ಕರ್ನಾಟಕ
Grammy awards 2023: ಯಾರು ಈ ರಿಕ್ಕಿ ಕೇಜ್? ಕನ್ನಡಿಗನ ವಿವರ ಇಲ್ಲಿದೆ ನೋಡಿ, ಅವರ ಮ್ಯೂಸಿಕ್ ಇಲ್ಲಿ ಕೇಳಿ
ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯೂಸಿಕ್ ಪುರಸ್ಕಾರ ಗ್ರ್ಯಾಮಿ ಅವಾರ್ಡ್‌ನ್ನು (Grammy awards) ಮೂರನೇ ಬಾರಿಗೆ ಗೆದ್ದುಕೊಂಡಿರುವ ರಿಕ್ಕಿ ಕೇಜ್ (Ricky Kej), ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಇವರು ಕನ್ನಡ ಚಲನಚಿತ್ರಗಳಿಗೂ ಸಂಗೀತ ಒದಗಿಸಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯೂಸಿಕ್ ಪುರಸ್ಕಾರ ಗ್ರ್ಯಾಮಿ ಅವಾರ್ಡ್‌ನ್ನು (Grammy awards 2023) ಮೂರನೇ ಬಾರಿಗೆ ಗೆದ್ದುಕೊಂಡಿರುವ ರಿಕ್ಕಿ ಕೇಜ್ (Ricky Kej), ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಇವರು ಕನ್ನಡ ಚಲನಚಿತ್ರಗಳಿಗೂ ಸಂಗೀತ ಒದಗಿಸಿದ್ದಾರೆ.
ರಿಕ್ಕಿ ಅವರ ಮ್ಯೂಸಿಕ್ ಆಡಿಯೋ ಆಲ್ಬಂ ʻಡಿವೈನ್ ಟೈಡ್ಸ್ʼಗೆ ʼಬೆಸ್ಟ್ ಇಮ್ಮರ್ಸಿವ್ ಆಡಿಯೋ ಆಲ್ಬಂʼ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ. ಕಳೆದ ವರ್ಷ ಈ ಜೋಡಿಯ ಇನ್ನೊಂದು ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿಯ ʼಬೆಸ್ಟ್ ನ್ಯೂ ಏಜ್ ಆಲ್ಬಂʼ ವಿಭಾಗದಲ್ಲಿ ಪ್ರಶಸ್ತಿ ದೊರೆತಿತ್ತು. ಅವರ ʻವಿಂಡ್ಸ್ ಆಫ್ ಸಂಸಾರʼ ಆಲ್ಬಂ 2015ರಲ್ಲಿ ಅವರಿಗೆ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.
ಈ ಮೂಲಕ ಮೂರು ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಇವರಾಗಿದ್ದಾರೆ. ಇದಕ್ಕೂ ಮುನ್ನ ಪಂಡಿತ್ ರವಿಶಂಕರ್, ಝುಬಿನ್ ಮೆಹ್ತಾ, ಝಕೀರ್ ಹುಸೇನ್, ಎಆರ್ ರೆಹಮಾನ್ ಮುಂತಾದವರು ಎರಡು ಗ್ರ್ಯಾಮಿ (Grammy awards) ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಿಕ್ಕಿ ಕೇಜ್ ಅವರು ಹುಟ್ಟಿದ್ದು 1981ರಲ್ಲಿ ನಾರ್ತ್ ಕೆರೋಲಿನಾದಲ್ಲಿ. ತಮ್ಮ 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಪಂಜಾಬಿ, ತಾಯಿ ಮಾರ್ವಾಡಿ. ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲಿನಲ್ಲಿ ಓದಿ, ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ಡೆಂಟಿಸ್ಟ್ರಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Grammy Awards 2023: ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ
2014ರಲ್ಲಿ ಗೆಳತಿ ವರ್ಷಾ ಅವರನ್ನು ವಿವಾಹವಾಗಿರುವ ರಿಕ್ಕಿ ಅವರ ಕುಟುಂಬದ ಬಹುಮಂದಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ತಂದೆ- ತಾತ ವೈದ್ಯರಾಗಿದ್ದರು. ಪದವಿ ಮುಗಿಸಿದ ಬಳಿಕ ಸಂಗೀತವನ್ನು ವೃತ್ತಿಯಾಗಿಸಿಕೊಳ್ಳುವ ಅವರ ನಿರ್ಧಾರಕ್ಕೆ ಅಡೆತಡೆ ಎದುರಾದವು. ಅವರ ತಾತ ಜಾನಕಿ ದಾಸ್ ಅವರು ನಟ, ಒಲಿಂಪಿಕ್ ಸೈಕ್ಲಿಸ್ಟ್, ಸ್ವಾತಂತ್ರ್ಯ ಹೋರಾಟಗಾರ ಆಗಿದ್ದವರು.
ಫುಲ್‌ಟೈಮ್ ಕಂಪೋಸರ್ ಆಗುವ ಮುನ್ನ ಅವರು ರಾಕ್‌ಬ್ಯಾಂಡ್ ಏಂಜೆಲ್ ಡಸ್ಟ್‌ನಲ್ಲಿ ಕೀಬೋರ್ಡ್ ನುಡಿಸುತ್ತಿದ್ದರು. ನುಸ್ರತ್ ಫತೇ ಅಲಿ ಖಾನ್, ಪಂಡಿತ್ ರವಿಶಂಕರ್, ಪೀಟರ್ ಗೇಬ್ರಿಯಲ್ ಇವರ ಸ್ಫೂರ್ತಿಗಳಂತೆ. 2015ರಲ್ಲಿ ಇವರು ಮೊದಲ ಗ್ರ್ಯಾಮಿ ಗೆದ್ದಾಗ ಇವರನ್ನು ಅಭಿನಂದಿಸಿದವರು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್. 2010ರಲ್ಲಿ ನೈಕ್‌ಗೆ ನೀಡಿದ ಜಿಂಗಲ್‌ಗಾಗಿ ಕ್ಯಾನ್ ಫಿಲಂ ಫೆಸ್ಟಿವಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 3000ಕ್ಕೂ ಅಧಿಕ ಜಿಂಗಲ್‌ಗಳನ್ನು ಸೃಷ್ಟಿಸಿದ್ದಾರೆ. ಕನ್ನಡ ಫಿಲಂಗಳಿಗೂ ದುಡಿದಿದ್ದಾರೆ.
ದಾಲ್, ರೋಟಿ, ಸಬ್ಜಿಯನ್ನು ಇಷ್ಟಪಡುವ ರಿಕ್ಕಿ, 20 ದೇಶಗಳ 100ಕ್ಕೂ ಅಧಿಕ ಸಂಗೀತ ಪುರಸ್ಕಾರಗಳನ್ನು ಗೆದ್ದುಕೊಂಡಿದ್ದಾರೆ. ಮಾರ್ಲನ್ ಬ್ರಾಂಡೊ, ಈವಾ ಗ್ರೀನ್ ಇವರ ಮೆಚ್ಚಿನ ನಟ ನಟಿಯರು.
ಇದನ್ನೂ ಓದಿ: Oscars 2023 Nominations: ಅವತಾರ್ 2, ಟಾಪ್ ಗನ್ ಸೇರಿ ಆಸ್ಕರ್‌ಗೆ ನಾಮಿನೇಟ್ ಆದ ಸಿನಿಮಾಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕ
HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು
HD Kumaraswamy: ಮಂಡ್ಯದ ಕೆಆರ್‌ಎಸ್ ಅಣೆಕಟ್ಟಿಗೆ ಹೋಗಿ ನೀರಿನ ಪರಿಸ್ಥಿತಿ ಅವಲೋಕನ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಮೂರು ಸಲಹೆ ಕೊಟ್ಟಿದ್ದಾರೆ.
ಮೈಸೂರು: ಬಿಜೆಪಿ ನಾಯಕರ ಜತೆ ಮೈತ್ರಿ ಮಾತುಕತೆಗಾಗಿ (BJP-JDS Alliance) ದಿಲ್ಲಿಗೆ ತೆರಳಿದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ(HD Kumaraswamy) ಅವರು ಅಲ್ಲಿಂದ ಮರಳುತ್ತಲೇ ಕಾವೇರಿ ಹೋರಾಟದ ಕಣಕ್ಕೆ (Cauvery dispute) ಧುಮುಕಿದ್ದಾರೆ. ಶನಿವಾರ ದಿಲ್ಲಿಯಿಂದ ಬಂದವರೇ ನೇರವಾಗಿ ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆಗೆ (KRS Dam) ಭೇಟಿ ನೀಡಿ ಅಲ್ಲಿನ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಮಂಡ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ (Protest at Mandya) ಪಾಲ್ಗೊಂಡರು.
ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಮೂರು ಸಲಹೆ
ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿದ ಅವರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಈ ಪರಿಸ್ಥಿತಿಯಲ್ಲಿ ನೀರು ಬಿಡುವುದು ಸಾಧ್ಯವೇ ಎಂದು ಕೇಳಿದರು. ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿದ ಜೆಡಿಎಸ್ ನಿಯೋಗದಲ್ಲಿ ಕುಮಾರಸ್ವಾಮಿ ಅವರ ಜತೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ ಸೇರಿದಂತೆ ಪ್ರಮುಖರು ಇದ್ದರು.
ಅಣೆಕಟ್ಟೆ ಅವಲೋಕನ ಮಾಡಿದ ಬಳಿಕ ಮಾತನಾಡಿದ ಅವರು ಮೂರು ಸಲಹೆಗಳನ್ನು ನೀಡಿದರು.
- ಪಾಲಿಸಲಾಗದ ಆದೇಶ ಪಾಲಿಸದೇ ಇದ್ದರೆ ನ್ಯಾಯಾಂಗ ನಿಂಧನೆ ಆಗಲ್ಲ. ಈ ಸಂಬಂಧ 2016ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ಇದರ ಆಧಾರದ ಮೇಲೆ ನೀರು ನಿಲ್ಲಿಸಿ ಸುಪ್ರೀಂಕೋರ್ಟ್‌ನಲ್ಲಿ ಚಾಲೆಂಜ್ ಮಾಡಿ.
- ಮೂವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಾಜ್ಯದಲ್ಲಿ ಇದ್ದಾರೆ. 6 ನ್ಯಾಯಾಲಯಗಳು, ಅಕ್ವೋಕೇಟ್ ಜನರಲ್ ಆಗಿದ್ದವರು ಇದ್ದಾರೆ. ಅವರ ಸಭೆ ಮಾಡಿ ಕಾನೂನು ಹೋರಾಟಕ್ಕೆ ಸಲಹೆ ಪಡೆಯಿರಿ.
- ಸಂಕಷ್ಟ ಸೂತ್ರ ರಚಿಸಲು ಇದು ಸಕಾಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮಾರ್ಗಸೂಚಿ ಸಿದ್ಧಪಡಿಸಿ.
ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸರಕಾರಕ್ಕೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸಮರ್ಥರವಾಗಿ ಬಳಸಿಕೊಳ್ಳಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.
ಪ್ರಾಧಿಕಾರಕ್ಕೆ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲ ಎಂದ ಎಚ್‌ಡಿಕೆ
ಮಂಡ್ಯದಲ್ಲಿ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಬಂದ್ ಮತ್ತು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಮುಂದೆ ಸೂಕ್ತ ಮಾಹಿತಿ ಕೊಡವಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ʻʻಸರ್ಕಾರ ಆರಂಭಿಕ ದಿನಗಳಲ್ಲಿ ವಿಷಯ ಪ್ರಸ್ತಾಪಿಸುವಾಗ ಲಘುವಾಗಿ ತೆಗೆದುಕೊಂಡಿದ್ದಾರೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಸಮಸ್ಯೆ ಉದ್ಭವವಾಗಿದೆ ಎಂದರು.
ನಾನು, ಬಸವರಾಜ ಬೊಮ್ಮಾಯಿಯವರು ನೀರು ಬಿಡಬೇಡಿ ಎಂದು ಹೇಳಿದೆವು. ಆದರೂ ಕಾನೂನು ತಜ್ಞರ ಮಾತು ಕೇಳಿ ನೀರು ಬಿಟ್ಟಿದ್ದಾರೆ. ಈಗ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
ʻʻಬಂಗಾರಪ್ಪನವರು ಚಿಟಿಕೆ ಹೊಡೆದಂಗೆ ಸಮಸ್ಯೆ ಬಗೆಹರಿಸಿದ್ರು ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಯಾವ ಸಮಸ್ಯೆ ಪರಿಹರಿಸಿದ್ರು? ಬೆಂಗಳೂರಿನಲ್ಲಿ ಬಂದ್ ಹೆಸರಲ್ಲಿ ಲೂಟಿ ಮಾಡಿಸಿದರು. ಬಂದ್ ಹೆಸರಲ್ಲಿ ಏನೇನಾಯ್ತು ಅಂತ ನಾವು ನೋಡಿದ್ದೇವೆ. ಮುಗ್ಧ ಜನರ ವಿಷಯದಲ್ಲಿ ನಾವು ಆಟ ಆಡಬಾರದು. ಇದರಲ್ಲಿ ತಾಂತ್ರಿಕ ವಿಷಯಗಳಿವೆʼʼ ಎಂದರು.
ಕರ್ನಾಟಕ
Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ
Women’s Reservation Bill: ಮೋದಿ ಸರ್ಕಾರದಕ್ಕೆ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಇಲ್ಲ. ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಮಸೂದೆಗೆ 15 ವರ್ಷ ಆಯಸ್ಸು ಫಿಕ್ಸ್ ಮಾಡಿದ್ದು ಯಾಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024, 2029 ಅಥವಾ 2034ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ (Women’s Reservation Bill) ಆಯಸ್ಸೇ ಮುಗಿದಿರುತ್ತದೆ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಡೌಟು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ ಇಷ್ಟೊಂದು ಅಡೆತಡೆಗಳನ್ನು ಹಾಕುತ್ತಿರಲಿಲ್ಲ. ನರೇಂದ್ರ ಮೋದಿಯವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರುತ್ತೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಗೆ ಜಾರಿ ಆಗುವ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ ಎಂದು ಟೀಕಿಸಿದರು.
ಇದನ್ನೂ ಓದಿ | Congress Politics : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಎಂಟ್ರಿ; ಎಲ್ಲಾ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದರೆ ಈ ರೀತಿ ವಂಚನೆ ಮಹಿಳೆಯರಿಗೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತನಾ ದೇವರು ನಿಮ್ಮನ್ನು ಕಳುಹಿಸಿದ್ದು ಎಂದು ವ್ಯಂಗ್ಯವಾಡಿದರು.
ಶೇ.50 ಮಹಿಳಾ ಮೀಸಲಾತಿಗೂ ನನ್ನ ಬೆಂಬಲ ಇದೆ
ಮಹಿಳಾ ಮೀಸಲಾತಿ ಬಿಲ್ ಸಿದ್ದಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ 33 ಮಾತ್ರವಲ್ಲ, ಶೇ 50 ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಾಗ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡಿಯಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರಿಸಬೇಕು ಎಂದರು.
ಇದನ್ನೂ ಓದಿ | Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕರಾದ ಪ್ರೊ.ಮುಜಫರ್ ಅಸಾದಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ವಿಷಯ ಮಂಡಿಸಿದರು. ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕರಾದ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಬಿ.ಟಿ.ಲಲಿತಾ ನಾಯಕ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ
Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
Cauvery protest: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ (Cauvery protest) ರಾಜ್ಯ ಸರ್ಕಾರದ ವಿರುದ್ಧ ನಡೆದ ಮಂಡ್ಯ ಬಂದ್ (Mandya bandh), ಸೆ. 26ಕ್ಕೆ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore Bandh) ಸಂಬಂಧಿಸಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಣ್ಣಗಿನ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರತಿಭಟನೆ ಬಂದ್ ಮೂಲಕ ಬೆಂಗಳೂರಿನ ಗೌರವಕ್ಕೆ ಮಸಿ ಬಳಿಯಬೇಡಿ, ಬಂದ್ ಬೇಡ ಎಂದು ಹೇಳಿದರೆ ಸಿದ್ದರಾಮಯ್ಯ ಅವರಂತೂ ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ, ಅದನ್ನು ನಾವು ತಡೆಯುವುದಿಲ್ಲ ಎಂದಿದ್ದಾರೆ.
ರಾಜ್ಯದ ಹಿತ ಕಾಪಾಡಲು ನಾವೇ ಇದ್ದೇವೆ, ಬಂದ್ ಯಾಕೆ?
ʻʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅವರವರ ಹೋರಾಟ ಅವರು ಮಾಡ್ತಾರೆ. ಆದರೆ, ಈ ಹೋರಾಟ ಯಾಕಾಗಿ, ಯಾರ ವಿರುದ್ಧ? ಸರ್ಕಾರವೇ ರೈತರ ಪರವಾಗಿ ನಿಂತಿದೆ. ನಾವೇ ಹೋರಾಡುತ್ತಿದ್ದೇವೆʼʼ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ʻʻಬೆಂಗಳೂರು ಬಂದ್ ಮಾಡೋದು ಬೇಡ. ಯಾವ ಲಾಭಕ್ಕಾಗಿ ಬಂದ್ ಮಾಡ್ತಾರೆ? ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬಂದ್ ಮಾಡೋದ್ರಿಂದ ಯಾವುದೇ ಅನುಕೂಲ ಇಲ್ಲ. ಬೆಂಗಳೂರು ಮರ್ಯಾದೆಯನ್ನ ಹಾಳುಗೆಡವಬೇಡಿ. ಬೆಂಗಳೂರಿನ ಮರ್ಯಾದೆ ಹಾಳು ಮಾಡಿದರೆ ನೀವೇ ಹೃದಯಕ್ಕೆ ಚುಚ್ಚಿಕೊಂಡ ಹಾಗೆ. ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯದ ಜನ ವಾಸವಾಗಿದ್ದಾರೆʼʼ ಎಂದು ಹೇಳಿದರು.
ಕಾವೇರಿ ಕುರಿತು ಪ್ರತಿಪಕ್ಷಗಳು ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ʻʻಒಳಗಡೆ ಬಂದಾಗ ರಾಜ್ಯದ ಹಿತ, ಹೊರಗಡೆ ಹೋದಾಗ ರಾಜಕಾರಣ ನಡೆಯುತ್ತದೆ. ಹೊಸ ಹುರುಪು ಪ್ರತಿಭಟನೆ ಮಾಡ್ತಾ ಇದ್ದಾರೆ ಮಾಡಲಿʼʼ ಎಂದು ಎಚ್.ಡಿ ಕುಮಾರಸ್ವಾಮಿ ಅವರ ಹೆಸರು ಹೇಳದೆಯೇ ಹೇಳಿದರು.
ʻʻನೀರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅಂಕಿ ಅಂಶ ಹೇಳಿದರೆ ರಾಜ್ಯದ ಹಿತಕ್ಕೆ ಧಕ್ಕೆ ಆಗುತ್ತದೆ. ದೇವೇಗೌಡರು ಹಿರಿಯ ಮುಖಂಡರು. ಅವರು ಹಿಂದೆ ಕೊಟ್ಟ ಒಂದು ಇಂಟರ್ ವ್ಯೂ ತೆಗೆದು ನೋಡಲಿ ಗೊತ್ತಾಗುತ್ತದೆʼʼ ಎಂದು ಹೇಳಿದ ಶಿವಕುಮಾರ್, ʻʻಕುಮಾರಸ್ವಾಮಿ ಅವರೇನೋ ಮಾತಾಡಿದ್ದಾರೆ ಅಮಿತ್ ಷಾ ಜೊತೆ ಅಂದ್ರಲ್ವಾ? ಸೂಕ್ಷ್ಮ ವಾಗಿ ಮಾತಾಡಿದ್ದೇವೆ ಅಂತ ಹೇಳಿದ್ದಾರಲ್ವಾ? ಅದೇನೇನು ನುಡಿಮುತ್ತು ಆಡಿದಾರೆ ಏನು ಅಂತ ಹೇಳಲಿ. ನಾವು ಮೂರ್ಖರೇʼʼ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಲಿ ಅಂತ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಟಿ ರವಿಯವರಿಗೆ ಸದ್ಯಕ್ಕೆ ಎಲ್ಲೂ ಜಾಗವಿಲ್ಲ ಹಾಗಾಗಿ ಮಂಡ್ಯಕ್ಕೆ ಹೋಗಿದ್ದಾರೆ ಎಂದು ಹೇಳಿದರು. ದೇವೇಗೌಡರೇ ಪ್ರಧಾನಿ ಮಧ್ಯಪ್ರವೇಶ ಮಾಡಲಿ ಎಂದು ಹೇಳಿದ್ದಾರೆ ಎಂದು ನೆನಪಿಸಿದರು.
ಇದನ್ನೂ ಓದಿ: Cauvery protest : ಸೆ. 26ರ ಬೆಂಗಳೂರು ಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್
ಚಳುವಳಿಯನ್ನು ನಿಲ್ಲಿಸುವುದಿಲ್ಲ ಎಂದ ಸಿದ್ದರಾಮಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯತ್ತಿರುವುದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಚಳುವಳಿ ಮಾಡಲು ಅವಕಾಶ ಇದೆ. ನಾವು ಅದನ್ನ ನಿಲ್ಲಿಸುವುದಿಲ್ಲ ಎಂದರು. ಮಂಗಳವಾರ ಬೆಂಗಳೂರು ಬಂದ್ ಬಗ್ಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.
ಉಚ್ಚ ನ್ಯಾಯಾಲಯದ ಆದೇಶ ಬರುವ ಮುನ್ನವೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಪಕ್ಷ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಾಲಯದಲ್ಲಿ ಸುಳ್ಳು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕರ್ನಾಟಕ
Ananth Namana: ಅನಂತ ಕುಮಾರ್ ಇದ್ದಿದ್ದರೆ ಕಾವೇರಿ ಇಷ್ಟರ ಮಟ್ಟಿಗೆ ವಿವಾದ ಆಗುತ್ತಿರಲಿಲ್ಲ ಎಂದ ಡಿಕೆಶಿ
Ananth Namana: ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ ಅವರು ಸದಾ ಸಿದ್ಧರಾಗಿರುತ್ತಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ (Ananth Namana) ಅಜಾತಶತ್ರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ಸಿದ್ಧರಾಗಿರುತ್ತಿದ್ದರು. ಅವರು ಈಗ ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಅನಂತ ನಮನ -64 (Ananth Namana) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫೀಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು ಎಂದು ಸ್ಮರಿಸಿದರು.
ತೇಜಸ್ವಿನಿ ರಾಜಕೀಯದಲ್ಲಿ ಮುನ್ನುಗ್ಗಬೇಕು
1985ರಲ್ಲಿ ನನಗೆ ಮೊದಲ ಬಾರಿಗೆ ವಿಧಾನಸಭೆ ಟಿಕೆಟ್ ಸಿಕ್ಕಿದಾಗ, ಅನಂತ್‌ಕುಮಾರ್ ರಹಸ್ಯವಾಗಿ 5 ಸಾವಿರ ರೂ. ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು. ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತ ಕುಮಾರ್ ಅವರ ಜತೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | CM Siddaramaiah : ಶಾಸಕ, ಸಂಸದರಿಗೆ Good News; ಇನ್ನು ಮುಂದೆ ಪ್ರತಿ ಶನಿವಾರ ಸಿಎಂ ಸಿದ್ದರಾಮಯ್ಯ ನಿಮ್ಮನ್ನು ಭೇಟಿಯಾಗ್ತಾರೆ!
ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ ಬಸವ ಆಗಲು ಸಾಧ್ಯವಿಲ್ಲ. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜತೆಯಲ್ಲೇ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ. ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು, ಹೊಲವನ್ನು ಉಳುಮೆ ಮಾಡದಿದ್ದರೆ ಮಟ್ಟ ಆಗುವುದಿಲ್ಲ. ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ನೀಡುತ್ತೇನೆ ಎಂದರು.
ಮೆಟ್ರೋ ರೈಲು ಬರಲು ಅನಂತ ಕುಮಾರ್ ಕಾರಣ
ನಿಮ್ಮ ಇತಿಹಾಸವನ್ನು ಯಾರೂ ಬದಲಾವಣೆ ಮಾಡಲು, ಮುಚ್ಚಿಹಾಕಲು ಆಗುವುದಿಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದೀರಿ. ನಿಮ್ಮ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಬಳಿ ಮೃದು ಹೃದಯವಿದೆ. ಅನಂತ ಕುಮಾರ್ ಅವರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ನೀವು ಹೆಜ್ಜೆ ಗುರುತು ಮೂಡಿಸಿ. ರಾಜ್ಯದಲ್ಲಿ ಮೆಟ್ರೋ ಬರಲು ಎಸ್.ಎಂ. ಕೃಷ್ಣ ಮತ್ತು ಅನಂತ ಕುಮಾರ್ ಅವರೇ ಕಾರಣ ಎಂದು ಹೇಳಿದರು.
ನಾನು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಕೇಂದ್ರದಲ್ಲಿ ಅನಂತ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಹಿಂದಿನ ಜೆ.ಎಚ್.ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನನ್ನು ಹಾಗೂ ಇತರೇ ಸ್ನೇಹಿತರನ್ನು ವಿದೇಶಕ್ಕೆ ಮೆಟ್ರೊ ಕಾರ್ಯಾಚರಣೆ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ದರು. ಶ್ರೀಧರನ್ ಅವರು ಜತೆಯಲ್ಲಿ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್.ಎಂ.ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು. ಕೇವಲ ಒಂದೇ ದಿನದಲ್ಲಿ ಪ್ರಧಾನಿಗಳಾದ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ನಿಮ್ಮ ಸಮಿತಿಯ ವರದಿ ಸರಿಯಾಗಿದೆ ಎಂದು ಹೇಳಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು ಎಂದು ಸ್ಮರಿಸಿದರು.
ಯಾರು ಏನೇ ಹೇಳಿದರೂ ಬೆಂಗಳೂರು ಮೆಟ್ರೋ ಅನಂತ ಕುಮಾರ್ ಹಾಗೂ ಕೃಷ್ಣ ಅವರ ಕೊಡುಗೆ. ನಾನು ದೇವರು ಹಾಗೂ ಧರ್ಮದ ಬಗ್ಗೆ ನಂಬಿಕೆ ಇರುವವನು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಬದುಕಿದವರು ಅನಂತ್‌ಕುಮಾರ್. ಆದರೆ ಅವರ ವಿಚಾರದಲ್ಲಿ ದೇವರು ಕ್ರೂರಿಯಾಗಿಬಿಟ್ಟ. ಯಾವಾಗಲೂ ಅವರು ಎಲ್ಲರನ್ನೂ ನಗಿಸುತ್ತಾ ಇದ್ದವರು ಎಂದು ತಿಳಿಸಿದರು.
ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ
ಡಿವಿಜಿ ಅವರ ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ಎಂಬ ಕಗ್ಗದಂತೆ ಬಾಳಿದವವರು ಅನಂತಕುಮಾರ್. ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್. ಮರ- ಗಿಡಗಳು, ಹಸುಗಳು, ನದಿಗಳು ಸ್ವಂತಕ್ಕೆ ಏನನ್ನೂ ಕೇಳುವುದಿಲ್ಲ, ಇವುಗಳು ಇರುವುದೇ ಪ್ರಕೃತಿಯ ಸೇವೆಗೆ, ಅದೇ ರೀತಿ ಅನಂತಕುಮಾರ್ ಅವರು ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ, ಅವರು ಸೇವೆ ಮಾಡಿರುವುದೇ ಸಮಾಜಕ್ಕೆ ಎಂದರು.
ಇದನ್ನೂ ಓದಿ | Pradeep Eshwar: ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
40 ವರ್ಷಗಳಲ್ಲಿ ನೂರಾರು ನಾಯಕರನ್ನು ತಯಾರು ಮಾಡಿ, ಅವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಅವರು ಕೇವಲ ತೇಜಸ್ವಿನಿ ಅವರನ್ನು ಮಾತ್ರ ಬಿಟ್ಟು ಹೋಗಿಲ್ಲ. ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅನಂತ್‌ಕುಮಾರ್ ಅವರು ತುಂಬಾ ಆತ್ಮೀಯರು. ಅವರು ಎಬಿವಿಪಿ ನಾಯಕರಾಗಿದ್ದರು, ಆಗಾಗ್ಗೆ ಜನರಲ್ ಹಾಸ್ಟೆಲ್‌ಗೆ ಬಂದು ಕಾಲ ಕಳೆಯುತ್ತಿದ್ದರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ, ಎಂಬ ಮಾತಿನಂತೆ ಇಂದು ನಾವೆಲ್ಲ ಅನಂತಪದುಮನಾಭ ಅವರನ್ನು ನೆನಪಿಸಿಕೊಂಡಿದ್ದೇವೆ. ಅವರ ಕನಸುಗಳನ್ನು ನನಸಾಗಿಸೋಣ ಎಂದು ಕರೆ ನೀಡಿದರು.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಕರ್ನಾಟಕ8 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ22 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ವೈರಲ್ ನ್ಯೂಸ್3 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
South Cinema5 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!