ಕ ಸಾ ಪ
Endowment Awards: ಕಸಾಪದ ʼಲಿಂಗಮ್ಮ-ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿಗೆ ಕೆ.ಎಸ್. ಸೋಮಶೇಖರ ಆಯ್ಕೆ
Endowment Awards: ಕಸಾಪದ 2022ನೇ ಸಾಲಿನ ʻಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕೆ.ಆರ್,ಪೇಟೆಯ ಪ್ರಗತಿಪರ ಕೃಷಿಕ ಕೆ. ಎಸ್ ಸೋಮಶೇಖರ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ವಿಶೇಷವಾಗಿ ಪ್ರಗತಿಪರ ರೈತರಿಗೆ ನೀಡುವ ʻಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ (Endowment Awards) ಪ್ರಕಟಿಸಿದೆ. 2022ನೇ ಸಾಲಿನ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕೆ.ಆರ್,ಪೇಟೆಯ ಪ್ರಗತಿಪರ ಕೃಷಿಕ ಕೆ. ಎಸ್ ಸೋಮಶೇಖರ ಆಯ್ಕೆಯಾಗಿದ್ದಾರೆ.
ಹಿರಿಯ ಸಮಾಜ ಸೇವಕರಾದ ಡಾ. ಚಿಕ್ಕಕೊಮಾರಿಗೌಡ ಅವರು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ವಿಶೇಷ ದತ್ತಿನಿಧಿ ಸ್ಥಾಪಿಸಿದ್ದಾರೆ. ಉತ್ತಮ ಸಾಧನೆ ಮಾಡಿದ ಪ್ರಗತಿಪರ ರೈತರಿಗೆ, ಕರ್ನಾಟಕ ಪಂಚಾಯತ್ ರಾಜ್, ಪರಿಷತ್‌ನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಉತ್ತಮ ಕೆಲಸ ಮಾಡಿರುವ ಸಂಸ್ಥೆಗಳಿಗೆ, ಉತ್ತಮ ಜನಪ್ರತಿನಿಧಿಗಳಿಗೆ ಮತ್ತು ತಜ್ಞರನ್ನು ಗುರುತಿಸಿ ವರ್ಷಕ್ಕೊಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು 10,000 ರೂ. ನಗದು, ಸ್ಮರಣಿಕೆ, ಹಾರ ಹಾಗೂ ಫಲತಾಂಬೂಲ ಒಳಗೊಂಡಿದೆ.
ʼಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ. ಪರಿಷತ್ ಸಾಧಕರಿಗೆ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡುತ್ತದೆ. ಪ್ರಗತಿಪರ ರೈತರಿಗೆ ಕೊಡುವ ಈ ಪ್ರಶಸ್ತಿಯು ಕನ್ನಡ ಸಾಹಿತ್ಯ ಪರಿಷತ್‌ನ ಹೆಮ್ಮೆಯ ಪ್ರಶಸ್ತಿಗಳ ಪೈಕಿ ಒಂದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಗೆ ಮೂವರು ರಂಗಕರ್ಮಿಗಳು ಆಯ್ಕೆ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳಾದ ಡಾ. ಚಿಕ್ಕಕೊಮಾರಿಗೌಡ, ಸಿ. ಕೆ. ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು.
ಕ ಸಾ ಪ
Kannada Sahitya Parishat: ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ, ಡಾ. ಎಚ್. ವಿಶ್ವನಾಥ್-ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ ಪ್ರಕಟ
Kannada Sahitya Parishat: 2020, 2021 ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಗೆ ಮೂವರು ಹಾಗೂ 2022ನೇ ಸಾಲಿನ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಗೆ ಒಬ್ಬರು ಆಯ್ಕೆಯಾಗಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) 2020, 2021 ಹಾಗೂ 2022ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಜತೆಗೆ 2022ನೇ ಸಾಲಿನ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್.ಇಂದಿರಾ ದತ್ತಿʼ ಪ್ರಶಸ್ತಿಯನ್ನೂ ಪ್ರಕಟಿಸಿದೆ.
2020ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ಬಸವರಾಜ ಪಾಟೀಲ ಸೇಡಂ ಅವರು ಆಯ್ಕೆಯಾಗಿದ್ದಾರೆ. 2021ನೇ ಸಾಲಿನ ಪ್ರಶಸ್ತಿಗಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಬೆಂಗಳೂರಿನ ʻಸಂಧ್ಯಾ ದೀಪ ಸಂಸ್ಥೆʼ ಆಯ್ಕೆಯಾಗಿದೆ. 2022ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆಮಾಡುತ್ತಿರುವ ಧಾರವಾಡದ ಬಸವರಾಜ ಸಾದರ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ | Dancing in nature: ಅವನಿ ವಿಹಾರಂ- ಪ್ರಕೃತಿಯ ಮಡಿಲಲ್ಲಿ ಭರತನಾಟ್ಯ ವೈಭವಂ..! ಕನಕಮಜಲಿನಲ್ಲಿ ವೈಶಿಷ್ಟ್ಯಪೂರ್ಣ ಶಿಬಿರ
ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ದತ್ತಿʼ ಪ್ರಶಸ್ತಿಯನ್ನು 2022ನೇ ಸಾಲಿನ ಪ್ರಶಸ್ತಿಗೆ ʻಬೆಳ್ಳಿ ಸೀಮೆಯ ರೈಲ್ವೆ ಸ್ಟೇಷನ್ʼ ಎನ್ನುವ ಕಾದಂಬರಿ ರಚಿಸಿದ ಲೇಖಕಿ ಉಡುಪಿಯ ಸೌಮ್ಯ ಪುತ್ರನ್ ಅವರು ಆಯ್ಕೆಯಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆ ತಿಳಿಸಿದೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ, ಪ್ರಸ್ತುತ ದತ್ತಿ ಪ್ರಶಸ್ತಿಗಳ ಆಯ್ಕೆಯಾಯಾಗಿರುವ ಎಲ್ಲಾ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಅವರ ಸಾಹಿತ್ಯ ಸೇವೆ ಹಾಗೂ ಸಮಾಜ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿರುವ ಗಣ್ಯರನ್ನು ಸೂಕ್ಷ್ಮವಾಗಿ ಗುರುತಿಸಿ ದತ್ತಿ ಪ್ರಶಸ್ತಿಗೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ನೀವೆಷ್ಟು ಪ್ರತಿಭಾವಂತರೇ ಆದರೂ ವೃತ್ತಿಪರತೆ ಇಲ್ಲದಿದ್ದರೆ ನೀವು ಗೆಲ್ಲುವುದಿಲ್ಲ!
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಡಾ.ಎಚ್.ವಿಶ್ವನಾಥ್ ಬೆಂಗಳೂರು, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಇದ್ದರು.
ಕ ಸಾ ಪ
Kasapa: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಿರುದ್ಧ ಪ್ರಕಾಶಮೂರ್ತಿ ಗರಂ; ನಡೆ-ನುಡಿ ಬದಲಿಸಿಕೊಳ್ಳಲು ಬಹಿರಂಗ ಪತ್ರ
DR Mahesh Joshi: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಬಹಿರಂಗ ಪತ್ರ ಬರೆದಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ, ಸದಸ್ಯರಿಗೆ ಬೆದರಿಕೆ ಒಡ್ಡಲಾಗುತ್ತಿದೆ, ಪ್ರಶ್ನೆಗೆಳಿಗೆ ಉತ್ತರ ನೀಡುತ್ತಿಲ್ಲ ಎಂಬಿತ್ಯಾದಿ ಆರೋಪಗಳನ್ನು ಮಾಡಿದ್ದು, ಇದಕ್ಕೆ ಉತ್ತರ ನೀಡುವಂತೆ ಸವಾಲು ಹಾಕಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (Kasapa) ಅಧ್ಯಕ್ಷ ಡಾ. ಮಹೇಶ ಜೋಶಿ (DR Mahesh Joshi) ವಿರುದ್ಧ ಅಪಸ್ವರಗಳು ಕೇಳಿಬರುತ್ತಿದ್ದು, ಅವರ ನಡೆ-ನುಡಿಗಳ ಬಗ್ಗೆ ತೀವ್ರ ಆಕ್ಷೇಪವೊಂದು ಕೇಳಿಬಂದಿದೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ (M Prakashmurthy) ಅವರು ಈ ಬಗ್ಗೆ ಜೋಶಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, “ರಾಜ್ಯಾಧ್ಯಕ್ಷರಾದ ತಮ್ಮಿಂದ ಕಸಾಪದ ಘನತೆ-ಗೌರವಗಳು ಹಿಂದೆಂದಿಗಿಂತಲೂ ಕುಸಿದು ಮಣ್ಣುಪಾಲಾಗುತ್ತಿದೆ” ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈವರೆಗೆ ಕೆಲವು ಸಮಸ್ಯೆಗಳ ಬಗ್ಗೆ, ನಿಲುವುಗಳ ಬಗ್ಗೆ ಆಂತರಿಕವಾಗಿ ಮಹೇಶ್ ಜೋಶಿಯವರಿಗೆ ಪತ್ರ ಬರೆದಿದ್ದರೂ ಅವರಿಂದು ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ಈಗ ಅನಿವಾರ್ಯವಾಗಿ ಬಹಿರಂಗ ಪತ್ರವನ್ನು ಬರೆಯುತ್ತಿರುವುದಾಗಿ ಪ್ರಕಾಶಮೂರ್ತಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಾಶಮೂರ್ತಿ ಪತ್ರದ ಯಥಾವತ್ ಪ್ರತಿ
ತಮ್ಮ ನಡೆ-ನುಡಿ-ನಿಲುವುಗಳನ್ನು ಬದಲಾಯಿಸಿಕೊಂಡು, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವಂತೆ ರಾಜ್ಯಾಧ್ಯಕ್ಷರಾದ ತಮಗೆ ಬಹಿರಂಗ ಮನವಿ.
ಇದನ್ನೂ ಓದಿ: Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?
108 ವರ್ಷಗಳಿಂದ ಕನ್ನಡದ-ಕನ್ನಡಿಗರ-ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದಗಳ ಸಂವರ್ಧನೆಗೆ ಸೃಜನಶೀಲ ನೆಲೆಯಲ್ಲಿ ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಘನತೆವೆತ್ತ ಸಂಸ್ಥೆಯ ಪ್ರಸ್ತುತ ರಾಜ್ಯಾಧ್ಯಕ್ಷರಾದ ತಮ್ಮಿಂದ ಕಸಾಪದ ಘನತೆ-ಗೌರವಗಳು ಹಿಂದೆಂದಿಗಿಂತಲೂ ಕುಸಿದು ಮಣ್ಣುಪಾಲಾಗುತ್ತಿರುವ ವಿಚಾರಗಳು ವ್ಯಾಪಕವಾಗಿ ಹರಡಿ, ಎಲ್ಲೆಡೆಗಳಿಂದ ಎಲ್ಲರಿಗೂ ಮುಜುಗರ ಉಂಟುಮಾಡುತ್ತಿವೆ. ಈಗಾಗಲೇ ನಾನು ಆಂತರಿಕವಾಗಿ ಬರೆದಿರುವ ಪತ್ರಗಳಿಗೆ, ಸಭೆಗಳಲ್ಲಿ ನಡೆಸಿರುವ ಚರ್ಚೆಗಳಿಗೆ, ಸಾರ್ವಜನಿಕರ ತೀವ್ರ ಟೀಕೆ-ಟಿಪ್ಪಣಿಗಳಿಗೆ ಯಾವುದೇ ರೀತಿಯ ಸ್ಪಂದನೆಗಳು ಬಾರದ ಹಿನ್ನೆಲೆಯಲ್ಲಿ ಕೆಳಕಂಡ ವಿಚಾರಗಳನ್ನು ತಮ್ಮ ಗಮನಕ್ಕೆ ತರುತ್ತಾ, ಅನಿವಾರ್ಯವಾಗಿ ಈ ಬಹಿರಂಗ ಮನವಿಯನ್ನು ಮಾಡುತ್ತಿದ್ದೇನೆ.
ಸಾಮಾಜಿಕ ವಲಯದಲ್ಲಿ ಟೀಕೆಗೆ ಗುರಿ
ನವೆಂಬರ್ 21, 2021ರಂದು ನಡೆದ ಚುನಾವಣೆಯಲ್ಲಿ 30 ಜಿಲ್ಲಾಧ್ಯಕ್ಷರು, ನಾಲ್ಕು ಗಡಿನಾಡುಗಳ ಅಧ್ಯಕ್ಷರು, ಓರ್ವ ರಾಜ್ಯಾಧ್ಯಕ್ಷರಾದ ತಾವು ಏಕಕಾಲಕ್ಕೆ ಆಯ್ಕೆಯಾಗಿ ನೂತನ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಪ್ರಾರಂಭದ ದಿನಗಳಿಂದಲೂ ರಾಜ್ಯಾಧ್ಯಕ್ಷರಾದ ತಮ್ಮ ನಡೆ-ನುಡಿ-ನಿಲುವುಗಳು ನಾಡಿನಾದ್ಯಂತ ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ ವಲಯಗಳಲ್ಲಿ ವ್ಯಾಪಕ ಟೀಕೆ ಮತ್ತು ವಿವಾದಗಳಿಗೆ ಗುರಿಯಾಗಿವೆ. ಅಲ್ಲದೆ ಇಡೀ ಕಾರ್ಯಕಾರಿ ಸಮಿತಿಯೂ ಕೂಡ ತೀವ್ರ ನಿಂದನೆಗೆ ಒಳಗಾಗುತ್ತಿದೆ.
ಏಕಪಕ್ಷೀಯ ನಿರ್ಧಾರವನ್ನು ಕೈಬಿಡಿ
1915 ರಿಂದ 2018ರವರೆಗಿನ ವರ್ಷಗಳಲ್ಲಿ 6 ಬಾರಿ ಕಾಲಕ್ಕೆ ತಕ್ಕಂತೆ ಕೆಲವು ತಿದ್ದುಪಡಿಗಳನ್ನು ಕಂಡಿದ್ದ ಕಸಾಪದ ನಿಬಂಧನೆಗಳಿಗೆ ಸದರಿ ಅವಧಿಯಲ್ಲಿಯೂ ಕೆಲವೇ ಕೆಲವು ತಿದ್ದುಪಡಿಗಳನ್ನು ಮಾಡಲು ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆದಿರಿ. ಆದರೆ, ನಿಬಂಧನೆಗಳ ತಿದ್ದುಪಡಿ ಸಲಹಾ ಸಮಿತಿಯ ಸಲಹೆಯ ಮೇರೆಗೆ ಎಂದು ನಿಬಂಧನೆಗಳಿಗೆ ಆಮೂಲಾಗ್ರ / ಕ್ರಾಂತಿಕಾರಿ ಬದಲಾವಣೆ ಎಂಬ ಹೆಸರಿನಲ್ಲಿ ತಿದ್ದುಪಡಿಗಳನ್ನು ಮಾಡಿದಿರಿ. ಸಲಹಾ ಸಮಿತಿಯಲ್ಲಿದ್ದ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳಿಂದ, ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಿಂದ, ಸಾಹಿತ್ಯಿಕ ಮತ್ತು ಸಾರ್ವಜನಿಕ ವಲಯದವರಿಂದ ತೀವ್ರ ಟೀಕೆ, ಆರೋಪಗಳಿಗೆ ಗುರಿಯಾದರೂ, ರಾಜ್ಯಾಧ್ಯಕ್ಷರಾದ ತಾವೇ ನಡೆಸಿದ ಸಮಾಲೋಚನಾ ಸಭೆಯಲ್ಲಿ ಕೆಲವು ಹಿರಿಯರು ಸೂಚಿಸಿದ ಸಲಹೆಗಳನ್ನೂ ಪರಿಗಣಿಸಲಿಲ್ಲ. ಮುಂದುವರಿದು, ದುಬಾರಿ ವೆಚ್ಚದಲ್ಲಿ ಮುದ್ರಿಸಿರುವ ನಿಬಂಧನೆಗಳ ಪುಸ್ತಕದ ಮೇಲೆ ನ್ಯಾಯಾಲಯದಲ್ಲಿ ದಾಖಲಾಗಿರುವ ಮೂಲ ದಾವೆಯ ತೀರ್ಪಿಗೆ ಒಳಪಟ್ಟ ಅನುಮೋದನೆ ಅಡಿಯಲ್ಲಿ ನೋಂದಾಯಿಸಿರುವ ನಿಬಂಧನೆಗಳನ್ನು ಕಾನೂನುಬಾಹಿರವಾಗಿ ಅನುಷ್ಠಾನಗೊಳಿಸುತ್ತಿರುವಿರಿ. ಸದಸ್ಯತ್ವದ ಅಮಾನತು, ಚುನಾಯಿತ ಕಾರ್ಯಕಾರಿ ಸಮಿತಿಗೆ ಕಟ್ಟುಪಾಡುಗಳ ಸುತ್ತೋಲೆ, ಹಣಕಾಸಿನ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಕಾರ್ಯಕಾರಿ ಸಮಿತಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿರುವುದಿಲ್ಲ. ಚುನಾಯಿತ ಸದಸ್ಯರುಗಳ ಸಲಹೆ, ಸೂಚನೆ, ಮನವಿಗಳನ್ನು ಪರಿಗಣಿಸದೇ, ರಾಜ್ಯಾಧ್ಯಕ್ಷರಾದ ತಮಗೇ ಪರಮಾಧಿಕಾರವಿದೆ ಎಂದು ಪ್ರತಿನಿಧಿಗಳ ಸ್ವಾಯತ್ತತೆಗಳೆಲ್ಲವನ್ನೂ ಹತ್ತಿಕ್ಕಿ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ.
ಇದನ್ನೂ ಓದಿ: Anil Shetty: ಬಿಜೆಪಿಯ ಅನಿಲ್ ಶೆಟ್ಟಿಗೆ ಕುಕ್ಕರ್ ʻಪ್ರೆಶರ್ʼ; ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಪ್ರಶ್ನೆ ಮಾಡಿದವರಿಗೆ ಹೆದರಿಸುತ್ತೀರಿ
ತಾವು “ಸಂತ ಶಿಶುನಾಳ ಷರೀಫರ ಗುರು ಗೋವಿಂದಭಟ್ಟರ ಮರಿಮೊಮ್ಮಗ” ಎಂದೂ, “ಮುಖ್ಯಮಂತ್ರಿ ನನಗೆ ಹೋಗೋ ಬಾರೊ ಗೆಳೆಯ” ಎಂಬಿತ್ಯಾದಿ ಅನೇಕ ವೈಯಕ್ತಿಕ ಹಿನ್ನೆಲೆಯ (ಅತಿರೇಕದ) ವಿಚಾರಗಳನ್ನು ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಮಾತನಾಡುತ್ತಾ, ವೃಥಾ ಸಮಯ ವ್ಯರ್ಥ ಮಾಡುತ್ತಾ, ವಿಷಯಾಂತರ ಮಾಡುವ ತಂತ್ರಗಳನ್ನು ಹೂಡುತ್ತಾ, “ನಾವೆಲ್ಲರೂ ಗಾಜಿನ ಮನೆಯಲ್ಲಿ ಇರುವವರೇ… ಎಚ್ಚರವಿರಲಿ”, “ನಿಮ್ಮಗಳ ಮೇಲೆ ದೂರು ಬಂದಿವೆ” ಎನ್ನುವ ನೀವು, ದೂರುಗಳ ಪ್ರತಿ ಕೇಳಿದಾಗ “ಬೇಕಿದ್ದರೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿ” ಎಂದು ಹೇಳುತ್ತೀರಿ. “ನನ್ನ ವಿರುದ್ಧ ಯಾವುದೇ ರೀತಿಯಲ್ಲಿ ಟೀಕಿಸಿದರೂ ದೇಶದ ನಾನಾ ಭಾಗದಲ್ಲಿರುವ ನನ್ನ ಸ್ನೇಹಿತ ನ್ಯಾಯವಾದಿಗಳು, ನಿವೃತ್ತ ನ್ಯಾಯಾಧೀಶರ ಮೂಲಕ ಎಲ್ಲಿ ಬೇಕಾದರೂ ದಾವೆ ಹೂಡಿಸಿ, ಕೋರ್ಟಿಗೆ ಅಲೆಯುವಂತೆ ಮಾಡಿ ಹೈರಾಣಾಗಿಸುತ್ತೇನೆ”, “ನಿಮಗ್ಯಾರಿಗೂ ವಿವೇಕವೇ ಇಲ್ಲ; ನಿಬಂಧನೆಗಳನ್ನು ಮತ್ತು ನಡಾವಳಿಗಳನ್ನು ಸರಿಯಾಗಿ ಓದಿಕೊಂಡೇ ಬರುವುದಿಲ್ಲ” ಎಂಬ ಅನೇಕ ಬೆದರಿಕೆಯ ಮತ್ತು ಮೂದಲಿಕೆಯ ಮಾತುಗಳನ್ನಾಡುತ್ತಾ, ವಾಸ್ತವ ಹಾಗೂ ಅಗತ್ಯ ವಿಚಾರಗಳ ಬಗೆಗೆ ಪ್ರಶ್ನೆ ಮಾಡುವವರನ್ನು ಹತ್ತಿಕ್ಕುತ್ತಾ, “ನೀವೆಲ್ಲರೂ ಅದ್ಹೇಗೆ ಒಗ್ಗಟ್ಟಾಗಿರುವಿರಿ ನೋಡುತ್ತೇನೆ” ಎಂಬ ಒಡೆದಾಳುವ ನೀತಿಯನ್ನು ಅನುಸರಿಸುತ್ತಾ, ಪ್ರಶ್ನೆ ಮಾಡುವವರನ್ನು ಏರುಧ್ವನಿಯಲ್ಲಿ ಮಾತನಾಡುತ್ತೀರಿ. ಪದೇ ಪದೆ ಪ್ರಶ್ನೆ ಕೇಳುತ್ತೀರಿ, ಬೇರೆಯವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ನೀವಷ್ಟೇ ಬುದ್ದಿವಂತರೇ?” ಎಂಬಿತ್ಯಾದಿ ಮಾತುಗಳಿಂದ ಸಭೆಯ ಉದ್ದೇಶದ ದಿಕ್ಕು ತಪ್ಪಿಸುತ್ತಾ, ಅಸಂಬದ್ಧ ತೀರ್ಮಾನಗಳನ್ನು ಕೈಗೊಂಡು ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಿಹಿಲೇಪಿತ ಕಹಿ ವಿಚಾರಗಳನ್ನು ಉಣಬಡಿಸುತ್ತಿರುವುದನ್ನೂ ಕೈಬಿಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ಸಾರ್ವಜನಿಕವಾಗಿ ಬರುವ ಸಲಹೆ-ಸೂಚನೆ, ಟೀಕೆ ಟಿಪ್ಪಣಿಗಳಿಗೆ ತಮ್ಮ ವಿತಂಡವಾದದ ಮೂಲಕ ಸಮರ್ಥನೆಗಳನ್ನು ಮಾಡುತ್ತಾ, ಕನ್ನಡದ ನೈಜ ಸಾಹಿತಿಗಳನ್ನೂ, ಲೇಖಕರನ್ನೂ, ಚಿಂತಕರನ್ನೂ, ಚಳವಳಿಗಾರರನ್ನೂ, ಹೋರಾಟಗಾರರನ್ನೂ, ಸಂಘಟಕರನ್ನೂ, ಸಾಂಸ್ಕೃತಿಕ ಲೋಕದ ಪ್ರತಿಭಾವಂತರನ್ನೂ ಸಾಹಿತ್ಯ ಪರಿಷತ್ತಿನಿಂದ ದೂರ ಮಾಡುತ್ತಿರುವುದನ್ನು ಇಲ್ಲಿಗೇ ನಿಲ್ಲಿಸಬೇಕೆಂದು ಕೋರುತ್ತೇನೆ.
ಇದುವರೆಗೆ ನಡೆದಿರುವ 8 ಕಾರ್ಯಕಾರಿ ಸಮಿತಿ ಸಭೆಗಳು, ಒಂದು ವಿಶೇಷ ಸರ್ವ ಸದಸ್ಯರ ಸಭೆ, ಒಂದು ವಾರ್ಷಿಕ ಸಾಮಾನ್ಯ ಸಭೆ ಇವುಗಳನ್ನು ನಿಯಮಾನುಸಾರ ನಡೆಸದೆ, ಕ್ರಿಯಾಲೋಪ ಎಸಗಿರುವುದರಿಂದ ಅನೇಕ ಕಾನೂನಾತ್ಮಕ ಎಡವಟ್ಟುಗಳಾಗುತ್ತಿರುವುದರ ಹೊಣೆಯನ್ನು ತಾವೇ ಹೊರಬೇಕೆಂದು ಒತ್ತಾಯಿಸುತ್ತೇನೆ.
ಇದನ್ನೂ ಓದಿ: Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ ನಾಲ್ಕು ಗಂಟೆ ಕಾಲ ನಿರಂತರ ಅತ್ಯಾಚಾರ
ಇವೆಲ್ಲದರ ನಡುವೆ ಪ್ರಾರಂಭದಿಂದಲೂ ಬೆಂಗಳೂರು ನಗರ ಜಿಲಾಧ್ಯಕ್ಷನಾದ ನಾನು ರಾಜ್ಯದ ಇತರ ಜಿಲ್ಲೆಗಳ ಅಧ್ಯಕ್ಷರ ಸ್ಥಿತಿ, ಸಂದರ್ಭ ಸನ್ನಿವೇಶಗಳೇ ಬೇರೆ, ರಾಜಧಾನಿ ಬೆಂಗಳೂರು ನಗರದ ಸ್ಥಿತಿ-ಸಂದರ್ಭ-ಸನ್ನಿವೇಶಗಳೇ ಬೇರೆ ಎಂದು ಪದೇ ಪದೆ ನೆನಪಿಸುತ್ತಾ, ಜನರು ನ್ಯಾಯಾಲಯಗಳಿಗೆ ಮೊರೆ ಹೋಗಬಹುದಾದ ಸಾಧ್ಯತೆ, ಟೀಕೆ ಟಿಪ್ಪಣಿಗಳು ಬರುವ ಸಾಧ್ಯತೆ, ಪ್ರತಿಭಟನೆಗಳಾಗುವ ಸಾಧ್ಯತೆಗಳನ್ನು ಎಲ್ಲ ಸಭೆಗಳಲ್ಲಿಯೂ ಗಮನಕ್ಕೆ ತಂದರೂ, ಅವುಗಳನ್ನು ನಿರ್ಲಕ್ಷಿಸಿ, ಮುಂದುವರಿದು ತಮ್ಮ ಮೇಲಿನ ಮತ್ತು ನಮ್ಮೆಲ್ಲರ ಮೇಲಿನ ಜನರ ವಿಶ್ವಾಸ ಹಾಳಾಗುವಂತೆ ಮಾಡುವುದರೊಂದಿಗೆ ಪರಿಷತ್ತಿನ ಘನತೆ ಮತ್ತು ಪಾವಿತ್ರ್ಯತೆಗಳನ್ನು ಮಣ್ಣು ಪಾಲು ಮಾಡುತ್ತಿರುವುದನ್ನು ನಿಲ್ಲಿಸಿ.
16 ತಿಂಗಳ ಈವರೆಗಿನ ಚರ್ಚೆಗಳಲ್ಲಿ ನನ್ನ ಜವಾಬ್ದಾರಿಗಳನ್ನು ತಮ್ಮ ಗಮನಕ್ಕೆ ತರುತ್ತಾ, ಪ್ರಶ್ನೆಗಳನ್ನು ಮತ್ತು ಸಲಹೆ ಸೂಚನೆ, ಮನವಿಗಳನ್ನು ಸೂಕ್ತ ರೀತಿಯಲ್ಲಿ, ಸೂಕ್ತ ವೇದಿಕೆಯಲ್ಲಿ ಮಾಡುತ್ತಿದ್ದ ಕಾರಣದಿಂದ ನನ್ನ ಬಗೆಗೆ ತಾವು ತಾತ್ಸಾರ ಮತ್ತು ಸಿನಿಕತನವನ್ನು ಹೊಂದಿ ಎರಡು ಬಾರಿ ಬೆಂಗಳೂರು ನಗರ ಜಿಲ್ಲಾ ಕಸಾಪ ಕಚೇರಿಯನ್ನು ತೆರವುಗೊಳಿಸಲು ಪತ್ರ ನೀಡಿಸಿದ್ದೀರಿ. ಎರಡನೇ ಬಾರಿಯ ಪತ್ರದಲ್ಲಿ ಬೀಗವನ್ನು ತೆರೆಸಿ, ಕಚೇರಿಯನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದೀರಿ. ಬೆಂ.ನ.ಜಿ. ಕಸಾಪದ ಕಾರ್ಯಕ್ರಮಗಳಿಗೆ ಸಭಾಂಗಣಗಳನ್ನು ನೀಡುವ ಬಗ್ಗೆ ಅಡಚಣೆಗಳನ್ನು ಉಂಟುಮಾಡಿದ್ದೀರಿ.
ನಮ್ಮ ಪತ್ರಗಳಿಗಿಲ್ಲ ಸ್ವೀಕೃತಿ
ಕಾರ್ಯಕಾರಿ ಸಮಿತಿಯ ಸಭೆಯ ನಡಾವಳಿಗಳಲ್ಲಿ ದಾಖಲಾಗಬೇಕಿದ್ದ ನನ್ನ ಮತ್ತು ಒಡನಾಡಿ ಜಿಲ್ಲಾಧ್ಯಕ್ಷರ ಮಾತುಗಳನ್ನು ಸರಿಯಾಗಿ ದಾಖಲಿಸದೇ, ತಮಗೆ ಸರಿ ಎನಿಸುವ ರೀತಿಯಲ್ಲಿ ದಾಖಲಿಸುತ್ತಿದ್ದೀರಿ. ನನ್ನ ಮಾತುಗಳನ್ನು ಸೇರಿಸದಿರುವುದು ಮತ್ತು ತಿರುಚಿರುವುದನ್ನು ಕುರಿತು ತಿದ್ದುಪಡಿಗೆ ಪತ್ರ ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ನಾವು ನೀಡುವ ಯಾವುದೇ ಪತ್ರಗಳಿಗೆ ಕಚೇರಿಯಲ್ಲಿ ಸ್ವೀಕೃತಿ ನೀಡದಂತೆ ಸೂಚಿಸಿದ್ದೀರೆಂದು ತಿಳಿದು ಬಂದಿದೆ.
ದುಂದು ವೆಚ್ಚ ಮಾಡಿದ್ದೀರಿ
ಕಾಲಕಾಲಕ್ಕೆ ಅನುದಾನವನ್ನು ಬಿಡುಗಡೆ ಮಾಡದೆ, ಅನುದಾನಗಳನ್ನು ಬಿಡುಗಡೆ ಮಾಡುವಲ್ಲಿ ಕಡಿತ ಮಾಡಿ ಕನ್ನಡದ ಕೆಲಸದ ಬದಲು ಕಟ್ಟಡದ ಕೆಲಸ ಮಾಡುತ್ತಿದ್ದೀರಿ. ಅತ್ಯಾಧುನಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಹೆಸರಿನಲ್ಲಿ ತಂತ್ರಾಂಶ ಅಭಿವೃದ್ಧಿ, ಕಟ್ಟಡಗಳ ನವೀಕರಣ, ವಾಹನ ಖರೀದಿ, ಸಿ.ಸಿ. ಕ್ಯಾಮೆರಾ ಅಳವಡಿಕೆ, ಕಚೇರಿ ನವೀಕರಣ ಮತ್ತಿತ್ಯಾದಿಗಳನ್ನು ಅಗತ್ಯಕ್ಕೂ ಮೀರಿ ಸರ್ಕಾರದಿಂದ ಬರುವ ಅನುದಾನವನ್ನು ದುಂದುವೆಚ್ಚ ಮಾಡಿದ್ದೀರೇ ವಿನಃ ಮೂಲಭೂತವಾಗಿ ಆಗಬೇಕಿದ್ದ ಗ್ರಂಥಾಲಯದ ಉನ್ನತೀಕರಣ, ನಿಘಂಟು ವಿಭಾಗದ ಅಭಿವೃದ್ಧಿ, ವಿವಿಧ ಜಿಲ್ಲೆಗಳಲ್ಲಿರುವ ಕಚೇರಿಗಳ ನವೀಕರಣ ಮತ್ತು ನಿರ್ವಹಣೆ, ಜಿಲ್ಲಾ ಮಟ್ಟದ ವಿಶೇಷ ಕಾರ್ಯಕ್ರಮಗಳಿಗೆ ಉತ್ತೇಜನ ಮೊದಲಾದ ಕನ್ನಡದ ರಚನಾತ್ಮಕ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುತ್ತೀರಿ ಏಕೆ?
ಕುವೆಂಪು ಸಭಾಂಗಣವನ್ನು ಸ್ಥಗಿತಗೊಳಿಸಿರುವುದಲ್ಲದೆ, ಮೊದಲ ಮಹಡಿಯಲ್ಲಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದೇಕೆ? ಪಂಪ ಮಹಾಕವಿ ರಸ್ತೆಯ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಸ್ತೆ ಎಂದು ಹೆಸರು ಬದಲಾಯಿಸುವುದಾಗಿ ಹೇಳಿದ್ದೀರಲ್ಲದೆ, ಮಹಾದ್ವಾರದ ಕಮಾನಿನ ಫಲಕದ ಒಳಭಾಗದಲ್ಲಿದ್ದ ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕನ್ನಡ ಸಾಹಿತ್ಯ ಘೋಷವಾಕ್ಯವನ್ನು ತೆಗೆದಿರುವುದರ ಹಿಂದಿನ ಉದ್ದೇಶವೇನು?
ಇದನ್ನೂ ಓದಿ: Karnataka Election 2023: ಮುಗಿಯದ ಹಾಸನ ಜೆಡಿಎಸ್ ಅಭ್ಯರ್ಥಿ ಗೊಂದಲ; ಹೊಸ ಹೆಸರು ಹರಿಬಿಟ್ಟ ರೇವಣ್ಣ!
ನನ್ನ ಹಿಂದಿನ ಪ್ರಶ್ನೆಗಳಿಗೂ ಉತ್ತರಿಸಿ
ಕೆಲವು ಸಾಮಾಜಿಕ ಕಾರ್ಯಕರ್ತರು ಕಾನೂನು ಬದ್ಧವಾಗಿ ಕೇಳಿರುವ ಯಾವುದೇ ಮಾಹಿತಿಗಳನ್ನು ನೀಡದಿರುವುದರಿಂದ ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿರುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಇವೆಲ್ಲದರಿಂದ ಕಸಾಪದಲ್ಲಿ ಪಾರದರ್ಶಕತೆ ಇಲ್ಲವೆಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ಹಿಂದಿನ (ದಿನಾಂಕ: 23.03.2023ರ) ಪತ್ರದಲ್ಲಿ 26.03.2023ರ ಕಾರ್ಯಕಾರಿ ಸಮಿತಿಯಲ್ಲಿ ಪ್ರಶ್ನಿಸಬೇಕೆಂದಿದ್ದ ಪ್ರಶ್ನೆಗಳಿಗೆ ಕಾರ್ಯಕಾರಿ ಸಮಿತಿಯಲ್ಲಿ ತಾವು ಉತ್ತರಿಸದಿರುವ ಹಿನ್ನೆಲೆಯಲ್ಲಿ ಈಗ ಕೇಳುತ್ತಿರುವ ಪ್ರಶ್ನೆಗಳ ಜತೆಗೆ ಹಿಂದಿನ ಪ್ರಶ್ನೆಗಳಿಗೂ ಉತ್ತರಗಳನ್ನು ಬಯಸುತ್ತೇನೆ.
ನೀವೇ ಕರೆದಿದ್ದ ಸಮಾಲೋಚನಾ ಸಭೆಗಳಲ್ಲಿ ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಲು ಕೆಲವು ಹಿರಿಯರು ನೀಡಿರುವ ಸಲಹೆ ಸೂಚನೆಗಳನ್ನು ಬಹಿರಂಗಪಡಿಸದಿರುವುದು, ನಿಮ್ಮ ಅಸಂಬದ್ಧ ತೀರ್ಮಾನ-ನಡೆ-ನುಡಿಗಳ ಬಗೆಗೆ ನಮಗೆ ಬರುವ ಪತ್ರಗಳು, ನಿಮಗೆ ಕಳುಹಿಸುವ ನೋಟಿಸ್‍ಗಳು, ಹೂಡಿರುವ ದಾವೆಗಳು ಇವಾವುಗಳನ್ನು ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಪ್ರಸ್ತಾಪಿಸದೆ, ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಾರ್ಯಕಾರಿ ಸಮಿತಿಯ ಮುಂದೆ ಚರ್ಚಿಸದಿರುವುದು ಎಷ್ಟು ಸರಿ?
ದೂರವಾಣಿ ಕರೆ ಸ್ವೀಕರಿಸಿ
ತಾವು ತಮ್ಮ ಮನೋಭೂಮಿಕೆಗೆ ಅನುಕೂಲವಾಗುವಂತೆ ಹೊರಡಿಸುವ ಸುತ್ತೋಲೆಗಳೊಂದಿಗೆ ಸಂವೇದನೆಯನ್ನೂ, ನಿಯಮಗಳೊಂದಿಗೆ ನೈತಿಕತೆಯನ್ನೂ ಅಳವಡಿಸಿಕೊಳ್ಳಬೇಕಾಗಿರುವ ಅಗತ್ಯತೆಯನ್ನು ಮನಗಾಣಬೇಕೆಂದು ಕೋರುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ “ನಾನು ಅಣ್ಣನಿದ್ದಂತೆ, ತಂದೆಯಿದ್ದಂತೆ” ಎಂದು ಉವಾಚಿಸುವ ತಾವು ಚುನಾಯಿತ ಪ್ರತಿನಿಧಿಗಳಾದ ನಾವು ಕರೆ ಮಾಡಿದಾಗ ಕರೆ ಸ್ವೀಕರಿಸುವುದು, ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದು, ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬಂದಾಗ ಸೌಜನ್ಯದಿಂದ ನಡೆಸಿಕೊಳ್ಳುವುದು ತಮ್ಮ ಕರ್ತವ್ಯವೆಂದು ಭಾವಿಸಬೇಕೆಂದು ಒತ್ತಾಯಿಸುತ್ತೇನೆ.
ಸಿಬ್ಬಂದಿ, ಸಾರಿಗೆ, ಸವಲತ್ತು, ಭತ್ಯೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ತಾವು “ನಾನು ಆಡಳಿತ ನಡೆಸಲು ಬಂದಿರುವುದು, ನೀವು ತಳಮಟ್ಟದಲ್ಲಿ ಕನ್ನಡದ ಕೆಲಸ ಮಾಡಲು ಬಂದಿರುವುದು” ಎಂದು ಹಿಂದೊಮ್ಮೆ ಹೇಳಿದ್ದಿರಿ. ನಿಮ್ಮಂತೆಯೇ ಚುನಾಯಿತರಾಗಿರುವ ನಾವುಗಳೂ ನಿಮ್ಮ ಹಾಗೆಯೇ ಹೇಳಿದರೆ ಕನ್ನಡದ ಕೆಲಸ ಸಾಗುವುದಾದರೂ ಹೇಗೆ? ಈ ಸಂದರ್ಭದಲ್ಲಿ ನಮಗೆ-ನಿಮಗೆಲ್ಲ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಆರ್. ಶ್ರೀನಿವಾಸಮೂರ್ತಿ ಅಂತಹವರು ಆದರ್ಶವಾಗಬೇಕು. ಕಸಾಪದ ಕಾರ್ಯಕ್ರಮದ ಸಿದ್ಧತೆಗಾಗಿ ಕಸ ಗುಡಿಸುತ್ತಿದ್ದ ಕಸಾಪ ಅಧ್ಯಕ್ಷರನ್ನು ಕಂಡು ತಡವಾಗಿ ಓಡಿಬಂದ ಸಿಬ್ಬಂದಿ “ಗುಡಿಸುತ್ತೇನೆ ಬಿಡಿ ಸ್ವಾಮಿ” ಎಂದಾಗ, ಎಂ.ಆರ್.ಶ್ರೀ ಅವರು ಹೇಳಿದ ಮಾತು: “ನಾನು ದೊಡ್ಡ ಕೂಲಿ, ನೀನು ಸಣ್ಣ ಕೂಲಿ, ಜನ ನನ್ನನ್ನು ಪ್ರಶ್ನಿಸುತ್ತಾರೆಯೇ ವಿನಃ ನಿನ್ನನ್ನಲ್ಲ!” ಎಂದು ಹೇಳುವ ಮೂಲಕ ತಮ್ಮ ಕಾಯಕದ ಕರ್ತೃತ್ವವನ್ನು ಮೆರೆದಿದ್ದರು. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ ಎಂ.ಆರ್.ಶ್ರೀ ಅಂತಹ ಹಿರಿಯರು ಆದರ್ಶವಾಗಬೇಕೇ ವಿನಃ, ಅಧಿಕಾರಸ್ಥ ನೆಲೆಯಲ್ಲಿ ಆಲೋಚಿಸುವ ಮನಸ್ಥಿತಿಯಲ್ಲ.
ಇದನ್ನೂ ಓದಿ: Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಗೌರವದಿಂದ ಈವರೆಗೆ ಈ ಮೇಲಿನ ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಬರುತ್ತಾ, ಆಂತರ್ಯದಲ್ಲಿಯೇ ನಿಮ್ಮ ಏಕಪಕ್ಷಿಯ ಹಾಗೂ ಅಧಿಕಾರ ಕೇಂದ್ರಿತ ಧೋರಣೆಗಳನ್ನು ತಿದ್ದುಕೊಳ್ಳಲು ತೀವ್ರ ಹಾಗೂ ವಿನಮ್ರ ಮನವಿ ಮಾಡುತ್ತಾ ಬಂದಿದ್ದಾಗ್ಯೂ, 21.11.2021ರಿಂದ ಈವರೆಗಿನ ಸಭೆಗಳಲ್ಲಿ ನಡೆದಿರುವ ವಿದ್ಯಮಾನಗಳಿಂದ, ಸಾರ್ವಜನಿಕ ವಲಯಗಳಲ್ಲಿ ಉಂಟಾಗಿರುವ ಟೀಕೆ-ಟಿಪ್ಪಣಿಗಳಿಂದ ಬೇಸತ್ತು ನನ್ನ ಜವಾಬ್ದಾರಿಯ ಭಾಗವಾಗಿ ಈ ಹಿಂದಿನ ಪತ್ರದಲ್ಲಿ ತಿಳಿಸಿರುವಂತೆ, ಈ ಎಲ್ಲ ಪ್ರಶ್ನೆಗಳನ್ನು ತಮಗೆ ಬಹಿರಂಗವಾಗಿ ಕೇಳಲೇಬೇಕಾದ ಅನಿವಾರ್ಯತೆಯಿಂದ ಪ್ರಶ್ನಿಸುತ್ತಿದ್ದೇನೆಯೇ ಹೊರತು ಬೇರಾವುದೇ ಉದ್ದೇಶದಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾ, ಸದ್ಯಕ್ಕೆ ಈ ಪತ್ರವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಪ್ರಕಾಶ್‌ಮೂರ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕ ಸಾ ಪ
Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
Literary Award: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಅವರಿಗೆ ಹಾಗೂ 2022ನೇ ಸಾಲಿನ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು (Literary Award) ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನ್ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.
ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ, ನನ್ನ ಜತೆ ಜತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿರುವ ಹಿರಿಯ ಸಾಹಿತಿ ವೈದೇಹಿಗೆ ಅಭಿನಂದನೆಗಳು. ನಾವು ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡವನ್ನು ಮರೆತು ಹೋಗಿದ್ದೇವೆ. ಮಾತೃಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಸೃಜನಶೀಲವಾಗಿರುವುದು ಸಾಧ್ಯ. ಅನ್ಯ ಭಾಷೆಯಲ್ಲಿ ಏನೇ ವಿಷಯವನ್ನು ಮಂಡಿಸಿದರೂ ಅದು ಕೇವಲ ಕಂಠಪಾಠ ಮಾತ್ರ ಆಗುತ್ತದೆ. ನಮ್ಮ ಸೃಜನಶೀಲತೆ ಉಳಿಯಲು ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೆಕು. ಅದಕ್ಕೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯೇ ಪ್ರಮಾಣವಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು ಮಾತನಾಡಿ, ಇವತ್ತಿನ ದಿನಮಾನದಲ್ಲಿ ಪುಸ್ತಕಗಳ ಓದುವ ಪದ್ಧತಿಗಳು ಕಾಣೆಯಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಇರುವ ಕನ್ನಡ ಕ್ರಿಯಾ ಸಮಿತಿ ಎಲ್ಲರ ಮೆಚ್ಚುಗೆಯ ಸಮಿತಿಯಾಗಿದೆ. ಕನ್ನಡವನ್ನು ಕಲಿಕೆಯಲ್ಲಿ, ಆಟದಲ್ಲಿ, ದಿನ ನಿತ್ಯದ ವ್ಯವಹಾರದಲ್ಲಿ ಮಕ್ಕಳು ನಿರಂತರವಾಗಿ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಕಷ್ಟವಾಗುತ್ತಿರುವುದು ಕಂಡು ಬರುತ್ತಿದೆ, ಸರಳ ಕನ್ನಡ ಬಳಸುವ ಕಲಿಸುವ ಪುಸ್ತಕಗಳು ಸಿದ್ಧವಾಗಬೇಕಿದೆ. ಬಾಲ್ಯದಲ್ಲಿಯೇ ಸಮರ್ಥವಾಗಿ ಭಾಷೆ ಕಲಿಸಿದರೆ ಅದರ ನಂಟು ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ ಮಾತನಾಡಿ, ಮಹಿಳಾ ಸಾಹಿತ್ಯದ ಶ್ರೇಷ್ಠ ಪ್ರತಿನಿಧಿ ವೈದೇಹಿ ಅವರು ಎಂದು ಗುರುತಿಸಿ ಅವರ ಕೊಡುಗೆ ಸಾರಸ್ವತ ಲೋಕಕ್ಕೆ ಅಪಾರ ಎಂದು ಬಣ್ಣಿಸಿದರು. ಹೊಸಬರ ಚಿಂತನೆಯಲ್ಲಿ ಹೊಸತನ ಇರುತ್ತದೆ. ಅದೇ ರೀತಿ ಯುವ ಬರಹಗಾರರು ಸಾಹಿತ್ಯ ಲೋಕದ ಹೊಸತನ ರಚಿಸುವ ನಕ್ಷತ್ರಗಳಾಗಿ ಬೆಳಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ʻಕನ್ನಡದ ಜ್ಞಾನಪೀಠʼ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. 7 ಲಕ್ಷದ 1 ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ವೈದೇಹಿಯವರ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರಹಗಾರ್ತಿ ವೈದೇಹಿ, ನಮ್ಮ ಕಾಲದಲ್ಲಿ ಮಾತ್ರ ಭಾಷೆಗೆ ಮಹತ್ವವಿತ್ತು. ಅದರಲ್ಲಿ ಮಿಂದು ಎದ್ದವರಿಗೆ ಆಡಿಪಾಡಿ ಬೆಳೆದವರಿಗಷ್ಟೇ ಕನ್ನಡದ ಚೆಲುವು ಅರಿಯಲು ಸಾಧ್ಯ. ಕನ್ನಡ ನಮ್ಮಲ್ಲಿ ನಿಗಿ ನಿಗಿಯಾಗಿ ಸೇರಿಕೊಂಡಿದ್ದು, ಅದು ಮಾತಿಗೆ, ಬರವಣಿಗೆಗೆ, ಜಗಳಕ್ಕೆ ಜೀವನಕ್ಕೆ ಹೀಗೆ ಎಲ್ಲದಕ್ಕೂ ನಮ್ಮ ಮಧ್ಯದಲ್ಲಿ ಅದು ಹಾಸು ಹೊಕ್ಕಾಗಿ ಹೋಗಿದೆ. ನಾನು ನಾನಾಗಿಯೇ ಬರಹಗಾರ್ತಿ ಆಗಲಿಲ್ಲ, ಕನ್ನಡವನ್ನೇ ನಂಬಿದ ನನಗೆ ಯಕ್ಷಗಾನದ ಕನ್ನಡದ ಜ್ಞಾನ ಶಬ್ದ ಭಂಡಾರ, ಕುಂದಾಪುರದ ಕುಂದ ಕನ್ನಡ ನನ್ನೊಳಗಿದ್ದ ಬರಹಗಾರ್ತಿಯನ್ನು ಜಾಗೃತಗೊಳಿಸಿತು. ಈ ಕನ್ನಡ ನೆಲವೇ ನನಗೆ ಬರಹಗಾರ್ತಿಯನ್ನಾಗಿ ಮಾಡಿತು. ಆದರೆ ಈಗ ಭಾಷೆ ಎನ್ನುವುದು ಸೌಹಾರ್ದದ ಸೇತುವೆಯಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯವುದು ಹೊಣೆ ನಮ್ಮೆಲರದ್ದು ಎಂಬ ಜವಾಬ್ದಾರಿಯುತ ಮಾತನ್ನು ಹಂಚಿಕೊಂಡರು.
ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿ, ಧಾರಣಾ ಶಕ್ತಿ ಇರುವ ಬೀಜ ಬಿತ್ತಿದಾಗ ಮಾತ್ರ ಅದು ಸಸಿಯಾಗುವಂತೆ ಹಿರಿಯ ಸಾಹಿತಿಗಳು ಬಿತ್ತಿದ ಸಾಹಿತ್ಯ ಬೀಜವೇ ಇಂದು ಯುವ ಸಾಹಿತಿಗಳು ಹುಟ್ಟುವುದಕ್ಕೆ ಕಾರಣವಾಗಿದೆ. ಕನ್ನಡದ ಪ್ರಜ್ಞೆ ಮೂಡಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಹಿರಿಯ ಕವಯತ್ರಿ ಸವಿತಾ ನಾಗಭೂಷಣ, ಕ.ರಾ.ರ.ಸಾ.ಸಂ. ಕೇಂದ್ರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು, ಪರಿಷತ್ ಪ್ರಕಟಣಾ ಸಮಿತಿ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ಪರಿಷತ್ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮತ್ತಿತರರು ಇದ್ದರು.
ಕ ಸಾ ಪ
Book Release: ನಿಲ್ಲು ನಿಲ್ಲೆ ಪತಂಗ ಮತ್ತು ಮಾಸ್ತಿ ಸಾಹಿತ್ಯ ಪರಿಚಯ ಪುಸ್ತಕ ಬಿಡುಗಡೆ
Book Release: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಾನುವಾರ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಲೇಖಕರನ್ನು ಪೋತ್ಸಾಹಿಸುವ ದೃಷ್ಟಿಯಿಂದ ಎಂ.ಎಲ್.ಆರ್. ಮಧುರ ಸಾಹಿತ್ಯ ಪ್ರಶಸ್ತಿ, ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು.
ಬೆಂಗಳೂರು: ಎನ್. ಶೈಲಜಾ ಹಾಸನ ಅವರ “ನಿಲ್ಲು ನಿಲ್ಲೆ ಪತಂಗ” ಕಥಾ ಸಂಕಲನ ಹಾಗೂ ಸಿ.ಎನ್. ಕೃಷ್ಣಮೂರ್ತಿ ಅವರು ರಚಿಸಿರುವ “ಮಾಸ್ತಿ ಸಾಹಿತ್ಯ ಪರಿಚಯ” ಎಂಬ ಪುಸ್ತಕಗಳನ್ನು (Book Release) ಭಾನುವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಅಲ್ಲದೆ, ಎಂ.ಎಲ್.ಆರ್. ಮಧುರ ಸಾಹಿತ್ಯ ಪ್ರಶಸ್ತಿ ಹಾಗೂ ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಕೊಡಮಾಡಲಾಯಿತು.
ಇದೇ ವೇಳೆ ಆಯ್ದ ಲೇಖಕರಿಗೆ ದಿವಂಗತ ಎಂ.ಎಲ್.ರಾಘವೇಂದ್ರ ರಾವ್ ಸ್ಮರಣಾರ್ಥ ಎಂ.ಎಲ್.ಆರ್ ಮಧುರ ಸಾಹಿತ್ಯ ಪ್ರಶಸ್ತಿ ಹಾಗೂ ದಿವಂಗತ ಜಿವಾಜಿರಾವ್ ಮೆಹೆಂದಳೆ ಸ್ಮರಣಾರ್ಥವಾಗಿ ಸಂಜೆ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. ಡಾ.ಕೆ.ಎಂ.ರಶ್ಮಿಯವರು ಎಂ.ಎಲ್.ಆರ್.ಮಧುರ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರೆ, ಲೇಖಕಿ ಶೈಲಜಾ ಹಾಸನ ಅವರು ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಲೇಖಕ ಸಂತೋಷ್ ಕುಮಾರ್ ಮೆಹೆಂದಳೆ, ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಲೇಖಕರನ್ನು ಗೌರವಿಸುವ ಸಲುವಾಗಿ ಮಾಡಿದ್ದೇವೆ. ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಈ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಬಳಿಕ ಮಾತನಾಡಿದ ವಿಕ್ರಂ ಪ್ರಕಾಶನದ ಹರಿಪ್ರಸಾದ ಮೋದ, ನಮ್ಮ ತಂದೆಯವರು ಕನ್ನಡ ಸಾಹಿತ್ಯಕ್ಕೆ 300ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದರು. ಆದರೆ ಅವರಿಗೆ ಯಾವ ಪ್ರಶಸ್ತಿಯನ್ನೂ ಕೊಡಲಿಲ್ಲ, ಅವರ ನೆನಪಿಗಾಗಿ ಲೇಖಕರನ್ನು ಗೌರವಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: Road Accident: ಹಾವೇರಿಯಲ್ಲಿ ರಸ್ತೆ ಅಪಘಾತ, ಮಹಿಳೆ ಸಾವು; ಬೆಂಗಳೂರಿನಲ್ಲಿ ವಾಹನ ಸವಾರರು ಪವಾಡಸದೃಶ ಪಾರು
ನಿಲ್ಲು ನಿಲ್ಲೆ ಪತಂಗ ಹಾಗೂ ಮಾಸ್ತಿ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಡಿಯೊ ಇಲ್ಲಿದೆ
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರ ಜಿ ವೆಂಕಟೇಶ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ, ರಂಗಭೂಮಿ ಕಲಾವಿದ ಬಾಬು ಹಿರಣಯ್ಯ, ಕರ್ಮವೀರ ಸಂಪಾದಕ ಅನಿಲ್ ಕುಮಾರ್, ಲೇಖಕ ಸಿ.ಎನ್.ಕೃಷ್ಣಮೂರ್ತಿ ಸೇರಿ ಹಲವರು ಭಾಗಿಯಾಗಿದ್ದರು.
ಬೆಂಗಳೂರು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ