ಆರೋಗ್ಯ
H3N2 Influenza: ಕೋವಿಡ್ ಬಳಿಕ H3N2 ವೈರಸ್ ಭೀತಿ; ICMRನಿಂದ ಹೈ ಅಲರ್ಟ್ ಘೋಷಣೆ
H3N2 Influenza: ರಾಜ್ಯದಲ್ಲಿ ಹೊಸ ವೈರಸ್ H3N2 ಆತಂಕ ಹೆಚ್ಚಾಗಿದ್ದು, ಈ ಕುರಿತು ಬೆಂಗಳೂರಿನಲ್ಲಿ ಸಚಿವ ಸುಧಾಕರ್ ಸೋಮವಾರ (ಮಾ.6) ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸೋಂಕು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಿದ್ದಾರೆ.
ಬೆಂಗಳೂರು: ನೋವೆಲ್ ಕೊರೊನಾ ವೈರಸ್ ಬಳಿಕ ಮತ್ತೊಂದು ವೈರಸ್ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. H3N2 ವೈರಸ್ ಭೀತಿ (H3N2 Influenza) ಕುರಿತು ಎಚ್ಚರದಿಂದ ಇರುವಂತೆ ICMR (Indian Council of Medical Research) ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ.
ಐಸಿಎಂಆರ್ ಸೂಚನೆಯಂತೆ ಹೊಸ ವೈರಸ್ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ಯಾರಲ್ಲೂ H3N2 ವೈರಸ್ ಕಾಣಿಸಿಕೊಂಡಿಲ್ಲ. ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ಬಹುಬೇಗ ಹರಡುತ್ತಿದೆ. ಹೀಗಾಗಿ ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.
ಹೊಸ ವೈರಸ್ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, H3N2 ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಗಮನ ಕೊಡುವಂತೆ ತಿಳಿಸಿದೆ. ಈ ಬಗ್ಗೆ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಜತೆಗೆ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು ಎಂದಿದ್ದಾರೆ. ಸೋಂಕಿನ ಲಕ್ಷಣ ದೀರ್ಘ ಕಾಲದ ಕೆಮ್ಮು ಇರಬಹುದು ಎಂದು ಪ್ರಾರಂಭಿಕ ವರದಿಯಲ್ಲಿ ತಿಳಿದು ಬಂದಿದೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಯಾವೆಲ್ಲ ಕ್ರಮ ತೆಗೆದು ಕೊಳ್ಳಬೇಕು, ಚಿಕಿತ್ಸೆ ಏನು ಎಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈ ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳೆಯರಿಗಾಗಿ ಸೈಕ್ಲೋಥಾನ್‌ಗೆ ಚಾಲನೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಮುಂಜಾನೆ 8:30ಕ್ಕೆ ವಿಧಾನಸೌಧದಿಂದ- ಆರೋಗ್ಯ ಸೌಧದವರೆಗೆ ಸೈಕ್ಲೋಥಾನ್ ಆಯೋಜನೆ ಮಾಡಲಾಗಿತ್ತು. ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಅಡಿಬರಹದೊಂದಿಗೆ ಸೈಕ್ಲೋಥಾನ್‌ಗೆ ಸಚಿವ ಸುಧಾಕರ್ ಚಾಲನೆ ನೀಡಿದರು.
ಈ ಸಂಬಂಧ ಮಾತನಾಡಿದ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ವಿಶ್ವ ಮಹಿಳಾ ದಿನದ ಅಂಗವಾಗಿ ಸೈಕ್ಲೋಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಕೌಟುಂಬಿಕ ಜವಾಬ್ದಾರಿಗಳಲ್ಲಿ ಮಹಿಳೆಯರು ಅವರ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಒಳ್ಳೆಯ ಊಟ ಸೇವನೆ, ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Raichur RIMS Hospital: ಕಾಕ್ಲೇರ್ ಪ್ಲಾಂಟ್ ಸ್ಕೀಂ ಅಡಿ ಇಬ್ಬರು ಪುಟ್ಟ ಬಾಲಕರಿಗೆ ಸರ್ಜರಿ; ರಿಮ್ಸ್ ವೈದ್ಯರ ಸಾಧನೆ
ಹೀಗಾಗಿ ಆರೋಗ್ಯ ಇಲಾಖೆ ಸೈಕ್ಲೋಥಾನ್ ಮೂಲಕ ಅರಿವು ಕಾರ್ಯಕ್ರಮ ಮೂಡಿಸಿದೆ. ಮಹಿಳೆಯರು ಸ್ವಂತ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾನ್ಸರ್, NCDಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಇದನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
ಆರೋಗ್ಯ
Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಶೀತ ನೆಗಡಿ ಆದಾಗ ಕೆಲವು ಹಣ್ಣಗಳ ಸೇವನೆ ಸೂಕ್ತವಲ್ಲ. ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
ಶೀತ, ನೆಗಡಿ (Cold, runny nose) ಆದಾಗ, ಮೂಗು ಹಿಡಿದುಕೊಂಡು ಸೀನುತ್ತಾ, ಅಯ್ಯೋ, ನನ್ನ ಶತ್ರುವಿಗೂ ಶೀತ ನೆಗಡಿ ಆಗೋದು ಮಾತ್ರ ಬೇಡಪ್ಪಾ ಅನ್ನುವಷ್ಟು ಕಿರಿಕಿರಿ ಆಗೋದು ಸಹಜ. ʻಔಷಧಿ ತೆಗೆದುಕೊಳ್ಳದಿದ್ರೆ ಒಂದು ವಾರದಲ್ಲಿ ಶೀತ ಕಡಿಮೆಯಾಗುತ್ತೆ, ಔಷಧಿ ತೆಗೊಂಡ್ರೆ ಒಂದೇ ವಾರದಲ್ಲಿ ಶೀತ ಮಾಯʼ ಎಂಬ ಜೋಕುಗಳೂ ಜನಜನಿತ. ʻಶೀತ ಬಂತೆಂದು ಮೂಗೇ ಕೊಯ್ದುಕೊಂಡರೆ ಆದೀತೇʼ ಎಂಬ ನುಡಿಗಟ್ಟೂ ಚಾಲ್ತಿಯಲ್ಲಿರುವುದು ನಮಗೆ ಗೊತ್ತು. ಇಂತಿಪ್ಪ ಶೀತದ ಮಹಾತ್ಮೆಯನ್ನು ಎಷ್ಟು ವಿವರಿಸಿದರೂ ಸಾಲದು. ಯಾಕೆಂದರೆ, ಎಷ್ಟೇ ಔಷಧಿ, ಮನೆಮದ್ದು ಮಾಡಿದರೂ ಶೀತ ಮಾತ್ರ ಅಷ್ಟು ಸುಲಭದಲ್ಲಿ ಹೋಗದು. ಆದರೆ, ಬಹಳಷ್ಟು ಸಾರಿ ನಮಗೆ, ಶೀತ, ನೆಗಡಿ ಆಗಿದ್ದಾಗ ಎಂಥ ಆಹಾರ ತಿಂದರೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ವಿಧವಾಗಿ ತಮ್ಮ ಜ್ಞಾನವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವವರೇ, ಸಲಹೆ ಕೊಡುವವರೇ. ಹಾಗಾದರೆ, ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
1. ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳಾದ ಮುಸಂಬಿ, ನಿಂಬೆ, ಕಿತ್ತಳೆ ಮತ್ತಿತರ ಹಣ್ಣುಗಳು ವಿಟಮಿನ್ ಸಿಯಿಂದ ಶ್ರೀಮಂತವಾದ ಹಣ್ಣುಗಳು. ವಿಟಮಿನ್ ಸಿ ಶೀತ, ನೆಗಡಿಗೆ ಒಳ್ಳೆಯದು ನಿಜ. ಆದರೆ, ಮುಖ್ಯವಾಗಿದು ಶೀತ ನೆಗಡಿಗೂ ಮುನ್ನ ಇಂತಹ ಹಣ್ಣುಗಳನ್ನು ತಿನ್ನುತ್ತಿದ್ದರೆ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿದ್ದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಶೀತ ನೆಗಡಿ ನಮ್ಮ ಬಳಿ ಅಷ್ಟು ಸುಲಭವಾಗಿ ಸುಳಿಯದು. ಆದರೆ, ಶೀತ, ನೆಗಡಿ ಅತಿಯಾದಾಗ ಇಂತಹ ಹಣ್ಣುಗಳನ್ನು ತಿಂದರೆ ನೆಗಡಿ ಅತಿಯಾಗುವ ಸಂಭವವೂ ಇದೆ. ಕಾರಣವೇನೆಂದರೆ, ಇದರಲ್ಲಿರುವ ಆಸಿಡ್ ಅಂಶ ಶೀತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಅದಕ್ಕಾಗಿ, ಶೀತ ಅಥವಾ ನೆಗಡಿಯಾದ ಮೇಲೆ ಈ ಹಣ್ಣುಗಳನ್ನು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.
2. ಅನನಾಸು: ಕೆಲವು ಮಂದಿಗೆ ಅನನಾಸಿನಲ್ಲಿರುವ ಬ್ರೊಮೆಲನಿನ್ ಎಂಬ ಕಿಣ್ವವು ಅಲರ್ಜಿಯನ್ನು ತರುವ ಸಂಭವ ಇರುತ್ತದೆ. ಶೀತದ ಜೊತೆಗೆ ಗಂಟಲು ನೋವೂ ಇದ್ದರೆ, ಅನನಾಸಿನಿಂದ ಅದು ಹೆಚ್ಚಾಗು ಸಂಭವವೂ ಇರುತ್ತದೆ.
3. ಟೊಮೇಟೋ: ಟೊಮೇಟೋ ಹಣ್ಣಿನಂತೆ ಬಳಸುವುದಿಲ್ಲವಾದರೂ ನಿತ್ಯವೂ ತರಕಾರಿಯಂತೆ ಊಟದಲ್ಲಿ ಬಳಸುವುದೇ ಹೆಚ್ಚು. ಆದರೆ, ಶೀತ, ನೆಗಡಿಯಾದಾಗ, ಈ ಟೊಮೇಟೋ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಟೊಮೇಟೋ ಸಾಸ್, ಕೆಚಪ್, ರಸಂ ಇತ್ಯಾದಿಗಳನ್ನು ತಿನ್ನುವುದರಿಂದ ಗಂಟಲು ಇನ್ನಷ್ಟು ಕೆಡುವ ಸಂಭವವಿರುತ್ತದೆ.
4. ಕಿವಿ: ಕಿವಿ ಹಣ್ಣಿನಲ್ಲಿ ಅತ್ಯಧಿಕ ಸಿ ವಿಟಮಿನ್ ಇದ್ದರೂ ಇದರಿಂದ ಶೀತ, ನೆಗಡಿಯ ಸಂದರ್ಭ ಮಾತ್ರ ಇದರಿಂದ ಗಂಟಲು ಕೆರೆತ ಉಂಟಾಗುವ ಸಂಭವ ಹೆಚ್ಚು. ಹೀಗಾಗಿ ನೆಗಡಿಯ ಸಂದರ್ಭ ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸಿ.
5. ಬೆರ್ರಿ: ಬೆರ್ರಿ ಹಣ್ಣುಗಳಾದ, ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ ಹಣ್ಣುಗಳಲ್ಲೂ ಅಸಿಡಿಕ್ ಅಂಶಗಳಿರುವುದರಿಂದ ಗಂಟಲಿಗೆ ಕೊಂಚ ಕಿರಿಕಿರಿ ಮಾಡುವ ಸಂಭವ ಹೆಚ್ಚು. ಹೀಗಾಗಿ ಇಂತಹ ಹುಳಿ ಹಣ್ಣುಗಳನ್ನು ಶೀತ, ನೆಗಡಿಯ ಸಂದರ್ಭ ಅತಿಯಾಗಿ ತಿನ್ನುವುದರಿಂದ ದೂರ ಉಳಿಯುವುದೇ ಒಳ್ಳೆಯದು.
ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?
6. ಪಪ್ಪಾಯಿ: ಪಪ್ಪಾಯಿಯಲ್ಲಿ ಏನಿದೆ ಎನ್ನಬಹುದು. ಆದರೆ, ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಗಂಟಲಿಗೆ ಕಿರಿಕಿರಿ ಮಾಡುವ ಕಾರಣ ಹೆಚ್ಚು ತಿನ್ನದಿರುವುದು ಒಳ್ಳೆಯದು.
7. ದ್ರಾಕ್ಷಿ: ದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿದ್ದು ಇದರಿಂದಾಗಿ ಕೆಲವೊಮ್ಮೆ ಒಳಗೆ ಕಫ ಗಟ್ಟಿಯಾಗುತ್ತದೆ. ಆಮೇಲೆ ಕಫವನ್ನು ಹೊರಗೆ ತೆಗೆಯುವುದೇ ಕಷ್ಟವಾಗಬಹುದು. ಕೆಮ್ಮು ಹಾಗೂ ಕಫದ ಪರಿಣಾಮ ತೀವ್ರವಾಗುವ ಸಂಭವ ಇರುವುದರಿಂದ ದ್ರಾಕ್ಷಿಯಿಂದ ಶೀತ ಹಾಗೂ ನೆಗಡಿಯಂತಹ ಸಂದರ್ಭಗಳಲ್ಲಿ ದೂರ ಇರುವುದೇ ಒಳ್ಳೆಯದು.
ಇದನ್ನೂ ಓದಿ: Fruits To Lower Cholesterol: ಕೊಲೆಸ್ಟ್ರಾಲ್ ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಗೊತ್ತೇ?
ಆರೋಗ್ಯ
Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?
ಯಾವತ್ತೋ ಅಪರೂಪಕ್ಕೆ ಉಪಯೋಗಿಸಿದರೆ ಸೋಡಾದಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇದನ್ನೇ ನೆಚ್ಚಿಕೊಂಡಿದ್ದರೆ (Baking soda side effects) ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ.
ಆಧುನಿಕ ಅಡುಗೆಯ ವಿಧಾನಗಳು (Baking soda side effects) ಬದಲಾಗಿವೆ. ಅಜ್ಜಿಯ ತಲೆಮಾರಿನ ಹಾಗೆ ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸುವ ವ್ಯವಧಾನ ಕಡಿಮೆಯಾಗಿದೆ. ಉದಾ, ನಾಳೆ ಬೆಳಗಿನ ತಿಂಡಿಗೆ ದೋಸೆ ಅಥವಾ ಇಡ್ಲಿ ಮಾಡಬೇಕೆಂದು ರಾತ್ರಿ ಮಲಗುವಾಗ ನೆನಪಾದರೆ ಮಾಡುವುದು ಹೇಗೆ? ಇಂದಿನ ಅಡುಗೆ ಮನೆಗಳಲ್ಲಿ ಹಾಗೂ ಬೆಳಗಿನ ಹೊತ್ತಿಗೆ ದೋಸೆ ಸಿದ್ಧವಾಗುತ್ತದೆ. ಅಕ್ಕಿ-ಬೇಳೆಗಳು ಇಷ್ಟು ಹೊತ್ತು ನೆನೆಯಬೇಕು, ರುಬ್ಬಿದ ಧಾನ್ಯಗಳ ಹಿಟ್ಟು ಇದಿಷ್ಟು ಹೊತ್ತು ಹುದುಗಬೇಕು ಎಂಬಂಥ ನಿಯಮಗಳನ್ನು ಕೆಲವೊಮ್ಮೆ ಗಾಳಿಗೆ ತೂರುತ್ತೇವೆ. ಹಲವು ಶಾರ್ಟ್‌ಕಟ್‌ಗಳನ್ನು ಅರಸುತ್ತೇವೆ, ಏನಕ್ಕೇನೋ ಬೆರೆಸುತ್ತೇವೆ.
ಚಿಟಿಕೆ ಸೋಡಾ ಬೇಕೆ?
ಯೂಟ್ಯೂಬ್‌ನ ಯಾವುದೋ ಚಾನೆಲ್‌ನಲ್ಲಿ ಮೃದುವಾದ ತಟ್ಟೆ ಇಡ್ಲಿ ಮಾಡುವುದಕ್ಕೆ ಚಿಟಿಕೆ ಸೋಡಾ ಬೆರೆಸಿ ಎನ್ನುವುದು ನಮಗೆ ಅನುಸರಣೀಯ ಎನಿಸಿಬಿಡುತ್ತದೆ. ಬಹಳಷ್ಟು ಬೇಕಿಂಗ್‌ಗಳಿಗೆ ಸೋಡಾ ಎಂತಿದ್ದರೂ ಅಗತ್ಯವಲ್ಲವೇ, ಇಡ್ಲಿ-ದೋಸೆ ಹಿಟ್ಟುಗಳಿಗೂ ಬೆರೆಸಿದರಾಯಿತು ಎನಿಸಿಬಿಡುತ್ತದೆ. ʻನಾವೇನು ಸೋಡಾ ಹಾಕುವುದಿಲ್ಲ. ಇನೊ (Eno) ಮಾತ್ರ ಬಳಸೋದುʼ ಎಂಬ ಸಮಜಾಯಿಶಿ ಕೊಡುವವರೆಷ್ಟು ಮಂದಿ ಬೇಕು? ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್ ಸೋಡಾ, ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಇಷ್ಟೊಂದು ಪೀಠಿಕೆಯ ನಂತರವೂ ವಿಷಯ ಹೇಳದಿದ್ದರೆ ಹೇಗೆ? (Health tips) ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.
ಇದನ್ನೂ ಓದಿ: Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!
ಆಹಾರ ತಜ್ಞರೇನು ಹೇಳುತ್ತಾರೆ?
ಯಾವತ್ತೋ ವರ್ಷಕ್ಕೊಂದೆರಡು ಬಾರಿ ಉಪಯೋಗಿಸಿದರೆ ಈ ವಸ್ತುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ.
ಮೂತ್ರಪಿಂಡಕ್ಕೆ ತೊಂದರೆ
ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. 60ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. (Health tips) ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ 5 ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ ಅಗುತ್ತದೆ ಹೊರತು ಮತ್ತೇನಿಲ್ಲ.
ಇನ್ನಷ್ಟು ಸಮಸ್ಯೆಗಳು
ಯಾವುದೇ ಅಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.
ಯಕೃತ್ತಿಗೂ ಅಪಾಯ
ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?
ಹಾಗಾಗಿ ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದು ಒಳಿತು. ಕೆಲವೊಮ್ಮೆ ಬೇಕಿಂಗ್ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆ ಬೀಜ ಮುಂತಾದ ಇನ್ನಿತರ ಮಾರ್ಗಗಳ ಬಳಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಲೇಸಲ್ಲವೇ?
ಆರೋಗ್ಯ
Dengue Fever foods: ಡೆಂಗ್ಯು ಜ್ವರ ಬಂದಾಗ ಯಾವೆಲ್ಲ ಆಹಾರ ಸೇವನೆ ಬಹಳ ಮುಖ್ಯ ಗೊತ್ತೇ?
ಡೆಂಗ್ಯು ಜ್ವರ ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
ಡೆಂಗ್ಯು ಎಂಬ ಜ್ವರ (Dengue Fever) ಆಗಾಗ ಎಲ್ಲೆಡೆ ಸದ್ದು ಮಾಡುತ್ತಲೇ ಇರುತ್ತದೆ. ಸೊಳ್ಳೆಯಿಂದ (Mosquito bite) ಬರುವ ಈ ಜ್ವರವೆಂದರೆ, ಹೆಚ್ಚಿದ ಉಷ್ಣಾಂಶ, ಮೈಮೇಲೆ, ಕೆಂಪನೆಯ ಸಣ್ಣ ಗುಳ್ಳೆಗಳೇಳುವುದು, ತಲೆನೋವು, ಮೈಕೈ ನೋವು ಇತ್ಯಾದಿ ಇತ್ಯಾದಿ ಲಕ್ಷಣಗಳೊಂದಿಗೆ ಬರುತ್ತದೆ. ಈ ಜ್ವರ ಎಲ್ಲ ಜ್ವರದಂತಲ್ಲ. ಅಪಾಯವಿಲ್ಲ ಎಂದುಕೊಂಡರೂ ಕೆಲವೊಮ್ಮೆ ಹಠಾತ್ತನೆ ಅಪಾಯಕ್ಕೆ ದೂಡುತ್ತದೆ. ಇಂತಹ ಸಂದರ್ಭ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿ ಅತ್ಯಂತ ಅವಶ್ಯಕ. ಇದು ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಹಾಗಾಗಿ, ಬನ್ನಿ, ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
1. ನೀರು: ನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಡೆಂಗ್ಯು ಬಂದಾಗ ಸಾಧ್ಯವಾದಷ್ಟು ನೀರು ಕುಡಿಯುತ್ತಿದ್ದರೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಬಾರದು. ಇದರಿಂದ ಜ್ವರದ ಉಷ್ಣಾಂಶವೂ ಕೂಡಾ ಗರಿಷ್ಠ ಮಟ್ಟಕ್ಕೇರುಬುದು ತಪ್ಪುತ್ತದೆ. ದೇಹದಲ್ಲಿ ನೀರಿನಂಶದ ಸಮತೋಲನವೂ ಕಾಯ್ದುಕೊಳ್ಳುತ್ತದೆ.
2. ಎಳನೀರು: ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್‌ಗಳು ನೈಸರ್ಗಿಕವಾಗಿ ಸಮೃದ್ಧವಾಗಿರುವುದರಿಂದ ಜ್ವರದ ಸಂದರ್ಭ ದೇಹದಲ್ಲಿ ನಿರ್ಜಲೀಕರಣವಾಗದಂತೆ ಇದು ತಡೆಯುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಅಂದರೆ, ಖನಿಜಾಂಶಗಳಾದ ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂಗಳನ್ನು ಒದಗಿಸಿ ಸಹಾಯ ಮಾಡುತ್ತದೆ.
3. ಹಣ್ಣುಗಳು: ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜ ಲವಣಗಳೂ ಇರುವುದರಿಂದ ಡೆಂಗ್ಯು ಸಂದರ್ಭ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ತಿನ್ನುವುದು ಬಹಳ ಮುಖ್ಯ. ಹಣ್ಣುಗಳಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ರೋಗಗಳ ವಿರುದ್ಧ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸುಲಭವಾಗಿ ಜೀರ್ಣ ಮಾಡಬಹುದಾದ್ದರಿಂದ ಹಾಗೂ ಇವುಗಳಲ್ಲಿ ಹೇರಳವಾಗಿ ಪೋಷಕಾಂಶಗಳು ಬಹುಬೇಗನೆ ದೇಹ ಸೇರುವುದರಿಂದ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.
4. ಹರ್ಬಲ್ ಚಹಾಗಳು: ಶುಂಠಿ, ಕ್ಯಾಮೋಮೈಲ್ ಮತ್ತಿತರ ಹರ್ಬಲ್ ಚಹಾಗಳು ಜ್ವರದ ಸಂದರ್ಭ ಕುಡಿದಾಗ ಹಾಯೆನಿಸುವಂತೆ ಮಾಡಬಲ್ಲ ಶಕ್ತಿ ಇದೆ. ಸಾಮಾನ್ಯ ಚಹಾ, ಕಾಫಿಗಳು ರುಚಿಯೆನಿಸಿದರೂ, ಜ್ವರದ ಸಂದರ್ಭ ಇಂತಹ ಹರ್ಬಲ್ ಚಹಾಗಳು ಒಳ್ಳೆಯದು. ಶುಂಠಿ ಚಹಾದಲ್ಲಿ, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೇರಳವಾಗಿ ಇರುವುದರಿಂದ ಜ್ವರದ ಹಲವು ಲಕ್ಷಣಗಳನ್ನು ಗುಣಪಡಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.
5. ಧಾನ್ಯಗಳು: ಧಾನ್ಯಗಳಿಂದ ಮಾಡಿದ ಆಹಾರಗಳಾದ ಅನ್ನ, ಓಟ್ಸ್, ಇಡ್ಲಿ, ದೋಸೆ, ಉಪ್ಪಿಟ್ಟು, ದಲಿಯಾ ಮತ್ತಿತರ ಆಹಾರಗಳ ಸೇವನೆ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಸರಿಯಾಗಿ ಬೇಯಿಸಿದ, ಹೆಚ್ಚು ಅನಗತ್ಯ ಮಸಾಲೆಗಳಿಲ್ಲದ, ಹದವಾದ ತಿನಿಸುಗಳು, ಹಬೆಯಲ್ಲಿ ಬೇಯಿಸಿದ ತಿಂಡಿಗಳು ಇಂತಹ ಸಂದರ್ಭ ಅತ್ಯಂತ ಒಳ್ಳೆಯದು.
6. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿಯೂ, ವಿಟಮಿನ್, ಖನಿಜಾಂಶಗಳು ಹಾಗೂ ಲವಣಗಳೂ ಇರುವುದರಿಂದ ಇವುಗಳ ಸೇವನೆ ಅತ್ಯಂತ ಮುಖ್ಯ. ಸಹಜವಾಗಿ ಸುಲಭವಾಗಿ ಕರಗಬಲ್ಲ ಹಸಿರು ತರಕಾರಿಗಳು, ಬೇಯಿಸಿ ತಿನ್ನಬಹುದಾದ, ಸೂಪ್ ಮಾಡಿ ಕುಡಿಯಬಹುದಾದ ಹೀಗೆ, ಹಲವು ಬಗೆಯಲ್ಲಿ ಹಸಿರು ತರಕಾರಿಗಳನ್ನು ಆದಷ್ಟು ಹೊಟ್ಟೆ ಸೇರುವಂತೆ ಮಾಡಬಹುದು.
7. ಪ್ರೊಟೀನ್: ಪ್ರೊಟೀನ್‌ನಿಂದ ಸಮೃದ್ಧ ಆಹಾರ ಈ ಸಂದರ್ಭ ಅತ್ಯಂತ ಅಗತ್ಯ. ಚಿಕನ್, ಟೋಫು, ಮೀನು ಇತ್ಯಾದಿಗಳನ್ನೂ ಹಿತಮಿತವಾಗಿ ಸೇವಿಸಿ ಪ್ರೊಟೀನ್‌ನ ಪೂರೈಕೆ ಮಾಡಬಹುದು. ಚೆನ್ನಾಗಿ ಬೇಯಿಸಿದ, ಸಮೃದ್ಧ ಆಹಾರಗಳನ್ನೂ ಸೇವಿಸುವ ಮೂಲಕ ದೇಹದಲ್ಲಿ ಮತ್ತೆ ಮಾಂಸಖಂಡಗಳು ಬಲಗೊಂಡು ಆರೋಗ್ಯ ಹೊಂದುವತ್ತ ಹೆಜ್ಜೆ ಹಾಕಬಹುದು.
-
ವೈರಲ್ ನ್ಯೂಸ್15 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ13 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ಕರ್ನಾಟಕ20 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema17 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಬಾಲಿವುಡ್21 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ತಂತ್ರಜ್ಞಾನ18 hours ago
Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ
-
ದೇಶ12 hours ago
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್