ಪ್ರಮುಖ ಸುದ್ದಿ
Horoscope Today : ಇಂದು ನಾಲ್ಕು ರಾಶಿಯವರಿಗೆ ಶುಭ ದಿನ; ನಿಮ್ಮ ಭವಿಷ್ಯ ಹೇಗಿದೆ?
ಶುಭಕೃತ ನಾಮ ಸಂವತ್ಸರ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷದ ಅಷ್ಟಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದಿನ ಪಂಚಾಂಗ (29-೦೧-202೩)
ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 09:04 ವಾರ: ಭಾನುವಾರ
ನಕ್ಷತ್ರ: ಭರಣಿ 20:19 ಯೋಗ: ಶುಭ 11:03
ಕರಣ: ಭವ 09:04 ಇಂದಿನ ವಿಶೇಷ: ಭೀಷ್ಮಾಷ್ಟಮಿ
ಅಮೃತಕಾಲ: ಮಧ್ಯಾಹ್ನ 03 ಗಂಟೆ 18 ನಿಮಿಷದಿಂದ 04 ಗಂಟೆ 59 ನಿಮಿಷದವರೆಗೆ.
ಸೂರ್ಯೋದಯ: 06 : 46 ಸೂರ್ಯಾಸ್ತ: 0೬ :19
ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30
ದ್ವಾದಶ ರಾಶಿ ಭವಿಷ್ಯ (Horoscope Today)
ಮೇಷ: ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲದಿಂದ ನೀವಂದುಕೊಂಡ ಫಲಿತಾಂಶವನ್ನು ಪಡೆಯುತ್ತೀರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚು. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ವೃಷಭ: ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಆರ್ಥಿಕವಾಗಿ ಸುಧಾರಣೆ ಆಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಮಿಥುನ: ಹೂಡಿಕೆ ವ್ಯವಹಾರಗಳ ಕುರಿತು ಆಲೋಚನೆ. ಆರ್ಥಿಕವಾಗಿ ಪ್ರಗತಿ. ಅತಿಥಿಗಳ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವ ಸಾಧ್ಯತೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಕಟಕ: ಅತಿಯಾದ ಕೆಲಸದ ಒತ್ತಡದಿಂದ ದೈಹಿಕವಾಗಿ ಬಳಲುವ ಸಾಧ್ಯತೆ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಸಿಂಹ: ಕಷ್ಟಪಟ್ಟು ಮಾಡುವ ಕೆಲಸಗಳು ಇಂದು ನಿಮಗೆ ಫಲ ನೀಡಲಿವೆ. ನಿಮ್ಮ ಮಕ್ಕಳು ನಿಮಗೆ ಶುಭ ಸುದ್ದಿಯನ್ನು ನೀಡುವ ಸಾಧ್ಯತೆ. ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಕನ್ಯಾ: ನಿಮ್ಮ ಕ್ರಿಯಾಶೀಲ ಕಾರ್ಯ ಯೋಜನೆ ಸಫಲತೆಯನ್ನು ತಂದು ಕೊಡಲಿದೆ. ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ತುಲಾ: ಆರೋಗ್ಯ ಪರಿಪೂರ್ಣ ಅದರ ಹೊರತಾಗಿಯೂ ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚು. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಉದ್ಯೋಗದ ಸ್ಥಳದಲ್ಲಿಯೂ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ವೃಶ್ಚಿಕ: ಬಿಡುವಿಲ್ಲದ ಕಾರ್ಯದಿಂದ ಆಯಾಸ, ಇದರಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆದಷ್ಟು ವಿಶ್ರಾಂತಿ ಪಡೆಯಿರಿ. ಅನಗತ್ಯ ಖರ್ಚು. ಹಿರಿಯರಿಂದ ಮಾರ್ಗದರ್ಶನ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ಧನಸ್ಸು: ಸಂತೋಷ ತುಂಬಿದ ವಾತಾವರಣ. ಮಕ್ಕಳಿಗಾಗಿ ಖರ್ಚು ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ನೀವು ಇಂದು ಹಿಡಿದ ಕೆಲಸದಲ್ಲಿ ಯಶಸ್ವಿಯಾಗುವಿರಿ. ಮದುವೆಯ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ಮಕರ: ಆತ್ಮ ವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು. ಈ ದಿನ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಗುರುತಿಸುವ ಸಾಧ್ಯತೆ. ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಕುಂಭ: ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಮತ್ತು ಆರಾಮ ತರುತ್ತದೆ. ಹಣಕಾಸು ವ್ಯವಹಾರ ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಬಗೆಗೆ ಕಾಳಜಿ ಮಾಡುವವರ ಬಗ್ಗೆ ಉದಾಸೀನತೆ ಬೇಡ. ದೀರ್ಘಕಾಲದ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಮೀನ: ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ. ಸಂಗಾತಿಯ ಸಲಹೆ ಹಿತಕರವೆನಿಸುವುದು. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ. ದಿನದ ಮಟ್ಟಿಗೆ ಆರೋಗ್ಯ ಹದಗೆಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?
ಕರ್ನಾಟಕ
Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್ ಸಿಗುವುದು ಡೌಟು ಎಂದ ಕಾಂಗ್ರೆಸ್
ನಿರುದ್ಯೋಗಿ ಯುವಕರಿಗೆ ಮಾಸಿಕೆ ಭತ್ಯೆ ನೀಡುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಮೊದಲಿಗೆ ರಾಹುಲ್ ಗಾಂಧಿಯವರಿಂದಲೇ ಆರಂಭಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗೆ ಮಾಸಿಕ ನುರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಚುನಾವಣೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಹೇಳಿದೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಮಾಸಿಕ ಒಂದೂವರೆ ಸಾವಿರ ರೂ. ನೀಡುವುದಾಗಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಈ ಯೋಜನೆಯನ್ನು ಮೊದಲಿಗೆ ರಾಹುಲ್ ಗಾಂಧಿಯವರಿಂದಲೇ ಆರಂಭಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ಥಾನ, ಛತ್ತೀಸ್‌ಗಢದಲ್ಲಿಯೂ ಹೇಳಿದ್ದರು. ಆದರೆ ಅನುಷ್ಠಾನವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ಥಾನ ಅಥವಾ ಛತ್ತೀಸ್‌ಗಢ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಸ್ವತಃ ತಮಗೇ ಬಿಜೆಪಿಯ ಟಿಕೆಟ್ ಸಿಗುವ ಭರವಸೆ ಇಲ್ಲದ, ಟಿಕೆಟ್ ಸಿಕ್ಕರೂ ಗೆಲ್ಲುವ ಭರವಸೆ ಇಲ್ಲದ, ಗೆದ್ದರೂ ತಾವೇ ಸಿಎಂ ಹುರಿಯಾಳು ಎಂಬ ಭರವಸೆ ಇಲ್ಲದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನೀಡಿದ ಯುವನಿಧೀ ಯೋಜನೆಯ ಭರವಸೆಯನ್ನು ಟೀಕಿಸುವುದು ಹಾಸ್ಯಾಸ್ಪದ. ಬೊಮ್ಮಾಯಿಯವರೇ, ನೀವು ಕೈಲಾಗದವರಿರಬಹುದು, ಕಾಂಗ್ರೆಸ್‌ಗೆ ಎಲ್ಲವೂ ಸಾಧ್ಯ” ಎಂದಿದೆ.
ಕರ್ನಾಟಕ
Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!
ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ರೂಪಿಸಿರುವ ಪ್ಲ್ಯಾನ್ ತಿರುಗುಬಾಣವಾಗುವ ಅಪಾಯವಿದೆ. ಅಜ್ಜಂಪೀರ್ ಖಾದ್ರಿ ಅವರೇ ಇಲ್ಲೀಗ ನಿರ್ಣಾಯಕ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್ ನೀಡಲು ಮುಂದಾಗಿರುವ ಪ್ಲ್ಯಾನ್ ಈಗ ಕಾಂಗ್ರೆಸ್‌ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.
ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾದಂತಾಗಿದೆ.
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಈ ಸಲವೂ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.
ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.
ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್ ಅಹ್ಮದ್ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.
ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.
ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.
ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್‌ಗಿದೆ. ಖಾದ್ರಿ ಅವರು ಕಾಂಗ್ರೆಸ್ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.
ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಕ್ರಿಕೆಟ್
WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
ಮುಂಬೈ ಇಂಡಿಯನ್ಸ್ ವಿರುದ್ಧದ ಮಂಗಳವಾರದ ಅಂತಿಮ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ಗಳ ಸೋಲಿಗೆ ತುತ್ತಾಗಿದೆ.
ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಸ್ಮೃತಿ ಮಂಧಾನ ಸಾರಥ್ಯದ ಆರ್ಸಿಬಿ(Royal Challengers Bangalore) ತಂಡ ಇದೀಗ ಸೋಲಿನೊಂದಿಗೆಯೇ ತನ್ನ ಅಭಿಯಾನವನ್ನು ಮುಗಿಸಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮುಂಬಯಿಯ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಜಬಾಬಿತ್ತ ಮುಂಬೈ ಇಂಡಿಯನ್ಸ್ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಬಾರಿಸಿ ಗೆಲುವು ದಾಖಲಿಸಿತು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈಗೆ ಯಾಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 53 ರನ್ಗಳ ಜತೆಯಾಟ ನಡೆಸಿತು. ಯಾಸ್ತಿಕಾ 30 ರನ್ ಗಳಿಸಿದರೆ, ಮ್ಯಾಥ್ಯೂಸ್ 24 ರನ್ ಬಾರಿಸಿದರು. ಉಭಯ ಆಟಗಾರ್ತಿಯ ವಿಕೆಟ್ ಪತನದ ಬೆನ್ನಲ್ಲೇ ತಂಡ ನಾಯಕೀಯ ಕುಸಿತ ಕಂಡಿತು. ನಾಯಕಿ ಹರ್ಮನ್ಪ್ರೀತ್ ಕೌರ್(2), ನ್ಯಾಟ್ ಸ್ಕಿವರ್-ಬ್ರಂಟ್ (13) ಅಲ್ಪ ಮೊತ್ತಕ್ಕೆ ಔಟಾದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಮುಂಬೈ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು.
ನಾಟಕೀಯ ಕುಸಿತ ಕಂಡ ಮುಂಬೈ ತಂಡಕ್ಕೆ ಬೌಲಿಂಗ್ನಲ್ಲಿ ಮೂರು ವಿಕೆಟ್ ಕಿತ್ತು ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮೇಲಿಯಾ ಕೆರ್ ಮತ್ತು ಪೂಜಾ ವಸ್ತ್ರಾಕರ್ ಕೆಳ ಕ್ರಮಾಂಕದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಂಡದ ಗೆಲುವಿಗೆ 6 ರನ್ ಅಗತ್ಯವಿದ್ದಾಗ ಪೂಜಾ ವಿಕೆಟ್ ಕೈಚೆಲ್ಲಿದರು. ಅವರು 19 ರನ್ ಗಳಿಸಿದರು. ಅಮೇಲಿಯಾ ಕೆರ್ ಅಜೇಯ 31 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅಜೇಯ ಇನಿಂಗ್ಸ್ ಆಟದ ವೇಳೆ 4 ಬೌಂಡರಿ ಸಿಡಿಯಿತು.
ಮಂದ ಗತಿಯ ಬ್ಯಾಟಿಂಗ್ ನಡೆಸಿದ ಮಂಧಾನ ಪಡೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರು ಈ ಪಂದ್ಯದಲ್ಲಿ ರನೌಟ್ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.
ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಆರಂಭಿಕ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್ ನೀಡಲಿಲ್ಲ. ಹೀತರ್ ನೈಟ್ ಮತ್ತು ಕನಿಕಾ ಅಹುಜಾ ತಲಾ 12 ರನ್ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್ ಪೆರ್ರಿ ಕೂಡ ನ್ಯಾಟ್ ಸ್ಕಿವರ್ ಬ್ರಂಟ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್ ಬಾರಿಸಿದರು. ಸ್ಕಿವರ್ ಬ್ರಂಟ್ 24 ರನ್ಗೆ 2 ವಿಕೆಟ್ ಉರುಳಿಸಿದರು.
ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್ ಸುಲಭ ಜಯ
ಅಂತಿಮ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಆರ್ಸಿಬಿ 100ರ ಗಡಿ ದಾಟಿತು. ಕ್ರೀಸ್ ಗಿಳಿದ ಆರಂಭದಿಂದಲೇ ಸಿಕ್ಸರ್, ಬೌಂಡರಿಗಳ ಮೂಲಕ ಮುಂಬೈ ಬೌಲರ್ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಅವರ ವಿಕೆಟ್ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್ ಬಾರಿಸಿ 29 ರನ್ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್ 22 ರನ್ ವೆಚ್ಚದಲ್ಲಿ ಮೂರು ವಿಕೆಟ್ ಪಡೆದರು. ಸೈಕಾ ಇಶಾಖ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಆರ್ಸಿಬಿ; 20 ಓವರ್ಗಳಲ್ಲಿ 9 ವಿಕೆಟ್ಗೆ 125( ಎಲ್ಲಿಸ್ ಪೆರ್ರಿ 29, ರಿಚಾ ಘೋಷ್ 29, ಅಮೇಲಿಯಾ ಕೆರ್ 22ಕ್ಕೆ 3). ಮುಂಬೈ ಇಂಡಿಯನ್ಸ್: 16.3 ಓವರ್ಗಳಲ್ಲಿ 6 ವಿಕೆಟ್ಗೆ 129( ಅಕೇಲಿಯಾ ಕೆರ್ ಅಜೇಯ 31, ಮ್ಯಾಥ್ಯೂಸ್ 24, ಯಾಸ್ತಿಕಾ ಭಾಟಿಯಾ 30)
ಕರ್ನಾಟಕ
Congress Guarantee: ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಜಾರ್ಜ್ ಸೊರೊಸ್ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ
ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು (Congress Guarantee) ಕರ್ನಾಟಕದ ಬಜೆಟ್‌ನಲ್ಲಿ ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರು: ಕಾಂಗ್ರೆಸ್‍ನವರು ಜನರನ್ನು ಮರುಳು ಮಾಡಲು, ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ (Congress Guarantee) ಹಂಚುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಆರೋಪಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ನೀವು 2013ರಿಂದ 2018ರವರೆಗೆ ಅಧಿಕಾರ ನಡೆಸಿದ್ದೀರಿ. ಆಗ ನೀವು ಒಂದು ಸಮುದಾಯದ ಓಲೈಕೆಗಾಗಿ ಮಾತ್ರ ಯೋಜನೆ ಕೊಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಸುಳ್ಳು ಭರವಸೆ ನಂಬಲು ಕರ್ನಾಟಕದ ಜನರು ಮೂರ್ಖರಲ್ಲ. ಕರ್ನಾಟಕದ ಜನರು ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಅವರೆಲ್ಲರೂ ಮಾಧ್ಯಮ ನೋಡುತ್ತಾರೆ; ಸೋಷಿಯಲ್ ಮೀಡಿಯಾ ಗಮನಿಸುತ್ತಾರೆ; ಯಾವ ರಾಜ್ಯದಲ್ಲಿ ನೀವು ಮೋಸ ಮಾಡಿದ್ದೀರೆಂಬ ಅರಿವು ಅವರಿಗೆ ಇದೆ. 2001ರ ಗ್ಯಾರಂಟಿ ಕಾರ್ಡ್, 2013ರ ಗ್ಯಾರಂಟಿ ಕಾರ್ಡ್ ಏನಾಗಿದೆ ಎಂದು ಕಾಂಗ್ರೆಸ್‍ನ್ನು ಜನತೆ ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.
ಮಹಿಳೆಯರಿಗೆ 2 ಸಾವಿರ ರೂ., 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 3000 -1500 ರೂ. ಯಾವ ಹಣದಿಂದ ಕೊಡುತ್ತೀರಿ? ಯಾರಾದರೂ ಜಾರ್ಜ್ ಸೊರೊಸ್ ಅಂಥವರು ನಿಮಗೆ ಹಣ ಕೊಡ್ತಾರಾ? ಎಂದು ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಕರ್ನಾಟಕದ ಬಜೆಟ್‍ನಲ್ಲಿ ಇದನ್ನು ಕೊಡಲು ಸಾಧ್ಯವೇ ಇಲ್ಲ. ಈ ವರ್ಷ ನಮ್ಮ ಸರಕಾರ 3 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದೆ. ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗುವ ಮಾಹಿತಿ ಇದೆ. ಅಥವಾ 3 ಲಕ್ಷ ಕೋಟಿಯೇ ಸಂಗ್ರಹ ಆಗಲಿ; ಈಗ ಕಾಂಗ್ರೆಸ್‍ನವರು ಕೊಟ್ಟ ಭರವಸೆಗಳನ್ನು ಈಡೇರಿಸಲು 70-75 ಸಾವಿರ ಕೋಟಿ ಬೇಕು. ಸನ್ಮಾನ್ಯ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಘೋಷಣೆಯಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಅಜ್ಜ, ಅಜ್ಜಿಗೆ ತಲಾ 1200 ಸೇರಿ 2400 ರೂ. ನಾವು ಕೊಡುತ್ತಿದ್ದೇವೆ. ನಿಮ್ಮದು ಭರವಸೆ ಮಾತ್ರ. ನಾವು ನಿಜವಾಗಲೂ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಇದೇರೀತಿ ರಾಜಸ್ಥಾನದಲ್ಲೂ ಗ್ಯಾರಂಟಿ ಕಾರ್ಡ್ ಹಂಚಿದ್ದರು. 2018ರ ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರಿಗೆ 3,500 ರೂಪಾಯಿ ಭತ್ಯೆ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಕೊಟ್ಟು ತಿಳಿಸಿದ್ದಿರಿ. ಆದರೆ, ಇವತ್ತಿನ ತನಕ ಅದನ್ನು ಈಡೇರಿಸಿಲ್ಲ. ಛತ್ತೀಸ್‍ಗಡದಲ್ಲೂ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ. ನಿಮ್ಮ ಅಧಿಕಾರ ಇದ್ದರೂ ಅದನ್ನು ಈಡೇರಿಸಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಈ ಕುರಿತು ಉತ್ತರಿಸಲಿ ಎಂದು ಆಗ್ರಹಿಸಿದರು.
ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿ ಆದಾಗ ಭರವಸೆ, ಗ್ಯಾರಂಟಿ ಕಾರ್ಡ್ ಕೊಡಲಿಲ್ಲ. ಬಿಜಾಪುರದಲ್ಲಿ ಅಜ್ಜಿ ಒಬ್ಬರು ಕಾಲಿಗೆ ಬಿದ್ದು, ‘ನನಗೆ ಗಂಡ ಇದ್ದಾರೆ, ಮಕ್ಕಳಿದ್ದಾರೆ, ಊಟ ಮಾಡಲು ಹಣ ಇಲ್ಲ’ ಎಂದಾಗ ‘ತಾಯಿ ನಿನಗೂ ಏನಾದ್ರೂ ಮಾಡುತ್ತೇನೆ’ ಎಂದು ತಿಳಿಸಿ ವಾಪಸ್ ಬಂದರು. ನಂತರದ ಕ್ಯಾಬಿನೆಟ್ ಸಭೆಯಲ್ಲಿ ಸಂಧ್ಯಾ ಸುರಕ್ಷಾ ಜಾರಿಗೊಳಿಸಿ ಅಜ್ಜ- ಅಜ್ಜಿಗೆ ಒಂದು ಮನೆಗೆ 2400 ರೂ. ಸಿಗುವಂತೆ ಮಾಡಿದವರು ಯಡಿಯೂರಪ್ಪನವರು ಎಂದು ವಿವರಿಸಿದರು.
ರಾಮಕೃಷ್ಣ ಹೆಗಡೆಯವರ ಕಾಲದಿಂದ ವಿಧವಾ ವೇತನ 75 ರೂಪಾಯಿಯಿಂದ ಆರಂಭವಾಗಿತ್ತು. ನೀವು ಹಲವು ವರ್ಷಗಳ ಆಡಳಿತ ನಡೆಸಿದ ಬಳಿಕ ಅದು 200 ರೂಪಾಯಿಗೆ ಬಂದು ನಿಂತಿತ್ತು. ವಿಧವಾ ವೇತನ ಹೆಚ್ಚಿಸಿ 1 ಸಾವಿರ ನೀಡುತ್ತಿರುವುದು ನಮ್ಮ ಸರಕಾರ ಎಂದ ಅವರು, ಕಾಂಗ್ರೆಸ್‍ನವರು ಯಾವ ಹೆಣ್ಮಕ್ಕಳಿಗೆ 2 ಸಾವಿರ ಕೊಡುತ್ತಾರೆ? ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಕೊಡುತ್ತಾರಾ? ಎಲ್ಲರಿಗೂ ಕೊಡುತ್ತಾರಾ? ಅಥವಾ ವಿಧವೆಯರಿಗೆ ಮಾತ್ರ ಕೊಡಲಿದ್ದಾರಾ ಎಂದು ಪ್ರಶ್ನಿಸಿದರು.
2000- 2001ರಲ್ಲಿ ನಿರುದ್ಯೋಗಿ ಯುವಕರಿಗೆ 5 ಸಾವಿರ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿತ್ತು. ಅದಕ್ಕಾಗಿ ನಾವು ಹೋರಾಟವನ್ನೂ ಮಾಡಿದ್ದೆವು. ಆದರೆ, ಅದು ಈಡೇರಲಿಲ್ಲ. ಸುಳ್ಳು ಹೇಳುವುದಕ್ಕೂ, ಮೋಸ ಮಾಡುವುದಕ್ಕೂ ಒಂದು ಮಿತಿ ಇರಲಿ ಎಂದರು.
ಇದನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ