Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು! - Vistara News

ಕೃಷಿ

Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು!

ಕೃಷಿ ಭೂಮಿಯಲ್ಲಿ ಇತ್ತೀಚೆಗೆ (plastic mulching) ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್‌ ಹೊದಿಕೆ) ಬಳಕೆ ಹೆಚ್ಚುತ್ತಿದೆ. ಇದರ ಸಾಧಕ ಬಾಧಕಗಳೇನು ಎಂಬ ಬಗ್ಗೆ ಪ್ರಗತಿಪರ ಕೃಷಿಕ, ಲೇಖಕ ಅರವಿಂದ ಸಿಗದಾಳ್ ಅವರು ಇಲ್ಲಿ ಅವಲೋಕನ ನಡೆಸಿದ್ದಾರೆ.

VISTARANEWS.COM


on

Plastic Mulching
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
-ಅರವಿಂದ ಸಿಗದಾಳ್, ಮೇಲುಕೊಪ್ಪ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಬಗ್ಗೆ ಚರ್ಚೆ (plastic mulching) ನಡೆಯುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಬಳಕೆಯೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಅನುಕೂಲ ಮತ್ತು ತೊಂದರೆ ಎರಡೂ ಇವೆ. ಈ ಹಿನ್ನೆಲೆಯಲ್ಲಿ ಚರ್ಚೆಗೆ ಪೂರಕವಾಗಿ ಒಂದಿಷ್ಟು ಸಂಗ್ರಹಿತ ವಿಷಯಗಳು ಇಲ್ಲಿ ಕೊಟ್ಟಿದ್ದೇನೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನುಕೂಲಗಳು

  1. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಕಾಯ್ದುಕೊಳ್ಳುತ್ತದೆ.
  2. ತೇವಾಂಶ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ.
  3. ಸಸ್ಯ ಪೋಷಕಾಂಶಗಳ ನಷ್ಟವನ್ನು ಮಿತಿಗೊಳಿಸುತ್ತದೆ, ಇಳುವರಿ ಹೆಚ್ಚಾಗುತ್ತದೆ.
  4. ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಅನುಕೂಲ.
  5. ಕಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಕಳೆಗಳು ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದನ್ನು ಪ್ಲಾಸ್ಟಿಕ್ ಮಲ್ಚಿಂಗ್ ತಡೆಯುತ್ತದೆ.

ತೊಂದರೆಗಳು ಸಾಕಷ್ಟಿವೆ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಎಷ್ಟು ಅನುಕೂಲಗಳಿವೆಯೋ ಅದಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ತೊಂದರೆಗಳಿವೆ. ಅನುಕೂಲಗಳು ತಕ್ಷಣಕ್ಕೆ ಸಿಗುವಂತವುಗಳಾದರೆ, ತೊಂದರೆಗಳು ದೀರ್ಘಕಾಲಿಕ.
ಪ್ಲಾಸ್ಟಿಕ್ ಸವಕಳಿಯಾಗುವುದಕ್ಕೆ, ನಾಶವಾಗುವುದಕ್ಕೆ ಶತಮಾನಗಳೇಬೇಕು. ಆದರೆ, ಭೂಮಿಗೆ ತಾಗಿಸಿದ ದಿನದಿಂದಲೇ ನಿಧಾನವಾಗಿ ಸವಕಳಿಯ ಕ್ರಿಯೆ ಆರಂಭವಾಗುತ್ತದೆ. ವಿಭಜನೆಗೊಂಡ ಪ್ಲಾಸ್ಟಿಕ್‌ನ ಕಣಗಳು ಮಣ್ಣಿನ ಫಲವತ್ತತೆಗೆ ಭಯಾನಕ ವಿಷವೇ ಸರಿ. ಸ್ನಾನದ ಮನೆಯಲ್ಲಿ ಸೋಪಿನ ಒಂದು ಸಣ್ಣ ಹನಿ ತೇವವಿದ್ದ ಜಾಗದಲ್ಲಿ ಬಿದ್ದಾಗ ಹೇಗೆ ವಿಸ್ತರಿಸುತ್ತದೋ, ಅದೇ ರೀತಿ ಪ್ಲಾಸ್ಟಿಕ್‌ನ ಕಣಗಳು ಭೂಮಿಯಲ್ಲಿ ಬಿದ್ದಾಗ ಮಣ್ಣಿನಲ್ಲಿ ಅದು ವಿಸ್ತರಿಸುತ್ತಾ… ಮಣ್ಣು ವಿಷವಾಗುತ್ತಾ ಹೋಗುತ್ತದೆ. ಹೌದು, ಈ ಕ್ರಿಯೆ ತುಂಬ ನಿಧಾನವಾದ ಗತಿಯಲ್ಲಿ ನೆಡೆಯುವುದು. ಒಂದು ರೀತಿಯಲ್ಲಿ ಸ್ಲೋ ಪಾಯಿಸನ್. ಕೆಲವು ಸಮಯದವರೆಗೆ ಇರುವೆ, ಏಡಿ, ಎರೆಹುಳುಗಳು ಮತ್ತು ಅನೇಕ ಸೂಕ್ಷ್ಮ ಜೀವಿಗಳು ಈ ಪ್ಲಾಸ್ಟಿಕ್‌ನ್ನು ಆಶ್ರಯವಾಗಿಸಿಕೊಂಡು ಬದುಕಬಹುದು. ಆದರೆ ಯಾವಾಗ ಪ್ಲಾಸ್ಟಿಕ್‌ನ ಸವಕಳಿ ನಿಧಾನವಾಗಿ ಹೆಚ್ಚಾಗುತ್ತದೋ… ಆಗ ಯಾವ ಜೀವ ಜಂತುಗಳೂ, ಸೂಕ್ಷ್ಮ ಜೀವಿಗಳೂ ಅಲ್ಲಿ ಬದುಕಲಾರವು. ಪೆಟ್ರೋಲಿಯಂ ಪ್ರಾಡಕ್ಟ್‌ನ ಉತ್ಪನ್ನವಾದ ಪ್ಲಾಸ್ಟಿಕ್ ರಾಸಾಯನಿಕ ಕಣಗಳು ಮಣ್ಣಿನ ಫಲವತ್ತತೆಯನ್ನು ಶಾಶ್ವತವಾಗಿ ನಾಶಮಾಡುತ್ತದೆ. ಮಣ್ಣನ್ನು ಬರಡಾಗಿಸುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಮಲ್ಚಿಂಗ್ ತೊಂದರೆಗಳು ಹಲವಾರಿವೆ.

Disadvantages of plastic mulching

ಪ್ಲಾಸ್ಟಿಕ್ ಮಲ್ಚಿಂಗ್ ಅನಾನುಕೂಲಗಳು

ಪ್ಲಾಸ್ಟಿಕ್ ಮಲ್ಚ್ ಮಣ್ಣನ್ನು ಪರಿಣಾಮಕಾರಿಯಾಗಿ ಬೆಚ್ಚಗಾಗಿಸುತ್ತದೆ, ಮಣ್ಣಿನ ತಾಪಮಾನವನ್ನು ಬದಲಾಯಿಸುವುದು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಬೆಳೆಗಳು ಮಣ್ಣಿನ ತಾಪಮಾನಕ್ಕೆ ಸಾಕಷ್ಟು ಸಂವೇದನಾಶೀಲವಾಗಿರುತ್ತವೆ ಆದ್ದರಿಂದ ಮಣ್ಣಿನ ಬೆಚ್ಚಗಾಗುವಿಕೆಯೂ ಅನೈಸರ್ಗಿಕವಾದಾಗ ಅದೂ ಅಪಾಯಕಾರಿಯೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಪೆಟ್ರೋಲಿಯಂ-ಆಧಾರಿತ ವಸ್ತುಗಳಿಂದ ಪಡೆಯಲಾಗಿದೆ, ಇದು ಉತ್ಪಾದನೆಗೆ ದುಬಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ.

ಸೂರ್ಯನ ಬೆಳಕು-ಶಾಖ, ಗಾಳಿ, ನೀರು ಅಥವಾ ಇನ್ಯಾವುದೋ ಕಾಸ್ಮಿಕ್ ಎನರ್ಜಿಗಳಿಂದ ಮಣ್ಣಿನಲ್ಲಿ ಸಹಜವಾಗಿ ನೆಡೆಯುವ “ವಿಧಿ’ವತ್ತಾದ ರಾಸಾಯನಿಕ ಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದ ಕಡಿಮೆ ಆಗಬಹುದು ಅಥವಾ ತಟಸ್ಥವಾಗಬಹುದು ಮತ್ತು ಪರಿಣಾಮವಾಗಿ ಮಣ್ಣಿನ ಮೇಲೆ ದೀರ್ಘಕಾಲದ ಅಪಾಯ ಉಂಟಾಗಬಹುದು. ಮಣ್ಣಿನ ಸಹಜ ಸಂವೇದನಾಶೀಲತೆ ಅಥವಾ ನೈಸರ್ಗಿಕವಾಗಿ ಮಣ್ಣಿನಲ್ಲಿ ನೆಡೆಯುವ ಸಹಜವಾದ ರಾಸಾಯನಿಕ ಪ್ರಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದಾಗಿ ಅತಿ ವೇಗವನ್ನು ಪಡೆದು ವಿಪರೀತವಾಗಿ ಋಣಾತ್ಮಕ ಪರಿಣಾಮ ಉಂಟಾಗಬಹುದು.

Crops with Plastic Mulch

ಮಲ್ಷಿಂಗ್ ಮಾಡುವ ಪ್ಲಾಸ್ಟಿಕ್ ವೇಸ್ಟ್‌ಗಳು ಮರು ಬಳಕೆ ಮಾಡಲು ಸೂಕ್ತವಲ್ಲದ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ 3-4 ವರ್ಷಗಳ ನಂತರ ಮರುಬಳಕೆಯಾಗದ ಒಂದು ಬೃಹತ್ ತ್ಯಾಜ್ಯವಾಗುವ ಈ ಪ್ಲಾಸ್ಟಿಕ್ ಭೂಮಿಗೆ ಒಂದು ಶಾಶ್ವತ ಅಪಾಯಕಾರಿ ವಸ್ತು. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ನ್ನು ಕೃಷಿಯಲ್ಲಿ ಬಳಸುವುದು ಪ್ರಪಂಚದ-ಪರಿಸರದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸಿ, ತ್ಯಾಜ್ಯವಾದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದು ಕಷ್ಟ.

ಮಣ್ಣಿಗೆ ಹೆಚ್ಚಿನ ಆರ್ದ್ರತೆಯು ಯಾವಾಗಲೂ ಉತ್ತಮವಲ್ಲ, ಮತ್ತು ಅತಿಯಾದ ಆರ್ದ್ರತೆಯು ಭಯಾನಕ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ತೇವಾಂಶವು ನೀರು ಮತ್ತು ಬೆಳೆಗಳನ್ನು ಮುಳುಗಿಸಬಹುದು.
ಆರ್ದ್ರ ಬೆಳವಣಿಗೆಯ ಪರಿಸ್ಥಿತಿಗಳು ಮಾಲಿನ್ಯ ಮತ್ತು ರೋಗಕ್ಕೆ ಕಾರಣವಾಗಬಹುದು. ಅಡಿಕೆ ತೋಟದಲ್ಲಿನ ಕೊಳೆ, ಎಲೆಚುಕ್ಕಿ ಇತ್ಯಾದಿಗಳ ಫಂಗಸ್‌ಗಳ ಉತ್ಪತ್ತಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಕಾರಣವಾಗಬಹುದು.

Plastic mulching cropland

ಮಲ್ಚಿಂಗ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣ, ದೀರ್ಘಬಾಳಿಕೆಗಳಿಗಾಗಿ ಬಳಸುವ ಕೆಮಿಕಲ್‌ಗಳು ಮಣ್ಣಿಗೆ ವಿಷಕಾರಿಗಳಾಗಿರಬಹುದು. ಜತೆಗೆ ಗೊಬ್ಬರವಾಗಿ ಬಳಸುತ್ತಿರುವ, ಪೆಸ್ಟಿಸೈಡ್, ಇನ್ಸೆಕ್ಟಿಸೈಡ್, ಫಂಗಿಸೈಡ್ ಕೆಮಿಕಲ್‌ಗಳೊಂದಿಗೆ ಮಲ್ಚಿಂಗ್ ಪ್ಲಾಸ್ಟಿಕ್ ಕೆಮಿಕಲ್‌ಗಳು ಸೇರಿ ಗದ್ದೆ ತೋಟಗಳು ಮತ್ತಷ್ಟು ಮಾಲಿನ್ಯವಾಗಬಹುದು. ಪರೋಕ್ಷವಾಗಿ ತಿನ್ನುವ ಆಹಾರ ಪದಾರ್ಥಗಳು ಮತ್ತಷ್ಟು ವಿಷವಾಗಬಹುದು.

ಪ್ಲಾಸ್ಟಿಕ್ ಮಲ್ಚಿಂಗ್ ಸಾವಯವ ಪದ್ದತಿಗೆ ವಿರುದ್ದವಾದ ಕ್ರಮ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಇರುವೆ, ಚಿಕ್ಳಿಯಿರುವೆ, ಏಡಿ, ಎರೆಹುಳುಗಳಿಗೆ ದೀರ್ಘಾವದಿಯಲ್ಲಿ ಅಪಾಯಕಾರಿ ಆಗಬಹುದು. ಮಣ್ಣಿನ ಅಗತ್ಯ ಸೂಕ್ಷ್ಮ ಜೀವಿಗಳೂ ನಾಶವಾಗಬಹುದು.

ಸಾವಯವ ತ್ಯಾಜ್ಯಗಳು ಮಣ್ಣಿನ ಜೊತೆ ಬೆರೆಯುವುದಕ್ಕೆ, ಗೊಬ್ಬರವಾಗಿ ಮಣ್ಣಿನ ಜೊತೆ ಸಂಯೋಜನೆಗೊಳ್ಳುವುದಕ್ಕೆ, ಸಾವಯವ ತ್ಯಾಜ್ಯಗಳಲ್ಲಿನ ಕಾರ್ಬನ್, ಪೋಶಕಾಂಶಗಳು ಮಣ್ಣಿನಲ್ಲಿ ಮಿಳಿತವಾಗುವುದಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್‌ನಲ್ಲಿರುವ ಕೆಮಿಕಲ್ ಮತ್ತು ನೀರು, ಗಾಳಿ ಮತ್ತು ಉಷ್ಣತೆಗಳನ್ನು ವ್ಯತ್ಯಾಸಗೊಳಿಸುವ ಶಕ್ತಿ ತಡೆ ಒಡ್ಡಬಹುದು.

Plastic Mulching - Using Plastic Mulches and Drip Irrigation for Vegetable Production

ಪ್ಲಾಸ್ಟಿಕ್‌ ಕಡಿಮೆ ಮಾಡಲೇಬೇಕಿದೆ

ಹಾಗಾಗಿ ಪ್ಲಾಸ್ಟಿಕ್ ಬಗ್ಗೆ ನಾವು ಅಂತರ ಕಾಪಾಡಿಕೊಳ್ಳಬೇಕಾದ, ಜಾಗೃತಿಗೊಳ್ಳಬೇಕಾದ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪರಿಸರ, ಹವಾಮಾನ ವೈಪರೀತ್ಯ, ಪ್ರತೀ ಮನೆಯಲ್ಲೂ ಷೋಕೇಸ್‌ನ ಒಂದು ಭಾಗ ಪುಟ್ಟ ಮೆಡಿಕಲ್ ಶಾಪ್ ಆಗುತ್ತಿರುವ ಅನಿವಾರ್ಯತೆಯ ನಮ್ಮ ಅನಾರೋಗ್ಯಗಳನ್ನು ಗಮನಿಸುತ್ತ ಪ್ಲಾಸ್ಟಿಕ್ ಬಗ್ಗೆ, ಅದನ್ನು ನಮ್ಮ ಜೀವನದಲ್ಲಿ ಗ್ರಾಮ್ ಗಳಷ್ಟಾದರೂ ಕಮ್ಮಿ ಮಾಡುವ ಬಗ್ಗೆ ಯೋಚಿಸಬೇಕಾಗಿದೆ.:
ಪ್ಲಾಸ್ಟಿಕ್ ಅತಿ ಬಳಕೆಯಿಂದಾಗಿ ಹವಾಮಾನ ಬಿಕ್ಕಟ್ಟನ್ನು ಹೆಚ್ಚು ತೀವ್ರಗೊಳಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ತ್ಯಾಜ್ಯದಿಂದ ನಮ್ಮ ವಾತಾವರಣದಲ್ಲಿ ವಿಷದ ಸಾಂದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ನಿತ್ಯ ಅನಾರೋಗ್ಯರಾಗುತ್ತಿದ್ದೇವೆ, ಬೇಗನೆ ಸಾವಿನ ಕಡೆಗೆ ವಾಲುತ್ತಿದ್ದೇವೆ.
ಪ್ಲಾಸ್ಟಿಕ್ ಎಂಬ ‘ಭಸ್ಮಾಸುರ”ನ ಸುಡುವ ಕರವನ್ನು ನಮ್ಮ ತಲೆ ಮೇಲೆ ನಾವೇ ಇಟ್ಟುಕೊಳ್ಳುತ್ತಿದ್ದೇವೆ. ಆ ಭಸ್ಮಾಸುರ ಕರಗಳು ಪರಿಸರವನ್ನು, ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳ ಆರೋಗ್ಯವನ್ನು, ಆಯಸ್ಸನ್ನು ಸುಡುತ್ತಿವೆ. ಸುಡುವುದನ್ನು ತಡೆಯುವ ಯಾವ ಮಲ್ಚಿಂಗ್ ಹೊದಿಕೆಗಳೂ ನಮ್ಮ ತಲೆ ಮೇಲೆ ಇಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News: ವಿಜಯನಗರ ಜಿಲ್ಲೆಗೆ 130 ಕೋಟಿ ರೂ. ಬೆಳೆ ಪರಿಹಾರ: ಡಿಸಿ

Vijayanagara News: ಹೊಸಪೇಟೆ ತಾಲೂಕಿನ 3,880 ರೈತರಿಗೆ 3,45,51,946 ರೂ., ಹಗರಿಬೊಮ್ಮನಹಳ್ಳಿ ತಾಲೂಕಿನ 15,813 ರೈತರಿಗೆ 19,24,12,902 ರೂ., ಕೂಡ್ಲಿಗಿ ತಾಲೂಕಿನ 19,010 ರೈತರಿಗೆ 23,12,23,100 ರೂ., ಕೊಟ್ಟೂರು ತಾಲೂಕಿನ 12,833 ರೈತರಿಗೆ 14,04,56,255 ರೂ., ಹಡಗಲಿ ತಾಲೂಕಿನ 20,925 ರೈತರಿಗೆ 26,93,01,607 ರೂ. ಮತ್ತು ಹರಪನಹಳ್ಳಿ ತಾಲೂಕಿನ 37,082 ರೈತರಿಗೆ 42,28,62,000 ರೂ. ನಂತೆ ವಿಜಯನಗರ ಜಿಲ್ಲೆಯಲ್ಲಿ ತಾಲೂಕುವಾರು ಬೆಳೆ ಪರಿಹಾರ ಮೊತ್ತ ಸಂದಾಯವಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ತಿಳಿಸಿದ್ದಾರೆ.

VISTARANEWS.COM


on

130 crore crop compensation amount paid to Vijayanagara district says DC m S Diwakar
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌.
Koo

ಹೊಸಪೇಟೆ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ (Vijayanagara News) ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2000 ರೂ. ವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಸರ್ಕಾರದಿಂದ ಆದೇಶಿಸಲಾಗಿದೆ.

ಅದರಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಈವರೆಗೂ ಹತ್ತು ಹಂತಗಳಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಜಮಾ ಮಾಡಲು ಅನುಮೋದನೆ ನೀಡಲಾಗಿದ್ದು, ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಬಾಕಿ ಉಳಿದ ಅರ್ಹ ರೈತರಿಗೆ ಹಂತ-ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಜಮಾ ಮಾಡಲಾಗುವುದು. ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯಿತಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಸೀಲ್ದಾರರ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲೂಕು ಕಚೇರಿ, ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿ, ಕೂಡ್ಲಿಗಿ ತಾಲೂಕು ಕಚೇರಿ, ಕೊಟ್ಟೂರು ತಾಲೂಕು ಕಚೇರಿ, ಹಡಗಲಿ ತಾಲೂಕು ಕಚೇರಿ ಮತ್ತು ಹರಪನಹಳ್ಳಿ ತಾಲೂಕು ಕಚೇರಿಗಳಲ್ಲಿನ ಸಹಾಯವಾಣಿಗಳಿಗೆ ಕಚೇರಿ ಸಮಯದಲ್ಲಿ ರೈತರು ಫ್ರೂಟ್ಸ್ ಐಡಿ ಸಂಖ್ಯೆಯೊಂದಿಗೆ ಸಂಬಂಧಪಟ್ಟ ತಾಲೂಕು ಕಚೇರಿಯ ಸಹಾಯವಾಣಿಗೆ ಭೇಟಿ ನೀಡಿ ಬೆಳೆ ಪರಿಹಾರ ಮಾಹಿತಿ ಪಡೆಯಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ತಾಲೂಕುವಾರು ಮಾಹಿತಿ

ಹೊಸಪೇಟೆ ತಾಲೂಕಿನ 3,880 ರೈತರಿಗೆ 3,45,51,946 ರೂ., ಹಗರಿಬೊಮ್ಮನಹಳ್ಳಿ ತಾಲೂಕಿನ 15,813 ರೈತರಿಗೆ 19,24,12,902 ರೂ., ಕೂಡ್ಲಿಗಿ ತಾಲೂಕಿನ 19,010 ರೈತರಿಗೆ 23,12,23,100 ರೂ., ಕೊಟ್ಟೂರು ತಾಲೂಕಿನ 12,833 ರೈತರಿಗೆ 14,04,56,255 ರೂ., ಹಡಗಲಿ ತಾಲೂಕಿನ 20,925 ರೈತರಿಗೆ 26,93,01,607 ರೂ. ಮತ್ತು ಹರಪನಹಳ್ಳಿ ತಾಲೂಕಿನ 37,082 ರೈತರಿಗೆ 42,28,62,000 ರೂ. ನಂತೆ ವಿಜಯನಗರ ಜಿಲ್ಲೆಯಲ್ಲಿ ತಾಲೂಕುವಾರು ಬೆಳೆ ಪರಿಹಾರ ಮೊತ್ತ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Continue Reading

ಕೃಷಿ

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Cocoa Price: ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. 2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು. ಇದೀಗ ಬೆಲೆ ಬರೋಬರಿ 320 ರೂ. ಅಂದರೆ 800% ಹೆಚ್ಚಳವಾಗಿದೆ. ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

VISTARANEWS.COM


on

Cocoa Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.

2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.

ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!

ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.

ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಧಾರಣೆ ಏರಿಕೆಗೆ ಕಾರಣ ಏನು?

ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.

ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ

ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.

ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ

ಕೋಕೋ ಧಾರಣೆ ಮಿಂಚಿ‌ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.

Continue Reading

ಕರ್ನಾಟಕ

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

Tomato Price: ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ.

VISTARANEWS.COM


on

tomato price rise
Koo

ಚಿಕ್ಕಬಳ್ಳಾಪುರ‌: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ‌ (tomato price rise) ನಾನೂರು ರೂಪಾಯಿ ತಲುಪಿದ್ದು, ಗ್ರಾಹಕರ ಕೈ ಸುಡಲು ಸಿದ್ಧವಾಗಿದೆ.

ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ‌ ನಿರೀಕ್ಷಿತ ಫಸಲು ಕೂಡ ಬಂದಿಲ್ಲ. ಆ ಬಾರಿ ಬಿಸಿಲಿನ ಪರಿಣಾಮ ನಿರೀಕ್ಷೆಗಿಂತ ಮೊದಲೇ ನೀರಿನ ಲಭ್ಯತೆ ಕಡಿಮೆಯಾಗಿದೆ. ಬೋರ್ವೆಲ್‌ಗಳಲ್ಲಿಯೂ ನೀರು ಬತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿಲ್ಲ.

ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಟೊಮ್ಯಾಟೊಗೆ ನಾನೂರು ರೂಪಾಯಿ ನಿಗದಿ ಮಾಡಲಾಗಿದೆ. ನಾಳೆ ನಾಡಿದ್ದರಲ್ಲಿ ಮತ್ತಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಲೆ ಏರಿಕೆಗೆ ಕಾರಣ

ಉತ್ಪಾದನೆಯಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಅತಿಯಾದ ಬಿಸಿಲು ಹಾಗೂ ಉಷ್ಣ ವಾತಾವರಣದಿಂದ ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಗ್ರಾಹಕ ಕೊಂಡುಕೊಳ್ಳುವ ಬೆಲೆಯಲ್ಲಿ ರೈತನಿಗೆ ಕೇವಲ ಶೇಕಡಾ 32ರಷ್ಟು ಮಾತ್ರ ದಕ್ಕುತ್ತದೆ.

ಟೊಮೆಟೊ ಹೆಚ್ಚು ಬೆಳೆಯುವುದು ಎಲ್ಲಿ?

ಆಂಧ್ರಪ್ರದೇಶ, ಕರ್ನಾಟಕದ, ಒಡಿಶಾ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಈ ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯು ಶೇಕಡಾ ಐವತ್ತರಷ್ಟು ಕೊಡುಗೆ ನೀಡುತ್ತವೆ. ಛತ್ತೀಸ್ ಗಢ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳ, ಬಿಹಾರ ತೆಲಂಗಾಣ ಶೇಕಡಾ 40 ರಷ್ಟು ಟೊಮೆಟೊ ಉತ್ಪಾದನೆ ಮಾಡುತ್ತವೆ. ಮುಂಗಾರು ಮತ್ತು ಹಿಂಗಾರು ಬೆಳೆಯಾಗಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಆಗಸ್ಟ್ ನಡುವೆ ಹಿಂಗಾರು ಬೆಳೆಯಲಾಗುತ್ತದೆ. ಮುಂಗಾರು ಬೆಳೆ ಸೆಪ್ಟಂಬರ್ ತಿಂಗಳಿನಿಂದ ಕೊಯ್ಲಿಗೆ ಬರುತ್ತದೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಗಾಲದಲ್ಲಿ ಟೊಮ್ಯಾಟೊ ಬೆಳೆಯುತ್ತಾರೆ. ಬೇಸಿಗೆಯ ಉತ್ಪಾದನೆಯ ಶೇಕಡಾ 90ರಷ್ಟು ಬೆಳೆಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಬೆಳೆಯುತ್ತಾರೆ.

ಮಾಹಿತಿಗಳ ಪ್ರಕಾರ 2020ರಿಂದ ಟೊಮ್ಯಾಟೊ ಉತ್ಪಾದನೆ ಕಡಿಮೆಯಾಗುತ್ತಿದೆ. 2019-2 0ರಲ್ಲಿ 21.187 ಮಿಲಿಯನ್ ಟನ್ ಗಳಷ್ಟು ಟೊಮ್ಯಾಟೊ ಉತ್ಪಾದನೆ ಆಗಿದ್ದರೆ 2020-21ರಲ್ಲೂ 20.69ಮಿಲಿಯನ್ ಟನ್ ಗೆ ಇಳಿದಿದೆ. 2022-23ರಲ್ಲೂ 20.62 ಮಿಲಿಯನ್ ಟನ್ ಗೆ ಕುಸಿದಿದೆ.

ಇದನ್ನೂ ಓದಿ: Sugar Price: ಟೊಮ್ಯಾಟೊ ‘ಹುಳಿ’ಯಾದ ಬೆನ್ನಲ್ಲೇ ಸಕ್ಕರೆ ‘ಕಹಿ’; ಜನರ ಹಬ್ಬದ ಖುಷಿಗೆ ಬೆಲೆಯೇರಿಕೆ ಬಿಸಿ

Continue Reading

ಚಿತ್ರದುರ್ಗ

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Arecanut Cultivation: ಬೇಸಿಗೆಯಲ್ಲಿ ಹಲವೆಡೆ ಕುಡಿಯುವ ನೀರಿಲ್ಲದೆ ಜನ ಸಂಕಷ್ಟ ಎದುರಿಸುವಂತಾಗಿದೆ. ಮತ್ತೊಂದೆಡೆ ಮಳೆಯಿಲ್ಲದೆ ಅಡಿಕೆ ಸೇರಿ ವಿವಿಧ ರೀತಿಯ ಬೆಳೆಗಳು ಒಣಗುತ್ತಿದ್ದು, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನಲ್ಲಿ ನೀರಿನ ಅಭಾವದಿಂದ ಅಡಿಕೆ ಮರಗಳು ಒಣಗುತ್ತಿವೆ. ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

VISTARANEWS.COM


on

Arecanut cultivation
Koo

ಚಳ್ಳಕೆರೆ: ಬರಗಾಲಕ್ಕೆ ತುತ್ತಾದ ಚಳ್ಳಕೆರೆ ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ (Arecanut Cultivation). ಸಾವಿರಾರು ಹೆಕ್ಟೇರ್​ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್​ವೆಲ್​ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.

ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಎಷ್ಟು ಬೋರ್ ಕೊರೆಯಿಸಿದರು. ನೀರು ಬರುತ್ತಿಲ್ಲ.
ಇನ್ನು ಒಂದು ತಿಂಗಳ ಕಾಲ ಭೂಮಿಗೆ ಮಳೆ ಬಾರದಿದ್ದರೆ ಅದೆಷ್ಟೋ ಅಡಿಕೆ ತೋಟಗಳು ಒಣಗಿ ಹೋಗುತ್ತವೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.

ತಾಲೂಕಿನ ಕಾಪರಹಳ್ಳಿ ಗ್ರಾಮದ ಗುರುಸ್ವಾಮಿ ರೈತ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ಬೆಳೆ ಸಂಪೂರ್ಣ ಒಣಗುತ್ತಿದೆ.

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Areca Agriculture
Aravind Sigadal
-ಅರವಿಂದ ಸಿಗದಾಳ್, ಮೇಲುಕೊಪ್ಪ

ಅಡಿಕೆ ಹಳದಿ ರೋಗಕ್ಕೆ ಕಾರಣ ಮತ್ತು ಔಷಧಿ (Areca Agriculture) ಎರಡೂ ಇನ್ನು ಪ್ರಶ್ನೆಯಾಗಿಯೇ ಉಳಿದಿವೆ. ಅಡಿಕೆ ಎಲೆ ಚುಕ್ಕಿ ರೋಗ ನಿರ್ದಿಷ್ಟ ಫಂಗಸ್‌ಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಾರಣ ಎಂದು ಗೊತ್ತಾಗಿದ್ದರೂ, ರೋಗಕ್ಕೆ ಇನ್ನೂ ಔಷಧಿಯನ್ನು ಕಂಡು ಹಿಡಿದಿಲ್ಲ. ಅನೇಕ ಫಂಗಿಸೈಡ್‌ಗಳನ್ನು ಪ್ರಯೋಗಿಸಿ ರೋಗದ ನಿಯಂತ್ರಣ ಪ್ರಯತ್ನ-ಪ್ರಯೋಗ ನೆಡೆಯುತ್ತಿದೆ. ರೋಗ ಬಂದ ಮೇಲೆ ಔಷಧಿ ಕೊಡುವ ಪ್ರಯತ್ನಗಳು ಸಹಜ ಮತ್ತು ಅಗತ್ಯ ಕೂಡ. ಅದರ ಜೊತೆಗೆ ರೋಗಗಳಿಗೆ ಕಾರಣವಾಗುವ ಮೂಲ ಯಾವುದು ಎಂಬ ಅಧ್ಯಯನ ಮತ್ತು ಪ್ರಯೋಗಗಳು ನಡೆಯಬೇಕು. ಆದರೆ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಗಳ ವಿಚಾರದಲ್ಲಿ ಈ ಕಾರಣ ಕಂಡುಹಿಡಿಯುವ ಅಧ್ಯಯನ ಮತ್ತು ಪ್ರಯೋಗಗಳು ತಳ ಮಟ್ಟದಿಂದ ತೀವ್ರಗತಿಯಲ್ಲಿ ನಡೆಯುತ್ತಿಲ್ಲ.

ಹವಾಮಾನ ವೈಪರೀತ್ಯ ಪರಿಣಾಮ, ಮಣ್ಣು-ನೀರು-ಗಾಳಿ-ಅಡಿಕೆ ಮರದ ಒಳ ಭಾಗದಲ್ಲಿ ಆಗುತ್ತಿರುವ pH ವ್ಯತ್ಯಾಸ, ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆ, ಅದಕ್ಕೆ ಕಾರಣವಾಗುತ್ತಿರುವ ರಾಸಾಯನಿಕಗಳ ಬಳಕೆ, ಮಣ್ಣಿನ ಸಾವಯವ ಇಂಗಾಲದ ಕೊರತೆ, ಪ್ರತಿಯೊಂದು ರೋಗದ ಲಕ್ಷಣ ಕಂಡಾಗಲೂ ಬಳಸುತ್ತಿರುವ ಅತಿಯಾದ ವಿಷ ಪೂರಿತ ಔಷಧಿಗಳು, ಬಳಸುತ್ತಿರುವ ಕಳೆ ನಾಶಕಗಳು, ಹೆಚ್ಚು ಇಳುವರಿ ಬಯಕೆಯಿಂದ ಮಾಡುತ್ತಿರುವ ಬೇಸಾಯ ಪದ್ದತಿಗಳು, ಇವೆಲ್ಲವುಗಳಿಂದ ಆಗುತ್ತಿರುವ ಪರಿಣಾಮ ಇವತ್ತು ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಡಿಕೆಗೆ ರೋಗಗಳು ಹೆಚ್ಚುತ್ತಿವೆ. ಆರೋಗ್ಯವಂತ ಅಡಿಕೆ ತೋಟಗಳಲ್ಲಿ ಸಾಂಪ್ರದಾಯಕವಾಗಿ ಬೇಸಾಯ ಮಾಡುವಾಗ ಸರಾಸರಿ ಎಕರೆಗೆ 12 ಕ್ವಿಂಟಾಲ್ ಬರುತ್ತಿದ್ದ ಅಡಿಕೆ ಈಗ ಆರೋಗ್ಯವಿರುವಂತೆ ಕಾಣುವ ತೋಟದಲ್ಲೂ ಸರಾಸರಿ 7-8 ಕ್ವಿಂಟಾಲ್ ಮೇಲೆ ಬರುತ್ತಿಲ್ಲ. ಹಳದಿ ಎಲೆ ರೋಗ ಬಂದಲ್ಲಿ ಇಳುವರಿ 2-3 ಕ್ವಿಂಟಾಲಿಗೆ ಇಳಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ ಎರಡೂ ಇರುವಲ್ಲಿ ಎಕರೆಗೆ ಕ್ವಿಂಟಾಲ್ ಇರಲಿ, 60-70 ಕೆಜಿ ಅಡಿಕೆಯೂ ಆಗುತ್ತಿಲ್ಲ!

Areca nuts image

ವಯಸ್ಸಾದಂತೆ ರೋಗ

ಹೇಗೆ ಮನುಷ್ಯರಲ್ಲಿ 35ನೇ ವಯಸ್ಸಿನಲ್ಲಿ ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತಹ ಶಾಶ್ವತ ರೋಗಗಳು ಬರುವಂತೆ ಅಡಿಕೆ ತೆಂಗು ಮರಗಳಿಗೂ, ಸಾಮರ್ಥ್ಯ ಕಮ್ಮಿಯಾಗುವ, ರೊಗಗಳಿಗೆ ಬಲಿಯಾಗುವ, ಇಳುವರಿ ಕಮ್ಮಿಯಾಗುವ ಸ್ಥಿತಿ ಉಂಟಾಗುತ್ತಿವೆ. ಕಡಿಮೆ ಇಳುವರಿಯ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಬಿಪಿ, ಡಯಾಬಿಟಿಸ್, ಗ್ಯಾಸ್ಟಿಕ್‌ನಂತೆ ಇಳುವರಿ ಕಡಿಮೆಯಾಗುವುದು ಶಾಶ್ವತ ಸಮಸ್ಯೆ ಆಗುತ್ತಿದೆ.
ಅತಿ ರಾಸಾಯನಿಕ ಬಳಕೆ, ಕೀಟನಾಶಕಗಳು, ಕ್ರಿಮಿನಾಶಕಗಳು, ರೋಗಗಳಿಗೆ ಕೊಡುತ್ತಿರುವ ರಾಸಾಯನಿಕ ಔಷಧಿಗಳು, ಕಡಿಮೆ ಆಗುತ್ತಿರುವ ಕೊಟ್ಟಿಗೆ ಗೊಬ್ಬರಗಳು, ಅವಜ್ಞಾನಿಕ ಕೃತಕ ಸಾವಯವ ಗೊಬ್ಬರ ಬಳಕೆಗಳ ನಡುವೆ ಸ್ವಾಭಾವಿಕವಾಗಿ ಉತ್ಪಾದನೆಗೊಳ್ಳುವ ಸಾವಯವ ಇಂಗಾಲದ ಕೊರತೆ ಅಡಿಕೆ ರೋಗಗಳಿಗೆ ಒಂದು ಪ್ರಮುಖ ಕಾರಣವಾಗಿದೆ.

Organic carbon

ಏನಿದು ಸಾವಯವ ಇಂಗಾಲ?

ಸರಳವಾಗಿ ಹೇಳುವುದಾದರೆ, ಪರಿಸರದಲ್ಲೇ ಇರುವ ಸಾವಯವ ವಸ್ತುಗಳು ಮತ್ತು ತ್ಯಾಜ್ಯಗಳು ಕೊಳೆಯುವುದರಿಂದ ಸಾವಯವ ಇಂಗಾಲ ಉತ್ಪತ್ತಿಯಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು ಗಿಡಗಳ ಬೆಳವಣಿಗೆಗೆ ಸಾವಯವ ಇಂಗಾಲ ಒಂದು ಪ್ರಮುಖ ಅಂಶ. ಗಿಡಗಳ ಆರೋಗ್ಯಕ್ಕೆ, ಉತ್ತಮ ಇಳುವರಿಗೆ, ಮಣ್ಣಿನ ಆರೋಗ್ಯಕ್ಕೆ ಈ ಸಾವಯವ ಇಂಗಾಲ ಅತ್ಯಗತ್ಯ. ಪರಿಸರದಲ್ಲಿ ಸಹಜವಾಗಿ ನೆಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಈ ಸಾವಯವ ಇಂಗಾಲ ಉತ್ಪಾದನೆಯೂ ಒಂದು. ಮಣ್ಣಿನಲ್ಲಿ ತನ್ನಿಂದ ತಾನೆ ಉತ್ಪತ್ತಿಯಾಗುವ ಅನೇಕ ಜೀವಾಣುಗಳಿಗೆ ಆಹಾರವೂ ಈ ಸಾವಯವ ಇಂಗಾಲ. ಸಾವಯವ ಇಂಗಾಲಯುಕ್ತ ಮಣ್ಣು ಎಲ್ಲ ಸೂಕ್ಷ್ಮ ಜೀವಿಗಳಿಗೂ, ಎರೆಹುಳು, ಏಡಿಯಂತಹ ಜೀವಿಗಳಿಗೂ ಆಧಾರ. ಸಾವಯವ ಇಂಗಾಲದಿಂದ ಮಣ್ಣಿನಲ್ಲಿ ಸದಾ ತೇವದಿಂದ ಕೂಡಿದ ತಂಪಾದ ನೆಲೆ ಉಂಟಾಗುತ್ತದೆ. ಇದು ಅಗತ್ಯವಿರುವ ಎಲ್ಲ ಸೂಕ್ಷ್ಮ ಜೀವಿಗಳಿಗೆ ನೆಲೆ ಕೂಡ.

ಜೀವಾಣುಗಳಿಗೆ ದಾಹ

ನಮ್ಮ ಮಣ್ಣಿನಲ್ಲಿ ಕೋಟ್ಯಂತರ ಜೀವಾಣುಗಳಿವೆ. ಆದರೆ, ಸಾವಯವ ಪದ್ಧತಿ ಬಿಟ್ಟು ರಾಸಾಯನಿಕ ಬಳಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಜೀವಾಣುಗಳು ಹಸಿವು, ದಾಹದಿಂದ ಬಳಲುತ್ತಿವೆ. ಆಹಾರ, ನೀರು ಮತ್ತು ನೆರಳಿಲ್ಲದೆ ಒಣಗುತ್ತಿವೆ, ನಾಶವಾಗುತ್ತಿವೆ. ಮಣ್ಣಿನ ಇಂಗಾಲದ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿವೆ.
ಮಣ್ಣು ಜೀವಿಗಳಿಗೆ ಸೂಕ್ತ ಆಹಾರ, ನೀರು ನೀಡಿ ಜೀವಿಗಳು ನೆಮ್ಮದಿಯಿಂದ ಬದುಕಿ, ಬೆಳೆಯಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ, ಅದರಲ್ಲೂ ಮುಖ್ಯವಾಗಿ ಕೃಷಿಕರ ಮೂಲ ಗುರಿಯಾಗಬೇಕು. ನೆಲದ ಮೇಲಿರುವ ನಮಗೆಲ್ಲರಿಗೂ ನೆಲದೊಳಗಿನ ಈ ಜೀವಿಗಳೇ ಆಧಾರ. ಇವಿಲ್ಲದೆ ನಾವಿಲ್ಲ. ಪೌಶ್ಟಿಕ ಆಹಾರ ಮತ್ತು ತಂಪಾದ ನೆಲೆಯನ್ನಷ್ಟೇ ಮಣ್ಣಿನ ಜೀವಾಣುಗಳು ನಮ್ಮಿಂದ ನಿರೀಕ್ಷಿಸುವುದು. ಈ ಮಣ್ಣುಜೀವಿಗಳು ಬದುಕುಳಿಯಲು ಸಮೃದ್ಧ ಆಹಾರ ಕೊಡಬೇಕು. ಎರೆಹುಳು ಮತ್ತಿತರ ಮಣ್ಣು ಜೀವಿಗಳಿಗೆ ಸಾವಯವ ಗೊಬ್ಬರವೇ ಉತ್ತಮ ಆಹಾರ. ಮಣ್ಣಲ್ಲಿ ಕೊಳೆತು ಕಳಿಯುವ ಈ ಗೊಬ್ಬರ ಮಣ್ಣುಜೀವಿಗಳಿಗೆ ಮೃಷ್ಟಾನ್ನದಂತೆ. ಬಳಿಕ ಇದುವೇ ನಮ್ಮ ನಿಮ್ಮೆಲ್ಲರ ಬೆಳೆಗಳನ್ನು ಕಾಯುವ, ಕಾಪಾಡುವ ಸಮೃದ್ಧ ಇಂಗಾಲವಾಗಿ ಮಾರ್ಪಡುತ್ತದೆ. ಈ ಇಂಗಾಲದಿಂದ ಮಣ್ಣು ಜೀವಿಗಳು ಬದುಕುಳಿಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. 
ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಕ್ರಮೇಣ ಗೊಬ್ಬರವನ್ನು ಗಿಡದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಈ ವೇಳೆ ಮಣ್ಣಿನ ಮೇಲ್ಪದರದಲ್ಲಿ ಹ್ಯೂಮಸ್ ರೂಪುಗೊಳ್ಳುತ್ತದೆ. ಈ ಹ್ಯೂಮಸ್ ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಮಣ್ಣುಗಳಲ್ಲಿ ಇಂಗಾಲಾಂಶ ಹೆಚ್ಚಾದಾಗ, ನಮ್ಮ ಹೊಲ ತೋಟಗಳು ಸಕಲ ಪೋಷಕಾಂಶಗಳನ್ನೂ ಒಳಗೊಂಡ ಶಕ್ತಿಕೇಂದ್ರಗಳಾಗುತ್ತವೆ.
ದರಗು, ಸೊಪ್ಪು, ಕತ್ತರಿಸಿ ಅಲ್ಲೇ ಬಿಟ್ಟ ಕಳೆ, ಹಳೇ ಅಡಿಕೆ ಮರ, ಕಸಿ ಮಾಡಿದ ಇತರೆ ಮರ-ರೆಂಬೆ-ಕೊಂಬೆಗಳು ಮಣ್ಣಿನಲ್ಲಿ ಕೊಳೆತು, ಮಣ್ಣುಸ್ನೇಹಿ ಜೀವಾಣುಗಳು ಅದನ್ನು ಸೇವಿಸಿ, ಜೀರ್ಣಿಸಿಕೊಂಡು ವಿಸರ್ಜಿಸಿದಾಗ ಮಣ್ಣಿನಲ್ಲಿ ಇಂಗಾಲ ಸೇರಿಸಿಕೊಳ್ಳುತ್ತದೆ.

Soil carbon

ಮಣ್ಣಿನ ಇಂಗಾಲದ ಪ್ರಯೋಜನಗಳೇನು?

ಮುಖ್ಯವಾಗಿ ಇಂಗಾಲದ ಅಂಶ ಹೆಚ್ಚಾಗಿರುವ ಮಣ್ಣುಗಳಲ್ಲಿ ಇಳುವರಿಯಲ್ಲಿ ಸುಧಾರಣೆ ಕಾಣಬಹುದು. ಇಂಗಾಲ ಹೆಚ್ಚಾದರೆ, ಹೆಚ್ಚು ಪ್ರಮಾಣದಲ್ಲಿ ನೀರನ್ನು, ಪೋಷಕಾಂಶಗಳನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಿದ್ದಾಗ ಮಾತ್ರ ಅವು ಬಳಕೆಯಾಗುತ್ತದೆ. ಈ ಮೂಲಕ ಬಿಸಿಲು ಹೆಚ್ಚಿದ್ದಾಗಲೂ ಸಹ ಗಿಡಗಳಿಗೆ ಅಗತ್ಯ ತೇವಾಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಮಣ್ಣಲ್ಲಿನ ಸಾವಯವ ಇಂಗಾಲದ ಅಂಶ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇರಿಸುತ್ತದೆ. ಮಣ್ಣಿನ pH ಸಮತೋಲನ ಅಡಿಕೆ, ತೆಂಗು ಮತ್ತು ಎಲ್ಲ ರೀತಿಯ ಸಸ್ಯ, ಮರಗಳ ಸರ್ವತೋಮುಖ ಬೆಳವಣಿಗೆಗೆ, ಅಧಿಕ ಇಳುವರಿಗೆ ಪ್ರಮುಖ ಅಂಶವಾಗುತ್ತದೆ. ಇಂಗಾಲದ ಅಂಶವಿರುವ ಮಣ್ಣು ಇತರೆ ಮಣ್ಣುಗಳಿಗಿಂತ ಫಲವತ್ತಾಗಿರುತ್ತದೆ. ಸಾವಯವ ಇಂಗಾಲದ ಅಂಶ ಇರುವ ಮಣ್ಣಿನಲ್ಲಿ ಅತಿ ಮಳೆ ಆದಾಗ ಉಂಟಾಗಬಹುದಾದ ಮಣ್ಣು ಸವಕಳಿಯನ್ನು ತಪ್ಪಿಸುತ್ತದೆ. ಮಣ್ಣಲ್ಲಿನ ಸಾವಯವ ವಸ್ತುವೇ ಪ್ರಧಾನ ಅಂಶವಾಗಿದ್ದು, ಇದರಿಂದ ಮಣ್ಣಲ್ಲಿ ಹೆಚ್ಚಾಗುವ ಮಣ್ಣು ಜೀವಿಗಳು ಮಾಲಿನ್ಯಕಾರಕ ವಸ್ತುಗಳನ್ನು ಹೀರಿ ಮಣ್ಣಿನ ವಾತಾವರಣವನ್ನು ಶುದ್ಧಗೊಳಿಸುತ್ತವೆ.

(ಕೆಲವು ಹಿರಿಯ ಅಡಿಕೆ ಬೆಳೆಗಾರರ ಅಭಿಪ್ರಾಯ, ಅಂತರ್ಜಾಲದಲ್ಲಿ ಸಿಕ್ಕಿದ ವಿವಿಧ ಮಾಹಿತಿಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಲೇಖಕ ಮಾಡುತ್ತಿರುವ ಸಣ್ಣ ಮಟ್ಟದ ಪ್ರಾಯೋಗಿಕ ಅನುಭವಗಳ ಪಲಿತಾಂಶಗಳನ್ನು ಆಧರಿಸಿ ಸಂಕ್ಷೇಪಿಸಿ ಈ ಮಾಹಿತಿ ಬರಹ ಸಿದ್ಧಪಡಿಸಲಾಗಿದೆ. ಸಣ್ಣ ಮಟ್ಟದ ಪ್ರಾಯೋಗಿಕ ಅನುಭವ ಎಂದರೆ, ಕಳೆದ ಆರೇಳು ವರ್ಷಗಳಿಂದ ದರಗು, ಹಳು ಸೌರಿದ ತ್ಯಾಜ್ಯ, ಕೊನಮಟ್ಟೆ, ಒಣಗಿದ ಅಡಿಕೆ ಸಿಪ್ಪೆ, ಬಿದ್ದು ಹೋದ ಅಡಿಕೆ ಮರಗಳು, ಕಡಿದ ಕಾಫಿ-ಬಾಳೆ ಗಿಡಗಳ ತ್ಯಾಜ್ಯ, ಬೇಲಿ ಸೌರಿದ ತ್ಯಾಜ್ಯ, ಅಡಿಕೆ ಒಲೆ ಬೂದಿ, ಅಡಿಗೆ ಮನೆಯಲ್ಲಿ ಸೃಷ್ಟಿಗೊಂಡ ಹಸಿರು ತ್ಯಾಜ್ಯ, ಮೆಣಸಿನ ಕಾಳು ಬಿಡಿಸಿದ ಕರೆ….ಎಲ್ಲವನ್ನೂ ಅಡಿಕೆ ತೋಟಕ್ಕೆ ವಾಪಾಸ್ ಬಡಿಸಲಾಗುತ್ತಿದೆ! ಇದುವರೆಗೆ ಕಳೆ ನಾಶಕ ಬಳಸಿಲ್ಲ. ತೋಟಕ್ಕೆ ಬರುವವರು ಖಾಲಿ ಗುಟ್ಕಾ ಪ್ಲಾಸ್ಟಿಕ್ ಪೌಚ್‌ನ್ನೂ ಹಾಕದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ಬಂಧಗೊಳಿಸಲಾಗಿದೆ.)

Areca nuts image

ಕಾಫಿ ಸಿಪ್ಪೆ ಬಳಕೆ

ಇತ್ತೀಚೆಗೆ ಕೊಪ್ಪದ ಜೋಗಿಸರ ಸೂರ್ಯನಾರಾಯಣರವರು ಕಾಫಿ ಸಿಪ್ಪೆಯನ್ನೂ ಸಾವಯವ ಕಾರ್ಬನ್ ಹೆಚ್ಚಿಸಲು ಬಳಸಬಹುದು ಅಂತ ಪ್ರಾಯೋಗಿಕ ಅಧ್ಯಯನ ಮಾಡಿ ಸಲಹೆ ಕೊಟ್ಟಿದ್ದಾರೆ. ಅಡಿಕೆ ತ್ಯಾಜ್ಯ ವಸ್ತುಗಳ ಮರು ಬಳಕೆಯಿಂದ 30% ನಷ್ಟು NPK, ಇತರೆ ಪೋಷಕಾಂಶಗಳನ್ನು ಮತ್ತು ಹೆಚ್ಚಿನ ಇಂಗಾಲವನ್ನು ಉಚಿತವಾಗಿ ಪಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ನಿರೂಪಿಸಿದ್ದಾರೆ. ಉಳಿದಂತೆ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಅನೇಕ ಕ್ರಮಗಳಿವೆ. ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ, ಕಬ್ಬಿನ ಸಿಪ್ಪೆ, ತೆಂಗಿನ ನಾರುಗಳಿಂದ ತಯಾರಿಸುತ್ತಿರುವ ಪ್ರೆಸ್ ಮಡ್ ಗೊಬ್ಬರಗಳ ಬಳಕೆಯಿಂದಲೂ ಮಣ್ಣಿನ ಇಂಗಾಲದ ಅಂಶವನ್ನು ಹೆಚ್ಚಿಸಬಹುದು. (ಈಗ ಮಾರ್ಕೇಟ್‌ನಲ್ಲಿ ಮಸಾಲೆ ದೋಸೆಯಂತೆ ಅತಿ ಬೇಡಿಕೆ ಮತ್ತು ಪೂರೈಕೆಯಾಗುತ್ತಿರುವ , ಪ್ರೆಸ್ ಮಡ್ ಗೊಬ್ಬರಗಳನ್ನು ಹೆಚ್ಚಾಗಿ ಅವೈಜ್ಞಾನಿಕವಾಗಿ ತಯಾರಾಗುತ್ತಿದೆ!! ಬಳಸುವಾಗ ಇಲ್ಲೊಂದು ಜಾಗ್ರತೆ ಬೇಕು. ಇದರ ಬಗ್ಗೆ ಮುಂದಿನ ಸಂಚಿಕೆಯೊಂದರಲ್ಲಿ ನೋಡೋಣ)
ಅಂದ ಹಾಗೆ, ಅಡಿಕೆ ತೋಟದಲ್ಲಿ ಸಾವಯವ ಇಂಗಾಲದ ಪ್ರಮಾಣ 0.75% ಗಿಂತ ಹೆಚ್ಚಿರಬೇಕು. ಇಂಗಾಲದ ಪ್ರಮಾಣ 1% – 2% ಇದ್ದರೆ ಅಡಿಕೆ ಇಳುವರಿಗೆ ಮತ್ತು ರೋಗಗಳ ನಿಂತ್ರಣಕ್ಕೆ ಹೆಚ್ಚು ಸಹಕಾರಿ. ಕನಿಷ್ಟಪಕ್ಷ ಮೂರು ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿ, ನಮ್ಮ ತೋಟದ ಇಂಗಾಲದ ಪ್ರಮಾಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಅಂಕಿ ಅಂಶಗಳ ಮಾಹಿತಿ ಪ್ರಕಾರ ಕರ್ನಾಟಕದ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ 0.25% to 0.50% ಇದೆ. ಇರಬೇಕಾಗಿದ್ದು ಕನಿಷ್ಠ 0.75%!!!.

ಇದನ್ನೂ ಓದಿ | Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಹಾಗಾದರೆ, ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆ ಆಗುವುದು ಹೇಗೆ?

ಮುಖ್ಯವಾಗಿ, ತೋಟ-ಗದ್ದೆಗಳಲ್ಲಿ ಬೆಳೆದು ಹೊರಗೆ ತರುವ ಉತ್ಪನ್ನಗಳಿಂದಲೇ ಬಹುತೇಕ ಸಾವಯವ ಇಂಗಾಲ ನಮ್ಮ ಜಮೀನಿನಿಂದ ಹೊರ ಹೋಗುತ್ತವೆ. ಕೃಷಿ ಭೂಮಿಯಲ್ಲಿ ಸೃಷ್ಟಿಯಾಗುವ ವೇಸ್ಟ್‌ನ್ನು (ಕಬ್ಬಿನ ಜಲ್ಲೆ, ಕಳೆ, ಉತ್ಪನ್ನಗಳ ಸಿಪ್ಪೆ) ಕೃಷಿ ಭೂಮಿಯಿಂದ ಹೊರ ಸಾಗಿಸುವಿದರಿಂದ ಮಣ್ಣಿನ ಇಂಗಾಲ ಕಡಿಮೆಯಾಗುತ್ತದೆ. ಇನ್ನುಳಿದಂತೆ, ಉಷ್ಣತೆ ಏರಿಕೆಯಿಂದಲೂ ಮಣ್ಣಿನ ಕಾರ್ಬನ್ ಕಡಿಮೆ ಆಗುತ್ತದೆ. ಅತಿಯಾದ ಕೆಮಿಕಲ್ ಬಳಸುವಿಕೆಯಿಂದಲೂ ಇಂಗಾಲ ಕಡಿಮೆಯಾಗುತ್ತಿದೆ.
ನಗರ ಪ್ರದೇಶದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಸಮಸ್ಯೆಯಾದರೆ, ಗ್ರಾಮೀಣ ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗುತ್ತಿರುವುದು ಸಮಸ್ಯೆ! ಎರಡೂ ಮನುಷ್ಯನ ಬದುಕಿಗೆ ಮಾರಕ. ಆದರೆ, ಅದೇ ಆಗ್ತಾ ಇದೆ!
ಕೃಷಿ ಭೂಮಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಿಸಲು ಗಂಭೀರ ಚಿಂತನೆ ಮತ್ತು ಅನುಷ್ಠಾನಕ್ಕೆ ರೈತರು ಮುಂದಾಗಬೇಕು.
ಪ್ರಯತ್ನ ಮಾಡೋಣ….

Continue Reading
Advertisement
Madhavi Latha
ದೇಶ13 mins ago

Madhavi Latha: ಮತಗಟ್ಟೆಯಲ್ಲೇ ಮುಸ್ಲಿಂ ಮಹಿಳೆಯರ ಐಡಿ ಕಾರ್ಡ್‌ ಚೆಕ್ಕಿಂಗ್-ಮಾಧವಿ ಲತಾ ಹೊಸ ವಿವಾದ

pm Narendra Modi
ಪ್ರಮುಖ ಸುದ್ದಿ32 mins ago

PM Narendra Modi: “ಪಾಕ್‌ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು

karnataka politics eknath shinde
ಪ್ರಮುಖ ಸುದ್ದಿ1 hour ago

Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

Vijayapura news Drowned in water
ವಿಜಯಪುರ1 hour ago

Vijayapura News: ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿ ಶುದ್ಧೀಕರಣ ಕೇಂದ್ರಕ್ಕೆ ಬಿದ್ದು ಸಾವು

Road Accident between Bolero and bike Couple dies on the spot
ಕಲಬುರಗಿ2 hours ago

Road Accident: ಬೊಲೇರೋ – ಬೈಕ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಆಳಂದದ ದಂಪತಿ ಸಾವು

Arvind Kejriwal
ದೇಶ2 hours ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ರಿಲೀಫ್‌; ಸಿಎಂ ಸ್ಥಾನ ವಜಾಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

Assault case Cubbon park
ಬೆಂಗಳೂರು2 hours ago

Cubbon park: ಕಬ್ಬನ್‌ ಪಾರ್ಕ್‌ನಲ್ಲಿ ಯುವಕನನ್ನು ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದ ಮಹಿಳೆಯರು!

A Manju and Naveen Gowda
ಕ್ರೈಂ2 hours ago

Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

Viral Video
ದೇಶ2 hours ago

Viral Video: ಸಾಲಿನಲ್ಲಿ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮತದಾರನಿಗೆ MLA ಕಪಾಳಮೋಕ್ಷ

POK Explainer in Kannada
ರಾಜಕೀಯ2 hours ago

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ9 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ11 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ21 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ22 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌