ಸೈಬರ್‌ ಸೇಫ್ಟಿ ಅಂಕಣ: ಸೈಬರ್‌ ಲೋಕದಲ್ಲಿ ವರ್ಚುವಲ್ ಅಪಹರಣ - Vistara News

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸೈಬರ್‌ ಲೋಕದಲ್ಲಿ ವರ್ಚುವಲ್ ಅಪಹರಣ

ಸೈಬರ್ ಸೆಕ್ಯುರಿಟಿ (cyber security) ಅಳವಡಿಸಿಕೊಳ್ಳುವಲ್ಲಿ ಇರುವ ದೊಡ್ಡ ತೊಡುಕೇ ನಾವು. ನಮ್ಮ ಮನಸ್ಸಿನ ಆಸೆ, ದುರಾಸೆ, ದುಃಖ, ಭಯ, ಗಾಬರಿಗಳನ್ನು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಬಳಸಿಕೊಳ್ಳುತ್ತಾರೆ.

VISTARANEWS.COM


on

cyber security
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
cyber safty logo

ಸೈಬರ್ ಸೆಕ್ಯುರಿಟಿಯಲ್ಲಿ (cyber security) ಸೋಶಿಯಲ್ ಇಂಜಿನಿಯರಿಂಗ್ ಎನ್ನುವುದು ಕುಶಲತೆಯಿಂದ ನಿಮ್ಮನ್ನು ಏಮಾರಿಸುವ ಕುತಂತ್ರ. ನಿಮ್ಮ ಸಿಸ್ಟಮ್ ಅಥವಾ ಸಂಸ್ಥೆಯ ಭದ್ರತೆಗೆ ಧಕ್ಕೆ ತರುವ ಗೌಪ್ಯ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಮಾಡುವ ಟೆಕ್ನಿಕ್.

ನೆಟ್ವರ್ಕ್ ಅಥವಾ ತಂತ್ರಾಂಶಗಳ ತಾಂತ್ರಿಕ ದೋಷಗಳನ್ನು ಬಳಸಿಕೊಳ್ಳುವ ಬದಲು, ಸಾಮಾಜಿಕ ಇಂಜಿನಿಯರಿಂಗ್ ಮೂಲಕ ಸೈಬರ್ ಕ್ರಿಮಿನಲ್‌ಗಳು (cyber criminals) ನಮ್ಮ ಮನಸಿನ ಆಸೆ ಆಕಾಂಕ್ಷೆಗಳನ್ನು ಬಳಸಿಕೊಂಡು ಸೂಕ್ಷ್ಮ ಮಾಹಿತಿ, ನೆಟ್‌ವರ್ಕ್‌ಗಳು ಅಥವಾ ಭೌತಿಕ ಸ್ಥಳಗಳಿಗೆ ಅನಧಿಕೃತ ಪ್ರವೇಶ ಪಡೆಯುತ್ತಾರೆ.

ಸೈಬರ್ ಸೆಕ್ಯುರಿಟಿ ಅಳವಡಿಸಿಕೊಳ್ಳುವಲ್ಲಿ ಇರುವ ದೊಡ್ಡ ತೊಡುಕೇ ನಾವು. ನಮ್ಮ ಮನಸ್ಸಿನ ಆಸೆ, ದುರಾಸೆ, ದುಃಖ, ಭಯ, ಗಾಬರಿಗಳನ್ನು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಬಳಸಿಕೊಳ್ಳುತ್ತಾರೆ.

ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಬಳಕೆದಾರರನ್ನು ಮೋಸಗೊಳಿಸುವುದು ಸೈಬರ್ ಲೋಕದಲ್ಲಿ ಹೊಸದೇನಲ್ಲ. ಬದಲಾಗಿರುವ ಏಕೈಕ ವಿಷಯವೆಂದರೆ ದಾಳಿಯ ವಿಧಾನ, ಮಾಹಿತಿಯನ್ನು ಪಡೆಯಲು ಬಳಸುವ ಕಥೆಗಳು ಮತ್ತು ಫಿಶಿಂಗ್‌ನಂತಹ (fishing) ಇತರ ತೊಂದರೆಗಳನ್ನು ಸಂಯೋಜಿಸುವ ಸಂಘಟಿತ ಗುಂಪುಗಳಿಂದ ಆಗುತ್ತಿರುವ ಅತ್ಯಾಧುನಿಕ ದಾಳಿಗಳು. ಸೋಶಿಯಲ್ ಇಂಜಿನಿಯರಿಂಗ್ (social engineering) ಎಂಬ ಪದವನ್ನು ಡಚ್ ಕೈಗಾರಿಕೋದ್ಯಮಿ ಜೆಸಿ ವ್ಯಾನ್ ಮಾರ್ಕೆನ್ ಅವರು 1894ರಲ್ಲಿ ಮೊದಲು ಬಳಸಿದರು, ಆದರೆ ಇದು 1990ರ ದಶಕದಿಂದಲೂ ಸೈಬರ್ ದಾಳಿಯ ವಿಧಾನವಾಗಿದೆ.

ಸೋಶಿಯಲ್ ಎಂಜಿನಿಯರಿಂಗ್‌ನಲ್ಲಿ ವಿವಿಧ ತಂತ್ರಗಳನ್ನು ಬಳಸಲಾಗುತ್ತದೆ, ಅವುಗಳೆಂದರೆ:

• ಫಿಶಿಂಗ್: ಸೈಬರ್ ಅಪರಾಧಿಗಳು ನಿಮ್ಮ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ಇತರ ಸೂಕ್ಷ್ಮ ಡೇಟಾವನ್ನು ತಿಳಿಯಲು, ನಿಮ್ಮನ್ನು ಮೋಸಗೊಳಿಸಲು ಕಾನೂನುಬದ್ಧವಾಗಿರುವಂತಹ ಇಮೇಲ್‌ಗಳು, ಸಂದೇಶಗಳು ಅಥವಾ ಕರೆಗಳನ್ನು ಮಾಡಿ ಮೋಸಗೊಳಿಸುತ್ತಾರೆ.

• ನೆಪ ಹೇಳುವುದು: ದಾಳಿಕೋರರು ಬಲಿಪಶುವಿನ ನಂಬಿಕೆಯನ್ನು ಗಳಿಸಲು ಒಂದು ಕಟ್ಟುಕಥೆ ಸನ್ನಿವೇಶವನ್ನು ರಚಿಸುತ್ತಾರೆ, ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯಲು ಸಹೋದ್ಯೋಗಿ, ಟೆಕ್ನಿಕಲ್ ಸಪೋರ್ಟ್ ಅಥವಾ ಗ್ರಾಹಕರಂತೆ ನಟಿಸುತ್ತಾರೆ.

• ಆಮಿಷ ಒಡ್ಡುವುದು (Baiting): ದುರುದ್ದೇಶಪೂರಿತ ಫೈಲ್‌ಗಳು ಅಥವಾ ಸಾಧನಗಳನ್ನು ಬಳಸುವಂತೆ ನಮ್ಮನ್ನು ಪ್ರಚೋದಿಸುಲು ಅನುಮಾನ ಬರದಂತಹ ಸ್ಥಳಗಳಲ್ಲಿ ಬಿಡಲಾಗುತ್ತದೆ. ನಾವು ನಮ್ಮ ಸ್ವಇಚ್ಛೆಯಿಂದ, ಕುತೂಹಲದಿಂದ ಕ್ಲಿಕ್ಕಿಸಿದಾಗ ಇದು ಮಾಲ್‌ವೇರ್ ಸೋಂಕುಗಳಿಗೆ ಕಾರಣವಾಗಬಹುದು. ಗಾಳದಲ್ಲಿರುವ ಕ್ರಿಮಿಯನ್ನು ತಿನ್ನಲು ಬರುವ ಮೀನನ್ನು ಮೀನುಗಾರನು ಹಿಡಿಯುವಂತೆ, ಇಂತಹ ಆಮಿಷಗಳಿಗೆ ಸಿಕ್ಕಿದರೆ ನಮ್ಮ ಮಾಹಿತಿಗಳು ಸೈಬರ್ ಕ್ರಿಮಿನಲ್‌ಗಳ ಪಾಲಾಗುತ್ತದೆ.

• ಸೋಗು ಹಾಕುವಿಕೆ (Impersonation): ಆಕ್ರಮಣಕಾರರು ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳಂತೆ ವರ್ತಿಸಿ ನಿಮ್ಮಿಂದ ಹಣಕಾಸಿನ ಸಹಾಯ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಫೇಸ್‌ಬುಕ್ಕಿನ ಫೇಕ್ ಪ್ರೊಫೈಲ್ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದೆ. (ಓದಿ: 11. ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಎಂಬ ಮೋಸದ ಜಾಲ).

ಸೋಶಿಯಲ್ ಇಂಜಿನಿಯರಿಂಗ್ ದಾಳಿಗಳು ಯಶಸ್ವಿಯಾಗಲು ಕಾರಣವೇನೆಂದರೆ ಅವು ನಮ್ಮ ಕುತೂಹಲ, ನಂಬಿಕೆ, ಭಯ, ದುರಾಸೆ ಮತ್ತು ಸಹಾಯ ಮಾಡುವ ಬಯಕೆಯಂತಹ ಪ್ರವೃತ್ತಿಗಳನ್ನು ಬಳಸಿಕೊಳ್ಳುತ್ತವೆ. ಸೋಶಿಯಲ್ ಇಂಜಿನಿಯರಿಂಗ್ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಮತ್ತು ಇತರರಿಗೂ ಇದರ ಅಪಾಯಗಳ ಬಗ್ಗೆ ತಿಳುವಳಿಕೆ ನೀಡಬೇಕು.

ಇತ್ತೀಚೆಗೆ ಸೋಶಿಯಲ್ ಇಂಜಿನಿಯರಿಂಗ್ ತಂತ್ರಕ್ಕೆ ಹೊಸ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಇಂಟಲಿಜನ್ಸ್ ಆಧಾರಿತ ವಾಯ್ಸ್ ಕ್ಲೋನಿಂಗ್ ಪರಿಕರಗಳು ಮತ್ತು ChatGPT ಬಳಸಲಾದ ಬಗ್ಗೆ ವರದಿಯಾಗಿದೆ. AI ತಂತ್ರಜ್ಞಾನಗಳನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಅತಿಯಾಗುತ್ತಿದೆ. ಈ ತಿಂಗಳ ಆರಂಭದಲ್ಲಿ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸೈಬರ್ ಕ್ರಿಮಿನಲ್‌ಗಳು ನಿಮ್ಮ ಫೋಟೋ ಮತ್ತು ವೀಡಿಯೊಗಳನ್ನು ಕುಶಲತೆಯಿಂದ ಹೇಗೆ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿ ಲಾಭದಾಯಕವಾಗಿರುವ ಸೆಕ್ಸ್‌ಟಾರ್ಶನ್ ಯೋಜನೆಗಳಲ್ಲಿ ಬಳಸುತ್ತಾರೆ ಎಂಬುದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತು. ಫೆಡರಲ್ ಟ್ರೇಡ್ ಕಮಿಷನ್ ಪ್ರಕಾರ, ಈ ರೀತಿಯ ವಂಚಕ ಪ್ರಕರಣಗಳು 2022 ರಲ್ಲಿ US $ 2.6 ಶತಕೋಟಿಯಷ್ಟಿದೆ.

ಏಪ್ರಿಲ್ 2023 ರಲ್ಲಿ, ಅರಿಜೋನಾ ಮೂಲದ ಜೆನ್ನಿಫರ್ ಡಿಸ್ಟೆಫಾನೊ ಎಂಬ ಮಹಿಳೆಯೊಬ್ಬರು ಅನಾಮಧೇಯ ಕರೆ ಮಾಡಿದವರು ತಮ್ಮ 15 ವರ್ಷದ ಮಗಳನ್ನು ಅಪಹರಿಸಿ US $ 1 ಮಿಲಿಯನ್ ಸುಲಿಗೆಗೆ ಒತ್ತಾಯಿಸಿದ್ದಾರೆ ಎಂದು ಹೇಳಿದರು. ಪಾವತಿಸಲು ವಿಫಲವಾದರೆ, ಆಕೆಯ ಮಗುವಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲಾಗುತ್ತಿತ್ತು.

ಡಿಸ್ಟೆಫಾನೊ ಪ್ರಕಾರ, ಅವಳು ತನ್ನ ಮಗಳ ಅಳುವುದು, ಕೂಗುವುದು ಮತ್ತು ಮನವಿ ಮಾಡುವ ಧ್ವನಿಯನ್ನು ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಕೇಳಿದಳು, ಆದರೆ ಕರೆ ಮಾಡಿದವರು ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡಲು ಬಿಡಲಿಲ್ಲ. ಕೆಲವು ನಿಮಿಷಗಳ ಮಾತುಕತೆಯ ನಂತರ, ಸುಲಿಗೆ ಮೊತ್ತವು US$50,000 ಕ್ಕೆ ಇಳಿಯಿತು. ಅದೃಷ್ಟವಶಾತ್, ಸುಲಿಗೆ ಪಾವತಿಸುವ ಮೊದಲು, ಅವರಿಗೆ ತನ್ನ ಮಗಳು ಸುರಕ್ಷಿತವಾಗಿದ್ದಾಳೆ ಮತ್ತು ಅಪಹರಿಸಲಾಗಿಲ್ಲ ಎಂದು ತಿಳೀತು. ಈ ವಿಷಯವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದರು. ತನಿಖೆಯಲ್ಲಿ ಇದು ಸಾಮಾನ್ಯ ಹಗರಣ ಎಂದು ದಾಖಲಿಸಿದರು.

ಮೇಲೆ ತಿಳಿಸಲಾದ ನೈಜ-ಜೀವನದ ವರ್ಚುವಲ್ ಅಪಹರಣ ಪ್ರಕರಣದಲ್ಲಿ, ಕ್ರಿಮಿನಲ್‌ಗಳು ಮಕ್ಕಳ ಬಗ್ಗೆ ಪಾಲಕರ ಖಾಳಜಿಯನ್ನು ಮತ್ತು ಮಕ್ಕಳಿಗೆ ತೊಂದರೆ ಆದಾಗ ಅನುಭವಿಸುವ ಆತಂಕ, ಸಂಕಟಗಳನ್ನು ಬಳಸಿಕೊಂಡು ಹಣ ಸುಲಿಯಲು ಪ್ರಯತ್ನಿಸುತ್ತಾರೆ.

cyber stalking and bullying on the rise and to be reported

ಟಿಕ್‌ಟಾಕ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳು ಮತ್ತು ಸರ್ಕಾರಿ ಪೋರ್ಟಲ್‌ಗಳು ಸೇರಿದಂತೆ ಇತರ ವೇದಿಕೆಗಳಲ್ಲಿನ ಸಾರ್ವಜನಿಕ ಮೂಲಗಳಲ್ಲಿ ಪ್ರಕಟವಾದ ವೈಯಕ್ತಿಕ ವಿಷಯಗಳನ್ನು ಬಳಸಿ, ನಕಲಿ ಆಡಿಯೋ ಮತ್ತು ವೀಡಿಯೋಗಳನ್ನು ತಯಾರಿಸುತ್ತಾರೆ. ಅತ್ಯಂತ ಕಡಿಮೆ ಪ್ರಮಾಣದ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಿಕೊಂಡು ರಚಿಸಬಹುದಾದ ಡೀಪ್‌ಫೇಕ್ ಆಡಿಯೊ ಎಂದೂ ಕರೆಯಲ್ಪಡುವ ಈ ನಕಲಿ, AI- ರಚಿತ ಧ್ವನಿ ಫೈಲ್‌ಗಳನ್ನು ಬಳಸಿ ವರ್ಚುವಲ್ ಕಿಡ್ನಾಪಿಂಗ್ ಮಾಡುತ್ತಾರೆ. VoiceLab ನಂತಹ AI ಪರಿಕರಗಳನ್ನು ಬಳಸಿ ನಿರ್ದಿಷ್ಟ ವ್ಯಕ್ತಿಯಂತೆ ನಿಖರವಾಗಿ ಧ್ವನಿಸುವ ಡೀಪ್‌ಫೇಕ್ (deepfake) ಧ್ವನಿಯನ್ನು ಉತ್ಪಾದಿಸುತ್ತಾರೆ. ಇದನ್ನು ವಾಯ್ಸ್ ಕ್ಲೋನಿಂಗ್ ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಭಯಾನಕ ವಾಟ್ಸ್ಯಾಪ್ ಹಗರಣ: ನಿಮ್ಮ ಖಾತೆ ಹೈಜಾಕ್ ಮಾಡಲು ಒಂದು ಮಿಸ್ಡ್‌ ಕಾಲ್‌ ಸಾಕು!

ಒಂದು ಮಗುವಿನ ಧ್ವನಿಯನ್ನು ಡೀಪ್‌ಫೇಕ್ ಬಳಸಿ ಕ್ಲೋನಿಂಗ್ ಮಾಡಲು ಸಮರ್ಥವಾಗಿರುವ ಕ್ರಿಮಿನಲ್‌ಗಳನು ಮಗು ಅಳುತ್ತಿರುವಂತೆ, ಕಿರುಚುತ್ತಿರುವಂತೆ ಮತ್ತು ಆಳವಾದ ಸಂಕಟದಲ್ಲಿರುವಂತೆ ಕಾಣುವಂತೆ ಮಾಡಲು ಇನ್‌ಪುಟ್ ಸ್ಕ್ರಿಪ್ಟ್ ಅನ್ನು ಬಳಸಬಹುದು. ಈ ಡೀಪ್‌ಫೇಕ್ ಧ್ವನಿಯನ್ನು ಬಳಸಿ “ನಿಮ್ಮ ಮಗು ನಮ್ಮ ವಶದಲ್ಲಿದೆ” ಎಂದು ಆ ಮಗುವಿನ ಪಾಲಕರಿಗೆ ದೊಡ್ಡ ಮೊತ್ತವನ್ನು ಕಳುಹಿಸುವಂತೆ ಒತ್ತಡ ಹೇರಬಹುದು.

ಈ ಬಗ್ಗೆ ಶಾಲಾಕಾಲೇಜುಗಳಲ್ಲಿ, ವಿವಿಧ ಸಂಘಸಂಸ್ಥೆಗಳಲ್ಲಿ, ಮತ್ತು ಕಂಪೆನಿಗಳಲ್ಲಿ ಕಾರ್ಯಾಗಾರಗಳನ್ನು ನೆಡಸಬೇಕು. ಇಂತಹ ದಾಳಿಗಳಿಂದ ರಕ್ಷಿಸಿಕೊಳ್ಳಲು ಭದ್ರತಾ ಪ್ರೋಟೋಕಾಲ್‌ಗಳನ್ನು ಅಳವಡಿಸಬೇಕು. ಇಂತಹ ದಾಳಿಗಳಿಂದ ಸುರಕ್ಷಿತರಾಗಿರಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಜಾಣರಾಗಬೇಕು ಮತ್ತು ಜಾಗರೂಕರಾಗಿರಬೇಕು.

ನೀವೇನಾದರೂ ಸೈಬರ್ ವಂಚನೆಗೊಳಗಾದಲ್ಲಿ, ಭಾರತದ ಸೈಬರ್ ಕ್ರೈಮ್ ಸಹಾಯವಾಣಿ 1930 ಕ್ಕೆ ಕರೆಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https://cybercrime.gov.in/ ಗೆ ಹೋಗಿ ಅಲ್ಲಿನ ಸೂಚನೆಗಳನ್ನು ಅನುಸರಿಸಿ ನಿಮ್ಮ ದೂರು ದಾಖಲಿಸಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟಲಿಜೆನ್ಸ್ ಬಳಸಿ ಇಂಟಲಿಜೆಂಟ್ ಆಗೋಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಪಶ್ಚಿಮ ಬಂಗಾಳದ ಚುನಾಣಾ ಜಂಗಿ ಕುಸ್ತಿಯಲ್ಲಿ ಗೆಲವು ಯಾರಿಗೆ?

VISTARANEWS.COM


on

ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು ಚುರುಕಿನಿಂದ ಸಾಗಿದೆ. ತಮಿಳುನಾಡಿನ ಎಲ್ಲಾ 234 ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ 152 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದಿನ ವಿಧಾನಭೆ ಚುನಾವಣೆಯಲ್ಲಿ ಮೊದಲ ಹಂತದ 122 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಚುನಾವಣೆಯಲ್ಲಿ ಟಿಎಂಸಿ ಶೇ.47ರಷ್ಟು ಮತಗಳನ್ನು ಪಡೆದಿತ್ತು.

ಆದರೆ ಶೇ.40ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 59 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಂದರೆ ಕಳೆದ ಚುನಾವಣೆಯಲ್ಲಿ ಈಗ ಮೊದಲ ಹಂತದ ಮತದಾನ ನಡೆಯುತ್ತಿರುವ 152 ಕ್ಷೇತ್ರಗಳಲ್ಲಿ, ಟಿಎಂಸಿ ಮತ್ತು ಬಿಜೆಪಿ ನಡುವೆ ಶೇ.7ರಷ್ಟು ಮತಗಳ ಅಂತರವಿತ್ತು. ಕಾಂಗ್ರೆಸ್ ಶೇ 4.33 ಹಾಗೂ ಸಿಪಿಎಂ ಶೇ.3.26ರಷ್ಟು ಮತಗಳಿಕೆಗಷ್ಟೇ ಸೀಮಿತವಾಗಿದ್ದವು. ಆದರೆ ಚಲಾವಣೆಯಾದ ಮತಗಳ ಒಟ್ಟು ಪ್ರಮಾಣ ಶೇ.82.64 ರಷ್ಟಿತ್ತು.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಬಾರಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಸಿಆರ್ ಪಿಎಫ್ ಮತ್ತಿತರ ಪ್ಯಾರ ಮಿಲಿಟರಿ ಪಡೆ ಯೋಧರನ್ನು ನಿಯೋಜಿಸಿದೆ.

ಪೊಲೀಸ್ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಸ್ವಯಿಚ್ಚೆ ಮೇರೆಗೆ ಬೇರೆಡೆ ವರ್ಗವಾಗಿದ್ದಾರೆ. ಗಮನಾರ್ಹ ವಿಷಯವೇನೆಂದರೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 122 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ತಲಾ 9 ಸಾವಿರ ಮಂದಿಯಂತೆ ಒಟ್ಟು 14 ಲಕ್ಷ ಮತದಾರರ ಹೆಸರಗಳನ್ನು ಸಾವನ್ನಪ್ಪಿರುವುದೂ, ನಕಲಿ ಮತದಾರರು ಸೇರಿದಂತೆ ವಿವಿಧ ಕಾರಣಗಳ ಮೇರೆಗೆ ಕೈ ಬಿಡಲಾಗಿದೆ.

ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ನಿರ್ಭೀತ ವಾತಾವರಣದಲ್ಲಿ ಶುದ್ಧ ಮತದಾರರಷ್ಟೇ ಮತಚಲಾಯಿಸುತ್ತಾರೆ ಎನ್ನುವುದಾದರೆ, ಒಟ್ಟಾರೆ ಮತ ಚಲಾವಣೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗಬೇಕು, ಅದಾಗದಿದ್ದರೆ ಚುನಾವಣಾ ಆಯೋಗದ ವೈಫಲ್ಯವೇಂದೇ ಪರಿಗಣಿಸಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮೊದಲ ಹಂತದ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಟಕ್ಕರ್ ಕೊಡಲು ಸಾಧ್ಯ ಎಂದು ಹೇಳಲಾಗುತ್ತಿದೆ. ಏಕೆಂದರೆ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಟಿಎಂಸಿಯ ಪ್ರಾಬಲ್ಯವಿದೆ ಎಂದೆನ್ನಲಾಗುತ್ತಿದೆ.

ಇನ್ನು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ನಡುವಿನ ಬಲಾಬಲ ಮತ್ತು ದೌರ್ಬಲ್ಯಗಳನ್ನು ಅವಲೋಕಿಸುವುದಾರೆ, ಬಿಜೆಪಿ ಕೇಂದ್ರದಲ್ಲಿ ಆಡಳಿತರೂಢ ಪಕ್ಷವಾಗಿರುವುದರಿಂದ ಸಹಜವಾಗಿ ಸಿಬಿಐ, ಇ.ಡಿ ನಂತಹ ತನಿಖಾ ಸಂಸ್ಥೆಗಳು ಹಾಗೂ ಸಿಆರ್ ಪಿ ಎಫ್ ಮತ್ತಿತರ ಪ್ಯಾರಾಮಿಲಿಟರಿ ಪಡೆಗಳು ಮಿಗಿಲಾಗಿ ಚುನಾವಣಾ ಆಯೋಗ ನೀಡಿರುವ ಸಾಥ್ ಮತ್ತಿತರ ಅಂಶಗಳು ಬಿಜೆಪಿ ಪಾಲಿಗೆ ವರವಾಗಬಹುದು ಎಂದೆನ್ನಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿಗೆ ಆಡಳಿತ ವಿರೋಧಿ ಅಲೆಯ ಆತಂಕವಿದೆ. ಮುಖ್ಯವಾಗಿ ಮಹಿಳೆಯರಿಗೆ ಮಮತಾ ಸರ್ಕಾರ ನೀಡುತ್ತಿರುವ ಮಾಸಿಕ ಒಂದೂವರೆ ಸಾವಿರ ರೂಪಾಯಿ ಮೊತ್ತವನ್ನು ಮಾಸಿಕ ಮೂರು ಸಾವಿರ ರೂಪಾಯಿಗೇರಿಸುವ ಭರವಸೆಯನ್ನು ಕಮಲ ಪಾಳೆಯ ನೀಡಿರುವುದು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಹಾಗೆ ನೋಡಿದರೆ ಪಶ್ಚಿಮಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಕೇಡರ್ ಗಳ ತೀವ್ರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕಡಿತ ಟಿಎಂಸಿ ಪಕ್ಷದ ನಿದ್ದೆಗೆಡಿಸಿದೆ ಎನ್ನಲಾಗಿದೆ.

ಒಟ್ಟಾರೆ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಪ್ರಮಾಣದ ಜಂಗಿ ಕುಸ್ತಿ ನಡೆದಿದೆ. ಯಾರೇ ಗೆದ್ದರೂ ಮತಗಳಿಕೆಯ ಪ್ರಮಾಣ ಅತ್ಯಲ್ಪ ಎಂದೆನ್ನಲಾಗುತ್ತಿದೆ.

Continue Reading

ಪ್ರಮುಖ ಸುದ್ದಿ

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್-ಹೆಚ್.ಜಿ ಪವಿತ್ರ ಗೌಡ

VISTARANEWS.COM


on


ಜೈ ಶ್ರೀ ಗುರುದೇವ್‌,
ನಾಡಿನ ಎಲ್ಲಾ ಕನ್ನಡದ ಸೃಜನಶೀಲ ಮನಸುಗಳಿಗೆ ನಮಸ್ಕಾರ.
ಭಾಷೆ ನಮ್ಮ ಬದುಕು, ಭಾಷೆಯೊಂದಿಗೆ ಅನುಸಂಧಾನ ಮಾಡಿಕೊಂಡು ಕೆಲಸ ಮಾಡುವ ಮಾಧ್ಯಮವೇ ಪತ್ರಿಕೋದ್ಯಮ. ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸಬೇಕು ಎನ್ನುವುದು ನನ್ನ ಹಲವು ಕಾಲದ ಅಭಿಲಾಷೆಯಾಗಿತ್ತು. ಪರಮಾತ್ಮನ ದಯೆಯಿಂದ ಹಾಗೂ ಗುರುಗಳ ಕೃಪೆಯಿಂದ ಆ ಸದವಕಾಶ ಈಗ ಒದಗಿ ಬಂದಿದೆ. ಕನ್ನಡಿಗರ ಧ್ವನಿಯಾಗಿ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಲು ನಾವು ʻಪಿಎನ್‌ಎಸ್‌ ವಿಸ್ತಾರʼ ಸುದ್ದಿವಾಹಿನಿಯನ್ನು ಪುನರಾರಂಭಿಸುತ್ತಿದ್ದೇವೆ. ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ಕನ್ನಡ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೆ ತನ್ನದೇ ಆದ ಒಂದು ಬ್ರಾಂಡ್‌ ಸೃಷ್ಟಿಸಿಕೊಂಡಿದ್ದ ಸುದ್ದಿ ವಾಹಿನಿ, ಕಾರಣಾಂತರಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಒಂದು ವಿಶೇಷ ಹಾಗೂ ವಿಭಿನ್ನ ಕಾರ್ಯಯೋಜನೆಯೊಂದಿಗೆ ನಾವು ಮರಳಿ ಬರುತ್ತಿದ್ದೇವೆ. ಕನ್ನಡ ನಾಡಿನ ಬಂಧುಗಳ ಕಷ್ಟ-ನಷ್ಟಗಳ ಕುರಿತು ವಸ್ತುನಿಷ್ಟ ವರದಿ ಮಾಡಲು, ಕನ್ನಡ ನಾಡಿನ ಸಂಸ್ಕೃತಿ ಸಾರಗಳನ್ನು ಜಗತ್ತಿನಾದ್ಯಂತ ಪಸರಿಸಲು, ಕನ್ನಡದ ನುಡಿಸಿರಿಯ ವೈವಿಧ್ಯತೆಯನ್ನು ವರ್ಣಿಸಲು ಸರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸುದ್ದಿ ಜಗತ್ತಿನ ನಿಖರ ವರ್ತಮಾನಗಳನ್ನು ನಿರ್ಭೀತಿಯಿಂದ ನಿಮ್ಮ ಮುಂದಿಡಲು ನಾವು ಸಿದ್ಧರಾಗಿದ್ದೇವೆ. ಜನಸಾಮಾನ್ಯರ ಪ್ರತಿನಿಧಿಯಾಗಿ ಆಳುವ ಪ್ರಭುತ್ವವನ್ನು ಧೈರ್ಯದಿಂದ ಪ್ರಶ್ನಿಸಲು ನಾವು ಸಿದ್ಧರಾಗಿದ್ದೇವೆ. ಕರ್ನಾಟಕದ ನಾಡು-ನುಡಿ, ನೆಲ, ಜಲ, ಸಂಸ್ಕೃತಿಗಳ ಹಿತರಕ್ಷಣೆಗಾಗಿ ಸಂಕಲ್ಪಿಸಿಕೊಂಡಿದ್ದೇವೆ. ನಾವು ಕೇವಲ ಸುದ್ದಿಗಳನ್ನು ಪ್ರಾಮಾಣಿಕವಾಗಿ ವರದಿ ಮಾಡುತ್ತೇವೆ. ಮಾಹಿತಿಯೊಂದಿಗೆ ಮನೋರಂಜನೆ ಎಂಬ ವಿಶೇಷ ಆಯಾಮವನ್ನು ನಮ್ಮ ಮಾಧ್ಯಮದಲ್ಲಿ ಪ್ರಸ್ತುತ ಪಡಿಸಲಿದ್ದೇವೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಹಿರಿಯ, ಅನುಭವಿ, ಪ್ರಾವೀಣ್ಯತೆ ಹೊಂದಿರುವ ತಂಡ ನಮ್ಮೊಂದಿಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ವಿದ್ಯಮಾನ, ರಾಜಕೀಯ, ಸಿನಿಮಾ-ಕಲೆ, ಕ್ರೀಡೆ, ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರ, ಜೀವನಶೈಲಿ, ಇತಿಹಾಸ-ಪುರಾಣ, ಪದ್ಧತಿ-ಪರಂಪರೆ, ಭಾಷೆಯ ಸೊಗಡು ಮತ್ತು ಆಹಾರ ಕ್ರಮಗಳು, ನದಿ- ಪರಿಸರ ಅರಣ್ಯ- ಜೀವವೈವಿಧ್ಯ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ನಾವು ನಮ್ಮ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮ ಮುಂದೆ ತರಲಿದ್ದೇವೆ. ನಮ್ಮ ನಾಡಿನ ಕ್ರಿಯಾಶೀಲ, ಸೃಜನಶೀಲ ಮನಸುಗಳಿಗೆ ಅತ್ಯಂತ ಆಹ್ಲಾದಕಾರಿ ಸುದ್ದಿ ಸಂಗತಿಗಳನ್ನು ಉಣಬಡಿಸಬೇಕು ಅನ್ನುವುದಷ್ಟೆ ನಮ್ಮ ಕಳಕಳಿ. ಈ ನಿಟ್ಟಿನಲ್ಲಿ ನಮ್ಮ ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ತಂಡ ಕಳೆದ ಕೆಲವು ತಿಂಗಳಿನಿಂದ ಕಠಿಣ ಪರಿಶ್ರಮ ನಡೆಸುತ್ತಿದೆ. ಎಲ್ಲಾ ವಯೋಮಾನದವರ, ಎಲ್ಲಾ ವರ್ಗದವರ ಮತ್ತು ಎಲ್ಲಾ ರೀತಿಯ ಮನಸ್ಥಿತಿಯ ಜನಸಮುದಾಯವನ್ನು ತಲುಪಬೇಕು ಅನ್ನುವುದು ನಮ್ಮ ಹಿರಿಯಾಸೆ. ಕನ್ನಡಿಗರ ಆದ್ಯತೆಯ ವಿಷಯಗಳನ್ನು ಆಯ್ದು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡಲು ಕಾರ್ಯಯೋಜನೆ ರೂಪಿಸಿಕೊಂಡಿದ್ದೇವೆ. ಈಗ ಬೇಕಿರುವುದು ನಿಮ್ಮ ಶುಭ ಹಾರೈಕೆ ಮಾತ್ರ. ನೀವು ನಮ್ಮೊಂದಿಗಿರಿ ಸಾಕು, ನಾವು ನಿಮಗಾಗಿ ದಿನದ ೨೪ ಗಂಟೆ, ವಾರದ ೭ ದಿನ, ವರ್ಷದ ೩೬೫ ದಿನಗಳು ಸೇವೆ ಸಲ್ಲಿಸಲು ಶತಸಿದ್ಧ.

ಕರುನಾಡಿನ ಸಮಸ್ತ ಕನ್ನಡಿಗರಿಗೆ ನನ್ನ ಧನ್ಯವಾದಗಳು

ಸದಾ ನಿಮ್ಮ ಸೇವೆಯಲ್ಲಿ.
-ಹೆಚ್.ಜಿ ಪವಿತ್ರ ಗೌಡ, ‌ಸಿಇಒ, ಪಿಎನ್‌ಎಸ್‌ ವಿಸ್ತಾರ ನ್ಯೂಸ್

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ ಇಲ್ಲಿದೆ. ವಾನರೇಂದ್ರನ ಮಂತ್ರಿ ಕೋಸಲೇಂದ್ರನ ದಾಸನಾದ ಪ್ರಸಂಗವಿದು.

VISTARANEWS.COM


on

dhavala dharini column Hanuman's setubandha to meet Sugriva in ramayana by narayana yaji

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Continue Reading

ದೇಶ

ರಾಜಮಾರ್ಗ ಅಂಕಣ: ಅನಾಥಾಶ್ರಮದ ಹುಡುಗಿಯು ಅಮೇರಿಕನ್ ಕಂಪೆನಿಯ ಸಿಇಒ ಆದ ಕಥೆ

ರಾಜಮಾರ್ಗ ಅಂಕಣ: ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ.

VISTARANEWS.COM


on

ರಾಜಮಾರ್ಗ ಅಂಕಣ Jyothi Reddy

ವಾರಂಗಲ್ ನಗರದ ಕಲ್ಲು ಒಡೆಯುವ ಹುಡುಗಿ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿದ್ದು ಹೇಗೆ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ.ʼ
(ನೆಪೋಲಿಯನ್ ಹಿಲ್)

ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆಯು ಇಂದು ನಿಮ್ಮ ಮುಂದೆ.

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ತೆಲಂಗಾಣ ರಾಜ್ಯದ ವಾರಂಗಲನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಮತ್ತು ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೋಡಲಿಕ್ಕೂ ಬರಲಿಲ್ಲ! ಅದರಲ್ಲಿ ಒಬ್ಬರು ಜ್ಯೋತಿ! ಆಕೆ ತನ್ನ ಬಾಲ್ಯದ ಐದು ವರ್ಷಗಳನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು.

ಅಸಹಾಯಕ ಬದುಕು, ನೂರಾರು ಸವಾಲು!

ಹಿರಿಯ ಮಗಳಾದ ಜ್ಯೋತಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ಕೂಡ ನಡೆದು ಹೋಯಿತು. ಆಗ ಅವರಿಗೆ 16 ವರ್ಷ! ಹದಿನೆಂಟು ತುಂಬುವ ಹೊತ್ತಿಗೆ ಮಡಿಲಲ್ಲಿ ಎರಡು ಹೆಣ್ಣು ಮಕ್ಕಳು ಮಲಗಿದ್ದವು! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಜ್ಯೋತಿ ಅವರೇ ಹೊತ್ತರು.

ಕಠಿಣ ದುಡಿಮೆಯ ಜೊತೆಗೆ ಒಂದಷ್ಟು ಕನಸು!

ಬತ್ತದ ಗದ್ದೆಯಲ್ಲಿ ನೇಜಿಯನ್ನು ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸವನ್ನು ಕೂಡ ಅವರು ಮಾಡಿದರು. ತನ್ನ ಬದುಕು ಸ್ವಾವಲಂಬಿ ಆಗಬೇಕು ಎನ್ನುವ ತುಡಿತ ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಜ್ಯೋತಿ ರೆಡ್ಡಿ ಅವರು ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅದರ ಜೊತೆಗೆ ಅಂಬೇಡ್ಕರ್ ಬಯಲು ವಿವಿಯ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಅವರು ಮುಗಿಸಿದರು. ಹಾಗೆಯೇ ಅವರ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು.

ಟೀಚರ್ ಆಗಿ ಉದ್ಯೋಗ ಆರಂಭ ಮಾಡಿದರು

ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಉದ್ಯೋಗವು ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ ಕೈ ಸೇರುತ್ತಿತ್ತು. ಪುಟ್ಟ ಬಾಡಿಗೆ ಮನೆ. ಅವರ ಕುಟುಂಬಕ್ಕೆ ಆ ಸಂಬಳವು ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಘಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆಗಳನ್ನು ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕಾದಲ್ಲಿ ಉದ್ಯೋಗದ ಆಫರ್ ಬಂತು!

2000ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದೇ ಬಿಟ್ಟಿತು. ಅವರ ಸೋದರ ಮಾವ ಒಬ್ಬರು ಅಮೆರಿಕಾದಿಂದ ಊರಿಗೆ ಬಂದವರು ಜ್ಯೋತಿ ಅವರನ್ನು ಭೇಟಿ ಮಾಡಿದರು. ಅಮೆರಿಕಾದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ತನ್ನ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ದೊಡ್ಡ ಕನಸು! ಇವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿದರು. ಅದರಲ್ಲಿ ತೀವ್ರವಾದ ರಿಸ್ಕ್ ಇತ್ತು. ಆದರೆ ರಿಸ್ಕ್ ಇಲ್ಲದೆ ಕನಸು ಪೂರ್ತಿ ಆಗುವುದು ಹೇಗೆ?

ವಾರಂಗಲ್ ಟು ಅಮೆರಿಕಾ ಹಾರಿದರು!

ಪ್ರೀತಿಸುವ ತನ್ನ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು! ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿದರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಟ್ಟ ಅನುಭವ ಅವರಿಗೆ ಆಯಿತು. ತಂದಿದ್ದ ಸ್ವಲ್ಪ ದುಡ್ಡು ಪೂರ್ತಿ ಖಾಲಿ ಆಗಿತ್ತು.

ಮಾಯಾ ನಗರಿಯಲ್ಲಿ ಒಂಟಿ ಹೆಣ್ಣಿನ ಹೋರಾಟ!

ಅವರು ಯಾವತ್ತೂ ಅಮೆರಿಕಾ ನೋಡಿದವರೇ ಅಲ್ಲ! ಅಲ್ಲಿ ಅವರಿಗೆ ಸಂಬಂಧಿಕರು ಅಥವಾ ಪರಿಚಯದವರು ಅಂತ ಯಾರೂ ಇರಲಿಲ್ಲ. ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಗಾಳಿಗೆ ತೂರಿ ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್… ಹೀಗೆ ಹಲವು ಕಡೆ ದುಡಿದರು. ಆ ಸಂದರ್ಭ ಸೂಕ್ಷ್ಮವಾಗಿ ಅಮೆರಿಕಾದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೇರಿಕನ್ ಡಾಲರ್ ಸಂಪಾದನೆ ಮಾಡಿದ್ದರು!

ಆರಂಭ ಆಗಿಯೇ ಬಿಟ್ಟಿತು ಕನಸಿನ ಕಂಪೆನಿ!

ಅದನ್ನು ಬಂಡವಾಳ ಮಾಡಿಕೊಂಡು ಅಮೆರಿಕಾದ ಫೀನಿಕ್ಸ್ ಎಂಬಲ್ಲಿ ಒಂದು ಸಣ್ಣದಾದ ಕಚೇರಿಯನ್ನು ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು( 2001). ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಅವರಿಗೆ ಈಗ ಸಹಾಯಕ್ಕೆ ಬಂದಿತು.

ಅಮೆರಿಕಾದಲ್ಲಿ ಹೊರಗಿಂದ ಬರುವವರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ವೀಸಾ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಸ್ವಾವಲಂಬಿಯಾದ ಹೆಣ್ಣು ಮಗಳು ಅಮೆರಿಕಾದಲ್ಲಿ ಮಾಡಿದ ಭಾರೀ ಹೋರಾಟವು ಕೊನೆಗೂ ಫಲ ನೀಡಿತು. ಒಂದರ ಹಿಂದೆ ಒಂದು ಅವರ ಕಂಪೆನಿಯ ಫ್ರಾಂಚೈಸಿಗಳು ಆರಂಭ ಆದವು. ಅವರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಇಂದವರ ಕಂಪೆನಿ ಬಿಲಿಯನ್ ಡಾಲರ್ ಆದಾಯ ಹೊಂದಿದೆ!

ಈಗ ಅವರ ಬಿಲಿಯನ್ ಡಾಲರ್ ಕಂಪೆನಿಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ತನ್ನ ಇಬ್ಬರು ಮಕ್ಕಳನ್ನು ಕೂಡ ಅವರು ಅಮೆರಿಕಕ್ಕೆ ಕರೆಸಿ ಸಾಫ್ಟವೇರ್ ಇಂಜಿನಿಯರಿಂಗ್ ಓದಿಸಿ ಮದುವೆ ಮಾಡಿದ್ದಾರೆ. ಅವರಿಗೆ NRI OF THE YEAR ಪ್ರಶಸ್ತಿ ದೊರೆತಿದೆ!

ಕೆರೆಯ ನೀರನು ಕೆರೆಗೆ ಚೆಲ್ಲಿ…

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆಯು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

Continue Reading
Advertisement
Latest3 hours ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest3 hours ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest4 hours ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ4 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest5 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest6 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest6 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest8 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ9 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest10 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌