ಆರೋಗ್ಯ
NHM Workers Protest: ಉಪವಾಸನಿರತ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಅಸ್ವಸ್ಥ; ನಾ ಕೊಡೆ ನೀ ಬಿಡೆ ಪರಿಸ್ಥಿತಿ
ನೌಕರಿ ಕಾಯಂಗಾಗಿ (permanent job) ಆಗ್ರಹಿಸಿ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಭಟನೆ ಮಂಗಳವಾರ 30ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಲಿಖಿತ ಆದೇಶ ಬರುವವರೆಗೂ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಬೆಂಗಳೂರು: ಆರೋಗ್ಯ ಇಲಾಖೆಯ ಗುತ್ತಿಗೆ- ಹೊರಗತ್ತಿಗೆ ನೌಕರರ (NHM Workers Protest) ಪ್ರತಿಭಟನೆಯು 30ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪ್ರತಿಭಟನಾನಿರತ ಎನ್‌ಎಚ್‌ಎಂ ನೌಕರರು ಅಸ್ವಸ್ಥಗೊಂಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು.
ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ-ಹೊರಗತ್ತಿಗೆ ನೌಕರರು ನೌಕರಿ ಕಾಯಂ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಾ.14ಕ್ಕೆ 30 ದಿನ ಪೂರೈಸಿದ್ದು, ಬೇಡಿಕೆಗಳಿಗೆ ಮೇಲಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ. ಮಂಗಳವಾರ 30 ಸಾವಿರ ನೌಕರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ನೌಕರಿ ಕಾಯಂ ಮಾಡಲು ಸಾಧ್ಯವಿಲ್ಲ. ಆದರೆ, ಯೋಜನೆ ಇರುವವರೆಗೆ ಸೇವೆಯಿಂದ ತೆಗೆಯುವುದಿಲ್ಲ ಎಂಬ ಬಗ್ಗೆ ಖಾತ್ರಿ ಕೊಡಬಹುದು ಎಂದು ಈ ಹಿಂದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದರು. ಜತೆಗೆ ಆರೋಗ್ಯ ಇಲಾಖೆಯಲ್ಲಿ 21 ಸಾವಿರ ಗುತ್ತಿಗೆ ನೌಕರರು ಇದ್ದು, ಸರ್ಕಾರದ ಗಮನ ಸೆಳೆಯಲು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಕೆಲಸಕ್ಕೆ ಹಾಜರಾಗದ ವೈದ್ಯರಿಗೆ ನೋಟಿಸ್ ಜಾರಿ
ರಾಮನಗರ ಜಿಲ್ಲಾಸ್ಪತ್ರೆಯ ದಂತ ತಜ್ಞ ಅರುಣ್ ಕೆ.ಪಿ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಕೆಲಸಕ್ಕೆ ಗೈರಾಗಿದ್ದರಿಂದ ಆಸ್ಪತ್ರೆ ಕೆಲಸಕ್ಕೆ ಸಮಸ್ಯೆಯಾಗಿದೆ. 3 ದಿನಗಳಲ್ಲಿ ಸಮಜಾಯಿಷಿ ಕೊಡಿ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕಾರಣ ಹೇಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದು ಕಡೆ ಶೇ.15ರಷ್ಟು ವೇತನ ಹೆಚ್ಚಳದ ಆದೇಶ ಹೊರಡಿಸಿದರೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮುಂದುವರಿಸಿದ್ದಾರೆ, ಇದರಿಂದ ರೋಗಿಗಳಿಗೆ ಅಡಚಣೆ ಉಂಟಾಗಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಕೆಲಸಕ್ಕೆ ಹಾಜರಾಗದವರಿಗೆ ವೇತನ ನೀಡದಂತೆ, ಹಾಜರಾತಿ ಪರಿಶೀಲಿಸಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ಪ್ರತಿಭಟನೆ?
ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡಲಾಗುತ್ತಿದೆ. ರಾಜ್ಯದಲ್ಲೂ ಈ ಕೆಲಸ ಮಾಡಬೇಕು. ಎನ್‌ಎಚ್‌ಎಂ ನೌಕರರು ಮಳೆ, ಬಿಸಿಲು ಎನ್ನದೆ ಕೊರೊನಾ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದರು. ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಇದನ್ನೂ ಓದಿ: Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಅಸ್ವಸ್ಥಗೊಂಡ ನೌಕರರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತಿರುವ ವಿಡಿಯೊ ಇಲ್ಲಿದೆ
ಹಾಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕವಾಗಿರುವ ಒಳಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ
14 ತಿಂಗಳು ಮೂತ್ರ ವಿಸರ್ಜನೆ ಸಾಧ್ಯವಾಗದೆ ಪರಿತಪಿಸಿದ ಮಹಿಳೆ; ವರ್ಷದ ಬಳಿಕ ಗೊತ್ತಾಯ್ತು ಈ ಅಪರೂಪದ ಕಾಯಿಲೆ ಹೆಸರು
ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದರು. ಸ್ಕ್ಯಾನ್ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್ ಮೂತ್ರ ತುಂಬಿದೆ ಎಂದು ಹೇಳಿದರು.
ಯುನೈಟೆಡ್ ಕಿಂಗ್ಡಮ್ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಯೇ ಇಲ್ಲವಂತೆ..! ಅಂದರೆ ಆಕೆ ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸಲೇ ಇಲ್ಲ. ಅದೆಷ್ಟೇ ನೀರು, ಜ್ಯೂಸ್ ಏನೇ ಕುಡಿಯಲಿ, ಆಕೆಗೆ ಮೂತ್ರ ಹೊರಹೋಗುತ್ತಿರಲಿಲ್ಲ. ಮೂತ್ರಕ್ಕೆ ಹೋಗಬೇಕು ಎಂದು ಆಕೆಗೆ ಅನ್ನಿಸಿದರೂ, ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆರೋಗ್ಯವಾಗಿಯೇ ಇದ್ದೆ. 2020ರ ಅಕ್ಟೋಬರ್ನಲ್ಲಿ ಒಂದು ದಿನ ಬೆಳಗ್ಗೆ ಎದ್ದೆ. ಅಂದು ಮೂತ್ರ ಮಾಡಲು ಆಗಲಿಲ್ಲ. ದಿನವೆಲ್ಲ ಹಾಗೇ ಕಳೆದೆ. ನನಗೆ ವಿಚಿತ್ರ ಎನ್ನಿಸಿತು. ಆತಂಕವಾಯಿತು. ವೈದ್ಯರ ಬಳಿ ಹೋದಾಗಲೇ ಗೊತ್ತಾಯಿತು ನನಗೆ ‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಬಂದಿದ್ದು. ಈ ಕಾಯಿಲೆ ನನ್ನ ಜೀವನವನ್ನು ಸಂಪೂರ್ಣವಾಗಿಯೇ ಬದಲಿಸಿಬಿಟ್ಟಿತು. ಹಾಸಿಗೆಯೇ ಮೇಲೆ ಜೀವನ ಕಳೆವಂತಾಯ್ತು. ಎದ್ದು ಟಾಯ್ಲೆಟ್ಗೂ ಹೋಗದ ಸ್ಥಿತಿ ತಲುಪಿದೆ’ ಎಂದು ಎಲ್ಲೆ ಬರೆದುಕೊಂಡಿದ್ದಾರೆ.
ಅಂದಹಾಗೇ ಈ ಫೌಲರ್ ಸಿಂಡ್ರೋಮ್ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಮೂತ್ರಕೋಶದ ತುದಿಯಲ್ಲಿರುವ ಸ್ನಾಯುಗಳು ತೆರೆಯುವುದು ಮತ್ತು ಬಂದ್ ಆಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮೂತ್ರ ಅದರಷ್ಟಕ್ಕೇ ಹೊರಹೋಗುವುದಿಲ್ಲ. ಇದು ಸಾಮಾನ್ಯವಾಗಿ ಯುವತಿಯರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಹೆಚ್ಚಾಗಿ ಹೆರಿಗೆಯಾದ ಬಳಿಕ, ಕೆಲವು ಸರ್ಜರಿ ನಂತರ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದ್ದರೂ, ಅದರ ಹೊರತಾಗಿ ಯಾಕೆ ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲ.
ಈ ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದರು. ಸ್ಕ್ಯಾನ್ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್ ಮೂತ್ರ ತುಂಬಿದೆ ಎಂದು ಹೇಳಿ, ಅದನ್ನು ಟ್ಯೂಬ್ ಹಾಕಿ ಹೊರತೆಗೆದು, ಕಳಿಸಿದರು. ಆದರೆ ಮರುದಿನವೂ ಅದೇ ಸಮಸ್ಯೆಯಾಯಿತು. ಈ ಸಮಸ್ಯೆಗೆ ಕಾರಣ ಗೊತ್ತಾಗಲಿಲ್ಲ. ಹಲವು ತಪಾಸಣೆಗಳು, ಔಷಧಗಳು, ಚಿಕಿತ್ಸೆಯ ಬಳಿಕವೂ ಅದೇನು ರೋಗ ಗೊತ್ತಾಗಲಿಲ್ಲ. ನಂತರ ಎಲ್ಲೆ, ಮನೆಯಲ್ಲೇ ಮೂತ್ರವನ್ನೂ ಸ್ವಯಂ ಆಗಿ ತೆಗೆಯುವುದನ್ನು ಕಲಿತರು.
ಇದನ್ನೂ ಓದಿ: Harrassment : ಕಾಫಿ ತೋಟದೊಳಗೆ ಎಳೆದೊಯ್ದು ಯುವತಿಯ ಅತ್ಯಾಚಾರ ಯತ್ನ; ಒಬ್ಬ ಆರೋಪಿ ಸೆರೆ, ಇನ್ನಿಬ್ಬರು ಪರಾರಿ
ಹೀಗೆ ಒಂದು ವರ್ಷಕ್ಕೂ ಅಧಿಕ ಕಾಲದ ಬಳಿಕ 2021ರ ಡಿಸೆಂಬರ್ನಲ್ಲಿ ಅವರಿಗೆ ಫೌಲರ್ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ನೀವು ಜೀವನ ಪರ್ಯಂತ ಹೀಗೆ ತೂರುನಳಿಕೆಯ ಮೂಲಕವೇ ಮೂತ್ರವನ್ನು ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದೇ ಜನವರಿಯಲ್ಲಿ ಎಲ್ಲೆ ಆಡಮ್ಸ್ ಒಂದು ಸರ್ಜರಿಗೂ ಒಳಗಾಗಿದ್ದಾರೆ. ಅದಾದ ಮೇಲೆ ಆಕೆ ತೂರು ನಳಿಕೆ ಬಳಕೆ ಕಡಿಮೆ ಮಾಡಿದ್ದಾರೆ. ಶೇ.50ರಷ್ಟು ಸಮಸ್ಯೆ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಆರೋಗ್ಯ
Lung Food: ಶ್ವಾಸಕೋಶ ಆರೋಗ್ಯವಾಗಿಡಲು ಈ ಎಲ್ಲ ಆಹಾರಗಳನ್ನು ಸೇವಿಸಿ!
ನಾವು ಉಸಿರಾಡುವ ಗಾಳಿ ಇಂದು ಎಲ್ಲೆಲ್ಲೂ ಕಲಿಶಿತವಾಗಿದೆ. ವಾಯು ಮಾಲಿನ್ಯದಿಂದ, ಕೊರೋನಾದ ಕಾರಣದಿಂದ, ಧೂಮಪಾನದ ಚಟದಿಂದ ಹೀಗೆ ನಾನಾ ಕಾರಣಗಳಿಂದ ಇಂದು ಶ್ವಾಸಕೋಶದ ಆರೋಗ್ಯ ಹಲವರಲ್ಲಿ ಕ್ಷೀಣಿಸಿದೆ. ನಗರಗಳಲ್ಲಿ ಶುದ್ಧ ಗಾಳಿಯ ಕೊರತೆಯೂ ಇದರ ಕಾರಣಗಳಲ್ಲೊಂದು. ಹಾಗಾಗಿ ನಾವು ಸೇವಿಸುವ ಆಹಾರದ ವಿಚಾರದಲ್ಲಿ ನಾವು ಸಾಕಷ್ಟು ಜಾಗರೂಕರಾಗಿರಬೇಕು. ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾದ, ಜೀವಸತ್ವ, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಯಾವೆಲ್ಲ ಆಹಾರದ ಸೇವನೆ ಒಳ್ಳೆಯದು (lung food) ಎಂಬುದನ್ನು ನೋಡೋಣ.
1. ಬಸಳೆ: ಬಸಳೆಯಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳಿರುವುದರಿಂದ ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಹಾಗೂ ಶ್ವಾಸಕೋಶ ಸಂಬಂಧೀ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬಸಳೆಯಲ್ಲಿ ಅತ್ಯಂತ ಹೆಚ್ಚು ವಿಟಮಿನ್ ಸಿ ಇದ್ದು ಇದು ಶ್ವಾಸಕೋಶದ ಕ್ರಿಯಾಶೀಲತೆಯನ್ನು ಚುರುಕುಗೊಳಿಸುತ್ತದೆ.
2. ಬ್ರೊಕೋಲಿ: ಬ್ರೊಕೋಲಿ ಎಂಬ ಹೂವಿನಂತಹ ತರಕಾರಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಶ್ವಾಸಕೋಶದ ಆರೋಗ್ಯಕ್ಕೆ ಪೂರಕ. ಬ್ರೊಕೋಲಿ ಸೇವಿಸುತ್ತಿದ್ದರೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ದೂರವಿರಬಹುದು.
3. ಬೆರ್ರಿ ಹಣ್ಣುಗಳು: ಆಂಟಿ ಆಕ್ಸಿಡೆಂಟ್‌ಗಳು ಬೇಕಾದಷ್ಟಿರುವ ಬೆರ್ರಿ ಹಣ್ಣಿನಲ್ಲಿ ವಾತಾವರಣದಲ್ಲಿರುವ ಕಲುಶಿತಗಾಳಿಯಿಂದ ಶ್ವಾಸಕೋಶಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ. ನಿತ್ಯವೂ ಬೆರ್ರಿ ಸೇವಿಸುತ್ತಿದ್ದರೆ ಶ್ವಾಸಕೋಶ ಹೆಚ್ಚು ಚುರುಕಾಗುವುದಲ್ಲದೆ, ಅಸ್ತಮಾದಂತಹ ತೊಂದರೆ ಇರುವ ಮಂದಿಗೂ ಕೊಂಚ ಪರಿಹಾರ ದೊರೆಯುತ್ತದೆ.
4. ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿಯೂ ಸೇರಿದಂತೆ ದೇಹದಲ್ಲಿರುವ ಉರಿಯೂತನ್ನು ಕಡಿಮೆಗೊಳಿಸುವ ತಾಕತ್ತಿದೆ. ಶ್ವಾಸಕೋಶದ ಆರೋಗ್ಯಕ್ಕೆ ಬೆಳ್ಳುಳ್ಳಿ ಬಹಳ ಒಳ್ಳೆಯದು. ಬೆಳ್ಳುಳ್ಳಿಯ ನಿತ್ಯ ಸೇವನೆಯಿಂದ ಶ್ವಾಸಕೋಶದ ಇನ್‌ಫೆಕ್ಷನ್‌ನಂತಹ ಸಮಸ್ಯೆಗಳೂ ದೂರಾಗುತ್ತದೆ.
5. ಅರಿಶಿನ: ಅರಿಶಿನದಲ್ಲಿ ದೇಹದ ಉರಿಯೂತವನ್ನು ಕಡಿಮೆ ಮಾಡುವ ಕರ್‌ಕ್ಯುಮಿನ್ ಎಂಬ ಅಂಶವು ಇದೆ. ಹಾಗಾದಿ ಶ್ವಾಸಕೋಶದಲ್ಲಿರುವ ಶೀತ, ಕಫದಂತಹ ಸಮಸ್ಯೆಗೂ ಉರಿಗೂ ಇದು ಉತ್ತಮ ಪರಿಹಾರ ನೀಡುವುದಲ್ಲದೆ ಶ್ವಾಸಕೋಶದ ಕಾರ್ಯವನ್ನು ಚುರುಕುಗೊಳಿಸುತ್ತದೆ.
6. ಶುಂಠಿ: ಅರಿಶಿನದಂತೆಯೇ ಶ್ವಾಸಕೋಶಕ್ಕೆ ರಕ್ಷಣೆ ಒದಗಿಸುವ, ಶ್ವಾಸಕೋಶದ ಕೆಲಸವನ್ನು ಚುರುಕಾಗಿಸುವ, ಉರಿಯೂತವನ್ನು ಕಡಿಮೆಗೊಳಿಸುವ ಇನ್ನೊಂದು ಆಹಾರ ಶುಂಠಿ. ಶುಂಠಿ ಟೀ ಅಥವಾ ಶುಂಠಿಯನ್ನು ನಿತ್ಯ ಬಳಸುವಿಕೆಯಿಂದ ಶ್ವಾಸಕೋಶದ ಕೆಲಸವನ್ನು ಚುರುಕಾಗಿಸಬಹುದು.
ಶ್ವಾಸಕೋಶದ ಆರೋಗ್ಯಕ್ಕೆ ಕೆಲವು ಸಲಹೆಗಳು:
1. ಧೂಮಪಾನವು ಇಂದು ಶ್ವಾಸಕೋಶದ ಕ್ಯಾನ್ಸರ್ ಹಾಗೂ ರೋಗಗಳಿಗೆ ಪ್ರಮುಖ ಕಾರಣ. ಶ್ವಾಸಕೋಶವನ್ನು ಆರೋಗ್ಯವಾಗಿ ಇರಿಸಿಕೊಳ್ಳಬೇಕೆಂದರಂತೆ ಮೊದಲು ಧೂಮಪಾನದಂತಹ ಕೆಟ್ಟ್ ಚಟಗಳಿದ್ದರೆ ಅದನ್ನು ಬಿಡುವುದು ಅತ್ಯಗತ್ಯ.
ಇದನ್ನೂ ಓದಿ: Health Tips: ನಾರು ಒಳ್ಳೆಯದು; ಆದರೂ ಅತಿಯಾಗಿ ತಿನ್ನಬೇಡಿ!
2. ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ನಿತ್ಯ ವ್ಯಾಯಾಮ ಅತ್ಯಗತ್ಯ. ಪ್ರತಿನಿತ್ಯ ೩೦ ನಿಮಿಷದ ವ್ಯಾಯಾಮ, ನಡಿಗೆ ಶ್ವಾಸಕೋಶವನ್ನು ಚುರುಕಾಗಿರಿಸುತ್ತದೆ.
3. ವಾಯು ಮಾಲಿನ್ಯ ಅತಿಯಾಗಿದ್ದಾಗ ಹೊರಗಡೆ ವ್ಯಾಯಾಮ, ನಡಿಗೆ ಇತ್ಯಾದಿಗಳನ್ನು ಮಾಡಬೇಡಿ.
4. ಕೈಗಳನ್ನು ಯಾವಾಗಲೂ ಆಗಾಗ ತೊಳೆಯುತ್ತಿರಿ. ಕೈಗಳನ್ನು ಮುಖಕ್ಕೆ ಆಗಾಗ ಸ್ಪರ್ಶಿಸುತ್ತಿರುವುದರಿಂದ ಕೈಗಳ ಮೂಲಕ ಮೂಗಿನಿಂದ ಶ್ವಾಸಕೋಶಕ್ಕೆ ಇನ್‌ಫೆಕ್ಷನ್ ರವಾನೆಯಾಗಬಹುದು. ಶ್ವಾಸಕೋಶದ ಸಮಸ್ಯೆ ಇರುವ ವ್ಯಕ್ತಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
5. ಅಗತ್ಯವಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಫ್ಲೂ, ನ್ಯುಮೋನಿಯಾ ಹಾಗೂ ಇತರ ಶ್ವಾಸಕೋಶ ಸಂಬಂಧೀ ರೋಗಗಳಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ.
ಉತ್ತಮ ಆಹಾರ, ವ್ಯಾಯಾಮದಂತಹ ಚಟುವಟಿಕೆಗಳು ಹಾಗೂ ಶ್ವಾಸಕೋಶಕ್ಕೆ ಪೂರಕ ಆಹಾರ ಸೇವನೆಯಿಂದ ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಕೆಟ್ಟ ಚಟಗಳಿಂದ ದೂರವಿರುವುದು ಹಾಗೂ ಶಿಸ್ತಿನ ಜೀವನ ರೂಢಿಸಿಕೊಳ್ಳುವುದರಿಂದ ನಿಯಮಿತವಾಗಿ ಉಸಿರಾಟದ ವ್ಯಾಯಾಮ, ಪ್ರಾಣಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶವನ್ನು ಚುರುಕಾಗಿಟ್ಟುಕೊಳ್ಳಬಹುದು.
ಇದನ್ನೂ ಓದಿ: Is Mango Good For Diabetes: ಮಧುಮೇಹಿಗಳು ಮಾವಿನಹಣ್ಣು ತಿನ್ನಬಹುದೇ?
ಆರೋಗ್ಯ
Tuberculosis Day: ಕ್ಷಯರೋಗ ಮುಕ್ತ ದೇಶ ನಿರ್ಮಾಣಕ್ಕೆ ಶ್ರಮಿಸೋಣ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
Tuberculosis Day: “ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷಣೆಯೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಎಲ್ಲರೂ ಒಟ್ಟಾಗಿ ಕ್ಷಯರೋಗ ಮುಕ್ತ ನಾಡನ್ನು ಕಟ್ಟಲು ಪಣ ತೊಡಲಾಯಿತು.
ಕಾರವಾರ: “ದೇಶವನ್ನು ಪೋಲಿಯೋದಿಂದ ಮುಕ್ತ ಮಾಡಲು ಹೇಗೆ ನಾವೆಲ್ಲರೂ ಶ್ರಮವಹಿಸಿದ್ದೆವೋ ಹಾಗೆಯೇ ಇಂದು ಕ್ಷಯರೋಗವನ್ನು (Tuberculosis Day) ದೇಶದಿಂದ ಮುಕ್ತ ಮಾಡಲು ನಾವೆಲ್ಲರೂ ಶ್ರಮವಹಿಸುವ ಅಗತ್ಯವಿದೆ” ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇವರ ಆಶ್ರಯದಲ್ಲಿ “ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷಣೆಯೊಂದಿಗೆ ಆಯೋಜಿಸಲಾದ್ದ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯದ ಸಮಸ್ಯೆಗೆ ಒಳಗಾದವರನ್ನು ಸಮಾಜ ನೋಡುವ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ನಾವು ಕೋವಿಡ್ ಸಮಯದಲ್ಲಿ ನೋಡಿದ್ದೇವೆ. ರೋಗಗಳು ಮೇಲು-ಕೀಳು, ಬಡವ-ಶ್ರೀಮಂತ ಎನ್ನದೇ ಪ್ರತಿಯೊಬ್ಬರಿಗೂ ಬರುವಂಥದ್ದಾಗಿದೆ. ಕೊರೋನಾ ಸಂದರ್ಭದಲ್ಲಿ ರೋಗಗ್ರಸ್ತರಾದ ಎಲ್ಲರೂ ಬದುಕಿದರೆ ಸಾಕು ಎನ್ನುವ ಪರಿಸ್ಥಿತಿಯನ್ನು ನಾವು ಈಗಾಗಲೇ ಕಣ್ಣಾರೆ ಕಂಡಿದ್ದೇವೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಹೀಗಾಗಿ ಕ್ಷಯ ರೋಗ ಅಥವಾ ಇತರೆ ರೋಗದ ಸಮಸ್ಯೆಗಳಿಗೆ ಒಳಗಾದವರನ್ನು ಗುರುತಿಸಿ ಅಂಥವರಿಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯ ಇದೆ” ಎಂದರು.
“ಜನರಲ್ಲಿ ರೋಗಗಳ ಬಗ್ಗೆ ಭಯ ಇರಬಾರದು. ಅವುಗಳ ಬಗ್ಗೆ ಅರಿವು ಮತ್ತು ಜಾಗೃತಿ ಇರಬೇಕು. ಕ್ಷಯ ರೋಗಕ್ಕೆ ಒಳಗಾದವರು ವೈದ್ಯರು ನೀಡುವ ನಿರ್ದೇಶನ ಮತ್ತು ಚಿಕಿತ್ಸೆಯನ್ನು ಚಾಚೂ ತಪ್ಪದೇ ಪಾಲಿಸಿದರೆ ಮಾತ್ರ ಈ ವರ್ಷದ ಘೋಷ ವಾಕ್ಯದಂತೆ, ಹೌದು ನಾವು ಕ್ಷಯ ರೋಗವನ್ನು ಕೊನೆಗೂಳಿಸಬಹುದು. ಆಗ ಮಾತ್ರ ನಾವು ಕ್ಷಯ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ” ಎಂದರು.
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಶರದ ನಾಯಕ ಮಾತನಾಡಿ, “ಕಾಯಿಲೆಗಳು ಬರದಂತೆ ನಿಯಂತ್ರಿಸಲು ಎಲ್ಲೆಡೆಯೂ ಆರೋಗ್ಯ, ಎಲ್ಲರಿಗೂ ಆರೋಗ್ಯ ಎಂಬ ವಾಕ್ಯದಂತೆ ರೋಗಗಳನ್ನು ನಿರ್ವಹಣೆ ಮಾಡಲು ಪ್ರಾಥಮಿಕ ಹಂತದಲೇ ಆರೋಗ್ಯ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಟಿಬಿ ಕಾಯಿಲೆ ಪರೀಕ್ಷೆಯನ್ನು ಪ್ರಾರಂಭಿಸಿ ಈವರೆಗೆ 823 ಜನರನ್ನು ಪರೀಕ್ಷೆ ಮಾಡಲಾಗಿದೆ. ಈ ಕಾಯಿಲೆಯನ್ನು ನಿಯತ್ರಿಸಲು ಇತರೆ ಸಂಸ್ಥೆಗಳ ಸಹಕಾರ ಬೇಕು” ಎಂದರು.
“ಯಾರಿಗಾದರೂ ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಈ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಹಾಗೆಯೇ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ದೈಹಿಕ ವ್ಯಾಯಾಮವನ್ನು ಮಾಡುವುದು ಅವಶ್ಯಕವಾಗಿದೆ” ಎಂದರು.
ಇದನ್ನೂ ಓದಿ: Bank Fraud : ಸಹಕಾರಿ ಬ್ಯಾಂಕ್ ಹಗರಣ; ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಮೌನ ಪ್ರತಿಭಟನೆ
ಬಳಿಕ ಸಂಪನ್ಮೂಲ ವ್ಯಕ್ತಿ ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ್ ಎ. ಕ್ಷಯ ರೋಗದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಮಂಜುನಾಥ, ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಡಾ. ವಿನೋದ ಭೂತೆ, ಡಿ.ಎಲ್.ಒ ಡಾ.ಶಂಕರ ರಾವ್, ಡಿಎಂಒ ಡಾ. ರಮೇಶ ರಾವ್, ಕುಟುಂಬ ಕಲ್ಯಾಣ ಅಧಿಕಾರಿ ಅನ್ನಪೂರ್ಣ ವಸ್ತ್ರದ, ಡಿ.ಎಸ್.ಒ. ಡಾ.ಅರ್ಚನಾ ನಾಯಕ, ತಾಲೂಕು ಆರೋಗ್ಯ ಅಧಿಕಾರಿ ಸೂರಜ್ ನಾಯಕ್, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರೋಗ್ಯ
Covid-19 : ಹೊಸ ಕೋವಿಡ್ ತಳಿಯ ತೀವ್ರತೆಗೆ ಯಾವುದೇ ಪುರಾವೆ ಇಲ್ಲ ಎಂದ ತಜ್ಞರು
ಕೋವಿಡ್‌ನ ಹೊಸ ರೂಪಾಂತರ ತೀವ್ರತೆಯ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೋವಿಡ್(Covid-19) ಪ್ರಕರಣಗಳು ಹೆಚ್ಚುತ್ತಿದ್ದರೂ ತೀರಾ ಆತಂಕಪಡುವ ಅಗತ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನವದೆಹಲಿ: ಭಾರತದಲ್ಲಿ ಮತ್ತೆ ಕೋವಿಡ್(Covid-19) ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಾಗಿದ್ದೂ, ತೀರಾ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಎಕ್ಸ್‌ಬಿಬಿ.1.16(XBB.1.16) ಕೊರೊನಾ ವೈರಸ್‌ನ ಪ್ರಧಾನ ರೂಪಾಂತರವಾಗಿದೆ. ಭಾರತೀಯ ತಜ್ಞರು ಬಿಡುಗಡೆ ಮಾಡಿದ ಜೀನೋಮ್ ಅನುಕ್ರಮ ವಿಶ್ಲೇಷಣೆಯ ಪ್ರಕಾರ, ಸೋಂಕು ಹೆಚ್ಚಳ ಸ್ವಲ್ಪಮಟ್ಟಿಗೆ ಕಂಡುಬಂದರೂ, ತೀವ್ರತೆಯ ಯಾವುದೇ ಆತಂಕಕಾರಿ ಚಿಹ್ನೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ.
ಭಾರತದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವಾರಕ್ಕೆ ಹೋಲಿಸಿದರೆ, ಬುಧವಾರ ಸರಾರಿ 966 ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಇದೇ ದಿನ 520 ಕೇಸ್ ದಾಖಲಾಗಿದ್ದವು. ವೈರಸ್ ಹರಡುವಿಕೆಯ ಸ್ವರೂಪ ಮತ್ತು ಜನರ ನಡವಳಿಕೆಯ ಮಾದರಿಗಳ ಬಗ್ಗೆ ಸಾಕಷ್ಟು ನಿಗಾ ಇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳು ಮತ್ತು ಇತರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ (4.49%), ಗುಜರಾತ್ (2%), ಕೇರಳ (4.17%), ಕರ್ನಾಟಕ (3.08%), ತಮಿಳುನಾಡು (2.26%), ದೆಹಲಿ (3.76%), ಹಿಮಾಚಲ ಪ್ರದೇಶ (7.1% ) ಮತ್ತು ರಾಜಸ್ಥಾನ (1.43%) ಅನುಪಾತದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿವೆ. ಜ್ವರ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಪರೀಕ್ಷೆಗೊಳಪಡುತ್ತಿದ್ದಾರೆ. ಹೀಗೆ ಪರೀಕ್ಷೆಗೊಳಗಾಗುತ್ತಿರುವ ಪೈಕಿ ಹೆಚ್ಚಿನವರಿಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಹಾಗಾಗಿ, ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗುತ್ತಿವೆ.
ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್
ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಮೂಲ ಯಾವುದು ಎಂಬ ಚರ್ಚೆ ಇನ್ನೂ ನಿಂತಿಲ್ಲ. ಕೆಲವರು ಇದು ಮಾನವ ನಿರ್ಮಿತ ಎಂದು ವಾದಿಸುತ್ತಾರೆ, ಮತ್ತೆ ಕೆಲವರು ಚೀನಾದಿಂದಲೇ ಈ ವೈರಸ್ ಇಡೀ ಜಗತ್ತಿಗೆ ಅಂಟಿದೆ ಎಂದು ಹೇಳುತ್ತಾರೆ. ಈಗ ಹೊಸ ಅಧ್ಯಯನ ವರದಿಯೊಂದರಲ್ಲಿ ಕೋವಿಡ್-19 ಮೂಲ (Covid Origin) ಯಾವುದು ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಚೀನಾ ವುಹಾನ್ ಮಾರುಕಟ್ಟೆಯಿಂದ ಪಡೆದ ಕೆಲವು ಸ್ಯಾಂಪಲ್‌ಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು, ಕೋವಿಡ್-19 ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ತಗಲಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ರೋಗಕ್ಕೆ ತುತ್ತಾಗುವ ರಕೂನ್ ನಾಯಿಗಳು ಸೇರಿದಂತೆ ಅನೇಕ ಪ್ರಾಣಿಗಳ ಆನುವಂಶಿಕ ವಸ್ತುಗಳ ಜೊತೆಗೆ ನಾವೆಲ್ ಕೊರೊನಾ ವೈರಸ್ ಇರುವ ಪುರಾವೆಗಳನ್ನು ಮಾದರಿಗಳು ಕಂಡುಕೊಂಡಿವೆ. ಈ ಬಗ್ಗೆ ಓಪನ್ ಸೈನ್ಸ್ ಜಾಲತಾಣವಾಗಿರುವ Zenodo.orgನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಹುವಾನಾನ್ ಸಗಟು ಸಮುದ್ರಾಹಾರ ಮಾರುಕಟ್ಟೆಯು ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು
ಕೆಲವು ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳಲ್ಲಿ ಸಂಭವನೀಯ SARS-CoV-2 ಸೋಂಕನ್ನು ಸೂಚಿಸುವ ಮಾನವ ಆನುವಂಶಿಕ ವಸ್ತುಗಳಿಗಿಂತ ಹೆಚ್ಚು ಪ್ರಾಣಿಗಳ ಆನುವಂಶಿಕ ವಸ್ತುಗಳು ಕಂಡುಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿಗೆ ಇನ್ನೂ ಯಾವುದೇ ವೈಜ್ಞಾನಿಕ ಸಮುದಾಯವು ತನ್ನ ಒಪ್ಪಿಗೆ ನೀಡಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಅನೇಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ವೈಜ್ಞಾನಿಕ ಸಮುದಾಯವು ಈ ಎಲ್ಲ ವರದಿಗಳನ್ನು ಪರಿಶೀಲಿಸಲು ಹೋಗಿಲ್ಲ.
-
ಅಂಕಣ17 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ17 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ17 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ18 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ15 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ11 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ15 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಅಂಕಣ11 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!