ಕರ್ನಾಟಕ
Karnataka Election: ಬಿಜೆಪಿ ಲೂಟಿ ಮಾಡಿದ 1.50 ಲಕ್ಷ ಕೋಟಿಯಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್‌ಪ್ರೆಸ್ ವೇ ನಿರ್ಮಿಸಬಹುದಿತ್ತು: ಪ್ರಿಯಾಂಕಾ ಗಾಂಧಿ
Assembly Election: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಲೂಟಿ ಹೊಡೆದ ಹಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮಂಡ್ಯ/ತೀರ್ಥಹಳ್ಳಿ: ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಇದು ಭ್ರಷ್ಟ ಹಾಗೂ ಸುಳ್ಳಿನ ಸರ್ಕಾರ. ಈ ಹಣದಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್‌ಪ್ರೆಸ್ ವೇ, 186 ಇಎಸ್ಐ ಆಸ್ಪತ್ರೆ, 30 ಸಾವಿರ ಸ್ಮಾರ್ಟ್ ತರಗತಿ ಹಾಗೂ 30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬಹುದಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಈ ಸರ್ಕಾರ ನಿಮ್ಮಿಂದ 1.50 ಲಕ್ಷ ಕೋಟಿ ಲೂಟಿ ಮಾಡಿದ್ದು, ನಾವು ಈ ಹಣವನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತೇವೆ. ಸಬ್ಸಿಡಿ, ಸಾಲ, ವಿಮೆ ಯೋಜನೆಗಳಿಗೆ ಬಳಸುತ್ತೇವೆ. ರೈತರಿಗಾಗಿ ಸಹಕಾರಿ ಸಂಘ ಮಾಡಿ 500 ಕೋಟಿ ಹಣ ಮೀಸಲಿಡಲಾಗುವುದು. ಮೇಕೆದಾಟು, ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ವರಾಹಿ ಯೋಜನೆಗಳಿಗೆ ಆದ್ಯತೆ ನೀಡಿ ಈ ಹಣವನ್ನು ಬಳಸುತ್ತೇವೆ. ಹಾಲು ಉತ್ಪಾದಕರಿಗೆ 7 ರೂ. ಪ್ರೋತ್ಸಾಹ ಧನ, ಹಾಲು ಉತ್ಪಾದಕರಿಗೆ 50 ಸಾವಿರ ಸಾಲ ಸೌಲಭ್ಯ. ಮೀನುಗಾರರಿಗೆ 6 ಸಾವಿರ ಪ್ರತಿ ತಿಂಗಳು, ಪಂಚಾಯ್ತಿಗಳಲ್ಲಿ ಸೋಲಾರ್ ದೀಪ ಅಳವಡಿಸಲು ಶೇ.100ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Weather Report: ರಾಜ್ಯಾದ್ಯಂತ ಮುಂದುವರಿಯಲಿದೆ ಮಳೆ ಅಬ್ಬರ; ಮಂಡ್ಯ, ಮೈಸೂರು ಸೇರಿ ಹಲವು ಜಿಲ್ಲೆಗಳಿಗೆ ಅಲರ್ಟ್
ರಾಜ್ಯದಲ್ಲಿ ಈಗ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿದ್ದು, ಈ ಸಮಸ್ಯೆಗಳಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಅದರರ್ಥ ಈ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರದ ನಿಯತ್ತು ಆರಂಭದಲ್ಲೇ ಹಾಳಾಗಿತ್ತು. ಇದರಿಂದ ಆಡಳಿತ ಕುಸಿಯಿತು. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ ಎಂದು ಕಿಡಿಕಾರಿದರು.
ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ?
ಸರ್ಕಾರ ಲೂಟಿ, ದುರಾಸೆಯಿಂದ ರಚಿತವಾದರೆ ಅದು ಉತ್ತಮ ಆಡಳಿತ ನಡೆಸಲು ಹೇಗೆ ಸಾಧ್ಯ? ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ, ಕೋವಿಡ್, ಗುತ್ತಿಗೆಯಲ್ಲಿ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸತ್ತರೂ ಪ್ರಧಾನಮಂತ್ರಿಗಳಿಂದ ಉತ್ತರ ಇಲ್ಲ. ಈ ಭ್ರಷ್ಟ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ನಿಮ್ಮ ಭವಿಷ್ಯದ ಗತಿ ಏನು? ಬಿಜೆಪಿ ಶಾಸಕನ ಮನೆಯಲ್ಲಿ 8 ಕೋಟಿ ಅಕ್ರಮ ಹಣ ಸಿಗುತ್ತದೆ. ಆತನ ವಿರುದ್ಧ ಯಾವುದೇ ಕ್ರಮವಿಲ್ಲ. ರೈತ ಬೆಲೆ ಏರಿಕೆಯಿಂದ ನರಳುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ. ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ ಎಂದು ನೀವೇ ಆಲೋಚಿಸಬೇಕು ಎಂದು ಹೇಳಿದರು.
ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನೂ ಸರ್ಕಾರ ತುಂಬಿಲ್ಲ. ಎಲ್ಲ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಎಲ್ಲದರಲ್ಲೂ ಅಕ್ರಮ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ
ಕರ್ನಾಟಕ ರೈತರ ನಾಡು ಈ ನಾಡಿನಲ್ಲಿ ರೈತರ ಪರಿಸ್ಥಿತಿಯನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ? ಪ್ರತಿ ಎಕರೆಗೆ 25 ಸಾವಿರ ತೆರಿಗೆ ಕಟ್ಟಬೇಕು. 5% ರಷ್ಟು ಜಿಎಸ್ಟಿ ಕಟ್ಟಬೇಕು. ಟ್ರ್ಯಾಕ್ಟರ್ ಖರೀದಿಸಿದರೆ 12%, ರಸಗೊಬ್ಬರದ ಮೇಲೆ 18% ಜಿಎಸ್‌ಟಿ ಹಾಕಲಾಗಿದೆ. ಡಿಎಪಿ ಬೆಲೆ 1300 ಆಗಿದೆ. ಅಷ್ಟೇ ಅಲ್ಲ ಈ ಹಿಂದೆ 50 ಕೆ.ಜಿ ಯುರಿಯಾ ಈಗ ಕಡಿಮೆ ಆಗಿದೆ. ಬೆಂಬಲ ಬೆಲೆ ನೀಡಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಆದರೆ ಕೇವಲ ಸರ್ಕಾರದ ಮಂತ್ರಿಗಳು ಹಾಗೂ ಬಿಜೆಪಿ ಶಾಸಕರ ಆಸ್ತಿ ಮೊತ್ತ ಮಾತ್ರ ಹೆಚ್ಚಾಗುತ್ತಾ ಸಾಗಿದೆ. ಬೇರೆ ರಾಜ್ಯಗಳಲ್ಲಿ 3500 ರಿಂದ 4000 ಇರುವ ಬೆಂಬಲ ಬೆಲೆ ರಾಜ್ಯದಲ್ಲಿ ಕೇವಲ 2500 ಮಾತ್ರ ಇದೆ. ಇಲ್ಲಿನ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಸರ್ಕಾರ ನಿಮಗೆ ದ್ರೋಹ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಇದನ್ನೂ ಓದಿ: Higher EPFO Pension : ಉದ್ಯೋಗಿಗಳು ಗಮನಿಸಿ, ಇಪಿಎಫ್‌ನಲ್ಲಿ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3 ಕೊನೆ ದಿನ
ಕರ್ನಾಟಕ ರಾಜ್ಯ ಮಾದರಿ ರಾಜ್ಯವಾಗಿತ್ತು. ಐಟಿಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ, ನವೋದ್ಯಮಗಳಲ್ಲಿ, ಹೊರಗಡೆಯಿಂದ ಹೂಡಿಕೆಗೆ ಬರುತ್ತಿದ್ದ ಕಂಪನಿಗಳಲ್ಲಿ, ಶಿಕ್ಷಣ, ತಂತ್ರಜ್ಞಾನದಲ್ಲಿ ರಾಜ್ಯ ನಂಬರ್ 1 ಸ್ಥಾನದಲ್ಲಿತ್ತು. ಆದರೆ ಭ್ರಷ್ಟ ಸರ್ಕಾರ ನಿಮ್ಮನ್ನು ಲೂಟಿ ಮಾಡಿದ್ದು, ರಾಜ್ಯ ಕುಸಿತ ಕಾಣುವಂತೆ ಮಾಡಿದೆ. ಒಂದರ್ಥದಲ್ಲಿ ಹೇಳುವುದಾದರೆ ಎಲ್ಲ ಕೆಲಸ ನಿಂತಿದ್ದು, ನಿರುದ್ಯೋಗ ಹೆಚ್ಚಾಗಿ ಯುವಕರ ಭವಿಷ್ಯ ನಶಿಸುತ್ತಿದೆ. ಓಲಾ, ಪೆಗಟ್ರಾನ್, ಮೋಟರೋಲಾ, ನೋಕಿಯಾ, ಸ್ಯಾಮ್ಸಂಗ್ ಎಲ್ಲವೂ ರಾಜ್ಯವನ್ನು ತೊರೆದಿವೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಸಿಗುವುದಾದರೂ ಹೇಗೆ? ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂದ್ ಆಗಿವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ನೀವು ನಿಮ್ಮ ಪರಿಶ್ರಮದಿಂದ ಕೆಎಂಎಫ್ ನಂದಿನಿ ಸ್ಥಾಪಿಸಿದ್ದೀರಿ. ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿ ಕ್ಷೀರ ಧಾರೆ ಯೋಜನೆ ಮಾಡಲಾಗಿತ್ತು. ಆದರೆ ಇಂದು ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತವಾಗಿದೆ. ನಿಮ್ಮ ನಂದಿನಿಯನ್ನು ಗುಜರಾತಿನ ಅಮೂಲ್ ಜತೆ ವಿಲೀನ ಮಾಡಲು ಮುಂದಾಗಿದ್ದಾರೆ. ಉದ್ದೇಶಪೂರ್ವಕವಾಗಿ ಅಮೂಲ್ ಉತ್ಪನ್ನಗಳನ್ನು ರಾಜ್ಯಕ್ಕೆ ಕರೆತರುತ್ತಿದ್ದಾರೆ. ಇದರಿಂದ ಹೇಗೆ ರಾಜ್ಯ ಉದ್ಧಾರವಾಗುತ್ತದೆ. ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ನಮ್ಮಿಂದ 2.50 ಲಕ್ಷ ಹುದ್ದೆಗಳನ್ನು ಭರ್ತಿ
ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಈಗಲೂ ನಾವು 100% ಅಭಿವೃದ್ಧಿಯ ಬದ್ಧತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ಸರ್ಕಾರದ ಇಲಾಖೆಗಳಲ್ಲಿರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಂದಿನಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 15 ಸಾವಿರ ಮಾಡಲಾಗುವುದು, ಅಂಗನವಾಡಿ ಸಹಾಯಕಿಯರಿಗೆ 10 ಸಾವಿರ ಗೌರವಧನ ನೀಡಲಾಗುವುದು. ಆಶಾ ಕಾರ್ಯಕರ್ತರಿಗೆ 8 ಸಾವಿರ ಗೌರವ ಧನ, ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ 3 ಲಕ್ಷ ಸಹಾಯಕಿಯರಿಗೆ 2 ಲಕ್ಷ ನೀಡಲಾಗುವುದು. ಈ ಎಲ್ಲ ಯೋಜನೆ ಸೇರಿಸಿದರೆ, ಪ್ರತಿ ತಿಂಗಳು ಪ್ರತಿ ತಿಂಗಳು 8500 ರೂ. ನೀಡಿದಂತಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ಹೊಸಕೋಟೆಯಲ್ಲಿ ಪ್ರಿಯಾಂಕಾ ಮೆಗಾ ರೋಡ್ ಶೋ ವಿಡಿಯೊ ಇಲ್ಲಿದೆ
ರಾಜ್ಯ ಬಿಜೆಪಿ ನಾಯಕರ ಹೆಸರನ್ನೇಕೆ ಪ್ರಸ್ತಾಪ ಮಾಡಲ್ಲ; ಮೋದಿಗೆ ಪ್ರಿಯಾಂಕಾ ಪ್ರಶ್ನೆ
ಬಿಜೆಪಿಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ಅವರ ಪಕ್ಷದ ಹಿರಿಯ ನಾಯಕರ ಹೆಸರನ್ನು ಹೇಳಲ್ಲ. ಕರ್ನಾಟಕದ ಯಾವುದೇ ಬಿಜೆಪಿಯ ಹಿರಿಯ ನಾಯಕರ ಹೆಸರನ್ನು ಹೇಳಲ್ಲ. ಯಡಿಯೂರಪ್ಪ, ಬೊಮ್ಮಾಯಿ ಅವರ ಹೆಸರನ್ನೇ ಹೇಳಲ್ಲ. ಕರ್ನಾಟಕದ ಜನ ಕೇಳ್ತಾ ಇದ್ದಾರೆ ಯಾಕಾಗಿ ನೀವು ರಾಜ್ಯದ ಬಿಜೆಪಿಯ ಹಿರಿಯ ನಾಯಕರ ಹೆಸರನ್ನು ಹೇಳಲ್ಲ? ಆದರೆ ನಾವು ಸಿದ್ದರಾಮಯ್ಯ, ಖರ್ಗೆ ಮತ್ತು ಡಿಕೆ ಶಿವಕುಮಾರ್ ಅವರ ಹೆಸರನ್ನು ನಾವು ಹೇಳುತ್ತೇವೆ ಎಂದು ತೀರ್ಥಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಿಯಾಂಕಾ ಹೇಳಿದರು.
ಇದನ್ನೂ ಓದಿ: Congress Manifesto : ವಿನಾಶಕಾಲೇ ವಿಪರೀತ ಬುದ್ಧಿ; ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ವಿಜಯೇಂದ್ರ ಖಂಡನೆ
ಗೋವಾ, ಮಹಾರಾಷ್ಟ್ರ, ಕರ್ನಾಟಕದ ನೀರು ಹಂಚಿಕೆಯ ಬಗ್ಗೆ ಕನಿಷ್ಟ ನಿಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿ ಪ್ರಧಾನಿಯನ್ನು ಆಗ್ರಹಿಸಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಾಗಲೂ ನೀವು ಕರ್ನಾಟಕಕ್ಕೆ ಯಾಕಾಗಿ ಭೇಟಿ ನೀಡಿಲ್ಲ? ನೀವು ಕರ್ನಾಟಕದಿಂದ ತೆರಿಗೆಯ ಹೆಚ್ಚಿನ ಪಾಲನ್ನು ತೆಗೆಯುತ್ತಿದ್ದೀರ. ಆದರೆ ಕಡಿಮೆ ಹಣವನ್ನು ಕರ್ನಾಟಕಕ್ಕೆ ಕೊಡುತ್ತಾ ಇದ್ದೀರ. ಶಿವಮೊಗ್ಗ ಜಿಲ್ಲೆಯ ಭಧ್ರಾವತಿಯ ಉಕ್ಕಿನ ಕಾರ್ಖಾನೆ ಉಳಿಸಲು ಏನು ಮಾಡಿದ್ದೀರಿ ಅಂತ ಜನತೆಗೆ ತಿಳಿಸಿ ಎಂದು ಪ್ರಿಯಾಂಕಾ ಗಾಂಧಿ ಸವಾಲೆಸೆದರು.
ಕರ್ನಾಟಕ
Ramalinga Reddy: 4 ಸಾರಿಗೆ ನಿಗಮಗಳ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ
Ramalinga Reddy: ರಾಜ್ಯ ಸಾರಿಗೆ ಇಲಾಖೆಯ ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಅಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ನೇಮಿಸಲಾಗಿದೆ.
ಬೆಂಗಳೂರು: ಸಾರಿಗೆ ಇಲಾಖೆಯ 4 ಸಾರಿಗೆ ನಿಗಮಗಳಿಗೆ ಅಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೇಮಕವಾಗಿದ್ದಾರೆ. ಸಾರಿಗೆ ಇಲಾಖೆ ಅಧೀನದಲ್ಲಿರುವ ಬಿಎಂಟಿಸಿ, ಕೆಎಸ್ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಅವರನ್ನು ನೇಮಿಸಿ ಸಾರಿಗೆ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ವಿ.ಎಸ್. ಪುಷ್ಪ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
ಸಾಮಾನ್ಯವಾಗಿ ನಾಲ್ಕು ನಿಗಮಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರ ನೇಮಕವಾಗುತ್ತಿತ್ತು. ಆದರೆ, ಈ ಬಾರಿ ಪ್ರತ್ಯೇಕವಾಗಿ ಅಧ್ಯಕ್ಷರನ್ನು ನೇಮಿಸದೆ ಸಚಿವ ರಾಮಲಿಂಗಾರೆಡ್ಡಿ ಅವರಿಗೇ ನಾಲ್ಕೂ ನಿಗಮಗಳ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕ
Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
Hosakerehalli Lake: ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹೊಸಕೆರೆಹಳ್ಳಿ ಕೆರೆಯ (Hosakerehalli Lake) ಮಧ್ಯೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ರಮ ಕೈಗೊಳ್ಳಲು ಸೂಚಿಸಿದ ಬೆನ್ನಲ್ಲೇ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕೆ.ಲಕ್ಷ್ಮೀಸಾಗರ್ ಆದೇಶ ಹೊರಡಿಸಿದ್ದಾರೆ.
ಘನತ್ಯಾಜ್ಯ ವಿಭಾಗದ ಇಇ ಎಚ್.ಎಸ್.ಮೇಘ ಹಾಗೂ ಎಇ ಶಿಲ್ಪ ಅಮಾನತುಗೊಂಡ ಅಧಿಕಾರಿಗಳು. ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರಾದ ಅಧಿಕಾರಿಗಳು, ಎಂಜಿನಿಯರ್‌ಗಳನ್ನು ಸೋಮವಾರ (ಜೂನ್ 5) ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದರು. ಹೀಗಾಗಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇದನ್ನೂ ಓದಿ | ಗ್ಲೋಬಲ್ ಬೆಂಗಳೂರು ಮಾಡಲು ಸಲಹಾ ಸಮಿತಿ; ಇದು ಡಿಕೆಶಿ ಮಾಸ್ಟರ್ ಪ್ಲ್ಯಾನ್!
ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸೋಮವಾರ ಮಧ್ಯಾಹ್ನ ಸಭೆಯಲ್ಲಿ ಬಿಬಿಎಂಪಿ ಆಯುಕ್ತರನ್ನು ಪ್ರಶ್ನಿಸಿದ್ದರು. ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪ ಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದರು.
ಕರ್ನಾಟಕ
Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Koppal News: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಕೊಪ್ಪಳ: ರಾಯಚೂರು ಜಿಲ್ಲೆಯ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಒಬ್ಬ ಬಾಲಕ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಪ್ರಕರಣ ನಡೆದ ಬೆನ್ನಲ್ಲೇ ಅಂತಹುದೇ ಪ್ರಕರಣ ಜಿಲ್ಲೆಯಲ್ಲಿ (Koppal News) ನಡೆದಿದೆ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಹೊನ್ನಮ್ಮ ಶಿವಪ್ಪ (65) ಮೃತ ಮಹಿಳೆ. ಬಸರಿಹಾಳ ಗ್ರಾಮದಲ್ಲಿ ಸುಮಾರು ಮೂರು ದಿನಗಳಿಂದ ವಾಂತಿ- ಭೇದಿಯಿಂದ ಹಲವು ಜನರು ಬಳಲುತ್ತಿದ್ದರು. ಅಸ್ವಸ್ಥಗೊಂಡವರನ್ನು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆಯಾಗಿದೆ ಸ್ಥಳೀಯರು ಆರೋಪಿಸಿದ್ದಾರೆ. ವೃದ್ಧೆ ಸಾವು ಬಳಿಕ ದಿನದಿಂದ ದಿನಕ್ಕೆ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ ಆರೋಪ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ | ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
ಟಯರ್ ಸಿಡಿದು ಪಲ್ಟಿ ಹೊಡೆದ ಕಾರು; ಐವರಿಗೆ ಗಾಯ
ಮಂಡ್ಯ: ಟಯರ್ ಸಿಡಿದು ಕಾರು ಪಲ್ಟಿಯಾಗಿದ್ದರಿಂದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ಚಿಕ್ಕಮಂಡ್ಯ ಬಳಿ ಸೋಮವಾರ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು ಮೂಲದ ಅರ್ಜುನ್, ಮಂಜುನಾಥ್ ಜಿ.ಅಡಿಗ, ಶ್ರೀಕಾಂತ್, ಕೃಷ್ಣ, ಮೂರ್ತಿ ಗಾಯಗೊಂಡವರು.
ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿದ್ದಾಗ ಚಿಕ್ಕಮಂಡ್ಯ ಸಮೀಪಿಸುತ್ತಿದ್ದಂತೆ ಕಾರಿನ ಟಯರ್ ಸ್ಫೋಟಗೊಂಡಿದೆ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಕರ್ನಾಟಕ
World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ
World Environment Day: ಶಿವಮೊಗ್ಗದ ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶಿವಮೊಗ್ಗ: ಪರಿಸರ ದಿನಾಚರಣೆ ನಿಮಿತ್ತ ವಿಸ್ತಾರ ನ್ಯೂಸ್ ಹಮ್ಮಿಕೊಂಡಿದ್ದ ಅಭಿಯಾನಕ್ಕೆ (World Environment Day) ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರಕಿದೆ. ನಗರ ವ್ಯಾಪ್ತಿಯ 11 ಕಿ.ಮೀ. ಉದ್ದದ ಕಾಲುವೆಯ ಎರಡೂ ಬದಿಗಳಲ್ಲಿ ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಚಾಲನೆ ನೀಡಿದರು.
ನಿರ್ಮಲ ತುಂಗಾ ಅಭಿಯಾನ ತಂಡ, ಪರ್ಯಾವರಣ ಸಂರಕ್ಷಣೆ, ಸರ್ಜಿ ಫೌಂಡೇಶನ್, ವಿಸ್ತಾರ ನ್ಯೂಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾಡಳಿತ, ತುಂಗಾ ಮೇಲ್ದಂಡೆ ಯೋಜನೆ, ಅರಣ್ಯ ಇಲಾಖೆ ಸಹಯೋಗ ನೀಡಿದ್ದು, ನಗರದ ಪರಿಸರ ಪ್ರೇಮಿಗಳು ಪರಿಸರ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ಜಿಲ್ಲಾ ಸಂಘಚಾಲಕ ರಂಗನಾಥ, ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ಗೊ.ಕೃ. ಭಾಗವತ್, ರಂಗಭೂಮಿ ಮಂಜು, ನಾಗಭೂಷಣ್ ಸ್ವಾಮಿ, ಕುಮಾರಿಪ್ರಣಮ್ಯ, ಪ್ರಣೀತಾ, ಮುಂತಾದವರು ಇದ್ದರು.
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ