ಕ್ರಿಕೆಟ್
IPL 2023: ಈ ಬಾರಿ ಆರೆಂಜ್,ಪರ್ಪಲ್ ಕ್ಯಾಪ್ ಯಾರಿಗೆ ಸಿಗಲಿದೆ; ರೇಸ್ನಲ್ಲಿರುವ ಪ್ರಮುಖ ಆಟಗಾರರು ಯಾರು? ಇಲ್ಲಿದೆ ಮಾಹಿತಿ
ಶುಭಮನ್ ಗಿಲ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ರನ್ ಪೇರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯುವ ಫೈನಲ್ ಪಂದ್ಯದ ಮೂಲಕ ಈ ಆವೃತ್ತಿಗೆ ಅದ್ಧೂರಿ ತರೆ ಬೀಳಲಿದೆ. ಸದ್ಯ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ಆಟಗಾರರು ಯಾರು ಅವರ ಸಾಧನೆ ಏನು ಎಂಬ ಮಾಹಿತಿ ಇಂತಿದೆ.
ಪರ್ಪಲ್ ಕ್ಯಾಪ್ಗೆ ತೀವ್ರ ಮಧ್ಯೆ ಪೈಪೋಟಿ
ಈ ಬಾರಿಯ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ಗಾಗಿ ಗುಜರಾತ್ ಟೈಟನ್ಸ್ ತಂಡದ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಮೋಹಿತ್ ಶರ್ಮ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಶೀದ್ ಖಾನ್ ಮತ್ತು ಶಮಿ 16 ಪಂದ್ಯಗಳನ್ನಾಡಿ ಕ್ರಮವಾಗಿ 28 ಮತ್ತು 27 ವಿಕೆಟ್ ಕಬಳಿಸಿದ್ದಾರೆ. ಸದ್ಯದ ಮಟ್ಟಿಗೆ ಪರ್ಪಲ್ ಕ್ಯಾಪ್ ಶಮಿ ಬಳಿ ಇದೆ. ಇದೇ ತಂಡದ ಮೋಹಿತ್ ಶರ್ಮ ಕೂಡ ಈ ರೇಸ್ನಲ್ಲಿದ್ದಾರೆ ಅವರು 13 ಪಮದ್ಯಗಳನ್ನು ಆಡಿ 24 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದರು. ಫೈನಲ್ ಪಂದ್ಯದಲ್ಲಿಯೂ ಅವರು ಇದೇ ರೀತಿಯ ಸಾಧನೆ ತೋರಿದರೆ ಶಮಿ ಮತ್ತು ರಶೀದ್ ಖಾನ್ ಹಿಂದಿಕ್ಕಿ ಪರ್ಪಲ್ ಕ್ಯಾಪ್ ಪಡೆಯುವ ಅವಕಾಶವಿದೆ. ಮೂವರು ಆಟಗಾರರಿಗೆ ಪ್ರತಿಸ್ಪರ್ಧಿಯಾಗಿದ್ದ ಪಿಯೂಷ್ ಚಾವ್ಲಾ ಕಳೆದ ಪಂದ್ಯದಲ್ಲಿ ಅವರ ತಂಡ ಮುಂಬೈ ಇಂಡಿಯನ್ಸ್ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಅವರೂ ಕೂಡ ಈ ರೇಸ್ನಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ IPL 2023: ಟೈಟನ್ಸ್ ರನ್ ಮಳೆಗೆ ಮುಳುಗಿದ ಮುಂಬೈ; ಫೈನಲ್ಗೆ ಹಾರ್ದಿಕ್ ಪಡೆ
ಗಿಲ್ ಬಳಿ ಆರೆಂಜ್ ಕ್ಯಾಪ್
ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್ ಗಿಲ್ ಅವರು ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ.
ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್
ಶುಕ್ರವಾರ ರಾತ್ರಿ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಡೆ ಫೈನಲ್ಗೆ ಲಗ್ಗೆಯಿಟ್ಟಿದೆ. ಮೇ 28 ರಂದು ನಡೆಯುವ ಪ್ರಶಸ್ತಿ ಸಮರದಲ್ಲಿ ಚೆನ್ನೈ ತಂಡದ ಸವಾಲು ಎದುರಿಸಲಿದೆ. ಸೋಲು ಕಂಡ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ 18.2 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ ಕಂಡಿತು.
ಕ್ರಿಕೆಟ್
IPL 2023 : ಸಿಎಸ್ಕೆ ತಂಡ ಚಾಂಪಿಯನ್ ಆದರೆ ಈ ಮೂರು ದಾಖಲೆಗಳು ಗ್ಯಾರಂಟಿ; ಯಾವೆಲ್ಲ ಅವು?
ಅಹಮದಾಬಾದ್ನ ನರೆಂದ್ರ ಮೋದಿ ಸ್ಟೇಡಿಯಮ್ನಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಅಹಮದಾಬಾದ್: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮೇ 23ರಂದು) ನಡೆದ ಐಪಿಎಲ್ 2023ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 15 ರನ್ಗಳಿಂದ ಸೋಲಿಸಿತು. ಈ ಮೂಲಕ ದುಬೈನಲ್ಲಿ ನಡೆದಿದ್ದ 2021ರ ಋತುವಿನ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ಬಳಿಕ ಮತ್ತೊಂದು ಬಾರಿ ಫೈನಲ್ಗೇರಿತು.
The Triumphant Return 💛
— Chennai Super Kings (@ChennaiIPL) May 27, 2023
✍️ your favourite moment from Summer of 2018! #WhistlePodu #Yellove 🦁 pic.twitter.com/Ym28PGgv3J
ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಇದುವರೆಗೆ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಗಳಿಸಿದ ಮೊದಲ ಗೆಲುವಾಗಿದೆ. ಮಾರ್ಚ್ 31ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದರು. ಅದರಲ್ಲಿ ಪಾಂಡ್ಯ ಬಳಗ ಐದು ವಿಕೆಟ್ಗಳಿಂದ ವಿಜಯ ಸಾಧಿಸಿತ್ತು. ಏತನ್ಮಧ್ಯೆ ಸಿಎಸ್ಕೆ ತಂಡ 2011ರ ಋತುವಿನಲ್ಲಿ ಅಳವಡಿಸಲಾದ ಪ್ಲೇಆಫ್ ಮಾದರಿಯಲ್ಲಿ ಇದುವರೆಗೆ ಸಿಎಸ್ಕೆ ತಂಡ ಐದು ಬಾರಿ ಕ್ವಾಲಿಫೈಯರ್ 1ರಲ್ಲಿ ಗೆಲುವು ದಾಖಲಿಸಿದಂತಾಗಿದೆ.
ಸಿಎಸ್ಕೆ ತಂಡ ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಐಪಿಎಲ್ ಫೈನಲ್ನಲ್ಲಿ ಐದು ಬಾರಿ ಸೋತಿದೆ. ಮೂರು ಬಾರಿ ಮುಂಬಯಿ ಇಂಡಿಯನ್ಸ್ ತಂಡ ತಲಾ ಒಂದು ಸಲ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ಇವೆಲ್ಲದರ ನಡುವೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರೆ ಸಿಎಸ್ಕೆ ತಂಡ ಮೂರು ದಾಖಲೆಗಳನ್ನು ಸೃಷ್ಟಿಸಲಿದೆ. ಅವುಗಳ ವಿವರ ಇಲ್ಲಿದೆ.
ಸರಿಗಟ್ಟಲಿದೆ ಮುಂಬಯಿ ದಾಖಲೆ
ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ, ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ದಾಖಲೆ ಸರಿಗಟ್ಟಲಿದೆ ಸಿಎಸ್ಕೆ ತಂಡ ಇದವರೆಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. 2010, 2011, 2018 ಮತ್ತು 2021ರಲ್ಲಿ ಸೂಪರ್ ಕಿಂಗ್ಸ್ ಐಪಿಎಲ್ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನೊಂದಿಗೆ ಎಂಎಸ್ ಧೋನಿಯೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : IPL 2023 : ಕ್ವಾಲಿಫೈಯರ್ 1ರಲ್ಲಿ ಗೆಲ್ಲುವವರು ಯಾರು? ಸಿಎಸ್ಕೆ ಅಥವಾ ಗುಜರಾತ್?
ಐಪಿಎಲ್ ಗೆದ್ದ ಅತಿ ಹಿರಿಯ ನಾಯಕ
ಸಿಎಸ್ಕೆ ನಾಯಕ ಎಂಎಸ್ ಧೋನಿ ಆರಂಭದಿಂದಲೂ ಸಿಎಸ್ಕೆ ನಾಯಕರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದರೆ, ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಪಟ್ಟ ಗಳಿಸಿದ ಹಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ. ಧೋನಿಗೆ ಈಗ 41 ನೇ ವರ್ಷ. ಈ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಋತುರಾಜ್ಗೂ ದಾಖಲೆಯ ಅವಕಾಶ
ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 36 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ ಮತ್ತು ಸಿಎಸ್ಕೆ ತಂಡ ಟ್ರೋಫಿಯನ್ನು ಗೆದ್ದರೆ, ಅವರು ಪ್ರಶಸ್ತಿ ಗೆದ್ದ ವರ್ಷದಲ್ಲಿ 600+ ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ 2021ರಲ್ಲಿ ಋತುರಾಜ್ 635 ರನ್ ಪೇರಿಸಿದ್ದರು. ಹಾಲಿ ಋತುವಿನಲ್ಲಿ 564* ರನ್ ಗಳಿಸಿದ್ದಾರೆ.
ಕ್ರಿಕೆಟ್
IPL 2023 : ಫೈನಲ್ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇದು ಐಪಿಎಲ್ನ 250ನೇ ಪಂದ್ಯವಾಗಿದೆ.
ಅಹಮದಾಬಾದ್ : 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) ಮೆಗಾ ಫೈನಲ್ ಕಡೆಗೆ ನೆಟ್ಟಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ.
- 05- ಗುಜರಾತ್ ಟೈಟನ್ಸ್ ಹಾಗೂ ಐಪಿಎಲ್ನಲ್ಲಿ ಐದನೇ ಬಾರಿ ಎದುರಾಗುತ್ತಿವೆ. ಮೂರು ಬಾರಿ ಟೈಟನ್ಸ್ ತಂಡ ಗೆದ್ದಿದ್ದರೆ ಒಂದು ಬಾರಿ ಚೆನ್ನೈ ತಂಡ ಗೆಲುವು ಸಾಧಿಸಿದೆ. ಐದನೇ ಬಾರಿಯ ಗೆಲುವು ಯಾರಿಗೆ ಎಂಬುದು ಈ ಪಂದ್ಯದ ಬಳಿಕ ಗೊತ್ತಾಗಲಿದೆ.
- 06- ಅಜಿಂಕ್ಯ ರಹಾನೆ ಐಪಿಎಲ್ನಲ್ಲಿ ಒಟ್ಟಾರೆ 94 ಸಿಕ್ಸರ್ ಬಾರಿಸಿದ್ದಾರೆ. 100 ಗುರಿ ತಲುಪಲು ಅವರು ಈ ಪಂದ್ಯದಲ್ಲ ಆರು ಸಿಕ್ಸರ್ ಬಾರಿಸಬೇಕಾಗಿದೆ.
- 16- ಅಜಿಂಕ್ಯ ರಹಾನೆ ಟಿ20 ಮಾದರಿ ಕ್ರಿಕೆಟ್ನಲ್ಲಿ ಒಟ್ಟು 5939 ರನ್ ಬಾರಿಸಿದ್ದಾರೆ. 6000 ರನ್ಗಳ ಮೈಲುಗಲ್ಲು ದಾಖಲು 61 ರನ್ಗಳ ಕೊರತೆ ಎದುರಿಸುತ್ತಿದ್ದಾರೆ.
- 02- ಟಿ20 ಕ್ರಿಕೆಟ್ನಲ್ಲಿ 150 ವಿಕೆಟ್ಗಳನ್ನು ಪಡೆಯಲು ಹಾರ್ದಿಕ್ ಪಾಂಡ್ಯ (148) ಅವರಿಗೆ ಎರಡು ವಿಕೆಟ್ಗಳ ಅಗತ್ಯವಿದೆ.
- 04- ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಟಿ20 ಮಾದರಿಯಲ್ಲಿ 496 ಫೋರ್ಗಳನ್ನು ಬಾರಿಸಿದ್ದಾರೆ. 500 ಸಾಧನೆ ಮಾಡಲು 4 ಫೋರ್ಗಳು ಬೇಕಾಗಿವೆ.
- 01- ಸಿಎಸ್ಕೆ ನಾಯಕ ಎಂ.ಎಸ್.ಧೋನಿ ಐಪಿಎಲ್ನಲ್ಲಿ 349 ಫೋರ್ಗಳನ್ನು ಬಾರಿಸಿದ್ದಾರೆ. 350ರ ಗಡಿ ದಾಟಲು ಒಂದು ಫೋರ್ನ ಅಗತ್ಯವಿದೆ.
- 02- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಐಪಿಎಲ್ನಲ್ಲಿ 98 ಸಿಕ್ಸರ್ಗಳನ್ನು ಬಾರಿಸಿದ್ದು, 100 ಸಿಕ್ಸರ್ಗಳನ್ನು ಬಾರಿಸಲು 2 ಸಿಕ್ಸರ್ ಬೇಕಾಗಿದೆ.
- 02- ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ ಇದುವರೆಗೆ 48 ವಿಕೆಟ್ಗಳನ್ನು ಕಬಳಿಸಿದ್ದಾರೆ. 50 ವಿಕೆಟ್ ಕಬಳಿಸಲು ಅವರಿಗೆ 2 ವಿಕೆಟ್ ಅಗತ್ಯವಿದೆ.
- 04- ರಶೀದ್ ಖಾನ್ ಗುಜರಾತ್ ತಂಡದ ಪರ 46 ವಿಕೆಟ್ ಉರುಳಿಸಿದ್ದರು. 50 ವಿಕೆಟ್ ಪೂರೈಸಲು 4 ವಿಕೆಟ್ ಅಗತ್ಯವಿದೆ.
- 08- ರವೀಂದ್ರ ಜಡೇಜಾ ಐಪಿಎಲ್ನಲ್ಲಿ 192 ಫೋರ್ಗಳನ್ನು ಬಾರಿಸಿದ್ದಾರೆ. 200 ಫೋರ್ಗಳನ್ನು ಪೂರ್ಣಗೊಳಿಸಲು ಎಂಟು ಫೋರ್ಗಳ ಅಗತ್ಯವಿದೆ.
- 11- ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಎಗ ಐಪಿಎಲ್ನಲ್ಲಿ 11 ಬಾರಿ ಫೈನಲ್ ತಲುಪಿದ ಹೆಗ್ಗಳಿಕೆ ಸಿಗಲಿದೆ.
- 01- ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ಪರ 249 ಪಂದ್ಯಗಳಲ್ಲಿ ಆಡಿದ್ದು 250ನೇ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಒಂದು ಪಂದ್ಯ ಬಾಕಿ ಇದೆ.
- 49- ಗುಜರಾತ್ ತಂಡದ ಬ್ಯಾಟರ್ ಶುಭ್ಮನ್ ಗಿಲ್ಗೆ ಐಪಿಎಲ್ನಲ್ಲಿ 900 ರನ್ಗಳ ಗಡಿ ದಾಟಲು 49 ರನ್ಗಳ ಅಗತ್ಯವಿದೆ.
- 123- ಐಪಿಎಲ್ನಲ್ಲಿ ಋತು ಒಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಮಾಡಲು ಶುಭ್ಮನ್ ಗಿಲ್ಗೆ (851) ಗೆ 123 ರನ್ಗಳ ಅಗತ್ಯವಿದೆ.
- 01- ಗುಜರಾತ್ ತಂಡದ ಬೌಲರ್ ಅಲ್ಜಾರಿ ಜೋಸೆಫ್ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 99 ವಿಕೆಟ್ ಉರುಳಿಸಿದ್ದು. 00ರ ಸಾಧನೆ ಮಾಡಲು ಒಂದು ವಿಕೆಟ್ ಬೇಕಾಗಿದೆ.
- 03- ಗುಜರಾತ್ ಬೌಲರ್ ಮೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 147 ವಿಕೆಟ್ ಪಡೆದಿದ್ದು. 150 ವಿಕೆಟ್ಗಳನ್ನು ಪೂರೈಸಲು 3 ವಿಕೆಟ್ಗಳ ಅಗತ್ಯವಿದೆ.
- 01- ಚೆನ್ನೈ ತಂಡದ ಬೌಲರ್ ದೀಪಕ್ ಚಾಹರ್ ಟಿ20 ಮಾದರಿಯಲ್ಲಿ 149 ವಿಕೆಟ್ಗಳನ್ನು ಉರುಳಿಸಿದ್ದು. 150ರ ಮೈಲುಗಲ್ಲು ಸ್ಥಾಪಿಸಲು ಒಂದು ವಿಕೆಟ್ ದೂರದಲ್ಲಿದ್ದಾರೆ.
- 05- ಐಪಿಎಲ್ನಲ್ಲಿ 100 ಫೋರ್ಗಳ ಸಾಧನೆ ಮಾಡಲು ಸಿಎಸ್ಕೆ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆಗೆ (95) ಐದು ಫೋರ್ಗಳ ಅಗತ್ಯವಿದೆ.
- 01- ಗುಜರಾತ್ ತಂಡದ ಬೌಲರ್ ಮೋಹಿತ್ ಶರ್ಮಾ (99) ಅವರಿಗೆ ಐಪಿಎಲ್ನ 100ನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ.
ಕ್ರಿಕೆಟ್
IPL 2023: ಫೈನಲ್ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನಕ್ಕೆ ಈ ಪಂದ್ಯವನ್ನು ಮುಂದೂಡಲಾಗುತ್ತದೆ.
ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ಯಾವ ತಂಡಕ್ಕೆ ಲಾಭ, ಫಲಿತಾಂಶ ನಿರ್ಣಯ ಹೇಗೆ ಎಂಬ ಕ್ರಿಕೆಟ್ ಅಭಿಮಾನಿಗಳ ಹಲವು ಕುತೂಹಲಕ್ಕೆ ಇಲ್ಲಿದೆ ಸಂಪೂರ್ಣ ಉತ್ತರ.
ಅಹಮದಾಬಾದ್ನಲ್ಲಿ ನಡೆಯುವ ಈ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಕ್ವಾಲಿಫೈಯರ್ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿ ಪಂದ್ಯ ವಿಳಂಬಗೊಂಡಿತ್ತು. ಇದೀಗ ಫೈನಲ್ ದಿನ ಮಳೆ ಬಂದರೆ ಏನಾಗಲಿದೆ ಎಂಬುದಕ್ಕೆ ಐಪಿಎಲ್ ಮಂಡಳಿ ಸಂಪೂರ್ಣ ಮಾಹಿತಿ ನೀಡಿದೆ. ಆರಂಭದಲ್ಲಿ ಮಳೆ ನಿಲ್ಲುವ ವರೆಗೆ ಕಾಯಲಾಗುತ್ತದೆ. ಮೊದಲ ಯೋಜನೆಯಂತೆ ಓವರ್ ಕಡಿತಗೊಳಿಸಿ ಪಂದ್ಯವನ್ನು ಆಡಿಸಲು ನಿರ್ಧಾರಿಸಲಾಗುತ್ತದೆ. ಒಂದೊಮ್ಮೆ ಇದಕ್ಕೂ ಮಳೆ ಅನುವು ಮಾಡಿಕೊಡದಿದ್ದರೆ ಆಗ ರಾತ್ರಿ1.20 ವರೆಗೆ ಕಾದು ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶಕ್ಕೆ ಮೊರೆಹೋಗಲಾಗುತ್ತದೆ. ಇದು ಕೂಡ ಸಾಧ್ಯವಾಗದಿದ್ದರೆ ಮೀಸಲು ದಿನವಾದ 29ನೇ ತಾರಿಕಿಗೆ ಪಂದ್ಯವನ್ನು ಮುಂದೂಡಲಾಗುತ್ತದೆ.
ಒಂದೊಮ್ಮೆ ಭಾನುವಾರ ಟಾಸ್ ಗೆದ್ದು ಪಂದ್ಯ ನಡೆಯದೇ ಇದ್ದರೆ ಆಗ ಮೀಸಲು ದಿನ ಹೊಸ ಟಾಸ್ ಪ್ರಕ್ರಿಕೆ ಮೂಲಕ ಪಂದ್ಯ ಆರಂಭಿಸಲಾಗುತ್ತದೆ. ಇನ್ನೊಂದು ನಿಯಮದ ಪ್ರಕಾರ ಭಾನುವಾರ ಒಂದು ತಂಡ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಮಳೆ ಬಂದು ಅಂತಿಮ ನಿಗದಿತ ಸಮಯದಲ್ಲೂ ಪಂದ್ಯ ನಡೆಯದಿದ್ದರೆ, ಆಗ ಮೀಸಲು ದಿನದಂದು ಹಿಂದಿನ ದಿನ ಎಷ್ಟು ಓವರ್ಗೆ ಪಂದ್ಯ ನಿಂತಿದೆಯೋ ಅಲ್ಲಿಂದ ಪಂದ್ಯ ಮರು ಆರಂಭವಾಗಲಿದೆ. ಉದಾಹರಣೆಗೆ ಭಾನುವಾರ ಒಂದು ತಂಡ 4 ಓವರ್ ಬ್ಯಾಟಿಂಗ್ ನಡೆಸಿ ಬಳಿಕ ಮಳೆಯಿಂದ ಪಂದ್ಯ ರದ್ದಾದರೆ ಮೀಸಲು ದಿನ ಉಳಿದ 16 ಓವರ್ ಆಟವನ್ನು ಆಡಲಿದೆ.
ಇದನ್ನೂ ಓದಿ IPL 2023: ಯಾರಿಗೆ ಒಲಿಯಲಿದೆ ಐಪಿಎಲ್ ಕಿರೀಟ; ಚೆನ್ನೈ-ಗುಜರಾತ್ ನಡುವೆ ಫೈನಲ್ ಕಾದಾಟ
ಮೀಸಲು ದಿನವೂ ಮಳೆ ಬಂದರೆ ಏನು ಗತಿ
ಒಂದೊಮ್ಮೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣವಾಗಿ ಪಂದ್ಯ ನಡೆಯದೇ ಇದ್ದರೆ. ಆಗ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹೀಗಾದರೆ ಈ ಲಕ್ ಗುಜರಾತ್ ತಂಡಕ್ಕೆ ಒಲಿಯಲಿದೆ. ಕಾರಣ ಗುಜರಾತ್ ಲೀಗ್ನಲ್ಲಿ 10 ಪಂದ್ಯ ಗೆದ್ದು 20 ಅಂಕ ಸಂಪಾದಿಸಿತ್ತು.
ಕ್ರಿಕೆಟ್
IPL 2023 : ಇಶಾನ್ ಬದಲಿಗೆ ಆಡಿದ ಈ ಆಟಗಾರ ಐಪಿಎಲ್ ಇತಿಹಾಸದ ಮೊದಲ ಕಂಕಶನ್ ಸಬ್ಸ್ಟಿಟ್ಯೂಟ್
ಐಪಿಎಲ್ 2023 ರ ಕ್ವಾಲಿಫೈಯರ್ 2 ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ಇಶಾನ್ ಕಿಶನ್ ಕಣ್ಣಿನ ಗಾಯಕ್ಕೆ ಒಳಗಾಗಿದ್ದರಿಂದ ಬ್ಯಾಟಿಂಗ್ಗೆ ಇಳಿದಿರಲಿಲ್ಲ.
ಅಹಮದಾಬಾದ್: ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್ ತಂಡ ಫೈನಲ್ಗೇರಿದ್ದು ಭಾನುವಾರ ಇದೇ ತಾಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎದುರಾಗಲಿದೆ. ಏತನ್ಮಧ್ಯೆ, ಆರನೇ ಬಾರಿ ಟ್ರೋಫಿ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿದಿದ್ದ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಭಾರೀ ನಿರಾಸೆ ಎದುರಾಯಿತು. ಪಂದ್ಯದ ನಡುವೆ ಇಬ್ಬರು ಆಟಗಾರರು ಗಾಯಗೊಂಡಿರುವುದೇ ತಂಡದ ಸೋಲಿಗೆ ಕಾರಣ ಎಂದೂ ಹೇಳಲಾಗುತ್ತಿದೆ. ಇಶಾನ್ ಕಿಶನ್ ಹಾಗೂ ಕ್ಯಾಮೆರಾನ್ ಗ್ರೀನ್ ಗಾಯಗೊಂಡವರು. ಗ್ರೀನ್ ಆಟ ಮುಂದುವರಿಸಿದರೂ, ಇಶಾನ್ಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರ ಬದಲಿಗೆ ವಿಷ್ಣು ವಿನೋದ್ ಅವಕಾಶ ಪಡೆದುಕೊಂಡರು. ಈ ಮೂಲಕ ವಿಷ್ಣು ಐಪಿಎಲ್ ಇತಿಹಾಸದ ಮೊದಲ ಇನ್ಕಷನ್ ಬದಲಿ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡರು.
ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸಹ ಆಟಗಾರ ಕ್ರಿಸ್ ಜೋರ್ಡಾನ್ ಅವರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಅವರ ಕಣ್ಣಿಗೆ ಗಾಯವಾಗಿತ್ತು. ಹೀಗಾಗಿ ಅವರಿಗೆ ಆಟ ಮುಂದುವರಿಯಲ ಸಾಧ್ಯವಾಗಲಿಲ್ಲ. ಈ ವೇಳೆ ಟೀಮ್ ಮ್ಯಾನೇಜ್ಮೆಂಟ್ ಆಯ್ಕೆ ಮಾಡಿದ್ದ ವಿಕೆಟ್ಕೀಪರ್ ಆಗಿ ಆಯ್ಕೆ ಮಾಡಿದ್ದು ವಿಷ್ಣು ವಿನೋದ್ ಅವರನ್ನು. ಆದರೆ ತಮಗೆ ಸಿಕ್ಕ ಅವಕಾಶವನ್ನು ವಿನೋದ್ ಬಳಸಿಕೊಳ್ಳಲಿಲ್ಲ. 7 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ಔಟಾದರು.
ಇದನ್ನೂ ಓದಿ : IPL 2023 : ಟ್ರೋಫಿ ಗೆದ್ದವರ ಜೇಬಿಗಿಳಿಯಲಿದೆ ಕೋಟಿ ಕೋಟಿ ರೂಪಾಯಿ! ಇಲ್ಲಿದೆ ಬಹುಮಾನದ ವಿವರ
ಅದಕ್ಕಿಂತ ಮೊದಲು ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಕೂಡ ಗಾಯಗೊಂಡಿದ್ದರು. 16ನೇ ಓವರ್ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಹಿಡಿಯಲು ಯತ್ನಿಸಿದಾಗ ರೋಹಿತ್ ಕೈಗೆ ಸಣ್ಣ ಗಾಯವಾಗಿತ್ತು. ಹೀಗಾಗಿ ಬ್ಯಾಟಿಂಗ್ ಮಧ್ಯ ಒಂದು ಬಾರಿ ಮೈದಾನದಿಂದ ಹೊರಕ್ಕೆ ನಡೆದರು. ಬಳಿಕ ವಾಪಸ್ ಬಂದರೂ ಸರಿಯಾಗಿ ಆಡಲು ಅವರಿಗೆ ಸಾಧ್ಯವಾಗಲಿಲ್ಲ.
ಮೂರು ವರ್ಷದ ಹಿಂದೆ ಪರಿಚಿತವಾದ ನಿಯಮ
ಐಪಿಎಲ್ನ 2020ರ ಆವೃತ್ತಿಯಲ್ಲಿ ಕಂಕಷನ್ ನಿಯಮವನ್ನು ಪರಿಚಯಿಸಲಾಗಿತ್ತು. ಆದರೆ, ಅದನ್ನು ಮೊದಲು ಬಳಿಸಿದ್ದು ಮುಂಬಯಿ ಇಂಡಿಯನ್ಸ್ ತಂಡ ಎಂಬ ಇತಿಹಾಸ ಬರೆಯಿತು. ಇಶಾನ್ ಕಿಶನ್ ಆಡದೇ ಉಳಿದರೆ ವಿನೋದ್ ಕಂಕಷನ್ ಆಯ್ಕೆ ಎಂಬ ಖ್ಯಾತಿ ಪಡೆದರು. ಅಚ್ಚರಿಯೆಂದೇ ಇದೇ ಪಂದ್ಯದಲ್ಲಿ ಗುಜರಾತ್ ತಂಡದ ಬ್ಯಾಟರ್ ಸಾಯಿ ಸುದರ್ಶನ್ ಅವರೂ ಗಾಯದಿಂದ ಹೊರನಡೆದರು. 31 ಎಸೆತಗಳಲ್ಲಿ 42 ರನ್ ಗಳಿಸಿದ ನಂತರ ಅವರು ಪೆವಿಲಿಯನ್ಗೆ ನಡೆದರು.
ಗುಜರಾತ್ ತಂಡ ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ ಅವರ ಅದ್ಭುತ ಐದು ವಿಕೆಟ್ಗಳನ್ನು ಪಡೆಯುವ ಮೂಲಕ ಮುಂಬೈ ತಂಡದ ವಿರುದ್ಧ 62 ರನ್ಗಳ ಗೆಲುವಿಗೆ ಕಾರಣರಾದರು.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ9 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ21 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್22 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ20 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ