ಕನ್ನಡ ರಾಜ್ಯೋತ್ಸವ
ವಿದೇಶದಲ್ಲೂ ಮೊಳಗಿತು ಕನ್ನಡ ಕಹಳೆ
ಮಂಗಳವಾರ ರಾಜ್ಯದಲ್ಲಿ ಮಾತ್ರವಲ್ಲದ ವಿದೇಶಗಳಲ್ಲೂ ಕನ್ನಡ ರಾಜ್ಯೋತ್ಸವದ ಕನ್ನಡ ಕಹಳೆ ಮೊಳಗಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಕನ್ನಡಿಗರಾದ ಡಾ. ಲೇಖನಾ, ಕಲಾ, ಲತಾ, ಶಿಲ್ಪಾ, ಚಂದ್ರಶೇಖರ್, ಅಮೋಘವರ್ಷ, ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು “ಹಚ್ಚೇವು ಕನ್ನಡದ ದೀಪ” ವಾಚನ ಮೂಲಕ ತಾವಿದ್ದಲ್ಲೇ ಕನ್ನಡ ರಾಜೋತ್ಸವ ಆಚರಿಸುವ ಮೂಲಕ ಕನ್ನಡ ಪ್ರೇಮ ಮೆರೆದರು.
ಕನ್ನಡ ರಾಜ್ಯೋತ್ಸವ
Barisu Kannada Dindimava | ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಉತ್ಸವ; ನಾಳೆ ನರೇಂದ್ರ ಮೋದಿ ಚಾಲನೆ, ಏನೇನಿದೆ ವಿಶೇಷ?
ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಉತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಲಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಫೆ. ೨೫) ನವದೆಹಲಿಯಲ್ಲಿ ಬಾರಿಸು ಕನ್ನಡ ಡಿಂಡಿಮವ ಎಂಬ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ದೆಹಲಿ ಕರ್ನಾಟಕ ಸಂಘದ ೭೫ನೇ ವಾರ್ಷಿಕೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಕಾರ್ಯಕ್ರಮ ಇದಾಗಿದೆ.
ಪ್ರಧಾನಿ ಮೋದಿಯವರ ಏಕ ಭಾರತ ಶ್ರೇಷ್ಠ ಭಾರತದ ಆಶಯಕ್ಕೆ ಅನುಗುಣವಾಗಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡುವ ಉದ್ದೇಶದಿಂದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀಸ್ಪಟಿಕಪುರ ನಂಜಾವಧೂತ ಸ್ವಾಮೀಜಿ, ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಬಿಜೆಪಿ ಮುಖಂಡ ಸಿ.ಟಿ ರವಿ ಸೇರಿದಂತೆ ಗಣ್ಯರು ಮೊದಲ ದಿನದ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲಿದ್ದಾರೆ.
ಫೆಬ್ರವರಿ 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‍ಕುಮಾರ್ ಉಪಸ್ಥಿತರಿರುತ್ತಾರೆ.
1000ಕ್ಕೂ ಅಧಿಕ ಕಲಾವಿದರು ಭಾಗಿ
ಆಜಾದಿ ಕಾ ಅಮೃತ ಮಹೋತ್ಸವದ ಆಶ್ರಯದಲ್ಲಿ ನಡೆಯುತ್ತಿರುವ ಈ ಉತ್ಸವದ ಎರಡು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಕವನ ವಾಚನದ ಮೂಲಕ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಗಳು ತೆರೆದುಕೊಳ್ಳಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 1,000ಕ್ಕೂ ಹೆಚ್ಚು ಕಲಾವಿದರನ್ನು ಆಹ್ವಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 10,000ದಿಂದ 12,000 ಕನ್ನಡಿಗರು ನೆಲೆಸಿದ್ದಾರೆ. ಅದರಲ್ಲಿ ಸುಮಾರು 3,500 ದೆಹಲಿ ಕರ್ನಾಟಕ ಸಂಘದ ಸದಸ್ಯರಾಗಿದ್ದಾರೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜು ಹೇಳಿದ್ದಾರೆ.
ಮಾಜಿ ಅಧ್ಯಕ್ಷರು ಉತ್ಸವದಿಂದ ದೂರ
ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರು ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಣಯಿಸಿದ್ದಾರೆ. ʻʻಕರ್ನಾಟಕ ಸಂಘವು ಇದುವೇ ಫೆಬ್ರವರಿ 25 ಮತ್ತು 26, ರಂದು ಆಚರಿಸುತ್ತಿರುವ ಸುವರ್ಣ ಮಹೋತ್ಸವ ಆಚರಣೆಯು ಸಂಘದ ಮೂಲ ಉದ್ದೇಶದಿಂದ ಬಹಳ ದೂರ ಸರಿದಿದೆ ಎಂದು ನಾವು ಭಾವಿಸುತ್ತೇವೆ. ಕನ್ನಡ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿಯ ಸಮಾವೇಶವಾಗಬೇಕಾಗಿದ್ದ ಸುವರ್ಣ ಸಂಭ್ರಮವು ದೆಹಲಿ ಕನ್ನಡಿಗರನ್ನು ಕೇಂದ್ರದಲ್ಲಿರಿಸಿಕೊಂಡು ನಡೆಯುತ್ತಿಲ್ಲ” ಎಂದು ಮಾಜಿ ಅಧ್ಯಕ್ಷರು ಆರೋಪಿಸಿದ್ದಾರೆ.
“ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೇಖಕ, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಕಾಣುತ್ತಿಲ್ಲ. ಕಾರ್ಯಕ್ರಮದ ಒಟ್ಟು ಆಯೋಜನೆಯಲ್ಲಿ ಸಂಘದ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುವ ವಿಚಾರವಾಗಿದೆ. ಕಾರ್ಯಕಾರೀ ಸಮಿತಿಯ ಕೆಲವು ಸದಸ್ಯರಿಗೂ ವಿಷಯ ಸ್ಪಷ್ಟತೆಯಿಲ್ಲ. ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ. ಇಂಥ ಹಲವು ಕಾರಣಗಳಿಂದಾಗಿ ನಾವು ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಣಯಿಸಿದ್ದೇವೆ” ಎಂದು ಸಂಘದ ಮಾಜಿ ಅಧ್ಯಕ್ಷರುಗಳಾದ ಡಾ. ಪುರುಷೋತ್ತಮ ಬಿಳಿಮಲೆ, ಡಾ. ವೆಂಕಟಾಚಲ ಹೆಗಡೆ ಮತ್ತು ವಸಂತ ಶೆಟ್ಟಿ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Shivamogga Airport : ಈ ವಿಮಾನ ನಿಲ್ದಾಣ ವಾಣಿಜ್ಯ, ಸಂಪರ್ಕ, ಪ್ರವಾಸೋದ್ಯಮಕ್ಕೆ ಬೂಸ್ಟ್ ಎಂದ ಮೋದಿ
ಕ ಸಾ ಪ
ಕನ್ನಡ ಸಾಹಿತ್ಯ ಸಮ್ಮೇಳನ | ಇದು ಧರ್ಮ ಸಮ್ಮೇಳನವಲ್ಲ, ಇಲ್ಲಿ ಕನ್ನಡವೇ ಸಾರ್ವಭೌಮ: ಟೀಕಿಸಿದವರಿಗೆ ಮಹೇಶ ಜೋಶಿ ಉತ್ತರ
ಇದು ಧರ್ಮ ಆಧಾರಿತ, ಜಾತಿ ಆಧಾರಿತ ಸಾಹಿತ್ಯ ಸಮ್ಮೇಳನವಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ನುಡಿದರು.
ಹಾವೇರಿ (ಕನಕ- ಶರೀಫ- ಸರ್ವಜ್ಞ ವೇದಿಕೆ): ಹಾವೇರಿಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರ ಇಡಲಾಗಿದೆ ಎಂಬ ಬಿ.ಕೆ. ಹರಿಪ್ರಸಾದ್ ಮಾತುಗಳನ್ನು ನಾನು ಒಪ್ಪುವುದಿಲ್ಲ. ಇದು ಧರ್ಮ ಆಧಾರಿತ, ಜಾತಿ ಆಧಾರಿತ ಸಾಹಿತ್ಯ ಸಮ್ಮೇಳನವಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ನುಡಿದರು.
ನಾನು ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತಾಡುವುದಿಲ್ಲ. ಆದರೆ ಟೀಕಿಸಿದವರಿಗೆ ಉತ್ತರ ನೀಡದಿದ್ದರೆ ಅದನ್ನು ಒಪ್ಪಿಕೊಂಡಂತಾಗುತ್ತದೆ. ಸಮಾನತೆಯ ಹರಿಕಾರ ಸಂತ ಶಿಶುನಾಳ ಶರೀಫರ ನಾಡಿನಲ್ಲಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಂದೇಶ ನೀಡಿದ ಕನಕದಾಸರ ಈ ನಾಡಿನಲ್ಲಿ ಧರ್ಮಾಧಾರಿತವಾಗಿ ಅನ್ಯಾಯ ಮಾಡಲು ಸಾಧ್ಯವಿಲ್ಲ. ಮುಖ್ಯ ವೇದಿಕೆಯಲ್ಲಿ ಇಬ್ಬರು ಮುಸ್ಲಿಮರಿಗೆ ಸನ್ಮಾನ ಮಾಡಿದ್ದೇವೆ. ಆದರೆ ಅವರ ಹೆಸರಿನಲ್ಲಿ ಅದು ತಿಳಿಯುವುದಿಲ್ಲ ಎಂದರು.
ಇನ್ನು ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜತೆಗೆ ಮುಖ್ಯಮಂತ್ರಿಗಳ ಫೋಟೋ ಹಾಕಿದ್ದನ್ನೂ ಟೀಕಿಸಲಾಯಿತು. ಹಾವೇರಿ ಸಮ್ಮೇಳನದ ಯಶಸ್ಸಿಗೆ ಹಾವೇರಿ ಜನತೆಯಂತೆಯೇ ಮುಖ್ಯಮಂತ್ರಿಗಳೂ ಕಾರಣ. ಹೀಗಾಗಿ ಸಮ್ಮೇಳನಾಧ್ಯಕ್ಷರ ಫೋಟೋ ಜತೆಗೆ ಅವರ ಫೋಟೋವನ್ನೂ ಹಾಕಿದ್ದೇವೆ ಎಂದು ನುಡಿದರು.
ಹಿಂದೆ ಇಂಥ ಸಮ್ಮೇಳನ ಆಗಿಲ್ಲ, ಮುಂದೆ ಆಗುವುದೂ ಇಲ್ಲ ಎಂಬ ವಿಶ್ವಾಸವಿದೆ. ಹಲಕೆಲವು ಸವಾಲುಗಳು, ಪ್ರಶ್ನೆಗಳು, ಕೊರತೆಗಳು ಉಂಟಾಗಿರಬಹುದು. ಆದರೆ ಇಂತಹ ಬೃಹತ್ ಕಾರ್ಯಕ್ರಮದಲ್ಲಿ ಇವು ಸಾಮಾನ್ಯ. ಮೂರು ದಿನಗಳ ಕಾರ್ಯಕ್ರಮದ ಯಶಸ್ಸಿನಿಂದ ದಿವ್ಯಾನುಭೂತಿ ಉಂಟಾಗಿದೆ ಎಂದು ಅವರು ನುಡಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸ್ಥಳೀಯ ಭಾಷೆಗೆ ಒತ್ತಾಸೆ ನೀಡಿದ ಅಮಿತ್ ಶಾ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ
ಕನ್ನಡ ರಾಜ್ಯೋತ್ಸವ
Kannada Flag | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸಿದ ಕನ್ನಡ ಬಾವುಟ; ಮಗುವಿನ ಕಾಲಿಗೆ ನಮಸ್ಕರಿಸಿದ ಆನಂದ್ ಸಿಂಗ್
ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಕನ್ನಡ ರಾಜ್ಯೋತ್ಸವ ಸಂಭ್ರಮ ಕಡಿಮೆ ಆಗಿಲ್ಲ. ಹೊಸಪೇಟೆಯಲ್ಲಿ ಕನ್ನಡ ಬಾವುಟ (Kannada Flag) ಹಾರಿಸಿ, ಶಾಶ್ವತವಾಗಿ ಉಳಿಯುವಂತೆ ಮಾಡಲಾಗಿದೆ.
ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಹೃದಯ ಭಾಗದಲ್ಲಿರುವ ಡಾ.ಪುನೀತ್ ರಾಜಕುಮಾರ್ ಸರ್ಕಲ್‌ನಲ್ಲಿ ಈಗಾಗಲೇ ನಿರ್ಮಾಣವಾಗಿರುವ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಶಾಶ್ವತವಾಗಿ ಕನ್ನಡ ಬಾವುಟ (Kannada Flag) ಹಾರಾಡುವಂತೆ ಮಾಡಲಾಗಿದೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾನುವಾರ (ನ. ೨೭) ಈ ವಿಶೇಷ ಕೆಲಸಕ್ಕೆ ಭಾನುವಾರ ಚಾಲನೆ ನೀಡಿದರು.
ವಿರೂಪಾಕ್ಷೇಶ್ವರನ ಕೃಪೆಯಿಂದ ಈ ಉತ್ತಮ ಕಾರ್ಯ ಇಂದು ನೆರವೇರಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದು, ಧ್ವಜ ಸ್ತಂಭ 150 ಅಡಿ ಇದ್ದರೆ, ಕನ್ನಡ ಧ್ವಜ ಸರಿಸುಮಾರು 450 ಅಡಿಗೂ ಅಧಿಕ ಉದ್ದ-ಅಗಲವಿದೆ. ವಿಜಯನಗರ ಜಿಲ್ಲೆಯ ಜನ ಶಾಶ್ವತವಾಗಿ ವರ್ಷದ 365 ದಿನವೂ ಕನ್ನಡ ಹಬ್ಬ ಆಚರಣೆ ಮಾಡಬೇಕು. ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಈ ಕಾರ್ಯವನ್ನು ನೆರವೇರಿಸಿದ್ದೇವೆ ಎಂದಿದ್ದಾರೆ.
ಕನ್ನಡ ಬಾವುಟವು ಇಂದಿನಿಂದ ಶಾಶ್ವತವಾಗಿ ಬಾಣಂಗಳದಲ್ಲಿ ಹಾರಾಡಲಿದೆ. ಇದರ ಸೌಭಾಗ್ಯ ಪಡೆದ ವಿಜಯನಗರ ಜಿಲ್ಲೆಯ ಜನರೇ ಧನ್ಯರು ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗುಜ್ಜಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಬೃಹತ್ ಎತ್ತರದ ಧ್ವಜ ಸ್ತಂಭದಲ್ಲಿ ಕನ್ನಡದ ಅತಿ ದೊಡ್ಡ ಬಾವುಟ ಹಾರಾಡುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಸೇರಿದ್ದರು. ಇತ್ತ ನಗರಸಭೆ ಅಧ್ಯಕ್ಷೆ ಸುಂಕಮ್ಮ ಖುಷಿಯಿಂದ ಕುಣಿದು ಕುಪ್ಪಳಿಸಿದ್ದು ಕಂಡುಬಂತು.
ಪುಟಾಣಿಯ ಭಾಷಣಕ್ಕೆ ತಲೆದೂಗಿ ಕಾಲಿಗೆ ನಮಸ್ಕರಿಸಿದ ಸಚಿವ
ಕನ್ನಡ ಸಂಭ್ರಮದಲ್ಲಿ 6 ವರ್ಷದ ಅಭಿನವ್‌ನ ಭಾಷಣಕ್ಕೆ ತಲೆದೂಗಿದ ಸಚಿವ ಆನಂದ್ ಸಿಂಗ್ ಪುಟಾಣಿಯ ಕಾಲಿಗೆ ನಮಸ್ಕರಿಸಿ, ಮುದ್ದಾಡಿದರು. ವಿಶೇಷ ಚೇತನವಾಗಿರುವ ಅಭಿನವ್ ವಿಶ್ವಚೇತನ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದು, ಕನ್ನಡ ರಾಜ್ಯೋತ್ಸವ ಉದ್ದೇಶಿಸಿ ಭಾಷಣ ಮಾಡಿದ್ದಾನೆ. ಈತನ ಭಾಷಣಕ್ಕೆ ಸೇರಿದ್ದವರು ಚಪ್ಪಾಳೆಯ ಮೂಲಕ ಉರಿದುಂಬಿಸಿದ್ದರೆ, ಸಚಿವರು ಪುಟಾಣಿಯ ಕಾಲಿಗೆ ನಮಿಸಿದರು.
ಇದನ್ನೂ ಓದಿ | Aditi Prabhudeva | ಮದರಂಗಿ ಸಂಭ್ರಮದಲ್ಲಿ ಅದಿತಿ ಪ್ರಭುದೇವ: ರಂಗು ರಂಗಾದ ಫೋಟೊಗಳಿವೆ ನೋಡಿ!
ಕನ್ನಡ ರಾಜ್ಯೋತ್ಸವ
ರಾಜ್ಯೋತ್ಸವ ಪ್ರಶಸ್ತಿ | 67 ಸಾಧಕರಿಗೆ ಗೌರವ: 60 ವರ್ಷ ವಯೋಮಿತಿ ನಿಯಮ ಬದಲಾವಣೆಗೆ ಸಿಎಂ ಬೊಮ್ಮಾಯಿ ಸೂಚನೆ
ರಾಜ್ಯದ 67 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಂದಿನ ವರ್ಷದಿಂದ ವಯೋಮಿತಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪಡೆಯುವವರಿಗೆ ೬೦ ವರ್ಷ ಆಗಿರಬೇಕು ಎಂಬ ಈಗಿನ ನಿಯಮವನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ನಾಡಿನ ೬೭ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕೊಟ್ಟಿರುವುದಕ್ಕೆ ಇಡೀ ಕರ್ನಾಟಕ ಸಂಭ್ರಮಿಸುತ್ತಿದೆ. ಒಬ್ಬ ಸಣ್ಣ ವಯಸ್ಸಿನ ಸಾಧಕನಿಗೆ ಈ ಪ್ರಶಸ್ತಿ ಸಂದಿರುವುದು ಎಲ್ಲರಿಗೂ ಖುಷಿ ತಂದಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವ ವಿಚಾರದಲ್ಲಿ 60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ಎಂದು ನಿಯಮ ಮಾಡಿರುವುದು ಸರ್ಕಾರದ ತಪ್ಪು ನಡೆ. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ಕೊಟ್ರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶ ಸಿಗುತ್ತದೆ.ಮುಂದಿನ ವರ್ಷದ ಇದರ ಬದಲಾವಣೆ ಆಗಲೇಬೇಕು ಎಂದರು. ಮುಂದಿನ ವರ್ಷದಿಂದ ವಯಸ್ಸಿನ ಮಿತಿ ಇಲ್ಲದೆ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಘೋಷಿಸಿದರು.
ಸಾಧಕರ ಕಥೆಗಳನ್ನು ಒಳಗೊಂಡ ಪುಸ್ತಕ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆ, ಅವರ ಅನುಭವ ಮತ್ತು ಸಂದೇಶಗಳನ್ನ ದಾಖಲಿಸಿ ಒಂದು ಪುಸ್ತಕ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಅವರು ಸಲಹೆ ನೀಡಿದರು.
ಪ್ರಶಸ್ತಿ ಪಡೆದವರ ಸಾಧನೆ, ನಾಡು ಕಟ್ಟುವಲ್ಲಿ ಅವರ ಶ್ರಮವನ್ನು ತಿಳಿದುಕೊಂಡು ದಾಖಲಿಸಬೇಕು. ಅದನ್ನು ಸೇರಿಸಿ ಒಂದು ಕೃತಿ ರಚಿಸಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು ಎಂದು ಸಿಎಂ ಅವರು ಸಚಿವ ಸುನಿಲ್ ಕುಮಾರ್ ಅವರಿಗೆ ಸಲಹೆ ನೀಡಿದರು.…
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೬೭ ಸಾಧಕರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕ ನೀಡಿ ಗೌರವರಿಸಿದರು. ಪ್ರಶಸ್ತಿಯು ಐದು ಲಕ್ಷ ರೂ. ನಗದನ್ನು ಒಳಗೊಂಡಿದೆ.
ಸಾಧಕರನ್ನು ಗುರುತಿಸಿ ಗೌರವ ಎಂದ ಸಚಿವರು
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ತಾಯಿ ಭುವನೇಶ್ವರಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು, ಕಲಾವಿದರ ಪಿಂಚಣಿಯನ್ನು ೧೫೦೦ರಿಂದ ೨೦೦೦ ರೂ.ಗಳಿಗೆ ಏರಿಸಲಾಗಿದೆ. ೧೨೦೦೦ ಜನರಿಗೆ ನೀಡುತ್ತಿದ್ದ ಪಿಂಚಣಿಯನ್ನು ೧೫೦೦೦ ಮಂದಿಗೆ ಹೆಚ್ಚಿಸಲಾಗಿದೆ ಎಂದರು.
ಈ ಸಾರಿ ಅರ್ಜಿಗಳನ್ನು ಹೆಚ್ಚು ಸ್ವೀಕಾರ ಮಾಡದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸೇವಾ ಸಿಂಧು ಆ್ಯಪ್‌ನಲ್ಲಿ 9000 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ. ಸರವಣ, ಶಾಸಕ ಉದಯ್ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.
2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇವರು
ಸಂಕೀರ್ಣ ಕ್ಷೇತ್ರ: ಸುಬ್ಬರಾಮ ಶೆಟ್ಡಿ – ಬೆಂಗಳೂರು, ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ – ಬೆಂಗಳೂರು, ಶ್ರೀಮತಿ ಸೋಲಿಗರ ಮಾದಮ್ಮ – ಚಾಮರಾಜನಗರ
ಸೈನಿಕ ಕ್ಷೇತ್ರ: ಸುಬೇದಾರ್ ಬಿ.ಕೆ ಕುಮಾರಸ್ವಾಮಿ – ಬೆಂಗಳೂರು
ಪತ್ರಿಕೋದ್ಯಮ: ಎಚ್ ಆರ್ ಶ್ರೀಶಾ – ಬೆಂಗಳೂರು, ಜಿ.ಎಂ.ಶಿರಹಟ್ಟಿ - ಗದಗ
ವಿಜ್ಞಾನ ತಂತ್ರಜ್ಞಾನ: ಕೆ.ಶಿವನ್ – ಬೆಂಗಳೂರು, ಡಾ.ಡಿ.ಆರ್.ಬಳೂರಗಿ – ರಾಯಚೂರು
ಕೃಷಿ ಕ್ಷೇತ್ರ: ಗಣೇಶ್ ತಿಮ್ಮಯ್ಯ – ಕೊಡಗು, ಚಂದ್ರಶೇಖರ್ ನಾರಯಣಪುರ – ಚಿಕ್ಕಮಗಳೂರು
ಪೌರ ಕಾರ್ಮಿಕ: ಮಲ್ಲಮ್ಮ ಹೂವಿನಹಡಗಲಿ – ವಿಜಯನಗರ
ಪರಿಸರ: ಸಾಲುಮರದ ನಿಂಗಣ್ಣ – ರಾಮನಗರ
ಆಡಳಿತ: ಎಲ್ ಎಚ್ ಮಂಜುನಾಥ್ -ಶಿವಮೊಗ್ಗ, ಮದನ್ ಗೋಪಾಲ – ಬೆಂಗಳೂರು
ಹೊರನಾಡು: ದೇವಿದಾಸ್ ಶೆಟ್ಟಿ – ಮುಂಬೈ, ಅರವಿಂದ್ ಪಾಟೀಲ್ – ಹೊರನಾಡು, ಕೃಷ್ಣಮೂರ್ತಿ ಮಾಂಜಾ- ತೆಲಂಗಾಣ
ಹೊರದೇಶ: ರಾಜ್ ಕುಮಾರ್ – ಗಲ್ಫ್ ರಾಷ್ಟ್ರ
ವೈದ್ಯಕೀಯ ಕ್ಷೇತ್ರ: ಎಚ್ಎಸ್ ಮೋಹನ್ – ಶಿವಮೊಗ್ಗ
ಬಸವಂತಪ್ಪ – ದಾವಣಗೆರೆ
ಚಲನಚಿತ್ರ: ದತ್ತಣ್ಣ – ಚಿತ್ರದುರ್ಗ, ಅವಿನಾಶ್- ಬೆಂಗಳೂರು
ಕಿರುತೆರೆ: ಸಿಹಿಕಹಿ ಚಂದ್ರು
ಸಾಹಿತ್ಯ: ಶಂಕರ್ ಚಚಡಿ – ಬೆಳಗಾವಿ, ಪ್ರೊಫೆಸರ್ ಕೃಷ್ಣೇಗೌಡ – ಮೈಸೂರು, ಅಶೋಕ್ ಬಾಬು ನೀಲಗಾರ್ – ಬೆಳಗಾವಿ, ಅ.ರಾ.ಮಿತ್ರ – ಹಾಸನ, ರಾಮಕೃಷ್ಣ ಮರಾಠೆ – ಕಲಬುರಗಿ
ಯಕ್ಷಗಾನ: ಎಂ.ಎ ನಾಯಕ್ – ಉಡುಪಿ, ಸುಬ್ರಹ್ಮಣ್ಯ ಧಾರೇಶ್ವರ – ಉತ್ತರ ಕನ್ನಡ, ಸರಪಾಡಿ ಅಶೋಕ್ ಶೆಟ್ಡಿ – ದಕ್ಷಿಣ ಕನ್ನಡ
ಕ್ರೀಡೆ: ದತ್ತಾತ್ರೇಯ ಗೋವಿಂದ ಕುಲಕರ್ಣಿ – ಧಾರವಾಡ, ರಾಘವೇಂದ್ರ ಅಣ್ಣೇಕರ್ – ಬೆಳಗಾವಿ
10 ಸಂಸ್ಥೆಗಳಿಗೆ ಪ್ರಶಸ್ತಿ
1) ರಾಮಕೃಷ್ಣ ಆಶ್ರಮ, ಮೈಸೂರು
2) ಲಿಂಗಾಯತ ಪ್ರಗತಿಶೀಲ ಸಂಘ, ಗದಗ
3) ಹಾವೇರಿಯ ಅಗಡಿ ತೋಟ
4) ತಲಸ್ಸೆಮಿಯಾ ಹಾಗೂ ಹಿಮೆಫೆಲಿಮಾ ಸೊಸೈಟಿ
5) ಅಮೃತ ಶಿಶು ನಿವಾಸ, ಬೆಂಗಳೂರು
6) ಸುಮನಾ ಫೌಂಡೇಶನ್
7) ಯುವವಾಹಿನಿ ಸಂಸ್ಥೆ, ದಕ್ಷಿಣ ಕನ್ನಡ
8) ನೆಲೆ ಫೌಂಡೇಶನ್, ಬೆಂಗಳೂರು
9) ನಮ್ಮನೆ ಸುಮ್ಮನೆ , ಬೆಂಗಳೂರು
10) ಉಮಾ ಮಹೇಶ್ವರಿ ಹಿಂದುಳಿದ ವರ್ಗಗಳ ಟ್ರಸ್ಟ್, ಮಂಡ್ಯ
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ| ಕನ್ನಡ ಭಾಷಾ ಬಳಕೆ ಕಡ್ಡಾಯಕ್ಕೆ ಡಿಸೆಂಬರ್‌ನಲ್ಲಿ ಶಾಸನ: ಮುಖ್ಯಮಂತ್ರಿ ಬೊಮ್ಮಾಯಿ
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ