ಕರ್ನಾಟಕ ಎಲೆಕ್ಷನ್
Karnataka Election : ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದ್ದಕ್ಕೆ ಮನೆಯ ಕಂಪೌಂಡ್ ಧ್ವಂಸ
ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದ್ದಕ್ಕೆ ಮನೆಯ ಕಂಪೌಂಡ್ ಧ್ವಂಸಗೊಳಿಸಿದ ಘಟನೆ (Karnataka Election) ಬೆಂಗಳೂರಿನಲ್ಲಿ ನಡೆದಿದೆ. ಆಗಿದ್ದೆನು? ಇಲ್ಲಿದೆ ವಿವರ.
ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದಕ್ಕೆ ಮನೆ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ (Karnataka Election) ನಿಂದಿಸಿದ ಬಿಜೆಪಿಯ ಸ್ಥಳೀಯ ಮುಖಂಡನಿಗೆ ಮಹಿಳೆಯಿಂದ ಕಪಾಳಮೊಕ್ಷವೂ ನಡೆದಿದೆ.
ಜಿಪಂ ಸದಸ್ಯ ಉಮೇಶ್ ಎಂಬುವರಿಗೆ ಚಿಕ್ಕಗೊಲ್ಲರಹಟ್ಟಿ ರಂಗಮ್ಮ ಎಂಬಾಕೆಯಿಂದ ಕಪಾಳಮೋಕ್ಷವಾಗಿದೆ. ರಂಗಮ್ಮ ಹಾಗೂ ಪುತ್ರ ನವೀನ್ ಚಿಕ್ಕಗೊಲ್ಲರಹಟ್ಟಿಯ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಮೂರು ದಿನದ ಹಿಂದೆ ಮನೆಗೆ ನವೀನ್ ಕಾಂಪೌಂಡ್ ನಿರ್ಮಿಸಿದ್ದರು.
ಈ ಹಿಂದೆ ಬಿಜೆಪಿ ನಾಯಕ ಉಮೇಶ ಜೊತೆಗಿದ್ದ ರಂಗಮ್ಮನ ಪುತ್ರ ನವೀನ್, ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಬಿಜೆಪಿ ಸ್ಥಳೀಯ ನಾಯಕರು ಏಕಾಏಕಿ ಹೋಗಿ ಅಂಗನವಾಡಿ ಜಾಗದಲ್ಲಿದ್ದ ಮನೆಯ ಕಾಂಪೌಂಡ್ ತೆರವುಗೊಳಿಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ರಂಗಮ್ಮನ ಮೇಲೆ ಉಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಸಂದರ್ಭ ಹಲ್ಲೆ ಯತ್ನ ನಡೆಯಿತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ
Karnataka Election: ಎಎಪಿಯಿಂದ 300 ಯೂನಿಟ್ ವಿದ್ಯುತ್ ಉಚಿತ, 3000 ರೂ. ನಿರುದ್ಯೋಗ ಭತ್ಯೆ, ಒಪಿಎಸ್ ಜಾರಿ ಗ್ಯಾರಂಟಿ
Aam Aadmi Party: ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, 3,000 ರೂಪಾಯಿ ನಿರುದ್ಯೋಗ ಭತ್ಯೆ, ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಸೇರಿ ಪ್ರಮುಖ 10 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ರಾಜ್ಯ ಆಮ್ ಆದ್ಮಿ ಪಕ್ಷ ಭರವಸೆ ನೀಡಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ 4 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ (ಎಎಪಿ) ಕೂಡ ವಿವಿಧ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಜನತೆಗೆ ತಿಂಗಳಿಗೆ 3,000 ರೂಪಾಯಿ ನಿರುದ್ಯೋಗ ಭತ್ಯೆ, ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹಳೆ ಪಿಂಚಣಿ ಯೋಜನೆ ಜಾರಿ ಮುಂತಾದ ಒಟ್ಟು 10 ವಲಯಗಳಿಗೆ ಸಂಬಂಧಿಸಿದ ಪ್ರಮುಖ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಆಮ್ ಆದ್ಮಿ ಪಾರ್ಟಿಯಿಂದ 10 ಗ್ಯಾರಂಟಿಗಳ ಪಟ್ಟಿ ಬಿಡುಗಡೆ
ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಗ್ಯಾರಂಟಿಗಳ ಪಟ್ಟಿಯನ್ನು ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, “ಆಮ್ ಆದ್ಮಿ ಪಾರ್ಟಿಯು ಸುಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷವಲ್ಲ. ನಾವು ಆಶ್ವಾಸನೆಗಳ ಬದಲು ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಇದೊಂದು ಕರಾರುಪತ್ರವಾಗಿದ್ದು, ಇವೆಲ್ಲವನ್ನೂ ಶೇ. 100ರಷ್ಟು ಈಡೇರಿಸುತ್ತೇವೆ. ಪ್ರಣಾಳಿಕೆಯಲ್ಲಿದ್ದ ಎಲ್ಲ ಗ್ಯಾರಂಟಿಗಳನ್ನು ದೆಹಲಿಯಲ್ಲಿ ಈಡೇರಿಸಿದ್ದೇವೆ. ಪಂಜಾಬ್‌ನಲ್ಲಿ ಕೂಡ ಒಂದೊಂದಾಗಿ ಜಾರಿಗೆ ಬರುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
ಕರ್ನಾಟಕದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಜನತೆಗೆ ತಿಂಗಳಿಗೆ 3,000 ರೂಪಾಯಿ ನಿರುದ್ಯೋಗ ಭತ್ಯೆ, ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹಳೆ ಪಿಂಚಣಿ ಯೋಜನೆ ಜಾರಿ ಮುಂತಾದ ಒಟ್ಟು 10 ವಲಯಗಳಿಗೆ ಸಂಬಂಧಿಸಿದ ಪ್ರಮುಖ ಗ್ಯಾರಂಟಿಗಳನ್ನು ಇಂದು ಘೋಷಿಸಲಾಗುತ್ತಿದೆ. ಜತೆಗೆ, ಬೆಂಗಳೂರು ಹಾಗೂ ರಾಜ್ಯದ ಪ್ರಾದೇಶಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ಯಾರಂಟಿಗಳನ್ನು ಘೋಷಿಸುತ್ತಿದ್ದೇವೆ” ಎಂದು ಹೇಳಿದರು.
“ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ 3ನೇ ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ. ಗೋವಾ ಚುನಾವಣೆಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ಮತ ಪಡೆದಿದ್ದೇವೆ. ಗುಜರಾತ್‌ನಲ್ಲಿ ಶೇ. 14ರಷ್ಟು ಮತ ಪಡೆದಿದ್ದು, ಐವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಕಾನೂನಿನ ಪ್ರಕಾರ ಅರ್ಹವಾಗಿದ್ದರೂ ಚುನಾವಣಾ ಆಯೋಗವು ಇನ್ನೂ ಇದನ್ನು ಅಧಿಕೃತವಾಗಿ ಘೋಷಿಸಿಲ್ಲ. ಸ್ಥಾನಮಾನ ಕೋರಿ ನಾವು ಸಲ್ಲಿಸಿದ್ದ ಅರ್ಜಿಯನ್ನು ಹಲವು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ” ಎಂದು ಸಂಜಯ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ ಪ್ರಣಾಳಿಕೆ ರಚಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಈಗಾಗಲೇ ಸಾವಿರಾರು ಸಲಹೆಗಳು ಬಂದಿವೆ. ಬೇರೆಬೇರೆ ವರ್ಗಗಳ ಜನಸಾಮಾನ್ಯರು, ಯುವಜನತೆ, ಮಹಿಳೆಯರು, ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಯಾವ್ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವೋ ಅವುಗಳನ್ನು ಸೇರಿಸುತ್ತಿದ್ದೇವೆ ಎಂದು ತಿಳಿಸಿದರು.
ಆಮ್ ಆದ್ಮಿ ಪಾರ್ಟಿಯ ಗ್ಯಾರಂಟಿಗಳಿಂದಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 8 ರಿಂದ 10 ಸಾವಿರ ರೂಪಾಯಿ ಉಳಿತಾಯವಾಗಲಿದೆ. ನಾವು ಇವುಗಳನ್ನು ಗ್ಯಾರಂಟಿ ಕಾರ್ಡ್ ರೂಪದಲ್ಲಿ ನೀಡುತ್ತಿದ್ದು, ಅಧಿಕಾರಕ್ಕೆ ಬಂದು ನಾವು ಇವುಗಳನ್ನು ಜಾರಿಗೆ ತರದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಜನರಿಗೆ ಅವಕಾಶವಿರುತ್ತದೆ. ರಾಜ್ಯದ ಪ್ರತಿಯೊಂದು ವರ್ಗದ ಜನರ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಪರಿಹಾರ ಇರಲಿದೆ” ಎಂದು ಹೇಳಿದರು.
ಇದನ್ನೂ ಓದಿ | Karnataka Elections 2023: ಚುನಾವಣೆ ಪೂರ್ವ ಸಮೀಕ್ಷೆ: ಎಬಿಪಿ ಪ್ರಕಾರ ಕಾಂಗ್ರೆಸ್, ಜೀ ನ್ಯೂಸ್ ಪ್ರಕಾರ ಬಿಜೆಪಿ ಮುನ್ನಡೆ
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್, ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ
Karnataka Election 2023 : ಮನೆಯಿಂದಲೇ ಮತದಾನಕ್ಕೆ ಡಿಕೆಶಿ ಆಕ್ಷೇಪ; ಚು. ಆಯೋಗಕ್ಕೆ ದೂರು ನೀಡಲು ನಿರ್ಧಾರ
80 ವರ್ಷ ಮೀರಿದವರು ಮತ್ತು ವಿಕಲಚೇತನರು ಮನೆಯಿಂದಲೇ ಮತದಾನ (Karnataka Election 2023) ಮಾಡಲು ಅವಕಾಶ ನೀಡುವ ಪ್ರಸ್ತಾಪ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.
ಬೆಂಗಳೂರು: ಚುನಾವಣಾ ಆಯೋಗವು ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 80 ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಒದಗಿಸಿರುವ ಕ್ರಮದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದರ ಸಾಧಕ ಭಾದಕಗಳ ಬಗ್ಗೆ ತೀವ್ರ ಮಾತುಕತೆ ನಡೆಯುತ್ತಿದೆ. ಹೆಚ್ಚಿನವರು ಇದೊಂದು ವಿಶೇಷ ಅವಕಾಶ ಎಂದು ಹೊಗಳುತ್ತಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಚುನಾವಣೆಯ ದುರ್ಬಳಕೆಗೆ ಹಾದಿಯಾಗಲಿದೆ ಎನ್ನುವುದು ಅವರ ಆಕ್ಷೇಪ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುವುದಾಗಿ ಹೇಳಿದ್ದಾರೆ.
ʻʻಅಂಗವಿಕಲರು, ವೃದ್ದರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ.. ಬಿಜೆಪಿ ಚುನಾವಣೆ ಆಯೋಗವನ್ನು ಬಳಸಿಕೊಂಡು ಚುನಾವಣೆ ದುರ್ಬಳಕೆಗೆ ಇದು ಸಹಕಾರಿಯಾಗಲಿದೆʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ವೃದ್ಧ ಹಾಗೂ ಅಂಗವಿಕಲರ ಮತದಾರರಿದ್ದಾರೆ. ಇವರು ಮನೆಯಲ್ಲೇ ಮತದಾನ ಮಾಡಿದರೆ ಅಕ್ರಮ ನಡೆಯುತ್ತದೆ. ತಮಗೆ ಬೇಕಾದಂತೆ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತದೆ.
ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹೊಸ ಮತದಾನ ಯಂತ್ರಕ್ಕೆ ಸ್ವಾಗತ
ಕರ್ನಾಟಕದ ಚುನಾವಣೆಯಲ್ಲಿ ಹೊಸ ಇವಿಎಂ ಬಳಸುವ ವಿಚಾರವನ್ನು ಸ್ವಾಗತಿಸುತ್ತೇವೆ. ಗುಜರಾತ್‌ನಲ್ಲಿ ಬಳಸಿದ ಇವಿಎಂ ಬೇಡ ಎಂದು ಹೇಳಿದ್ದೆವು, ಪತ್ರ ಬರೆದಿದ್ದೆವು. ಈಗ ನಮ್ಮನ್ನು ಕರೆದಿದ್ದಾರೆ. ಚುನಾವಣಾ ಆಯೋಗದ ಜೊತೆ ಮಾತನಾಡುತ್ತೇವೆ ಎಂದರು ಡಿ.ಕೆ. ಶಿವಕುಮಾರ್.
ʻʻಮೇ 10 ಕ್ಕೆ ಚುನಾವಣೆ ಘೋಷಣೆ ಆಗಿದೆ.. ಅದನ್ನು ಸ್ವಾಗತಿಸುತ್ತೇನೆ. ಮೊದಲೇ ದಿನಾಂಕ ಘೋಷಣೆ ಮಾಡಬೇಕಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಬೇಕೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡು ದಿನಾಂಕ ಘೋಷಣೆ ಮಾಡಿದ್ದಾರೆʼʼ ಎಂದು ಚುನಾವಣೆ ಘೋಷಣೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಹೇಳಿದರು.
ʻʻಮೇ 10 ಎನ್ನುವುದು ಭ್ರಷ್ಟಾಚಾರ ಓಡಿಸುವ ದಿನ. ಹೊಸ ದಿಕ್ಕು ಬದಲಿಸುವ ದಿನ. ಡಬಲ್ ಎಂಜಿನ್ ಫೇಲ್ ಆಗಿದೆ ಎಂದು ನಿರ್ಧಾರ ಮಾಡುವ ದಿನ. ಕಾಂಗ್ರೆಸ್ ಸರ್ಕಾರ ಬರುವ ದಿನ. ನಿಮ್ಮ ಭವಿಷ್ಯ ನಿರ್ಮಾಣ ಮಾಡುವ ದಿನ. ನಿಮ್ಮ ಭವಿಷ್ಯ ನೀವೇ ಪರಿವರ್ತನೆ ಮಾಡುವ ದಿನʼʼ ಎಂದು ಹೇಳಿದ ಅವರು, ಒಂದೇ ಹಂತದ ಚುನಾವಣೆ ಸ್ವಾಗತ ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಮುಂದೆ ಕಾಂಗ್ರೆಸ್ ಸರ್ಕಾರವೇ ಬರುವುದು ಎಂದು ನಮ್ಮ ರಾಜ್ಯದ ಅಧಿಕಾರಿಗಳಿಗೆ ಗೊತ್ತಿದೆ. ಹೀಗಾಗಿ ಅಧಿಕಾರಿಗಳು ಅವರಿಗೆ ಸಪೋರ್ಟ್ ಮಾಡಲ್ಲʼʼ ಎಂದು ಹೇಳಿದರ.
ಸಿದ್ದರಾಮಯ್ಯ ಎರಡು ಕ್ಷೇತ್ರದ ಆಯ್ಕೆ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ʻʻಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಕೊನೆ ಚುನಾವಣೆ ಎನ್ನುವ ಅವರ ಅಭಿಪ್ರಾಯವನ್ನು ನಾನ್ಯಾಕೆ ಬದಲಾವಣೆ ಮಾಡಲಿ. ನೀವುಂಟು ಅವರುಂಟು. ಸಿದ್ದರಾಮಯ್ಯ ವರುಣ ಕೇಳಿದ್ರು ವರುಣ ಕ್ಷೇತ್ರ ಪಟ್ಟಿಯಲ್ಲಿ ಕೊಟ್ಟಿದ್ದೇವೆ. ಬೇರೆ ಯಾವ ವಿಚಾರವೂ ಚರ್ಚೆಗೆ ಬಂದಿಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಕರ್ನಾಟಕ
Karnataka Elections 2023 : ಯಾರಪ್ಪಾ ಅವರು? ಗೊತ್ತಿಲ್ಲಪ್ಪ ನನಗೆ; ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಎಂದ ಎಚ್.ಡಿ ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಫೈಟ್ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದು ಎಲ್ಲಿಯವರೆಗೆ ಎಂದರೆ ಸ್ವತಃ ಎಚ್.ಡಿ. ರೇವಣ್ಣ ಅವರು ತನಗೆ ಸ್ವರೂಪ್ ಯಾರೆಂದೇ ಗೊತಿಲ್ಲ ಎಂದಿದ್ದಾರೆ!
ಹಾಸನ: ʻʻಯಾರಪ್ಪ ಅವರು? ಗೊತ್ತಿಲ್ಲಪ್ಪ ನನಗೆ ಯಾರು ಅಂತಾ.. ನನಗೆ ಗೊತ್ತಿಲ್ಲಪ್ಪ ಅದ್ಯಾರು ಅಂತʼʼ ಹೀಗೆಂದು ಹೇಳಿದ್ದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ. ಅವರು ಹಾಸನ ವಿಧಾನಸಭಾ ಕ್ಷೇತ್ರದ (Karnataka Elections 2023) ಟಿಕೆಟ್ ಆಕಾಂಕ್ಷಿ ಎಚ್.ಪಿ ಸ್ವರೂಪ್ ಅವರನ್ನು ಕುರಿತಾಗಿ ಈ ಮಾತು ಆಡಿದ್ದಾರೆ! ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಅಂತ ಎಚ್.ಡಿ. ರೇವಣ್ಣ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಹಾಸನದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಒಟ್ಟಾರೆ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಿದರು. ಮಾತುಕತೆಯ ನಡುವೆ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಪ್ರಸ್ತಾಪಕ್ಕೆ ಬಂತು.
ಆಗ ರೇವಣ್ಣ ʻʻಕುಮಾರಣ್ಣ ಹೇಳ್ತಾರೆ, ನಾವೇನ್ ಮಾಡೋಕೆ ಆಗುತ್ತೆ. ಅದು ನನಗೆ ಗೊತ್ತಿಲ್ಲ, ನನಗೆ ಅವೆಲ್ಲ ಗೊತ್ತಿಲ್ಲಪ್ಪ, ಅದೇನ್ ಗೊತ್ತಿಲ್ಲ, ನಾನ್ ಅವೆಲ್ಲ ನೋಡಿಲ್ಲ, ನೋಡೋದೂ ಇಲ್ಲʼʼ ಎಂದರು.
ಎಚ್.ಪಿ. ಸ್ವರೂಪ್ ಅವರೇ ಕುಮಾರಸ್ವಾಮಿಯರನ್ನು ಭೇಟಿಯಾಗಿದ್ದಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ,, ಸ್ವರೂಪ್ ಯಾರೆಂದು ಗೊತ್ತೇ ಇಲ್ಲ ಅಂದರು. ʻʻಯಾರಪ್ಪ ಅವರು? ಗೊತ್ತಿಲ್ಲಪ್ಪ ನನಗೆ.. ಯಾರು ಅಂತʼʼ ಅಂದರು.
ʻʻಕುಮಾರಣ್ಣನವರು ಹೇಳಿದ್ದಾರಲ್ಲ.. ಸಾಮಾನ್ಯ ಕಾರ್ಯಕರ್ತ ಯಾರೆಂದು ಗೊತ್ತಿಲ್ಲಪ್ಪ ನನಗೆ, ಅದ್ಯಾರು ಅಂತಾ ನೋಡೋಣʼʼ ಎಂದರು.
ʻʻನೋಡ್ರಿ.. ಈ ಜಿಲ್ಲೆಯೊಳಗೆ ಕಳೆದ 25 ವರ್ಷದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಜಿಲ್ಲೆಯದ್ದು ಏನಿದೆ ಅಂತಾ ನನಗೆ ಗೊತ್ತಿದೆ. ನಮ್ಮ ಮುಖಂಡರ ಬಳಿ ಕೂತ್ಕೋತತೀನಿ, ಇದ್ರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ. ನಾನು ಹೆದರಿಕೊಂಡು ಓಡಿಹೋಗೋದಿಲ್ಲ. ಈ ಸಾರಿ ಜಿಲ್ಲೆಯಲ್ಲಿ ಅಗ್ನಿಪರೀಕ್ಷೆ ಇದೆ. ಕೂತ್ಕೋತೀನಿ ನೋಡೋಣ. ಈ ಜಿಲ್ಲೆಯ ಜನರು ರೇವಣ್ಣ ಈ ಜಿಲ್ಲೆಗೆ ದುಡಿದಿದ್ದಾನೆ ಅಂದರೆ ಕೈ ಹಿಡಿಯಲಿ. ಇಲ್ಲಪ್ಪ ರೇವಣ್ಣ ದುಡಿದಿಲ್ಲ, ಈ ಜಿಲ್ಲೆಗೆ ಏನೂ ಮಾಡಿಲ್ಲ ಅಂದ್ರೆ ಸೋಲಿಸಲಿ. ಅದು ಜನತೆಗೆ ಬಿಟ್ಟಿದ್ದೇನೆʼʼ ಎಂದರು ರೇವಣ್ಣ.
ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿವೆ
ಟಿಕೆಟ್ ಫೈನಲ್ ಮಾಡುವಲ್ಲಿ ಗೊಂದಲ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻರಾಷ್ಟ್ರೀಯ ಪಕ್ಷಗಳೇ ಒದ್ದಾಡ್ತಾ ಇದ್ದಾವೆ, ನಮ್ಮದು ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷಗಳೇ ಒಂದೊಂದ್ ಸೀಟ್ ಅನೌನ್ಸ್ ಮಾಡೋಕೇ ಹಗಲು ರಾತ್ರಿ ಯೋಚನೆ ಮಾಡ್ತಾವ್ರೆ. ಕೆಲವರು ರಾಹುಲ್ ಗಾಂಧಿ ಕೇಳ್ತಾವ್ರೆ, ಕೆಲವು ಕಡೆ ನಡ್ಡಾ ಅವರನ್ನ ಕೇಳ್ತಾವ್ರೆ. ಅಮಿತ್ ಶಾ ಮೊನ್ನೆ ಚುನಾವಣೆ ಅನೌನ್ಸ್ ಆಗೋವರೆಗೆ ಮಾಡೋದಿಲ್ಲ ಅಂತಾ ಕೂತವ್ರೆ. ನಮ್ಮದು ಪ್ರಾದೇಶಿಕ ಪಕ್ಷ, ಯಾರೂ ಯೋಚನೆ ಮಾಡಬೇಕಾಗಿಲ್ಲ, ಯಾವ ರೀತಿ, ಯಾರನ್ನ ಮಾಡಬೇಕು ಅಂತಾ ಗೊತ್ತಿದೆ ನಮ್ಗೆ, ಮಾಡ್ತೀವಿʼʼ ಎಂದರು.
ಹಾಸನ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿ ಅವರಿಗೇ ಟಿಕೆಟ್ ನೀಡಬೇಕು ಎಂದು ಹಠ ಹಿಡಿದಿರುವ ಎಚ್.ಡಿ ರೇವಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರ ಜತೆಗೂ ಮಾತನಾಡಿದ್ದಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಎಚ್.ಪಿ ಸ್ವರೂಪ್‌ಗೇ ಟಿಕೆಟ್ ಕೊಡಬೇಕು ಎಂದು ಹಠ ಹಿಡಿದಿದ್ದಾರೆ. ಇದು ಕುಟುಂಬದಲ್ಲೂ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?
ಕರ್ನಾಟಕ
Karnataka Elections 2023: ಚುನಾವಣೆ ಪೂರ್ವ ಸಮೀಕ್ಷೆ: ಎಬಿಪಿ ಪ್ರಕಾರ ಕಾಂಗ್ರೆಸ್, ಜೀ ನ್ಯೂಸ್ ಪ್ರಕಾರ ಬಿಜೆಪಿ ಮುನ್ನಡೆ
Karnataka Elections 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಎಲ್ಲ ಪಕ್ಷಗಳು ಇನ್ನಿಲ್ಲದ ಸಿದ್ಧತೆ ನಡೆಸುತ್ತಿವೆ. ಇದರ ಬೆನ್ನಲ್ಲೇ, ಎಬಿಪಿ-ಸಿವೋಟರ್ ಹಾಗೂ ಜೀ ನ್ಯೂಸ್-ಮ್ಯಾಟ್ರಿಜ್ ಸಂಸ್ಥೆಗಳು ಚುನಾವಣೆ ಪೂರ್ವ ಸಮೀಕ್ಷೆ ಕೈಗೊಂಡಿವೆ. ಸಮೀಕ್ಷಾ ವರದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ನವದೆಹಲಿ/ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ, ರಾಹುಲ್ ಗಾಂಧಿ ಅನರ್ಹತೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಎಂಬುದು ಸೇರಿ ಹಲವು ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections 2023) ದಿನಾಂಕ ನಿಗದಿಯಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, 13ಕ್ಕೆ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್ ಹಾಗೂ ಜೀ ನ್ಯೂಸ್-ಮ್ಯಾಟ್ರಿಜ್ ಚುನಾವಣೆಪೂರ್ವ ಸಮೀಕ್ಷೆ ನಡೆಸಿವೆ.
ಎಬಿಪಿ-ಸಿವೋಟರ್ ವರದಿ ಹೇಳುವುದೇನು?
ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನಾಭಿಪ್ರಾಯದ ಪ್ರಕಾರ ಕಾಂಗ್ರೆಸ್ 115-127 ಸೀಟುಗಳನ್ನು ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಇನ್ನು ಬಿಜೆಪಿಗೆ 68-80 ಸೀಟು ಹಾಗೂ ಜೆಡಿಎಸ್‌ಗೆ 23-35 ಸೀಟುಗಳು ಮಾತ್ರ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕದಲ್ಲಿ ಕೈ-ಕಮಲ ಪೈಪೋಟಿ
ಬಿಜೆಪಿಗೆ ಹೆಚ್ಚು ವರದಾನವಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ತೀವ್ರ ಪೈಪೋಟಿ ಇದೆ ಎಂದು ಸಮೀಕ್ಷೆ ತಿಳಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಶೇ.44ರಷ್ಟು ಮತಗಳನ್ನು ಪಡೆದರೆ, ಬಿಜೆಪಿಯು ಶೇ.37ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 19-23 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 8-12 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ. ಇದು ಬಿಜೆಪಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಜಯ
ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ, ಮುಂಬೈ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಕ್ಷೇತ್ರಗಳು ಲಭಿಸಲಿವೆ. ಲಿಂಗಾಯತರೇ ಪ್ರಬಲವಾಗಿರುವ, ಬಿಜೆಪಿಗೆ ಹೆಚ್ಚಿನ ಬೆಂಬಲ ಇರುವ ಮುಂಬೈ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ 25-29 ಹಾಗೂ ಬಿಜೆಪಿ 21-25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ, ಕರಾವಳಿ ಭಾಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದ್ದು, 9-13 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಕಾಂಗ್ರೆಸ್ 8-12 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಕೇಂದ್ರ ಕರ್ನಾಟಕದಲ್ಲೂ ಕಾಂಗ್ರೆಸ್ (18-22) ಪ್ರಾಬಲ್ಯ ಸಾಧಿಸುವ ಲಕ್ಷಣ ಇರುವುದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ. ಬಿಜೆಪಿಯು ಈ ಭಾಗದಲ್ಲಿ 12-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Karnataka Elections 2023 : ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ಫಿಕ್ಸ್; ಚುನಾವಣೆ ಘೋಷಣೆಗೆ ಬಿಜೆಪಿ ಫುಲ್ ಖುಷ್
ಜೀ ನ್ಯೂಸ್-ಮ್ಯಾಟ್ರಿಜ್ ವರದಿ ತಿಳಿಸುವುದೇನು?
ಜೀ ನ್ಯೂಸ್-ಮ್ಯಾಟ್ರಿಜ್ ಜನಾಭಿಪ್ರಾಯ ಸಂಗ್ರಹ ವರದಿ ಪ್ರಕಾರ, ಬಿಜೆಪಿಯೇ ಈ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು ಚುನಾವಣೆಯಲ್ಲಿ 96-106, ಕಾಂಗ್ರೆಸ್ 88-98 ಹಾಗೂ ಜೆಡಿಎಸ್ 23-33 ಹಾಗೂ ಪಕ್ಷೇತರ ಅಥವಾ ಇತರೆ 02-07 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ. ಸಮೀಕ್ಷೆಗಾಗಿ ಸಂಸ್ಥೆಗಳು 56 ಸಾವಿರ ಜನರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ.
ಬಿಎಸ್‌ವೈ ಬದಲಾವಣೆ ಬೀರುವ ಪ್ರಭಾವವೇನು?
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ಬಿಜೆಪಿಗೆ ಅನುಕೂಲವಾಗುತ್ತದೆಯೇ ಎಂಬುದು ಸೇರಿ ಹಲವು ಪ್ರಶ್ನೆ ಕೇಳಲಾಗಿತ್ತು. ಇವುಗಳಲ್ಲಿ ಬಿಎಸ್‌ವೈ ಕುರಿತು ಕೇಳಿದ ಪ್ರಶ್ನೆಗೆ, ಶೇ.31ರಷ್ಟು ಜನ ಬಿಜೆಪಿಗೆ ಅನುಕೂಲವಾಗಲಿದೆ ಎಂದರೆ, ಶೇ.21ರಷ್ಟು ಮಂದಿ ಅನನುಕೂಲ ಆಗಲಿದೆ ಎಂದು ಹೇಳಿದ್ದಾರೆ.
ಮೋದಿ ಗೇಮ್‌ಚೇಂಜರ್ ಆಗುವರೇ?
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೇಮ್‌ಚೇಂಜರ್ ಆಗುವರೇ ಎಂಬ ಪ್ರಶ್ನೆಗೆ ಶೇ.31ರಷ್ಟು ನಾಗರಿಕರು ಹೌದು ಎಂದರೆ, ಶೇ.32ರಷ್ಟು ಮಂದಿ ಆಗುವುದಿಲ್ಲ ಎಂದಿದ್ದಾರೆ. ಇನ್ನು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುವರೇ ಎಂಬ ಪ್ರಶ್ನೆಗೆ, ಶೇ.30ರಷ್ಟು ಜನ ಹೌದು ಹಾಗೂ ಶೇ.26ರಷ್ಟು ಮಂದಿ ಇಲ್ಲ ಎಂದಿದ್ದಾರೆ.
ಹಾಗೆಯೇ, ಕೇಂದ್ರದ ಯೋಜನೆಗಳು ಕರ್ನಾಟಕದ ಜನತೆಗೆ ತೃಪ್ತಿ ತಂದಿವೆಯೇ ಎಂಬ ಪ್ರಶ್ನೆಗೆ ಶೇ.37ರಷ್ಟು ಮಂದಿ ಹೌದು ಎಂದು, ಶೇ.24ರಷ್ಟು ನಾಗರಿಕರು ಇಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಕೊನೆಯದಾಗಿ, ರಾಹುಲ್ ಗಾಂಧಿ ಅವರು ಕೈಗೊಂಡ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೆರವಾಗಲಿದೆ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶೇ.22ರಷ್ಟು ಜನ ಹೌದು ಎಂದಿದ್ದಾರೆ. ಹಾಗೆಯೇ, ಶೇ.41ರಷ್ಟು ಮಂದಿ ನೆರವಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ13 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ7 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ14 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?