ಅಂಕಣ
ಧವಳ ಧಾರಿಣಿ ಅಂಕಣ: Ganesh Chaturthi: ಶುದ್ಧ ಭಕ್ತಿಗೆ ಒಲಿಯುವ ಕರುಣಾಮಯ ಮೂರ್ತಿ
ಗಣಪತಿಯ ಕತೆಗಳು ಆತನ ನಿರ್ವಿಕಲ್ಪ ಸ್ವರೂಪವನ್ನು ನಮಗೆ ಮನದಟ್ಟು ಮಾಡಿಸುತ್ತವೆ. ಆದರೆ ಆತನ ಸರಳತೆಯಿಂದಾಗಿ ನಮ್ಮಲ್ಲಿ ಜನಪ್ರಿಯನು. ಬನ್ನಿ, ಚೌತಿಯ (Ganesh chaturthi) ಹಿನ್ನೆಲೆಯಲ್ಲಿ ಆತನ ಕತೆಗಳನ್ನು ಓದೋಣ.
ವಿವಿಧ ಅವತಾರಗಳ ಹಲವು ಆಯಾಮಗಳ ಗಣೇಶ
(ಹಿಂದಿನ ಭಾಗದಲ್ಲಿ ಅಮೂರ್ತವಾದ ದೇವರನ್ನು ವಿಗ್ರಹದ ಮೂಲಕ ಕಂಡುಕೊಂಡು ಆ ಮೂಲಕ ಅಮೂರ್ತದ ಬ್ರಹ್ಮನನ್ನು ಕಾಣಬಹುದಾದ ಸನಾತನ ಸಂಸ್ಕೃತಿಯ ಕುರಿತು ವಿವರಿಸಿದ್ದೆ. ಪುರಾಣವೆಂದರೆ ಕಥಾರೂಪವಾಗಿ ಮೂರ್ತರೂಪವನ್ನು ಆರಾಧಿಸಿ ಆ ಮೂಲಕ ನಿರ್ವಿಕಲ್ಪವನ್ನು ತಲುಪುವ ಮಾರ್ಗವನ್ನು ಹೇಳುವುದು. ಆ ಕುರಿತು ಅವಲೋಕನ ಇಲ್ಲಿದೆ.)
ವಿನಾಯಕ ಜನಸಾಮಾನ್ಯರಿಗೆ ಇಷ್ಟವಾಗುವದು ಆತನ ಸರಳತನಕ್ಕೆ. ಮಣ್ಣಿನಲ್ಲಿ ಮೂರ್ತಿಮಾಡಿ ಆತನನ್ನು ಮನೆಮನೆಗೆ ತರುವಾಗ ಈತ ನಮ್ಮ ದೇವತೆ ಎನ್ನುವ ಭಾವ ಮೂಡುತ್ತದೆ. ಮಣ್ಣು ಮೂಲಾಧಾರಚಕ್ರದ ಸಂಕೇತ. ಮೂಲಾಧಾರ ಚಕ್ರದ ದಳಗಳ ಬಣ್ಣ ಕೆಂಪು. ಈ ಕಾರಣಕ್ಕೆ ಕೆಂಪು ಬಣ್ಣದ ಗಣಪತಿ ಶ್ರೇಷ್ಠವಾಗಿದೆ. ಆತನನ್ನು “ಕೃತಾಂಗರಾಗಂ ನವಕುಂಕುಮೇನ” ಕುಂಕುಮವರ್ಣದ ಬಟ್ಟೆಯನ್ನು ಧರಿಸಿದವನೆಂದೂ, ಕೆಂಪು ಅಂಗರಾಗವನ್ನು ಮೈಗೆಲ್ಲ ಬಳಿದುಕೊಂಡವನೆಂದು ವರ್ಣಿಸುವ ಶ್ಲೋಕವೊಂದಿದೆ. ಕೆಂಪುಬಣ್ಣದ ಗಣಪತಿ ಶ್ರೇಷ್ಠನ್ನುವುದಕ್ಕೆ ಒಂದು ಕಥೆಯಿದೆ. ಚತುರ್ಯುಗದಾರಂಭಕ್ಕೆ ಮುನ್ನ ಬ್ರಹ್ಮ ಇನ್ನೂ ನಿದ್ರೆಯಿಂದ ಎದ್ದಿರಲಿಲ್ಲ. ಆಗ ಅಲ್ಲಿಗೆ ಕೈಲಾಸಪತಿಯಾದ ಈಶ್ವರ ಬಂದು ನಾಲ್ಮೊಗನನ್ನು ಎಬ್ಬಿಸಿದ. ಅವಸರದಲ್ಲಿ ಎದ್ದ ಬ್ರಹ್ಮ ಒಮ್ಮೆ ಆಕಳಿಸಿದಾಗ ಕೆಂಪು ದಾಸವಾಳದ ಬಣ್ಣವನ್ನು ಹೊಂದಿದ ಸುಂದರಾಂಗ ಮತ್ತು ಅಷ್ಟೇ ದುಷ್ಟನಾದ ದೈತ್ಯನೋರ್ವ ಉದ್ಭವವಾದನು. ಕೆಂಪಗೆ ಇರುವ ಅವನನ್ನು ನೋಡಿದ ಬ್ರಹ್ಮನಿಗೆ ಪುತ್ರಮೋಹ ಉಂಟಾಗಿ ಅವನಿಗೆ ನೀನು ಕೋಪಗೊಂಡು ಯಾರನ್ನಾದರೂ ತಬ್ಬಿಕೊಂಡರೆ ಅಂತವರ ದೇಹ ಚೂರು ಚೂರಾಗಿ ಹೋಗುವುದು ಎನ್ನುವ ವರವನ್ನು ಇತ್ತನು. ಸಿಂಧೂರ ತನಗೆ ಸಾವು ಬರಬಾರದು ಎನ್ನುವ ವರವನ್ನು ಕೇಳಿದಾಗ ಅದು ಬ್ರಹ್ಮನಿಗೆ ಅದು ಸಾಧ್ಯವಿಲ್ಲದ ಮಾತು. ಆಗ ಆ ದೈತ್ಯನು ತನಗೆ ಮನುಷ್ಯರಿಂದಾಗಲೀ, ಪ್ರಾಣಿಗಳಿಂದಾಗಲೀ ಸಾವು ಬಾರದಂತಹ ವರವನ್ನು ಕೇಳಿದನು. ಮತ್ತು ತನ್ನನ್ನು ಕೊಂದು ತನ್ನ ರಕ್ತದಲ್ಲಿ ಸ್ನಾನವನ್ನು ಮಾಡಿದರೆ ಮಾತ್ರ ತಾನು ಸಾಯುವ ವರವನ್ನು ಕೇಳಿಕೊಂಡನು. ಇದು ಒಂದು ರೀತಿ ಹಿರಣ್ಯಕಶಿಪು ಕೇಳಿದ ವರದ ರೀತಿಯೇ ಇದೆ.
ವರಬಲದಿಂದ ಬಲಾನ್ವಿತನಾಗಿ ಆತನ ದುಷ್ಟತನ ಮೇರೆ ಮೀರಿತು. ಭೂಲೋಕವನ್ನು ಜಯಿಸಿ ದೇವಲೋಕದ ಮೇಲೆ ದಾಳಿ ಮಾಡಿ ಇಂದ್ರನನ್ನು ಪದಚ್ಯುತಗೊಳಿಸಿದನು. ಅಲ್ಲಿಂದ ನೇರವಾಗಿ ಬ್ರಹ್ಮಲೋಕಕ್ಕೆ ಬಂದು ಬ್ರಹ್ಮನನ್ನೇ ಅಪ್ಪಿ ಕೊಲ್ಲಲು ಹವಣಿಸಿದನು. ಅವನಿಗೆ ಬ್ರಹ್ಮಪದವಿಯ ಮೇಲೆ ಆಸೆಯಾಗಿತ್ತು. ಆಗ ಬ್ರಹ್ಮ ಜೀವವನ್ನು ಉಳಿಸಿಕೊಳ್ಳಲು ಓಡುತ್ತಾ ವೈಕುಂಠಕ್ಕೆ ಹೋಗಿ ನಾರಾಯಣನ ಆಶ್ರಯವನ್ನು ಬೇಡಿದನು. ಅಲ್ಲಿಗೂ ಬಂದ ದೈತ್ಯನನ್ನು ನೋಡಿ ವಿಷ್ಣು ಉಪಾಯವಾಗಿ ಕೈಲಾಸದಲ್ಲಿರುವ ಶಿವ ತಮ್ಮೆಲ್ಲರಿಗೂ ಬಲಿಷ್ಠನಾಗಿರುವ ಕಾರಣ ಆತನನ್ನು ಗೆದ್ದರೆ ತಮ್ಮನ್ನು ಗೆದ್ದಂತೆ ಎಂದು ಹೇಳಿ ಕಳುಹಿಸಿದನು. ಸಿಟ್ಟಿಗೆದ್ದ ಸಿಂಧೂರ ದೈತ್ಯ ನೇರವಾಗಿ ಕೈಲಾಸಕ್ಕೆ ಬಂದು ತಪಸ್ಸಿನಲ್ಲಿದ್ದ ಶಿವನನ್ನು ನೋಡಲು ಅಲ್ಲೇ ಇದ್ದ ಪಾರ್ವತಿಯನ್ನು ನೋಡಿ ಮೋಹಗೊಂಡನು. ಅವಳನ್ನು ಎತ್ತಿಕೊಂಡು ಪಾತಾಳಕ್ಕೆ ಬರತೊಡಗಿದನು ಆಗ ಭಯದಿಂದ ಕೂಗಿಕೊಂಡ ಪಾರ್ವತಿಯ ಕೂಗನ್ನು ಕೇಳಿದ ಶಿವ ಆ ದೈತ್ಯನ ಮೇಲೆ ಯುದ್ಧಕ್ಕೆ ಬಂದನು. ವರದ ಕುರಿತು ತಿಳಿದ ಬ್ರಹ್ಮ ನೇರವಾಗಿ ಗಣಪತಿಯ ಬಳಿ ಈ ವಿಷಯವನ್ನು ತಿಳಿಸಿ ಶಿವನ ಸಹಾಯಕ್ಕೆ ಹೋಗಲು ಹೇಳಿದನು. ಸೃಷ್ಟಿಯ ಆದಿಯಾದ ಕಾರಣ ಗಣಪತಿ ಮಯೂರೇಶ್ವರ ಅವತಾರವನ್ನು ತಾಳಿದ್ದನು. ಅವನಿಗೆ ಆನೆಮುಖವಿರಲಿಲ್ಲ. ವಿಷಯ ತಿಳಿದ ಮಯೂರೇಶ್ವರ ಬ್ರಾಹ್ಮಣವಟುವಿನ ವೇಷದಲ್ಲಿ ಹೋಗಿ ಸಿಂಧೂರದೈತ್ಯನನ್ನು ಸಮಾಧಾನಿಸಿ ಪಾರ್ವತಿಯನ್ನು ಹಿಂತಿರುಗಿ ಕೊಡಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ. ಕೋಪಗೊಂಡ ರಾಕ್ಷಸ ಶಿವನನ್ನು ಅಪ್ಪಿಕೊಳ್ಳಬೇಕು ಎಂದು ಬಂದಾಗ ಮಯೂರೇಶ ತನ್ನ ಕೈಯಲ್ಲಿದ್ದ ಪರಶುವನ್ನು ಅವರಿಬ್ಬರ ನಡುವೆ ಮಾಯೆಯಿಂದ ಇಟ್ಟನು.
ಈ ಕಾರಣದಿಂದ ಸಿಂಧೂರನಿಗೆ ಮೈಯಲ್ಲಿ ಗಾಯಗಳುಂಟಾಗಿ ಪರಾಭವಗೊಂಡು ಪಾತಾಳಕ್ಕೆ ನಡೆದರೂ ಪುನಃ ಅಲ್ಲಿಂದಲೇ ತನ್ನ ಉಪಟಳವನ್ನು ಮತ್ತೆ ಮೊದಲಿನಂತೆ ಪ್ರಾರಂಭಿಸಿದನು. ಹೀಗೆ ಯುಗಗಳು ಕಳೆದವು. ನಂತರ ಯಾವಾಗ ಗಜಾನನನಿಗೆ ಆನೆಯ ಮುಖ ಬಂದಿತೋ ಆಗ ಗಣೇಶನಿಗೆ ಸಿಂಧೂರ ದೈತ್ಯನ ಉಪಟಳದ ವಿಷಯ ತಿಳಿಯಿತು. ಹಿಂದಿನ ಅವತಾರದಲ್ಲಿ ಮಯೂರೇಶ್ವರನಾಗಿ ಸಿಂಧೂ ದೈತ್ಯನನ್ನು ಕೊಂದಿದ್ದ ಗಣೇಶ ಈಗ ಸಿಂಧೂರ ದೈತ್ಯನನ್ನು ಯುದ್ಧಕ್ಕೆ ಆಹ್ವಾನಿಸಿದನು. ಮಾನವನ ದೇಹ ಆನೆಯ ಮುಖವಿರುವ ಗಣೇಶ ಮತ್ತು ಸಿಂಧೂರ ದೈತ್ಯನ ನಡುವೆ ಭೀಕರ ಹೋರಾಟವಾದಾಗ ಗಜಾನನ ಆ ರಕ್ಕಸನನ್ನು ಹಿಡಿದು ಅವುಚಿ ಕೊಂದು ಅವನ ರಕ್ತದಿಂದ ಸ್ನಾನವನ್ನು ಮಾಡಿ ವಿಜ್ರಂಭಿಸಿದನು. ಆನೆಯೊಂದು ಸೊಕ್ಕಿನಿಂದ ಎರಗುವ ಕ್ರಿಯೆಯನ್ನು ಸಿಂಧೂರ ದೈತ್ಯನ ವಧಾ ಪ್ರಕರಣದಲ್ಲಿ ಗೋಚರಿಸುತ್ತದೆ. ಹೀಗೆ ಕೆಂಪುಬಣ್ಣದವನಾದ ಗಜಮುಖನನ್ನು ಋಷಿಗಳೆಲ್ಲರೂ ಸ್ತೋತ್ರಮಾಡಿ ಶಾಂತನಾಗಲು ಬೇಡಿಕೊಂಡರು. ಆಗ ಶಾಂತನಾದ ಗಣೇಶ ಯಾರು ರಕ್ತವರ್ಣದ ತನ್ನನ್ನು ಚವತಿಯ ದಿನ ಪೂಜಿಸುತ್ತಾರೋ ಅವರಿಗೆ ವಿಶೇಷ ಫಲ ದೊರೆಯುತ್ತದೆ ಎಂದು ವರಕೊಟ್ಟನು. ಹಾಗಾಗಿ ಕೆಂಪು ವರ್ಣದ ಗಣಪತಿಯ ಆರಾಧನೆ ಚವತಿ ಹಬ್ಬಕ್ಕೆ ಶ್ರೇಷ್ಠ.
ಗರಿಕೆಯರ್ಪಿಸುವ ಸರಳಪೂಜೆ ಅವನಿಗಿಷ್ಟ. ಒಂದು ಎಸಳಾದರೂ ಗರಿಕೆ ಆತನ ಪೂಜೆಗೆ ಬೇಕೇಬೇಕು. ಗಣಪತಿಗೆ ಗರಿಕೆಗಿಂತಲೂ ಹೆಚ್ಚಿನದಾಗಿ ಶಮೀ ಪತ್ರದಿಂದ ಪೂಜೆ ಮಾಡಿದರೆ ಮತ್ತು ಅರ್ಕ ಗಣಪತಿಯನ್ನು ಪೂಜಿಸಿದರೆ ಅತೀ ಶೀಘ್ರದಲ್ಲಿ ಅನುಗ್ರಹವಾಗುತ್ತದೆ ಎನ್ನುವುದನ್ನು ಗಣೇಶ ಪುರಾಣ ವರ್ಣಿಸುತ್ತದೆ. ಬಹಳ ಹಿಂದೆ ಮಾಲವ ದೇಶದಲ್ಲಿ ಔರವ ಮತ್ತು ಸುಮೇಧೆ ಎನ್ನುವ ಮುನಿ ದಂಪತಿಗಳಿಗೆ ಶಮೀಕ ಎನ್ನುವ ಸುಂದರಿಯಾದ ಮಗಳೊಬ್ಬಳಿದ್ದಳು. ತಪಸ್ವೀ ದಂಪತಿಗಳು ಅವಳನ್ನು ಬಹು ಮುದ್ದಿನಿಂದ ಸಾಕಿದ್ದರು. ಹೀಗಿರುವಾಗ ಪ್ರಾಯ ಪ್ರಬುದ್ಧೆಯಾದ ಅವಳನ್ನು ದೌಮ್ಯ ಮಹರ್ಷಿಯ ಮಗ ಮತ್ತು ಶೌನಕ ಮಹರ್ಷಿಯ ಶಿಷ್ಯನೂ ಆಗಿರುವ ಮಂದಾರ ಎನ್ನುವ ಅನುರೂಪನಾದ ಮುನಿಕುವರನಿಗೆ ಮದುವೆ ಮಾಡಿ ಕೊಟ್ಟರು. ಈ ಇಬ್ಬರೂ ದಂಪತಿಗಳೂ ಅನ್ಯೋನ್ಯವಾಗಿ ನಲಿಯುತ್ತಾ ವಿಹಾರ ಮಾಡುತ್ತಾ ರಸಿಕತೆಯಿಂದ ಅಡವಿಯಲ್ಲಿ ನಲಿಯುತ್ತಿದ್ದರು. ಆ ಸಮಯದಲ್ಲಿ ಭ್ರಶುಂಡಿ ಎನ್ನುವ ಗಣಪತಿಯ ಮಹಾ ಭಕ್ತ ಮತ್ತು ತಪಸ್ವಿ ಅವರ ಆಶ್ರಮಕ್ಕೆ ಬಂದನು ಆತನಿಗೂ ಗಣಪತಿಯಂತೆ ಸೊಂಡಿಲಿತ್ತು. ಆತನ ವಿರೂಪವನ್ನು ನೋಡಿದ ಮಂದಾರ ಮತ್ತು ಶಮೀಕರಿಗೆ ನಗು ತಡೆಯಲಿಕಾಗಲಿಲ್ಲ. ಅದು ಭ್ರಶುಂಡಿಯ ಗಮನಕ್ಕೂ ಬಂತು. ಆತ ಶೀಘ್ರಕೋಪಿ; ತನ್ನನ್ನು ನೋಡಿ ಅಪಹಾಸ್ಯ ಗೈದ ನೀವಿಬ್ಬರೂ ಯಾರಿಗೂ ಪ್ರಯೋಜನಕ್ಕೆ ಬಾರದ ವೃಕ್ಷಗಳಾಗಿ ಎಂದು ಶಾಪಕೊಟ್ಟನು. ಆಗ ಹೆದರಿದ ದಂಪತಿಗಳು ಅವನಿಗೆ ಅಳುತ್ತಾ ತಮ್ಮದು ತಪ್ಪಾಯಿತು, ಇದು ಅರಿಯದೇ ಮಾಡಿದ ತಪ್ಪು, ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಂಡರು.
ಕೋಪಗೊಂಡ ಮುನಿ ತಕ್ಷಣವೇ ಶಾಂತನಾಗಿ ತನ್ನಂತೇ ಇರುವ ಗಣಪತಿ ಯಾವಾಗ ಒಲಿಯುತ್ತಾನೋ ಆಗ ನಿಮಗೆ ಶಾಪದಿಂದ ಮುಕ್ತಿ ಎಂದು ಉಶ್ಯಾಪ ಕೊಟ್ಟನು. ತಕ್ಷಣವೇ ಶಮೀಕ ಇಡೀ ಮೈಮೇಲೆ ಮುಳ್ಳುಗಳಿಂದ ಕೂಡಿದ ಶಮೀ ವೃಕ್ಷವಾದರೆ, ಮಂದಾರ ಪಾಳುಬಿದ್ದ ಮನೆ ಜಾಗ್ದಲ್ಲಿ ಬೆಳೆಯುವ ಎಕ್ಕದ ಗಿಡವಾಗಿ ಮಾರ್ಪಟ್ಟನು. (ನಿನ್ನ ಮನೆ ಎಕ್ಕ ಹುಟ್ಟಹೋಗ ಎನ್ನುವ ಬೈಗಳಿಗೆ ಹಿನ್ನೆಲೆ ಇದೇ, ಎಕ್ಕ ಬೆಳೆಯುವುದೇ ಪಾಳುಬಿದ್ದೆಡೆ). ಇತ್ತ ತನ್ನ ಮಗಳು ಮತ್ತು ಅಳಿಯ ಕಾಣದೇ ಅವರನ್ನು ಹುಡುಕುತ್ತಾ ಔರವಋಷಿ ಮತ್ತು ತನ್ನ ಶಿಷ್ಯ ಎಲ್ಲಿ ಎಂದು ಹುಡುಕುತ್ತಾ ಶೌನಕ ಇಬ್ಬರೂ ಕಾಡಿಗೆ ಬಂದರು. ಅಲ್ಲಿ ಅವರು ಗಣಪತಿಯನ್ನು ಧ್ಯಾನ ಮಾಡಿ ನವದಂಪತಿಗಳ ಕುರಿತು ಅಲೋಚಿಸಿದಾಗ ಅವರಿಗೆ ಭ್ರಶುಂಡಿ ಕೊಟ್ಟ ಶಾಪದ ಸಂಗತಿ ತಿಳಿಯಿತು. ಆಗ ಅವರು ಗಜಾನನನನ್ನು ಒಲಿಸಿಕೊಳ್ಳಲು ಹನ್ನೆರಡು ವರುಷಗಳ ಕಾಲ ಬಲು ಕಠಿಣವಾದ ತಪಸ್ಸನ್ನು ಆಚರಿಸಿದರು. ಅವರ ಭಕ್ತಿಗೆ ಮೆಚ್ಚಿದ ಗಣಪತಿ ಅವರ “ಭ್ರಶುಂಡಿಯ ಮಹಾ ತಪಸ್ವಿ, ಆತ ಕೊಟ್ಟ ಶಾಪವನ್ನು ತಾನು ತೆಗೆಯಲಾರೆ. ಆದರೆ ಇಂದಿನಿಂದ ಯಾರು ಎಕ್ಕದ ಗಿಡದಿಂದ ತನ್ನ ಮೂರ್ತಿಯನ್ನು ಮಾಡಿ ಶಮೀ ಪತ್ರದಿಂದ ತನ್ನನ್ನು ಪೂಜಿಸಿದರೆ ದೂರ್ವೆಗಿಂತಲೂ ಶ್ರೇಷ್ಠ ವಾಗಿರುತ್ತದೆ”. ತನ್ನ ಮಗಳು ವೃಕ್ಷವಾಗಿರುವುದನ್ನು ಸಹಿಸದ ಆಕೆಯ ತಂದೆ ತನಗಿನ್ನೇಕೆ ಈ ಜಿವ, ಎಂದು ಪ್ರಾಯೋಪವೇಶ ವೃತವನ್ನು ಕೈಗೊಂಡು ತನ್ನ ದೇಹವನ್ನು ಅಗ್ನಿಗೆ ಅರ್ಪಿಸಿದನು. ಅಂದಿನಿಂದ ಔರ್ವ ಋಷಿ ಶಮೀ ವೃಕ್ಷದ ಒಳಗಡೆ ಅಗ್ನಿಯಾಗಿ ಇದ್ದಾನೆ. ಯಜ್ಞದಲ್ಲಿ ಅರುಣಿಯನ್ನು ಕಡೆದು ಅಗ್ನಿಜನನವನ್ನು ಮಾಡುವುದು ಈ ಹಿನ್ನೆಲೆಯಿಂದಾಗಿ. ಆ ಮೊದಲಾಗಿ ಶಮಿಪತ್ರ ಗಣಪತಿಗೆ ಶ್ರೇಷ್ಠವೆಂದಾಯಿತು.
ಪ್ರಿಯವ್ರತನೆನ್ನುವ ಮದ್ರದೇಶದ ರಾಜನಿಗೆ ಇಬ್ಬರು ಹೆಂಡತಿಯರು. ಹಿರಿಯ ರಾಣಿ ಕೀರ್ತಿ ಸದ್ಗುಣಿ. ಆದರೆ ಎರಡನೇ ಹೆಂಡತಿ ಪ್ರಭಾ ತನ್ನ ಸೌಂದರ್ಯದಿಂದ ರಾಜನನ್ನು ಬುಟ್ಟಿಗೆ ಹಾಕಿಕೊಂಡು ಹಿರಿಯ ರಾಣಿಯನ್ನು ಅವಮಾನಿಸುತ್ತಿದ್ದಳು. ಎರಡನೆ ಹೆಂಡತಿ ಪ್ರಭಾಳಿಗೆ ಪದ್ಮನಾಭೀ ಎನ್ನುವ ಸುಗುಣ ಮಗನೋರ್ವ ಜನಿಸಿದನು. ಅವಳಿಂದ ಪ್ರೇರೇಪಿತನಾದ ರಾಜನು ಸದಾ ಕಾಲವೂ ಹಿರಿಯ ರಾಣಿಯನ್ನು ಮೂದಲಿಸುತ್ತಿದ್ದನು. ಈ ಅವಮಾನದಿಂದ ನೊಂದ ಕೀರ್ತಿ ಆತ್ಮಹತ್ಯೆ ಮಾಡೀಕೊಳ್ಳಲು ಯೋಚಿಸಿದಾಗ ಅರಮನೆಯ ಪುರೋಹಿತರಾದ ದೇವಲ ಎನ್ನುವವರು ಗಣಪತಿಯ ಆರಾಧನೆ ಮಾಡು ಎಂದು ಕೀರ್ತಿಗೆ ಉಪದೇಶಿಸಿ ಹೋದರು. ತನ್ನ ಕಷ್ಟಗಳೆಲ್ಲ ಬಗೆಹರಿಯಲಿ ಎಂದು ಕೀರ್ತಿ ಬಹಳ ಕಷ್ಟಪಟ್ಟು ದೂರ್ವೆಯನ್ನು ಸಂಗ್ರಹಿಸಿ ಗಣಪತಿಯನ್ನು ಆರಾಧಿಸುತ್ತಿದ್ದಳು. ಒಂದು ಕಡುಬೇಸಿಗೆಯಲ್ಲಿ ಅವಳಿಗೆ ಎಷ್ಟು ಹುಡುಕಿದರೂ ದೂರ್ವೆ ಸಿಗಲಿಲ್ಲ. ಅವಳ ದಾಸಿಯರು ಅವಳಿಗೆ ಶಮೀ ವೃಕ್ಷದ ಎಲೆಯನ್ನು ಪೂಜೆಗೆಂದು ತಂದು ಕೊಟ್ಟರು. ಭಗವಂತ ಭಕ್ತಿಗೆ ಒಲಿಯುತ್ತಾನೆ ಹೊರತೂ ಆಡಂಬರಕ್ಕಲ್ಲ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು
ರಾಣಿ ಕೀರ್ತಿ ಭಕ್ತಿಯಿಂದ ಅರ್ಪಿಸಿದ ಶಮೀ ದಳಗಳಿಂದ ಗಣಪತಿ ಪ್ರಸನ್ನನಾಗಿ ಅವಳಿಗೆ ವರವನ್ನು ಇತ್ತಂತೆ ಸ್ವಪ್ನದಲ್ಲಿ ಕಂಡು ಬಂತು. ಪರಿಣಾಮವಾಗಿ ಕಿರಿಯ ರಾಣಿ ಪ್ರಭೆಯ ಈರ್ಷ್ಯೆ ಅವಳಿಗೆ ತಿರುವು ಮುರುಗಾಯಿತು. ಅವಳಿಗೆ ಮಾರಕ ರೋಗ ಬಂದು ಕುರೂಪಿಯಾದಳು. ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಕೀರ್ತಿಯಲ್ಲಿ ಕ್ಷಮೆಕೋರುತ್ತಾ ಪ್ರೀತಿಯಿಂದ ಆಕೆಯನ್ನು ಕೂಡಿದನು. ಅವರಿಬ್ಬರ ದಾಂಪತ್ಯದಿಂದ ಆಕೆಗೆ “ಕ್ಷಿಪ್ರ ಪಸಾದನ” ಎನ್ನುವ ಮಗನು ಜನಿಸಿದನು. ಇದನ್ನು ಸಹಿಸದ ಕಿರಿಯ ರಾಣಿ ಆ ಮಗುವಿಗೆ ವಿಷವನ್ನಿಕ್ಕಿದಳು. ತನ್ನ ಮಗು ಗತಪ್ರಾಣದವನಾದದ್ದನ್ನು ಕಂಡ ರಾಣಿ ಕೀರ್ತಿಯ ದುಃಖ ಹೇಳತೀರದಾಯಿತು. ಅಲ್ಲಿಗೆ ಗೃತ್ಸಮದ ಎನ್ನುವ ಋಷಿ ಆ ಸಮಯಕ್ಕೆ ಸರಿಯಾಗಿ ಬಂದು ರಾಣಿಯನ್ನು ಸಂತೈಸಿ ಅವಳ ಹತ್ತಿರ “ನೀನು ಶಮೀಪತ್ರದಿಂದ ಗಣಪತಿಯ ಆರಾಧನೆಯ ಪುಣ್ಯವನ್ನು ನಿನ್ನ ಮಗನಿಗೆ ಧಾರೆ ಎರೆದು ಕೊಡು ಆತ ಬದುಕುತ್ತಾನೆ” ಎಂದನು. ರಾಣಿ ಹಾಗೇ ಮಾಡಲು ಮಗು ನಿದ್ರೆಯಿಂದ ಎದ್ದಂತೆ ಎದ್ದು ಓರ್ವ ಸತ್ಪುರ್ಷನಾಗಿ ಬಹುಕಾಲ ರಾಜ್ಯವನ್ನಾಳಿದನು. ಅಂದು ಮೊದಲಾಗಿ ಶಮೀ ಪತ್ರೆ ದೇವನಿಗೆ ಪ್ರಿಯವಾಗಲು ಕಾರಣ.
ಭಗವದ್ಗೀತೆಯಲ್ಲಿ ಕೃಷ್ಣ ಪತ್ರ, ಪುಷ್ಪ ಕೊನೆಗೆ ನೀರನ್ನಾದರೂ ಭಕ್ತಿಯಿಂದ ಯಾರು ಕೊಡುತ್ತಾರೋ ಅದು ತನಗೆ ಪ್ರಿಯವೆಂದಿದ್ದಾನೆ. ಅದನ್ನು ಈ ಕಥೆ ನೆನಪಿಸುತ್ತದೆ. ಗಣೇಶನಿಗೆ ದೂರ್ವೆ, ಶಮೀ, ಎಕ್ಕ ಅಂದರೆ ಲೋಕದ ಕಣ್ಣಿಗೆ ನಿರುಪಯುಕ್ತವೆಂದು ಕಾಣಿಸುವುದೆಲ್ಲವೂ ಪ್ರಿಯವಾಗಿದೆ. ಪ್ರಪಂಚದಲ್ಲಿ ಎಲ್ಲವೂ ದೇವನ ಸೃಷ್ಟಿ ಎನ್ನುವುದು ಇದರ ಹಿನ್ನೆಲೆ.
ಚವತಿಯ ಗಣೇಶನ ಮೂರ್ತಿ ಕೆತ್ತಿ ತೆಗೆಯುವುದಲ್ಲ, ಬೀಡಿಬಿಡಿಯಾದ ಮಣ್ಣನ್ನು ಆರಿಸಿ ಹದ ಮಾಡಿ ಮೆತ್ತಿ ಕಟ್ಟುವುದು. ಕುಟ್ಟಿ ತೆಗೆಯುವ ಮನೋಭಾವದಿಂದ ಕಟ್ಟುವ ಮನವನ್ನು ಬೆಸೆಯುವ ಸಂಸ್ಕೃತಿಗೆ ಈ ಚವತಿಯಲ್ಲಿ ಗಣಪ ನಮ್ಮನ್ನು ಹರಸಲಿ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ
ಅಂಕಣ
ಮೊಗಸಾಲೆ ಅಂಕಣ: ಬರಗಾಲ ಇದ್ದರೂ ಸಚಿವರ ದರಬಾರಿಗೆ ಕೊನೆಯೇ ಇಲ್ಲ!
ಸಾರ್ವಜನಿಕ ಉದ್ದೇಶಗಳಿಗೆ ಹಣ ಮಂಜೂರು ಮಾಡುವ ಸಂದರ್ಭಗಳಲ್ಲಿ ಬಜೆಟ್‍ನಲ್ಲಿ ಅದಕ್ಕೆ ಬೇಕಾದ ಹಣದ ಲಭ್ಯತೆ ಇಲ್ಲವೇ ಇಲ್ಲ ಎಂದು ರಾಗ ಎಳೆಯುವ ಅರ್ಥ ಇಲಾಖೆ, ಸಂಪುಟ ಸಚಿವರ ಹೊಸ ಕಾರಿನ ತೆವಲು ಪೂರೈಸುವುದಕ್ಕೆ, ಬಂಗಲೆಗಳ ಅಲಂಕಾರಕ್ಕೆ ದೊಡ್ಡ ಮೊತ್ತದ ಬಿಡುಗಡೆಗೆ ಹಸಿರು ನಿಶಾನೆ ತೋರಿರುವುದು ಆತಂಕಕಾರಿ.
ಅಜ್ಜಿಗೆ ಅರಿವೆಯ ಚಿಂತೆಯಾದರೆ ಮೊಮ್ಮಗಳಿಗೆ…ಚಿಂತೆ ಎಂಬ ಗಾದೆ ನೆನಪಿನಂಗಳದಲ್ಲಿ ಒತ್ತರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಎಡಬಿಡಂಗಿ ನೀತಿ ನಿಲುವು ಕಾರಣ. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬಹುದಾದರೆ ಈ ನಿಲುವಿಗೆ ಸರ್ಕಾರ ಬಂದಿರುವುದಕ್ಕೆ ಅರ್ಥ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಕಾರಣ ಪುರುಷ. ರಾಜ್ಯದಲ್ಲಿ ಹೊಸ ಸರ್ಕಾರ (Karnataka government) ಬಂದು ಮೂರು ತಿಂಗಳು ಕಳೆದು ಹೋಗಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಆದ್ಯತೆ ಎನ್ನುವುದೊಂದು ಅದರ ಹೃದಯದಲ್ಲಿರಬೇಕು. ಆ ಆದ್ಯತೆಗಳಲ್ಲಿ ಮೊದಲನೆಯದು ಆರ್ಥಿಕ ಶಿಸ್ತಿನದಾಗಿರಬೇಕು. ಆ ಶಿಸ್ತನ್ನು ನಿಯಂತ್ರಿಸುವ ಕೆಲಸವನ್ನು ಅರ್ಥ ಇಲಾಖೆ ಮಾಡಬೇಕು. ಗೂಳಿ ಎಲ್ಲೆಂದರಲ್ಲಿ ನುಗ್ಗದಂತೆ ಹಗ್ಗ ಜಗ್ಗುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು. ಅವರು ಮಾಡುತ್ತಿಲ್ಲ ಎನ್ನಲು ರಾಜ್ಯದ ಜನತೆ ಹಿಂದೆಮುಂದೆ ನೋಡಬೇಕಾದ ಅಗತ್ಯವಿಲ್ಲ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯೂ ಸೇರಿದಂತೆ 35 ಸಚಿವ ಹುದ್ದೆ ಭರ್ತಿಯಾಗಿದೆ. ಅವರಲ್ಲಿ ಕೆಲವರು ಹಳಬರು, ಅನುಭವಸ್ಥರು. ಮತ್ತೆ ಕೆಲವರು ಇದೇ ಮೊದಲಬಾರಿಗೆ ಸಚಿವ ಸ್ಥಾನ ಪಡೆದವರು. ಅವರಿಗೆಲ್ಲ ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಅಧಿಕೃತ ಸರ್ಕಾರಿ ಬಂಗಲೆಗಳು ಮಂಜೂರಾಗಿವೆ. ಬಹುತೇಕರು ಮನೆ ಪ್ರವೇಶಕ್ಕೆ ಸುಣ್ಣಬಣ್ಣದ ಕೆಲಸ ಸಮರ್ಪಕವಾಗಿ ಮುಗಿಯಲಿ ಮತ್ತು ಹೊಸ ಪೀಠೋಪಕರಣಗಳ ಅಳವಡಿಕೆ ಕೆಲಸ ಪೂರೈಸಲಿ ಎಂದು ಕಾದಿದ್ದಾರೆ. ಏತನ್ಮಧ್ಯೆ ಎಲ್ಲ ಸಚವರಿಗೂ ಐಷಾರಾಮೀ ಹೊಸ ಕಾರು ಕೊಡಿಸುವ ಸಿದ್ಧತೆ ಸಾಗಿದೆ. ಎಲ್ಲ ಸಚಿವರ ಮನೆ ಅಲಂಕಾರಕ್ಕೆ ಮತ್ತು ಹೊಸ ಕಾರು ಖರೀದಿಗೆ ಅರ್ಥ ಇಲಾಖೆ 24-25 ಕೋಟಿ ರೂಪಾಯಿ ಮೊತ್ತವನ್ನು ಮಂಜೂರು ಮಾಡಿದೆ ಎಂಬ ಸುದ್ದಿ ನಿಜಕ್ಕೂ ಆತಂಕಕಾರಿ.
ಸಾರ್ವಜನಿಕ ಉದ್ದೇಶಗಳಿಗೆ ಹಣ ಮಂಜೂರು ಮಾಡುವ ಸಂದರ್ಭಗಳಲ್ಲಿ ಬಜೆಟ್‍ನಲ್ಲಿ ಅದಕ್ಕೆ ಬೇಕಾದ ಹಣದ ಲಭ್ಯತೆ ಇಲ್ಲವೇ ಇಲ್ಲ ಎಂದು ರಾಗ ಎಳೆಯುವ ಅರ್ಥ ಇಲಾಖೆ, ಸಂಪುಟ ಸಚಿವರ ಹೊಸ ಕಾರಿನ ತೆವಲು ಪೂರೈಸುವುದಕ್ಕೆ, ಬಂಗಲೆಗಳ ಅಲಂಕಾರಕ್ಕೆ ಇಷ್ಟು ದೊಡ್ಡ ಮೊತ್ತದ ಬಿಡುಗಡೆಗೆ ಹಸಿರು ನಿಶಾನೆ ತೋರಿರುವುದು ಆತಂಕಕ್ಕೆ ಕಾರಣ. ರಾಜ್ಯದ ತೊಂಭತ್ತು ಭಾಗ ಬರದಡಿಯಲ್ಲಿ ಸಿಕ್ಕು ನರಳುತ್ತಿರುವ ಈ ಸಂಕಷ್ಟ ಸಮಯದಲ್ಲಿ ಹೊಸ ಕಾರಿನ ಹುಚ್ಚನ್ನು ತೆವಲು ಎನ್ನದೆ ಬೇರಿನ್ಯಾವ ಶಬ್ದ ಬಳಸಿ ಬಣ್ಣಿಸಬೇಕು…?
ಸಚಿವರಿಗೆ ಮಂಜೂರಾಗಿರುವ ಮನೆಗಳು ವರ್ಷಗಳಿಂದ ವಾಗತಿ ಕಾಣದ ಖಾಲಿ ಬಿದ್ದಿರುವ ಭೂತ ಬಂಗಲೆಗಳೇನೂ ಅಲ್ಲ. ಮೂರು ತಿಂಗಳ ಹಿಂದಿನವರೆಗೂ ಆ ಮನೆಗಳಲ್ಲಿ ವಾಸವಿದ್ದವರು ಹಿಂದಿನ ಬಿಜೆಪಿ ಸರ್ಕಾರದ ಸಚಿವರು, ಉಭಯ ಸದನಗಳ ಮುಖ್ಯ ಸಚೇತಕರು, ವಿಧಾನ ಸಭೆ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರು ಇತ್ಯಾದಿ. ಎರಡೂ ಸದನಗಳ ಅಧ್ಯಕ್ಷ, ಸಭಾಪತಿ. ಅವರು ಮನೆ ತೊರೆದರು ಎಂದ ಮಾತ್ರಕ್ಕೆ ಅಲ್ಲಿ ಹೊಸದಾಗಿ ಪ್ರವೇಶ ಪಡೆಯುವವರು ದುಂದುವೆಚ್ಚದಲ್ಲಿ ಮನೆ ಅಲಂಕಾರ ಮಾಡಬೇಕೆಂದೇನೂ ಇಲ್ಲ.
ಸಾಮಾನ್ಯವಾಗಿ ಸಚಿವರು ವಾಸವಿರುವ ಮನೆಗಳು ಹಾಳು ಬಿದ್ದಿರದೆ ಒಪ್ಪ ಓರಣವಾಗೇ ಇರುತ್ತವೆ. ಅಂಥ ಮನೆಗಳಿಗೂ ಮತ್ತೆ ಮತ್ತೆ ಸುಣ್ಣಬಣ್ಣ, ಇರುವ ಪೀಠೋಪಕರಣಗಳಿಗೆ ಬದಲಾಗಿ ಹೊಸದಾಗಿ ಕೊಂಡಿದ್ದು, ಕಿಟಕಿ ಬಾಗಿಲುಗಳಿಗೆ ಹೊಸ ಪರದೆ ಬೇಕೆನ್ನುವುದು ಬರಗಾಲದ ಬರ್ಬರ ತೀರ್ಮಾನ. ಓರಣವಾಗಿರುವ ಮನೆಗಳಿಗೆ ಮತ್ತೇಕೆ ಅಷ್ಟೆಲ್ಲ ವೆಚ್ಚದಲ್ಲಿ ಅಂದ ಅಲಂಕಾರ ಎಂದು ಕೇಳಿ ಹಣ ಇಲ್ಲ ಎಂದು ಫೈಲನ್ನು ಹಿಂದಕ್ಕೆ ಕಳಿಸಬೇಕಾದ ಅರ್ಥ ಇಲಾಖೆ ಕಣ್ಮುಚ್ಚಿಕೊಂಡು ಮಂಜೂರಾತಿ ನೀಡುವುದರ ಹಿಂದೆ ಸಾಮಾನ್ಯ ಪ್ರಜ್ಞೆ ಕೆಲಸ ಮಾಡಿದಂತೆ ಕಾಣಿಸುವುದಿಲ್ಲ.
ಕೆಲವು ವರ್ಷ ಹಿಂದೆ ಬಿಜೆಪಿ ಸರ್ಕಾರದಲ್ಲಿ ಎಸ್. ಸುರೇಶ್ ಕುಮಾರ್ ಸಚಿವರಾಗಿದ್ದಾಗಿನ ಮಾತು. ಅವರು ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳದೆ ತಮ್ಮ ಮತ ಕ್ಷೇತ್ರ ರಾಜಾಜಿ ನಗರದಲ್ಲಿರುವ ಸ್ವಂತ ಮನೆಯಲ್ಲೇ ವಾಸಿಸಲು ತೀರ್ಮಾನ ತೆಗೆದುಕೊಂಡರು. ಎರಡೋ ಮೂರೋ ತಿಂಗಳು ಅಥವಾ ಅದಕ್ಕೂ ತುಸು ಹೆಚ್ಚು ಸಮಯ ಆಗಿರಬಹುದು. ಅವರ ಮನೆಗೆ ಹೊಸ ಪೀಠೋಪಕರಣ ಪೂರೈಸಿ, ಕರ್ಟನ್‍ಗಳನ್ನು ಬದಲಿಸಿ, ಸುಣ್ಣಬಣ್ಣ ಮಾಡಿದ್ದಕ್ಕೆ ಇಷ್ಟು ವೆಚ್ಚವಾಗಿದೆ ಎಂದು ಬಿಲ್ ಸಲ್ಲಿಸಿದ ಸುದ್ದಿ ಅವರ ಗಮನಕ್ಕೆ ಬಂತು. ಅಚ್ಚರಿಯ ಸಂಗತಿ ಎಂದರೆ ಅವರ ಮನೆಗೆ ಯಾವ ಅಲಂಕಾರವೂ ಆಗಿರಲಿಲ್ಲ. ತಕ್ಷಣ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅವರು ಬರೆದ ಖಾರದ ಪತ್ರ ಸರ್ಕಾರದೊಳಗೆ ಅಧಿಕಾರಿಗಳು ನಡೆಸುವ ಕರಾಮತ್ತನ್ನು ಅನಾವರಣಗೊಳಿಸಿತ್ತು. ಎಲ್ಲರೂ ಸುರೇಶ ಕುಮಾರ್ ಆಗಿರುವುದು ಸಾಧ್ಯವಿಲ್ಲ. ಅವರಿಗೆಲ್ಲ ಹೊಸ ಕಾರು, ಹೊಸದರಂತೆ ಕಾಣಿಸುವ ಬಂಗಲೆ ಬೇಕೇಬೇಕು. ಅದಕ್ಕೆ ತಕ್ಕಂತೆ ಮಣಿಯುವ ಅರ್ಥ ಸಚಿವರು, ಅರ್ಥ ಇಲಾಖೆ ಕಾರ್ಯದರ್ಶಿ ಇದ್ದರೆ ಸುಗ್ಗಿಯೋ ಸುಗ್ಗಿ.
ಇನ್ನು, ಹೊಸ ಐಷಾರಾಮಿ ಕಾರುಗಳ ಖರೀದಿಗೆ ಒಪ್ಪಿಗೆ ನೀಡಿರುವ ಸಮಾಚಾರ. ಹೊಸ ಸಚಿವ ಸಂಪುಟ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹೊಸ ಮತ್ತು ಹೈಎಂಡ್ ಮಾಡೆಲ್ಲಿನ ಅತ್ಯಾಧುನಿಕ ಕಾರುಗಳಿಗೆ ಬೇಡಿಕೆ ಮಂಡನೆಯಾಗುವುದು ಆ ಪಕ್ಷ ಈ ಪಕ್ಷ ಎನ್ನದೆ ರಾಜಕಾರಣಿಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಮತ್ತು ಯಾವತ್ತಿಗೂ ಗುಣವಾಗದ ನಿರ್ಲಜ್ಜ ವ್ಯಾಧಿ. ಸಿದ್ದರಾಮಯ್ಯ ಸಂಪುಟದಲ್ಲಿ ಇರುವ ಸಚಿವರಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ನೂರಾರು ಕೋಟಿ ಒಡೆಯರೇ. ಅವರಲ್ಲಿ ಇಲ್ಲದ ಕಾರುಗಳು ಯಾವ ದೇಶದ ಮಾರುಕಟ್ಟೆಯಲ್ಲೂ ಇಲ್ಲ. ಹೀಗಿದ್ದೂ ಅವರಿಗೆ ಸರ್ಕಾರದ ವೆಚ್ಚದಲ್ಲಿ ಹೊಸ ಹೊಸ ಕಾರುಗಳೇ ಬೇಕು. ವ್ಯಸನ ಎಂದು ಕರೆಯುವುದು ಇದನ್ನೇ ಅಲ್ಲವೇ…?
ಇದನ್ನೂ ಓದಿ: ಮೊಗಸಾಲೆ ಅಂಕಣ: ಬರ ಮತ್ತು ಸಾಲ, ರೈತರ ಪಾಲಿನ ಶೂಲ
ಕರ್ನಾಟಕ ಕಂಡ ದಕ್ಷ ಶುದ್ಧ ಹಸ್ತದ ರಾಜಕಾರಣಿಗಳಲ್ಲಿ ಎಂ.ವೈ.ಘೋರ್ಪಡೆ ಒಬ್ಬರು. ದೇವರಾಜ ಅರಸು ಸಂಪುಟದಲ್ಲಿ ಅವರು ಅರ್ಥ ಸಚಿವರಾಗಿ ಕೆಲಸ ಮಾಡಿ ಹೆಸರು ಗಳಿಸಿದವರು. ಸೊಂಡೂರು ಅರಸೊತ್ತಿಗೆಯ ರಾಜಕುಮಾರ ಘೋರ್ಪಡೆ. ಆದರೆ ಅವರಲ್ಲಿ ರಾಜಸ್ತಿಕೆಯ ಸೋಂಕು ಇರಲಿಲ್ಲ. ಅರಸು ಸಂಪುಟದಲ್ಲಿ ಸಚಿವರಾಗಿದ್ದ ಕೆಲವರಿಗೆ ತಾವು ಓಡಾಡಲೆಂದು ಸರ್ಕಾರ ಕೊಟ್ಟ ಅಂಬಾಸಿಡರ್ ಕಾರು ಪುರಾತನವೆನಿಸಿ ಆ ಕಾಲಕ್ಕೆ ಅತ್ಯಾಧುನಿಕ ಎನಿಸಿದ್ದ ಕಾಂಟೆಸ್ಸಾ ಕಾರುಗಳಿಗೆ ಬೇಡಿಕೆ ಮಂಡಿಸಿದ್ದರು. ಕೆಲವರಂತೂ ಅಂಬಾಸಿಡರ್ ಕಾರಿನಲ್ಲಿ ದೂರ ದೂರ ಪ್ರಯಾಣ ಮಾಡಿದರೆ ಮೈಕೈ ವಿಶೇಷವಾಗಿ ಬೆನ್ನು ನೋವು ಖಚಿತ ಎಂದೂ ಅರಸು ಮನ ಕರಗಿಸುವ ಕೆತ್ತೆಬಾಜಿ ನಡೆಸಿದ್ದರು. ಅರಸು ಎಷ್ಟೆಂದರೂ ಅರಸು. ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳದೆ ಅರ್ಥ ಸಚಿವ ಘೋರ್ಪಡೆಯವರೊಂದಿಗೆ ಚರ್ಚೆ ನಡೆಸಿದರು. ಘೋರ್ಪಡೆಯವರು ಕಡ್ಡಿ ಮುರಿದಂತೆ ಹೊಸ ಕಾರಿಗೆ ಹಣ ವೆಚ್ಚ ಮಾಡಬೇಕಾಗಿಲ್ಲ, ಬಳಸಿರುವ ಕಾರುಗಳು ಸುಸ್ಥಿತಿಯಲ್ಲೇ ಇವೆ ಎಂದು ತಮ್ಮಲ್ಲಿದ್ದ ಮಾಹಿತಿಯನ್ನು ಹಂಚಿಕೊಂಡರು. ಅರಸು ಸಮ್ಮತಿಸಿದರು. ಹೊಸ ಕಾಂಟೆಸ್ಸಾ ಕಾರು ಬರಲಿಲ್ಲ ಎಂದಲ್ಲ, ಆ ಸಂದರ್ಭದಲ್ಲಿ ಬರಲಿಲ್ಲ. ಅಲ್ಲೀವರೆಗೆ ಅಂಬಾಸಿಡರ್ ಕಾರಿನಲ್ಲಿ ರಾಜ್ಯ ಸುತ್ತಿದ ಸಚಿವರಿಗೆ ಬೆನ್ನು ನೋವೂ ಬರಲಿಲ್ಲ!
ಇದು ಬರಗಾಲದ ಸಮಯ. ಪ್ರತಿಯೊಂದು ಬಿಲ್ಲೆಯನ್ನೂ ಬಡ ಅಸಹಾಯಕ ಜನರ ಸಂಕಷ್ಟದ ನಿವಾರಣೆಗೆ ವಿನಿಯೋಗಿಸುವ ಮನಸ್ಸನ್ನು ಸರ್ಕಾರ ಸಂಕಲ್ಪದ ರೀತಿಯಲ್ಲಿ ಮಾಡಬೇಕು. ಇಂಥ ವಿಚಾರಗಳಲ್ಲಿ ಸಿದ್ದರಾಮಯ್ಯನವರು ಗಟ್ಟಿ ನಿರ್ಧಾರ ತೆಗೆದುಕೊಂಡು ತಮ್ಮದೇ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಾಗೆ ಮಾಡದೆ ಕಾರುಬಾರಿಗೆ ಸಮ್ಮತಿ ಇತ್ತುದೇ ಹೌದಾದರೆ ಬಡವರ ಬಗೆಗೆ ಅವರು ಆಡುತ್ತಿರುವ ಮಾತು ನಾಟಕದ ಸಂಭಾಷಣೆಯಂತೆ ಜನರಿಗೆ ಕೇಳಿಸಿದರೆ ಅದರಲ್ಲಿ ಆಶ್ಚರ್ಯಪಡುವಂಥದು ಏನೂ ಇರುವುದಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸನಾತನ ಧರ್ಮ ಮತ್ತು ಸಿಎಂ ಕಾವೇರಿ ಗೃಹಪ್ರವೇಶ!
ಅಂಕಣ
Raja Marga Column : ಹೆಣ್ಮಕ್ಕಳು ಶಾಲೆಗೆ ಹೋಗೋದೇ ಕಷ್ಟ ಎಂಬ ಕಾಲದಲ್ಲೇ ಆಕೆ ಒಂದಲ್ಲ, ಎರಡು ನೊಬೆಲ್ ಗೆದ್ದರು!
Raja Marga Column : ನೀವು ನಂಬಲೇಬೇಕು. ಮೇರಿ ಕ್ಯೂರಿ ಅವರ ಒಂದೇ ಕುಟುಂಬಕ್ಕೆ ಐದು ನೊಬೆಲ್ ಪ್ರಶಸ್ತಿ ಬಂದಿದೆ. ಮೇರಿ ಕ್ಯೂರಿ ಒಬ್ಬರೇ ಎರಡು ನೊಬೆಲ್ ಗೆದ್ದರು, ಅದು ಬೇರೆ ಬೇರೆ ವಿಭಾಗಗಳಲ್ಲಿ! ಹೆಣ್ಣು ಮಕ್ಕಳಿಗೆ ಶಾಲೆಯೇ ಕನಸಾಗಿದ್ದಾಗ ಆಕೆ ಎರಡು ನೊಬೆಲ್ ಗೆದ್ದಿದ್ದಾರೆ ಎಂದರೆ ಆ ಹೆಣ್ಮಗಳ ಶಕ್ತಿ ಎಷ್ಟಿರಬೇಡ?
ದೇಶಕ್ಕೆ ಒಂದು ನೊಬೆಲ್ ಬಂದರೆ ನಾವು ಅದನ್ನೊಂದು ಮಹಾ ಹಬ್ಬದಂತೆ ಸಂಭ್ರಮಿಸುತ್ತೇವೆ! ಆದರೆ ಒಂದು ಕುಟುಂಬವು ಸಾಲು ಸಾಲಾಗಿ ಐದು ನೊಬೆಲ್ ಪ್ರಶಸ್ತಿಗಳನ್ನು (Five Nobel awards to a single Family) ಗೆದ್ದಿತು ಅಂದರೆ ಅದು ಅಳಿಸಲಾಗದ ದಾಖಲೆಯೇ (Raja Marga Column)!
ಆ ಕುಟುಂಬದ ಹಿರಿಯರಾದ ಮೇಡಂ ಮೇರಿ ಕ್ಯೂರಿ (Mary curie) 1903ರಲ್ಲಿ ಭೌತಶಾಸ್ತ್ರಕ್ಕೆ, 1911ರಲ್ಲಿ ರಸಾಯನ ಶಾಸ್ತ್ರಕ್ಕೆ ಒಟ್ಟು ಎರಡು ನೊಬೆಲ್ ಪ್ರಶಸ್ತಿಗಳನ್ನು ಗೆದ್ದರು. ಆ ಸಾಧನೆ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಮೇರಿ ಕ್ಯೂರಿ(Polish-French physicist and chemist)!
ಮುಂದೆ 1935ರಲ್ಲಿ ಅವರ ಹಿರಿಯ ಮಗಳಾದ ಐರೀನ್ ಮತ್ತು ಅಳಿಯ ಫ್ರೆಡ್ರಿಕ್ ಜೊಲಿಯೆಟ್ ಅವರು ರಸಾಯನ ಶಾಸ್ತ್ರದಲ್ಲಿ ನೊಬೆಲ್ ಗೆದ್ದರು. 1965ರಲ್ಲಿ ಮೇರಿ ಕ್ಯೂರಿಯ ಎರಡನೇ ಅಳಿಯ ಹೆನ್ರಿ ಲೇಬೌಸಿ ವಿಶ್ವಶಾಂತಿಯ ಮುಖ್ಯ ವಿಭಾಗದಲ್ಲಿ ನೊಬೆಲ್ ಗೆದ್ದಾಗ ಈ ಅಸಾಮಾನ್ಯ ದಾಖಲೆ ಸೃಷ್ಟಿ ಆಗಿತ್ತು! ಒಟ್ಟು ಐದು ನೊಬೆಲ್ ಪ್ರಶಸ್ತಿಗಳು ಒಂದೇ ಕುಟುಂಬಕ್ಕೆ ಎಂದರೆ ಮುಂದೆ ಕೂಡ ಈ ದಾಖಲೆ ಯಾರೂ ಮುರಿಯಲು ಸಾಧ್ಯವೇ ಇಲ್ಲ!
ಜಗತ್ತಿನಲ್ಲಿ ಈವರೆಗೆ ಕೇವಲ ಮೂವರು ಸಾಧಕರು ಮಾತ್ರ ಎರಡೆರಡು ನೊಬೆಲ್ ಗೆದ್ದವರು ಇದ್ದಾರೆ. ಅವರೆಂದರೆ ಮೇರಿ ಕ್ಯೂರಿ, ಜಾನ್ ಬಾರ್ಡಿನ್ (John Bardeen) ಮತ್ತು ಫ್ರೆಡ್ರಿಕ್ ಸ್ಯಾಂಗರ್ (Frederick Sanger). ಅದರಲ್ಲಿ ಎರಡೆರಡು ವಿಭಾಗಗಳಲ್ಲಿ ನೊಬೆಲ್ ಗೆದ್ದವರು ಮೇರಿ ಕ್ಯೂರಿ ಮಾತ್ರ!
ವಿದ್ಯಾರ್ಥಿ ಆಗಿದ್ದಾಗಲೇ ಏನನ್ನಾದರೂ ಸಂಶೋಧನೆಯನ್ನು ಮಾಡಬೇಕು ಎಂದು ಆಸೆಪಟ್ಟು ವಿಜ್ಞಾನವನ್ನು ಕಲಿತವರು ಮೇರಿ ಕ್ಯೂರಿ! ಆಕೆಯು ತಂದೆ ಪೋಲೆಂಡ್‌ನಲ್ಲಿ ಪ್ರೊಫೆಸರ್ ಆಗಿದ್ದವರು. ಆದರೆ, ಆ ದೇಶದಲ್ಲಿ ಹೆಣ್ಣು ಮಕ್ಕಳು ಆಗ ಕಾಲೇಜಿಗೆ ಹೋಗಲು ಅನುಮತಿ ಇರಲಿಲ್ಲ. ಆ ಕಾರಣ ಅವರು ದೇಶವನ್ನು ಬದಲಾಯಿಸಿ ಫ್ರಾನ್ಸಿಗೆ ಬಂದರು. ಅಲ್ಲಿ ಅವರಿಗೆ ನೂರಾರು ಅಪಮಾನಗಳು ಮತ್ತು ನಿರಾಸೆಗಳು ಎದುರಾದವು. ಆದರೆ ತನ್ನ ಸಂಕಲ್ಪ ಶಕ್ತಿಯ ಮೂಲಕ ಎಲ್ಲವನ್ನೂ ಗೆದ್ದವರು ಕ್ಯೂರಿ.
ಜೀವನಪೂರ್ತಿ ವಿದ್ಯಾರ್ಥಿ ಆಗಿ, ಸಂಶೋಧಕಿ ಆಗಿ, ಒಂದು ಸಂಸ್ಥೆಯ ನಿರ್ದೇಶಕಿ ಕೂಡ ಆಗಿ ಅವರು ಮಾಡಿದ್ದು ಸಂಶೋಧನೆ, ಸಂಶೋಧನೆ ಮತ್ತು ಸಂಶೋಧನೆ ಮಾತ್ರ! ಆಕೆ ವಿಶ್ರಾಂತಿ ಪಡೆದದ್ದು ಮರಣದ ನಂತರವೇ ಎಂದು ಹೇಳಬಹುದು!
ವಿಕಿರಣ ವಿಜ್ಞಾನ ಇಂದು ಭಾರೀ ಮುಂದುವರಿದ ಕ್ಷೇತ್ರ ಆಗಿದೆ. ಕೆಲವು ಭಾರವಾದ ಮೂಲ ವಸ್ತುಗಳು ಸ್ವಯಂ ಆಗಿ ಪ್ರಖರ ವಿಕಿರಣಗಳನ್ನು ಹೊರಸೂಸುತ್ತವೆ ಎಂದು ಜಗತ್ತಿಗೆ ಮೊದಲು ತೋರಿಸಿದವರು ಮೇರಿ ಕ್ಯೂರಿ. ಅದಕ್ಕೆ ಅವರೇ ವಿಕಿರಣಶೀಲತೆ (Radio activity) ಎಂದು ನಾಮಕರಣ ಮಾಡಿದರು. ಆಗ ಅವರಿಗೆ ಸಾಥ್ ಕೊಟ್ಟ ಇನ್ನೊಬ್ಬ ವಿಜ್ಞಾನಿ ಎಂದರೆ ಹೆನ್ರಿ ಬ್ಯಾಕ್ವಿರಲ್. ಮುಂದೆ ಅವರು ಕೂಡ ಮೇರಿ ಕ್ಯೂರಿ ಜೊತೆ ನೊಬೆಲ್ ಪ್ರಶಸ್ತಿ ಗೆದ್ದರು.
ಪಿಚ್ ಬ್ಲೆಂಡ್ ಎಂಬ ಅದಿರಿನಲ್ಲಿ ಸುಮಾರು 35 ಮೂಲ ವಸ್ತುಗಳಿವೆ. ಅವುಗಳಲ್ಲಿ ವಿಕಿರಣಶೀಲ ರೇಡಿಯಂ ಕೂಡ ಒಂದು. ಆದರೆ ಅದರ ಪ್ರಮಾಣ ತುಂಬಾ ತುಂಬಾ ಚಿಕ್ಕದು. ಎಂಟು ಟನ್ ಪಿಚ್ ಬ್ಲೆಂಡ್ ಅದಿರನ್ನು ಕರಗಿಸಿದಾಗ ನಮಗೆ ಅದರಲ್ಲಿ ಕೇವಲ ಒಂದು ಗ್ರಾಮನಷ್ಟು ರೇಡಿಯಂ ದೊರೆಯುತ್ತದೆ.
ಪಿಚ್ ಬ್ಲೆಂಡ್‌ನಿಂದ ರೇಡಿಯಂ ಲೋಹವನ್ನು ಸಂಶ್ಲೇಷಣೆ ಮಾಡುವುದು ಸುಲಭದ ಮಾತಲ್ಲ. ಅದು ಒಂದು ಮಹಾ ಯುದ್ಧವನ್ನು ಗೆದ್ದದ್ದಕ್ಕೆ ಸಮ! ಅದರ ಜೊತೆಗೆ ಅತ್ಯಂತ ಅಪಾಯಕಾರಿ ಕೂಡ ಹೌದು. ವಿಕಿರಣಗಳಿಗೆ ನಮ್ಮ ದೇಹ ಎಕ್ಸ್‌ಪೋಸ್ ಆದರೆ ಅದು ಮಾರಣಾಂತಿಕ! ಆದರೆ ಜಗತ್ತಿನ ಕ್ಷೇಮಕ್ಕೆ ಹೊರಟವರಿಗೆ ಆ ಅಪಾಯಗಳು ಯಾವ ಲೆಕ್ಕ ಹೇಳಿ?
ಹಾಗೆ ವರ್ಷಾನುಗಟ್ಟಲೆ ಹೋರಾಟ ಮಾಡಿ ರೇಡಿಯಮನ್ನು ಸಂಶೋಧನೆ ಮಾಡಿದ್ದು ಮೇರಿ ಕ್ಯೂರಿ! ಮುಂದೆ ಅವರು ಪೊಲೊನಿಯಮ್ ಎಂಬ ಇನ್ನೊಂದು ವಿಕಿರಣಶೀಲ ಧಾತು ಕೂಡ ಕಂಡು ಹಿಡಿದರು. ಅದನ್ನು ತನ್ನ ಹುಟ್ಟಿದ ದೇಶವಾದ ಪೋಲೆಂಡ್‌ಗೆ ಸಮರ್ಪಣೆ ಮಾಡಿದರು.
ಸಂಶೋಧನೆ ಅಪಾರವಾದರೂ ಪ್ರಚಾರದ ಹಂಗಿಲ್ಲ. ಅವರ ಸಂದರ್ಶನವನ್ನು ಬಯಸಿ ಬಂದ ವರದಿಗಾರನಿಗೆ ಅವರು ಸಂದರ್ಶನ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ – ವಿಜ್ಞಾನದಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಸಂಗತಿ ಮಾತ್ರ ಮುಖ್ಯ!
ಅವರು ರೇಡಿಯಂ ಸಂಶೋಧನೆ ಮಾಡಿದಾಗ ಅದನ್ನು ಪೇಟೆಂಟ್ ಮಾಡಲು ತುಂಬಾ ಜನರು ಒತ್ತಾಯಿಸಿದರು. ಆದರೆ ಮೇರಿ ಕ್ಯೂರಿ ಹೇಳಿದ್ದು ಒಂದೇ ಮಾತು – ವಿಜ್ಞಾನ ಎಲ್ಲರಿಗೂ ಸೇರಿದ್ದು! ಅದಕ್ಕೆ ಪೇಟೆಂಟ್ ಪಡೆಯಲಾರೆ.
ಹೀಗೆ ಮಾಡುವುದರಿಂದ ತುಂಬಾ ಶ್ರೀಮಂತರಾಗುವ ಅವಕಾಶವನ್ನು ಅವರೇ ನಿರಾಕರಿಸಿದರು. ತನ್ನ ವಿಜ್ಞಾನದ ಸಂಶೋಧನೆಯ ಮೂಲಕ ಬಂದ ರಾಶಿ ರಾಶಿ ದುಡ್ಡನ್ನು ಅವರು ತನ್ನ ಸ್ವಂತಕ್ಕೆ ಉಪಯೋಗವನ್ನು ಮಾಡದೆ ಕೇವಲ ಸಂಶೋಧನೆಗೆ ಬಳಸಿದರು.
ಮೊದಲನೇ ಮಹಾಯುದ್ದದ ಕಾಲದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಚಿಕಿತ್ಸೆ ನೀಡಲು ಅವರೇ ಮುಂದೆ ನಿಂತು ತನ್ನ ಸಂಶೋಧನೆಯನ್ನು ಬಳಸಿದರು. ಮೊದಲ ಮಹಾಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಮೇರಿ ಕ್ಯೂರಿ ತಾನು ಆವಿಷ್ಕಾರ ಮಾಡಿದ ಎಕ್ಸ್ ರೇ ಉಪಕರಣ ಹೊಂದಿದ್ದ ಆಂಬ್ಯುಲೆನ್ಸ್ ಘಟಕಗಳ ಮೂಲಕ ಸಾವಿರಾರು ಸೈನಿಕರ ಪ್ರಾಣಗಳನ್ನು ಉಳಿಸಿದರು.
ಮೇರಿ ಕ್ಯೂರಿ ಬಗ್ಗೆ ಬರೆಯುವಾಗ ಆಕೆಯ ಪ್ರೇರಣಾ ಶಕ್ತಿ ಅವರ ಗಂಡ ಪಿಯರಿ ಕ್ಯೂರಿ ಬಗ್ಗೆ ಒಂದೆರಡು ವಾಕ್ಯವನ್ನು ಬರೆಯಲೇ ಬೇಕು. ಅವರು ಕೂಡ ಸಂಶೋಧಕರು ಮತ್ತು ಪ್ರೊಫೆಸರ್ ಆಗಿದ್ದವರು. ಮೇರಿ ಕ್ಯೂರಿ ಮಾಡಿದ ಎಲ್ಲ ಸಂಶೋಧನೆಯ ಕೆಲಸಗಳಿಗೆ ಅತೀ ದೊಡ್ಡ ಬೆಂಬಲಿಗರು ಅಂದರೆ ಅವರೇ! ಆದರೆ ಕೇವಲ 47ನೆಯ ವಯಸ್ಸಿಗೆ ಪಿಯರಿ ರಸ್ತೆ ಅಪಘಾತದಲ್ಲಿ ಸಾವನ್ನು ಅಪ್ಪಿದಾಗ ಮೇರಿ ಕ್ಯೂರಿ ಒಬ್ಬಂಟಿ ಆಗಿಬಿಟ್ಟರು. ಮುಂದಿನ ಬದುಕು ಪೂರ್ತಿ ಅವರು ಅಂತರ್ಮುಖಿ ಆಗಿಯೇ ಕಳೆದರು.
ಕ್ಯೂರಿ ಅವರೇ ಸಂಶೋಧನೆ ಮಾಡಿದ ರೇಡಿಯಂ ಮತ್ತು ಪೊಲೊನಿಯಮ್ ವಿಕಿರಣಕ್ಕೆ ಒಡ್ಡಿಕೊಂಡ ಅವರ ದೇಹವು ಮುಂದೆ ಮಾರಣಾಂತಿಕ ಕಾಯಿಲೆಗಳಿಗೆ ಮನೆಯಾಯಿತು. ಅವರ ಅಂತ್ಯವು ಅತ್ಯಂತ ದಾರುಣವೇ ಆಗಿತ್ತು. ಆಗಲೇ ಅವರು ಸೆಲೆಬ್ರಿಟಿ ಆಗಿದ್ದ ಕಾರಣ ಅವರು ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಆಸ್ಪತ್ರೆಗಳಿಗೆ ಅಡ್ಮಿಟ್ ಆಗುತ್ತಿದ್ದರು. ಆಸ್ಪತ್ರೆಗಳಲ್ಲಿ ವರ್ಷಾನುಗಟ್ಟಲೆ ನರಳಿದರು. ಅತಿಯಾದ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು.
1934ರ ಜುಲೈ 4ರಂದು ಮೇರಿ ಕ್ಯೂರಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು. ಅವರು ಬದುಕಿದ್ದದ್ದು ಕೇವಲ 66 ವರ್ಷ. ಆದರೆ ಸಾಧನೆ ಮಾಡಿದ್ದು ಸಾವಿರ ವರ್ಷಗಳದ್ದು!
ಇದನ್ನೂ ಓದಿ: Raja Marga Column : ಅನಿರುದ್ಧ ರವಿಚಂದರ್: ಕೊಲವೆರಿಯಿಂದ ಕಾವಾಲಯ್ಯವರೆಗೆ ಅದೆಂಥಾ ಮ್ಯೂಸಿಕಲ್ ಜರ್ನಿ?
ತನ್ನ ಸಂಪೂರ್ಣ ಜೀವನವನ್ನು ಮಾನವೀಯತೆಗೆ ಮತ್ತು ವಿಜ್ಞಾನಕ್ಕೆ ಮುಡಿಪಾಗಿಟ್ಟ ಮಹಾ ವಿಜ್ಞಾನಿ ಒಬ್ಬರು ಅವರೇ ಸಂಶೋಧನೆ ಮಾಡಿದ ವಿಕಿರಣಗಳಿಗೆ ತನ್ನ ದೇಹವನ್ನು ಒಡ್ಡಿಕೊಂಡು ಪ್ರಾಣ ಕಳೆದುಕೊಂಡದ್ದು ನಮಗೆ ಕಣ್ಣೀರು ತರಿಸುವ ದುರಂತ! ಮೇರಿ ಕ್ಯೂರಿ ಅಜರಾಮರ ಮತ್ತು ಅನುಕರಣೀಯ!
ಅಂಕಣ
Raja Marga Column : ಅನಿರುದ್ಧ ರವಿಚಂದರ್: ಕೊಲವೆರಿಯಿಂದ ಕಾವಾಲಯ್ಯವರೆಗೆ ಅದೆಂಥಾ ಮ್ಯೂಸಿಕಲ್ ಜರ್ನಿ?
Raja Marga Column: ಜವಾನ್, ಜೈಲರ್, ವಿಕ್ರಂ….ಮೊದಲಾದ ಸೂಪರ್ ಹಿಟ್ ಸಿನಿಮಾಗಳ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಅವರ ಸಂಗೀತದ ಪವರ್ ಒಂದಾದರೆ ಸಿನಿಮಾ ನೋಡಿದ ಅದೆಷ್ಟೋ ದಿನಗಳವರೆಗೆ ಕಾಡುವ ಹಿನ್ನೆಲೆ ಸಂಗೀತದ ಪವರ್ ಬೇರೆಯೇ.. ವೈ ದಿಸ್ ಕೊಲವೆರಿಯಿಂದ ಆರಂಭವಾಗಿ ಕಾವಾಲಯ್ಯದವರೆಗೆ ಸಾಗಿಬಂದ ಸಂಗೀತ ಯಾತ್ರೆಯ ಕಥೆ ಇಲ್ಲಿದೆ.
ಕೇವಲ 33 ವರ್ಷ ಪ್ರಾಯದ ಈ ಸಂಗೀತ ನಿರ್ದೇಶಕ (Music Director) ಮುಟ್ಟಿದ್ದೆಲ್ಲವೂ ಚಿನ್ನ ಆಗ್ತಾ ಇದೆ!
ಇಡೀ ಸಿನೆಮಾ ಜಗತ್ತು ಇಂದು ಒಬ್ಬ ಸಂಗೀತ ನಿರ್ದೇಶಕನ ಮಹಾ ಪ್ರತಿಭೆಯ ಬಗ್ಗೆ ಮಾತಾಡುತ್ತಿದೆ.
ಜಾಗತಿಕ ಸಂಗೀತವನ್ನು ಆಪೋಶನ ಮಾಡಿಕೊಂಡ ಹಾಗೆ ದಾಪುಗಾಲು ಹಾಕಿಕೊಂಡು ಮುನ್ನಡೆಯುತ್ತಿದ್ದಾನೆ.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rehman) ಹೆಜ್ಜೆಗುರುತಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ ಹುಡುಗ ಇವನು.
ಕೇವಲ ಬಿಜಿಎಮ್ ಪವರ್ ಮೂಲಕ ಒಂದು ಸಿನಿಮಾವನ್ನು ಗೆಲ್ಲಿಸುವ ತಾಕತ್ತು ಇರುವ ಜಾದೂಗಾರ ಅವನು.
ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಜೈಲರ್, ಶಾರುಖ್ ಖಾನ್ ಅಭಿನಯದ ಜವಾನ್, ಕಮಲಹಾಸನ್ ಅಭಿನಯದ ವಿಕ್ರಂ, ವಿಜಯ್ ಅವರ ಕತ್ತಿ ಮತ್ತು ಬೀಸ್ಟ್, ಅಜಿತ್ ಅಭಿನಯದ ವೇದಾಲಂ …ಮೊದಲಾದ ಸಿನಿಮಾ ನೋಡಿದವರಿಗೆ ಅವರ ಮ್ಯೂಸಿಕ್ ಮತ್ತು ಬಿಜಿಎಂ ಪವರ್ (Back ground Music power) ಖಂಡಿತ ಗೊತ್ತಾಗಿರುತ್ತದೆ.
ಆತನೇ ಅನಿರುದ್ಧ್ ರವಿಚಂದರ್!
ಅನಿರುದ್ಧ್ ರವಿಚಂದರ್ (Anirudh Ravichander) ಹಿನ್ನೆಲೆ ಸಂಗೀತದ ಹೊಸ ಸೆನ್ಸೇಷನ್! ಈಗಾಗಲೇ ಯುವಜನತೆಯ ಹಾರ್ಟ್ ತ್ರೋಬ್ ಆಗಿರುವ ಮ್ಯೂಸಿಕಲ್ ಸ್ಟಾರ್! (Indian music composer, music producer and singer) ಮುಂದಿನ ಹತ್ತಾರು ವರ್ಷಗಳ ಕಾಲ ಹಿನ್ನೆಲೆ ಸಂಗೀತವನ್ನು ಖಚಿತವಾಗಿ ಆಳಲಿರುವ ಮ್ಯೂಸಿಕ್ ಲೆಜೆಂಡ್! ಒಂದು ಸಿನಿಮಾದ ಸಂಗೀತ ನಿರ್ದೇಶನಕ್ಕೆ ದಾಖಲೆಯ ಹತ್ತು ಕೋಟಿ ಸಂಭಾವನೆ ಪಡೆದು ರೆಹಮಾನ್ ದಾಖಲೆ ಮುರಿದ ಚಾಂಪಿಯನ್.
ಬಾಲ್ಯದಿಂದಲೂ ಸಂಗೀತವೇ ಉಸಿರು
1990ರ ಅಕ್ಟೋಬರ್ 16ರಂದು ಚೆನ್ನೈಯಲ್ಲಿ ಹುಟ್ಟಿದ ಅನಿರುದ್ಧ ಅವರ ತಂದೆ ರವಿ ರಾಘವೇಂದ್ರ ಅವರು ತಮಿಳು ಸಿನಿಮಾದ ಪ್ರಸಿದ್ಧ ನಟ. ತಾಯಿ ಲಕ್ಷ್ಮೀ ಅವರು ಪ್ರಸಿದ್ಧ ಭರತನೃತ್ಯ ಕಲಾವಿದೆ. ಅವರ ಕುಟುಂಬದಲ್ಲಿ ಯಾರೂ ಸಂಗೀತ ಕಲಾವಿದರು ಇರಲಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರ ಸೋದರ ಅಳಿಯ ಅನ್ನೋದು ಅನಿರುದ್ಧ ಅವರ ಇನ್ನೊಂದು ಚಹರೆ. ಬಾಲ್ಯದಿಂದಲೇ ಸಂಗೀತವನ್ನು ತುಂಬಾ ಪ್ರೀತಿ ಮಾಡುತ್ತಾ ಬೆಳೆದ ಅನಿರುದ್ಧ ತನ್ನ ಹತ್ತನೇ ವಯಸ್ಸಿನಲ್ಲಿ ಕೀಬೋರ್ಡ್ ನುಡಿಸುವುದನ್ನು ಕಲಿತಿದ್ದ. ಮುಂದೆ ಚೆನ್ನೈಯ ಲೋಯೋಲ ಕಾಲೇಜಿನಲ್ಲಿ ಬಿಕಾಂ ಕಲಿಯುತ್ತಿದ್ದ ಹೊತ್ತಿನಲ್ಲಿ ಒಂದು ಮ್ಯೂಸಿಕ್ ಬಾಂಡ್ ಕಟ್ಟಿಕೊಂಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಬಂದಿದ್ದ. ಆಗ ತನ್ನ ಕಸಿನ್ ಆದ ಮತ್ತು ರಜನಿಕಾಂತ್ ಮಗಳಾದ ಐಶ್ವರ್ಯಳ ಶಾರ್ಟ್ ಫಿಲಂಗಳಿಗೆ ಅನಿರುದ್ಧ ಸಂಗೀತ ಸಂಯೋಜನೆ ಮಾಡಿದ್ದ.
ಕೊಲವೆರಿ ಕೊಲವೆರಿ ಹಾಡು ಹುಟ್ಟಿದ್ದು ಹೀಗೆ!
ಡಿಗ್ರಿ ಕಲಿಯುತ್ತಿದ್ದ ಹೊತ್ತಿನಲ್ಲಿ ತಮಿಳಿನ ಸೂಪರ್ ಸ್ಟಾರ್ ಧನುಶ್ ಅವರ ಅಭಿನಯದ 3 ( ಥ್ರೀ) ಎಂಬ ಸಿನಿಮಾಕ್ಕೆ ಮ್ಯೂಸಿಕ್ ಸಂಯೋಜನೆ ಮಾಡುವ ಅವಕಾಶ. ಆ ಅವಕಾಶ ನೀಡಿದ್ದು ಕೂಡ ಅದೇ ಐಶ್ವರ್ಯ ಧನುಶ್.
ಸಿನಿಮಾ ಶೂಟಿಂಗ್ ಬಿಡುವಿನಲ್ಲಿ ಧನುಶ್ ಒಂದು ಖಾಲಿ ಕಾಗದ ತೆಗೆದುಕೊಂಡು ಒಂದಕ್ಕೊಂದು ಸಂಬಂಧವೇ ಇಲ್ಲದ ಕೆಲವು ತಮಿಳು ಮತ್ತು ಇಂಗ್ಲಿಷ್ ಶಬ್ದಗಳನ್ನು ಬರೆದು ‘ಇದಕ್ಕೊಂದು ಮ್ಯೂಸಿಕ್ ಕಂಪೋಸ್ ಮಾಡು ನೋಡುವ ‘ಎಂಬ ಸವಾಲು ಹಾಕಿದ್ದು ಇದೇ ಅನಿರುದ್ಧಗೆ.
ಕೇವಲ 10 ನಿಮಿಷಗಳ ಒಳಗೆ ಮ್ಯೂಸಿಕ್ ಸಂಯೋಜನೆ ಆಗಿ ಆ ಹಾಡು ಧನುಶ್ ಅವರ ಧ್ವನಿಯಲ್ಲಿ ರೆಕಾರ್ಡ್ ಆಗಿ 2011ರಲ್ಲಿ ಯೂ ಟ್ಯೂಬ್ ವೇದಿಕೆಯಲ್ಲಿ ಮೊದಲು ಬಿಡುಗಡೆ ಆಯಿತು. ಆ ಹಾಡು ‘ವೈ ದಿಸ್ ಕೊಲವೆರಿ, ಕೊಲವೆರಿ ಕೊಲವೆರಿಡಿ’ ಎಷ್ಟು ಹಿಟ್ ಆಯ್ತು ಎಂದು ನಮಗೆಲ್ಲ ಗೊತ್ತಿದೆ. ಇಡೀ ಜಗತ್ತಿನ ಗಮನ ಸೆಳೆದ ಹಾಡದು. ಯು ಟ್ಯೂಬ್ ವೇದಿಕೆಯಲ್ಲಿ ಈವರೆಗೆ 400 ಮಿಲಿಯನ್ ವ್ಯೂಸ್ ಪಡೆದು ದಾಖಲೆ ಮಾಡಿದ ಈ ಹಾಡಿಗೆ ಯೂ ಟ್ಯೂಬ್ ಚಿನ್ನದ ಪದಕ ನೀಡಿ ಗೌರವಿಸಿತು. ಆಗ ಅನಿರುದ್ಧ ಅವರ ವಯಸ್ಸು ಕೇವಲ 20!
ಲಂಡನ್ ಟ್ರಿನಿಟಿ ಶಾಲೆಗೆ ಹೋಗಿ ಪಿಯಾನೋ ಕಲಿತರು
ಬಾಲ್ಯದಲ್ಲಿಯೇ ಆತನ ಸಂಗೀತ ಪ್ರತಿಭೆಯನ್ನು ಗುರುತಿಸಿದ ಹೆತ್ತವರು ಆತನನ್ನು ಸಂಗೀತ ಕಲಿಯಲು ಲಂಡನ್ ನಗರದ ಟ್ರಿನಿಟಿ ಮ್ಯೂಸಿಕ್ ಕಾಲೇಜಿಗೆ ಕಳುಹಿಸಿದರು. ಅಲ್ಲಿ ಎರಡು ವರ್ಷಗಳ ಕಾಲ ಪಿಯಾನೋ ಕಲಿತು ಹಿಂದೆ ಬಂದ ಅನಿರುದ್ಧ ಬಾಲ್ಯದಿಂದಲೇ ಕರ್ನಾಟಕ ಸಂಗೀತವನ್ನು ಕಲಿತಿದ್ದ. ಕೀ ಬೋರ್ಡ್ ವೇಗವಾಗಿ ನುಡಿಸುತ್ತಿದ್ದ.
ತನ್ನ ಸೋದರ ಮಾವ ರಜನೀಕಾಂತ್ ಅವರ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳದೆ ತನ್ನ ಸ್ವಂತ ಪ್ರತಿಭೆಯ ಮೂಲಕ ಬೆಳೆಯಬೇಕು ಎಂದು ಆತನ ಆಸೆ. ಭಾರತಕ್ಕೆ ಬಂದ ನಂತರ ಮುಂದಿನ 10 ವರ್ಷಗಳಲ್ಲಿ ಆತ ಸಂಗೀತ ನಿರ್ದೇಶಕ, ಹಿನ್ನೆಲೆ ಸಂಗೀತ ಸಂಯೋಜಕ, ಗಾಯಕನಾಗಿ ಬೆಳೆದ ರೀತಿಗೆ ನಾನಂತೂ ಬೆರಗಾಗಿದ್ದೇನೆ.
ಆರಂಭದಲ್ಲಿ ನನಗೆ ಹಾಡಲು ಬರುವುದಿಲ್ಲ ಎಂದು ಹೇಳುತ್ತ ಬಂದಿದ್ದ ಅನಿರುದ್ಧ ‘ ಕನವೇ ಕನವೆ’ ತಮಿಳು ಹಾಡನ್ನು ಮೊದಲು ಹಾಡಿ ತನ್ನ ಹಾಡುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಸಿನಿಮಾದ ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳನ್ನು ಬರೆಸಿ ಅದನ್ನು ನಂತರ ಅತ್ಯಂತ ಸುಂದರವಾಗಿ ಕಂಪೋಸ್ ಮಾಡುವ ಆತನ ಪ್ರತಿಭೆಗೆ ಇಂದು ಇಡೀ ಸಂಗೀತ ಜಗತ್ತು ಶರಣಾಗಿದೆ. ಅಷ್ಟೇ ಅದ್ಭುತವಾಗಿ ಹಿನ್ನೆಲೆಯ ಸಂಗೀತವನ್ನು ತನ್ನ ಅದ್ಭುತ ಬಿಜಿಎಂ ಮೂಲಕ ಸಿಂಗರಿಸುವ ಅನಿರುದ್ಧ ಪ್ರತಿಭೆಗೆ ಇಂದು ಅವರೇ ಉಪಮೆ ಆಗಿದ್ದಾರೆ.
ದಕ್ಷಿಣ ಭಾರತದ ಮಹಾನ್ ಸಂಗೀತ ನಿರ್ದೇಶಕರಾದ ಇಳಯರಾಜ, ರೆಹಮಾನ್, ಕೀರವಾಣಿ, ಹ್ಯಾರಿಸ್ ಜಯರಾಜ್ ಅವರನ್ನು ಎಲ್ಲಿಯೂ ಅನುಕರಣೆ ಮಾಡದೇ ತನ್ನದೇ ಶೈಲಿಯನ್ನು ಬೆಳೆಸಿಕೊಂಡಿರುವ ಅನಿರುದ್ಧ ಮಹಾನ್ ಸ್ಟಾರ್ ನಟರಾದ ಅಜಿತ್ ಕುಮಾರ್, ವಿಜಯ್, ಜ್ಯು.ಎನ್ ಟಿ ಆರ್, ಕಮಹಾಸನ್, ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಿನೆಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಗೆದ್ದಿದ್ದಾರೆ.
ಅಜಿತ್ ಅವರ ವೇದಾಲಂ, ವಿಜಯ್ ಅವರ ಕತ್ತಿ ಮತ್ತು ಬೀಸ್ಟ್, ಕಮಲಹಾಸನ್ ಅವರ ವಿಕ್ರಂ, ರಜನೀಕಾಂತ್ ಅವರ ಪೆಟ್ಟ ಮತ್ತು ಜೈಲರ್ ಸೂಪರ್ ಹಿಟ್ ಸಿನಿಮಾಗಳ ಯಶಸ್ಸಿಗೆ ಅವರು ಪ್ರಮುಖ ಕಾರಣ ಆಗಿದ್ದಾರೆ. ಅದೇ ರೀತಿ ಜೆರ್ಸಿ, ರೆಮೋ, ಮಾಸ್ಟರ್, ಮಾಸ್, ಯು ಟರ್ನ್, ವಿವೇಗಮ್….ಮೊದಲಾದ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳನ್ನು ತನ್ನ ಸಂಗೀತದ ಮಾಂತ್ರಿಕ ಸ್ಪರ್ಶದ ಮೂಲಕ ಗೆಲ್ಲಿಸಿದ್ದಾರೆ.
ರೆಹಮಾನ್ ಜೊತೆ ಹೋಲಿಕೆ
ಅನಿರುದ್ಧ ಅವರ ವಯಸ್ಸು ಈಗ 33. ಅವರನ್ನು ಮ್ಯೂಸಿಕ್ ಲೆಜೆಂಡ್ ರೆಹಮಾನ್ ಜೊತೆ ಹಲವು ಮಂದಿ ಹೋಲಿಕೆ ಮಾಡಲು ಹೊರಟಾಗ ಅದನ್ನು ಸ್ವತಃ ಅನಿರುದ್ಧ ಖಂಡಿಸಿದ್ದಾರೆ. ‘ನಾನು ಬಾಲ್ಯದಿಂದಲೂ ಅವರ ಮ್ಯೂಸಿಕ್ ಕೇಳುತ್ತಾ ಬೆಳೆದವನು. ನನ್ನ ಕಾಲೇಜಿನ ಮ್ಯೂಸಿಕ್ ಬ್ಯಾಂಡ್ ಮೂಲಕ ರಿಯಾಲಿಟಿ ಶೋಗಳಲ್ಲಿ ಒಮ್ಮೆ ಭಾಗವಹಿಸಿದಾಗ ಸ್ವತಃ ರೆಹಮಾನ್ ಸರ್ ಅದಕ್ಕೆ ಜಜ್ ಆಗಿದ್ದರು. ಅವರ ಕೈಯಿಂದ ಪ್ರಥಮ ಬಹುಮಾನ ಪಡೆದ ರೋಮಾಂಚನ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ನಾನಿನ್ನೂ ಸಂಗೀತದಲ್ಲಿ ತುಂಬಾ ಸಾಧನೆ ಮಾಡಲು ಬಾಕಿ ಇದೆ. ನನ್ನನ್ನು ರೆಹಮಾನ್ ಸರ್ ಜೊತೆಗೆ ದಯವಿಟ್ಟು ಹೋಲಿಕೆ ಮಾಡಬೇಡಿ’ ಎಂದು ಅನಿರುದ್ಧ ವಿನಂತಿ ಮಾಡಿಕೊಂಡಿದ್ದಾರೆ. ರೆಹಮಾನ್ ಮತ್ತು ಇಳಯರಾಜ ಇಬ್ಬರೂ ಅನಿರುದ್ಧ ಅವರ ಸಾಧನೆಯನ್ನು ಭಾರೀ ಕೊಂಡಾಡಿದ್ದಾರೆ.
ಇತ್ತೀಚೆಗೆ ಎಂ ಶ್ಯಾಮಕುಮಾರ್ ಎಂಬ ನಿರ್ಮಾಪಕ ತನ್ನ ಅದ್ಧೂರಿ ಬಜೆಟಿನ ಹೊಸ ಸಿನಿಮಾಕ್ಕೆ ಅನಿರುದ್ಧ ಅವರನ್ನು ಹೀರೋ ಆಗಿ ಅಭಿನಯಿಸಲು ಆಫರ್ ನೀಡಿದಾಗ ಅದನ್ನು ನಯವಾಗಿ ನಿರಾಕರಣೆ ಮಾಡಿ ಅದು ನನ್ನ ಫೀಲ್ಡ್ ಅಲ್ಲ ಅಂತ ಹೇಳಿದ್ದಾರೆ.
ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ದೈತ್ಯ ಅನಿರುದ್ಧ
ತನ್ನ ಅತ್ಯಾಧುನಿಕ ಕೀ ಬೋರ್ಡ್ ಮೇಲೆ ತನ್ನ ಉದ್ದವಾದ ಬೆರಳುಗಳನ್ನು ಮೀಟುತ್ತ ಅವರು ಹುಟ್ಟುಹಾಕುವ ಮಿಂಚು ಹರಿಸುವ ಬಿಜಿಎಂಗಳು ಎಷ್ಟೋ ಬಾರಿ ಸಿನಿಮಾ ಥಿಯೇಟರನ್ನು ಅಲ್ಲಾಡಿಸಿ ಬಿಡುತ್ತವೆ. ವಿಕ್ರಂ, ಜೈಲರ್, ಜವಾನ್, ಕತ್ತಿ, ಬೀಸ್ಟ್, ವೇದಾಲಂ ಮೊದಲಾದ ಸಿನೆಮಾಗಳನ್ನು ನಾವು ನೋಡಿದಾಗ ಅಲ್ಲಿ ಅದ್ಭುತವಾದ ಫೀಲ್ ಮೂಡಿಸುವ ಪವರ್ ಅನಿರುದ್ಧ ಅವರ BGMಗೆ ಇದೆ.
ಹಿಂದಿ ಜವಾನ್ ಸಿನೆಮಾವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನೂರಾರು ಅದ್ಭುತವಾದ BGM ಗಳು ನಾವು ಸಿನಿಮಾ ನೋಡಿ ಹೊರಬಂದ ಎಷ್ಟೋ ಹೊತ್ತು ನಮ್ಮ ಮೈಂಡಲ್ಲಿ ರಿಜಿಸ್ಟರ್ ಆಗಿರುತ್ತವೆ. ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಪ್ರವೇಶಕ್ಕೆ ಅನಿರುದ್ಧ ಕೊಟ್ಟ BGM ಅದು ಕ್ಲಾಸಿಕ್! ಕ್ರಿಕೆಟ್ ದೇವರು ಸಚಿನ್ ಅವರಿಗಾಗಿ ಅನಿರುದ್ಧ ಕಂಪೋಸ್ ಮಾಡಿದ ‘ಸಚಿನ್ ಆಂಥೆಮ್ ‘ ಹಾಡು ಭಾರಿ ಹಿಟ್ ಆಗಿತ್ತು.
ಅಷ್ಟೇ ಅದ್ಭುತವಾಗಿ ಅವರು ಕಂಪೋಸ್ ಮಾಡಿದ ಅದ್ಭುತ ಹಾಡುಗಳಾದ ಕಾವಾಲಯ್ಯ (ಜೈಲರ್), ಝಿಂದ ಬಂದ (ಜವಾನ್), ಹುಕುಂ (ಜೈಲರ್), ನಾ ರೆಡಿ (ಲಿಯೋ), ಸೆಲ್ಫಿ ಪುಳ್ಳ (ಕತ್ತಿ) ಸೂಪರ್ ಹಿಟ್ ಆಗಿವೆ. ಜವಾನ್ ಸಿನಿಮಾದ ಸಂಗೀತಕ್ಕೆ ಅನಿರುದ್ಧ 10 ಕೋಟಿ ಸಂಭಾವನೆ ಪಡೆದದ್ದು ಭಾರತೀಯ ಸಿನಿಮಾದ ದಾಖಲೆ.
ಮುಂದಿನ ಐದು ವರ್ಷ ಅವರಿಗೆ ಬಿಡುವಿಲ್ಲ
ಮುಂದೆ ಬರಲಿರುವ ಮೆಗಾ ಸಿನಿಮಾಗಳಾದ ಇಂಡಿಯನ್ 2, ವಿಕ್ರಂ 2 (ಕಮಲಹಾಸನ್), ಲಿಯೋ (ವಿಜಯ್), ದೇವರ (ಜ್ಯೂನಿಯರ್ ಎನ್ಟಿಆರ್), ತಲೈವರ್ 170 (ರಜನೀಕಾಂತ್), ವಿದಾ ಮ್ಯುರ್ಚಿ (ಅಜಿತ್), VD 12 (ವಿಜಯ ದೇವರಕೊಂಡ) ಇವೆಲ್ಲವೂ ಶತಕೋಟಿ ಬಜೆಟ್ ಸಿನಿಮಾಗಳು ಆಗಿದ್ದು ಅವುಗಳಿಗೆ ಮ್ಯೂಸಿಕ್ ಇದೇ ಅನಿರುದ್ಧ ನೀಡುತ್ತಿದ್ದಾರೆ.
ಇದನ್ನೂ ಓದಿ: Raja Marga Column : ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ಚರ್ಚಿಲ್ ಕಣ್ಣಲ್ಲಿ ಭಯ ಕುಣಿಯುತ್ತಿತ್ತು!
ಇದುವರೆಗೆ 3 ಫಿಲ್ಮ್ ಫೇರ್ ಪ್ರಶಸ್ತಿಗಳು, 9 ಸೈಮಾ ಪ್ರಶಸ್ತಿಗಳು, 6 ಎಡಿಸನ್ ಪ್ರಶಸ್ತಿಗಳು ಸೇರಿ 38 ಪ್ರಮುಖ ಪ್ರಶಸ್ತಿಗಳನ್ನು ಪಡೆದು ಅನಿರುದ್ದ ದಾಖಲೆ ಮಾಡಿದ್ದಾರೆ. ಒಟ್ಟಿನಲ್ಲಿ ಅನಿರುದ್ಧ ಭಾರತೀಯ ಸಿನೆಮಾ ಸಂಗೀತದ ನೂತನ ದೊರೆ ಅನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ.
ಅಂಕಣ
Raja Marga Column : ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ಚರ್ಚಿಲ್ ಕಣ್ಣಲ್ಲಿ ಭಯ ಕುಣಿಯುತ್ತಿತ್ತು!
Raja Marga Column : ಅಂದು ಇಬ್ಬರು ಜಾಗತಿಕ ಮಟ್ಟದ ನಾಯಕರು ಒಂದೆಡೆ ಕುಳಿತು ಯಾರ ಬಗ್ಗೆ ಮಾತಾಡುತ್ತಿದ್ದರು ಗೊತ್ತೇ? ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ದ್ವನಿ ನಡುಗಿದ್ದು ಯಾಕೆ? ನೇತಾಜಿ ಸುಭಾಷ್ ಬಗ್ಗೆ ಆಗಿನ ಬ್ರಿಟನ್ ಪ್ರಧಾನಿ ಚರ್ಚಿಲ್ ಹೇಳಿದ ಮಾತುಗಳೇನು? ಇಲ್ಲಿ ಓದಿ.
ಅದು 1943ರ ಇಸವಿ ಆಗಸ್ಟ್ ತಿಂಗಳ ಒಂದು ದಿನ. ಆಗ ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಸೇರಿದ್ದರು!
ಒಬ್ಬರು ಸೂರ್ಯ ಮುಳುಗದ ಸಾಮ್ರಾಜ್ಯ ಇಂಗ್ಲೆಂಡ್‌ನ ಪ್ರಧಾನಿ (England Prime Minister) ವಿನ್‌ಸ್ಟನ್ ಚರ್ಚಿಲ್! (Winston Churchil)
ಇನ್ನೊಬ್ಬರು ಅಮೆರಿಕಾದ ಆಗಿನ ಜನಪ್ರಿಯ ಅಧ್ಯಕ್ಷರಾದ (American President) ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್! (Franklin Delano Roosevelt)
ಒಂದು ಇಡೀ ದಿನದಲ್ಲಿ ಇಬ್ಬರೂ ಸೇರಿ ಒಬ್ಬ ಭಾರತೀಯ ನಾಯಕನ ಬಗ್ಗೆ ಮಾತಾಡಿದ್ದರು. ಅವರಿಬ್ಬರೂ ಆಗಿನ ಕಾಲದ ಮಹಾ ಮುತ್ಸದ್ದಿಗಳು ಎಂದು ಕರೆಸಿಕೊಂಡವರು!
ಬ್ರಿಟನ್ ಪ್ರಧಾನಿ ಚರ್ಚಿಲ್ ಧ್ವನಿಯಲ್ಲಿ ಆಗ ಆತಂಕ ಎದ್ದು ಕಾಣುತ್ತಿತ್ತು! ಭಾರತದ ಮೇಲೆ ಬ್ರಿಟನ್ ತನ್ನ ಹಿಡಿತವನ್ನು ಕಳೆದುಕೊಳ್ಳುವ ಭೀತಿಯು ಅವರ ಮುಖದಲ್ಲಿ ಆಗ ಎದ್ದು ಕಾಣುತ್ತಿತ್ತು.
ಅವರಿಬ್ಬರೂ ಆ ದಿನ ಪೂರ್ತಿ ಮಾತಾಡುತ್ತಿದ್ದದ್ದು ಭಾರತದ ಸ್ವಾತಂತ್ರ್ಯದ ಕಿಡಿ (Raja Marga Column) ಎಂದು ಎಲ್ಲರಿಂದ ಕರೆಸಿಕೊಂಡ ನೇತಾಜಿ ಸುಭಾಸಚಂದ್ರ ಬೋಸರ ಬಗ್ಗೆ!(Netaji subhash chandra bose)
ಬ್ರಿಟನ್ ಪ್ರಧಾನಿ ಚರ್ಚಿಲ್ ನೇತಾಜಿಯವರ ಬಗ್ಗೆ ಹೇಳುತ್ತಾ ಹೋದ ಮಾತುಗಳನ್ನು ಕೇಳಿ….
ಆ ಮನುಷ್ಯ ಅತ್ಯಂತ ಅಪಾಯಕಾರಿ. ಆತನನ್ನು ಯಾರೂ ಯಾಮಾರಿಸಲು ಸಾಧ್ಯವೇ ಇಲ್ಲ! ಅವನ ಮೈಯ್ಯಲ್ಲಿ ಸೈತಾನ ಹೊಕ್ಕಿದ್ದಾನೆ. ಅವನೊಬ್ಬ ಸಂಹಾರಕ ವ್ಯಕ್ತಿ ಮತ್ತು ಉದ್ರೇಕಕಾರಿ ಶಕ್ತಿ. ಅವನು ನಮ್ಮ ಇಂಗ್ಲೆಂಡಿಗೆ ಬಂದು ಐಸಿಎಸ್ ಪರೀಕ್ಷೆ ಮಾಡಿ ಹೋಗಿದ್ದಾನೆ! ನಾಲ್ಕನೇ ರ‍್ಯಾಂಕ್ ಕೂಡ ಪಡೆದಿದ್ದಾನೆ. ಆದರೆ ನಮ್ಮ ಸರಕಾರದಲ್ಲಿ ನೌಕರಿ ಮಾಡಲು ಅವನು ತಯಾರಿಲ್ಲ ಎಂದು ಎದ್ದು ಹೋಗಿದ್ದಾನೆ.
ಇಡೀ ಭಾರತದ ಯುವಕರು ಇಂದು ಅವನ ಜೊತೆ ಇದ್ದಾರೆ. ಭಾರತದ ಎಲ್ಲರ ಹೃದಯದಲ್ಲಿ ಅವನು ಸ್ವಾತಂತ್ರ್ಯದ ಕಿಡಿ ಹಚ್ಚಿದ್ದಾನೆ. ಭಾರತೀಯ ಯುವಕರು ಅವನನ್ನು ಮುಂದಿನ ಪ್ರಧಾನಿ ಎಂಬಂತೆ ನೋಡುತ್ತಿದ್ದಾರೆ!
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವನು ಸ್ಪರ್ಧಿಸಿ ಗಾಂಧೀಜಿ ಅವರ ಅಭ್ಯರ್ಥಿಯನ್ನು ಸೋಲಿಸಿದ್ದಾನೆ! 1930ರ ಜನವರಿ 26ರಂದು ಕಾಂಗ್ರೆಸ್ ಪಕ್ಷವು ಅವನ ಪ್ರೇರಣೆಯಿಂದ ‘ಸಂಪೂರ್ಣ ಸ್ವರಾಜ್ ದಿನ’ವನ್ನು ಆಚರಣೆ ಮಾಡಿದೆ! ಆತನು ಭಾರೀ ಧೈರ್ಯಶಾಲಿ. ತಕಲಿ ನೂಲುವುದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿಗೆ ಪದೇಪದೆ ಅವನು ಸವಾಲು ಹಾಕುತ್ತಾನೆ! ಬಂದೂಕಿನ ಮೊನೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದಾನೆ! ಎಲ್ಲ ಕಡೆ ಅದನ್ನೇ ಹೇಳುತ್ತಾನೆ. ಅವನಿಗೆ ಶಾಂತಿ ಮಂತ್ರದ ಮೇಲೆ ನಂಬಿಕೆ ಇಲ್ಲ.
ನಮ್ಮ ವೈಸರಾಯ್ ಅವನನ್ನು 11 ಬಾರಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ! ಆದರೂ ಅವನು ಬುದ್ಧಿಯನ್ನೇ ಕಲಿಯದ ಮಹತ್ವಾಕಾಂಕ್ಷಿ!
ತನ್ನ ಕಲ್ಕತ್ತಾದ ಮನೆಯ ಗೃಹ ಬಂಧನದಿಂದ ಅವನು ನಮ್ಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ! ಜರ್ಮನಿ ಮತ್ತು ಇಟೆಲಿಗೆ ಹೋಗಿ ಹಿಟ್ಲರ್ ಮತ್ತು ಮುಸೊಲಿನಿಯ ಗೆಳೆತನ ಮಾಡಿ ಬಂದಿದ್ದಾನೆ. ಹಿಟ್ಲರ್ ಅವನ ಬಗ್ಗೆ ಭಾರೀ ಮೆಚ್ಚುಗೆ ಮಾತು ಹೇಳಿದನಂತೆ! ಮಹಾ ಗಟ್ಟಿತನ ಅವನದ್ದು.
ಸಬ್ ಮೆರೀನ್‌ನಲ್ಲಿ 90 ದಿನಗಳ ಕಾಲ ಪ್ರಯಾಣ ಮಾಡಿ ಜಪಾನ್ ತಲುಪಿದ್ದಾನೆ. ಅಲ್ಲಿ ಎರಡನೇ ಮಹಾಯುದ್ಧಕ್ಕೆ ಹೋಗಿದ್ದ ಬ್ರಿಟಿಷ್ ಇಂಡಿಯಾ ಸೈನ್ಯದ 45,000 ಸೈನಿಕರ ಜೊತೆಗೆ ಮಾತಾಡಿದ್ದಾನೆ! ಅದರಲ್ಲಿ 25,000 ಸೈನಿಕರನ್ನು ಜಪಾನ್ ಸರಕಾರವು ಭಾರತದ ನೆರವಿಗೆ ಕಳುಹಿಸಲು ಒಪ್ಪಿ ಆಗಿದೆ! ಎಂತಹ ಚಾಣಾಕ್ಷ ಅವನು!
ಜಪಾನ್ ಸರಕಾರವು ಅವನಿಗೆ ವೈಮಾನಿಕ ದಳ, ಮದ್ದು ಗುಂಡು ಎಲ್ಲವನ್ನೂ ಕೊಡಲು ಒಪ್ಪಿದೆ ಎನ್ನುವ ಸುದ್ದಿ ಬಂದಿದೆ. ಅದೇನೋ ‘ಆಜಾದ್ ಹಿಂದ್ ಫೌಜ್’ ಎಂಬ ಸೈನ್ಯವನ್ನು ಕಟ್ಟಿದ್ದಾನಂತೆ! ಸೈನಿಕರಿಗೆ ಆಧುನಿಕ ಶಸ್ತ್ರಗಳ ಬಗ್ಗೆ ತರಬೇತು ಕೊಡುತ್ತಿದ್ದಾನೆ ಎಂಬ ಸುದ್ದಿ ಬಂದಿದೆ.
‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದೆಲ್ಲ ಉರಿ ಚೆಂಡಿನ ಭಾಷಣ ಮಾಡುತ್ತಾನೆ. ಪ್ರತೀ ವಾಕ್ಯದ ಕೊನೆಗೆ ಜೈ ಹಿಂದ್ ಘೋಷಣೆ ಕೂಗುತ್ತಾನೆ! ಸಾವಿರ ಸಾವಿರ ಸೈನಿಕರು ಅವನನ್ನು ದೇವರ ಹಾಗೆ ನೋಡುತ್ತಾರೆ.
‘ಆಜಾದ್ ಹಿಂದ್ ಫೌಜ್’ ಭಾರತಕ್ಕೆ ಹೊರಟಿತು ಎಂದರೆ ನಮ್ಮ ಶತ್ರು ದೇಶಗಳೆಲ್ಲ ಅವನ ನೆರವಿಗೆ ನಿಲ್ಲುತ್ತವೆ! ಅದೇನೋ ‘ಚಲೋ ದಿಲ್ಲಿ’ ಎಂಬ ಘೋಷಣೆಯನ್ನು ತನ್ನ ಸೈನಿಕರಿಗೆ ಕೊಟ್ಟಿದ್ದಾನೆ. ಈ ಯುವಕ ಖಂಡಿತವಾಗಿ ನಮ್ಮ ನಿದ್ದೆ ಕೆಡಿಸಿದ್ದಾನೆ.
ನಮ್ಮದೇ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈಗ ಅವರು ನಮ್ಮ ವಿರುದ್ಧ ನಿಲ್ಲುತ್ತಾರೆ! ನಮ್ಮ ವಿರುದ್ಧ ದಂಗೆ ಏಳುತ್ತಾರೆ. ಅಲ್ಲಿಗೆ ನಾವು ಭಾರತದ ಮೇಲೆ ನಮ್ಮ ಬಿಗಿ ಹಿಡಿತವ ಕಳೆದುಕೊಳ್ಳುವುದು ಖಂಡಿತ! ಇದುವರೆಗೆ ನಾವು ಭಾರತದಲ್ಲಿ ಯಾರ ಬಗ್ಗೆ ಕೂಡ ಇಷ್ಟೊಂದು ಆತಂಕ ಪಟ್ಟಿರಲಿಲ್ಲ! ಇವನೊಬ್ಬ ಎಲ್ಲಿಂದ ಬಂದನೋ ಸೈತಾನ?
ಹೀಗೆಂದು ಚರ್ಚಿಲ್ ದೀರ್ಘ ಉಸಿರು ತೆಗೆದುಕೊಂಡು ಹಿಂದಕ್ಕೆ ಒರಗಿ ಕೂತರು! ಒಂದು ಗುಟುಕು ವಿಸ್ಕಿ ಹೀರಿ ಅಲ್ಲಿಯೇ ಕಣ್ಣು ಮುಚ್ಚಿದರು. ವಿಸ್ಕಿ ಅವರಿಗೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ ಆಯಿತು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅತುಲ ಪರಾಕ್ರಮಿ ಈ ಕ್ರಾಂತಿಯ ಕಿಡಿ ನೇತಾಜಿ ಸುಭಾಸ್ ಚಂದ್ರ ಬೋಸ್
ರೂಸ್‌ವಲ್ಟ್ ಚರ್ಚಿಲ್ ಮಾತು ಕೇಳುತ್ತಲೇ ಇದ್ದರು
ಅಮೆರಿಕಾದ ಆಗಿನ ಪ್ರಬಲ ಅಧ್ಯಕ್ಷ ರೂಸ್ ವೆಲ್ಟ್ ಮುದುಕ ಚರ್ಚಿಲ್‌ನ ಮಾತುಗಳನ್ನು ಆಲಿಸುತ್ತ ಕೂತಿದ್ದರು. ಅವರ ಕೈಯ್ಯಲ್ಲಿದ್ದ ಸಿಗಾರ್ ಇನ್ನೂ ಹೊಗೆ ಉಗುಳುತ್ತಿತ್ತು. ಅವರಿಗೆ ಕೇವಲ ಎರಡು ವರ್ಷಗಳ ಹಿಂದೆ ನಡೆದ ಪರ್ಲ್ ಹಾರ್ಬರ್ ದಾಳಿ, ಅದರಲ್ಲಿ ಅಮೆರಿಕಾಕ್ಕೆ ಆದ ಮುಖಭಂಗ ಎಲ್ಲವೂ ನೆನಪಿಗೆ ಬಂತು! ಅಲ್ಲಿಗೆ ಚರ್ಚಿಲ್ ಕಣ್ಣಲ್ಲಿ ಹೆಪ್ಪುಗಟ್ಟಿದ ಭೀತಿ ರೂಸ್‌ವೆಲ್ಟ್ ಕಣ್ಣುಗಳಿಗೆ ವರ್ಗಾವಣೆ ಆಯಿತು. ಆತ ಸಿಗಾರ್ ಸಿಟ್ಟಿನಿಂದ ನೆಲಕ್ಕೆ ಎಸೆದು ಬೂದಿ ಬೂಟಿನಿಂದ ಒರೆಸಿದರು.
ಹೇಗೆ ನೇತಾಜಿ ಸುಭಾಷ್ ಚಂದ್ರ ಬೋಸರು ಆಗಿನ ಬಲಿಷ್ಠ ರಾಷ್ಟ್ರಗಳಿಗೆ ಬಿಸಿತುಪ್ಪ ಆಗಿದ್ದರು ಎಂದು ನಿಮಗೆ ಇಷ್ಟು ಹೊತ್ತಿಗೆ ಅರ್ಥ ಆಗಿರಬಹುದು! ಬ್ರಿಟಿಷರು ನೇತಾಜಿ ಅವರಿಗೆ ಎಷ್ಟರ ಮಟ್ಟಿಗೆ ಹೆದರಿದ್ದರು ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು!
ಮುಂದೆ 1945ರ ಆಗಸ್ಟ್ 18ರಂದು ಥೈಪೆಯಲ್ಲಿ ವಿಮಾನ ಅಪಘಾತವಾಗಿ ನೇತಾಜಿ ಸುಭಾಷ್ ಕಣ್ಮರೆ ಆಗದೆ ಹೋಗಿದ್ದರೆ….? ಅದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದೇ?
ಒಮ್ಮೆ ಯೋಚನೆ ಮಾಡಿ. ಜೈ ಹಿಂದ್!
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ4 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!