ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಎಚ್.ಎಸ್ ವೆಂಕಟೇಶಮೂರ್ತಿ ಹೊಸ ಕವನ ಸಂಕಲನದ ಕವಿತೆ: ಕಾಂಚನಜುಂಗ
ಖ್ಯಾತ ಕವಿ ಎಚ್. ಎಸ್ ವೆಂಕಟೇಶಮೂರ್ತಿ ಅವರ ನೂತನ ಕವನ ಸಂಕಲನ ʼಮುಸ್ಸಂಜೆಯ ಮಾತುʼ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಕೃತಿಯಿಂದ ಆಯ್ದ ಒಂದು ಪದ್ಯ ಇಲ್ಲಿದೆ.
ಚಳಿಗೆ ಗದಗದ ನಡುಕ. ವಸಡುಗಳ ಅಪ್ರಯತ್ನಕ ತಾಳ,
ವ್ಯಾಘ್ರಗಿರಿಯೇರುವ ಉತ್ಸಾಹಕ್ಕೆ ಮುಂಜಾವು ನಾಕಕ್ಕೇ
ಜೀಪೇರಿ ನಾನು ಮತ್ತು ನನ್ನ ಮನೆಯಾಕೆ. ಪಿಳಿಪಿಳಿ ಕಣ್ಣ
ಹೊರತು ಎರಡು ಬಟ್ಟೆ ಮೂಟೆ, ಪರ್ವತದೇರುದಾರಿ.
ಕುತ್ತುಬ್ಬುಸಪಡುತ್ತೇರುವ ಜೀಪು, ಶಿಖರ ತಲಪಿದಾಗ
ಆರಕ್ಕೆ ಕೆಲವೇ ಕ್ಷಣ ಬಾಕಿ, ಹಬೆಯಾಡುವ ಸುಡು ಚಹಾ
ಕೈಯಿಂದ ಬಾಯಿಗೆ ಬೀಳುವಷ್ಟರಲ್ಲಿ ಉಗುರು ಬೆಚ್ಚಗೆ
ಸುವರ್ಣಜೂಟ ನಾವು ನೋಡಿಯೇವೆ? ಮೋಡಕರುಣಿಸ
ಬೇಕು. ಎಲ್ಲರ ಕಣ್ಣೂ ಪಶ್ಚಿಮಶಿಖರದ ಮೇಲೆ. ಸೂರ್ಯ
ಮೂಡಿದ ಪೂರ್ವದಲ್ಲಿ. ಅವನ ಬಂಗಾರ ಕಿರಣ ಕಾಂ
ಚನ ಜುಂಗದ ತುದಿಗೆ ತಾಕಿದ್ದೇ ಆ ಶ್ವೇತಪರ್ವತ
ಹೊನ್ನಿನ ಕಿರೀಟದಿಂದ ಆಚ್ಛಾದಿತವಾಗಿ ಯಾತ್ರಿಕರು
ಅಹಾ ಎಂದು ಉದ್ಗರಿಸುತ್ತ ನಿಂತಿದ್ದಾರೆ. ಬಂಗಾರ
ಕಿರೀಟ ನಿಧಾನಕ್ಕೆ ವಿಸ್ತರಿಸುತ್ತಾ ಇಡೀ ಪರ್ವತ ಕಾಂಚನ
ಮಯ, ಶಿವನ ಜುಟ್ಟು ಎಂದಿದ್ದು ಕವಿಯೇ ಇರಬೇಕು
ಬಿಸಿಲೇರಿ ಹಿಮ ಕರಗಿ ಕಾಂಚನಜುಂಗ ಯಾವತ್ತಿನ ನೀಲ
ಕೆಲವೇ ಕ್ಷಣದ ರಂಗಾಟ ಮುಗಿದು ಮತ್ತೆ ಸೀದಾಸಾದ.
ಕೃತಿ: ಮುಸ್ಸಂಜೆ ಮಾತು (ಕವನ ಸಂಕಲನ)
ಕವಿ: ಎಚ್. ಎಸ್ ವೆಂಕಟೇಶಮೂರ್ತಿ
ಪ್ರಕಾಶನ: ಬಹುರೂಪಿ
ಬೆಲೆ: 100/-
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಶ್ರೀಧರ ಬಳಗಾರರ ಕಾದಂಬರಿ ʼವಿಸರ್ಗʼ
ಕಲೆ/ಸಾಹಿತ್ಯ
Book release: ಹಳದೀಪುರ ವಾಸುದೇವ ರಾವ್ ಅವರ ʼಮನೋಲ್ಲಾಸʼ ಕೃತಿ ನಾಳೆ ಬಿಡುಗಡೆ
ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಿಸಿದ ಬರಹಗಳ ಗುಚ್ಛವನ್ನು ಹೊಂದಿರುವ ʼಮನೋಲ್ಲಾಸʼ ಕೃತಿಯನ್ನು ಶತಾವಧಾನಿ ಆರ್. ಗಣೇಶ್ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು: ಲೇಖಕ ಹಳದೀಪುರ ವಾಸುದೇವ ರಾವ್ ಅವರ ʼಮನೋಲ್ಲಾಸʼ ಪುಸ್ತಕ ನಾಳೆ (ಜೂನ್ 8) ಲೋಕಾರ್ಪಣೆಗೊಳ್ಳಲಿದೆ.
ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಿಸಿದ ಬರಹಗಳ ಗುಚ್ಛವನ್ನು ಹೊಂದಿರುವ ಈ ಕೃತಿಯನ್ನು ಶತಾವಧಾನಿ ಆರ್. ಗಣೇಶ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ಅಶ್ವತ್ಥನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಜ್ಞಾನಿಗಳಾದ ಬಿ.ಎಸ್ ರಾಮರಾವ್ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.
ಸಾಹಿತ್ಯ ಪ್ರಕಾಶನ ಪ್ರಕಟಿಸುತ್ತಿರುವ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ಜೂನ್ 8ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಇದನ್ನೂ ಓದಿ: ISKCON: ಇಸ್ಕಾನ್‌ನಿಂದ ಯುಕೆಯಲ್ಲಿ ಶ್ರೀಲ ಪ್ರಭುಪಾದರ ಜೀವನ ಚರಿತ್ರೆ ‘ಸಿಂಗ್, ಡಾನ್ಸ್ ಆ್ಯಂಡ್ ಪ್ರೇ’ ಪುಸ್ತಕ ಬಿಡುಗಡೆ
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಸೀಕ್ರೆಟ್ ಸ್ಯಾಂಟಾ
ದೇಹದ ಅದೊಂದು ಭಾಗವಿಲ್ಲದಿದ್ದರೆ ಏನು ಮಹಾ? ನಿನ್ನೊಟ್ಟಿಗೆ ಚೆಂದವಾಗಿಯೇ ಬಾಳುವೆ, ಅವರಿವರು ಮಾತಿನ ಕಲ್ಲೆಸೆಯಲು ಬಿಡಲಾರೆ ಎಂಬ ಭಾವನೆಯನ್ನು ಹೆಂಡತಿಗೆ ದಾಟಿಸಬೇಕಿತ್ತು ಅವನಿಗೆ. ಆದರೆ ಅದು ಅಷ್ಟು ಸುಲಭವೇ?
:: ಪೂರ್ಣಿಮಾ ಭಟ್ ಸಣ್ಣಕೇರಿ
‘ಆರ್ ಯೂ ಔಟ್ ಆಫ್ ಯುವರ್ ಮೈಂಡ್ ಸನ್ನೀ?’ ಎಂದು ಸುಮಾರು ಕಿರಿಚಿದ ಹಾಗೇ ಮಾತಾಡಿದ ನನ್ನ ಧ್ವನಿ ಇನ್ನೂ ತಾರಕಕ್ಕೇ ಏರತೊಡಗಿತು.
‘ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್, ನಿಪ್ಪಲ್ ಕನ್‌ಸ್ಟ್ರಕ್ಷನ್, ಬೂಬ್ಸ್ ಶೇಪಿಂಗ್… ಇನ್ನೂ ಏನಾದರೂ ಉಳಿದಿದ್ಯಾ ಇಲ್ಲಿಗೇ ಮುಗೀತಾ ನಿನ್ನ ಲಿಸ್ಟು?’ ನನ್ನ ಇಡೀ ದೇಹ ಥರಗುಡುತ್ತಿತ್ತು. ಈ ಎರಡು ವರ್ಷಗಳಲ್ಲಿ ಇಷ್ಟು ಧ್ವನಿ ಎತ್ತರಿಸಿ ಮಾತನಾಡಿದ್ದು ಇದು ಮೊದಲನೇ ಸಲವಾಗಿತ್ತು. ಒಂದೇ ಧ್ಯಾನದಲ್ಲಿ ತಾಳ್ಮೆ ಮೀರದ ಹಾಗೆ ತಾಸುಗಟ್ಟಲೇ ಹಿಡಿದ ಭಾರದ ಡಂಬೆಲ್ಸ್ ಸಮತೋಲನ ತಪ್ಪಿ ಕಾಲ ಮೇಲೆ ಬಿದ್ದ ಅನುಭವ ನನಗೆ.
ಮಂಚದ ಬುಡದಲ್ಲಿನ ಹೆಡ್ ಬೋರ್ಡಿಗೆ ಬೆನ್ನು ಆನಿಸಿದ್ದ ಸನ್ಮುಕ್ತಾ ಇವತ್ತು ಒಂದು ತೀರ್ಮಾನ ಆಗಲೇಬೇಕೆಂದು ಅಲ್ಲಿ ಬೇರುಬಿಟ್ಟು ಕುಳಿತಂತೆ ಇದ್ದಳು. ಬಲಗೈ ಎದೆಯ ನಡುವೆ ಹಾದು ಎಡದೋಳನ್ನು ಮೆಲ್ಲನೆ ಸವರುತ್ತಿತ್ತು. ಚಾಚಿದ ಕಾಲಿನ ಬೆರಳುಗಳನ್ನು ಆಗಾಗ ಸುರುಳಿ ಮಾಡಿ ನೆಟ್ಟಗಾಗಿಸುತ್ತಿದ್ದಳು ಅವಳಿಗೇ ಗೊತ್ತಿಲ್ಲದಂತೆ.
‘ನನಗೆ ಜಾಸ್ತಿ ಪೊಯಟಿಕ್ ಆಗಿ ಮಾತಾಡಲು ಬರೋದಿಲ್ಲ ಕಣೋ. ನನ್ನ ಫೀಲಿಂಗ್ಸ್ ನಿನಗೆ ಹೇಗೆ ಅರ್ಥ ಮಾಡಿಸಲಿ? ನನ್ನ ಕಡೆಯಿಂದ ಡಿಸೈಡ್ ಮಾಡಿಯಾಗಿದೆ. ತಾಸುಗಟ್ಟಲೆ ರೀಸರ್ಚ್ ಮಾಡಿದ್ದೇನೆ. ಎರಡು ಪ್ಲಾಸ್ಟಿಕ್ ಸರ್ಜನ್ ಜತೆ ಸಪರೇಟ್ ಆಗಿ ಮಾತಾಡಿದ್ದೇನೆ. ನಿನಗೆ ಕಾಣ್ತಿರೋ ಯಾವ ಕಾಂಪ್ಲಿಕೇಷನ್ನೂ ನನಗೆ ಕಾಣ್ತಿಲ್ಲ. ಹಠ ಯಾಕೆ ಮಾಡ್ತೀಯಾ ಅಮ್ಮೂ?’ ಸಮಾಧಾನದಲ್ಲೇ ಹೇಳಿದರೂ ಮಾತುಗಳು ಮಂಜಿನ ಚೂರಿಯಂತೆ ಹರಿತವಾಗಿದ್ದವು.
ಛೇ! ನಾನ್ಯಾಕೆ ಸವಕಲು ಸಿಮಿಲಿಗಳನ್ನೇ ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಸಶಬ್ದವಾಗಿ ಹಣೆ ಬಡಿದುಕೊಂಡೆ.
‘ಅದ್ಯಾಕೆ ಹಣೆ ಚಚ್ಚಿಕೊಳ್ತೀಯಾ? ಮೊದಲ ಸಲ ಬ್ರಾ ಹಾಕಿಕೊಂಡ ಸಂಭ್ರಮ, ಹೈಸ್ಕೂಲಿನಲ್ಲಿ ಯೂನಿಫಾರ್ಮಿನ ಚೌಕುಳಿ ಬ್ಲೌಸಿನ ಸಂದಿಯಲ್ಲಿ ಇಣುಕಿದ ಸ್ಟ್ರಾಪ್ ಒಳತಳ್ಳುವಾಗ ಆದ ನಾಚಿಕೆ, ಧ್ರುವನಿಗೆ ಕೊನೆಯ ಬಾರಿ ಫೀಡ್ ಮಾಡುವಾಗ ನೀನು ಮಾಡಿದ ವಿಡಿಯೋ ನನಗೆ ಕೊಡುವ ಖುಶಿ.. ಇದೆಲ್ಲ ಭಾವನೆಯನ್ನ – ಹೌ ಕೆನ್ ಐ ಪಾಸ್ ದೆಮ್ ಟೂ ಯೂ? ಹೇಳಿಲ್ವಾ ಕವಿ ಥರ ವಿವರಣೆ ಕೊಡೋದು ನನಗಾಗಲ್ಲ ಅಂತ’ ಈ ಬಾರಿ ಧ್ವನಿ ಆದ್ರವಾಗಿತ್ತು.
‘ಈ ಎರಡು ವರ್ಷ ಅನುಭವಿಸಿದ್ದು ಸಾಲದಾ? ಇನ್ನಷ್ಟು ಆಸ್ಪತ್ರೆ ಓಡಾಟ, ಕೌಂಟ್‌ಲೆಸ್ ಅಪಾಯಿಂಟ್ಮೆಂಟ್ಸ್, ಫೋನಿನಲ್ಲಿ ಇನ್ನೂ ಒಂದಷ್ಟು ಪಿಲ್ಸ್ ರಿಮೈಂಡರ್ಸ್ ಇದೆಲ್ಲಾ ಬೇಕಾ ಸನ್ನೀ? ಸ್ವಲ್ಪ ಯೋಚನೆ ಮಾಡು. ಹೀಗೆ ಆರಾಮಾಗಿದ್ದುಬಿಡೋಣ’ ಮಾತು ಮುಗಿಸೋಣವೆಂದುಕೊಂದಷ್ಟೂ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದಂತಿತ್ತು.
‘ಗಂಟೆ ಆಗ್ಲೇ ಎಂಟು. ನಿಂಗೆ ಯಾವತ್ತಿನಂತೆ ಮೆಕ್ಸಿಕನ್ ಬರೀಟೋ ಬೌಲಾ? ನಾನಿವತ್ತು ಸೂಪ್ ಮತ್ತು ಸಲಾಡ್ ಮಾತ್ರ’ ಎಂದು ಫೋನಿತ್ತಿಕೊಂಡಳು, ಮುಂದೆನಿದೆ ಮಾತಾಡುವುದಕ್ಕೆ ಎನ್ನುವಂತೆ.
+++
ಬಾಲ್ಕನಿಗೆ ಬಂದು ಕೂತೆ. ಎರಡು ವಾರದ ಹಿಂದೆ ಈ ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್ ವಿಷಯವನ್ನು ಮೊದಲ ಬಾರಿ ಸನ್ಮುಕ್ತಾ ಪ್ರಸ್ತಾಪ ಮಾಡಿದಾಗ ಅರ್ಧ ವಿಷಯ ತಲೆಯೊಳಗೆ ಹೋಗಲೇ ಇಲ್ಲ. ಒಂದೂವರೆ ದಶಕದ ದಾಂಪತ್ಯದಲ್ಲೂ ಅಷ್ಟೆ, ಅವಳ ಪಾತ್ರ ಜಾಸ್ತಿ ಇದ್ದುದು ಚಿಂತನ ಮಂಥನದಲ್ಲಿ. ನನ್ನ ಪಾತ್ರ ಕಾರ್ಯ ನೆರವೇರಿಸುವಲ್ಲಿ.
ದೊಡ್ಡ ಸಾಫ್ಟ್ವೇರ್ ಕಂಪನಿಯಲ್ಲಿ ಲಕ್ಷ ಸಂಪಾದಿಸುತ್ತಿದ್ದರೂ ನನ್ನ ಹುಕಿಗಾಗಿ ಸಣ್ಣದೊಂದು ಪ್ರಾಡಕ್ಟ್ ಶುರುಮಾಡಿ, ಗೆಳೆಯರಿಂದ, ಕಲೀಗ್‌ಗಳಿಂದ ಮೆಚ್ಚುಗೆ ಪಡೆದುಕೊಂಡು ಅಷ್ಟಕ್ಕೇ ಸುಮ್ಮನಾಗಿ ಕುಳಿತಿದ್ದೆ ನಾನು. ಸನ್ಮುಕ್ತಾ ಯಾವ್ಯಾವ ದಾರಿಯಲ್ಲಿ ಹೋದರೆ ಗಮ್ಯ ಸುಗಮವಾಗಬಹುದು, ಎಲ್ಲಿ ನನ್ನ ಪ್ರಾಡಕ್ಟ್ ಒಂದು ಕಂಪನಿಯಾಗಿ ಬೆಳೆಯಬಲ್ಲದು ಎಂಬುದನ್ನೆಲ್ಲ ಲೆಕ್ಕಾಚಾರ ಹಾಕಿದವಳು. ಕೋಟಿಗಟ್ಟಲೆ ಇನ್‌ವೆಸ್ಟ್‌ಮೆಂಟಿನ ಕಠಿಣ ದಾರಿಯನ್ನು ಹೂಹಾದಿಯನ್ನಾಗಿಸಿದವಳು.
ಎರಡು ವರ್ಷದ ಹಿಂದೆ ಒಂದು ಸುಡು ಬೇಸಿಗೆಯಲ್ಲಿ ಸನ್ಮುಕ್ತಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾದದ್ದು. ಸ್ವಲ್ಪಕಾಲ ದಿಕ್ಕುತಪ್ಪಿದ ಜೋಡಿಹಕ್ಕಿಗಳಂತೆ ಅಲ್ಲಿಲ್ಲಿ ಅಲೆದರೂ ಹೇಗೋ ಮತ್ತೆ ಗೂಡನ್ನು ಕಂಡುಕೊಂಡಿದ್ದೆವು. ರೇಡಿಯೇಶನ್, ಕೀಮೋ, ಸ್ಕ್ಯಾನುಗಳು, ಡಯೆಟ್ ಪ್ಲಾನುಗಳು, ಮಾತ್ರೆಗಳು ಈ ಎಲ್ಲವಕ್ಕೂ ನಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದೆವು. ದಿನವೂ ಸಂಭವಿಸುವ ರಾತ್ರಿಯ ವಿಹಾರ ನಮ್ಮಿಬ್ಬರಿಗೂ ಥೆರಪ್ಯುಟಿಕ್. ಮಾತ್ರೆಯ ಭಾದೆ ತಾಳದೆ ಗೋಳೆಗುಟ್ಟಿ ಸನ್ಮುಕ್ತಾ ಅತ್ತ ರಾತ್ರಿಗಳಲ್ಲಿ ನಿದ್ದೆ ನನ್ನ ಸುತ್ತ ಸುಳಿಯುತ್ತಲಿರಲಿಲ್ಲ. ಮಾರನೆಯ ದಿನ ಮತ್ತೆ ಅವಳ ಕಣ್ಣಲ್ಲಿ ಹೊಳಪು ಕಂಡರೆ ನಾನು ಅಂದು ಸ್ವತಃ ಸೂರ್ಯ.
ಕಾಲಕ್ಕೆ ಕೂಡ್ರುವ ಪದ್ಧತಿಯಿಲ್ಲವಲ್ಲ. ಮ್ಯಾಸ್ಟೆಕ್ಟಮಿ ಪ್ರೊಸೀಜರ್ ನಂತರ ಸಪಾಟಾದ ಒಂದು ಭಾಗದ ಎದೆಯನ್ನು ನೋಡಿದಾಗಲೆಲ್ಲ ನಾನು ಸನ್ಮುಕ್ತಾಳ ಕಣ್ಣನ್ನು ತುಸು ತಪ್ಪಿಸಿದ್ದನ್ನು ಬಿಟ್ಟರೆ ಬಾಕಿ ಎಲ್ಲವೂ ನಾರ್ಮಲ್ ಎಂದುಕೊಂಡಿದ್ದೆವು ನಾವಿಬ್ಬರೂ. ಹದಿನೈದು ವರ್ಷಗಳ ಏರಿಳಿತಗಳ ಬಂಧ ನಮ್ಮನ್ನು ಹಿತವಾಗಿ ನೇವರಿಸುತ್ತಿತ್ತು. ಅದಕ್ಕೇ ಉಳಕಿ ಎಲ್ಲ ನಾರ್ಮಲ್ ನಾರ್ಮಲ್.
ಅದೆಲ್ಲಿಂದ ತಲೆಯಲ್ಲಿ ಹುಳು ಬಿಟ್ಟುಕೊಂಡಳೋ ಗೊತ್ತಿಲ್ಲ ಸನ್ಮುಕ್ತಾ. ಸಪಾಟಾದ ಎದೆಗೆ ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್ ಸರ್ಜರಿ ಆಗಲೇಬೇಕೆಂದು ಹಟ ಹಿಡಿದಿದ್ದಾಳೆ. ಅವಳೇ ಹೇಳಿದ್ದಲ್ಲವೇ ನನಗೆ, ಅವಳ ಡೆವೆಲಪ್‌ಮೆಂಟ್ ಟೀಮಿನ ಅಮೇರಿಕನ್ ಕೌಂಟರ್‌ಪಾರ್ಟ್ ಮೆಗ್ ಮೊದಲು ಈ ಬಗ್ಗೆ ಹೇಳಿದ್ದು ಎಂದು..
ಶುರುವಿನಲ್ಲಿ ಸನ್ಮುಕ್ತಾ ಈ ಬಗ್ಗೆ ಮಾತಾಡಿದಾಗ ನಾನೂ ಹಾರಿಕೆಯ ಉತ್ತರ ಕೊಟ್ಟೆ. ಮಾತು ಮರೆಸಲು ನೋಡಿದೆ. ಸನ್ಮುಕ್ತಾಳಲ್ಲಿ ಈ ಬಗ್ಗೆ ಮಾತಾಡುವ ಸಲಿಗೆಯಿಲ್ಲ ಎಂದಲ್ಲ.. ಜೀವನ ಇನ್ಮುಂದೆ ಹೀಗೆಯೇ ಎಂದು ನಿರ್ಧರಿಸಿಯಾಗಿತ್ತಿರಬೇಕು. ಕಷ್ಟಕಾಲದಲ್ಲಿ ಹೆಂಡತಿಯ ಹಿಂದೆ ನಿಂತವ ಎನ್ನಿಸಿಕೊಳ್ಳುವ ಹಂಬಲವೂ ಇದ್ದಿರಬೇಕು. ಇಷ್ಟೆಲ್ಲ ಎದುರಿಸಿದ್ದೇವೆ ಆದರೂ ಜೀವನ ನಾರ್ಮಲ್ ಆಗಿಯೇ ಇದೆ ಎನ್ನುವ ಗಟ್ಟಿತನವನ್ನು ಇನ್ನಷ್ಟು ಕಲ್ಲಾಗಿಸಬೇಕಿತ್ತಿರಬೇಕು. ದೇಹದ ಅದೊಂದು ಭಾಗವಿಲ್ಲದಿದ್ದರೆ ಏನು ಮಹಾ? ನಿನ್ನೊಟ್ಟಿಗೆ ಚೆಂದವಾಗಿಯೇ ಬಾಳುವೆ, ಅವರಿವರು ಮಾತಿನ ಕಲ್ಲೆಸೆಯಲು ಬಿಡಲಾರೆ ಎಂಬ ಭಾವನೆಯನ್ನು ಸನ್ಮುಕ್ತಾಳಿಗೆ ದಾಟಿಸುವ ಸೋಗು ಗಾಢವಾಗಿತ್ತಿರಬೇಕು.
ಇಷ್ಟು ವರ್ಷದ ಜತೆತನದಲ್ಲಿ ಯಾವತ್ತೂ ಎರಡು ದಿನಕ್ಕಿಂತ ಜಾಸ್ತಿ ಮುಂದುವರೆದ ಭಿನ್ನಾಭಿಪ್ರಾಯಗಳಿರಲಿಲ್ಲ. ಈ ಬಾರಿ ಮಾತ್ರ ಎರಡು ವಾರಕ್ಕೂ ಮಿಕ್ಕಿ ತಿಕ್ಕಾಟ ನಡೆಯುತ್ತಿದೆಯಲ್ಲ. ನಿರಾಶೆ, ಹತಾಶೆ ಮಿಗುವರೆಯಿತು.
ಬಾಲ್ಕನಿಯಿಂದ ಡೈನಿಂಗ್ ಟೇಬಲಿನತ್ತ ಬಂದಾಗ ಸ್ವಿಗ್ಗಿಯಿಂದ ಬಂದ ಬರೀಟೋ ಬೌಲ್ ಮಾತ್ರ ಕಂಡಿತು. ಒಮ್ಮೆ ಅಡುಗೆ ಮನೆಯ ಸಿಂಕಿನ ಬಳಿ ಹೋಗಿ ಸನ್ಮುಕ್ತಾ ಊಟ ಮುಗಿಸಿದ್ದಾಳೆ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಆರನೇ ಫ಼್ಲೋರಿನ ಗೆಳೆಯನ ಮನೆಗೆ ಹೋಗಿದ್ದ ಮಗ ಧ್ರುವ ಕೂಡಾ ಮನೆಗೆ ವಾಪಸ್ಸಾಗಿ ತನ್ನ ರೂಮಿನ ಕಂಪ್ಯೂಟರ್‌ನಲ್ಲಿ ಮುಳುಗಿದ್ದ. ಎಕ್ಸೆಲ್ ಶೀಟಿನ ಚೌಕದಮೇಲೆ ‘ಎಕ್ಸಾಂ – ಹೆಡ್ ಆನ್ ಕೊಲಿಶನ್’ ಎಂಬುದು ದಪ್ಪಕ್ಷರದಲ್ಲಿ ಕಾಣುತ್ತಿತ್ತು.
ಬರೀಟೋ ಬೌಲ್ ಬರಿದು ಮಾಡಿ ಮತ್ತೆ ಬಾಲ್ಕನಿಗೆ ಹೋಗಿ ಕುಕ್ಕರಿಸಿದೆ. ಅಸಂಬದ್ಧ ಯೋಚನೆಗಳು, ಇವಳ ಕ್ಯಾನ್ಸರಿನ ಪತ್ತೆಯಾದಾಗ ಶುರುವಿನ ದಿನಗಳಲ್ಲಿದ್ದಂತೆ. ಸಾಕಾಯಿತಪ್ಪ ಈ ಬಗ್ಗೆಯೇ ಯೋಚಿಸಿ. ನನಗಿಂತ ಜಾಸ್ತಿ ವ್ಯಾಲಿಡೇಶನ್ ಬೇಕಾ ಇವಳಿಗೆ? ನಾನೇ ಇವಳ ಸಪಾಟನ್ನು ಸ್ವೀಕರಿಸಿಯಾಗಿದೆ ಇನ್ನೆಲ್ಲಿಯ ರಗಳೆ ಇವಳದ್ದು ಎಂದು ಛೇಗುಟ್ಟಿದೆ ಶಬ್ದಸಹಿತವಾಗಿ. ತಕ್ಷಣ ನನ್ನ ಮೇಲೇ ನನಗೆ ಹೇವರಿಕೆ ಬಂತು. ಎಂಥ ಕೆಟ್ಟ ವಿಡಂಬನೆಯಪ್ಪಾ ಎಂದು ತಲೆ ಕೊಡವಿದೆ.
ಕುಟುಂಬಕ್ಕೆ ಇಂಬಾದ ಬಾಳಸಂಗಾತಿ ಅನುಭವಿಸಲಿರುವ ಮೆಡಿಕಲ್ ಕಾಂಪ್ಲಿಕೇಷನ್, ತೊಡಕುಗಳೇ ನನ್ನನ್ನು ನಿಜವಾಗಿಯೂ ಕಾಡುತ್ತಿವೆಯಾ ಎಂದು ಮೂಲ ಉದ್ದೇಶವನ್ನೇ ಪ್ರಶ್ನಿಸಿಕೊಂಡೆ. ಪ್ರಶ್ನೆಗಳು ಜಟಿಲವಾಗುತ್ತ ನಡೆದವು.
ಹತ್ತು ವರ್ಷದ ಹಿಂದೆ ನಡೆದ ಘಟನೆಯನ್ನು ಇವತ್ತಿಗೆ ತಳುಕು ಹಾಕುವ ಅಗತ್ಯವಿಲ್ಲ. ಆದರೂ ನೆನಪಿಗೆ ಬರುತ್ತಿದೆ. ದೊಡ್ಡ ಐಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದ ಕಾಲ. ಆರು ವಾರದ ಸಲುವಾಗಿ ಬರ್ಮಿಂಗ್‌ಹಮ್ ಆಫೀಸಿಗೆ ಹೋಗಿದ್ದೆ, ನವೆಂಬರ್ ತಿಂಗಳಿನಿಂದ ಡಿಸೆಂಬರ್‌ವರೆಗೆ. ವರ್ಷಾಂತ್ಯ ಬಂತೆಂದರೆ ಅಲ್ಲಿನವರಿಗೆ ಮೋಜಿನ ಸಮಯ. ಆಫೀಸಿನಲ್ಲಿ ಸೀಕ್ರೆಟ್ ಸ್ಯಾಂಟಾ ಗಿಫ್ಟ್ ಎಕ್ಸ್‌ಚೇಂಜ್ ಸಂಭ್ರಮ ನಡೆದಿತ್ತು. ಆಫೀಸಿನ ಮೂಲೆಯಲ್ಲಿ ಸಿಂಗರಿಸಿಕೊಂಡು ನಿಂತಿದ್ದ ಕ್ರಿಸ್‌ಮಸ್ ಟ್ರೀಯ ಬುಡದಲ್ಲಿ, ಒಂದು ದಿನ ಮುಂಚಿತವಾಗಿ ಎಲ್ಲರೂ ಉಡುಗೊರೆಗಳನ್ನು ತಂದಿಡಬೇಕು. ಕ್ರಿಸ್‌ಮಸ್ ಈವ್ ಆದ ಡಿಸೆಂಬರ್ ಇಪ್ಪತ್ನಾಲ್ಕರಿಂದ ಆಫೀಸಿಗೆ ರಜೆ. ಹಾಗಾಗಿ ಇಪ್ಪತ್ಮೂರರಂದು ಸಂಜೆ ತಮ್ಮ ತಮ್ಮ ಹೆಸರಿದ್ದ ಉಡುಗೊರೆಯನ್ನು ಪ್ರತಿಯೊಬ್ಬರೂ ಪಾಳಿಯ ಪ್ರಕಾರ ತೆರೆದು ತೋರಿಸಬೇಕು. ವಿಚಿತ್ರ ಸ್ಲೋಗನ್ನುಗಳಿದ್ದ ಜಂಪರ್, ಪೈರೆಟ್ ಐಪ್ಯಾಚ್, ಬೆತ್ತಲೆ ಜೋಡಿಯಿದ್ದ ಕರ್ಟನ್ ಹೀಗೆ ಇನ್ನೂ ಕೆಲವು ಉಡುಗೊರೆಗಳನ್ನು ಸಹೋದ್ಯೋಗಿಗಳು ತೆರೆದಾದ ಮೇಲೆ ನನ್ನ ಸರದಿ ಬಂತು. ನನ್ನ ಹೆಸರು ಯಾರಿಗೆ ಬಂದಿತ್ತು ಗೊತ್ತಿಲ್ಲ.. ನಾನು ನಿಧಾನಕ್ಕೆ ಪೊಟ್ಟಣವನ್ನು ಬಿಚ್ಚಿದೆ. ಮೆತ್ತಮೆತ್ತಗಿನ ಅನುಭವವಾದಂತಾಯ್ತು. ಕೊನೆಯ ಪದರವನ್ನೂ ಬಿಡಿಸಿದೆ. ನನ್ನ ಮಧ್ಯಮಗಾತ್ರದ ಕೈಯ್ಯಿಂದ ಹೊರ ತುಳುಕುವಷ್ಟು ದೊಡ್ಡ ಸ್ತನ! ಆರ್ಟಿಫಿಶಿಯಲ್ ಬ್ರೆಸ್ಟ್. ಹೂಬೇಹೂಬ್ ನಿಜವಾದ ಮೊಲೆಯಂತೆಯೇ ಇದೆ. ನನ್ನ ಮುಖವೆಲ್ಲ ಕೆಂಪಡರಿತು.
ಸಹೋದ್ಯೋಗಿಗಳೆಲ್ಲ `ಹೋ’ ಎಂದು ಕಿರುಚಿ ಕಿಚಾಯಿಸಿದರು. ನಾಚಿಕೆಯೋ, ಕಲ್ಚರಲ್ ಆಘಾತವೋ ಕೆಲವು ನಿಮಿಷಗಳಷ್ಟು ಕಾಲ ಮಾತೇ ಆಡಲಿಲ್ಲ ನಾನು. ನನ್ನ ಸೀಕ್ರೆಟ್ ಸ್ಯಾಂಟಾ ಉಡುಗೊರೆಯನ್ನು ಯಾರೂ ನೋಡೇ ಇಲ್ಲವೇನೋ ಎಂಬಂತೆ ಕದ್ದು ಲ್ಯಾಪ್‌ಟಾಪ್ ಬ್ಯಾಗಿನೊಳಗೆ ಸೇರಿಸಿದೆ. ಮೊದಲೇ ನಿಗದಿಯಾದಂತೆ ಮರುದಿನ ಭಾರತಕ್ಕೆ ಹೊರಟುಬಂದೆ. ಮನೆಗೆ ಬಂದ ಮಾರನೆಯ ರಾತ್ರಿ ಧ್ರುವ ಮಲಗಿದ ನಂತರ ಸನ್ಮುಕ್ತಾಳಿಗೆ ಒಮ್ಮೆ ಸ್ಯಾಂಟಾ ಕೊಟ್ಟ ಉಡುಗೊರೆ ತೋರಿಸಿ ಅದನ್ನು ಕವರ್ ಸಮೇತವಾಗಿ ನನ್ನ ವಾರ್ಡ್ರೋಬಿನ ಇನ್ನರ್ ಡ್ರಾದ ಮೂಲೆಯಲ್ಲಿ ತುರುಕಿದೆ. ಸನ್ಮುಕ್ತಾ ಅಂದು ಮನಸೋಇಚ್ಛೆ ನಕ್ಕಿದ್ದಳು.
+++
ಎಷ್ಟು ಹೊತ್ತು ಹೊರಗೆ ಕೂತಿದ್ದೆನೋ. ಪಕ್ಕದ ಲೇಔಟಿನಲ್ಲಿ ಗಾರ್ಡ್ ಎಡೆಬಿಡದೆ ಹೊಡೆಯುತ್ತಿದ್ದ ಸೀಟಿ ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತಂದಿತು. ಬೆಡ್‌ರೂಮಿಗೆ ಬಂದೆ. ಸನ್ಮುಕ್ತಾ ನಿದ್ದೆ ಮಾಡಿಲ್ಲ ಎಂಬುದು ನನಗೆ ಗೊತ್ತು. ಗಾಢ ನವಿಲು ಬಣ್ಣದ ಕಿಟಕಿಯ ಪರದೆಯ ಕಡೆ ಮುಖ ಮಾಡಿ ಮಲಗಿದವಳ ಮಗ್ಗುಲಿಗೆ ಬಂದು ಕೂತೆ. `ಸನ್ನೀ’ ಎಂದು ನಿಧಾನವಾಗಿ ಕರೆದೆ. ಹಣೆಯ ಮೇಲೆ ಬೆರಳಾಡಿಸಿದೆ. ಇಡೀ ದೇಹವನ್ನು ಜರುಗಿಸಿ ಜಾಗ ಮಾಡಿದವಳೇ ಕಾಲರ್ ಹಿಡಿದು ಜಗ್ಗಿ ನನ್ನನ್ನೂ ತನ್ನ ಪಕ್ಕ ಒರಗಿಸಿಕೊಂಡಳು.
`ಸನ್ನೀ, ನಿನ್ನ ಆಪರೇಶನ್ ಆಗಿ ಹದಿನೆಂಟು ತಿಂಗಳಾಯ್ತು. ಅಷ್ಟೊಂದು ತಿಂಗಳು ಆಸ್ಪತ್ರೆಗೆ ಟೆಸ್ಟ್‌ಗಳಿಗೆ ಹೋಗಿದ್ದು, ಪ್ರತೀ ರಿಪೋರ್ಟ್ ಓದುವ ಮೊದಲೂ ಕೈಕಾಲು ತಣ್ಣಗಾಗಿದ್ದು ಎಲ್ಲವೂ ಮರೆತೆಯಾ? ಈಗಲೂ ತುಂಬ ಸುಂದರಿ ನೀನು. ನನಗೆ ಅಪ್ಸರೆಯೇ. ಧ್ರುವನಿಗಂತೂ ದೇವತೆ ನೀನು. ದ್ಯಾಟ್ಸ್ ವಾಟ್ ಹೀ ಸೇಸ್ ರೈಟ್? ಈ ಎರಡು ವಾರ ನಮ್ಮ ಜೀವನದಲ್ಲಿ ಇರಲೇಯಿಲ್ಲ ಎಂದುಕೊಂಡು ಸುಮ್ಮನಾಗಿಬಿಡೋಣ’
`ಐ ಹ್ಯಾವ್ ಕ್ಲೋಸ್ಡ್ ಆನ್ ಇಟ್. ಸರ್ಜರಿ ಶೆಡ್ಯೂಲ್ ಆಗಿದೆ. ನನ್ನ ಸರ್ಜನ್ನಿನ ನಂಬರನ್ನ ಆಗಲೇ ಶೇರ್ ಮಾಡಿದ್ದೇನೆ. ಒಮ್ಮೆ ನೀನೂ ಮಾತಾಡಿ ನೋಡು’
`ಇಷ್ಟು ಮುಂದುವರೆದ ಮೇಲೆ ಇನ್ನೇನಿದೆ?’ ಅಹಂಅನ್ನು ಹತ್ತಿಕ್ಕುವ ಸರ್ವಪ್ರಯತ್ನ ಜಾರಿಯಲ್ಲಿತ್ತು.
`ಹೊರಗಿನ ಗಾಳಿ ನಿನ್ನ ತಲೆಯನ್ನ ಹಗುರಾಗಿಸಿತು ಎಂದು ಭಾವಿಸಿ ಮಾತಾಡುವ ಎಂದೆ’
`ಯಾಕೆ ಸನ್ನೀ? ಮರೆತೆಯಾ ನಮ್ಮ ಮಾತುಕತೆ.. ಬರೀ ಏರುಗತಿಯೇ ಆದರೆ ನಮ್ಮ ಬೇರನ್ನ ಮರೆಯುತ್ತೇವೆಂದು, ಬೇರಿಗೆ ಹುಳಹಿಡಿದು ಬದುಕಿನ ಮರ ಬೀಳುತ್ತದೆಂದು ಅಲ್ಲಲ್ಲಿ ಪಾಸ್ ತೆಗೆದುಕೊಳ್ಳುತ್ತೇವಲ್ಲ? ಅಲ್ಲ? ನೀನು ತಿಳಿಹೇಳು ನನಗೆ. ಇಷ್ಟೂ ವರ್ಷ ಕಾಲ ಇದೇ ಅಲ್ಲವೇ ನಾವು ಮಾಡಿದ್ದು?’
`ಅಬಾ, ಎಷ್ಟಪ್ಪ ಮಾತು! ಈ ಬಾರಿ ನಿಂಗೆ ತಿಳಿಹೇಳುವ ವಿವೇಕ ನನ್ನಲ್ಲಿಲ್ಲ’ ವಿಷಾದ ತುಂಬಿತು ರೂಮನ್ನ.
ಪ್ರಯತ್ನಪೂರ್ವಕವಾಗಿ ಕೊರಳ ಇಳಿಜಾರ ನೇವರಿಸಹೋದೆ. ಸಟ್ಟನೆ ಕೈ ತಳ್ಳಿದಳು.
`ಇಂಟಾಂಜಿಬಿಲಿಟಿ.. ರಿಮೆಂಬರ್? ಹಾಗೇ ಇರಲಿ ಬಿಡು ಅಮ್ಮೂ.. ಭಾವನೆಗಳ ಬಂಧವೂ ಬೇಡ’
`ಬದುಕನ್ನ ಬಂದಹಾಗೇ ಅಪ್ಪಿಕೊಂಡಾಗಿದೆ ಸನ್ನೀ, ಕಾಣದ ಇನ್ನೊಂದು ತಿರುವು ಬೇಡ’
`ನಾನು ದಿನವೂ ಅರಳಲು ಪ್ರಯತ್ನಿಸಿ ನರಳುತ್ತಿರುವುದು ನಿಂಗೆ ಕಂಡಿಲ್ಲ ಎಂದಾದರೆ ನಿನಗೆ ಕಣ್ಣಿದ್ದೂ ಪ್ರಯೋಜನವೇನು..?’
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ
`…’
`ವಾರ್ಡೋಬಿನ ಬಟ್ಟೆಗಳು ನನ್ನನ್ನು ಅಣಕಿಸುತ್ತವೆ ಕಣೋ.. ಬೋರ್ರ್ಡೂಮಿನಲ್ಲಿ ಎಲ್ಲರೆದುರು ಫ್ರೀಜ್ ಆಗಿಬಿಡುತ್ತೀನಿ. ಇದಕ್ಕೆಲ್ಲ ಒಂದು ಫುಲ್‌ಸ್ಟಾಪ್ ಬೇಕಲ್ಲ’
`ಐ ಥಾಟ್ ವಿ ಹ್ಯಾವ್ ಗಾನ್ ಪಾಸ್ಟ್ ಆಲ್ ದೀಸ್. ಗೋ ಫ್ಲ್ಯಾಟ್ ಫೋಟೋಶೂಟ್..?’
`ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ? ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಲ್ಲ ನೀನು!’ ಕಳ್ಳನನ್ನು ಹಿಡಿದಂತೆ ಮಾತಾಡಿದಳು.
ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಮತ್ತೆ ಎನ್ನಿಸಿತು. ಮಾತುಗಳು ಇನ್ನಷ್ಟು ರಾಡಿ ಮಾಡುವ ಮೊದಲು ಬ್ರಶ್ ಮಾಡುವ ನೆಪಮಾಡಿ ಬಾತ್ರೂಮಿಗೆ ನಡೆದೆ. ಹಲ್ಲುಕಿರಿದಂತಾಗಿದ್ದ ಬ್ರಶ್ಶನ್ನು ಮೂಲೆಗೆ ರಪ್ಪನೆ ಎಸೆದೆ.
ಬೆಳಗ್ಗೆ ಐದಕ್ಕೇ ಎದ್ದು ಊರಿಗೆ ಹೋಗಿ ಬರುವ ನಿರ್ಧಾರ ಮಾಡಿದೆ. ಐದು ಗಂಟೆಗಳ ನಾನ್‌ಸ್ಟಾಪ್ ಡ್ರೈವ್. ಎರಡು ದಿನಗಳ ಓಓಓ’ ಸೆಟ್‌ಅಪ್ ಮಾಡಿ, ಆಫೀಸಿಗೆ ಬರಲಾಗುವುದಿಲ್ಲ ಎಂದು ಇಮೇಲ್ ಬರೆದು
ಸೆಂಡ್ ಆಲ್’ ಬಟನ್ನೊತ್ತಿದೆ. ಬೆಕ್ಕಿನ ಹೆಜ್ಜೆಯಿಟ್ಟು ರೂಮಿನೊಳಗೆ ಹೋಗಿ ವಾರ್ಡೋಬಿನ ಇನ್ನರ್ ಡ್ರಾ ತೆಗೆದು ಹತ್ತುವರ್ಷದಿಂದ ಮುಟ್ಟದೇ ಇದ್ದ ಸಿಕ್ರೇಟ್ ಸ್ಯಾಂಟಾ ಗಿಫ಼್ಟನ್ನು ಎತ್ತಿಟ್ಟುಕೊಂಡೆ.
`ಸನ್ನೀ, ಅಮ್ಮನನ್ನು ನೋಡಿಬರುವೆ’ ಎಂದು ವಾಟ್ಸ್ಯಾಪ್ ಮೆಸೇಜಿಸಿ ಕಾರು ಹತ್ತಿದೆ.
ದಣಪೆ ದಾಟಿ ಅಂಗಳಕ್ಕೆ ಬಂದಾಗ ಅಮ್ಮ ಕೊಟ್ಟಿಗೆಯಲ್ಲಿದ್ದಳು. `ಅರೇ.. ಯಾರು ಬಂದರು ನೋಡು ಗಿರಿಜೆ’ ಎನ್ನುತ್ತ ಅಂಗಳಕ್ಕೆ ಬಂದಳು ಅಮ್ಮ. ಆಗಲೇ ಹೊಳೆದಿದ್ದು ಊರಿಗೆ ಬಂದು ಆರು ತಿಂಗಳಾಗಿದೆ ಎಂದು. ಅರವತ್ತು ಸೀಮೆಯಲ್ಲಿರಸಿದ ನೆಮ್ಮದಿ ಅವಿತಿದ್ದು ಮಾತ್ರ ಅಮ್ಮನ ಮಡಿಲಲ್ಲಿ ಅನ್ನುವುದು ಮನಸ್ಸಿಗೆ ಬಂದು ತುಟಿಗಳು ಅಗಲವಾದವು. ಒಳ್ಳೆಯ ಎತ್ತರದ ಅಮ್ಮ ಕೆಂಪು ಸೀರೆ, ಕಪ್ಪು ಪೋಲಕದಲ್ಲಿ ಎಂದಿಗಿಂತ ಚೆಂದ ಕಂಡಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು
ನಾ ಕಂಡಷ್ಟು ದಿನವೂ ಅಮ್ಮನ ಮೇಲೆ ಕೆಸಕ್ಕನೆ ಹಚಗುಟ್ಟುತ್ತಿದ್ದ ಅಪ್ಪ ಅರವತ್ತಕ್ಕೆ ತೀರಿಕೊಂಡಿದ್ದ. ಬರೀ ಒಳ್ಳೆಯತನ ಮಾತ್ರ ಮನುಷ್ಯನಲ್ಲಿರಲು ಸಾಧ್ಯವೇ ಎಂದುಕೊಂಡು ಅಮ್ಮ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡಂತಿದ್ದಳು. ಪರಿಸ್ಥಿತಿ ಯಾವುದೇ ಇರಲಿ, ಜೊತೆಯಿರುವ ಜೀವಗಳ ಅನುತನು ನೋಡುವುದು ಹೇಗೆಂದು ಅಮ್ಮ ಮಾತನಾಡದೇ ಕಲಿಸಿಕೊಟ್ಟಿದ್ದಳು. ಅಪ್ಪ ಹೋದ ಮೇಲೆ ಕೊಟ್ಟಿಗೆ, ಮನೆ ಸುತ್ತಲ ಜಮೀನು, ಕಾರ್ಯಕಟ್ಟಲೆ, ಆಗೀಗ ವೀಡಿಯೋ ಕಾಲ್‌ಗಳು ಎಂದುಕೊಂಡು ಆರಾಮವಾಗಿದ್ದಳು. ಮೊದಲು ಕಳೆದ ಕಷ್ಟದ ದಿನಗಳ ಕನಸು ಬಿದ್ದು ನಿದ್ದೆ ಕೆಡಿಸದಿರಲಿ ಎಂದು ದಿನವೂ ಅರ್ಧ ನಿದ್ದೆಗುಳಿಗೆ ನುಂಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ವರ್ಷಕ್ಕೊಮ್ಮೆ ವಾರದ ಮಟ್ಟಿಗೆ ನಮ್ಮೊಟ್ಟಿಗೆ ಬಂದಿದ್ದು ಮೊಮ್ಮಗನಿಗೆ ಅಚ್ಚೆ ಮಾಡುತ್ತಿದ್ದಳು. ಅದರಾಚೆಗೆ ಅವಳೂ ಏನೂ ನಿರೀಕ್ಷಿಸುತ್ತಿರಲಿಲ್ಲ, ನಾವೂ ಅವಳನ್ನು ಪರೀಕ್ಷೆಗೊಡ್ಡುತ್ತಿರಲಿಲ್ಲ.
ಅಮ್ಮನ ಅಕರಾಸ್ಥೆಯ ಜಮೀನಿನಲ್ಲಿ ತಿರುಗಾಡಿದೆ. ತಿಳಿಸಾರನ್ನು ಲೋಟದಲ್ಲಿ ಸೊರಸೊರ ಶಬ್ದಮಾಡಿ ಕುಡಿದೆ. ಗಾಡ್ರೆಜ್ ಬೀರುವಿನ ಬಾಗಿಲು ತೆಗೆದು ಅಮ್ಮ ಜೋಡಿಸಿಟ್ಟ ಸೀರೆಗಳ ಮೇಲೆ ಪ್ರೀತಿಯಿಂದ ಕೈಯ್ಯಾಡಿಸಿದೆ. ಹಿತ್ತಲ ಬಾಗಿಲಲ್ಲಿದ್ದ ಕೈತೊಳೆವ ಸಿಂಕಿನ ಮೇಲ್ಭಾಗದ ಕನ್ನಡಿ ಪಳಪಳ ಹೊಳೆಯುತ್ತಿರುವುದ ನೋಡಿ ಬೆರಗಾದೆ. ಮೊದಲು ಯಾವತ್ತೂ ಈ ಕನ್ನಡಿಯ ಹೊಳಪು ನನ್ನ ಕಣ್ಣಿಗೆ ಬಿದ್ದದ್ದಕ್ಕೆ ಬೇಸರಪಟ್ಟೆ.
ನಾಳೆ ಬೆಳಗ್ಗೆ ಒತ್ತು ಶ್ಯಾವಿಗೆ ಮಾಡಲಾ ಎಂದು ಕೇಳಿದ ಅಮ್ಮ ನನ್ನ ಉತ್ತರವನ್ನು ಮೊದಲೇ ಊಹಿಸಿದವಳಂತೆ ಎದ್ದು ದೇವರಮನೆಯ ಪಕ್ಕದ ಪಡಸಾಲೆಯಲ್ಲಿ ಮಲಗಿದಳು. ಜಗಲಿಯಲ್ಲಿ ಟೀವಿ ಚಾನೆಲ್ ಬದಲಾಯಿಸುತ್ತ ಬಿದ್ದುಕೊಂಡೇ ಇದ್ದ ನಾನು ಏನೋ ನಿರ್ಧರಿಸಿದಂತೆ ಎದ್ದೆ. ಗಡಿಯಾರ ಹನ್ನೊಂದೂವರೆ ತೋರಿಸುತ್ತಿತ್ತು. ಬ್ಯಾಗಿನಲ್ಲಿದ್ದ ಸೀಕ್ರೆಟ್ ಸ್ಯಾಂಟಾ ಗಿಫ್ಟನ್ನು ಕವರಿನ ಸಮೇತ ತೆಗೆದು ಕೊಟ್ಟಿಗೆಯ ಪಕ್ಕ ಬಂದೆ. ಕೈಗೆ ಸಿಕ್ಕ ಕೋಲಿನ ಸಹಾಯದಿಂದ ಮಣ್ಣು ಕಲ್ಲು ಏನನ್ನೂ ಲೆಕ್ಕಿಸದೇ ಸಣ್ಣದೊಂದು ಗುದ್ದ ತೋಡಿ ಗಿಫ್ಟನ್ನು ಅದರೊಳಗಿಟ್ಟೆ. ಮೈ ಇದ್ದಕ್ಕಿದ್ದಂತೆ ಹಗುರಾದಂತಾಯಿತು. ಒನ್ನಮೂನೆ ಸ್ಖಲನದ ಸುಖ!
ಮತ್ತೆ ಜಗಲಿಗೆ ಬಂದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲನ್ನು ಎತ್ತಿಕೊಂಡು ಸನ್ಮುಕ್ತಾಳ ಸರ್ಜನ್ನರ ನಂಬರನ್ನು ಸೇವ್ ಮಾಡಿಕೊಂಡೆ. ಮೆಸೇಜ್ ಟೈಪ್ ಮಾಡತೊಡಗಿದೆ… `ಡಾಕ್, ದಿಸ್ ಇಸ್ ಸನ್ಮುಕ್ತಾಸ್ ಹಸ್ಬಂಡ್. ಐ ವಿಲ್ ಬೀ ಇನ್‌ಫ಼್ರಂಟ್ ಆಫ್ ದ ಥಿಯೇಟರ್ ಡ್ಯೂರಿಂಗ್ ದ ಸರ್ಜರಿ ಟುಮೊರೋ’
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ
ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.
:: ಮಂಜು ಚೆಳ್ಳೂರು
’ಕೆ’ – ಅವಳು ತನ್ನ ಇನ್‌ಸ್ಟಾಗ್ರಾಮ್ ಐಡಿಗೆ ಇಟ್ಟುಕೊಂಡಿದ್ದ ಹೆಸರು. ಅದರ ಪ್ರೊಫೈಲಿಗೆ ತನ್ನದೊಂದು ಫೋಟೋ ಕೂಡ ಇಟ್ಟಿರಲಿಲ್ಲ. ಕಪ್ಪು ಹಂಸವೊಂದರ ಚಿತ್ರ. ಕಣ್ಣುಗಳು ಮಾತ್ರ ಬಿಳಿಬಿಳಿ.
’ಸಜ್ಜೆಸ್ಟೆಡ್ ಫಾರ್ ಯು’ ಪಟ್ಟಿಯಲ್ಲಿ ಹತ್ತಾರು ಸಲ ಅವಳ ಪ್ರೊಫೈಲ್ ಬಂದಿದ್ದರೂ ಆಸಕ್ತಿ ವಹಿಸಿರಲಿಲ್ಲ. ಆಕಸ್ಮಾತ್ ಅವಳು ತನ್ನ ಫೋಟೋ ಇಟ್ಟಿದ್ದರೆ ಆಸಕ್ತಿ ವಹಿಸುತ್ತಿದ್ದೆ. ಕೊನೆಗೊಂದು ದಿನ ಅವಳೇ ಫಾಲೋ ಮಾಡಿದ್ದಳು. ಇದ್ಯಾವುದೋ ಫೇಕ್ ಐಡಿ ಎಂದುಕೊಂಡು ಪ್ರೊಫೈಲ್ ಚೆಕ್ ಮಾಡಿದೆ. ಒಂದಷ್ಟು ಫೋಟೋಗಳು ಗಮನ ಸೆಳೆದವು. ಸುತ್ತುವರೆದು ಹಾರಾಡುತ್ತಿರುವ, ವೈರುಗಳ ಜಾಲದಲ್ಲಿ ಸಿಕ್ಕಿಬಿದ್ದಂತೆ ಕಾಣುವ ಕಾಗೆ, ತಂತಿ ಬೇಲಿಯ ಮೇಲೆ ಕುಳಿತ ಗುಬ್ಬಿ, ಮೆಟ್ರೋ ಸ್ಟೇಶನ್‌ನ ಗಾಜಿನ ಕಿಟಕಿಗಳಲ್ಲಿ ಏನೋ ಚಿಂತೆಯಲ್ಲಿರುವಂತೆ ಕೂತ ಪಾರಿವಾಳ – ಎಲ್ಲವೂ ಕಪ್ಪು ಬಿಳಿಪು. ನನಗೂ ಕಪ್ಪು ಬಿಳುಪು ಫೋಟೋಗಳು ಇಷ್ಟ. ಹಾಗಾಗಿ ಅವಳ ಪ್ರೊಫೈಲ್ ಇಷ್ಟವಾಯಿತು. ಅದ್ಯಾಕೋ ಅಲ್ಲಿದ್ದ ಫೋಟೋಗಳನ್ನು ನೋಡಿದಾಗ ಈ ಪ್ರೊಫೈಲ್ ಒಬ್ಬ ಹೆಣ್ಣಿನದೇ ಎನಿಸಿತ್ತು. ಫಾಲೋ ಮಾಡಿದೆ. ಆಗಾಗ ಅವಳು ಹಾಕುತ್ತಿದ್ದ ಫೋಟೋಗಳಿಗೆ ಲೈಕ್ ಮಾಡುತ್ತಿದ್ದೆ.
ಅದಾಗಿ ಎಷ್ಟೋ ದಿನಗಳ ಮೇಲೆ ನಾನೊಂದು ಫೋಟೋ ಪೋಸ್ಟ್ ಮಾಡಿದ್ದೆ. ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ನಿಲ್ಲಿಸಿದ್ದ ಕಣ್ಣು ಮೂಗು ಬಾಯಿಗಳಿಲ್ಲದ ಗೊಂಬೆಯ ಚಿತ್ರ. ಅದಕ್ಕೆ ಅವಳದೇ ಮೊದಲ ಲೈಕು. ಇನ್ ಬಾಕ್ಸಿಗೆ ಮೆಸೇಜೂ ಬಂತು – ನೀವು ಇವತ್ತು ಹಾಕಿದ ಫೋಟೋ ಇಷ್ಟ ಆಯ್ತು. ನಾನು ’ತ್ಯಾಂಕ್ಯೂ’ ಜೊತೆಗೆ ಖುಷಿಯ ಇಮೋಜಿ ಸೇರಿಸಿದ್ದೆ. ನಂಗೂ ನಿಮ್ಮ ಫೋಟೊಗಳು ತುಂಬ ಇಷ್ಟ. ಅದ್ಯಾಕೆ ಬರೀ ಬ್ಲಾಕ್ ಅಂಡ್ ಫೋಟೋಗಳನ್ನೇ ಪೋಸ್ಟ್ ಮಾಡ್ತೀರಿ – ಮಾತು ಮುಂದುವರಿಸುವ ಇರಾದೆಯಲ್ಲಿ ಕೇಳಿದ್ದೆ. ಯಾಕೆ ಗೊತ್ತಿಲ್ಲ. ಐ ಹ್ಯಾವ್ ದಿಸ್ ಸ್ಟ್ರೇಂಜ್ ಅಫಿನಿಟಿ ಟುವರ್ಡ್ಸ್ ಬ್ಲಾಕ್ ಅಂಡ್ ವೈಟ್ ಫೋಟೋಸ್ – ಎಂದಿದ್ದಳು. ಸೇಮ್ ಹೇರ್, ನಂಗೂ ಇಷ್ಟಾನೇ, ಆದ್ರೆ ಯಾಕೆ ಅಂತ ನಂಗೂ ಗೊತ್ತಿಲ್ಲ – ಕೈಚೆಲ್ಲುವ ಇಮೋಜಿ ಸೇರಿಸಿದ್ದೆ. ಹೀಗೆ ಶುರುವಾದ ಮಾತುಕತೆ ಅರ್ಧ ಗಂಟೆವರೆಗೆ ಮುಂದುವರಿಯಿತು. ನಿಮ್ಮ ಆ ಫೋಟೋದ ಕಂಪೋಸಿಶನ್ ಚೆನ್ನಾಗಿದೆ, ಈ ಫೋಟೋದ ಕಲರ್ ಗ್ರೇಡಿಂಗ್ ಚೆನ್ನಾಗಿದೆ, ಇದನ್ನ ಮೆಜೆಸ್ಟಿಕ್ಕಿನ್ ಸ್ಕೈವಾಕ್ ಮೇಲೆ ನಿಂತು ತೆಗೆದಿದ್ದು, ಆ ಫೋಟೋ ತೆಗೆಯುವಾಗ ಜನರಿಂದ ಬೈಸಿಕೊಂಡಿದ್ದೆ, ಮೊಬೈಲ್ ಕ್ಯಾಮೆರಾಗೆ ಎಷ್ಟೇ ಲಿಮಿಟೇಶನ್ಸ್ ಇದ್ರೂ ತಕ್ಕಮಟ್ಟಿಗಿನ ಆರ್ಟಿಸ್ಟಿಕ್ ಇಮೇಜಸ್ ಕ್ರಿಯೇಟ್ ಮಾಡಬಹುದಲ್ವಾ? ಕ್ವಾಲಿಟಿ ನಮ್ಮ ಕೈಲಿಲ್ಲ, ಕಂಪೋಸಿಶನ್ ಅಷ್ಟೆ ನಮ್ ಕೈಲಿರೋದು, ನಾನು ಸ್ನಾಪ್‌ಸೀಡ್ ಬಳಸೋದು, ಓಹ್ ಇನ್ಮೇಲೆ ನಾನೂ ಬಳಸ್ತೀನಿ, ಬೇರೇನು ಹವ್ಯಾಸ? ಓಹ್ ನೀವೂ ಸಾಹಿತ್ಯಪ್ರೇಮಿನಾ, ಇಂಗ್ಲಿಷ್ ತುಂಬ ಓದ್ತೀರಾ? ನನಗ್ಯಾಕೋ ಅವರು ಅಷ್ಟು ಸೇರಲ್ಲ, ಆಕ್ಚುಲಿ ತುಂಬ ಸೆಲಬ್ರೇಟ್ ಆಗ್ತಿರೋರು ಇಷ್ಟ ಆಗಲ್ಲ, ಒಬ್ಬ ರೈಟರ್ ನನಗಷ್ಟೆ ಅರ್ಥ ಆಗಿದಾನೆ ಅನ್ನಿಸ್ಬೇಕು, ಅವಾಗ್ಲೇ ಅವರು ಹತ್ತಿರ ಆಗೋದು, ನಂದೊಂಥರ ವಿಚಿತ್ರ ಕಲ್ಪನೆ ಬಿಡಿ, ಹ್ಹಹ್ಹ – ಹೀಗೆ ಎಲ್ಲವೂ ಫೋಟೋಗ್ರಫಿಯ ಸುತ್ತ, ಸಿನಿಮಾ, ಸಾಹಿತ್ಯದ ಸುತ್ತ ನಡೆದ ಮಾತುಕತೆ. ಆ ಕಡೆ ಮಾತಾಡುತ್ತಿರುವ ಜೀವ ಹುಡುಗಿಯದೆ ಎಂದುಕೊಂಡಿದ್ದರಿಂದ ಅಷ್ಟೊತ್ತು ಮಾತಾಡಿದ್ದೆ. ಕೊನೆಗೆ – ಸರಿ ಬ್ರೋ ಇಷ್ಟೆಲ್ಲಾ ಮಾತಾಡಿದ್ರಿ ನಿಮ್ ನಿಜವಾದ್ ಹೆಸರೇನು ಗೊತ್ತಾಗ್ಲಿಲ್ಲ?! – ಎಂದು ಟ್ರಿಕ್ ಪ್ಲೇ ಮಾಡಿದೆ. ಹುಡುಗಿಯಾಗಿದ್ದರೆ ಜೋರಾಗಿ ನಗುತ್ತಾಳೆ ಎಂದುಕೊಂಡಿದ್ದೆ. ಆದರೆ ಆ ಕಡೆಯಿಂದ ಐದು ನಿಮಿಷ ಯಾವುದೇ ಉತ್ತರ ಬರಲಿಲ್ಲ. ಮೆಸೇಜ್ ನೋಡಿದ್ದಳು ಕೂಡ. ಕಿರಿಕಿರಿ ಆಯಿತು. ಏನು ಮಾಡಬೇಕು ತೋಚದೆ ಮೊಬೈಲ್ ಪಕ್ಕಕ್ಕಿಟ್ಟೆ. ಮತ್ತೆ ಮತ್ತೆ ತೆಗೆದು ನೋಡಿದೆನಾದರೂ ಎಷ್ಟೊತ್ತಾದರೂ ಉತ್ತರ ಬರದಿದ್ದಾಗ ಲಾಕ್ ಮಾಡಿ ಮಲಗಿಕೊಂಡೆ.
ಬೆಳಗ್ಗೆ ಎದ್ದಾಗ ಇನ್ ಬ್ಯಾಕ್ಸಿನಲ್ಲಿ ಉದ್ದ ಮೆಸೇಜ್ –
’ನಂಗೊತ್ತು ನೀವು ನಾನು ಹುಡುಗಿ ಅಂದುಕೊಂಡೇ ಅಷ್ಟೊತ್ತು ಮಾತಾಡಿದ್ದು. ಇರಲಿ. ನನ್ನ ಹೆಸರು ಕವಿತಾ. ಇಪ್ಪತ್ತೇಳು ವಯಸ್ಸು. ರಾಯಚೂರು ಕಡೆಯ ಒಂದು ಊರು. ಒಂದು ಸಾಫ್ಟ್‌ವೇರ್ ಕಂಪನೀಲಿ ಉದ್ಯೋಗ. ಅದರ ಬಗ್ಗೆ ಅಂಥ ಆಸಕ್ತಿಯೇನಿಲ್ಲ. ಹುಟ್ಟಿದ ಊರಿನಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಇಂಜಿನಿಯರಿಂಗ್ ಮಾಡಿದ್ದು. ನೀವು ಎಲ್ಲ ಉತ್ತರಗಳನ್ನೂ ಪರೋಕ್ಷವಾಗಿ ಪಡೆಯುವ ತ್ರಾಸು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಒಂದೇ ಸಲಕ್ಕೆ ಒದರಿಬಿಟ್ಟೆ. ನಿಮ್ಮ ಫೋಟೋಗಳ ಮೇಲಿರುವಷ್ಟು ಆಸಕ್ತಿ ನಿಮ್ಮ ಮೇಲೆ ಖಂಡಿತ ಇಲ್ಲ. ಆದರೂ ಇಂಥ ಫೋಟೋಗಳನ್ನು ತೆಗೆದ ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ನಿಮಗೆ ತೊಂದರೆ ಇಲ್ಲದಿದ್ದರೆ ನನ್ನ ರೀತಿ ಒಂದೇ ಸಲಕ್ಕೆ ಎಲ್ಲವನ್ನೂ ಒದರಬಹುದು’
ಟಫ್ ಹುಡುಗಿ ಎನಿಸಿತು. ಅವಳ ಭಾಷೆ, ಅದರ ಸ್ಪಷ್ಟತೆ ಆಶ್ಚರ್ಯ ಹುಟ್ಟಿಸಿತು. ನಾನೂ ಉದ್ದವಾಗಿ ನನ್ನ ಪರಿಚಯ ಮಾಡಿಕೊಂಡೆ. ಹುಟ್ಟಿದ ಊರು ಧಾರವಾಡದ ಬಗ್ಗೆ, ಕಲಿತು ಕೆಲಸ ಮಾಡುತ್ತಿರುವ ಪತ್ರಿಕೋದ್ಯಮದ ಬಗ್ಗೆ ಹೇಳಿಕೊಂಡೆ. ಆದರೆ ನನಗಿಲ್ಲದ ಹವ್ಯಾಸಗಳನ್ನು ಆರೋಪಿಸಿಕೊಂಡಿದ್ದೆ, ಅವಳಿಗಿಂತ ಎರಡು ವರ್ಷ ಚಿಕ್ಕವನಿದ್ದಿದ್ದನ್ನು ಮುಚ್ಚಿಟ್ಟಿದ್ದೆ, ಫೋಟೋಗ್ರಫಿ, ಸಾಹಿತ್ಯದ ಕುರಿತು ಮಹಾ ಆಸಕ್ತಿ ಇದ್ದವನಂತೆ ಹೇಳಿಕೊಂಡಿದ್ದೆ. ಪ್ರತಿ ವಾಕ್ಯದಲ್ಲೂ ಇಂಪ್ರೆಸ್ ಮಾಡುವ ಇರಾದೆ ಮೇಲುಗೈ ಪಡೆದಿತ್ತು.
——
ಅದಾದಮೇಲೆ ಮಾತಿಗೆ ಮಾತಿನ ಬಳ್ಳಿ ಬೆಳೆಯುತ್ತ ಹೋಯಿತು. ಆಗಾಗ ಅದು ವಾರಗಟ್ಟಲೆ ತುಂಡಾಗಿಯೂ ಬಿಡುತ್ತಿತ್ತು. ಯಾಕೆಂದರೆ ಅವಳು ತನ್ನ ಬಯೋದಲ್ಲಿ ಬರೆದುಕೊಂಡಂತೆ ’ಹಂಡ್ರೆಡ್ ಸೀಸನ್ಸ್ ಪರ್ ಡೇ’ ಆಗಿದ್ದಳು. ಕೆಲವೊಮ್ಮೆ ತಾಸುಗಟ್ಟಲೆ ಮಾತು, ಕೆಲವೊಮ್ಮೆ ಎರಡೇ ಮಾತಿಗೆ ಕೊನೆ, ಇನ್ನು ಕೆಲವೊಮ್ಮೆ ಇನ್‌ಸ್ಟಾದಿಂದಲೆ ಕಾಣೆ. ಆಗೆಲ್ಲ ನನಗೆ ವಿಚಿತ್ರ ಚಡಪಡಿಕೆ. ಏನೂ ಮಾಡುವಂತಿರಲಿಲ್ಲ. ನಂಬರ್ ಕೇಳುವ ಧೈರ್ಯ ಮಾಡಿದ್ದೆ. ಸ್ಪಷ್ಟ ನಿರಾಕರಿಸಿದ್ದಳು. ’ನೀವು ನಂಬರ್ ಕೇಳಿದಿರಿ ಅಂತ ನಿಮ್ಮನೇನು ಜಡ್ಜ್ ಮಾಡುವುದಿಲ್ಲ. ಇಲ್ಲೇ ಚೆನ್ನಾಗಿದೆ. ವಾಟ್ಸಾಪ್ ನನಗೆ ಸೇರಿಬರುವುದಿಲ್ಲ’ ಎಂದು ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಳಾದರೂ ನನ್ನ ಮನಸು ಮುರುಟಿಹೋಗಿತ್ತು. ಅದಾಗಿ ಒಂದಷ್ಟು ದಿನ ಮಾತಾಡಿಸಲಿಕ್ಕೆ ಹೋಗಲಿಲ್ಲ. ಅವಳು ಮಾತಾಡಿಸಿದರೂ ಒನ್ ವರ್ಡ್ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದೆ. ನನ್ನ ತಂತ್ರ ಕೆಲಸ ಮಾಡಿತು. ಒಂದು ದಿನ ಇನ್‌ಬಾಕ್ಸಿಗೆ ಅವಳ ನಂಬರ್ ಬಂದು ಬಿತ್ತು. ನಾನದಕ್ಕೆ ತ್ಯಾಂಕ್ಸ್ ಹೇಳಿದಾಗ ಸುಮ್ಮನೆ ನಗುವ ಸ್ಮೈಲಿ ಹಾಕಿದ್ದಳು. ಆ ನಂಬರಿನ ವಾಟ್ಸಾಪಿನಲ್ಲೂ ಅದೇ ಕಪ್ಪುಹಂಸ, ಬಿಳಿಬಿಳಿ ಕಣ್ಣುಗಳು. ಅವಳು ಹೇಗಿದ್ದಾಳೆ ಎಂದು ನೋಡುವ ನನ್ನ ಆಸೆಗೆ ಅಲ್ಲಿಯೂ ತಣ್ಣೀರು. ತನ್ನ ರೂಪದ ಬಗ್ಗೆ ಕೀಳರಿಮೆ ಇರಬಹುದು ಎಂದುಕೊಂಡೆ. ಆದರೂ ಮನಸೊಳಗೆ ಅವಳನ್ನು ನೋಡುವ ಬಯಕೆ. ಹಾಗಂತ ಬಾಯಿಬಿಟ್ಟು ಕೇಳುವಹಾಗಿಲ್ಲ. ’ಯಾಕೆ ನೀವು ನಿಮ್ಮ ಡೀಪಿಗೆ ನಿಮ್ಮ ಫೋಟೋ ಇಟ್ಟಿಲ್ಲ?’ ಎಂದು ಕೇಳಿದರೂ ನನ್ನ ಉದ್ದೇಶ ಅವಳಿಗೆ ಅರ್ಥವಾಗಿಬಿಡುತ್ತದೆ. ಕೆಲವೊಮ್ಮೆ ಅವಳ ಸೂಕ್ಷ್ಮತೆ ಬಗ್ಗೆ ಕಿರಿಕಿರಿ. ಆದರೆ ಅದರೊಟ್ಟಿಗೆ ಆ ಸೂಕ್ಷ್ಮತೆಯೇ ಅವಳ ಮೇಲಿನ ಕುತೂಹಲಕ್ಕೆ ಕಾರಣ ಎಂದು ಹೊಳೆಯುತ್ತಿತ್ತು. ಅದಲ್ಲದೆ ಅವಳೊಂದಿಗೆ ಮಾತಾಡುತ್ತ ಮಾತಾಡುತ್ತ ನನ್ನ ಭಾಷೆ ಸೂಕ್ಷ್ಮವಾಗುತ್ತಿರುವುದು ಗಮನಕ್ಕೆ ಬಂತು. ಮೊದಲಾದರೆ ಐನೂರು ಪದಗಳ ಸುದ್ದಿಯನ್ನು ಎಡಿಟ್ ಮಾಡಿ ಮುನ್ನೂರು ಪದಗಳಿಗೆ ಇಳಿಸಲು ಹೆಣಗಾಡುತ್ತಿದ್ದವನು ಈಗ ಇನ್ನೂರು ಪದಗಳಿಗೂ ಇಳಿಸಬಲ್ಲವನಾಗಿದ್ದೆ.
’ಭಾಷೆಯ ಮೇಲೆ ಇಷ್ಟೊಂದು ಹಿಡಿತ ಇದೆ. ಯಾಕೆ ನೀವು ಏನಾದರೂ ಬರೆಯಬಾರದು?’ – ಕೇಳಿದ್ದೆ.
’ಬರೆದು?’
’ಪಬ್ಲಿಷ್ ಮಾಡಬಹುದು’
’ಅದ್ರಿಂದ ಏನು ಪ್ರಯೋಜನ?’
’ನಾಲಕ್ ಜನ ಓದುತ್ತಾರೆ’
’ಓದಿ ಏನು ಪ್ರಯೋಜನ?’
ಮುಂದೆ ಮಾತನಾಡಿ ಪ್ರಯೋಜನ ಇಲ್ಲ ಎನಿಸಿ ಸುಮ್ಮನಾದೆ. ಸಿಟ್ಟೂ ಬಂದಿತ್ತು. ಎಷ್ಟೊತ್ತು ಏನೂ ಮಾತಿಲ್ಲ. ಅವಳೇ ಮೆಸೇಜ್ ಮಾಡಿದಳು –
’ನಿಮ್ಮ ಕಾಳಜಿ ಇಷ್ಟವಾಯಿತು. ನನಗೆ ಓದುವುದೇ ಸುಖ. ನೀವು ಏನಾದರೂ ಬರೆದಿದ್ರೆ ಕಳಿಸಿ’
’ಭಾನುವಾರ ಒಂದು ಕವಿಗೋಷ್ಠಿಯಿದೆ. ಬಂದರೆ ನನ್ನ ಕವಿತೆ ಕೇಳಬಹುದು’
’ಓದಲು ಕೇಳಿದೆ ನಾನು’
’ಕೇಳಿದರಷ್ಟೆ ನನ್ನ ಕವಿತೆ ಇಷ್ಟ ಆಗುವುದು’
’ಸರಿ’
ಅದಾದ ಮೇಲೆ ಮಾತು ನಿಂತು ಹೋಯಿತು. ಗರ್ವದ ಹುಡುಗಿ ತಾನೇ ಮಾತಾಡಿಸುವವರೆಗೂ ಮಾತಾಡಿಸಬಾರದು ಎಂದು ಪಣ ತೊಟ್ಟೆ.
—–
ಕವಿಗೋಷ್ಠಿಯ ದಿನ. ನನ್ನ ಕವಿತೆಗೆ ಚಪ್ಪಾಳೆ ಸುರಿಮಳೆ. ಅದರಲ್ಲೂ ಜಾಸ್ತಿ ಹುಡುಗಿಯರು ಸೇರಿದ್ದ ಸಭಾಂಗಣ. ಹಿಗ್ಗಿ ಹೀರೇಕಾಯಿ ಆಗಿದ್ದೆ. ಮಾತಾಡಿಸಲು ಬಂದ ಹುಡುಗಿಯರು ಮತ್ತಷ್ಟು ಇಂಪ್ರೆಸ್ ಆಗುವಂತೆ ಮಾತಾಡುತ್ತ ಉತ್ಸಾಹದಿಂದ ನಂಬರ್ ಕೊಡುತ್ತ ಓಡಾಡುತ್ತಿದ್ದೆ. ನನ್ನ ಮೊಬೈಲ್ ವೈಬ್ರೇಟ್ ಮಾಡಿತು. ಅವಳ ಮೆಸೇಜು –
’ಕೇಳಿದೆ, ಸ್ವಲ್ಪವೂ ಇಷ್ಟವಾಗಲಿಲ್ಲ’
’ಹೇಯ್ ಬಂದಿದೀರಾ?! ವಾವ್!! ಎಲ್ಲಿದೀರ? ಪ್ಲೀಸ್ ಹಾಗೇ ಹೋಗ್ಬೇಡಿ. ಐ ಶುಡ್ ಮೀಟ್ ಯು’
’ಇಷ್ಟು ಎಕ್ಸೈಟ್ ಆಗುವಷ್ಟು ಚಂದ ಇಲ್ಲ ನಾನು. ಅಭಿಮಾನಿಗಳ ಗುಂಪು ಕರಗಿದ ಮೇಲೆ ಬನ್ನಿ. ಫೌಂಟನ್ ಹತ್ತಿರ’
ನಾನು ಕಳಿಸಿದ್ದ ಮೆಸೇಜ್ ನೋಡಿಕೊಂಡೆ. ನಾಚಿಕೆಯಾಯಿತು. ಎಲ್ಲರಿಗೂ ಬಾಯ್ ಹೇಳಿ ಅಲ್ಲಿಂದ ಕಾಲ್ಕಿತ್ತು ಫೌಂಟನ್ ಕಡೆಗೆ ಬಂದೆ. ಫೌಂಟನ್‌ನ ನೀರು ಸದ್ದು ಮಾಡುತ್ತ ಸುರಿಯುತ್ತಿತ್ತು. ಅದರ ಗುಲಾಬಿ ಅಲ್ಲಲ್ಲಿ ಗುಂಪಾಗಿ ನಿಂತಿದ್ದ ಜನರಿಗೆಲ್ಲಾ ಅಷ್ಟಿಷ್ಟು ಮೆತ್ತಿಕೊಂಡಿತ್ತು. ಅವಳಿಗಾಗಿ ಸುತ್ತ ನೋಡಿದೆ. ಆ ಗುಲಾಬಿ ಪ್ರಭೆಯಾಚೆಗಿನ ಮೂಲೆಯಲ್ಲೊಂದರಲ್ಲಿ ಪುಟ್ಟ ಆಕೃತಿಯೊಂದು ಮಾಸ್ಕ್ ಹಾಕಿಕೊಂಡು ನಿಂತಿತ್ತು. ಅದರ ನೆರಳು ಉದ್ದ ಬೆಳೆದು ಜನರ ಕಾಲುಗಳಿಗೆ ಸಿಕ್ಕಿಕೊಂಡಿತ್ತು. ಅದು ಅವಳೇ ಎನಿಸಿತು. ಹತ್ತಿರಕ್ಕೆ ಬಂದೆ. ಅವಳ ಒಂದು ಕೈನ ಬೆರಳುಗಳು ಮೊಬೈಲ್ ಹಿಡಿದುಕೊಂಡು ಏನೋ ಸ್ಕ್ರಾಲ್ ಮಾಡುತ್ತಿದ್ದವು. ಇನ್ನೊಂದು ಕೈನವು ಹೆದರಿಕೊಂಡ ಮಗುವಿನ ಬೆರಳುಗಳಂತೆ ಮಡಚಿಕೊಂಡಿದ್ದವು.
’ಹಾಯ್’ ಎಂದದ್ದೆ ಬೆಚ್ಚಿದಳು. ಕಪ್ಪು ಹಂಸದ ಬಿಳಿಬಿಳಿ ಕಣ್ಣು ನೆನಪಾದವು.
’ಮಾಸ್ಕ್ ಯಾಕೆ ಹಾಕ್ಕೊಂಡಿದೀರ? ಕರೋನ ಮುಗ್ದೋಗಿದ್ಯಲ್ಲ?’
’ಇಲ್ಲಾ ಅದೂ ಅದೂ… ಧೂಳು… ಅಲರ್ಜಿ… ಆಗ್ಬರಲ್ಲ… ಸೋ…’
ಮಾಸ್ಕ್ ಬಿಚ್ಚಿ ಸಣ್ಣಗೆ ನಡುಗುವ ಕೈಗಳಲ್ಲಿ ಬ್ಯಾಗಿನೊಳಕ್ಕಿಟ್ಟುಕೊಂಡಳು. ಸಣ್ಣ ಮೂಗು, ಸಣ್ಣ ಬಾಯಿ, ತುಸು ದಟ್ಟ ಹುಬ್ಬುಗಳು. ಬಾದಾಮಿ ಕಣ್ಣುಗಳು. ಕೂದಲು ಹಿಂದಕ್ಕೆ ಕಟ್ಟಿದ್ದಳು.
’ಕವಿತೆ ನಿಜಕ್ಕೂ ಇಷ್ಟ ಆಗ್ಲಿಲ್ವಾ?’
’ಹ್ಞಾ ಆಯ್ತು. ಆದ್ರೆ ಅಷ್ಟೊಂದಲ್ಲ. ಬಟ್ ಚೆನ್ನಾಗಿದೆ. ನಾನ್ ಸುಮ್ನೆ… ತಮಾಷೆಗ್ ಹೇಳ್ತಾರಲ್ಲ… ಹಾಗ್ ಹೇಳ್ದೆ ಅಷ್ಟೆ.’
ಮೆಸೇಜುಗಳಲ್ಲಿ ಅಷ್ಟು ಕಾನ್ಫಿಡೆಂಟಾಗಿ ಸ್ಪಷ್ಟವಾಗಿ ಮಾತಾಡುತ್ತಾಳೆ. ಆದರೆ ಎದುರಿಗಿದ್ದಾಗ ಯಾಕಿಷ್ಟು ಒಂದು ರೀತಿ ಗೊಂದಲಕ್ಕೆ ಬಿದ್ದವಳ ಹಾಗೆ ಮಾತಾಡುತ್ತಾಳೆ ಎಂದು ಆಶ್ಚರ್ಯವಾಯಿತು. ಪದಗಳನ್ನು ನುಂಗುವುದು, ಒಂದು ವಾಕ್ಯ ಮುಗಿಯುವ ಮುನ್ನವೇ ಇನ್ನೊಂದು ಶುರು ಮಾಡುವುದು, ಕೇಳದ ಪ್ರಶ್ನೆಗೂ ಉತ್ತರ ನೀಡುವುದು – ಪಾಪದ ಹುಡುಗಿ ಎನಿಸಿತು.
’ಬನ್ನಿ ಕಾಫಿಗ್ ಹೋಗಣ. ಇಲ್ಲೊಂದ್ ಒಳ್ಳೆ ಕಾಫಿ ಶಾಪ್ ಇದೆ’
ಕ್ಷಣ ತಬ್ಬಿಬ್ಬಾದಳು.
’ನಿಮಗೆ ಇಷ್ಟ ಇಲ್ಲ ಅಂದ್ರೆ ಬೇಡ’
’ಹೇಯ್ ಹಾಗೇನಿಲ್ಲಾ. ಬನ್ನಿ ಬನ್ನಿ ಹೋಗಣ’
ಇನ್‌ಸ್ಟಾದಲ್ಲಿ ಮಾತನಾಡಿದಷ್ಟು ರಫ್ ಅಲ್ಲದ ಹುಡುಗಿ. ಪ್ರತಿ ಹೆಜ್ಜೆಯನ್ನೂ ಅಳೆದು ತೂಗಿ ನೆಲಕ್ಕೆ ನೋವಾಗಿಬಿಡುತ್ತದೇನೋ ಎನ್ನುವಂತೆ ಇಡುತ್ತಿದ್ದಳು. ಕಾಫಿಶಾಪಿನಲ್ಲೂ ಅಷ್ಟೆ- ಅವಳು ಎಳೆದ ಚೇರು ಚೂರೂ ಸದ್ದಾಗಲಿಲ್ಲ, ಕುಡಿದು ಇಟ್ಟ ಕಾಫಿ ಕಪ್ ದನಿ ಮಾಡಲಿಲ್ಲ. ಮಾತುಗಳಾದರೂ ಕಿವಿಗೊಟ್ಟೇ ಕೇಳಬೇಕು – ಇಲ್ಲದಿದ್ದರೆ ಅವಳ ತುಟಿಗಳು ಒಂದಕ್ಕೊಂದು ಬಡಿಯುವುದಷ್ಟೆ ನಿಜ. ಅವಳ ಸದಾಗಾಬರಿ ಕಣ್ಣುಗಳೋ ನನ್ನ ಬಿಟ್ಟು ಬೇರೆಲ್ಲ ನೋಡುತ್ತಿದ್ದವು. ಜಾಸ್ತಿ ಮಾತಾಗಲಿಲ್ಲ. ಅಲ್ಲಿಂದ ಬೀಳ್ಕೊಡುವಾಗ ’ಮೀಟ್ ಆಗಿದ್ದು ಖುಷಿ ಆಯ್ತು’ ಎಂದು ಕೈ ಕೊಟ್ಟೆ. ಅವಳು ಮತ್ತೆ ತಬ್ಬಿಬ್ಬಾದಳು. ’ಸಾರಿ ಸಾರಿ’ ಎಂದು ನಾನು ಬೆಚ್ಚಿದ ಪರಿಗೆ, ’ಹೇಯ್ ಪರವಾಗಿಲ್ಲ’ ಎಂದು ಧೈರ್ಯ ತಂದುಕೊಂಡು ಕೈ ಚಾಚಿದಳು. ಅವಳ ಅಂಗೈ ಇನ್ನೂ ಬೆವರುತ್ತಿತ್ತು. ಸೋಜಿಗವೆಂದರೆ ಅದ್ಯಾಕೋ ಒಂದೆರಡು ಸೆಕೆಂಡ್ ಜಾಸ್ತಿಯೇ ನನ್ನ ಕೈ ಹಿಡಿದುಕೊಂಡಳು!
ರೂಮಿಗೆ ಬಂದು ಮಲಗುವಾಗ ಬಂದ ಅವಳ ಮೆಸೇಜು ನೋಡಿ ಅತ್ಯಾಶ್ಚರ್ಯ.
’ನಿಮ್ಮ ಕವಿತೆಯಷ್ಟು ಕಪಟ ಇಲ್ಲ ನಿಮ್ಮ ಕೈಗಳು. ನಿಮ್ಮನ್ನ ನಂಬಬಹುದು’
’ವಾಟ್?!’
’ಏನಿಲ್ಲಾ ಬಿಡಿ’
’ಕೆಲವೊಂದ್ಸಲ ನಿಮ್ ಮಾತೇ ಅರ್ಥ ಆಗಲ್ಲ’
’ಹ್ಮ. ನಿಜಾ. ಎನಿವೇ. ನೀವ್ ಸಿಕ್ಕಿದ್ದು ತುಂಬಾನೇ ಖುಷಿ. ಗುಡ್ ನೈಟ್. ಸ್ವೀಟ್ ಡ್ರೀಮ್ಸ್’
ನಿಜಕ್ಕೂ ಏನೂ ಅರ್ಥ ಆಗಲಿಲ್ಲ.
—-
ಅದೊಂದು ಹ್ಯಾಂಡ್‌ಶೇಕ್ ಮೋಡಿ ಮಾಡಿಬಿಟ್ಟಿತ್ತು. ಆಮೇಲಿನ ಮಾತುಗಳು ಯಾವತ್ತೂ ತುಂಡಾಗಲಿಲ್ಲ. ರಾತ್ರಿ ಶಿಫ್ಟ್ ಮುಗಿಸಿಕೊಂಡು ಬರುವಷ್ಟೊತ್ತಿಗೆ ಅವಳ ಐದಾರು ಮೆಸೇಜು ಕಾದಿರುತ್ತಿದ್ದವು. ನಾನಾದರೂ ಅವಳೊಂದಿಗೆ ಹಂಚಿಕೊಳ್ಳಲು ದಿನಕ್ಕೊಂದಾದರೂ ಸ್ವಾರಸ್ಯ ಹುಡುಕಿಟ್ಟುಕೊಂಡಿರುತ್ತಿದೆ. ದಿನಗಳು ಉರುಳಿದ್ದು ಗೊತ್ತಾಗಲಿಲ್ಲ, ಅವಳು ನನಗೆ ಮೊದಲ ಬಾರಿ ’ಕಣೋ’ ಎಂದದ್ದು ನಾನು ಅವಳಿಗೆ ’ಕಣೇ’ ಎಂದದ್ದು ಯಾವಾಗ ಅಂತಲೂ ಅರಿವಿಗೆ ಬರಲಿಲ್ಲ. ವಿಚಿತ್ರವೆಂದರೆ ನನ್ನ ಭಾಷೆ ಸ್ಪಷ್ಟವಾಗುತ್ತ ಸಂಕ್ಷಿಪ್ತವಾಗುತ್ತ ಸಾಗಿದಂತೆ ಅವಳ ಭಾಷೆ ಅವಳ ಮಾತಿನ ಭಾಷೆಯಂತೆ ಛಿದ್ರಛಿದ್ರವೂ ಉದ್ದವೂ ಆಗತೊಡಗಿತು. ಮೊದಲಾದರೆ ಒಂದೇ ಮೆಸೇಜಿನಲ್ಲಿ ಎಲ್ಲವನ್ನೂ ಆದಷ್ಟು ಕಮ್ಮಿ ವಾಕ್ಯಗಳಲ್ಲಿ ಹೇಳುತ್ತಿದ್ದಳು.
ಎರಡನೆ ಭೇಟಿಗೆ ತ್ರಾಸು ಪಡಬೇಕಾಗಲಿಲ್ಲ. ’ಈ ಭಾನುವಾರ ಏನು ಪ್ಲಾನ್?’ ಎಂದು ಕೇಳಿದ್ದೇ – ’ಸಿಗಣ ಬಿಡು. ನೀನ್ ಪೀಠಿಕೆ ಹಾಕೋ ಅವಶ್ಯಕತೆ ಇಲ್ಲ’ ಎಂದು ನಕ್ಕಿದ್ದಳು. ಅವಳಿಷ್ಟದಂತೆ ಅವಳ ನೆಚ್ಚಿನ ಹಳೆಯ ಬ್ಲಾಸಮ್ ಬುಕ್ ಹೌಸಿನ ಪೋಯೆಟ್ರಿ ಸೆಕ್ಷನ್‌ನ ಮೂಲೆಯಲ್ಲಿ ಸಿಗುವುದೆಂತಾಯಿತು.. ನಾನು ಹೋಗುವುದಕ್ಕೆ ಮುಂಚೆಯೇ ಅಲ್ಲಿದ್ದಳು. ಅದು ತನ್ನ ಮನೆಯೇನೋ ಎನ್ನುವಂತೆ ಒಂದು ಚೇರ್ ಹಾಕಿಕೊಂಡು ಯಾವುದೋ ಕವಿತೆ ಪುಸ್ತಕ ಹಿಡಿದು ಆರಾಮಾಗಿ ಓದುತ್ತಿದ್ದಳು. ಅವತ್ತಿನ ಅವಳ ನಡವಳಿಕೆ ಕವಿಗೋಷ್ಠಿಯ ದಿನ ಸಿಕ್ಕ ಸದಾಗಾಬರಿ ಹುಡುಗಿ ಇವಳೇನಾ ಎನ್ನುವಂತಿತ್ತು. ಇಡೀ ಬುಕ್ ಸ್ಟಾಲ್ ತನ್ನ ಊರೇನೋ ಎನ್ನುವಂತೆ ಪರಿಚಯಿಸಿದಳು. ಅಲ್ಲಿರುವ ಎಲ್ಲರಿಗೂ ಹೆಸರಿಟ್ಟು ಮಾತನಾಡಿಸಿದಳು, ಉಭಯಕುಶಲೋಪರಿ ವಿಚಾರಿಸಿದಳು. ನನ್ನ ಅಲ್ಲಿಂದ ಬೀಳ್ಕೊಡುವ ಮುನ್ನ ನಾನು ಕೊಟ್ಟ ಕೈಯನ್ನು ನಿಮಿಷ ಹೊತ್ತು ಹಾಗೇ ಹಿಡಿದುಕೊಂಡಿದ್ದಳು.
ಮನೆಗೆ ಬರುವವರೆಗೂ ನನ್ನ ಕೈ ನೋಡಿಕೊಂಡೆ. ಏನು ವಿಶೇಷವಿದೆ ಅದರಲ್ಲಿ ಎನ್ನುವುದೇ ಅರ್ಥವಾಗಲಿಲ್ಲ. ಅದು ಅರ್ಥವಾಗುವುದಕ್ಕೆ ನಾನು ಅವಳಿಗೆ ನನ್ನ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕಾಯಿತು. ನಿವೇದನೆಯೂ ನಾನು ಕಲ್ಪಿಸಿಕೊಂಡಿದ್ದಷ್ಟು ಕಷ್ಟವಾಗಲಿಲ್ಲ.
ಅಷ್ಟೊತ್ತಿಗೆ ಕಾಲ್ ಮಾಡಿ ಮಾತಾಡುವಷ್ಟು ಹತ್ತಿರವಾಗಿದ್ದೆವು. ಮಾತು ಶುರುವಾದರೆ ಇಡೀ ಜಗತ್ತು ಸುತ್ತಿ ಬರುತ್ತಿತ್ತು. ಅವತ್ತೊಂದು ರಾತ್ರಿ ಹೀಗೇ ಮೂರು ಗಂಟೆಯವರೆಗೆ ಮಾತಿನಲ್ಲಿ ಮುಳುಗಿದ್ದೆವು. ಬಾಯ್ ಹೇಳಿ ಕಾಲ್ ಕಟ್ ಮಾಡುವ ಹೊತ್ತಿಗೆ ನನಗೇನನ್ನಿಸಿತೋ ’ನಾನ್ ಏನೋ ಹೇಳಬೇಕು’ ಎಂದವನು ಒಳಗಿದ್ದದ್ದನ್ನೆಲ್ಲಾ ಒಂದೇ ಉಸಿರಿಗೆ ಹೇಳಿಬಿಟ್ಟೆ. ಏನೂ ಹೇಳದೆ ಕಾಲ್ ಕಟ್ ಮಾಡಿದಳು. ಕಂಗಾಲಾಗಿ ಮತ್ತೆ ಮತ್ತೆ ಕಾಲ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸಾರಿ ಕೇಳಿದ ಮೆಸೇಜುಗಳಿಗೂ ಉತ್ತರ ಇಲ್ಲ. ಇಡೀ ರಾತ್ರಿ ನಿದ್ದೆಯಿಲ್ಲದೆ ಅವಳ ಮೆಸೇಜು ಬರಬಹುದೆಂದು ಕಾಯುತ್ತಿದ್ದೆ. ಬೆಳಗಿನ ಜಾವಕ್ಕೆ ನಿದ್ದೆ ಹತ್ತಬೇಕು ಮೊಬೈಲ್ ಸದ್ದು ಮಾಡಿತು. ಅವಳ ಮೆಸೇಜು –
’ನೀನು ಸಿಕ್ಕ ದಿನ ನನಗೊಂದು ಕನಸು ಬಿತ್ತು. ಹಾಗೆ ನೋಡಿದರೆ ನಾನು ಎಷ್ಟೋ ವರ್ಷಗಳಿಂದ ಕಾಣುತ್ತ ಬಂದಿರುವ ಕನಸದು. ಆದರೆ ಅವತ್ತಿನ ಕನಸಿನ ಕೊನೆಯಲ್ಲಿ ನೀನಿದ್ದೆ’
’ಏನ್ ಹೇಳ್ತಿದೀಯ?!’
’ಕಿತ್ತಳೆಬನವೊಂದರಲ್ಲಿ ನಾನೊಂದು ಕಿತ್ತಳೆಯಾಗಿ ಹುಟ್ಟಿದ್ದೆ. ಅಂದು ಸುರಿದ ಮಳೆಗೆ ಅಲ್ಲಲ್ಲಿ ನೀರಿನ ಗುಂಡಿಗಳು ಏರ್ಪಟ್ಟಿದ್ದವು. ಅವುಗಳಲ್ಲಿ ನನ್ನ ಪ್ರತಿಬಿಂಬ ಕಣ್ಣು ಕುಕ್ಕುವಷ್ಟು ಮೋಹಕವಾಗಿತ್ತು. ಸಂತೋಷದಲ್ಲಿ ನಗುತ್ತಿದ್ದೆ. ಆಗ ಒಂದು ಬಿರುಸು ಕೈ ನನ್ನಿಡೀ ಮೈಗೆ ಕೈ ಹಾಕಿತು. ಗಿಡದಿಂದ ಕಿತ್ತು ತನ್ನ ವಶಕ್ಕೆ ತೆಗೆದುಕೊಂಡಿತು. ನನ್ನ ಚರ್ಮ ಚರಪರ ಸುಲಿದು ಬಲವಾಗಿ ಹಿಚುಕುತ್ತಾ ರಸ ಕುಡಿಯತೊಡಗಿತು. ಎಷ್ಟು ಕಿರುಚಿದರೂ ಕೇಳುತ್ತಿಲ್ಲ. ನೋವಿನರಿವಾಗುವಷ್ಟರಲ್ಲಿ ಸಿಪ್ಪೆ ಸಿಪ್ಪೆಯಾಗಿ ತಿಪ್ಪೆಯೊಂದರಲ್ಲಿ ಬಿದ್ದಿದ್ದೆ. ಆ ವಾಸನೆಯ ನರಕದಲ್ಲಿ ನನ್ನಂಥ ಎಷ್ಟೋ ಸಿಪ್ಪೆಗಳು. ಆ ಸಿಪ್ಪೆಗಳೂ ಅರಚುತ್ತಿವೆ. ದಾರಿಹೋಕರು ನಮ್ಮ ತಿಪ್ಪೆ ಹಾದು ಹೋಗುತ್ತಿದ್ದಾರೆ. ಯಾರಿಗೂ ನಮ್ಮ ದನಿ ಕೇಳಿಸುತ್ತಿಲ್ಲ. ಅಷ್ಟೊತ್ತಿಗೆ ನೀನು ಎಲ್ಲಿಗೋ ಹೊರಟಿದ್ದವನು ಅಚಾನಕ್ಕು ನನ್ನತ್ತ ಗಮನ ಹರಿಸಿದೆ. ನನ್ನೇ ನೋಡುತ್ತ ನಿಂತೆ. ನಿನಗೆ ನನ್ನ ನೋವು ಹೇಳಿಕೊಳ್ಳಲು ಎಷ್ಟು ಪ್ರಯತ್ನಪಟ್ಟೆ. ನಿನಗೇನೂ ಕೇಳಿಸುತ್ತಿಲ್ಲ. ಆದರೆ ನಿನ್ನ ನುಣುಪಾದ ಕೈಗಳಿಂದ ನನ್ನ ಎತ್ತಿಕೊಂಡೆ. ಎಷ್ಟು ಹಿತವಾಯಿತು ಗೊತ್ತೆ?! ಅಷ್ಟಕ್ಕೆ ಬಿಡಲಿಲ್ಲ ನೀನು. ನನ್ನ ಒಂದೊಂದೇ ಸಿಪ್ಪೆಗಳನ್ನು ಜೋಡಿಸಿ ವಾಪಸ್ಸು ಹಣ್ಣಿನ ರೂಪ ಕೊಡಲು ಪ್ರಯತ್ನಿಸತೊಡಗಿದೆ. ನಾನು ಇನ್ನೇನು ಹಣ್ಣಾಗುತ್ತೇನೆ ಎನ್ನುವಷ್ಟೊತ್ತಿಗೆ ಕನಸು ಮುಗಿದುಹೋಯಿತು. ಕನಸಿನಿಂದೆದ್ದಾಗ ನಾನು ನಿಜಕ್ಕೂ ಹಣ್ಣಾಗಿದ್ದೆ, ಹಣ್ಣಲ್ಲ ಚಿಟ್ಟೆಯಾಗಿದ್ದೆ, ಕಿತ್ತಳೆ ಚಿಟ್ಟೆಯಾಗಿದ್ದೆ!’
ಏನು ಉತ್ತರಿಸಬೇಕು ತೋಚಲಿಲ್ಲ. ಅವಳೇ ಮಾತು ಮುಂದುವರಿಸಿದಳು –
’ನಾನು ರಿಯಾಲಿಟಿಗಿಂತ ಕನಸುಗಳನ್ನೇ ನಂಬುತ್ತೇನೆ. ನಿನಗೆ ಜೊತೆಯಾಗುವುದಾದರೆ ಈ ಕನಸನ್ನು ನಂಬಿಯೇ ಜೊತೆಯಾಗುತ್ತೇನೆ. ಓಕೇನಾ?’
’ಓಕೆ’ ಎಂದು ತೋಳು ಚಾಚುವ ಸ್ಮೈಲಿ ಸೇರಿಸಿದೆ.
ಅವಳ ಕನಸಿಗೆ ನಾನು ಕಾಲಿಟ್ಟು ಅವಳು ಚಿಟ್ಟೆಯಾದಳು. ಆದರೆ ಚಿಟ್ಟೆಯ ಜೀವ ಎಷ್ಟು ಸೂಕ್ಷ್ಮ ಎನ್ನುವುದು ಅಂದೇ ಹೊಳೆಯಬೇಕಿತ್ತು ನನಗೆ.
—-
ಆಮೇಲಿನ ಒಂದಷ್ಟು ದಿನಗಳು ನಿಜಕ್ಕೂ ಉಲ್ಲಾಸದಾಯಕವಾಗಿದ್ದವು. ನನ್ನ ಕೈಗಳ ಮೇಲೆ ಹುಚ್ಚು ಮೋಹ ಅವಳದು. ಯಾವಾಗಲೂ ಕೈಹಿಡಿದು ನಡೆಯಬೇಕು, ಮೊದಲ ತುತ್ತನ್ನು ತನಗೆ ತಿನ್ನಿಸಿಯೇ ತಿನ್ನಬೇಕು, ತುಟಿಯಂಚಿಗೆ ಅಂಟಿದ ಅಗುಳಾಗಲಿ ರೆಪ್ಪೆಯಾಚೆಗೆ ಸರಿದ ಕಪ್ಪನ್ನಾಗಲಿ ನನ್ನ ಬೆರಳುಗಳೇ ಒರೆಸಬೇಕು, ಮೆಟ್ರೋದಲ್ಲಿ ನಿಂತಾಗ ಅವಳ ಆಧಾರಕ್ಕೆಂದು ನನ್ನ ಕೈಯೊಂದು ಮೀಸಲಾಗಿರಬೇಕು – ನನ್ನ ಕೈಗಳ ಸ್ಪರ್ಶ ಸಿಕ್ಕುವ ಯಾವ ಅವಕಾಶವನ್ನೂ ಅವಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಊಟವಾದ ಮೇಲಂತೂ ನನ್ನ ಕೈಯ ಒಂದೊಂದೆ ಬೆರಳು ತಿಕ್ಕಿ ತೊಳೆಯುವುದನ್ನು ಎಷ್ಟು ಸಂಭ್ರಮಿಸುತ್ತಿದ್ದಳು!
ಅಂದು ಇಬ್ಬರೂ ಲಾಲ್ ಬಾಗಿನ ನಿರ್ಜನ ಮೂಲೆಯೊಂದರ ಬೆಂಚಿನ ಮೇಲೆ ಕೂತಿದ್ದೆವು. ನನ್ನ ಕೈಹಿಡಿದು ಅದರೊಂದಿಗೆ ಆಟವಾಡುತ್ತಿದ್ದಳು. ನಾನು ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ’ಹವ್ ಟು ಆಸ್ಕ್ ಫಾರ್ ಫಸ್ಟ್ ಕಿಸ್’ ಎಂಬ ಸರ್ಚಿಗೆ ಬಂದ ಲೇಖನಗಳನ್ನು ನೋಡುತ್ತಿದ್ದೆ. ಅವಳು ನನ್ನ ಬೆರಳುಗಳ ನಟಿಕೆ ತೆಗೆಯುತ್ತಿದ್ದವಳು ಇದ್ದಕ್ಕಿದ್ದಹಾಗೆ ವೇಗ ಜಾಸ್ತಿ ಮಾಡಿದಳು. ಜೋರಾಗಿ ಹಿಚುಕತೊಡಗಿದಳು. ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ನೋಡುವಷ್ಟರಲ್ಲಿ ಅವಳು ಅಲ್ಲಿಂದೆದ್ದು ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು ಒಂದು ಕಡೆಗೆ ಜೋರಾಗಿ ಬೀಸಿದಳು. ಅಲ್ಲಿ ನಿಂತಿದ್ದ ಮದ್ಯವಯಸ್ಕನೊಬ್ಬನ ತೋಳಿಗೆ ಬಿತ್ತು. ಅವನು ತನ್ನ ಪ್ಯಾಂಟ್ ಜಿಪ್ ಏರಿಸಿಕೊಳ್ಳುತ್ತ ಓಡಿದ. ’ಏಯ್ ನಿಲ್ಲೋ ನಾಯಿ’ ಎಂದು ಕೂಗಿದಳು. ಅವಳ ಕೂಗು ಕೇಳಿ ಪ್ರಣಯದಲ್ಲಿದ್ದ ಪ್ರೇಮಿಗಳು ಓಡಿಬಂದರು. ನನಗೀಗ ಅರ್ಥವಾಯಿತು – ಆ ಮದ್ಯವಯಸ್ಕ ಅವರನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.
ಇವಳ ಕಣ್ಣು ಕೆಂಪಾಗಿದ್ದವು. ಮೈ ಕಂಪಿಸುತ್ತಿತ್ತು. ’ಹೇಯ್ ಸಮಾಧಾನ’ ಎಂದು ಮುಟ್ಟಲು ಹೋದರೆ ಹಿಂದೆ ಸರಿದಳು. ನೀರಿನ ಬಾಟಲ್ ಕೈಗಿಟ್ಟೆ. ಗಟಗಟ ಇಡೀ ಬಾಟಲ್ ನೀರು ಖಾಲಿ ಮಾಡಿದಳು. ನಾನು ಏನೂ ಮಾತಾಡಿಸಲಿಲ್ಲ. ಸುಮಾರು ಹೊತ್ತು ಬುಸುಗುಡುತ್ತ ಕೂತಿದ್ದಳು. ಕತ್ತಲಾಗತೊಡಗಿತು. ಅಲ್ಲಿಂದ ಅವಳನ್ನು ಕರೆದುಕೊಂಡು ಅವಳ ಪೀಜಿಗೆ ಬಿಟ್ಟೆ. ಆ ಕಣ್ಣುಗಳ ಕೆಂಪು ಅಷ್ಟೊತ್ತಾದರೂ ಆರಿರಲಿಲ್ಲ. ಪ್ರತಿ ಸಲ ಹೇಳುವ ಹಾಗೆ ’ಹುಷಾರಾಗ್ ಹೋಗು’ ಎಂದು ಹೇಳಲಿಲ್ಲ. ಪದೇ ಪದೆ ಕಾಲ್ ಮಾಡಿ ”ರೀಚ್ ಆದ್ಯಾ?’’ ಅಂತಲೂ ವಿಚಾರಿಸಲಿಲ್ಲ. ಮನೆಗೆ ಬಂದ ಮೇಲೆ ಮೆಸೇಜ್ ಹಾಕಿ ತಿಳಿಸಿದೆ. ಅದಕ್ಕವಳ ಮೆಸೇಜು ’ಹ್ಮ’ ಅಂತಷ್ಟೆ ಇತ್ತು. ತಾನಾಗೇ ಸಮಾಧಾನ ಆಗುತ್ತಾಳೆ, ಸಮಾಧಾನ ಮಾಡಲು ಹೋದಷ್ಟು ಕಿರಿಕಿರಿ ಮಾಡಿಕೊಳ್ಳುತ್ತಾಳೆ ಎಂದುಕೊಂಡು ’ಗುಡ್ ನೈಟ್’ ಹೇಳಿ ಮಲಗಿದೆ.
ಮರುದಿನ ಬೆಳಗ್ಗೆ ಅವಳ ಮೆಸೇಜು.
’ಸಾರಿ. ನನ್ನಿಂದ ನೀನೂ ಡಿಸ್ಟರ್ಬ್ ಆಗ್ಬಿಟ್ಟೆ. ನೀನು ನನ್ನ ಲಾಲ್‌ಬಾಗಿಗೆ ಕರೆಸಿದ್ದ ಉದ್ದೇಶ ನನಗೆ ಗೊತ್ತಿತ್ತು. ನೀನು ಕೊಡುತ್ತೀಯ ಅಂತ ಕಾಯುತ್ತಿದ್ದೆ. ಅಷ್ಟೊತ್ತಿಗೆ ಆ ನಾಯಿ ಬಂದು ಎಲ್ಲ ಹಾಳುಮಾಡಿತು’
’ಇಟ್ಸ್ ಓಕೆ. ನಿನಗೆ ಮನಸಾಗುವವರೆಗೂ ನಾನೇನೂ ಮಾಡುವುದಿಲ್ಲ’
’ನೀನು ಮಾಡುವುದಲ್ಲ ಅದು. ಇಬ್ಬರೂ ಸೇರಿ ಮಾಡುವುದು. ನಿನಗೆ ಮನಸಿದ್ದರೆ ನಾಳೆ ನಿನ್ನ ರೂಮಿಗೆ ಬರುತ್ತೇನೆ’
’ಆರ್ ಯು ಸ್ಯೂರ್?!’
’ಸ್ಯೂರ್ ಮೈ ಡಿಯರ್ ಸಾಫ್ಟ್ ಹ್ಯಾಂಡ್ಸ್’
ಮೈಯೆಲ್ಲಾ ಕಂಪನವಾಗತೊಡಗಿತು.
—-
ಅದು ಮೊದಲ ಬಾರಿ – ಅವಳು ತನ್ನ ಕಾಣುವಿಕೆ ಬಗ್ಗೆ ಅಷ್ಟು ಆಸಕ್ತಿ ವಹಿಸಿದ್ದು. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದಳು. ಹುಬ್ಬು ತೀಡಿಸಿಕೊಂಡಿದ್ದಳು, ಕಣ್ಣಿಗೆ ಕಾಡಿಗೆ ಸವರಿದ್ದಳು. ನನಗಿಷ್ಟವೆಂದು ತಿಳಿ ನೀಲಿ ಬಣ್ಣದ ಕುರ್ತಿ ಧರಿಸಿದ್ದಳು. ಮೊದಲೆಲ್ಲ ಅವಳ ಮೈಯಿಂದ ಬೇಬಿ ಸೋಪಿನ ವಾಸನೆ. ಆದರಿಂದು ಪರ್ಫ್ಯೂಮಿನ ಪರಿಮಳ. ನನ್ನೊಳಗಿನ ಆಸೆಗಳೆಲ್ಲ ಮುಗಿಬಿದ್ದು ಉದ್ರೇಕಗೊಂಡವು. ಹಸಿದ ಹುಲಿಯಂತೆ ಅವಳ ಮೇಲೆರಗಿದೆ. ಅವಸರವಸರದಲ್ಲಿ ಅವಳನ್ನು ತಿಂದು ಮುಗಿಸಿದೆ. ಅಕ್ಷರಶಃ ತಿಂದು ಮುಗಿಸಿದೆ. ಇಲ್ಲದಿದ್ದರೆ ನನಗೆ ನನ್ನದೇ ದೇಹದಿಂದುಕ್ಕಿದ ಜೀವರಸದ ಬಗ್ಗೆ ಹೇಸಿಗೆ ಹುಟ್ಟುತ್ತಿರಲಿಲ್ಲ. ಅದನ್ನು ತೊಳೆದುಕೊಂಡು ಬಾತ್ರೂಮಿನಿಂದ ಹೊರಬಂದಾಗ ಮೊಣಕಾಲು ಮುದುಡಿ ಮಗುವಿನಂತೆ ಮಲಗಿದ್ದಳು. ಕೈಗಳು ಮುದುಡಿಕೊಂಡು ನಡುಗುತ್ತಿದ್ದವು. ಅವುಗಳೊಂದಿಗೆ ಅವಳ ಮೈಮೇಲೆ ನಾನು ಮೂಡಿಸಿದ ಗುರುತುಗಳೂ ನಡುಗುತ್ತಿದ್ದವು. ಅವಳ ಕಪಾಳದುದ್ದಕ್ಕೂ ಕಣ್ಣೀರು ಹರಿದು ದಿಂಬಿನೊಂದು ಭಾಗ ಒದ್ದೆಯಾಗಿತ್ತು. ಆ ಒದ್ದೆಯಿಂದ ಬರುತ್ತಿದೆ ಎಂಬಂತೆ ಬೇಬಿಸೋಪಿನ ವಾಸನೆ ಬಂದು ನನ್ನ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಕಣ್ಣೊರೆಸಲು ಹೋದೆ. ಕೈ ಜಾಡಿಸಿದಳು. ಏನು ಮಾಡಬೇಕು ತೋಚಲಿಲ್ಲ. ಸುಮ್ಮನೆ ಪಕ್ಕ ಕೂತೆ. ಎದ್ದು ಕೂತಳು. ಮೌನವಾಗಿ ಬಟ್ಟೆ ಹಾಕಿಕೊಂಡು ಹೊರಟುನಿಂತಳು. ನಾನು ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಕಾಲ್ ಮಾಡಿದರೆ ಕಟ್ ಮಾಡಿದಳು. ಇಡೀ ರಾತ್ರಿ ಕಾಲ್ ಮಾಡುತ್ತಲಿದ್ದೆ. ಪ್ರಯೋಜನವಾಗಲಿಲ್ಲ.
ಅವಳು ಕನಸೆಂದು ಹೇಳಿದ ನಿಜವನ್ನು ಅರ್ಥ ಮಾಡಿಕೊಂಡಿದ್ದೆ. ಅವಳ ಹಿನ್ನೆಲೆ ಕೆದಕಿ ನೋವುಂಟು ಮಾಡದಿರುವ ಎಚ್ಚರವಹಿಸಿದ್ದೆ. ಆದರೆ ಏನು ಪ್ರಯೋಜನ? ನನ್ನ ನುಣುಪು ಕೈಗಳ ಮೇಲೆ ಹುಟ್ಟಿದ್ದ ಅವಳ ನಂಬಿಕೆಯನ್ನ ನಾನೇ ಒಡೆದುಹಾಕಿದ್ದೆ.
ಮೂರು ದಿನ ಹೀಗೇ ಕಳೆದವು – ನಾನು ಕಾಲ್ ಮಾಡುವುದು ಅವಳು ಕಟ್ ಮಾಡುವುದು. ನನ್ನ ಸಾಲು ಸಾಲು ಮೆಸೇಜುಗಳನ್ನು ಕಳಿಸಿದ ತಕ್ಷಣ ನೋಡುತ್ತಿದ್ದಳು. ಆದರೆ ಯಾವುದಕ್ಕೂ ಉತ್ತರವಿಲ್ಲ ನಾಲ್ಕನೇ ಮುಂಜಾವಿನಲ್ಲಿ ಒಂದು ಕೆಟ್ಟ ಕನಸು. ಎದ್ದಾಗ ಮೈಪೂರ ನಡುಗುತ್ತಿತ್ತು. ಮುಖ ಪೂರ್ತಿ ಕಣ್ಣೀರಲ್ಲಿ ತೊಯ್ದಿತ್ತು. ಮುಟ್ಟಿಕೊಂಡಾಗ ನನ್ನ ಕೈಗಳೇ ನನಗೆ ಬಿರುಸಾಗಿ ಚುಚ್ಚಿದವು. ದುಃಖ ತಡೆದುಕೊಳ್ಳಲಾಗಲಿಲ್ಲ. ಅವಳಿಗೆ ಸೆಲ್ಫಿ ಕಳಿಸಿದೆ. ತಕ್ಷಣ ಕಾಲ್ ಮಾಡಿದಳು. ಸಂಜೆ ಸಿಗುವ ಭರವಸೆ ನೀಡಿದಳು. ’ಸೆಲ್ಫಿ ಕಳಿಸು’ ಎಂದು ಹಠ ಮಾಡಿದೆ. ಕಳಿಸಿದಳು. ಬಾದಾಮಿ ಕಣ್ಣುಗಳು ಕಪ್ಪಾಗಿದ್ದವು.
—–
ಆ ಕಪ್ಪನ್ನು ಮರೆಮಾಚಲು ಮತ್ತಷ್ಟು ಕಪ್ಪು ಹಚ್ಚಿಕೊಂಡು ಬಂದಿದ್ದಳು. ಬಯ್ಯಪ್ಪನಹಳ್ಳಿ ಮೆಟ್ರೊ ಸ್ಟೇಶನ್‌ನ ಪಿಜ್ಜಾ ಹಟ್‌ನಲ್ಲಿ ಕೂತಿದ್ದೆವು. ಬೇಕಂತಲೇ ಉತ್ಸಾಹ ತಂದುಕೊಂಡು ನನಗಿಷ್ಟದ ಪಿಜ್ಜಾ ಆರ್ಡರ್ ಮಾಡಿದಳು, ತಮಾಷೆ ಮಾತುಗಳಾಡಿದಳು, ’ಹೊಸ ಕವಿತೆ ಏನಾದ್ರು ಬರ್ದಿದೀಯಾ?’ ಎಂದು ವಿಚಾರಿಸಿದಳು. ಎಲ್ಲವೂ ಸರಿ ಆಗಿದೆ ಎನ್ನುವಂತಿತ್ತು ಅವಳ ವರ್ತನೆ. ಆದರೆ ಅವತ್ತಾಗಿದ್ದ ಘಟನೆ ಅವಳ ಇಡೀ ಮುಖದ ಮೇಲೆ ಒತ್ತಿದ ಮುದ್ರೆ ಸ್ಪಷ್ಟ ಕಾಣಿಸುತ್ತಿತ್ತು.
’ಪಿಜ್ಜಾ ಇನ್ನೂ ಲೇಟ್. ಅಲ್ಲಿವರ್ಗೂ ಒಂದ್ ಆಟ ಆಡನ. ಕೈ ಕೊಡು ಭವಿಷ್ಯ ಹೇಳ್ತೀನಿ’
ಎಂದು ನನ್ನ ಕೈತೆಗೆದುಕೊಂಡಳು.
’ಅದು ಬೇಡ. ನಿನ್ ಕೈಕೊಡು. ನಾನೇನೋ ಬರೀತೀನಿ. ಗೆಸ್ ಮಾಡ್ಬೇಕು’
ಎಂದು ಅವಳ ಕೈ ತೆಗೆದುಕೊಂಡೆ. ಅಂಗೈ ಮೇಲೆ ’ಸಾರಿ’ ಎಂದು ಬರೆದೆ. ಅವಳು ಏನೂ ಹೇಳಲಿಲ್ಲ. ಮತ್ತೊಮ್ಮೆ ಒತ್ತಿ ಬರೆದೆ. ಮತ್ತೆ ಮತ್ತೆ ಬರೆದೆ. ಅವಳ ಕಣ್ಣು ಹನಿಗೂಡಿದವು. ಏನಾದರು ಹೇಳುತ್ತಾಳೆಂದು ಕಾದೆ. ಏನೂ ಹೇಳಲಿಲ್ಲ. ಅಷ್ಟೊತ್ತಿಗೆ ಪಿಜ್ಜಾ ಬಂತು. ತಾನೇ ಬಿಡಿಸಿ ಮೊದಲ ಸ್ಲೈಸ್ ತಿನ್ನಿಸಿದಳು. ಆದರೆ ಪ್ರತಿ ಸಲದಂತೆ ನಾನು ತಿನ್ನಿಸುವುದಕ್ಕೆ ಕಾಯದೆ ಇನ್ನೊಂದು ಸ್ಲೈಸ್ ಬಾಯಿಗಿಟ್ಟುಕೊಂಡಳು. ನನಗೆ ತುತ್ತು ಒಳಗೆ ಹೋಗಲಿಲ್ಲ. ಅವಳನ್ನೇ ನೋಡುತ್ತಿದ್ದೆ. ಅರ್ಥವಾಯಿತವಳಿಗೆ. ’ಹೇಯ್ ಇದ್ ಚೂರ್ ಒರೆಸಾ’ ಎಂದು ಮುಖ ಮುಂದಕ್ಕೊಡಿದಳು. ಒರೆಸಲಿಕ್ಕೆಂದು ಹೋದರೆ ಅವಳ ತುಟಿಗಳು ಸಣ್ಣಗೆ ಅದುರುತ್ತಿದ್ದವು. ಅದನ್ನು ನೋಡಿ ನನ್ನ ಬೆರಳೂ ಅದುರತೊಡಗಿತು. ತಾನೇ ನನ್ನ ಕೈಹಿಡಿದು ಒರೆಸಿಕೊಂಡಳು.
ಅವಳ ತುಟಿಗಳು ಅದುರುವುದನ್ನು ನಿಲ್ಲಿಸುವವರೆಗೆ ಅವಳನ್ನು ಮುಟ್ಟಬಾರದು ಎಂದು ನಿರ್ಧರಿಸಿದೆ. ಅವಳೂ ನನ್ನ ಬೆರಳುಗಳ ನಡುಕ ನಿಲ್ಲಿಸಲು ಪ್ರಯತ್ನಿಸುತ್ತಲೇ ಇದ್ದಳು. ನನ್ನ ನಿರ್ಧಾರ ಅಚಲವಾಗಿತ್ತು. ಆದರೆ ಅವಳ ಪ್ರಯತ್ನ ದಿನದಿಂದ ದಿನಕ್ಕೆ ವಿಫಲವಾಗುತ್ತ ಸಾಗಿ ಇಬ್ಬರನ್ನೂ ಕಂಗೆಡಿಸತೊಡಗಿತು.
’ಒಬ್ಬರನ್ನು ಮುಟ್ಟುವ ಮುನ್ನ ನೂರು ಸಲ ಯೋಚಿಸಬೇಕು. ಮನಸಲ್ಲುಳಿವ ಗುರುತಿಗಿಂತ ದೇಹದಲ್ಲಚ್ಚಾಗುವ ನೆನಪು ತುಂಬ ಕ್ರೂರಿ’ – ಸ್ಟೇಟಸ್ ಇಟ್ಟಿದ್ದೆ.
’ಪಾಪಪ್ರಜ್ಞೆ ಹುಟ್ಸೋದು ಕೂಡ ಪಾಪವಾಗಿರುತ್ತೆ’ ರಿಪ್ಲೈ ಮಾಡಿದ್ದಳು.
’ನೀನು ನಿನ್ನ ಕನಸು ಹಂಚಿಕೊಂಡಮೇಲೂ ನಾನು ಹಾಗೆ ಮಾಡಬಾರದಿತ್ತು’
’ನೀನು ಸಹಜವಾಗೇ ವರ್ತಿಸಿದೆ. ನನ್ನ ಮನಸೇ ಅಸಹಜ ಎನುವಷ್ಟು ಸೂಕ್ಷ್ಮ ಆಗೋಗಿದೆ’
’ನನ್ನ ಇನ್ನೊಂದ್ ಸಲ ಸಂಪೂರ್ಣವಾಗಿ ನಂಬಬಹುದಾ?’
’ಈಗಲೂ ನಂಬಿದ್ದೇನೆ. ನನಗೆ ಅಪನಂಬಿಕೆ ಹುಟ್ಟಿರೋದು ನನ್ನ ಮೇಲೆಯೇ’
ಮಾತು ಯಾವ ದಡವನ್ನೂ ತಲುಪದೆ ಅಲ್ಲಲ್ಲೇ ಸುತ್ತುವರೆಯುತ್ತಿತ್ತು. ನಮ್ಮಿಬ್ಬರ ಮನಸುಗಳು ಅದದೇ ಹೊಂಡಗಳಲ್ಲಿ ಬಿದ್ದು ಒದ್ದಾಡಿ ಹೈರಾಣಾಗತೊಡಗಿದವು. ನನ್ನ ಕೈಗಳು ಅವಳ ಪ್ರೀತಿಯ ನೇವರಿಕೆ ಇಲ್ಲದೆ ಸೊರಗತೊಡಗಿದವು. ಅವಳ ಕಣ್ಣುಗಳೋ ಭರವಸೆ ಹುಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಸೋತು ಸೋತು ಕಪ್ಪಾಗತೊಡಗಿದವು. ದಾರಿ ಸಂಪೂರ್ಣ ಮುಚ್ಚಿಹೋಗಿತ್ತು. ಬಿಟ್ಟು ನಡೆಯುವುದಂತೂ ಕಲ್ಪನೆಗೂ ಮೀರಿದ್ದಾಗಿತ್ತು. ಕಾಲ ನಮ್ಮನ್ನು ತಿಂದು ಮುಗಿಸುವವರೆಗೂ ಒಟ್ಟಾಗಿ ಕಾಯುವುದು ಬಿಟ್ಟರೆ ಬೇರಾವ ಮಾರ್ಗವೂ ನಮಗುಳಿದಿರಲಿಲ್ಲ.
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು
ಅಪ್ಪನ ಭುಜದ ಆ ಕಡೆಗೊಂದು, ಈ ಕಡೆಗೊಂಡು ಕಾಲು ಇಳಿಬಿಟ್ಟು ಕುಳಿತ ಮುದ್ದಿನ ಮಗಳು, ಸಂತೆಯಲ್ಲಿ ಕಂಡ ದನ ಮಾರಾಟದ ಜಗತ್ತು, ನಂತರ ಕಂಡ ಮನುಷ್ಯ ಜಗತ್ತು, ಎರಡೂ ಒಂದೇ ಆಗಿರಲಿಲ್ಲ.
:: ದೀಪದ ಮಲ್ಲಿ
ಅಪ್ಪಯ್ಯನ ಗಂಟುಭುಜದ ಮ್ಯಾಕೆ ಆಕಡೀಕೊಂದು ಕಾಲು ಈಕಡೀಕೊಂದು ಕಾಲು ಇಳೆಬಿಟ್ಟು ಕುಂತಿದ್ದ ನಂಗೆ ಒಂಭತ್ತೋ ಹತ್ತೋ ವಯ್ಸು. ದನಗೊಳ್ ಮಾರಕ್ಕೆ ಸಂತೆಗೆ ಒಂಟಿದ್ದೋನ ಬೆನ್ನಿಗೆ ಬಿದ್ದು ನಾನೂ ಓಡಿದ್ನಿ. ಎಲ್ಡೂ ಕೈಲಿ ಎಲ್ಡು ದನ ಇಡ್ಕಂಡ್ ಒಂಟಿದ್ದ ಅಪ್ಪಯ್ಯ ಇಂದಿಂದ್ಕೆ ಓಡ್ತಾ ಬತ್ತಿದ್ದೋಳ್ಗೆ ʼಬಾರ್ಗೋಲ್ನಿಂದ ಬಾರ್ಸೇನುʼ ಅಂತ ದೂರದಿಂದ್ಲೇ ಕೈ ತೋರ್ದ. ನಾನಾದ್ರೂವೆ ಮೂಗ ಹೊಳ್ಗೆ ಕೈ ತೂರ್ಸಿ ತೀಡ್ತಾ ಬಗೀತಾ, ಮತ್ತ ಆಗೀಗ ಕಪಾಳಕ್ಕ ಎಂಜ್ಲ ಬಳ್ಕತಾ ಮೆತ್ತಾ ಅಳೂವಂಗೆ ನಾಟ್ಕ ಮಾಡ್ತಾ ನಡೀತಿದ್ನಿ. ʼಇನ್ನೀ ಪೀಡೆ ಬಿಡನಾರ್ಳುʼ ಅನ್ಸಿ ಅಪ್ಪಯ್ಯನೂ ಒಸಿ ನಿಧಾನುಸ್ದ. ಅದು ಗೊತ್ತಾದೇಟ್ಗೆ ನಾನೂ ದಿಬಿದಿಬಿ ನಡ್ದು ಜೊತ್ಗೆ ಹೆಜ್ಜೆ ಕೂಡುಸ್ದೆ. ಗಾವ್ದ ದೂರ ಸವೆಯೋದ್ರೊಳ್ಗೆ ಒಂದ್ ದನದ ಹಗ್ಗ ನನ್ ಕೈಲಿತ್ತು.
ಒಂದೀಟ್ ನಡ್ಯದು, ಹಗ್ಗವ ಎಲ್ಡೂ ಕಾಲ್ಸುತ್ತಾ ಚಕ್ರದಂಗೆ ಸುತ್ತದು, ನದಿ-ದಡ ಆಡದು, ಮತ್ತ ನಡ್ಯದು. ಇನ್ನೀಟ್ ದೂರ ಓದ್ಮ್ಯಾಕೆ ದನಗೋಳಿಗಿಂತಾ ಮುಂದೋಡದು, ಹಗ್ಗವ ಕಾಲಿಂದ ಮೆಟ್ಟದು, ಇನ್ನೇನು ದನ ನನ್ ದಾಟಿ ಮುಂದೋಡ್ತು ಅನ್ನೂವಾಗ ಕಾಲ ತಗ್ದು ಹಗ್ಗ ಕೈಲಿ ಇಡ್ಯದು. ಈತೀತರ ತರಳೆ ಆಟಗಳ್ನೆಲ್ಲಾ ಅಪ್ಪಯ್ಯನೂ ನೋಡುತ್ಲೇ ಸುಮ್ಕೆ ಬತ್ತಿದ್ದ. ಯಾವಾಗ್ ಹಗ್ಗ ತಗ್ದು ಕುತ್ಗೇಗೇ ಸುತ್ಕಂಡು ಜಂಬುಸ್ತಾ ನಿಂತ್ಕಂಡ್ನೋ, ಅದೆಲ್ಲಿತ್ತೋ ಆ ಕ್ವಾಪ… ಹಾದಿಬದಿ ಹುಣ್ಸೇ ಮರ್ದಿಂದ ಬೆತ್ತ ಸಿಗ್ದು ಚಟೀರಂತ ಪಿರ್ರೆಗೆ ಒಂದು ಬಿಟ್ಟ. ಆಗ ಎಂಜ್ಲೇನು? ನೆತ್ರ… ನೆತ್ರ ಸುರೀತು ಕಣ್ಲಿಂದ. ಬಿಕ್ಕಿ ಬಿಕ್ಕಿ ಅಳ್ತಾ ಕುಂಡೆನೋವಿಗೆ ಓಡಾಕೂ ಆಗ್ದೆ ನಡ್ಯಾಕೂ ಬಾರ್ದೆ ಕುಂತ್ಕಂಬುಟ್ಟೆ. ʼಶನಿಮುಂಡೇದುʼ ಅಪ್ಪಯ್ಯ ಬೈಕೋತ್ಲೆ ಹೆಗ್ಲಮ್ಯಾಕೆ ಕುಂಡ್ರುಸ್ಕೊಂಡ. ಅಂಗೆ ಎಲ್ಡೂ ಕಾಲ ಭುಜಕ್ಕೆ ಜೋತಾಡ್ಸಿ ಸವಾರಿ ಹೊಂಟೋಳು ಸಂತೆ ಸೇರೋತ್ಗೆ ಸೂರ್ಯ ಮನೀಗೋಗೋ ಕುಸೀಲಿದ್ದ.
ಸಂತೆಮಾಳ್ದಾಗೆ ನನ್ನ ಕುಂಡೆನೋವಿಗೆ ಗಾಳಿ ಸೋಕ್ಲಂತ ಫ್ರಾಕಿನ ಫ್ರಿಲ್ಲನ್ನ ಬೀಸಣ್ಗೆ ತರ ಬೀಸ್ಕಾತ ಗಿರಗಿರನೆ ಸುತ್ತಿದ್ನಿ. ಅಪ್ಪಯ್ಯ ಅಲ್ಲೆಲ್ಲೋ ಗುಂಪ್ನಾಗೆ ಕೈಮ್ಯಾಕೆ ಚೌಕ ಮುಸ್ಕಾಕಿ ಬೆಳ್ಳು ಎಣುಸ್ತಿದ್ದ. ಒಂದೊಂದ್ ಸಲ್ಕೆ ಮೈಮೇಲೆ ದ್ಯಾವ್ರು ಬಂದಂಗೆ ಜೋರಾಗಿ “ಊಹೂಹೂ ಆಗಕ್ಕಿಲ್ಲ ತಗೀತಗೀರಿ, ನನ್ ಎಂಡ್ರು ಮಕ್ಳುನ್ನೂ ಹಿಂಗ್ ಸಾಕಿಲ್ಲ ನಾನು, ಹಂಗ್ ಸಾಕಿವ್ನಿ ದನಗೋಳ, ನಡ್ರಿ ಬೇರೆ ನೋಡೋಗ್ರಿ” ಅಂತ ಕೈಕೆಡವಿ ಕೂಗ್ತಿದ್ದ. ಇಂಗೆ ಸುಮಾರೊತ್ತು ಕಾಯದು, ಇನ್ನೊಂದೀಟ್ ಜನ ಬರದು, ವಾಗದು, ಹೆಗ್ಲ ಮ್ಯಾಲಿಂದ ಚೌಕ ಇಳ್ಸದು, ಬೆಳ್ಳು ಎಣುಸದು, ಮತ್ತ ಕೈ ಒದ್ರಿ ಬಂದು ಕುಂತ್ಕಳದು ನಡೀತಿತ್ತು.
ನಾನೂ ಗಿರಗಿರ ಸುತ್ತದು, ಯಾನಾಗ್ತೈತೆ ಅಂತ ಎಟಕ್ಸಿ ನೋಡದು, ಮತ್ತ ಸುತ್ತದು
ಗಿರಗಿರಗಿರಗಿರ..ಗಿರಗಿರ.. ಗಿರ.. ಗಿ..ರ..
**
ಮನೀಗೆ ಅಂತ ಇದ್ದುದ್ದು ಎಲ್ಡು ದನವೆಂಬೋ ಆಸ್ತಿ, ಅರ್ಧ ಎಕ್ರೆ ಏರಿ ಮಗ್ಲ ಹೊಲ. ಸುತ್ಲ ಹತ್ತಾರು ಎಕ್ರೇಲಿ ಧಾನ್ಯಲಕ್ಸ್ಮಿ ಮೈಮರ್ತು ಕುಣ್ಯೋಳು. ನಮ್ಮೊಲ್ದಾಗ್ ಮಾತ್ರ ಇರೋಬರೋ ಅನಿಷ್ಟಗೋಳ್ನೂ ತಂದು ಸುರ್ಯೋಳು. ಅಪ್ಪಯ್ನೂ ರೆಟ್ಟೆಬೀಳುವಂಗೆ ದುಡ್ಯೋ ಆಸಾಮಿನೇ ಒಂದು ಕಾಲ್ದಾಗೆ. ಆದ್ರೂ ಯಾತುಕ್ ಕೈ ಮಡುಗುದ್ರೂ ಕೈಗತ್ತಲಾರ್ದ ಲತ್ತೆ ಮನ್ಷಾ ಅಂತ ಊರ್ನೋರಿಗೆಲ್ಲಾ ಗೊತ್ತಾಗೋಗಿತ್ತು. ಹೊಲ್ದ ನಡೂಕೆ ಒಂದು ಹುಣಸೇ ಮರವಿತ್ತು. ಅದು ಮಾತ್ರ ನಾಕೂರಿಗೂ ಹಂಚಿ ಚೆಲ್ಲಾಡುವಂಗೆ ಸೋರಾಕ್ತಿತ್ತು. ಆದ್ರೇನು? ಬದಕನ್ನೋ ಹೊಳೆ ಸೆಳವಲ್ಲಿ ಈ ಹುಣಸೇಣ್ಣ ಎಷ್ಟು ತೊಳೆದ್ರೂ ದಕ್ತಿರ್ನಿಲ್ಲಾ ಅನ್ನಿ.
ಇನ್ನ ಅವ್ವನೆಂಬೋ ಮಾಯ್ಕಾತಿ ಹೆಂಗ್ಸು ಮನೆ ಬೀದಿ ಒಂದ್ಕೂ ಕ್ಯಾರೇ ಅಂತಿರನಿಲ್ಲ. ನಡುಬೀದಿಯಾಗೆ ಸೀರೆ ಮಂಡಿಗಂಟ ಎತ್ತಿ ನಿಂತಾಂದ್ರೆ ಜಟ್ಟಿ ಜಟ್ಟಿ ಕಂಡಂಗೆ ಕಾಣೋಳು. ಉದ್ರೋ ಸೀರೇನಾ ನಿಂತನಿಡದಾಗೇ ಬಿಗ್ದು ಕಟ್ಟಿ ಅವರಿವ್ರ ಹೊಲ-ಗದ್ದೆ ಮಾಡೋಳು. ನಾಕ್ ಬೀದಿ ಹೆಣ್ಣಾಳ್ಗೊಳ್ಗೆ ಇವ್ಳೇ ಲೀಡ್ರು. ಬಾಯಿ ಬೊಂಬಾಯಿ. ಮನ್ಯಾಗೂ ಆಟೇ. ಒಂದು ಕಿತ ಬೇಸಿ ಬಡುದ್ರೆ ಮುಗ್ತು ಅಲ್ಲಿಗೆ. ಉಪ್ಪು ಅಂಗದೆ ಹುಳಿ ಇಂಗದೆ ಅಂತೇನಾರ ವರಾತ ತಗುದ್ರೆ ತಿಕದ ಮ್ಯಾಲೆ ಒದ್ಯೋಳು. ಅವ್ಳು ನಡ ಬಗ್ಗಿಸಿ ಹೊಲ್ದಾಗೆ ದಿನಗಟ್ಳೆ ದುಡುದ್ರೆ ನಮ್ಮನ್ಲಿ ಒಲೆ ಉರ್ಯಾದು. ಅದ್ಕ ಅಪ್ಪಯ್ಯನೂ ತನ್ನ ಕೈಲಾಗ್ದೇ ಇರೋವತ್ಗೆ ಇವ್ಳಾದ್ರೂ ಮನೆ ನಡುಸ್ತಾವ್ಳಲ್ಲ ಅಂತ ಅನ್ಕೂಲದ ಕಡೀಗ್ ವಾಲಿದ್ದ. ಊರ್ ಗಂಡುಸ್ರು ಚಂದ್ರಣ್ಣನ ಟೀ ಅಂಗ್ಡೀ ಮುಂದೆ ಕಾಲಾಡುಸ್ತಾ ಕುಂತು ಅವ್ವ ಹೊಲದಿಂದ ಕ್ಯಾಮೆ ಮುಗ್ಸಿ ಸೀದಾ ಗೌಡ್ರ ಕೆಳ್ಮನೇಗೆ ಹೋದುದ್ನ ಕಂಡುದಾಗಿ ಆಡ್ಕತಿದ್ರೂ ಅಪ್ಪಯ್ಯ ತನ್ನದಲ್ದ ಇಷ್ಯ ಅನ್ನೂವಂಗೇ ಸುಮ್ಕಿರ್ತಿದ್ದ. ಅವ್ವಯ್ಯ ರಾತ್ರೆ ಹೊತ್ಗೆ ಮನೀಗ್ಬಂದು ನೀರು-ಸಾರು ನೋಡೋಳು. ಒಟ್ನಾಗೆ ಅವ್ವನ ಒಡ್ಲ ಬೆಂಕೀಲಿ ಅಪ್ಪಯ್ಯನ ಹುಳುಕೆಲ್ಲಾ ನಚ್ಗೆ ಮೈಕಾಸಿಕೊಳ್ತಿತ್ತು.
ಇಂಗಿರುವಾಗ ಒಂದಿನ ನನ್ನ ಮಲುಗ್ಸಿ ಅವ್ವ-ಅಪ್ಪಯ್ಯ ಎಂಡ ಕುಡೀತಾ ಕುಂತಿದ್ರು. ಮಾತಿಗ್ಮಾತು ಬೆಳ್ದು ಸ್ಯಾನೆ ಜೋರು ಜಗಳುಕ್ಕೆ ತಿರುಗ್ತು. ಮೊದ್ಮೊದ್ಲು ಇಂತ ಜಗ್ಳ ಹೊಯ್ದಾಟ ಭಯ ಅನುಸುದ್ರೂ ಆಮೇಕಾಮೇಕೆ ಎಲ್ಕಾ ರೂಡ್ಯಾಗಿ ನಾನೂ ಧಿಮ್ ಅಂತ ಮಲ್ಗಿ ನಿದ್ದೆ ವಡೀತಿದ್ದೆ.. ಅಂಗೇ ನಿದ್ದೆ ವೋಗಿದ್ ಆ ದಿನ ಒಂದುಸಣ್ಣ್ ಮಾತ್ಗೆ ಬಡ್ದಾಡ್ಕಂಡು ಅಪ್ಪ ಹೆಂಡದ್ ಸೀಸೆ ತೆಗ್ದು ನೆಲುಕ್ ಬಡುದ್ನಂತೆ. ಪಕ್ಕದಾಗೇ ಅಚ್ಚಿಟ್ಟಿದ್ದ ಬುಡ್ಡಿದೀಪ ಭಗ್ಗನೆ ಒತ್ಕೊಂಡು ಅವ್ವನ ಮಕ ಮುಸುಡಿ ಎಲ್ಲಾ ಚಣದಾಗೆ ಅರ್ಧಂಬರ್ಧ ಬೆಂದೋಯ್ತು. ಅಪ್ಪಯ್ಯ ತಾನು ಬೇಕಂತ ಮಾಡಿಲ್ಲಾ ಅಂತ ವದ್ರುತಾನೇ ಇದ್ದ.
ಅವ್ವ ತಿಂಗ್ಳಾನ ಆಸ್ಪತ್ರೆ ಸೇರಿ ಸುಮಾರಾಗಿ ಗುಣವಾದ್ಲು. ನಂಗ್ ಮಾತ್ರ ಅವ್ವನ ಮಕ ನೋಡಕ್ಕ ವಾಕ್ರಿಕೆ ಬಂದೋಗದು. ಅವ್ವ ಮೊದ್ಲಿನಂಗಿರನಿಲ್ಲ. ಚಂದ ಮೊದ್ಲಿನಂಗಿರ್ನಿಲ್ಲ, ಖದರ್ರೂ ಮೊದ್ಲಿನಂಗಿರ್ನಿಲ್ಲ. ಯಾರ ಗದ್ದೆಮಾಡಕ್ಕೂ ಹೋಗ್ತಿರನಿಲ್ಲ. ಅವ್ಳ ಬೆನ್ನಿಗೆ ಗೌಡ್ರೌವ್ರೆ ಅನ್ನೋದಕ್ಕೇ ಜತೆಗಾರ್ರು ಅವ್ಳನ್ನ ʼಅಕ್ಕಾʼ ಅಂತಿದ್ರು. ಗೌಡ್ರೇನೂ ಅವ್ಳನ್ನ ಪಕ್ದಾಗೆ ಕೂರ್ಸಿ ಪಟ್ಟುದ್ ರಾಣಿ ಅನ್ದೇವೋದ್ರೂ ಆಳುಕಾಳಿಗೆಲ್ಲಾ ʼಅಕ್ಕʼಳಾದ್ದೇ ಅವ್ಳಿಗೆ ಕೊಂಬು ಬಂದಿತ್ತು. ಆ ಕೊಂಬಿನ ದವಲತ್ತನ್ನ ಅಪ್ಪನೂ ಆಗ್ಗಾಗ್ಲೇ ಸವರಿ ಮೀಸೆ ತಿರುವ್ತಿದ್ದಾ ಅನ್ನಿ. ಇಂಗೆ ʼಅಕ್ಕʼಳಾಗಿದ್ದ ಸುಟ್ಟಮೊಕದ ಅವ್ವನ್ನ ಗೌಡ್ರು ʼಬಿಟ್ರುʼ ಅನ್ನೋ ಸುದ್ದಿ ಅಬ್ಬಕ್ಕೆ ನಮ್ಮಳ್ಳೀಗೇನು ವಾರೊಪ್ಪತ್ತೂ ಬೇಕಾಗ್ನಿಲ್ಲ.
ಆಸ್ಪತ್ರೆಲಿದ್ದ ಅವ್ವನ ಚಿಕ್ಪುಟ್ಟ ಔಷಧಿ ಖರ್ಚಿಗೂ ಅಪ್ಪಯ್ಯನತ್ರ ಕಾಸಿರ್ನಿಲ್ಲ. ಆಗೆಲ್ಲಾ ಅಪ್ಪಯ್ಯ ಗೌಡರ ಮನೆ ಮುಂದೆ ಕುಕ್ಕುರುಗಾಲಲ್ಲಿ ಕಾದು ಕುಂತಿರ್ತಿದ್ದ. ಒಂದೆರೆಡು ಸಲ ಪಂಚೆ ಮ್ಯಾಕೆತ್ತಿ ಚೆಡ್ಡಿ ಜೇಬಿಂದ ಕಾಸು ಎಣಿಸಿ ಕೊಟ್ಟಿದ್ದ ಗೌಡ್ರು, ಆಮೇಕಾಮೇಕೆ ಸಿಡಿಮಿಡಿಗುಟ್ಟೋರು. ಅಪ್ಪಯ್ಯ ಅಂತಾದ್ಕೇನು ನೊಂದ್ಕೋತಿರ್ನಿಲ್ಲ. ಗೌಡ್ರ ಕಳ್ಳು ಚುರ್ರನ್ಲಿ ಅಂತವ ನನ್ನೂ ಜತೀಗ್ ಕರ್ಕೋವೋಗ್ತಿದ್ದ. ನನ್ನ ದೆಸೆಲಿಂದ ಖರ್ಚಿಗೀಟು ಕಾಸಾಗ್ತಿತ್ತು. ಮೊದಲೆಲ್ಲಾ ನಾಕಾರ್ ನೋಟು ಸಿಗ್ತಿತ್ತು. ಆಮೇಕಾಮೇಕೆ ಚಿಲ್ರೇಗ್ ಬಂದು, ತಿಂಗಳಾಗೋರೊಳ್ಗೆ ಅದೂ ನಿಂತೋತು.
ಇದೆಲ್ಲಾ ಕಂಡಿದ್ದ ಊರಮಂದಿ ಅವ್ವನಿಂದ ʼಗಂಗಕ್ಕಾʼ ಪಟ್ಟ ಕಿತ್ಕಂಡು ʼಗಂಗೀʼ ಅಂತ ಕೊಟ್ಟಿದ್ರು. ಮನ್ಯಾಗೆ ಗಂಜಿಗೂ ಗತಿಗೆಟ್ಟು ನಿಂತಿದ್ದೊ. ನಂಗೆ ಸ್ಕೂಲ್ನಾಗೆ ಕೊಡ್ತಿದ್ದ ಸೀಯುಂಡೆ ಇಟ್ಟುಮಿದ್ದಿ ದಿನ ದೂಡ್ತಿದ್ದೋ. ಒಂದಿನ ನನ್ನ ಸ್ಕೂಲು ಬೆಲ್ ಒಡ್ಯೋವತ್ಗೆ ಅವ್ವ ಹುಣಸೆ ಮರಕ್ಕೆ ನೇಣಾಕಂಡ್ ಪ್ರಾಣ ಬಿಟ್ಟಿದ್ಳು. ಅವ್ಳು ಅದ್ಯಾವಾಗ ಹಗ್ಗ ಬಿಗುತ್ಕಂಡ್ಳೋ ಏನೋ, ಜನ ನೋಡೋವತ್ಗೆ ಸುಟ್ಟಗಾಯ್ದಿಂದ ಮೊದ್ಲೇ ವಿಕಾರಾಗಿದ್ದೋಳ ಮೈ ಇನ್ನೂ ಊದ್ಕಂಡು ನೊಣ ಮುತ್ಕತ್ತಿತ್ತು. ಯವ್ವಾ.., ಅದ್ನಂತ್ರೂ ನೋಡ್ ಬಾರ.
ಗೌಡ್ರೇ ಮುಂದ ನಿಂತು ಮಣ್ಮಾಡ್ಸುದ್ರು. ಕೈಕಟ್ಟಿ ಸುಮ್ಕೆ ಮೂಲೆಲಿ ನಿಂತಿದ್ದ ಅಪ್ಪಯ್ಯನ್ನ ʼನೀ ಯಾರಾ? ಯಾವೂರಾ?ʼ ಅಂತ್ಲೂ ಯಾರೂ ಕೇಳ್ನಿಲ್ಲ. ರಾತ್ರಿ ದೀಪ ಹಚ್ಚಿಟ್ಟ ಅಪ್ಪಯ್ಯ “ಎಲ್ಡ್ ಬಾಳಣ್ಣು ಮಡಗಿವ್ನಿ, ಉಂಡ್ ಮನಿಕ” ಅಂತೇಳಿ ಹೊತ್ನಂತೆ ಮನಿಕಂಡ. ನಂಗೆ ರಾತ್ರಿಯೆಲ್ಲಾ ಅವ್ವನ ಮೈಮ್ಯಾಕೆ ಆರ್ತಿದ್ದ ನೊಣಗಳದ್ದೇ ನೆಪ್ಪು. ಅದೇಟ್ ಕಿತ ಎಣುಸುದ್ರೂ ಒಟ್ಟು ಏಸ್ನೊಣ ಬಂದ್ವೆಂದು ಲೆಕ್ಕ ಸಿಗ್ತಿರನಿಲ್ಲ. ತಿರ್ತಿರ್ಗಿ ಅವ್ವನ ಎಣ ಮಲುಸಿದ್ ಜಾಗ ನೆಪ್ಪ್ಮಾಡ್ಕಂಡು ಮತ್ತ ಮೊದ್ಲಿಂದಾ ನೊಣಗೊಳ್ ಲೆಕ್ಕ ಇಡಕ್ಕ ಸ್ಯಾನೆ ಕಷ್ಟ್ ಬಿದ್ದೆ. ಲೆಕ್ಕ ಸಿಗ್ನೇ ಇಲ್ಲ, ಕಡೀಕೆ ನೊಣಗೊಳೆಲ್ಲಾ ಮಾಯ್ವಾಗಿ ಅವ್ವನ ಮಕವೇ ಕಾಣ್ಸಕ್‌ಸುರುವಾತು. ದಿಗ್ಲಾಗಿ ಗುಬ್ರಾಕಂಡ್‌ಮನಿಕಂಬುಟ್ಟೆ.
ಬೆಳ್ಗೆ ನಾ ಯಾಳೋ ವತ್ಗೇ ಅಪ್ಪಯ್ಯ ದನಗೋಳ ಮೈತಿಕ್ತಿದ್ದ. ಕಣ್ಣುಜ್ತಾ ನಿಂತಿದ್ದೋಳ್ಗೆ “ಬಿರ್ನೆ ಮಕ ತೊಳ್ಕಂಡು ಇಸ್ಕೂಲಿಗೊಂಡು, ನಾ ದೊಡ್ ಜಾತ್ರೆಗೋಗಿ ಹೊತ್ನಂತೆ ಬತ್ತೀನಿ” ಅಂದ. ನೆನ್ನೆ ಇನ್ನಾ ಅವ್ವನ್ನ ಮಣ್ಣುಮಾಡಿ ಬಂದೀವಿ. ಇವತ್ತು ಅಪ್ಪಯ್ಯನೂ ಮನ್ಯಾಗೆ ಇರದಿಲ್ಲಾ? ಸ್ಕೂಲಿಗೋದ್ರೆ ಎಲ್ರೂ ಅವ್ವನ ಸುದ್ದೀನೇ ಕೇಳ್ತಾರೆ “ಅದ್ಯಾಕಂಗ್ ಮಾಡ್ಕಂಡ್ಳು ನಿಮ್ಮವ್ವ? ನಿಮ್ಮಪ್ಪಯ್ಯ ಏನಾದ್ರೂ ಬೋತಾ?” ಅಂತ ಒಂದಾಗುತ್ಲೆ ಒಂದು ಮಾತು ಕೇಳ್ತಾರೆ. ಇದೆಲ್ಲಾ ನೆಪ್ಪಾಗಿ ನಾನೂ ಜಾತ್ರೆಗೆ ಬತ್ತೀನಂತ ಕಾಲು ಕಟ್ಟಿದ್ದೆ.
**
ಇನ್ನೇನು ಕತ್ಲು ಕವೀತು ಅನ್ನೋವತ್ಗೆ ಅಪ್ಪಯ್ಯನ ವ್ಯಾಪಾರ ಕುದ್ರುದಂಗೆ ಕಾಣುಸ್ತು. ಮೊದಲ್ನೇಕಿತ ಮುಖದಾಗೆ ರವಷ್ಟು ನಗೀನ್ ಎಳೆ ಅಂಗಂಗೇ ತೇಲೋದಂಗೆ. ಕಾಸು ಚಡ್ಡಿಜೇಬ್ಲಿ ಮಡ್ಗಿ, ದನಗೋಳ್ನ ಗೂಟದಿಂದ ಕಟ್ಟುಬಿಚ್ಚಿ ಒಪ್ಸಿ, ಹೆಗ್ಲ ಮೇಲಿದ್ದ ಬಿಳಿ ಚೌಕ ಇಳ್ಸಿ ವಣುಲ್ಲಿನ ಮ್ಯಾಕೆ ಹಾಸ್ದ. ಚೌಕದ ತುಂಬೆಲ್ಲಾ ಕೆಂಪುಕೆಂಪಾದ ರಕ್ತುದ್ ಕಲೆ. ಕೈ ಎಲ್ಲಾರ ಕೊಯ್ಕೊಂತಾ ಅಂತ ತಿರುಗ್ಸಿ ಮುರುಗ್ಸಿ ನೋಡ್ಕಂಡ. ಅಂಗೇನೂ ಇರನಿಲ್ಲ. ಅಂಗೀನ್ನೊಮ್ಮೆ ನೋಡ್ದ. ತೋಳಮ್ಯಾಕೆ ಭುಜದ್ ಮ್ಯಾಕೆ ರಕ್ತ. ಅರುಚ್ಚನಂಗೆ ಅಂಗಿ ಕಳಚಿ ಮೈಕೈ ನೋಡ್ಕಂಡ. ಯಾತರದ ಗಾಯವೂ ಬಾವೂ ಕಾಣ್ನಿಲ್ಲ.
ಇಟ್ಟಾಡಿದ್ದ ಹುಲ್ನಾಗೆ ಜಡೆ ಎಣೀತಾ ಕುಂತಿದ್ದ ನನ್ನ ಕಡೀಗೊಮ್ಮೆ ನೋಡ್ದ. ನಾನಾದ್ರೂವೆ ಕುಂಡೆಗೆ ಬಿದ್ದ ಹುಣಸೇ ಛಡಿ ಏಟ್ಗೆ ಚರ್ಮ ಕಿತ್ತು ರಕ್ತ ಜಿನುಗ್ತಿತ್ತಲಾ. ಅದ್ನ ಅಪ್ಪಯ್ಯನ ಹೆಗ್ಲ ಮ್ಯಾಲಿದ್ದಾಗ್ಲೇ ಚೌಕ ತಕ್ಕಂಡು ತೀಡಿದ್ದು ನೆಪ್ಪಾತು. ಬಾಯ್ಬುಟ್ಟು ಯೋಳ್ದೆ ಏನೂ ಅರೀದ ಕೂಸ್ನಂಗೆ ಪಿಳಿಪಿಳಿ ಕಣ್ಣು ಬಿಡ್ಕಂಡ್ ಕುಂತೆ. ಎಲ್ಡ್ ಚಣ ಎವೆಯಿಕ್ದೆ ನೋಡ್ದ ಅಪ್ಪಯ್ಯ ಮತ್ತ ಮಾರುದ್ದುದ್ದ್ ಚೌಕ ತಕ್ಕಂಡು ಕೊಡ್ವಿ ನಂಗೆ ನಡ ಸುತ್ಲೂ ಎಲ್ಡ್ ಸುತ್ತು ಸುತ್ತಿ ಜಟ್ಟಿಯಂಗೆ ಮೋಟುಗಚ್ಚೆ ಹಾಕಿ, ಹೊದ್ಯೋಕಂತ ತಂದಿದ್ದ ದುಪ್ಟೀನ ಮ್ಯಾಲೊಂದು ಲುಂಗಿಯಂಗೆ ಸುತ್ದ. ಪಕ್ದೂರ್ನ ಬಂಡಿವಯ್ಯನ್ ತಾವ ಮಾತಾಡ್ಕಂಬಂದು ಸರ್ರಾತ್ರೀನಾಗೇ ಕುಂಡ್ರುಸ್ಕಂಡು ಹೊಂಟ.
ಅಪ್ಪಯ್ಯ ನಂಗೆ ಚರ್ಮಸುಲ್ಯೋವಂಗೆ ಬಾರ್ಸಿದ್ದುಕ್ಕೆ ಸ್ಯಾನೆ ನೊಂದ್ಕಂಡೌನೆ ಅನುಸ್ತು. ಯಾವೊತ್ಲೂ ನನ್ನ ಎತ್ತಾಡ್ಸದಿರಾ ಅಪ್ಪಯ್ಯನ ಈ ಹೊಸ ರೀತೀಗೆ ಒಳೊಳ್ಗೆ ಖುಸಿ ಆತು. ಪಾಪಚ್ಚಿ ಅಪ್ಪಯ್ಯ ಅಂತ್ಲೂ ಅನುಸ್ತು.
ಊರು ಮುಟ್ದಾಗ ನನ್ನ ಮನ್ಯಾಗೇ ಬುಟ್ಟು ಅಪ್ಪಯ್ಯ, ಗೌಡ್ರ ಅಟ್ಟೀತಕ್ಕೋದ. ಮೊನ್ಮೊನ್ನೆ ಗೌಡ್ರ ಮಗ ಮಯೇಸಣ್ಣನ್ನ ಮದ್ವೆ ಮಾಡ್ಕಂದು ಬಂದಿತ್ತಲ್ಲಾ ಶೀಲಕ್ಕ, ಆವಕ್ನೇ ಮನೇತಕ್ ಬಂದು ನನ್ನ ಅವ್ರಟ್ಟೀತಕ್ ಕರ್ಕೊವೋತು. ಆಟೊತ್ಗೆ ಅಪ್ಪಯ್ಯ ಸುತ್ತಿದ್‌ಪಂಚೆಲ್ಲಾ ರಕುತ್ವೋ ರಕ್ತ. ಅದ ಬಿಚ್ದೇಟ್ಗೆ ತೊಡೆ ಸಂದ್ಲಿಂದ ಅಂಗೇ ಹರೀತ್ಲೇ ಇತ್ತು. ಅಕ್ಕ ಹಿತ್ಲುಗ್‌ಕರ್ಕೊವೋಗಿ ನೀರ್‌ಬುಟ್ಟು ತೊಳ್ಕ ಅಂದ್ಳು. ನಾ ತೊಳೀತ್ಲೇ ಇದ್ನಿ, ರಕ್ತ ಸುರೀತ್ಲೇ ಇತ್ತು. ಅಕ್ಕ ಬಿರ್ಬಿರ್ನೆ ಅವ್ಳ್ದೇ ಹಳೇ ಲಂಗವ ಹರ್ದು ಒಂದು ಒಳ್ಬಟ್ಟೆ ಒಳೀಕೆ ದೋಣಿಯಂಗೆ ಮಡುಚಿಟ್ಟು ಅದು ಉದ್ರೋಗದಂಗೆ ಅಡೀಲಿಂದ ಪಿನ್ನ ಹಾಕಿ “ಇಕಳ್ಳವ್ವಿ, ಹಾಕ್ಕ ಇದಾ” ಅಂತ ಕೊಡ್ತು. ರಾತ್ರೆ ಅಲ್ಲೇ ಮನಿಕಂಡಿದ್ದೆ. ಅಕ್ಕಾ ಅದೇನೇನೋ ಹೇಳುತ್ಲೇ ಇತ್ತು.
**
ದನ ಮಾರಿದ ಮ್ಯಾಕೆ ಅಪ್ಪಯ್ಯ ಗದ್ದೇನೂ ಮಾರ್ಕಂಡ್ನಂತೆ. ʼಸಣ್ಣೀರ ಮೂರೂ ಬಿಟ್ಟ ಊರೂ ಬಿಟ್ಟʼ ಅಂತ ಗೌಡ್ರಟ್ಟೀ ಮುಂದ ಜನ ಆಡ್ಕಳೌರು. ಆ ಮಾತ್ಗೆ ಗೌಡ್ರೂ ಎಲೆ ಅಡಿಕೆ ಕ್ಯಾಕ್ರುಸಿ ನಗಾಡೋರು. ನಾನು ಯಾವಾಗೂನೂ ಶೀಲಕ್ಕನ ಜೊತ್ಗೇ ಇರ್ತಿದ್ದೆ. ಅಕ್ಕ ಬಿಮ್ಮನ್ಸೆ ಅಂತ ಎಲ್ರೂ ಸಡಗ್ರ ಮಾಡ್ತಿದ್ರು. ಮನೆ ಕೆಲ್ಸುಕ್ಕೆ ಆಳಾಯ್ತದೆ ಅಂತ ಗೌಡ್ತೌನೋರು ನನ್ನ ಅಲ್ಲೇ ಮಡಿಕ್ಕಂಡಿದ್ರು. ಶೀಲಕ್ಕ ಇಲ್ಲೇ ನೀರಾಕಂತು. ಆಮ್ಯಾಕೆ ಅವ್ರವ್ವ ಬಂದು ಬಾಣ್ತನುಕ್ಕ ಕರ್ಕೊವೋದ್ರು.
**
ನಂಗೆ ಒಂದ್ ವಾರ್ಲಿಂದ ಜರ, ಒಂದೇ ಸಮ್ಕೆ ವಾಂತಿ. ಜೊತ್ಗೆ ಅಳಾಂದ್ರೆ ಅಳ. ಅಪ್ಪಯ್ಯ- ಅವ್ವ ನೆಪ್ಪಾಗೋರು. ಊರ್ಲಿಂದ ಶೀಲಕ್ಕ ಮಗೀನೆತ್ಕಂಡು ಬಂತು. ನನ್ನ ನೋಡಕ್ಕ ಬಿರ್ನೆ ಬಂದ್ಬುಟದ ಅಕ್ಕಾ ಅಂತ ನಾ ತಿಳ್ಕಂಡ್ನಿ. ಗಾಡಿ ಬಂದು ನಿಂತೇಟ್ಗೆ ನಾನೇ ಓಡೋಗಿ ಮಗೀನ ನೋಡನ, ಆಡ್ಸನ ಅಂತಿದ್ನಿ. ಸುಡೋ ಮೈಯ್ಯ ಮ್ಯಾಕೆತ್ತಕ್ಕೂ ಆಗ್ದೇವೋತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ
ಅಕ್ಕ ಅಂಗ್ಳ ದಾಟಿ ನಡುಮನೆಗೆ ಬಂದೋಳೇ “ಎಲ್ಲವ್ಳೆ ಬ್ಯಾವರ್ಸಿ ಮುಂಡೆ” ಅಂತ ಅರ್ಚಂಡ್ಳು. ಕದ ಸರ್ಸಿ ಬಾನ್ದಕ್ವಾಣೆಲಿದ್ದ ನನ್ ನೋಡ್ದೋಳೇ ಮಗ ಕಂಕ್ಳಲ್ಲಿ ಇರುವಂಗೇ ಜಾಡ್ಸಿ ಒದ್ಲು. ಅವ್ಳು ಒದ್ದೇಟ್ಗೇ ಜರ ಬಂದ್ ನಳ್ತಿದ್ದ ನಾನು, ಧೂಳಿಡ್ದ್ ಕುಂತಿದ್ದ ಬಾನ ಒಂದೇ ತರ್ಕೆ ಬಿದ್ದೋದೋ.
“ಲೌಡಿ ಮುಂಡೆ ಈಗ ಎದೆ ಚಿಗ್ರುತಾದೆ, ನಂ ಗಂಡನ್ನ ಮಗ್ಲಲ್ಲಿ ಮನೀಕತಿಯೇನೇ ಚಿನಾಲಿ”
ಗೌಡ್ರು ಮನೇಲಿ ಇರ್ನಿಲ್ಲಾ. ಮಯೇಸಣ್ಣನೂ ಇದ್ದಂಕಾಣೆ.
“ನಾ ಮನೀಕಂತಿರ್ನಿಲ್ಲಾ, ಅಣ್ಣನೇ ಬಂದು ಮನಿಕಂತಿತ್ತು. ಯಾರ್ಗಾನಾ ಏಳುದ್ರೆ ನಿಮ್ಮವ್ವ ವೋದ್ಕಡೀಕೇ ನಿನ್ನೂ ಕಳುಸ್ಬುಡ್ತೀನಿ ಅಂತ ಎದುರ್ಸ್ತು” ಅಂತಂದೇಬುಟ್ಟೆ. ಅವ್ವೋರು ಬಾಯ್ ಮ್ಯಾಕೆ ಕೈಔರಿ “ಬಾಯಿ ಬುಟ್ರೆ ಒನ್ಕೆ ಗಿಡುವ್ಬುತೀನಿ ಬ್ಯಾವರ್ಸಿಮುಂಡೆ” ಅಂತ ಜುಟ್ಟಿಡ್ದು ಗುಂಜಾಡುದ್ರು.
ಶೀಲಕ್ಕನ ಅವ್ವ ಗೌಡ್ತೌವ್ವೋರನ್ನ ಕರ್ಕೊವೋಗಿ ಕಿವೀಲಿ ಏನೋ ಹೇಳುದ್ರು. ಚೀಲ್ದಿಂದ ಅದ್ಯಾತರುದ್ದೋ ಉಂಡೆ ತಕ್ಕಟ್ರು. ಮಗ ಒಂದೇ ಸಮ್ಕ ಅಳ್ತಿತ್ತು. ಶೀಲಕ್ಕ ಕೂದ್ಲ ಕೆದ್ರಿ ರಾಚಸಿ ಅಂಗೆ ಕಾಣೋಳು. ನಂಗೆ ಮಗ ಅಳಾದು ಕೇಳ್ಬಾರ. ಎತ್ಕಬೇಕು ಅಂತ ಸ್ಯಾನೆ ಆಸೆ ಆಗ್ತಿತ್ತು. ಅವ್ವೋರು ಆ ಉಂಡೆನ ಒಂದು ಗಳಾಸ್ ನೀರ್ಗಾಕಿ ಗೊಟ್ಕಾಸಿ ಕಲುಸಿ ನನ್ ಬಾಯಿ ತೆಗ್ಸಿ ಗಟಗಟಾಂತ ಊದ್ಬುಟ್ರು.
ನೆಲ ಸಾರ್ಸ ಸಗ್ಣೀ ನೀರ್ಗಿಂತ ಕಡೆಯಾಗಿತ್ತದು. ನಂಗೆ ವಾಂತಿ ಬರೋಂಗಾಗದು. ಅವ್ರು ಯೋಳ್ದಂಗೆ ಕೇಳ್ದೆವೋದ್ರೆ ಮತ್ತೆಲ್ಡು ಬೀಳ್ತದಂತ ಸುಮ್ನೆ ಕುಡ್ಕಂಡೆ ಅತ್ಗೆ.
**
ರಾತ್ರಿಯೆಲ್ಲಾ ಶೀಲಕ್ಕ ಜೋರಾಗಿ ಅಳಾದು, ತಲ್ತಲೆ ಚಚ್ಕೊಳದು, ಮಯೇಸಣ್ಣಂಗೆ ಗೌಡ್ರು ಹೊಡ್ಕೋಕ್ಕೋಗೋರು, ಅವ್ವೋರು “ನೀವು ಅದ್ರ ಅಮ್ಮನ್ನ ಮಡಿಕಂಡಿರ್ನಿಲ್ವೇ? ಅದ್ಕೇ ನಿಮ್ಮಗ್ನೂ ನಾ ಏನ್ ಕಮ್ಮಿ ಅಂತ ಗೂಟ ನಿಲ್ಸಕ್ಕೋಗೋನೆ” ಅಂತ ಗದ್ರಿ ಮಗನ್ನ ಬುಡುಸ್ಕಂಡ್ರು. ಬೀಗ್ತಿ ಮುಂದ ಮಾತು ಬೆಳುಸ್ಲಾರದಲೆ ಗೌಡ್ರೂ ಸುಮ್ಕಾದ್ರು.
ಆಮೇಕೆ ನಂಗೆ ಯಾರೂ ಯಾನೂ ಅನ್ನಿಲ್ಲ, ಆಡ್ನಿಲ್ಲ. ಪಾಪಚ್ಚಿ ಗೌಡ್ತೌವ್ವೋರೇ ಗಂಜಿ ಕಾಸಿ ಕೊಟ್ರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್
ಬೆಳ್ಗೆ ಕಣ್ಣು ಬಿಡೋಕ್ಕಾಗದಂಗೆ ಜಾಸ್ತಿ ಜರ ಅಮ್ರುಕಂತು. ಈ ಚಂದುದಾಗೆ ಹೊರಗ್‌ಬ್ಯಾರೆ ಆದೆ. ಏಟ್ ಬಟ್ಟೆ ಮಡುಗುದ್ರೂ ತೊಪ್ಪೆಯಾಗದು. ಕಳ್ಳು ಪಚ್ಚಿ ಎಲ್ಲಾ ಅಂಗೇ ಉದ್ರೋಯ್ತದೇನೋ ಅನ್ನುವಂಗೆ ಕಿಬ್ಬಟ್ಟೆ ನೋಯದು. ನಂಗೆ ಎದ್ದು ನಡ್ಯಾಕೂ ಆಯ್ತಿರ್ನಿಲ್ಲ. ಎಲ್ರೂ ಗಾಬ್ರಿ, ಗಡಿಬಿಡಿ ಮಾಡೋರೇಯಾ. ಗೌಡ್ರೇ ಮುಂದ ನಿಂತು ಆಸ್ಪತ್ರೆ ತೋರ್ಸಕ್ಕ ಗಾಡಿ ಕಟ್ಸುದ್ರು. ಗೌಡ್ತೌವ್ವೋರು ನನ್ನ ಕೈಯಿಡ್ಕಂಡ್ ಕರ್ಕಂಬಂದು ಗಾಡ್ಯಾಗ್ ಕುಂಡ್ರುಸುದ್ರು. ಶೀಲಕ್ಕಾ ಯಾತ್ಕೂ ಇರ್ಲೇಳೇ ಅಂತ ಒಂಜತೆ ಬಟ್ಟೆ, ಒಳಬಟ್ಟೇನೆಲ್ಲಾ ಒಂದು ಬ್ಯಾಗಿಗಾಕಿ ಗಾಡೀಲಿಡ್ತು. ನಂಗೆ ಅವ್ರ ಮಕ ಕಂಡು ʼಗೊಳೋʼ ಅಂತ ಅಳ ಬಂತು. ಗೌಡ್ರು, ಗೌಡ್ತವ್ವೋರು, ಶೀಲಕ್ಕಾ, ಅವ್ರವ್ವಾ ಎಲ್ಲಾ ಯೇಟೊಳ್ಳೆ ಜನಾ ಅಂತ. ಆ ಮಯೇಸಣ್ಣನ್ನ ಮಾತ್ರ ಬುಟ್ಟು. ಜರಕ್ಕ ನೆತ್ತಿ ಕಾದೆಂಚಾದಂಗಾಗಿತ್ತು. ಕಣ್ಣು ಬೆಂಕಿ ಕೆಂಡದಂಗ ಸುಡೋದು. ಆದ್ರಾಗೂ ಕಣ್ಣು ಮಯೇಸಣ್ಣನ್ನ ಹುಡುಕ್ತು. ಕಾಣಿಸ್ನಿಲ್ಲ. ಗಾಡಿ ಒಡ್ಯೋ ನಿಂಗಣ್ಣಂಗೆ ಗೌಡ್ರು ದುಡ್ಡು ಕೊಟ್ಟು “ಬಿರ್ನೆ ತೋರ್ಕೊಂಡ್ ಬಾರ್ಲಾ, ಮಳ್ಗಾಲ ಬ್ಯಾರೆ” ಅಂತಂದ್ರು. ಅದ್ಕೆ ನಂಗೆ ಅವ್ರಂದ್ರೆ ಸ್ಯಾನೆ ಇಷ್ಟ. ಅಪ್ಪಯ್ಯಂಗಿಂತ್ಲೂ ಒಸಿ ಜಾಸ್ತಿನೇ ಅನ್ನಿ.
**
ಗೋರ್ಮೆಂಟ್ ಆಸ್ಪತ್ರೆ ಪಕ್ಕದಳ್ಳೀಯಾಗೇ ಇದ್ರೂ ನಿಂಗಣ್ಣ ಗಾಡಿ ಒಡ್ಕೊಂಡು ಪ್ಯಾಟೆಗ್ ಬಂದಿದ್ದ. ಓ ನಂಗೇನೋ ದೊಡ್ದಾಗೇ ಆಗ್ಬುಟದೆ ಅಂತ ದಿಗ್ಲಾತು. ಆಸ್ಪತ್ರೆ ಬಾಗ್ಲಲ್ಲಿ ಗಾಡಿಂದ ನನ್ನ ಇಳ್ಸಿ “ನೀ ಒಳಕ್ಕೋಗಿ ಸಾಲಲ್ಲಿ ಕುಂತ್ಕಂಡಿರವ್ವಾ, ನಾ ದನುಕ್ಕೆ ಹುಲ್ಲಾಕ್ ಬತ್ತೀನಿ” ಅಂತಂದ. ನಾ ಒಳಕ್ಕೋದೆ. ಕುಂತ್ಕಂಡೆ. ನಿಂಗಣ್ಣ ಏಟೊತ್ತಾದ್ರೂ ಬರ್ನೇ ಇಲ್ಲಾ. ನಾನೂ ಜರದಾಗೇ ಒಳ್ಗೂ ಆಚ್ಕೂ ಸ್ಯಾನೆ ಓಡಾಡೋಡಾಡಿ ಸುಸ್ತಾಯ್ತು. ಆಮ್ಯಾಕೆ ಅಲ್ಲೇ ಎಲ್ಲೋ ಬಿದ್ದೋಗ್ಬುಟ್ನಂತೆ.
ಎಚ್ಚರಾಗೋದ್ರಾಗೆ ಯಾವ್ದೋ ಮಂಚದ್ ಮ್ಯಾಕೆ ಮನುಗ್ಸಿದ್ರು. ನಿಂಗಣ್ಣ ಎಲ್ಲಾ ಅಂತ ಕೇಳುದ್ಕೆ “ಯಾವ್ ನಿಂಗಣ್ನೂ ಕಾಣೆ, ಬೋರೈನೂ ಕಾಣೆ, ಮನಿಕ” ಅಂತು ಸಿಸ್ಟ್ರಕ್ಕ. ಆವಕ್ನೂ ಸ್ಯಾನೆ ಒಳ್ಳೇವ್ರು. ಪಾಪಚ್ಚಿ, ಔಷ್ದಿ ಮಾತ್ರೆಗೆ ನಂತಾವ ದುಡ್ಡಿರ್ನಿಲ್ಲಾಂತ ನಾ ಮನಿಕಂಡಿದ್ದಾಗ ವಾಲೆ ಬಿಚ್ಕಂಡಿದ್ರಂತ. ನಂಗೆ ಗ್ಯಾನೇ ಇರ್ನಿಲ್ಲ ಆ ಕಡೀಕೆ. ಅಕ್ಕನೇ ಯೋಳ್ತು. ಕಿವಿ ಮುಟ್ಕಂಡೆ. ಅವ್ವ ಆಸ ಪಟ್ಟು ನೆಪ್ಪಿಗಿರ್ಲಿ ಅಂತ ಒಟ್ಟೆಗಿಲ್ದೇವೋದಾಗ್ಲೂ ಬಿಚ್ಚುಸಾಕೆ ಬಿಡ್ದೆವೋಗಿದ್ದ ಕಿವಿಗುಂಡು ಅದು. ಆವಕ್ಕನ್ನ ನೋಡ್ದಾಗೆಲ್ಲಾ ನಂಗೆ ಶೀಲಕ್ನೇ ನೆಪ್ಪಾಗೋರು. ಕಡೀಕೂ ಶೀಲಕ್ಕನ್ ಮಗೀನ ನಾ ಆಡ್ಸಕ್ಕಾಗ್ನಿಲ್ಲಾಂತ ಅಳಾನೇ ಬತ್ತದೆ.
***
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗವು…
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!