ಉದ್ಯೋಗ
Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು 2000 ಪರವಾನಗಿ ಭೂಮಾಪಕರ ನೇಮಕಕ್ಕೆ (Land Surveyor Recruitment ) ಅರ್ಜಿ ಆಹ್ವಾನಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಹುದ್ದೆಗಳಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು : ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು 2000 ಪರವಾನಗಿ ಭೂಮಾಪಕರ ನೇಮಕಕ್ಕೆ (Land Surveyor Recruitment ) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಒಂದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ಅರ್ಜಿ ಸಲ್ಲಿಸಿದ ದಿನಾಂಕದ ಆಧಾರದ ಮೇಲೆ ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಒಮ್ಮೆ ಅರ್ಜಿ ಸಲ್ಲಿಸದ ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ.
ವಿದ್ಯಾರ್ಹತೆ ಏನು?
ಕನಿಷ್ಠ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ. ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇ. 60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬಿ.ಇ.(ಸಿವಿಲ್)/ಅಥವಾ ಬಿ.ಟಿಕ್(ಸಿವಿಲ್)/ ಅಥವಾ ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವೆ” ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐ.ಟಿ.ಐ. ಇನ್ ಸರ್ವೆ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೆ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಾಗಿರುತ್ತಾರೆ.
ಭೂದಾಖಲೆಗಳನ್ನು ಕನ್ನಡ ಭಾಷೆಯಲ್ಲಿ ತಯಾರಿಸಬೇಕಾದ ಕಾರಣ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ./ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಪಡೆದು ತೇರ್ಗಡೆ ಹೊಂದಿರಬೇಕು ಅಥವಾ ಕೆ.ಪಿ.ಎಸ್.ಸಿ.ಯು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡದಿರಬೇಕು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ವಯೋಮಿತಿ ಎಷ್ಟು?
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ 65 ವರ್ಷಗಳು.
ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ/ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) / ಕ್ಯುಮುಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕ ರೂ.1000 ಎಂದು ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಶುಲ್ಕವನ್ನು ಕೂಡ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2023 (5 ಗಂಟೆಯ ಒಳಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 20-02-2023
ಸಹಾಯವಾಣಿ ಸಂಖ್ಯೆ: 080-22221038
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ ವಿಳಾಸ: https://landrecords.karnataka.gov.in
ಎಲ್ಲೆಲ್ಲಿ ಹುದ್ದೆಗಳಿವೆ?
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ನೇಮಕ ನಡೆಯಲಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಪರವಾನಗಿ ಭೂಮಾಪಕರ ಸಂಖ್ಯೆ ಇದೆ ಎಂದರೆ; ಉಡುಪಿ 86, ಉತ್ತರಕನ್ನಡ 75, ಕೊಡಗು 25, ಕೋಲಾರ 53, ಗದಗ 54, ಚಿಕ್ಕಮಗಳೂರು 83, ಚಿತ್ರದುರ್ಗ 73, ಚಾಮರಾಜನಗರ 35, ತುಮಕೂರು 110, ದಕ್ಷಿಣ ಕನ್ನಡ 36, ದಾವಣಗೆರೆ 95, ಧಾರವಾಡ 92, ಬೆಂಗಳೂರು ಗ್ರಾಮಾಂತರ 66, ಬೆಂಗಳೂರು ಜಿಲ್ಲೆ 125, ಬಿಜಾಪುರ 32, ಬೆಳಗಾವಿ 85, ಬಳ್ಳಾರಿ 55, ವಿಜಯನಗರ 47, ಬಾಗಲಕೋಟೆ 47, ಬೀದರ್ 35, ಮಂಡ್ಯ 71, ಮೈಸೂರು 40, ಯಾದಗಿರಿ 20, ರಾಮನಗರ 100, ರಾಯಚೂರು 40, ಶಿವಮೊಗ್ಗ 125, ಹಾವೇರಿ 152, ಹಾಸನ 60, ಕೊಪ್ಪಳ 28, ಕಲಬುರಗಿ 10, ಚಿಕ್ಕಬಳ್ಳಾಪುರ 45. ಒಟ್ಟು 2000.
ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಆನ್‌ಲೈನ್‌ನಲ್ಲಿ ಈ ಪರೀಕ್ಷೆ ನಡೆಯಲಿದ್ದು, ಎರಡು ಪ್ರಶ್ನೆ ಪತ್ರಿಕೆಗಳಿರಲಿವೆ. ಪತ್ರಿಕೆ-1ಸಾಮಾನ್ಯ ಪತ್ರಿಕೆಯಾದರೆ ಪತ್ರಿಕೆ-2 ನಿರ್ಧಿಷ್ಟ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಯಾಗಿದೆ. ತಲಾ 100 ಅಂಕ ನಿಗದಿಯಾಗಿರುತ್ತದೆ. ವಸ್ತುನಿಷ್ಟ ಬಹು ಆಯ್ಕೆಯ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಓಎಂಆರ್ ಶೀಟ್‌ನಲ್ಲಿ ಗುರುತಿಸಬೇಕಿರುತ್ತದೆ. ಈ ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಈ ಆಯ್ಕೆಗೆ ಯಾವುದೇ ಸಂದರ್ಶನ ಇರುವುದಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಜಿಲ್ಲಾವಾರು ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ತಾನು ಆಯ್ಕೆ ಬಯಸುವ ಯಾವುದಾದರೂ ಒಂದು ಜಿಲ್ಲೆಯನ್ನು ಮಾತ್ರ ಗುರುತಿಸಿರಬೇಕು. ಆಯ್ಕೆ ಬಯಸಿದ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಗೆ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆಯ ಖಚಿತ ದಿನಾಂಕವನ್ನು ಮುಂದೆ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ : KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಉದ್ಯೋಗ
Jobs News : ಉಪನ್ಯಾಸಕರ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕ; ವಯೋಮಿತಿ ಹೆಚ್ಚಿಸಿದ ಸರ್ಕಾರ
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಖಾಸಗಿ ಅನುದಾನಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ (Jobs News). ಈ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರು: ರಾಜ್ಯದ ನೂತನ ಸರ್ಕಾರವು ಉಪನ್ಯಾಸಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ (Jobs News) ನೀಡಿದೆ. ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಖಾಸಗಿ ಅನುದಾನಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 2 ವರ್ಷ ಹೆಚ್ಚಿಸಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ. ʻʻಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಹಾಗೂ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ, ಖಾಸಗಿ/ಅನುದಾನಿತ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ಮೊದಲ ನೇರ ನೇಮಕಾತಿಗೆ ಮಾತ್ರ ಅನ್ವಯವಾಗುವಂತೆ ದಿನಾಂಕ:23-06-2022 ರಿಂದ ಒಂದು ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆʼʼ ಎಂದು ಆದೇಶದಲ್ಲಿ ಹೇಳಲಾಗಿದೆ.
ಕೋವಿಡ್-19ರ ಸಾಂಕ್ರಾಮಿಕ ಖಾಯಿಲೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದ್ದರಿಂದ ಯಾವುದೇ ಅನುದಾನ ರಹಿತ ವಿದ್ಯಾ ಸಂಸ್ಥೆಗಳನ್ನು, ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಅನುದಾನರಹಿತ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಆರ್ಥಿಕ ಮಿತವ್ಯಯದ ಕಾರಣ ಸಾಧ್ಯವಾಗಿರಲಿಲ್ಲ.
ಅಲ್ಲದೆ, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತವಾಗಿದ್ದ ಕಾರಣ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಮೀರಿದ್ದರಿಂದಾಗಿ ಅವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ/ಪ್ರೌಢಶಾಲೆ/ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ನೀಡುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.
ಮೊದಲ ನೇಮಕಾತಿಗೆ ಮಾತ್ರ ಈ ವಯೋಮಿತಿಯ ಸಡಿಲಿಕೆಯು ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಇದುವರೆಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು ಎಂದು ವಯೋಮಿತಿ ನಿಗದಿಪಡಿಸಲಾಗಿತ್ತು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 43 ವರ್ಷ ಎಂದು ತಿಳಿಸಲಾಗಿತ್ತು. ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷ ಎಂದು ನಿಗದಿಪಡಿಸಲಾಗಿತ್ತು. ಈಗ ಗರಿಷ್ಠ ವಯೋಮಿತಿಯಲ್ಲಿ ಎರಡದು ವರ್ಷ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ : KSP Recruitment : 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಜುಲೈನಲ್ಲಿ ಪರೀಕ್ಷೆ
ಉದ್ಯೋಗ
IDBI Recruitment 2023 : ಐಡಿಬಿಐ ಬ್ಯಾಂಕ್‌ನಲ್ಲಿ 1,036 ಎಕ್ಸಿಕ್ಯೂಟಿವ್ ಹುದ್ದೆ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ
ದೇಶದ ಪ್ರಮುಖ ಅಭಿವೃದ್ಧಿ ಬ್ಯಾಂಕುಗಳಲ್ಲಿ ಒಂದಾದ ಐಡಿಬಿಐ ಬ್ಯಾಂಕ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಕ್ಕೆ ಆನ್‌ಲೈನ್‌ನಲ್ಲಿ (IDBI Recruitment 2023) ಅರ್ಜಿ ಆಹ್ವಾನಿಸಿದೆ. ಈ ನೇಮಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಭಾರತ ಸರ್ಕಾರದ ಒಡೆತನಕ್ಕೆ ಸೇರಿದ, ದೇಶದ ಪ್ರಮುಖ ಅಭಿವೃದ್ಧಿಗೆ ಮೀಸಲಾದ ವಿತ್ತೀಯ ಸಂಸ್ಥೆಗಳಲ್ಲಿ (ಬ್ಯಾಂಕ್‌ಗಳಲ್ಲಿ) ಒಂದಾದ ಐಡಿಬಿಐ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಎಕ್ಸಿಕ್ಯೂಟಿವ್‌ಗಳ ನೇಮಕಕ್ಕೆ (IDBI Recruitment 2023) ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ನಾಳೆ (ಜೂನ್ 07) ಕೊನೆಯ ದಿನವಾಗಿರುತ್ತದೆ.
ಒಟ್ಟು 1,036 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 160, ಎಸ್‌ಟಿ ಅಭ್ಯರ್ಥಿಗಳಿಗೆ 67 ಒಬಿಸಿ ಅಭ್ಯರ್ಥಿಗಳಿಗೆ 255, ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 103 ಹುದ್ದೆಗಳನ್ನು ಹಾಗೂ ಉಳಿದ 451 ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಶುಲ್ಕ ನಿಗದಿಪಡಿಸಲಾಗಿಲ್ಲ.
ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್ ಮಾಡಿ.
ವಿದ್ಯಾರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೊಮಾ ಮಾಡಿದವರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕಾದದು ಕಡ್ಡಾಯ.
ವಯೋಮಿತಿ ಎಷ್ಟು?
ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ. ಗರಿಷ್ಠ ವಯೋಮಿತಿ 25 ವರ್ಷ. ವಯೋಮಿತಿಯನ್ನು ಮೇ 1, 2023ಕಕ್ಕೆ ಲೆಕ್ಕಹಾಕಲಾಗುತ್ತದೆ. ಎಸ್‌ಸಿ, ಎಸ್‌ಟಿ, ಓಬಿಸಿ, ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿರುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-06-2023
ಆನ್‌ಲೈನ್‌ನ ಪರೀಕ್ಷೆಯ ದಿನಾಂಕ : ಜುಲೈ 2, 2023
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.idbibank.in/
ವೇತನ ಎಷ್ಟಿರುತ್ತದೆ?
ಐಡಿಬಿಐ ಬ್ಯಾಂಕ್‌ನಲ್ಲಿನ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಮೂರು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೊದಲ ವರ್ಷ ಮಾಸಿಕ ರೂ.29,000 ವೇತನ ನೀಡಲಾಗುತ್ತದೆ. ಎರಡನೇ ವರ್ಷ ಮಾಸಿಕ 31,000ರೂ. ವೇತನ ನೀಡಿದರೆ ಮೂರನೇ ವರ್ಷ ಮಾಸಿ ರೂ.34,000 ವೇತನ ನೀಡಲಾಗುತ್ತದೆ.
ಮೂರು ವರ್ಷ ಪೂರ್ಣಗೊಳಿಸಿದವರು ಗ್ರೇಡ್ ʻಎʼಯ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಈ ಹುದ್ದೆಯ ಮಾಸಿಕ ಬೇಸಿಕ್ ವೇತನವು 36,000ಸಾವಿರ ರೂ.ಗಳಾಗಿರುತ್ತವೆ. ವೇತನ ಶ್ರೇಣಿ ಇಂತಿದೆ: 36,000-1,490(7)-46,430-1,740(2)–49,910–1,990(7)-63,840(17years)
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ನೇಮಕ ಹೇಗೆ?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಆನ್‌ಲೈನ್ ಟೆಸ್ಟ್ (OT) ನಡೆಸಲಾಗುತ್ತದೆ. ಜುಲೈನಲ್ಲಿ ಈ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಅಂದರೆ ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯು ನಾಲ್ಕು ವಿಷಯಗಳನ್ನು ಒಳಗೊಂಡಿದ್ದು (1.Logical Reasoning, Data Analysis & Interpretation, 2. English Language, 3.Quantitative Aptitude, 4. General/Economy/ Banking Awareness/ Computer/IT), ಪ್ರತಿ ವಿಷಯದಲ್ಲಿಯೂ ಅಭ್ಯರ್ಥಿಯು ಅರ್ಹತಾ ಅಂಕ ಪಡೆದಿರಬೇಕಾಗುತ್ತದೆ.
ಆಲ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆಗೊಳಪಡಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ನೇಮಕಾತಿಯ ಸಂಪೂರ್ಣ ಮಾಹಿತಿಗೆ ಅಧಿಸೂಚನೆ (Click Here) ನೋಡಿ
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?
ಎಕ್ಸಿಕ್ಯೂಟಿವ್ ಹುದ್ದೆಗಾಗಿ ನಡೆಸಲಾಗುವ ಆನ್‌ಲೈನ್ ಟೆಸ್ಟ್ ಅನ್ನು ರಾಜ್ಯದ ಬೆಂಗಳೂರು, ಬೆಳಗಾವಿ ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಸಲಾಗುತ್ತದೆ.
ಇದನ್ನೂ ಓದಿ : DRDO Recruitment 2023 : ಎಂಜಿನಿಯರಿಂಗ್ ಮುಗಿಯಿತಾ? ಡಿಆರ್‌ಡಿಒನಲ್ಲಿ ಸೈಂಟಿಸ್ಟ್ ಆಗಿ!
ಉದ್ಯೋಗ
Teacher Recruitment : 15 ಸಾವಿರ ಶಿಕ್ಷಕರ ನೇಮಕ; ಬಾಕಿ ಇರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಸೂಚನೆ
ಶಿಕ್ಷಣ ಇಲಾಖೆಯು 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ (Teacher Recruitment) ಸಂಬಂಧಿಸಿದಂತೆ ಬಾಕಿ ಇರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಸೂಚನೆ ನೀಡಿದೆ. ಇದರಿಂದ ಈ ನೇಮಕ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಂತಾಗಿದೆ.
ಬೆಂಗಳೂರು: ಈಗಾಗಲೇ ಅಂತಿಮ ಹಂತಕ್ಕೆ ಬಂದಿರುವ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಶಾಲಾ ಶಿಕ್ಷಣ ಇಲಾಖೆಯು ಮತ್ತೆ ಚಾಲನೆ ನೀಡಿದೆ. ಬಾಕಿ ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆಗೆ ಆದೇಶ ಹೊರಡಿಸಿದೆ.
ಕಳೆದ ಮಾರ್ಚ್‌ನಲ್ಲಿ ಈ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈ ಹಿಂದೆಯೇ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಚಾಲನೆ ನೀಡಲಾಗಿತ್ತಾದರೂ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳ ಅಭ್ಯರ್ಥಿಗಳ ಮತ್ತು ಬೆಂಗಳೂರು ಮಹಾನಗರ ವ್ಯಾಪ್ತಿಯ ಬೆಂಗಳೂರುನ ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ನಡೆಸಲಾಗಿರಲಿಲ್ಲ.
ಈಗ ಹೈಕೋರ್ಟ್ ಈ ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ಇತ್ಯರ್ಥಪಡಿಸಿರುವುದರಿಂದ ಮೂಲ ದಾಖಲೆಗಳ ಪರಿಶೀಲನೆಗೆ ಇಲಾಖೆಯು ಆಯುಕ್ತರು ಸೂಚನೆ ನೀಡಿದ್ದಾರೆ. ಅಭ್ಯರ್ಥಿಗಳ ವೈದ್ಯಕೀಯ ಪ್ರಮಾಣ ಪತ್ರ, ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣ ಪತ್ ಸೇರಿದಂತೆ ಒಟ್ಟು ಹತ್ತು ಪ್ರಮಾಣ ಪತ್ರಗಳ ನೈಜತ್ವವನ್ನು ಪರಿಶೀಲನೆ ಮಾಡಲಾಗುತ್ತದೆ.
ಉಳಿದ ಜಿಲ್ಲೆಗಳ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಸಂಪೂರ್ಣಗೊಂಡಿದ್ದು, ಈಗ ಕೌನ್ಸಿಲಿಂಗ್ ನಡೆಸಿ, ನೇಮಕಾತಿ ಆದೇಶ ನೀಡಬೇಕಾಗಿದೆ. ಆದಷ್ಟು ಬೇಕ ನೇಮಕಾತಿ ಆದೇಶ ನೀಡಬೇಕೆಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರು ಪಡಿಸಬೇಕಿರುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ದಾಖಲೆಗಳ ವಿವರ ಇಂತಿದೆ;
1. ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿ
2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
3. ಪಿಯುಸಿ ಅಂಕಪಟ್ಟಿ
4. ಪದವಿಯ ಮೂರು ವರ್ಷದ (ಆರು ಸೆಮಿಸ್ಟರ್‌ಗಳ) ಅಂಕಪಟ್ಟಿಗಳು
5. ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ (ಡಿಗ್ರಿ ಕಾನ್ವಕೇಷನ್ ಸರ್ಟಿಫಿಕೇಟ್)
6. ಬಿ.ಎ.ಇಡಿ. ಹಾಗೂ ಬಿ.ಎಸ್ಸಿ. ಇಡಿ ಪದವಿಯ ನಾಲ್ಕು ವರ್ಷದ ಅಂಕಪಟ್ಟಿಗಳು.
7. ಬಿ.ಎ.ಇಡಿ ಹಾಗೂ ಬಿ.ಎಸ್ಸಿ.ಇಡಿ ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ.
8. ಬಿ.ಇಡಿ. ಪದವಿಯ ಅಂಕಪಟ್ಟಿ.
9. ಬಿ.ಇಡಿ ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ.
11. ಡಿ.ಇಡಿ./ಡಿ.ಎಲ್.ಇಡಿ ಕೋರ್ಸಿನ ಎರಡು ವರ್ಷಗಳ ಅಂಕಪಟ್ಟಿ
12. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣ ಪತ್ರ.
13. ಅಭ್ಯರ್ಥಿಯ ಆಧಾರ್ ಕಾರ್ಡ್
14. ಮೀಸಲಾತಿ ಕೋರಿರುವ ಪ್ರವರ್ಗದ ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಮತ್ತು ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ (ಆರ್‌ಡಿ ನಂಬರ್ ಹೊಂದಿರಬೇಕು) (ಎಸ್‌ಸಿ/ಎಸ್‌ಟಿ, ಸಿಎಟಿ-1 2ಎ, 2ಬಿ ಮತ್ತು 3ಎ 3ಬಿ)
15. ಹೈ.ಕ. ಮೀಸಲಾತಿಗೆ, ಸಕ್ಷಮ ಪ್ರಾಧಿಕಾರದಿಂದ ಪಡೆದ 317ಜೆ ಪ್ರಮಾಣ ಪತ್ರ (ಆರ್‌ಡಿ ನಂಬರ್ ಹೊಂದಿರಬೇಕು)
16. ಸಾಮಾನ್ಯ ವರ್ಗದ ಗ್ರಾಮೀಣ ಅಭ್ಯರ್ಥಿಗಳಗಿಎ ನಾನ್ ಕ್ರೀಮಿ ಲೇಯರ್ ಸರ್ಟಿಫಿಕೇಟ್ (non creamy layer certificate) (ಆರ್‌ಡಿ ನಂಬರ್ ಹೊಂದಿರಬೇಕು).
17. ಮಾಜಿ ಸೈನಿಕ ಮೀಸಲಾತಿಗೆ ಕಾಋಯನಿರ್ವಹಿಸಿರುವ/ಅವಲಂಬಿತರ ಪ್ರಮಾಣ ಪತ್ರ.
18. ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿದ ಪ್ರಮಾಣ ಪತ್ರ.
19. ಗ್ರಾಮೀಣ ಅಭ್ಯರ್ಥಿ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳು (ನಿಗದಿತ ನಮೂನೆಯಲ್ಲಿರಬೇಕು).
20. ಅಂಗವಿಕಲ ಅಭ್ಯರ್ಥಿಗಳು ಪ್ರಮಾಣ ಪತ್ರ.
21. ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ.
22. ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿದ ಪ್ರಮಾಣ ಪತ್ರ.
23. ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರು ಸೇವಾವಿವರಗಳಿಗೆ ಸಂಬಂಧಸಿದಂತೆ ನೇಮಕಾತಿ ಪ್ರಾಧಿಕಾರದಿಂದ ಪಡೆದುಕೊಂಡಿರುವ ಅನುಮತಿ ಪತ್ರದ ಪ್ರತಿ.
24. ಅರ್ಜಿಯನ್ನು ಭರ್ತಿ ಮಾಡುವಾಗ ತಿಳಿಸಿದ ಅವಶ್ಯವೆಂದು ಭಾವಿಸಿದ ಇನ್ನಿತರ ದಾಖಲೆಗಳು ಪ್ರತಿಗಳು
ಗಮನಿಸಿ: ಈ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಎಂದರೆ 23-04-2022ದ ಒಳಗೆ ಪಡೆದಿರಬೇಕು.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://www.schooleducation.kar.nic.in
ಇದನ್ನೂ ಓದಿ: Teacher Recruitment 2023 : 33 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ; ಎಲ್ಲ ಜಿಲ್ಲೆಗಳಲ್ಲಿಯೂ ಖಾಲಿ ಇವೆ ಹುದ್ದೆ
ಉದ್ಯೋಗ
UPSC NDA NA Exam : ಸೇನಾಧಿಕಾರಿ ಹುದ್ದೆಗೆ ಎನ್‌ಡಿಎ-ಎನ್‌ಎ ಪರೀಕ್ಷೆ; ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
ಭಾರತೀಯ ಸೇನೆಯ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕ ಸೇವಾ ಆಯೋಗ ಎನ್‌ಡಿಎ-ಎನ್‌ಎ ಪರೀಕ್ಷೆ ನಡೆಸುತ್ತಿದ್ದು (UPSC NDA & NA Exam), ಇದಕ್ಕೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮುಂದಿನ 2023ರ ಸೆಪ್ಟೆಂಬರ್‌ನಲ್ಲಿ ನಡೆಸಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಗೆ (ಎನ್‌ಡಿಎ-ಎನ್‌ಎ) (UPSC NDA NA Exam) ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ಸೇನೆಯಲ್ಲಿ ಅಧಿಕಾರಿಯಾಗಬಯಸುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಂದು ಸಂಜೆ 6 ಗಂಟೆಯ ಒಳಗೆ (ಜೂನ್ 06) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಪುರಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಈಗ ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಕೂಡ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಸೆಪ್ಟೆಂಬರ್ 03 ರಂದು ಪರೀಕ್ಷೆ
ಯುಪಿಎಸ್‌ಸಿಯು ಅಭ್ಯರ್ಥಿಗಳ ಆಯ್ಕೆಗೆ ಇದೇ ಸೆಪ್ಟೆಂಬರ್ 03 ರಂದು ಲಿಖಿತ ಪರೀಕ್ಷೆ ನಡೆಸಲಿದೆ. ರಾಜ್ಯದ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ತರಬೇತಿಗೆ 395 ಅಭ್ಯರ್ಥಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಭೂಸೇನೆಗೆ-208 (10 ಮಹಿಳೆಯರು), ನೌಕಾಪಡೆಗೆ-42 (ಮೂವರು ಮಹಿಳೆಯರು) ಮತ್ತು ವಾಯುಪಡೆಯ ಫ್ಲೈಯಿಂಗ್ ವಿಭಾಗಕ್ಕೆ 92 ಮತ್ತು ಗ್ರೌಂಡ್ ಡ್ಯೂಟಿ ವಿಭಾಗಕ್ಕೆ 28 ಮತ್ತು ನೇವಲ್ ಅಕಾಡೆಮಿಗೆ 25 ಅಭ್ಯರ್ಥಿಗಳನ್ನು (7 ಮಂದಿ ಮಹಿಳೆಯರು) ಆಯ್ಕೆ ಮಾಡಿ ತರಬೇತಿಗೆ ಕಳುಹಿಸಲಾಗುತ್ತದೆ. ಈ ಅಕಾಡೆಮಿಗಳಲ್ಲಿ ಯಶಸ್ವಿಯಾಗಿ ತರಬೇತಿ ಪಡೆಯುವ ಅಭ್ಯರ್ಥಿಗಳನ್ನು ಸೇನೆಯು ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 06, 2023 (6:00 PM)
ಅರ್ಜಿಯಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶ: 07-06-2023 ರಿಂದ 13-06-2023
ಪರೀಕ್ಷೆ ನಡೆಯುವ ದಿನಾಂಕ: 03-09-2023
ಸಹಾಯವಾಣಿ ಸಂಖ್ಯೆ: 011-23385271 / 23381125 / 23098543
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ಯಾರು ಅರ್ಜಿ ಸಲ್ಲಿಸಬಹುದು?
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅವಿವಾಹಿತ ಯುವಕರು ಮತ್ತು ಯುವತಿಯರು ಈ ಪರೀಕ್ಷೆ ಬರೆಯಬಹುದಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಗಳೂ ಅರ್ಜಿಸಲ್ಲಿಸಬಹುದು.
ನೌಕಾ ಪಡೆ ಮತ್ತು ವಾಯುಪಡೆಗೆ ಸೇರಬೇಕೆಂದು ಇಚ್ಛಿಸಿದ್ದಲ್ಲಿ ದ್ವಿತೀಯ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಕಲಿತಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005ರ ಜನವರಿ 2 ರಿಂದ 2008ರ ಜನವರಿ 1ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ/ಎಸ್‌ಟಿ ಮತ್ತು ಸೇನೆಯ ಅಧಿಕಾರಿಗಳ (ಜೆಸಿಎ/ಎನ್‌ಸಿಎ ಒಆರ್) ಪುತ್ರರಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಯಾವುದೇ ಎಸ್‌ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ ಅಥವಾ ವೀಸಾ ಕಾರ್ಡ್/ಮಾಸ್ಟರ್ ಕಾರ್ಡ್ ಪೇ ಕಾರ್ಡ್/ಡೆಬಿಟ್ ಕಾರ್ಡ್‌ಗಳ ಮೂಲಕ ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಅಥವಾ ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ ಮೊದಲನೇ ಹಂತ. ಇದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಎಸ್‌ಎಸ್‌ಬಿ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಬೇಕು. ಅಧಿಕಾರಿಗೆ ಇರಬೇಕಾದ ಅರ್ಹತೆಗಳನ್ನು ಈ ವ್ಯಕ್ತಿತ್ವ ಪರೀಕ್ಷೆಯ ಸಂದರ್ಭದಲ್ಲಿ ಒರೆಗೆ ಹಚ್ಚಿ ನೋಡಲಾಗುತ್ತದೆ.
ಈ ಎರಡನೇ ಹಂತ ದಾಟಿದ ಅಭ್ಯರ್ಥಿಗಳು ಎಸ್‌ಎಸ್‌ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಈ ಮೂರೂ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್‌ಗಳಿಗೆ ಸೀಟು ಲಭ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ : India Post GDS Recruitment 2023 : ಅಂಚೆ ಇಲಾಖೆಯಲ್ಲಿ 12,828 ಹುದ್ದೆ; ಎಸ್ಸೆಸ್ಸೆಲ್ಸಿ ಓದಿದವರಿಗೆ ಅವಕಾಶ
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?