ವಿದೇಶ
ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ನ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡ್ ಮಾಡಿಸಿದ ಪೈಲೆಟ್; ಮೈ ಜುಂ ಎನ್ನುವ ಈ ವಿಡಿಯೊ ನೋಡಿ
ಹೆಲಿಪ್ಯಾಡ್ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಮಾಡಿಸಬಹುದೇ ಹೊರತು, ವಿಮಾನಗಳನ್ನು ಲ್ಯಾಂಡ್ ಮಾಡಿಸಲು ಆಗದು. ವಿಮಾನಗಳು ಲ್ಯಾಂಡ್ ಆಗಲು ರನ್ ವೇ ಬೇಕು. ಆದರೆ ಪೋಲ್ಯಾಂಡ್ ಪೈಲೆಟ್ ಈ ಸಾಹಸ ಮಾಡಿದ್ದು, ಇದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ.
ದುಬೈನ ಅತ್ಯಂತ ಎತ್ತರ ಹೋಟೆಲ್ಗಳಲ್ಲಿ ಒಂದಾದ ಬುರ್ಜ್ ಅಲ್ ಅರಬ್ (Burj Al Arab) ಹೋಟೆಲ್ನ ತುತ್ತ ತುದಿಯಲ್ಲಿರುವ ಹೆಲಿಪ್ಯಾಡ್ ಮೇಲೆ ಪೋಲ್ಯಾಂಡ್ನ ಪೈಲೆಟ್ವೊಬ್ಬರು ಯಶಸ್ವಿಯಾಗಿ ವಿಮಾನವನ್ನು ಲ್ಯಾಂಡ್ ಮಾಡಿಸಿದ್ದಾರೆ. ಹೀಗೆ ಹೆಲಿಪ್ಯಾಡ್ ಮೇಲೆ ವಿಮಾನವೊಂದನ್ನು ಲ್ಯಾಂಡ್ ಮಾಡಿಸಿದ್ದು ವಿಶ್ವದಲ್ಲೇ ಇದು ಮೊದಲು ಎಂದು ಹೇಳಲಾಗಿದೆ. ಅಂದಹಾಗೇ, ಪೋಲ್ಯಾಂಡ್ನ ಈ ಸಾಹಸಿ ಪೈಲೆಟ್ ಹೆಸರು ಲ್ಯೂಕ್ ಜೆಪಿಯೆಲಾ. ಅವರಿಗೆ 39 ವರ್ಷ. 27 ಮೀಟರ್ ಅಗಲ ಇರುವ, ವಿಶೇಷವಾಗಿ ಮಾರ್ಪಾಡು ಮಾಡಲಾದ ವಿಮಾನವನ್ನು ಪೈಲೆಟ್ ಲ್ಯೂಕ್ ಅವರು ಅತಿ ಎತ್ತರದ ಹೋಟೆಲ್ನ ಹೆಲಿಪ್ಯಾಡ್ ಮೇಲೆ ಲ್ಯಾಂಡ್ ಮಾಡಿಸಿ, ಮತ್ತೆ ಅಲ್ಲಿಂದ ಟೇಕ್ ಆಫ್ ಆಗುವ ವಿಡಿಯೊ ವೈರಲ್ ಆಗಿದ್ದು, ದೃಶ್ಯ ಮೈ ಜುಂ ಎನ್ನುವಂತಿದೆ.
ಹೆಲಿಪ್ಯಾಡ್ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಮಾಡಿಸಬಹುದೇ ಹೊರತು, ವಿಮಾನಗಳನ್ನು ಲ್ಯಾಂಡ್ ಮಾಡಿಸಲು ಆಗದು. ವಿಮಾನಗಳು ಲ್ಯಾಂಡ್ ಆಗಲು ರನ್ ವೇ ಬೇಕು. ಹೀಗಾಗಿ ಪೋಲ್ಯಾಂಡ್ ಪೈಲೆಟ್ ಲ್ಯೂಕ್ ಜೆಪಿಯೆಲಾ ಅವರು, ಒಂದು ಚಿಕ್ಕದಾದ ವಿಮಾನವನ್ನು ಅಷ್ಟೆತ್ತರದ ಹೋಟೆಲ್ ಮೇಲಿನ ಹೆಲಿಪ್ಯಾಡ್ ಮೇಲೆ ಲ್ಯಾಂಡ್ ಮಾಡಿಸಿದ್ದು ಸಾಹಸವೇ ಸೈ..!. ಅಂದಹಾಗೇ, ಇವರು ಇದೊಂದು ಸಾಹಸಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಒಂದು ಕೃತಕ ದ್ವೀಪದ ಮೇಲೆ ನಿಂತಿರುವ ಬುರ್ಜ್ ಅಲ್ ಅರಬ್ ಹೋಟೆಲ್ 212 ಮೀಟರ್ ಎತ್ತರವಿದೆ. ಒಟ್ಟು 56 ಫ್ಲೋರ್ಗಳು ಇವೆ. ಈ ಐತಿಹಾಸಿಕ ಕಟ್ಟಡದ ತುತ್ತತುದಿಯಲ್ಲಿ ಪೈಲೆಟ್ ವಿಮಾನವನ್ನು ಲ್ಯಾಂಡ್ ಮಾಡಿಸಿದ ವಿಡಿಯೊವನ್ನು ರೆಡ್ ಬುಲ್ ಮೋಟರ್ಸ್ಪೋರ್ಟ್ಸ್ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದೆ. ಇಲ್ಲಿದೆ ನೋಡಿ, ಮೈ ಜುಂ ಎನ್ನಿಸುವ ವಿಡಿಯೊ..
ದೇಶ
Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ
Google Layoffs: ಐರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ನೌಕರರಿಗೆ ಮಾತ್ರ ಕೋಟ್ಯಂತರ ರೂಪಾಯಿ Severance Pay ಸಿಗಲಿದೆ. ಆದರೂ, ಗೂಗಲ್‌ನಿಂದ ವಜಾಗೊಂಡ ಯಾವ ನೌಕರನಿಗೂ ಕಂಪನಿಯು ಕಡಿಮೆ ಮೊತ್ತ ನೀಡಿ ಕಳುಹಿಸುತ್ತಿಲ್ಲ ಎಂಬುದು ಗಮನಾರ್ಹ.
ನವದೆಹಲಿ: ಟ್ವಿಟರ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್, ಆಕ್ಷೆಂಚರ್, ಫೋರ್ಡ್ ಸೇರಿ ಜಗತ್ತಿನ ಅಗ್ರ, ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೊರೊನಾ ಸಮಯದಲ್ಲಿ ಉಂಟಾದ ನಷ್ಟ ತೂಗಿಸುವಿಕೆ ಸೇರಿ ಹಲವು ಕಾರಣಗಳಿಂದಾಗಿ ಸಾಲು ಸಾಲಾಗಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಭೀತಿಯಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಗೂಗಲ್ ಕಂಪನಿಯಿಂದ (Google Layoffs) ವಜಾಗೊಂಡವರು ಮಾತ್ರ ಹೆಚ್ಚು ಯೋಚನೆ ಮಾಡಬೇಕಿಲ್ಲ. ಏಕೆಂದರೆ, ಅವರಿಗೆ ಸಿಗುವ ಬೇರ್ಪಡಿಸುವಿಕೆ ಮೊತ್ತ ಅಥವಾ ಕಂಪನಿಯು ಉದ್ಯೋಗಿಯನ್ನು ವಜಾಗೊಳಿಸಿದ ಬಳಿಕ ನೀಡುವ ಹಣಕಾಸು ಪರಿಹಾರದ ಪ್ಯಾಕೇಜ್ (Severance Pay) ಅಷ್ಟರಮಟ್ಟಿಗೆ ಇದೆ.
ಹೌದು, ಗೂಗಲ್ ಇತ್ತೀಚೆಗೆ ಜಾಗತಿಕವಾಗಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇವರಲ್ಲಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 240 ಉದ್ಯೋಗಿಗಳು ಕೂಡ ಇದ್ದು, ಅವರಿಗೆ ವಜಾಗೊಳಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೇಲ್ಸ್ ವಿಭಾಗದ 85, ಟೆಕ್ನಾಲಜಿ ವಿಭಾಗದ 80 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೆ, ಇವರಲ್ಲಿಯೇ ಕೆಲವು ಮಂದಿಗೆ ಹಣಕಾಸು ಪರಿಹಾರದ ಪ್ಯಾಕೇಜ್ 2.6 ಕೋಟಿ ರೂಪಾಯಿವರೆಗೆ ಸಿಗಲಿದೆ. ಹಾಗಾಗಿ, ವಜಾಗೊಂಡಿರುವ ನೌಕರರಿಗೆ ಸಿಗುವ ಮೊತ್ತವನ್ನು ನೋಡಿದರೆ ಅವರು ಬೇರೆ ಕೆಲಸ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.
ವಜಾಗೊಳ್ಳುತ್ತಿರುವ ನೌಕರರಿಗೆ ಕಂಪನಿಯು Severance Pay ನೀಡುವುದಾಗಿ ಭರವಸೆ ನೀಡಿದೆ. ಐರ್ಲೆಂಡ್‌ನಲ್ಲಿ 2003ರಲ್ಲಿ ಕಚೇರಿಯನ್ನು ತೆರೆದಿದ್ದು, ಕಚೇರಿ ಆರಂಭವಾದಾಗಿನಿಂದ ಇದುವರೆಗೆ ಕಾರ್ಯನಿರ್ವಹಿಸಿದ ನೌಕರರಿಗೆ ಇಷ್ಟು ಮೊತ್ತದ ಪ್ಯಾಕೇಜ್ ಸಿಗಲಿದೆ. ಹೀಗೆ, ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ನೌಕರರಿಗೆ ಪ್ರತಿವರ್ಷದಂತೆ ಲೆಕ್ಕ ಹಾಕಿ ಆರು ವಾರಗಳ ಹೆಚ್ಚುವಳಿ ಸಂಬಳ, 30 ದಿನಗಳ ಗಳಿಕೆ ರಜೆ ಸೇರಿ ಅವರ ಫೈನಲ್ ಸೆಟಲ್‌ಮೆಂಟ್ ಮೊತ್ತವು 2.6 ಕೋಟಿ ಆಗಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ನೌಕರರಿಗೂ ಸಿಗಲಿದೆ ಹೆಚ್ಚಿನ ಮೊತ್ತ
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಗಲ್ ಉದ್ಯೋಗಿಗಳಿಗೂ ಹೆಚ್ಚಿನ ಪ್ರಮಾಣದ Severance Pay ಪ್ಯಾಕೇಜ್ ಸಿಗಲಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ 16 ವಾರಗಳ ಸಂಬಳ, 16 ವಾರದ ಜಿಎಸ್‌ಯು ವೆಸ್ಟಿಂಗ್, 2022ರ ಬೋನಸ್, ಆರು ತಿಂಗಳವರೆಗೆ ವಿಮೆ ವಿಸ್ತರಣೆ, ವಲಸೆ ಬಂದವರು ಬೇರೆ ದೇಶಗಳಿಗೆ ತೆರಳಲು ಅಥವಾ ತಮ್ಮ ದೇಶಗಳಿಗೆ ಮರಳಲು ನೆರವು ಒದಗಿಸುವುದು ಸೇರಿ ಹತ್ತಾರು ಸೌಲಭ್ಯ ನೀಡಿದೆ. ಆದರೆ, ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮಾತ್ರ ಹೆಚ್ಚಿನ ಮೊತ್ತ ನೀಡಲಾಗಿದೆ.
ಕಳೆದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸುವ ಮೂಲಕ ಕೆಲಸದಿಂದ ವಜಾಗೊಳಿಸುತ್ತಿರುವ ತೀರ್ಮಾನವನ್ನು ಪ್ರಕಟಿಸಿದ್ದರು. ಹಾಗೆಯೇ, “ಇಂತಹ ಕಠಿಣ ತೀರ್ಮಾನದಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದ್ದರು. ಭಾರತದ 450 ಜನ ಗೂಗಲ್‌ನಿಂದ ವಜಾಗೊಂಡಿದ್ದಾರೆ.
ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!
ಪ್ರಮುಖ ಸುದ್ದಿ
Hindu University of America: ಅಮೆರಿಕದ ಹಿಂದು ವಿವಿಗೆ 8.2 ಕೋಟಿ ರೂ. ದೇಣಿಗೆ ನೀಡಿದ ಭಾರತದ ಉದ್ಯಮಿ
Hindu University of America: ಹಿಂದು ಧರ್ಮದ ಕುರಿತು ಯುವಕರು ಅರಿಯಲಿ, ಹಿಂದುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಲಿ ಎಂಬ ದೃಷ್ಟಿಯಿಂದ ರಮೇಶ್ ಭೂಟಾಡ ಅವರು ವಿವಿಗೆ ದೇಣಿಗೆ ನೀಡಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿರುವ ಹಿಂದು ವಿಶ್ವವಿದ್ಯಾಲಯಕ್ಕೆ (Hindu University of America) ಭಾರತ ಮೂಲದ ಉದ್ಯಮಿಯೊಬ್ಬರು 8.2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಫ್ಲೊರಿಡಾ ಮೂಲದ ಹಿಂದು ಯುನಿವರ್ಸಿಟಿ ಆಫ್ ಅಮೆರಿಕಕ್ಕೆ ಅಮೆರಿಕದಲ್ಲಿರುವ ಭಾರತ ಮೂಲದ ಉದ್ಯಮಿ ರಮೇಶ್ ಭೂಟಾಡ ಅವರು ಬೃಹತ್ ಮೊತ್ತವನ್ನು ದೇಣಿಗೆ ನೀಡಿದ್ದಾರೆ.
ಭೂಟಾಡ ಅವರು ಹ್ಯೂಸ್ಟನ್ ಮೂಲದ ಸ್ಟಾರ್ ಪೈಪ್ ಪ್ರಾಡಕ್ಟ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದಾರೆ. ಯುವಕರು ಹಿಂದುತ್ವದ ಕುರಿತು, ಹಿಂದುತ್ವದ ಮೌಲ್ಯಗಳ ಕುರಿತು ಅರಿಯಲಿ, ಜ್ಞಾನ ಸಂಪಾದಿಸಲಿ ಎಂಬ ದೃಷ್ಟಿಯಿಂದಾಗಿ ಅವರು ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಯುನಿವರ್ಸಿಟಿ ಆಫ್ ಅಮೆರಿಕವನ್ನು (HUA) 1989ರಲ್ಲಿ ಸ್ಥಾಪಿಸಲಾಗಿದೆ. ಹಿಂದು ತತ್ವಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಲು ವಿವಿಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಫ್ಲೊರಿಡಾ ರಾಜ್ಯ ಸರ್ಕಾರವು 1993ರಲ್ಲಿ ಮಾನ್ಯತೆ ನೀಡಿದೆ.
ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಭೂಟಾಡ ಅವರನ್ನು ಸನ್ಮಾನಿಸಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ದೇಣಿಗೆ ಲಭಿಸಿದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ. ಅಮೆರಿಕದಲ್ಲಿರುವ ಹಿಂದು ವಿವಿಗೆ ಇಷ್ಟೊಂದು ಮೊತ್ತದ ದೇಣಿಗೆ ನೀಡಿದ ಭೂಟಾಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದು ಧರ್ಮದ ಸಾರ ಅರಿಯುವುದು ಅತ್ಯಗತ್ಯ
ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಭೂಟಾಡ ಮಾತನಾಡಿದ್ದು, ಹಿಂದು ಧರ್ಮದ ಸಾರ ಅರಿಯುವುದು ಅತ್ಯವಶ್ಯ ಎಂದಿದ್ದಾರೆ. “ನಾನು ಹಿಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರೂ ಹಿಂದು ಧರ್ಮದ ಸಾರವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಾಗಿಲ್ಲ. ಹಿಂದು ಸಂಘಟನೆಗಳ ಸದಸ್ಯನಾಗಿಯೂ, ಹಿಂದು ಧರ್ಮದ ಆಚರಣೆಗಳನ್ನು ಪಾಲಿಸುವವನಾಗಿಯೂ ಇದುವರೆಗೆ ನನಗೆ ಸಂಪೂರ್ಣವಾಗಿ ಹಿಂದು ಧರ್ಮವನ್ನು ಅರಿಯಲು ಆಗಿಲ್ಲ” ಎಂದು ಹೇಳಿದರು.
“ಜಗತ್ತಿನ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತವೆ. ಆದರೆ, ಅಮೆರಿಕದ ಹಿಂದು ವಿವಿಯಂತಹ ಶಿಕ್ಷಣ ಸಂಸ್ಥೆಗಳು ಮಾತ್ರ ಹೇಗೆ ಬದುಕಬೇಕು, ಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ತಿಳಿಸುತ್ತವೆ. ಹಿಂದುತ್ವವು ನಮ್ಮ ನಡುವೆ ಸಾಮರಸ್ಯ ಮೂಡಿಸುತ್ತದೆ. ಕುಟುಂಬ, ಗೆಳೆಯರು, ಸಹೋದ್ಯೋಗಿಗಳು ಸೇರಿ ಜಗತ್ತಿನಾದ್ಯಂತ ಎಲ್ಲರೊಳಗೊಂದಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ” ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಚೇರ್ಮನ್ ವೇದ್ ನಂದಾ ಅವರು ಕೂಡ ಪ್ರತಿಕ್ರಿಯಿಸಿದ್ದು, “ವಿಶ್ವವಿದ್ಯಾಲಯಕ್ಕೆ ನೀಡಿದ ಬೃಹತ್ ಮೊತ್ತದ ದೇಣಿಗೆ ಇದಾಗಿದೆ. ವಿವಿಯು ಹಿಂದು ಧರ್ಮದ ಮೌಲ್ಯಗಳನ್ನು ಕಲಿಸುತ್ತದೆ. ಅಮೆರಿಕಕ್ಕೆ ಮಾತ್ರವಲ್ಲ, ಜಗತ್ತಿಗೇ ಹಿಂದು ಧರ್ಮದ ಪ್ರಾಮುಖ್ಯತೆ, ಆಚಾರ-ವಿಚಾರಗಳನ್ನು ತಿಳಿಸಿಕೊಡಲಾಗುತ್ತಿದೆ. ಶಿಕ್ಷಣದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಕೂಡ ಮಾಹಿತಿ ನೀಡಲಾಗುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ರೂ. ದೇಣಿಗೆ ನೀಡಿದ ನಟ ಅನುಪಮ್ ಖೇರ್
ದೇಶ
Rahul Gandhi: ರಾಹುಲ್ ಗಾಂಧಿಗೆ ಜರ್ಮನಿ ಬೆಂಬಲ, ದೇಶಕ್ಕೆ ಅವಮಾನ ಎಂದ ಬಿಜೆಪಿ
Rahul Gandhi: ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹತೆ ಕುರಿತು ಹಲವು ರಾಷ್ಟ್ರಗಳ ಪ್ರತಿಕ್ರಿಯಿಸುತ್ತಿವೆ. ಇತ್ತೀಚೆಗೆ ಅಮೆರಿಕ ತನ್ನ ಅಭಿಪ್ರಾಯ ಹೇಳಿತ್ತು. ಈಗ ಜರ್ಮನ್ (Germany) ಕೂಡ ಈ ಪ್ರತಿಕ್ರಿಯಿಸಿದ್ದು, ರಾಹುಲ್ ಪ್ರಕರಣದಲ್ಲಿ ಪ್ರಜಾಸತ್ತಾತ್ಮಕ ಮೂಲಭೂತ ತತ್ವಗಳು ಪರಿಪಾಲನೆಯಾಗಬೇಕೆಂದು ಹೇಳಿದೆ.
ನವದೆಹಲಿ: ರಾಹುಲ್ ಗಾಂಧಿ (Rahul Gandhi) ಲೋಕಸಭೆ ಸದಸ್ಯತ್ವ ರದ್ದು ಕುರಿತು ಜರ್ಮನ್ (Germany) ಪ್ರತಿಕ್ರಿಯೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಧನ್ಯವಾದ ಸಲ್ಲಿಸಿದ ಟ್ವೀಟ್ ಬಗ್ಗೆ ಬಿಜೆಪಿ (BJP) ವ್ಯಗ್ರವಾಗಿದೆ. ಕಾಂಗ್ರೆಸ್ (Congress) ದೇಶಕ್ಕೆ ಅವಮಾನ ಮಾಡಿದೆ ಎಂದು ಕಟುವಾಗಿ ಟೀಕಿಸಿದೆ.
ಇದು ದೇಶಕ್ಕೆ ಮಾಡಿದ ಅವಮಾನ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದಲ್ಲಿ ಪ್ರಜಾಪ್ರಭುತ್ವ, ರಾಜಕೀಯ ಮತ್ತು ಕಾನೂನು ಹೋರಾಟದಲ್ಲಿ ನಂಬಿಕೆ ಇಲ್ಲ. ಆದ್ದರಿಂದ, ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸುತ್ತಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ನವ ಭಾರತವು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆ ಕುರಿತು ಜರ್ಮನ್ ಹೇಳಿದ್ದೇನು?
ರಾಹುಲ್ ಗಾಂಧಿ ಅನರ್ಹತೆ ಪ್ರಕರಣದಲ್ಲಿ ಪ್ರಜಾಸತ್ತಾತ್ಮಕ ಮೂಲ ತತ್ವಗಳು ಅನ್ವಯವಾಗಬೇಕು ಎಂದು ಹೇಳುವ ಮೂಲಕ ಜರ್ಮನ್ ರಾಹುಲ್ ಗಾಂಧಿ ಅವರ ಬೆಂಬಲಿಕ್ಕೆ ನಿಂತಿದೆ. ಎರಡು ದಿನಗಳ ಹಿಂದೆಯಷ್ಟೇ ಅಮೆರಿಕ ಕೂಡ ಇದೇ ರೀತಿಯ ಬೆಂಬಲದ ನುಡಿಗಳನ್ನಾಡಿತ್ತು.
ಭಾರತದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಮೊದಲ ಪ್ರಕರಣದ ತೀರ್ಪು ಹಾಗೂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ಪ್ರಕರಣವನ್ನು ನಾವು ಗಮನಿಸಿದ್ದೇವೆ. ನಮಗೆ ತಿಳಿದಿರುವಂತೆ, ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಅವರು ಮೇಲ್ಮನವಿ ಸಲ್ಲಿಸುವ ಸ್ಥಿತಿಯಲ್ಲಿದ್ದಾರೆ. ಆ ಮೇಲಷ್ಟೇ ಈ ತೀರ್ಪು ಊರ್ಜಿತವಾಗುತ್ತದಯೇ ಮತ್ತು ಅವರ ಅನರ್ಹತೆಗೆ ಆಧಾರ ಇದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರು.
ಜರ್ಮನಿಗೆ ಧನ್ಯವಾದ ಹೇಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್
ರಾಹುಲ್ ಗಾಂಧಿ ಅವರ ಕಿರುಕುಳದ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಗಮನಿಸಿದ ಜರ್ಮನಿಯ ವಿದೇಶಾಂಗ ಸಚಿವಾಲಯ ಮತ್ತು ರಿಚರ್ಡ್ ವಾಕರ್ ಅವರಿಗೆ ಧನ್ಯವಾದಗಳು ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದರು. ಇದಕ್ಕೆ ಕಾಯುತ್ತಿದ್ದ ಬಿಜೆಪಿ ಮತ್ತೆ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದೆ. ಕಾಂಗ್ರೆಸ್ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಎದುರು ನೋಡುತ್ತಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇರುವವರೆಗೂ ಇದು ಸಾಧ್ಯವಿಲ್ಲ ಎಂದು ಹೇಳಿದೆ.
Rahul Gandhi ಅನರ್ಹತೆ ಬಗ್ಗೆ ಅಮೆರಿಕ ಏನು ಹೇಳಿತ್ತು?
ರಾಹುಲ್ ಗಾಂಧಿ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್ ಡಿಪಾರ್ಟ್ಮೆಂಟ್ ಸ್ಟೇಟ್ನ ಉಪವಕ್ತಾರ ವೇದಾಂತ್ ಪಟೇಲ್, ‘ಭಾರತದಲ್ಲಿ ರಾಹುಲ್ ಗಾಂಧಿ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನೂ ಗೌರವಿಸಬೇಕು ಎಂಬುದು ನಮ್ಮ ಆಶಯ ಮತ್ತು ಬದ್ಧತೆ. ಇದನ್ನು ನಾವು ಸದಾ ಭಾರತದೊಂದಿಗೆ ವ್ಯಕ್ತಪಡಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ತತ್ವದ ಮಹತ್ವ ಮತ್ತು ಮಾನವಹಕ್ಕುಗಳ ರಕ್ಷಣೆಯನ್ನು ಬಲಪಡಿಸುವ ವಿಷಯದಲ್ಲಿ ಅಮೆರಿಕ ಮತ್ತು ಭಾರತದ ಆಸಕ್ತಿಗಳು ಒಂದೇ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಮೋದಿ ಉಪನಾಮ ಹೇಳಿಕೆ ನೀಡಿದ್ದ ಕೋಲಾರದಿಂದಲೇ ರಾಹುಲ್ ಗಾಂಧಿ ಪ್ರಚಾರ ಆರಂಭ
ರಾಹುಲ್ ಗಾಂಧಿಯವರು 2019ರಲ್ಲಿ ಕೋಲಾರದಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದಿದ್ದರು. ಅದೇ ವಿಷಯವೀಗ ದೊಡ್ಡದಾಗಿದೆ. ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತೀರ್ಪು ಕೊಟ್ಟ ಸೂರತ್ ಕೋರ್ಟ್ ರಾಹುಲ್ ಗಾಂಧಿಯನ್ನು ದೋಷಿ ಎಂದು ಹೇಳಿದೆ. 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ಸದ್ಯ ಭಾರತದೆಲ್ಲೆಡೆ ಹೋರಾಟ ಕೈಗೊಂಡಿದ್ದಾರೆ. ಸಂಸತ್ತಿಗೆ ನಿನ್ನೆ ಅವರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಇದೀಗ ಯುಎಎಸ್ ಕೂಡ ಪ್ರತಿಕ್ರಿಯೆ ನೀಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದಾರೆ.
ವಿದೇಶ
Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!
ಜಪಾನ್‌ನಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಇಲಾಖೆ 9 ಲಕ್ಷ ರೂ. ದಂಡ ವಿಧಿಸಿದೆ. ಕೆಲಸದ ಅವಧಿಯಲ್ಲಿ ಸಿಗರೇಟ್ ಸೇದಿದ ಕಾರಣಕ್ಕೆ ಈ ದಂಡ (Viral News) ವಿಧಿಸಲಾಗಿದೆ.
ಟೋಕಿಯೊ: ಭಾರತದಲ್ಲಿ ಕೆಲಸದ ವೇಳೆ ವಿರಾಮ ತೆಗೆದುಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಎಷ್ಟೋ ಮಂದಿ ಕೆಲಸದ ಮಧ್ಯೆಯೇ ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ಜಪಾನ್‌ನಲ್ಲಿ ಹಾಗಿಲ್ಲ. ಕೆಲಸದ ಅವಧಿಯಲ್ಲಿ ಸಿಗರೇಟ್ ಸೇದುವುದು ಆ ದೇಶದಲ್ಲಿ ಅಕ್ಷಮ್ಯ ಅಪರಾಧವಿದ್ದಂತೆ. ಅದನ್ನೂ ಲೆಕ್ಕಿಸದೆ ಸಿಗರೇಟ್ ಸೇದಿದ್ದ ಉದ್ಯೋಗಿ ಇದೀಗ ಭಾರೀ ಮೊತ್ತದ ದಂಡ ತೆರಬೇಕಾದ ಪರಿಸ್ಥಿತಿ (Viral News) ಬಂದೊದಗಿದೆ.
ಇದನ್ನೂ ಓದಿ: Viral Video: ಇದು ಕುದುರೆ ಸವಾರಿಯಲ್ಲ, ಮೊಸಳೆ ಸವಾರಿ! ಭಯ ತರಿಸುವ ವಿಡಿಯೊ
ಜಪಾನ್‌ನ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 61 ವರ್ಷದ ವ್ಯಕ್ತಿಗೆ ಇದೀಗ ಇಲಾಖೆ ಬರೋಬ್ಬರಿ 9 ಲಕ್ಷ ರೂ. ದಂಡ ವಿಧಿಸಿದೆ. ಅದಕ್ಕೆ ಕಾರಣ ಸಿಗರೇಟ್ ಸೇದಿರುವುದು. ಹೌದು. ಈ ವ್ಯಕ್ತಿ ಕಳೆದ 14 ವರ್ಷಗಳಲ್ಲಿ ಸಿಗರೇಟ್ ಸೇದುವುದಕ್ಕೆಂದೇ 4,500 ಬಾರಿ ವಿರಾಮ ತೆಗೆದುಕೊಂಡಿದ್ದಾರೆ. ಬರೋಬ್ಬರಿ 355 ಗಂಟೆ ಮತ್ತು 19 ನಿಮಿಷಗಳನ್ನು ಸಿಗರೇಟ್ ಸೇದುವುದರಲ್ಲೇ ಕಳೆದಿದ್ದಾರೆ. ಇವರ ಜತೆಗೆ ಇವರಿಬ್ಬರು ಸ್ನೇಹಿತರೂ ಕೂಡ ಹಲವಾರು ಗಂಟೆ ಸಿಗರೇಟ್ ಸೇದುವುದಕ್ಕೆ ಕಳೆದಿದ್ದಾರೆ. ಮೂರು ಉದ್ಯೋಗಿಗಳಿಗೆ ಇಲಾಖೆ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ.
ಎಷ್ಟು ಬಾರಿ ಎಚ್ಚರಿಕೆ ಕೊಟ್ಟರ ಎಚೆತ್ತುಕ್ಕೊಳ್ಳದ ಈ ಮೂರು ಉದ್ಯೋಗಿಗಳ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಿಖೆ ಆರಂಭಿಸಲಾಗಿದೆ. ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 61 ವರ್ಷದ ವ್ಯಕ್ತಿಯು ನಿರ್ದೇಶಕರ ಮಟ್ಟದ ಹುದ್ದೆಯಲ್ಲಿದ್ದು, ಅವರಿಗೆ ಒಟ್ಟು 9 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಮುಂದಿನ ಆರು ತಿಂಗಳ ಕಾಲ ಅವರ ಸಂಬಳದಲ್ಲಿ ಶೇ.10ನ್ನು ಕಡಿತ ಮಾಡಿರುವುದಾಗಿಯೂ ಹೇಳಲಾಗಿದೆ.
ಇದನ್ನೂ ಓದಿ: Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ
ಜಪಾನ್ ಕೆಲಸದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾದ ದೇಶ. ಅಲ್ಲಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವ ಹಾಗೂ ಕೆಲಸದಿಂದ ಮನೆಗೆ ತೆರಳುವ ಸಮಯವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕೇವಲ ಮೂರು ನಿಮಿಷ ಬೇಗ ಮನೆಗೆ ಹೋದರು ಎನ್ನುವ ಕಾರಣಕ್ಕೇ ಉದ್ಯೋಗಿಗಳಿಗೆ ದಂಡ ವಿಧಿಸಿದ ಘಟನೆಗಳೂ ಜಪಾನ್‌ನಲ್ಲಿವೆ.
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!