ಕರ್ನಾಟಕ
Lok Sabha Election 2024 : 25 – 3ಕ್ಕೆ ರೆಡಿಯಾಯ್ತಾ ಬಿಜೆಪಿ – ಜೆಡಿಎಸ್ ಮೈತ್ರಿ ಫಾರ್ಮುಲಾ?
Lok Sabha Election 2024 : ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾತುಕತೆ ಈ ವಾರವೇ ಬಹುತೇಕ ಅಂತಿಮ ಆಗಲಿದೆ. ಸೀಟು ಹಂಚಿಕೆ ಸೂತ್ರವೂ ಸಿದ್ಧವಾಗಿದೆ. ಜೆಡಿಎಸ್‌ಗೆ ಮೂರು ಸೀಟನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಾಗಿದ್ದರೂ, ಐದು ಕ್ಷೇತ್ರಗಳಿಗೆ ದಳಪತಿಗಳು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ತಮ್ಮ ವಿರೋಧಿ ಪಕ್ಷಗಳನ್ನು ಮಣಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ಸತತ ಎರಡು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಎನ್‌ಡಿಎ ಮೈತ್ರಿಕೂಟವನ್ನು (NDA alliance) ಮಣಿಸಲು ಕಾಂಗ್ರೆಸ್‌ನಿಂದ ಇಂಡಿಯಾ ಮೈತ್ರಿಕೂಟ (India Alliance) ಸಿದ್ಧವಾಗಿದೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 + 1 ಸ್ಥಾನವನ್ನು ಗೆದ್ದುಕೊಂಡಿತ್ತು. ಈಗ ಕಾಂಗ್ರೆಸ್ ಸರ್ಕಾರದ (Congress Government) ಗ್ಯಾರಂಟಿ (Congress Guarantee Scheme) ಅಬ್ಬರದ ನಡುವೆ ಈ ಸೀಟನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಅಲ್ಲದೆ, ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಬಿಜೆಪಿ -ಜೆಡಿಎಸ್ ಮೈತ್ರಿಗೆ (BJP-JDS alliance) ಮುಂದಾಗಲಾಗಿದೆ. ಈಗ ಸೀಟು ಹಂಚಿಕೆ ಸಹ ಬಹುತೇಕ ಪಕ್ಕಾ ಎನ್ನಲಾಗಿದ್ದು, 25 + 3ರ ಸೂತ್ರವು ಬಹುತೇಕ ಪಕ್ಕಾ ಆಗಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಬಿಜೆಪಿ ನಾಯಕರ ಜತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD Deve Gowda) ಮಾತುಕತೆ ನಡೆಸಿದ್ದಾರೆ. ಬಹುತೇಕ ಇದೇ ವಾರದಲ್ಲಿ ಮೈತ್ರಿ ಸೂತ್ರ ಅಂತಿಮವಾಗಲಿದೆ. ಬಿಜೆಪಿ ಮೂಲಗಳ ಪ್ರಕಾರ, 25 + 3 ಲೆಕ್ಕಾಚಾರದಲ್ಲಿ ಸೀಟು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Cauvery Water Dispute: ಕಾವೇರಿ ನೀರು ಬಿಟ್ಟು, ರೈತರ ಬದುಕಿನ ಜತೆ ಸರ್ಕಾರ ಚೆಲ್ಲಾಟ: ಎಚ್.ಡಿ.ಕುಮಾರಸ್ವಾಮಿ
ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳು ಜೆಡಿಎಸ್‌ಗೆ ಪಕ್ಕಾ ಎಂದು ಹೇಳಲಾಗಿದೆ. ಇನ್ನು 25 ಕ್ಷೇತ್ರಗಳು ಬಿಜೆಪಿ ಪಾಲಾಗಲಿದೆ. ಆದರೆ, ಜೆಡಿಎಸ್ ಮತ್ತೆರಡು ಕ್ಷೇತ್ರಗಳಿಗೆ ಪಟ್ಟು ಹಿಡಿದು ಕುಳಿತಿದೆ. ತುಮಕೂರು ಕ್ಷೇತ್ರದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಒಲವು ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದಲ್ಲೂ ಒಂದು ಸೀಟಿಗೆ ಬೇಡಿಕೆ
ಇತ್ತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮಾತುಕತೆ ಸಂದರ್ಭದಲ್ಲಿ ಅಚ್ಚರಿಯ ಒಂದು ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. ಉತ್ತರ ಕರ್ನಾಟಕದ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವದ ಬಗ್ಗೆ ಚರ್ಚೆಯಾಗಿದೆ. ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಇರುವುದರಿಂದ ರಾಯಚೂರು ಕ್ಷೇತ್ರವನ್ನು ಸಹ ಕೇಳಲು ಎಚ್‌ಡಿಕೆ ಸಿದ್ಧರಾಗಿದ್ದಾರೆ.
5 ಕ್ಷೇತ್ರ ಪಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಆದರೆ, ಜೆಡಿಎಸ್‌ಗೆ ಹೆಚ್ಚು ಸ್ಥಾನ ಕೊಡುವುದರಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎಂಬುದು ಬಿಜೆಪಿ ನಾಯಕರ ವಾದ. ಜೆಡಿಎಸ್ ನಾಯಕರು ಏನೇ ಪಟ್ಟು ಹಿಡಿದರೂ ಕೇವಲ ಮೂರು ಸ್ಥಾನ ಮಾತ್ರ ಕೊಡುವಂತೆ ರಾಜ್ಯ ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Congress Karnataka : ಕಾಂಗ್ರೆಸ್‌ನಲ್ಲಿ ನಿಲ್ಲದ ಒಳಜಗಳ; ಈಗ ಮಹಿಳಾ ಡಿಸಿಎಂಗೆ ಬೇಡಿಕೆ!
ಸೆ. 21ಕ್ಕೆ ನವದೆಹಲಿಗೆ ಎಚ್‌ಡಿಕೆ
ಇನ್ನು ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಕೆಟ್ಟ ಸರ್ಕಾರವನ್ನು ತೆಗೆಯಬೇಕು. ಅದಕ್ಕೆ ಮೈತ್ರಿಯ ಅವಶ್ಯಕ ಇದೆ. ರಾಜ್ಯದ ಹಿತಕ್ಕಾಗಿ ನಾವು ಸ್ವಲ್ಪ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಈ ನಿರ್ಧಾರ ಮಾಡಿದ್ದೇವೆ. ಸೆ.21ರ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಚರ್ಚೆ ನಡೆಯಲಿದೆ. ಸದ್ಯ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ
Cat Eyed Snake : ಬೆಕ್ಕಿನ ಕಣ್ಣಿನ ಸುಂದರಿಯರನ್ನು ನೋಡೇ ಇರ್ತೀರಿ, ಬೆಕ್ಕಿನ ಕಣ್ಣಿನ ಹಾವು ನೋಡಿದ್ದೀರಾ?
ಪುತ್ತೂರು (ದಕ್ಷಿಣ ಕನ್ನಡ): ನೀವು ಖಂಡಿತವಾಗಿಯೂ ಬೆಕ್ಕಿನ ಕಣ್ಣಿನ ಸುಂದರಿಯರನ್ನು (Cat eyed Beauties) ನೋಡಿರುತ್ತೀರಿ. ನಮ್ಮ ಐಶ್ವರ್ಯ ರೈ (Aishwarya Rai), ಏಮಿ ಜಾಕ್ಸನ್ (Amy Jackson), ಹಾಲಿವುಡ್‌ನ ಹಲವು ನಟಿಯರು ತಮ್ಮ ಸುಂದರವಾದ ಕಣ್ಣುಗಳಿಗಾಗಿಯೇ ಹೆಸರುವಾಸಿ. ಅವರೆಲ್ಲ ನಿಮಗೆ ಗೊತ್ತು. ಆದರೆ, ಬೆಕ್ಕಿನ ಕಣ್ಣಿನ ಹಾವು (Cat Eyed Snake) ನಿಮಗೆ ಗೊತ್ತಾ? ನೋಡಿದ್ದೀರಾ? ನೋಡಿಲ್ಲ ಅಂದರೆ ಒಮ್ಮೆ ನೋಡಿಬಿಡಿ ಅಂತ ಕೆಲವು ದಿನದ ಹಿಂದೆ ಈ ಹಾವೇ ಪುತ್ತೂರಿನ ಒಂದು ಮನೆಗೆ ಬಂದಿತ್ತು!
ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಗೆ ಇತ್ತೀಚೆಗೆ ಒಂದು ಹಾವು ಬಂದಿತ್ತು. ಬಂದಿತ್ತು ಅನ್ನುವುದಕ್ಕಿಂತಲೂ ನೇರವಾಗಿ ಬಂದು ಮನೆಯೊಂದರ ಒಳಗಿನ ಟೇಬಲ್ ಮೇಲೆ ಆರಾಮವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿತ್ತು. ಸಾಮಾನ್ಯವಾಗಿ ಹಾವುಗಳು ಜನ ಸಂಚಾರ ಇದ್ದರೆ ಹೆದರುತ್ತವೆ. ಆದರೆ, ಇದು ಮಾತ್ರ ಮನೆಯ ಸದಸ್ಯನೋ ಎನ್ನುವ ಹಾಗೆ ಮಲಗಿಕೊಂಡಿತ್ತು.
ರವಿಕೃಷ್ಣ ಅವರು ಜಗಲಿಗೆ ಬಂದಾಗ ಟೇಬಲ್ ಮೇಲೆ ಹಳದಿ ಬಣ್ಣದ ವಸ್ತು ಬಿದ್ದಿದೆ ಅನಿಸಿತು. ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾದದ್ದು ಅದು ಹಾವು ಅಂತ. ನೋಡಿದರೆ ಕಂದು ಬಣ್ಣದ ಪಟ್ಟೆ ಪಟ್ಟೆಗಳನ್ನು ಹೊಂದಿದ್ದ ಅದು ಅತ್ಯಂತ ವಿಷಕಾರಿ ಕನ್ನಡಿ ಹಾವು ಅನಿಸುತ್ತಿತ್ತು. ಅಬ್ಬಾ ದೇವರೇ.. ಕನ್ನಡಿ ಹಾವು ಮನೆಯೊಳಗೆ ಬಂದಿದೆ ಏನು ಮಾಡುವುದು ಎಂದು ಯೋಚಿಸಿದ ರವಿಕೃಷ್ಣ ಅವರಿಗೆ ನೆನಪಾದದ್ದು ಪುತ್ತೂರಿನ ಯುವ ಉರಗತಜ್ಞ ತೇಜಸ್ ಬನ್ನೂರು ಅವರು.
ಸಣ್ಣ ವಯಸ್ಸಿನಿಂದಲೇ ಹಾವುಗಳ ಬಗ್ಗೆ ಕುತೂಹಲ ತಳೆದಿರುವ ತೇಜಸ್ ಅವರು ಕನ್ನಡಿ ಹಾವು ಮನೆಯ ಟೇಬಲ್‌ನಲ್ಲಿ ಮಲಗಿದೆ ಎಂಬ ಸುದ್ದಿ ಕೇಳಿ ಓಡೋಡಿ ಬಂದರು.
ಇದು ಕನ್ನಡಿ ಹಾವಲ್ಲರಿ.. ಬೆಕ್ಕಿನ ಕಣ್ಣಿನ ಹಾವು ಅಂದ್ರು ತೇಜಸ್!
ತೇಜಸ್ ಅವರು ಓಡೋಡಿ ಬಂದು ಟೇಬಲ್ ಹತ್ತಿರ ಹೋದರು. ಮಲಗಿದ್ದ ಹಾವನ್ನು ನೋಡಿ ಅವರು ʻಓ ಇದಾ.. ಇದು ಕನ್ನಡಿ ಹಾವಲ್ಲ ಮಾರಾಯ್ರೆ.. ಇದು ಭಾರಿ ಪಾಪದ ಹಾವುʼ ಎಂದರು. ಕಿರಿಯ ವಯಸ್ಸಿನಲ್ಲೇ ಹಾವು ಹಿಡಿದು ಅವುಗಳ ರಕ್ಷಣೆ ಮಾಡುತ್ತಿರುವ ತೇಜಸ್ ಕಳೆದ ಹಲವು ವರ್ಷಗಳಿಂದ ಹಲವು ರೀತಿಯ, ಹಲವು ಪ್ರಕಾರದ ಹಾವುಗಳನ್ನು ರಕ್ಷಣೆ ಮಾಡಿದ್ದು, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಹಾವನ್ನು ರಕ್ಷಿಸಿದ್ದಾರೆ.
ಹೀಗಾಗಿ ಅವರಿಗೆ ನೋಡಿದ ಕೂಡಲೇ ಹಾವು ಯಾವುದೆಂದು ಗೊತ್ತಾಗಿದೆ. ಅವರು ಹಾವನ್ನು ಕೈಯಲ್ಲೇ ಹಿಡಿದು ಹೇಳಿದರು: ನೋಡಿ ಇದು ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುವ ಬೆಕ್ಕು ಕಣ್ಣಿನ ಹಾವು. ನೋಡಿ, ಇದರ ಕಣ್ಣು ನೋಡಿ, ಐಶ್ವರ್ಯ ರೈ ಕಣ್ಣಿನ ಹಾಗೆ ಇಲ್ವಾ? ಈ ಕಣ್ಣಿನಿಂದಲೇ ಈ ಹಾವಿಗೆ ಈ ಹೆಸರು ಬಂದಿದೆ.
ಹಾವನ್ನು ಕೈಯಲ್ಲಿ ಹಿಡಿದೇ ತೇಜಸ್ ಹಾವಿನ ಕಥೆ ಹೇಳುತ್ತಾ ಹೋದರು
- ಇದರ ಹೆಸರು ಫಾರೆಸ್ಟಿನ್ ಕ್ಯಾಟ್ ಸ್ನೇಕ್-Forestian Cat snake (ಬೆಕ್ಕಿನ ಕಣ್ಣಿನ ಹಾವು)
- ದಟ್ಟ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಅಪರೂಪದ ಹಾವಿದು
- ಬೆಕ್ಕಿನ ಕಣ್ಞಿನಂತೆ ಬಿಳಿ ಕಣ್ಣುಗಳನ್ನು ಹೊಂದಿರುವ ಈ ಹಾವು ರಾತ್ರಿ ವೇಳೆಯಲ್ಲೇ ಸಂಚರಿಸುತ್ತದೆ.
- ರಾತ್ರಿಯಲ್ಲಿ ಬೆಕ್ಕಿನ ಕಣ್ಣುಗಳಂತೆಯೇ ಹೊಳೆಯುವ ಈ ಹಾವಿನ ಕಣ್ಣುಗಳು ಅತ್ಯಂತ ಆಕರ್ಷಕವೂ ಆಗಿದೆ.
- ರಾತ್ರಿ ವೇಳೆಯಲ್ಲೇ ಬೇಟೆಗಿಳಿಯುವ ಈ ಹಾವು ಹಕ್ಕಿಗಳ ಮೊಟ್ಟೆ, ಸಣ್ಣ ಗಾತ್ರದ ಹಕ್ಕಿ, ಓತಿಕ್ಯಾತ ಸೇರಿದಂತೆ ಹಲವು ಸಣ್ಣ ಗಾತ್ರದ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತದೆ.
- ವಿಷಕಾರಿಯಲ್ಲದ ಈ ಹಾವು ತನ್ನ ರಕ್ಷಣೆಗಾಗಿ ಕಚ್ಚುತ್ತದೆ. ಆದರೆ ಈ ಹಾವು ಕಚ್ಚಿದಲ್ಲಿ ಯಾವುದೇ ತೊಂದರೆಯೂ ಇಲ್ಲ.
- ಹಳದಿ ಬಣ್ಣದಲ್ಲಿ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿರುವ ಈ ಹಾವು ಕನ್ನಡಿ ಹಾವನ್ನೇ ಹೋಲುತ್ತವೆ.
- ಅಪರೂಪದ ಈ ಹಾವುಗಳು ಜನರ ಕಣ್ಣಿಗೆ ಬಿದ್ದಲ್ಲಿ ಕನ್ನಡಿ ಹಾವಿನ ಚಹರೆಯಿಂದಾಗಿ ಕೊಲ್ಲಲ್ಪಡುವುದೂ ಉಂಟು.
- ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಬೆಳೆಯುವ ಈ ಹಾವು ಕೇರೆ ಹಾವಿನಷ್ಟೇ ಉದ್ದಕ್ಕೆ ಬೆಳೆಯುತ್ತದೆ.
ಮರಳಿ ದಟ್ಟ ಕಾನನ ಸೇರಿದ ಬೆಕ್ಕಿನ ಕಣ್ಣಿನ ಹಾವು
ತೇಜಸ್ ಅವರ ಪ್ರೀತಿಯ ಕೈಗಳಿಗೆ ಸಿಕ್ಕಿದ ಈ ಹಾವು ಇದೀಗ ಅದರ ಮೂಲ ವಾಸಸ್ಥಾನವಾದ ದಟ್ಟ ಅರಣ್ಯವನ್ನು ತಲುಪಿದೆ. ಇಂಥ ಹಾವನ್ನು ನೋಡಿದ ಉರಗತಜ್ಞ ತೇಜಸ್ ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದಾರೆ. ಸಿಟಿ ನೋಡ್ಕೊಂಡು ಹೋಗೋಣ ಅಂತ ಬಂದಿರಬೇಕು ಎಂದು ನಕ್ಕರಂತೆ ರವಿಕೃಷ್ಣ ಕಲ್ಲಜೆ.
ಕರ್ನಾಟಕ
Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್.ಕೆ. ಪಾಟೀಲ್
Dakshin Bharat Utsav: ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ವಲಯ ಉತ್ಸುಕವಾಗಿದ್ದು, ಖಾಸಗಿ ವಲಯದ ಈ ಸ್ವಯಂ ಪ್ರೇರಿತ ಆಸಕ್ತಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ (Dakshin Bharat Utsav) 500 ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದು ಬರಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ನಗರದಲ್ಲಿ ಡಿಸೆಂಬರ್ 14 ರಿಂದ 16 ರವರೆಗೆ ‘ದಕ್ಷಿಣ ಭಾರತ್ ಉತ್ಸವ’ ನಡೆಯುವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾವೇಶ ಪೂರ್ವ (ಕರ್ಟನ್ ರೈಸರ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ರಕ್ಷಿಸಲು, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ತಿಳಿಸಿದರು.
ದತ್ತು ನೀಡುವ ಸ್ಮಾರಕಗಳು, ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು ಮತ್ತು ಇತರ ಪಾರಂಪರಿಕ ಸ್ಥಳಗಳಾಗಿರಬಹುದು, ಅವುಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಈ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ | Sub Registrar Office: ಸಬ್ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ; ಸೆ.30ವರೆಗೆ ಮಾತ್ರ ಅನ್ವಯ
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಇದರ ಹಿಂದೆ ಲಾಭದ ಉದ್ದೇಶವಿಲ್ಲ, ಪ್ರವಾಸಿಗರ ಆಕರ್ಷಣೆ ಮತ್ತು ಆ ಮೂಲಕ ಜಗತ್ತಿಗೆ ಕರ್ನಾಟಕವನ್ನು ಪರಿಚಯಿಸುವ ಮಹತ್ವದ ಕಾರ್ಯ ಆಗಲಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ರಾಜ್ಯವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಯುನೆಸ್ಕೋ ಈ ವರ್ಷ ಗುರುತಿಸಿರುವ ನಾಲ್ಕನೇ ತಾಣವೆಂದರೆ ಹೊಯ್ಸಳರ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇಗುಲಗಳು. ಈ ಹಿಂದೆ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿತ್ತು ಎಂದ ಸಚಿವರು, ರಾಜ್ಯ ಸರ್ಕಾರದ ʼಶಕ್ತಿʼ ಯೋಜನೆ ಯಶಸ್ಸಿನ ಪರಿಣಾಮ ಪ್ರವಾಸಿ ಕೇಂದ್ರಗಳು ಮತ್ತು ದೇಗುಲಗಳಿಗೆ ಹೆಚ್ಚಿನ ಸಾರ್ವಜನಿಕರು ಭೇಟಿ ನೀಡುವಂತೆ ಆಗಿದೆ ಎಂದು ತಿಳಿಸಿದರು.
ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಮನೋಹರ ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ಸಮುದ್ರ ಸಾಗರ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಹೀಗೆ ವಿವಿಧ ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿದ್ದು, ಈ ಅಂಶಗಳು ರಾಜ್ಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ‘ದಕ್ಷಿಣ ಭಾರತ ಉತ್ಸವದ ಪರಿಕಲ್ಪನೆಯನ್ನು ಸ್ವಾಗತಿಸುವುದಾಗಿ ತಿಳಿಸಿ, ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ | Power Generation: ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
“ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರೋಣ.” ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಗೆ ಹೇಗೆ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಉಲ್ಲೇಖಿಸಿ ಅವರು ವಿವರಿಸಿದರು.
ಸ್ವಾಗತ ಭಾಷಣ ಮಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಡಿಸೆಂಬರ್ 14 ರಿಂದ 16 ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿರುವ ‘ದಕ್ಷಿಣ ಭಾರತ ಉತ್ಸವ’ವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಈ ‘ಉತ್ಸವʼ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವೇದಿಕೆಯಾಗಿದೆ, ಹೀಗಾಗಿ ಇದರಿಂದ ರಾಜ್ಯಗಳಿಗೆ ಆದಾಯವನ್ನು ತರುವುದಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು ಎಂದರು.
ಈ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಕರ್ನಾಟಕವು ಅನೇಕ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಸ್ಮಾರಕಗಳಿಗೆ ಧಕ್ಕೆಯಾಗದಂತೆ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಬಹುದು ಎಂದ ಅವರು, ಕರ್ನಾಟಕ ರಾಜ್ಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು, 600 ಭಾರತದ ಪುರಾತತ್ವ ಸಮೀಕ್ಷೆ(ASI) ಸಂರಕ್ಷಿತ ಸ್ಮಾರಕಗಳು ಮತ್ತು 800 ರಾಜ್ಯ ಸಂರಕ್ಷಿತ ಸ್ಮಾರಕಗಳ ವೈಶಿಷ್ಟ್ಯತೆಯನ್ನು ಹೊಂದಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ ಎಂದರು.
ಇದನ್ನೂ ಓದಿ | Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
ಎಫ್‌ಕೆಸಿಸಿಐ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಜಿ.ಕೆ.ಶೆಟ್ಟಿ ಅವರು ಮಾತನಾಡಿ, ದಕ್ಷಿಣ ರಾಜ್ಯಗಳಲ್ಲಿ ‘ದಕ್ಷಿಣ ಭಾರತ ಉತ್ಸವವನ್ನು ಸರದಿಯ ಆಧಾರದ ಮೇಲೆ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಎಫ್‌ಕೆಸಿಸಿಐ ಸಕ್ರಿಯವಾಗಿ ಭಾಗವಹಿಸುತ್ತದೆ. ದಕ್ಷಿಣದ ರಾಜ್ಯಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ತರುತ್ತದೆ ಎಂದು ವಿವರಿಸಿದರು.
ರಾಜ್ಯದ ಹೊಯ್ಸಳರ ಮೂರು ದೇಗುಲಗಳು ಯೂನೆಸ್ಕೋದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೋಂಡಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಇದರಿಂದ ರಾಜ್ಯವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಹೀಗಾಗಿ 550 ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಡಿ ಇರಿಸಿದೆ
| ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವರು
ವಿಜಯನಗರ
Vijayanagara News: ಹಗರಿಬೊಮ್ಮನಹಳ್ಳಿಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಡಿಸಿ ದಿವಾಕರ್ ದಿಢೀರ್ ಭೇಟಿ
Vijayanagara News: ಹಗರಿಬೊಮ್ಮನಹಳ್ಳಿ ತಾಲೂಕಿನ ಆಸ್ಪತ್ರೆ, ಹಾಸ್ಟೆಲ್, ಶಾಲೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹಗರಿಬೊಮ್ಮನಹಳ್ಳಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ಆಗಮಿಸುವ ರೋಗಿಗಳಿಗೆ (Patients) ಆಸನ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ (Infrastructure) ಒದಗಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಸಾರ್ವಜನಿಕರ ಆಸ್ಪತ್ರೆ, ವಿವಿಧ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಳಿಕ ಅವರು ಮಾತನಾಡಿದರು.
ಚಿಕಿತ್ಸೆ ಪಡೆಯಲು ಬರುವ ರೋಗಿಗಳು ನಿಲ್ಲದಂತೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಆಸ್ಪತ್ರೆ ಆವರಣದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಬೇಕಾದ ಅಗತ್ಯ ಸೌಕರ್ಯದ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
ಆಸ್ಪತ್ರೆಗೆ ಅವಶ್ಯವಿರುವ ಚಿಕಿತ್ಸಾ ಸಲಕರಣೆಗಳ ಮಾಹಿತಿ ಪಡೆದರು. ನಂತರ ರೋಗಿಗಳಿಗೆ ಆಸ್ಪತ್ರೆಯಿಂದಲೇ ಅಗತ್ಯ ಔಷಧಿ ನೀಡಬೇಕು, ರೋಗಿಗಳಿಂದಲೇ ತರಿಸಿಕೊಳ್ಳುವುದು ಕಂಡುಬಂದಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಈಗಾಗಲೇ ವೈದ್ಯರ ನೇಮಕಕ್ಕೆ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಅವರು ಭೂಮಿ, ಪಹಣಿ ಸೇರಿದಂತೆ ಇತರ ಸರ್ಕಾರಿ ಸೇವೆಗಳು ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ನಂತರ ಸರ್ಕಾರದ ಸೇವೆ ಪಡೆಯಲು ಬಂದಿದ್ದ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.
ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಹಾಗೂ ಊಟೋಪಚಾರದ ಬಗ್ಗೆ ಮಾಹಿತಿ ಪಡೆದರು.
ನಂತರ ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಗೆ ಭೇಟಿ ನೀಡಿ, ನಗರೋತ್ಥಾನ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ವರದಿ, ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಹೆಚ್ಚಿದ್ದು, ಸಂಬಂಧಪಟ್ಟ ಮಾಲೀಕರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗೋಶಾಲೆಗೆ ರವಾನಿಸಲು ಕ್ರಮಕೈಗೊಳ್ಳಲು ಡಿಸಿ ಸೂಚಿಸಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ನಂತರ ರಾಮನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಾಲಕಳೆದು ನಂತರ ಶಾಲೆಗೆ ಒದಗಿಸಬೇಕಾದ ಮೂಲ ಸೌಕರ್ಯದ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು.
ತುಮಕೂರು
Tumkur News: ಗುಬ್ಬಿಯಲ್ಲಿ ನೇಗಿಲು ಕಾವ್ಯ ಅಭಿಯಾನಕ್ಕೆ ಸಾಹಿತಿ ಸಂತೋಷ್ ಮಡೆನೂರು ಚಾಲನೆ
Tumkur News: ಗುಬ್ಬಿ ತಾಲೂಕಿನ ಸಾವಯವ ಕೃಷಿಕ ಮಹೇಶ್ ರವರ ಮಣ್ಣಿನ ಮನೆಯಲ್ಲಿ ಶುಕ್ರವಾರ ನೇಗಿಲು ಕಾವ್ಯ ಅಭಿಯಾನ ಕಾರ್ಯಕ್ರಮ ಜರುಗಿತು.
ಗುಬ್ಬಿ: ಕನ್ನಡ ಸಾಹಿತ್ಯವನ್ನು (Kannada Literature) ಶ್ರೀಮಂತಗೊಳಿಸುವ ಜತೆಗೆ ರೈತರಲ್ಲಿ (Farmers) ಹಾಗೂ ಜನಸಾಮಾನ್ಯರಲ್ಲಿ ಪರಿಸರ (Environment) ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಸ್ಯಯಜ್ಞ ತಂಡವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಾಹಿತಿ ಸಂತೋಷ್ ಮಡೆನೂರು ತಿಳಿಸಿದರು.
ತಾಲೂಕಿನ ಸಾವಯವ ಕೃಷಿಕ ಮಹೇಶ್ ಅವರ ಮಣ್ಣಿನ ಮನೆಯಲ್ಲಿ ಶುಕ್ರವಾರ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ ಹಾಗೂ ಪರಿಸರ ವಿನಾಶದ ಬಗ್ಗೆ ಜಾಗೃತಿ ಮೂಡಿಸಲು ಸಾಹಿತ್ಯ ರಚನೆಯ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. ಸಸ್ಯಯಜ್ಞ ತಂಡದ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ಜಾಗೃತಿ ಮೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುವುದನ್ನು ಅರಿತಿರುವ ನಾವು ನಿರಂತರವಾಗಿ ಜನರ ಒಡನಾಟದೊಂದಿಗೆ ಉತ್ತಮ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಉತ್ತಮ ಸಾಹಿತ್ಯ ರಚನೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೃಷಿಕ ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿತ್ತುವುದರಿಂದ ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪ್ರಸ್ತುತ ಸಂದರ್ಭದಲ್ಲಿ ಸಾವಯವ ಪದ್ಧತಿ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವುದು ರೈತರಿಗೆ ಅನಿವಾರ್ಯವಾಗಿದೆ ಎಂದರು.
ಬರಹಗಾರರು ಕನ್ನಡ ಸಾಹಿತ್ಯದ ಜತೆಯಲ್ಲಿಯೇ ಕೃಷಿ ಸಾಹಿತ್ಯ ರಚನೆಯತ್ತಲೂ ಗಮನ ಹರಿಸಿದರೆ ರೈತರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುವುದು ಎಂದರು .
ರೈತರು ಪ್ರಕೃತಿದತ್ತವಾಗಿ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಹಾಗೂ ಕೃಷಿಕ ಮಹೇಶ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಸ್ಯ ಯಜ್ಞ ತಂಡದ ಪ್ರಭುಸ್ವಾಮಿ, ರೈತರಾದ ಮೋಹನ್ ಕುಮಾರ್, ಶಿವನಂಜಪ್ಪ,ರಾಜಣ್ಣ,ಕಂಬಯ್ಯ, ಮಲ್ಲಿಕಾರ್ಜುನ, ಪರಶುರಾಮ್, ಹಾಗೂ ಹಲವಾರು ಗ್ರಾಮಸ್ಥರು ಹಾಜರಿದ್ದರು.
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ4 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ10 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!