Connect with us

ಅಂಕಣ

Justice D Y Chandrachud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ

ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ಜಸ್ಟಿಸ್ ಡಿ ವೈ ಚಂದ್ರಚೂಡ್ (Justice D Y Chandrachud) ಅವರು ತಮ್ಮ ನ್ಯಾಯಪರತೆ, ಸಹಾನುಭೂತಿ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡು ಮೇಲ್ಪಂಕ್ತಿ ಹಾಕಿದ್ದಾರೆ.

VISTARANEWS.COM


on

Justice D Y Chandrachud
Koo

| ಮಲ್ಲಿಕಾರ್ಜುನ ತಿಪ್ಪಾರ ಬೆಂಗಳೂರು

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Justice D Y Chandrachud) ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, ‘ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ’ ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.

ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ. compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್‌ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ. ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.

1959ರಲ್ಲಿ ಜನನ
ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್‌ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್‌ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಸಂಪಾದಿಸಿದರು. ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು.

ಬಹುಮುಖ ವ್ಯಕ್ತಿತ್ವ
ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್‌ಸ್ಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್‌ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಆಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್‍‌ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ಸ್‌ನಲ್ಲಿ ನ್ಯಾಯವಾದಿಯಾಗಿದ್ದಾರೆ.

ತಂದೆ ತೀರ್ಪುಗಳನ್ನೇ ಬದಲಿಸಿದ ಮಗ
ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು. ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು.

ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು
| ಅಯೋಧ್ಯೆ ವಿವಾದ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಜೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.

| ಖಾಸಗಿ ಹಕ್ಕು: 2007 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

| ಗರ್ಭಪಾತ ಹಕ್ಕು: ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು.

| ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.

| ಕ್ರಿಯೇಟಿವ್ ಪ್ರೈವೇಟ್ ಲಿ. ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.

ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.

ಇದನ್ನೂ ಓದಿ | Legal Abortion | ವಿವಾಹಿತರಿಗೂ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಐತಿಹಾಸಿಕ ಆದೇಶ

Continue Reading
Click to comment

Leave a Reply

Your email address will not be published. Required fields are marked *

ಅಂಕಣ

ವೈದ್ಯ ದರ್ಪಣ ಅಂಕಣ | ಮನುಷ್ಯನ ಆಯಸ್ಸು ಎಷ್ಟು?

ಬಾಹ್ಯ ಕಾರಣಗಳಿಂದ ಆಗುತ್ತಿದ್ದ ಸಾವುಗಳನ್ನು ಚಿಕಿತ್ಸೆಗಳ ಮೂಲಕ ತಡೆಗಟ್ಟಿ, ಸರಾಸರಿ ಆಯಸ್ಸನ್ನು ಬೆಳೆಸಿದಂತೆ, ವಯೋಸಹಜ ಸಮಸ್ಯೆಗಳನ್ನು ತಡೆಗಟ್ಟಿ, ಬದುಕಿನ ಅವಧಿಯನ್ನು ಮತ್ತಷ್ಟು ಹೆಚ್ಚಿಸಿ, ಆಯಸ್ಸನ್ನು ವಿಸ್ತರಿಸಲು ಸಾಧ್ಯವೇ? ಆಗ ಆಯಸ್ಸು ಎಷ್ಟು ವರ್ಷಗಳಿಗೆ ತಲುಪಬಹುದು?

VISTARANEWS.COM


on

Edited by

human ageing
Koo

human ageing

ಪುರಾಣಗಳು ಸಾವಿರಾರು ವರ್ಷಗಳ ಕಾಲ ಬದುಕಿದವರ ಕತೆಗಳನ್ನು ಹೇಳುತ್ತವೆ. ಆದರೆ ವೇದಗಳು ಶತಾಯುಷ್ಯವನ್ನು “ಭರ್ತಿ ಆಯಸ್ಸು” ಎಂದು ತೋರುತ್ತವೆ. ಯಜುರ್ವೇದದ “ಪಶ್ಯೇಮ ಶರದಃ ಶತಂ”; ತೈತ್ತರೀಯ ಬ್ರಾಹ್ಮಣದ “ಶತಮಾನಂ ಭವತಿ” ಮೊದಲಾದವು ನೂರು ವರ್ಷಗಳ ಕಾಲ ಜೀವಿಸುವುದನ್ನು ಬದುಕಿನ ಭಾಗ್ಯಗಳಲ್ಲಿ ಒಂದೆಂದು ಸೂಚಿಸುತ್ತವೆ. ಜೀವನದಲ್ಲಿ ಅರವತ್ತು ವರ್ಷಗಳನ್ನು ಪೂರೈಸುವುದು ಒಂದು ಸಾಧನೆಯಾಗಿದ್ದ ಕಾಲವಿತ್ತು. ಸಂವತ್ಸರ ಚಕ್ರದ ಅರವತ್ತು ವರ್ಷಗಳನ್ನು ಪೂರೈಸಿ, ಮತ್ತೊಮ್ಮೆ ಹುಟ್ಟಿದ ಸಂವತ್ಸರದ ಹೆಸರಿಗೆ ಮರಳುವ ಪ್ರಕ್ರಿಯೆಯನ್ನು ಎರಡನೆಯ ಆಯಸ್ಸು ಎಂದು ಪರಿಗಣಿಸಿ ಮಾಡುವ ಸಮಾರಂಭಕ್ಕೆ ಷಷ್ಠಿಪೂರ್ತಿ ಎನ್ನುವ ಹೆಸರಿದೆ. ಶಕ 1800ರಲ್ಲಿ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಸರಾಸರಿ ಆಯಸ್ಸು ಕೇವಲ 25 ವರ್ಷಗಳು. ಶಕ 1900ಕ್ಕೆ ಇದು 47 ವರ್ಷಗಳಿಗೆ ಏರಿತ್ತು. ಇಸವಿ 2000ಕ್ಕೆ ಈ ಸಂಖ್ಯೆ 62 ವರ್ಷಗಳಿಗೆ ತಲುಪಿ, ಪ್ರಸ್ತುತ 70 ವರ್ಷಗಳನ್ನು ಮೀರಿದೆ. ಅಂದರೆ, 1800ನೆಯ ಇಸವಿಯಲ್ಲಿ ಷಷ್ಠಿಪೂರ್ತಿ ಮಾಡಿಕೊಳ್ಳುವುದು ನಿಜದ ಸಾಧನೆ ಎನಿಸಿದರೆ, 2000 ಇಸವಿಯಲ್ಲಿ ಅದು ಕೇವಲ ಸಾಂಕೇತಿಕ ಅನಿಸಬಹುದು.

ಆಯಸ್ಸಿನ ಏರಿಕೆಗೆ ಕಾರಣವೇನು? ಇದಕ್ಕೆ ಮನುಷ್ಯರ ಸಾವಿಗೆ ಪ್ರಮುಖ ಕಾರಣಗಳೇನು ಎನ್ನುವುದರ ಜಿಜ್ಞಾಸೆ ಬೇಕು. ಶಕ 1800 ಸುಮಾರಿನಲ್ಲಿ ಸಾವಿಗೆ ಮುಖ್ಯ ಕಾರಣ ಸಾಂಕ್ರಾಮಿಕ ಕಾಯಿಲೆಗಳು. ಶಕ 1900 ಸುಮಾರಿಗೆ ಸಾಂಕ್ರಾಮಿಕ ಕಾಯಿಲೆಗಳ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಕಾಯಿಲೆಗಳು, ಅಪಘಾತಗಳು, ಅಪೌಷ್ಟಿಕತೆ ಈ ಪಟ್ಟಿಗೆ ಸೇರಿದವು. ಶಕ 2000ದ ಹೊತ್ತಿಗೆ ಲಸಿಕೆಗಳ, ಪ್ರತಿಜೀವಕಗಳ ಕೃಪೆಯಿಂದ ಸಾಂಕ್ರಾಮಿಕ ಕಾಯಿಲೆಗಳ ತೀವ್ರತೆ ಇಳಿದು, ಪರಿಸ್ಥಿತಿ ಬಹಳಷ್ಟು ಸುಧಾರಿಸಿತ್ತು. ಜೀವನಶೈಲಿಯ ಕಾಯಿಲೆಗಳು, ಕ್ಯಾನ್ಸರ್, ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳು, ಬೊಜ್ಜು, ಅತಿ-ಪೌಷ್ಟಿಕತೆ, ಆತ್ಮಹತ್ಯೆ ಇಂತಹ ಅನೇಕ ಕಾರಣಗಳು ಪೂರ್ಣಾಯಸ್ಸಿಗೆ ಅಡ್ಡಿಯಾದವು. ಇಷ್ಟಾಗಿಯೂ ಸರಾಸರಿ ಆಯಸ್ಸು ಏರಿಕೆಯಾದದ್ದರ ಮುಖ್ಯ ಕಾರಣ 1900ರಲ್ಲಿ ಸಾವಿಗೆ ಕಾರಣವಾಗುತ್ತಿದ್ದ ಅಂಶಗಳನ್ನು ಬಹುತೇಕ ನಿವಾರಿಸಿಕೊಂಡದ್ದು.

ಒಂದು ವೇಳೆ ಸಾವಿಗೆ ಕಾರಣವಾಗಬಲ್ಲ ಯಾವುದೇ ಬಾಹ್ಯ ಸಮಸ್ಯೆ ಸಂಭವಿಸಲಿಲ್ಲವೆನ್ನೋಣ. ಆಗ ಪೂರ್ಣಾಯುಷ್ಯ ಎಂದರೆ ಎಷ್ಟು? ಈಗ ನಾವು ಸಾಕಷ್ಟು ಶತಾಯುಷಿಗಳನ್ನು ಕಾಣುತ್ತಿದ್ದೇವೆಯಾದರೂ, ಆ ಆಯಸ್ಸನ್ನು ಪ್ರತಿಯೊಬ್ಬರೂ ಸಾಧಿಸಬಲ್ಲರು ಎಂಬುದಿಲ್ಲ. ವೃದ್ಧಾಪ್ಯದ ಏಕೈಕ ಕಾರಣದಿಂದ ಆಗುವ ಸಾವುಗಳು ಸಾಕಷ್ಟಿವೆ. ಅಂದರೆ, ಯಾವುದೇ ಬಾಹ್ಯ ಕಾರಣಗಳು ಇಲ್ಲದಿದ್ದರೂ, ಶರೀರ ತಾನೇ ತಾನಾಗಿ, ಸಹಜವಾಗಿ, ವಯೋಸಂಬಂಧಿ ಕಾರಣಗಳಿಂದ ಜರ್ಜರಿತವಾಗುತ್ತಾ ಕಡೆಗೆ ಸಾವಿಗೆ ಶರಣಾಗುತ್ತದೆ. ಸದ್ಯಕ್ಕೆ ಈ ರೀತಿ ಸಾವಿಗೆ ಗುರಿಯಾಗುವವರ ಸರಾಸರಿ ಆಯಸ್ಸು 80-90 ವರ್ಷಗಳ ಆಸುಪಾಸಿನಲ್ಲಿದೆ. ಬಾಹ್ಯ ಕಾರಣಗಳಿಂದ ಆಗುತ್ತಿದ್ದ ಸಾವುಗಳನ್ನು ಚಿಕಿತ್ಸೆಗಳ ಮೂಲಕ ತಡೆಗಟ್ಟಿ, ಸರಾಸರಿ ಆಯಸ್ಸನ್ನು ಬೆಳೆಸಿದಂತೆ, ವೃದ್ಧಾಪ್ಯ ಸಂಬಂಧಿ ವಯೋಸಹಜ ಸಮಸ್ಯೆಗಳನ್ನು ತಡೆಗಟ್ಟಿ, ಬದುಕಿನ ಅವಧಿಯನ್ನು ಮತ್ತಷ್ಟು ಹೆಚ್ಚಿಸಿ, ಆಯಸ್ಸನ್ನು ವಿಸ್ತರಿಸಲು ಸಾಧ್ಯವೇ? ಒಂದು ವೇಳೆ ಸಾಧ್ಯವೆಂದರೆ, ಆಗ ಆಯಸ್ಸು ಎಷ್ಟು ವರ್ಷಗಳಿಗೆ ತಲುಪಬಹುದು?

ವಿಜ್ಞಾನಿಗಳು ಬಹಳ ಕಾಲದಿಂದ ಈ ಸಾದ್ಯತೆಯ ಹಿಂದೆ ಬಿದ್ದಿದ್ದಾರೆ. ವೃದ್ಧಾಪ್ಯ ಎಂದರೇನು? ಅದು ಹೇಗೆ ಸಂಭವಿಸುತ್ತದೆ? ಅದನ್ನು ಸಮರ್ಪಕವಾಗಿ, ವಸ್ತುನಿಷ್ಠವಾಗಿ ಅಳೆಯುವ ಬಗೆ ಹೇಗೆ? ಯಾವ ರೀತಿ ವೃದ್ಧಾಪ್ಯಕ್ಕೆ ಕಾರಣವಾಗುವ ಸಂಗತಿಗಳನ್ನು ನಿಯಂತ್ರಿಸಬಹುದು?– ಈ ಮೊದಲಾದ ಪ್ರಶ್ನೆಗಳ ಬಗ್ಗೆ ವಿಜ್ಞಾನಿಗಳಿಗೆ ತೀವ್ರ ಕುತೂಹಲವಿದೆಯಾದರೂ, ಅದಕ್ಕೆ ಸಮಾಧಾನಕರ ಉತ್ತರಗಳಿಲ್ಲ. ಈವರೆಗೆ ಮಾಡಿರುವ ಅನೇಕ ಅಂದಾಜುಗಳ ಪೈಕಿ ಯಾವುದೇ ಒಂದು ಅಂಶವೂ ಪಕ್ಕಾ ಎನ್ನಬಹುದಾದ ಉತ್ತರಗಳನ್ನು ನೀಡಿಲ್ಲ. ಆದರೆ, ಒಂದು ಮಾತನ್ನು ಬಹುತೇಕ ಎಲ್ಲ ಸಂಶೋಧಕರೂ ಒಪ್ಪುತ್ತಾರೆ: ಪ್ರತಿಯೊಂದು ಕ್ಷಣವೂ ನಮ್ಮ ದೇಹ ಸಾವಿರಾರು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹಾದುಹೋಗುತ್ತದೆ. ನಾವು ಚಯಾಪಚಯ (metabolism) ಎಂದು ಕರೆಯುವ ಈ ಪ್ರಕ್ರಿಯೆಗೆ ಬಹಳಷ್ಟು ಶಕ್ತಿ ಖರ್ಚಾಗುತ್ತದೆ. ಈ ಶಕ್ತಿ ನಮಗೆ ದೊರೆಯುವುದು ಆಹಾರದ ಮೂಲಕ. ಶಕ್ತಿಯ ಎಷ್ಟು ಪ್ರಮಾಣ ಚಯಾಪಚಯಕ್ಕೆ ಖರ್ಚಾಗುತ್ತದೆ ಮತ್ತು ಎಷ್ಟು ಭಾಗ ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುತ್ತದೆ ಎನ್ನುವುದು ಮುಖ್ಯ. ಸಣ್ಣ ವಯಸ್ಸಿನಲ್ಲಿ ಶರೀರದ ಗಾತ್ರ ಕಡಿಮೆ. ಹೀಗಾಗಿ ಶರೀರದ ನಿರ್ವಹಣೆಗೆ ಹೆಚ್ಚು ಶಕ್ತಿ ಬೇಕಿಲ್ಲ. ಪರಿಣಾಮವಾಗಿ, ಶಕ್ತಿಯ ಖರ್ಚು ಶರೀರವನ್ನು ಬೆಳೆಸಲು ನೆರವಾಗುತ್ತದೆ. ಆದರೆ ಶರೀರ ಗಾತ್ರದಲ್ಲಿ ಬೆಳೆಯುತ್ತಾ ಹೋದಂತೆ ನಿರ್ವಹಣೆಯ ಅಗತ್ಯ ಹೆಚ್ಚುತ್ತದೆ; ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುವ ಶಕ್ತಿಯ ಪ್ರಮಾಣ ಕುಗ್ಗುತ್ತದೆ.

human ageing

ಬದುಕಿನ ಒಂದು ಹಂತದಲ್ಲಿ ಇವೆರಡೂ ಸಮಸ್ಥಿತಿಯನ್ನು ತಲುಪುತ್ತವೆ. ಈ ಸ್ಥಿತಿಯನ್ನು ಕಾಯ್ದಿಟ್ಟುಕೊಳ್ಳಲು ಶರೀರ ಸಜ್ಜಾಗುತ್ತದೆ. ಸಮಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಏರುಪೇರಾದಾಗ ಶರೀರ ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಸಾಕಷ್ಟು ಹೆಣಗುತ್ತದೆ. ಒಂದು ವೇಳೆ ಈ ಹೆಣಗಾಟವನ್ನು ಅಳೆಯಲು ಸಾಧ್ಯವಾದರೆ, ಆಗ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ಶರೀರ ಎಷ್ಟು ಸಮರ್ಥವಾಗಿದೆ ಎಂಬುದನ್ನು ಲೆಕ್ಕಾಚಾರ ಹಾಕಿದಂತೆ. ಕಾಲಕಾಲಕ್ಕೆ ಈ ರೀತಿಯ ಮಾಪನವನ್ನು ಬಳಸಿದರೆ, ಅದು ವೃದ್ಧಾಪ್ಯದ ಅಳತೆಗೋಲಿನಂತೆ ಕೆಲಸ ಮಾಡಬಲ್ಲದು. ಇದು ಸಾಧ್ಯವೇ?

ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು! ಶರೀರವಾಗಲೀ, ಯಂತ್ರವಾಗಲಿ ಬಳಸುತ್ತಾ ಹೋದಂತೆ ಅಲ್ಪಸ್ವಲ್ಪ ಜಖಂ ಆಗುತ್ತಲೇ ಇರುತ್ತದೆ. ಶರೀರದ ವ್ಯವಸ್ಥೆ ಈ ಜಖಂಗಳನ್ನು ಅಲ್ಲಲ್ಲೇ ರಿಪೇರಿ ಮಾಡುತ್ತಾ ಹೋಗುತ್ತದೆ. ಆದರೆ, ಈ ರಿಪೇರಿ ಮಾಡುವ ಸಾಮರ್ಥ್ಯ ವಯಸ್ಸಾಗುತ್ತಾ ಕುಂದುತ್ತದೆ. ಜೀವನದ ಒಂದು ಹಂತದಲ್ಲಿ ಹೀಗೆ ಜಖಂಗೊಂಡಿರುವ ಕೋಶಗಳ ಸಂಖ್ಯೆ ಒಂದು ಹಂತವನ್ನು ಮೀರುತ್ತದೆ. ಅಲ್ಲಿಂದ ಮುಂದೆ ಶರೀರದ ಅಂಗಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರೊಂದಿಗೆ ಮರಣದ ಸಾಧ್ಯತೆಯೂ ಏರುತ್ತದೆ. ಈ ಸಮೀಕರಣವನ್ನು ಗಣಿತೀಯವಾಗಿ ವಿವರಿಸುವ ಪ್ರಯತ್ನಗಳು 19ನೆಯ ಶತಮಾನದ ಆರಂಭದಿಂದಲೇ ನಡೆದಿವೆ. 1825ರಲ್ಲಿ ಬ್ರಿಟನ್ನಿನ ಬೆಂಜಮಿನ್ ಗೊಂಪರ್ಟ್ಜ್ ಎಂಬಾತ ಮರಣದ ಸಾಧ್ಯತೆಗಳ ಬಗ್ಗೆ ಒಂದು ಸಮೀಕರಣ ನೀಡಿ, ನಕ್ಷೆಗಳನ್ನು ತಯಾರಿಸಿದರು. 30ರಿಂದ 80 ವರ್ಷಗಳ ವಯಸ್ಸಿನ ಜನರಲ್ಲಿ ಇದು ಮರಣದ ಅಂದಾಜನ್ನು ಸಾಕಷ್ಟು ನಿಖರವಾಗಿ ನೀಡುತ್ತಿತ್ತು. ಇದರ ಪ್ರಯೋಜನ ಪಡೆದದ್ದು ಜೀವವಿಮೆಯ ಸಂಸ್ಥೆಗಳು! ಯಾವ ವಯಸ್ಸಿನಲ್ಲಿ ಜೀವವಿಮೆ ಮಾಡಿಸಿದರೆ ಎಷ್ಟು ಪ್ರೀಮಿಯಂ ಹಣ ಪಾವತಿಸಬೇಕೆನ್ನುವ ಲೆಕ್ಕಾಚಾರಕ್ಕೆ ಈ ನಕ್ಷೆ ಆಧಾರವಾಯಿತು. ಈ ನಕ್ಷೆಯನ್ನು ಕಾಲಕಾಲಕ್ಕೆ ಮಾರ್ಪಾಡು ಮಾಡುತ್ತಾ ಇಂದಿಗೂ ಬಳಸಬಹುದೆಂದು ಗಣಿತಜ್ಞರ ಅಭಿಮತ. ಹುಟ್ಟಿದ ಮೊದಲ ವರ್ಷವನ್ನು ಹೊರತುಪಡಿಸಿದರೆ, ಸುಮಾರು ಮೂವತ್ತು ವರ್ಷ ವಯಸ್ಸಿನ ನಂತರ ಪ್ರತಿ 8 ವರ್ಷಗಳಿಗೆ ಸಾವಿನ ಸಾಧ್ಯತೆಗಳು ದುಪ್ಪಟ್ಟಾಗುತ್ತವೆ ಎನ್ನುವ ಲೆಕ್ಕಾಚಾರವಿದೆ. ಇದರ ಮೇಲೆ ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳಿಗೆ ಪೂರಕವಾಗಬಲ್ಲ ವೃತ್ತಿ, ಬೊಜ್ಜು ಮೊದಲಾದುವು ಸಾವಿನ ಸಾಧ್ಯತೆಗಳನ್ನು ಮತ್ತಷ್ಟು ಹಿಗ್ಗಿಸುತ್ತವೆ. ಈ ಕಾರಣಕ್ಕಾಗಿಯೇ ವಿಮೆ ಮಾಡಿಸುವ ಸಂಸ್ಥೆಗೆ ಇವೆಲ್ಲವನ್ನೂ ತಿಳಿಸುವುದು ಕಡ್ಡಾಯ.

human ageing

ಇದು ಗಣಿತದ ಮಾತಾಯಿತು. ಇದನ್ನು ಶರೀರದ ಕೆಲಸ-ಕಾರ್ಯಗಳ ಜೊತೆಗೆ ಹೋಲಿಕೆ ಮಾಡಿದರೆ ಮತ್ತಷ್ಟು ನಿಖರವಾದ ಮಾಹಿತಿ ದಕ್ಕಲು ಸಾಧ್ಯವೇ? ರಕ್ತಕೋಶಗಳ ಸಂಖ್ಯೆ ಮತ್ತು ಮಿದುಳಿನ ಸಾಮರ್ಥ್ಯಗಳನ್ನು ಅಳೆಯುವ ಸರಳ ಪರೀಕ್ಷೆಗಳನ್ನು ಮಾಡಿ, ಅದನ್ನು ಸುಮಾರು ಐದೂವರೆ ಲಕ್ಷ ಜನರಲ್ಲಿ ಅನ್ವಯಗೊಳಿಸಿ, ಆಯುಸ್ಸಿನ ಪ್ರಮಾಣವನ್ನು ಸೂಚಿಸಬಲ್ಲ ನಕ್ಷೆಗಳನ್ನು ಸಂಶೋಧಕರು ತಯಾರಿಸಿದ್ದಾರೆ. ಈ ಬೃಹತ್ ಪ್ರಮಾಣದ ಅಧ್ಯಯನವನ್ನು ಬಳಸಿಕೊಂಡು ಆಯಾ ವ್ಯಕ್ತಿಯ ಅನಾರೋಗ್ಯದ ಆಧಾರದ ಮೇಲೆ ಅವರ ಜೀವಿತಾವಧಿ ಎಷ್ಟೆಂದು ಅಂದಾಜಿಸಬಹುದು; ತೀವ್ರ ಮಟ್ಟದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರ ಒಟ್ಟು ಆಯಸ್ಸು ಎಷ್ಟಿರಬಹುದೆಂದೂ ಲೆಕ್ಕ ಹಾಕಬಹುದು. ಇದರ ಪ್ರಕಾರ ನಮ್ಮ ದೇಹದ ಜಖಂ-ರಿಪೇರಿ ವ್ಯವಸ್ಥೆ ಕಾಯಿಲೆಯಂತಹ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದಿದ್ದರೂ ಒಂದು ಹಂತಕ್ಕೆ ಸ್ಥಗಿತವಾಗುತ್ತದೆ. ಹೀಗೆ ವ್ಯವಸ್ಥೆ ಕೊನೆಗೊಳ್ಳುವ ಬಿಂದುವನ್ನು ನಮ್ಮ ಆಯುಸ್ಸಿನ ಪರಮಾವಧಿ ಎಂದು ಭಾವಿಸಬಹುದು. ಈ ಲೆಕ್ಕಾಚಾರದ ಪ್ರಕಾರ ಸದ್ಯಕ್ಕೆ ಮಾನವರ ಆಯಸ್ಸಿನ ಗರಿಷ್ಠ ಸಾಧ್ಯತೆ 138 ರಿಂದ 150 ವರ್ಷಗಳು. ಆದರೆ, ಪ್ರಸ್ತುತ ಶತಾಯುಷಿಗಳ ಸಂಖ್ಯೆ ಹೆಚ್ಚಿಲ್ಲದಿರುವುದರಿಂದ, ಒಂದು ಹಂತದ ನಂತರ ಅವರಿಗೆ ಯಾವ ಕಾಯಿಲೆಗಳು ಬರಬಹುದು ಎಂದು ಅರಿಯುವುದು ಕಷ್ಟ. ಹೀಗಾಗಿ, ತೀವ್ರ ಆರೋಗ್ಯ ಸಮಸ್ಯೆಯ ಅನುಪಸ್ಥಿತಿ ಎಷ್ಟು ಕಾಲ ಮುಂದುವರೆಯಬಲ್ಲದು ಎಂದು ತಿಳಿಯಲಾಗದು. ಅಂತೆಯೇ, ಯಾರಾದರೂ ಈ 150 ವರ್ಷಗಳ ಮಿತಿಯನ್ನು ಮುಟ್ಟಿಯಾರೆ ಎಂದು ಅಂದಾಜಿಸುವುದೂ ಕಠಿಣವೇ.

ಇದು ಇಂದಿನ ಮಾತಾಯಿತು. ಈ ದಿನಕ್ಕೆ ನಾವೇನಿದ್ದರೂ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು; ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಿ ಅವನ್ನು ನಿಖರವಾಗಿ ನಿರ್ನಾಮ ಮಾಡುವ ನವೀನ ತಂತ್ರಗಳನ್ನು ಬಳಸಬಹುದು; ಅಪಘಾತಗಳ ವಿರುದ್ಧ ಸಾಧ್ಯವಾದಷ್ಟೂ ಎಚ್ಚರ ವಹಿಸಬಹುದು; ತಂಬಾಕು, ಮದ್ಯಗಳಿಂದ ದೂರ ಉಳಿಯಬಹುದು; ಸಾತ್ವಿಕ ಆಹಾರ ಸೇವನೆ ಮಾಡಬಹುದು; ಆಯಾ ವಯಸ್ಸು ಅನುಮತಿಸುವ ಕ್ಲುಪ್ತ ವ್ಯಾಯಾಮ ಮಾಡಬಹುದು. ಇದ್ಯಾವುದೂ ದೇಹದ ಜಖಂ-ರಿಪೇರಿ ವ್ಯವಸ್ಥೆಯ ಮಿತಿಯನ್ನು ಹೆಚ್ಚಿಸಲಾರವು; ಇದನ್ನು ಉತ್ತೇಜಿಸಬಲ್ಲ ಪಕ್ಕಾ ವಿಧಾನಗಳೂ ಸದ್ಯಕ್ಕೆ ನಮ್ಮಲ್ಲಿಲ್ಲ. ಆದ್ದರಿಂದ, ನಮ್ಮ ಮಿತಿಯನ್ನೇ ನಿಸರ್ಗದ ಮಿತಿ ಎಂದು ಭಾವಿಸಬೇಕಾಗುತ್ತದೆ. ಆದರೆ, ನಾಳೆ?

1900ರಲ್ಲಿ ಇದ್ದ ವೈದ್ಯಕೀಯ ತಂತ್ರಜ್ಞಾನ ಬೆಳೆದು ದುಪ್ಪಟ್ಟಾಗಲು 50 ವರ್ಷಗಳು ಹಿಡಿದಿದ್ದವು. ಅಲ್ಲಿಂದ ಮುಂದೆ ವೇಗವನ್ನು ಪಡೆದುಕೊಂಡ ಈ ಕ್ಷೇತ್ರ ಈಗ ದಾಪುಗಾಲಿಡುತ್ತಿದೆ. ಪ್ರಸ್ತುತ ವೈದ್ಯಕೀಯ ವಿಜ್ಞಾನ ಪ್ರತಿ ವರ್ಷ ಶೇಕಡಾ 14ರಿಂದ 17ರಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಸಂಶೋಧಕರ ಮತ್ತು ಅರ್ಥಶಾಸ್ತ್ರಜ್ಞರ ಅಭಿಮತ. ಈ ಲೆಕ್ಕದಲ್ಲಿ ಇಂದಿನ ನವೀನ ವೈದ್ಯಕೀಯ ವಿಧಾನ 6-7 ವರ್ಷಗಳ ನಂತರ ಹಳತಾಗುತ್ತದೆ ಮತ್ತು ಹೊಸ ವಿಧಾನವೊಂದು ಅದರ ಸ್ಥಾನ ಗಿಟ್ಟಿಸುತ್ತದೆ. ಅಂದರೆ, ಇಂದು ನಮಗಿರುವ ಸಾಧ್ಯತೆಗಳಿಗೂ, ಇನ್ನು ಐವತ್ತು ವರ್ಷಗಳ ನಂತರ ಜನಿಸುವ ಮಗುವೊಂದರ ಸಾಧ್ಯತೆಗಳಿಗೂ ನಾವು ಊಹಿಸಲಾರದಷ್ಟು ಅಂತರವಿದೆ. 1900 ನೆಯ ಇಸವಿಯಲ್ಲಿ, ಶತಮಾನಗಳಿಂದ ಮನುಷ್ಯರ ಆಯಸ್ಸನ್ನು ಕುಂಠಿತಗೊಳಿಸುತ್ತಿದ್ದ ಸಾಂಕ್ರಾಮಿಕ ಕಾಯಿಲೆಗಳನ್ನು ಯಶಸ್ವಿಯಾಗಿ ಗೆಲ್ಲಬಹುದೆಂಬ ಅಂದಾಜೂ ಇರಲಿಲ್ಲ. 1950 ರ ವೇಳೆಗೆ ಈ ಕುರಿತಾದ ದಿಟ್ಟ ಹೆಜ್ಜೆಗಳಿಂದ ಇದರ ಸಾಧ್ಯತೆಗಳು ಸ್ಪಷ್ಟವಾದವು. 2000ದ ವೇಳೆಗೆ ಸಾಂಕ್ರಾಮಿಕ ಕಾಯಿಲೆಗಳು ಪ್ರಾಣ ತೆಗೆಯುತ್ತವೆ ಎಂಬುದು ಮುಖ್ಯವಾಗಿ ಬಡದೇಶಗಳಿಗೆ ಸೀಮಿತವಾಗಿದ್ದವು. 1900ರಲ್ಲಿ ಅನೂಹ್ಯವಾಗಿದ್ದ ಸಂಗತಿಯೊಂದು 2000 ದ ವೇಳೆಗೆ ಅತಿ ದೊಡ್ಡ ಸಮಸ್ಯೆಯಾಗಿ ಉಳಿದಿರಲಿಲ್ಲ. ಅಂತೆಯೇ, 2000ದ ವೇಳೆಗೆ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎನಿಸಿದ ಸಂಗತಿ 2050ರ ವೇಳೆಗೆ ನಗಣ್ಯವಾಗಬಹುದು.

ಸರಿ; 150 ವರ್ಷಗಳ ಕಾಲ ಬದುಕುವ ಕನಸು ನನಸಾಯಿತು ಎಂದೇ ಭಾವಿಸೋಣ. ಆದರೆ ಗುಣಮಟ್ಟ? ಕಾಯಿಲೆಗಳಿಂದ ನರಳುತ್ತಾ, ಮತ್ತೊಬ್ಬರ ಹಂಗಿನಲ್ಲಿ ಬದುಕುವ ಇಚ್ಛೆ ಯಾರಿಗೂ ಇರುವುದಿಲ್ಲ. ಜೀವನದ ಉದ್ದವನ್ನು ಹೆಚ್ಚಿಸಿಕೊಳ್ಳುವುದಷ್ಟೆ ಅಲ್ಲ, ಅದರ ವಿಸ್ತಾರವನ್ನೂ ಹೆಚ್ಚಿಸಿಕೊಂಡು, ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಭರ್ತಿ ಜೀವನವನ್ನು ತುಂಬಿಸಿಕೊಳ್ಳುವ ಕನಸು ಪ್ರತಿಯೊಬ್ಬರದ್ದೂ ಆಗಿರುತ್ತದೆ. ಇದು ಸಾಧ್ಯವಾಗುವುದು ಹೇಗೆ? ವಿಜ್ಞಾನ ನಮ್ಮ ಜೀವನದ ಉದ್ದವನ್ನು ಹೆಚ್ಚಿಸಿದರೆ ಸಾಲದು; ನಮ್ಮ ಅನಾರೋಗ್ಯದ ಮಿತಿಗಳನ್ನೂ ಮೀರಬೇಕು. ಇದಕ್ಕೆ ನಮ್ಮ ಜಖಂ-ರಿಪೇರಿ ವ್ಯವಸ್ಥೆ ಸುಧಾರಿಸಬೇಕು. ಪ್ರಸ್ತುತ ವಿಜ್ಞಾನಿಗಳ ಗಮನ ಇರುವುದು ಅಲ್ಲೇ. ವೃದ್ಧಾಪ್ಯದ ವೈಜ್ಞಾನಿಕ ಸಂಶೋಧನೆಗಳು ಈಗ ಖಚಿತ ರೂಪ ಪಡೆಯುತ್ತಿವೆ. ನಮ್ಮ ಜಖಂ-ರಿಪೇರಿಯ ಒಳಸುಳಿಗಳ ಅಧ್ಯಯನ ನಡೆಯುತ್ತಿದೆ. ಮುಕ್ತ-ಆಕ್ಸಿಜನ್ ಸಂಯುಕ್ತಗಳಿಂದ ಹಿಡಿದು ನಮ್ಮ ವರ್ಣತಂತುವಿನ ತುದಿಯ ಟೆಲೊಮೆರ್ ಎನ್ನುವ ಭಾಗದವರೆಗೆ, ಜೀವಕೋಶದ ರಾಸಾಯನಿಕಗಳಿಂದ ಮೊದಲಾಗಿ ಮೈಟೊಕಾಂಡ್ರಿಯಾ ರಚನೆಯವರೆಗೆ ಇದರ ಹುಡುಕಾಟ ನಡೆಯುತ್ತಿದೆ. ಅನಾದಿ ಕಾಲದ “ದೀರ್ಘಾಯುಷ್ಮಾನ್ ಭವ” ಎನ್ನುವ ಹಿರಿಯರ ಹಾರೈಕೆ ಇಂದು “ಸುದೀರ್ಘ ನಿರಾಮಯ ಸಂತೃಪ್ತ ಆಯುಷ್ಮಾನ್ ಭವ” ಎಂದು ಬದಲಾಗುವತ್ತ ಮುನ್ನಡೆಯುತ್ತಿದೆ. ಮನುಕುಲದ ಭವಿಷ್ಯ ಮತ್ತಷ್ಟು ರೋಚಕವಾಗಲಿದೆ!

Continue Reading

ಅಂಕಣ

ಗೋವಿನ ಉತ್ಪನ್ನಗಳ ಬಳಕೆಯಿಂದ ಹೆಚ್ಚಿದ ಅಗ್ನಿಹೋತ್ರದ ಮಹಿಮೆ

ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಅಗ್ನಿಹೋತ್ರಾದಲ್ಲಿ ಗೋವಿನ ಉತ್ಪನ್ನಗಳ ಬಳಕೆ ಹೆಚ್ಚು ಪರಿಣಾಮಕಾರಿ ಎಂಬುದು ವೈಜ್ಞಾನಿಕವಾಗಿ ಈಗ ಸಾಬೀತಾಗಿದೆ. ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತುʼʼ ನಲ್ಲಿ ಈ ವಾರ ಈ ವಿಷಯದ ಕುರಿತು ಚರ್ಚಿಸಲಾಗಿದೆ.

VISTARANEWS.COM


on

Edited by

go sampattu column about cow
Koo

go sampattu
column about cow

1984ರಂದು ಪ್ರಪಂಚವನ್ನೇ ನಿಬ್ಬರಗೊಳಿಸಿದ್ದ ಈ “ಅಗ್ನಿಹೋತ್ರ” ಕ್ರಿಯೆ ಯಜ್ಞಗಳಲ್ಲೇ ಮೊಟ್ಟ ಮೊದಲ ಕರ್ಮ ಮತ್ತು ನಿತ್ಯಕರ್ಮ ಕಾರ್ಯಗಳಲ್ಲಿ ಒಂದು. ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಇದರ ಮೂಲ ತತ್ವ. ಇದರ ಮೂಲವು ವೇದಕಾಲದಲ್ಲಿಯೇ ಲಭ್ಯವಿದ್ದು, ಪುರಾತನ ಋಷಿಮುನಿಗಳು ಆಚರಿಸುತ್ತಿದ್ದ ಯಾಗ, ರಾಜಮಹಾರಾಜರು ಅರಮನೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಹೋಮ, ಹವನಗಳು ಅಗ್ನಿಹೋತ್ರದ ತತ್ವವನ್ನು ಸಾರುತ್ತವೆ. ಆಗಿನ ಕಾಲದಲ್ಲಿ ಇಂತಹ ಯಾಗಗಳು ಲೋಕ ಕಲ್ಯಾಣಕ್ಕಾಗಿ ಆಚರಿಸಲ್ಪಡುತ್ತಿದ್ದವು.

ಅಗ್ನಿಹೋತ್ರ ಕ್ರಿಯೆಯ ಆಚರಣೆಯಲ್ಲಿ ತಾಮ್ರದ ಪಾತ್ರೆಯನ್ನೇ ಬಳಸಬೇಕೆಂದಿದೆ. ಅದಕ್ಕೆ ನಿಶ್ಚಿತವಾದ ಕಾರಣವು ಇದೆ. ತಾಮ್ರಕ್ಕೆ ಅಣು ಜೀವಿಗಳನ್ನು ನಾಶ ಮಾಡುವ ವಿಶೇಷ ಗುಣವಿದೆ. ಹಾಗೆಯೇ ಇದರ ಆಚರಣೆಗೆ ಅತಿ ಅವಶ್ಯಕವಾದುದು ದೇಸಿ ಗೋವಿನ ತುಪ್ಪ ಮತ್ತು ಗೋಮಯದ ಬೆರಣಿ. ಕೆಲವೊಂದು ಕಡೆ ಅಕ್ಕಿಯ ಕಾಳನ್ನು ಬಳಸುವುದೂ ಇದೆ. ಹೀಗಾಗಿ ದೇಸಿ ಆಕಳ ಗೋಮಯದಿಂದ ಮಾಡಿದ ಬೆರಣಿ ಮತ್ತು ತುಪ್ಪ ಹಾಗೂ ಆ ತುಪ್ಪದಲ್ಲಿ ಅದ್ದಿದ ಅಕ್ಕಿಯ ಅಕ್ಷತೆ ಕಾಳಿಗೂ ಒಂದು ವಿಶೇಷವಾದ ಅರ್ಥವಿದೆ.

ಅಷ್ಟೇ ಅಲ್ಲದೆ ಅಗ್ನಿಹೋತ್ರ ಕ್ರಿಯೆಯ ನಂತರ ಉದ್ಭವವಾದ ಅನಿಲವು ಸುತ್ತಮುತ್ತಲಿನ ವಾತಾವರಣದ ವಾಯುಮಾಲಿನ್ಯ ಸೇರಿದಂತೆ ಎಲ್ಲಾ ವಿಷಾನಿಲದ ದುಷ್ಟರಿಣಾಮವನ್ನು ಸಹ ಪರಿಣಾಮಕಾರಿಯಾಗಿ ನಿಷ್ಫಲಗೊಳಿಸುವುದು ರುಜುವಾತಾಗಿದೆ. ಭೋಪಾಲ್‌ನ ಆ ದುರ್ಘಟನೆಯ ನಂತರ ಜರ್ಮನಿಯ ಮುನಿಚ್ ಮತ್ತು ರಷ್ಯಾದ ವಿಜ್ಞಾನಿಗಳು ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ನಡೆಸಿದ್ದಾರೆ. ನಂತರ ಅಲ್ಲಿನ ವಿಜ್ಞಾನಿಗಳು ಅಗ್ನಿಹೋತ್ರದ ಮಹಿಮೆಗೆ ಬೆರಗಾಗಿ, ಅದರ ವಿಸ್ಮಯವನ್ನು ಒಪ್ಪಿ, ಸನಾತನ ಭಾರತದ ಈ ಒಂದು ಕ್ರಿಯೆಯೇ ನಮ್ಮನ್ನು ಮುಂದೊಂದು ದಿನ ವಿಕಿರಣದಿಂದ ಉಳಿಸುವ ಏಕೈಕ ಮಾರ್ಗ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಪ್ರಪಂಚದ ಮುಂದೆ ಮಂಡಿಸಿದ್ದಾರೆ. ಹಾಗೆಯೇ ಅಗ್ನಿಹೋತ್ರ ಆಚರಣೆಯ ನಂತರ ಉಳಿದ ಬೂದಿಯಿಂದ ಮಾತ್ರೆಗಳನ್ನು ತಯಾರಿಸುವ ಮೂಲಕ ಮಾನವನ ಜೀವಕ್ಕೆ ಅತಿ ಅವಶ್ಯಕವಾದ 92 ಖನಿಜಾಂಶಗಳಿರುವುದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.

ನಂತರ ಅಮೆರಿಕಾ, ರಷ್ಯಾ, ಜರ್ಮನಿ, ಪೋಲಂಡ್ ಮುಂತಾದ ದೇಶಗಳಲ್ಲಿ ಅಗ್ನಿಹೋತ್ರದ ಕುರಿತ ಸಾಕಷ್ಟು ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುವಂತಾಗುತ್ತದೆ. ಆ ಎಲ್ಲಾ ಸಂಶೋಧನೆಯ ಅಂತ್ಯದಲ್ಲಿ ಅಲ್ಲಿಯ ವಿಜ್ಞಾನಿಗಳು ಹಾಗೂ ಸಂಶೋಧಕರು ಅಗ್ನಿಹೋತ್ರದಿಂದ ಹೊರ ಬೀಳುವ ಧೂಮವು ರಕ್ತಕ್ಕೆ ಸಮಸ್ಯೆ ಒಡ್ಡುವ ಸೂಕ್ಷ್ಮಾಣು ಜೀವಿಗಳನ್ನು ಹಾಗೂ ವೈರಾಣುಗಳನ್ನು ನಾಶಗೊಳಿಸುವ ಗುಣ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.

ಇಂತಹ ಬೆಲೆ ಕಟ್ಟಲಾಗದ ಅಗ್ನಿಹೋತ್ರದಲ್ಲಿ ಪ್ರಮುಖವಾಗಿ ಬಳಸುವ ದೇಸಿ ಗೋವಿನ ತುಪ್ಪವು ಸ್ವಾಭಾವಿಕವಾಗಿಯೇ ಅತಿ ಹೆಚ್ಚು ಗುಣಗಳನ್ನು ಹೊಂದಿದೆ. ಇಂತಹುದನ್ನು ಉರಿಯುತ್ತಿರುವ ಬೆಂಕಿಗೆ ಹಾಕಿದಾಗ ಅದು ಮತ್ತಷ್ಟು ಧನಾತ್ಮಕ ಗುಣಗಳನ್ನು ಪ್ರಕಟಿಸುತ್ತದೆ. ಇದರಿಂದ ಉಂಟಾದ ಹೊಗೆಯ ಪ್ರಭಾವ ಎಲ್ಲಿಯವರೆಗೆ ಹರಡಿರುತ್ತದೆಯೋ ಅಲ್ಲಿಯವರೆಗಿನ ಎಲ್ಲಾ ಕ್ಷೇತ್ರಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾ ಪ್ರಭಾವದಿಂದ ಮುಕ್ತವಾಗುತ್ತವೆ ಎಂಬುದು ಸಾಕಷ್ಟು ಸಂಶೋಧನೆಯಿಂದ ಸಾಬೀತಾಗಿದೆ.

ಗೋವಿನ ತುಪ್ಪ ಮತ್ತು ತುಂಡಾಗದ ಅಕ್ಕಿ, ಅಂದರೆ ಅಕ್ಷತೆಯನ್ನು ಮಿಶ್ರಣಮಾಡಿ ಉರಿಸುವುದರಿಂದ ಅತ್ಯಂತ ಮಹತ್ವಪೂರ್ಣ ಅನಿಲಗಳಾದ ಇಥಿಲಿನ್ ಆಕ್ಸೈಡ್, ಪ್ರೊಪಲೀನ್ ಆಕ್ಸೈಡ್ ಮತ್ತು ಫಾರ್ಮಲಾ ಡಿ ಹೈಡ್ ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾಗುವ ಹಲವು ಅನಿಲಗಳಲ್ಲಿ ಇಥಿಲಿನ್ ಆಕ್ಸೈಡ್ ಇಂದಿನ ಸಮಯದಲ್ಲಿ ಎಲ್ಲಕ್ಕಿಂತ ಅಧಿಕ ಉಪಯುಕ್ತ ಜೀವಾಣು ರೋಧಕ ಅನಿಲ ಎಂಬುದು ಸಾಬೀತಾಗಿದೆ. ಮೆಡಿಕಲ್ ಸೈನ್ಸ್‌ನಲ್ಲಿ ಈ ಅನಿಲವನ್ನು ಆಪರೇಷನ್ ಥಿಯೇಟರ್‌ನಿಂದ ಹಿಡಿದು ಜೀವ ರಕ್ಷಕ ಔಷಧಿಗಳನ್ನು ತಯಾರಿಸಲು ಉಪಯೋಗಿ ಸಲಾಗುತ್ತದೆ. ಇನ್ನು ಪ್ರೊಪಲೀನ್ ಆಕ್ಸೈಡ್‌ ಅನ್ನು ಕೃತಕ ಮಳೆಗೋಸ್ಕರ ಮಾಡುವ ಮೋಡಬಿತ್ತನೆಯಲ್ಲಿ ಇಂದಿನ ವೈಜ್ಞಾನಿಕರು ಬಹುಮುಖ್ಯವಾಗಿ ಇಂದಿಗೂ ಬಳಸುತ್ತಿದ್ದಾರೆ.

ಉರಿಯುತ್ತಿರುವ ಬೆಂಕಿಗೆ ದೇಸಿ ಗೋವಿನ ತುಪ್ಪವನ್ನು ಹಾಕುವುದರಿಂದ ಉಂಟಾಗುವ ಧೂಮವು ವಿಕಿರಣದ ತೀವ್ರತೆಯನ್ನು ಕೂಡಲೇ ಕಡಿಮೆ ಮಾಡುತ್ತದೆ. ದೇಶಿ ಗೋವಿನ ತುಪ್ಪವು ಶೇಕಡಾ 90ರಷ್ಟು ಇಂಗಾಲವನ್ನು ಒಳಗೊಂಡಿದೆ. ಪ್ರಪಂಚದ ಯಾವುದೇ ವಸ್ತುವಿನಲ್ಲಿ ಇಷ್ಟು ಪ್ರಮಾಣದ ಇಂಗಾಲವಿಲ್ಲ. ಹೀಗಾಗಿ ಅಗ್ನಿಹೋತ್ರದಲ್ಲಿ ದಹಿಸಿದ ಈ ತುಪ್ಪವು ನಂತರ ಖನಿಜದಂತೆ ಕೆಲಸ ಮಾಡುವುದು ಕಂಡುಬಂದಿದೆ.

ದೇಸಿ ಗೋವಿನ ಗೋಮಯದಲ್ಲಿ ಅಣು ಜೀವಿಗಳನ್ನು ನಾಶಮಾಡುವ ವಿಶೇಷ ಗುಣವಿರುವುದರಿಂದಲೇ ಅಗ್ನಿಹೋತ್ರದಲ್ಲಿ ಬೆರಣಿಗಳನ್ನು ಉರುವಲಾಗಿ ಉಪಯೋಗಿಸಲಾಗುತ್ತದೆ. ಮನೆಯ ಗೋಡೆಗಳಿಗೆ ಗೋಮಯವನ್ನು ದಪ್ಪವಾಗಿ ಬಳಿದಿದ್ದೇ ಆದಲ್ಲಿ ಅದು ಅಣು ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಹಾಗೆಯೇ ಗೋಮಯವು ಅತಿ ಕೆಟ್ಟ ಪರಿಣಾಮ ಬೀರುವ ಆಲ್ಫಾ, ಬೀಟಾ ಮತ್ತು ಗಾಮ ಕಿರಣಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ನ್ಯೂಕ್ಲಿಯರ್‌ನ ಗಾಮ ಕಿರಣಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ನಮ್ಮ

ದೇಶದಲ್ಲೂ ಸಾಕಷ್ಟು ನ್ಯೂಕ್ಲಿಯರ್ ಪ್ಲಾಂಟ್‌ಗಳಿದ್ದು, ಒಂದೊಮ್ಮೆ ಏನಾದರೂ ಅನಾಹುತ ಘಟಸಿದರೆ ಅದಕ್ಕೆ ನಮ್ಮ ಸನಾತನ ಧರ್ಮದಲ್ಲಿರುವ ಈ ಅಗ್ನಿಹೋತ್ರ ಪದ್ಧತಿಯೊಂದೇ ನಮ್ಮನ್ನು ವಿಕಿರಣದಿಂದ ಕಾಪಾಡ ಬಹುದಾಗಿದೆ. ಹೀಗೆ ಆಧುನಿಕ ಯುಗದಲ್ಲೂ ಗೋವು ತನ್ನ ಮಹಿಮೆಯನ್ನು ಒಂದಲ್ಲ ಒಂದು ರೀತಿ ಸಾರುತ್ತಲೇ ಬಂದಿದೆ.

go sampattu
column about cow

ಹೀಗೆ ಭೋಪಾಲ್‌ನಲ್ಲಿ ಘಟಿಸಿದ ಆ ದುರ್ಘಟನೆಯ ನಂತರ ದೇಶಾದ್ಯಂತ ಅಗ್ನಿಹೋತ್ರ ಕ್ರಿಯೆಯನ್ನು ಪುರಸ್ಕರಿಸುವ ಸಂಸ್ಥೆಗಳು ಹುಟ್ಟಿಕೊಂಡವು. ಇದು ಕ್ರಮೇಣ ಇತರ ರಾಷ್ಟ್ರಗಳಿಗೂ ವಿಸ್ತರಿಸಿತು. ಅದರಲ್ಲೂ ಮಲೇಶಿಯಾದಲ್ಲಿ ಇದು ತೀವ್ರಗತಿಯಲ್ಲಿ ಪ್ರಚಾರವನ್ನು ಪಡೆಯಿತು. ನಂತರ ಅದು ಅಲ್ಲಿಯ ಆಕಾಶವಾಣಿಯ ಮೂಲಕ ದಿನಕ್ಕೆರಡು ಬಾರಿ ಅಗ್ನಿಹೋತ್ರದ ಪಾಠಗಳನ್ನು ಪ್ರಸಾರ ಮಾಡುವಷ್ಟು ಪ್ರಚಾರ ಮಾಡಲಾಯಿತು. ಅಲ್ಲಿ ಈ ಕ್ರಿಯೆಗೆ ಬೇಕಾದ ಗೋಮಯದ ಬೆರಣಿಗಳನ್ನು ಮಾಡುವುದೇ ಒಂದು ಬಹುದೊಡ್ಡ ಗೃಹೋದ್ಯೋಗವಾಯಿತು. ಇದರಂತೆ ಪೆರು ದೇಶದಲ್ಲಿಯೂ ಅಗ್ನಿಹೋತ್ರದ ಪ್ರಚಾರ ಮತ್ತು ಆಚರಣೆ ಜೋರಾದ ಪ್ರಚಾರದೊಂದಿಗೆ ಆಚರಣೆಗೆ ಬಂತು.

ಅಂತೆಯೇ ಅಗ್ನಿಹೋತ್ರದ ನಂತರ ಅದರ ಭಸ್ಮವನ್ನು ಸಸ್ಯಗಳಿಗೆ ಮತ್ತು ಗಿಡಗಳಿಗೆ ಗೊಬ್ಬರದಂತೆ ಬಳಸಿದಲ್ಲಿ ಅವುಗಳು ಚೆನ್ನಾಗಿ ಬೆಳೆಯುವುದು ಸಂಶೋಧನೆಯಿಂದ ಸಾಬೀತಾಗಿದೆ. ಇದರ ಭಸ್ಮವನ್ನು ಭೂಮಿಗೆ ಹಾಕಿದಾಗ ಸಸ್ಯಗಳಿಗೆ ಬೇಕಾದ ಪೊಟ್ಯಾಷಿಯಂ ಮತ್ತು ನೈಟ್ರೋಜನ್ ಹೇರಳವಾಗಿ ದೊರೆಯುತ್ತದೆ. ಇದರಿಂದ ಭೂಮಿಯೂ ಹೆಚ್ಚು ಫಲವತ್ತಾಗುವುದಲ್ಲದೆ ಅಲ್ಲಿ ಎರೆಹುಳುಗಳು ಸಮೃದ್ಧವಾಗಿ ಬೆಳೆಯುತ್ತವೆ. ಈಗಾಗಲೇ ಯುರೋಪ್ ದೇಶಗಳಲ್ಲಿ ಇದನ್ನರಿತು ಅಗ್ನಿಹೋತ್ರವನ್ನು ಕೃಷಿ ಉತ್ಪನ್ನಗಳ ವೃದ್ಧಿಗಾಗಿ ಬಳಸತೊಡಗಿದ್ದಾರೆ. ಜರ್ಮನಿಯಲ್ಲಿನ ಸುಮಾರು 60ಕ್ಕೂ ಹೆಚ್ಚು ಸಂಶೋಧಕರು ಈ ವಿಧಾನವನ್ನು ಯಶಸ್ವಿಯಾಗಿ ಪ್ರಯೋಗಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಸಂಸ್ಕರಿಸಿದ ಬೀಜಗಳು ಸಹ ಹೆಚ್ಚು ಆರೋಗ್ಯವಾಗಿಯೂ ಶಕ್ತಿಯುತವಾಗಿಯೂ ಇರುವುದನ್ನು ಅವರೆಲ್ಲರು ಕಂಡುಕೊಂಡಿದ್ದಾರೆ.

ಹೀಗಾಗಿಯೇ ಇಂದಿನ ಯುಗದಲ್ಲಿ ಅಗ್ನಿಹೋತ್ರ ಕ್ರಿಯೆಯನ್ನು ದೇಸಿ ಗೋವಿನ ಉತ್ಪನ್ನಗಳ ಒಂದು ವೈಜ್ಞಾನಿಕ ಪವಾಡ ಎಂದೇ ಹೇಳಬಹುದಾಗಿದೆ. ಇಂದು ಇಡೀ ಜಗತ್ತೇ ನಮ್ಮ ಸನಾತನ ಧರ್ಮದ ಪ್ರತೀಕವಾದ ಈ ಅಗ್ನಿಹೋತ್ರ ಕ್ರಿಯೆಗೆ ಪ್ರಚಾರ ಕೊಡುವ ಮೂಲಕ ಆಚರಣೆಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಸಂಘ ಸಂಸ್ಥೆಗಳು ನಿರಂತರ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಇದೆಲ್ಲದರ ಪರಿಣಾಮ ಸ್ವಲ್ಪಮಟ್ಟಿಗಾದರೂ ಇದಕ್ಕೆ ಪ್ರಚಾರ ಸಿಗುವಂತಾಗಿದೆ.

ಹೀಗೆ ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ಈ ಕ್ರಿಯೆ ತದನಂತರ ಭಾಗಶಃ ಅಳಿದೇ ಹೋಗುವ ಸ್ಥಿತಿ ನಿರ್ಮಾ ಣವಾಗಿತ್ತು. ಈಗ ಇದಕ್ಕೆ ಸ್ವಲ್ಪ ಪ್ರಚಾರ ದೊರೆತು ಜೀವ ಪಡೆದುಕೊಳ್ಳುತ್ತಿದೆ. ಆದರೆ ಈ ಕ್ರಿಯೆ ಮುಂದೊಂದು ದಿನ ನಮ್ಮ ಜೀವವನ್ನು ಉಳಿಸುವ ಏಕೈಕ ಸಾಧನ ಎಂಬುದು ಬಹಳಷ್ಟು ಜನರಿಗೆ ಮನವರಿಕೆಯಾಗಬೇಕಾಗಿದೆ. ಹಾಗೆಯೇ ಈ ಕ್ರಿಯೆಗೆ ಪೂರಕವಾದ ದೇಶಿ ಗೋವು ಮತ್ತು ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಅವುಗಳ ಉಳಿವಲ್ಲೇ ಮನುಜ ತನ್ನ ಅಸ್ತಿತ್ವವನ್ನು ಕಾಣಬೇಕಾಗಿದೆ.

ಇದನ್ನೂ ಓದಿ | ಗೋವು ಮತ್ತು ಗ್ರಾಮಗಳಿಂದಲೇ ದೇಶದ ಪ್ರಗತಿ

Continue Reading

ಅಂಕಣ

ಮೊಗಸಾಲೆ ಅಂಕಣ | ವಿಶ್ವನಾಥ್ ಹೇಳುವ ಕಾಗಕ್ಕ ಗುಬ್ಬಕ್ಕ ಕಥೆ

ವಿಧಾನ ಪರಿಷತ್‍ನ ಒಳಗೂ ಸೈ ಹೊರಗೂ ವಿಶ್ವನಾಥ್ ಟೀಕೆಯ ಸುರಿಮಳೆಗರೆಯುತ್ತಿರುವುದು ಅವರದೇ ಪಕ್ಷದ ಸರ್ಕಾರದ ಮೇಲೆ. ಅವರ ನಾಲಗೆಯ ಮೇಲೆ ನಿಯಂತ್ರಣ ಹೇರುವ ಆಡಳಿತ ಪಕ್ಷದ ಎಲ್ಲ ತಂತ್ರಗಳೂ ತಲೆಕೆಳಗಾಗಿವೆ. ಹಾಗಾಗಿ ಬಿಜೆಪಿಗೆ ವಿಶ್ವನಾಥ್ ಸಾಕಾಗಿ ಹೋಗಿದ್ದಾರೆ‌.

VISTARANEWS.COM


on

Edited by

h vishwanath
Koo

mogasale

ದೇವರಾಜ ಅರಸು ಕಾಲದ ಹಳಬ ರಾಜಕಾರಣಿ ಅಡಗೂರು ಎಚ್. ವಿಶ್ವನಾಥ್ ಇದೀಗ ಹೊಸ ಗೂಡು ಅರಸುತ್ತ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ವಿಶ್ವನಾಥ್ ಅಂದುಕೊಂಡಂತೆಯೇ ನಡೆದಲ್ಲಿ ಒಂದಾನೊಂದು ಕಾಲದಲ್ಲಿ ತಾವು ಇದ್ದ ಕಾಂಗ್ರೆಸ್‍ಗೆ ಮರಳಲಿದ್ದಾರೆ. ತೌರು ಮನೆಯನ್ನು ಸೇರಿಕೊಳ್ಳಬೇಕೆಂಬ ಅವರ ತವಕ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬೇಕು-ಬೇಡವನ್ನು ಅವಲಂಬಿಸಿದೆ. ಏಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಗೇ ಹೋಗಿ ಭೇಟಿ ಮಾಡಿ ತಮಗೆ ಕಾಂಗ್ರೆಸ್ ಸೇರುವುದಕ್ಕೆ ನೆರವಾಗಬೇಕು ಎಂದು ಕೋರಿರುವ ವಿಶ್ವನಾಥ್, ಅಲ್ಲಿಂದ ಮರಳಿದವರು ಸೀದಾ ಹೋಗಿ ಭೇಟಿಯಾಗಿದ್ದು ಸಿದ್ದರಾಮಯ್ಯನವರನ್ನು. ನಿನ್ನೆ ಮೊನ್ನೆವರೆಗೂ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರ ಗೆಳೆತನ ಹಾವು ಮುಂಗಸಿಯಂತಿದ್ದುದು ಮುಂದಿನ ದಿನಗಳಲ್ಲಿ ಯಾವ ರೂಪು ತಾಳುತ್ತದೋ ಹೇಳಲಾಗದು.

ಬಣ್ಣಬಣ್ಣದ ಹೂಗುಚ್ಚ ಸಹಿತ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾದಾಗ ಇಬ್ಬರ ಮುಖವೂ ಕ್ಯಾಮೆರಾ ಮುಂದೆ ಹೂಗಳಿಗಿಂತ ಹೆಚ್ಚು ಅರಳಿದ್ದು ಸತ್ಯ. ದೆಹಲಿಯಲ್ಲಿ ಖರ್ಗೆಯವರನ್ನು ಅವರು ಏಐಸಿಸಿಗೆ ಅಧ್ಯಕ್ಷರಾಗಿದ್ದಕ್ಕೆ ಅಭಿನಂದಿಸಲು ಭೇಟಿಯಾಗಿದ್ದೆ ಎಂದಿದ್ದಾಗಲೀ ಅಥವಾ ಸಿದ್ದರಾಮಯ್ಯನವರನ್ನು ಅವರ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೆ ಎಂಬುದಾಗಲೀ ವಿಶ್ವನಾಥ್ ಹೇಳುತ್ತಿರುವ “ಕಾಗಕ್ಕ ಗುಬ್ಬಕ್ಕ ಕಥೆ” ಎನ್ನುವುದು ಎಲ್ಲ ಬಲ್ಲ ಸಂಗತಿ. ಸ್ವತಃ ವಿಶ್ವನಾಥ್ ತಾವಾಡಿರುವ ಈ ಮಾತಿಗೆ ಒಳಗೊಳಗೇ ನಗುತ್ತಿರುತ್ತಾರೆ. ಅವರ ಭೇಟಿಯ ಉದ್ದೇಶ ಕಾಂಗ್ರೆಸ್‍ಗೆ ಸೇರುವುದು; ಅಲ್ಲೀವರೆಗೆ ಎಷ್ಟು ಸಾಧ್ಯವೋ ಅಷ್ಟೂ ಭಾರತೀಯ ಜನತಾ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು.

ಸುಲಭವಾಗಿ ಊಹಿಸಬಹುದಾದ ಈ ಮುಲಾಖಾತ್ ವಿದ್ಯಮಾನದ ವಿವರ ಈ ರೀತಿ ಇದೆ: ದೆಹಲಿಯಲ್ಲಿ ವಿಶ್ವನಾಥ್ ಭೇಟಿಗೆ ಖರ್ಗೆ ಕಚೇರಿ ಒಕೆ ಎನ್ನುತ್ತದೆ. ವಿಶ್ವನಾಥ್ ಅಲ್ಲೂ ಕೂಡಾ ಹೂಗುಚ್ಚದೊಂದಿಗೆ ಅವರನ್ನು ಭೇಟಿ ಮಾಡುತ್ತಾರೆ. ಫೋಟೋ ಸೆಷನ್ ಮುಗಿದ ನಂತರ ಮಾತುಕತೆಗೆ ಕೂರುತ್ತಾರೆ. ಹೆಚ್ಚು ಸಮಯವಿರದ ಕಾರಣ ವಿಶ್ವನಾಥ್ ನೇರ ವಿಷಯಕ್ಕೆ ಬರುತ್ತಾರೆ. ಕಾಂಗ್ರೆಸ್‍ಗೆ ತಾವು ಮರಳಲು ತುದಿಗಾಲಲ್ಲಿ ನಿಂತಿದ್ದು ಪ್ರವೇಶ ಕಲ್ಪಿಸಿ ಉಪಕಾರ ಮಾಡಬೇಕೆಂದು ಮನವಿ ಮಾಡುತ್ತಾರೆ. ವಿಶ್ವನಾಥ್ ಹೇಳಿದ್ದಷ್ಟನ್ನೂ ಕಮಕ್ ಕಿಮಕ್ ಎನ್ನದೆ ಕೇಳಿಸಿಕೊಂಡ ಖರ್ಗೆ ಸಾಹೇಬರು, “ನಿಮ್ಮ ಕಾಂಗ್ರೆಸ್ ಪ್ರವೇಶ ಸಿದ್ದರಾಮಯ್ಯನವರ ಬೇಕು ಬೇಡ ಅವಲಂಬಿಸಿದೆ. ಅವರನ್ನು ಭೇಟಿ ಮಾಡಿ ಕ್ಲಿಯರೆನ್ಸ್ ಸರ್ಟಿಫಿಕೆಟ್ (ಸಿಸಿ) ಪಡೆದುಕೊಳ್ಳಿ” ಎಂದು ಸಾಗ ಹಾಕುತ್ತಾರೆ. ವಿಮಾನವೇರಿ ಬೆಂಗಳೂರಿಗೆ ಬಂದಿಳಿದ ವಿಶ್ವನಾಥ್ ಮತ್ತೊಂದು ಹೂಗುಚ್ಚದೊಂದಿಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಫೋಟೋಕ್ಕೆ ಪೋಸು ಕೊಡುತ್ತಾರೆ.

ಸಿದ್ದರಾಮಯ್ಯ ಸಮ್ಮುಖದಲ್ಲಿ ನೇರವಾಗಿ ವಿಷಯಕ್ಕೆ ಬರುವ ವಿಶ್ವನಾಥ್ ಖರ್ಗೆಯವರನ್ನು ದೆಹಲಿಯಲ್ಲಿ ತಾವು ಭೇಟಿ ಮಾಡಿದ್ದನ್ನೂ, ಅವರಿಗೆ ತಾವು ಮಾಡಿಕೊಂಡ ಮನವಿಯನ್ನೂ, ನಂತರದಲ್ಲಿ ಖರ್ಗೆಯವರೇ ಸೂಚಿಸಿದಂತೆ ಮಾಡುತ್ತಿರುವ ಈ ಭೇಟಿಯನ್ನೂ ಕಾರ್ಯಕಾರಣ ಸಮೇತ ವಿವರಿಸಿ, ಕಾಂಗ್ರೆಸ್‍ನೊಳಕ್ಕೆ ತಾವು ಬರುವುದಕ್ಕೆ ಅಡ್ಡಿ ಮಾಡದೆ ನೆರವಾಗಬೇಕೆಂದು ಮೌಖಿಕ ಅರ್ಜಿ ಸಲ್ಲಸುತ್ತಾರೆ. “ಏಯ್ ವಿಶ್ವನಾಥ, ಆಯ್ತಪ್ಪಾ ನೋಡೋಣ, ಶಿವಕುಮಾರ್ ಏನು ಹೇಳ್ತಾರೋ ಕೇಳೋಣ” ಎಂದು ಸಾಗ ಹಾಕುತ್ತಾರೆ. ಕಾದು ನಿಂತು ಭೇಟಿ ಮಾಡಿದ ಮಾಧ್ಯಮದವರಿಗೆ ವಿಶ್ವನಾಥ್ ಮತ್ತದೇ ಕಾಗಕ್ಕ ಗುಬ್ಬಕ್ಕ ಕಥೆ ಹೇಳುತ್ತಾರೆ.

h vishwanath

ಹದಿನೇಳು ವರ್ಷದ ಹಿಂದೆ 2005ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ಸಂಬಂಧ ಕಡಿದುಕೊಂಡು ಹೊರಬಿದ್ದ ಸಮಯದಲ್ಲಿ ಅವರ ಮುಂದೆ ಇದ್ದುದು ಎರಡು ಮೂರು ಯೋಚನೆ. ವೇಗವಾಗಿ ಬೆಳೆಯುತ್ತಿದ್ದ ಬಿಜೆಪಿಗೆ ಸೇರುವುದು ಅಥವಾ ಪ್ರಾದೇಶಿಕ ಪಕ್ಷ ಕಟ್ಟುವುದು ಅಥವಾ ಉತ್ತರ ಭಾರತದ ಯಾವುದಾದರೊಂದು ಪ್ರಾದೇಶಿಕ ಪಕ್ಷವನ್ನು ಈ ರಾಜ್ಯದಲ್ಲಿ ಬೆಳೆಸುವುದು. ಜಾತ್ಯತೀತ ಜನತಾ ದಳವನ್ನು ತನ್ನ ಮೊದಲ ರಾಜಕೀಯ ವೈರಿ ಎಂದು ಕಾಂಗ್ರೆಸ್ ಭಾವಿಸಿದ್ದ ದಿನಗಳವು. ಏನು ಮಾಡಿದರೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಲ ಕುಗ್ಗಿಸಬಹುದೆಂಬ ಲೆಕ್ಕಾಚಾರದಲ್ಲಿದ್ದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪರಿವಾರ ಈ ಕೆಲಸಕ್ಕೆ ಬಳಸಿಕೊಳ್ಳಲು ಯೋಚಿಸಿದ್ದು ಸಿದ್ದರಾಮಯ್ಯನವರನ್ನು. ಕಾಂಗ್ರೆಸ್‍ನೊಳಕ್ಕೆ ಅವರನ್ನು ಕರೆದುಕೊಂಡರೆ ಜೆಡಿಎಸ್‍ನ ಕುರುಬ ಓಟ್ ಬ್ಯಾಂಕ್‍ಗೆ ಸುಲಭವಾಗಿ ಕನ್ನ ಕೊರೆಯಬಹುದೆಂಬ ಲೆಕ್ಕಾಚಾರ ಅದಾಗಿತ್ತು. ಅದಲ್ಲದೆ “ಅಹಿಂದ” (ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು) ಸಂಘಟನೆ ಮೂಲಕ ಸಿದ್ದರಾಮಯ್ಯ ಬಹಳ ಪ್ರಚಾರದಲ್ಲಿದ್ದರು. ಸಿದ್ದರಾಮಯ್ಯನವರಿಗೆ “ಕಾಂಗ್ರೆಸ್‍ನಲ್ಲಿ ಉತ್ತಮ ಅವಕಾಶದ ಭರವಸೆ” ನೀಡಿ ಗಾಳ ಹಾಕಲು ಪಕ್ಷ ನಿಯೋಜಿಸಿದ್ದು ಎಚ್.ವಿಶ್ವನಾಥ್, ಎಚ್.ಎಂ. ರೇವಣ್ಣ ಮತ್ತು ಎಚ್.ವೈ. ಮೇಟಿ ಎಂಬ ಕುರುಬ ಸಮುದಾಯದ ಮೂವರು ಮುಖಂಡರನ್ನು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ

ಕಾಂಗ್ರೆಸ್‍ನೊಳಕ್ಕೆ ಸಿದ್ದರಾಮಯ್ಯನವರನ್ನು ಕರೆತಂದ ನಂತರದಲ್ಲಿ ವಿಶ್ವನಾಥ್ ಹೇಳಿದ ಮಾತುಗಳನ್ನೇ ಉದ್ಧರಿಸುವುದಾದರೆ “ಒಂಟೆಯನ್ನು ಡೇರೆಯೊಳಗೆ ಬಿಟ್ಟುಕೊಂಡಂತೆ” ಆಯಿತು. ಕುರುಬ ಸಮುದಾಯದ ಪ್ರಶ್ನಾತೀತ ನಾಯಕರಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುವುದಕ್ಕೆ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ಸು ನೀರು ಗೊಬ್ಬರ ಎರೆಯಿತು. ಕ್ರಮೇಣ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಬೇರೆಬೇರೆಯವರು ಸೇರಿ ಪಕ್ಷಕ್ಕೆ ಕೈ ಹಿಡಿದು ಕರೆತಂದ ಮೂವರೂ ಬಾಗಿಲು ಕಾಯಬೇಕಾಯಿತು. ತಮ್ಮನ್ನು ಕಾಂಗ್ರೆಸ್‍ಗೆ ಕರೆತಂದಿದ್ದು ಬೀದರ್‌ನ ಒಬ್ಬ ಗುತ್ತಿಗೆದಾರರೆಂದೂ, ಸೋನಿಯಾ ಗಾಂದಿಯವರ ವಿಶೇಷ ಕಾರ್ಯದರ್ಶಿ ಅಹಮದ್ ಪಟೇಲರನ್ನು ಆ ಗುತ್ತಿಗೆದಾರ ತಮಗೆ ಪರಿಚಯಿಸಿದರೆಂದೂ ಆ ಮೂಲಕ ತಾವು ಕಾಂಗ್ರೆಸ್ ಸೇರಿದ್ದಾಗಿಯೂ, ವಿಶ್ವನಾಥ್ ಹೇಳುತ್ತಿರುವುದು ಬುರುಡೆ ಪುರಾಣವೆಂದೂ ಸಿದ್ದರಾಮಯ್ಯ ಹೇಳುವುದರೊಂದಿಗೆ ಸಂಬಂಧ ಹಳಸುತ್ತ ಹೋಗಿ ಹಾವು ಮುಂಗಸಿಯಂತೆ ಕಚ್ಚಾಡುತ್ತ ಹಾದಿರಂಪ ಬೀದಿರಂಪ ಮಾಡಿದ್ದು ದಶಕದ ಇತಿಹಾಸ. ಅಕ್ಕಪಕ್ಕ ಇದ್ದವರು ಹಳಸಲು ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದರು. ಇಬ್ಬರ ಸಂಬಂಧ ಎಣ್ಣೆ ಶೀಗೆ ಆಯಿತು. ಮಾತಿರಲಿ, ಮುಖ ನೋಡುವುದಕ್ಕೂ ಹೇಸುವ ಹಂತಕ್ಕೆ ಇಬ್ಬರೂ ಹೋದರು. ಅಲ್ಲಿಂದ ಮುಂದಕ್ಕೆ ಪರಸ್ಪರ ಬೈಗುಳ, ಟೀಕೆ, ಮೂದಲಿಕೆ ಮಾತ್ರ.

ಸಿದ್ದರಾಮಯ್ಯನವರನ್ನು ಇಷ್ಟು ಚೆನ್ನಾಗಿ ಟೀಕಿಸುವವರು ತಮ್ಮ ಪಕ್ಷ ಸೇರಲು ಅರ್ಹರೆಂದು ಜೆಡಿಎಸ್ ವರಿಷ್ಠರು ತೀರ್ಮಾನಿಸಿ ವಿಶ್ವನಾಥರನ್ನು ಒಳಕ್ಕೆ ಕರೆದುಕೊಂಡರು. 2018ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದರು. ಮಾತ್ರವಲ್ಲ ಜೆಡಿಎಸ್‍ನ ರಾಜ್ಯಾಧ್ಯಕ್ಷ ಸ್ಥಾನದಲ್ಲೂ ಕುಳ್ಳಿರಿಸಿದರು. ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಸಮ್ಮಿಶ್ರ ಸರ್ಕಾರದಲ್ಲಿ ತಾವೂ ಒಬ್ಬ ಸಚಿವರಾಗುವ ಭರವಸೆ ವಿಶ್ವನಾಥರಲ್ಲಿತ್ತು. ಎಷ್ಟೆಂದರೂ ಜೆಡಿಎಸ್ ಪಕ್ಷದ ಅಧ್ಯಕ್ಷ ತಾವು. ತಮಗೆ ಅವಕಾಶ ಖಂಡಿತ ಎಂದು ಭಾವಿಸಿದ್ದರು. ಆಗ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ವಿಶ್ವನಾಥ್ ಕನಸಿಗೆ ಕೊಳ್ಳಿ ಇಟ್ಟರು. ಟಿಕೆಟ್ ಖರೀದಿಸಿ ರೈಲನ್ನೇರಲು ಕಾದಿದ್ದರೂ ರೈಲೊಳಗೆ ವಿಶ್ವನಾಥ್‍ಗೆ ಪ್ರವೇಶ ಸಿಗಲೇ ಇಲ್ಲ.

ಆ ವೇಳೆಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಸರತ್ತು ತೆರೆಮರೆಯಲ್ಲಿ ನಡೆದಿತ್ತು. ಅದಕ್ಕೆ ಬೆಂಬಲ ಸೂಚಿಸಿ 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು “ತ್ಯಾಗ ಪುರುಷರು” ತಾವೆಂದು ಹೇಳಿಕೊಂಡು ಮತ್ತೆ ಚುನಾವಣೆಗೆ ಹೋದರು. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹೊರತಾಗಿಸಿ ಉಳಿದ ಹದಿನೈದೂ ಜನ ಉಪ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ತಾವು ಮಾಡಿದ “ತ್ಯಾಗ”ಕ್ಕೆ ಪ್ರತಿಫಲ ಪಡೆದರು. ಸೋತ ನಾಗರಾಜ್ ಹಾಗೂ ವಿಶ್ವನಾಥ್ ಇಬ್ಬರನ್ನೂ ಎಂಎಲ್‍ಸಿ ಮಾಡಿದ ಬಿಜೆಪಿ ನಾಗರಾಜ್‍ಗೆ ಮಂತ್ರಿ ಸ್ಥಾನ ಕೊಟ್ಟು ಗೌರವಿಸಿತು. ತಾಂತ್ರಿಕ ನೆಪ ಕಾರಣ ಮುಂದಿಟ್ಟು ವಿಶ್ವನಾಥ್ ಹೊರಗೆ ಉಳಿಯುವಂತೆ ಮಾಡಿತು. ಅನ್ಯಾಯ ಮಾಡಿತೆಂದು ಬಿಜೆಪಿ ವಿರುದ್ಧ ಆಕ್ರೋಶದಲ್ಲಿ ಕೊತಕೊತ ಕುದ್ದ ವಿಶ್ವನಾಥ್ ಆ ಮುಹೂರ್ತದಿಂದಲೇ ಆಡಳಿತ ಪಕ್ಷದ ಕಟು ಟೀಕಾಕಾರರಾದರು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ

ವಿಧಾನ ಪರಿಷತ್‍ನ ಒಳಗೂ ಸೈ ಹೊರಗೂ ಸೈ ವಿಶ್ವನಾಥ್ ಟೀಕೆಯ ಸುರಿಮಳೆ ಗರೆಯುತ್ತಿರುವುದು ಅವರದೇ ಪಕ್ಷದ ಸರ್ಕಾರದ ಮೇಲೆ. ಅವರ ನಾಲಗೆಯ ಮೇಲೆ ನಿಯಂತ್ರಣ ಹೇರುವ ಆಡಳಿತ ಪಕ್ಷದ ಎಲ್ಲ ತಂತ್ರಗಳೂ ತಲೆಕೆಳಗಾಗಿವೆ. ಹಾಗಾಗಿ ಬಿಜೆಪಿಗೆ ವಿಶ್ವನಾಥ್ ಸಾಕಾಗಿ ಹೋಗಿದ್ದಾರೆ. ಪಕ್ಷಕ್ಕೆ ಅವರಿಂದ ಏನೇನೂ ಲಾಭವಿಲ್ಲ ಎಂಬ ತೀರ್ಮಾನಕ್ಕೆ ಅದು ಬಂದಿದೆ. ಇಲ್ಲೇ ಇದ್ದರೆ ಭವಿಷ್ಯವಿಲ್ಲ ಎಂದು ನಂಬಿರುವ ವಿಶ್ವನಾಥ್‍ಗೂ “ಅಧಿಕಾರ ಸ್ಥಾನದಲ್ಲಿ ಕುಳ್ಳಿರಿಸದ ಬಿಜೆಪಿ” ಸಾಕಾಗಿದೆ. ಹಾಗಂತ ವಿಶ್ವನಾಥ್, ಸಿದ್ದರಾಮಯ್ಯ ಅಲ್ಲ. ಜೆಡಿಎಸ್ ಸಾಕುಸಾಕೆನಿಸಿದಾಗ ಸಿದ್ದರಾಮಯ್ಯ ಪಕ್ಷಕ್ಕೂ ಶಾಸಕ ಸ್ಥಾನಕ್ಕೂ ರಾಜೀನಾಮೆ ಬಿಸುಟು ತಮ್ಮ ವಿರೋಧ ದಾಖಲಿಸಿದರು. ಅಂಥ ಧೈರ್ಯ ವಿಶ್ವನಾಥರಲ್ಲಿಲ್ಲ. ಪಕ್ಷವೇ ತಮ್ಮನ್ನು ಸಸ್ಪೆಂಡ್ ಮಾಡಲಿ ಎಂದು ವಿಶ್ವನಾಥ್ ಕಾಯುತ್ತಿದ್ದಾರೆ. ಸಸ್ಪೆಂಡ್ ಅಥವಾ ಉಚ್ಛಾಟನೆ ಮಾಡಿದರೆ ಅವರ ಎಂಎಲ್‍ಸಿಗಿರಿ ಹಾಗೇ ಉಳಿಯುತ್ತದೆ. ಇವರಾಗಿ ಪಕ್ಷ ತೊರೆದರೆ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಸದಸ್ಯತ್ವ ಹೋಗಿಬಿಡುತ್ತದೆ. ಎಂದೇ ಅವರು ನಿತ್ಯವೂ ನಾಲಗೆಯನ್ನು ಬಿಜೆಪಿ ವಿರುದ್ಧ ಬಳಸುತ್ತ ಶಾಸಕ ಸ್ಥಾನದ ಸಕಲ ಸವಲತ್ತನ್ನೂ “ಎಂಜಾಯ್” ಮಾಡುತ್ತಿದ್ದಾರೆ.

ಹುಣಸೂರಿನಲ್ಲಿ ವಿಶ್ವನಾಥರನ್ನು 2019ರ ಉಪ ಚುನಾವಣೆಯಲ್ಲಿ ಸೋಲಿಸಿರುವ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಸಿದ್ದರಾಮಯ್ಯನವರ ಬಲಗೈ ಬಂಟ ಶಾಸಕರಲ್ಲಿ ಒಬ್ಬರು. 2019ರ ಚುನಾವಣೆಯಲ್ಲಿ ಗೆದ್ದ ಮಂಜುನಾಥ್ ಮತ್ತು ಸೋತ ವಿಶ್ವನಾಥ್ ನಡುವಣ ಅಂತರ 52,998 ಮತಗಳು. ಕಾಂಗ್ರೆಸ್ ಸೇರಿ ಪುನಃ ಹುಣಸೂರಿನಲ್ಲಿ ಕಣಕ್ಕೆ ಇಳಿಯುವ ಆಸೆಯನ್ನು ವಿಶ್ವನಾಥ್ ಗುಪ್ತವಾಗಿ ಪೋಷಿಸಿಕೊಂಡು ಸಾಗಿದ್ದಾರೆ. ಏತನ್ಮಧ್ಯೆ ಮಗನಿಗೂ ಒಂದು ಟಿಕೆಟ್ ಕೇಳುವ ಉತ್ಸುಕತೆಯೂ ಅವರಲ್ಲಿದೆ. ಸಿದ್ದರಾಮಯ್ಯನವರು ಅಷ್ಟೆಲ್ಲ ಸರಳವಾಗಿ ಸುಲಭದಲ್ಲಿ ಯಾರನ್ನೂ ಹತ್ತಿರ ಬಿಟ್ಟುಕೊಳ್ಳುವ ಜಾಯಮಾನದವರಲ್ಲ. ವಿಶ್ವನಾಥ್ ಅವರನ್ನು ಮತ್ತೆ ಕರೆದುಕೊಂಡರೆ ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಂಡಂತೆ ಆಗದೇ ಎಂದು ಅವರನ್ನು ಎಚ್ಚರಿಸುವ ಜನ ಅವರ ಸುತ್ತಮುತ್ತ ಇದ್ದಾರೆ.

ಬಹಳ ವರ್ಷಗಳ ಹಿಂದಿನ ಮಾತು. ಭಾರತೀಯ ಜನತಾ ಪಕ್ಷವನ್ನು ಜನಸಂಘ ಕಾಲದಿಂದ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾಗಿದ್ದ ಎ.ಕೆ.ಸುಬ್ಬಯ್ಯ ರಾಜಕೀಯ ಸ್ಥಿತ್ಯಂತರದಲ್ಲಿ ಕಾಂಗ್ರೆಸ್ ಸೇರಿದರು. ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್‍ನ ಕೆ.ಎನ್. ನಾಗೇಗೌಡರು “ಸೆರಗಿನಲ್ಲಿ ಬೆಂಕಿ ಕೆಂಡ ಕಟ್ಟಿಕೊಂಡಂತಾಯಿತು” ಎಂದು ಪ್ರತಿಕ್ರಿಯಿಸಿದ್ದರು. ಈ ರೀತಿಯ ಪ್ರತಿಕ್ರಿಯೆ ವಿಶ್ವನಾಥ್ ವಿಚಾರದಲ್ಲಿ ಬರುವುದಿಲ್ಲ ಎನ್ನುವ ಖಾತ್ರಿ ಎಲ್ಲಿದೆ?

ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

Continue Reading

ಅಂಕಣ

ರಾಜ ಮಾರ್ಗ ಅಂಕಣ | ನಗುನಗುತ್ತಾ ನೇಣುಗಂಬ ಏರಿದವರು! ಬ್ರಿಟಿಷ್ ಸರಕಾರದ ಎದೆ ನಡುಗಿಸಿದ ಹುಡುಗರ ಕತೆ!

ರಾಜ ಮಾರ್ಗ ಅಂಕಣ | ಸ್ವಾತಂತ್ರ್ಯದ ಕಿಡಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಿದ ಆ ದಿನ ಇಡೀ ದೇಶ ಕಣ್ಣೀರು ಹಾಕಿತ್ತು. ತಮ್ಮ ಮನೆ ಮಕ್ಕಳೇ ಪ್ರಾಣ ಕಳೆದುಕೊಂಡಂತೆ ಆತಂಕಗೊಂಡಿತ್ತು.

VISTARANEWS.COM


on

Edited by

Koo

RAJAMARGA

ಮಾರ್ಚ್ 23, 1931 ಸೂರ್ಯೋದಯದ ಹೊತ್ತು!
ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ನೀರವ ಮೌನ ಆವರಿಸಿತ್ತು! ಸ್ವಾತಂತ್ರ್ಯದ ಕಿಡಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಲು ಎಲ್ಲ ವ್ಯವಸ್ಥೆಗಳು ಪೂರ್ತಿ ಆಗಿದ್ದವು! ಕೋರ್ಟು ನಿಗದಿಪಡಿಸಿದ ಸಮಯಕ್ಕಿಂತ ಸಾಕಷ್ಟು ಮೊದಲೇ ಅವರನ್ನು ಗಲ್ಲಿಗೆ ಹಾಕಲು ಬ್ರಿಟಿಷ್ ಅಧಿಕಾರಿಗಳು ತವಕಪಡುತ್ತಿದ್ದರು! ಅದಕ್ಕೆ ಕಾರಣ ಜೈಲಿನ ಹೊರಗೆ ಮತ್ತು ಒಳಗೆ ಹೊತ್ತಿ ಉರಿಯುವ ಸನ್ನಿವೇಶವು ನಿರ್ಮಾಣವಾಗಿತ್ತು. ಯಾವ ಹೊತ್ತಿಗೂ ಪರಿಸ್ಥಿತಿ ಕೈ ಮೀರುವ ಸನ್ನಿವೇಶ ಇತ್ತು! ಇಡೀ ದೇಶವು ಭಗತ್ ಸಿಂಗ್ ಮತ್ತು ಅವನ ಗೆಳೆಯರ ಪರವಾಗಿ ನಿಂತಿತ್ತು!

ಅವರು ಮಾಡಿದ ಅಪರಾಧ ಏನು?
ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಮೇಲೆ ಬ್ರಿಟಿಷ್ ಸರಕಾರ ಹಲವು ಮೊಕದ್ದಮೆಗಳನ್ನು ಜಡಿದು ಜೈಲಿನಿಂದ ಬಿಡುಗಡೆ ಆಗದ ಹಾಗೆ ಸಂಚು ರೂಪಿಸಿತ್ತು.
ಸಾಕಷ್ಟು ಹಿಂದೆ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಅಧಿಕಾರಿ ಸ್ಯಾಂಡರ್ಸನ್‌ ಹತ್ಯೆಯನ್ನು ಈ ಗೆಳೆಯರು ಮಾಡಿದ್ದರು. ಭಗತ್ ಸಿಂಗ್ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಬಾಂಬು ತಯಾರಿ ಮಾಡುವ ಕಾರ್ಖಾನೆ ಸ್ಥಾಪನೆ ಮಾಡಿ ಯುವಕರಿಗೆ ತರಬೇತು ನೀಡುತ್ತಿದ್ದ! ಅದಕ್ಕಿಂತ ಹೆಚ್ಚಾಗಿ ಕೇಂದ್ರ ಶಾಸನ ಸಭೆಯ ಜನ ವಿರೋಧಿ ಕಾಯಿದೆಯ ವಿರುದ್ಧ ಪ್ರತಿಭಟಿಸಲು ಅಸೆಂಬ್ಲಿ ಹಾಲ್‌ನಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ ಅವರು ಬಾಂಬ್ ಎಸೆದು ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಕೂಗುತ್ತ ಉದ್ದೇಶಪೂರ್ವಕವಾಗಿ ಸೆರೆ ಸಿಕ್ಕಿದ್ದರು. ಅವರಿಗೆ ತಪ್ಪಿಸಿಕೊಂಡು ಹೋಗುವ ಅವಕಾಶ ಖಂಡಿತ ಇತ್ತು. ಆದರೆ ಆಗಲೇ ದೇಶಕ್ಕಾಗಿ ಹುತಾತ್ಮನಾಗುವ ತವಕ ಭಗತ್ ಸಿಂಗ್‌ನಲ್ಲಿ ಎದ್ದು ಕಾಣುತ್ತಿತ್ತು!

ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಭಗತ್ ಸಿಂಗ್ ನ್ಯಾಯಾಧೀಶರ ಮುಂದೆ ಹೇಳಿದ ಮಾತುಗಳು ಪತ್ರಿಕೆಗಳ ಮೂಲಕ ಇಡೀ ಭಾರತವನ್ನು ತಲುಪಿದ್ದವು! ಭಗತ್ ಸಿಂಗ್‌ ಆಗಲೇ ಲೆಜೆಂಡ್ ಆಗಿದ್ದ!

ಭಗತ್ ಸಿಂಗ್‌ಗೆ ತಾಯಿ ಬರೆದ ಪತ್ರದಲ್ಲಿ ಏನಿತ್ತು?
ಗಲ್ಲುಕಂಬಕ್ಕೆ ಏರುವಾಗ ಭಗತ್‌ಗೆ ಇನ್ನೂ 23 ವರ್ಷ! ಆತನನ್ನು ನ್ಯಾಯವಾದ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ರದ್ದು ಪಡಿಸಬೇಕು ಎಂದು ಒಂದು ದೊಡ್ಡ ಮಟ್ಟದ ಸಹಿ ಸಂಗ್ರಹ ಆಂದೋಲನವು ನಡೆದಿತ್ತು! ಆದರೆ, ಆಗಿನ ಹೆಚ್ಚಿನ ಹಿರಿಯ ನಾಯಕರು ಅದಕ್ಕೆ ಸಹಿ ಮಾಡಲು ಒಪ್ಪಲಿಲ್ಲ!

ಭಗತ್ ಮತ್ತು ಅವನ ಗೆಳೆಯರನ್ನು ‘ಬೀದಿ ಬದಿಯ ಹೋರಾಟಗಾರರು’ ಎಂದು ಬಹಳ ಕೆಟ್ಟದಾಗಿ ಬಿಂಬಿಸಲಾಯಿತು!ಭಗತ್ ಸಿಂಗ್ ಸೆರೆಮನೆಯಲ್ಲಿ ಇದ್ದಾಗ ಅವನ ತಾಯಿ ವಿದ್ಯಾವತಿ ಮಗನಿಗೆ ಪತ್ರ ಬರೆಯುತ್ತಾರೆ. ಅದರಲ್ಲಿ ಇದ್ದ ಪ್ರಮುಖ ವಾಕ್ಯಗಳು..
“ಮಗ ಭಗತ್, ನಿನ್ನ ನಿಲುವನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಅತ್ಯುತ್ತಮ. ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು! ಯಾವ ತಾಯಿಗೂ ಲಭಿಸದ ಹೆಮ್ಮೆ ನನಗೆ ಉಂಟಾಗುತ್ತದೆ!” ಎಂದಿದ್ದರು ಆ ಹಿರಣ್ಯಗರ್ಭೆ!

ಆ ದಿನ ಬೆಳಗ್ಗೆ ಏನೇನಾಯಿತು?
ಜೈಲು ಅಧಿಕಾರಿಗಳು ಸೆಲ್ ಒಳಗೆ ಬಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ನೇಣುಗಂಬದ ಕಡೆಗೆ ಕರೆದುಕೊಂಡು ಹೋದರು. ಒಂದಿಷ್ಟು ದುಃಖ, ವಿಷಾದ ಇಲ್ಲದೆ ಆ ಕ್ರಾಂತಿಕಾರಿ ಯುವಕರು ತಮ್ಮ ನೆಚ್ಚಿನ ‘ಸರ್ಫರೋಷಿ ಕಿ ತಮನ್ನಾ’ ಹಾಡನ್ನು ಹಾಡುತ್ತಾ ದೃಢವಾದ ಹೆಜ್ಜೆಗಳನ್ನು ಜೋಡಿಸಿದರು. ಎಲ್ಲ ಸೆಲ್ ಒಳಗಿಂದ ನೂರಾರು ಜನ ಕೈದಿಗಳು ಜೋರಾಗಿ ಅಳುತ್ತ ಅವರನ್ನು ಬೀಳ್ಕೊಟ್ಟರು.

ಮೂರೂ ಯುವಕರು ನಗು ನಗುತ್ತಾ ನೇಣು ಗಂಬ ಹತ್ತಿದರು. ಮೂವರೂ ಪರಸ್ಪರ ಆಲಿಂಗಿಸಿಕೊಂಡರು.
ನೇಣುಗಂಬಕ್ಕೆ ಮುತ್ತಿಕ್ಕಿದರು. ತಾಯಿಗೆ ಮಾತು ಕೊಟ್ಟ ಹಾಗೆ ಗಟ್ಟಿಯಾಗಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಹಲವು ಬಾರಿ ಕೂಗಿದರು. ಇದು ಇಡೀ ಜೈಲಿನ ಗೋಡೆಗಳ ನಡುವೆ ಪ್ರತಿಧ್ವನಿ ಆಯಿತು.

ಮುಖಕ್ಕೆ ಕರಿ ಮುಸುಕು ಹಾಕುವ ಮೊದಲು ಮೂವರೂ ಗಟ್ಟಿಯಾಗಿ ನಕ್ಕರು. ಅವರ ನಗುವಿನ ಅಟ್ಟಹಾಸ ನೋಡಿ ಗಲ್ಲು ಶಿಕ್ಷೆಗೆ ಬಂದ ಬ್ರಿಟಿಷ್ ಅಧಿಕಾರಿಗಳು ಮತ್ತು ನ್ಯಾಯಾಧೀಶರು ದಿಗಿಲಿಗೆ ಒಳಗಾದರು!

ಉರುಳು ಬಿಗಿಯಿತು! ಉಸಿರು ನಿಂತಿತು! ಒಂದೇ ಕ್ಷಣದಲ್ಲಿ ಮೂವರೂ ಮಹಾ ಕ್ರಾಂತಿಕಾರಿಗಳು ಭಾರತಾಂಬೆಯ ಸ್ವಾತಂತ್ರ್ಯದ ಯಜ್ಞಕ್ಕೆ ಹವಿಸ್ಸಾಗಿ ಹೋಗಿದ್ದರು!
ಸೆರೆಮನೆಯಲ್ಲಿ ಇಡೀ ದಿನ ಗಾಢವಾದ ಮೌನ ಆವರಿಸಿತ್ತು. ಆ ದಿನ ಯಾರೂ ಅನ್ನ, ನೀರು ಮುಟ್ಟಲಿಲ್ಲ!

ಬ್ರಿಟಿಷ್ ಅಧಿಕಾರಿಗಳ ಆತಂಕ ಕಡಿಮೆ ಆಗಲಿಲ್ಲ!
ಅವಧಿಗೆ ಮೊದಲೇ ಗಲ್ಲಿನ ಕೆಲಸ ಮುಗಿಸಿದ ಬ್ರಿಟಿಷ್ ಅಧಿಕಾರಿಗಳ ಆತಂಕವು ಕಡಿಮೆ ಆಗಲಿಲ್ಲ. ಕ್ರಾಂತಿಕಾರಿಗಳು ಯಾವ ಹೊತ್ತಲ್ಲಿ ಆದರೂ ಜೈಲಿನ ಮೇಲೆ ದಾಳಿ ಮಾಡಿ ಜೈಲನ್ನು ಹುಡಿ ಹುಡಿ ಮಾಡಬಹುದು ಎಂಬ ಆತಂಕ ಒಂದೆಡೆ! ಜೈಲಿನ ಒಳಗೇ ಕೆಲವು ಕ್ರಾಂತಿಕಾರಿಗಳು ಇದ್ದರು. ಅವರೇನಾದ್ರೂ ತಿರುಗಿ ಬಿದ್ದರೆ ಅಧಿಕಾರಿಗಳಿಗೆ ನಿಯಂತ್ರಣ ಮಾಡಲು ಸಾಧ್ಯವೇ ಇರಲಿಲ್ಲ.

ಅದಕ್ಕಾಗಿ ಅವರ ಶವಗಳನ್ನು ಸಟ್ಲೇಜ್ ನದಿಯ ದಡಕ್ಕೆ ಕೊಂಡು ಹೋಗಿ ಅವಸರವಸರವಾಗಿ ಸುಡಲಾಯಿತು. ಸಂಜೆಯ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ನೋಡಿ ಸ್ಥಳೀಯ ಜನರು ಓಡೋಡಿ ಬಂದರು. ಪೊಲೀಸರನ್ನು ಹೊಡೆದು ಓಡಿಸಿದರು. ಅರ್ಧ ಸುಟ್ಟುಹೋಗಿದ್ದ ಶವಗಳನ್ನು ಹೊರಗೆಳೆದು ಮತ್ತೆ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ಮಾಡಿದರು.

ಏನಿದ್ದರೂ ಈ ಮೂವರು ಕ್ರಾಂತಿಕಾರಿ ಯುವಕರು ನಗು ನಗುತ್ತಾ ಗಲ್ಲಿಗೇರಿ ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದು ಖಂಡಿತವಾಗಿಯೂ ಅಮೃತ ಸ್ವಾತಂತ್ರ್ಯದ ಇತಿಹಾಸದ ಒಂದು ಭಾಗ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಒಂದಿಲ್ಲದಿದ್ದರೆ ಇನ್ನೊಂದಿಲ್ಲ: ಇಲ್ಲಿವೆ ಬೆಚ್ಚಿಬೀಳಿಸುವ ಜೀವ ಜಗತ್ತಿನ ನಾಶದ ಸತ್ಯ ಕತೆಗಳು!

Continue Reading
Advertisement
BRS Party HD Kumaraswamy
ದೇಶ3 hours ago

Bharat Rashtra Samithi | ತೆಲಂಗಾಣದಲ್ಲಿ ಟಿಆರ್‌ಎಸ್‌ ಈಗ ಬಿಆರ್‌ಎಸ್‌, ಸಿಎಂ ಕೆಸಿಆರ್‌ಗೆ ಶುಭ ಕೋರಿದ ಕುಮಾರಸ್ವಾಮಿ

croatia
ಕ್ರೀಡೆ4 hours ago

FIFA World Cup | ಬ್ರೆಜಿಲ್‌ಗೆ ಆಘಾತ ನೀಡಿದ ಕ್ರೊಯೇಷ್ಯಾ; ಸೆಮಿಫೈನಲ್ಸ್‌ಗೆ ಪ್ರವೇಶ

Basavaraj Bommai On Border Dispute
ಕರ್ನಾಟಕ4 hours ago

Border Dispute | ಶಾ ಜತೆ ಶಿವಸೇನೆ, ಎನ್‌ಸಿಪಿ ಚರ್ಚೆಗೆ ಬೊಮ್ಮಾಯಿ ತಿರುಮಂತ್ರ, ಶೀಘ್ರವೇ ಕೇಂದ್ರ ಸಚಿವರ ಭೇಟಿಗೆ ಸಿಎಂ ತೀರ್ಮಾನ

karnataka budget
ಕರ್ನಾಟಕ4 hours ago

karnataka Budget | ಗಂಗರ ಇತಿಹಾಸ ಅರಿಯಲು ಸಂಶೋಧನಾ ಪ್ರಾಧಿಕಾರ ರಚನೆ: ಸಿಎಂ ಬಸವರಾಜ ಬೊಮ್ಮಾಯಿ

Supriya Sule Meets Amit Shah
ಕರ್ನಾಟಕ5 hours ago

Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ

ತುಮಕೂರು ಜನಸಂಕಲ್ಪ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ತಿರುಚುವಿಕೆ ಪ್ರಕರಣ
ಕರ್ನಾಟಕ6 hours ago

Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯ ಆಹ್ವಾನ

Woman Officers In Indian Army
ದೇಶ6 hours ago

Women Officers In Army | ಸೇನೆಯಲ್ಲಿ ಸ್ತ್ರೀಯರಿಗಿಲ್ಲ ಆದ್ಯತೆ, ಸುಪ್ರೀಂ ಕೋರ್ಟ್‌ ತೀವ್ರ ತರಾಟೆ, ಸುಧಾರಣೆಗೆ ಆಗ್ರಹ

ಕ್ರಿಕೆಟ್6 hours ago

Sania Mirza | ನಮ್ಮನ್ನು ಸುಮ್ಮನೆ ಬಿಟ್ಟುಬಿಡಿ, ಡೈವೋರ್ಸ್‌ ಪ್ರಶ್ನೆಗೆ ಶೋಯೆಬ್‌ ಮಲಿಕ್‌ ಕೊಟ್ಟ ಉತ್ತರವಿದು

vistara-top-10-news BJP turned focus towards karnataka to elon musc swift action in twitter and more news
ಕರ್ನಾಟಕ7 hours ago

ವಿಸ್ತಾರ TOP 10 NEWS | ಕರ್ನಾಟಕದತ್ತ ಮುಖ ಮಾಡಿದ ಬಿಜೆಪಿಯಿಂದ, 150 ಕೋಟಿ ಟ್ವಿಟರ್‌ ಖಾತೆ ಡಿಲೀಟ್‌ವರೆಗಿನ ಪ್ರಮುಖ ಸುದ್ದಿಗಳಿವು

7th Pay Commission
ನೌಕರರ ಕಾರ್ನರ್1 month ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Teacher Transfer
ನೌಕರರ ಕಾರ್ನರ್2 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ1 month ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

horoscope today
ಪ್ರಮುಖ ಸುದ್ದಿ4 months ago

Horoscope Today | ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

7th Pay Commission
ನೌಕರರ ಕಾರ್ನರ್4 weeks ago

7th Pay Commission | 7ನೇ ವೇತನ ಆಯೋಗ ರಚನೆ; ಶಿಫಾರಸನ್ನು ನಾವೇ ಜಾರಿಗೆ ತರುತ್ತೇವೆ ಎಂದ ಸಿಎಂ

graduate teacher promotion
ನೌಕರರ ಕಾರ್ನರ್1 month ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ

Hariprakash Konemane
ಪ್ರಮುಖ ಸುದ್ದಿ5 months ago

ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

wife finds out that husband
ವೈರಲ್ ನ್ಯೂಸ್3 months ago

ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

Rain News
ಕರ್ನಾಟಕ2 months ago

Rain News | ರಾಜ್ಯದಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

KMF recruitment 2022
ಉದ್ಯೋಗ2 months ago

KMF recruitment 2022 | ಕೆಎಂಎಫ್‌ನಲ್ಲಿ 487 ಹುದ್ದೆಗಳಿಗೆ ನೇಮಕ; ವಿದ್ಯಾರ್ಹತೆ ಕುರಿತ ಮಾಹಿತಿ ಇಲ್ಲಿದೆ

Anjanadri Hill ರಾಜ್ಯಪಾಲ
ಕರ್ನಾಟಕ12 hours ago

Anjanadri Hill | ಧರ್ಮ ಸಹಿಷ್ಣುತೆಗೆ ಸಾಕ್ಷಿಯಾದ ಅಂಜನಾದ್ರಿ; ಮುಸ್ಲಿಂ ಕುಟುಂಬದಿಂದ ಹನುಮನಿಗೆ ವಿಶೇಷ ಪೂಜೆ

collage dance ಮುಸ್ಲಿಂ ವಿದ್ಯಾರ್ಥಿಗಳಿಂದ ಬುರ್ಖಾ ಹಾಕಿ ಡ್ಯಾನ್ಸ್‌
ಕರ್ನಾಟಕ17 hours ago

Item Song | ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಮುಸ್ಲಿಂ ಯುವಕರು; ಕಾಲೇಜಿಂದ ನಾಲ್ವರು ಸಸ್ಪೆಂಡ್

Actress Haripriya
ಸಿನಿಮಾ3 days ago

Actress Haripriya | ನಾಯಿ ಮರಿ ತಂದಿತ್ತಂತೆ ಪ್ರೀತಿಯ ಸಂದೇಶ: ʻಸಿಂಹಪ್ರಿಯಾʼ ಕ್ಯೂಟ್‌ ಲವ್‌ ಸ್ಟೋರಿ ಏನು? ವಿಡಿಯೊ ವೈರಲ್‌!

Hanuman sankirtan yatra
ಕರ್ನಾಟಕ5 days ago

Hanuman sankirtan yatra | ಜಾಮಿಯಾ ಮಸೀದಿ ಜಾಗ ನಮ್ಮದು ಎಂದು ನುಗ್ಗಲು ಮಾಲಾಧಾರಿಗಳ ಯತ್ನ; ಶ್ರೀರಂಗಪಟ್ಟಣ ಉದ್ವಿಗ್ನ

Shivrajkumar
ಸಿನಿಮಾ6 days ago

Shivrajkumar | ಶಿವರಾಜ್‌ಕುಮಾರ್‌ ಅಭಿನಯದ ʻವೇದʼ ಟೀಸರ್ ರಿಲೀಸ್

Ranveer Singh (circus trailer out)
ಬಾಲಿವುಡ್1 week ago

Ranveer Singh | ರಣವೀರ್‌ ಸಿಂಗ್‌ ನಟನೆಯ ʻಸರ್ಕಸ್‌ʼ ಟ್ರೈಲರ್‌ ಔಟ್‌: ಸಖತ್‌ ಸ್ಟೆಪ್ಸ್‌ ಹಾಕಿದ ದೀಪಿಕಾ ಪಡುಕೋಣೆ!

ಕರ್ನಾಟಕ2 weeks ago

Elephant attack | ಚಿಕ್ಕಮಗಳೂರಲ್ಲಿ ಆಪರೇಷನ್‌ ಎಲಿಫೆಂಟ್; ಮೂರರಲ್ಲಿ ಒಂದು ಕಾಡಾನೆ ಸೆರೆ‌

ಕನ್ನಡ ಧ್ವಜ
ಕನ್ನಡ ರಾಜ್ಯೋತ್ಸವ2 weeks ago

Kannada Flag | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸಿದ ಕನ್ನಡ ಬಾವುಟ; ಮಗುವಿನ ಕಾಲಿಗೆ ನಮಸ್ಕರಿಸಿದ ಆನಂದ್‌ ಸಿಂಗ್‌

Operation Leopard
ಕರ್ನಾಟಕ2 weeks ago

Operation Leopard | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ; ಮರಿ ಚಿರತೆ ಜತೆ ಸೆಲ್ಫಿ

Nandamuri Balakrishna
ಟಾಲಿವುಡ್2 weeks ago

Nandamuri Balakrishna | ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

ಟ್ರೆಂಡಿಂಗ್‌

ಕಾಪಿರೈಟ್ © 2022 ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅವರಿಂದ ಕಸ್ಟಮೈಸ್ ಮಾಡಲಾಗಿದೆ

error: Content is protected !!