ವಾಣಿಜ್ಯ
LIC : ಎನ್‌ಎಂಡಿಸಿಯಲ್ಲಿನ 2% ಷೇರುಗಳನ್ನು ಮಾರಿ 700 ಕೋಟಿ ರೂ. ಗಳಿಸಿದ ಎಲ್‌ಐಸಿ
ಕಬ್ಬಿಣದ ಅದಿರು ಉತ್ಪಾದಕ ಎನ್‌ಎಂಡಿಸಿಯಲ್ಲಿನ 2% ಷೇರುಗಳನ್ನು ಎಲ್‌ಐಸಿಯು ಮಾರಾಟ ಮಾಡಿದ್ದು, 700 ಕೋಟಿ ರೂ. (LIC) ಗಳಿಸಿದೆ.
ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಬುಧವಾರ ಸಾರ್ವಜನಿಕ ವಲಯದ ಎನ್‌ಎಂಡಿಸಿಯಿಂದ 2% ಷೇರುಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಎನ್‌ಎಂಡಿಸಿಯಲ್ಲಿ ಎಲ್‌ಐಸಿಯ ಷೇರು ಪಾಲು 13.69%ರಿಂದ 11.69% ಕ್ಕೆ ಇಳಿಕೆಯಾಗಿದೆ. ಈ ಷೇರು ವಿಕ್ರಯದಿಂದ ಎಲ್‌ಐಸಿಯು 700 ಕೋಟಿ ರೂ. ಆದಾಯವನ್ನು ಗಳಿಸಿದೆ.
2022ರ ಡಿಸೆಂಬರ್ 29ರಿಂದ 2023ರ ಮಾರ್ಚ್ 14 ರ ಅವಧಿಯಲ್ಲಿ ಎಲ್‌ಐಸಿಯು ಎನ್‌ಎಂಡಿಸಿಯಲ್ಲಿನ ಷೇರು ಪಾಲನ್ನು ಕಡಿತಗೊಳಿಸಿದೆ. ಪ್ರತಿ ಷೇರಿಗೆ ಸರಾಸರಿ 119 ರೂ.ಗಳಂತೆ ಮಾರಾಟವಾಗಿದೆ.
ಎನ್‌ಎಂಡಿಸಿಯ ಒಟ್ಟು 5.88 ಕೋಟಿ ಷೇರುಗಳನ್ನು ಎಲ್‌ಐಸಿಯು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಒಟ್ಟು 700 ಕೋಟಿ ರೂ. ಸಂಪಾದಿಸಿದೆ. ಎನ್‌ಎಂಡಿಸಿಯು ಕಬ್ಬಿಣದ ಅದಿರು ಗಣಿಗಾರಿಕೆ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಮುಖ ಸುದ್ದಿ
Small savings schemes : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಸಂಭವ
ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ. ಸರ್ಕಾರಿ ಬಾಂಡ್‌ಗಳ ಆದಾಯದಲ್ಲಿ ಇತ್ತೀಚಿನ ಏರಿಕೆ ಇದಕ್ಕೆ ಪುಷ್ಟಿ ( Small savings schemes) ನೀಡಿದೆ.
ನವ ದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು (Small savings schemes) ಏರಿಸುವ ಸಾಧ್ಯತೆ ಇದೆ. 2023ರ ಏಪ್ರಿಲ್-ಜೂನ್ ಅವಧಿಯ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ 6 ತಿಂಗಳುಗಳಲ್ಲಿ ಇವುಗಳ ಬಡ್ಡಿ ದರದಲ್ಲಿ 0.30%ರಿಂದ 1.40% ತನಕ ಏರಿಕೆಯಾಗಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್ ಆದಾಯ 0.20% ಏರಿಕೆಯಾಗಿದೆ.
ಸಣ್ಣ ಉಳಿತಾಯ ಯೋಜನೆ ಜನವರಿ-ಮಾರ್ಚ್ ಅವಧಿಗೆ ಬಡ್ಡಿ ದರ ಉಳಿತಾಯ ಠೇವಣಿ 4.0% 1 ವರ್ಷದ ಟೈಮ್ ಡಿಪಾಸಿಟ್ 6.6% 2 ವರ್ಷದ ಟೈಮ್ ಡಿಪಾಸಿಟ್ 6.8% 3 ವರ್ಷದ ಟೈಮ್ ಡಿಪಾಸಿಟ್ 6.9% 5 ವರ್ಷದ ಟೈಮ್ ಡಿಪಾಸಿಟ್ 7.0% 5 ವರ್ಷದ ರಿಕರಿಂಗ್ ಡಿಪಾಸಿಟ್ 7.0% ಹಿರಿಯ ನಾಗರಿಕರ ಉಳಿತಾಯ ಯೋಜನೆ 8.0% ಮಾಸಿಕ ಆದಾಯ ಖಾತೆ 7.1% ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ 7.0% ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ 7.1% ಕಿಸಾನ್ ವಿಕಾಸ್ ಪತ್ರ 7.2% ಸುಕನ್ಯಾ ಸಮೃದ್ಧಿ ಖಾತೆ ಯೋಜನೆ 7.6%
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಸರ್ಕಾರಿ ಬಾಂಡ್‌ಗಳ ಆದಾಯ ಇಳಿಕೆಯಾಗಿತ್ತು. ಇದರ ಪರಿಣಾಮ ಸಣ್ಣ ಉಳಿತಾಯ ಯೋಜನೆಗಖ ಬಡ್ಡಿ ದರ ಕುಸಿದಿತ್ತು. ಆದರೆ ಆರ್‌ಬಿಐ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳು ಠೇವಣಿ ಬಡ್ಡಿ ದರಗಳನ್ನು ಏರಿಸಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ.
ಪ್ರಮುಖ ಸುದ್ದಿ
Foreign Trade Policy 2023 : ವಿದೇಶಗಳ ಜತೆ ವ್ಯಾಪಾರದಲ್ಲಿ ಡಾಲರ್ ಬದಲು ರೂಪಾಯಿಗೆ ಆದ್ಯತೆ ನೀಡಿದ ಹೊಸ ನೀತಿ
ಭಾರತ ಶುಕ್ರವಾರ ತನ್ನ ವಿದೇಶಾಂಗ ವ್ಯಾಪಾರ ನೀತಿಯನ್ನು ಪ್ರಕಟಿಸಿದೆ. (Foreign Trade Policy 2023 ) ಹಲವು ಮಹತ್ವದ ಬದಲಾವಣೆಗಳನ್ನು ಒಳಗೊಂಡಿದೆ. ವಿವರ ಇಲ್ಲಿದೆ.
ನವ ದೆಹಲಿ: ಭಾರತ ಶುಕ್ರವಾರ ತನ್ನ ವಿದೇಶಾಂಗ ವ್ಯಾಪಾರ ನೀತಿಯನ್ನು (Foreign Trade Policy 2023) ಪ್ರಕಟಿಸಿದ್ದು, 5 ವರ್ಷಗಳ ಸೀಮಿತ ಅವಧಿಯ ಬದಲು ದೀರ್ಘಕಾಲೀನ ದೃಷ್ಟಿಗೆ ಆದ್ಯತೆ ನೀಡಿದೆ. ವಿದೇಶಗಳ ಜತೆಗೆ ವ್ಯಾಪಾರದಲ್ಲಿ ಡಾಲರ್ ಬದಲಿಗೆ ರೂಪಾಯಿ ಬಳಕೆಗೆ ಉತ್ತೇಜಿಸಲಾಗಿದೆ. ಇದುವರೆಗೆ ವಿದೇಶಾಂಗ ವ್ಯಾಪಾರ ನೀತಿಯ ಅವಧಿ ಐದು ವರ್ಷಗಳಿಗೆ ಮುಕ್ತಾಯವಾಗುತ್ತಿತ್ತು. ಇದೀಗ ಮುಕ್ತಾಯದ ದಿನ ಇರುವುದಿಲ್ಲ. ಆದರೆ ಕಾಲಾನುಸಾರ ಪರಿಷ್ಕರಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಹೊಸ ವಿದೇಶಾಂಗ ನೀತಿಯು ಡೈನಾಮಿಕ್ ಆಗಿದ್ದು, ಅದಕ್ಕೆ ಕೊನೆಯ ದಿನಾಂಕ ಇರುವುದಿಲ್ಲ. ನಾವು ಪ್ರತಿಕ್ರಿಯೆ, ಸಲಹೆಗಳನ್ನು ಅಧರಿಸಿ ದಾಖಲೆಗಳನ್ನು ಪರಿಷ್ಕರಿಸುತ್ತೇವೆ. ಯಾವುದಾದರೂ ಕ್ಷೇತ್ರವು ತನಗೆ ನೀತಿಯಲ್ಲಿ ಆದ್ಯತೆ ಇಲ್ಲ ಎಂದು ಭಾವಿಸಿದರೆ ನಿರಾಸೆಪಡಬೇಕಿಲ್ಲ ಎಂದು ವಿದೇಶಾಂಗ ವ್ಯಾಪಾರ ನೀತಿಯ ಪ್ರಧಾನ ನಿರ್ದೇಶಕ ಸಂತೋಷ್ ಸಾರಂಗಿ ತಿಳಿಸಿದರು.
ನೂತನ ವಿದೇಶಾಂಗ ವ್ಯಾಪಾರ ನೀತಿಯ ಮುಖ್ಯಾಂಶ:
2030ರ ವೇಳೆಗೆ 2 ಲಕ್ಷ ಕೋಟಿ ಡಾಲರ್ (164 ಲಕ್ಷ ಕೋಟಿ ರೂ.) ರಫ್ತು ನಡೆಸುವ ಗುರಿಯನ್ನು ಭಾರತ ಹೊಂದಿದೆ.
ವಿದೇಶಾಂಗ ವ್ಯಾಪಾರ ನೀತಿಗೆ ಕೊನೆಯ ದಿನಾಂಕ ಇರುವುದಿಲ್ಲ, ಕಾಲಾನುಸಾರ ಪರಿಷ್ಕರಣೆ ಇರುತ್ತದೆ.
ಭಾರತವು ಕರೆನ್ಸಿ ಬಿಕ್ಕಟ್ಟು ಅಥವಾ ಡಾಲರ್ ಕೊರತೆ ಎದುರಿಸುತ್ತಿರುವ ದೇಶಗಳ ಜತೆಗೆ ರೂಪಾಯಿ ಮೂಲಕ ವಹಿವಾಟು ನಡೆಸಲು ಸಿದ್ಧವಿರುವುದಾಗಿ ಘೋಷಿಸಿದೆ.
2022-23ರಲ್ಲಿ ಭಾರತವು 765 ಶತಕೋಟಿ ಡಾಲರ್ (62 ಲಕ್ಷ ಕೋಟಿ ರೂ.) ಮೌಲ್ಯದ ರಫ್ತು ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ.
ಫರೀದಾಬಾದ್, ಮೊರಾದಾಬಾದ್, ಮಿರ್ಜಾಪುರ ಮತ್ತು ವಾರಾಣಸಿಯನ್ನು ರಫ್ತು ಕೇಂದ್ರವಾಗಿ ಘೋಷಿಸಲಾಗಿದೆ.
ಕೊರಿಯರ್ ಮೂಲಕ ರಫ್ತಿಗೆ ಮೌಲ್ಯವನ್ನು ಪ್ರತಿ ಯುನಿಟ್‌ಗೆ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ.
ಸರಾಸರಿ ರಫ್ತು ಬದ್ಧತೆಯ ವ್ಯಾಪ್ತಿಯಿಂದ ಡೇರಿ ವಲಯವನ್ನು ಮುಕ್ತಗೊಳಿಸಲಾಗಿದೆ.
ಇ-ಕಾಮರ್ಸ್ ವ್ಯಾಪಾರವನ್ನು 2023 ವೇಳೆಗೆ 300 ಶತಕೋಟಿ ಡಾಲರ್‌ಗೆ ( 24 ಲಕ್ಷ ಕೋಟಿ ರೂ.) ಏರಿಸುವ ಗುರಿ.
ರಫ್ತು ಬಾಧ್ಯತೆಯನ್ನು ಪಾಲಿಸುವಲ್ಲಿ ವಿಫಲರಾದವರಿಗೆ ಒನ್ ಟೈಮ್ ಸೆಟ್ಲ್‌ಮೆಂಟ್ ನೀತಿ.
ಅಂಕಣ
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
ಚೀನಾದಿಂದ ಕಳೆದ ಎರಡು ವರ್ಷಗಳಿಂದ ದೂರವಾಗಿದ್ದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾದ ಸ್ಥಾಪಕ ಜಾಕ್ ಮಾ, ಇದೀಗ ತವರಿಗೆ ಮರಳಿದ್ದಾರೆ. ಜತೆಗೆ ಅಲಿಬಾಬಾ 6 ಕಂಪನಿಗಳಾಗಿ ಮೊದಲ ಬಾರಿಗೆ ವಿಭಜನೆಯಾಗುತ್ತಿದೆ. (Brand story) ಈ ಬೆಳವಣಿಗೆ ಜಾಗತಿಕ ಕಾರ್ಪೊರೇಟ್ ವಲಯದ ಗಮನ ಸೆಳೆದಿದೆ.
ಚೀನಾದ ಕಾರ್ಪೊರೇಟ್ ವಲಯದಲ್ಲಿ ಅತಿ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿರುವ ಅಲಿಬಾಬಾ ದೊಡ್ಡ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣ ದೈತ್ಯ ಸಮೂಹ ತನ್ನ 24 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದು. (Brand story) ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಸಮೂಹದ ಷೇರು ದರದಲ್ಲಿ ಏರಿಕೆಯಾಗಿದೆ. 1999ರ ಜೂನ್ 28ರಂದು ಸ್ಥಾಪನೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ (Alibaba Group Holding Limited) ಚೀನಾದ ಅತಿ ದೊಡ್ಡ ಇ-ಕಾಮರ್ಸ್ ಕಂಪನಿ. ಜತೆಗೆ ರಿಟೇಲ್, ಇಂಟರ್‌ನೆಟ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಟ್ಟದ ಇ-ಕಾಮರ್ಸ್ ದಿಗ್ಗಜ ಕಂಪನಿಗಳನ್ನು ಗಮನಿಸಿದರೆ, ಚೀನಾದ ಅಲಿಬಾಬಾ ಮತ್ತು ಅಮೆರಿಕದ ಅಮೆಜಾನ್ ದೈತ್ಯ ಕಂಪನಿಗಳು. ಆದರೆ ಇವೆರಡರ ಬಿಸಿನೆಸ್ ಮಾದರಿಯಲ್ಲಿ ವ್ಯತ್ಯಾಸವೂ ಇದೆ. ಅಮೆಜಾನ್ ಹೊಸ ಮತ್ತು ಹಳೆಯ ಸರಕುಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ದೈತ್ಯ ರಿಟೇಲರ್ ಕಂಪನಿಯಾಗಿದ್ದರೆ, ಅಲಿಬಾಬಾ, ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಅಲಿಬಾಬಾ ನಡೆಸುತ್ತಿರುವ Taobao ಎಂಬ ಇ-ಕಾಮರ್ಸ್ ತಾಣದಲ್ಲಿ ಮಾರಾಟಗಾರರು-ಖರೀದಿದಾರರು ತಮ್ಮ ವರ್ಗಾವಣೆಗೆ ಯಾವುದೇ ಹಣ ಕೊಡಬೇಕಿಲ್ಲ. ಶುಲ್ಕ ರಹಿತ ಮಾರುಕಟ್ಟೆ ವೇದಿಕೆ ಇದಾಗಿದೆ. ಸಣ್ಣ ವರ್ತಕರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಅಲಿಬಾಬಾ ದೊಡ್ಡ ರಿಟೇಲರ್‌ಗಳಿಗೂ ವಿಶೇಷವಾಗಿ ಮುಡಿಪಾಗಿರುವ Tmal ಎಂಬ ಇ-ಕಾಮರ್ಸ್ ತಾಣವನ್ನೂ ಒಳಗೊಂಡಿದೆ. ಇಲ್ಲಿ ಗ್ಯಾಪ್, ನೈಕ್, ಆಪಲ್ ಮೊದಲಾದ ಬ್ರ್ಯಾಂಡ್‌ಗಳ ಬಿಸಿನೆಸ್ ನಡೆಯುತ್ತದೆ. ಈ ಸೈಟ್ ಬಳಸುವ ರಿಟೇಲರ್ಸ್‌ಗಳಿಂದ ಠೇವಣಿ, ವಾರ್ಷಿಕ ಬಳಕೆದಾರರ ಶುಲ್ಕ, ಸೇಲ್ಸ್ ಕಮೀಶನ್ ಪಡೆದು ಅಲಿಬಾಬಾ ತನ್ನ ಆದಾಯವನ್ನು ಪಡೆಯುತ್ತದೆ. ಅಲಿಬಾಬಾ ಅಲಿಪೇ (Alipay) ಎಂಬ ಸೆಕ್ಯೂರ್ ಪೇಮೆಂಟ್ ಸಿಸ್ಟಮ್ ಅನ್ನೂ ಹೊಂದಿದೆ.
ಜಾಕ್ ಮಾ (Jack Ma) ಮಾಲಿಕತ್ವದ ಅಲಿಬಾಬಾ ಗ್ರೂಪ್, 220 ಶತಕೋಟಿ ಡಾಲರ್ ( ಅಂದಾಜು 18 ಲಕ್ಷ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅಲಿಬಾಬಾ ಸಮೂಹವು 6 ಪ್ರತ್ಯೇಕ ಕಂಪನಿಗಳಾಗಿ ವಿಭಜನೆಯಾಗುವುದರ ಜತೆಗೆ ಹಲವು ಐಪಿಒಗಳನ್ನೂ ನಡೆಸಲಿದೆ. ಹೀಗಾಗಿ ಷೇರು ಹೂಡಿಕೆದಾರರಿಗೆ ಅಲಿಬಾಬಾ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಸಿಗಲಿದೆ ಎಂದು ವರದಿಯಾಗಿದೆ. ತಂತ್ರಜ್ಞಾನ ವಲಯದ ದಿಗ್ಗಜ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದುತ್ತಿವೆ ಎಂಬ ಚೀನಿ ಸರ್ಕಾರದ ಆಕ್ಷೇಪವನ್ನು ಎದುರಿಸಲು ಹಾಗೂ ಫಂಡ್ ಸಂಗ್ರಹಿಸಲು ಜಾಕ್ ಮಾಗೆ ಈ ನಡೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲಿಬಾಬಾ ಗ್ರೂಪ್ ಈ ರೀತಿ ವಿಭಜನೆಯಾಗಲಿದೆ- ಕ್ಲೌಡ್ ಇಂಟಲಿಜೆನ್ಸ್ ಗ್ರೂಪ್, ಟಾಬಾವೊ ಟಿಮಾಲ್ ಕಾಮರ್ಸ್ ಗ್ರೂಪ್, ಲೋಕಲ್ ಸರ್ವೀಸ್ ಗ್ರೂಪ್, ಕೈನಿಯೊ ಸ್ಮಾರ್ಟ್ ಲಾಜಿಸ್ಟಿಕ್ಸ್ ಗ್ರೂಪ್, ಗ್ಲೋಬಲ್ ಡಿಜಿಟಲ್ ಕಾಮರ್ಸ್ ಗ್ರೂಪ್ ಮತ್ತು ಡಿಜಿಟಲ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಗ್ರೂಪ್.
ಚೀನಾಕ್ಕೆ ಮರಳಿದ ಜಾಕ್ ಮಾ
ಕಳೆದ 2021ರ ನವೆಂಬರ್ ಬಳಿಕ ಚೀನಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಸುದ್ದಿಯಾಗಿದ್ದ ಜಾಕ್ ಮಾ, ವಿದೇಶದಲ್ಲಿದ್ದರು. ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ ಎಂಬ ಊಹಾಪೋಹವೂ ಉಂಟಾಗಿತ್ತು. ಶಾಂಘೈನಲ್ಲಿ ಬಹಿರಂಗವಾಗಿಯೇ ಕ್ಸೀ ಜಿನ್‌ಪಿಂಗ್ ಸರ್ಕಾರವನ್ನು ಟೀಕಿಸಿದ್ದರು. ಜಾಕ್ ಮಾ ಹಾಗೂ ಚೀನಿ ಅಧ್ಯಕ್ಷ ಜಿನ್ ಪಿಂಗ್ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ವದಂತಿ ಹರಡಿತ್ತು. ಇದೀಗ ಮತ್ತೆ ಚೀನಾಕ್ಕೆ ಆಗಮಿಸಿದ್ದಾರೆ. ಇದರೊಂದಿಗೆ ಸೂಪರ್ ಮಾರ್ಕೆಟ್‌ನಿಂದ ಡೇಟಾ ಸೆಂಟರ್ ತನಕ ಎಲ್ಲ ಬಿಸಿನೆಸ್ ಅನ್ನೂ ಒಂದೇ ಸಮೂಹದ ವೇದಿಕೆಯಲ್ಲಿ ಇಡುವ ಪದ್ಧತಿಗೆ ಅಲಿಬಾಬಾ ತಿಲಾಂಜಲಿ ನೀಡಿದೆ. ಅಲಿಬಾಬಾ ವಿಭಜನೆಯ ಸುದ್ದಿ ಹಿನ್ನೆಲೆಯಲ್ಲಿ ಅದರ ಷೇರು ದರದಲ್ಲಿ 15% ಏರಿಕೆಯಾಗಿದೆ.
ಇಂಗ್ಲಿಷ್ ಶಿಕ್ಷಕರಾಗಿದ್ದ ಜಾಕ್ ಮಾ ಕಟ್ಟಿದ ಇ-ಕಾಮರ್ಸ್ ಸಾಮ್ರಾಜ್ಯ!
ಅಲಿ ಬಾಬಾ ಎಂದೊಡನೆ ಬಾಲ್ಯದಲ್ಲಿ ಕೇಳುತ್ತಿದ್ದ ಅಲಿಬಾಬಾ ಮತ್ತು ನಲುವತ್ತು ಕಳ್ಳರ ಕತೆ ನೆನಪಾಗಬಹುದು. ಅರೇಬಿಯಾದ ಜಾನಪದ ಕಥಾ ನಾಯಕನ ಹೆಸರನ್ನು 24 ವರ್ಷಗಳ ಹಿಂದೆ ಜಾಕ್ ಮಾ ಅವರು ತಮ್ಮ ಇ-ಕಾಮರ್ಸ್ ಕಂಪನಿಗೆ ಇಟ್ಟಿದ್ದರು. ಆಗ ಅಲಿಬಾಬಾ ಚೀನಾದ ಅತಿ ದೊಡ್ಡ ಇ-ಕಾಮರ್ಸ್ ಕಂಪನಿಯಾಗಲಿದೆ ಎಂದು ಅಂದುಕೊಂಡಿರಲಿಲ್ಲ. ಏಕೆಂದರೆ ಚೀನಾದ ಹನ್‌ಜುಯು ಎಂಬಲ್ಲಿ ಪುಟ್ಟ ಅಪಾರ್ಟ್‌ಮೆಂಟ್‌ನಲ್ಲಿ ಒಂದಷ್ಟು ಮಂದಿ ಗೆಳೆಯರ ಬಳಗದೊಂದಿಗೆ 60 ಸಾವಿರ ಡಾಲರ್ ಬಂಡವಾಳವನ್ನು ಹೊಂದಿಸಿ ಸಣ್ಣದಾಗಿ ವ್ಯಾಪಾರ ಶುರು ಹಚ್ಚಿಕೊಂಡಿದ್ದರು. ಆದರೆ ಬಳಿಕ ನಡೆದದ್ದು ಈಗ ರೋಚಕ ಇತಿಹಾಸ. ಜಾಕ್ ಮಾ ಕೇವಲ 15 ವರ್ಷದಲ್ಲೇ ಚೀನಾದ ನಂ.1 ಮತ್ತು ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದರು. 2005ರಲ್ಲಿ ಅಲಿಬಾಬಾ, ಚೀನಾದಲ್ಲಿ ಯಾಹೂವನ್ನು ಖರೀದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. 2014ರಲ್ಲಿ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ (New York Stock Exchange) ಅಲಿಬಾಬಾದ ಆರಂಭಿಕ ಷೇರು ಬಿಡುಗಡೆ (Initial public offering) ನಡೆಯಿತು. ಕಂಪನಿಗೆ 25 ಶತಕೋಟಿ ಡಾಲರ್ ಹಣ ಹರಿದು ಬಂತು. ಮಾರುಕಟ್ಟೆ ಮೌಲ್ಯ 231 ಶತಕೋಟಿ ಡಾಲರ್‌ಗೆ ಜಿಗಿಯಿತು. ಇದು ಆಗ ವಿಶ್ವದ ಐಪಿಒ ಚರಿತ್ರೆಯಲ್ಲಿಯೇ ಅತಿ ದೊಡ್ಡದು ಎಂದು ದಾಖಲೆಗೆ ಪಾತ್ರವಾಗಿತ್ತು. 2018ರಲ್ಲಿ 500 ಶತ ಫೋರ್ಬ್ಸ್ 2020ರಲ್ಲಿ ಅಲಿಬಾಬಾವನ್ನು ಜಗತ್ತಿನ 31ನೇ ಅತಿ ದೊಡ್ಡ ಪಬ್ಲಿಕ್ ಕಂಪನಿ ಎಂದು ಘೋಷಿಸಿತು. ಅದೇ ವರ್ಷ ಜಗತ್ತಿನ ಐದನೇ ಅತಿ ದೊಡ್ಡ ಕೃತಕ ಬುದ್ಧಿಮತ್ತೆ ಕಂಪನಿ (Artificial intelligence) ಎನ್ನಿಸಿತು.
ಬಿಲಿಯನೇರ್ ಉದ್ಯಮಿಯಾಗಿ ದಂತಕತೆಯಾಗಿರುವ ಜಾಕ್‌ಮಾ , ಇದಕ್ಕೂ ಮುನ್ನ ಇಂಗ್ಲಿಷ್ ಶಿಕ್ಷಕರಾಗಿದ್ದರು. 1964 ಸೆಪ್ಟೆಂಬರ್ 10ರಂದು ಜನಿಸಿದ ಜಾಕ್ ಮಾಗೆ ಈಗ 58 ವರ್ಷ ವಯಸ್ಸು. ಬಾಲ್ಯದಲ್ಲಿಯೇ ಇಂಗ್ಲಿಷ್ ಕಲಿಕೆಗೆ ಅತೀವ ಆಸಕ್ತಿ ವಹಿಸಿದ್ದರು. 1988ರಲ್ಲಿ ಇಂಗ್ಲಿಷ್‌ನಲ್ಲಿ ಬಿಎ ಓದಿದರು. ಹಂಗ್ಜುವೊ ಡಿಯಾಂಝಿ ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದರು. ಹಾರ್ವರ್ಡ್‌ನಲ್ಲಿ ಶಿಕ್ಷಕರಾಗಲು ಹಲವು ಸಲ ಯತ್ನಿಸಿದ್ದರೂ ವಿಫಲರಾಗಿದ್ದರು.
ಅಲಿಬಾಬಾ ಕೇವಲ ಇ-ಕಾಮರ್ಸ್ ಕಂಪನಿಯಲ್ಲ!
ಅಲಿಬಾಬಾ ಕೇವಲ ಇ-ಕಾಮರ್ಸ್ ಕಂಪನಿಯೊಂದೇ ಅಲ್ಲ, ಅದು ಜಗತ್ತಿನ ನಾನಾ ದೇಶಗಳ ಹಲವಾರು ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳಲ್ಲಿ ಹೂಡಿಕೆಯನ್ನೂ ಮಾಡಿದೆ. ಕಾರ್ಪೊರೇಟ್ ಜಗತ್ತಿನ ಪ್ರಮುಖ ವೆಂಚರ್ ಕ್ಯಾಪಿಟಲ್ ಕಂಪನಿಗಳಲ್ಲಿ (venture capital firm) ಅಲಿಬಾಬಾ ಕೂಡಾ ಒಂದು. ವೀಸಾ ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ಫಿನ್‌ಟೆಕ್ ಕಂಪನಿಯಾದ ಆಂಟ್ ಗ್ರೂಪ್ ಕೂಡ ಅಲಿಬಾಬಾದ ಭಾಗವಾಗಿದೆ. ಇದು ಅಲಿಪೇ (Alipay) ಎಂಬ ಬೃಹತ್ ಮೊಬೈಲ್ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿದೆ. ಇದನ್ನು 103 ಕೋಟಿ ಬಳಕೆದಾರರು ಮತ್ತು 8 ಕೋಟಿ ವರ್ತಕರು ಬಳಸುತ್ತಿದ್ದಾರೆ ಎಂದರೆ ಇದರ ಅಗಾಧತೆಯನ್ನು ಊಹಿಸಿ. ಚೀನಾದಲ್ಲಿ ಥರ್ಡ್ ಪಾರ್ಟಿ ಪೇಮೆಂಟ್ ಮಾರುಕಟ್ಟೆಯಲ್ಲಿ 55% ಪಾಲನ್ನು ಅಲಿಪೇ ಹೊಂದಿದೆ. ಆಲಿಬಾಬಾ ಡಾಟ್‌ಕಾಮ್ ಅತಿ ದೊಡ್ಡ B2B ಕಂಪನಿಯಾಗಿದ್ದರೆ, ಟಾವೊಬಾಯೊ ಅತಿದೊಡ್ಡ C2C (Taobao) ಮತ್ತು ಟಿಮಾಲ್ ಅತಿ ದೊಡ್ಡ B2C ಕಂಪನಿಯಾಗಿದೆ.
ಅಲಿಬಾಬಾ ಹೆಸರು ಹೇಗೆ ಬಂತು?
ನಾನು ಸ್ಯಾನ್ ಫ್ರಾನ್ಸಿಸ್ಕೊದ ಕಾಫಿ ಶಾಪ್ ಒಂದರಲ್ಲಿ ವಿರಾಮದ ವೇಳೆ ಕಾಲ ಕಳೆಯುತ್ತಿದ್ದೆ. ಅಲ್ಲಿಗೆ ಬೇರೆ ಬೇರೆ ದೇಶಗಳ ಜನ ಬರುತ್ತಿದ್ದರು. ಅಮೆರಿಕನ್ನರು, ಯುರೋಪಿಯನ್ನರು, ಭಾರತೀಯರನ್ನು ಕಂಡು ಅಲಿಬಾಬಾ ಹೆಸರು ಕೇಳಿದ್ದೀರಾ ಎಂದಾಗ ಗೊತ್ತು ಎನ್ನುತ್ತಿದ್ದರು. ಅಲಿಬಾಬಾ ಮತ್ತು ನಲುವತ್ತು ಕಳ್ಳರ ಜಾನಪದೆ ಕಥೆ ಎಲ್ಲರಿಗೂ ಗೊತ್ತಿತ್ತು. ಆದರೆ ಅಲಿಬಾಬಾ ಕಳ್ಳನಲ್ಲ, ಚತುರಮತಿ. ಸ್ಮಾರ್ಟ್ ಬಿಸಿನೆಸ್‌ಮ್ಯಾನ್. ಹಳ್ಳಿಗರಿಗೆ ಸಹಕರಿಸುತ್ತಿದ್ದ. ಅಲಿಬಾಬಾ ಹೆಸರು ಉಚ್ಚಾರಣೆ ಮಾಡುವುದು ಕೂಡ ಸುಲಭ. ಹೀಗಾಗಿ ಇದೇ ಹೆಸರನ್ನು ನನ್ನ ಕಂಪನಿಗೆ ಇಟ್ಟೆ ಎನ್ನುತ್ತಾರೆ ಜಾಕ್ ಮಾ.
1999ರ ಜೂನ್ 28ರಂದು ಜಾಕ್ ಮಾ ಅವರು 17 ಸ್ನೇಹಿತರು ಮತ್ತು ವಿದ್ಯಾರ್ಥಿಗಳೊಂದಿಗೆ ಅಲಿಬಾಬಾ ಡಾಟ್ ಕಾಮ್ ಅನ್ನು (Alibaba.com) ಸ್ಥಾಪಿಸಿದರು. ಆರಂಭಿಕ ಹಂತದಲ್ಲಿ ಸ್ವಿಡಿಶ್ ಮೂಲದ ಇನ್ವೆಸ್ಟ್ ಎಬಿ, ಗೋಲ್ಡ್‌ಮನ್ ಸ್ಯಾಕ್ಸ್ ಮತ್ತು ಸಾಫ್ಟ್ ಬ್ಯಾಂಕ್ ಹೂಡಿಕೆ ಲಭಿಸಿತು. ಚೀನಾದ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ರಫ್ತು ಮಾಡಲು ಅಮೆಜಾನ್ ಬೃಹತ್ ವೇದಿಕೆಯಾಗಿ ಬದಲಾಯಿತು.
2020ರ ತನಕ ಅಲಿಬಾಬಾ ಡಾಟ್ ಕಾಮ್ ಭಾರತದ ನಾನಾ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿತ್ತು. ಮುಖ್ಯವಾಗಿ ಬಿಗ್ ಬಾಸ್ಕೆಟ್, ಪೇಟಿಎಂ, ಸ್ನಾಪ್‌ಡೀಲ್, ಜೊಮ್ಯಾಟೊ ಮೊದಲಾದ ಸ್ಟಾರ್ಟಪ್‌ಗಳಲ್ಲಿ ಅಲಿಬಾಬಾ ಹೂಡಿಕೆ ಮಾಡಿತ್ತು. ಆದರೆ ಇತ್ತೀಚೆಗೆ ಪೇಟಿಎಂನಿಂದ ತನ್ನ ಷೇರುಗಳನ್ನು 1.67 ಶತಕೋಟಿ ಡಾಲರ್‌ಗೆ ( ಅಂದಾಜು 1369 ಕೋಟಿ ರೂ.) ಮಾರಾಟ ಮಾಡಿತ್ತು.
ಅಜ್ಞಾತವಾಸ ಮುಕ್ತಾಯಗೊಳಿಸಿ ಚೀನಾಕ್ಕೆ ಮರಳಿದ ಜಾಕ್ ಮಾ:
ಸುಮಾರು 2 ವರ್ಷ ಕಾಲ ಚೀನಾದಿಂದ ನಾಪತ್ತೆಯಾಗಿದ್ದ ಜಾಕ್ ಮಾ ಮತ್ತೆ ತವರಿಗೆ ಮರಳಿದ್ದಾರೆ. ಕಳೆದ ಎರಡು ವರ್ಷ ನಾನಾ ದೇಶಗಳ ನಡುವೆ ಅಲೆದಾಡುತ್ತಿದ್ದರು. ನಿಖರವಾಗಿ ಎಲ್ಲಿ ಇರುತ್ತಿದ್ದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಜಾಲತಾಣದಲ್ಲೂ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ. ಜಪಾನ್, ಥಾಯ್ಕೆಂಡ್, ಯುರೋಪ್, ಆಸ್ಟ್ರೇಲಿಯಾದಲ್ಲಿ ಸಂಚರಿಸುತ್ತಿದ್ದರು. ಆದರೆ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಚೀನಾದ ಕ್ಸಿ ಜಿನ್‌ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರಕ್ಕೂ ಅಲಿಬಾಬಾ ಸಮೂಹಕ್ಕೂ ಸಂಘರ್ಷ ಏರ್ಪಟ್ಟಿತ್ತು. ಖಾಸಗಿ ಉದ್ಯಮಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಜಾಕ್ ಮಾ 2019ರಲ್ಲಿ ಟೀಕಿಸಿದ್ದರು. ಚೀನಾದ ಬ್ಯಾಂಕ್‌ಗಳು ಪಾನ್ ಶಾಪ್ ಮೆಂಟಾಲಿಟಿಯನ್ನು ಹೊಂದಿದ್ದು, ಖಾಸಗಿ ವಲಯದ ಉದ್ಯಮಿಗಳಿಗೆ ಕಂಟಕಪ್ರಾಯವಾಗಿವೆ ಎಂದು ವಾಗ್ದಾಳಿ ನಡೆಸಿದ್ದರು.
ಇದಾದ ಬಳಿಕ ಚೀನಿ ಸರ್ಕಾರ ಅಲಿಬಾಬಾ ಕಂಪನಿಗಳ ವಿರುದ್ಧ Anti trust ತನಿಖೆ ನಡೆಸಿತ್ತು. ಮಾರುಕಟ್ಟೆ ನಿಯಂತ್ರಕವು ಜಾಕ್ ಮಾ ಅವರ ಆಂಟ್ ಗ್ರೂಪ್‌ನ ಐಪಿಒ ಅನ್ನು ರದ್ದುಪಡಿಸಿತ್ತು. ಈ ಘಟನೆಯ ಬಳಿಕ ಜಾಕ್ ಮಾ ಚೀನಾದಲ್ಲಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ ಒಂದು ವರ್ಷದಿಂದ ವಿದೇಶದಲ್ಲಿದ್ದರು. ಈ ನಡುವೆ ಚೀನಾದಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ಅದರ ರಕ್ಷಣೆಗೆ ಉದ್ಯಮಿಗಳ ನೆರವು ಮತ್ತು ಮಹತ್ವದ ಅರಿವು ಕ್ಸಿ ಜಿನ್‌ಪಿಂಗ್ ಅವರಿಗೆ ಉಂಟಾಗಿದೆ. ಖಾಸಗಿ ವಲಯದ ಉದ್ಯಮಿಗಳ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿಯೇ ಜಾಕ್ ಮಾ ಮರಳಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಇದನ್ನೂ ಓದಿ: Brand story | ಗೌತಮ್ ಶಾಂತಿಲಾಲ್ ಅದಾನಿ ಮುಟ್ಟಿದ್ದೆಲ್ಲ ಚಿನ್ನ, ಏನಿದು ಕಮಾಲ್ ?!
ದೇಶದ ಶ್ರೀಮಂತಿಕೆಗೆ ಉದ್ಯಮಿಗಳ ನೆರವು ಅಗತ್ಯ, ಸಿರಿವಂತರಾಗಿ ಮತ್ತು ಜವಾಬ್ದಾರಿಯುತರಾಗಿರಿ, ಇತರರಿಗೆ ಸಹಕರಿಸಿ, ನೀವೆಲ್ಲ ನಮ್ಮವರೇ ಹೊರತು ಬೇರೆಯವರಲ್ಲ- ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಈ ಹಿಂದೆ ಖಾಸಗಿ ವಲಯದ ಉದ್ಯಮಿಗಳತ್ತ ಕೆಂಗಣ್ಣು ಬೀರಿದ್ದ ಜಿನ್‌ಪಿಂಗ್ ಇತ್ತೀಚೆಗೆ ವರಸೆ ಬದಲಿಸಿದ್ದು, ಓಲೈಕೆಗೆ ಮುಂದಾಗಿರುವುದನ್ನು ಅವರ ಹೇಳಿಕೆಗಳು ಬಿಂಬಿಸಿವೆ.
ಜಾಕ್ ಮಾ ಅವರ ಪ್ರಸಿದ್ಧ ನುಡಿ ಮುತ್ತುಗಳು ಇಂತಿವೆ:
- ಒಳ್ಳೆಯ ಬಾಸ್ ಒಳ್ಳೆಯ ಕಂಪನಿಗಿಂತ ಮಿಗಿಲು
- ನಾನು ಸದಾ ನನಗಿಂತ ಸ್ಮಾರ್ಟ್ ಆಗಿರುವ ಜನರನ್ನು ಹುಡುಕುತ್ತಿರುತ್ತೇನೆ. ಸ್ಮಾರ್ಟ್ ಆಗಿರುವ ಜನ ಒಟ್ಟಿಗೆ ಕೆಲಸ ಮಾಡುವಂತೆ ಮಾಡುವುದು ನನ್ನ ಕೆಲಸ. ಏಕೆಂದರೆ ಮೂರ್ಖರು ಸುಲಭವಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಆದರೆ ಬುದ್ಧಿವಂತರು ಹಾಗಲ್ಲ, ಅವರಲ್ಲಿ ಭಿನ್ನ ಆಲೋಚನೆ, ದೃಷ್ಟಿಕೋನ ಇರುವುದರಿಂದ ಅವರಿಗೆ ಒಟ್ಟಿಗೆ ಕೆಲಸ ಮಾಡುವುದು ಕಷ್ಟ. ಆದರೆ ಅವರು ಒಟ್ಟಿಗೆ ಕೆಲಸ ಮಾಡುವಂತೆ ನೋಡಿದರೆ ನೀವು ಗೆಲ್ಲುವುದು ಸುಲಭ.
- ಯಾವುದಾದರೂ ಬರುತ್ತಿದೆ ಎಂದು ಗೊತ್ತಾದರೆ ಈಗಿನಿಂದಲೇ ಎದುರಿಸಲು ತಯಾರಾಗುವುದು ಮುಖ್ಯ. ಛಾವಣಿ ಇದ್ದಾಗಲೇ ಅದನ್ನು ದುರಸ್ತಿ ಮಾಡಬೇಕು.
- ದೂರುಗಳು ಇದ್ದಲ್ಲಿ ಅವಕಾಶವೂ ಇರುತ್ತದೆ.
- 21ನೇ ಶತಮಾನದಲ್ಲಿ ನಿಮ್ಮ ಕಂಪನಿ ಹೇಗಿದೆ ಎಂಬುದಕ್ಕಿಂತಲೂ, ನಿಮ್ಮ ಅಧಿಕಾರಕ್ಕಿಂತಲೂ, ನೀವು ಒಳ್ಳೆಯವರಾಗಿರುವುದು ಮುಖ್ಯ. ಅದು ಪ್ರಬಲ ಶಕ್ತಿ.
- ಉದ್ಯಮಿಯಾಗಿ ನೀವು ಆಶಾವಾದಿಗಳಾಗಿ ನಿಲ್ಲದಿದ್ದರೆ, ನಿಮಗೆ ತೊಂದರೆಯಾದೀತು. ಹೀಗಾಗಿ ನಾನು ಆಶಾವಾದಿಗಳನ್ನೇ ಆಯ್ಕೆ ಮಾಡುತ್ತೇನೆ.
ಪ್ರಮುಖ ಸುದ್ದಿ
Boost to Make in India : 36,400 ಕೋಟಿ ರೂ. ಮೌಲ್ಯದ ಡೀಲ್‌ಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ
ಕೇಂದ್ರ ಸರ್ಕಾರವು 36,400 ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಲಾಗಿದೆ. (Boost to Make in India) ಇದು ಸ್ವದೇಶಿ ಉತ್ಪಾದನೆಗೂ ಪುಷ್ಟಿ ನೀಡಲಿದೆ.
ನವ ದೆಹಲಿ: ಕೇಂದ್ರ ಸರ್ಕಾರವು 36,400 ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದೆ. ಇದರಿಂದಾಗಿ ಭೂ ಸೇನೆ, ನೌಕಾ ಪಡೆ ಮತ್ತು ವಾಯುಸೇನೆಗೆ ( Boost to Make in India) ಹೆಚ್ಚಿನ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿದೆ. ಮತ್ತೊಂದು ಕಡೆ ಆತ್ಮನಿರ್ಭರ ಭಾರತಕ್ಕೆ (Aatmanirbhara Bharata ) ಪುಷ್ಟಿ ಸಿಗಲಿದೆ.
ಕೇಂದ್ರ ಸರ್ಕಾರ ಎರಡು ಆಕಾಶ್ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯನ್ನು (Akash air defence missile systems) ಖರೀಸಲು, ಭಾರತ್ ಡೈನಾಮಿಕ್ಸ್ ಲಿಮಿಟೆಡ್ (Bharat Dynamics Limited) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ 6,000 ಕೋಟಿ ರೂ.ಗಳಾಗಿದೆ.
ಮೇಕ್ ಇನ್ ಇಂಡಿಯಾಗೆ ಬಲ:
ಈ ಸುಧಾರಿತ ಕ್ಷಿಪಣಿ ಸಿಸ್ಟಮ್‌ಗಳು ಭಾರತೀಯ ಸೇನೆಗೆ ಯಾವುದೇ ಶತ್ರುವಿನ ವಿಮಾನ ಅಥವಾ ದ್ರೋನ್ ಅನ್ನು ಗಡಿಯಲ್ಲಿ ಹೊಡೆದುರುಳಿಸಲು ಸಹಕಾರಿಯಾಗಲಿದೆ. ಈ ಕ್ಲಿಯರೆನ್ಸ್‌ನಿಂದಾಗಿ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪುಷ್ಟಿ ಸಿಗಲಿದೆ. ಶಸ್ತ್ರಾಸ್ತ್ರಗಳ ಆಮದು ವೆಚ್ಚ ಇಳಿಕೆಯಾಗಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕೂಡ ಪ್ರಯೋಜನಕಾರಿಯಾಗಲಿದೆ.
ರಕ್ಷಣಾ ಸಚಿವಾಲಯವು 11 ಗಸ್ತು ನೌಕೆಗಳನ್ನು ಹಾಗೂ 6 ಕ್ಷಿಪಣಿ ವಾಹಕ ನೌಕೆಗಳನ್ನು ಖರೀದಿಸಲು ಕೂಡ 19,600 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿದೆ. ಸುಧಾರಿತ ಆಕಾಶ್ ವೆಪ್ಪನ್ ಸಿಸ್ಟಮ್, 12 ವೆಪ್ಪನ್ ಲೊಕೇಟಿಂಗ್ ರಾಡಾರ್‌ಗಳನ್ನೂ ಖರೀದಿಸಲು 9,100 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರ ದೇಶದಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜತೆಗಿನ ಸಂಘರ್ಷ ನಡೆದು ಮೂರು ವರ್ಷಗಳ ಬಳಿಕ, ಹೊಸತಾಗಿ ಭಾರತ ಶಸ್ತ್ರಾಸ್ತ್ರ ಖರೀದಿಗೆ ಮೆಗಾ ಒಪ್ಪಂದವನ್ನು ಮಾಡಿಕೊಂಡಿದೆ.
ದೇಶದ ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಲು ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾಗೆ (Make In India) ಒತ್ತು ನೀಡುತ್ತಿರುವ ಕಾರಣ ಭಾರತದ ಯುದ್ಧವಿಮಾನ, ಶಸ್ತ್ರಾಸ್ತ್ರಗಳಿಗೆ ಬೇರೆ ದೇಶಗಳಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇದೇ ಕಾರಣದಿಂದಾಗಿ ಕಳೆದ ಐದು ವರ್ಷದಲ್ಲಿ ರಕ್ಷಣಾ ರಫ್ತು ಶೇ.339ರಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೇಶೀಯ ಎಲ್‌ಸಿಎ ತೇಜಸ್ ಎಂಕೆ2 (Tejas Mk2) ಯುದ್ಧವಿಮಾನಗಳ ಖರೀದಿಗೆ 16 ದೇಶಗಳು ಆಸಕ್ತಿ ತೋರಿವೆ. ಇದಕ್ಕಾಗಿ ಉತ್ಪಾದನೆ ಕ್ಷಿಪ್ರಗೊಳಿಸಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ