ಆರೋಗ್ಯ
Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್, ಡಯಾಲಿಸಿಸ್ ಟೆಂಡರ್ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ
Karnataka Health Department: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅನೇಕ ಟೆಂಡರ್‌ಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದ್ದು, ಈಗ ಆರೋಗ್ಯ ಇಲಾಖೆಯಲ್ಲಿ ಭಾರಿ ಸರ್ಜರಿಗೆ ಮುಂದಾಗಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಗುತ್ತಿಗೆಗಳ ಮೇಲೆ ಈಗಿನ ಕಾಂಗ್ರೆಸ್ ಸರ್ಕಾರ ಕಣ್ಣಿಟ್ಟಿದ್ದು, ಒಂದೊಂದೇ ಟೆಂಡರ್‌ಗಳನ್ನು ರದ್ದುಗೊಳಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಅಲ್ಲದೆ, ಆಗಿನ ಸಚಿವ ಡಾ. ಕೆ. ಸುಧಾಕರ್ (Dr K Sudhakar) ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿಕೊಂಡಿದೆ. ಈಗ ಇದರ ಭಾಗವಾಗಿ 108 ಆಂಬ್ಯುಲೆನ್ಸ್ ಹಾಗೂ ಡಯಾಲಿಸಿಸ್ ಕೇಂದ್ರಗಳ ಟೆಂಡರ್‌ಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಕೆಲವು ಟೆಂಡರ್‌ಗಳನ್ನು ರದ್ದುಪಡಿಸಿದ್ದೇವೆ. 108 ಆಂಬ್ಯುಲೆನ್ಸ್ ಸೇವೆ ನೀಡಲು ಜಿವಿಕೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನು ಸಹ ರದ್ದುಪಡಿಸಲಾಗಿದೆ. ಈಗ ಜರೂರಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ. ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯನ್ನು ಸರಿಪಡಿಸಬೇಕಿದೆ. ಪಾಲಿಸಿ ವಿಚಾರಗಳನ್ನು ಬದಲಾಯಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Traffic Police: ಒನ್‌ವೇ, ಫುಟ್‌ಪಾತ್‌ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!
ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಈಗಾಗಲೇ ಕೆಲವು ಟೆಂಡರ್‌ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಬಾಕಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ತಜ್ಞರ ಜತೆ ಚರ್ಚೆ ಮಾಡಿ ಸುಧಾರಣೆ ತರುತ್ತೇವೆ. ಗುಣಮಟ್ಟದ ಚಿಕಿತ್ಸೆ, ಗುಣಮಟ್ಟದ ವ್ಯವಸ್ಥೆಯನ್ನು ನಾವು ಕೊಡುವಂತೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ
ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ಸಿಗಲಿದೆ
ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಈ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿ ಇದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಡಿಕೆ ಇರುವಂತಹ ಅರ್ಹರಿಗೆ ಯೋಜನೆ ಸಿಗಲಿದೆ. ಜನಸಂಖ್ಯೆ ನೋಡಿದರೆ 1-2 ಪರ್ಸೆಂಟ್ ಮಾತ್ರ ಈ ರೀತಿ ಇರಬಹುದು. ಈ ರೀತಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸುಲಭ. ಆದರೆ ಅನುಷ್ಠಾನ ಮಾಡೋದು ಕಷ್ಟ. ಈಗ ಅನುಷ್ಠಾನ ಕೂಡ ಮಾಡಿ ಜನರಿಗೆ ನಾವು ತೋರಿಸಿದ್ದೇವೆ. ಅನುಷ್ಠಾನ ಮಾಡಲ್ಲ ಎಂದು ಕೆಲವರು ನಕರಾತ್ಮಕತೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಜನರಲ್ಲಿ ಕೋಮುವಾದದ ವಿಚಾರವನ್ನು ಹಿಂದಿನ ಬಿಜೆಪಿ ಸರ್ಕಾರದವರು ತುಂಬಿದರು. ಅವರ ಪಕ್ಷದ ಬೆಳವಣಿಗೆಗೆ ಸಿದ್ಧಾಂತ ಬಿತ್ತಲು ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಆರೋಗ್ಯ
Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?
ಯಾವತ್ತೋ ಅಪರೂಪಕ್ಕೆ ಉಪಯೋಗಿಸಿದರೆ ಸೋಡಾದಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇದನ್ನೇ ನೆಚ್ಚಿಕೊಂಡಿದ್ದರೆ (Baking soda side effects) ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ.
ಆಧುನಿಕ ಅಡುಗೆಯ ವಿಧಾನಗಳು (Baking soda side effects) ಬದಲಾಗಿವೆ. ಅಜ್ಜಿಯ ತಲೆಮಾರಿನ ಹಾಗೆ ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸುವ ವ್ಯವಧಾನ ಕಡಿಮೆಯಾಗಿದೆ. ಉದಾ, ನಾಳೆ ಬೆಳಗಿನ ತಿಂಡಿಗೆ ದೋಸೆ ಅಥವಾ ಇಡ್ಲಿ ಮಾಡಬೇಕೆಂದು ರಾತ್ರಿ ಮಲಗುವಾಗ ನೆನಪಾದರೆ ಮಾಡುವುದು ಹೇಗೆ? ಇಂದಿನ ಅಡುಗೆ ಮನೆಗಳಲ್ಲಿ ಹಾಗೂ ಬೆಳಗಿನ ಹೊತ್ತಿಗೆ ದೋಸೆ ಸಿದ್ಧವಾಗುತ್ತದೆ. ಅಕ್ಕಿ-ಬೇಳೆಗಳು ಇಷ್ಟು ಹೊತ್ತು ನೆನೆಯಬೇಕು, ರುಬ್ಬಿದ ಧಾನ್ಯಗಳ ಹಿಟ್ಟು ಇದಿಷ್ಟು ಹೊತ್ತು ಹುದುಗಬೇಕು ಎಂಬಂಥ ನಿಯಮಗಳನ್ನು ಕೆಲವೊಮ್ಮೆ ಗಾಳಿಗೆ ತೂರುತ್ತೇವೆ. ಹಲವು ಶಾರ್ಟ್‌ಕಟ್‌ಗಳನ್ನು ಅರಸುತ್ತೇವೆ, ಏನಕ್ಕೇನೋ ಬೆರೆಸುತ್ತೇವೆ.
ಚಿಟಿಕೆ ಸೋಡಾ ಬೇಕೆ?
ಯೂಟ್ಯೂಬ್‌ನ ಯಾವುದೋ ಚಾನೆಲ್‌ನಲ್ಲಿ ಮೃದುವಾದ ತಟ್ಟೆ ಇಡ್ಲಿ ಮಾಡುವುದಕ್ಕೆ ಚಿಟಿಕೆ ಸೋಡಾ ಬೆರೆಸಿ ಎನ್ನುವುದು ನಮಗೆ ಅನುಸರಣೀಯ ಎನಿಸಿಬಿಡುತ್ತದೆ. ಬಹಳಷ್ಟು ಬೇಕಿಂಗ್‌ಗಳಿಗೆ ಸೋಡಾ ಎಂತಿದ್ದರೂ ಅಗತ್ಯವಲ್ಲವೇ, ಇಡ್ಲಿ-ದೋಸೆ ಹಿಟ್ಟುಗಳಿಗೂ ಬೆರೆಸಿದರಾಯಿತು ಎನಿಸಿಬಿಡುತ್ತದೆ. ʻನಾವೇನು ಸೋಡಾ ಹಾಕುವುದಿಲ್ಲ. ಇನೊ (Eno) ಮಾತ್ರ ಬಳಸೋದುʼ ಎಂಬ ಸಮಜಾಯಿಶಿ ಕೊಡುವವರೆಷ್ಟು ಮಂದಿ ಬೇಕು? ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್ ಸೋಡಾ, ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಇಷ್ಟೊಂದು ಪೀಠಿಕೆಯ ನಂತರವೂ ವಿಷಯ ಹೇಳದಿದ್ದರೆ ಹೇಗೆ? (Health tips) ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.
ಇದನ್ನೂ ಓದಿ: Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!
ಆಹಾರ ತಜ್ಞರೇನು ಹೇಳುತ್ತಾರೆ?
ಯಾವತ್ತೋ ವರ್ಷಕ್ಕೊಂದೆರಡು ಬಾರಿ ಉಪಯೋಗಿಸಿದರೆ ಈ ವಸ್ತುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ.
ಮೂತ್ರಪಿಂಡಕ್ಕೆ ತೊಂದರೆ
ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. 60ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. (Health tips) ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ 5 ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ ಅಗುತ್ತದೆ ಹೊರತು ಮತ್ತೇನಿಲ್ಲ.
ಇನ್ನಷ್ಟು ಸಮಸ್ಯೆಗಳು
ಯಾವುದೇ ಅಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.
ಯಕೃತ್ತಿಗೂ ಅಪಾಯ
ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?
ಹಾಗಾಗಿ ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದು ಒಳಿತು. ಕೆಲವೊಮ್ಮೆ ಬೇಕಿಂಗ್ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆ ಬೀಜ ಮುಂತಾದ ಇನ್ನಿತರ ಮಾರ್ಗಗಳ ಬಳಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಲೇಸಲ್ಲವೇ?
ಆರೋಗ್ಯ
Dengue Fever foods: ಡೆಂಗ್ಯು ಜ್ವರ ಬಂದಾಗ ಯಾವೆಲ್ಲ ಆಹಾರ ಸೇವನೆ ಬಹಳ ಮುಖ್ಯ ಗೊತ್ತೇ?
ಡೆಂಗ್ಯು ಜ್ವರ ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
ಡೆಂಗ್ಯು ಎಂಬ ಜ್ವರ (Dengue Fever) ಆಗಾಗ ಎಲ್ಲೆಡೆ ಸದ್ದು ಮಾಡುತ್ತಲೇ ಇರುತ್ತದೆ. ಸೊಳ್ಳೆಯಿಂದ (Mosquito bite) ಬರುವ ಈ ಜ್ವರವೆಂದರೆ, ಹೆಚ್ಚಿದ ಉಷ್ಣಾಂಶ, ಮೈಮೇಲೆ, ಕೆಂಪನೆಯ ಸಣ್ಣ ಗುಳ್ಳೆಗಳೇಳುವುದು, ತಲೆನೋವು, ಮೈಕೈ ನೋವು ಇತ್ಯಾದಿ ಇತ್ಯಾದಿ ಲಕ್ಷಣಗಳೊಂದಿಗೆ ಬರುತ್ತದೆ. ಈ ಜ್ವರ ಎಲ್ಲ ಜ್ವರದಂತಲ್ಲ. ಅಪಾಯವಿಲ್ಲ ಎಂದುಕೊಂಡರೂ ಕೆಲವೊಮ್ಮೆ ಹಠಾತ್ತನೆ ಅಪಾಯಕ್ಕೆ ದೂಡುತ್ತದೆ. ಇಂತಹ ಸಂದರ್ಭ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿ ಅತ್ಯಂತ ಅವಶ್ಯಕ. ಇದು ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಹಾಗಾಗಿ, ಬನ್ನಿ, ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
1. ನೀರು: ನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಡೆಂಗ್ಯು ಬಂದಾಗ ಸಾಧ್ಯವಾದಷ್ಟು ನೀರು ಕುಡಿಯುತ್ತಿದ್ದರೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಬಾರದು. ಇದರಿಂದ ಜ್ವರದ ಉಷ್ಣಾಂಶವೂ ಕೂಡಾ ಗರಿಷ್ಠ ಮಟ್ಟಕ್ಕೇರುಬುದು ತಪ್ಪುತ್ತದೆ. ದೇಹದಲ್ಲಿ ನೀರಿನಂಶದ ಸಮತೋಲನವೂ ಕಾಯ್ದುಕೊಳ್ಳುತ್ತದೆ.
2. ಎಳನೀರು: ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್‌ಗಳು ನೈಸರ್ಗಿಕವಾಗಿ ಸಮೃದ್ಧವಾಗಿರುವುದರಿಂದ ಜ್ವರದ ಸಂದರ್ಭ ದೇಹದಲ್ಲಿ ನಿರ್ಜಲೀಕರಣವಾಗದಂತೆ ಇದು ತಡೆಯುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಅಂದರೆ, ಖನಿಜಾಂಶಗಳಾದ ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂಗಳನ್ನು ಒದಗಿಸಿ ಸಹಾಯ ಮಾಡುತ್ತದೆ.
3. ಹಣ್ಣುಗಳು: ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜ ಲವಣಗಳೂ ಇರುವುದರಿಂದ ಡೆಂಗ್ಯು ಸಂದರ್ಭ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ತಿನ್ನುವುದು ಬಹಳ ಮುಖ್ಯ. ಹಣ್ಣುಗಳಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ರೋಗಗಳ ವಿರುದ್ಧ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸುಲಭವಾಗಿ ಜೀರ್ಣ ಮಾಡಬಹುದಾದ್ದರಿಂದ ಹಾಗೂ ಇವುಗಳಲ್ಲಿ ಹೇರಳವಾಗಿ ಪೋಷಕಾಂಶಗಳು ಬಹುಬೇಗನೆ ದೇಹ ಸೇರುವುದರಿಂದ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.
4. ಹರ್ಬಲ್ ಚಹಾಗಳು: ಶುಂಠಿ, ಕ್ಯಾಮೋಮೈಲ್ ಮತ್ತಿತರ ಹರ್ಬಲ್ ಚಹಾಗಳು ಜ್ವರದ ಸಂದರ್ಭ ಕುಡಿದಾಗ ಹಾಯೆನಿಸುವಂತೆ ಮಾಡಬಲ್ಲ ಶಕ್ತಿ ಇದೆ. ಸಾಮಾನ್ಯ ಚಹಾ, ಕಾಫಿಗಳು ರುಚಿಯೆನಿಸಿದರೂ, ಜ್ವರದ ಸಂದರ್ಭ ಇಂತಹ ಹರ್ಬಲ್ ಚಹಾಗಳು ಒಳ್ಳೆಯದು. ಶುಂಠಿ ಚಹಾದಲ್ಲಿ, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೇರಳವಾಗಿ ಇರುವುದರಿಂದ ಜ್ವರದ ಹಲವು ಲಕ್ಷಣಗಳನ್ನು ಗುಣಪಡಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.
5. ಧಾನ್ಯಗಳು: ಧಾನ್ಯಗಳಿಂದ ಮಾಡಿದ ಆಹಾರಗಳಾದ ಅನ್ನ, ಓಟ್ಸ್, ಇಡ್ಲಿ, ದೋಸೆ, ಉಪ್ಪಿಟ್ಟು, ದಲಿಯಾ ಮತ್ತಿತರ ಆಹಾರಗಳ ಸೇವನೆ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಸರಿಯಾಗಿ ಬೇಯಿಸಿದ, ಹೆಚ್ಚು ಅನಗತ್ಯ ಮಸಾಲೆಗಳಿಲ್ಲದ, ಹದವಾದ ತಿನಿಸುಗಳು, ಹಬೆಯಲ್ಲಿ ಬೇಯಿಸಿದ ತಿಂಡಿಗಳು ಇಂತಹ ಸಂದರ್ಭ ಅತ್ಯಂತ ಒಳ್ಳೆಯದು.
6. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿಯೂ, ವಿಟಮಿನ್, ಖನಿಜಾಂಶಗಳು ಹಾಗೂ ಲವಣಗಳೂ ಇರುವುದರಿಂದ ಇವುಗಳ ಸೇವನೆ ಅತ್ಯಂತ ಮುಖ್ಯ. ಸಹಜವಾಗಿ ಸುಲಭವಾಗಿ ಕರಗಬಲ್ಲ ಹಸಿರು ತರಕಾರಿಗಳು, ಬೇಯಿಸಿ ತಿನ್ನಬಹುದಾದ, ಸೂಪ್ ಮಾಡಿ ಕುಡಿಯಬಹುದಾದ ಹೀಗೆ, ಹಲವು ಬಗೆಯಲ್ಲಿ ಹಸಿರು ತರಕಾರಿಗಳನ್ನು ಆದಷ್ಟು ಹೊಟ್ಟೆ ಸೇರುವಂತೆ ಮಾಡಬಹುದು.
7. ಪ್ರೊಟೀನ್: ಪ್ರೊಟೀನ್‌ನಿಂದ ಸಮೃದ್ಧ ಆಹಾರ ಈ ಸಂದರ್ಭ ಅತ್ಯಂತ ಅಗತ್ಯ. ಚಿಕನ್, ಟೋಫು, ಮೀನು ಇತ್ಯಾದಿಗಳನ್ನೂ ಹಿತಮಿತವಾಗಿ ಸೇವಿಸಿ ಪ್ರೊಟೀನ್‌ನ ಪೂರೈಕೆ ಮಾಡಬಹುದು. ಚೆನ್ನಾಗಿ ಬೇಯಿಸಿದ, ಸಮೃದ್ಧ ಆಹಾರಗಳನ್ನೂ ಸೇವಿಸುವ ಮೂಲಕ ದೇಹದಲ್ಲಿ ಮತ್ತೆ ಮಾಂಸಖಂಡಗಳು ಬಲಗೊಂಡು ಆರೋಗ್ಯ ಹೊಂದುವತ್ತ ಹೆಜ್ಜೆ ಹಾಕಬಹುದು.
ಆರೋಗ್ಯ
Side Effects of Sugar: ಸಿಹಿ ತಿನ್ನಬೇಕು, ಆದರೆ ಎಷ್ಟು?
Side Effects of Sugar: ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ (Added Sugar) ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು.
ಬೆಂಗಳೂರು: ಶ್ರಾವಣದ ಹಬ್ಬಗಳ ಸಾಲು (Side Effects of Sugar) ಮುಗಿದಿದೆ. ಮೊನ್ನೆಯಷ್ಟೇ ಭಾದ್ರಪದದ ಚತುರ್ಥಿಯನ್ನೂ ಆಚರಿಸಿದ್ದಾಯ್ತು. ಇನ್ನೀಗ ನವರಾತ್ರಿ, ಆದಾದ ಮೇಲೆ ದೀಪಾವಳಿ. ಇಷ್ಟೊಂದು ಹಬ್ಬಗಳ ಆಚರಣೆ ಎಂದರೆ ಹುಡುಗಾಟವೇ? ಹೀಗೆ ಸಾಲು ಸಾಲು ಹಬ್ಬಗಳನ್ನು ಸಿಹಿ ತಿನ್ನದೆ ಕಳೆಯುವುದಾದರೂ ಹೇಗೆ? ಸಿಹಿ ಇಲ್ಲದ್ದು ಹಬ್ಬ ಎನಿಸೀತೆ? ಹಾಗೆಂದು ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?
ಸಕ್ಕರೆ ಬೇಕು!
ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.
ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂ ಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ.
ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?
ಹೆಚ್ಚು ತಿಂದರೇನಾಗುತ್ತದೆ?
ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.
ಟೈಪ್-2 ಮಧುಮೇಹ
ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್‌ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್-2 ಮಧುಮೇಹ ಎನ್ನುತ್ತೇವೆ.
ಬೊಜ್ಜು
ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್, ಸೋಡಾ, ಕೇಕ್ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?
ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು
ಹೃದಯದ ತೊಂದರೆಗಳು
ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.
ಫ್ಯಾಟಿ ಲಿವರ್
ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್‌ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.
ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.
ಆರೋಗ್ಯ
Pneumonia Remedy: ನ್ಯುಮೋನಿಯಾಗೆ ಸೂಪರ್‌ಫುಡ್ ಯಾವುವೆಂದು ತಿಳಿದಿದೆಯೇ?
ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
ಕೆಲವೊಮ್ಮೆ ಕೆಲವರಿಗೆ ಸಾಮಾನ್ಯ ಜ್ವರ ನ್ಯುಮೋನಿಯಾಕ್ಕೆ (pneumonia) ತಿರುಗುವುದುಂಟು. ಸಾಮಾನ್ಯ ಜ್ವರ (viral fever) ಎಂದುಕೊಂಡು ಔಷಧಿಗಳನ್ನು ತೆಗೆದುಕೊಂಡರೂ, ದಿನಗಳೆದಂತೆ, ಕಫ, ಮೂಗು ಕಟ್ಟಿರುವುದು, ಕಡಿಮೆಯಾಗದ ಜ್ವರ, ಜೊತೆಗೆ ಚಳಿ ಎಲ್ಲವೂ ಉಲ್ಬಣಿಸಿ ಇದು ನ್ಯುಮೋನಿಯಾ ಎಂಬ ತೀರ್ಮಾನಕ್ಕೆ ವೈದ್ಯರು ಪರೀಕ್ಷೆಗಳಿಂದ ದೃಢಪಡಿಸುತ್ತಾರೆ. ಶ್ವಾಸಕೋಶದೊಳಗಿನ ಗಾಳಿಚೀಲಗಳಿಗೂ ಇನ್‌ಫೆಕ್ಷನ್ (Infection) ಹರಡಿಕೊಂಡು ಎದೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ನಿರ್ಜಲೀಕರಣ (dehydration), ನಿತ್ರಾಣ, ಉಬ್ಬಸದಂತಹ ಸಮಸ್ಯೆ, ಕೆಮ್ಮಿನ ಸಂದರ್ಭ ಹಸಿರು ಮಿಶ್ರಿತ ಹಳದಿ ಬಣ್ಣದ ಕಫ ಹೊರಗೆ ಬರುವುದು, ಕೆಲವೊಮ್ಮೆ ರಕ್ತವೂ ಸೇರಿ ಕಫ ಹೊರಗೆ ಬರುವುದು ಇತ್ಯಾದಿಗಳೆಲ್ಲ ಆಗಿ ನ್ಯುಮೋನಿಯಾ ಬಹಳವಾಗಿ ಕಾಡುತ್ತದೆ. ಹೀಗೆ ನ್ಯುಮೋನಿಯಾ ಜ್ವರದಿಂದ ಬಳಲಿ ವೈದ್ಯರ ಆರೈಕೆಯ ನಂತರ ಗುಣಮುಖರಾದರೂ ಕೂಡಾ, ಬಹಳ ದಿನಗಳವರೆಗೆ ಶಿಸ್ತುಬದ್ಧ ಆಹಾರ ಸೇವನೆ, ಆರೋಗ್ಯದ ಬಗ್ಗೆ ಕಾಳಜಿ ಎಲ್ಲವೂ ಅತ್ಯಂತ ಅಗತ್ಯ. ಇದರ ನಿರ್ಲಕ್ಷ್ಯ ಸಲ್ಲದು. ಅತ್ಯಂತ ಕಾಳಜಿಯುಕ್ತ ಆಹಾರ ಸೇವನೆಯೂ (Food habit) ಅಗತ್ಯ. ಹಾಗಾಗಿ ಬನ್ನಿ, ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ (pneumonia cure) ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
1. ಜೇನುತುಪ್ಪ: ಜೇನುತುಪ್ಪ ಶ್ವಾಸಕೋಶದ ಸಮಸ್ಯೆಗಳಿಗೆ ಅತ್ಯಂತ ಒಳ್ಳೆಯದು. ಇದು ಕಫ, ಶೀತ, ನೆಗಡಿ ಮತ್ತಿತರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅಥವಾ ಜೇನುತುಪ್ಪದ ಜೊತೆಗೆ ತುಳಸಿರಸ, ಶುಂಠಿರಸ ಸೇರಿಸಿ ಸೇವಿಸುವುದರಿಂದ ಕಫ ಬಹುಬೇಗನೆ ಕರಗಿ ಶ್ವಾಸಕೋಶಗಳಿಗೆ ಆರಾಮ ದೊರೆಯುತ್ತದೆ.
2. ಅರಿಶಿನ: ನಿತ್ಯವೂ ಭಾರತೀಯರು ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದು. ಇದನ್ನು ನಮ್ಮ ಹಲವು ಸಮಸ್ಯೆಗಳಿಗೂ ನಮಗೆ ಬಳಸಿ ಗೊತ್ತು. ಯಾಕೆಂದರೆ ಇದು ತನ್ನಲ್ಲಿ ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದರ ಸೇವನೆಯಿಂದಲೂ ಕೂಡಾ ಇನ್‌ಫೆಕ್ಷನ್ ಬಹುಬೇಗನೆ ದೇಹದಿಂದ ವಾಸಿಯಾಗಿ, ಆರೋಗ್ಯ ನಮ್ಮದಾಗುತ್ತದೆ.
3. ಶುಂಠಿ: ಶೀತ, ಕಫ, ನೆಗಡಿಯಂತಹ ಸಮಸ್ಯೆಗಳಿಗೆ ಎಲ್ಲರಿಗೂ ಮೊದಲು ನೆನಪಾಗುವ ಮನೆಮದ್ದು ಎಂದರೆ ಶುಂಠಿ. ಈ ಶುಂಠಿಯೂ ನ್ಯುಮೋನಿಯಾದಂತಹ ಸಮಸ್ಯೆಗೂ ಕೂಡಾ ಅತಯುತ್ತಮ ಕೆಲಸವನ್ನೇ ಮಾಡುತ್ತದೆ. ಜೇನುತುಪ್ಪದ ಜೊತೆ ಶುಂಠಿ ರಸ ಸೇರಿಸಿ ಸೇವನೆ ಮಾಡುವುದು, ಶುಂಠಿ ಸೇರಿಸಿ ಕಷಾಯ ಮಾಡುವುದು ಅಥವಾ ಶುಂಠಿ ಟೀ ಮಾಡಿ ಕುಡಿಯುವುದರಿಂದಲೂ ಸಮಸ್ಯೆಗೆ ಉತ್ತಮ ಫಲ ಸಿಗುತ್ತದೆ.
ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?
4. ಸಿಟ್ರಸ್ ಹಣ್ಣುಗಳು: ನಿಂಬೆಹಣ್ಣು, ಮುಸಂಬಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್ ಸಿ ಇರುವುದರಿಂದ ಇವು ಕೂಡಾ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ನೆರವಾಗಬಲ್ಲುದು. ನ್ಯುಮೋನಿಯಾ ನಂತರಕ್ಕಿಂತ, ಇವನ್ನು ಮೊದಲೇ ನಮ್ಮ ಆಹಾರಗಳಲ್ಲಿ ಸೇವಿಸುವುದರಿಂದ ದೇಹಕ್ಕೆ ಮೊದಲೇ ವಿಟಮಿನ್ ಸಿ ಸರಿಯಾಗಿ ಲಭ್ಯವಾಗುವ ಮೂಲಕ ಇಂತಹ ಇನ್‌ಫೆಕ್ಷನ್‌ಗಳಿಂದ ಇವು ನಮ್ಮನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಇವು ಹೆಚ್ಚಿಸುವ ಮೂಲಕ ಇನ್‌ಫೆಕ್ಷನ್‌ಗಳಿಂದ ನಮ್ಮನ್ನು ದೂರವಿರಿಸುತ್ತವೆ.
5. ಬೀಜಗಳು: ಬಾದಾಮಿ, ಪಿಸ್ತಾ, ವಾಲ್‌ನಟ್‌ನಂತಹ ಬೀಜಗಳನ್ನು ಸೇವನೆ ಮಾಡುವ ಮೂಲಕವೂ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಹಾಗೂ ಪೋಷಕಾಂಶಗಳನ್ನು ನೀಡುತ್ತಾ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
-
ವೈರಲ್ ನ್ಯೂಸ್6 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ11 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ15 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema8 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ18 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ಬಾಲಿವುಡ್11 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್11 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
-
ಪ್ರಮುಖ ಸುದ್ದಿ4 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ