ಪ್ರಮುಖ ಸುದ್ದಿ
Dina Bhavishya : ಇಂದು ಈ ರಾಶಿಯವರಿಗೆ ಅಷ್ಟಮ ಚಂದ್ರ ದೋಷ; ನಿಮ್ಮ ಭವಿಷ್ಯ ಹೀಗಿದೆ!
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಅಷ್ಟಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಾರದ ಮೊದಲ ದಿನವಾದ ಇಂದು ಚಂದ್ರನು ರಾತ್ರಿ 07:55 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇಂದು ಸಿಂಹ ರಾಶಿಯವರನ್ನು ಅಷ್ಟಮ ಚಂದ್ರ ದೋಷ ಕಾಡಲಿದೆ. ಹೀಗಾಗಿ ಈ ರಾಶಿಯವರು ಇಂದು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಬೇಕು. ಹೊಸ ಕಾರ್ಯ ಕೈಗೆತ್ತಿಕೊಳ್ಳುವುದಿದ್ದರೆ ಮುಂದೂಡುವುದು ಒಳಿತು. ವಿವಾದಗಳಿಂದ ಸಾಧ್ಯವಾದಷ್ಟು ದೂರ ಇರಿ. ಇಂದು ಸಂಜೆಯವರೆಗೆ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ಇರಲಿದೆ. ನಿಮ್ಮ ಇಂದಿನ ದಿನ ಹೇಗಿದೆ, ಭವಿಷ್ಯ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (10-07-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ: ಅಷ್ಟಮಿ 18:43 ವಾರ: ಸೋಮವಾರ
ನಕ್ಷತ್ರ: ರೇವತಿ 18:57 ಯೋಗ: ಅತಿಗಂಡ 12:31
ಕರಣ: ಬಾಲವ 07:16 ಇಂದಿನ ವಿಶೇಷ: ಚಾಮುಂಡೇಶ್ವರೀ ವರ್ಧಂತಿ ಉತ್ಸವ.
ಅಮೃತಕಾಲ: ಸಂಜೆ 04 ಗಂಟೆ 38 ನಿಮಿಷದಿಂದ 06 ಗಂಟೆ 12 ನಿಮಿಷದವರೆಗೆ.
ಸೂರ್ಯೋದಯ : 06:00 ಸೂರ್ಯಾಸ್ತ : 06:50
ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00
ಮೇಷ: ಇಂದು ಅನೇಕ ರೀತಿಯ ಒತ್ತಡಗಳು ಆವರಿಸುವ ಸಾಧ್ಯತೆ. ಆರ್ಥಿಕವಾಗಿ ಸಾಧರಣ ಫಲ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಕೊಂಚ ಮಟ್ಟಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವೃಷಭ: ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯಕ. ವಿನಾ ಕಾರಣ ಎಲ್ಲದಕ್ಕೂ ಮೂಗು ತೂರಿಸುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ಇರಲಿ. ಹೂಡಿಕೆಯ ಕುರಿತು ಆಲೋಚನೆ. ಆಪ್ತರ ಆರೋಗ್ಯ ವಿಚಾರಣೆ. ಉದ್ಯೋಗಿಗಳಿಗೆ ಮಿಶ್ರ ಫಲ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಆರ್ಥಿಕ ಲಾಭ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಮಿಥುನ: ಕೆಲಸ ಕಾರ್ಯಗಳಲ್ಲಿ ಮಂದಗತಿ. ಆರೋಗ್ಯ ಮಧ್ಯಮ. ಅನೇಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ. ಆರ್ಥಿಕ ಲಾಭ ಸಾಧಾರಣ. ವ್ಯಾಪಾರ-ವ್ಯವಹಾರದಲ್ಲಿ ಮಿಶ್ರ ಫಲ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3
ಕಟಕ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಆರ್ಥಿಕವಾಗಿ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಹಳೆಯ ಸ್ನೇಹಿತರು, ಕುಟುಂಬದ ಆಪ್ತರೊಂದಿಗೆ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಸಿಂಹ: ಆರೋಗ್ಯ ಕಾಳಜಿ ಇರಲಿ ಅವಶ್ಯಕ. ಒತ್ತಡದಿಂದ ಹೊರಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ಆರ್ಥಿಕವಾಗಿ ಕೊಂಚ ಲಾಭ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ. ಮಾತನಾಡುವಾಗ ಎಚ್ಚರಿಕೆ ವಹಿಸಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಕನ್ಯಾ: ಶುಭ ಕಾರ್ಯಗಳಿಗಾಗಿ ಖರ್ಚು. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ. ಜವಾಬ್ದಾರಿಗಳು ಹೆಚ್ಚಾಗಲಿವೆ, ಕೋಪದಿಂದ ವರ್ತಿಸುವ ಸಾಧ್ಯತೆ. ಹಿಂದೆ-ಮುಂದೆ ಯೋಚಿಸದೇ ಮಾತುಗಳನ್ನಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆರೋಗ್ಯ ಪರಿಪೂರ್ಣ. ಕುಟುಂಬದ ಹಿರಿಯರಿಂದ ಒತ್ತಡ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಆರ್ಥಿಕ ಲಾಭ. ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆ. ಆಪ್ತರಿಂದ ಸಲಹೆ ಸಹಕಾರ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವೃಶ್ಚಿಕ: ಸಂಗಾತಿಯ ಆರೋಗ್ಯದ ಸಲವಾಗಿ ಖರ್ಚು. ವೃತಾ ಕಾಲಹರಣ ಮಾಡುವ ಆಲೋಚನೆಗಳಿಂದ ದೂರವಿರಿ. ಸಹೋದ್ಯೋಗಿಗಳಿಂದ ಕಿರಿಕಿರಿ. ವ್ಯಾಪಾರ ವ್ಯವಹಾರ ಸಾಧಾರಣ. ಹೂಡಿಕೆಯ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
ಧನಸ್ಸು: ಆಪ್ತರಿಂದ ಬೆಂಬಲ. ಕೆಲಸಕಾರ್ಯಗಳಲ್ಲಿ ಪ್ರಗತಿ. ಆಪ್ತರಿಂದ ಹಣದ ಸಹಾಯದ ಕೋರಿಕೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ಮಕರ: ಇಂದು ಉತ್ಸಾಹದ ದಿನ. ಆರ್ಥಿಕವಾಗಿ ಲಾಭ. ಹೂಡಿಕೆ ವ್ಯವಹಾರಗಳಲ್ಲಿ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ. ಯಾವುದಾದರೂ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ನಿರೀಕ್ಷೆಯ ಹೊಸ ಭರವಸೆಗಳು ಮೂಡಲಿವೆ. ಆಪ್ತರೊಂದಿಗೆ ಮಾತುಕತೆ. ಕುಟುಂಬದ ಸದಸ್ಯರಿಗೆ ಸಲಹೆ ಸಹಕಾರ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಕುಂಭ: ಇತರರನ್ನು ಟೀಕಿಸುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ಭೂಮಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರದಲ್ಲಿ ಲಾಭ. ಪ್ರಯಾಣ ಸಾಧ್ಯತೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಇದನ್ನೂ ಓದಿ : Navavidha Bhakti : ಭಗವಂತನಲ್ಲಿ ಸೇರಿಕೊಳ್ಳುವ ಸ್ಥಿತಿಯೇ ಭಕ್ತಿ!
ಮೀನ: ಆರೋಗ್ಯ ಪರಿಪೂರ್ಣ. ಉದ್ಯೋಗಕ್ಕೆ ಸಂಬಂಧಿಸಿದಂತೆ ಖರ್ಚು. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ನಿರೀಕ್ಷೆಗೆ ತಕ್ಕ ಪ್ರತಿಫಲವಿಲ್ಲ. ಕುಟುಂಬದ ಸದಸ್ಯರಿಂದ ಒತ್ತಡ. ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ದಿಡೀರ್ ಧನ ಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಕ್ರಿಕೆಟ್
Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ
Asian Games 2023: ಏಷ್ಯನ್ ಗೇಮ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಫೈನಲ್ ತಲುಪಿದೆ. ಸೋಮವಾರ ಫೈನಲ್ ಕಾದಾಟ ನಡೆಯಲಿದೆ.
ಹ್ಯಾಂಗ್ಝೌ: ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಾಬಲ್ಯ ಮುಂದುವರಿದಿದೆ. ಬಾಂಗ್ಲಾದೇಶ ಮಹಿಳಾ ತಂಡವನ್ನು ಎಂಟು ವಿಕೆಟ್‌ಗಳಿಂದ ಸುಲಭವಾಗಿ ಮಣಿಸುವ ಮೂಲಕ ಸ್ಮೃತಿ ಮಂಧಾನಾ (Smriti Mandhana) ಬಳಗವು ಫೈನಲ್‌ಗೆ ಲಗ್ಗೆ ಇಟ್ಟಿದೆ.
ಚೀನಾದ ಹ್ಯಾಂಗ್ಝೌನಲ್ಲಿರುವ ಝಡ್‌ಜೆಯುಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡವು 17.5 ಓವರ್‌ಗಳಲ್ಲಿ ಕೇವಲ 51 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭದ ಗುರಿ ಬೆನ್ನತ್ತಿದ ಸ್ಮೃತಿ ಮಂಧಾನಾ ಬಳಗವು ಕೇವಲ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.
Asian Games 2022. India Women Won by 8 Wicket(s) https://t.co/G942Qn13JI #INDvBAN #IndiaAtAG22
— BCCI Women (@BCCIWomen) September 24, 2023
ಪೂಜಾ ವಸ್ತ್ರಾಕರ್ ಮಾರಕ ಬೌಲಿಂಗ್
ಬಾಂಗ್ಲಾದೇಶ ತಂಡವು ಪೂಜಾ ವಸ್ತ್ರಾಕರ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 51 ರನ್ ಗಳಿಸಿತು. ಕೇವಲ 18 ರನ್ ಆಗುವಷ್ಟರಲ್ಲಿಯೇ ಪೂಜಾ ವಸ್ತ್ರಾಕರ್ ಪ್ರಮುಖ ಮೂರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದು ಬಾಂಗ್ಲಾ ತಂಡಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಬಾಂಗ್ಲಾ 51 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 17 ರನ್ ನೀಡಿದ ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: Asian Games 2023: 19ನೇ ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ; ನನಸಾಗಲಿ ಭಾರತದ ‘ಪದಕ ಶತಕ’ದ ಕನಸು…
51 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು. ಸ್ಮೃತಿ ಮಂಧಾನಾ 7 ರನ್ ಗಳಿಸಿದರೆ, ಶಫಾಲಿ ವರ್ಮಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಜೆಮಿಮಾ ರೊಡ್ರಿಗಸ್ ಅವರು 20 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸುಲಭದ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಫೈನಲ್ ತಲುಪಿದ ಮೊದಲ ತಂಡ ಎನಿಸಿತು. ಭಾನುವಾರ (ಸೆಪ್ಟೆಂಬರ್ 24) ಶ್ರೀಲಂಕಾ ಹಾಗೂ ಪಾಕಿಸ್ತಾನದ ಮಧ್ಯೆ ಸೆಮಿಫೈನಲ್ ಕಾಳಗ ನಡೆಯಲಿದ್ದು, ಗೆದ್ದ ತಂಡ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಸೋಮವಾರ (ಸೆಪ್ಟೆಂಬರ್ 25) ಫೈನಲ್ ಸೆಣಸಾಟ ನಡೆಯಲಿದೆ.
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
ಕರ್ನಾಟಕ
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು ವಂಚಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬೆಂಗಳೂರು: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು, ಸುಧಾ ಮೂರ್ತಿ (Sudha Murty) ಅವರ ಫೋಟೊ ಬಳಸಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ (Personal Assistant) ಮಮತಾ ಸಂಜಯ್ ದೂರು ದಾಖಲಿಸಿದ್ದಾರೆ.
ಸುಧಾ ಮೂರ್ತಿ ಅವರ ಹೆಸರು, ಫೋಟೊ ಬಳಸಿಕೊಂಡು ವಂಚನೆ ಮಾಡಿದ ಹಿನ್ನೆಲೆಯಲ್ಲಿ ಶ್ರುತಿ ಹಾಗೂ ಲಾವಣ್ಯ ಎಂಬುವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಮಮತಾ ಸಂಜಯ್ ಅವರು ದೂರು ನೀಡಿದ್ದಾರೆ. ಕಂಪನಿಯಲ್ಲಿ ಪರಿಶೀಲನೆ ನಡೆಸಿದಾಗ ಸುಧಾ ಮೂರ್ತಿ ಅವರ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದಾಖಲಾದ ಎಫ್‌ಐಆರ್ ಪ್ರತಿ
ಏನಿದು ಪ್ರಕರಣ?
ಅಮೆರಿಕದಲ್ಲಿ ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ (KKNC) ವತಿಯಿಂದ ಕಳೆದ ಏಪ್ರಿಲ್‌ನಲ್ಲಿ 50ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುಧಾ ಮೂರ್ತಿ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬುದಾಗಿ ಇ-ಮೇಲ್ ಮೂಲಕ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಸುಧಾ ಮೂರ್ತಿ ಅವರು ಇ-ಮೇಲ್ ಮೂಲಕ ತಿಳಿಸಿದ್ದರು. ಆದರೆ, ಕೆಕೆಎನ್‌ಸಿ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರುತಿ ಹಾಗೂ ಲಾವಣ್ಯ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ
ಸುಧಾ ಮೂರ್ತಿ ಅವರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾ ಮೂರ್ತಿ (Meet And Greet With Dr. Sudha Murty) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಬ್ಬರು ಆರೋಪಿಗಳು ಜನರನ್ನು ವಂಚಿಸಿದ್ದಾರೆ. ಒಂದು ಟಿಕೆಟ್‌ಗೆ 40 ಡಾಲರ್ (ಸುಮಾರು 3,300 ರೂ.) ಪಡೆದು ವಂಚಿಸಲಾಗಿದೆ. ಸುಧಾ ಮೂರ್ತಿ ಕಚೇರಿ ಹೆಸರಿನಲ್ಲಿ, ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆಯ 66 C, 66 D ಸೆಕ್ಷನ್ ಹಾಗೂ ಐಪಿಸಿ 419, 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ
Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?
Cauvery Dispute: ಕಾವೇರಿ ವಿಚಾರದಲ್ಲಿ ಎಲ್ಲ ಹಂತಗಳಲ್ಲಿ ನಮಗೆ ಸೋಲಾಗಲು ಪ್ರಮುಖ ಕಾರಣ, ನಾವು ಸರಿಯಾಗಿ ವಾದ ಮಾಡದೆ ಇರುವುದು, ವಾಸ್ತವಾಂಶ ತಿಳಿಸದೆ ಇರುವುದು. ಈ ಆರೋಪ ನಿಜವೇ? ಹಾಗಿದ್ದರೆ ಕರ್ನಾಟಕದ ವಾದ ಏನಿತ್ತು? ಬಾರ್ ಎಂಡ್ ಬೆಂಚ್ ವೆಬ್‌ಸೈಟ್ ಪ್ರಸ್ತುತಪಡಿಸಿದ ಅಧ್ಯಯನಾತ್ಮಕ ಅಂಶಗಳನ್ನು ನಿಮ್ಮ ಮುಂದಿಡಲಾಗಿದೆ.
ಬೆಂಗಳೂರು: ಕಾವೇರಿ ನೀರು ವಿಚಾರದಲ್ಲಿ (Cauvery Dispute) ಕರ್ನಾಟಕ ಎಲ್ಲ ಹಂತಗಳಲ್ಲೂ ಹಿನ್ನಡೆ ಅನುಭವಿಸಲು ಕಾರಣ ರಾಜ್ಯದ ಅಧಿಕಾರಿಗಳು (Officials of Karnataka) ಸರಿಯಾದ ವಾದ ಮಂಡಿಸದೇ ಇರುವುದು ಎನ್ನುವುದು ಹೆಚ್ಚಿನವರ ಆಪಾದನೆ. ಅದರಲ್ಲೂ ಕರ್ನಾಟಕದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಾಡಿದ್ದರಿಂದ ಸೋಲಾಯಿತು ಎನ್ನುವುದು ಇನ್ನೊಂದು ವಾದ. ಹಾಗಿದ್ದರೆ ಈ ಆರೋಪ ಸತ್ಯವೇ? ಅಥವಾ ರಾಜಕೀಯಪ್ರೇರಿತವೇ? ಹಾಗಿದ್ದರೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಮುಂದೆ ಏನೇನು ವಾದ ಮಾಡಿತ್ತು?
ಎಲ್ಲರಿಗೂ ತಿಳಿದಿರುವಂತೆ ಸೆ. 21ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ (Supreme Court) ಎತ್ತಿ ಹಿಡಿದದ್ದು ಸೆ. 19ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು. ಅದರಾಚೆಗೆ ಅದು ಯಾವ ಅಂಶವನ್ನೂ ಕೇಳಿಸಿಕೊಳ್ಳಲಿಲ್ಲ. ಹಾಗಿದ್ದರೆ ಸೆ. 19ರ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ತನ್ನ ವಾದದಲ್ಲಿ ಸೋಲು ಕಂಡಿತೇ? ಹಾಗಾಗಿ ಪ್ರಾಧಿಕಾರ ಕರ್ನಾಟಕದ ವಿರುದ್ಧವಾಗಿ ತೀರ್ಪು ನೀಡಲು, ನೀರು ಬಿಡುಗಡೆಗೆ ಆದೇಶ ನೀಡಲು ಕಾರಣವಾಯಿತೇ ಎನ್ನುವುದು ಮುಖ್ಯ ಪ್ರಶ್ನೆ.
ಇದನ್ನು ತಿಳಿಯಬೇಕು ಎಂದಾದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.19ರಂದು ನಡೆಸಿರುವ 24ನೇ ಸಭೆಯ (ತುರ್ತು ಸಭೆ) ನಡಾವಳಿಗಳನ್ನು ಗಮನಿಸಬೇಕು.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೆ. 12ರಂದು ನೀಡಿದ ಆದೇಶದಲ್ಲಿ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ವಾಸ್ತವವಾಗಿ ತಮಿಳುನಾಡಿನ ಅಧಿಕಾರಿಗಳು ಪ್ರತಿದಿನ 12,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್‌ಎಸ್ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್ ನೀರು ಮಾತ್ರ ಹರಿಸಬಹುದು ಎಂದು ವಾದ ಮಾಡಿದ್ದರು. ಅಂತಿಮವಾಗಿ ಪ್ರಾಧಿಕಾರವು ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲುಆರ್‌ಸಿ) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು. ಹಾಗಿದ್ದರೆ 2500 ಕ್ಯೂಸೆಕ್ ನೀರು ಬಿಡಬಹುದು ಎಂದು ಒಪ್ಪಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೂ ಎದ್ದು ಬರುತ್ತದೆ. ಹೀಗೆ ಮಾಡಿದ್ದರಿಂದ ಸಮನ್ವಯ ಸೂತ್ರವಾಗಿ ಪ್ರಾಧಿಕಾರ 5000 ಕ್ಯೂಸೆಕ್ ನೀರು ಬಿಡಿ ಎಂದು ಹೇಳಿದೆ. ಕೊಡುವುದೇ ಇಲ್ಲ ಎಂದು ವಾದಿಸಬೇಕಿತ್ತು ಎನ್ನುವುದು ಕೆಲವರ ವಾದ.
ಹಾಗಿದ್ದರೆ ಒಟ್ಟಾರೆಯಾಗಿ ಪ್ರಾಧಿಕಾರದ ಅಂದಿನ ಸಭೆಯಲ್ಲಿ ಕರ್ನಾಟಕ ಮಾಡಿದ ವಾದ ಏನಾಗಿತ್ತು? ತಮಿಳುನಾಡು ಏನು ಹೇಳಿತ್ತು. ಬಾರ್ ಎಂಡ್ ಬೆಂಚ್ ವೆಬ್ ಸೈಟ್ ಸಂಗ್ರಹಿಸಿದ ಸಮಗ್ರ ಮಾಹಿತಿಯ ಸಾರವನ್ನು ಇಲ್ಲಿ ನೀಡಲಾಗಿದೆ.
ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ ಏನಿತ್ತು?
- ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಇದಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.
- 2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಸಿಡಬ್ಲ್ಯುಆರ್‌ಸಿಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ 46.271 ಟಿಎಂಸಿ ನೀರನ್ನು ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದಿಂದ ಹರಿಸಲಾಗಿದೆ. ಕರ್ನಾಟಕವು ನೈರುತ್ಯ ಮುಂಗಾರಿನಿಂದ ಕೇವಲ 25.689 ಟಿಎಂಸಿ ನೀರು ಸಂಗ್ರಹಿಸಿದೆ. ತಮಿಳುನಾಡು ರಾಜ್ಯವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಳೆಗಳಿಗೆ ಈಶಾನ್ಯ ಮಾರುತ ಆಧರಿಸಿದ್ದು, ಕ್ಯಾರಿಓವರ್ ಸ್ಟೋರೇಜ್ (ಮುಂಬಳಕೆ ಸಂಗ್ರಹ) ಅನ್ನು ದುರ್ಬಳಕೆ ಮಾಡಿ ಈಗಾಗಲೇ 100 ಟಿಎಂಸಿ ನೀರನ್ನು ಕರ್ನಾಟಕದಿಂದ ಪಡೆದಿದೆ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ನೀರು ದುರ್ಬಳಕೆ ಮಾಡಿಕೊಂಡಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
- ಮಳೆ ಕೊರತೆಯನ್ನು ನಿರ್ಧರಿಸುವಾಗ ನಿಯಂತ್ರಣ ಸಮಿತಿಯು ಕಾವೇರಿ ಪಾತ್ರದ ಒಟ್ಟು 81,155 ಚದರ ಕಿ ಮೀ ಜಲಾನಯನ ಪ್ರದೇಶವನ್ನು ಪರಿಗಣಿಸುವ ಬದಲಾಗಿ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶ 12,812 ಚದರ ಕಿ ಮೀ ಅನ್ನು ಮಾತ್ರವೇ ಪರಿಗಣಿಸುವ ಮೂಲಕ ಸ್ವೇಚ್ಛೆಯಿಂದ ನಿರ್ಧಾರ ತಳೆದಿದೆ. ಮಳೆಯ ಕೊರತೆಯನ್ನು ಆಧರಿಸಿ ಮಾತ್ರವೇ ಸಂಕಷ್ಟ ನಿರ್ಧರಿಸುವಂತಿಲ್ಲ. ಬದಲಿಗೆ ನದೀ ಮುಖಜ ಭೂಮಿಯಲ್ಲಿರುವ ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಬೇಕು. ಅಲ್ಲದೇ, ನದೀ ಮುಖಜ ಭಾಗದಲ್ಲಿನ ಈಶಾನ್ಯ ಮಳೆಮಾರುತವನ್ನೂ ಸಹ ಪರಿಗಣಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಗಳ ಕನಿಷ್ಠ ಅವಶ್ಯಕತೆ ಹಾಗೂ ವಾಸ್ತವಿಕ ಅಂಶಗಳನ್ನು ಆಧರಿಸಿ ನೀರು ಹಂಚಿಕೆ ಮಾಡುವುದು ಸೂಕ್ತವಾದ ಮಾನದಂಡವಾಗಿದೆ.
- ಸಿಡಬ್ಲ್ಯುಆರ್‌ಸಿಯು ಕಳೆದ 30 ವರ್ಷಗಳ ಸರಾಸರಿ ಮಳೆ ಹಾಗೂ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗಿನ ಬೆಳೆ ಆಧರಿಸಿ ಕೊರತೆ ಅಂದಾಜಿಸಿದೆ. ಆದರೆ, ಕಾವೇರಿ ನ್ಯಾಯ ಮಂಡಳಿಯು 1938-35ರಿಂದ 1971-27ರವರೆಗಿನ ಅಂಕಿ ಅಂಶ ಆಧರಿಸಿ ಸಾಮಾನ್ಯ ಮಳೆ ವರ್ಷದಲ್ಲಿ ಕಾವೇರಿ ಕೊಳ್ಳದ ನೀರು ಲಭ್ಯತೆಯನ್ನು 740 ಟಿಎಂಸಿ ಎಂದು ನಿರ್ಧರಿಸಿತ್ತು.
- ಕರ್ನಾಟಕ ಜಲಾಶಯಗಳ ಜಲಾನಯನ ಪ್ರದೇಶಗಳ ವಿಚಾರದಲ್ಲಿ, ಕರ್ನಾಟಕದ ಅಣೆಕಟ್ಟುಗಳ ಕೆಳಗಿರುವ ಹಾಗೂ ಬಿಳಿಗುಂಡ್ಲು ಅಂತರ ರಾಜ್ಯ ಗಡಿಗಿಂತ ಮೇಲಿರುವ ಸುಮಾರು 23,921 ಚ.ಕಿಮೀ ವ್ಯಾಪ್ತಿಯ ಮಧ್ಯಂತರ ಜಲಾನಯನ ಪ್ರದೇಶದಲ್ಲಿನ ಮಳೆ ಕೊರತೆಯನ್ನು ಸಿಡಬ್ಲ್ಯುಆರ್‌ಸಿಯು ಪ್ರಜ್ಞಾಪೂರ್ವಕವಾಗಿ ಮರೆಮಾಚಿದೆ. ಇದರ ವ್ಯಾಪ್ತಿಯು 23,921 ಚದರ ಕಿ ಮೀ ಆಗಿದೆ. ಈ ಪ್ರದೇಶದಲ್ಲಿನ ಮಳೆ ಕೊರತೆಯು ಕರ್ನಾಟಕದ ಅಣೆಕಟ್ಟುಗಳ ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಮಳೆಕೊರತೆ ಪ್ರಮಾಣವಾದ ಶೇ.54.42 ಕ್ಕಿಂತ ಹೆಚ್ಚಿದೆ.
- ಈ ಮಧ್ಯಂತರ ಜಲಾನಯನ ಪ್ರದೇಶದ 23,921 ಚದರ ಕಿಮೀ ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರ ಅವಧಿಯಲ್ಲಿ ಅಂದಾಜು 14.286 ಟಿಎಂಸಿ ಹರಿಯುವ ನಿರೀಕ್ಷೆ ಇತ್ತು. ಆದರೆ, ಇದರಿಂದ 2 ಟಿಎಂಸಿಗೂ ಕಡಿಮೆ ಪ್ರಮಾಣದ ಕನಿಷ್ಠ ಹರಿವಾಗಿದೆ.
- ಸಾಮಾನ್ಯ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಕೋಟಾ ಪ್ರಕಾರ 36.76 ಟಿಎಂಸಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸಬೇಕು. 2023ರ ಸೆಪ್ಟೆಂಬರ್ 13ರಿಂದ 27ರ ಅವಧಿಯಲ್ಲಿ 18.38 ಟಿಎಂಸಿ ಬಿಡಬೇಕಿದೆ. ಆದರೆ, ಮಳೆ ಕೊರತೆಯ ಕಾರಣಕ್ಕೆ 10.002 ಟಿಎಂಸಿ ಕಳೆದು 8.378 ಟಿಎಂಸಿ ಅಥವಾ ಪ್ರತಿ ದಿನ 6400 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ನಿರ್ಧರಿಸುವ ಮೂಲಕ ಸಿಡಬ್ಲ್ಯುಆರ್‌ಸಿ ಪ್ರಮಾದ ಎಸಗಿದೆ. ಈ ಅಂದಾಜು ಸ್ವೇಚ್ಛೆಯಿಂದ ಕೂಡಿದೆ. ಏಕೆಂದರೆ ಸೆಪ್ಟೆಂಬರ್‌ನಲ್ಲಿ ನೈರುತ್ಯ ಮುಂಗಾರು ವಿಫಲವಾಗಿದೆ. ಅಲ್ಲದೆ, ಹವಾಮಾನ ಇಲಾಖೆಯ ಅಂದಾಜನ್ನು ಗಣನೆಗೆ ತೆಗೆದುಕೊಂಡರೆ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಇನ್ನೂ ಹೆಚ್ಚಿರಲಿದೆ. ಈ ನೆಲೆಯಲ್ಲಿ 2023ರ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸುವ ಮೂಲಕ ಸಿಡಬ್ಲ್ಯುಆರ್‌ಸಿ ತರ್ಕದಲ್ಲಿ ವಿಫಲವಾಗಿದೆ.
- ನದಿ ಮುಖಜ ಭಾಗದಲ್ಲಿನ ಅಂತರ್ಜಲ ಲಭ್ಯತೆಯನ್ನು ಸಿಡಬ್ಲ್ಯುಆರ್‌ಸಿ ಅನುಕೂಲಕ್ಕೆ ತಕ್ಕಂತೆ ಅವಗಣನೆ ಮಾಡಿದೆ. ಈಶಾನ್ಯ ಮಾರುತವು ತಮಿಳುನಾಡಿನ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಇದನ್ನು ಸಿಡಬ್ಲ್ಯುಆರ್‌ಸಿ ಪರಿಗಣಿಸಿಲ್ಲ. ಬಾಕಿ ಇರುವ ತಿಂಗಳ ಅವಧಿಗೆ (ಮುಂದಿನ ಜೂನ್‌ವರೆಗೆ) ಕರ್ನಾಟಕಕ್ಕೆ ಕನಿಷ್ಠ ಅಗತ್ಯವಾಗಿ 106 ಟಿಎಂಸಿ ನೀರು ಬೇಕಿದೆ ಎಂಬುದನ್ನು ಸಿಡಬ್ಲ್ಯುಆರ್‌ಸಿ ಗಣನೆಗೆ ತೆಗೆದುಕೊಳ್ಳುವಲ್ಲಿ ಎಡವಿದೆ. ಕರ್ನಾಟಕದ ಜಲಾಶಯಗಳಲ್ಲಿ ಸದ್ಯ 54.114 ಟಿಎಂಸಿ ನೀರು ಇದ್ದು, ಸರಾಸರಿ ಮಳೆಯ ಪ್ರಮಾಣಕ್ಕೆ ಶೇ.54 ಮಳೆ ಕೊರತೆಯನ್ನು ಸೇರಿಸಿದರೆ ಒಳಹರಿವು 44.78 ಟಿಎಂಸಿ ಮಾತ್ರ ಇರುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಒಟ್ಟ ನೀರು ಲಭ್ಯತೆಯ ಪ್ರಮಾಣ 98.854 ಟಿಎಂಸಿ ಮಾತ್ರ ಆಗಲಿದೆ. ಆದರೆ, ನಾವು ಕಳೆದ ಮೂವತ್ತು ವರ್ಷಗಳ ಅತಿ ಹೆಚ್ಚು ಮಳೆ ಕೊರತೆಯ ವರ್ಷಗಳಲ್ಲಿನ ಪ್ರತಿ ತಿಂಗಳ ಕನಿಷ್ಠ ಒಳಹರಿವನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸೆಪ್ಟೆಂಬರ್ ತಿಂಗಳ ಉಳಿಕೆ ಅವಧಿಯ 10 ಟಿಎಂಸಿಯೂ ಸೇರಿದಂತೆ ಡಿಸೆಂಬರ್ ವರೆಗಿನ ನೀರು ಲಭ್ಯತೆಯ ಪ್ರಮಾಣ ಒಟ್ಟು 20 ಟಿಎಂಸಿ ದಾಟುವುದಿಲ್ಲ. ಈ ನೆಲೆಯಲ್ಲಿ ಗಮನಿಸಿದರೆ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 74.114 ಟಿಎಂಸಿ ಮೀರುವ ಸಾಧ್ಯತೆ ಇಲ್ಲ. ಹಾಗಾಗಿ, ಕರ್ನಾಟಕದ ಅಗತ್ಯ ಬಳಕೆಗೆ ಮಿತಿಗೊಳಿಸಲಾದ 106 ಟಿಎಂಸಿ ನೀರಿನ ಪ್ರಮಾಣವು ಸಹ ಲಭ್ಯವಾಗದೆ ಹೋಗಬಹುದು.
- ಸಿಡಬ್ಲ್ಯುಆರ್‌ಸಿಯು ಬಿಳಿಗುಂಡ್ಲುವಿನಲ್ಲಿ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 7.799 ಟಿಎಂಸಿ ಕೊರತೆಯಾಗಿದೆ ಎಂದು ಅಂದಾಜಿಸಿರುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬರುವ ತಿಂಗಳುಗಳಲ್ಲಿ ಸಿಡಬ್ಲ್ಯುಆರ್‌ಸಿ ಅಂದಾಜಿಸಿರುವ ಕೊರತೆಯು ಶೇ. 45.58 ಮಾತ್ರವಲ್ಲ. ಇದು ಇನ್ನೂ ಹೆಚ್ಚಾಗಲಿದೆ.
- ಈಶಾನ್ಯ ಮಳೆಮಾರುತವು ತಮಿಳುನಾಡಿನಲ್ಲಿ ಸಾಧಾರಣವಾಗಿ 45 ದಿನ ಇರಲಿದೆ. ತಮಿಳುನಾಡಿನಲ್ಲಿ ಅಂತರ್ಜಲವು 20ರಿಂದ 30 ಟಿಎಂಸಿ ಇದ್ದು, ಹಾಲಿ ನೀರು ಸಂಗ್ರಹ ಮತ್ತು ಅಂದಾಜು 60 ಟಿಎಂಸಿ ನೀರು ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದು ಬರುವುದರಿಂದ ತಮಿಳುನಾಡು ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕದ ರೈತರಿಗೆ ಅಗತ್ಯವಾಗಿರುವ ಕನಿಷ್ಠ ನೀರಾವರಿ ಅಗತ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯತೆಯ ದೃಷ್ಟಿಯಿಂದ ನೀರು ಬಿಡುಗಡೆ ಮಾಡಲಾಗದು. ವಿಶೇಷವಾಗಿ ಜಗತ್ತಿನ ತಂತ್ರಜಾನ ಹಬ್ ಆಗಿರುವ ಬೆಂಗಳೂರು ವಾರ್ಷಿಕ 100 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಕೆ ಮಾಡುತ್ತಿದ್ದು, ಇದರ ಕುಡಿಯುವ ನೀರಿನ ಅವಶ್ಯಕತೆಯ ದೃಷ್ಟಿಯಿಂದ ನೀರು ಹರಿಸಲಾಗದು.
- ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.
ಇದನ್ನೂ ಓದಿ: Cauvery Dispute : ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶ ಕೋರುವುದು ತಪ್ಪಲ್ಲ; ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ ಆಚಾರ್ಯ
ಹಾಗಿದ್ದರೆ ತಮಿಳುನಾಡು ವಾದ ಏನಾಗಿತ್ತು?
- ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಫಸಲು ಬೆಳೆಯಲಾಗುತ್ತಿದೆ ಎಂಬ ಕರ್ನಾಟಕದ ವಾದದಲ್ಲಿ ಸತ್ಯವಿಲ್ಲ.
- ನೀರು ಸಂಗ್ರಹಕ್ಕೆ ಸೌಲಭ್ಯ ಇದ್ದರೂ ತಮಿಳುನಾಡು ಸಮರ್ಥವಾಗಿ ನೀರು ಬಳಕೆ ಮಾಡುತ್ತಿಲ್ಲ ಎಂಬ ವಾದ ಸರ್ವಥಾ ಸರಿಯಲ್ಲ. ಕುರುವೈಗೆ ನ್ಯಾಯಮಂಡಳಿಯ ಬೆಳೆ ನೀರು ಅಗತ್ಯದ (ಸಿಡಬ್ಲುಆರ್) ಪ್ರಕಾರ ಜೂನ್-ಆಗಸ್ಟ್‌ನಲ್ಲಿ 30 ಟಿಎಂಸಿ ಬೇಕಿದೆ. ಜುಲೈ-ಆಗಸ್ಟ್‌ನಲ್ಲಿ ಸಾಂಬಾ ಬೆಳೆಗೆ 32 ಟಿಎಂಸಿ ನೀರು ಬೇಕಿದೆ. ಭೂಮಿ ಹದಗಳಿಸಲು ಮತ್ತು ಬಿತ್ತನೆಗೆ ಹೆಚ್ಚಿನ ನೀರು ಬೇಕಿದೆ. ಒಟ್ಟಾರೆ 95 ಟಿಎಂಸಿ ನೀರು ಬೇಕಿದ್ದು, ಜೂನ್ 12ರಿಂದ 31ರವರೆಗೆ ಮೆಟ್ಟೂರಿನಲ್ಲಿ 68.357 ಟಿಎಂಸಿ ಮಾತ್ರ ನೀರಿದೆ.
- ಈಶಾನ್ಯ ಮಳೆಮಾರುತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಈ ವೇಳೆ ಚಂಡಮಾರುತದಿಂದಾಗಿ ಬೆಳೆಗೆ ಹಾನಿ ಉಂಟಾಗಿದ್ದೂ ಇದೆ. ನೈರುತ್ಯ ಮಾನ್ಸೂನ್ ವಿಫಲವಾಗಿರುವುದರಿಂದ ಈಶಾನ್ಯ ಮಾನ್ಸೂನ್ ಸಹ ವಿಫಲವಾಗುವ ಸಾಧ್ಯತೆ ಇದೆ.
- ಪ್ರಸಕ್ತ ವರ್ಷದಲ್ಲಿ ಕರ್ನಾಟಕ 1.701 ಲಕ್ಷ ಎಕರೆ ಪ್ರದೇಶದಲ್ಲಿ ಫಸಲು ಮಾಡಿದೆ ಎಂದು ಹೇಳಿದೆ. 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕವು 25.662 ಟಿಎಂಸಿ ನೀರನ್ನು ನಾಲ್ಕು ಪ್ರಮುಖ ಜಲಾಶಯಗಳಿಂದ ಕಾಲುವೆಗಳ ಮೂಲಕ ಹರಿಸಿಕೊಂಡಿದೆ. ಇದರ ಜೊತೆಗೆ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಕಾಲುವೆಗಳ ಮೂಲಕ ಹರಿಸಿರುವ ನೀರಿನ ಮಾಹಿತಿಯನ್ನು ಕರ್ನಾಟಕ ನೀಡಿಲ್ಲ.
- 2023ರ ಜೂನ್‌ನಿಂದ 2024ರ ಜನವರಿಯವರೆಗೆ ನಾಲ್ಕು ಜಲಾಶಯಗಳಿಂದ 72 ಟಿಎಂಸಿ ಕರ್ನಾಟಕಕ್ಕೆ ಬೇಕಿದೆ. ಆದರೆ, ಕರ್ನಾಟಕವು ಈಗಾಗಲೇ ಶೇ. 50ರಷ್ಟು ನೀರುಬಳಕೆ ಮಾಡಿದೆ.
- ತಮಿಳುನಾಡು ವಾದವನ್ನು ಪರಿಗಣಿಸದೇ ಸೆಪ್ಟೆಂಬರ್ 13ರಿಂದ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಅರ್‌ಸಿ ಆದೇಶಿಸಿದೆ. ಪ್ರೊ-ರಾಟಾ ತತ್ವದ ಅಡಿ ವಿಮುಖವಾಗಿರುವುದು ಮತ್ತು 12,500 ಕ್ಯೂಸೆಕ್ಸ್‌ನಿಂದ 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ತಮಿಳುನಾಡಿನ ಅಧಿಕಾರಿಗಳು ವಾದಿಸಿದ್ದಾರೆ.
-
ವೈರಲ್ ನ್ಯೂಸ್15 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ13 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ಕರ್ನಾಟಕ20 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema17 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಬಾಲಿವುಡ್21 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ತಂತ್ರಜ್ಞಾನ17 hours ago
Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ
-
ದೇಶ12 hours ago
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್