ಕರ್ನಾಟಕ
Ballari News : 5 ವರ್ಷದ ಬಾಲಕನಿಗೆ ಅತೀ ವಿರಳ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ
Ballari News: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದ ನಾಗೇಶ್ ಮತ್ತು ಪಾರ್ವತಿ ದಂಪತಿಯ 5 ವರ್ಷದ ಬಾಲಕನಿಗೆ ಮೆದುಳಿನ ಅರ್ಧ ಭಾಗದ ತಲೆಯ ಬುರುಡೆ ತೆರೆದು ಮೈಕ್ರೋಸ್ಕೋಪ್ ಮೂಲಕ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ವಿಮ್ಸ್ ನ್ಯೂರೋ ಸರ್ಜರಿ ವಿಭಾಗದ ಡಾ. ವಿಶ್ವನಾಥ್ ಯಶಸ್ವಿಯಾಗಿದ್ದಾರೆ.
ಬಳ್ಳಾರಿ: ಐದು ವರ್ಷದ ಬಾಲಕನಿಗೆ ಮೆದುಳಿನ (Brain) ಅರ್ಧ ಭಾಗದ ತಲೆಯ ಬುರುಡೆ ತೆರೆದು ಮೈಕ್ರೋಸ್ಕೋಪ್ (Microscope) ಮೂಲಕ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ (Surgery) ಮಾಡುವಲ್ಲಿ ಯಶಸ್ವಿಯಾಗಿರುವ ವಿಮ್ಸ್ ನ್ಯೂರೋ ಸರ್ಜರಿ ವಿಭಾಗದ ಡಾ. ವಿಶ್ವನಾಥ ಅವರ ಸಾಧನೆ ವೈದ್ಯಕೀಯ ಕ್ಷೇತ್ರವೇ ಹೆಮ್ಮೆ ಪಡುವ ಸಂಗತಿಯಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದ ನಾಗೇಶ್ ಮತ್ತು ಪಾರ್ವತಿ ದಂಪತಿಯ ಐದು ವರ್ಷದ ಬಾಲಕ ಹುಟ್ಟಿನಿಂದಲೇ ಈ ಕಾಯಿಲೆಯಿಂದ ಬಳಲುತ್ತಿದ್ದನು. ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದ, ಇದನ್ನು ಗಮನಿಸಿದ ಪೋಷಕರು ಸ್ಥಳೀಯ ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಮಗುವಿಗೆ ಅತೀ ವಿರಳ ಕಾಯಿಲೆ ಇದ್ದು, ನರ ರೋಗತಜ್ಞ ವೈದ್ಯರ ಬಳಿ ಮಾಡಿಸುವಂತೆ ಸಲಹೆ ನೀಡಲಾಗಿತ್ತು.
ಇದನ್ನೂ ಓದಿ: WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಏನಿದು ಕಾಯಿಲೆ?
ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿಸುವ ಬ್ರೈನ್ ಸ್ಟೆಮ್ ಬಳಿ ಮೆದುಳಿನ ದ್ರವದಿಂದ ಉಂಟಾದ ನೀರಿನ ಗುಳ್ಳೆ ರೂಪದ ಚೀಲ (cyst) ದಂತಹ ಅತೀವಿರಳ ಖಾಯಿಲೆಯಿಂದ ಬಳಲುತ್ತಿದ್ದನು. ಬೆಂಗಳೂರಿನ ನಿಮಾನ್ಸ್, ಇಂದಿರಾಗಾಂಧಿ ಆಸ್ಪತ್ರೆಗೆ ಬಂದು ತಪಾಸಣೆಗೊಳಪಟ್ಟು, ಶೀಘ್ರವಾಗಿ ಚಿಕಿತ್ಸೆಗೆ ದಿನಾಂಕ ನಿಗದಿಯಾಗದ ಹಿನ್ನಲೆಯಲ್ಲಿ ವಿಮ್ಸ್‌ನಲ್ಲಿ ತಪಾಸಣೆಗೊಳಗಾಗಿದ್ದನು. ಎಂಆರ್‌ಐ ಪರೀಕ್ಷೆಯಿಂದ ಅತೀ ವಿರಳ ಖಾಯಿಲೆ ಇರುವುದನ್ನು ಖಚಿತಪಡಿಸಿಕೊಂಡ ಡಾ.ವಿಶ್ವನಾಥ್, ಬಾಲಕನನ್ನು ಮೇ 08 ರಂದು ದಾಖಲು ಮಾಡಿಕೊಂಡು ಪಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದರು.
ಇದನ್ನೂ ಓದಿ: BSNL Revival: ಬಿಎಸ್ಸೆನ್ನೆಲ್ ಹಳಿಗೆ ತರಲು ಕೇಂದ್ರದಿಂದ 89 ಸಾವಿರ ಕೋಟಿ ರೂ. ಪ್ಯಾಕೇಜ್, ಸಿಗಲಿದೆಯೇ 5ಜಿ?
ವಿರಳ ಶಸ್ತ್ರ ಚಿಕಿತ್ಸೆಯಲ್ಲಿ ಎರಡನೇಯದು
ವೈದ್ಯಕೀಯ ದಾಖಲಾತಿಗಳ ಸಂಗ್ರಹವಾದ ಪಬ್ ಮೆಡ್ (Pub Med) ಪ್ರಕಾರ ಜಗತ್ತಿನಲ್ಲೇ ಅತ್ಯಂತ ವಿರಳ ಚಿಕಿತ್ಸೆಯಲ್ಲಿ ಇದು ಎರಡನೇ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಾಲಕನಿಗೆ ಟ್ರಾಮಾಕೇರ್ ಸೆಂಟರ್‌ನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ, ನಂತರ ನಿರಂತರ ತಪಾಸಣೆ ಔಷದೋಪಚಾರ ನೀಡಲಾಗಿದೆ. ಬಾಲಕನಲ್ಲಿ ಸಹಜ ಚಟುವಟಿಕೆಗಳು ಕಂಡುಬಂದಿದ್ದು, ಯಾವುದೇ ನ್ಯೂನತೆಗಳನ್ನು ಇರುವುದಿಲ್ಲ. ಸ್ವತಂತ್ರವಾಗಿ ಆಹಾರ ಸೇವನೆ, ಚಲನೆ ಮಾಡುತ್ತಿದ್ದಾನೆ. ಇಂತಹ ಅತೀ ವಿರಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಕೈಗೊಂಡು, ಬಾಲಕ ಸಹಜತೆಯತ್ತ ಮಾಡುವಂತೆ ಪರಿಶ್ರಮ ಪಟ್ಟ ಡಾ.ವಿಶ್ವನಾಥ ಮತ್ತು ಅವರ ತಂಡ ಹಾಗೂ ವಿಮ್ಸ್ ಗೆ ಬಾಲಕನ ಪೋಷಕರಾದ ನಾಗೇಶ್ ಮತ್ತು ಪಾರ್ವತಿ ಕೃತಜ್ಞತೆ ತಿಳಿಸಿದ್ದಾರೆ.
ತಂಡಕ್ಕೆ ಮೆಚ್ಚುಗೆ
ಶಸ್ತ್ರಚಿಕಿತ್ಸೆಯಲ್ಲಿ ಡಾ. ವಿಶ್ವನಾಥ್ ಅವರೊಂದಿಗೆ ಡಾ. ಬಸವರಾಜ್ ಪಾಟೀಲ್, ಡಾ. ಚಂದ್ರಕುಮಾರ್, ಅರವಳಿಕೆ ತಜ್ಞ ಡಾ. ಶ್ರೀನಿವಾಸುಲು, ಶುಶ್ರೂಷಕಿರಾದ ಸಿಜ್ಜು, ನ್ಯಾನ್ಸಿ ಅವರು ಪಾಲ್ಗೊಂಡಿದ್ದರು.
ವಿಮ್ಸ್‌ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಡಾ. ಎಸ್. ವಿಶ್ವನಾಥ ಅವರು ಮೆದುಳು ಹಾಗೂ ನರರೋಗಗಳಿಗೆ ಸಂಬಂಧಿಸಿದ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಂಡು ವಿಮ್ಸ್ ಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ
ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡು ಸಾಧನೆಗೈದ ಡಾ. ವಿಶ್ವನಾಥ್ ಮತ್ತು ತಂಡಕ್ಕೆ ವಿಮ್ಸ್ ನ ನಿರ್ದೇಶಕ ಡಾ. ಗಂಗಾಧರ ಗೌಡ, ಟ್ರಾಮಾಕೇರ್ ಸೆಂಟರ್‌ನ ಅಧೀಕ್ಷಕ ಡಾ. ಶಿವ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ
Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?
Caste Census Report : ಬಿಹಾರದಲ್ಲಿ ಜಾತಿಗಣತಿ ವರದಿ ಮಂಡನೆಯಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಿಎಂ ಆದಾಗಲೇ ವರದಿ ಸಿದ್ಧವಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಮಂಡನೆಯಾಗಿರಲಿಲ್ಲ. ಈಗಲಾದರೂ ಮಂಡನೆಯಾಗಲಿದೆಯಾ? ಎಂಬ ಪ್ರಶ್ನೆ ಈಗ ಮೂಡಿದೆ.
ಬೆಂಗಳೂರು: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯು (Caste Census Report) ರಾಜ್ಯದಲ್ಲಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ವರದಿ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು, ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡರಿಂದಲೇ ವರದಿ ಅಂಗೀಕಾರಕ್ಕೆ ಒತ್ತಡಗಳು ಕೇಳಿಬಂದಿವೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಇದರ ಬಗ್ಗೆ ಜಾಣ್ಮೆಯ ಉತ್ತರವನ್ನು ನೀಡಿದ್ದು, ಮೊದಲು ತಮ್ಮ ಬಳಿ ವರದಿ ಬರಲಿ ಎಂದು ಹೇಳಿದ್ದಾರೆ. ಹಾಗಾದರೆ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮಂಡನೆಯಾಗಲಿದೆಯೇ? ಅಥವಾ ರಾಜ್ಯ ಸರ್ಕಾರ ಸಬೂಬು ಹೇಳುತ್ತಾ ಮುಂದೂಡಲಿದೆಯೇ ಎಂಬ ಕುತೂಹಲ ಮೂಡಿದೆ.
2018ರಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ (Congress JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ. ಆದರೆ, ಈಗ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಿದ್ದರಿಂದ ರಾಜ್ಯದಲ್ಲಿ ಈ ಬಗ್ಗೆ ಕೂಗು ಹೆಚ್ಚಾಗಿದೆ. ಅದಕ್ಕಿಂತ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿ ಮುಗಿಯುವುದರೊಳಗೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿಯೇ ಹೋಗುವುದಾಗಿ ಹೇಳಿದ್ದರು. ಈ ಮಧ್ಯೆ ವರದಿ ಮಂಡನೆಗೆ ಮೊದಲೇ ಸೋರಿಕೆ ಆಗಿದ್ದರಿಂದ ಮೇಲ್ವರ್ಗದ ಪ್ರಬಲ ಸಮುದಾಯವರು ಸೇರಿದಂತೆ ಹಲವರಿಂದ ಜಾತಿ ಮಂಡನೆಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಈ ವರದಿ ಈಗ ಮಂಡನೆಯಾದರೆ ಲೋಕಸಭಾ ಚುನಾವಣೆ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿಯೇ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ.
ಇದನ್ನೂ ಓದಿ: Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ
ವರದಿ ಅಂಗೀಕಾರಕ್ಕೆ ಹಿಂದೇಟು ಏಕೆ?
ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅಂಗೀಕರಿಸಲು ಹಿಂದೇಟು ಏಕೆ? ವಿಪಕ್ಷಗಳ ಅಸಮಾಧಾನ ಯಾಕೆ? ಎಂಬುದನ್ನು ನೋಡುವುದಾದರೆ ವರದಿಯಲ್ಲಿನ ಅಂಕಿ-ಅಂಶಗಳು ಮೂಲ ಕಾರಣವಾಗಿದೆ. ವರದಿ ಸಲ್ಲಿಕೆಗೆ ಮೊದಲೇ ಅಂಕಿ-ಅಂಶಗಳ ಸೋರಿಕೆ ಆಗಿವೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ ಸಮಿತಿ ರಚಿಸಿ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲು ಆದೇಶಿಸಲಾಗಿತ್ತು.
2013ರಲ್ಲಿ ಅಹಿಂದ ಸರ್ಕಾರ ಎಂದೇ ಬಿಂಬಿತವಾಗಿತ್ತು. ಅಲ್ಲದೆ, ಕಾಂಗ್ರೆಸ್‌ಗೆ ಅನುಕೂಲ ಆಗುವ ರೀತಿ ರಿಪೋರ್ಟ್ ತಯಾರಾಗಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಪ್ರಬಲ ಸಮುದಾಯದ ನಾಯಕರಿಂದ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ವರದಿ ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ಅಂಕಿ – ಅಂಶಗಳ ಸೋರಿಕೆ ಆಗಿರುವುದೇ ರಾಜಕೀಯ ಪಕ್ಷಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ವರದಿ ಏನು ಹೇಳುತ್ತದೆ?
ಮುಸ್ಲಿಂ ಸಮುದಾಯವೇ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಎರಡನೇ ಸ್ಥಾನದಲ್ಲಿ ದಲಿತರು, ಮೂರನೇ ಸ್ಥಾನದಲ್ಲಿ ಲಿಂಗಾಯತರು, ನಾಲ್ಕನೇ ಸ್ಥಾನದಲ್ಲಿ ಕುರುಬರು ಹಾಗೂ ಐದನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆಂದು ಮಾಹಿತಿ ಹೇಳುತ್ತದೆ. ಇದರಲ್ಲಿ ಮೀಸಲಾತಿ ಪಡೆಯುತ್ತಿರುವ ಕೆಲ ಸಮುದಾಯಗಳು ಆರ್ಥಿಕವಾಗಿ ಪ್ರಬಲವಾಗಿದ್ದಾರೆಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ರಿಪೋರ್ಟ್ ಅಂಗೀಕಾರವಾದರೆ ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರಿಪೋರ್ಟ್ ಆಧರಿಸಿ ಮೀಸಲಾತಿ ವಿಂಗಡಣೆ ಮಾಡಲಾಗುತ್ತದೆ. ಇದರಿಂದ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಕೆಲವರ ವಾದವಾಗಿದೆ. ಹೀಗಾಗಿಯೇ ಇದೊಂದು ಅವೈಜ್ಞಾನಿಕ ವರದಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಜತೆಗೆ ಪ್ರಬಲ ಸಮುದಾಯಗಳ ಸ್ವಾಮೀಜಿಗಳಿಂದಲೂ ಈ ರಿಪೋರ್ಟ್‌ಗೆ ವಿರೋಧ ವ್ಯಕ್ತವಾಗಿದೆ.
ಪ್ರಧಾನಿ ಮೋದಿಯಿಂದಲೂ ಅಸಮಾಧಾನ
ಬಿಹಾರ ರಾಜ್ಯದಲ್ಲಿ ಆಗಿರುವ ಜಾತಿ ಗಣತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಜಾತಿ ಗಣತಿಯಿಂದ ಅಲ್ಪಸಂಖ್ಯಾತರ ಹಕ್ಕು ಕಡಿಮೆ ಮಾಡಲು ಬಯಸುತ್ತಿದೆಯೇ? ನಿನ್ನೆಯಿಂದ ಕಾಂಗ್ರೆಸ್ ನಾಯಕರು ಜಿತ್ನಿ ಆಬಾದಿ ಉತ್ನಾ ಹಕ್ ಎಂದು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏನು ಯೋಚಿಸುತ್ತಿರಬಹುದು? ಅವರು ಅಲ್ಪಸಂಖ್ಯಾತರು ಮೊದಲಿಗರು ಎಂದು ಹೇಳುತ್ತಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅವರಿಗೆ ಹಕ್ಕು ಎನ್ನುತ್ತಿದ್ದರು. ಆದರೆ, ಈಗ ಕಾಂಗ್ರೆಸ್ ಬೇರೆಯದ್ದೆ ಹೇಳುತ್ತಿದೆ. ದೇಶದ ಸಂಪನ್ಮೂಲಗಳಲ್ಲಿ ಯಾರಿಗೆ ಮೊದಲ ಹಕ್ಕು ಎಂದು ಸಮುದಾಯದ ಜನಸಂಖ್ಯೆ ನಿರ್ಧರಿಸುತ್ತದೆ ಎನ್ನುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತಾರೆಯೇ? ಅಲ್ಪಸಂಖ್ಯಾತರನ್ನು ತೊಲಗಿಸಲು ಅವರು ಬಯಸುತ್ತಾರಾ? ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಗಳು ಮುಂದೆ ಬಂದು ಅವರ ಎಲ್ಲ ಹಕ್ಕುಗಳನ್ನು ತೆಗೆದುಕೊಳ್ಳಬೇಕೇ? ಇದನ್ನೆಲ್ಲ ಕೇಳಿಕೊಂಡು ಹಿರಿಯ ಕಾಂಗ್ರೆಸ್ ನಾಯಕರು ಸುಮ್ಮನೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿ ಮಾತನಾಡುವ ಧೈರ್ಯವೂ ಅವರಿಗಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
ಜಾತಿಗಣತಿ ವರದಿ ಬಿಡುಗಡೆ ಆಗಲಿ: ಬಸವರಾಜ ರಾಯರೆಡ್ಡಿ
ಜಾತಿಗಣತಿ ವರದಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ರಾಯರೆಡ್ಡಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಇದ್ದ ಕಾಲದಲ್ಲಿ ಜಾತಿಗಣತಿ ಮಾಡಲು ಕಾಂತರಾಜ್ ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿತ್ತು. ಅವರು ಕೂಡ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಆದರೆ, ಸೆಕ್ರೆಟರಿ ಸಹಿ ಮಾಡಿರಲಿಲ್ಲ ಎಂಬ ಕಾರಣಕ್ಕೆ ಅದು ಸ್ವೀಕಾರ ಆಗಿಲ್ಲ. ಅಷ್ಟರಲ್ಲಿ ಆ ಸರ್ಕಾರದ ಅವಧೊ ಕೂಡ ಮುಗಿದು ಹೋಯ್ತು ಮುಂದೆ ಬಂದ ಸರ್ಕಾರ ಕೂಡ ವರದಿ ಬಿಡುಗಡೆ ಮಾಡಲಿಲ್ಲ. ಈಗ ಜಾತಿಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ. ಶೋಷಣೆಗೆ ಒಳಗಾಗಿರುವ ಜನರು ಎಲ್ಲ ವರ್ಗದಲ್ಲೂ ಇದ್ದಾರೆ. ಅಂಥವರಿಗೆ ಸಹಾಯ ಆಗಬೇಕು. ಈ ಹಿನ್ನೆಲೆಯಲ್ಲಿ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಜಾಣ್ಮೆಯ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಮೊದಲು ವರದಿಯನ್ನು ಕೊಡಬೇಕಲ್ವಾ? ಶಾಶ್ವತ ಹಿಂದುಳಿದ ಆಯೋಗವು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಇದ್ದಾಗ ವರದಿಯನ್ನು ತಯಾರು ಮಾಡಿದ್ದರು. ಆದರೆ, ಅವರು ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಇದರಲ್ಲಿ ಒಂದು ಡಿಫೆಕ್ಟ್ ಇದೆ. ಆಗ ಸೆಕ್ರೆಟರಿ ಸಹಿ ಮಾಡಲಿಲ್ಲ. ಈಗಿದ್ದ ಸೆಕ್ರೆಟರಿ ಬಳಿ ಸಹಿ ಮಾಡಿಸಿ ಕೊಡಬೇಕು. ಈಗ ಇರುವ ಅಧ್ಯಕ್ಷರು ಅದನ್ನು ತಂದು ಕೊಡಬೇಕು. ಅವರು ಬಿಜೆಪಿ ನೇಮಕ ಮಾಡಿರುವ ಅಧ್ಯಕ್ಷರು, ಈಸ್ ದಿಸ್ ಪಾಸಿಬಲ್? ಎಂದು ಪ್ರಶ್ನೆ ಮಾಡಿದ್ದಾರೆ.
ನವೆಂಬರ್‌ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಗಣತಿಯ ವರದಿ ಮಂಡನೆಗೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದಿಂದ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಈಗ ಈ ವರದಿಯನ್ನು ನವೆಂಬರ್‌ನಲ್ಲಿ ಸಲ್ಲಿಸಲು ಅವರು ಮುಂದಾಗಿದ್ದಾರೆ.
ಇದನ್ನೂ ಓದಿ: Kuruba Conference: ಬೆಳಗಾವಿಯಲ್ಲಿ ಬೃಹತ್ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ
ವಿಸ್ತಾರ ನ್ಯೂಸ್‌ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ನವೆಂಬರ್‌ನಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಈ ಹಿಂದೆ ಸಲ್ಲಿಕೆ ಮಾಡಿದ್ದಾಗ ಕೆಲವೊಂದಿಷ್ಟು ಬದಲಾವಣೆ ಮಾಡಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಸಮಸ್ಯೆ ಇತ್ತು. ಈಗ ಅಂತಹ ಸಮಸ್ಯೆ ಕಂಡು ಬರುತ್ತಿಲ್ಲ. ಇದೇ ತಿಂಗಳಲ್ಲಿ ಸಮೀಕ್ಷೆ ವರದಿ ಸಲ್ಲಿಕೆ ಮಾಡುತ್ತೇವೆ. ವರದಿ ಸಲ್ಲಿಕೆಗೆ ಸರ್ಕಾರದಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಇದು ಆಯೋಗದ ಜವಾಬ್ದಾರಿಯಾಗಿದೆ. ಹೀಗಾಗಿ ಸಲ್ಲಿಕೆ ಮಾಡುತ್ತೇವೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಬಿ.ಕೆ. ಹರಿಪ್ರಸಾದ್
ಕಾಂತರಾಜ್ ವರದಿ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಿರುವ ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕು ಎಂದು ಟ್ವೀಟ್ ಮಾಡಿ ಒತ್ತಡ ಹೇರಿದ್ದಾರೆ.
ಹರಿಪ್ರಸಾದ್ ಟ್ವೀಟ್‌ನಲ್ಲೇನಿದೆ?
“ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ.
ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕಿದೆ.
“ಇಂಡಿಯಾ” ಮೈತ್ರಿಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ನಡೆ ತೋರಿದ್ದು, ಅಭಿನಂದನೀಯ.
ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದು ಬಿ.ಕೆ. ಹರಿಪ್ರಸಾದ್ ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಹಾರ ಸಿಎಂಗೆ ನನ್ನ ಧನ್ಯವಾದ
ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕಾಗಿ ಅಲ್ಲಿನ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಜಾತಿಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿ ಅವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ತಪ್ಪು – ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆಯೋ? ಇಲ್ಲವೋ? ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಣ ಖರ್ಚು ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ಚರ್ಚೆಗೆ ಅವಕಾಶ ನೀಡಬೇಕು.
ರಾಜ್ಯದಲ್ಲಿ ಯಾವಾಗ ಬಿಡುಗಡೆ ಮಾಡುತ್ತಾರೆಯೋ ಅದನ್ನು ಸರ್ಕಾರ ಕೇಳಬೇಕು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ. ಯಾವುದೇ ಜಾತಿ ಒತ್ತಡ ಹೇರಲಿ, ಮೊದಲು ಬಿಡುಗಡೆ ಮಾಡಬೇಕು. ಆಮೇಲೆ ಯಾರಿಗಾದರೂ ಅನ್ಯಾಯವಾದರೆ ಸರಿ ಮಾಡಬಹುದು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿ ಆಗಬೇಕು ಎಂದಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
ಜಾತಿ ಗಣತಿಯನ್ನು ಬಿಡುಗಡೆ ಮಾಡಬೇಕು ಎಂಬ ನನ್ನ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ಟಾರ್ಗೆಟ್ ಮಾಡುವುದು ಏನಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ
Sagara News: ಸಾಗರದಲ್ಲಿ ತಲ್ವಾರ್ ಝಳಪಿಸಿ, ಹಿಂದು ವಿರೋಧಿ ಘೋಷಣೆ; ಮೂವರ ಬಂಧನ
Sagara News: ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಅನ್ಯ ಕೋಮಿನ ಯುವಕರು ತಲ್ವಾರ್ ಝಳಪಿಸಿ, ಪ್ರಚೋದನಕಾರಿ ಘೋಷಣೆ ಕೂಗಿದ್ದರು.
ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆ, ಕಲ್ಲು ತೂರಾಟ ನಡೆದ ಬೆನ್ನಲ್ಲೇ ಜಿಲ್ಲೆಯ ಸಾಗರದಲ್ಲೂ ಹಿಂದೂ ವಿರೋಧಿ ಘೋಷಣೆ ಕೂಗಿ ಅನ್ಯ ಸಮುದಾಯದ ಕೆಲ ಯುವಕರು ತಲ್ವಾರ್ ಝಳಪಿಸಿರುವ ಘಟನೆ ನಡೆದಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣಾ ವೇದಿಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿ, ಮೆರವಣಿಗೆಗೆ ಬಳಸಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಸಾಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಅನ್ಯ ಕೋಮಿನ ಯುವಕರು ತಲ್ವಾರ್ ಝಳಪಿಸಿ, ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಇದಕ್ಕೆ ಹಿಂದುಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದವು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮಾದರಿಯಲ್ಲಿಯೇ ಸಾಗರದಲ್ಲಿ ಬೃಹತ್ ತಲ್ವಾರ್ ಮಾದರಿಯ ದ್ವಾರ ಅಳವಡಿಸಿರುವುದು ಕಂಡುಬಂದಿದೆ.
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಕೆ.ಎಚ್.ಸುದೀಂದ್ರ ಮಾತನಾಡಿ, ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾತ ಸಾಗರದಲ್ಲಿ ಸೋಮವಾರ ಮೆರವಣಿಗೆ ಹಮ್ಮಿಕೊಂಡಿತ್ತು. ಆದರೆ, ಈ ವೇಳೆ ಹಿಂದುಗಳ ತೇಜೋವಧೆ ಹಾಗೂ ಬೆದರಿಕೆ ಒಡ್ಡುವ ರೀತಿಯಲ್ಲಿ ಕೆಲವರು ವರ್ತಿಸಿರುವುದನ್ನು ನಾವು ಖಂಡಿಸುತ್ತೇವೆ. ಇಂತಹ ಕುಚೇಷ್ಟೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿ, ದ್ವೇಷ ಮೂಡಲು ಕಾರಣವಾಗುತ್ತಿದೆ. ಹಿಂದು ವಿರೋಧಿ ಘೋಷಣೆ ಕೂಗಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | CM Siddaramaiah : ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ; ಸಿದ್ದರಾಮಯ್ಯ ಎಚ್ಚರಿಕೆ
ಎನ್‌ಕೌಂಟರ್ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್ ಎಂದ ಎಸ್ಪಿ
ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರು ಎನ್‌ಕೌಂಟರ್ (Police Encounter) ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು (Fake News) ಹರಡಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಎನ್‌ಕೌಂಟರ್ ನಡೆದಿಲ್ಲ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ (Shivamogga SP Mithun Kumar) ಸ್ಪಷ್ಟಪಡಿಸಿದ್ದಾರೆ. ಈ ರೀತಿಯಾದ ಸುಳ್ಳು ಸುದ್ದಿಯನ್ನು ಫಾರ್ವರ್ಡ್ ಮಾಡಿ ಸಮಾಜದಲ್ಲಿ ಅಶಾಂತಿ ಹರಡಿಸುವ ಪ್ರಯತ್ನ ನಡೆಸಿದ ಅಜ್ಗರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಇದೇ ವೇಳೆ ಮುಸ್ಲಿಮರ ಮೆರವಣಿಗೆಯಲ್ಲಿ (Muslims Procession) ಬಳಸಿದ್ದು ಆಟಿಕೆಯ ತಲವಾರ್ (Toy Talwar) ಎಂದು ಅವರು ಸ್ಪಷ್ಟಪಡಿಸಿದರು.
ಶಿವಮೊಗ್ಗ ಪೊಲಿಸರು ಒಬ್ಬ ಆರೋಪಿಯನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಹೇಳುವ ಚಿತ್ರ, ವರದಿ, ವಿಡಿಯೊಗಳು ಬೆಳಗ್ಗಿನಿಂದ ಹರಿದಾಡುತ್ತಿದ್ದವು. ಇದು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸದ್ದು ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಶಿವಮೊಗ್ಗ ಪೊಲೀಸರು ಶಿವಮೊಗ್ಗದಲ್ಲಿ ಈ ಫೋಟೊ ಮತ್ತು ಸುದ್ದಿ ಹರಡಲು ಯಾರು ಕಾರಣ ಎಂದು ಹುಡುಕಾಡಿದರು. ಕೊನೆಗೆ ಈ ಚಿತ್ರ ಮತ್ತು ವರದಿಯನ್ನು ಫಾರ್ವರ್ಡ್ ಮಾಡಿದ್ದು ಅಜ್ಗರ್ ಎಂಬಾತ ಎಂದು ತಿಳಿದುಬಂತು. ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇಷ್ಟು ಮಾತ್ರವಲ್ಲ, ಯಾರೆಲ್ಲ ಈ ಸುಳ್ಳು ಸುದ್ದಿಯನ್ನು ಫಾರ್ವರ್ಡ್ ಮಾಡಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದರು. ಫಾರ್ವರ್ಡ್ ಆಗಿದ್ದ ವಿಡಿಯೋ ಡಿಲಿಟ್ ಮಾಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎಸ್‌ಪಿ
ʻʻಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಸಹಜ ಸ್ಥಿತಿ ಮರುಕಳಿಸಿದೆ. ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ 24 ಕೇಸು ದಾಖಲಾಗಿದೆ. ಒಟ್ಟು 60 ಜನರನ್ನು ಬಂಧಿಸಲಾಗಿದೆ. ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ. ಸಾರ್ವಜನಿಕರು ಸುಳ್ಳು ಸುದ್ದಿ ನಂಬಬೇಡಿʼʼ ಎಂದು ವಿನಂತಿಸಿರುವ ಎಸ್‌ಪಿ ಮಿಥುನ್ ಕುಮಾರ್ ಅವರು, ಇನ್ನೂ ಹಲವರನ್ನು ಬಂಧಿಸಲಿದ್ದೇವೆ. ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಹೊರಗಿನಿಂದ ಬಂದವರ ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ಸಾಕ್ಷಿಗಳು ನಮಗೆ ಸಿಕ್ಕಿವೆ. ಯಾರು ಕಾರಣಕರ್ತರಿದ್ದಾರೆ ಅವರ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮೆರವಣಿಗೆಯಲ್ಲಿ ಮಚ್ಚು, ಲಾಂಗು ತೋರಿಸಿದವರ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ವೇಳೆ ಕಾಣಿಸಿಕೊಂಡ ಹೊರ ಜಿಲ್ಲೆ ಕಾರುಗಳ ರಹಸ್ಯ ಬಯಲು
ಮೆರವಣಿಗೆಯಲ್ಲಿ ಜಳಪಿಸಿದ ಕತ್ತಿ ಒರಿಜಿನಲ್ ಅಲ್ಲ, ಆಟಿಕೆ
ಮಚ್ಚು, ಲಾಂಗ್ ತೋರಿಸಿದವರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು, ಮೆರವಣಿಗೆಯಲ್ಲಿ ಕತ್ತಿಗಳನ್ನು ಝಳಪಿಸಿರುವುದಕ್ಕೆ ಆಕ್ಷೇಪ ಮಾಡಲಾಗಿದೆ. ಆದರೆ, ಕೆಲವು ಕಡೆ ಆಟಿಕೆ ಕತ್ತಿಗಳನ್ನು ತರಲಾಗಿದೆ. ಇದು ಒರಿಜಿನಲ್ ಕತ್ತಿ ಅಲ್ಲ ಎಂಬುದು ತಿಳಿದು ಬಂದಿದೆ. ಆಕಸ್ಮಾತ್ ಒರಿಜಿನಲ್ ಕತ್ತಿ ಎಂದು ಕಂಡು ಬಂದರೆ, ಅಂತಹ ವಿಡಿಯೋ ನನಗೆ ಕಳಿಸಿ. ನಾನು ಪರಿಶೀಲನೆ ನಡೆಸಿ ತಿಳಿಸುತ್ತೇನೆ. ಆದರೆ, ಯಾವುದೇ ಸುಳ್ಳು ಸುದ್ದಿ ವಿಡಿಯೋಗಳನ್ನು ನಂಬಬೇಡಿ ಎಂದು ಅವರು ಹೇಳಿದರು.
ʻʻರಾಗಿಗುಡ್ಡದಲ್ಲಿ ಮೆರವಣಿಗೆ ದಿನ ಎರಡು ಮಾರುತಿ ವ್ಯಾನ್ ಬಂದಿರುವ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅವರು ನ್ಯಾಮತಿಯಿಂದ ಮೆರವಣಿಗೆ ನೋಡಲು ಬಂದಿದ್ದವರಾಗಿದ್ದರು. ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಜರುಗಿಸಲಾಗುವುದುʼʼ ಎಂದು ಕೂಡಾ ಎಚ್ಚರಿಕೆ ನೀಡಿದರು.
ಕರ್ನಾಟಕ
Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ
Old Pension Scheme : ರಾಜ್ಯದಲ್ಲೇ ಸದ್ಯವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಮೈಸೂರು: ರಾಜ್ಯದಲ್ಲಿ ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ (Old Pension Scheme) ಜಾರಿಯಾಗಲಿದೆ. ಈ ಮೂಲಕ ಸದ್ಯವೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Good News for Govt Employees) ಸಿಗಲಿದೆ ಎಂದು ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress manifesto) ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡುವುದಾಗಿ ಹೇಳಿತ್ತು. ಅದರಂತೆ ನಡೆದುಕೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಪಿಂಚಣಿ ವ್ಯವಸ್ಥೆಯ (New Pension Scheme) ವಿರುದ್ಧ ದೊಡ್ಡ ಮಟ್ಟದ ಆಕ್ರೋಶವಿದೆ. ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಆಗಾಗ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲೇ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ ಮಂಡಿಸಿದ್ದರು. ಬಿಜೆಪಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವನ್ನು ತಳೆದಿರಲಿಲ್ಲ. ಆದರೆ, ಕಾಂಗ್ರೆಸ್ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಪ್ರಕಟಿಸಿತ್ತು. ಇದೀಗ ಪಕ್ಷ ಗೆಲುವು ಸಾಧಿಸಿದ್ದರಿಂದ ಅದು ಆ ಬೇಡಿಕೆಯನ್ನು ಈಡೇರಿಸಲಿದೆ ಎಂದು ಮಧು ಬಂಗಾರಪ್ಪ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.
ಮುಂದಿನ ವರ್ಷದಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್
ರಾಜ್ಯದಲ್ಲಿ ಮುಂದಿನ ವರ್ಷದಿಂದ 600 ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ತೆರೆಯಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ಸೋಮವಾರ ವಿಶ್ವನಾಥಪುರದಲ್ಲಿ ಹೇಳಿದರು. ಜಿಲ್ಲಾಡಳಿತ ಮತ್ತು ಜಿಪಂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಯ ಆವರಣದಲ್ಲಿ ʻನನ್ನ ಶಾಲೆ ನನ್ನ ಕೊಡುಗೆʼಯಡಿಯಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಮಾದರಿ ಸರಕಾರಿ ಶಾಲೆ ಯೋಜನೆ ಉದ್ಘಾಟನೆ ಮತ್ತು ನೂತನ ಶಾಲಾ ಕೊಠಡಿಗಳು ಹಾಗೂ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಸ್‌ಆರ್ ಅನುದಾನದಡಿಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರದ ಪ್ರಯತ್ನಗಳು ಕಾರ್ಯರೂಪದಲ್ಲಿದೆ. 1 ರಿಂದ 12 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲು ಹಾಗೂ ಮೂಲ ಸೌಲಭ್ಯಗಳನ್ನು ಒಳಗೊಂಡ 600 ಕೆ.ಪಿ.ಎಸ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿಎರಡು ಗ್ರಾಮಗಳಿಗೆ ಒಂದರಂತೆ 2000 ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಿಸಲು ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ: Shivamogga Violence : ನಾವು ತ್ರಿಶೂಲ ಹಿಡ್ಕೊಳಲ್ವಾ? ಹಾಗೆ ಅವರು ತಲ್ವಾರ್ ಹಿಡಿದಿದ್ದಾರೆ ಅಷ್ಟೆ; ಮಧು ಬಂಗಾರಪ್ಪ
ಸರ್ಕಾರಿ ಶಾಲೆಗಳಲ್ಲಿಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ . ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ 2 ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಈ ವರ್ಷ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ 2 ಪೂರಕ ಪರೀಕ್ಷೆಗಳನ್ನು ನಡೆಸಿದ್ದೆವು. ಇದರ ಪ್ರತಿಫಲವಾಗಿ 4200 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ವಿವರಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ 13,500 ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಉಡುಪಿ
karnataka weather forecast : ಮುಕ್ಕಾಲು ರಾಜ್ಯಕ್ಕೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ
Rain News : ರಾಜ್ಯಾದ್ಯಂತ ಮುಂಗಾರು ದುರ್ಬಲಗೊಂಡಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ (karnataka weather forecast) ನಿರೀಕ್ಷೆ ಇದೆ. ಉಳಿದಂತೆ ಒಣ ಹವೆ ಇರಲಿದೆ.
ಬೆಂಗಳೂರು: ಸಕ್ರಿಯವಾಗಿದ್ದ ಮುಂಗಾರು ರಾಜ್ಯದಲ್ಲಿ (karnataka weather forecast) ಮತ್ತೆ ದುರ್ಬಲಗೊಂಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ವರುಣ ಕೈಕೊಟ್ಟಿದ್ದಾನೆ. ಮುಂದಿನ 24 ಗಂಟೆಯಲ್ಲಿ ಒಣ ಹವೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಜಿಲ್ಲೆಯಾದ ತುಮಕೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಒಣಹವೆ ಮೇಲುಗೈ ಸಾಧಿಸುತ್ತದೆ. ಬೆಂಗಳೂರು ನಗರ ಪ್ರದೇಶದಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಬದಲಿಗೆ ಒಣಹವೆ ಇರಲಿದೆ.
ಇದನ್ನೂ ಓದಿ: Mangaluru News : ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದು ಮಹಿಳೆ ಸಾವು
ಉತ್ತರ ಒಳನಾಡಲ್ಲಿ ಲಘು ಮಳೆ
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಹಾವೇರಿ, ಗದಗ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಗುಡುಗು ಮಳೆ
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಚದುರಿದ ಮಳೆ ಸುರಿಯಬಹುದು.
ಇನ್ನು ರಾಜ್ಯದಲ್ಲಿ ಸೋಮವಾರ ಕಲಬುರಗಿಯ ಅಡಕಿಯಲ್ಲಿ 3 ಸೆಂ.ಮೀ, ಮುಧೋಳದಲ್ಲಿ 2 ಸೆಂ.ಮೀ ಹಾಗೂ ಉತ್ತರ ಕನ್ನಡದ ಕದ್ರಾ, ಮಂಕಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ದೇಶ20 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ16 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್23 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ22 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್23 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ಕ್ರೈಂ12 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?