ಗಣೇಶ ಚತುರ್ಥಿ
Ganesh Chaturthi: ಗಣಪ ನಮಗೇಕೆ ಇಷ್ಟು ಆಪ್ತ?
ಈ ದೇವರು ನಮಗೆ ಆಪ್ತರಾಗುವುದು ಹೇಗೆ? ದೇವರೆಂಬ ಭಯ ನಮ್ಮ ಮನದಲ್ಲಿ ನಿಲ್ಲದಂತೆ ಆತನೇ ನಿವಾರಿಸಿಕೊಳ್ಳಬೇಕೆ ಅಥವಾ ಅದು ನಮ್ಮ ಕೆಲಸವೇ? ಖುಷಿ ಕೊಡುವ ಈ ಲೇಖನವನ್ನು ಗಣೇಶ ಹಬ್ಬದ (Ganesh Chaturthi) ಸಂದರ್ಭದಲ್ಲಿ ಓದಿ.
ಅಲಕಾ ಕೆ
ಗಣಪತಿಯನ್ನು (Ganesh Chaturthi) ನಾನಾ ಹೆಸರುಗಳಿಂದ ಕೊಂಡಾಡುತ್ತಾ, ಆತನ ಆಗಮನಕ್ಕೆ ಥರಾವರಿಯಾಗಿ ಸಿದ್ಧತೆ ನಡೆಸಿದ್ದೇವೆ. ಹೊಸ ಬಟ್ಟೆ-ಬಾಗಿನಗಳಿಂದ ಹಿಡಿದು, ಕಡುಬು-ಕಜ್ಜಾಯ, ಮಂತ್ರ-ಪುಷ್ಪಗಳವರೆಗೆ ಸಕಲ ಸಡಗರವನ್ನೂ ಮಾಡಿಕೊಂಡು ಭಾದ್ರಪದ ಚೌತಿಯನ್ನು ಎದುರು ನೋಡುತ್ತೇವೆ. ಆದರೆ ನಮಗೇಕೆ ಗಣಪಣ್ಣನ ಮೇಲೆ ಇಷ್ಟೊಂದು ಅಕ್ಕರೆ?
ಈ ದೇವರು ನಮಗೆ ಆಪ್ತರಾಗುವುದು ಹೇಗೆ? ದೇವರೆಂಬ ಭಯ ನಮ್ಮ ಮನದಲ್ಲಿ ನಿಲ್ಲದಂತೆ ಆತನೇ ನಿವಾರಿಸಿಕೊಳ್ಳಬೇಕೆ ಅಥವಾ ಅದು ನಮ್ಮ ಕೆಲಸವೇ? ದೇವರೆಂಬ ಕಲ್ಪನೆ ಹುಟ್ಟಿದಾರಭ್ಯ ಇಂದಿನವರೆಗೆ ಒಂದೇ ರೀತಿಯಲ್ಲಿದ್ದಿದ್ದರೆ ಹಿಮಾಲಯದಂತೆ ತಣ್ಣಗೆ, ಎತ್ತರಕ್ಕೆ, ದೂರವಾಗಿಯೇ ಇರುತ್ತಿತ್ತೇನೋ. ಹಾಗಾಗದೆ ಯುಗಧರ್ಮಕ್ಕೆ ತಕ್ಕ ಅವತಾರಗಳನ್ನು ತಾಳಿದ್ದಕ್ಕೆ, ಕಥೆಗಳನ್ನು ಸೃಷ್ಟಿಸಿಕೊಂಡಿದ್ದಕ್ಕೆ, ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಸಾಂಸ್ಕೃತಿಕವಾಗಿ ಸಂಪನ್ನತೆಯನ್ನು ಗಳಿಸಿ, ಜನಮಾನಸದಲ್ಲಿ ಬೇರೂರುವುದಕ್ಕೆ ಸಾಧ್ಯವಾಯಿತು. ಸರಳವಾಗಿ ಅಗಲ ಕಿವಿ, ಉದ್ದ ಮೂಗು, ಡೊಳ್ಳು ಹೊಟ್ಟೆ- ಇಷ್ಟು ಬರೆದರೆ ಸಾಕು, ಪ್ರಥಮ ಪೂಜಿತ ಸಿದ್ಧ! ಭಗವಂತನ ಈ ನಮ್ಯತೆಯೇ ಸಾಕು ಜನರಲ್ಲಿ ಆತನ ಬಗ್ಗೆ ವಿನಮ್ರತೆ ಮೂಡಿಸುವುದಕ್ಕೆ. ಈ ಹಿನ್ನೆಲೆಯಲ್ಲಿ, ಗಣಾಧಿಪನೂ, ಗುಣಾಧಿಪನೂ ಆದ ಪ್ರಣವನ ಒಂದಿಷ್ಟು ಪ್ರವರಗಳು ಇಲ್ಲಿವೆ.
ಈತ ಶ್ರಮಜೀವಿಗಳ ದೇವ
ಗಣಪತಿ ಎಂದರೆ ವಿಘ್ನ ವಿನಾಶಕ, ಪ್ರಥಮ ವಂದಿತ, ವಿದ್ಯೆ, ನಾಟ್ಯ, ಸಂಗೀತಗಳಿಗೆ ಅಧಿದೇವತೆ, ಸಿದ್ಧಿ ಪ್ರದಾಯಕ, ಯೋಗಿಗಳ ಪಾಲಿಗೆ ಮೂಲಾಧಾರ ಚಕ್ರದ ಮೂಲದೈವ, ವ್ಯಾಸರ ಪಾಲಿಗೆ ಮಹಾಕಾವ್ಯ ಸಂಪಾದಕ, ಸಾರ್ವಜನಿಕ ಗಣೇಶೋತ್ಸವಗಳ ಮೂಲಕ ಸಮಾಜ ಸಂಘಟನೆಯ ಮೂಲ ಪುರುಷ… ಇತ್ಯಾದಿ ಬಹಳಷ್ಟು ವಿಶೇಷಣಗಳುಂಟು. ಅವೆಲ್ಲವನ್ನೂ ಮೀರಿ ಗಣಪತಿಯನ್ನು ಧಾನ್ಯಾಧಿದೇವತೆ, ಕೃಷಿದೇವತೆ, ಕಷ್ಟಸಹಿಷ್ಣುಗಳ ಭಗವಂತ ಎಂಬಂತೆಯೂ ವರ್ಣಿಸಲಾಗುತ್ತದೆ. ಮನುವಿನದ್ದು ಎನ್ನಲಾಗುವ ಶ್ಲೋಕವೊಂದು ಗಣಪತಿಯ ಬಗ್ಗೆ ಹೇಳುವುದು ಹೀಗೆ-
ವಿಪ್ರಾಣಾಂ ದೈವತಂ ಶಂಭುಃ
ಕ್ಷತ್ರಿಯಾಣಾಂ ತು ಮಾಧವಃ
ವೈಶ್ಯಾಣಾಂ ತು ಭವೇತ್ ಬ್ರಹ್ಮಾ
ಶೂದ್ರಾಣಾಂ ಗಣನಾಯಕಃ
ಗಣಪತಿಯ ಹುಟ್ಟಿನ ಕಥೆಗಳನ್ನು ಕೇಳಿದರೆ ಈತನನ್ನು ಶ್ರಮಜೀವಿಗಳ ದೇವ ಎಂದರೆ ತಪ್ಪೇನಿಲ್ಲ. ತಾಯ ಬಸಿರಿನಿಂದ ಬಾರದೆ, ತಾಯಿ ಮೈಯ ಬೆವರು-ಮಣ್ಣಿನಿಂದ ಸೃಷ್ಟಿಗೊಂಡವ ಎಂಬುದು ಪ್ರಧಾನವಾಗಿ ಗಣಪತಿಯ ಜನನದ ಬಗ್ಗೆ ಪ್ರಚಲಿತ ಇರುವಂಥದ್ದು. ಗಣಪನಿಗೆ ಗರಿಕೆಯೇ ಶ್ರೇಷ್ಠವಾಗುವುದು, ದುಡಿಯುವವರಿಗೆ ಪೌಷ್ಟಿಕ ಆಹಾರ ಬೇಕು ಎಂಬಂತೆ ಉಂಡೆ, ಮೋದಕ, ಕಡುಬುಗಳನ್ನು ಆತನ ಕೈಯಲ್ಲಿರಿಸುವುದು, ಕಬ್ಬು, ಬತ್ತದ ತೆನೆಗಳನ್ನು ಆತನಿಗೆ ನೀಡುವುದು, ಮಣ್ಣಿನ ಮೂರ್ತಿ ನಿಸರ್ಗದಲ್ಲಿ ಲೀನವಾಗುವಂತೆ ನೀರಿನಲ್ಲಿ ವಿಸರ್ಜಿಸುವುದು, ಮೊರದಂಥ ಕಿವಿ, ಕಣಜದಂಥ ಹೊಟ್ಟೆ, ಆನೆ ಮುಖ, ಇಲಿ, ಹಾವುಗಳ ಸಾಂಗತ್ಯ- ಇಂಥವುಗಳ ಗಣಪತಿಯನ್ನು ಮಣ್ಣಿಗೆ, ಶ್ರಮಕ್ಕೆ, ನಿಸರ್ಗಕ್ಕೆ ಇನ್ನಷ್ಟು ಹತ್ತಿರವಾಗಿಸುತ್ತವೆ. ಈ ಮೂಲಕ ಗಣಪಣ್ಣ ಯಾವುದೇ ಭಾಷೆ, ಪ್ರಾಂತ್ಯ, ಜಾತಿ, ಪಂಗಡಗಳಿಗೆ ಸೀಮಿತಗೊಳ್ಳದೆ ಜನರೆಲ್ಲರಿಗೂ ಮೆಚ್ಚಾಗುತ್ತಾನೆ.
ಹುಟ್ಟಿನ ಕಥೆಗಳು
ಪುರಾಣಗಳ ಪ್ರಕಾರ, ಶಿವ-ಪಾರ್ವತಿಯರ ಸುತ ಈತ. ಇನ್ನೂ ಹೇಳಬೇಕೆಂದರೆ ಪಾರ್ವತಿಯ ಮುದ್ದಿನ ಮಗ. ಆದರೆ ಆತನ ಹುಟ್ಟಿನ ಬಗ್ಗೆ ವಿಧವಿಧವಾದ ಕಥೆಗಳಿವೆ. ಜನಪ್ರಿಯವಾದ ಕಥೆಯ ಬಗ್ಗೆ ಮತ್ತಿಲ್ಲಿ ಉಲ್ಲೇಖ ಬೇಡ. ಅದರ ಹೊರತಾಗಿ, ಕಾಶ್ಮೀರಕವಿಯಾದ ಜಯರಥನ ಹರಚರಿತ ಚಿಂತಾಮಣಿಯಲ್ಲಿ ಪಾರ್ವತಿ-ಗಂಗೆ ಇಬ್ಬರೂ ಮಗನೂ ಹೌದಾಗಿದ್ದ ಗಣಪನನ್ನು, ಪಾರ್ವತೀಸುತನೆಂದು ತೀರ್ಮಾನಿಸುವುದು ಶಿವ. ಆದರೆ ಬ್ರಹ್ಮವೈವರ್ತಕ ಪುರಾಣದಲ್ಲಿ ಗಣೇಶನ ಜನನ ವೃತ್ತಾಂತವೇ ಬೇರೆ. ಪಾರ್ವತಿ ತನ್ನ ಮಗುವನ್ನು ತೋರಿಸಲು ಎಲ್ಲರೊಂದಿಗೆ ಶನಿಯನ್ನೂ ಕರೆದಿದ್ದಳಂತೆ. ಶನಿಯ ವಕ್ರದೃಷ್ಟಿ ಬೀಳುತ್ತಿದ್ದಂತೆ ಮಗುವಿನ ತಲೆ ಬಿದ್ದು ಹೋಗಿ, ಬದಲಿಗೆ ಆನೆಯ ತಲೆಯನ್ನು ವಿಷ್ಣು ತಂದು ಅಂಟಿಸಿದನಂತೆ. ಆತ ಏಕದಂತನಾದ ಬಗ್ಗೆಯೂ ನಾನಾ ಕಥೆಗಳಿವೆ. ಪರಶುರಾಮನೊಂದಿಗಿನ ಯುದ್ಧದಲ್ಲಿ ದಂತ ಮುರಿಯಿತೆಂದು ಬ್ರಹ್ಮವೈವರ್ತಕ ಪುರಾಣ ಹೇಳಿದರೆ, ರಾವಣ ಮುರಿದನೆಂದು ಮಾಘಕವಿ ಶಿಶುಪಾಲ ವಧೆಯಲ್ಲಿ ಹೇಳುತ್ತಾನೆ. ಕುಮಾರಸ್ವಾಮಿಯೊಂದಿಗಿನ ಲೋಕ ಸುತ್ತುವ ಸ್ಪರ್ಧೆಯಲ್ಲಿ ಹಲ್ಲು (ದಂತ!) ಮುರಿಯಿತು ಎನ್ನುತ್ತದೆ ಹರಚರಿತ ಚಿಂತಾಮಣಿ.
ಗಣಪಣ್ಣನಿಗೆ ಮದುವೆಯಾಗಿದೆಯೇ?
ಇದು ಆತನ ಬಗೆಗಿನ ಇನ್ನೊಂದು ಮುಖ್ಯ ಪ್ರಶ್ನೆ. ಈ ಅಣ್ಣನಿಗೆ ಮದುವೆಯಾಗಿದ್ದರೆ ಅತ್ತಿಗೆ ಯಾರು? ಅವನಿಗೆ ಮದುವೆಯಿಲ್ಲ, ಆತ ಬ್ರಹ್ಮಚಾರಿ ಎನ್ನುವಂಥ ಪುರಾಣಗಳು ಕೆಲವಾದರೆ, ಸಿದ್ಧಿ, ಬುದ್ಧಿಯರನ್ನು ಆತ ವಿವಾಹವಾಗಿದ್ದಾನೆ ಎಂಬ ಕಥೆಗಳುಂಟು. ನೋಡಿ, ಆತನಿಗೆ ಒಂದೋ ಮದುವೆಯೇ ಇಲ್ಲ ಅಥವಾ ದ್ವಿಪತ್ನೀವಲ್ಲಭ! ಇನ್ನೂ ಮುಂದುವರಿದು, ಸಿದ್ಧಿಯಲ್ಲಿ ಕ್ಷೇಮ ಮತ್ತು ಬುದ್ಧಿಯಲ್ಲಿ ಲಾಭ ಎಂಬ ಮಕ್ಕಳನ್ನೂ ಆತ ಪಡೆದ ಕಥೆಗಳಿವೆ. ಈತನ ಸಂಸಾರದಲ್ಲಿ ಸಿದ್ಧಿ, ಬುದ್ಧಿ, ಕ್ಷೇಮ, ಲಾಭಗಳೆಲ್ಲಾ ಇರುವುದಕ್ಕೋ ಏನೋ, ಈತ ಕೇವಲ ದೇವಳಗಳಲ್ಲಿ ಮಾತ್ರವಲ್ಲ, ಊರ ಕೋಟೆಗಳಲ್ಲೂ ಪ್ರತಿಷ್ಠಾಪಿತ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಮಾನವ ನಿರ್ಮಿತ ಎಲ್ಲಾ ಬೇಲಿ, ಕಂದಕಗಳನ್ನೂ ದಾಟಿ ಪೂಜಿತ.
ಗಣಪನ ಕಲ್ಪನೆ ಅರ್ವಾಚೀನವೇ?
ಪೌರಾಣಿಕವಾಗಿ ಗಣಪತಿಯ ಕಥೆ-ಕಲ್ಪನೆಗಳು ಏನೇ ಇದ್ದರೂ, ಈಗ ನಮ್ಮೆದುರಿಗಿರುವ ಮುದ್ದು ಮುಖದ ಗಣಪನ ಕಲ್ಪನೆಗಳು ಪುರಾಣ ಪೂರ್ವದ ಋಗ್ವೇದದಲ್ಲಿ ಇದ್ದಂತಿಲ್ಲ. ಎಲ್ಲರಂತೆ ಆತನೂ ಒಬ್ಬ ಸಾಮಾನ್ಯ ದೇವತೆಯಂತೆ ಕಂಡುಬರುತ್ತಾನೆ. ಋಗ್ವೇದದಲ್ಲಿ ಇರುವ ʻಗಣಾನಾಂ ತ್ವಾಂ ಗಣಪತಿಂ ಹವಾಮಹೇʼ ಎಂಬ ಋಕ್ಕು ಗಣಪತಿ ಪೂಜೆಯ ಮುಖ್ಯಮಂತ್ರವಾಗಿ ಬಳಕೆಯಲ್ಲಿದ್ದರೂ, ಇಲ್ಲಿರುವ ಗಣಪತಿ ಶಬ್ದಕ್ಕೆ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿ ಎಂದು ಸಹ ವಿದ್ವಾಂಸರು ಅರ್ಥೈಸುತ್ತಾರೆ. ಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ ʻನಮೋ ಗಣೇಭ್ಯೋ ಗಣಪತಿಭ್ಯಶ್ಚವೋ ನಮಃʼ ಎಂಬ ಮಂತ್ರದಲ್ಲಿ ಅನೇಕ ಗಣಪತಿಗಳ ಉಲ್ಲೇಖವಿದೆ. ಪ್ರಾಚೀನವಾದ ಮಾನವಗೃಹ್ಯಸೂತ್ರದಲ್ಲಿ ಈ ವಿನಾಯಕರ ಹೆಸರುಗಳನ್ನು ಸಾಲಕಟಂಟಕ, ಕೂಶ್ಮಾಂಡ, ರಾಜಪುತ್ರ ಉಸ್ಮಿತ ಮತ್ತು ದೇವಯಜನ ಎಂದು ಹೇಳಲಾಗಿದೆ. ಮುಂದೆ ಯಾಜ್ಞವಲ್ಕ್ಯ ಸೃತಿಯಲ್ಲಿ ಈ ವಿನಾಯಕರ ತಾಯಿ ಅಂಬಿಕೆಯೆಂದೂ, ವಿಘ್ನ ಪರಿಹಾರಕ್ಕೆ ಇವರನ್ನು ತೃಪ್ತಿ ಪಡಿಸಬೇಕೆಂದೂ ಹೇಳಲಾಗಿದೆ.
ತನ್ನ ಹುಟ್ಟಿನ ಆರಂಭದಲ್ಲೇ ಭಗ್ನವಾಗಿ, ಅದೇ ಕಾರಣಕ್ಕಾಗಿ ಪ್ರಥಮ ವಂದಿತ, ವಿಘ್ನ ನಿವಾರಕ ಆಗುವಂಥ ವರವನ್ನು ತಂದೆಯಿಂದಲೇ ಪಡೆದ ಗಣಪತಿಯ ದಂತಿ ಮುಖ, ಮಂದಸ್ಮಿತ ಮುಂತಾದ ಇಂದಿನ ಸ್ವರೂಪ ಕ್ರಿ. ಶ ಆರನೇ ಶತಮಾನದ ಆಜೂಬಾಜು ಅಸ್ತಿತ್ವಕ್ಕೆ ಬಂದಿತೆಂಬುದು ಅಂದಾಜು. ಇದೇ ಕಾಲದ ಪ್ರಾಚೀನ ಶಿಲಾ ಮೂರ್ತಿಗಳು ಜೋಧಪುರ, ಬಾದಾಮಿ, ಐಹೊಳೆ ಮುಂತಾದೆಡೆಗಳು ಲಭ್ಯವಿದೆ. ಈ ಹಿನ್ನೆಲೆಯಲ್ಲಿ, ಗಣಪತಿಯ ಗುಣವಿಶೇಷಗಳನ್ನು ಸಾರುವ ಪುರಾಣಗಳು ಆನಂತರ ರಚಿತವಾಗಿರಬಹುದೆಂಬ ಊಹೆ ಇದೆ. ರಾಮಾಯಣ ಮತ್ತು ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ಬಗ್ಗೆ ಉಲ್ಲೇಖಗಳಿಲ್ಲ. ವ್ಯಾಸರು ನೀಡಿದ ಮಹಾಭಾರತದ ಉಕ್ತಲೇಖನವನ್ನು ಗಣಪತಿ ತನ್ನ ಸೊಂಡಿಲು ಮುರಿದು ಬರೆಯುತ್ತಾ ಹೋದ ಕಥೆಗಳೆಲ್ಲಾ ಪ್ರಕ್ಷಿಪ್ತವಾಗಿ ಸೇರಿಕೊಂಡಿದೆ ಎಂಬ ವಾದಗಳೂ ಇವೆ.
ಭಾರತಕ್ಕೆ ಸೀಮಿತನಲ್ಲ!
ಹೌದು. ಹಿಂದೆ ಭಾರತೀಯ ಸಂಸ್ಕೃತಿಯ ಸಂಪರ್ಕಕ್ಕೆ ಬಂದ ಹಲವಾರು ದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ದೇಶಗಳಲ್ಲಿ ಗಣಪತಿಯ ಕಲ್ಪನೆ ಇದೆ, ಆರಾಧನೆಯೂ ಇದೆ. ಜಾವಾ, ಥಾಯ್ಲೆಂಡ್, ಕಾಂಬೋಡಿಯದಂಥ ಆಗ್ನೇಯ ಏಷ್ಯಾ ದೇಶಗಳಲ್ಲಿ ಗಣಪತಿ ಹಿಂದೂ ಸಂಪ್ರದಾಯದ ಅನ್ವಯ ಇದ್ದರೆ, ಶ್ರೀಲಂಕಾ, ಜಪಾನ್ ಮತ್ತು ಚೀನಾಗಳಲ್ಲಿ ಬೌದ್ಧ ಸಂಪ್ರದಾಯದ ಪ್ರಭಾವಕ್ಕೆ ಒಳಗಾಗಿರುವಂತೆ ಕಾಣುತ್ತದೆ. ಅದರಲ್ಲೂ ಬುದ್ಧನ ಜಾತಕ ಕಥೆಗಳಲ್ಲಿ ಹಿಂದಿನ ಜನ್ಮಗಳಲ್ಲಿ ಬುದ್ಧ ಆನೆಯೇ ಆಗಿದ್ದನಂತೆ. ಬುದ್ಧನಾಗಿದ್ದ ಜನ್ಮದಲ್ಲಿ ಆತ ತಾಯಿಯ ಹೊಟ್ಟೆಯಲ್ಲಿದ್ದಾಗ ಬಿಳಿಯ ಆನೆಯೊಂದು ಆಕೆಯ ಗರ್ಭವನ್ನು ಚುಚ್ಚಿತ್ತು ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಬೌದ್ಧರ ಪ್ರಭಾವವಿದ್ದ ಪ್ರಾಂತ್ಯಗಳಲ್ಲಿ ಆನೆ ಮುಖದ ದೇವರ ಆರಾಧನೆಗೆ ಮಹತ್ವ ದೊರೆತಿದೆ.
ಮಾನವನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಯ ವಿಕಸನದೊಂದಿಗೆ ನಮ್ಮ ಗಣೇಶ ದೇವನೂ ವಿಕಾಸ ಹೊಂದುತ್ತಾ ಬಂದಿರುವುದನ್ನು ಕಾಣುತ್ತೇವೆ. ದೇಶ, ಕಾಲ, ಪಾತ್ರಗಳನ್ನು ಮೀರಿ, ನಮ್ಮ ಅಮೂರ್ತ ಪ್ರಜ್ಞೆಯ ಭಾಗವಾಗಿ, ವಿದ್ಯೆ ನೀಡುತ್ತಾ, ಸಿದ್ಧಿ ಪ್ರದಾಯಕನಾಗಿ, ವಿಘ್ನ ನಿವಾರಿಸುತ್ತಾ ಮೂರ್ತ ರೂಪದಲ್ಲಿ ಮನೆಮನೆಗೆ ಬರುವವನಾತ. ನಮ್ಮ ಕಲ್ಪನೆಯ ರೂಪವನ್ನು ತಾನು ಧರಿಸಿ, ನಮ್ಮಿಷ್ಟದ ಕಡುಬು-ಕಜ್ಜಾಯಗಳನ್ನು ತಾನು ತಿಂದು, ನಾವು ನಿವೇದಿಸಿದ ಮಂತ್ರ-ಪುಷ್ಪಗಳಿಂದ ಪೂಜಿತನಾಗುತ್ತಾನೆ ಗಣಪ. ಹೀಗೆ ನಮ್ಮೊಂದಿಗೆ ನಮ್ಮಂತೆಯೇ ಇರುವ ದೇವರೇ ಅಲ್ಲವೇ ನಮಗೆ ಆಪ್ತರಾಗುವುದು?
ಇದನ್ನೂ ಓದಿ: Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!
ಗಣೇಶ ಚತುರ್ಥಿ
Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್!
Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.
ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಆಗಲಿದೆ.
ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ
ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ
1) ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್ ಮನೆ ಜಂಕ್ಷನ್, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
- ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
- ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.
ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್
ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್ ಆಗಲಿದೆ.
-ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ
Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.
ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ
- ದಿಣ್ಣೂರು ಮುಖ್ಯರಸ್ತೆ
- ಆರ್.ಟಿ ನಗರ ಮುಖ್ಯರಸ್ತೆ.
- ಸಿಬಿಐ ಮುಖ್ಯರಸ್ತೆ.
ಮಾರ್ಗ ಬದಲಾವಣೆ ವಿವರಗಳು
1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.
3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ:
ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಮೇಕ್ರಿ ಸರ್ಕಲ್- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:
ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.
6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:
ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.
ಗಣೇಶ ಚತುರ್ಥಿ
Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್
Ganesh Chaturthi : ಸೆ.22 ಹಾಗೂ 24 ರಂದು ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.
ಬೆಂಗಳೂರು: ಗಣಪತಿ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ (Ganesh Chaturthi) ಇರುವುದರಿಂದ ಬೆಂಗಳೂರಿನ ಕೆಲವು ಕಡೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೆ. 22 ರಂದು ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ಜತೆಗೆ ಹಲಸೂರು ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ.
ಎಲ್ಲಿಲ್ಲಿ ಸಂಚಾರ ನಿರ್ಬಂಧ
ಸೆ. 22 ಹಾಗೂ ಸೆ.24ರಂದು ಮಾತ್ರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್ ಆಗಲಿದೆ.
-ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.
ಇದನ್ನೂ ಓದಿ: Ganesh Chaturthi : ಗಣೇಶೋತ್ಸವದಲ್ಲಿ ಕಾಂತಾರ ಮೋಡಿ; ಭೂತಕೋಲದ ವೈಭವ ನೋಡಿ
ಪರ್ಯಾಯ ಮಾರ್ಗಗಳು ಹೀಗಿವೆ
- ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿಂದ ಎಡತಿರುವು ಪಡೆದು ಹೆಣ್ಣೂರು ಜಂಕ್ಷನ್‌ನಿಂದ ಬಲಿತಿರುವು ಪಡೆಯಬಹುದು. ಸಿದ್ದಪ್ಪ ರೆಡ್ಡಿ ಜಂಕ್ಷನ್, ಅಯೋಧ್ಯೆ ಜಂಕ್ಷನ್, ಲಿಂಗರಾಜಪುರಂ , ಐಟಿಸಿ ಫ್ಲೈ ಓವರ್ ಮೂಲಕ ರಾಬರ್ಟ್‌ಸನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹೆನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದು.
- ಶಿವಾಜಿನಗರ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಡ್ ರಸ್ತೆ ತಲುಪಿ ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದಾಗಿದೆ.
- ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ಕಡೆಗೆ ಹೋಗಹುದು.
- ಹೇನ್ಸ್, ನೇತಾಜಿ ರಸ್ತೆ ಕಡೆಯಿಂದ ಬ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳು ನೇತಾಜಿ ಜಂಕ್ಷನ್‌ನಿಂದ ಬಲತಿರುವು ಪಡೆದು ಮಾಸ್ಕ್ ಜಂಕ್ಷನ್ , ಲಾಜರ್ ರಸ್ತೆ, ಪಾಟರಿ ಸರ್ಕಲ್, ಹೆಣ್ಣೂರು ರಸ್ತೆ ಜಂಕ್ಷನ್, ಹೆಚ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್ ಮೂಲಕ ಲಿಂಗರಾಜಪುರಂ ಫ್ಲೈಓವರ್ ಮುಖೇನ ಹೆಣ್ಣೂರು ಕಡೆ ಹೋಗಬಹುದು.
- ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ ಮೂಲಕ – ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಕೆನ್ಸಿಂಗ್ ಟನ್ ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು ಪಡೆದು ತಿರುವಳ್ಳವರ್ ಪ್ರತಿಮೆ ಆರ್.ಬಿ.ಐ ಕ್ವಾಟ್ರಸ್ ಜಂಕ್ಷನ್ ಲಾವಣ್ಯ ಥಿಯೇಟರ್ ಜಂಕ್ಷನ್ – ನಾಗಾ ಜಂಕ್ಷನ್ ಬಲತಿರುವು ಪಡೆದು ಹಲಸೂರು ಕೆರೆ ಕಡೆಗೆ ಹೋಗಬಹುದು.
ಪಾರ್ಕಿಂಗ್ ನಿಷೇಧ
ಗಣೇಶ ಮೆರವಣಿಗೆ ಹಾಗೂ ವಿಸರ್ಜನೆ ಸಮಯದಲ್ಲಿ ಕೆಲವು ಕಡೆ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ & ಸು ಪೊಲೀಸ್ ಠಾಣೆಯವರೆಗೆ ಮತ್ತು ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿರ್ಬಂಧಿಸಲಾಗಿರುತ್ತದೆ.
ಜತೆಗೆ ಪಾಟರಿ ಸರ್ಕಲ್ ಎಂ.ಎಂ.ರಸ್ತೆಯಿಂದ ಲಾಜರ್ ರಸ್ತೆವರೆಗೆ ಹಾಗೂ ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ ಮೆಮೊರಿಯಲ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ರಸ್ತೆಗಳಲ್ಲಿ ಪಾರ್ಕಿಂಗ್ ಅನ್ನು ಸೆ. 22 ಮತ್ತು 24 ರಂದು ನಿರ್ಬಂಧಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Ganesh Chaturthi : ಗಣೇಶೋತ್ಸವದಲ್ಲಿ ಕಾಂತಾರ ಮೋಡಿ; ಭೂತಕೋಲದ ವೈಭವ ನೋಡಿ
Ganesh Chaturthi : ಈ ವರ್ಷದ ಗಣೇಶ ಹಬ್ಬದಲ್ಲಿ ಕಾಂತಾರ (Kantara Film) ಹವಾ ಜೋರಾಗಿದೆ. ಭೂತಕೋಲ ಕೈಯಲ್ಲಿ ಬೆಂಕಿಯನ್ನು ಹಿಡಿದು ಆ್ಯಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ನಿರ್ಮಾಣ ಮಾಡಲಾಗಿದೆ.
ಆನೇಕಲ್ : ಕಾಂತಾರ ಸಿನಿಮಾ ಮಾಡಿರುವ ಮೋಡಿ ಈಗಲೂ ಮುಂದುವರಿದಿದೆ. ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆಯಲ್ಲಿ ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಕಾಂತಾರ ಹವಾ ಜೋರಾಗಿದೆ. ಅದ್ಧೂರಿಯಾಗಿ ಕಾಂತಾರ ಸೆಟ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಎಂಬುವವರು ಕಾಂತಾರ ಸೆಟ್ ನಿರ್ಮಿಸಿದ್ದಾರೆ. ಬರೋಬ್ಬರಿ 16 ಲಕ್ಷ ರೂ. ವೆಚ್ಚದಲ್ಲಿ ಈ ಸೆಟ್ ಸಿದ್ಧ ಮಾಡಲಾಗಿದೆ. ಶ್ರೀ ರಾಜಮಾರ್ತಾಂಡ ಗಣಪತಿ ಭಕ್ತ ಮಂಡಳಿ ಕಳೆದೊಂದು ತಿಂಗಳಿನಿಂದ ಕಾಂತಾರ ಸೆಟ್ ನಿರ್ಮಾಣಕ್ಕೆ ತಯಾರಿ ನಡೆಸಿದೆ.
ಇದನ್ನೂ ಓದಿ: Raja Marga Column : ತಿಲಕರು ಮತ್ತು ಮಹಾರಾಷ್ಟ್ರದ ಸಾವಿರಾರು ಗಣೇಶ ಮಂಡಲಗಳು, ಅದೊಂದು ವಿಶ್ವದಾಖಲೆ
ಮಾಂಸಹಾರ ತ್ಯಜಿಸಿ ಸೆಟ್ ನಿರ್ಮಾಣ
ತುಳು ನಾಡಿನ ಆರಾಧ್ಯ ದೈವದ ನಿಜವಾದ ಕಥೆಯಾಗಿರುವುದರಿಂದ ಶ್ರದ್ಧೆ, ಭಕ್ತಿಯಿಂದ ಸೆಟ್ ನಿರ್ಮಾಣ ಮಾಡಲಾಗಿದೆ. ಕಳೆದೊಂದು ತಿಂಗಳಿನಿಂದ ಮಾಂಸಹಾರವನ್ನು ತ್ಯಜಿಸಿ ಕಾಂತಾರ ಸೆಟ್‌ಗಾಗಿ ಸಿದ್ಧತೆ ಮಾಡಲಾಗಿದೆ.
ಮೊದಲಿಗೆ 20 ಅಡಿ ಎತ್ತರದ ವರಾಹರೂಪಿ ಪಂಜುರ್ಲಿ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಒಳ ಬರುತ್ತಿದ್ದಂತೆ ಸುತ್ತಲೂ ಫೈರ್ ಫೀಲ್ ಆಗುವಂತೆ ಭೂತಕೋಲ ಸೆಟ್ ಹಾಕಲಾಗಿದೆ. ಭೂತಕೋಲ ಕೈಯಲ್ಲಿ ಬೆಂಕಿಯನ್ನು ಹಿಡಿದು ಆ್ಯಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ನಿರ್ಮಾಣ ಮಾಡಲಾಗಿದೆ.
ಕಾಡುಬೆಟ್ಟದ ಸೆಟ್ ಹಾಕಿ ಕಾಡಿನಂತೆ ಕಾಣುವಂತೆ ಸೆಟ್ ನಿರ್ಮಿಸಿ, ಒಳಭಾಗದಲ್ಲಿ ಕಾಂತಾರ ಸಿನಿಮಾ ಕಥೆಯ ರಾಜನಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪಂಜುರ್ಲಿ, ವರಾಹರೂಪಿ, ಭೂತಕೋಲ, ಗುಳಿಗ ದೈವ, ಕಾಡು ಬೆಟ್ಟ ಸೆಟ್ ಹೈಲೆಟ್ ಮಾಡಲಾಗಿದೆ.
ಹತ್ತಾರು ಊರುಗಳಿಂದ ಭಕ್ತರ ಆಗಮನ
ಕಾಂತಾರ ಸೆಟ್‌ನಲ್ಲಿರುವ ಗಣಪನನ್ನು ನೋಡಲು ಹತ್ತಾರು ಊರುಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಆನೇಕಲ್, ಬೆಂಗಳೂರು, ಕೃಷ್ಣಗಿರಿ, ಆಂಧ್ರ ಪ್ರದೇಶದಿಂದಲೂ ಜನರು ಭೇಟಿ ನೀಡುತ್ತಿದ್ದಾರೆ. ಫೋಟೊ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ11 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ24 hours ago
Rupert Murdoch: ಫಾಕ್ಸ್ ಮತ್ತು ನ್ಯೂಸ್ ಕಾರ್ಪ್ ಅಧ್ಯಕ್ಷ ಹುದ್ದೆ ತೊರೆದ ‘ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ22 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ21 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಆರೋಗ್ಯ14 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!