ್ದಿತ್ತು. ಮುಟ್ಟಿಕೊಂಡಾಗ ನನ್ನ ಕೈಗಳೇ ನನಗೆ ಬಿರುಸಾಗಿ ಚುಚ್ಚಿದವು. ದುಃಖ ತಡೆದುಕೊಳ್ಳಲಾಗಲಿಲ್ಲ. ಅವಳಿಗೆ ಸೆಲ್ಫಿ ಕಳಿಸಿದೆ. ತಕ್ಷಣ ಕಾಲ್ ಮಾಡಿದಳು. ಸಂಜೆ ಸಿಗುವ ಭರವಸೆ ನೀಡಿದಳು. ’ಸೆಲ್ಫಿ ಕಳಿಸು’ ಎಂದು ಹಠ ಮಾಡಿದೆ. ಕಳಿಸಿದಳು. ಬಾದಾಮಿ ಕಣ್ಣುಗಳು ಕಪ್ಪಾಗಿದ್ದವು.

—–

ಆ ಕಪ್ಪನ್ನು ಮರೆಮಾಚಲು ಮತ್ತಷ್ಟು ಕಪ್ಪು ಹಚ್ಚಿಕೊಂಡು ಬಂದಿದ್ದಳು. ಬಯ್ಯಪ್ಪನಹಳ್ಳಿ ಮೆಟ್ರೊ ಸ್ಟೇಶನ್‌ನ ಪಿಜ್ಜಾ ಹಟ್‌ನಲ್ಲಿ ಕೂತಿದ್ದೆವು. ಬೇಕಂತಲೇ ಉತ್ಸಾಹ ತಂದುಕೊಂಡು ನನಗಿಷ್ಟದ ಪಿಜ್ಜಾ ಆರ್ಡರ್‍ ಮಾಡಿದಳು, ತಮಾಷೆ ಮಾತುಗಳಾಡಿದಳು, ’ಹೊಸ ಕವಿತೆ ಏನಾದ್ರು ಬರ್ದಿದೀಯಾ?’ ಎಂದು ವಿಚಾರಿಸಿದಳು. ಎಲ್ಲವೂ ಸರಿ ಆಗಿದೆ ಎನ್ನುವಂತಿತ್ತು ಅವಳ ವರ್ತನೆ. ಆದರೆ ಅವತ್ತಾಗಿದ್ದ ಘಟನೆ ಅವಳ ಇಡೀ ಮುಖದ ಮೇಲೆ ಒತ್ತಿದ ಮುದ್ರೆ ಸ್ಪಷ್ಟ ಕಾಣಿಸುತ್ತಿತ್ತು.

’ಪಿಜ್ಜಾ ಇನ್ನೂ ಲೇಟ್‌. ಅಲ್ಲಿವರ್ಗೂ ಒಂದ್ ಆಟ ಆಡನ. ಕೈ ಕೊಡು ಭವಿಷ್ಯ ಹೇಳ್ತೀನಿ’

ಎಂದು ನನ್ನ ಕೈತೆಗೆದುಕೊಂಡಳು.

’ಅದು ಬೇಡ. ನಿನ್ ಕೈಕೊಡು. ನಾನೇನೋ ಬರೀತೀನಿ.  ಗೆಸ್ ಮಾಡ್ಬೇಕು’

ಎಂದು ಅವಳ ಕೈ ತೆಗೆದುಕೊಂಡೆ. ಅಂಗೈ ಮೇಲೆ ’ಸಾರಿ’ ಎಂದು ಬರೆದೆ. ಅವಳು ಏನೂ ಹೇಳಲಿಲ್ಲ. ಮತ್ತೊಮ್ಮೆ ಒತ್ತಿ ಬರೆದೆ. ಮತ್ತೆ ಮತ್ತೆ ಬರೆದೆ. ಅವಳ ಕಣ್ಣು ಹನಿಗೂಡಿದವು. ಏನಾದರು ಹೇಳುತ್ತಾಳೆಂದು ಕಾದೆ. ಏನೂ ಹೇಳಲಿಲ್ಲ. ಅಷ್ಟೊತ್ತಿಗೆ ಪಿಜ್ಜಾ ಬಂತು. ತಾನೇ ಬಿಡಿಸಿ ಮೊದಲ ಸ್ಲೈಸ್ ತಿನ್ನಿಸಿದಳು. ಆದರೆ ಪ್ರತಿ ಸಲದಂತೆ ನಾನು ತಿನ್ನಿಸುವುದಕ್ಕೆ ಕಾಯದೆ ಇನ್ನೊಂದು ಸ್ಲೈಸ್ ಬಾಯಿಗಿಟ್ಟುಕೊಂಡಳು. ನನಗೆ ತುತ್ತು ಒಳಗೆ ಹೋಗಲಿಲ್ಲ. ಅವಳನ್ನೇ ನೋಡುತ್ತಿದ್ದೆ. ಅರ್ಥವಾಯಿತವಳಿಗೆ. ’ಹೇಯ್ ಇದ್ ಚೂರ್‍ ಒರೆಸಾ’ ಎಂದು ಮುಖ ಮುಂದಕ್ಕೊಡಿದಳು. ಒರೆಸಲಿಕ್ಕೆಂದು ಹೋದರೆ ಅವಳ ತುಟಿಗಳು ಸಣ್ಣಗೆ ಅದುರುತ್ತಿದ್ದವು. ಅದನ್ನು ನೋಡಿ ನನ್ನ ಬೆರಳೂ ಅದುರತೊಡಗಿತು. ತಾನೇ ನನ್ನ ಕೈಹಿಡಿದು ಒರೆಸಿಕೊಂಡಳು.

ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ನನ್ನ ನಿರ್ಧಾರ ಅಚಲವಾಗಿತ್ತು. ಆದರೆ ಅವಳ ಪ್ರಯತ್ನ ದಿನದಿಂದ ದಿನಕ್ಕೆ ವಿಫಲವಾಗುತ್ತ ಸಾಗಿ ಇಬ್ಬರನ್ನೂ ಕಂಗೆಡಿಸತೊಡಗಿತು.

’ಒಬ್ಬರನ್ನು ಮುಟ್ಟುವ ಮುನ್ನ ನೂರು ಸಲ ಯೋಚಿಸಬೇಕು. ಮನಸಲ್ಲುಳಿವ ಗುರುತಿಗಿಂತ ದೇಹದಲ್ಲಚ್ಚಾಗುವ ನೆನಪು ತುಂಬ ಕ್ರೂರಿ’ – ಸ್ಟೇಟಸ್ ಇಟ್ಟಿದ್ದೆ.

’ಪಾಪಪ್ರಜ್ಞೆ ಹುಟ್ಸೋದು ಕೂಡ ಪಾಪವಾಗಿರುತ್ತೆ’ ರಿಪ್ಲೈ ಮಾಡಿದ್ದಳು.

’ನೀನು ನಿನ್ನ ಕನಸು ಹಂಚಿಕೊಂಡಮೇಲೂ ನಾನು ಹಾಗೆ ಮಾಡಬಾರದಿತ್ತು’

’ನೀನು ಸಹಜವಾಗೇ ವರ್ತಿಸಿದೆ. ನನ್ನ ಮನಸೇ ಅಸಹಜ ಎನುವಷ್ಟು ಸೂಕ್ಷ್ಮ ಆಗೋಗಿದೆ’

’ನನ್ನ ಇನ್ನೊಂದ್ ಸಲ ಸಂಪೂರ್ಣವಾಗಿ ನಂಬಬಹುದಾ?’

’ಈಗಲೂ ನಂಬಿದ್ದೇನೆ. ನನಗೆ ಅಪನಂಬಿಕೆ ಹುಟ್ಟಿರೋದು ನನ್ನ ಮೇಲೆಯೇ’

ಮಾತು ಯಾವ ದಡವನ್ನೂ ತಲುಪದೆ ಅಲ್ಲಲ್ಲೇ ಸುತ್ತುವರೆಯುತ್ತಿತ್ತು. ನಮ್ಮಿಬ್ಬರ ಮನಸುಗಳು ಅದದೇ ಹೊಂಡಗಳಲ್ಲಿ ಬಿದ್ದು ಒದ್ದಾಡಿ ಹೈರಾಣಾಗತೊಡಗಿದವು. ನನ್ನ ಕೈಗಳು ಅವಳ ಪ್ರೀತಿಯ ನೇವರಿಕೆ ಇಲ್ಲದೆ ಸೊರಗತೊಡಗಿದವು. ಅವಳ ಕಣ್ಣುಗಳೋ ಭರವಸೆ ಹುಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಸೋತು ಸೋತು ಕಪ್ಪಾಗತೊಡಗಿದವು. ದಾರಿ ಸಂಪೂರ್ಣ ಮುಚ್ಚಿಹೋಗಿತ್ತು. ಬಿಟ್ಟು ನಡೆಯುವುದಂತೂ ಕಲ್ಪನೆಗೂ ಮೀರಿದ್ದಾಗಿತ್ತು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading
Advertisement
Prajwal Revanna Case What is diplomatic passport
ಹಾಸನ8 mins ago

Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Money Guide
ಮನಿ-ಗೈಡ್17 mins ago

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

T20 World Cup 2024
ಕ್ರೀಡೆ27 mins ago

T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

Blackmail Case
ಬೆಂಗಳೂರು28 mins ago

Blackmail Case: ಸಹಪಾಠಿಯಿಂದ 35 ಲಕ್ಷ ರೂ. ಚಿನ್ನಾಭರಣ ದೋಚಿದ ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರ ಬಂಧನ

Wedding Eye Makeup Tips
ಫ್ಯಾಷನ್45 mins ago

Wedding Eye Makeup Tips: ಮದುವೆಯಲ್ಲಿ ಮದುಮಗಳ ಐ ಮೇಕಪ್‌ಗೆ 5 ಸಿಂಪಲ್‌ ಸೂತ್ರ

Assault case In Bengaluru
ಬೆಂಗಳೂರು1 hour ago

Assault Case: ಶವದ ಮುಂದೆ ಎರಡು ಗುಂಪುಗಳ ಹೊಡಿಬಡಿ; 12 ಮಂದಿ ಅರೆಸ್ಟ್‌

Hassan Pen Drive Case Prajwal seeks 7 days time to appear for questioning
ಕ್ರೈಂ1 hour ago

Hassan Pen Drive Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ಕೇಳಿದ ಪ್ರಜ್ವಲ್‌; ಶೀಘ್ರ ಸತ್ಯ ಹೊರಬರಲಿದೆ ಎಂದು ಟ್ವೀಟ್‌!

T20 World Cup
ಕ್ರೀಡೆ1 hour ago

T20 World Cup: ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಚಹಲ್​ಗೆ ಪತ್ನಿಯಿಂದ ವಿಶೇಷ ಹಾರೈಕೆ

Jain Diksha
ಕರ್ನಾಟಕ1 hour ago

Jain Diksha: ಕೋಟ್ಯಂತರ ರೂ. ಆಸ್ತಿ ತ್ಯಜಿಸಿ ಜೈನ ಸನ್ಯಾಸ ದೀಕ್ಷೆ ಪಡೆದ ಬೆಂಗಳೂರಿನ ಉದ್ಯಮಿಯ ಪತ್ನಿ, 11 ವರ್ಷದ ಮಗ!

Goldy Brar
ದೇಶ1 hour ago

Goldy Brar: ಸಿಧು ಮೂಸೆವಾಲಾ ಹತ್ಯೆ ರೂವಾರಿ ಗೋಲ್ಡಿ ಬ್ರಾರ್‌ ಅಮೆರಿಕದಲ್ಲಿ ಕೊಲೆ; ಕೊಂದಿದ್ದು ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌