ಹೊಸ ಪುಸ್ತಕ | ಇಂಗ್ಲಿಷ್‌ ನಾಮಫಲಕ ತೆಗೆಯಿರಿ ಎಂದು ಬಿಎಂಶ್ರೀಗೆ ಹೇಳಿದ ದಿಟ್ಟ ವ್ಯಕ್ತಿ ಇವರು! - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ | ಇಂಗ್ಲಿಷ್‌ ನಾಮಫಲಕ ತೆಗೆಯಿರಿ ಎಂದು ಬಿಎಂಶ್ರೀಗೆ ಹೇಳಿದ ದಿಟ್ಟ ವ್ಯಕ್ತಿ ಇವರು!

ಸಾಹಿತಿ, ಗಾಂಧಿವಾದಿ ಸಿದ್ದವನಹಳ್ಳಿ ಕೃಷ್ಣಶರ್ಮರ ಜೀವನ ಚರಿತ್ರೆಯನ್ನು ಮಗಳು ರಾಧಾ ಟೇಕಲ್‌ ಹೊಸ ಪುಸ್ತಕ ʼಕನ್ನಡದ ಕಿಡಿʼಯಲ್ಲಿ ಮೂಡಿಸಿದ್ದಾರೆ. ಅದರ ಆಯ್ದ ಭಾಗ.

VISTARANEWS.COM


on

siddavanahalli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿದ್ದವನಹಳ್ಳಿ ಕೃಷ್ಣಶರ್ಮ ಅವರದು ಕನ್ನಡ ಪತ್ರಕೋದ್ಯಮದಲ್ಲಿ ಅಜರಾಮರ ಹೆಸರು. ದಿಟ್ಟ ಸ್ವಾತಂತ್ರ್ಯ ಹೋರಾಟಗಾರರಾಗಿ, ಮಹಾತ್ಮ ಗಾಂಧಿ ಅವರ ಆತ್ಮಕತೆಯನ್ನು ಕನ್ನಡಕ್ಕೆ ತಂದವರಾಗಿ ಪ್ರಸಿದ್ಧರು. ವಿನೋಬಾ ಬಾವೆ ಅವರ ʻಗೀತಾಪ್ರವಚನʼವನ್ನೂ ಕನ್ನಡಕ್ಕೆ ತಂದಿದ್ದಾರೆ. ಪರ್ಣಕುಟಿ, ವರ್ಧಾಯಾತ್ರೆ ಮುಂತಾದ ಕೃತಿಗಳ ಮೂಲಕ ದೇಶಪ್ರೇಮ, ಗಾಂಧಿಚಿಂತನೆ, ಕಾಯಕನಿಷ್ಠೆಗಳನ್ನು ಬೆಳಗಿದರು. ಕನ್ನಡದ ಪತ್ರಿಕೋದ್ಯಮವನ್ನೂ ಸಾಹಿತ್ಯವನ್ನೂ ಸಮೃದ್ಧವಾಗಿ ಬೆಳೆಸಿರುವ ಸಿದ್ದವನಹಳ್ಳಿಯವರ ಬದುಕು- ಬರಹ- ಚಿಂತನೆಗಳ ಕುರಿತು ಅವರ ಪುತ್ರಿ ರಾಧಾ ಟೇಕಲ್‌ ಅವರು ʻಕನ್ನಡದ ಕಿಡಿʼ ಎಂಬ ಪುಸ್ತಕ ರಚಿಸಿದ್ದಾರೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಪತ್ರಿಕೆಯಲ್ಲಿ ಲೇಖನ ಮಾಲೆಯನ್ನು ʻಕನ್ನಡದ ನುಡಿ’ಯಲ್ಲಿ ಪ್ರಕಟಿಸಿದರು. ಅದು ಪುಸ್ತಕವಾಗಿಯೂ ಬಂತು, ಸಾಕಷ್ಟು ಬರೆದರು. ಅದೇನು ಅಂತಿಂಥಾದ್ದಲ್ಲ. ಸಾಕಷ್ಟು ಉಗ್ರ ಹರಿತ, ಬಿಎಂಶ್ರೀ ಅಭಿಮಾನದಿಂದ ಚರ್ಚೆಗೆ, ವಾದಕ್ಕೆ ಈಡಾಯಿತು. ಆದರೆ ಅಣ್ಣ ಜಗ್ಗಲಿಲ್ಲವಂತೆ. ತಮಗೆ ಸತ್ಯ ಎನಿಸಿದ್ದನ್ನು ಸ್ಪಷ್ಟವಾಗಿ ಬರೆದರು. ಇಂಗ್ಲಿಷ್ ವ್ಯಾಮೋಹವನ್ನು ಟೀಕಿಸಿದರು. ಕನ್ನಡ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಬೇಡವೇ? ಮಾತಾಡುವವರಿಗೆ, ಓದುವವರಿಗೆ ಅರ್ಥವಾಗದ ಈ ಜಾಹಿರಾತುಗಳೇಕೆ? ಹೀಗೆಲ್ಲಾ ಹೇಳಿದಾಗ ʻಕನ್ನಡದ ಕಣ್ವ’ ಎಂದೇ ಪ್ರಖ್ಯಾತರಾದ ಬಿಎಂಶ್ರೀ ಅವರನ್ನೂ ಬಿಡಲಿಲ್ಲ. ಅವರ ಮನೆಯ ಮುಂದಿದ್ದ ನಾಮಫಲಕ ಇಂಗ್ಲಿಷಿನಲ್ಲಿತ್ತು. ʻʻಕನ್ನಡದ ಕಣ್ವರಾಗಿ, ಹಗಲಿರುಳೂ ಕನ್ನಡದ ಚಿಂತೆಯಲ್ಲೇ ಇರುವ ಬಿಎಂಶ್ರೀ ಅವರಿಗೂ ಇಂಗ್ಲಿಷ್ ಬೋರ್ಡ್‌ನ ಹುಚ್ಚೇ?’ʼ ಬಿ.ಎಂ.ಶ್ರೀ ಅವರನ್ನು ಬೆಚ್ಚಿಸಿತು.

ಆದರೆ ಈ ತರುಣನ ಮಾತನ್ನು, ಕೆಚ್ಚನ್ನು, ಅರ್ಥ ಮಾಡಿಕೊಂಡ ಅವರು, “ನನ್ನಲ್ಲಿಗೆ ಅನೇಕ ಕನ್ನಡೇತರ ಮಿತ್ರರು ಬರುತ್ತಾರೆ. ಅವರಿಗಾಗಿ ಇಂಗ್ಲಿಷ್ ಬೋರ್ಡ್” ಎಂದು ಉತ್ತರ ಕೊಟ್ಟರು. “ಹಾಗಾದರೆ, ಕನ್ನಡ, ಇಂಗ್ಲಿಷ್ ಎರಡರಲ್ಲೂ ಇರಲಿ” ಎಂದು ಬರೆದರು. ಬಿಎಂಶ್ರೀ ಅವರು ಅಣ್ಣನ ಮಾತಿಗೆ ಮನ್ನಣೆ ಕೊಟ್ಟರು.

ಅನೇಕರ ಮನಸ್ಸಿನಲ್ಲಿದ್ದ ದ್ವಂದ್ವ, “ಬಿಎಂಶ್ರೀ ಅಂಥಾ ಮಹನೀಯರನ್ನು ಎದುರಿಸುವ ಶಕ್ತಿ ಇದೆಯಾ” ಎಂಬ ಸಣ್ಣ ಟೀಕಾಯುಕ್ತ ಹೇಳನೆಯ ಮಾತು ಸ್ತಬ್ಧವಾಯಿತು. ʻಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ’ ಇದು ಅಣ್ಣ ಬಯಸಿದ್ದು.

ವರ್ಧಾಯಾತ್ರೆ

(ನವೆಂಬರ್ 24, 1938ರಿಂದ ಅಕ್ಟೋಬರ್ 15, 1939)

ಅಣ್ಣ ತಿರುಮಲೆ ತಾತಾಚಾರ್ಯರ ಮನೆಯಲ್ಲಿದ್ದಾಗಲೇ, ನಮ್ಮ ದೊಡ್ಡಪ್ಪ ಅಂದರೆ ಕಾಮಲಾಪುರದ ಜಾಗೀರದಾರರಾದ ಶ್ರೀ ಶ್ರೀನಿವಾಸ ತೋಳಪ್ಪಾಚಾರ್ ಅವರು ತಮ್ಮಲ್ಲಿಗೆ ಬರಲು ಒತ್ತಾಯಿಸಿದರು. ಅಣ್ಣ ಕಾಮಲಾಪುರಕ್ಕೆ ಹೋದರು. ಅಲ್ಲಿರುವಾಗ ಗಾಂಧೀಜಿಯವರಿಗೆ, ಹೈದರಾಬಾದಿನ ಸ್ಥಿತಿಗಳ ಬಗ್ಗೆ ವಿವರಣೆ ನೀಡಿದರು.

ಗಾಂಧೀಜಿಗೆ ಆ ಪತ್ರ ತಲುಪಿದ ಕೂಡಲೇ, “ನೀನು ವರ್ಧಾಗೆ ಬಾ” ಎಂದು ಕಾಗದ ಬರೆದರು. ಅಣ್ಣ ವರ್ಧಾಗೆ ಹೊರಟರು. ಮುಂಬೈನ ದಾದರ್ ಸ್ಟೇಷನ್ನಲ್ಲಿ ಅದೆಷ್ಟು ಸಂತೋಷವೋ, ತಮಗಿಂತ ಮೊದಲೇ ಹೈದರಾಬಾದಿನಿಂದ ಗಡೀಪಾರಾಗಿದ್ದ ದಾಮೋದರ್‌ಮುಂದಡಾ ಅವರನ್ನು ಭೇಟಿಯಾದಾಗ! ಗಡೀಪಾರಾದ ಹದಿನೈದು ದಿನ ಇಪ್ಪತ್ತು ದಿನಗಳಲ್ಲಿ ಇಷ್ಟೆಲ್ಲಾ ನಡೆದವು.

ಅಣ್ಣಾ ವರ್ಧಾಗೆ ಹೋಗಿದ್ದು, ಅಲ್ಲಿ ಆಶ್ರಮದಲ್ಲಿ ʻಬಾಪೂ’ ಮಾತ್ರವಲ್ಲ, ಉಳಿದವರನ್ನೂ ಕಂಡದ್ದು ಬಹಳ ಆಪ್ತವಾಗಿ ಮನದಾಳದಲ್ಲಿ ಚಿತ್ರ ನಿಂತಿತು. ಗಾಂಧೀಜಿಯನ್ನು ನೋಡಿದ್ದರು ಈ ಮೊದಲೆ, ಕಾಲೇಜು ಯುವಕನಾಗಿದ್ದಾಗ ಬೆಂಗಳೂರಿನಲ್ಲಿ; ಅನಂತರ ಬೆಳಗಾವಿ ಕಾಂಗ್ರೆಸ್ಸಿನಲ್ಲಿ, ಈಗ, ತಾವೊಬ್ಬರೇ, ಹತ್ತಿರದಿಂದ

ನೋಡಿದರು. ಇಲ್ಲಿ, ಸೇವಾಗ್ರಾಮದ ಆಶ್ರಮದ ಯಜಮಾನನಾಗಿ, ಕಸ್ತೂರಿಬಾರೊಂದಿಗೆ ಆದರ್ಶ ದಾಂಪತ್ಯದ ಒಡನಾಡಿಯಾಗಿ, ಸದಾ ನಗುತ ನಗಿಸುತ್ತಾ ಪುಟ್ಟ ಮಕ್ಕಳ ಮುದ್ದಿನ ತಾತನಾಗಿ, ಆಶ್ರಮದಲ್ಲಿದ್ದ ರೋಗಿಗಳ ಶುಶ್ರೂಷೆಯ ಸೇವಾಸಕ್ತರಾಗಿ, ಲೇಖಕರಾಗಿ, ನಿರಂತರ ಕಾರ್ಯಾಸಕ್ತರಾಗಿ, ಧ್ಯಾನದಲ್ಲಿ ಯೋಗಿಯಾಗಿ, ವಿಚಾರಪರ ದಿಟ್ಟ ವ್ಯಕ್ತಿಯಾಗಿದ್ದ ಗಾಂಧೀಜಿಯನ್ನು ಕಂಡರು.

ಆ ಸೇವಾಗ್ರಾಮದ ಆಶ್ರಮದ ಪಕ್ಕದಲ್ಲಿ ಬಜಾಜ್‌ವಾಡಿ ಮಗನ್‌ವಾಡಿಗಳು (ಗುಜರಾತಿ ಭಾಷೆಯಲ್ಲಿ ವಾಡಿ ಎಂದರೆ ಪ್ರಾಕಾರ ಎಂದು), ಅಲ್ಲೇ ಚರ್ಮಾಲಯ, ಎಣ್ಣೆಯ ಗಾಣ, ನೂಲು ನೇಯುವ ಕನ್ನಡದ ಕಿರಿ ತಕಲಿಗಳು. ಕೃಷಿಯೊಂದು ಕಡೆ, ಗೋಶಾಲೆ ಇನ್ನೊಂದೆಡೆ, ಗಾಂಧೀ ಮಠದ ಮಹಂತ ಜಮನ್‌ಲಾಲ್ ಬಜಾಜ್. ಬೇವಿನ ಸೊಪ್ಪನ್ನೇ ಆಹಾರವಾಗಿ ತಿನ್ನುವ ಭನ್ಸಾಲಿ ಭಾ, ತಪೋನಿಷ್ಠ ವಿನೋಬಾ, ಉಕ್ಕಿನ ಮನುಷ್ಯ ವಲ್ಲಭಭಾಯಿ. ರಾಜಗೋಪಾಲಾಚಾರಿ, ಗಾಂಧೀ ಸಿದ್ಧಾಂತದ ಘನಪಾಟಿ ಕಿಶೋರಿಲಾಲ್ ಮಶಾಲಾ, ಬಾಬು ರಾಜೇಂದ್ರ ಪ್ರಸಾದ್‌, ಧೀರೋದಾತ್ತ ಜವಾಹರ್ಲಾಲ್ ನೆಹರು. ಅಜಾತಶತ್ರು ಆದಿವಾಸಿಗಳ ಮಿತ್ರ ಎಲ್ವಿನ್, ಮೌಲಾನಾ ಆಜಾದ್, ಪಟ್ಟಾಭಿ ಸೀತಾರಾಮರು ಎಲ್ಲರದೂ ದರ್ಶನ, ಸಂಪರ್ಕ ಸಿಕ್ಕಿತು.

ಇದನ್ನೂ ಓದಿ | ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?

siddavanahalli

ಎಲ್ಲಕ್ಕಿಂತ ಪ್ರಶಾಂತ, ರಮಣೀಯ ಆಶ್ರಮದ ಜೀವನಾನುಭವ ಸಬರಮತಿ ಆಶ್ರಮದಲ್ಲಿ. ಮಹದೇವ್ ದೇಸಾಯಿ, ರಾಜಕುಮಾರಿ ಅಮೃತಾ ಕೌರ್‌ಎಲ್ಲರ ಭೇಟಿಯಾಯಿತು. ಹೈದರಾಬಾದಿನ ಪರಿಸ್ಥಿತಿಯ ಪೂರ್ತಿ ಚಿತ್ರಣವನ್ನು ಅವರೆಲ್ಲರ ಮುಂದಿಟ್ಟರು. ʻನಿಜಾಮ ಒಳ್ಳೆಯವನೇ. ಆದರೆ, ರಜಾಕಾರರ ಪ್ರಾಬಲ್ಯ ತಡೆಯುವ ಸಾಮರ್ಥ್ಯ ಇಲ್ಲ. ಅವರನ್ನು ಇದಿರು ಹಾಕಿಕೊಂಡರೆ, ಮುಸಲ್ಮಾನ್ ರಾಷ್ಟ್ರವನ್ನಾಗಿ ಮಾಡಲು ಮುರಿದು ಬೀಳುತ್ತದೆ ಎಂದು ಅವರ ಕೈ ಗೊಂಬೆಯಾಗಿ ಜನಹಿತ ದೃಷ್ಟಿ ಮರೆತಿದ್ದಾನೆ’ ಎಂದೆಲ್ಲಾ ವಿವರವಾಗಿ ಬಣ್ಣಿಸಿದರು. ಹೇಗಾದರೂ ಮಾಡಿ ಎಲ್ಲಾ ರಾಜ್ಯಗಳೂ ಒಂದು ದೇಶವಾಗಬೇಕೆಂಬ ಕನಸು ಗಾಂಧೀಜಿಯದು. ಎಲ್ಲರಿಗೂ ಅಣ್ಣ ಹೇಳುತ್ತಿರುವ ಗಂಭೀರ ಆಲೋಚನೆಗಳು ಹಿಡಿಸಿದವು. ಬಜಾಜರಂತೂ, “ನೀನು ನಮ್ಮಲ್ಲಿಯೇ ಇದ್ದು ಬಿಡು” ಎಂದು ಬಹಳ ಒತ್ತಾಯ ಮಾಡಿದರಂತೆ. ಆಶ್ರಮದಲ್ಲೇ ಅವರೊಂದಿಗೇ ಇದ್ದು ಬಿಡುವಂಥ ಸೆಳೆತ!

ಇಲ್ಲ, ಹಾಗಾಗಗೊಡಲಿಲ್ಲ. ಹನ್ನೊಂದು ತಿಂಗಳು ಅಲ್ಲಿದ್ದು, ಕೆಲಸ ಆದೊಡನೆ ಮತ್ತೆ ಕಾಮಲಾಪುರಕ್ಕೆ ಹಿಂತಿರುಗಿದರು. ಅಲ್ಲಿ ಜೆ.ಬಿ. ಕೃಪಲಾನಿ, ಸುಚೇತ ಕೃಪಲಾನಿ, ಸರ್ದಾರ್ ಪಟೇಲ್, ಇವರೆಲ್ಲರ ಜೊತೆ ಕಾಲ ಕಳೆದ ಅನುಭವವೇ, ಅಲ್ಲಿಂದ ಬಂದ ಮೇಲೆ ಬರೆದ “ವರ್ಧಾಯಾತ್ರೆ.” ಕೇವಲ ಎರಡೇ ತಿಂಗಳಲ್ಲಿ ಬರೆದು, ಮುದ್ರಣವಾಗಿ, ಪುಸ್ತಕ ಬಿಡುಗಡೆ ಆಯಿತಂತೆ.

siddavanahalli

ವರ್ಧಾದಲ್ಲಿ ತಮ್ಮ ಕಣ್ಣುಗಳು ಕಂಡದ್ದನ್ನು, ಕಿವಿಯಾರೆ ಕೇಳಿಸಿಕೊಂಡದ್ದನ್ನು, ತಮ್ಮ ಮನಸ್ಸು ಗ್ರಹಿಸಿದ್ದನ್ನು, ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ಮೂವಿಂಗ್ ಆಫೀಸ್ – ಜೆ.ಸಿ. ಕುಮಾರಪ್ಪ, ಆತನ ಭ್ರಾತೃ ಭರತ, ಭರತನ ಕೈಹಿಡಿದ ವಿದ್ಯಾವತಿ ಸೀತಾದೇವಿ, ಗಾಂಧೀ ಮಠದ ಮಹಂತ ವಾದಿಲಾಲ್‌ ಸೇಠ, ಜಮ್ನಾಲಾಲ್ ಬಜಾಜ್, ಬೇಸಾಯ ವಿಭಾಗದ ನೇಗಿಲಯೋಗಿ ಆರ್ಯನಾಯಗಂ, ವಿನೋಬಾ ಭಾವೆ, ಗಾಂಧೀತತ್ವ ಪ್ರಚಾರಕ ಕಾಕಾ ಕಾಲೇಲ್ಕರ್, ಬಲಗೈನಂತಿದ್ದ ಮಹದೇವ ದೇಸಾಯಿ- ಹೀಗೇ ಲೆಕ್ಕವಿಲ್ಲದಷ್ಟು ಮಂದಿಯ ಪರಿಚಯವನ್ನು ವರ್ಧಯಾತ್ರೆಯಲ್ಲಿ ಮೂಡಿಸಿದ್ದಾರೆ. ಹಲವಾರು ತಿಂಗಳು ಅಲ್ಲೇ ಇದ್ದ ಕಾರಣದಿಂದ ಗಾಂಧೀ ವಿಚಾರದಲ್ಲಿ ಸ್ಥಿರತೆ, ಗಾಂಧೀ ತತ್ತ್ವದಲ್ಲಿ ಮನಸ್ಸು ನೆಲೆಗೊಂಡಿತು. ಇಲ್ಲಿಯ ವಿಚಾರಗಳ ಹಾಗೂ ವ್ಯಕ್ತಿಗಳೊಂದಿಗೆ ಮಾತುಕತೆಯ ಅನುಭವ, “ವರ್ಧಾಯಾತ್ರೆ” ಬರೆಯಲು ಪ್ರಚೋದಿಸಿತು. ಆ ಕಾಲಕ್ಕೆ ಕನ್ನಡ ಸಾಹಿತ್ಯದಲ್ಲೇ ಅಪರೂಪ ಎನ್ನಿಸಿದ ಪುಸ್ತಕ, ಹೊಸ ಶೈಲಿ, ಹೊಸ ದೃಷ್ಟಿ ತುಂಬಿದ ಪುಸ್ತಕ.

ಇದಾದ ನಂತರ ಅವರ ಮನದಲ್ಲಿ ಅಚ್ಚೊತ್ತಿದ ಕೆಲವು ಮುಖಂಡರ, ತಮಗೆ ಬಹಳ ಪ್ರೀತಿಯಾದ ಕೆಲವರ ಪರಿಚಯ, ವ್ಯಕ್ತಿಚಿತ್ರಗಳಾಗಿ ಮೂಡಿ ಬಂದವು. ಅವು, ʻದೀಪಮಾಲೆ’, ʻಕುಲದೀಪಕರು’. ಹೀಗೆ ಒಂದು ಸಲ ಧಾರೆ ಹರಿಯ ತೊಡಗಿದಾಗ, ಗಾಂಧೀಜಿಯೇ ಮನದ ತುಂಬ ಹರಡಿಕೊಂಡಾಗ, ʻಪರ್ಣಕುಟಿ’ ಮೂಡಿ ಬಂತು. ಅಲ್ಲಿ ನೋಡಿದ್ದನ್ನು ಮನಸ್ಸಿಗೆ ತುಂಬಿಕೊಂಡು, ಕಾಗದದ ಮೇಲೆ ಎಳೆಎಳೆಯಾಗಿ ಬಿಡಿಸಿಟ್ಟ ಚಿತ್ರವೇ ವರ್ಧಾಯಾತ್ರೆ, ಅದನ್ನಿನ್ನಿಷ್ಟು ಹಿಗ್ಗಿಸಿದ್ದೇ ʻಪರ್ಣಕುಟಿ’ಯಾಯಿತು. ಅದರ ಸವಿ ಓದಿದವರಿಗೇ ಗೊತ್ತು! ʻಪರ್ಣಕುಟಿ’. ಇದೇನು ಕತೆಯಲ್ಲ, ಕಾದಂಬರಿಯಲ್ಲ. ಸ್ವತಃ ಅಣ್ಣ ಹೇಳಿದಂತೆ, 1922ರ ಐತಿಹಾಸಿಕ ಸಂದರ್ಭದಲ್ಲಿ, ಗಾಂಧೀಜಿಯ ಚಿತ್ರವೊಂದು ಮನಸ್ಸಿನಲ್ಲಿ ಮೂಡುತ್ತಾ ಬಂತು. ಬೆಳಗಾವಿಯ ಕಾಂಗ್ರೆಸ್, ಅದಕ್ಕೆ ಅಲ್ಲೊಂದು, ಇಲ್ಲೊಂದು ಬಣ್ಣ ಕೊಟ್ಟಿತು. ಆ ಬೆಳಕಿನಲ್ಲಿ ಗಾಂಧೀಜಿ ಸಾಹಿತ್ಯವನ್ನು ಓದುವ ಆಸೆ ಆಯಿತು. ಇದೆಲ್ಲದರ ಪರಿಣಾಮವೇ ಪರ್ಣಕುಟಿ”.

ಪುಸ್ತಕ: ಕನ್ನಡದ ಕಿಡಿ (ಸಿದ್ದವನಹಳ್ಳಿ ಕೃಷ್ಣಶರ್ಮ ಬದುಕು ಬರಹ)

ಲೇಖಕ: ರಾಧಾ ಟೇಕಲ್‌

ಪುಟ ೨೫೬, ಬೆಲೆ ೨೫೦ ರೂ.

ಪ್ರಕಾಶನ: ಸಂಸ್ಕೃತಿ ಬುಕ್‌ ಏಜನ್ಸೀಸ್‌ , ಮೈಸೂರು

ಇದನ್ನೂ ಓದಿ | ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Bengaluru News: ಬೆಂಗಳೂರಿನ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವʼವಿಶೇಷ ನೃತ್ಯೋತ್ಸವವು ಕಲಾ ರಸಿಕರ ಮನಸೂರೆಗೊಳಿಸಿತು.

VISTARANEWS.COM


on

Shraddha Nrityarnava special dance festival in Bengaluru
Koo

ಬೆಂಗಳೂರು: ನಗರದ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವ’ ವಿಶೇಷ ನೃತ್ಯೋತ್ಸವ ಕಲಾ ರಸಿಕರ (Bengaluru News) ಮನಸೂರೆಗೊಂಡಿತು.

ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉತ್ಸಾಹಿ ಕಲಾವಿದರಿಂದ ನೃತ್ಯ ಸಮರ್ಪಣೆಯಾಗಿದ್ದು ವಿಶೇಷ. ಇದುವೇ ‘ನೃತ್ಯಾರ್ಣವʼದ ವಿಶೇಷ.

ದೇಶದ ಸುವಿಖ್ಯಾತ ರಚನೆಕಾರರ ಕೃತಿಗಳನ್ನು ಮೊದಲ ಹಂತದಲ್ಲಿ ನೃತ್ಯಾರ್ಣವಕ್ಕೆ ಸಮರ್ಥವಾಗಿ ಬಳಸಿಕೊಂಡು ಅದಕ್ಕೆ ತಕ್ಕಂತೆ ಚೇತೋಹಾರಿಯಾಗಿ ಯುವತಿಯರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಉತುಕ್ಕಾಡು ವೆಂಕಟಸುಬ್ಬಯ್ಯ ಅವರ ಆನಂದ ನರ್ತನ ಗಣಪತಿ, ತುಳಸೀ ದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನ, ಪದ್ಮಚರಣರ ಪ್ರದೋಷ ಸಮಯದಿ ಪರಶಿವ ತಾಂಡವ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ – ಕೃತಿಗಳಿಗೆ ಸಂಸ್ಥೆಯ ಕಿರಿಯ ಕಲಾವಿದರು ನರ್ತಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಕಲಾಭಿವ್ಯಕ್ತಿಗೆ ಹೊಸ ಆಯಾಮ

ಕಾರ್ಯಕ್ರಮದಲ್ಲಿ ‘ಅಮೃತ ಮಂಥನ’ ನೃತ್ಯ ರೂಪಕ ಕಲಾಭಿವ್ಯಕ್ತಿಗೆ ಹೊಸ ಆಯಾಮವನ್ನೇ ನೀಡಿತು. ಸಂಸ್ಥೆ ನಿರ್ದೇಶಕಿ ಶಮಾ ಕೃಷ್ಣ ಹಾಗು ಹಿರಿಯ ಕಲಾವಿದರಿಂದ ಅಮೃತ ಮಂಥನ ಎಂಬುವ ರಸಪೂರ್ಣ ನೃತ್ಯ ನಾಟಕದ ಪ್ರಸ್ತುತಿ ವಿಶೇಷವಾಗಿ ಮೂಡಿಬಂತು. ಇದಕ್ಕೆ ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯ, ಕಲಾವಿದ ಪ್ರವೀಣ್ ಡಿ. ರಾವ್ ಸಂಗೀತ ಮತ್ತು ವಿದುಷಿ ಶಮಾ ಕೃಷ್ಣ ಅವರ ನೃತ್ಯ ಸಂಯೋಜನೆ ಸಮರ್ಥವಾದ ನ್ಯಾಯ ಒದಗಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ʼಅಮೃತ ಮಂಥನ’ ಕ್ಕೆ ಖ್ಯಾತ ಸಂಶೋಧಕಿ ಪ್ರೊ. ಕರುಣಾ ವಿಜಯೇಂದ್ರ, ಖ್ಯಾತ ನೃತ್ಯ ಪಟುಗಳಾದ ಶೇಷಾದ್ರಿ ಅಯ್ಯಂಗಾರ್ ಮತ್ತು ನವ್ಯಾ ನಟರಾಜ ಅವರು ಕಲಾ ರಸದೌತಣಕ್ಕೆ ಸಾಕ್ಷಿಯಾಗಿದ್ದು ಬಹು ವಿಶೇಷ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಶಮಾ ಕೃಷ್ಣ ಮಾತನಾಡಿ, ನನ್ನ ಕನಸು, ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ಶಿಷ್ಯರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನೃತ್ಯ ರೂಪಕ ಪ್ರಸ್ತುತಿ ಸಂದರ್ಭ ಕಲಾವಿದರ ಪ್ರತಿ ಹೆಜ್ಜೆಯಲ್ಲೂ ಹೊಸತನ ಮೂಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಕ್ಕೆ ಅಣಿಯಾಗಲು ‘ನೃತ್ಯಾರ್ಣವ’ ಹೊಸ ಚೈತನ್ಯ ನೀಡಿದೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

Yuva Sambhrama 2024: ಸಂಗಮ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಟರ್ಬೋಸ್ಟೀಲ್‌ ಮತ್ತು ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇದೇ ಜು. 12 ರಿಂದ 14 ರವರೆಗೆ ಮೂರು ದಿನಗಳ ಕಾಲ “ಯುವ ಸಂಭ್ರಮ 2024” ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಿಣ್ಣರ ಮೇಳ, ನೃತ್ಯ ಸಂಭ್ರಮ, ಉಚಿತ ಆರೋಗ್ಯ ತಪಾಸಣೆ, ಉದ್ಯೋಗ ಮೇಳ, ರಸ ಸಂಜೆ ಕಾರ್ಯಕ್ರಮಗಳು ಜರುಗಲಿವೆ.

VISTARANEWS.COM


on

Yuva Sambhrama 2024 programme for 3 days from July 12 in Bengaluru
Koo

ಬೆಂಗಳೂರು: ಸಂಗಮ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಟರ್ಬೋಸ್ಟೀಲ್‌ ಮತ್ತು ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇದೇ ಜು. 12ರಿಂದ 14 ರವರೆಗೆ ಮೂರು ದಿನಗಳ ಕಾಲ “ಯುವ ಸಂಭ್ರಮ 2024” ಕಾರ್ಯಕ್ರಮ (Yuva Sambhrama 2024) ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಜು.12 ರಂದು ಬೆಳಗ್ಗೆ 10 ಗಂಟೆಗೆ ಚಿಣ್ಣರ ಮೇಳ ಏರ್ಪಡಿಸಲಾಗಿದ್ದು, ಗಾಯನ, ರಸಪ್ರಶ್ನೆ, ಚಿತ್ರಕಲೆ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ನೃತ್ಯ ಸಂಭ್ರಮ ನಡೆಯಲಿದ್ದು, ಭಾರತೀಯ ಸಂಸ್ಕೃತಿಯ ವಿದ್ಯಾಪೀಠ ಶಾಲೆ, ಸುಮನ್ಸ್‌ ಕಾನ್ವೆಂಟ್‌, ಎಂ.ಇ.ಎಸ್.‌ ಶಾಲೆ ಮತ್ತು ಕಾಲೇಜು ಹಾಗೂ ಲಹರಿ ಮ್ಯೂಜಿಕಲ್‌ ಅಕಾಡಮಿ ವಿದ್ಯಾರ್ಥಿಗಳು, ನರ್ತನ ನೃತ್ಯ ವೃಂದ ಹಾಗೂ ಪಾರ್ವತಿ ನೃತ್ಯ ವಿಹಂಗಮ ತಂಡದಿಂದ ನೃತ್ಯ ಸಂಭ್ರಮ ಜರುಗಲಿದೆ.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಜು. 12 ರಿಂದ 14 ರವರೆಗೆ ಆರೋಗ್ಯ ಮೇಳ (ಉಚಿತ ಆರೋಗ್ಯ ತಪಾಸಣೆ) ಏರ್ಪಡಿಸಲಾಗಿದೆ. ಜು.13 ಮತ್ತು 14 ರಂದು ಬೆಳಿಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 40ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ.

ಜು.13 ಮತ್ತು 14 ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವರಿಗೂ ಉಚಿತ ಪ್ರವೇಶ ವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

ನನ್ನ ದೇಶ ನನ್ನ ದನಿ ಅಂಕಣ: ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

VISTARANEWS.COM


on

niranjana ನನ್ನ ದೇಶ ನನ್ನ ದನಿ ಅಂಕಣ
Koo

ನಿರಂಜನ ಅವರ ಜನ್ಮ ಶತಮಾನೋತ್ಸವ

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ಇಡೀ ಜಗತ್ತಿನ ಇತಿಹಾಸವನ್ನು (History) ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು ನಿರಂಜನ (Niranjana).

ಇದೀಗ ಲೇಖಕ, ಸಂಪಾದಕ, ಕಾದಂಬರಿಕಾರ, ಅಪರೂಪದ ಸಾಧಕ “ನಿರಂಜನ” (ಜನನ : ಜೂನ್ 1924) ಅವರ ಶತಮಾನೋತ್ಸವ. ನಿರಂಜನ ಎಂದರೆ ಜ್ಞಾನ, ದೋಷರಹಿತವಾದುದು ಎಂಬೆಲ್ಲಾ ಅರ್ಥಗಳಿವೆ. ಶಿವ ಎನ್ನುವ ಅರ್ಥವೂ ಇದೆ. ಮೂಲತಃ ಕುಳಕುಂದ ಶಿವ ರಾವ್ ಆಗಿದ್ದ ಅವರು “ನಿರಂಜನ” ಎಂಬ ಕಾವ್ಯನಾಮ ಬಳಸಿದುದು ಅನ್ವರ್ಥವೇ ಆಗಿತ್ತು. ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರಂತೆ, ಮಹತ್ತ್ವದ ಮತ್ತು ಬಹು-ಆಯಾಮದ ಸಾಹಿತ್ಯ ರಚನೆ ಮಾಡಿದವರು ವಿರಳ. ಆದರೆ ಎಚ್ಚೆಸ್ಕೆ, ನಿರಂಜನ ಅವರನ್ನು ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳಬಹುದು. ಸ್ವಯಂಭೂ, ಸ್ವಯಂಘೋಷಿತ ಸಾಹಿತ್ಯ ಧುರಂಧರ ಭಯಂಕರರ ಮಾಫಿಯಾದ ಅಬ್ಬರದಲ್ಲಿ, ಪ್ರಶಸ್ತಿ – ಸ್ಥಾನಮಾನ ಇತ್ಯಾದಿಗಳಿಗೆ ಹಾತೊರೆಯದೆ ತಮ್ಮ ಪಾಡಿಗೆ ತಾವು ಶುದ್ಧ ಸಾಹಿತ್ಯ ಸೇವೆಯನ್ನು ವ್ರತದಂತೆ ಪಾಲಿಸಿದವರು ಈ ಎಚ್ಚೆಸ್ಕೆ, ನಿರಂಜನ ಅಂತಹವರು.

1982ರಲ್ಲಿ ಒಮ್ಮೆ ಹೀಗಾಯಿತು. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು. ಕನ್ನಡದ ನಮ್ಮ ಸಮಾಜವಾದೀ, ಸಾಮ್ಯವಾದೀ ಲೇಖಕರು ಭಾರೀ ಗದ್ದಲವೆಬ್ಬಿಸಿದರು. ಅವರದ್ದೇ ನಿಯಂತ್ರಣದ ಪತ್ರಿಕೆಗಳನ್ನು ಓದಿದರೆ, ಏನೋ ಆಗಬಾರದ್ದು ಆಗಿಹೋಗಿದೆ, ಪ್ರಳಯವೇ ಆಗುತ್ತಿದೆ, ಎಂಬಂತಹ ಅಭಿಪ್ರಾಯ ಮೂಡುತ್ತಿತ್ತು. ಒಂದು ಪ್ರತಿಭಟನಾ ಸಭೆಯನ್ನೇ ಆಯೋಜಿಸಲಾಯಿತು. ನಾನೂ ಸಭಿಕನಾಗಿ ಹೋಗಿದ್ದೆ. ನಿರಂಜನ ಅವರದ್ದೇ ಅಧ್ಯಕ್ಷತೆ. ಒಬ್ಬೊಬ್ಬರಾಗಿ “ಕೆಲವೇ ಕೆಲವು ನಿಮಿಷಗಳ ಈ ಸಂಸ್ಕೃತ ವಾರ್ತೆಯ ಪ್ರಸಾರದಿಂದ” ಹೇಗೆ ಮತ್ತು ಎಷ್ಟು ಅನಾಹುತವಾಗುತ್ತಿದೆ, ಎಂದೆಲ್ಲಾ ಕೂಗಾಡತೊಡಗಿದರು. ಅನಂತರ ನಮ್ಮ ಸಮಾಜವಾದೀ ಲೇಖಕ ಮಿತ್ರ ಕಾಳಪ್ಪನವರು ಎದ್ದು ಮೈಕ್ ಮುಂದೆ ನಿಂತು ರೋದಿಸಲು ಪ್ರಾರಂಭಿಸಿದರು. “ನೋಡಿ, ಸತ್ತ ಭಾಷೆ ಸಂಸ್ಕೃತಕ್ಕೆ ಮಣೆ ಹಾಕಲಾಗುತ್ತಿದೆ. ಆದರೆ ಜನಭಾಷೆ ಉರ್ದುವಿಗೆ ಸ್ಥಾನವಿಲ್ಲ” ಇತ್ಯಾದಿ ಗಳಹತೊಡಗಿದರು. ತಡೆಯಲಾರದೆ, ನಾನು ಎದ್ದು ನಿಂತು ಗಟ್ಟಿಯಾಗಿ “ಎರಡಕ್ಕೂ ಹೋಲಿಕೆಯಿಲ್ಲ, ಉರ್ದುವಿಗೆ ಆಕಾಶವಾಣಿಯಲ್ಲಿ ಪ್ರತ್ಯೇಕ ಸ್ಟೇಷನ್ ಇದೆ” ಎಂದು ಆಕ್ಷೇಪಿಸಿದೆ. ನಮ್ಮ ಕಾಳಪ್ಪನವರಿಗೆ ಬರೀ ದ್ವೇಷ, ಪೂರ್ವಗ್ರಹಗಳೇ ಹೊರತು ಮಾಹಿತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಸಭಾಂಗಣದಲ್ಲಿ ಆಗ ಗಲಾಟೆಯೇ ಆಗಿಹೋಯಿತು. ಸಭೆಯನ್ನೇ ಮುಗಿಸಬೇಕಾಯಿತು. ನಾನು ನೇರವಾಗಿ ಸಭಾಧ್ಯಕ್ಷರಾದ ನಿರಂಜನ ಅವರಲ್ಲಿಗೇ ಹೋಗಿ, ಪ್ರತ್ಯೇಕ ಉರ್ದು ಸ್ಟೇಷನ್ ಇರುವುದನ್ನು, ಸಂಸ್ಕೃತದಲ್ಲಿ ಕೇವಲ ಕೆಲವು ನಿಮಿಷಗಳ ವಾರ್ತೆ ಮಾತ್ರ ಬರುತ್ತಿದೆ, ಎಂಬಿತ್ಯಾದಿ ವಿವರ ಹೇಳಿದೆ. ಸಜ್ಜನರಾದ ಅವರು “You have a valid point” ಎಂದು ಒಪ್ಪಿಕೊಂಡರು.

ನವಕರ್ನಾಟಕ ಪ್ರಕಾಶನದ ಮಹತ್ತ್ವದ ಯೋಜನೆಗಳಲ್ಲೊಂದು ನಿರಂಜನ ಅವರು ಸಂಪಾದಕರಾಗಿದ್ದ 25 ಸಂಪುಟಗಳ “ವಿಶ್ವಕಥಾಕೋಶ” ಸರಣಿ. ಈ ಕಟ್ಟಿನಲ್ಲಿ ಧರಣಿ ಮಂಡಲ ಮಧ್ಯದೊಳಗೆ, ಆಫ್ರಿಕಾದ ಹಾಡು, ಕಾಡಿನಲ್ಲಿ ಬೆಳದಿಂಗಳು, ಚೆಲುವು, ಸುಭಾಷಿಣಿ, ವಿಚಿತ್ರ ಕಕ್ಷಿದಾರ, ಮಂಜು ಹೂವಿನ ಮದುವಣಿಗ, ಬೂದು ಬಣ್ಣದ ಕಾಂಗರೂ, ಹೆಜ್ಜೆಗುರುತು, ಅರಬಿ, ನೆತ್ತರು ದೆವ್ವ, ಬಾವಿ ಕಟ್ಟೆಯ ಬಳಿ, ಅದೃಷ್ಟ, ಸಜ್ಜನನ ಸಾವು, ಡೇಗೆ ಹಕ್ಕಿ, ಅವಸಾನ, ತಾತನ ಹುಟ್ಟುಹಬ್ಬ, ಬಾಲ ಮೇಧಾವಿ, ಇಬ್ಬರು ಗೆಳೆಯರು, ಅಬಿಂದಾ ಸಯೀದಾ, ನಿಗೂಢಸೌಧ, ಬೆಳಗಾಗುವ ಮುನ್ನ, ಮರಳುಗಾಡಿನ ಮದುವೆ, ಕಿವುಡು ವನದೇವತೆ, ಸಾವಿಲ್ಲದವರು ಸಂಪುಟಗಳಿವೆ.

ಜಗತ್ತಿನ ನೂರಾರು ದೇಶಗಳ ಹಲವು ನೂರು ಪ್ರಾತಿನಿಧಿಕ ಕಥೆಗಳು. ಅತ್ಯದ್ಭುತ ಸಂಚಯವದು. ನಿರಂಜನ ಅವರ ಸಂಪಾದಕತ್ವ ಎಂದರೆ, ಅಂತಹ ಯೋಜನೆಯ ಸತ್ತ್ವ ಏನು, ಪ್ರಾಮುಖ್ಯ ಏನು ಎಂದು ಅರಿಯಲು ಆ ಸಂಪುಟಗಳನ್ನೇ ಓದಬೇಕು, ಮುಖ್ಯವಾಗಿ ಆ ಎಲ್ಲ ಸಂಪುಟಗಳಿಗೆ ನಿರಂಜನ ಅವರು ಸಂಪಾದಕರಾಗಿ ಬರೆದ ಪ್ರಸ್ತಾವನೆಗಳನ್ನೂ ಓದಬೇಕು. ಆಯಾ ಸಂಕಲನದಲ್ಲಿ ಇರುವ ಕತೆಗಳು ಯಾವೆಲ್ಲ ದೇಶಗಳಿಗೆ ಸೇರಿವೆಯೋ, ಆ ದೇಶಗಳ ಪುಟ್ಟ ಸಾಂಸ್ಕೃತಿಕ ಇತಿಹಾಸವನ್ನೇ ಅವರು ನೀಡಿದ್ದಾರೆ. ಅದೊಂದು ದಾಖಲೆ, ಅದೊಂದು ಅದ್ಭುತ. ನಿರಂಜನ ಅವರು ಒಂದು ಚಿಕ್ಕ ಕಿಂಡಿಯಲ್ಲಿ ಜಗತ್ತಿನ ವಿಶ್ವರೂಪ ದರ್ಶನವನ್ನೇ ಮಾಡಿಸಿದ್ದರು, ಮಾಡಿಸಿದ್ದಾರೆ (ಮುಂದೆ ಪ್ರಕಾಶಕರು ಈ ಪ್ರಸ್ತಾವನೆಗಳನ್ನೇ ಪ್ರತ್ಯೇಕ ಸಂಪುಟವನ್ನಾಗಿ ಹೊರತಂದು ಮೆಚ್ಚುವಂತಹ ಕೆಲಸ ಮಾಡಿದರು).

ಈ “ವಿಶ್ವಕಥಾಕೋಶ” ಸಂಪುಟಗಳ ಒಂದು ಸರಣಿಯ ಲೋಕಾರ್ಪಣೆಗೆ, ನನ್ನ ನೆಚ್ಚಿನ ಅಂಕಣಕಾರರಾದ ಹಾ.ಮಾ.ನಾಯಕರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಹಾ.ಮಾ.ನಾಯಕರನ್ನು, ನಿರಂಜನರನ್ನು ನೋಡುವ ಭಾಗ್ಯ ನಮ್ಮದು. ಲೋಕಾರ್ಪಣೆಯಾದ ಸರಣಿಗಳಲ್ಲಿ ರಷ್ಯನ್ ಕತೆಗಳೂ ಇದ್ದವು. ಲೋಕಾರ್ಪಣೆ ಮಾಡಿದ ಹಾ.ಮಾ.ನಾಯಕರು “ಈ ಸಂಕಲನಗಳಲ್ಲಿ ದಸ್ತಯೇವ್ ಸ್ಕಿ, ತೋಲ್ಸ್ ತೋಯ್ ಎಂಬ ಪ್ರಯೋಗಗಳಿವೆ, ನಮಗೆಲ್ಲಾ ಸುಪರಿಚಿತವಾಗಿರುವ ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಂಬ ಪದಗಳನ್ನೇ ಪ್ರಯೋಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಉತ್ತರವಾಗಿ ನಿರಂಜನರು “ನಾಯಕರೇ, ನಮಗೆ ಹೆಚ್ಚು ಪರಿಚಯವಿರುವ ಹೆಸರುಗಳು ಎರಡೋ ಮೂರೋ. ಆದರೆ, ಈ ಎಲ್ಲ ದೇಶಗಳ ಕತೆಗಳಲ್ಲಿ ಅಲ್ಲಿನ ನೂರಾರು ಹೆಸರುಗಳಿವೆ. ಅಲ್ಲಿನ ಸ್ಥಳೀಯವಾದ ಮತ್ತು ಅವರು ಬಳಸುವ ಮೂಲ-ಪ್ರಯೋಗಗಳನ್ನೇ ಬಳಸಿದ್ದೇವೆ. ನಮಗೆ ಪರಿಚಯವಿರುವ ಕೆಲವು (ಅಪಭ್ರಂಶವಾಗಿಹೋಗಿರುವ) ಪ್ರಯೋಗಗಳನ್ನು ಮಾತ್ರ ಉಳಿಸಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ನನಗಂತೂ ನಿರಂಜನರ ಪರಿಕಲ್ಪನೆ ಅದ್ಭುತ ಎನಿಸಿತು.

ಕಾರಣಾಂತರಗಳಿಂದ ನಮ್ಮ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಧ್ವಾನದ ಕಾರಣಕ್ಕೆ ಮೂಲ ಉಚ್ಚಾರಣೆಗಳಿಗೂ, ನಾವು ಬಳಸುತ್ತಿರುವ ಉಚ್ಚಾರಣೆಗಳಿಗೂ ಅರ್ಥಾತ್ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಸಂಪಾದಕನಾಗಿ, ಈ ಗ್ರಂಥಗಳಲ್ಲಿ ಬರುವ ಸಾವಿರಾರು ಹೆಸರುಗಳಿಗೆ, ಸ್ಥಳನಾಮಗಳಿಗೆ ಮೂಲ ಉಚ್ಚಾರಣೆಗಳನ್ನು ದೊರಕಿಸಿಕೊಳ್ಳಲು, ಪ್ರತಿಬಾರಿಯೂ ಅಪಾರ ಪರಿಶ್ರಮ ಹಾಕಬೇಕಾಗುತ್ತಿದೆ. ಪ್ರತಿಬಾರಿಯೂ ನಿರಂಜನರಂತಹ ಧೀಮಂತರು ನೆನಪಾಗುತ್ತಾರೆ, ಎಂದರೆ ಉತ್ಪ್ರೇಕ್ಷೆಯಲ್ಲ.

ಉದಾಹರಣೆಗೆ, ಉತ್ತರ ಪ್ರದೇಶದ “ಅಮೇಠಿ” (ಸರಿಯಾದ ಪ್ರಯೋಗ) ಕ್ಷೇತ್ರವು, ಸಂಜಯ ಗಾಂಧಿ ಅವರ ಕಾಲದಿಂದಲೂ “ಖ್ಯಾತಿ” ಪಡೆದಿದೆ. ರೋಮನ್ ಲಿಪಿಯ ಅದ್ವಾನದ ಕಾರಣದಿಂದ (ನಾಲ್ಕೈದು ದಶಕಗಳಿಂದಲೂ) ಕನ್ನಡದ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಹುಪಾಲು “ಅಮೇಥಿ” ಎಂದೇ ಬಳಸಲಾಗುತ್ತಿದೆ! ಅಂತೆಯೇ, ಚೀನಾ ದೇಶದ Sinkiang / Xinjiang ಅನ್ನು ಸಿಂಕಿಯಾಂಗ್ ಎಂದೇ ಅನೇಕ ಕಡೆ ಉಲ್ಲೇಖಿಸಲಾಗಿದೆಯಾದರೂ, ಸರಿಯಾದ ಪ್ರಯೋಗ “ಶಿಂಜಾಂಗ್” ಆಗಿದೆ.

ನಿರಂಜನ ಅವರು ಆ ಕಾಲದಲ್ಲಿ ಮೂಲ ಉಚ್ಚಾರಣೆಗಳಿಗಾಗಿ ಅದೆಷ್ಟು ಶ್ರಮ ಹಾಕಿದರೋ, ಏನೋ?! ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

ಅಂದಿನ ಆ ಲೋಕಾರ್ಪಣೆ ಸಮಾರಂಭದಲ್ಲಿ, ನಿರಂಜನರು “ಇಡೀ ಜಗತ್ತಿನ ಇತಿಹಾಸವನ್ನು ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು. ವಿಲ್ ಡ್ಯೂರಾಂಟ್ ಅವರ “ದ ಸ್ಟೋರಿ ಆಫ್ ಸಿವಿಲೈಸೇಷನ್” ಬೃಹತ್ ಸಂಪುಟಗಳನ್ನು ನೋಡುವಾಗ, ನಿರಂಜನರದ್ದೇ ನೆನಪು. ಆರೋಗ್ಯ ಚೆನ್ನಾಗಿದ್ದಿದ್ದರೆ ಅಂತಹುದನ್ನು ಅವರು ಖಂಡಿತವಾಗಿಯೂ ಸಾಧಿಸುತ್ತಿದ್ದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

Continue Reading

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading
Advertisement
Hathras Stampede
ಪ್ರಮುಖ ಸುದ್ದಿ11 mins ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

krishna river drowned death
ಕ್ರೈಂ26 mins ago

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

IPS transfer
ಪ್ರಮುಖ ಸುದ್ದಿ1 hour ago

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

karnataka weather Forecast
ಮಳೆ1 hour ago

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Dharamshala Tour
ಪ್ರವಾಸ2 hours ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Vastu Tips
ಧಾರ್ಮಿಕ2 hours ago

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Sour Curd
ಆರೋಗ್ಯ3 hours ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ3 hours ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

ಆಟೋಮೊಬೈಲ್6 hours ago

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

suicide news
ಕರ್ನಾಟಕ8 hours ago

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌