ಆರೋಗ್ಯ
Nasal Vaccine | ಭಾರತದ ಹೆಮ್ಮೆಯ ನೇಸಲ್ ವ್ಯಾಕ್ಸಿನ್, ಪರಿಣಾಮ ಅದ್ಭುತ
ಆರೋಗ್ಯ
Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ
ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧ ಹಾಗೂ ಆಹಾರ ವಸ್ತುವಿನ ಮೇಲೆ ಆಮದು ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಅನ್ವಯಿಸುವಂತೆ ನೀಡಿದೆ. (Import duty exemption) ಹೀಗಾಗಿ ಅವುಗಳ ದರ ಇಳಿಕೆಯಾಗಲಿದೆ.
ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.
ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:
ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್ ಕಸ್ಟಮ್ಸ್ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್ ಸೇವಿಂಗ್ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.
ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಯಾವ ಔಷಧಗಳು ಅಗ್ಗ?
ಡಪಾಗ್ಲಿಪ್ಲೊಜಿನ್ ಸಿಟಾಗ್ಲಿಪ್ಟಿನ್ (Dapagliflozin Sitagliption) : 27.75 ರೂ.
ಮೆಟ್‌ಫಾರ್ಮಿನ್ ಹೈಡ್ರೊಕ್ಲೋರೈಡ್ : 27.75 ರೂ.
ಡಪಾಗ್ಲಿಪ್ಲೊಜಿನ್ ಟೆಲ್‌ಮಿಸರ್ಟಾನ್ ( Dapagliflozin sitagliptin) : 10.92 ರೂ.
ಬಿಸೊಪ್ರೊಲೋಲ್ ಫ್ಯುಮರಾರಾಟ್ (Bisoprolol fumarate) 10.92 ರೂ.
ಸೋಡಿಯಂ ವಾಲ್ಪ್ರೊರೇಟ್: 3.20 ರೂ.
ಆರೋಗ್ಯ
Health Tips: ಬಾರ್ಲಿ ನೀರು: ಬೇಸಿಗೆಗೆ ಬೇಕೇ ಬೇಕು ಈ ಪುರಾತನ ಪೇಯ!
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು. ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಫ್ಯಾಷನ್ ಇರಬಹುದು, ಆಹಾರ ಇರಬಹುದು ಹಳೆಯದೆಲ್ಲ ಮತ್ತೆ ಹೊಸ ಟ್ರೆಂಡ್ ಆಗಿ ಮರಳಿ ಬರುವುದುಂಟು. ಹಲೆಯ ಕಾಲದ ಪುರಾತನ ಪದ್ಧತಿಗಳು, ಆಹಾರ ಕ್ರಮ ಮತ್ತೆ ಒಳ್ಳೆಯದು ಎಂಬ ಹೆಸರಿನಲ್ಲಿ ಹೊಸ ರೂಪದಿಂದ ಆವರಿಸಿಕೊಳ್ಳುವುದುಂಟು. ಕೆಲವೊಮ್ಮೆ, ಹಳೆಯ ಆಹಾರ ಪದ್ಧತಿಗಳ ನಿಜವಾದ ಮಹತ್ವ ಈಗ ಅರಿವಾಗಿ ನಾವು ಹಿಂದಿನ ಆಹಾರಕ್ರಮಗಳ, ಆರೋಗ್ಯಕರ ಜೀವನ ಪದ್ಧತಿಗಳತ್ತ ಮತ್ತೆ ನಿಧಾನವಾಗಿ ಆಕರ್ಷಿತರಾಗುತ್ತಿದ್ದೇವೆ. ಇಂತಹುಗಳ ಪೈಕಿ ಬಾರ್ಲಿ ಎಂಬ ಧಾನ್ಯವೂ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ.
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು (Summer drink) ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು (Barley water benefits). ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಬಾರ್ಲಿ ನೀರು ಮಾಡುವುದು ಹೇಗೆ?: ಎರಡು ಲೋಟ ನೀರಿಗೆ ಒಂದು ಚಮಚ ಬಾರ್ಲಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಾರ್ಲಿ ಕಾಳುಗಳು ಅನ್ನ ಬೆಂದಾಗ ಉಬ್ಬಿಕೊಳ್ಳುವ ಹಾಗೆ ಚೆನ್ನಾಗಿ ಉಬ್ಬಿಕೊಂಡ ಮೇಲೆ ಅಂದರೆ ಸಣ್ಣ ಉರಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಕುದಿಸಿ ನಂತರ ಸೋಸಿಕೊಳ್ಳಿ. ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಉಪ್ಪು ಬೇಡವಾಗಿದ್ದರೆ, ನಿಂಬೆಹಣ್ಣು, ಜೇನುತುಪ್ಪವನ್ನೂ ಸೇರಿಸಿ ಕುಡಿಯಬಹುದು. ಸೋಂಪು ಹಾಗೂ ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿಯೂ ಕುಡಿಯಬಹುದು.
ಹಾಗಾದರೆ, ಇನ್ನು ಉದ್ಭವಿಸುವ ಪ್ರಶ್ನೆ ಎಂದರೆ ದಿನವೂ ಬಾರ್ಲಿ ನೀರು ಕುಡಿಯಬಹುದೇ ಎಂಬುದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಬಾರ್ಲಿ ಒಳ್ಳೆಯದು, ತಂಪು ಎಂದುಕೊಂಡು ನಿತ್ಯವೂ ಬಾರ್ಲಿ ನೀರು ಕುಡಿಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ಬಾರ್ಲಿ ನೀರು ಕುಡಿಯಬಹುದು. ಮೂತ್ರನಾಳದ ಇನ್‌ಫೆಕ್ಷನ್ ಸಮಸ್ಯೆ ಆಗಾಗ ಎದುರಿಸುವ ಮಂದಿಗೆ ಬಾರ್ಲಿ ನೀರು ಅತ್ಯುತ್ತಮ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನೊಮ್ಮೆ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಒಳ್ಳೆಯದು.
ಬಾರ್ಲಿಯ ಪ್ರಯೋಜನಗಳು:
1. ಬಾರ್ಲಿಯಲ್ಲಿ ನಾರಿನಂಶ ಹೆಚ್ಚಿದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಸಮಸ್ಯೆ ಇದರುವ ಮಂದಿಗೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ಈಂಥ ಸಮಸ್ಯೆಗಳನ್ನು ಸರಳವಾಗಿಸಬಹುದು. ತಲೆತಲಾಂತರಗಳಿಂದ ಬಾರ್ಲಿನೀರನ್ನು ಮನೆಗಳಲ್ಲಿ ಹೊಟ್ಟೆ ಸಂಬಂಧೀ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದಾಗಿ ಬಳಸುತ್ತಿದ್ದರು.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
2. ನೀವು ತೂಕ ಇಳಿಸಲು ಸನ್ನದ್ಧರಾಗಿದ್ದರೆ, ಬಾರ್ಲಿ ನೀರು ಆರಾಮವಾಗಿ ಕುಡಿಯಬಹುದು. ಬಾರ್ಲಿ ನೀರು ತೂಕ ಇಳಿಸುವ ಮಂದಿಯ ಆಹಾರಕ್ರಮಕ್ಕೆ ಪೂರಕವಾಗಿ ವರ್ತಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದುರಿಂದ ತೂಕ ಹೆಚ್ಚಾಗದೆ, ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.
3. ಮಧುಮೇಹಿಗಳಿಗೂ ಬಾರ್ಲಿ ನೀರು ಅತ್ಯುತ್ತಮ. ಬಾರ್ಲಿ ನೀರಿನಲ್ಲಿ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವ ಶಕ್ತಿ ಇರುವುದರಿಂದ ಹಾಗೂ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಚಿಂತೆಯಿಲ್ಲದೆ ಇದನ್ನು ಸೇವಿಸಿ ಪ್ರಯೋಜನ ಪಡೆಯಬಹುದು.
4. ಬಾರ್ಲಿ ನೀರು ಅತ್ಯುತ್ತಮ ಡಿಟಾಕ್ಸ್ ಡ್ರಿಂಕ್ ಕೂಡಾ. ಇದು ದೇಹದಿಂದ ಕಶ್ಮಲಗಳನ್ನು ಹೊರಕ್ಕೆ ಕಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
5. ಬಾರ್ಲಿ ನೀರು ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.
6. ಬಾರ್ಲಿ ನೀರು ಡೈ ಯುರೇಟಿಕ್ ಆಗಿರುವುದರಿಂದ ಇದು ಮೂತ್ರ ಸಂಬಂಧೀ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮೂತ್ರನಾಳದ ಇನ್ಫೆಕ್ಷನ್ ಇರುವ ಮಂದಿ, ಉರಿಮೂತ್ರದ ಸಮಸ್ಯೆ ಇದ್ದವರು ಬಾರ್ಲಿ ನೀರನ್ನು ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!
ಆರೋಗ್ಯ
Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!
ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
ದೇಹದಲ್ಲಿ ಮೂಳೆ ಗಟ್ಟಿಯಾಗಿರಲು ಕ್ಯಾಲ್ಶಿಯಂ ಬೇಕೇ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ನಾವು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ತಿನ್ನುವ ಬಗೆಗೆ ಗಮನ ಹರಿಸುತ್ತೇವೆ. ನಮ್ಮ ಮಕ್ಕಳಿಗೆ ಹಾಲು ಕುಡಿಸುತ್ತೇವೆ. ಕ್ಯಾಲ್ಶಿಯಂ ಕೊರತೆ ಅವರಿಗೆ ಬಾರದಿರಲಿ ಎಂಬುದನ್ನು ನೋಡಿಕೊಳ್ಳುತ್ತೇವೆ. ಆದರೂ, ಬಹಳ ಸಾರಿ ನಮಗೇ ಅರಿವಿಲ್ಲದೆ, ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಪೂರೈಕೆ ಆಗಿರುವುದಿಲ್ಲ. ಇದರಿಂದಾಗಿ ಕೇವಲ ಮೂಳೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಬರಬಹುದು. ರಕ್ತದ ಒತ್ತಡ, ಹೃದಯದ ಆರೋಗ್ಯ, ಮಿದುಳಿನ ಆರೋಗ್ಯ, ದೇಹದ ತೂಕ ಇವೆಲ್ಲವಕ್ಕೂ ಕ್ಯಾಲ್ಶಿಯಂನ ಸಮತೋಲನಕ್ಕೂ ಸಂಬಂಧವಿದೆ. ಹಾಗಾಗಿ, ಕ್ಯಾಲ್ಶಿಯಂನ ಮಟ್ಟದಲ್ಲಿ ಕೊಂಚ ಏರುಪೇರಾದರೂ ದೇಹದ ಆರೋಗ್ಯದಲ್ಲಿ ನಮಗೆ ಏರಿಳಿತ ಕಾಣುತ್ತವೆ. ಹಾಗಾಗಿ, ದೇಹದಲ್ಲಿ ಸಣ್ಣಪುಟ್ಟ ಬದಲಾವಣೆಯಾದರೂ ನಮ್ಮ ಗಮನ ಅತ್ಯಂತ ಅಗತ್ಯ. ನಮ್ಮ ದೇಹಕ್ಕೆ ಕ್ಯಾಲ್ಶಿಯಂನ ಕೊರತೆಯಿದೆ ಎಂದು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
೧. ಹಲ್ಲಿನಲ್ಲಿ ಹುಳುಕು: ಕೆಲವು ಖನಿಜಾಂಶಗಳು ದೇಹದ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡಲು ಬೇಕೇ ಬೇಕು. ಕ್ಯಾಲ್ಶಿಯಂ ಹಾಗೂ ಹಲ್ಲಿನ ಸಂಬಂಧ ಅಂಥದ್ದು. ಈ ಕ್ಯಾಲ್ಶಿಯಂ ಎಂಬ ಖನಿಜಾಂಶ ಕೇವಲ ಹಲ್ಲಿನ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಹಲ್ಲಿನ ಗಟ್ಟಿಯಾದ ತಳಪಾಯವನ್ನೇ ಹಾಕುತ್ತದೆ. ಹಾಗಾಗಿ ಹಲ್ಲಿನಲ್ಲಿ ಯಾವುದೇ ಹುಳುಕು, ಕ್ಯಾವಿಟಿಯಂತಹ ತೊಂದರೆಗಳು ಆಗಾಗ ಆಗುತ್ತಲೇ ಇರುತ್ತವೆ ಎಂದಾದಲ್ಲಿ ಅಲ್ಲಿ ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ. ನಾವು ಸುಲಭವಾಗಿ ಸಿಹಿತಿಂಡಿಯ ಮೇಲೆ ದೂರಿ, ಅದರಿಂದಾಗಿಯೇ ಹುಳುಕಾಗಿದೆ ಎನ್ನಬಹುದು. ಆದರೆ, ಕ್ಯಾಲ್ಶಿಯಂ ಕೊರತೆಯೂ ಅದಕ್ಕೆ ಕಾರಣವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಬೇಕು.
೨.ಮಾಂಸಖಂಡಗಳ ಸೆಳೆತ: ಬಹಳ ಸಾರಿ, ಮೂಳೆ ಅಥವಾ ಎಲುಬಿನ ಸಂಬಂಧೀ ಸಮಸ್ಯೆ ಬಂದಾಕ್ಷಣ ಮಾತ್ರ ಅದಕ್ಕೆ ಕ್ಯಾಲ್ಶಿಯಂನ ಸಂಬಂಧ ಹುಡುಕುತ್ತೇವೆ. ಆದರೆ, ಮಾಂಸಖಂಡಗಳಿಗೂ ಕ್ಯಾಲ್ಶಿಯಂಗೂ ಸಂಬಂಧವಿದೆ. ಆಗಾಗ ನಿಮಗೆ ಮಾಂಸಖಂಡಗಳ ಸೆಳೆತ, ಉಳುಕಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ, ನಿಮಗೆ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಅರ್ಥ.
೩. ಉಗುರು ಮುರಿಯುವುದು: ನಿಮ್ಮ ಉಗುರು ದುರ್ಬಲವಾಗಿದೆಯೇ? ಆಗಾಗ ಮುರಿಯುತ್ತದೆಯೋ? ಅಥವಾ ಉಗುರಿನ ಸಿಪ್ಪೆ ಏಳುತ್ತಿದೆಯೋ? ಹಾಗಿದ್ದರೆ ನಿಮ್ಮ ಕ್ಯಾಲ್ಶಿಯಂ ಮಟ್ಟ್ವನ್ನು ಪರೀಕ್ಷಿಸಿಕೊಳ್ಳಿ. ಉಗುರಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ. ಕ್ಯಾಲ್ಶಿಯಂನ ಕೊರತೆಯಿಂದಷ್ಟೇ ಉಗುರು ಮುರಿಯುವಂತಹ, ದುರ್ಬಲತೆಯಂತಹ ಸಮಸ್ಯೆ ಬರಬಹುದು.
೪. ಮೂಳೆ ದುರ್ಬಲತೆ: ಮೂಳೆ ಅಥವಾ ಎಲುಬಿನ ಆರೋಗ್ಯಕ್ಕೆ ಕ್ಯಾಲ್ಶಿಯಂ ಅತ್ಯಂತ ಅಗತ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಶೇ ೯೯ರಷ್ಟು ಕ್ಯಾಲ್ಶಿಯಂ ದೇಹದ ಮೂಳೆಗಳಲ್ಲೇ ಸಂಗ್ರಹವಾಗುತ್ತದೆ. ಹಾಗಾಗಿ, ಸರಿಯಾದ ಮಟ್ಟದಲ್ಲಿ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಸೇರದಿದ್ದರೆ, ಖಂಡಿತವಾಗಿಯೂ ಅದರ ಪರಿಣಾಮ ಮೂಳೆಗಳ ಮೇಲೆ ಕಾಣುತ್ತದೆ. ಆಗಾಗ ಮೂಳೆ ಮುರಿತದಂತಹ ಸಮಸ್ಯೆ ಕಂಡರೂ ಇದೂ ಕಾರಣವಿರಬಹುದು. ಕ್ಯಾಲ್ಶಿಯಂ ಕಡಿಮೆಯಾಗಿದ್ದಾಗ ಮೂಳೆ ಸವೆತ, ರಿಕೆಟ್ಸ್‌ನಂತಹ ಕಾಯಿಲೆಗಳ ಸಂಭವ ಹೆಚ್ಚು.
೫. ನಿದ್ರಾಹೀನತೆ: ನಿದ್ದೆಯ ಸಮಸ್ಯೆ ನಿಮಗಿದೆಯೇ? ಇದಕ್ಕೆ ಬೇರೆ ಕಾರಣಗಳಿರಬಹುದು ಎಂದು ನಿಮಗೆ ಅನಿಸಿರಬಹುದು. ಆದರೆ, ಕ್ಯಾಲ್ಶಿಯಂ ಕೂಡಾ ನಿದ್ದೆಯ ಜೊತೆ ಸಂಬಂಧ ಹೊಂದಿದೆ ಎಂಬ ತಿಳುವಳಿಕೆ ನಿಮಗಿದೆಯೇ? ಹೌದು. ಕ್ಯಾಲ್ಶಿಯಂನ ಕೊರತೆಯೂ ಕೂಡಾ ನಿದ್ರಾಹೀನತೆಗೆ ಕಾರಣವಾಗಬಹುದು. ಇದರರ್ಥ, ಮಲಗುವ ಮೊದಲು ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಆಹಾರ ಸೇವಿಸಬೇಕು ಎಂದಲ್ಲ. ಆದರೆ, ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ಕೂಡಾ ಇರಬೇಕು. ಕ್ಯಾಲ್ಶಿಯಂ ಮಟ್ಟ ದೇಹದಲ್ಲಿ ಸಮತೋಲನ ಕಾಯ್ದುಕೊಂಡಿದ್ದರೆ ಸರಿಯಾದ ಸಮಯಕ್ಕೆ ದೇಹಕ್ಕೆ ಸರಿಯಾದ ನಿದ್ದೆ ಬರಲು ಸಹಾಯವಾಗುತ್ತದೆ.
ಆರೋಗ್ಯ
Sugar Cane Juice Benefits: ರಸಭರಿತ ಕಬ್ಬಿನ ಹಾಲು, ಏನೇನಿವೆ ಇದರ ಲಾಭಗಳು?
ಶುದ್ಧ ಕಬ್ಬಿನ ಹಾಲು (sugar cane juice benefits) ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಇದರಿಂದ ಇನ್ನೂ ಏನೇನು ಲಾಭಗಳಿವೆ?
ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ಒಳ್ಳೆಯ ಪೇಯಗಳ ಬಗ್ಗೆ ಹೇಳಿದರೂ ಬಾಯಾರಿಕೆ ಹೆಚ್ಚುತ್ತದೆ, ಅಂಥ ಬಿಸಿಲು ಹೊರಗೆ! ಅದರಲ್ಲೂ ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ…? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು (sugar cane juice benefits) ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.
ಪ್ರತಿರೋಧ ಶಕ್ತಿ ಹೆಚ್ಚಳ
ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್‌ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶಗಳಿಂದಾಗಿ, ದೇಹದ ಪ್ರೊಟೀನ್ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.
ಪಚನಕಾರಿ
ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ.
ಮಧುಮೇಹ ನಿಯಂತ್ರಣ
ಹೌದೇಹೌದು! ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.
ಹಲ್ಲು ಮತ್ತು ಮೂಳೆಗಳ ಬಲವರ್ಧನೆ
ತನ್ನಲ್ಲಿ ವಿಫುಲವಾಗಿರುವ ಪ್ರೊಟೀನ್ ಸತ್ವದಿಂದಾಗಿ ಮೂಳೆಗಳನ್ನು ಸದೃಢ ಮಾಡುವ ಸಾಧ್ಯತೆ ಕಬ್ಬಿನ ಹಾಲಿಗಿದೆ. ಜೊತೆಗೆ, ಹಲ್ಲುಗಳು ಹುಳುಕಾಗದಂತೆ ಕಾಪಾಡುವುದರೊಂದಿಗೆ, ದಂತಗಳ ಬೇರನ್ನೂ ಬಲಗೊಳಿಸು ಸಾಮರ್ಥ್ಯ ಇದರಲ್ಲಿರುವ ಫಾಸ್ಫರಸ್ ಅಂಶಕ್ಕಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯದೆ ಇದ್ದಾಗ ಉಂಟಾಗುವ ಬಾಯಿಯ ದುರ್ಗಂಧ ತಡೆಯಲೂ ಇದು ಸಹಕಾರಿ.
ನೋವು ಉಪಶಮನಕ್ಕೆ
ಕಬ್ಬಿನ ರಸವನ್ನು ಎಳನೀರು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿದಾಗ ಇನ್ನಷ್ಟು ಲಾಭಗಳು ದೇಹಕ್ಕೆ ದೊರೆಯುತ್ತವೆ. ಮೂತ್ರನಾಳದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಹಲವಾರು ಸಮಸ್ಯೆಗಳಿಂದ ಕಾಡುವ ನೋವುಗಳ ನಿವಾರಣೆಗೆ ಈ ಮಿಶ್ರಣ ಉಪಯೋಗಿ ಎನಿಸಿದೆ. ದೇಹದಲ್ಲಿ ಉರಿಯೂತವನ್ನು ನಿವಾರಿಸುವ ಇದರ ಗುಣವೇ ಈ ನೋವು ಉಪಶಮನಕ್ಕೂ ಕಾರಣವಾಗಿದೆ.
ಸೌಂದರ್ಯವರ್ಧಕ
ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಯಂಥ ಸಮಸ್ಯೆಗಳಿಗೂ ಕಬ್ಬಿನ ರಸ ಮದ್ದಾಗಬಲ್ಲದು. ಇದರಲ್ಲಿರುವ ಗ್ಲೈಕೋಲಿಲಕ್ ಆಮ್ಲವು ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದು, ಹೊಳಪು ಮೂಡಿಸಲು ಉಪಯುಕ್ತ. ಮುಲ್ತಾನಿ ಮಿಟ್ಟಿಯ ಜೊತೆಗೆ ಕಬ್ಬಿನ ರಸವನ್ನು ಮಿಶ್ರ ಮಾಡಿ, ಫೇಸ್‌ಪ್ಯಾಕ್ ಮಾಡುವುದರಿಂದ ಚರ್ಮದ ಹೊಳಪು, ನುಣುಪು ವೃದ್ಧಿಸುತ್ತದೆ.
ಇದನ್ನೂ ಓದಿ: Healthy Drink: ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!
-
ಕರ್ನಾಟಕ16 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್17 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್14 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!