ಧಾರ್ಮಿಕ
Hanuman Chalisa : ಏನಿದು ಹನುಮಾನ್ ಚಾಲೀಸಾ? ಇದರ ಮಹತ್ವವೇನು?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (congress manifesto ) ಬಜರಂಗದಳ ನಿಷೇಧದ ಪ್ರಸ್ತಾಪವಿರುವುದರಿಂದ ಬಜರಂಗ ದಳವು ಪ್ರತಿಭಟನೆಯಾಗಿ ಹನುಮಾನ್ ಚಾಲೀಸಾ (Hanuman Chalisa) ಪಠಿಸಲು ಕರೆ ನೀಡಿದೆ. ಹನುಮಾನ್ ಚಾಲೀಸಾದ ಮಹತ್ವವನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಿಕೊಡಲಾಗಿದೆ.
ಬೆಂಗಳೂರು: ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ (Bajaranga dal ban) ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress Manifesto) ಹೇಳಿದೆ. ಈ ಭರವಸೆಯ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಪ್ರತಿಭಟನೆ ನಡೆಸುತ್ತಿವೆ. ಬಜರಂಗ ದಳ ಸಂಘಟನೆಯು ಮೇ 4ರಂದು ರಾಜ್ಯಾದ್ಯಂತ ಹನುಮಾನ್ ಚಾಲೀಸಾ (Hanuman Chalisa) ಪಠಣವನ್ನು ಆಯೋಜಿಸಿದೆ.
ಹನುಮಾನ್ ಚಾಲೀಸಾ ಎಂದರೆ ಏನು? ಇದಕ್ಕಿರುವ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಏನಿದು ಹನುಮಾನ್ ಚಾಲೀಸಾ?
ಶ್ರೀ ರಾಮಚಂದ್ರನ ಪರಮ ಭಕ್ತ ಹನುಮಂತನನ್ನು ಸ್ತುತಿಸುವ ನಲವತ್ತು ಪದ್ಯ ಚರಣಗಳನ್ನು ʻಹನುಮಾನ್ ಚಾಲೀಸಾʼ ಎಂದು ಕರೆಯಲಾಗುತ್ತದೆ. ಶ್ರೀ ರಾಮಚ೦ದ್ರನ ಪರಮಭಕ್ತರಾಗಿದ್ದ ಸಂತಪಟ್ಟ ಪಡೆದ ಕವಿ ಗೋಸ್ವಾಮಿ ತುಳಸೀದಾಸರು ಹನುಮಾನ್ ಚಾಲೀಸಾ ರಚಿಸಿದವರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿರುವುದರಿಂದ ಈ ಕಾರಣಕ್ಕಾಗಿಯೇ ಇದರ ಹೆಸರು “ಚಾಲೀಸಾ” ಎ೦ದಾಗಿದೆ.
ಹನುಮಾನ್ ಚಾಲೀಸಾಗೆ ದೈವತ್ವವು ತಳುಕುಹಾಕಿಕೊ೦ಡಿದೆ. ಇದರ ಪಠಣದಿಂದ ಮನುಷ್ಯನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು, ಅಧೈರ್ಯವನ್ನು ಹೋಗಲಾಡಿಸಿಕೊಂಡು, ದುಃಖಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಮುಖ್ಯವಾಗಿ ಶನಿಕಾಟ ಹೊಂದಿರುವವರು ರಕ್ಷಣೆಯಾಗಿ ಹನುಮಾನ್ ಚಾಲೀಸಾ ಓದುತ್ತಾರೆ.
ಇದನ್ನು ಸಂತ ತುಳಸೀದಾಸರು ರಚಿಸಿದ ಸಂದರ್ಭದ ಕುರಿತು ಅನೇಕ ಕತೆಗಳಿವೆ. ವಾಲ್ಮೀಕಿ ಮಹರ್ಷಿಯ ಅವತಾರವೆಂದು ತುಳಸೀದಾಸರನ್ನು ಬಣ್ಣಿಸಲಾಗುತ್ತಿದ್ದು, ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂದರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗಿದೆ.
ಇನ್ನೊಂದು ಕತೆಯ ಪ್ರಕಾರ ತಮ್ಮ ಮಾತು ಕೇಳದ ತುಳಸೀದಾಸರನ್ನು ದೊರೆ ಅಕ್ಬರ್ ಬಂಧಿಸಿಟ್ಟಿದ್ದ. ಈ ಸಂದರ್ಭದಲ್ಲಿ ಅವರು ಹನುಮಾನ್ ಚಾಲೀಸಾ ರಚಿಸಿದರು. ಇದರ ರಚನೆ ಪೂರ್ಣವಾಗುತ್ತಿದ್ದಂತೆಯೇ ವಾನರ ಸೇನೆ ಅಕ್ಬರನ ಅರಮನೆಗೆ ದಾಳಿ ನಡೆಸಿತ್ತು. ಇದರಿಂದ ಹೆದರಿದ ಅಕ್ಬರ್ ತುಳಸೀದಾಸರನ್ನು ಬಿಡುಗಡೆ ಮಾಡಿ ಕ್ಷಮೆಯಾಚಿಸಿದ.
ಪಠಣದಿಂದ ಪ್ರಯೋಜನವೇನು?
ತುಳಸಿದಾಸರು ಹೇಳಿರುವಂತೆ ಹನುಮಾನ್ ಚಾಲೀಸಾವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ. ದಿವ್ಯವಾದ ಹನುಮಾನ್ ಚಾಲೀಸಾವು ಬಹಳ ಶಕ್ತಿಶಾಲಿಯಾಗಿದೆ. ಇದರ ಪಠಣದಿಂದ ನಿಮ್ಮೆಲ್ಲ ಮನೋಕಾಮನೆಗಳು ಈಡೇರುತ್ತವೆ. ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ, ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ.
ಭೀತಿಯನ್ನು ಎದುರಿಸುವವರು ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳನ್ನು ದೂರ ಮಾಡಿಕೊಳ್ಳಬಹುದು. ಇದರಿಂದ ರಾತ್ರಿ ಸುಖ ನಿದ್ರೆ ಸಾಧ್ಯವಾಗುತ್ತದೆ. ನಿದ್ರೆಯಲ್ಲಿ ಹೆದರುವ ಮಕ್ಕಳು ಕೂಡ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗಿದೆ.
ಯಾವಾಗ ಓದಬೇಕು?
ಶಾಸ್ತ್ರ ಪುರಾಣಗಳ ಪ್ರಕಾರ ಹನುಮಾನ್ ಚಾಲೀಸಾವನ್ನು ದಿನಕ್ಕೆ 100 ಬಾರಿ ಪಠಿಸಬೇಕು. ನಿಮ್ಮ ಬಳಿ ಅಷ್ಟು ಬಾರಿ ಪಠಿಸಲು ಸಮಯವಿಲ್ಲದೇ ಇದ್ದರೆ ಕನಿಷ್ಠ 7, 11 ಅಥವಾ 21 ಬಾರಿ ಪಠಿಸಿಸಬಹುದು. ಹನುಮಾನ್ ಚಾಲೀಸಾ ಪಠಿಸುವ ಮೊದಲು ಗಣಪತಿಯನ್ನು ಮತ್ತು ಶ್ರೀ ರಾಮನನ್ನು ನೆನೆಯಲೇ ಬೇಕು.
ಬೆಳಗ್ಗೆ ಮತ್ತು ಸಂಜೆ ದೇವರ ಭಜನೆ ಮಾಡುವಂತೆ ಹನುಮಾನ್ ಚಾಲೀಸಾವನ್ನು ಪಠಿಸಬಹುದು. ಕೆಲವರು ಮಲಗುವ ಮೊದಲೂ ಪಠಿಸುವುದುಂಟು. ಆದರೆ ಬರೀ ನೆಲದ ಮೇಲೆ, ಹಾಸಿಗೆಯ ಮೇಲೆ ಕುಳಿತು ಚಾಲೀಸಾ ಪಠಿಸಬಾರದೆಂಬ ನಿಯಮವಿದೆ. ಕೆಂಪು ಬಟ್ಟೆಯ ಮೇಲೆ ಕುಳಿತು ಚಾಲೀಸಾ ಪಠಿಸುವುದು ಹೆಚ್ಚು ಶ್ರೇಯಸ್ಕರ.
ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.
ಹನುಮಾನ್ ಚಾಲೀಸಾ ಹೀಗಿದೆ…
ದೋಹಾ
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥
ಧ್ಯಾನಂ
ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।
ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ॥
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ ।
ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ॥
ಚೌಪಾಈ
ಜಯ ಹನುಮಾನ ಜ್ಞಾನ ಗುಣ ಸಾಗರ ।
ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥
ರಾಮದೂತ ಅತುಲಿತ ಬಲಧಾಮಾ ।
ಅಂಜನಿ ಪುತ್ರ ಪವನಸುತ ನಾಮಾ ॥ 2 ॥
ಮಹಾವೀರ ವಿಕ್ರಮ ಬಜರಂಗೀ ।
ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥
ಕಂಚನ ವರಣ ವಿರಾಜ ಸುವೇಶಾ ।
ಕಾನನ ಕುಂಡಲ ಕುಂಚಿತ ಕೇಶಾ ॥ 4 ॥
ಹಾಥವಜ್ರ ಔ ಧ್ವಜಾ ವಿರಾಜೈ ।
ಕಾಂಥೇ ಮೂಂಜ ಜನೇವೂ ಸಾಜೈ ॥ 5॥
ಶಂಕರ ಸುವನ ಕೇಸರೀ ನಂದನ ।
ತೇಜ ಪ್ರತಾಪ ಮಹಾಜಗ ವಂದನ ॥ 6 ॥
ವಿದ್ಯಾವಾನ ಗುಣೀ ಅತಿ ಚಾತುರ ।
ರಾಮ ಕಾಜ ಕರಿವೇ ಕೋ ಆತುರ ॥ 7 ॥
ಪ್ರಭು ಚರಿತ್ರ ಸುನ್ ಸುನ್ ಕೋ ರಸಿಯಾ ।
ರಾಮಲಖನ ಸೀತಾ ಮನ ಬಸಿಯಾ ॥ 8॥
ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ ।
ವಿಕಟ ರೂಪಧರಿ ಲಂಕ ಜಲಾವಾ ॥ 9 ॥
ಭೀಮ ರೂಪಧರಿ ಅಸುರ ಸಂಹಾರೇ ।
ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥
ಲಾಯ ಸಂಜೀವನ ಲಖನ ಜಿಯಾಯೇ ।
ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥
ರಘುಪತಿ ಕೀನ್ಹೀ ಬಹುತ ಬಡಾಯೀ ।
ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥
ಸಹಸ್ರ ವದನ ತುಮ್ಹರೋ ಯಶಗಾವೈ ।
ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥
ಸನಕಾದಿಕ ಬ್ರಹ್ಮಾದಿ ಮುನೀಶಾ ।
ನಾರದ ಶಾರದ ಸಹಿತ ಅಹೀಶಾ ॥ 14 ॥
ಯಮ ಕುಬೇರ ದಿಗಪಾಲ ಜಹಾಂ ತೇ ।
ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥
ತುಮ ಉಪಕಾರ ಸುಗ್ರೀವಹಿ ಕೀನ್ಹಾ ।
ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥
ತುಮ್ಹರೋ ಮಂತ್ರ ವಿಭೀಷಣ ಮಾನಾ ।
ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥
ಯುಗ ಸಹಸ್ರ ಯೋಜನ ಪರ ಭಾನೂ ।
ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ।
ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥
ದುರ್ಗಮ ಕಾಜ ಜಗತ ಕೇ ಜೇತೇ ।
ತುಮ್ಹರೇ ತೇತೇ || 20||
ರಾಮ ದುಆರೇ ತುಮ ರಖವಾರೇ ।
ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥
ಸಬ ಸುಖ ಲಹೈ ತುಮ್ಹಾರೀ ಶರಣಾ ।
ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥
ಆಪನ ತೇಜ ಸಮ್ಹಾರೋ ಆಪೈ ।
ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥
ಭೂತ ಪಿಶಾಚ ನಿಕಟ ನಹಿ ಆವೈ ।
ಮಹವೀರ ಜಬ ನಾಮ ಸುನಾವೈ ॥ 24 ॥
ನಾಸೈ ರೋಗ ಹರೈ ಸಬ ಪೀರಾ ।
ಜಪತ ನಿರಂತರ ಹನುಮತ ವೀರಾ ॥ 25 ॥
ಸಂಕಟ ಸೇ ಹನುಮಾನ ಛುಡಾವೈ ।
ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥
ಸಬ ಪರ ರಾಮ ತಪಸ್ವೀ ರಾಜಾ ।
ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥
ಔರ ಮನೋರಧ ಜೋ ಕೋಯಿ ಲಾವೈ ।
ತಾಸು ಅಮಿತ ಜೀವನ ಫಲ ಪಾವೈ ॥ 28 ॥
ಚಾರೋ ಯುಗ ಪ್ರತಾಪ ತುಮ್ಹಾರಾ ।
ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥
ಸಾಧು ಸಂತ ಕೇ ತುಮ ರಖವಾರೇ ।
ಅಸುರ ನಿಕಂದನ ರಾಮ ದುಲಾರೇ ॥ 30 ॥
ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।
ಅಸ ವರ ದೀನ್ಹ ಜಾನಕೀ ಮಾತಾ ॥ 31 ॥
ರಾಮ ರಸಾಯನ ತುಮ್ಹಾರೇ ಪಾಸಾ ।
ಸದಾ ರಹೋ ರಘುಪತಿ ಕೇ ದಾಸಾ ॥ 32 ॥
ತುಮ್ಹರೇ ಭಜನ ರಾಮಕೋ ಪಾವೈ ।
ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥
ಅಂತ ಕಾಲ ರಘುಪತಿ ಪುರಜಾಯೀ ।
ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥
ಔರ ದೇವತಾ ಚಿತ್ತ ನ ಧರಯೀ ।
ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥
ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।
ಜೋ ಸುಮಿರೈ ಹನುಮತ ಬಲ ವೀರಾ ॥ 36 ॥
ಜೈ ಜೈ ಜೈ ಹನುಮಾನ ಗೋಸಾಯೀ ।
ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥
ಜೋ ಶತ ವಾರ ಪಾಠ ಕರ ಕೋಯೀ ।
ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥
ಜೋ ಯಹ ಪಡೈ ಹನುಮಾನ ಚಾಲೀಸಾ ।
ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥
ತುಲಸೀದಾಸ ಸದಾ ಹರಿ ಚೇರಾ ।
ಕೀಜೈ ನಾಥ ಹೃದಯ ಮಹ ಡೇರಾ ॥ 40 ॥
ದೋಹಾ
ಪವನ ತನಯ ಸಂಕಟ ಹರಣ ಮಂಗಳ ಮೂರತಿ ರೂಪ್ ।
ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್ ॥
ಸಿಯಾವರ ರಾಮಚಂದ್ರಕೀ ಜೈ । ಪವನಸುತ ಹನುಮಾನಕೀ ಜೈ । ಬೋಲೋ ಭಾಯೀ ಸಬ ಸಂತನಕೀ ಜೈ ।
ಇದನ್ನೂ ಓದಿ: Prerane : ಹನುಮಂತನ ಆದರ್ಶ ಮತ್ತು ಅದರ ಫಲ
ದೇಶ
Sharada Devi Idol: ತಿತ್ವಾಲ್ ಶಾರದಾ ದೇವಿ ದೇಗುಲಕ್ಕೆ ಶೃಂಗೇರಿ ವಿಧುಶೇಖರ ಭಾರತೀ ಶ್ರೀಗಳ ಭೇಟಿ
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಚಿಕ್ಕಮಗಳೂರು: ತಿತ್ವಾಲ್‌ನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಶಾರದಾಂಬೆ ದೇವಾಲಯಕ್ಕೆ (sharadamba temple) ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati) ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಿತ್ವಾಲ್‌ನಲ್ಲಿದ್ದ ಪುರಾತನ ಶಾರದಾಂಬಾ ದೇವಾಲಯ ಪಾಳುಬಿದ್ದಿತ್ತು. ಇದು ಪಾಕ್ ಆಕ್ರಮಿತ ಪ್ರದೇಶದಲ್ಲಿದೆ. ಇಲ್ಲಿನ ಶಾರದಾಂಬಾ ದೇವಾಲಯವನ್ನು ನವೀಕರಣ ಮಾಡಲಾಗಿದ್ದು, 75 ವರ್ಷಗಳ ಬಳಿಕ ಇಲ್ಲಿ ಶಾರದಾಂಬೆ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ.
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್‌ನ ದೇವಾಲಯವನ್ನೂ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದರು ಎಂಬ ಇತಿಹಾಸ ಇದೆ. ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ಅಲ್ಲಿಂದ ತಿತ್ವಾಲ್‌ಗೆ ಭೇಟಿ ನೀಡಿದ ವಿಧುಶೇಖರ ಭಾರತೀ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿತು.
ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ
ಧಾರ್ಮಿಕ
ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!
ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ ಎನ್ನುತ್ತಿದ್ದಾರೆ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್. ತಾತಯ್ಯರ ವಚನಗಳ ಒಳಾರ್ಥವನ್ನು ತಿಳಿಸುವ ಅವರ ಅಂಕಣ ಬರಹ ʻತಾತಯ್ಯ ತತ್ವಾಮೃತಂʼ ಇಲ್ಲಿದೆ.
“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ” ಎಂದಿದ್ದಾರೆ.
ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.
ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||
ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..
ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.
ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.
ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||
ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.
ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.
ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||
ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ
ಧಾರ್ಮಿಕ
Prerane : ದೇವರ ಅವತಾರ; ಏನಿದು ವಿಚಾರ?
ನಿಮ್ಮನ್ನು ನೀವು ದೇವರಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗುವುದಿಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರಿ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.
ಶ್ರೀ ಕೈವಲ್ಯಾನಂದ ಸರಸ್ವತೀ
ಇರುವಿಕೆಯೇ ದೇವರು. ದೇವರು ಏರುವುದೂ ಇಲ್ಲ, ಇಳಿಯುವುದೂ ಇಲ್ಲ. ದೇವರು ಎಲ್ಲಿಗೆ ಏರಬೇಕು, ಎಲ್ಲಿಗೆ ಇಳಿಯಬೇಕು, ದೇವರನ್ನು ಬಿಟ್ಟರೆ ಮತ್ತಾರು ಇಲ್ಲ, ಮತ್ತಾವುದೂ ಇಲ್ಲ, ಇರುವುದೆಲ್ಲವೂ ದೈವವೇ ಆದಕಾರಣ ಮೊದಲನೆಯದಾಗಿ “ದೇವರು ಏರುವುದೂ ಇಲ್ಲ. ಇಳಿಯುವುದೂ ಇಲ್ಲ”.
ಆದರೆ “ಅವತಾರ” ಎಂದು ಹೇಳುವಾಗ ಅದರಲ್ಲಿ ಏನೋ ಒಂದು ತಾತ್ವಿಕಾರ್ಥವಿರಬೇಕು. ಅರ್ಥವು ಸಂಪೂರ್ಣವಾಗಿ ಬಿನ್ನ ಅದನ್ನು ಈಗ ನೋಡುವ; ಇರುವಿಕೆಯೇ ದೇವರು. ಪವಿತ್ರವಾದ ಇರುವಿಕೆ. ಇಡೀ ಪ್ರಪಂಚ ದೇವರಿಂದಲೇ ತುಂಬಿದೆ, ತನ್ನ ಅಸ್ಥಿತ್ವವನ್ನು (ಪ್ರಪಂಚವನ್ನು) ತಾನು ತುಂಬಿರುತ್ತಾನೆ. ದೇವರ ಅವತಾರಕ್ಕೆ ಅರ್ಥವಿರಬೇಕು.
ಮನುಷ್ಯ ದೇವರನ್ನು ಅರಸುವುದು ಎರಡು ವಿಧ: ದೇವರು ಒಬ್ಬನೇ ಸತ್ಯವೆಂದಾಗ “ಮನುಷ್ಯ” ಎಂದರೆ ಏನು? ತಾನು ದೇವರೆಂಬುದನ್ನು ಮರೆತು ಹೋಗಿರುವಾಗ ದೇವರೇ ಮನುಷ್ಯ. ಮನುಷ್ಯನೆಂದರೆ ಮರೆತಿದ್ದಾನೆ- ತನ್ನನ್ನು ತಾನು ಮರೆತಿದ್ದಾನೆ. ಮನುಷ್ಯ ತನ್ನ ದೈವತ್ವವನ್ನು ಎರಡು ವಿಧದಲ್ಲಿ ಸ್ಮರಿಸಿಕೊಳ್ಳಬಹುದು: ಸಮರ್ಪಣೆ, ಭಕ್ತಿ, ಪ್ರೇಮ, ಪ್ರಾರ್ಥನೆ – ಇದು ಒಂದು ಮಾರ್ಗ, ಮತ್ತೊಂದು ಮಾರ್ಗವೆಂದರೆ
ದೃಡನಿಶ್ಚಯ. ಮನಸ್ಸು ಮಾಡುವಿಕೆ ಧ್ಯಾನ (ಜ್ಞಾನ) ಯೋಗ.
ಮನಃ ಪೂರ್ವಕ ಪ್ರಯತ್ನದಿಂದ ಪ್ರಯಾಣ ಮಾಡಲು ಪ್ರಯತ್ನ ಪಟ್ಟಾಗ ಆಗ ಆತ ತಾನು ದೈವತ್ವಕ್ಕೆ ಏರುತ್ತಿದ್ದೇನೆ ಎಂದು ಭಾವಿಸುತ್ತಾನೆ. ಈ ಕಾರಣಕ್ಕಾಗಿ ಜೈನ ಸಂಪ್ರದಾಯದಲ್ಲಿ ದೈವತ್ವ ಪಡೆದವನನ್ನು “ತೀರ್ಥಂಕರ” ಎನ್ನುತ್ತಾರೆ. ತೀರ್ಥಂಕರ ಎಂದರೆ ಪ್ರಜ್ಞೆ, ಅರಿವು ಶಿಖರವನ್ನು ಮುಟ್ಟಿದೆ, ಮನುಷ್ಯ ಏರುವ ಮುಖಾಂತರ ತಲುಪಿದ್ದಾನೆ – ಮನೋ ನಿಶ್ಚಯದ ಪ್ರಯತ್ನದ ಜ್ಞಾನ ಯೋಗದ ಒಂದು ಏಣಿ ಇರುವಂತೆ.
ಅವತಾರವೆಂದರೆ ದೇವರು ಇಳಿದು ಬರುವಿಕೆ, ಇದು ಮತ್ತೊಂದು ರೀತಿ ದೇವರನ್ನು ಸೇರುವಿಕೆ – ಮರೆತಿರುವುದನ್ನು ಜ್ಞಾಪಿಸಿಕೊಳ್ಳುವಿಕೆ. ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಕೇವಲ ತನ್ನ ಹೃದಯವನ್ನು ತೆರೆದಿಡುತ್ತಾನೆ, ಕಾದಿರುತ್ತಾನೆ, ಪ್ರಾರ್ಥಿಸುತ್ತಾನೆ, ತಕ್ಷಣ ತನ್ನ ಹೃದಯದಲ್ಲಿ ಏನೋ ಕಲಕಿದಂತಾಗುತ್ತದೆ. “ದೇವರು ನನ್ನಲ್ಲಿ ಅವತರಿಸಿದ್ದಾನೆ” ಎಂಬುದಾಗಿ ತಪ್ಪದೇ ನೋಡುತ್ತಾನೆ. ಅವತಾರವೆಂದರೆ ದೇವರು ಇಳಿಯುವಿಕೆ ಕೆಳಕ್ಕೆ ಬರುವಿಕೆ.
ಮಹಾವೀರರು ಏರಿದರು, ಮೀರಾ ಅವರಿಗೆ ದೇವರು ಇಳಿದು ಬಂದ. ಆದರೆ ದೇವರು ಎಂದು ಕೆಳಕ್ಕೆ ಬರುವುದಿಲ್ಲ, ಎಂದೂ ಮೇಲಕ್ಕೆ ಹೋಗುವುದಿಲ್ಲ, ದೇವರು ಎಲ್ಲಿದ್ದಾನೆಯೋ ಅಲ್ಲಿಯೇ ಇದ್ದಾನೆ. ಆದರೆ ನಿಮ್ಮ ಅನುಭವ ಭಿನ್ನವಾಗಿರುತ್ತದೆ, ದೇವರನ್ನು ಹೊಂದಲು ತೀವ್ರ ಪ್ರಯತ್ನಮಾಡಿದ್ದೇ ಆದರೆ, ನೀವು ಉನ್ನತ, ಉನ್ನತ, ಉನ್ನತವಾಗಿ ಹೋಗುತ್ತೀರ; ನಿಮ್ಮಲೇ ಹುದುಗಿರುವ ದೇವರು ಉದಯವಾಗುತ್ತಿದ್ದಾನೆ, ಮೇಲಕ್ಕೆ ಬರುತ್ತಿದ್ದಾನೆ, ತುಟ್ಟತುದಿಯನ್ನು ತಲುಪುತ್ತಿದ್ದಾನೆ ಎಂದು ಭಾವಿಸುವುದು ಸ್ವಾಭಾವಿಕ. ಆದರೆ ನೀವು ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗೋಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ದಿವಸ ದೇವರು ನಿಮ್ಮಲ್ಲಿ ಅವತರಿಸಿದಂತೆ ಕಾಣುತ್ತೀರ. ಮೇಲಿನಿಂದ ಬಂದಂತೆ ಪರಮಾತ್ಮನನ್ನು ಅರಸುವವರಲ್ಲಿ ಇವು ಎರಡು ವಿಧವಾದ ಅನುಭವಗಳು, ಇದಕ್ಕೂ ದೇವರಿಗೂ ಯಾವ ಸಂಬಂಧವಿಲ್ಲ, ಅರಸುವವನ ಮಾರ್ಗಕ್ಕೆ ಸಂಬಂಧ ಪಟ್ಟದ್ದು,
ಭಕ್ತಿಪಂಥದವರು ದೇವರು ಅವತರಿಸಿದನೆನ್ನುತ್ತಾರೆ.
ಅನವಶ್ಯಕವಾದದ್ದನ್ನು ಮರೆತರೆ ಅವಶ್ಯಕವಾದದ್ದು ಜ್ಞಾಪಕದಲ್ಲಿ ನಮ್ಮಲ್ಲಿ ಉಂಟಾಗುತ್ತದೆ.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?
ಧಾರ್ಮಿಕ
Navavidha Bhakti : ಸಖನಾಗಿದ್ದೂ ಭಕ್ತಿಯನ್ನು ತೋರಬಹುದು!
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹನ್ನೆರಡನೇಯ ಲೇಖನ ಇಲ್ಲಿದೆ. ಇಂದು ಸಖ್ಯಭಕ್ತಿಯ ಕುರಿತು ವಿವರಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರಕಾರ ‘ಸಖ್ಯಭಕ್ತಿ’ (Sakhya Bhakti). ಸಖಾ ಎಂದರೆ ಸ್ನೇಹಿತ-ಮಿತ್ರ-ಸ್ನೇಹದಿಂದ ಕೂಡಿರುವವನು. ಇದಲ್ಲದೇ, ‘ಸ್ನೇಹ’ವೆಂದರೆ ಎಣ್ಣೆ-ಜಿಡ್ಡು ಎಂಬುದೂ ಒಂದರ್ಥ. ಎಣ್ಣೆಯ ವಿಶೇಷಧರ್ಮ ಅಂಟಿಕೊಳ್ಳುವುದು. ಅಂಟಿನಿಂದ ಕೂಡಿರುವುದರಿಂದ ಇದು ಸ್ನೇಹ. ‘ಅಂಟು’ ಎನ್ನುವುದೇ ‘ರಾಗ’. ರಾಗ-ಅನುರಾಗ ಎಂದರೆ ಪ್ರೀತಿ. ಪ್ರೀತಿಯನ್ನು ಭಗವಂತನಲ್ಲಿ ತೋರಿಸುವುದೇ ಭಕ್ತಿಯಾದ್ದರಿಂದ ಭಕ್ತಿಗೆ ವಿಶೇಷವಾಗಿ ಅಪೇಕ್ಷಿತವಾಗಿರುವುದು ರಾಗ. ಆದುದರಿಂದ ರಾಗ-ಸ್ನೇಹಭಾವದಿಂದ ಕೂಡಿ ಭಗವಂತನನ್ನು ಆರಾಧಿಸುವುದೇ ‘ಸಖ್ಯ-ಭಕ್ತಿ’ – ಭಗವಂತನಲ್ಲಿ ಮಿತ್ರನಲ್ಲಿರುವಂತಹ ಅಂಟಿನಿಂದ ಕೂಡಿರುವುದು.
ಸಖ್ಯದ ವೈಶಿಷ್ಟ್ಯ
ಮೈತ್ರಿಯಲ್ಲಿ ಪರಸ್ಪರ ಅಂಟು-ಸುಖ-ದುಃಖಗಳ ಹಂಚಿಕೆಯಿರುತ್ತವೆ. ಕಷ್ಟಗಳು ಒದಗಿಬಂದಾಗ ಗೆಳೆಯನಿಗೆ ಸಮಾಧಾನವನ್ನು ಹೇಳುತ್ತಾನೆ. A friend in need is a friend indeed (ಅವಶ್ಯಕತೆ ಇದ್ದಾಗ ಒದಗಿಬರುವವನೇ ನಿಜಕ್ಕೂ ಸ್ನೇಹಿತ) ಎಂಬ ಗಾದೆಯೂ ಇದನ್ನು ಪೋಷಿಸುತ್ತದೆ. ಸಖ್ಯಭಕ್ತಿಯಲ್ಲಿ ವಿಶೇಷವೆಂದರೆ ಭಗವಂತನಿಗೆ ಅತಿಸಮೀಪದಲ್ಲಿರಬಹುದು ಮತ್ತು ಭಕ್ತನು ಭಗವಂತನನ್ನು ಸಖನಾಗಿ ನೋಡುವಂತೆಯೇ ಭಗವಂತನೂ ಈತನನ್ನು ಸಖನಾಗಿ ನೋಡುತ್ತಾನೆ. ಅತ್ಯಂತ ನಿಕಟವರ್ತಿಯಾಗಿ ಭಕ್ತನಿಗೆ (ತನ್ನ ಹೆಗಲಮೇಲೆ ಕೈ ಹಾಕಿಕೊಳ್ಳುವುದು, ಪಕ್ಕದಲ್ಲೇ ಕೂರುವುದು ಮುಂತಾದ) ವಿಶೇಷ ಅಧಿಕಾರಗಳನ್ನೂ ಕೊಡುತ್ತಾನೆ.
ಕೃಷ್ಣ- ಅರ್ಜುನ
ಇತಿಹಾಸ-ಪುರಾಣಗಳಲ್ಲಿ ಕಥೆಗಳ ಮೂಲಕ ಸಖ್ಯಭಕ್ತಿಯ ಬಗೆಗೆ ತೋರಿಸಿಕೊಡುತ್ತಾರೆ. ಸಖ್ಯಭಕ್ತಿಗೆ ಪ್ರಸಿದ್ಧ ಉದಾಹರಣೆ ಅರ್ಜುನ. ಅವನು ಕೃಷ್ಣನ ಜೊತೆಜೊತೆಯಾಗಿಯೇ ಇದ್ದವನು. ಕೃಷ್ಣನೇ ಅರ್ಜುನನನ್ನು ತನ್ನ ಸ್ನೇಹಿತನೆಂದು ಪ್ರೀತಿಪೂರ್ವಕವಾಗಿ ಪ್ರಕಟಿಸಿಕೊಂಡಂತಹ ಪ್ರಸಂಗಗಳನೇಕ. ಮಿತ್ರನ ವಿಶೇಷ ಜವಾಬ್ದಾರಿಯೆಂದರೆ ಅವನು ಯಾವ ಸಂಕಟಕ್ಕೂ-ತೊಂದರೆಗೂ ಒಳಗಾಗದಂತೆ ನೋಡಿಕೊಳ್ಳುವುದು. ಅರ್ಜುನನ ವಿಷಯದಲ್ಲಿ ಅಂತಹ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಹೊತ್ತುಕೊಂಡಿದ್ದವನು ಕೃಷ್ಣನೇ. ಪಾಂಡವರೆಲ್ಲರ ವಿಷಯದಲ್ಲೂ ಕೃಷ್ಣನಿಗೆ ಅತ್ಯಂತ ಪ್ರೀತಿಯಿತ್ತು, ಕಾರಣ ಅವರು ಧರ್ಮಿಷ್ಠರಾಗಿದ್ದರು. ಅದರಲ್ಲೂ ಅರ್ಜುನನಲ್ಲಿ ವಿಶೇಷಪ್ರೀತಿ ಇತ್ತು ಎನ್ನುವುದಕ್ಕೆ ಕೆಲವು ಘಟನೆಗಳನ್ನು ಸ್ಮರಿಸಬಹುದು.
1. ಯುದ್ಧವಾಗಲೇಬೇಕೆಂದು ತೀರ್ಮಾನವಾದಾಗ ಶಕುನಿಯ ಪ್ರೇರಣೆಯಂತೆ ದುರ್ಯೋಧನನು ಕೃಷ್ಣನ ಬಳಿ ಬರುತ್ತಾನೆ. ನಿದ್ರಿಸುತ್ತಿದ್ದ ಕೃಷ್ಣನ ತಲೆಯ ಬಳಿ ಕುಳಿತುಕೊಳ್ಳುತ್ತಾನೆ. ನಂತರ ಬಂದ ಅರ್ಜುನ, ಕೃಷ್ಣನ ಪದತಲದಲ್ಲಿ ಕುಳಿತುಕೊಳ್ಳುತ್ತಾನೆ. ಕೃಷ್ಣ ಎಚ್ಚರವಾದೊಡನೆ ಅರ್ಜುನನನ್ನು ಮೊದಲು ಕಂಡು, ಅವನ ಆಗಮನಕ್ಕೆ ಕಾರಣವನ್ನು ಕೇಳುತ್ತಾನೆ; ನಂತರ ಹೇಳುತ್ತಾನೆ: ನನ್ನ ಹತ್ತಿರ ಮಹಾಬಲಿಷ್ಠರಿಂದ ಕೂಡಿದ ‘ನಾರಾಯಣಸೈನ್ಯ’ವಿದೆ ಈ ಸೈನ್ಯವನ್ನು ಬೇಕಾದರೆ ನಿನ್ನ ಸಹಾಯಕ್ಕೆಂದು ಕೊಡಬಲ್ಲೆ; ಅಥವಾ ಏಕಾಂಗಿಯಾಗಿ ನಿನ್ನ ಸಹಾಯಕ್ಕೆ ನಿಲ್ಲಬಲ್ಲೆ; ಆದರೆ ಯುದ್ಧದಲ್ಲಿ ನಾನೊಬ್ಬನೇ ಯಾವ ಆಯುಧವನ್ನೂ ಉಪಯೋಗಿಸದೇ ಇರುತ್ತೇನೆ. ಇದರಲ್ಲಿ ನಿನಗೆ ಯಾವುದು ಬೇಕೋ ಆರಿಸಿಕೊಳ್ಳಪ್ಪಾ”. ಶ್ರೇಷ್ಠವಾದ ಸೇನಾಬಲವನ್ನು ಅರ್ಜುನನೇ ಆರಿಸಿಕೊಂಡುಬಿಡುತ್ತಾನೆಂದು ಹೆದರಿದ ದುರ್ಯೋಧನನು “ನಾನೇ ಮೊದಲು ಬಂದವನು” ಎನ್ನುತ್ತಾನೆ.
ಆದರೆ ಕೃಷ್ಣನು “ಆದರೆ ನಾನು ಮೊದಲು ನೋಡಿದ್ದು ಅರ್ಜುನನನ್ನೇ” ಎಂದು ನುಡಿಯುತ್ತಾನೆ. ಅರ್ಜುನನೋ “ನೀನೊಬ್ಬನೇ ಬೇಕು ನನಗೆ” ಎಂದು ಉತ್ತರಿಸುತ್ತಾನೆ. ಮಹಾಸಂಗ್ರಾಮದಲ್ಲಿ ಬಲಿಷ್ಠರ ಸೈನ್ಯವು ಎಷ್ಟು ಆವಶ್ಯಕ ಎಂಬುದನ್ನರಿತಿದ್ದರೂ “ಭಗವಂತ ನೀನೊಬ್ಬ ಸಾಕಪ್ಪ, ಇನ್ಯಾರೂ ಬೇಡ” ಎನ್ನಬೇಕಾದರೆ ಅದೆಷ್ಟು ಭಕ್ತಿ ಅವನಿಗೆ! ಕೃಷ್ಣನನ್ನು ಎಷ್ಟು ಚೆನ್ನಾಗಿ ಅರಿತಿದ್ದನೆಂಬುದು ಸ್ಪಷ್ಟವಾಗುತ್ತದೆ. ಕೃಷ್ಣನೂ ಒಪ್ಪಿಕೊಳ್ಳುತ್ತಾನೆ.
ಅರ್ಜುನ, ಭಕ್ತನಾಗಿಯೂ ಮಿತ್ರನಾಗಿದ್ದಾನೆ. ಇದೇ ಸಖ್ಯಭಕ್ತಿ. ‘ನೀನೊಬ್ಬ ಇದ್ದರೆ ಸಾಕು, ನನಗೆ ಇನ್ನೇನು ಬೇಕು?’ ಎಂದಾಗ ಅಲ್ಲಿ ಭಕ್ತಿಭಾವದ ಜೊತೆಯಲ್ಲಿ ಶರಣಾಗತಿ ಭಾವವೂ ತುಂಬಿದೆ. ಆದರೆ ಮಿತ್ರನಂತೆ ಸಲುಗೆಯ ಮಾತೂ ಇದೆ.
2.ಕರ್ಣನ ವಿರುದ್ಧ ಯುದ್ಧ ಮಾಡುವಾಗ ಕರ್ಣನು ಇಂದ್ರನಿಂದ ಪಡೆದಂತಹ ಶಕ್ತ್ಯಾಯುಧವನ್ನು ಅರ್ಜುನನಮೇಲೆ ಪ್ರಯೋಗಿಸಿ ಆತನ ಕಥೆಯನ್ನು ಮುಗಿಸಲು ನಿಶ್ಚಯಿಸಿದ್ದ. ಆದರೆ ಕೃಷ್ಣನಿಗೆ ಸದಾ ಅರ್ಜುನನನ್ನು ಕಾಪಾಡುವುದರ ಚಿಂತೆಯೇ. ಆದ್ದರಿಂದ ಆ ಸಮಯಕ್ಕೆ ಸರಿಯಾಗಿ ಘಟೋತ್ಕಚನನ್ನು ಯುದ್ಧಕ್ಕೆ ಬರಮಾಡಿಸಿ ಕೌರವಸೇನೆಯನ್ನು ಸಂಕಷ್ಟಕ್ಕೆ ಒಳಪಡಿಸಿದ. ಇದನ್ನು ಸಹಿಸಲಾರದೇ, ವಿಧಿಯಿಲ್ಲದೇ ಕರ್ಣ ಅರ್ಜುನನಿಗಾಗಿ ಕಾಯ್ದಿರಿಸಿದ ಶಕ್ತ್ಯಾಯುಧವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿಬಿಡುತ್ತಾನೆ. ಅರ್ಜುನ ಬದುಕಿದ ಎಂದು ಕೃಷ್ಣನು ನಿಟ್ಟುಸಿರು ಬಿಡುತ್ತಾನಂತೆ!
3.ಕರ್ಣ ನಾಗಾಸ್ತ್ರವನ್ನು ಪ್ರಯೋಗಿಸಿದಾಗ ಕೃಷ್ಣ ಇಡೀ ರಥವನ್ನೇ ಅದುಮಿ ಅರ್ಜುನನ ಕಿರೀಟವನ್ನು ಮಾತ್ರವೇ ಹಾರಿಸಿಕೊಂಡು ಹೋಗುವಂತೆ ಉಪಾಯಮಾಡಿ ಇವನನ್ನು ಬದುಕಿಸುತ್ತಾನೆ!
4.‘ಅಭಿಮನ್ಯುವನ್ನು ಸಂಹರಿಸಲು ಕಾರಣನಾಗಿದ್ದ ಸೈಂಧವನನ್ನು ಮಾರನೆಯದಿನದ ಸಂಜೆಯೊಳಗೆ ಸಂಹಾರ ಮಾಡಿಯೇ ಮಾಡುತ್ತೇನೆ; ಇಲ್ಲದಿದ್ದಲ್ಲಿ ಅಗ್ನಿಪ್ರವೇಶ ಮಾಡುತ್ತೇನೆಂದು’ ಅರ್ಜುನನು ಶಪಥ ಮಾಡಿಬಿಡುತ್ತಾನೆ. ಆದರೆ ಅದನ್ನು ನೆರೆವೇರಿಸುವುದು ಅತ್ಯಂತ ಕಷ್ಟಸಾಧ್ಯವೆಂಬ ಪರಿಸ್ಥಿತಿ ಒದಗಿದಾಗ ಶ್ರೀಕೃಷ್ಣನು ತನ್ನ ಯೋಗಮಾಯೆಯಿಂದ ಸೂರ್ಯಾಸ್ತವಾದಂತೆ ತೋರಿಸುತ್ತಾನೆ. ಆಗ ಸೈಂಧವ ತನಗಿದ್ದ ವಿಶೇಷರಕ್ಷಣೆಯನ್ನು ಬಿಟ್ಟು ಹೊರಬರುತ್ತಾನೆ.
ಅರ್ಜುನ ಆಗ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ. ಅವನಿಗಾಗಿ ಕೃಷ್ಣ ತನ್ನ ಯೋಗಮಾಯೆಯನ್ನು ತೋರಿಸುವುದಕ್ಕೂ ಹಿಂಜರಿಯಲಿಲ್ಲ. ‘ನನ್ನ ಸಖ ನೀನು, ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ’ ಎಂಬುದಾಗಿ ಕೃಷ್ಣನು ಬಾಯಿಬಿಟ್ಟು ಹೇಳಿಕೊಳ್ಳುವ ಪ್ರಸಂಗಗಳುಂಟು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
5.ಮತ್ತೊಂದು ಪ್ರಸಂಗ. ಯುದ್ಧವು ಮುಗಿದ ಮೇಲೆ ಕೊನೆಯಲ್ಲಿ “ಅರ್ಜುನ! ರಥದಿಂದ ಇಳಿ ಕೆಳಗೆ” ಎಂದು ಕೃಷ್ಣ ಆಜ್ಞೆಮಾಡುತ್ತಾನೆ. ಆಗ ಅರ್ಜುನನು “ಸಾರಥಿ ಮೊದಲು ಇಳಿಯಬೇಕು. ನಂತರ ರಥಿಯಾದ ನಾನು ಇಳಿಯಬೇಕು, ಅದೇ ನಿಯಮ” ಎಂಬುದಾಗಿ ಕೃಷ್ಣನಿಗೇ ಉಪದೇಶ ಮಾಡುತ್ತಾನೆ.
“ನಾನು ಹೇಳಿದಂತೆ ಕೇಳು” ಎಂದು ಮಿತ್ರನೇ ಆದರೂ ಪ್ರಭುವಿನಂತೆ ಆಜ್ಞೆ ಮಾಡುತ್ತಾನೆ ಕೃಷ್ಣ. ಅರ್ಜುನನು ರಥದಿಂದ ಇಳಿದ ಬಳಿಕ ಕೃಷ್ಣನು ಇಳಿದ ಮರುಕ್ಷಣವೇ ರಥವು ಉರಿದುಭಸ್ಮವಾಗುತ್ತದೆ. “ನಾನು ಮೊದಲು ಇಳಿದುಬಿಟ್ಟಿದ್ದರೆ ನಿನ್ನ ಕಥೆ ಏನಾಗುತ್ತಿತ್ತು ನೋಡಿದೆಯಾ?” ಎನ್ನುತ್ತಾನೆ ಕೃಷ್ಣ. ಅಂದರೆ ಎಲ್ಲಾ ಸಂದರ್ಭಗಳಲ್ಲೂ ಕೃಷ್ಣ ಅವನಿಗೆ ರಕ್ಷಕನಾಗಿಯೂ, ಅಂಗರಕ್ಷಕನಾಗಿಯೂ ಇದ್ದು ಸಖ್ಯತ್ವವನ್ನು ಪರಿಪಾಲಿಸಿದ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ20 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ21 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ13 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ20 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ11 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕ್ರಿಕೆಟ್24 hours ago
Team India : ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ಭಾರತಕ್ಕೆ ಅಫಘಾನಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ರದ್ದು!
-
ಕರ್ನಾಟಕ22 hours ago
Sulochana Latkar: ಬೆಳಗಾವಿಯಲ್ಲಿ ಹುಟ್ಟಿ ಬಾಲಿವುಡ್ನಲ್ಲಿ ಮಿಂಚಿದ್ದ ನಟಿ ಸುಲೋಚನಾ ಲಾಟ್ಕರ್ ಇನ್ನಿಲ್ಲ