ವಿಸ್ತಾರ ಸಂಪಾದಕೀಯ: ಮಾಸ್ಕೋ ದಾಳಿ ಬರ್ಬರ, ಉಗ್ರರ ಹುಟ್ಟಡಗಿಸಲು ಒಂದಾಗಬೇಕಿದೆ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಾಸ್ಕೋ ದಾಳಿ ಬರ್ಬರ, ಉಗ್ರರ ಹುಟ್ಟಡಗಿಸಲು ಒಂದಾಗಬೇಕಿದೆ

ಈ ಎಲ್ಲ ಇಸ್ಲಾಮಿಕ್‌ ಉಗ್ರರ ಮೂಲ ಬೀಜ ಎಲ್ಲಿದೆ ಎಂದು ನೋಡಬೇಕು. ಅದು ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿದೆ. ಅಫ್ಘಾನಿಸ್ತಾನವೂ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಇಸ್ಲಾಮಿಕ್‌ಉಗ್ರರಿಗೆ ಶಸ್ತ್ರಾಸ್ತ್ರಗಳು, ಹಣಕಾಸು ಪೂರೈಕೆಯಾಗುತ್ತಿರುವುದೇ ಪಾಕಿಸ್ತಾನದಿಂದ

VISTARANEWS.COM


on

Moscow attack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ನಲ್ಲಿ ಭೀಕರ ಉಗ್ರರ ದಾಳಿ ನಡೆದಿದೆ. ಇದರಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ. ಮಾಸ್ಕೋದಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರು ಸೇರಿ ಇದುವರೆಗೆ ಒಟ್ಟು 11 ಉಗ್ರರನ್ನು ಬಂಧಿಸಲಾಗಿದೆ. ಉಕ್ರೇನ್‌ನಿಂದ ರಷ್ಯಾಗೆ ನುಸುಳಿದ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ” ಎಂದು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಘೋಷಿಸಿದ್ದಾರೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್‌ ಸಂಘಟನೆ ಹೊತ್ತುಕೊಂಡಿದೆ. ಇದು ಅಫ್ಘಾನಿಸ್ತಾನ ಮೂಲದ ಸಂಘಟನೆ; ಇರಾನ್‌ ಮುಂತಾದ ಕಡೆ ಇದರ ನೆಲೆ ಇದೆ. ಭಾರತ ಸೇರಿದಂತೆ ಹಲವಾರು ದೇಶಗಳು ಈ ಕ್ರೂರ ದಾಳಿಯನ್ನು ಖಂಡಿಸಿವೆ. ಹಲವು ದಶಕಗಳಲ್ಲಿ ರಷ್ಯಾ ಕಂಡಿರುವ ಬರ್ಬರ ಭಯೋತ್ಪಾದಕ ದಾಳಿ ಇದಾಗಿದೆ.

ಸಿರಿಯಾದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಭಯೋತ್ಪಾದನೆಯನ್ನು ನ್ಯಾಟೋ ದೇಶಗಳ ಒಗ್ಗಟ್ಟಿನ ದಾಳಿಯಿಂದ ಎರಡು ವರ್ಷಗಳ ಹಿಂದೆ ಮಣಿಸಲಾಗಿತ್ತು. ಸಿರಿಯಾದ ಬಹುಭಾಗವನ್ನು ವಶಪಡಿಸಿಕೊಂಡಿದ್ದ ಐಸಿಸ್‌ ಉಗ್ರರಲ್ಲಿ ಬಹುತೇಕ ಮಂದಿಯನ್ನು ನಿರ್ನಾಮ ಮಾಡಲಾಗಿತ್ತು. ಆದರೆ ಇಸ್ಲಾಮಿಕ್‌ ಭಯೋತ್ಪಾದನೆ ಎಂಬುದು ರಕ್ತಬೀಜಾಸುರನ ಹಾಗೆ. ಅದು ತನ್ನ ರಕ್ತದ ಒಂದು ಹನಿ ಬಿದ್ದಲ್ಲಿಂದಲೇ ಸಾವಿರಾರು ಉಗ್ರರನ್ನು ಹುಟ್ಟಿಕೊಳ್ಳುವಂತೆ ಮಾಡಬಲ್ಲುದು ಎಂಬುದು ಮತ್ತೆ ಮತ್ತೆ ರುಜುವಾತಾಗಿದೆ. ಎಲ್ಲ ಶಾಂತವಾಗಿದೆ, ಇನ್ನು ಭಯವಿಲ್ಲ ಎಂದುಕೊಳ್ಳುತ್ತಿರುವಾಗಲೇ ದಿಡೀರ್‌ ಎಂದು ಎರಗುವುದು, ಗರಿಷ್ಠ ಹಾನಿ ಎಸಗುವುದು ಈ ಉಗ್ರರ ನೀತಿ. ಐಸಿಸ್‌ ಏನೂ ಕಾರ್ಯಾಚರಣೆ ಮಾಡದೆ ಸುಮ್ಮನಿದೆ ಎಂದಾದರೆ, ಅದು ಯಾವುದೋ ಭಯಾನಕ ದಾಳಿಗೆ ಯೋಜನೆ ಹಾಕುತ್ತಿದೆ ಎಂದೇ ಅರ್ಥ. ಅಲ್‌ ಕೈದಾ, ಲಷ್ಕರೆ ತಯ್ಬಾ, ಐಸಿಸ್ ಮುಂತಾದ ಸಂಘಟನೆಗಳೆಲ್ಲ ಇಸ್ಲಾಮಿಕ್‌ ಭಯೋತ್ಪಾದನೆಯ ವಿವಿಧ ರೂಪಗಳೇ ಆಗಿವೆ. ‌2001ರಲ್ಲಿ ಇವರು ನ್ಯೂಯಾರ್ಕ್‌ ಮೇಲೆ ದಾಳಿ ನಡೆಸಿದರೆ, 2008ರಲ್ಲಿ ಮುಂಬಯಿಯಲ್ಲಿ ದಾಳಿ ನಡೆಸಿದ್ದರು. ಇದೀಗ ರಷ್ಯಾದ ಸರದಿ. ರಷ್ಯಾದ ವಿರುದ್ಧದ ಐಸಿಸ್‌ ರೊಚ್ಚಿಗೆ ಕಾರಣ ಏನು ಎಂಬುದು ತನಿಖೆಯಿಂದ ರುಜುವಾತು ಆಗಬೇಕಿದೆ.

ಈ ಎಲ್ಲ ಇಸ್ಲಾಮಿಕ್‌ ಉಗ್ರರ ಮೂಲ ಬೀಜ ಎಲ್ಲಿದೆ ಎಂದು ನೋಡಬೇಕು. ಅದು ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿದೆ. ಅಫ್ಘಾನಿಸ್ತಾನವೂ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಇಸ್ಲಾಮಿಕ್‌ಉಗ್ರರಿಗೆ ಶಸ್ತ್ರಾಸ್ತ್ರಗಳು, ಹಣಕಾಸು ಪೂರೈಕೆಯಾಗುತ್ತಿರುವುದೇ ಪಾಕಿಸ್ತಾನದಿಂದ. ಇದೇ ತಿಂಗಳು ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದ ಆರೋಪಿಗಳ ಹಿಂದೆಯೂ ಐಸಿಸ್‌ ಕೈವಾಡ ಇದ್ದರೆ ಆಶ್ಚರ್ಯಪಡಬೇಕಿಲ್ಲ. ಅಂದರೆ, ಇಂದು ರಷ್ಯಾದಲ್ಲಿ ದಾಳಿ ನಡೆಸಿದವರು, ನಾಳೆ ಇನ್ನೊಂದು ದೇಶದಲ್ಲಿ ನಡೆಸಬಹುದು. ಯಾವ ದೇಶವೂ ಇಂದು ತಾನು ಸುರಕ್ಷಿತ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿವೆ. ಇಸ್ಲಾಮಿಕ್‌ ಭಯೋತ್ಪಾದನೆಯ ಕಬಂಧ ಬಾಹುಗಳು ಆ ಪರಿ ಚಾಚಿವೆ. ಇವೆಲ್ಲವನ್ನೂ ಒಂದೇ ಸಂಘಟನೆ ಹ್ಯಾಂಡಲ್‌ ಮಾಡುತ್ತದೆ ಎಂದೂ ಭಾವಿಸಬೇಕಿಲ್ಲ. ಆದರೆ ಇವೆಲ್ಲವುಗಳ ಮೂಲಭೂತ ಚಿಂತನೆ ಒಂದೇ ಆಗಿದೆ. ಅದು ಇಸ್ಲಾಮಿಕ್‌ ಮತೀಯವಾದ, ಮತಾಂಧತೆ. ಇಸ್ಲಾಂ ಅನ್ನು ಹೊರತುಪಡಿಸಿದರೆ ಬೇರೆ ಯಾವ ಧರ್ಮವೂ ಈ ಭೂಮಿಯ ಮೇಲೆ ಇರಬಾರದು ಎಂಬುದು ಅವುಗಳ ಮೂಲ ಚಿಂತನೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಅದು ಆಳವಾಗಿ ಬೇರು ಬಿಡುತ್ತಿದೆ. ಆಧುನಿಕ ಶಿಕ್ಷಣ ಪಡೆದವರಲ್ಲೂ ಈ ಚಿಂತನೆ ಬೇರು ಬಿಡುತ್ತಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?

ಹಾಗಿದ್ದರೆ ಇದನ್ನು ಎದುರಿಸುವುದು ಹೇಗೆ? ಇದರ ಬಗ್ಗೆ ಮುಂದುವರಿದ ದೇಶಗಳು ವರ್ಷಗಳಿಂದಲೂ ತಲೆ ಕೆಡಸಿಕೊಳ್ಳುತ್ತ ಬಂದಿವೆ. ಒಂದೇ ಮಾರ್ಗ ಪರಿಣಾಮಕಾರಿ ಎನ್ನಲಾಗದು. ಅಮೆರಿಕ ಸಂಶಯಾಸ್ಪದರನ್ನು ತನ್ನ ಒಳಗೆ ಬಿಟ್ಟುಕೊಳ್ಳದ ಕಠಿಣ ನೀತಿಯನ್ನು ರೂಢಿಸಿಕೊಂಡಿದೆ. ಇಸ್ರೇಲ್‌, ತನ್ನ ವೈರಿಗಳ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದು ಮುಗಿಸುತ್ತದೆ. ಭಾರತ ಜಾತ್ಯತೀತ ಆಡಳಿತ ಹಾಗೂ ನಿರಂತರ ಎಚ್ಚರದ ಮೂಲಕ ಇದನ್ನು ಸಾಧಿಸಲು ಹೆಣಗಾಡುತ್ತಿದೆ. ಕಳೆದ ವರ್ಷ ಭಾರತದಲ್ಲೇ ʼನೋ ಮನಿ ಫಾರ್‌ ಟೆರರ್ʼ ಎಂಬ ಸಮಾವೇಶ ನಡೆದಿತ್ತು. ʼಭಯೋತ್ಪಾದನೆಗೆ ಎಲ್ಲ ಬಗೆಯ ಹಣಕಾಸು ಪೂರೈಕೆ ತಡೆಯುವುದುʼ ಇದರ ಮೂಲ ಆಶಯ. 72 ದೇಶಗಳ ಪ್ರತಿನಿಧಿಗಳು ಹಾಗೂ 15 ಅಂತಾರಾಷ್ಡ್ರೀಯ ಸಂಘಟನೆಗಳು ಇದರಲ್ಲಿ ಭಾಗವಹಿಸಿದ್ದರು. ಆಗ ಪ್ರಧಾನಿ ಮೋದಿ ಇದರಲ್ಲಿ ಭಾಗವಹಿಸಿ, ʼʼಎಲ್ಲ ಬಗೆಯ ಭಯೋತ್ಪಾದನೆಗೆ ತಡೆ ಹಾಕಲು ಎಲ್ಲ ದೇಶಗಳು ಮುಂದಾಗಬೇಕು. ಕೆಲವು ದೇಶಗಳು ಉಗ್ರಗಾಮಿ ಚಟುವಟಿಕೆಗಳಿಗೆ ನೇರ ಅಥವಾ ಪರೋಕ್ಷವಾಗಿ ಹಣ ಒದಗಿಸುತ್ತಿವೆ. ಅಂಥ ದೇಶಗಳು ತಕ್ಕ ಬೆಲೆ ತೆರುವಂತೆ ಮಾಡಬೇಕುʼʼ ಎಂದು ಕರೆ ನೀಡಿದ್ದರು. ಭಯೋತ್ಪಾದನೆಯನ್ನು ತಡೆಗಟ್ಟಲು ವ್ಯೂಹಾತ್ಮಕ ಮಿತ್ರತ್ವದ ಜತೆಗೆ ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಯನ್ನು ಕತ್ತರಿಸುವುದೂ ಒಂದು ಕ್ರಮ. ಇದಕ್ಕಾಗಿಯೇ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್‌) ಎಂಬ ಅಂತಾರಾಷ್ಟ್ರೀಯ ಸಂಸ್ಥೆ 1989ರಲ್ಲಿ ರಚನೆಯಾಗಿದ್ದು, ಟೆರರಿಸಂಗೆ ಅಧಿಕೃತ ಹಣದ ಪೂರೈಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗೆಯ ಸಹಕಾರ ಎಲ್ಲ ದೇಶಗಳ ನಡುವೆ ಸಾಧ್ಯವಾದರೆ, ಭಯೋತ್ಪಾದನೆ ತಡೆಗೆ ಇನ್ನಷ್ಟು ಹೆಜ್ಜೆ ಮುಂದೆ ಹೋಗಲು ಸಾಧ್ಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

SSLC Result 2024: ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು.

VISTARANEWS.COM


on

karnataka SSLC result 2024
Koo

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶ ನೋಡಿ ಸಂತೋಷಪಡುವುದಕ್ಕೂ, ಗಾಬರಿಯಾಗುವುದಕ್ಕೂ ಕಾರಣಗಳಿವೆ.

ಮೊದಲನೆಯದಾಗಿ, ಕಳಪೆ ಫಲಿತಾಂಶ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್ ಆಗಿದ್ದಾರೆ. ಅಂದರೆ ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ. ಆದರೆ ಇದು ಕೂಡ ನಿಜವಾದ ಕುಸಿತವಲ್ಲ. ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್‌ ಮಾರ್ಕ್ಸ್‌ ನೀಡಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಸಿಕ್ಕಿದೆ. ಇಷ್ಟಾಗಿಯೂ ಫಲಿತಾಂಶ ಮಾತ್ರ ಕಡಿಮೆಯೇ.

ಕೃಪಾಂಕಗಳ ಹಿಂದೊಂದು ಕತೆಯಿದೆ. ಹಲವು ಕಡೆ ಸಾಮೂಹಿಕ ನಕಲು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರ ಪರಿಣಾಮವೇ ಈ ಫಲಿತಾಂಶ. ಇದರಿಂದ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಇದರಿಂದ ಗಾಬರಿ ಬಿದ್ದ ಇಲಾಖೆ, ವಿದ್ಯಾರ್ಥಿಗಳ ಹಾಗೂ ಒಟ್ಟಾರೆ ಶೈಕ್ಷಣಿಕ ಆವರಣದ ನೈತಿಕ ಸ್ಥೈರ್ಯ ಕುಸಿಯದಿರಲಿ ಎಂಬ ದೃಷ್ಟಿಯಿಂದ ಭಾರಿ ಪ್ರಮಾಣದ ಕೃಪಾಂಕ ನೀಡಿದೆ. ಇದೇನೂ ಒಳ್ಳೆಯ ಸುದ್ದಿಯಲ್ಲ. ನಕಲು ನಡೆಯುತ್ತಿದ್ದುದರಿಂದ ಉತ್ತಮ ಫಲಿತಾಂಶ ದೊರೆಯುತ್ತಿತ್ತು ಎಂಬುದನ್ನು ಇಲಾಖೆ ಒಪ್ಪಿಕೊಂಡ ಹಾಗಾಗಿದೆ. ವೆಬ್ ಕಾಸ್ಟಿಂಗ್ ಪರಿಣಾಮ ನಕಲು ನಿಂತುದು ಒಳ್ಳೆಯ ಸಂಗತಿಯೇ. ಆದರೆ ಇದು ಪಾರದರ್ಶಕ ಪರೀಕ್ಷೆಯಲ್ಲಿ ತನ್ಮೂಲಕ ಉತ್ತಮ ಫಲಿತಾಂಶದಲ್ಲಿ ಕೊನೆಯಾಗಬೇಕಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಪರೀಕ್ಷೆಯ ಮೇಲೆ ನಿಗಾ ಇಡಲು ದುಡ್ಡು ಖರ್ಚು ಮಾಡಿದರೆ ಸಾಲದು, ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೂ ಹಾಗೆಯೇ ವೆಚ್ಚ ಮಾಡಿದರೆ ಉತ್ತಮ ಫಲಿತಾಂಶ ಬಂದೀತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿರುವ, 625ರಲ್ಲಿ ಅಷ್ಟೂ ಅಂಕಗಳನ್ನೂ ಬಾಚಿಕೊಂಡಿರುವ ಅಂಕಿತಾ ಕೊನ್ನೂರ್‌ ಹಳ್ಳಿಯೊಂದರ ರೈತರ ಮಗಳು. ಇದು ಗ್ರಾಮೀಣ ಪ್ರತಿಭೆಯ ದಿಗ್ವಿಜಯ ಎನ್ನಬಹುದು. ಈಕೆಗೆ ಐಎಎಸ್‌ ಅಧಿಕಾರಿಯಾಗುವ ಕನಸು ಇದೆಯಂತೆ. ಬಾಗಲಕೋಟೆ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ. ಪಠ್ಯದ ಜೊತೆಗೆ ಲೈಬ್ರರಿ ಹಾಗೂ ಯುಟ್ಯೂಬ್ ಮಾಹಿತಿಯನ್ನೂ ಸೂಕ್ತವಾಗಿ ಬಳಸಿಕೊಂಡು ಈಕೆ ಟಾಪರ್ ಆಗಿದ್ದಾಳೆ. ಎಲ್ಲ ಮಕ್ಕಳಿಗೂ ಮಾದರಿಯಾಗಿರುವ ಈಕೆಯ ಅಭಿನಂದನೆಗಳು ಸಲ್ಲುತ್ತವೆ. ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ದೊರೆತರೆ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಸಾಕು.

ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು. ವಿಷಯವಾರು ಪರೀಕ್ಷೆಯನ್ನೂ ಬರೆಯಬಹುದು. ಎರಡು ಅಥವಾ ಮೂರು ಪರೀಕ್ಷೆಗಳಿಗೂ ಕುಳಿತುಕೊಳ್ಳಬಹುದು. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದು ಪರೀಕ್ಷಾ ವಿಧಾನದಲ್ಲಿ ಕ್ರಾಂತಿಕರ ಬದಲಾವಣೆ. ಈ ಬಾರಿ ಅನುತ್ತೀರ್ಣರಾದವರಿಗೆ ಹೇಗೂ ಪೂರಕ ಪರೀಕ್ಷೆ ಇದ್ದೇ ಇದೆ. ಆದ್ದರಿಂದ, ಇದೇ ನಿಜವಾಗಿಯೂ ಫಲಿತಾಂಶ ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.

VISTARANEWS.COM


on

Sam Pitroda
Koo

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಹೇಳಿಕೆಗಳ ಮೂಲಕ ಹಾನಿಯೆಸಗುವ ಮಣಿಶಂಕರ ಅಯ್ಯರ್‌ ಮುಂತಾದವರ ಪರಂಪರೆಯನ್ನು ಕಾಂಗ್ರೆಸ್‌ ಪಕ್ಷದ ಭಾರತೀಯ ಸಾಗರೋತ್ತರ ವಿಭಾಗದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಮುಂದುವರಿಸುತ್ತಿರುವಂತಿದೆ. ದೇಶದ ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್‌ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದಾರೆ. “ಭಾರತದಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಪಿತ್ರೋಡಾ ಹೇಳಿದ್ದಾರೆ.

ಸಹಜವಾಗಿಯೇ ಈ ಮಾತು ವಿವಾದ ಹುಟ್ಟುಹಾಕಿದೆ. ಇಂಥ ಅವಕಾಶವನ್ನು ಎಂದೂ ಕಳೆದುಕೊಳ್ಳದ ಪ್ರಧಾನಮಂತ್ರಿ ನರೇಂದ್ರ ಮೋದಿ, “ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ. ಚರ್ಮದ ಬಣ್ಣದ ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಪಿತ್ರೋಡಾ ಮೇಲೆ ಹರಿಹಾಯ್ದಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ಅಮೆರಿಕದಲ್ಲಿರುವ ‘ಶೆಹಜಾದಾ’ನ ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕ (ಪಿತ್ರೋಡಾ) ಈ ‘ಶೆಹಜಾದಾ’ಗೆ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ ಸಲಹೆ ನೀಡುತ್ತಾರೆ” ಎಂದು ಕುಟುಕಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳಿವಳಿಕೆ ಬೆಳೆಸಿಕೊಳ್ಳಿ” ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.

ಪಿತ್ರೋಡಾ ಅವರು ತಮ್ಮ ಮಾತನ್ನು ವಿಶ್ಲೇಷಣೆ ಎಂದುಕೊಂಡಿರುವಂತಿದೆ. ಆದರೆ ವಿಶ್ಲೇಷಣೆಗೂ ಜನಾಂಗೀಯ ನಿಂದನೆಗೂ ಅವರು ವ್ಯತ್ಯಾಸ ಗುರುತಿಸಿಕೊಳ್ಳಬೇಕಿದೆ. ದಕ್ಷಿಣ ಭಾರತೀಯರು ತುಸು ಕಪ್ಪಗಿದ್ದಾರೆ ಸರಿ; ಅಷ್ಟಕ್ಕೇ ಅವರು ಆಫ್ರಿಕನ್ನರಿಗೆ ಸಮವೋ? ಭಾರತದಲ್ಲಿ ಅತಿ ಹೆಚ್ಚಿನ ತೆರಿಗೆ ಉತ್ಪತ್ತಿಯಾಗುವುದು, ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವವರು ದಕ್ಷಿಣ ಭಾರತೀಯರು. ಇಲ್ಲಿನ ಸಂಸ್ಕೃತಿ ಅಲ್ಲಿಗಿಂತ ವಿಭಿನ್ನ. ಪೂರ್ವಭಾಗದವರು ಚೀನೀಯರಂತೆ ಕಾಣುತ್ತಾರೆ ಎನ್ನುವ ಮೂಲಕ, ʼಅರುಣಾಚಲ ನಮ್ಮದುʼ ಎನ್ನುತ್ತಿರುವ ಚೀನಾಕ್ಕೆ ಪಿತ್ರೋಡಾ ಸಹಾಯ ಮಾಡುತ್ತಿರುವಂತಿದೆ. ಭೌಗೋಳಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಪ್ರತಿ ದೇಶದಲ್ಲೂ ಇದ್ದೇ ಇರುತ್ತವೆ. ಭಾರತ ವಿಶಾಲ ದೇಶವಾದುದರಿಂದ ಇಲ್ಲಿ ಹೆಚ್ಚಿನ ವೈವಿಧ್ಯವಿದೆ. ಆ ಕಾರಣಕ್ಕೇ ಇದು ಸಾಂಸ್ಕೃತಿಕವಾಗಿ ಶ್ರೀಮಂತವೂ ಆಗಿದೆ. ಇದು ಭಾರತದ ಶಕ್ತಿಯೇ ಹೊರತು, ಇನ್ನೊಂದರ ನಕಲು ಅಲ್ಲ. ನಾವು ನಮ್ಮನ್ನು ಬೇರೆ ದೇಶಗಳಿಗೆ ಚರ್ಮದ ಬಣ್ಣದಿಂದ ಹೋಲಿಸಿಕೊಳ್ಳಬೇಕಿಲ್ಲ. ಬೇಕಿದ್ದರೆ ಭೂತಾನಿನ ಆನಂದದ ಸ್ವಭಾವದ ಸೂಚ್ಯಂಕಕ್ಕೆ, ಜಪಾನಿನ ಪರಿಶ್ರಮದ ಗುಣಕ್ಕೆ, ಕೆರಿಬಿಯನ್ನರ ದೈಹಿಕ ಬಲಕ್ಕೆ ಹೋಲಿಸಿಕೊಳ್ಳೋಣ.

ಈ ಹಿಂದೆ ಮಣಿಶಂಕರ ಅಯ್ಯರ್‌ ಮುಂತಾದವರು ಹೀಗೆ ʼಸೆಲ್ಫ್‌ ಗೋಲ್‌ʼ ಅಥವಾ ʼಆತ್ಮಹತ್ಯಾ ದಾಳಿʼ ಮಾಡಿಕೊಳ್ಳುತ್ತಿದ್ದರು. ಇಂಥವರು ಸ್ವತಃ ತಮ್ಮ ಪಕ್ಷಕ್ಕೇ ತಮ್ಮ ಹೇಳಿಕೆಗಳಿಂದ ಗಂಡಾಂತರ ತಂದೊಡ್ಡುತ್ತಿರುತ್ತಾರೆ. 2017ರಲ್ಲಿ ಮಣಿಶಂಕರ ಅಯ್ಯರ್‌ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಅವರು ಪಾಕಿಸ್ತಾನದಲ್ಲಿ ನಿಂತು “ಭಾರತದ ಮೂರನೇ ಎರಡು ಭಾಗ ಜನ ಪಾಕ್‌ನತ್ತ ಬರಲು ಸಿದ್ಧರಿದ್ದಾರೆ” ಎಂದಿದ್ದರು. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿ, ನಿಂದಿಸಲ್ಪಟ್ಟವರು ಭಾರಿ ಬಹುಮತದಿಂದ ಗೆದ್ದಿದ್ದರು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳದ ಜನನಾಯಕರು ಇಂಥ ಮಾತುಗಳನ್ನು ಬಳಸುತ್ತಾರೆ. ನಂತರ ನಾಲಿಗೆ ಕಚ್ಚಿಕೊಳ್ಳುತ್ತಾರೆ. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.

ಇದನ್ನೂ ಓದಿ: Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಆಹಾರ ಸುರಕ್ಷತೆಗಾಗಿ ನಿಷೇಧ ಆದೇಶ ಹೊರಡಿಸಿದರೆ ಸಾಕೆ?

1999ರಿಂದ 2016ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆ ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಉಳಿದ ನಿಷೇಧಗಳ ಕತೆಯೂ ಇದೇ ಆಗಿದೆ.

VISTARANEWS.COM


on

Food Safety
Koo

ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ (Liquid Nitrogen) ಬಳಕೆ ಮಾಡಿದರೆ 10 ಲಕ್ಷ ರೂ. ದಂಡ, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಂತೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಹೆಚ್ಚಾಗುತ್ತಿದೆ. ಜನರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಾಯದ ಬಾಗಿಲು ತಟ್ಟುತ್ತಿದ್ದಾರೆ. ಲಿಕ್ವಿಡ್ ನೈಟ್ರೋಜನ್ ಮೂಲಕ ಸ್ಮೋಕ್‌ ಐಸ್‌ಕ್ರೀಂ, ಸ್ಮೋಕ್‌ ಬಿಸ್ಕತ್ತು, ಬಿಯರ್‌ನಲ್ಲಿ ಬಳಸಲಾಗುತ್ತಿದ್ದು, ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಸ್ಮೋಕಿಂಗ್ ಲಿಕ್ವಿಡ್ ನೈಟ್ರೋಜನ್ ಸೇವನೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖ್ಯವಾಗಿ ಲಿಕ್ವಿಡ್‌ ನೈಟ್ರೋಜನ್‌ ಸೇವನೆಯಿಂದ ಕರಳು, ಗಂಟಲುಗಳಲ್ಲಿ ಹುಣ್ಣಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿರ್ಬಂಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ ನಿರ್ಧಾರ.

ಕಲರ್ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣಗಳನ್ನು ಇತ್ತೀಚೆಗೆ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಗೋಬಿ ಮಂಚೂರಿಯಲ್ಲಿ ಟಾರ್ಟ್ರಾಸೈನ್ ಎಂಬ ಕೃತಕ ಬಣ್ಣಕಾರಕವನ್ನು ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಕಲಬೆರಕೆ ಕಲರ್ ಬಳಕೆ ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಇಂಥ ಆಹಾರ ಈಗ ನಿಷೇಧಿತ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ರೆಸ್ಟೋರಂಟ್‌ಗಳಲ್ಲಿ , ಬೀದಿ ಬದಿಯ ಸ್ಟಾಲ್‌ಗಳಲ್ಲಿ ಫುಡ್‌ ಪ್ರಿಯರನ್ನು ಆಕರ್ಷಿಸಲೆಂದೇ ಈ ಥರದ ಬಣ್ಣಗಳನ್ನು ಬಳಸುವುದು ರೂಢಿಯಾಗಿಬಿಟ್ಟಿದೆ. ಜನರೂ ಇದರ ಅಪಾಯದ ಅರಿವಿಲ್ಲದೆ ಬಳಸುತ್ತಲೇ ಇರುತ್ತಾರೆ. ಈ ನಡುವೆ ಚಿಕನ್‌ ಕಬಾಬ್‌ನಲ್ಲೂ ಕೆಲವರು ಬಣ್ಣಕಾರಕಗಳನ್ನು ಬಳಸುತ್ತಾರೆ. ಇದು ಕೂಡಾ ಅಪಾಯಕಾರಿ. ಆಹಾರ ಇಲಾಖೆಯ ಕಣ್ಣು ಇದರ ಮೇಲೂ ಬಿದ್ದಿದೆ. ಕಬಾಬ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾನೂನುಗಳನ್ನೇನೋ ಮಾಡಬಹುದು. ಆದರೆ ಅನುಷ್ಠಾನದ ಕತೆಯೇನು? ನೋಟೀಸ್ ನೀಡಿ ಬಿಟ್ಟುಬಿಟ್ಟರೆ ಜನ ಬಣ್ಣದ ಬಳಕೆ ಬಿಡುತ್ತಾರೆಯೇ? ಬೀದಿ ಬೀದಿಗಳಲ್ಲಿ ಕಲರ್‌ಫುಲ್ ಕಾಟನ್ ಕ್ಯಾಂಡಿಗಳು ಹಾಗೂ ಗೋಬಿ ಮಂಚೂರಿ ಬಳಕೆ ನಡೆದೇ ಇದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಬೇಡವೇ?

1999ರಿಂದ 2016 ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. 2022ರ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮದ ಜೊತೆಗೆ ಪರಿಸರದ ಮೇಲೆ ಮಾಡುವ ದಾಳಿಯೂ ಇದಕ್ಕೆ ಕಾರಣ. ಆದರೆ ಅದು ಕಟ್ಟುನಿಟ್ಟಾಗಿ ಜಾರಿಯಾದಂತಿಲ್ಲ. ಏಕಬಳಕೆ ಪ್ಲಾಸ್ಟಿಕ್ ಮುಂದುವರಿದಿರುವುದು ಕಾಣಿಸುತ್ತದೆ.

ಇದೆಲ್ಲದರ ಬಗ್ಗೆ ಕಾನೂನು ಮಾಡಿದರೆ ಸಾಲದು, ದೃಢವಾದ ಜಾರಿ ಮಾಡುವಿಕೆ ಇರಬೇಕು. ಸಾರ್ವಜನಿಕರು ಕೂಡ ಇದನ್ನು ಮನಗಂಡು, ಈ ಹಾನಿಕರ ವಸ್ತುಗಳಿಗೆ ಉತ್ತೇಜನ ನೀಡುವುದು ನಿಲ್ಲಿಸಬೇಕು. ಆಗ ಮಾತ್ರ ತಜ್ಞರ, ಆರೋಗ್ಯ ಇಲಾಖೆಯ ಕಳಕಳಿ ಸಾರ್ಥಕ ಆಗಬಹುದು.

ಇದನ್ನೂ ಓದಿ: Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

ಶಿಕ್ಷಣ ಎಂದರೆ ಮಕ್ಕಳು ನಲಿಯುತ್ತ ಕಲಿಯುವುದು. ಆಡುತ್ತ, ನಲಿಯುತ್ತ, ಎಲ್ಲರೊಂದಿಗೆ ಬೆರೆಯುತ್ತ ಜ್ಞಾನವನ್ನು ವೃದ್ಧಿಸಿಕೊಳ್ಳುವುದು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಅಂಕಗಳ ಹಿಂದೆ ಓಡಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸುವ, ಮೊದಲ ರ‍್ಯಾಂಕ್‌ ಪಡೆಯುವ, ಆಟ ಬಿಟ್ಟು ಪಾಠದತ್ತ ಹೆಚ್ಚು ಗಮನ ಹರಿಸುವ, ಎಫರ್ಟ್‌ ಹೆಸರಲ್ಲಿ, ಅಂಕ ಸಾಧನೆ ಹೆಸರಲ್ಲಿ ಇನ್ನಿಲ್ಲದ ಒತ್ತಡ ಅವರ ಮೇಲಿದೆ. ಇಂತಹ ಸಮಸ್ಯೆಗಳ ಮಧ್ಯೆಯೇ, ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುವುದು ಮಕ್ಕಳ ಶೈಕ್ಷಣಿಕ ಏಳಿಗೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ, ಇ-ಮೇಲ್‌ ಮೂಲಕ ಬೆದರಿಕೆ ಹಾಕುವ, ಭಯವನ್ನು ಹುಟ್ಟಿಸುವ ‘ಭಯೋತ್ಪಾದಕರಿಗೆ’ ತಕ್ಕ ಶಾಸ್ತಿ ಆಗಬೇಕಿದೆ.

VISTARANEWS.COM


on

School Children
Koo

ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ (E-Mail) ಮೂಲಕ ಬೆದರಿಕೆ ಒಡ್ಡುವುದು, ಆ ಮೂಲಕ ಮಕ್ಕಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗುವುದು, ಇದರಿಂದ ಎಲ್ಲೆಡೆ ಇದು ಸುದ್ದಿಯಾಗುವಂತೆ ಮಾಡುವ ಹೀನಾತಿಹೀನ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಸೋಮವಾರ (ಮೇ 6) ಅಹಮದಾಬಾದ್‌ನಲ್ಲಿ ಹಲವು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಇನ್ನು, ಮೇ 1ರಂದು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NRC) ಸುಮಾರು 200ಕ್ಕೂ ಅಧಿಕ ಶಾಲೆಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಮೇಲ್‌ಗಳನ್ನು (Hoax Bomb Threat) ಕಳುಹಿಸಲಾಗಿತ್ತು. ಸಹಜವಾಗಿಯೇ ಇದು ದೇಶಾದ್ಯಂತ ಸುದ್ದಿಯಾಯಿತು. ಶಾಲೆಗಳಿಂದ ಮಕ್ಕಳನ್ನು ಕೂಡಲೇ ಮನೆಗೆ ಕಳುಹಿಸಲಾಯಿತು. ಪೋಷಕರೂ ಶಾಲೆಗಳಿಗೆ ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋದರು. ಈಗಲೂ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಆಗುತ್ತಿಲ್ಲ. ಕರೆಸಿಕೊಳ್ಳಲು ಶಿಕ್ಷಕರಿಗೂ ಧೈರ್ಯ ಸಾಲುತ್ತಿಲ್ಲ. ಒಟ್ಟಿನಲ್ಲಿ ಕಿಡಿಗೇಡಿಗಳು ಮಾಡುವ ಉಪದ್ವ್ಯಾಪದಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆತಂಕದಲ್ಲಿಯೇ ಮುಳುಗಿದ್ದಾರೆ. ಹಾಗಾಗಿ, ಇ-ಮೇಲ್‌ ಮೂಲಕ ಹುಸಿ ಬಾಂಬ್ ಬೆದರಿಕೆಯೊಡ್ಡುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅನಾಮಧೇಯ ವ್ಯಕ್ತಿಗಳು ಮೇಲ್‌ ಮಾಡುವುದು, ತನಿಖೆ ಬಳಿಕ ಅದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸುವುದು, ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿರುವುದರಿಂದ ಇದೊಂದು ದೊಡ್ಡ ವಿಷಯ ಅಲ್ಲ, ನಿರ್ಲಕ್ಷಿಸುವುದು ಒಳಿತು ಎಂದು ಎನಿಸಿದರು, ಹುಸಿ ಬೆದರಿಕೆಗಳು ಅತಿ ಹೆಚ್ಚು ಆತಂಕ ಸೃಷ್ಟಿಸುತ್ತಿವೆ, ಮಕ್ಕಳ ಜತೆಗೆ ಪೋಷಕರ ಮೇಲೂ ಪರಿಣಾಮ ಬೀರುತ್ತಿವೆ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ತುಂಬ ಮುಂದುವರಿದಿದೆ. ಸೈಬರ್‌ ಅಪರಾಧ ವಿಭಾಗವನ್ನೂ ತೆರೆಯಲಾಗಿದೆ. ಹಾಗಾಗಿ, ಸೈಬರ್‌ ಕ್ರೈಂ ಪೊಲೀಸರು ಇಂತಹ ಇ-ಮೇಲ್‌ ಕಡಿಗೇಡಿಗಳನ್ನು ಮಟ್ಟಹಾಕಬೇಕು. ಬೆಂಗಳೂರು, ಅಹಮದಾಬಾದ್‌, ದೆಹಲಿ ಎನ್ನದೆ, ದೇಶಾದ್ಯಂತ ಇಂತಹ ಪ್ರಕರಣಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೇಲ್ನೋಟಕ್ಕೆ ಬೇರೆ ದೇಶದ ವಿಪಿಎನ್‌ (VPN) ಬಳಸಿ ಇ-ಮೇಲ್‌ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗೊತ್ತಾದರೂ, ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಪದ್ವ್ಯಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಹುಸಿ ಬಾಂಬ್‌ ಬೆದರಿಕೆ ಕರೆಗಳು ಹತ್ತಾರು ಪರಿಣಾಮಗಳನ್ನು ಬೀರುತ್ತಿವೆ. ನಗರಗಳಲ್ಲಿ ಮಕ್ಕಳು ಪ್ರಾಣ ಭಯದಲ್ಲಿಯೇ ಶಾಲೆಗಳಿಗೆ ತೆರಳುವಂತಾಗಿದೆ. ಪೋಷಕರಂತೂ ಜೀವ ಹಿಡಿದುಕೊಂಡು ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುಮಾರು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಇದು ನೂರಾರು ಶಾಲೆಗಳಲ್ಲಿ ಆತಂಕ ಸೃಷ್ಟಿಸಿತ್ತು. ಎಷ್ಟೋ ದಿನಗಳವರೆಗೆ ಪೋಷಕರು ಮಕ್ಕಳನ್ನು ಶಾಲೆಗಳಿಗೇ ಕಳುಹಿಸರಲಿಲ್ಲ. ಶಾಲೆಗಳ ಆಡಳಿತ ಮಂಡಳಿಗಳೂ ಅಷ್ಟೇ, ಸುಮ್ಮನೆ ಅಪಾಯವನ್ನು ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಮಕ್ಕಳನ್ನು ಹಲವು ದಿನಗಳವರೆಗೆ ಶಾಲೆಗೆ ಕರೆಸಿರಲಿಲ್ಲ. ಈಗ, ದೆಹಲಿ ಹಾಗೂ ಅಹಮದಾಬಾದ್‌ ಶಾಲೆಗಳು, ಮಕ್ಕಳು ಮತ್ತು ಪೋಷಕರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ.

ಮಕ್ಕಳಿಗೆ ಜೀವ ಭಯ, ಪೋಷಕರು ಹಾಗೂ ಶಿಕ್ಷಕರಿಗೆ ಆತಂಕ ಮಾತ್ರವಲ್ಲ, ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಮಕ್ಕಳ ಶೈಕ್ಷಣಿಕ ಏಳಿಗೆಯ ಮೇಲೆಯೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪದೇಪದೆ ಬೆದರಿಕೆ ಒಡ್ಡಿದರೆ ಮಕ್ಕಳು ಶಾಲೆಗಳಿಗೆ ಹೋಗುವುದಿಲ್ಲ. ಇದರಿಂದ ಅವರು ಪಠ್ಯವನ್ನು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಇನ್ನು, ಎಳೆಯ ವಯಸ್ಸಿನಲ್ಲೇ ಅವರು ಆತಂಕದಲ್ಲಿ ಶಾಲೆಗೆ ಹೋದರೆ, ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಯಾದ ಹೋಮ್‌ ವರ್ಕ್‌, ಆಟ-ಪಾಠಗಳಿಗೆ ಕಡಿಮೆ ಸಮಯ ಸಿಗುತ್ತಿದೆ. ಅತಿಯಾದ ಸ್ಪರ್ಧೆಯಿಂದ ಮಕ್ಕಳು ಅಂಕಗಳ ಹಿಂದೆ ಓಡಬೇಕಾದ, ರ‍್ಯಾಂಕ್‌ ಪಡೆಯಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದ ಮಕ್ಕಳು ನಾಲ್ಕೈದು ವರ್ಷದಿಂದಲೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಅಷ್ಟಕ್ಕೂ ಶಿಕ್ಷಣ ಎಂದರೆ, ನಲಿಯುತ್ತ ಕಲಿಯುವುದಾಗಿದೆ. ಒತ್ತಡವಿಲ್ಲದೆ, ಆಡುತ್ತ, ನಲಿಯುತ್ತ, ಬೆರೆಯುತ್ತ ಜ್ಞಾನ ಸಂಪಾದಿಸುವುದಾಗಿದೆ. ಆದರೆ, ಈಗ ಬಾಂಬ್‌ ಬೆದರಿಕೆಯ ಆತಂಕವೂ ಮಕ್ಕಳಲ್ಲಿ ಮೂಡಿದರೆ, ಅದು ಸುದೀರ್ಘ ಅವಧಿಗೆ ಅವರನ್ನು ಕಾಡಲಿದೆ. ಶೈಕ್ಷಣಿಕ ಏಳಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕವಾಗಿಯೂ ಅವರು ಕುಗ್ಗಿಹೋಗಲಿದ್ದಾರೆ. ಇದರ ಮಧ್ಯೆಯೇ, ಹುಸಿ ಬಾಂಬ್‌ ಬೆದರಿಕೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ, ಈ ಸಮಸ್ಯೆಗೊಂದು ಕ್ಷಿಪ್ರವಾಗಿ ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ, ಶೈಕ್ಷಣಿಕ ವಾತಾವರಣವನ್ನೇ ಹಾಳುತ್ತಿರುವ ‘ಇ-ಮೇಲ್‌ ಭಯೋತ್ಪಾದಕರಿಗೆ’ ಕಠಿಣ ಶಿಕ್ಷೆಯಾಗಬೇಕಿದೆ.

ಇದನ್ನೂ ಓದಿ: ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Continue Reading
Advertisement
Indian Sailors Released
ವಿದೇಶ12 mins ago

Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

Sanjiv Goenka
ಪ್ರಮುಖ ಸುದ್ದಿ18 mins ago

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Solar Power
ದೇಶ21 mins ago

Solar Power: ಜಾಗತಿಕವಾಗಿ ಮತ್ತೊಮ್ಮೆ ಬೆಳಗಿದ ಭಾರತ; ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಜಪಾನ್‌ನನ್ನೂ ಮೀರಿದ ಸಾಧನೆ

sslc result 2024 vaishnavi self harming
ಕ್ರೈಂ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

Job News
ಉದ್ಯೋಗ1 hour ago

Job News: ಗುಡ್‌ನ್ಯೂಸ್‌; ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಶೀಘ್ರ 12,000 ಉದ್ಯೋಗಿಗಳ ನೇಮಕ

Char Dham Yatra
ದೇಶ1 hour ago

Char Dham Yatra: ಇಂದಿನಿಂದ ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭ

hd revanna jailed 2
ಕ್ರೈಂ2 hours ago

HD Revanna Jailed: ಇನ್ನು ಮೂರು ದಿನ ಎಚ್‌ಡಿ ರೇವಣ್ಣ ಭೇಟಿ ಯಾರಿಗೂ ಇಲ್ಲ

Aravind Kejriwal
ದೇಶ2 hours ago

Arvind Kejriwal: ಕೇಜ್ರಿವಾಲ್‌ ಜಾಮೀನು ಅರ್ಜಿ ಇಂದು ವಿಚಾರಣೆ; ದಿಲ್ಲಿ ಸಿಎಂಗೆ ಜೈಲಾ…? ಬೇಲಾ?

drowned in tank jindal bellary
ಕ್ರೈಂ2 hours ago

Drowned in Tank: ಜಿಂದಾಲ್‌ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳ ಸಾವು

IPL 2024
ಐಪಿಎಲ್ 20242 hours ago

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ13 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ14 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ15 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ21 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ21 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ22 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು22 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ22 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು24 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌