ಅಂಕಣ
Raja Marga Column : ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ಚರ್ಚಿಲ್ ಕಣ್ಣಲ್ಲಿ ಭಯ ಕುಣಿಯುತ್ತಿತ್ತು!
Raja Marga Column : ಅಂದು ಇಬ್ಬರು ಜಾಗತಿಕ ಮಟ್ಟದ ನಾಯಕರು ಒಂದೆಡೆ ಕುಳಿತು ಯಾರ ಬಗ್ಗೆ ಮಾತಾಡುತ್ತಿದ್ದರು ಗೊತ್ತೇ? ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ದ್ವನಿ ನಡುಗಿದ್ದು ಯಾಕೆ? ನೇತಾಜಿ ಸುಭಾಷ್ ಬಗ್ಗೆ ಆಗಿನ ಬ್ರಿಟನ್ ಪ್ರಧಾನಿ ಚರ್ಚಿಲ್ ಹೇಳಿದ ಮಾತುಗಳೇನು? ಇಲ್ಲಿ ಓದಿ.
ಅದು 1943ರ ಇಸವಿ ಆಗಸ್ಟ್ ತಿಂಗಳ ಒಂದು ದಿನ. ಆಗ ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಸೇರಿದ್ದರು!
ಒಬ್ಬರು ಸೂರ್ಯ ಮುಳುಗದ ಸಾಮ್ರಾಜ್ಯ ಇಂಗ್ಲೆಂಡ್‌ನ ಪ್ರಧಾನಿ (England Prime Minister) ವಿನ್‌ಸ್ಟನ್ ಚರ್ಚಿಲ್! (Winston Churchil)
ಇನ್ನೊಬ್ಬರು ಅಮೆರಿಕಾದ ಆಗಿನ ಜನಪ್ರಿಯ ಅಧ್ಯಕ್ಷರಾದ (American President) ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್! (Franklin Delano Roosevelt)
ಒಂದು ಇಡೀ ದಿನದಲ್ಲಿ ಇಬ್ಬರೂ ಸೇರಿ ಒಬ್ಬ ಭಾರತೀಯ ನಾಯಕನ ಬಗ್ಗೆ ಮಾತಾಡಿದ್ದರು. ಅವರಿಬ್ಬರೂ ಆಗಿನ ಕಾಲದ ಮಹಾ ಮುತ್ಸದ್ದಿಗಳು ಎಂದು ಕರೆಸಿಕೊಂಡವರು!
ಬ್ರಿಟನ್ ಪ್ರಧಾನಿ ಚರ್ಚಿಲ್ ಧ್ವನಿಯಲ್ಲಿ ಆಗ ಆತಂಕ ಎದ್ದು ಕಾಣುತ್ತಿತ್ತು! ಭಾರತದ ಮೇಲೆ ಬ್ರಿಟನ್ ತನ್ನ ಹಿಡಿತವನ್ನು ಕಳೆದುಕೊಳ್ಳುವ ಭೀತಿಯು ಅವರ ಮುಖದಲ್ಲಿ ಆಗ ಎದ್ದು ಕಾಣುತ್ತಿತ್ತು.
ಅವರಿಬ್ಬರೂ ಆ ದಿನ ಪೂರ್ತಿ ಮಾತಾಡುತ್ತಿದ್ದದ್ದು ಭಾರತದ ಸ್ವಾತಂತ್ರ್ಯದ ಕಿಡಿ (Raja Marga Column) ಎಂದು ಎಲ್ಲರಿಂದ ಕರೆಸಿಕೊಂಡ ನೇತಾಜಿ ಸುಭಾಸಚಂದ್ರ ಬೋಸರ ಬಗ್ಗೆ!(Netaji subhash chandra bose)
ಬ್ರಿಟನ್ ಪ್ರಧಾನಿ ಚರ್ಚಿಲ್ ನೇತಾಜಿಯವರ ಬಗ್ಗೆ ಹೇಳುತ್ತಾ ಹೋದ ಮಾತುಗಳನ್ನು ಕೇಳಿ….
ಆ ಮನುಷ್ಯ ಅತ್ಯಂತ ಅಪಾಯಕಾರಿ. ಆತನನ್ನು ಯಾರೂ ಯಾಮಾರಿಸಲು ಸಾಧ್ಯವೇ ಇಲ್ಲ! ಅವನ ಮೈಯ್ಯಲ್ಲಿ ಸೈತಾನ ಹೊಕ್ಕಿದ್ದಾನೆ. ಅವನೊಬ್ಬ ಸಂಹಾರಕ ವ್ಯಕ್ತಿ ಮತ್ತು ಉದ್ರೇಕಕಾರಿ ಶಕ್ತಿ. ಅವನು ನಮ್ಮ ಇಂಗ್ಲೆಂಡಿಗೆ ಬಂದು ಐಸಿಎಸ್ ಪರೀಕ್ಷೆ ಮಾಡಿ ಹೋಗಿದ್ದಾನೆ! ನಾಲ್ಕನೇ ರ‍್ಯಾಂಕ್ ಕೂಡ ಪಡೆದಿದ್ದಾನೆ. ಆದರೆ ನಮ್ಮ ಸರಕಾರದಲ್ಲಿ ನೌಕರಿ ಮಾಡಲು ಅವನು ತಯಾರಿಲ್ಲ ಎಂದು ಎದ್ದು ಹೋಗಿದ್ದಾನೆ.
ಇಡೀ ಭಾರತದ ಯುವಕರು ಇಂದು ಅವನ ಜೊತೆ ಇದ್ದಾರೆ. ಭಾರತದ ಎಲ್ಲರ ಹೃದಯದಲ್ಲಿ ಅವನು ಸ್ವಾತಂತ್ರ್ಯದ ಕಿಡಿ ಹಚ್ಚಿದ್ದಾನೆ. ಭಾರತೀಯ ಯುವಕರು ಅವನನ್ನು ಮುಂದಿನ ಪ್ರಧಾನಿ ಎಂಬಂತೆ ನೋಡುತ್ತಿದ್ದಾರೆ!
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವನು ಸ್ಪರ್ಧಿಸಿ ಗಾಂಧೀಜಿ ಅವರ ಅಭ್ಯರ್ಥಿಯನ್ನು ಸೋಲಿಸಿದ್ದಾನೆ! 1930ರ ಜನವರಿ 26ರಂದು ಕಾಂಗ್ರೆಸ್ ಪಕ್ಷವು ಅವನ ಪ್ರೇರಣೆಯಿಂದ ‘ಸಂಪೂರ್ಣ ಸ್ವರಾಜ್ ದಿನ’ವನ್ನು ಆಚರಣೆ ಮಾಡಿದೆ! ಆತನು ಭಾರೀ ಧೈರ್ಯಶಾಲಿ. ತಕಲಿ ನೂಲುವುದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿಗೆ ಪದೇಪದೆ ಅವನು ಸವಾಲು ಹಾಕುತ್ತಾನೆ! ಬಂದೂಕಿನ ಮೊನೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದಾನೆ! ಎಲ್ಲ ಕಡೆ ಅದನ್ನೇ ಹೇಳುತ್ತಾನೆ. ಅವನಿಗೆ ಶಾಂತಿ ಮಂತ್ರದ ಮೇಲೆ ನಂಬಿಕೆ ಇಲ್ಲ.
ನಮ್ಮ ವೈಸರಾಯ್ ಅವನನ್ನು 11 ಬಾರಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ! ಆದರೂ ಅವನು ಬುದ್ಧಿಯನ್ನೇ ಕಲಿಯದ ಮಹತ್ವಾಕಾಂಕ್ಷಿ!
ತನ್ನ ಕಲ್ಕತ್ತಾದ ಮನೆಯ ಗೃಹ ಬಂಧನದಿಂದ ಅವನು ನಮ್ಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ! ಜರ್ಮನಿ ಮತ್ತು ಇಟೆಲಿಗೆ ಹೋಗಿ ಹಿಟ್ಲರ್ ಮತ್ತು ಮುಸೊಲಿನಿಯ ಗೆಳೆತನ ಮಾಡಿ ಬಂದಿದ್ದಾನೆ. ಹಿಟ್ಲರ್ ಅವನ ಬಗ್ಗೆ ಭಾರೀ ಮೆಚ್ಚುಗೆ ಮಾತು ಹೇಳಿದನಂತೆ! ಮಹಾ ಗಟ್ಟಿತನ ಅವನದ್ದು.
ಸಬ್ ಮೆರೀನ್‌ನಲ್ಲಿ 90 ದಿನಗಳ ಕಾಲ ಪ್ರಯಾಣ ಮಾಡಿ ಜಪಾನ್ ತಲುಪಿದ್ದಾನೆ. ಅಲ್ಲಿ ಎರಡನೇ ಮಹಾಯುದ್ಧಕ್ಕೆ ಹೋಗಿದ್ದ ಬ್ರಿಟಿಷ್ ಇಂಡಿಯಾ ಸೈನ್ಯದ 45,000 ಸೈನಿಕರ ಜೊತೆಗೆ ಮಾತಾಡಿದ್ದಾನೆ! ಅದರಲ್ಲಿ 25,000 ಸೈನಿಕರನ್ನು ಜಪಾನ್ ಸರಕಾರವು ಭಾರತದ ನೆರವಿಗೆ ಕಳುಹಿಸಲು ಒಪ್ಪಿ ಆಗಿದೆ! ಎಂತಹ ಚಾಣಾಕ್ಷ ಅವನು!
ಜಪಾನ್ ಸರಕಾರವು ಅವನಿಗೆ ವೈಮಾನಿಕ ದಳ, ಮದ್ದು ಗುಂಡು ಎಲ್ಲವನ್ನೂ ಕೊಡಲು ಒಪ್ಪಿದೆ ಎನ್ನುವ ಸುದ್ದಿ ಬಂದಿದೆ. ಅದೇನೋ ‘ಆಜಾದ್ ಹಿಂದ್ ಫೌಜ್’ ಎಂಬ ಸೈನ್ಯವನ್ನು ಕಟ್ಟಿದ್ದಾನಂತೆ! ಸೈನಿಕರಿಗೆ ಆಧುನಿಕ ಶಸ್ತ್ರಗಳ ಬಗ್ಗೆ ತರಬೇತು ಕೊಡುತ್ತಿದ್ದಾನೆ ಎಂಬ ಸುದ್ದಿ ಬಂದಿದೆ.
‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದೆಲ್ಲ ಉರಿ ಚೆಂಡಿನ ಭಾಷಣ ಮಾಡುತ್ತಾನೆ. ಪ್ರತೀ ವಾಕ್ಯದ ಕೊನೆಗೆ ಜೈ ಹಿಂದ್ ಘೋಷಣೆ ಕೂಗುತ್ತಾನೆ! ಸಾವಿರ ಸಾವಿರ ಸೈನಿಕರು ಅವನನ್ನು ದೇವರ ಹಾಗೆ ನೋಡುತ್ತಾರೆ.
‘ಆಜಾದ್ ಹಿಂದ್ ಫೌಜ್’ ಭಾರತಕ್ಕೆ ಹೊರಟಿತು ಎಂದರೆ ನಮ್ಮ ಶತ್ರು ದೇಶಗಳೆಲ್ಲ ಅವನ ನೆರವಿಗೆ ನಿಲ್ಲುತ್ತವೆ! ಅದೇನೋ ‘ಚಲೋ ದಿಲ್ಲಿ’ ಎಂಬ ಘೋಷಣೆಯನ್ನು ತನ್ನ ಸೈನಿಕರಿಗೆ ಕೊಟ್ಟಿದ್ದಾನೆ. ಈ ಯುವಕ ಖಂಡಿತವಾಗಿ ನಮ್ಮ ನಿದ್ದೆ ಕೆಡಿಸಿದ್ದಾನೆ.
ನಮ್ಮದೇ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈಗ ಅವರು ನಮ್ಮ ವಿರುದ್ಧ ನಿಲ್ಲುತ್ತಾರೆ! ನಮ್ಮ ವಿರುದ್ಧ ದಂಗೆ ಏಳುತ್ತಾರೆ. ಅಲ್ಲಿಗೆ ನಾವು ಭಾರತದ ಮೇಲೆ ನಮ್ಮ ಬಿಗಿ ಹಿಡಿತವ ಕಳೆದುಕೊಳ್ಳುವುದು ಖಂಡಿತ! ಇದುವರೆಗೆ ನಾವು ಭಾರತದಲ್ಲಿ ಯಾರ ಬಗ್ಗೆ ಕೂಡ ಇಷ್ಟೊಂದು ಆತಂಕ ಪಟ್ಟಿರಲಿಲ್ಲ! ಇವನೊಬ್ಬ ಎಲ್ಲಿಂದ ಬಂದನೋ ಸೈತಾನ?
ಹೀಗೆಂದು ಚರ್ಚಿಲ್ ದೀರ್ಘ ಉಸಿರು ತೆಗೆದುಕೊಂಡು ಹಿಂದಕ್ಕೆ ಒರಗಿ ಕೂತರು! ಒಂದು ಗುಟುಕು ವಿಸ್ಕಿ ಹೀರಿ ಅಲ್ಲಿಯೇ ಕಣ್ಣು ಮುಚ್ಚಿದರು. ವಿಸ್ಕಿ ಅವರಿಗೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ ಆಯಿತು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅತುಲ ಪರಾಕ್ರಮಿ ಈ ಕ್ರಾಂತಿಯ ಕಿಡಿ ನೇತಾಜಿ ಸುಭಾಸ್ ಚಂದ್ರ ಬೋಸ್
ರೂಸ್‌ವಲ್ಟ್ ಚರ್ಚಿಲ್ ಮಾತು ಕೇಳುತ್ತಲೇ ಇದ್ದರು
ಅಮೆರಿಕಾದ ಆಗಿನ ಪ್ರಬಲ ಅಧ್ಯಕ್ಷ ರೂಸ್ ವೆಲ್ಟ್ ಮುದುಕ ಚರ್ಚಿಲ್‌ನ ಮಾತುಗಳನ್ನು ಆಲಿಸುತ್ತ ಕೂತಿದ್ದರು. ಅವರ ಕೈಯ್ಯಲ್ಲಿದ್ದ ಸಿಗಾರ್ ಇನ್ನೂ ಹೊಗೆ ಉಗುಳುತ್ತಿತ್ತು. ಅವರಿಗೆ ಕೇವಲ ಎರಡು ವರ್ಷಗಳ ಹಿಂದೆ ನಡೆದ ಪರ್ಲ್ ಹಾರ್ಬರ್ ದಾಳಿ, ಅದರಲ್ಲಿ ಅಮೆರಿಕಾಕ್ಕೆ ಆದ ಮುಖಭಂಗ ಎಲ್ಲವೂ ನೆನಪಿಗೆ ಬಂತು! ಅಲ್ಲಿಗೆ ಚರ್ಚಿಲ್ ಕಣ್ಣಲ್ಲಿ ಹೆಪ್ಪುಗಟ್ಟಿದ ಭೀತಿ ರೂಸ್‌ವೆಲ್ಟ್ ಕಣ್ಣುಗಳಿಗೆ ವರ್ಗಾವಣೆ ಆಯಿತು. ಆತ ಸಿಗಾರ್ ಸಿಟ್ಟಿನಿಂದ ನೆಲಕ್ಕೆ ಎಸೆದು ಬೂದಿ ಬೂಟಿನಿಂದ ಒರೆಸಿದರು.
ಹೇಗೆ ನೇತಾಜಿ ಸುಭಾಷ್ ಚಂದ್ರ ಬೋಸರು ಆಗಿನ ಬಲಿಷ್ಠ ರಾಷ್ಟ್ರಗಳಿಗೆ ಬಿಸಿತುಪ್ಪ ಆಗಿದ್ದರು ಎಂದು ನಿಮಗೆ ಇಷ್ಟು ಹೊತ್ತಿಗೆ ಅರ್ಥ ಆಗಿರಬಹುದು! ಬ್ರಿಟಿಷರು ನೇತಾಜಿ ಅವರಿಗೆ ಎಷ್ಟರ ಮಟ್ಟಿಗೆ ಹೆದರಿದ್ದರು ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು!
ಮುಂದೆ 1945ರ ಆಗಸ್ಟ್ 18ರಂದು ಥೈಪೆಯಲ್ಲಿ ವಿಮಾನ ಅಪಘಾತವಾಗಿ ನೇತಾಜಿ ಸುಭಾಷ್ ಕಣ್ಮರೆ ಆಗದೆ ಹೋಗಿದ್ದರೆ….? ಅದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದೇ?
ಒಮ್ಮೆ ಯೋಚನೆ ಮಾಡಿ. ಜೈ ಹಿಂದ್!
ಅಂಕಣ
ವಿಧಾನಸೌಧ ರೌಂಡ್ಸ್: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
ವಿಧಾನಸೌಧ ರೌಂಡ್ಸ್: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ ಎಂಬ ಚರ್ಚೆ ಶುರುವಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.
ರಾಜಕೀಯ ಮೈತ್ರಿ ಮದುವೆ ಫಿಕ್ಸ್!
ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.
ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು
ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ
ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್‌ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್‌ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.
ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಯಲಾಯ್ತು ಎಲೆಕ್ಷನ್ ಟಿಕೆಟ್ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ
ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್‌ರನ್ನು ಆಹ್ವಾನಿಸಿದ ಡಿಕೆಶಿ
ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್‌ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!
ಅಂಕಣ
Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ
Raja Marga Column: ನೀವು ಜ್ಯೂಲಿ ಸಿನಿಮಾವನ್ನು ನೋಡಿರದಿದ್ದರೆ ಯಾವತ್ತಾದರೂ ಫ್ರೀ ಮಾಡಿಕೊಂಡು ನೋಡಿ. ಇದು ಕೇವಲ ಸಿನಿಮಾ ಅಲ್ಲ. ಆವತ್ತಿನ ಕಾಲದಲ್ಲಿ ಬಾಲಿವುಡ್‌ನ ಅಹಂಕಾರವನ್ನು ಮುರಿದ ಮೊದಲ ದಕ್ಷಿಣ ಭಾರತೀಯ ಚಿತ್ರ. ಸಿದ್ಧ ಸೂತ್ರಗಳನ್ನು ಮೀರಿದ ಸಿನಿಮಾ.
1975ರ ವರ್ಷ ಹಲವು ಕಾರಣಕ್ಕೆ ನಮ್ಮ ನೆನಪಲ್ಲಿ ಗಟ್ಟಿ ಹೆಜ್ಜೆಗುರುತು ಮೂಡಿಸಿತ್ತು. ದೇಶದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತು ಪರಿಸ್ಥಿತಿ ಘೋಷಣೆ (Emergency 1975) ಮಾಡಿದ್ದರು. ಅದೇ ವರ್ಷ ಶತಮಾನದ ಸಿನಿಮಾಗಳಾದ ಶೋಲೆ (Sholay Movie), ದೀವಾರ್ (Deewar Movie), ಧರ್ಮಾತ್ಮಾ (Dharmatma Movie), ಮಿಲಿ (Mili Movie), ಆಂಧಿ (Aandhi Movie) ಮೊದಲಾದವುಗಳು ಬಿಡುಗಡೆ ಆಗಿದ್ದವು. ಶೋಲೆ ಸಿನಿಮಾದ ‘ಮೇರೆ ಪಾಸ್ ಮಾ ಹೈ’ (Mere paas Maa hai) ಸಂಭಾಷಣೆ ಪ್ರತೀ ಒಬ್ಬರ ಬಾಯಲ್ಲಿ ಇತ್ತು. ಅದೇ ವರ್ಷ ಬಿಡುಗಡೆ ಆದ ಒಂದು ಹಿಂದಿ ಸಿನಿಮಾ ದಕ್ಷಿಣ ಭಾರತದ ಪ್ರತಿಭೆಗಳಿಂದ ಕೂಡಿದ್ದು ಆ ಕಾಲಕ್ಕೆ ಭಾರಿ ದೊಡ್ಡ ಕ್ರಾಂತಿ ಮಾಡಿತ್ತು (Raja Marga Column). ಒಂದು ರೀತಿಯಲ್ಲಿ ಉತ್ತರ ಭಾರತದ ಪಾರಮ್ಯಕ್ಕೆ (North Indian Dominance) ಸವಾಲು ಎಸೆದಿತ್ತು. ಆ ಸಿನಿಮಾವೇ ಜ್ಯೂಲಿ (Julie Cinema).
ಜ್ಯೂಲಿಯನ್ನು ಶತಮಾನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂದು ಕರೆಯಲಾಗಿತ್ತು!
1975ರ ಏಪ್ರಿಲ್ 18ರಂದು ಬಾಲಿವುಡನಲ್ಲಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಉಂಟುಮಾಡಿದ ಧಮಾಕಾ ಅದು ಅದ್ಭುತವೇ ಆಗಿತ್ತು. ಆ ಸಿನಿಮಾದ ನಾಯಕ, ನಾಯಕಿ, ಕಥೆಯನ್ನು ಬರೆದವರು, ನಿರ್ದೇಶಕರು, ನಿರ್ಮಾಪಕರು ಮತ್ತು ಹೆಚ್ಚಿನ ಸಹನಟರು ದಕ್ಷಿಣ ಭಾರತದವರೇ ಆಗಿದ್ದರು. ತಾವೇ ಶ್ರೇಷ್ಠ ಎಂಬ ಉತ್ತರ ಭಾರತದ ಧಿಮಾಕಿಗೆ ಉತ್ತರ ಕೊಟ್ಟ ಹಾಗೆ ಈ ಚಿತ್ರ ಬಂದಿತ್ತು. ಆ ಕಾಲಕ್ಕೆ ದಿಟ್ಟ ಎನಿಸುವ ಕಥೆ, ಸರಳವಾದ ನಿರೂಪಣೆ, ಲಕ್ಷ್ಮೀ (Julie Lakshmi) ಅವರ ಬೋಲ್ಡ್ ಆದ ಅಭಿನಯ, ಇವತ್ತಿಗೂ ನೆನಪಲ್ಲಿ ಉಳಿದಿರುವ ಪದ್ಯಗಳು ಆ ಸಿನಿಮಾವನ್ನು ಗೆಲ್ಲಿಸಿದವು.
ಚಟ್ಟಕ್ಕಾರಿ ಮಲಯಾಳಂ ಸಿನಿಮಾದ ರಿಮೇಕ್ ಇದು
ಮಲಯಾಳಂ ಸಾಹಿತಿ ಪರಮೇಶ್ವರ ಮೆನನ್ ಬರೆದ ಕಾದಂಬರಿ ಚಟ್ಟಕ್ಕಾರಿ (Chattakkari Movie). ಅದನ್ನು ಸಿನಿಮಾಕ್ಕೆ ಅಳವಡಿಸಿ ಮಲಯಾಳಂನಲ್ಲಿ ನಿರ್ದೇಶನ ಮಾಡಿದವರು ಕೆ.ಎಸ್ ಸೇತುಮಾಧವನ್ (KS Sethumadhavan). ಅದು ಹಿಟ್ ಆದ ನಂತರ ಅದೇ ಸಿನಿಮಾವನ್ನು ಜ್ಯೂಲಿ ಎಂಬ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಿದವರು ಕೂಡ ಅದೇ ಸೇತುಮಾಧವನ್. ಚಿತ್ರಕತೆ ಬರೆದವರು ಅಲ್ಲೂರಿ ಚಕ್ರಪಾಣಿ ಅವರು. ಚಟ್ಟಕ್ಕಾರಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ಹಿಂದೀ ಸಿನಿಮಾದಲ್ಲಿಯು ಮಿಂಚಿದರು. ಅದು ಆಕೆಯ ಮೊದಲ ಹಿಂದಿ ಸಿನಿಮಾ (Lakshmis Firs Hindi Movie) ಆಗಿತ್ತು.
ಸಿನೆಮಾ ಸೂಪರ್ ಹಿಟ್ ಆಗಲು ಕಾರಣ ಏನು?
ಲಕ್ಷ್ಮಿ ಅವರ ಮುಗ್ಧ ಮತ್ತು ಸ್ನಿಗ್ಧ ಸೌಂದರ್ಯವೇ ಸಿನಿಮಾದ ಟ್ರಂಪ್ ಕಾರ್ಡ್. ಅವರಿಗೆ ಆಗ 23 ವರ್ಷ. ಆಗಲೇ ಅವರಿಗೆ ಮದುವೆ ಆಗಿ ಮೂರು ವರ್ಷದ ಮಗಳು ಐಶ್ವರ್ಯ ಇದ್ದಳು. ಆದರೆ ಆ ಸಿನಿಮಾದಲ್ಲಿ ಲಕ್ಷ್ಮಿ ತೋರಿದ ಗ್ಲಾಮರ್ ಲುಕ್, ಭಾವ ತೀವ್ರತೆಯ ಅಭಿನಯ ವೀಕ್ಷಕರ ಮನಸಿನಲ್ಲಿ ಭಾರೀ ಇಂಪ್ಯಾಕ್ಟ್ ಮಾಡಿದ್ದವು.
ಜೂಲಿ ಸಿನಿಮಾ ಆ ಕಾಲದ ಮಡಿವಂತಿಕೆಯನ್ನು ಧಿಕ್ಕರಿಸಿ ನಿಂತಿತ್ತು!
ಒಂದು ರೀತಿಯ ಮಡಿವಂತಿಕೆಯಲ್ಲಿ ಮುಳುಗಿದ್ದ ಸಿನಿಮಾರಂಗದಲ್ಲಿ ಲಕ್ಷ್ಮಿ ಅವರ ಮಾಡರ್ನ್ ಲುಕ್, ಬೋಲ್ಡ್ ಆದ ಅಭಿನಯ ಹುಚ್ಚು ಹಿಡಿಸಿದ್ದವು. ಮುಂದೆ ಲಕ್ಷ್ಮಿ ಅವರು ‘ಜ್ಯೂಲಿ ಲಕ್ಷ್ಮಿ’ ಎಂದೇ ತನ್ನ ಅಭಿಮಾನಿಗಳಿಂದ ಕರೆಯಲ್ಪಟ್ಟರು.
ಉಕ್ಕಿ ಹರಿಯುವ ಅಮೇಜಾನ್ ಪ್ರೀತಿ
ಒಂದು ಆಂಗ್ಲೋ ಇಂಡಿಯನ್ ಕುಟುಂಬ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದ ನಡುವೆ ಹುಟ್ಟುವ ಅಂತರ್ಜಾತೀಯ ಪ್ರೀತಿ, ಅಮೇಜಾನ್ ನದಿಯ ಹಾಗೆ ಎಗ್ಗಿಲ್ಲದೆ ಹರಿಯುವ ಪ್ರೇಮ, ನಂಬಿದ ಹುಡುಗನಿಗೆ ಮದುವೆಯ ಮೊದಲೇ ಸಮರ್ಪಣೆ ಆಗಿ ಗರ್ಭ ಧರಿಸುವ ಹುಡುಗಿಯ ಮುಗ್ಧತೆ, ಆ ಮಗುವನ್ನು ಗರ್ಭದಲ್ಲಿ ಸಾಯಿಸದೇ ಹೆರುವ ಸಂಕಲ್ಪ, ಮುಂದೆ ಅನಾಥಾಶ್ರಮದಲ್ಲಿ ಆ ಮಗುವನ್ನು ಬಿಟ್ಟು ಬರುವ ಸಂದಿಗ್ಧತೆ ಎಲ್ಲವನ್ನೂ ಲಕ್ಷ್ಮಿ ತುಂಬಾ ಚೆನ್ನಾಗಿ ತೆರೆದು ತೋರಿದ್ದರು.
ಒಂದು ಕಡೆ ತಾಯ್ತನದ ತುಡಿತವನ್ನು ಮೆಟ್ಟಿ ನಿಲ್ಲಲು ಆಗದೆ ಆಕೆ ಪಡುವ ವೇದನೆ, ಮತ್ತೊಂದು ಕಡೆ ಸಮಾಜವನ್ನು ಎದುರಿಸಲು ಆಗದೆ ಆಕೆ ಪಡುವ ಆತಂಕಗಳು, ಕೊನೆಯಲ್ಲಿ ಮನೆಯವರ ಬೆಂಬಲ ಪಡೆದು ಪ್ರೀತಿಯನ್ನು ಗೆಲ್ಲಿಸಲು ಆಕೆ ಮಾಡುವ ಹೋರಾಟ….ಎಲ್ಲವೂ ಆ ಸಿನೆಮಾದಲ್ಲಿ ಅದ್ಭುತವಾಗಿ ಡಿಪಿಕ್ಟ್ ಆಗಿದ್ದವು. ಆ ಸಿನಿಮಾದ ನಾಯಕನಾಗಿ ನಟಿಸಿದ ವಿಕ್ರಂ ಮಕಂದಾರ್ ಮೂಲತಃ ಹುಬ್ಬಳ್ಳಿಯವರು.
ಮುಂದೆ ನಿಜ ಜೀವನದಲ್ಲಿಯೂ ಲಕ್ಷ್ಮಿ ಅವರನ್ನು ಎರಡನೇ ಮದುವೆ ಆಗುತ್ತಾರೆ. ಲಕ್ಷ್ಮಿಯ ತಂಗಿ ಆಗಿ ನಟಿಸಿದ ಶ್ರೀದೇವಿ ಮುಂದೆ ಭಾರತದ ಸೂಪರ್ ಸ್ಟಾರ್ ಆದರು. ಆ ಸಿನಿಮಾ ಆಗುವಾಗ ಶ್ರೀದೇವಿಗೆ ಕೇವಲ ಹನ್ನೊಂದು ವರ್ಷ ಆಗಿತ್ತು.
ಜ್ಯೂಲಿ ಸಿನಿಮಾದ ಹೈಲೈಟ್ ಅದರ ಸಂಗೀತ
ಈಗಲೂ ಚಿರಂಜೀವಿ ಆಗಿರುವ ಈ ಸಿನಿಮಾದ ‘My heart is beeting’ ಹಾಡು ಆಗಿನ ಯುವಜನತೆಯ ಹಾರ್ಟ್ ಥ್ರೋಬ್ ಆಗಿತ್ತು. ಭೂಲ್ ಗಯಾ ಸಬ್ ಕುಚ್, ದಿಲ್ ಕ್ಯಾ ಕರೇ ಜಬ್ ಕಿಸೀಸೆ ಈ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈ ಸಿನಿಮಾಕ್ಕೆ ಸಂಗೀತ ನೀಡಿದವರು ರಾಜೇಶ್ ರೋಷನ್. ಆಗ ಅವರಿಗೆ ಕೇವಲ 19 ವರ್ಷ ಆಗಿತ್ತು! ಆನಂದ್ ಭಕ್ಷಿ ಬರೆದ ಅಷ್ಟೂ ಹಾಡುಗಳನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದರು.
ಲಕ್ಷ್ಮಿ ಆ ಸಿನಿಮಾದ ಮೂಲಕ ಕೀರ್ತಿಯ ಶಿಖರವನ್ನು ಏರಿದರು. ಅವರು ಹಿಂದೀ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆ ಎಂಬ ಕೀರ್ತಿ ಪಡೆದರು. ಆ ಎಲ್ಲ ಭಾಷೆಗಳಲ್ಲಿಯೂ ಆಕೆ ತನ್ನ ಸಂಭಾಷಣೆಯನ್ನು ತಾನೇ ಡಬ್ ಮಾಡಿದ್ದು ವಿಶೇಷ. ಅದೇ ರೀತಿ ಐದೂ ಭಾಷೆಗಳಲ್ಲಿಯೂ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ನಟಿ ಎಂದರೆ ಅದು ಲಕ್ಷ್ಮಿ ಮಾತ್ರ! ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ನಟಿ ಅದು ಲಕ್ಷ್ಮಿ.
ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿಗಳ ರೇಸಲ್ಲಿ ಶೋಲೆ ಮತ್ತು ಜೂಲಿ ಸಿನಿಮಾಗಳು ಭಾರೀ ಸ್ಪರ್ಧೆ ಮಾಡಿದವು. ಶೋಲೆ ಸಿನಿಮಾಕ್ಕೆ ಒಂದೇ ಪ್ರಶಸ್ತಿ ಬಂದರೆ ಜ್ಯೂಲಿಗೆ ಮೂರು ಪ್ರಶಸ್ತಿಗಳು ಬಂದು ಬಾಲಿವುಡ್ ಅಹಂ ಮುರಿದಿತ್ತು. ಲಕ್ಷ್ಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯು ಕೂಡ ದೊರಕಿತ್ತು.
ಇದನ್ನೂ ಓದಿ: Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
ನಾನು ಜನರ ಕಣ್ಣಲ್ಲಿ ಜ್ಯೂಲಿ ಆಗಿಯೇ ಇರಲು ಬಯಸುತ್ತೇನೆ!
2012ರಲ್ಲಿ ಸೇತು ಮಾಧವನ್ ಅವರ ಮಗ ಸಂತೋಷ್ ಅವರು ಜೂಲಿ ಸಿನಿಮಾವನ್ನು ಮರು ಸೃಷ್ಟಿ ಮಾಡಲು ಹೊರಟರು. ಆಗ ಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಜ್ಯೂಲಿಯ ತಾಯಿಯ ಪಾತ್ರವನ್ನು ಅಭಿನಯಿಸಲು ಕೇಳಿಕೊಂಡರು. ಆಗ ಲಕ್ಷ್ಮಿ ಅದನ್ನು ನಿರಾಕರಿಸಿ ಹೇಳಿದ ಮಾತು – ನಾನು ಜನರ ಕಣ್ಣಲ್ಲಿ ಜ್ಯೂಲಿಯಾಗಿಯೇ ಇರಲು ಬಯಸುತ್ತೇನೆ!
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
ಅಂಕಣ
ಸೈಬರ್ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!
ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಹಣದ ಬದಲಿಗೆ ಈಗ ಯುಪಿಐ (UPI payment). ಮುಂದೆ ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ (Cryptocurrency) ಬರಲೂಬಹುದು. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.
ಮುಂದಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿನಾ ಅಥವಾ CBDCನಾ?
ಸೈಬರ್ ಸೇಫ್ಟಿ ಅಂಕಣದಲ್ಲಿ ಮನಿ ಮಾತು ಯಾಕೆ ಅಂತ ಅಚ್ಚರಿಯೇ? 1992ರಲ್ಲಿ ಬಂದ ಶಿವರಾಜ್ ಕುಮಾರ್ ನಟಿಸಿದ ಪುರುಷೋತ್ತಮ ಚಿತ್ರದ ಕಾಂಚಾಣ ಕಾಂಚಾಣ ಹಾಡು ಕೇಳಿದ್ದೀರಾ? ಹಂಸಲೇಖರ ಸಾಹಿತ್ಯ ಜಗದಲ್ಲಿನ ಹಣದ ಪ್ರಾಮುಖ್ಯತೆಯನ್ನು ಬಹಳ ಸೊಗಸಾಗಿ ತಿಳಿಸುತ್ತದೆ. “ಜನವಿರುವುದು ಜಗದೊಳಗೆ, ಜಗವಿರುವುದು ಹಣದೊಳಗೆ, ಜನ ಜಗದೊಳಗೆ, ಜಗ ಹಣದೊಳಗೆ, ಸುಖವಿರುವುದು ಇದರೊಳಗೆ” ಅದರಲ್ಲಿ ಬರುವ ಝಣ್ ಝಣ್ ಹಣ, ಟಂಣ್ ಟಂಣ್ ಹಣ ಇನ್ನು ಕೆಲವೇ ವರ್ಷಗಳಲ್ಲಿ ಸದ್ದು ಮಾಡುವುದನ್ನು ನಿಲ್ಲಿಸಲಿದೆ.
ಸೈಬರ್ ಜಗತ್ತಿನಲ್ಲೂ ದುಡ್ಡೇ ದೊಡ್ಡಪ್ಪ. ಯಾವುದೇ ಹ್ಯಾಕಿಂಗ್ ಇರಲಿ, ರಾನ್‌ಸಮ್‌ವೇರ್ ಅ್ಯಟಾಕ್ ಆಗಲಿ, ಡಾಟಾ ಕಳ್ಳತನವಾಗಿರಲಿ, ಸೋಷಿಯಲ್ ಇಂಜಿನಿಯರಿಂಗ್ ತಂತ್ರ ಬಳಸಿದ ದಾಳಿ ಇರಬಹುದು, ಎಲ್ಲದರ ಮುಖ್ಯ ಉದ್ದೇಶವೇ ಹಣ. ಅದು ಗರಿಗರಿ ನೋಟಿರಲಿ ಅಥವಾ ಕ್ರಿಪ್ಟೋಕರೆನ್ಸಿ ಇರಲಿ. ಅಂತರ್ಜಾಲದ ಅಂತರಂಗದ ಡೀಪ್ ಡಾರ್ಕ್ ವೆಬ್‌ನಲ್ಲಿ ಎಲ್ಲವೂ ಮಾನ್ಯ.
ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಕಡಲೆಕಾಯಿ ಮಾರುವವರಿಂದ ಕಾಂಟಿನೆಂಟಲ್ ಊಟ ಬಡಿಸುವ ಹೋಟೆಲ್‌ವರೆಗೆ ನಗದಿಗಿಂತ ‘ಯುಪಿಐ’ ಪಾವತಿಯೇ ಸ್ವಾಗತಾರ್ಹ. ಪ್ರಪಂಚದಾದ್ಯಂತ ಚಲಾವಣೆಯಲ್ಲಿರುವ ಭೌತಿಕ (physical) ಹಣ ಕೇವಲ ಶೇಕಡ 8 ಮಾತ್ರ (8%). ಅಂದರೆ ಡಿಜಿಟಲ್ ರೂಪದಲ್ಲಿ ಚಲಾವಣೆ ಆಗ್ತಿರುವ ಹಣ ಶೇಕಡ 92. ಭಾರತದಲ್ಲೂ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ 2023 ಮಾರ್ಚ್ ಅಂತ್ಯಕ್ಕೆ ಶೇಕಡ 10.8ಕ್ಕೆ ತಲುಪಿದೆ. 2017ರಲ್ಲಿ ಇದರ ಪ್ರಮಾಣ ಶೇಕಡ 50% ಇತ್ತು.
ಅದರ ಜನಪ್ರಿಯತೆ ಮತ್ತು ಬಳಕೆಯ ಹೊರತಾಗಿಯೂ, ಹಣವು ಸಾಮಾಜಿಕವಾಗಿ ಸಾಕಷ್ಟು ಸಮಸ್ಯೆಗಳಿಗೂ ಕಾರಣವಾಗಿದೆ. ಹಣದ ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಾಗಿನಿಂದ, ಇಬ್ಬರು (ಅಥವಾ ಹೆಚ್ಚು) ಅಪರಿಚಿತರು ಪರಿಚಯ ಮಾಡಿಕೊಳ್ಳದೆ ಅಥವಾ ಕೌಂಟರ್-ಪಾರ್ಟಿ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಹಿವಾಟು ನಡೆಸಲು, ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ನೀವು ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್ ಅಂತ ಕೇಳಿರಬಹುದು. ಕ್ರಿಪ್ಟೋಕರೆನ್ಸಿ ಬಹುಶಃ ಹಣಕಾಸು ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅತಿದೊಡ್ಡ ಹೊಸತನ ತಂದ ಪರಿಕಲ್ಪನೆಯಾಗಿದೆ. ತುಲನಾತ್ಮಕವಾಗಿ ಬಹಳ ಕಡಿಮೆ ಅವಧಿಯಲ್ಲಿ, ಕ್ರಿಪ್ಟೋಕರೆನ್ಸಿಗಳು ವಿಶ್ವಾದ್ಯಂತ ಹಣಕಾಸು ಮೂಲಸೌಕರ್ಯಗಳನ್ನು ಪರಿವರ್ತಿಸುವ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.
2008ರಲ್ಲಿ ಮೊದಲ ಬಾರಿಗೆ ಬಿಟ್‌ಕಾಯಿನ್ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಿದಾಗಿನಿಂದ, ಕ್ರಿಪ್ಟೋಕರೆನ್ಸಿಗಳು ಬಹಳಷ್ಟು ಅಭಿವೃದ್ಧಿಯನ್ನು ಹೊಂದಿದೆ. ಆರಂಭದಲ್ಲಿ, ಕ್ರಿಪ್ಟೋಕರೆನ್ಸಿಗಳು ಜನಪ್ರಿಯವಾಗುವ ಮೊದಲು ಎಲ್ಲಾ ವಲಯಗಳಿಂದ ಅನಿಶ್ಚಿತತೆ ಮತ್ತು ಸಂದೇಹವನ್ನು ಎದುರಿಸಿದವು. ಈಗ, ಭ್ರಮನಿರಸನದ ಹಂತವನ್ನು ದಾಟಿ ಉಪಯುಕ್ತತೆಯ ಉತ್ತಮ ಪುರಾವೆಯೊಂದಿಗೆ ಪ್ರಬುದ್ಧವಾಗುತ್ತಿವೆ.
ಕ್ರಿಪ್ಟೋಕರೆನ್ಸಿ ಮೂಲತಃ ಡಿಜಿಟಲ್ ಕರೆನ್ಸಿಯಾಗಿದ್ದು ಅದನ್ನು ನೀವು ಆನ್‌ಲೈನ್‌ನಲ್ಲಿ ಮೌಲ್ಯವನ್ನು ವಿನಿಮಯ ಮಾಡಿಕೊಳ್ಳಲು ಬಳಸಬಹುದು. ಕ್ರಿಪ್ಟೋಕರೆನ್ಸಿಯ ಪ್ರಾಥಮಿಕ ಅಡಿಪಾಯ ಬ್ಲಾಕ್ಚೈನ್ ತಂತ್ರಜ್ಞಾನವಾಗಿದೆ. ಇದು ಕ್ರಿಪ್ಟೋಕರೆನ್ಸಿಗಳು ಇಂದು ಸಾಕಷ್ಟು ಜನಪ್ರಿಯವಾಗಿರುವ ವಿಕೇಂದ್ರೀಕರಣವನ್ನು ಒದಗಿಸುತ್ತದೆ. ವಿಕೇಂದ್ರೀಕರಣವು ಕ್ರಿಪ್ಟೋಕರೆನ್ಸಿಗಳನ್ನು ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣದಿಂದ ಮುಕ್ತಗೊಳಿಸುತ್ತದೆ. ಪರಿಣಾಮವಾಗಿ, ಕ್ರಿಪ್ಟೋಕರೆನ್ಸಿ ಹೊಂದಿರುವವರು ತಮ್ಮ ಹಣದ ಮೇಲೆ ನಿಯಂತ್ರಣವನ್ನು ಸುಧಾರಿಸಿದ್ದಾರೆ ಮತ್ತು ಅದನ್ನು ಅವರು ಬಯಸಿದಂತೆ ಬಳಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಮೊಟ್ಟಮೊದಲ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಾನಿಕ್ ಪೀರ್-ಟು-ಪೀರ್ ನಗದು ವ್ಯವಸ್ಥೆಯಾಗಿ ಹೊರಹೊಮ್ಮಿತು. ಬಿಟ್‌ಕಾಯಿನ್‌ನ ಅನಾಮಧೇಯ ಸಂಸ್ಥಾಪಕ, ಸತೋಶಿ ನಕಾಮೊಟೊ ಅವರು 2008ರಲ್ಲಿ ಬಿಟ್‌ಕಾಯಿನ್‌ನಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು ಮತ್ತು ನಂತರ 2009ರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸಿದರು.
ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಹೆಚ್ಚಾಗಿ ಬ್ಲಾಕ್‌ಚೈನ್ ಸಂಬಂಧವನ್ನು ಅವಲಂಬಿಸಿರುತ್ತದೆ. ಬ್ಲಾಕ್‌ಚೈನ್ ಕ್ರಿಪ್ಟೋಕರೆನ್ಸಿಗಳಲ್ಲಿ ವಿಶ್ವಾಸಾರ್ಹವಲ್ಲದ (trustless), ಸುರಕ್ಷಿತ, ವಿಕೇಂದ್ರೀಕೃತ ಮತ್ತು ಕ್ರಿಪ್ಟೋಗ್ರಾಫಿಕ್ ಗುಣಲಕ್ಷಣಗಳನ್ನು ನೀಡುತ್ತದೆ. ಇದು ಎಲ್ಲಾ ವಹಿವಾಟುಗಳ ದಾಖಲೆಯೊಂದಿಗೆ ಬದಲಾಗದ ವಿತರಣಾ ಲೆಡ್ಜರ್ ಅನ್ನು ನೀಡುತ್ತದೆ, ಇದರಿಂದಾಗಿ ಎಲ್ಲಾ ವಹಿವಾಟುಗಳ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುತ್ತದೆ.
2022ರಲ್ಲಿ, ಕ್ರಿಪ್ಟೋಕರೆನ್ಸಿಗಳ ಸಂಖ್ಯೆಯು 9,000 ಕ್ಕಿಂತ ಹೆಚ್ಚಿದೆ, ಪ್ರತಿದಿನ ಅನೇಕ ಹೊಸ ಕ್ರಿಪ್ಟೋಕರೆನ್ಸಿಗಳು ಮತ್ತು ಸ್ವತ್ತುಗಳು ಹೊರಹೊಮ್ಮುತ್ತಿವೆ. ಮಾರ್ಚ್ 2023ರ ಹೊತ್ತಿಗೆ, 22,904 ಕ್ರಿಪ್ಟೋಕರೆನ್ಸಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಎಲ್ಲಾ ಕ್ರಿಪ್ಟೋಕರೆನ್ಸಿಗಳು ಸಕ್ರಿಯ ಅಥವಾ ಮೌಲ್ಯಯುತವಾಗಿಲ್ಲ. ಅನೇಕ “ಡೆಡ್” ಕ್ರಿಪ್ಟೋಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸುಮಾರು 8,832 ಸಕ್ರಿಯ ಕ್ರಿಪ್ಟೋಕರೆನ್ಸಿಗಳು ಉಳಿಯುತ್ತವೆ. ಪ್ರಪಂಚದಾದ್ಯಂತ 300 ಮಿಲಿಯನ್ (30 ಕೋಟಿ) ಕ್ರಿಪ್ಟೋಕರೆನ್ಸಿ ಬಳಕೆದಾರರಿದ್ದಾರೆ.
ಕ್ರಿಪ್ಟೋಕರೆನ್ಸಿಯ ಬೆಲೆಯು ಆಗಾಗ್ಗೆ ಬದಲಾಗುತ್ತದೆ ಮತ್ತು ಹೆಚ್ಚು ಅನಿಶ್ಚಿತವಾಗಿರುತ್ತದೆ (volatile). ಬಿಟ್‌ಕಾಯಿನ್ (BTC), ಈಥೀರಿಯಮ್ ನೆಟ್‌ವರ್ಕ್ ಆಧಾರಿತ ಈಥರ್ (ETC), ಡಾಡ್ಚ್‌ಕಾಯಿನ್ (DODGE), ಲೈಟ್‌ಕಾಯಿನ್(LTC) ಮತ್ತು ರಿಪ್ಪಲ್ (XRP) ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರನ್ಸಿಗಳಾಗಿವೆ. 20 ಸೆಪ್ಟೆಂಬರ್ 2023ರಂದು ಒಂದು ಬಿಟ್‌ಕಾಯಿನ್ ಬೆಲೆ 22,48,501 ರೂಪಾಯಿ ಮತ್ತು ಒಂದು ಈಥರ್ ಬೆಲೆ 1,35,085 ರೂಪಾಯಿ ಇದೆ. ಮುಂದಿನ ವಾರಗಳಲ್ಲಿ ಕ್ರಿಪ್ಟೋಕರನ್ಸಿಯನ್ನು ಡಿ-ಕ್ರಿಪ್ಟ್ ಮಾಡಿ ಸೈಬರ್ ಜಗತ್ತಿನಲ್ಲಿ ಇದರ ಬಳಕೆಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡ್ತೇನೆ.
ಕ್ರಿಪ್ಟೋಕರೆನ್ಸಿಗಳಿಂದ ಹೆಚ್ಚುತ್ತಿರುವ ಬೆದರಿಕೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ವೇಷಿಸಲು ಬಹುಶಃ ಕೇಂದ್ರೀಯ ಬ್ಯಾಂಕ್‌ಗಳನ್ನು ಪ್ರಚೋದಿಸಿದೆ. ವಿಶ್ವಾದ್ಯಂತ ಬಹುತೇಕ ದೇಶಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ (BIS) 2022 ರ ಸಮೀಕ್ಷೆಯ ಪ್ರಕಾರ, 93 ಪ್ರತಿಶತ ಕೇಂದ್ರೀಯ ಬ್ಯಾಂಕ್‌ಗಳು CBDC ಗಳನ್ನು ಅನ್ವೇಷಿಸುತ್ತಿವೆ ಮತ್ತು 58 ಪ್ರತಿಶತದಷ್ಟು ಅವರು ಸಣ್ಣ ಅಥವಾ ಮಧ್ಯಮ ಅವಧಿಯಲ್ಲಿ ಚಿಲ್ಲರೆ (retail) CBDC ಯನ್ನು ನೀಡುವ ಸಾಧ್ಯತೆಯಿದೆ. ವಾಸ್ತವವಾಗಿ, ಭಾರತದಲ್ಲಿ CBDC ಇ-ರೂಪಾಯಿ ಅಥವಾ ಇ-ರುಪಿ ಎಂದು ಕರೆಯಲ್ಪಡುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್‌ನಲ್ಲಿ CBDC ಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ಉದ್ದೇಶಕ್ಕಾಗಿ, ಹಣಕಾಸು ಮಸೂದೆ 2022ರ ಅಂಗೀಕಾರದೊಂದಿಗೆ RBI ಕಾಯಿದೆ 1934 ರ ಸಂಬಂಧಿತ ವಿಭಾಗಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ.
2022ರಲ್ಲಿ, RBI ಡಿಜಿಟಲ್ ರೂಪಾಯಿ, ಭಾರತದ ಸ್ವಂತ CBDC ಮತ್ತು ಸಾರ್ವಭೌಮ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವನ್ನು ಅನಾವರಣಗೊಳಿಸಿತು. ಆ ಸಮಯದಲ್ಲಿ, ಕೇಂದ್ರೀಯ ಬ್ಯಾಂಕ್ ಇ-ರುಪಿಯನ್ನು ಎರಡು ಆವೃತ್ತಿಗಳಲ್ಲಿ ನೀಡಲು ಪ್ರಸ್ತಾಪಿಸಿತು- CBDC-ಸಗಟು (CBDC-W) ಮತ್ತು CBDC-ರಿಟೇಲ್ (CBDC-R). CBDC-W ಆಯ್ದ ಹಣಕಾಸು ಸಂಸ್ಥೆಗಳಿಗೆ ನಿರ್ಬಂಧಿತ ಪ್ರವೇಶಕ್ಕಾಗಿ, CBDC-R ಅನ್ನು ಖಾಸಗಿ ವಲಯ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವಹಿವಾಟುಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಬಳಸಬಹುದು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು
ಸಗಟು CBDCಯ ಪ್ರಾಯೋಗಿಕ ಯೋಜನೆಗಾಗಿ ರಿಸರ್ವ್ ಬ್ಯಾಂಕ್ ಒಂಬತ್ತು ಬ್ಯಾಂಕುಗಳನ್ನು ಆರಿಸಿಕೊಂಡಿದೆ. ಈ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, YES ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು HSBC ಸೇರಿವೆ. ರಿಟೇಲ್ ಇ-ರುಪಿಯ ಪ್ರಯೋಗ ನಾಲ್ಕು ಬ್ಯಾಂಕ್ ಮತ್ತು ಕೆಲವು ನಗರಗಳಲ್ಲಿ ಪ್ರಾರಂಭವಾಗಿ ಇತ್ತೀಚಿನ ವರದಿಯ ಪ್ರಕಾರ ಹದಿಮೂರು ಬ್ಯಾಂಕ್‌ಗಳ ಬಳಕೆದಾರರು ಈ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಅನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಬಹುದಾಗಿದೆ. ಚಿಲ್ಲರೆ ಇ-ರೂಪಾಯಿಯನ್ನು 50 ಪೈಸೆ, 1, 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಗಳಲ್ಲಿ ಲಭ್ಯವಿರುತ್ತದೆ. ಆದರೆ ಸಗಟು ಇ-ರೂಪಾಯಿಯು ಕೇಂದ್ರದ ಪ್ರಕಾರ ಯಾವುದೇ ಮುಖಬೆಲೆಯನ್ನು ಹೊಂದಿರುವುದಿಲ್ಲ.
ತಂತ್ರಜ್ಞಾನದ ಬಳಕೆ ನಮ್ಮ ಜೀವನವನ್ನು, ವ್ಯಾಪಾರವಹಿವಾಟುಗಳನ್ನು ಸುಗಮಗೊಳಿಸುವುದರೊಂದಿಗೆ ಹೊಸ ಬಗೆಯ ಅಪಾಯಗಳಿಗೂ ದಾರಿ ಮಾಡುತ್ತವೆ. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು
-
ಕ್ರಿಕೆಟ್21 hours ago
IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ5 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ20 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ19 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಕರ್ನಾಟಕ22 hours ago
Janata Darshan: ನಾಳೆ ರಾಜ್ಯಾದ್ಯಂತ ಏಕ ಕಾಲಕ್ಕೆ ʼಜನತಾ ದರ್ಶನʼ
-
ಕ್ರಿಕೆಟ್23 hours ago
IND vs AUS: ಅಯ್ಯರ್ ಬ್ಯಾಟಿಂಗ್ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ
-
ಆರೋಗ್ಯ23 hours ago
Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?