ಧಾರ್ಮಿಕ
Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹನ್ನೊಂದನೇ ಲೇಖನ ಇಲ್ಲಿದೆ. ಇಂದು ದಾಸ್ಯಭಕ್ತಿಯ ಕುರಿತು ವಿವರಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ದಾಸ್ಯ ಭಕ್ತಿ – 2 ( ದಾಸ್ಯ ಭಕ್ತಿಯ ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ)
ದಾಸ್ಯ ಭಾವವು ಪೂಜೆಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ವಿಸ್ತಾರವಾಗಿದೆ. ಇಂತಹ ಸೇವಾಕಾರ್ಯಕ್ಕೆ ಉತ್ತಮ ಉದಾಹರಣೆ ಹನುಮಂತ. ಪ್ರತಿಯೊಂದು ಹಂತದಲ್ಲೂ ರಾಮನ ಸ್ಮರಣೆಯೇ, ರಾಮನ ಸಂತೋಷವೇ ಅವನ ಉದ್ದೇಶವಾಗಿತ್ತು. ಮಹಾಬಲಶಾಲಿ, ವೀರ್ಯವಂತ; ಜೊತೆಗೆ ಬುದ್ಧಿವಂತ, ವಾಗ್ಮಿ. ರಾವಣನ ಮುಂದೆ ದೂತನಾಗಿಯೂ, ಸುಗ್ರೀವನಲ್ಲಿ ಮಂತ್ರಿಯಾಗಿಯೂ, ಯುದ್ಧದಲ್ಲಿ ವೀರನಾಗಿಯೂ ವರ್ತಿಸುತ್ತಾನೆ. ಜ್ಞಾನದಲ್ಲಿಯೂ ಶ್ರೇಷ್ಠ. ಆತ್ಮಜ್ಞಾನ ಸಂಪನ್ನ. ಪರಮಭಕ್ತ-ಭಾಗವತ. ಅಣಿಮಾದಿ ಅಷ್ಟಸಿದ್ಧಿಗಳೂ ಅವನ ವಶದಲ್ಲಿದ್ದುವು. ಇಷ್ಟೆಲ್ಲಾ ಶಕ್ತಿಗಳನ್ನೂ ರಾಮಕಾರ್ಯಕ್ಕಾಗಿಯೇ ಬಳಸುತ್ತ ರಾಮಸೇವೆಯನ್ನು ಮಾಡುತ್ತಿದ್ದ ಅಪ್ರತಿಮ ದಾಸನು.
ಅಷ್ಟೆಲ್ಲಾ ಶಕ್ತಿಯಿಲ್ಲದವರೂ ಇರುವಷ್ಟರಲ್ಲಿಯೇ ಭಗವಂತನ ಸೇವೆ ಮಾಡಬಹುದು. ಶ್ರೀಮದ್ರಾಮಾಯಣದಲ್ಲಿ ಸಮುದ್ರ-ಸೇತುವೆಯ ನಿರ್ಮಾಣ ಸಮಯದಲ್ಲಿ ಅಳಿಲೂ, ಸೇವೆ ಮಾಡಿದ ಕಥೆ ಪ್ರಸಿದ್ಧವಾಗಿದೆ. ಅಳಿಲು, ನೀರಿನಲ್ಲಿ ಮುಳುಗಿ, ಮರಳಲ್ಲಿ ಹೊರಳಾಡಿ, ತನ್ನ ಮೈಗೆ ಅಂಟಿದ ಮರಳನ್ನು ಸೇತುವೆ ಕಟ್ಟಿದ ಜಾಗದಲ್ಲಿ ಉದುರಿಸಿತು ಅಷ್ಟೆ. ಹೀಗೆ ಉದುರಿಸಿದ ಮರಳಿನಿಂದ ಸೇತುವೆ ಕಟ್ಟಲಾದೀತೇ! ವಿಚಾರಕ್ಕಿಂತ ಇದರ ಹಿಂದಿರುವ ಭಕ್ತಿಭಾವ-ಸೇವಾಭಾವ ಎಂತಹುದ್ದು! “ಅಳಿಲಸೇವೆ”ಯು ನಿಜವಾದ ಘಟನೆಯೋ ಅಥವಾ ಕವಿಕಲ್ಪನೆಯೋ ನಾವರಿಯೆವು. ಆದರೆ ಇದರಿಂದ ನಮ್ಮಲ್ಲಿ ಸಂತೋಷ-ಉತ್ಸಾಹ-ಭಕ್ತಿಭಾವಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ. ಅಂತಹ ಉತ್ಸಾಹ-ಭರಿತವಾದ ಪೂರ್ಣಶಕ್ತಿಪ್ರಯೋಗದ “ಅಳಿಲುಸೇವೆ”ಯೂ ಶ್ರೀರಾಮನಿಗೆ ಪ್ರಿಯವಾದದ್ದು.
ಕ್ರಿಯೆಗಳೆಲ್ಲವೂ ಸೇವೆಯಾಗುವುದು ಹೇಗೆ?
ಸೇವೆಯ ವಿಸ್ತೃತರೂಪದ ಬಗೆಗೆ ಶ್ರೀರಂಗಮಹಾಗುರುಗಳು ದಯಪಾಲಿಸಿದ ನೋಟವನ್ನು ಗಮನಿಸುವುದಾದರೆ; ವೃಕ್ಷದಿಂದ ಫಲವನ್ನು ಪಡೆದು ಸಂತೋಷಿಸುವುದೇ ವೃಕ್ಷವನ್ನು ಬೆಳಸುವುದರ ಉದ್ದೇಶ. ಗಿಡಕ್ಕೆ ನೀರು-ಗೊಬ್ಬರಗಳನ್ನು ಹಾಕುವುದು, ಅಗತ್ಯವಿದ್ದಲ್ಲಿ ಔಷಧಿ ಹೊಡೆಯುವುದು, ಸೊಂಪಾಗಿ ಬೆಳೆಯಲು ಕಾಲಕಾಲಕ್ಕೆ ಕತ್ತರಿಸುವುದು ಇತ್ಯಾದಿಗಳೆಲ್ಲವೂ ಫಲದ ಕಡೆಗೆ ಗಮನವಿಟ್ಟು ಮಾಡುವ ಕ್ರಿಯೆಗಳೇ.
ಎಲೆಯಲ್ಲಿನ ಸಣ್ಣ-ಸಣ್ಣ ನರಗಳಿಂದ ಹಿಡಿದು ಗಿಡದಲ್ಲಿರುವ ಪ್ರತಿಯೊಂದು ಭಾಗದೊಡನೆಯೂ ಸಂಬಂಧವನ್ನು ಹೊಂದಿರುವ ಬೇರು, ಇಡೀ ವೃಕ್ಷವನ್ನು ರಕ್ಷಿಸುವ-ಪೋಷಿಸುವ ಭಾಗವಾಗಿದೆ. ಆದ್ದರಿಂದಲೇ ನೀರು-ಗೊಬ್ಬರಗಳನ್ನು ಮೇಲೆ ಇರುವ ಕಾಯಿ-ಹೂವಿಗೆ ಹಾಕದೆ, ಕೆಳಗಿರುವ ಬೇರಿಗೇ ಹಾಕುತ್ತೇವೆ. ಆದ್ದರಿಂದ ಬೇರಿಗೆ ಮಾಡುವ ‘ಸೇವಾಕಾರ್ಯ’ ಇಡೀ ವೃಕ್ಷಕ್ಕೇ ಮಾಡುವ ಸೇವೆಯಾಗುತ್ತದೆ. ಬೇರು ತನ್ನಲ್ಲಿಗೆ ಬಂದ ನೀರು-ಗೊಬ್ಬರಗಳನ್ನು ತಾನು ಇಟ್ಟುಕೊಳ್ಳದೆ ಇಡೀ ವೃಕ್ಷಕ್ಕೆ ಒದಗಿಸಿ ಫಲವನ್ನು ನೀಡುತ್ತದೆ. ಮೂಲ ಉದ್ದೇಶಕ್ಕೆ ಪೋಷಕವಾದ ಕೆಲಸಗಳೆಲ್ಲವೂ ಸೇವೆಯೇ. ಅಂತೆಯೇ ಅದಕ್ಕೆ ವಿರೋಧವಾದವುಗಳಾವುವೂ ಸೇವೆಯಾಗುವುದಿಲ್ಲ.
ನಮ್ಮ ದೇಹವೂ ಒಂದು ವೃಕ್ಷವೇ. ಇದರಲ್ಲಿ ಇಂದ್ರಿಯ-ಮನಸ್ಸು-ಬುದ್ಧಿಗಳ ಮೂಲಕ ಮಾಡುವ ಕ್ರಿಯೆಗಳೆಲ್ಲವೂ ಮಹಾಫಲವನ್ನು ಹೊಂದಲನುಗುಣವಾಗಿದ್ದರೆ ಇವೆಲ್ಲವೂ ಸೇವೆಯೇ ಆಗುತ್ತವೆ. ಜೀವ-ದೇವರ ಸಂಯೋಗವೇ (ಭಗವಂತನಲ್ಲಿ ಒಂದಾಗಿ ಸೇರಿಕೊಳ್ಳುವುದೇ) ಈ ವೃಕ್ಷದಿಂದ ದೊರೆಯುವ ಮಹಾಫಲ. ಅದಕ್ಕೆ ಪೋಷಕವಾದ ಕ್ರಿಯೆಗಳೆಲ್ಲವೂ ಸೇವಾಕಾರ್ಯಗಳೇ. ಭಗವಂತನ ಪ್ರೀತ್ಯರ್ಥವಾದದ್ದೆಲ್ಲವೂ ಸೇವೆಯೇ. ಆದರೆ ಭಗವಂತನ ಪ್ರೀತಿ-ಅಪ್ರೀತಿಗಳ ತಿಳಿವಳಿಕೆಯನ್ನು ಭಗವಂತನನ್ನು ಚೆನ್ನಾಗಿ ಅರಿತ ಜ್ಞಾನಿಗಳಿಂದ, ಋಷಿಗಳಿಂದ ತಿಳಿಯಬೇಕು.
ಭಗವತ್ಪ್ರೀತಿಕರವಾಗಿ ಮಾಡಿದಾಗ ಧನಸಹಾಯ, ಔಷಧಿಸಹಾಯ ಮುಂತಾದ ಎಲ್ಲಾ ಸಮಾಜಸೇವಾರೂಪವಾದ (social service) ಕ್ರಿಯೆಗಳನ್ನೂ ಸೇವಾಕಾರ್ಯವಾಗಿ ಪರಿವರ್ತಿಸಬಹುದು. ಕೇವಲ ಆರಾಧನೆಯನ್ನಷ್ಟೇ ಸೇವಾಕಾರ್ಯ ಎಂದೆಣಿಸಬಾರದು.
ಆಂಜನೇಯ, ಪ್ರತಿ ಹೆಜ್ಜೆಯಲ್ಲಿಯೂ ರಾಮನನ್ನೇ ಭಾವಿಸುತ್ತ ಸೇವೆ ಸಲ್ಲಿಸಿದನೆಂಬುದನ್ನು ಗಮನಿಸಬಹುದು. ಇಂದ್ರಜಿತ್ತನು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ರಾಮಲಕ್ಷ್ಮಣರು ಮೂರ್ಛೆ ಹೋದಾಗ ಹಿಮಾಲಯದಿಂದ ಸಂಜೀವಿನಿಪರ್ವತದಲ್ಲಿರುವ ಮೂಲಿಕೆ ತರಲು ಹೋಗಿ ಆ ಬೆಟ್ಟವನ್ನೇ ಹೊತ್ತುತಂದ ಕಥೆ ಪ್ರಸಿದ್ಧ. ಅಷ್ಟು ಬಲಶಾಲಿಯೂ, ವಾಯುಪುತ್ರನೂ ಆದವನು ವಾಯುವೇಗದಲ್ಲಿ ಬಂದುಸೇರಿದನು. ಅದರಿಂದಲೇ ರಾಮಲಕ್ಷ್ಮಣರ ಜೀವ ಉಳಿಯಿತು. ಇನ್ನು ಸೀತೆಯನ್ನು ರಕ್ಷಿಸಿದ ವಿಷಯ ಪ್ರಸಿದ್ಧವಾದದ್ದು. ಒಂದು ನಿಮಿಷ ತಡವಾಗಿದ್ದರೂ ಅಶೋಕವನದಲ್ಲಿದ್ದ ಸೀತೆಯು ರಾವಣನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಳು. ಅದೇ ಸಮಯದಲ್ಲಿ ಆಂಜನೇಯನು ರಾಮನ ವರ್ಣನೆಯನ್ನು ಮಾಡಿ ಅವಳಿಗೆ ಸಂತೋಷವನ್ನುಂಟುಮಾಡಿ ಸೀತೆಯನ್ನೂ ಬದುಕಿಸಿದನು ಎನ್ನಬಹುದು.
ಹದಿನಾಲ್ಕುವರ್ಷ ಮುಗಿಯುತ್ತಲೇ ಪ್ರಾಯೋಪವೇಶಕ್ಕೆ ಅನುವು ಮಾಡಿಕೊಳ್ಳುತ್ತಿದ್ದ ಭರತನಿಗೆ ರಾಮನ ಆಗಮನದ ಸುದ್ದಿಯನ್ನು ತಿಳಿಸಿ ಆಂಜನೇಯ ಭರತನಿಗೂ ಸೇವೆ ಮಾಡುತ್ತಾನೆ ಎಂಬುದಾಗಿ ವಾಲ್ಮೀಕಿ ಮಹರ್ಷಿಯು ಸಂತೋಷವಾಗಿ ನುಡಿಯುತ್ತಾರೆ. ಇಷ್ಟೆಲ್ಲ ಸೇವೆಯ ಮಧ್ಯದಲ್ಲಿ ವಿರಾಮ ದೊರೆತಾಗ ಕಲ್ಲುಬಂಡೆಯ ಮೇಲೆ ಕುಳಿತು ರಾಮನಾಮವನ್ನು ಜಪಿಸುತ್ತಾ ರಾಮಧ್ಯಾನದಲ್ಲಿ ನಿರತನಾಗಿರುವವನು ಹನುಮಂತ.
ಮಹಾಪರಾಕ್ರಮಿಯೂ ಜಿತೇಂದ್ರಿಯನೂ ಆದ ಲಕ್ಷ್ಮಣನು ಸ್ವಂತ ಸುಖವೆಲ್ಲವನ್ನೂ ತ್ಯಜಿಸಿ ಶ್ರೀರಾಮನ ಸೇವೆಗಾಗಿ ಅರಣ್ಯಕ್ಕೆ ತೆರಳಿದ ವೃತ್ತಾಂತ ಸುಪ್ರಸಿದ್ಧ. ಹಗಲಿರುಳೆನ್ನದೇ ಅರಣ್ಯದಲ್ಲಿ ಅನವರತವೂ ಹದಿನಾಲ್ಕು ವರ್ಷ ನಿದ್ರೆಯನ್ನೇ ವರ್ಜಿಸಿ ಸೀತಾರಾಮರ ಸೇವೆಯಲ್ಲಿಯೇ ನಿರತನಾಗಿದ್ದ ಸೇವಕ, ಅಪೂರ್ವತ್ಯಾಗಿ ಲಕ್ಷ್ಮಣ, ದಾಸ್ಯಕ್ಕೆ ಮಾದರಿಯೆನಿಸಿಕೊಳ್ಳುತ್ತಾನೆ.
ಭಗವಂತನಲ್ಲಿ ದಾಸ್ಯಭಾವವಿರುವಂತೆಯೇ ಪರಮಭಾಗವತರಿಗೆ-ಭಗವಂತನ ಭೃತ್ಯರಿಗೆ ಸೇವೆಮಾಡಿದರೂ ಭಗವಂತನಿಗೇ ತಲಪುತ್ತದೆ. ಅದರ ಪರಂಪರೆ ಹೇಗೆಂದರೆ ‘ತ್ವದ್ಭೃತ್ಯ ಭೃತ್ಯ ಪರಿಚಾರಕ ಭೃತ್ಯ-ಭೃತ್ಯ ಭೃತ್ಯಸ್ಯ-ಭೃತ್ಯ ಇತಿ ಮಾಂ ಸ್ಮರ ಲೋಕನಾಥ’ ಎಂದು ಕುಲಶೇಖರ ಆಳ್ವಾರರು ಕೊಂಡಾಡುತ್ತಾರೆ. “ಭಗವಂತ, ನನ್ನನ್ನು ಹೇಗೆ ತಿಳಿಯಬೇಕೆಂದರೆ ನಿನ್ನ ಭೃತ್ಯ(ಸೇವಕ), ನಿನ್ನ ಭೃತ್ಯರಿಗೆ ಭೃತ್ಯರಿಗೆ…. ಹೀಗೆ ಐದು ಆರು ಪರಂಪರೆ ದಾಟಿನಿಂತು ನಿನ್ನ ಸೇವೆ ಮಾಡುವ ದಾಸ ಎಂದು ತಿಳಿಯಬೇಕು” ಎನ್ನುತ್ತಾರೆ. “ದಾಸ-ದಾಸ-ದಾಸರ ದಾಸ್ಯವ ಕೊಡೋ….” ಗೀತವೂ ಇದನ್ನೇ ಪುನರುಕ್ತಿಗೊಳಿಸುತ್ತದೆಯಲ್ಲವೇ?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ಎಂಜಿನ್ ಹಿಂದೆ ಹದಿನೈದು ಬೋಗಿಗಳಿದ್ದರೂ ಕೊನೆಯ ಬೋಗಿಗೂ ಎಂಜಿನ್ನಿಗೂ ಕೊಂಡಿಯ ಮೂಲಕ ಸಂಬಂಧ ಇದ್ದೇ ಇರುತ್ತದೆ (ಕೊಂಡಿ ಕಳಚಿಕೊಳ್ಳದಿದ್ದರೆ!) ಅಂತೆಯೇ ಆ ಭೃತ್ಯರೆಲ್ಲರೂ ದಾಸ್ಯಭಾವದ ಕೊಂಡಿಯನ್ನು ಭದ್ರವಾಗಿ ಹಿಡಿದಿರುವುದರಿಂದ ಕೊನೆಯ ಭೃತ್ಯರಿಗೂ ಭಗವಂತನ ದಾಸ್ಯಸಂಬಂಧ ಇರುತ್ತದೆ. ಆದ್ದರಿಂದ ಭಗವದ್ಭಕ್ತರಲ್ಲಿ ದಾಸ್ಯಭಾವವಿರುವುದೂ ಆಷ್ಟೇ ಶ್ರೇಷ್ಠವಾದದ್ದು. ದಾಸ್ಯವನ್ನೇ ವೃತ್ತಿಯನ್ನಾಗಿಟ್ಟು ಭಗವಂತನ ಮಹಿಮೆಯನ್ನು ಮನೆಮನೆಗೂ ತಲುಪಿಸಿ ಸ್ಫೂರ್ತಿಯನ್ನು ತುಂಬುತ್ತಿದ್ದ ಪುರಂದರದಾಸರು-ಕನಕದಾಸರು ಮುಂತಾದ ದಾಸಶ್ರೇಷ್ಠರನ್ನು ಸ್ಮರಿಸೋಣ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ನಮಸ್ಕಾರ ಕೂಡ ಭಕ್ತಿಯ ಒಂದು ಪ್ರಕಾರ!
ಧಾರ್ಮಿಕ
Prerane : ಕನ್ಯೆ ಎಂದರೆ ಯಾರು? ಈ ಪದಕ್ಕಿರುವ ಮಹತ್ವವೇನು?
“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಕನ್ಯೆ ಪದದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.
ನರಸಿಂಹ ಭಟ್ಟ
ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.
‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ತ್ರೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ.
ವಿಶೇಷವಾಗಿ ಕನ್ಯಾ ಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ;
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||
ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾ ಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮ ದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ʼ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ; “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿಯಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ದೇಶ
Sharada Devi Idol: ತಿತ್ವಾಲ್ ಶಾರದಾ ದೇವಿ ದೇಗುಲಕ್ಕೆ ಶೃಂಗೇರಿ ವಿಧುಶೇಖರ ಭಾರತೀ ಶ್ರೀಗಳ ಭೇಟಿ
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಚಿಕ್ಕಮಗಳೂರು: ತಿತ್ವಾಲ್‌ನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಶಾರದಾಂಬೆ ದೇವಾಲಯಕ್ಕೆ (sharadamba temple) ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati) ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಿತ್ವಾಲ್‌ನಲ್ಲಿದ್ದ ಪುರಾತನ ಶಾರದಾಂಬಾ ದೇವಾಲಯ ಪಾಳುಬಿದ್ದಿತ್ತು. ಇದು ಪಾಕ್ ಆಕ್ರಮಿತ ಪ್ರದೇಶದಲ್ಲಿದೆ. ಇಲ್ಲಿನ ಶಾರದಾಂಬಾ ದೇವಾಲಯವನ್ನು ನವೀಕರಣ ಮಾಡಲಾಗಿದ್ದು, 75 ವರ್ಷಗಳ ಬಳಿಕ ಇಲ್ಲಿ ಶಾರದಾಂಬೆ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ.
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್‌ನ ದೇವಾಲಯವನ್ನೂ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದರು ಎಂಬ ಇತಿಹಾಸ ಇದೆ. ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ಅಲ್ಲಿಂದ ತಿತ್ವಾಲ್‌ಗೆ ಭೇಟಿ ನೀಡಿದ ವಿಧುಶೇಖರ ಭಾರತೀ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿತು.
ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ
ಧಾರ್ಮಿಕ
ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!
ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ ಎನ್ನುತ್ತಿದ್ದಾರೆ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್. ತಾತಯ್ಯರ ವಚನಗಳ ಒಳಾರ್ಥವನ್ನು ತಿಳಿಸುವ ಅವರ ಅಂಕಣ ಬರಹ ʻತಾತಯ್ಯ ತತ್ವಾಮೃತಂʼ ಇಲ್ಲಿದೆ.
“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ” ಎಂದಿದ್ದಾರೆ.
ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.
ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||
ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..
ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.
ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.
ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||
ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.
ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.
ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||
ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ
ಧಾರ್ಮಿಕ
Prerane : ದೇವರ ಅವತಾರ; ಏನಿದು ವಿಚಾರ?
ನಿಮ್ಮನ್ನು ನೀವು ದೇವರಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗುವುದಿಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರಿ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.
ಶ್ರೀ ಕೈವಲ್ಯಾನಂದ ಸರಸ್ವತೀ
ಇರುವಿಕೆಯೇ ದೇವರು. ದೇವರು ಏರುವುದೂ ಇಲ್ಲ, ಇಳಿಯುವುದೂ ಇಲ್ಲ. ದೇವರು ಎಲ್ಲಿಗೆ ಏರಬೇಕು, ಎಲ್ಲಿಗೆ ಇಳಿಯಬೇಕು, ದೇವರನ್ನು ಬಿಟ್ಟರೆ ಮತ್ತಾರು ಇಲ್ಲ, ಮತ್ತಾವುದೂ ಇಲ್ಲ, ಇರುವುದೆಲ್ಲವೂ ದೈವವೇ ಆದಕಾರಣ ಮೊದಲನೆಯದಾಗಿ “ದೇವರು ಏರುವುದೂ ಇಲ್ಲ. ಇಳಿಯುವುದೂ ಇಲ್ಲ”.
ಆದರೆ “ಅವತಾರ” ಎಂದು ಹೇಳುವಾಗ ಅದರಲ್ಲಿ ಏನೋ ಒಂದು ತಾತ್ವಿಕಾರ್ಥವಿರಬೇಕು. ಅರ್ಥವು ಸಂಪೂರ್ಣವಾಗಿ ಬಿನ್ನ ಅದನ್ನು ಈಗ ನೋಡುವ; ಇರುವಿಕೆಯೇ ದೇವರು. ಪವಿತ್ರವಾದ ಇರುವಿಕೆ. ಇಡೀ ಪ್ರಪಂಚ ದೇವರಿಂದಲೇ ತುಂಬಿದೆ, ತನ್ನ ಅಸ್ಥಿತ್ವವನ್ನು (ಪ್ರಪಂಚವನ್ನು) ತಾನು ತುಂಬಿರುತ್ತಾನೆ. ದೇವರ ಅವತಾರಕ್ಕೆ ಅರ್ಥವಿರಬೇಕು.
ಮನುಷ್ಯ ದೇವರನ್ನು ಅರಸುವುದು ಎರಡು ವಿಧ: ದೇವರು ಒಬ್ಬನೇ ಸತ್ಯವೆಂದಾಗ “ಮನುಷ್ಯ” ಎಂದರೆ ಏನು? ತಾನು ದೇವರೆಂಬುದನ್ನು ಮರೆತು ಹೋಗಿರುವಾಗ ದೇವರೇ ಮನುಷ್ಯ. ಮನುಷ್ಯನೆಂದರೆ ಮರೆತಿದ್ದಾನೆ- ತನ್ನನ್ನು ತಾನು ಮರೆತಿದ್ದಾನೆ. ಮನುಷ್ಯ ತನ್ನ ದೈವತ್ವವನ್ನು ಎರಡು ವಿಧದಲ್ಲಿ ಸ್ಮರಿಸಿಕೊಳ್ಳಬಹುದು: ಸಮರ್ಪಣೆ, ಭಕ್ತಿ, ಪ್ರೇಮ, ಪ್ರಾರ್ಥನೆ – ಇದು ಒಂದು ಮಾರ್ಗ, ಮತ್ತೊಂದು ಮಾರ್ಗವೆಂದರೆ
ದೃಡನಿಶ್ಚಯ. ಮನಸ್ಸು ಮಾಡುವಿಕೆ ಧ್ಯಾನ (ಜ್ಞಾನ) ಯೋಗ.
ಮನಃ ಪೂರ್ವಕ ಪ್ರಯತ್ನದಿಂದ ಪ್ರಯಾಣ ಮಾಡಲು ಪ್ರಯತ್ನ ಪಟ್ಟಾಗ ಆಗ ಆತ ತಾನು ದೈವತ್ವಕ್ಕೆ ಏರುತ್ತಿದ್ದೇನೆ ಎಂದು ಭಾವಿಸುತ್ತಾನೆ. ಈ ಕಾರಣಕ್ಕಾಗಿ ಜೈನ ಸಂಪ್ರದಾಯದಲ್ಲಿ ದೈವತ್ವ ಪಡೆದವನನ್ನು “ತೀರ್ಥಂಕರ” ಎನ್ನುತ್ತಾರೆ. ತೀರ್ಥಂಕರ ಎಂದರೆ ಪ್ರಜ್ಞೆ, ಅರಿವು ಶಿಖರವನ್ನು ಮುಟ್ಟಿದೆ, ಮನುಷ್ಯ ಏರುವ ಮುಖಾಂತರ ತಲುಪಿದ್ದಾನೆ – ಮನೋ ನಿಶ್ಚಯದ ಪ್ರಯತ್ನದ ಜ್ಞಾನ ಯೋಗದ ಒಂದು ಏಣಿ ಇರುವಂತೆ.
ಅವತಾರವೆಂದರೆ ದೇವರು ಇಳಿದು ಬರುವಿಕೆ, ಇದು ಮತ್ತೊಂದು ರೀತಿ ದೇವರನ್ನು ಸೇರುವಿಕೆ – ಮರೆತಿರುವುದನ್ನು ಜ್ಞಾಪಿಸಿಕೊಳ್ಳುವಿಕೆ. ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಕೇವಲ ತನ್ನ ಹೃದಯವನ್ನು ತೆರೆದಿಡುತ್ತಾನೆ, ಕಾದಿರುತ್ತಾನೆ, ಪ್ರಾರ್ಥಿಸುತ್ತಾನೆ, ತಕ್ಷಣ ತನ್ನ ಹೃದಯದಲ್ಲಿ ಏನೋ ಕಲಕಿದಂತಾಗುತ್ತದೆ. “ದೇವರು ನನ್ನಲ್ಲಿ ಅವತರಿಸಿದ್ದಾನೆ” ಎಂಬುದಾಗಿ ತಪ್ಪದೇ ನೋಡುತ್ತಾನೆ. ಅವತಾರವೆಂದರೆ ದೇವರು ಇಳಿಯುವಿಕೆ ಕೆಳಕ್ಕೆ ಬರುವಿಕೆ.
ಮಹಾವೀರರು ಏರಿದರು, ಮೀರಾ ಅವರಿಗೆ ದೇವರು ಇಳಿದು ಬಂದ. ಆದರೆ ದೇವರು ಎಂದು ಕೆಳಕ್ಕೆ ಬರುವುದಿಲ್ಲ, ಎಂದೂ ಮೇಲಕ್ಕೆ ಹೋಗುವುದಿಲ್ಲ, ದೇವರು ಎಲ್ಲಿದ್ದಾನೆಯೋ ಅಲ್ಲಿಯೇ ಇದ್ದಾನೆ. ಆದರೆ ನಿಮ್ಮ ಅನುಭವ ಭಿನ್ನವಾಗಿರುತ್ತದೆ, ದೇವರನ್ನು ಹೊಂದಲು ತೀವ್ರ ಪ್ರಯತ್ನಮಾಡಿದ್ದೇ ಆದರೆ, ನೀವು ಉನ್ನತ, ಉನ್ನತ, ಉನ್ನತವಾಗಿ ಹೋಗುತ್ತೀರ; ನಿಮ್ಮಲೇ ಹುದುಗಿರುವ ದೇವರು ಉದಯವಾಗುತ್ತಿದ್ದಾನೆ, ಮೇಲಕ್ಕೆ ಬರುತ್ತಿದ್ದಾನೆ, ತುಟ್ಟತುದಿಯನ್ನು ತಲುಪುತ್ತಿದ್ದಾನೆ ಎಂದು ಭಾವಿಸುವುದು ಸ್ವಾಭಾವಿಕ. ಆದರೆ ನೀವು ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗೋಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ದಿವಸ ದೇವರು ನಿಮ್ಮಲ್ಲಿ ಅವತರಿಸಿದಂತೆ ಕಾಣುತ್ತೀರ. ಮೇಲಿನಿಂದ ಬಂದಂತೆ ಪರಮಾತ್ಮನನ್ನು ಅರಸುವವರಲ್ಲಿ ಇವು ಎರಡು ವಿಧವಾದ ಅನುಭವಗಳು, ಇದಕ್ಕೂ ದೇವರಿಗೂ ಯಾವ ಸಂಬಂಧವಿಲ್ಲ, ಅರಸುವವನ ಮಾರ್ಗಕ್ಕೆ ಸಂಬಂಧ ಪಟ್ಟದ್ದು,
ಭಕ್ತಿಪಂಥದವರು ದೇವರು ಅವತರಿಸಿದನೆನ್ನುತ್ತಾರೆ.
ಅನವಶ್ಯಕವಾದದ್ದನ್ನು ಮರೆತರೆ ಅವಶ್ಯಕವಾದದ್ದು ಜ್ಞಾಪಕದಲ್ಲಿ ನಮ್ಮಲ್ಲಿ ಉಂಟಾಗುತ್ತದೆ.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!