ಧಾರ್ಮಿಕ
Happy Christmas 2023 : ಪ್ರೀತಿ, ವಾತ್ಸಲ್ಯ, ಕರುಣೆಯ ಜಗತ್ತು ಕಟ್ಟಿದ ಮಹಿಮಾನ್ವಿತ ಯೇಸು ಕ್ರಿಸ್ತರು
Happy Christmas 2023 : ದೇವರೇ ಮನುಷ್ಯನಾಗಿ ಜನ್ಮವೆತ್ತಿ ಜಗತ್ತಿಗೆ ಪ್ರೀತಿಯ ಸಂದೇಶವನ್ನು ಸಾರಿದ ಮಹಾ ಘಟನೆ ನಡೆದ ದಿನವೇ ಡಿಸೆಂಬರ್ 25. ಕ್ರಿಸ್‌ಮಸ್ ಎನ್ನುವುದು ಕೇವಲ ಒಂದು ಹಬ್ಬವಲ್ಲ, ಇದು ಪ್ರೀತಿ, ವಿಶ್ವಾಸ, ಕರುಣೆ ಮತ್ತು ಮನುಷ್ಯ ಸಂಬಂಧಗಳ ಸಂಭ್ರಮ.
ಜೆರಾಲ್ಡ್ ಫರ್ನಾಂಡಿಸ್, ಮಂಗಳೂರು
ತನ್ನ ಬದುಕಿನ ಉದ್ದಕ್ಕೂ ಸರಳತೆ, ಅಹಿಂಸೆ, ದೇವರ ಮೇಲೆ ಅಚಲ ನಂಬಿಕೆ ಮತ್ತು ಮನುಷ್ಯತ್ವವನ್ನು ಬೋಧಿಸಿದವರು ಯೇಸು ಕ್ರಿಸ್ತರು. ಇವರು ಮಾನವನ ಕಲ್ಯಾಣಕ್ಕಾಗಿ ದೇವರು ಕಳಹಿಸಿದ ದೇವಪುತ್ರ. ತನ್ನ ಜನನ, ಮರಣ, ಪುನರುತ್ಥಾನದ ಮೂಲಕ ಜಗತ್ತಿಗೆ ಅದ್ಭುತ ಸಂದೇಶವನ್ನು ನೀಡಿದವರು. ಅಂಥ ಯೇಸು ಕ್ರಿಸ್ತರ ಜನ್ಮ ದಿನವೇ ಕ್ರಿಸ್ಮಸ್ (Happay Christmas 2023).
ಡಿಸೆಂಬರ್ 25ರಂದು ಯೇಸು ಕ್ರಿಸ್ತರ ಜನ್ಮದಿನವಾಗಿ ಆಚರಿಸುವ ಕ್ರಿಸ್ಮಸ್ ಶಾಂತಿ, ಪ್ರೀತಿ ಮತ್ತು ತ್ಯಾಗದ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ಯೇಸು ದೇವಪುತ್ರನಾದರೂ ಅತ್ಯಂತ ಸರಳವಾಗಿ ಬದುಕುತ್ತಾರೆ ಎಂದು ಮನು ಕುಲಕ್ಕೆ ತಿಳಿಸಲು ದೇವರು ಸಮಾಜದ ಕಟ್ಟಕಡೆಯ ಮಾನವನನ್ನೂ ಪ್ರೀತಿಸುತ್ತಾರೆ ಎಂದು ತಿಳಿಸಿ ಹೇಳಲು ಯೇಸರು ದನದ ಕೊಟ್ಟಿಗೆಯಲ್ಲಿ ಜನಿಸಿದರು. ಯಾವುದೇ ಆಡಂಬರವಿಲ್ಲದೆ, ಶ್ರೀಮಂತಿಕೆ ಇಲ್ಲದೆ ದನದ ಕೊಟ್ಟಿಗೆಯಲ್ಲಿ ಹುಟ್ಟಿದ ಒಂದು, ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕಿದರೂ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವುದಕ್ಕೂ ಯೇಸು ಕ್ರಿಸ್ತರ ಜನನ ಒಂದು ಪ್ರತಿಮೆ.
ಯೇಸು ಕ್ರಿಸ್ತರು ಹುಟ್ಟಿದ್ದು ಜೆರುಜುಲೇಮಿನ ಬೆತ್ಲೆಹೆಮ್ ಎಂಬ ಪುಟ್ಟ ಊರಿನಲ್ಲಿ. ಬೆತ್ಲೆಹೆಮ್ ಎಂಬ ಶಬ್ದದ ಅರ್ಥ ನಿತ್ಯ ಅಹಾರದ ಮನೆ ಎಂದು. ಬೈಬಲ್‌ನಲ್ಲಿ ಬೆಥ್ಲೆಹೆಮ್ ಎಂಬ ಸ್ಥಳ ದಾವಿದ್ ಅರಸನ ನಗರವೆಂಬ ಹೆಸರಿನಿಂದ ಪ್ರಖ್ಯಾತ ವಾಗಿದೆ. ದಾವಿದ್ ಅರಸನಿಗಿಂತ ಮಿಗಿಲಾದ ಸಾಮರ್ಥ್ಯವುಳ್ಳ ಅರಸನೊಬ್ಬ ಬೆಥ್ಲೆಹೆಮ್‌ನಿಂದ ಜನಿಸಿ ಬರುವವನೆಂದು ಯೆಹೂದ್ಯರು ನಂಬಿದ್ದರು. ಅವನು ದೇವರಿಂದ ಅಭಿಷಿಕ್ತನಾದವನು ಎಂಬುದು ಅವರ ನಂಬಿಕೆಯಾಗಿತ್ತು. ಸರ್ವೇಶ್ವರನಾದ ದೇವರು ಇಸ್ರೇಲ್ ಜನಾಂಗದವರಿಗೆ ಒಬ್ಬ ವಿಮೋಚಕನನ್ನು ಕಳುಹಿಸುವವರಿದ್ದಾರೆ. ಬಾಬಿಲೊನಿಯರ ಗುಲಾಮಗಿರಿಯಿಂದ ಅವರಿಗೆ ವಿಮೋಚನೆ ಸಿಗುವುದು ಎಂಬ ಧೈರ್ಯವನ್ನು ಯೆಶಾಯ ಪ್ರವಾದಿ ಇಸ್ರಾಯೇಲರಲ್ಲಿ ತುಂಬಿದ್ದರು.
ದೇವವಾಕ್ಯದಂತೆ ಮೇರಿ ಮತ್ತು ಜೋಸೆಫನ ಮಗನಾಗಿ ಯೇಸುವಿನ ಜನನವಾಗುತ್ತದೆ. ಮೇರಿ ಮತ್ತು ಜೋಸೆಫರಿಗೆ ಮೊದಲೇ ವಿವಾಹ ನಿಶ್ಚಿತಾರ್ಥವಾಗಿತ್ತು. ಮೇರಿ ಮತ್ತು ಜೋಸೆಫ್ ಇಬ್ಬರೂ ದೈವಭಕ್ತರು. ಇದ್ದಕ್ಕಿದ್ದ ಹಾಗೆ ಮರಿಯಳಿಗೆ ಒಂದು ಆಶರೀರವಾಣಿ ಕೇಳಿಸುತ್ತದೆ. ನೀನು ಪ್ರವಿತ್ರಾತ್ಮರಿಂದ ಗರ್ಭ ತಾಳಿ ಒಂದು ಗಂಡು ಮಗುವಿಗೆ ಜನ್ಮ ತಾಳುವೆ ಎಂಬ ವಾಣಿ ಕೇಳಿಸುತ್ತದೆ. ಜೋಸೆಫನಿಗೆ ಕೂಡ ದೇವ ದೂತ ಮೇರಿಯನ್ನು ನಿನ್ನ ಪತ್ನಿಯಾಗಿ ಸ್ವೀಕರಿಸು. ಆಕೆ ಪ್ರವಿತ್ರಾತ್ಮದ ಪ್ರಭಾವದಿಂದ ಒಬ್ಬ ಮಗನನ್ನು ಹಡೆಯುವಳು. ಆತನಿಗೆ ಯೇಸು ಎಂದು ಹೆಸರಿಡಬೇಕು ಎಂದು ಹೇಳುತ್ತದೆ. ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವನು ಆತನೇ ಎಂದು ದೇವವಾಣಿಯಾಗಿದ್ದರಿಂದ ಮೇರಿ ಮತ್ತು ಜೋಸೆಫರು ಯೇಸುವನ್ನು ತಂದೆ ತಾಯಿಯಾಗಿ ಸಾಕಿ ಸಲಹಿದರು.
ಹೀಗೆ ʻಪ್ರೀತಿಯೇ ಪರಮಾತ್ಮ-ಪ್ರೀತಿಯೇ ಪರಂಧಾಮʼ ಎನ್ನುವ ಸತ್ಯವನ್ನು ನಿಜವಾಗಿಸಲು ದೇವರು ಮಾನವರಾದರು ಎಂದು ಜಗತ್ತು ನಂಬಿದೆ. ಜಗದಲ್ಲಿರುವ ಅಸತ್ಯವನ್ನು ಅಳಿಸಿ, ಸತ್ಯವನ್ನು ಉಳಿಸಲು. ನಮ್ಮಲ್ಲಿರುವ ಕತ್ತಲನ್ನು ತೊಲಗಿಸಿ ಬೆಳಕು ತುಂಬಲು ಸಾವಿನ ಬಂಧನ ಬಿಡಿಸಿ, ಪುನರುತ್ಥಾನದ ಸಂದೇಶ ಸಾರಲು ದೇವರು ದೀನ ಮಾನವರಾದರು. ಮಾನವ ಮಾನವರ ಮಧ್ಯೆ ಮೈತ್ರಿಯನ್ನು ಮೊಳಗಿಸುವ ಮಹಾಪುರುಷ ಪ್ರಭುಯೇಸುವಾದರು.
ಇದನ್ನೂ ಓದಿ: Christmas Trend: ಕ್ರಿಸ್ಮಸ್ ಸೆಲೆಬ್ರೇಷನ್‌ಗೆ ಕಾಲಿಟ್ಟ ಕಲರ್‌ಫುಲ್ ಚಿತ್ತಾರದ ಕುಕ್ಕೀಸ್
ಯೇಸುವಿನ ಜನನ ಸಂಭ್ರಮದ ಸಂದೇಶಗಳು
ಯೇಸುವಿನ ಜನನದ ಘಟನಾವಳಿಗಳಿಗೆ ಪ್ರತೀಕವಾಗಿ ಗೋದಲಿ, ಘಂಟೆ, ನಕ್ಷತ್ರ, ಕ್ಯಾರಲ್ಸ್, ಕುಸ್ವಾರ್, ಸಾಂತಾಕ್ಲಾಸ್‌ಗಳನ್ನು ಸಂಕೇತವಾಗಿ ಬಳಸಲಾಗುತ್ತದೆ.
ನಕ್ಷತ್ರ ಎನ್ನುವುದು ನಕ್ಷತ್ರ ಯೇಸುವಿನ ಜನನದ ಒಂದು ಸಂಕೇತವಾಗಿ ಗೋಚರಿಸುತ್ತದೆ. ಯೇಸುವಿನ ಜನನ ಪೂರ್ವ ದಿಕ್ಕಿನಲ್ಲಿ ನಕ್ಷತ್ರ ಗೋಚರಿಸುವ ಮೂಲಕ ಮೂವರು ಜ್ಯೋತಿಷಿಗಳಿಗೆ ಯೇಸುವಿನ ಜನನದ ಸಂಕೇತವಾಗಿ ಗೋಚರಿಸಲ್ಪಟ್ಟದ್ದರಿಂದ ಇಂದಿಗೂ ಯೇಸುವಿನ ಜನನದ ಶುಭ ಸಂದೇಶವನ್ನು ಪ್ರತಿಬಿಂಬಿತವಾಗಿರುವುದರಿಂದ ಕ್ರಿಸ್ಮಸ್ ಹಬ್ಬದ ಮುನ್ನವೇ ನಕ್ಷತ್ರ ಮನೆಯಲ್ಲಿ ಗೋಚರಿಸುತ್ತದೆ.
ಗಂಟೆ ನಮ್ಮನ್ನು ಎಚ್ಚರಿಸುವ ಸಂಕೇತ. ಗಂಟೆಯ ಸದ್ದು ಇಲ್ಲಿ ಸಂರಕ್ಷಕ ಬರುವವನಿದ್ದಾನೆ ಎಂಬುದನ್ನು ಪ್ರತಿನಿಧಿಸುತ್ತದೆ. ಹಾಗೂ ಕ್ರಿಸ್ತ ಜನನದ ಸಂಕೇತವನ್ನು ತಿಳಿಸುತ್ತದೆ.
ಸಾಂತಾಕ್ಲಾಸ್ ಕಲ್ಪನೆ ಪರಿಚಯಿಸಿದ್ದು ಸಂತ ನಿಕೋಲಸ್ ಈತ 4ನೇ ಶತಮಾನದಲ್ಲಿದ್ದ ವ್ಯಕ್ತಿ ಬಡವ, ದೀನರಿಗೆ, ಬಲಿದವರಿಗೆ ಉಡುಗೊರೆ ನೀಡಲು ಈ ವೇಷ ಧರಿಸಿದರು. ಉದ್ದವಾದ ಬಿಳಿಗಡ್ಡ , ದೊಡ್ಡ ಹೊಟ್ಟೆ , ನಗುವಿನ ಮುಖ, ಉದ್ದವಾದ ಕೆಂಪು ದೋತಿ. ಕೆಂಪು ಬಿಳಿ ಮಿಶ್ರಿತ ಟೋಪಿ, ಕೈ ತುಂಬಾ ಉಡುಗೊರೆ ಕೈಯಲ್ಲೊಂದು ಕೋಲು, ಕ್ರಿಸ್ಮಸ್ ಅಜ್ಜ ಎಂದು ಕರೆಯಲ್ಪಡುವ ಸಾಂತಾ ಕ್ಲಾಸ್ ಚಿಕ್ಕ ಮಕ್ಕಳಿಗೂ ಅತೀ ಪ್ರೀತಿ. ಯೇಸುವಿನ ಜನನದ ಸಂದೇಶವನ್ನು ಮನೆ ಮನೆಗೆ ತಲುಪಿಸಲು ವಿಶೇಷವಾಗಿ ಬಿಂಬಿಸಲಾಗುತ್ತದೆ. ಶಾಂತಿ ಪ್ರೀತಿಯ ದ್ಯೋತಕವಾಗಿ ಏಸುವಿನ ಜನನದ ಸಂದೇಶವನ್ನು ಸಾರಲಾಗುತ್ತದೆ.
ಕ್ಯಾರಲ್ಸ್ ಏಸುವಿನ ಜನನ ಸಂದೇಶವನ್ನು ಗೀತೆ ಹಾಡುವುದರ ಮೂಲಕ ಸಾರುವುದಾಗಿದೆ. ಈ ಕ್ಯಾರೆಲ್ಸ್ ಎಂಬ ಹಾಡುವ ಗುಂಪು ಸಾಂತಕ್ಲಾಸ್ ಜೊತೆ ಮನೆ ಮನೆಗೆ ಹೋಗಿ ಸಂದೇಶವನ್ನು ಸಾರುತ್ತಾರೆ. ಮಾತ್ರವಲ್ಲದೆ ಹಬ್ಬದ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ತಯಾರಿಸುವ ಸಿಹಿ ತಿಂಡಿಗಳನ್ನು ಖುಸ್ವಾರ್ ಎನ್ನುತ್ತಾರೆ. ಜನ್ಮ ದಿನದ ಸಂಕೇತವೇ ಕೇಕ್. ತಿಂಡಿ. ಚಕ್ಕುಲಿ, ರವೆಲಾಡು, ಕುಕ್ಕಿಸ್ ಹೀಗೆ ಅನೇಕ ಸಿಹಿತಿಂಡಿ ತಯಾರಿಕೆ ಜೋರಾಗಿ ನಡೆಯುತ್ತದೆ.
ಗೋದಲಿಯ ರಚನೆಯ ಮೂಲಕ ಕ್ರಿಸ್ತನ ಜನನವನ್ನು ಪ್ರತಿನಿಧಿಸುವುದು ಒಂದು ಕಡೆಯಾದರೆ ವೈಭವ , ಅಡಂಬರ, ಅಹಂಕಾರಗಳೆಲ್ಲವನ್ನು ತೊರೆದು ಸಾಮಾನ್ಯವಾಗಿ ಜೀವಿಸಿ ಎಂಬ ಸಂದೇಶ ನೀಡಲಾಗುತ್ತದೆ. ಬಡವರಿಗೆ, ನಿರಾಶ್ರಿತರಿಗೆ, ರೋಗಿಗಳಿಗೆ ಸಹಾಯ ಹಸ್ತರಾಗಿ ಎಂಬುದು ಯೇಸುವಿನ ಜನನದ ನಿಜವಾದ ಸಂದೇಶ ಸಾರಿ ಹೇಳುತ್ತದೆ.
ಹೀಗೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಹೊಂದಿರುವ ಕ್ರಿಸ್‌ಮಸ್ ಎಲ್ಲರಿಗೂ ಶುಭ ತರಲಿ.
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ಕೊಡಗು
Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ
Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.
ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ ಸಂತೋಷವಾಗಿದೆ. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.
ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.
ಕರ್ನಾಟಕ
Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ
Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.
ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.
ಬೆಂಗಳೂರು
Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್
Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.
ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.
ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.
ವಿಸ್ತಾರ ನ್ಯೂಸ್ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ದಸರಾ ಸಂಭ್ರಮ
Dasara 2024 : ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ
Dasara 2024 : ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ ಗಮನ ಸೆಳೆಯುತ್ತಿದ್ದು, ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.
ಬೆಂಗಳೂರು: ವೈಭವದ ದಸರಾ ಉತ್ಸವ (Dasara 2024 ) ಜೋರಾಗಿದ್ದು, ಭಿನ್ನ-ವಿಭಿನ್ನ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸದ್ಯ ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯುತ್ತಿದೆ.
ಕ್ರಿ. ಶ.12-14 ನೆಯ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಈ ಹೊಯ್ಸಳ ದೇವಾಲಯ ಶೈಲಿಯು, ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ಲುಪ್ತವಾಗಿ ಹೋಯಿತು. ಹಾಗೂ ಸುಮಾರು 800 ವರ್ಷಗಳಿಂದೀಚೆಗೆ ಈ ಶೈಲಿಯಲ್ಲಿ ಯಾವುದೇ ದೇವಾಲಯವು ನಿರ್ಮಾಣವಾಗಿರುವುದು ಕಂಡು ಬಂದಿರುವುದಿಲ್ಲ.
ಪ್ರಸ್ತುತ ಆರ್ಕಿಟೆಕ್ಟ್ ಮೈತ್ರೇಯಿ ಎಂಬುವವರು 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿಯನ್ನು ಮರದಲ್ಲಿ ರಚಿಸುವ ವಿನಮ್ರ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯಕ್ಕೆ 7’ಎತ್ತರ, 7’ಅಗಲ ಹಾಗೂ 7’ ಉದ್ದವಿರುವ ಗರ್ಭಗೃಹ ಮತ್ತು ಶುಕನಾಸಿಯ ಭಾಗದ ರಚನೆಯನ್ನು ಮಾಡಿದ್ದು, ನವರಂಗ ಮತ್ತು ಮಂಟಪಗಳನ್ನು ರಚಿಸಿ ಜೋಡಿಸಲಾಗುವುದು.
ಮಾದರಿಯ ಪೂರ್ಣ ಹಂತದಲ್ಲಿ ಒಟ್ಟು 9’x 11’ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾದರಿಯನ್ನು ಶಿಲ್ಪಾಶಾಸ್ತ್ರದ ಅಳತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಮೈಸೂರು ದಸರಾ ಉತ್ಸವದ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.
ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ತತ್ವಶಾಸ್ತ್ರ, ವೈಚಾರಿಕತೆ, ನಂಬಿಕೆ, ಶ್ರದ್ಧೆಗಳನ್ನೊಳಗೊಂಡ ಸಂಸ್ಕೃತಿಯೆಂಬ ಮೂಲಸ್ತೋತ್ರದಿಂದ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದ ಶಿಲ್ಪ ಶಾಸ್ತ್ರಗಳ, ಆಗಮಗಳ ಆಧಾರದಲ್ಲಿ ಹಲವು ಪೂಜಾ ಪದ್ಧತಿಗಳು ಹಾಗೂ ದೇವಾಲಯ ವಾಸ್ತುಶಿಲ್ಪಗಳು ವಿವಿಧ ಆಯಮಗಳಲ್ಲಿ ಮೂರ್ತಗೊಂಡವು.
ಅವು ಕ್ರಿ. ಶ.ಆರನೆಯ ಶತಮಾನದ ನಂತರ ಶಿಲಾ ಮಾಧ್ಯಮದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಶೈಲಿಯಲ್ಲಿ ನಿರ್ಮಾಣಗೊಂಡವು. ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಹಾಗೂ ಹೊಯ್ಸಳರ ಕಾಲಘಟ್ಟದಲ್ಲಿ, ಅಂದರೆ ಕ್ರಿ. ಶ. 6-14 ನೇ ಶತಮಾನದವರೆಗೆ ಸುಮಾರು 800 ವರ್ಷಗಳಲ್ಲಿ ವೇಸರ ಅಥವಾ ಕರ್ಣಾಟ ದ್ರಾವಿಡ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಶೈಲಿಯುಲ್ಲಿ ದೇವಾಲಯ ಶಿಲ್ಪವು ವಿಕಸಿತಗೊಂಡಿತು.
ಹೊಯ್ಸಳರ ಕಾಲದಲ್ಲಿ (11 ರಿಂದ 14 ನೇ ಶತಮಾನ) ಈ ಶೈಲಿಯುಲ್ಲಿ ರಚಿತಗೊಂಡ ದೇವಾಲಯಗಳು ತಮ್ಮ ವಿನ್ಯಾಸ, ಆಕಾರ, ಅಲಂಕರಣ ಮತ್ತು ಕಲಾ ನೈಪುಣ್ಯತೆದಲ್ಲಿ ಪರಾಕಷ್ಟೆಯನ್ನು ತಲುಪಿದ್ದು ಹೊಯ್ಸಳ ದೇವಾಲಯಗಳೆಂದು ಪ್ರಸಿದ್ಧವಾಗಿದೆ. ಈ ಕಾಲಘಟ್ಟದಲ್ಲಿ ಹಲವು ಚಿಕ್ಕ ದೊಡ್ಡ ದೇವಾಲಯಗಳು ನಿರ್ಮಾಣಗೊಂಡಿದ್ದು, ಬೇಲೂರಿನ ಚೆನ್ನಕೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ.
ಕ್ರಿ. ಶ. 14 ನೆಯ ಶತಮಾನದಲ್ಲಿ ಹೊಯ್ಸಳ ಶೈಲಿಯಿ ಲುಪ್ತವಾಗಿದ್ದು, ಅಲ್ಲಿಂದ ಈಚೆಗೆ ಅಂದರೆ ಸುಮಾರು 700 ವರ್ಷಗಳಿಂದ ಯಾವುದೇ ದೇವಾಲಯವು ವೇಸರ ಅಥವಾ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವುದಿಲ್ಲ. ಹೀಗಾಗಿ ಪ್ರಸ್ತುತ ಆಧುನಿಕ ಆಕರ ಗ್ರಂಥ ಹಾಗೂ ಪ್ರಾಚೀನ ಶಾಸ್ತ್ರ ಗ್ರಂಥಗಳ ಕೂಲಂಕುಷ ಅಧ್ಯಯನದೊಂದಿಗೆ ಹೊಯ್ಸಳ ದೇವಾಲಯಗಳ ತುಲನಾತ್ಮಕ ವಿಶ್ಲೇಷಣೆ ಮಾಡಿ, 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿ ನಿರ್ಮಾಣದ ಪ್ರಯತ್ನವನ್ನು ಮಾಡಲಾಗಿದೆ. ಸೀಮಿತ ಸಂಪನ್ಮೂಲ ಹಾಗೂ ಸಮಯದಲ್ಲಿ ಹೊಯ್ಸಳ ವಾಸ್ತು ಶೈಲಿಯ ಪ್ರಮುಖ ಅಂಶಗಳನ್ನು ಅಳವಡಿಸಿ ಮಹಾಗನಿ ಮರ ಮತ್ತು plywood ಬಳಸಿ ರಚಿಸಲಾಗಿದೆ.
ಹೊಯ್ಸಳ ದೇವಾಲಯಗಳಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿವೆ. (1)ಗರ್ಭಗೃಹ (2)ಶುಕನಾಸಿ (3)ನವರಂಗ ; (4)ಮಂಟಪ ಹಾಗೂ ಹಲವು ಬಾರಿ 2, 3, 4 ಅಥವಾ 5 ಗರ್ಭಗೃಹಗಳನ್ನು ಹೊಂದಿರುತ್ತದೆ. ಆಗ ಅವುಗಳನ್ನು ದ್ವಿಕೂಟ, ತ್ರಿಕೂಟ, ಚತುಷಕೂಟ, ಪಂಚಕೂಟ ಎಂದು ಕ್ರಮವಾಗಿ ಕರೆಯುತ್ತಾರೆ. ಸಾಧಾರಣವಾಗಿ ಗರ್ಭಗೃಹ ಚೌಕ ಅಥವಾ ನಕ್ಷತ್ರಕಾರದ ತಲ ವಿನ್ಯಾಸವನ್ನು ಹೊಂದಿರುತ್ತದೆ. ಚೌಕ ವಿನ್ಯಾಸವು ಹಿಂಬಣೆ, ಮುಂಬಣೆಗಳನ್ನು ಹೊಂದಿದ್ದು ವಿಪುಲ ಅಲಂಕಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಒಟ್ಟಾಗಿ ವಿನ್ಯಾಸ ಮತ್ತು ಯೋಜನೆಯಲ್ಲಿ ಸಂಕೀರ್ಣವಾಗಿದ್ದು ಆಕರ್ಷಕವಾಗಿ ಮೂಡಿ ಬಂದಿರುತ್ತದೆ.
ಇದರ ಊರ್ಧ್ವಚ್ಛಂದದಲ್ಲಿ (Elevation) ಕೆಲವು ವರಗಗಳನ್ನು ಹೀಗೆ ಗುರುತಿಸಬಹುದು
⦁ ಜಗತಿ; ದೇವೇಲಾಯಗಳು ಎತ್ತರದ ಜಗತಿಯ ಮೇಲೆ ನಿಂತಿರುತ್ತವೆ. ಇದು ಪ್ರದಕ್ಷಿಣ ಪಥವಾಗಿ ಬಳಸಲ್ಪಡುತ್ತದೆ.
⦁ ಪೀಠ; ಜಗತಿಯ ಮೇಲೆ ಅಡ್ಡ ಪಟ್ಟಿಕೆಗಳ ಅಲಂಕರಣವುಳ್ಳ ಪೀಠವಿರುತ್ತದೆ.
⦁ ಜಂಘ; ಪೀಠದ ಮೇಲೆಯಿರುವ ಗೋಡೆಯನ್ನು ಜಂಘ ಎಂದು ಕರೆಯುತ್ತಾರೆ. ಕೂಟಛಾದ್ಯ ಎಂಬ ಮುಂಚಾಚು ಗೋಡೆಯನ್ನು ಜಂಘ ಮತ್ತು ಉಪರಿ ಜಂಘ ಎಂದು ವಿಂಗಡಿಸುತ್ತದೆ. ಜಂಘವು ಮೂರ್ತಿ ಶಿಲ್ಪದಿಂದಲೂ ಉಪರಿ ಜಂಘವು ಪಂಜರಗಳಿಂದ ಅಲಂಕೃತಗೊಂಡಿರುತ್ತದೆ.
⦁ ಛಾದ್ಯ; ವಿಶಾಲವಾದ ಮುಂಚಾಚು ಇರುವ ಸ್ತರ. ಇದು ಜಂಘ ಮತ್ತು ಶಿಖರವನ್ನು ವಿಂಗಡಿಸುತ್ತದೆ.
⦁ ಶಿಖರ; ಛಾದ್ಯದ ಮೇಲಿನ ಶಿಖರವು ಹಲವು ಅಂತಸ್ತು ಅಥವಾ ಭೂಮಿಗಳನ್ನು ಹೊಂದಿರುತ್ತದೆ. ಇಲ್ಲಿಯ ವಿಶೇಷ ಅಲಂಕಾರಣವು ಅಂತಸ್ತುಗಳನ್ನು ಗುರುತಿಸುವ ರೇಖೆಗಳನ್ನು ಮುಚ್ಚಿತ್ತವೆ.
⦁ ಕಂಠ/ಗಲ; ಶಿಖರ ಮತ್ತು ಘಂಟಾ ರಚನೆಯ ನಡುವೆ ಕಿರದಾದ ಕಂಠ ಅಥವಾ ಗಲ ಎಂಬ ವರ್ಗವಿರುತ್ತದೆ.
⦁ ಘಂಟಾ; ಶಿಖರದ ಮೇಲೆ ಘಂಟಾ ರಚನೆಯಿದ್ದು ಅದರ ಮೇಲ್ತುದಿಯಲ್ಲಿ ಅತಿ ಸುಂದರವಾದ ಕಲ್ಲಿನ ಕಲಶವಿರುತ್ತದೆ.
⦁ ಕಲಶ
ಹೀಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕ್ರಮಭದ್ದವಾದ ಅಲಂಕರಣ, ಅಂಗಾಂಗ ಪ್ರಮಾಣ, ಬೇರೆ ಬೇರೆ ಭಾಗಗಳಲ್ಲಿರುವ ಸಂತುಲನ, ಯೋಜನಬದ್ದವಾದ ವಿನ್ಯಾಸಗಳಿಂದ ಹೊಯ್ಸಳ ದೇವಾಲಯವು ಅತ್ಯದ್ಭುತ ಸೌಂದರ್ಯದ ಆಗರವಾಗಿ ರೂಪಿತಗೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ