ಆರೋಗ್ಯ
Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?
ಗೋಡಂಬಿ ತಿನ್ನುವುದರಿಂದ (Health Tips) ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ ಇತ್ಯಾದಿ ಸಮಸ್ಯೆ ಹೇಳುವವರಿದ್ದಾರೆ. ಆದರೆ ವಾಸ್ತವ ಏನು? ಇಲ್ಲಿದೆ ಮಾಹಿತಿ.
ಬೆಂಗಳೂರು: ಸಿಹಿ ತಿಂಡಿಗಳಿಗೂ ಒಗ್ಗರಣೆ (Health Tips) ಬೇಕಾಗುತ್ತದೆ- ಅಂದರೆ ಬೆಳ್ಳುಳ್ಳಿ, ಇಂಗು ಇತ್ಯಾದಿಗಳದ್ದಲ್ಲ. ಸಾರಿಗೆ ಹಾಕುವ ಒಗ್ಗರಣೆಗೂ ಪಾಯಸಕ್ಕೆ ಹಾಕುವ ಒಗ್ಗರಣೆಗೂ ವ್ಯತ್ಯಾಸವಿದೆಯಲ್ಲ. ಹಾಗೆ ಪಾಯಸಕ್ಕೆ ಹಾಕುವ ಒಗ್ಗರಣೆಯ ಮುಖ್ಯ ವಸ್ತುಗಳಲ್ಲಿ ಒಂದು ಗೋಡಂಬಿ ಅಥವಾ (Cashew Health Tips) ಗೇರುಬೀಜ. ಇದೇನು ಪಾಯಸಕ್ಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಸಿಹಿ ಖಾದ್ಯಗಳಲ್ಲಿ, ಖಾರದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವಂಥದ್ದು. ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.
ಗೋಡಂಬಿಗಳು ತೂಕ ಹೆಚ್ಚಿಸುತ್ತವೆಯೇ?
ಹಾಗೇನಿಲ್ಲ. ಆದರೆ ಇದು ಹೆಚ್ಚಿನ ಕ್ಯಾಲರಿ ಹೊಂದಿರುವ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಸುಮಾರು ೧೦೦ ಗ್ರಾಂ ಗೋಡಂಬಿಯಲ್ಲಿ ಸುಮಾರು ೫೫೦ ಕ್ಯಾಲರಿಗಳಿರುತ್ತವೆ. ಹಾಗಾಗಿ ಗೋಡಂಬಿ ಮಾತ್ರವೇ ಅಲ್ಲ, ಎಲ್ಲಾ ಬೀಜಗಳೂ ಕ್ಯಾಲರಿಯಲ್ಲಿ ಹೆಚ್ಚು ತೂಗುವುದರಿಂದ ಅವುಗಳನ್ನು ಮಿತವಾದ ಪ್ರಮಾಣದಲ್ಲಿ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.
ಹಾಗೆ ನೋಡಿದರೆ, ಲೆಕ್ಕಾಚಾರದಲ್ಲಿ ಗೋಡಂಬಿ ತಿನ್ನುವುದರಿಂದ ತೂಕ ಇಳಿಸಲೂ ಸಾಧ್ಯವಿದೆ. ಕಾರಣ, ಇದರಲ್ಲಿರುವ ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬಿನಿಂದಾಗಿ ಆರೋಗ್ಯಕ್ಕೆ ಲಾಭವಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Cashew Benefits: ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲ ಎನ್ನುವುದು ನಿಜವೆ?
ಗೋಡಂಬಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ ಕಷ್ಟವೇ?
ಇದೂ ಪೂರ್ಣ ನಿಜವಲ್ಲ. ಸಾಮಾನ್ಯವಾಗಿ ಸಸ್ಯಜನ್ಯ ಆಹಾರಗಳಿಂದ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ; ಇದೇನಿದ್ದರೂ ಪ್ರಾಣಿಜನ್ಯ ಆಹಾರಗಳಿಂದಲೇ ಹೆಚ್ಚು. ಆದರೊಂದು, ಗೋಡಂಬಿಯಲ್ಲಿರುವ ಫೈಟೊಸ್ಟೆರಾಲ್‌ಗಳ ರಾಸಾಯನಿಕ ವಿನ್ಯಾಸ ಕೊಲೆಸ್ಟ್ರಾಲ್‌ನಂತೆಯೇ ಇದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದಿನಕ್ಕೆ 25 ಗ್ರಾಂ ಮೀರದಂತೆ ಗೋಡಂಬಿ ತಿನ್ನುವುದರಿಂದ, ದೇಹದಲ್ಲಿ ಎಲ್‌ಡಿಎಲ್ ಕಡಿಮೆ ಮಾಡಿ, ಎಚ್‌ಡಿಎಲ್ ಏರಿಸುವ ಕೆಲಸಕ್ಕೆ ಸಹಾಯ ದೊರೆಯುತ್ತದೆ.
ಇದರಿಂದ ಮಧುಮೇಹ ಹೆಚ್ಚುವುದೇ?
ಈ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ. ಗೋಡಂಬಿಯಲ್ಲಿರುವ ಉತ್ತಮ ಗುಣಮಟ್ಟದ ಕೊಬ್ಬು, ಪ್ರೊಟೀನ್ ಮತ್ತು ನಾರಿನಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವು ನೀಡುತ್ತವೆ. ಗೋಡಂಬಿಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯೇ ಇದೆ (25). ಅಂದರೆ, ಇದು ದೇಹದಲ್ಲಿ ನಿಧಾನಕ್ಕೆ ಹೀರಲ್ಪಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಕೆ ಮಾಡುವುದಿಲ್ಲ. ಆದರೆ ಮಧುಮೇಹಿಗಳಿಗೆ ಇಂತಹ ಹೆಚ್ಚು ಕ್ಯಾಲರಿಯ ಆಹಾರ ತಿನ್ನುವಾಗ ಹೆಚ್ಚಿನ ಎಚ್ಚರಿಕೆ ಮತ್ತು ನಿಯಂತ್ರಣದ ಅಗತ್ಯವಿದೆ.
ಇದನ್ನೂ ಓದಿ: ಗೋಡಂಬಿ ಅಲ್ಲ ಇದು ಮೊಟ್ಟೆ!
ಗೋಡಂಬಿ ತಿನ್ನುವುದರಿಂದ ಮುಖದ ಮೇಲೆ ಮೊಡವೆ ಹೆಚ್ಚುವುದೇ?
ಇದಕ್ಕೂ ವೈಜ್ಞಾನಿಕವಾಗಿ ಯಾವುದೇ ಆಧಾರಗಳಿಲ್ಲ. ಹಾಗೆ ನೋಡಿದರೆ, ಗೋಡಂಬಿಯಲ್ಲಿರುವ ಸೆಲೆನಿಯಂ ಮತ್ತು ವಿಟಮಿನ್ ಸಿ ಅಂಶಗಳು ಚರ್ಮದ ಆರೋಗ್ಯಕ್ಕೆ ಲಾಭದಾಯಕವಾದಂಥವು. ಇಷ್ಟು ಮಾತ್ರವಲ್ಲ, ಗೇರುಬೀಜದಲ್ಲಿರುವ ಒಳ್ಳೆಯ ಕೊಬ್ಬಿನಿಂದಾಗಿ ದೇಹದಲ್ಲಿ ಉರಿಯೂತ ಕಡಿಮೆಯಾಗಲು ಸಾಧ್ಯವಿದೆ. ಉರಿಯೂತದ ಪ್ರಮಾಣ ಹೆಚ್ಚುವುದು ಸಹ ಚರ್ಮದ ಕಿರಿಕಿರಿ, ಮೊಡವೆಯಂಥ ಸಮಸ್ಯೆಗಳಿಗೆ ಕಾರಣವಾಗಬಹುದು.
ಆದಾಗ್ಯೂ, ಪ್ರತಿಯೊಬ್ಬರ ದೇಹವೂ ಅನನ್ಯ. ಎಲ್ಲರಿಗೂ ಒಂದೇ ತತ್ವವನ್ನು ಹೇರಲು ಸಾಧ್ಯವಿಲ್ಲ. ಹಾಗಾಗಿ ಬೀಜಗಳ ಅಲರ್ಜಿ ಇರುವವರಿಗೆ ಗೋಡಂಬಿ ಸೇವನೆ ಸಮಸ್ಯೆ ತರಬಹುದು. ಉಸಿರಾಟ ತೊಂದರೆ, ಚರ್ಮದ ಕಿರಿಕಿರಿ ಇಂಥವೆಲ್ಲಾ ಅಲರ್ಜಿಯಿಂದಲೂ ಪ್ರಚೋದನೆ ಪಡೆಯಬಹುದು. ಯಾವ ಆಹಾರ ನಮಗೆ ಹಿತ ಎನ್ನುವುದನ್ನು ನಾವೇ ಕಂಡುಕೊಳ್ಳಬೇಕು. ಜೊತೆಗೆ, ಸೇವನೆಯಲ್ಲಿ ಮಿತಿಮೀರದಂತೆ ಎಚ್ಚರಿಕೆಯೂ ಬೇಕು.
ಆರೋಗ್ಯ
World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ
ದೇಹದ ಉಳಿದೆಲ್ಲ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು.
ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-
ಬಿಸಿಯಾದ, ತಾಜಾ ಆಹಾರ ಸೇವಿಸಿ
ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್‌ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು
ಸಾಂಬಾರ್ ಪದಾರ್ಥಗಳು
ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ
ಹರ್ಬಲ್ ಚಹಾಗಳು ಅಥವಾ ಕಷಾಯಗಳು
ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ
ಆರೋಗ್ಯಕರ ಕೊಬ್ಬು
ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.
ಜೇನುತುಪ್ಪ
ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.
ಸಂಸ್ಕರಿತ/ರಿಫೈನ್ಡ್ ಆಹಾರಗಳು ಬೇಡ
ಬಿಳಿ ಅಕ್ಕಿ, ರಿಫೈನ್ಡ್ ಎಣ್ಣೆ, ಬಿಳಿ ಬ್ರೆಡ್, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.
ನೀರು-ನಿದ್ದೆ ಬೇಕು
ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಆರೋಗ್ಯ
Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?
ಕಣ್ಣು ಅದುರುವುದು (Tips For Eyes) ಸಾಮಾನ್ಯ. ಆದರೆ ಇದು ಶಕುನದ ಸೂಚಕ ಎಂದು ಹೇಳುವವರೇ ಹೆಚ್ಚು. ಆದರೆ ಇದಕ್ಕೆ ಅಸಲಿ ಕಾರಣ ಏನು? ಪರಿಹಾರ ಏನು? ಈ ಲೇಖನ ಓದಿ.
ಕಣ್ಣು ಅದುರುತ್ತಿದೆಯೇ? (Tips For Eyes) ಎಡಗಣ್ಣೋ- ಬಲಗಣ್ಣೋ? ಇದೆಂಥಾ ಶಕುನವೆಂದು ಪಂಚಾಂಗ ನೋಡುವುದೋ ಅಥವಾ ಯಾರಲ್ಲೋ ಶಾಸ್ತ್ರ ಕೇಳುವವರಿಗೇನೂ ಬರವಿಲ್ಲ. ಮುಂದಾಗಲಿರುವ ಯಾವುದನ್ನೋ, ಅದುರುವ ಮೂಲಕ ಸೂಚಿಸುವುದಕ್ಕೆ ಕಣ್ಣುಗಳಿಗೆ ಸಾಧ್ಯವಿಲ್ಲದಿದ್ದರೂ, ದೇಹದ ಕುರಿತಾಗಿ ಬೇರೇನನ್ನೋ ಅವು ಸೂಚಿಸುವುದು ಹೌದು. ಅಂದರೆ, ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್ ಅಥವಾ ಆಲ್ಕೊಹಾಲ್ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್ ಬಿ12 ಕೊರತೆ, ಸ್ಕ್ರೀನ್‌ಗಳನ್ನು ಅತಿಯಾಗಿ ನೋಡಿದಾಗ ಉಂಟಾಗುವ ಆಯಾಸ, ಒತ್ತಡ, ಧೂಮಪಾನ, ಖಿನ್ನತೆಯಂಥ ಕಾರಣಗಳಿಗೂ ಕಣ್ಣು ಅದುರಬಹುದು.
ಏನು ಮಾಡಬೇಕು?
ಕಣ್ಣುಗಳು ನಮ್ಮ ಮಾತಿಗೆ ಬೆಲೆ ಕೊಡದಂತೆ ತಮ್ಮಷ್ಟಕ್ಕೆ ತಾವೇ ಅದುರುತ್ತಿದ್ದರೆ, ಕಿರಿಕಿರಿಯ ಸಂಗತಿಯದು. ಒಂದೊಮ್ಮೆ ಕಣ್ಣು ಒಣಗಿದಂತಾಗಿ ಅದುರುತ್ತಿದ್ದರೆ, ನೇತ್ರಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಮತ್ತೆ ದೊಡ್ಡದಾಗಿ ಕಣ್ಣಗಲಿಸಿ. ಇದೊಂದು ರೀತಿಯಲ್ಲಿ ಅತಿಯಾಗಿ ಮಿಟುಕಿಸಿದಂತೆ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಒಣಗಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ಣು ಮತ್ತು ಮುಖದ ಮಾಂಸಖಂಡಗಳಿಗೆ ಸಣ್ಣ ವ್ಯಾಯಾಮವಾದಂತಾಗಿ ಈ ಭಾಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ.
ಮಸಾಜ್
ಬೆರಳಿನಿಂದ ಕಣ್ಣುಗಳ ಕೆಳ ರೆಪ್ಪೆಯ ಅಡಿಗೆ ಸಣ್ಣದಾಗಿ ಮಸಾಜ್ ಮಾಡಬಹುದು. ಈ ಸಂದರ್ಭದಲ್ಲಿ ಕಣ್ಣುಗಳನ್ನು ಸತತವಾಗಿ ಮಿಟುಕಿಸಲೂ ಬಹುದು. ಆದರೆ ಈ ಕೆಲಸ ಮಾಡುವಾಗ ಕೈಗಳನ್ನು ಮೊದಲು ಶುಚಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿಲ್ಲದಿದ್ದರೆ ಸೋಂಕಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗೆ ಮಸಾಜ್ ಮಾಡುವುದರಿಂದ ಕಣ್ಣುಗಳಿಗೆ ರಕ್ತ ಸಂಚಾರ ವೃದ್ಧಿಸುವುದೇ ಅಲ್ಲದೆ, ಈ ಭಾಗದ ಮಾಂಸಖಂಡಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!
ವ್ಯಾಯಾಮ
ದೃಷ್ಟಿಯ ಚಲನೆಯನ್ನು ಮೇಲೆ-ಕೆಳಗೆ-ಎಡಕ್ಕೆ-ಬಲಕ್ಕೆ-ವೃತ್ತಾಕಾರದಲ್ಲಿ ಹಾಗೂ ಮುಚ್ಚಿ-ಬಿಟ್ಟು ಮಾಡಿ ಕಣ್ಣುಗಳಿಗೆ ವ್ಯಾಯಾಮ ಮಾಡಿಸಬಹುದು. ಇದರಿಂದ ಸತತವಾಗಿ ಸ್ಕ್ರೀನ್ ನೋಡಿದರಿಂದ ಉಂಟಾದ ಒತ್ತಡ, ಆಯಾಸ ಕಡಿಮೆಯಾಗುತ್ತದೆ.
ಆಲ್ಕೊಹಾಲ್ ಸೇವನೆ ನಿಲ್ಲಿಸಿ
ಕೆಫೇನ್ ಮತ್ತು ಆಲ್ಕೊಹಾಲ್ ಸೇವನೆ ಹೆಚ್ಚಿದರೂ ಈ ಕಿರಿಕಿರಿ ಎದುರಾದೀತು. ಇದೇ ಕಾರಣ ಹೌದಾದರೆ, ಪರಿಹಾರ ನಿಮ್ಮ ಕೈಯಲ್ಲೇ ಇದೆ. ದೇಹಕ್ಕೆ ನೀರು ಕಡಿಮೆಯಾದರೂ ಕಣ್ಣದುರುವುದುಂಟು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.
ಶುದ್ಧ ನೀರಿನಿಂದ ತೊಳೆಯಿರಿ
ಬೆಚ್ಚಗಿನ ಮತ್ತು ತಂಪಾದ ಶುದ್ಧ ನೀರಿನಿಂದ ಕಣ್ಣು ತೊಳೆಯಬಹುದು. ಅಂದರೆ, ಮುಚ್ಚಿದ ಕಣ್ಣುಗಳ ಮೇಲೆ ಒಮ್ಮೆ ಬೆಚ್ಚಗಿನ ನೀರು, ಇನ್ನೊಮ್ಮೆ ತಣ್ಣೀರು ಹಾಕಿ ತೊಳೆಯುವುದು. ತಣ್ಣೀರಿನಿಂದ ಕಣ್ಣಿನ ರಕ್ತನಾಳಗಳು ಸಂಕುಚಿತಗೊಂಡರೆ, ಬೆಚ್ಚಗಿನ ನೀರಿನಿಂದ ಅವು ವಿಕಸನಗೊಳ್ಳುತ್ತವೆ. ಕಣ್ಣುಗಳು ತುಂಬಾ ಅದುರುತ್ತಿದ್ದರೆ, ಇದನ್ನು ದಿನಕ್ಕೆ ನಾಕಾರು ಬಾರಿ ಮಾಡಬಹುದು. ಕಣ್ಣಿನ ರಕ್ತ ಪರಿಚಲನೆ ಉತ್ತಮಗೊಂಡು, ಅದುರುವುದು ಕಡಿಮೆಯಾಗುತ್ತದೆ.
ಈ ಎಲ್ಲಾ ಪ್ರಯತ್ನಗಳ ನಂತರವೂ ಸಮಸ್ಯೆ ಪರಿಹಾರವಾಗಲಿಲ್ಲ ಎಂದರೆ, ದೃಷ್ಟಿಯಲ್ಲಿ ದೋಷ ಕಂಡುಬಂದರೆ, ಕಣ್ಣುಗಳಲ್ಲಿ ಈವರೆಗಿಲ್ಲದ ಯಾವುದಾದರೂ ಸಮಸ್ಯೆ ಪ್ರಾರಂಭವಾದರೆ, ಅದುರುವಾಗ ಕಣ್ಣುಗಳು ಸಂಪೂರ್ಣ ಮುಚ್ಚಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣಬಹುದು.
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
ಆರೋಗ್ಯ
Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಶೀತ ನೆಗಡಿ ಆದಾಗ ಕೆಲವು ಹಣ್ಣಗಳ ಸೇವನೆ ಸೂಕ್ತವಲ್ಲ. ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
ಶೀತ, ನೆಗಡಿ (Cold, runny nose) ಆದಾಗ, ಮೂಗು ಹಿಡಿದುಕೊಂಡು ಸೀನುತ್ತಾ, ಅಯ್ಯೋ, ನನ್ನ ಶತ್ರುವಿಗೂ ಶೀತ ನೆಗಡಿ ಆಗೋದು ಮಾತ್ರ ಬೇಡಪ್ಪಾ ಅನ್ನುವಷ್ಟು ಕಿರಿಕಿರಿ ಆಗೋದು ಸಹಜ. ʻಔಷಧಿ ತೆಗೆದುಕೊಳ್ಳದಿದ್ರೆ ಒಂದು ವಾರದಲ್ಲಿ ಶೀತ ಕಡಿಮೆಯಾಗುತ್ತೆ, ಔಷಧಿ ತೆಗೊಂಡ್ರೆ ಒಂದೇ ವಾರದಲ್ಲಿ ಶೀತ ಮಾಯʼ ಎಂಬ ಜೋಕುಗಳೂ ಜನಜನಿತ. ʻಶೀತ ಬಂತೆಂದು ಮೂಗೇ ಕೊಯ್ದುಕೊಂಡರೆ ಆದೀತೇʼ ಎಂಬ ನುಡಿಗಟ್ಟೂ ಚಾಲ್ತಿಯಲ್ಲಿರುವುದು ನಮಗೆ ಗೊತ್ತು. ಇಂತಿಪ್ಪ ಶೀತದ ಮಹಾತ್ಮೆಯನ್ನು ಎಷ್ಟು ವಿವರಿಸಿದರೂ ಸಾಲದು. ಯಾಕೆಂದರೆ, ಎಷ್ಟೇ ಔಷಧಿ, ಮನೆಮದ್ದು ಮಾಡಿದರೂ ಶೀತ ಮಾತ್ರ ಅಷ್ಟು ಸುಲಭದಲ್ಲಿ ಹೋಗದು. ಆದರೆ, ಬಹಳಷ್ಟು ಸಾರಿ ನಮಗೆ, ಶೀತ, ನೆಗಡಿ ಆಗಿದ್ದಾಗ ಎಂಥ ಆಹಾರ ತಿಂದರೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ವಿಧವಾಗಿ ತಮ್ಮ ಜ್ಞಾನವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವವರೇ, ಸಲಹೆ ಕೊಡುವವರೇ. ಹಾಗಾದರೆ, ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
1. ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳಾದ ಮುಸಂಬಿ, ನಿಂಬೆ, ಕಿತ್ತಳೆ ಮತ್ತಿತರ ಹಣ್ಣುಗಳು ವಿಟಮಿನ್ ಸಿಯಿಂದ ಶ್ರೀಮಂತವಾದ ಹಣ್ಣುಗಳು. ವಿಟಮಿನ್ ಸಿ ಶೀತ, ನೆಗಡಿಗೆ ಒಳ್ಳೆಯದು ನಿಜ. ಆದರೆ, ಮುಖ್ಯವಾಗಿದು ಶೀತ ನೆಗಡಿಗೂ ಮುನ್ನ ಇಂತಹ ಹಣ್ಣುಗಳನ್ನು ತಿನ್ನುತ್ತಿದ್ದರೆ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿದ್ದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಶೀತ ನೆಗಡಿ ನಮ್ಮ ಬಳಿ ಅಷ್ಟು ಸುಲಭವಾಗಿ ಸುಳಿಯದು. ಆದರೆ, ಶೀತ, ನೆಗಡಿ ಅತಿಯಾದಾಗ ಇಂತಹ ಹಣ್ಣುಗಳನ್ನು ತಿಂದರೆ ನೆಗಡಿ ಅತಿಯಾಗುವ ಸಂಭವವೂ ಇದೆ. ಕಾರಣವೇನೆಂದರೆ, ಇದರಲ್ಲಿರುವ ಆಸಿಡ್ ಅಂಶ ಶೀತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಅದಕ್ಕಾಗಿ, ಶೀತ ಅಥವಾ ನೆಗಡಿಯಾದ ಮೇಲೆ ಈ ಹಣ್ಣುಗಳನ್ನು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.
2. ಅನನಾಸು: ಕೆಲವು ಮಂದಿಗೆ ಅನನಾಸಿನಲ್ಲಿರುವ ಬ್ರೊಮೆಲನಿನ್ ಎಂಬ ಕಿಣ್ವವು ಅಲರ್ಜಿಯನ್ನು ತರುವ ಸಂಭವ ಇರುತ್ತದೆ. ಶೀತದ ಜೊತೆಗೆ ಗಂಟಲು ನೋವೂ ಇದ್ದರೆ, ಅನನಾಸಿನಿಂದ ಅದು ಹೆಚ್ಚಾಗು ಸಂಭವವೂ ಇರುತ್ತದೆ.
3. ಟೊಮೇಟೋ: ಟೊಮೇಟೋ ಹಣ್ಣಿನಂತೆ ಬಳಸುವುದಿಲ್ಲವಾದರೂ ನಿತ್ಯವೂ ತರಕಾರಿಯಂತೆ ಊಟದಲ್ಲಿ ಬಳಸುವುದೇ ಹೆಚ್ಚು. ಆದರೆ, ಶೀತ, ನೆಗಡಿಯಾದಾಗ, ಈ ಟೊಮೇಟೋ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಟೊಮೇಟೋ ಸಾಸ್, ಕೆಚಪ್, ರಸಂ ಇತ್ಯಾದಿಗಳನ್ನು ತಿನ್ನುವುದರಿಂದ ಗಂಟಲು ಇನ್ನಷ್ಟು ಕೆಡುವ ಸಂಭವವಿರುತ್ತದೆ.
4. ಕಿವಿ: ಕಿವಿ ಹಣ್ಣಿನಲ್ಲಿ ಅತ್ಯಧಿಕ ಸಿ ವಿಟಮಿನ್ ಇದ್ದರೂ ಇದರಿಂದ ಶೀತ, ನೆಗಡಿಯ ಸಂದರ್ಭ ಮಾತ್ರ ಇದರಿಂದ ಗಂಟಲು ಕೆರೆತ ಉಂಟಾಗುವ ಸಂಭವ ಹೆಚ್ಚು. ಹೀಗಾಗಿ ನೆಗಡಿಯ ಸಂದರ್ಭ ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸಿ.
5. ಬೆರ್ರಿ: ಬೆರ್ರಿ ಹಣ್ಣುಗಳಾದ, ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ ಹಣ್ಣುಗಳಲ್ಲೂ ಅಸಿಡಿಕ್ ಅಂಶಗಳಿರುವುದರಿಂದ ಗಂಟಲಿಗೆ ಕೊಂಚ ಕಿರಿಕಿರಿ ಮಾಡುವ ಸಂಭವ ಹೆಚ್ಚು. ಹೀಗಾಗಿ ಇಂತಹ ಹುಳಿ ಹಣ್ಣುಗಳನ್ನು ಶೀತ, ನೆಗಡಿಯ ಸಂದರ್ಭ ಅತಿಯಾಗಿ ತಿನ್ನುವುದರಿಂದ ದೂರ ಉಳಿಯುವುದೇ ಒಳ್ಳೆಯದು.
ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?
6. ಪಪ್ಪಾಯಿ: ಪಪ್ಪಾಯಿಯಲ್ಲಿ ಏನಿದೆ ಎನ್ನಬಹುದು. ಆದರೆ, ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಗಂಟಲಿಗೆ ಕಿರಿಕಿರಿ ಮಾಡುವ ಕಾರಣ ಹೆಚ್ಚು ತಿನ್ನದಿರುವುದು ಒಳ್ಳೆಯದು.
7. ದ್ರಾಕ್ಷಿ: ದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿದ್ದು ಇದರಿಂದಾಗಿ ಕೆಲವೊಮ್ಮೆ ಒಳಗೆ ಕಫ ಗಟ್ಟಿಯಾಗುತ್ತದೆ. ಆಮೇಲೆ ಕಫವನ್ನು ಹೊರಗೆ ತೆಗೆಯುವುದೇ ಕಷ್ಟವಾಗಬಹುದು. ಕೆಮ್ಮು ಹಾಗೂ ಕಫದ ಪರಿಣಾಮ ತೀವ್ರವಾಗುವ ಸಂಭವ ಇರುವುದರಿಂದ ದ್ರಾಕ್ಷಿಯಿಂದ ಶೀತ ಹಾಗೂ ನೆಗಡಿಯಂತಹ ಸಂದರ್ಭಗಳಲ್ಲಿ ದೂರ ಇರುವುದೇ ಒಳ್ಳೆಯದು.
ಇದನ್ನೂ ಓದಿ: Fruits To Lower Cholesterol: ಕೊಲೆಸ್ಟ್ರಾಲ್ ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಗೊತ್ತೇ?
-
ವಿದೇಶ11 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಸುವಚನ20 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ಅಂಕಣ12 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ9 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಕರ್ನಾಟಕ5 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
ದೇಶ4 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
South Cinema8 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ