ಕಲೆ/ಸಾಹಿತ್ಯ
Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!
ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್ ಅನಿಸುವ 7 ಹಾಡುಗಳು ಇಲ್ಲಿವೆ.
1. ಯಾರೇ ಕೂಗಾಡಲಿ ಊರೇ ಹೋರಾಡಲಿ
ʼಸಂಪತ್ತಿಗೆ ಸವಾಲ್ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.
2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್ ಅವರು ಮುದ್ದು ಬಾಲನಟ ಪುನೀತ್ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.
3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.
4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.
5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್ ಕುಮಾರ್ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್ ಅವರು ಹಾಡಿರುವ ಹಾಡು ಇದು. ಇದರ ಬೀಟ್ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.
6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.
7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.
ಇದನ್ನೂ ಓದಿ: Dr.Rajkumar Memory: ಪ್ಯಾನ್ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು
ಅಪ್ಪನ ಭುಜದ ಆ ಕಡೆಗೊಂದು, ಈ ಕಡೆಗೊಂಡು ಕಾಲು ಇಳಿಬಿಟ್ಟು ಕುಳಿತ ಮುದ್ದಿನ ಮಗಳು, ಸಂತೆಯಲ್ಲಿ ಕಂಡ ದನ ಮಾರಾಟದ ಜಗತ್ತು, ನಂತರ ಕಂಡ ಮನುಷ್ಯ ಜಗತ್ತು, ಎರಡೂ ಒಂದೇ ಆಗಿರಲಿಲ್ಲ.
:: ದೀಪದ ಮಲ್ಲಿ
ಅಪ್ಪಯ್ಯನ ಗಂಟುಭುಜದ ಮ್ಯಾಕೆ ಆಕಡೀಕೊಂದು ಕಾಲು ಈಕಡೀಕೊಂದು ಕಾಲು ಇಳೆಬಿಟ್ಟು ಕುಂತಿದ್ದ ನಂಗೆ ಒಂಭತ್ತೋ ಹತ್ತೋ ವಯ್ಸು. ದನಗೊಳ್ ಮಾರಕ್ಕೆ ಸಂತೆಗೆ ಒಂಟಿದ್ದೋನ ಬೆನ್ನಿಗೆ ಬಿದ್ದು ನಾನೂ ಓಡಿದ್ನಿ. ಎಲ್ಡೂ ಕೈಲಿ ಎಲ್ಡು ದನ ಇಡ್ಕಂಡ್ ಒಂಟಿದ್ದ ಅಪ್ಪಯ್ಯ ಇಂದಿಂದ್ಕೆ ಓಡ್ತಾ ಬತ್ತಿದ್ದೋಳ್ಗೆ ʼಬಾರ್ಗೋಲ್ನಿಂದ ಬಾರ್ಸೇನುʼ ಅಂತ ದೂರದಿಂದ್ಲೇ ಕೈ ತೋರ್ದ. ನಾನಾದ್ರೂವೆ ಮೂಗ ಹೊಳ್ಗೆ ಕೈ ತೂರ್ಸಿ ತೀಡ್ತಾ ಬಗೀತಾ, ಮತ್ತ ಆಗೀಗ ಕಪಾಳಕ್ಕ ಎಂಜ್ಲ ಬಳ್ಕತಾ ಮೆತ್ತಾ ಅಳೂವಂಗೆ ನಾಟ್ಕ ಮಾಡ್ತಾ ನಡೀತಿದ್ನಿ. ʼಇನ್ನೀ ಪೀಡೆ ಬಿಡನಾರ್ಳುʼ ಅನ್ಸಿ ಅಪ್ಪಯ್ಯನೂ ಒಸಿ ನಿಧಾನುಸ್ದ. ಅದು ಗೊತ್ತಾದೇಟ್ಗೆ ನಾನೂ ದಿಬಿದಿಬಿ ನಡ್ದು ಜೊತ್ಗೆ ಹೆಜ್ಜೆ ಕೂಡುಸ್ದೆ. ಗಾವ್ದ ದೂರ ಸವೆಯೋದ್ರೊಳ್ಗೆ ಒಂದ್ ದನದ ಹಗ್ಗ ನನ್ ಕೈಲಿತ್ತು.
ಒಂದೀಟ್ ನಡ್ಯದು, ಹಗ್ಗವ ಎಲ್ಡೂ ಕಾಲ್ಸುತ್ತಾ ಚಕ್ರದಂಗೆ ಸುತ್ತದು, ನದಿ-ದಡ ಆಡದು, ಮತ್ತ ನಡ್ಯದು. ಇನ್ನೀಟ್ ದೂರ ಓದ್ಮ್ಯಾಕೆ ದನಗೋಳಿಗಿಂತಾ ಮುಂದೋಡದು, ಹಗ್ಗವ ಕಾಲಿಂದ ಮೆಟ್ಟದು, ಇನ್ನೇನು ದನ ನನ್ ದಾಟಿ ಮುಂದೋಡ್ತು ಅನ್ನೂವಾಗ ಕಾಲ ತಗ್ದು ಹಗ್ಗ ಕೈಲಿ ಇಡ್ಯದು. ಈತೀತರ ತರಳೆ ಆಟಗಳ್ನೆಲ್ಲಾ ಅಪ್ಪಯ್ಯನೂ ನೋಡುತ್ಲೇ ಸುಮ್ಕೆ ಬತ್ತಿದ್ದ. ಯಾವಾಗ್ ಹಗ್ಗ ತಗ್ದು ಕುತ್ಗೇಗೇ ಸುತ್ಕಂಡು ಜಂಬುಸ್ತಾ ನಿಂತ್ಕಂಡ್ನೋ, ಅದೆಲ್ಲಿತ್ತೋ ಆ ಕ್ವಾಪ… ಹಾದಿಬದಿ ಹುಣ್ಸೇ ಮರ್ದಿಂದ ಬೆತ್ತ ಸಿಗ್ದು ಚಟೀರಂತ ಪಿರ್ರೆಗೆ ಒಂದು ಬಿಟ್ಟ. ಆಗ ಎಂಜ್ಲೇನು? ನೆತ್ರ… ನೆತ್ರ ಸುರೀತು ಕಣ್ಲಿಂದ. ಬಿಕ್ಕಿ ಬಿಕ್ಕಿ ಅಳ್ತಾ ಕುಂಡೆನೋವಿಗೆ ಓಡಾಕೂ ಆಗ್ದೆ ನಡ್ಯಾಕೂ ಬಾರ್ದೆ ಕುಂತ್ಕಂಬುಟ್ಟೆ. ʼಶನಿಮುಂಡೇದುʼ ಅಪ್ಪಯ್ಯ ಬೈಕೋತ್ಲೆ ಹೆಗ್ಲಮ್ಯಾಕೆ ಕುಂಡ್ರುಸ್ಕೊಂಡ. ಅಂಗೆ ಎಲ್ಡೂ ಕಾಲ ಭುಜಕ್ಕೆ ಜೋತಾಡ್ಸಿ ಸವಾರಿ ಹೊಂಟೋಳು ಸಂತೆ ಸೇರೋತ್ಗೆ ಸೂರ್ಯ ಮನೀಗೋಗೋ ಕುಸೀಲಿದ್ದ.
ಸಂತೆಮಾಳ್ದಾಗೆ ನನ್ನ ಕುಂಡೆನೋವಿಗೆ ಗಾಳಿ ಸೋಕ್ಲಂತ ಫ್ರಾಕಿನ ಫ್ರಿಲ್ಲನ್ನ ಬೀಸಣ್ಗೆ ತರ ಬೀಸ್ಕಾತ ಗಿರಗಿರನೆ ಸುತ್ತಿದ್ನಿ. ಅಪ್ಪಯ್ಯ ಅಲ್ಲೆಲ್ಲೋ ಗುಂಪ್ನಾಗೆ ಕೈಮ್ಯಾಕೆ ಚೌಕ ಮುಸ್ಕಾಕಿ ಬೆಳ್ಳು ಎಣುಸ್ತಿದ್ದ. ಒಂದೊಂದ್ ಸಲ್ಕೆ ಮೈಮೇಲೆ ದ್ಯಾವ್ರು ಬಂದಂಗೆ ಜೋರಾಗಿ “ಊಹೂಹೂ ಆಗಕ್ಕಿಲ್ಲ ತಗೀತಗೀರಿ, ನನ್ ಎಂಡ್ರು ಮಕ್ಳುನ್ನೂ ಹಿಂಗ್ ಸಾಕಿಲ್ಲ ನಾನು, ಹಂಗ್ ಸಾಕಿವ್ನಿ ದನಗೋಳ, ನಡ್ರಿ ಬೇರೆ ನೋಡೋಗ್ರಿ” ಅಂತ ಕೈಕೆಡವಿ ಕೂಗ್ತಿದ್ದ. ಇಂಗೆ ಸುಮಾರೊತ್ತು ಕಾಯದು, ಇನ್ನೊಂದೀಟ್ ಜನ ಬರದು, ವಾಗದು, ಹೆಗ್ಲ ಮ್ಯಾಲಿಂದ ಚೌಕ ಇಳ್ಸದು, ಬೆಳ್ಳು ಎಣುಸದು, ಮತ್ತ ಕೈ ಒದ್ರಿ ಬಂದು ಕುಂತ್ಕಳದು ನಡೀತಿತ್ತು.
ನಾನೂ ಗಿರಗಿರ ಸುತ್ತದು, ಯಾನಾಗ್ತೈತೆ ಅಂತ ಎಟಕ್ಸಿ ನೋಡದು, ಮತ್ತ ಸುತ್ತದು
ಗಿರಗಿರಗಿರಗಿರ..ಗಿರಗಿರ.. ಗಿರ.. ಗಿ..ರ..
**
ಮನೀಗೆ ಅಂತ ಇದ್ದುದ್ದು ಎಲ್ಡು ದನವೆಂಬೋ ಆಸ್ತಿ, ಅರ್ಧ ಎಕ್ರೆ ಏರಿ ಮಗ್ಲ ಹೊಲ. ಸುತ್ಲ ಹತ್ತಾರು ಎಕ್ರೇಲಿ ಧಾನ್ಯಲಕ್ಸ್ಮಿ ಮೈಮರ್ತು ಕುಣ್ಯೋಳು. ನಮ್ಮೊಲ್ದಾಗ್ ಮಾತ್ರ ಇರೋಬರೋ ಅನಿಷ್ಟಗೋಳ್ನೂ ತಂದು ಸುರ್ಯೋಳು. ಅಪ್ಪಯ್ನೂ ರೆಟ್ಟೆಬೀಳುವಂಗೆ ದುಡ್ಯೋ ಆಸಾಮಿನೇ ಒಂದು ಕಾಲ್ದಾಗೆ. ಆದ್ರೂ ಯಾತುಕ್ ಕೈ ಮಡುಗುದ್ರೂ ಕೈಗತ್ತಲಾರ್ದ ಲತ್ತೆ ಮನ್ಷಾ ಅಂತ ಊರ್ನೋರಿಗೆಲ್ಲಾ ಗೊತ್ತಾಗೋಗಿತ್ತು. ಹೊಲ್ದ ನಡೂಕೆ ಒಂದು ಹುಣಸೇ ಮರವಿತ್ತು. ಅದು ಮಾತ್ರ ನಾಕೂರಿಗೂ ಹಂಚಿ ಚೆಲ್ಲಾಡುವಂಗೆ ಸೋರಾಕ್ತಿತ್ತು. ಆದ್ರೇನು? ಬದಕನ್ನೋ ಹೊಳೆ ಸೆಳವಲ್ಲಿ ಈ ಹುಣಸೇಣ್ಣ ಎಷ್ಟು ತೊಳೆದ್ರೂ ದಕ್ತಿರ್ನಿಲ್ಲಾ ಅನ್ನಿ.
ಇನ್ನ ಅವ್ವನೆಂಬೋ ಮಾಯ್ಕಾತಿ ಹೆಂಗ್ಸು ಮನೆ ಬೀದಿ ಒಂದ್ಕೂ ಕ್ಯಾರೇ ಅಂತಿರನಿಲ್ಲ. ನಡುಬೀದಿಯಾಗೆ ಸೀರೆ ಮಂಡಿಗಂಟ ಎತ್ತಿ ನಿಂತಾಂದ್ರೆ ಜಟ್ಟಿ ಜಟ್ಟಿ ಕಂಡಂಗೆ ಕಾಣೋಳು. ಉದ್ರೋ ಸೀರೇನಾ ನಿಂತನಿಡದಾಗೇ ಬಿಗ್ದು ಕಟ್ಟಿ ಅವರಿವ್ರ ಹೊಲ-ಗದ್ದೆ ಮಾಡೋಳು. ನಾಕ್ ಬೀದಿ ಹೆಣ್ಣಾಳ್ಗೊಳ್ಗೆ ಇವ್ಳೇ ಲೀಡ್ರು. ಬಾಯಿ ಬೊಂಬಾಯಿ. ಮನ್ಯಾಗೂ ಆಟೇ. ಒಂದು ಕಿತ ಬೇಸಿ ಬಡುದ್ರೆ ಮುಗ್ತು ಅಲ್ಲಿಗೆ. ಉಪ್ಪು ಅಂಗದೆ ಹುಳಿ ಇಂಗದೆ ಅಂತೇನಾರ ವರಾತ ತಗುದ್ರೆ ತಿಕದ ಮ್ಯಾಲೆ ಒದ್ಯೋಳು. ಅವ್ಳು ನಡ ಬಗ್ಗಿಸಿ ಹೊಲ್ದಾಗೆ ದಿನಗಟ್ಳೆ ದುಡುದ್ರೆ ನಮ್ಮನ್ಲಿ ಒಲೆ ಉರ್ಯಾದು. ಅದ್ಕ ಅಪ್ಪಯ್ಯನೂ ತನ್ನ ಕೈಲಾಗ್ದೇ ಇರೋವತ್ಗೆ ಇವ್ಳಾದ್ರೂ ಮನೆ ನಡುಸ್ತಾವ್ಳಲ್ಲ ಅಂತ ಅನ್ಕೂಲದ ಕಡೀಗ್ ವಾಲಿದ್ದ. ಊರ್ ಗಂಡುಸ್ರು ಚಂದ್ರಣ್ಣನ ಟೀ ಅಂಗ್ಡೀ ಮುಂದೆ ಕಾಲಾಡುಸ್ತಾ ಕುಂತು ಅವ್ವ ಹೊಲದಿಂದ ಕ್ಯಾಮೆ ಮುಗ್ಸಿ ಸೀದಾ ಗೌಡ್ರ ಕೆಳ್ಮನೇಗೆ ಹೋದುದ್ನ ಕಂಡುದಾಗಿ ಆಡ್ಕತಿದ್ರೂ ಅಪ್ಪಯ್ಯ ತನ್ನದಲ್ದ ಇಷ್ಯ ಅನ್ನೂವಂಗೇ ಸುಮ್ಕಿರ್ತಿದ್ದ. ಅವ್ವಯ್ಯ ರಾತ್ರೆ ಹೊತ್ಗೆ ಮನೀಗ್ಬಂದು ನೀರು-ಸಾರು ನೋಡೋಳು. ಒಟ್ನಾಗೆ ಅವ್ವನ ಒಡ್ಲ ಬೆಂಕೀಲಿ ಅಪ್ಪಯ್ಯನ ಹುಳುಕೆಲ್ಲಾ ನಚ್ಗೆ ಮೈಕಾಸಿಕೊಳ್ತಿತ್ತು.
ಇಂಗಿರುವಾಗ ಒಂದಿನ ನನ್ನ ಮಲುಗ್ಸಿ ಅವ್ವ-ಅಪ್ಪಯ್ಯ ಎಂಡ ಕುಡೀತಾ ಕುಂತಿದ್ರು. ಮಾತಿಗ್ಮಾತು ಬೆಳ್ದು ಸ್ಯಾನೆ ಜೋರು ಜಗಳುಕ್ಕೆ ತಿರುಗ್ತು. ಮೊದ್ಮೊದ್ಲು ಇಂತ ಜಗ್ಳ ಹೊಯ್ದಾಟ ಭಯ ಅನುಸುದ್ರೂ ಆಮೇಕಾಮೇಕೆ ಎಲ್ಕಾ ರೂಡ್ಯಾಗಿ ನಾನೂ ಧಿಮ್ ಅಂತ ಮಲ್ಗಿ ನಿದ್ದೆ ವಡೀತಿದ್ದೆ.. ಅಂಗೇ ನಿದ್ದೆ ವೋಗಿದ್ ಆ ದಿನ ಒಂದುಸಣ್ಣ್ ಮಾತ್ಗೆ ಬಡ್ದಾಡ್ಕಂಡು ಅಪ್ಪ ಹೆಂಡದ್ ಸೀಸೆ ತೆಗ್ದು ನೆಲುಕ್ ಬಡುದ್ನಂತೆ. ಪಕ್ಕದಾಗೇ ಅಚ್ಚಿಟ್ಟಿದ್ದ ಬುಡ್ಡಿದೀಪ ಭಗ್ಗನೆ ಒತ್ಕೊಂಡು ಅವ್ವನ ಮಕ ಮುಸುಡಿ ಎಲ್ಲಾ ಚಣದಾಗೆ ಅರ್ಧಂಬರ್ಧ ಬೆಂದೋಯ್ತು. ಅಪ್ಪಯ್ಯ ತಾನು ಬೇಕಂತ ಮಾಡಿಲ್ಲಾ ಅಂತ ವದ್ರುತಾನೇ ಇದ್ದ.
ಅವ್ವ ತಿಂಗ್ಳಾನ ಆಸ್ಪತ್ರೆ ಸೇರಿ ಸುಮಾರಾಗಿ ಗುಣವಾದ್ಲು. ನಂಗ್ ಮಾತ್ರ ಅವ್ವನ ಮಕ ನೋಡಕ್ಕ ವಾಕ್ರಿಕೆ ಬಂದೋಗದು. ಅವ್ವ ಮೊದ್ಲಿನಂಗಿರನಿಲ್ಲ. ಚಂದ ಮೊದ್ಲಿನಂಗಿರ್ನಿಲ್ಲ, ಖದರ್ರೂ ಮೊದ್ಲಿನಂಗಿರ್ನಿಲ್ಲ. ಯಾರ ಗದ್ದೆಮಾಡಕ್ಕೂ ಹೋಗ್ತಿರನಿಲ್ಲ. ಅವ್ಳ ಬೆನ್ನಿಗೆ ಗೌಡ್ರೌವ್ರೆ ಅನ್ನೋದಕ್ಕೇ ಜತೆಗಾರ್ರು ಅವ್ಳನ್ನ ʼಅಕ್ಕಾʼ ಅಂತಿದ್ರು. ಗೌಡ್ರೇನೂ ಅವ್ಳನ್ನ ಪಕ್ದಾಗೆ ಕೂರ್ಸಿ ಪಟ್ಟುದ್ ರಾಣಿ ಅನ್ದೇವೋದ್ರೂ ಆಳುಕಾಳಿಗೆಲ್ಲಾ ʼಅಕ್ಕʼಳಾದ್ದೇ ಅವ್ಳಿಗೆ ಕೊಂಬು ಬಂದಿತ್ತು. ಆ ಕೊಂಬಿನ ದವಲತ್ತನ್ನ ಅಪ್ಪನೂ ಆಗ್ಗಾಗ್ಲೇ ಸವರಿ ಮೀಸೆ ತಿರುವ್ತಿದ್ದಾ ಅನ್ನಿ. ಇಂಗೆ ʼಅಕ್ಕʼಳಾಗಿದ್ದ ಸುಟ್ಟಮೊಕದ ಅವ್ವನ್ನ ಗೌಡ್ರು ʼಬಿಟ್ರುʼ ಅನ್ನೋ ಸುದ್ದಿ ಅಬ್ಬಕ್ಕೆ ನಮ್ಮಳ್ಳೀಗೇನು ವಾರೊಪ್ಪತ್ತೂ ಬೇಕಾಗ್ನಿಲ್ಲ.
ಆಸ್ಪತ್ರೆಲಿದ್ದ ಅವ್ವನ ಚಿಕ್ಪುಟ್ಟ ಔಷಧಿ ಖರ್ಚಿಗೂ ಅಪ್ಪಯ್ಯನತ್ರ ಕಾಸಿರ್ನಿಲ್ಲ. ಆಗೆಲ್ಲಾ ಅಪ್ಪಯ್ಯ ಗೌಡರ ಮನೆ ಮುಂದೆ ಕುಕ್ಕುರುಗಾಲಲ್ಲಿ ಕಾದು ಕುಂತಿರ್ತಿದ್ದ. ಒಂದೆರೆಡು ಸಲ ಪಂಚೆ ಮ್ಯಾಕೆತ್ತಿ ಚೆಡ್ಡಿ ಜೇಬಿಂದ ಕಾಸು ಎಣಿಸಿ ಕೊಟ್ಟಿದ್ದ ಗೌಡ್ರು, ಆಮೇಕಾಮೇಕೆ ಸಿಡಿಮಿಡಿಗುಟ್ಟೋರು. ಅಪ್ಪಯ್ಯ ಅಂತಾದ್ಕೇನು ನೊಂದ್ಕೋತಿರ್ನಿಲ್ಲ. ಗೌಡ್ರ ಕಳ್ಳು ಚುರ್ರನ್ಲಿ ಅಂತವ ನನ್ನೂ ಜತೀಗ್ ಕರ್ಕೋವೋಗ್ತಿದ್ದ. ನನ್ನ ದೆಸೆಲಿಂದ ಖರ್ಚಿಗೀಟು ಕಾಸಾಗ್ತಿತ್ತು. ಮೊದಲೆಲ್ಲಾ ನಾಕಾರ್ ನೋಟು ಸಿಗ್ತಿತ್ತು. ಆಮೇಕಾಮೇಕೆ ಚಿಲ್ರೇಗ್ ಬಂದು, ತಿಂಗಳಾಗೋರೊಳ್ಗೆ ಅದೂ ನಿಂತೋತು.
ಇದೆಲ್ಲಾ ಕಂಡಿದ್ದ ಊರಮಂದಿ ಅವ್ವನಿಂದ ʼಗಂಗಕ್ಕಾʼ ಪಟ್ಟ ಕಿತ್ಕಂಡು ʼಗಂಗೀʼ ಅಂತ ಕೊಟ್ಟಿದ್ರು. ಮನ್ಯಾಗೆ ಗಂಜಿಗೂ ಗತಿಗೆಟ್ಟು ನಿಂತಿದ್ದೊ. ನಂಗೆ ಸ್ಕೂಲ್ನಾಗೆ ಕೊಡ್ತಿದ್ದ ಸೀಯುಂಡೆ ಇಟ್ಟುಮಿದ್ದಿ ದಿನ ದೂಡ್ತಿದ್ದೋ. ಒಂದಿನ ನನ್ನ ಸ್ಕೂಲು ಬೆಲ್ ಒಡ್ಯೋವತ್ಗೆ ಅವ್ವ ಹುಣಸೆ ಮರಕ್ಕೆ ನೇಣಾಕಂಡ್ ಪ್ರಾಣ ಬಿಟ್ಟಿದ್ಳು. ಅವ್ಳು ಅದ್ಯಾವಾಗ ಹಗ್ಗ ಬಿಗುತ್ಕಂಡ್ಳೋ ಏನೋ, ಜನ ನೋಡೋವತ್ಗೆ ಸುಟ್ಟಗಾಯ್ದಿಂದ ಮೊದ್ಲೇ ವಿಕಾರಾಗಿದ್ದೋಳ ಮೈ ಇನ್ನೂ ಊದ್ಕಂಡು ನೊಣ ಮುತ್ಕತ್ತಿತ್ತು. ಯವ್ವಾ.., ಅದ್ನಂತ್ರೂ ನೋಡ್ ಬಾರ.
ಗೌಡ್ರೇ ಮುಂದ ನಿಂತು ಮಣ್ಮಾಡ್ಸುದ್ರು. ಕೈಕಟ್ಟಿ ಸುಮ್ಕೆ ಮೂಲೆಲಿ ನಿಂತಿದ್ದ ಅಪ್ಪಯ್ಯನ್ನ ʼನೀ ಯಾರಾ? ಯಾವೂರಾ?ʼ ಅಂತ್ಲೂ ಯಾರೂ ಕೇಳ್ನಿಲ್ಲ. ರಾತ್ರಿ ದೀಪ ಹಚ್ಚಿಟ್ಟ ಅಪ್ಪಯ್ಯ “ಎಲ್ಡ್ ಬಾಳಣ್ಣು ಮಡಗಿವ್ನಿ, ಉಂಡ್ ಮನಿಕ” ಅಂತೇಳಿ ಹೊತ್ನಂತೆ ಮನಿಕಂಡ. ನಂಗೆ ರಾತ್ರಿಯೆಲ್ಲಾ ಅವ್ವನ ಮೈಮ್ಯಾಕೆ ಆರ್ತಿದ್ದ ನೊಣಗಳದ್ದೇ ನೆಪ್ಪು. ಅದೇಟ್ ಕಿತ ಎಣುಸುದ್ರೂ ಒಟ್ಟು ಏಸ್ನೊಣ ಬಂದ್ವೆಂದು ಲೆಕ್ಕ ಸಿಗ್ತಿರನಿಲ್ಲ. ತಿರ್ತಿರ್ಗಿ ಅವ್ವನ ಎಣ ಮಲುಸಿದ್ ಜಾಗ ನೆಪ್ಪ್ಮಾಡ್ಕಂಡು ಮತ್ತ ಮೊದ್ಲಿಂದಾ ನೊಣಗೊಳ್ ಲೆಕ್ಕ ಇಡಕ್ಕ ಸ್ಯಾನೆ ಕಷ್ಟ್ ಬಿದ್ದೆ. ಲೆಕ್ಕ ಸಿಗ್ನೇ ಇಲ್ಲ, ಕಡೀಕೆ ನೊಣಗೊಳೆಲ್ಲಾ ಮಾಯ್ವಾಗಿ ಅವ್ವನ ಮಕವೇ ಕಾಣ್ಸಕ್‌ಸುರುವಾತು. ದಿಗ್ಲಾಗಿ ಗುಬ್ರಾಕಂಡ್‌ಮನಿಕಂಬುಟ್ಟೆ.
ಬೆಳ್ಗೆ ನಾ ಯಾಳೋ ವತ್ಗೇ ಅಪ್ಪಯ್ಯ ದನಗೋಳ ಮೈತಿಕ್ತಿದ್ದ. ಕಣ್ಣುಜ್ತಾ ನಿಂತಿದ್ದೋಳ್ಗೆ “ಬಿರ್ನೆ ಮಕ ತೊಳ್ಕಂಡು ಇಸ್ಕೂಲಿಗೊಂಡು, ನಾ ದೊಡ್ ಜಾತ್ರೆಗೋಗಿ ಹೊತ್ನಂತೆ ಬತ್ತೀನಿ” ಅಂದ. ನೆನ್ನೆ ಇನ್ನಾ ಅವ್ವನ್ನ ಮಣ್ಣುಮಾಡಿ ಬಂದೀವಿ. ಇವತ್ತು ಅಪ್ಪಯ್ಯನೂ ಮನ್ಯಾಗೆ ಇರದಿಲ್ಲಾ? ಸ್ಕೂಲಿಗೋದ್ರೆ ಎಲ್ರೂ ಅವ್ವನ ಸುದ್ದೀನೇ ಕೇಳ್ತಾರೆ “ಅದ್ಯಾಕಂಗ್ ಮಾಡ್ಕಂಡ್ಳು ನಿಮ್ಮವ್ವ? ನಿಮ್ಮಪ್ಪಯ್ಯ ಏನಾದ್ರೂ ಬೋತಾ?” ಅಂತ ಒಂದಾಗುತ್ಲೆ ಒಂದು ಮಾತು ಕೇಳ್ತಾರೆ. ಇದೆಲ್ಲಾ ನೆಪ್ಪಾಗಿ ನಾನೂ ಜಾತ್ರೆಗೆ ಬತ್ತೀನಂತ ಕಾಲು ಕಟ್ಟಿದ್ದೆ.
**
ಇನ್ನೇನು ಕತ್ಲು ಕವೀತು ಅನ್ನೋವತ್ಗೆ ಅಪ್ಪಯ್ಯನ ವ್ಯಾಪಾರ ಕುದ್ರುದಂಗೆ ಕಾಣುಸ್ತು. ಮೊದಲ್ನೇಕಿತ ಮುಖದಾಗೆ ರವಷ್ಟು ನಗೀನ್ ಎಳೆ ಅಂಗಂಗೇ ತೇಲೋದಂಗೆ. ಕಾಸು ಚಡ್ಡಿಜೇಬ್ಲಿ ಮಡ್ಗಿ, ದನಗೋಳ್ನ ಗೂಟದಿಂದ ಕಟ್ಟುಬಿಚ್ಚಿ ಒಪ್ಸಿ, ಹೆಗ್ಲ ಮೇಲಿದ್ದ ಬಿಳಿ ಚೌಕ ಇಳ್ಸಿ ವಣುಲ್ಲಿನ ಮ್ಯಾಕೆ ಹಾಸ್ದ. ಚೌಕದ ತುಂಬೆಲ್ಲಾ ಕೆಂಪುಕೆಂಪಾದ ರಕ್ತುದ್ ಕಲೆ. ಕೈ ಎಲ್ಲಾರ ಕೊಯ್ಕೊಂತಾ ಅಂತ ತಿರುಗ್ಸಿ ಮುರುಗ್ಸಿ ನೋಡ್ಕಂಡ. ಅಂಗೇನೂ ಇರನಿಲ್ಲ. ಅಂಗೀನ್ನೊಮ್ಮೆ ನೋಡ್ದ. ತೋಳಮ್ಯಾಕೆ ಭುಜದ್ ಮ್ಯಾಕೆ ರಕ್ತ. ಅರುಚ್ಚನಂಗೆ ಅಂಗಿ ಕಳಚಿ ಮೈಕೈ ನೋಡ್ಕಂಡ. ಯಾತರದ ಗಾಯವೂ ಬಾವೂ ಕಾಣ್ನಿಲ್ಲ.
ಇಟ್ಟಾಡಿದ್ದ ಹುಲ್ನಾಗೆ ಜಡೆ ಎಣೀತಾ ಕುಂತಿದ್ದ ನನ್ನ ಕಡೀಗೊಮ್ಮೆ ನೋಡ್ದ. ನಾನಾದ್ರೂವೆ ಕುಂಡೆಗೆ ಬಿದ್ದ ಹುಣಸೇ ಛಡಿ ಏಟ್ಗೆ ಚರ್ಮ ಕಿತ್ತು ರಕ್ತ ಜಿನುಗ್ತಿತ್ತಲಾ. ಅದ್ನ ಅಪ್ಪಯ್ಯನ ಹೆಗ್ಲ ಮ್ಯಾಲಿದ್ದಾಗ್ಲೇ ಚೌಕ ತಕ್ಕಂಡು ತೀಡಿದ್ದು ನೆಪ್ಪಾತು. ಬಾಯ್ಬುಟ್ಟು ಯೋಳ್ದೆ ಏನೂ ಅರೀದ ಕೂಸ್ನಂಗೆ ಪಿಳಿಪಿಳಿ ಕಣ್ಣು ಬಿಡ್ಕಂಡ್ ಕುಂತೆ. ಎಲ್ಡ್ ಚಣ ಎವೆಯಿಕ್ದೆ ನೋಡ್ದ ಅಪ್ಪಯ್ಯ ಮತ್ತ ಮಾರುದ್ದುದ್ದ್ ಚೌಕ ತಕ್ಕಂಡು ಕೊಡ್ವಿ ನಂಗೆ ನಡ ಸುತ್ಲೂ ಎಲ್ಡ್ ಸುತ್ತು ಸುತ್ತಿ ಜಟ್ಟಿಯಂಗೆ ಮೋಟುಗಚ್ಚೆ ಹಾಕಿ, ಹೊದ್ಯೋಕಂತ ತಂದಿದ್ದ ದುಪ್ಟೀನ ಮ್ಯಾಲೊಂದು ಲುಂಗಿಯಂಗೆ ಸುತ್ದ. ಪಕ್ದೂರ್ನ ಬಂಡಿವಯ್ಯನ್ ತಾವ ಮಾತಾಡ್ಕಂಬಂದು ಸರ್ರಾತ್ರೀನಾಗೇ ಕುಂಡ್ರುಸ್ಕಂಡು ಹೊಂಟ.
ಅಪ್ಪಯ್ಯ ನಂಗೆ ಚರ್ಮಸುಲ್ಯೋವಂಗೆ ಬಾರ್ಸಿದ್ದುಕ್ಕೆ ಸ್ಯಾನೆ ನೊಂದ್ಕಂಡೌನೆ ಅನುಸ್ತು. ಯಾವೊತ್ಲೂ ನನ್ನ ಎತ್ತಾಡ್ಸದಿರಾ ಅಪ್ಪಯ್ಯನ ಈ ಹೊಸ ರೀತೀಗೆ ಒಳೊಳ್ಗೆ ಖುಸಿ ಆತು. ಪಾಪಚ್ಚಿ ಅಪ್ಪಯ್ಯ ಅಂತ್ಲೂ ಅನುಸ್ತು.
ಊರು ಮುಟ್ದಾಗ ನನ್ನ ಮನ್ಯಾಗೇ ಬುಟ್ಟು ಅಪ್ಪಯ್ಯ, ಗೌಡ್ರ ಅಟ್ಟೀತಕ್ಕೋದ. ಮೊನ್ಮೊನ್ನೆ ಗೌಡ್ರ ಮಗ ಮಯೇಸಣ್ಣನ್ನ ಮದ್ವೆ ಮಾಡ್ಕಂದು ಬಂದಿತ್ತಲ್ಲಾ ಶೀಲಕ್ಕ, ಆವಕ್ನೇ ಮನೇತಕ್ ಬಂದು ನನ್ನ ಅವ್ರಟ್ಟೀತಕ್ ಕರ್ಕೊವೋತು. ಆಟೊತ್ಗೆ ಅಪ್ಪಯ್ಯ ಸುತ್ತಿದ್‌ಪಂಚೆಲ್ಲಾ ರಕುತ್ವೋ ರಕ್ತ. ಅದ ಬಿಚ್ದೇಟ್ಗೆ ತೊಡೆ ಸಂದ್ಲಿಂದ ಅಂಗೇ ಹರೀತ್ಲೇ ಇತ್ತು. ಅಕ್ಕ ಹಿತ್ಲುಗ್‌ಕರ್ಕೊವೋಗಿ ನೀರ್‌ಬುಟ್ಟು ತೊಳ್ಕ ಅಂದ್ಳು. ನಾ ತೊಳೀತ್ಲೇ ಇದ್ನಿ, ರಕ್ತ ಸುರೀತ್ಲೇ ಇತ್ತು. ಅಕ್ಕ ಬಿರ್ಬಿರ್ನೆ ಅವ್ಳ್ದೇ ಹಳೇ ಲಂಗವ ಹರ್ದು ಒಂದು ಒಳ್ಬಟ್ಟೆ ಒಳೀಕೆ ದೋಣಿಯಂಗೆ ಮಡುಚಿಟ್ಟು ಅದು ಉದ್ರೋಗದಂಗೆ ಅಡೀಲಿಂದ ಪಿನ್ನ ಹಾಕಿ “ಇಕಳ್ಳವ್ವಿ, ಹಾಕ್ಕ ಇದಾ” ಅಂತ ಕೊಡ್ತು. ರಾತ್ರೆ ಅಲ್ಲೇ ಮನಿಕಂಡಿದ್ದೆ. ಅಕ್ಕಾ ಅದೇನೇನೋ ಹೇಳುತ್ಲೇ ಇತ್ತು.
**
ದನ ಮಾರಿದ ಮ್ಯಾಕೆ ಅಪ್ಪಯ್ಯ ಗದ್ದೇನೂ ಮಾರ್ಕಂಡ್ನಂತೆ. ʼಸಣ್ಣೀರ ಮೂರೂ ಬಿಟ್ಟ ಊರೂ ಬಿಟ್ಟʼ ಅಂತ ಗೌಡ್ರಟ್ಟೀ ಮುಂದ ಜನ ಆಡ್ಕಳೌರು. ಆ ಮಾತ್ಗೆ ಗೌಡ್ರೂ ಎಲೆ ಅಡಿಕೆ ಕ್ಯಾಕ್ರುಸಿ ನಗಾಡೋರು. ನಾನು ಯಾವಾಗೂನೂ ಶೀಲಕ್ಕನ ಜೊತ್ಗೇ ಇರ್ತಿದ್ದೆ. ಅಕ್ಕ ಬಿಮ್ಮನ್ಸೆ ಅಂತ ಎಲ್ರೂ ಸಡಗ್ರ ಮಾಡ್ತಿದ್ರು. ಮನೆ ಕೆಲ್ಸುಕ್ಕೆ ಆಳಾಯ್ತದೆ ಅಂತ ಗೌಡ್ತೌನೋರು ನನ್ನ ಅಲ್ಲೇ ಮಡಿಕ್ಕಂಡಿದ್ರು. ಶೀಲಕ್ಕ ಇಲ್ಲೇ ನೀರಾಕಂತು. ಆಮ್ಯಾಕೆ ಅವ್ರವ್ವ ಬಂದು ಬಾಣ್ತನುಕ್ಕ ಕರ್ಕೊವೋದ್ರು.
**
ನಂಗೆ ಒಂದ್ ವಾರ್ಲಿಂದ ಜರ, ಒಂದೇ ಸಮ್ಕೆ ವಾಂತಿ. ಜೊತ್ಗೆ ಅಳಾಂದ್ರೆ ಅಳ. ಅಪ್ಪಯ್ಯ- ಅವ್ವ ನೆಪ್ಪಾಗೋರು. ಊರ್ಲಿಂದ ಶೀಲಕ್ಕ ಮಗೀನೆತ್ಕಂಡು ಬಂತು. ನನ್ನ ನೋಡಕ್ಕ ಬಿರ್ನೆ ಬಂದ್ಬುಟದ ಅಕ್ಕಾ ಅಂತ ನಾ ತಿಳ್ಕಂಡ್ನಿ. ಗಾಡಿ ಬಂದು ನಿಂತೇಟ್ಗೆ ನಾನೇ ಓಡೋಗಿ ಮಗೀನ ನೋಡನ, ಆಡ್ಸನ ಅಂತಿದ್ನಿ. ಸುಡೋ ಮೈಯ್ಯ ಮ್ಯಾಕೆತ್ತಕ್ಕೂ ಆಗ್ದೇವೋತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ
ಅಕ್ಕ ಅಂಗ್ಳ ದಾಟಿ ನಡುಮನೆಗೆ ಬಂದೋಳೇ “ಎಲ್ಲವ್ಳೆ ಬ್ಯಾವರ್ಸಿ ಮುಂಡೆ” ಅಂತ ಅರ್ಚಂಡ್ಳು. ಕದ ಸರ್ಸಿ ಬಾನ್ದಕ್ವಾಣೆಲಿದ್ದ ನನ್ ನೋಡ್ದೋಳೇ ಮಗ ಕಂಕ್ಳಲ್ಲಿ ಇರುವಂಗೇ ಜಾಡ್ಸಿ ಒದ್ಲು. ಅವ್ಳು ಒದ್ದೇಟ್ಗೇ ಜರ ಬಂದ್ ನಳ್ತಿದ್ದ ನಾನು, ಧೂಳಿಡ್ದ್ ಕುಂತಿದ್ದ ಬಾನ ಒಂದೇ ತರ್ಕೆ ಬಿದ್ದೋದೋ.
“ಲೌಡಿ ಮುಂಡೆ ಈಗ ಎದೆ ಚಿಗ್ರುತಾದೆ, ನಂ ಗಂಡನ್ನ ಮಗ್ಲಲ್ಲಿ ಮನೀಕತಿಯೇನೇ ಚಿನಾಲಿ”
ಗೌಡ್ರು ಮನೇಲಿ ಇರ್ನಿಲ್ಲಾ. ಮಯೇಸಣ್ಣನೂ ಇದ್ದಂಕಾಣೆ.
“ನಾ ಮನೀಕಂತಿರ್ನಿಲ್ಲಾ, ಅಣ್ಣನೇ ಬಂದು ಮನಿಕಂತಿತ್ತು. ಯಾರ್ಗಾನಾ ಏಳುದ್ರೆ ನಿಮ್ಮವ್ವ ವೋದ್ಕಡೀಕೇ ನಿನ್ನೂ ಕಳುಸ್ಬುಡ್ತೀನಿ ಅಂತ ಎದುರ್ಸ್ತು” ಅಂತಂದೇಬುಟ್ಟೆ. ಅವ್ವೋರು ಬಾಯ್ ಮ್ಯಾಕೆ ಕೈಔರಿ “ಬಾಯಿ ಬುಟ್ರೆ ಒನ್ಕೆ ಗಿಡುವ್ಬುತೀನಿ ಬ್ಯಾವರ್ಸಿಮುಂಡೆ” ಅಂತ ಜುಟ್ಟಿಡ್ದು ಗುಂಜಾಡುದ್ರು.
ಶೀಲಕ್ಕನ ಅವ್ವ ಗೌಡ್ತೌವ್ವೋರನ್ನ ಕರ್ಕೊವೋಗಿ ಕಿವೀಲಿ ಏನೋ ಹೇಳುದ್ರು. ಚೀಲ್ದಿಂದ ಅದ್ಯಾತರುದ್ದೋ ಉಂಡೆ ತಕ್ಕಟ್ರು. ಮಗ ಒಂದೇ ಸಮ್ಕ ಅಳ್ತಿತ್ತು. ಶೀಲಕ್ಕ ಕೂದ್ಲ ಕೆದ್ರಿ ರಾಚಸಿ ಅಂಗೆ ಕಾಣೋಳು. ನಂಗೆ ಮಗ ಅಳಾದು ಕೇಳ್ಬಾರ. ಎತ್ಕಬೇಕು ಅಂತ ಸ್ಯಾನೆ ಆಸೆ ಆಗ್ತಿತ್ತು. ಅವ್ವೋರು ಆ ಉಂಡೆನ ಒಂದು ಗಳಾಸ್ ನೀರ್ಗಾಕಿ ಗೊಟ್ಕಾಸಿ ಕಲುಸಿ ನನ್ ಬಾಯಿ ತೆಗ್ಸಿ ಗಟಗಟಾಂತ ಊದ್ಬುಟ್ರು.
ನೆಲ ಸಾರ್ಸ ಸಗ್ಣೀ ನೀರ್ಗಿಂತ ಕಡೆಯಾಗಿತ್ತದು. ನಂಗೆ ವಾಂತಿ ಬರೋಂಗಾಗದು. ಅವ್ರು ಯೋಳ್ದಂಗೆ ಕೇಳ್ದೆವೋದ್ರೆ ಮತ್ತೆಲ್ಡು ಬೀಳ್ತದಂತ ಸುಮ್ನೆ ಕುಡ್ಕಂಡೆ ಅತ್ಗೆ.
**
ರಾತ್ರಿಯೆಲ್ಲಾ ಶೀಲಕ್ಕ ಜೋರಾಗಿ ಅಳಾದು, ತಲ್ತಲೆ ಚಚ್ಕೊಳದು, ಮಯೇಸಣ್ಣಂಗೆ ಗೌಡ್ರು ಹೊಡ್ಕೋಕ್ಕೋಗೋರು, ಅವ್ವೋರು “ನೀವು ಅದ್ರ ಅಮ್ಮನ್ನ ಮಡಿಕಂಡಿರ್ನಿಲ್ವೇ? ಅದ್ಕೇ ನಿಮ್ಮಗ್ನೂ ನಾ ಏನ್ ಕಮ್ಮಿ ಅಂತ ಗೂಟ ನಿಲ್ಸಕ್ಕೋಗೋನೆ” ಅಂತ ಗದ್ರಿ ಮಗನ್ನ ಬುಡುಸ್ಕಂಡ್ರು. ಬೀಗ್ತಿ ಮುಂದ ಮಾತು ಬೆಳುಸ್ಲಾರದಲೆ ಗೌಡ್ರೂ ಸುಮ್ಕಾದ್ರು.
ಆಮೇಕೆ ನಂಗೆ ಯಾರೂ ಯಾನೂ ಅನ್ನಿಲ್ಲ, ಆಡ್ನಿಲ್ಲ. ಪಾಪಚ್ಚಿ ಗೌಡ್ತೌವ್ವೋರೇ ಗಂಜಿ ಕಾಸಿ ಕೊಟ್ರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್
ಬೆಳ್ಗೆ ಕಣ್ಣು ಬಿಡೋಕ್ಕಾಗದಂಗೆ ಜಾಸ್ತಿ ಜರ ಅಮ್ರುಕಂತು. ಈ ಚಂದುದಾಗೆ ಹೊರಗ್‌ಬ್ಯಾರೆ ಆದೆ. ಏಟ್ ಬಟ್ಟೆ ಮಡುಗುದ್ರೂ ತೊಪ್ಪೆಯಾಗದು. ಕಳ್ಳು ಪಚ್ಚಿ ಎಲ್ಲಾ ಅಂಗೇ ಉದ್ರೋಯ್ತದೇನೋ ಅನ್ನುವಂಗೆ ಕಿಬ್ಬಟ್ಟೆ ನೋಯದು. ನಂಗೆ ಎದ್ದು ನಡ್ಯಾಕೂ ಆಯ್ತಿರ್ನಿಲ್ಲ. ಎಲ್ರೂ ಗಾಬ್ರಿ, ಗಡಿಬಿಡಿ ಮಾಡೋರೇಯಾ. ಗೌಡ್ರೇ ಮುಂದ ನಿಂತು ಆಸ್ಪತ್ರೆ ತೋರ್ಸಕ್ಕ ಗಾಡಿ ಕಟ್ಸುದ್ರು. ಗೌಡ್ತೌವ್ವೋರು ನನ್ನ ಕೈಯಿಡ್ಕಂಡ್ ಕರ್ಕಂಬಂದು ಗಾಡ್ಯಾಗ್ ಕುಂಡ್ರುಸುದ್ರು. ಶೀಲಕ್ಕಾ ಯಾತ್ಕೂ ಇರ್ಲೇಳೇ ಅಂತ ಒಂಜತೆ ಬಟ್ಟೆ, ಒಳಬಟ್ಟೇನೆಲ್ಲಾ ಒಂದು ಬ್ಯಾಗಿಗಾಕಿ ಗಾಡೀಲಿಡ್ತು. ನಂಗೆ ಅವ್ರ ಮಕ ಕಂಡು ʼಗೊಳೋʼ ಅಂತ ಅಳ ಬಂತು. ಗೌಡ್ರು, ಗೌಡ್ತವ್ವೋರು, ಶೀಲಕ್ಕಾ, ಅವ್ರವ್ವಾ ಎಲ್ಲಾ ಯೇಟೊಳ್ಳೆ ಜನಾ ಅಂತ. ಆ ಮಯೇಸಣ್ಣನ್ನ ಮಾತ್ರ ಬುಟ್ಟು. ಜರಕ್ಕ ನೆತ್ತಿ ಕಾದೆಂಚಾದಂಗಾಗಿತ್ತು. ಕಣ್ಣು ಬೆಂಕಿ ಕೆಂಡದಂಗ ಸುಡೋದು. ಆದ್ರಾಗೂ ಕಣ್ಣು ಮಯೇಸಣ್ಣನ್ನ ಹುಡುಕ್ತು. ಕಾಣಿಸ್ನಿಲ್ಲ. ಗಾಡಿ ಒಡ್ಯೋ ನಿಂಗಣ್ಣಂಗೆ ಗೌಡ್ರು ದುಡ್ಡು ಕೊಟ್ಟು “ಬಿರ್ನೆ ತೋರ್ಕೊಂಡ್ ಬಾರ್ಲಾ, ಮಳ್ಗಾಲ ಬ್ಯಾರೆ” ಅಂತಂದ್ರು. ಅದ್ಕೆ ನಂಗೆ ಅವ್ರಂದ್ರೆ ಸ್ಯಾನೆ ಇಷ್ಟ. ಅಪ್ಪಯ್ಯಂಗಿಂತ್ಲೂ ಒಸಿ ಜಾಸ್ತಿನೇ ಅನ್ನಿ.
**
ಗೋರ್ಮೆಂಟ್ ಆಸ್ಪತ್ರೆ ಪಕ್ಕದಳ್ಳೀಯಾಗೇ ಇದ್ರೂ ನಿಂಗಣ್ಣ ಗಾಡಿ ಒಡ್ಕೊಂಡು ಪ್ಯಾಟೆಗ್ ಬಂದಿದ್ದ. ಓ ನಂಗೇನೋ ದೊಡ್ದಾಗೇ ಆಗ್ಬುಟದೆ ಅಂತ ದಿಗ್ಲಾತು. ಆಸ್ಪತ್ರೆ ಬಾಗ್ಲಲ್ಲಿ ಗಾಡಿಂದ ನನ್ನ ಇಳ್ಸಿ “ನೀ ಒಳಕ್ಕೋಗಿ ಸಾಲಲ್ಲಿ ಕುಂತ್ಕಂಡಿರವ್ವಾ, ನಾ ದನುಕ್ಕೆ ಹುಲ್ಲಾಕ್ ಬತ್ತೀನಿ” ಅಂತಂದ. ನಾ ಒಳಕ್ಕೋದೆ. ಕುಂತ್ಕಂಡೆ. ನಿಂಗಣ್ಣ ಏಟೊತ್ತಾದ್ರೂ ಬರ್ನೇ ಇಲ್ಲಾ. ನಾನೂ ಜರದಾಗೇ ಒಳ್ಗೂ ಆಚ್ಕೂ ಸ್ಯಾನೆ ಓಡಾಡೋಡಾಡಿ ಸುಸ್ತಾಯ್ತು. ಆಮ್ಯಾಕೆ ಅಲ್ಲೇ ಎಲ್ಲೋ ಬಿದ್ದೋಗ್ಬುಟ್ನಂತೆ.
ಎಚ್ಚರಾಗೋದ್ರಾಗೆ ಯಾವ್ದೋ ಮಂಚದ್ ಮ್ಯಾಕೆ ಮನುಗ್ಸಿದ್ರು. ನಿಂಗಣ್ಣ ಎಲ್ಲಾ ಅಂತ ಕೇಳುದ್ಕೆ “ಯಾವ್ ನಿಂಗಣ್ನೂ ಕಾಣೆ, ಬೋರೈನೂ ಕಾಣೆ, ಮನಿಕ” ಅಂತು ಸಿಸ್ಟ್ರಕ್ಕ. ಆವಕ್ನೂ ಸ್ಯಾನೆ ಒಳ್ಳೇವ್ರು. ಪಾಪಚ್ಚಿ, ಔಷ್ದಿ ಮಾತ್ರೆಗೆ ನಂತಾವ ದುಡ್ಡಿರ್ನಿಲ್ಲಾಂತ ನಾ ಮನಿಕಂಡಿದ್ದಾಗ ವಾಲೆ ಬಿಚ್ಕಂಡಿದ್ರಂತ. ನಂಗೆ ಗ್ಯಾನೇ ಇರ್ನಿಲ್ಲ ಆ ಕಡೀಕೆ. ಅಕ್ಕನೇ ಯೋಳ್ತು. ಕಿವಿ ಮುಟ್ಕಂಡೆ. ಅವ್ವ ಆಸ ಪಟ್ಟು ನೆಪ್ಪಿಗಿರ್ಲಿ ಅಂತ ಒಟ್ಟೆಗಿಲ್ದೇವೋದಾಗ್ಲೂ ಬಿಚ್ಚುಸಾಕೆ ಬಿಡ್ದೆವೋಗಿದ್ದ ಕಿವಿಗುಂಡು ಅದು. ಆವಕ್ಕನ್ನ ನೋಡ್ದಾಗೆಲ್ಲಾ ನಂಗೆ ಶೀಲಕ್ನೇ ನೆಪ್ಪಾಗೋರು. ಕಡೀಕೂ ಶೀಲಕ್ಕನ್ ಮಗೀನ ನಾ ಆಡ್ಸಕ್ಕಾಗ್ನಿಲ್ಲಾಂತ ಅಳಾನೇ ಬತ್ತದೆ.
***
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗವು…
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ
ಮದುವೆಯಾಗಿ ಒಂದು ವರ್ಷದೊಳಗೆ ಹುಟ್ಟಿದ ಮುದ್ದಾದ ಮಗುವಿಗೆ ಮಹಾಭಾರತದ ತನ್ನ ಪ್ರೀತಿಯ ಪಾತ್ರಗಳಲ್ಲಿ ಒಂದಾದ ಚಿತ್ರಲೇಖೆಯ ಹೆಸರಿಟ್ಟಿದ್ದಳು ಪ್ರತಿಭಾ. ಅಂಥ ಮುದ್ದಾದ ಮಗುವನ್ನು ತೊರೆದು ಹೋದದ್ದೇಕೆ?
:: ದೀಪಾ ಹಿರೇಗುತ್ತಿ
ದೂರದ ಮುಂಬೈನಲ್ಲಿದ್ದ ಪ್ರತಿಭಾ ಮತ್ತೂ ಯಾರಿಗೂ ಗೊತ್ತು ಮಾಡದೇ ಇನ್ನೂ ದೂರದ ದಿಲ್ಲಿಗೆ ಓಡಿಹೋಗಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಬೆಂಗಳೂರಿಗೆ ಬಂದಿದ್ದಾಳೆ ಎಂಬ ವಿಷಯ ಅವಳ ತವರಿನಲ್ಲಿ ಯಾರಿಗೂ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ. ಅಕಾಸ್ಮಾತ್ ಗೊತ್ತಾದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳುವ ಪ್ರಶ್ನೆಯೂ ಇರಲಿಲ್ಲ. ಗಂಡ, ಅತ್ತೆ ಮತ್ತು ಎರಡು ವರ್ಷದ ಮಗಳನ್ನು ಬಿಟ್ಟು ತನ್ನ ಸುಖದ ಹಾದಿ ತಾನು ನೋಡಿಕೊಂಡವಳ ಬಗ್ಗೆ ಇಡೀ ಕುಟುಂಬದ ವಲಯದಲ್ಲೇ ಒಂದು ನಮೂನೆಯ ತಿರಸ್ಕಾರದ ಭಾವ ಮಡುಗಟ್ಟಿತ್ತು. ಅದು ಆಗಾಗ್ಗೆ ಮಾತಿನಲ್ಲಿ ನುಸುಳಿ, ಕೆಲವೊಮ್ಮೆ ಹೆಚ್ಚೇ ಆಗಿ ಹೊರಚೆಲ್ಲಿ ತಾವೆಷ್ಟು ಸಾಚಾಗಳು, ಸಹನಾಮಯಿಗಳು ಎಂಬ ಕ್ಷಣಿಕ ಆತ್ಮತೃಪ್ತಿಯನ್ನು ಕುಟುಂಬದ ಕೆಲವು ಹೆಂಗಸರಿಗೆ ಕೊಟ್ಟು ಹೋಗುತ್ತಿದ್ದುದ್ದನ್ನು ಬಿಟ್ಟರೆ ಅವರೆಲ್ಲರ ಪಾಲಿಗೆ ಆಕೆ ಇದ್ದೂ ಸತ್ತಂತಾಗಿದ್ದಳು. ಅಸಲಿಗೆ ಪ್ರತಿಭಾಳ ಬಗ್ಗೆ ಯಾರಿಗೂ ಇತ್ತೀಚಿನ ಮಾಹಿತಿ ಇರಲೂ ಇಲ್ಲ. ಆದರೆ ಈ ಬಾರಿ ಅವಳ ತವರಿನ ದೊಡ್ಡ ಕುಟುಂಬದ ಒಂದೊಂದು ನರಹುಳುವಿಗೂ ಅವಳ ಬರುವಿಕೆಯ ಮಾಹಿತಿ ಇತ್ತು. ಅವಳ ಬರುವಿಕೆಯ ಬಗೆಗಿನ ಅಚ್ಚರಿಗಿಂತ ವಾಟ್ಸಾಪ್ ಗುಂಪಿನಲ್ಲಿ ಯಾವಾಗಲೂ ಗುಂಪಿಗೆ ಸೇರದ ಪದದಂತೆ ಇರುವ, ಒಂದೇ ಒಂದು ಸಂದೇಶವನ್ನೂ ಕಳಿಸದ ಚಿತ್ರಲೇಖಾ ಈ ಮಾಹಿತಿ ಒದಗಿಸಿದವಳು ಎನ್ನುವುದು ಇನ್ನಷ್ಟು ಸೋಜಿಗಕ್ಕೆ ಕಾರಣವಾಗಿತ್ತು.
“ಕ್ಷಮಿಸು ಎನ್ನಲಾರೆ. ಕ್ಷಮೆಗೆ ನಾನು ಅರ್ಹಳಲ್ಲ ಎಂಬುದು ನಿನಗೆ ಗೊತ್ತಿದೆ. ಇಷ್ಟು ದಿನ ಅನಿವಾರ್ಯವಾಗಿ ತಡೆದುಕೊಂಡಿದ್ದೆ. ಇವತ್ತು ಚಿತ್ರಲೇಖಾ ಎನ್ನುವ ಹೆಸರನ್ನು ಫೇಸ್‍ಬುಕ್‍ನಲ್ಲಿ ಹುಡುಕಿದೆ. ನಿನ್ನ ಡಿಪಿ ನಾನೇ ತೆಗೆಸಿದ್ದ ನಿನ್ನ ಕೆಂಪಂಗಿಯ ಫೋಟೋ ಎಂಬುದನ್ನು ನೋಡಿ ಖುಶಿಯಿಂದ ನನ್ನ ಹೃದಯದ ಬಡಿತ ನಿಂತೇ ಹೋದಂತಾಯಿತು. ಆ ಫೋಟೋ ನೀನು ಹಾಕಿಕೊಂಡಿರುವುದಕ್ಕೆ ಹುಚ್ಚು ಧೈರ್ಯದಿಂದ ಈ ಸಂದೇಶ ಕಳುಹಿಸುತ್ತಿದ್ದೇನೆ. ನಾನಿಟ್ಟ ಹೆಸರನ್ನು ಹಾಗೆಯೇ ಇಟ್ಟುಕೊಂಡಿರುವುದಕ್ಕೆ ಥ್ಯಾಂಕ್ಸ್. ನಿನ್ನನ್ನು ಎದುರಿಸುವ ಧೈರ್ಯವಿಲ್ಲದಿದ್ದರೂ ಒಂದೇ ಒಂದು ಸಲ ನಿನ್ನನ್ನು ನೋಡಿ ಹೋಗುವ ಆಸೆ. ನಾನು ಒಂದು ತಿಂಗಳ ಮಟ್ಟಿಗೆ ಬೆಂಗಳೂರಿನಲ್ಲಿ ಇರುತ್ತೇನೆ. ದಯವಿಟ್ಟು ಉತ್ತರಿಸು” ಎಂಬ ಸಂದೇಶವೊಂದು ಮಧು ಎಂಬ ಹೆಸರಿನ, ಪ್ರೊಫೈಲ್ ಚಿತ್ರ ಇಲ್ಲದ, ಮ್ಯುಚುವಲ್ ಫ್ರೆಂಡ್ಸ್ ಯಾರೂ ಇಲ್ಲದ ಹೊಸ ಫೇಸ್‍ಬುಕ್ ಅಕೌಂಟ್‍ನಿಂದ ತನ್ನ ಮೆಸೆಂಜರಿಗೆ ಬಂದಾಗ ಗೊಂದಲಕ್ಕೊಳಗಾದ ಚಿತ್ರಲೇಖಾ ಮರುಕ್ಷಣವೇ ಅದು ತನ್ನ ಹೆತ್ತ ತಾಯಿಯ ಸಂದೇಶ ಎಂಬುದು ಅರಿವಿಗೆ ಬಂದು ಕೋಪದಿಂದ ಉರಿಯುತ್ತಲೇ ಹಿಂದೆ ಮುಂದೆ ಯೋಚಿಸದೇ ಅದರ ಸ್ಕ್ರೀನ್‍ಶಾಟ್ ತೆಗೆದು ತನ್ನ ಫ್ಯಾಮಿಲಿ ಗುಂಪಿಗೆ ಹಾಕಿಬಿಟ್ಟಿದ್ದಳು. ದೊಡ್ಡಮ್ಮಂದಿರು, ಚಿಕ್ಕಮ್ಮ, ಮಾವಂದಿರು, ಅವರ ಮಕ್ಕಳು ಎಲ್ಲರೂ ಇದ್ದ ಆ ಗುಂಪಿನಿಂದ, ಮತ್ತೆ ಅವರವರ ಕಸಿನ್‍ಗಳಿಗೆ, ಅವರು ಮತ್ತೊಬ್ಬರಿಗೆ ಹೀಗೆ ಆ ಸ್ಕ್ರೀನ್‍ಶಾಟ್ ಪ್ರತಿಭಾಳ ಇದ್ದಬದ್ದ ಸಂಬಂಧಿಕರ ಮೊಬೈಲುಗಳೆಲ್ಲವಕ್ಕೂ ಹೋಲ್ಸೇಲಾಗಿ ತಲುಪಿ ಹೊಸ ಚರ್ಚೆಗೆ ಕಾರಣವಾಗಿತ್ತು. ಕಂಬಳಿಹುಳುವನ್ನು ನೋಡಿದರೆ ಹೇಗೆ ಮೈ ಮನಸ್ಸು ಮುರುಟಿದಂತಾಗುತ್ತದೆಯೋ ಅದೇ ರೀತಿ ನೆಂಟರಿಷ್ಟರೂ ತನ್ನ ಹೆಸರು ಕೇಳಿದರೆ ಮುಖ ಹಿಂಡುತ್ತಾರೆಂಬುದು ಪ್ರತಿಭಾಳಿಗೂ ಗೊತ್ತಿಲ್ಲದ ವಿಚಾರವೇನೂ ಆಗಿರಲಿಕ್ಕಿಲ್ಲ ಎಂಬುದನ್ನು ಊಹಿಸಬಹುದಾಗಿದ್ದರಿಂದ ಇಷ್ಟು ನಾಚಿಕೆ ಬಿಟ್ಟು ಮಗಳ ಮುಖ ನೋಡಬೇಕೆಂದು ಮೆಸೇಜ್ ಮಾಡಿದ ಅವಳ ಭಂಡ ಧೈರ್ಯದ ಬಗ್ಗೆಯೇ ಎಲ್ಲರೂ ಈಗ ಚರ್ಚಿಸುತ್ತಿದ್ದರು.
ಇವರೆಲ್ಲ ಹೀಗೆ ಯಾರೋ ತಮ್ಮ ಕೈಕಟ್ಟಿಹಾಕಿ, ಬೆನ್ನೊಳಗೆ ಹಿಮದ ತುಂಡು ಹಾಕಿದಂತೆ ಆಡುತ್ತಿರುವ ಹೊತ್ತಿನಲ್ಲಿಯೇ ಬೆಂಗಳೂರಿನ ಐಶಾರಾಮೀ ಹೋಟೆಲೊಂದರ ಈಜುಕೊಳದ ಪಕ್ಕದ ಈಸಿಚೇರಿನಲ್ಲಿ ಕೂತು ಲ್ಯಾಪ್‍ಟಾಪಿನಲ್ಲಿ ಚಿತ್ರಲೇಖಾಳ ಬಾಲ್ಯದ ಡಿಪಿಯನ್ನೂ ಅವಳು ನಾಲ್ಕು ವರ್ಷದ ಹಿಂದೆ ಪೋಸ್ಟ್ ಮಾಡಿದ್ದ ಅರ್ಧಮರ್ಧ ಕಾಣುವ ಮುಖದ ಫೋಟೋವನ್ನೂ ತದೇಕಚಿತ್ತದಿಂದ ನೋಡುತ್ತ ಕುಳಿತಿದ್ದ ಮಧುವಿನ ಕಣ್ಣೆದುರು ಪ್ರತಿಭಾ ಎಂಬ ಹೆಸರಿನ ತನ್ನ ಬದುಕು ಯಾವುದೋ ಅಪರಿಚಿತವೆನ್ನಿಸುವ ಹುಡುಗಿಯ ಬದುಕಿನಂತೆ, ಪೂರ್ವಜನ್ಮದ ನೆನಪಿನಂತೆ, ಚಲನಚಿತ್ರದ ದೃಶ್ಯಗಳಂತೆ ಹಾದು ಹೋಗುತ್ತಿತ್ತು.
ಹಾಗೆ ನೋಡಿದರೆ ಪ್ರತಿಭಾಳ ಕುಟುಂಬದ ಹಿನ್ನೆಲೆ ಭರ್ಜರಿಯಾದದ್ದೇ. ಪ್ರತಿಭಾಳ ಮುತ್ತಜ್ಜನ ಮೂಲ ಉತ್ತರ ಕರ್ನಾಟಕದ ಒಂದು ಸಂಸ್ಥಾನ. ಇರುವೆಗಳ ತಂಡದ ದಾಳಿಗೆ ಸಿಕ್ಕ ಮುಷ್ಠಿ ಸಕ್ಕರೆ ಕ್ಷಣಾರ್ಧದಲ್ಲಿ ಮಾಯವಾಗುವಂತೆ ದುರದೃಷ್ಟವಶಾತ್ ಹತ್ತಾರು ಕಾರಣಗಳಿಂದ ಅವರ ಆಸ್ತಿಯೆಲ್ಲ ಕರಗಿ ಜೀವನೋಪಾಯಕ್ಕಾಗಿ ಪ್ರತಿಭಾಳ ಅಜ್ಜ ಮಲೆನಾಡಿನ ಹಳ್ಳಿಯೊಂದರಲ್ಲಿ ಬಂದು ನೆಲೆಸಬೇಕಾದ ಪ್ರಸಂಗ ಬಂದೊದಗಿತ್ತು. ದೊಡ್ಡ ಕುಟುಂಬವನ್ನು ಸಾಕಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಹಾಸಿಗೆ ಯಾವಾಗಲೂ ಗಿಡ್ಡವೇ. ಒಂದು ಸಲ ತಲೆ ನೆಲದ ಮೇಲಾದರೆ ಇನ್ನೊಂದು ಸಲ ಕಾಲು. ಪ್ರತಿಭಾಳ ಅಪ್ಪ ಅಮ್ಮನಿಗೂ ಇಬ್ಬರು ಗಂಡುಮಕ್ಕಳು, ಐದು ಹೆಣ್ಣುಮಕ್ಕಳು. ಹೆಸರಿಗೆ ಸಂಸ್ಥಾನದ ಮನೆತನ, ತಿನ್ನಲು ಅನ್ನಕ್ಕೆ ತತ್ವಾರ. ಹೆಣ್ಣು ಮಕ್ಕಳಿಗೆ ಯೋಗ್ಯ ಗಂಡನ್ನು ಹುಡುಕುವ ಆಸೆ ಇದ್ದರೂ ಅದು ನನಸಾಗುವ ಪ್ರಶ್ನೆಯೇ ಇಲ್ಲ. ಗಂಡು ಸಿಕ್ಕಿದ್ದೇ ತಡ ಎನ್ನುವಂತೆ ಮದುವೆ ಮಾಡಿ ಹುಡುಗಿಯರನ್ನು ದಾಟಿಸುವುದೇ ಅಪ್ಪ ಅಣ್ಣ ತಮ್ಮಂದಿರ ಕೆಲಸವಾಗಿತ್ತು. ಮೂರನೇ ಮಗಳಾದ ಪ್ರತಿಭಾ ಮುಂಬಯಿಯಲ್ಲ್ಲಿ ನೆಲೆಸಿದ್ದ ದೂರದ ಸಂಬಂಧದ ನೆಂಟರ ಹುಡುಗನ ಹೆಂಡತಿಯಾದದ್ದು ಹಾಗೆ. ಪಿಯುಸಿ ಮುಗಿಸಿ ಡಿಗ್ರಿಗೆ ಹೋಗುವ ಆಸೆಯಿದ್ದರೂ ಬಡತನದಿಂದ ಓದಲಾಗದೇ ಮನೆಯಲ್ಲಿಯೇ ಇದ್ದ ಪ್ರತಿಭಾ ಮಾತಿನ ಮಲ್ಲಿ. ಕಲ್ಲನ್ನೂ ಮಾತಾಡಿಸುವವಳು, ವಟವಟಸುಬ್ಬಿ ಎಂದೆಲ್ಲ ಅವಳ ಅಡ್ಡ ಹೆಸರು. ‘ಪ್ರತಿಭಾಂದು ಮರದ ಬಾಯಿಯಾಗಿದ್ದರೆ ಯಾವತ್ತೋ ಒಡೆದು ಹೋಗುತ್ತಿತ್ತು’ ಎಂದು ಹತ್ತಿರದವರೆಲ್ಲ ತಮಾಷೆ ಮಾಡುವುದೇ ಮಾಡುವುದು. ಒಂದು ಹೊತ್ತು ಊಟವಿಲ್ಲದಿದ್ದರೂ ತೊಂದರೆಯಿಲ್ಲ ಅವಳಿಗೆ ಮಾತು ಬೇಕು. ಅವಳಿಗೆ ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಒಂದು ಅಂಕದ ಉತ್ತರಕ್ಕೆ ಆಸ್ಪದವೇ ಇಲ್ಲ. ಎಲ್ಲ ಹತ್ತು ಅಂಕಗಳ ದೀರ್ಘ ಉತ್ತರಗಳೇ! ಇಂತಹ ಚಿನಕುರಳಿಯಂತಹ ಹುಡುಗಿಗೆ ಭಾಷೆ ಬಾರದ ಹೊಸ ಊರೇ ಎಂದು ತಾಯಿ ಕಣ್ಣೀರು ಹಾಕಿದ್ದರು. ಆದರೆ ಮನೆಯಿಂದ ಬಲುದೂರ ಬಂದಿದ್ದರ ಬಗ್ಗೆ ಪ್ರತಿಭಾಳಿಗೆ ಬೇಸರವಿರಲಿಲ್ಲ, ಮನೆಯ ಜನರನ್ನು ಬಿಟ್ಟರೆ ಬೇರೆ ಮನುಷ್ಯರ ಮುಖವನ್ನು ನೋಡುವುದೇ ಅಪರೂಪವಾಗಿದ್ದ ಕಾಡಿನ ನಡುವಿನ ಮನೆಯಿಂದ ಮುಂಬಯಿಯ ಜನಾರಣ್ಯಕ್ಕೆ ಹೋಗುವುದು ಅವಳಿಗೆ ಖುಶಿಯೇ ಆಗಿತ್ತು. ಆದರೆ ಮದುವೆಯ ದಿನವೂ ಒಂದೂ ಮಾತಾಡದ ಗಂಡನ ಬಗ್ಗೆ ಅವಳಿಗೆ ಮುನಿಸಿತ್ತು. ಆ ಮುನಿಸು ಹತಾಶೆಯಾಗಿ ಬದಲಾದದ್ದು ಮುಂಬೈಗೆ ಬಂದ ಮೇಲೆ! ತನ್ನ ಅಣ್ಣನ ಹಾಗೆ ಬಹಳ ಶಾಂತ ಸ್ವಭಾವದವನಿರಬೇಕು, ತನ್ನಂತೆ ಅವನಿಗೂ ಸಂಕೋಚವಿರಬೇಕು ಎಂದುಕೊಂಡಿದ್ದ ಪ್ರತಿಭಾಗೆ ಗಂಡ ಕಿವುಡ ಮೂಕ ಎಂದು ಗೊತ್ತಾದ ಮೇಲೆ ಅವಳÀ ಕನಸಿನಲೋಕ ಇಸ್ಫೀಟಿನ ಎಲೆಗಳ ಮನೆಯಂತೆ ಕುಸಿದು ಬಿದ್ದಿತ್ತು! ಮಾಡುವುದಾದರೂ ಏನನ್ನು? ಹೇಳುವುದಾದರೂ ಯಾರಿಗೆ? ಹೇಗೋ ಕಷ್ಟಪಟ್ಟು ಟ್ರಂಕ್‍ಕಾಲ್ ಮಾಡಿ ಯಾರದೋ ಮನೆಗೆ ವಿಷಯ ತಿಳಿಸಿ ಅಪ್ಪ ಅಣ್ಣಂದಿರಿಗೆ ಹೇಳಲು ಹೇಳಿದ್ದಳು, ಪತ್ರವನ್ನೂ ಬರೆದು ಹಾಕಿದ್ದಳು. ನೂರಾರು ಮೈಲಿ ದೂರವಿರುವ ಅಪ್ಪ ಅಣ್ಣಂದಿರು ನೋಡಲೂ ಬರಲಿಲ್ಲ, ಕನಿಷ್ಠ ಒಂದು ಪತ್ರವನ್ನೂ ಹಾಕಲಿಲ್ಲ. ತನ್ನ ಬದುಕೇ ಒಂದು ಮೂಕಿಚಿತ್ರವಾಗಿ ಬಿಟ್ಟಿತಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಬಹು ಕಷ್ಟಪಟ್ಟಳಾಕೆ. ಹಿಂದಿನ ಕಾಲದಲ್ಲಿ ಕಣ್ಣು ಕಟ್ಟಿ ಹೆಣ್ಣುಮಕ್ಕಳನ್ನು ಕಾಡಿಗೆ ಬಿಡುತ್ತಿದ್ದ ಕಥೆ ಪ್ರತಿಭಾಳ ವಿಚಾರದಲ್ಲಿ ನಿಜವಾಗಿತ್ತು. ಆದರೆ ಅವಳು ಏನೂ ಮಾಡುವ ಹಾಗಿರಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್
ಮೊದಲ ದಿನಗಳು ತಳಮಳ, ಅಳು, ಉಪವಾಸದಲ್ಲಿ ಕಳೆದರೂ ಕ್ರಮೇಣ ಕಾಲ ಕರುಣೆ ತೋರಿ ತಾನೇ ಮದ್ದಾಯಿತು. ಕಿವಿ ಕೇಳದಿದ್ದರೂ, ಬಾಯಿ ಬರದಿದ್ದರೂ ರವಿ ನೇಟುಪಾಟಾದ ದೇಹದ ಚೆಂದದ ಮುಖದ ಹುಡುಗ. ದಟ್ಟ ಹುಬ್ಬು ಜೇನುಗಣ್ಣು ನೇರ ಮೂಗು ತೆಳು ಮೀಸೆಯ ನಗು ಸೂಸುವ ಚೆಲುವ. ಇವಳು ಬಿಕ್ಕಳಿಸಿ ಅಳುವಾಗಲೆಲ್ಲ ಪಕ್ಕ ಕೂತು ಚಡಪಡಿಸುವ ಅವನ ಮೈಮನಸಿನ ಬಿಸುಪಿಗೆ ಇಪ್ಪತ್ತರ ಹುಡುಗಿ ಕರಗಿದಳು. ತಬ್ಬಿದ ಬಳ್ಳಿ ಹಬ್ಬಿಕೊಂಡು ಹೂ ಬಿಟ್ಟಿತು. ವರ್ಷದೊಳಗೇ ಹುಟ್ಟಿದ ಮುದ್ದಾದ ಹೆಣ್ಣುಮಗುವಿಗೆ ಮಹಾಭಾರತದಲ್ಲಿ ತನಗೆ ಇಷ್ಟವಾದ ಪಾತ್ರಗಳಲ್ಲೊಂದಾದ ಚಿತ್ರಲೇಖೆಯ ಹೆಸರಿಟ್ಟಿದ್ದಳು ಪ್ರತಿಭಾ. ಅಡೆತಡೆಗಳನ್ನು ಮೀರಿ ಬದುಕು ಹರಿಯುತ್ತಲಿತ್ತು. ನೀರಲ್ಲಿ ಮುಳುಗಿದ ವ್ಯಕ್ತಿ ಗಾಳಿಗಾಗಿ ಕಾತರಿಸುವಂತೆ ಹೊಟ್ಟೆಪಾಡೇ ದೊಡ್ಡದಾದಾಗ ಇತರ ಸಂಗತಿಗಳು ಹಿನ್ನೆಲೆಗೆ ಸರಿದವು. ಅತ್ತೆಯ ದುಡಿಮೆ ಮಗುವಿನ ಹಾಲುಪುಡಿಗೂ ಸಾಲದಾದಾಗ ಹೆರಿಗೆಯಾಗಿ ಆರು ತಿಂಗಳಾಗುತ್ತಿದ್ದಂತೆ ವಕೀಲರ ಕಛೇರಿಯೊಂದರಲ್ಲಿ ಸಹಾಯಕಿಯಾಗಿ ಸೇರಿಕೊಂಡಳು ಪ್ರತಿಭಾ. ಅತ್ತೆ ಹಪ್ಪಳ ಸಂಡಿಗೆ ಮಾಡಿ ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಆಗೆಲ್ಲ ಕಿವುಡ ಮೂಕರಿಗೆ ಶಾಲೆಗಳು ಹೆಚ್ಚಿಗೆ ಇರಲೂ ಇಲ್ಲ, ಜನರಿಗೆ ಅದರ ಮಹತ್ವ ಗೊತ್ತಿರಲೂ ಇಲ್ಲ. ಗೊತ್ತಿದ್ದರೂ ರವಿಯನ್ನು ಅಲ್ಲಿಗೆಲ್ಲ ಕಳಿಸುವ ಚೈತನ್ಯ ಇವರಿಗೆ ಇರಲೂ ಇಲ್ಲ. ಹಾಗಾಗಿ ತಮ್ಮ ಮಗನಿಗೆ ಮನೆಯಿಂದ ಹೊರಹೋಗಿ ಕೆಲಸ ಮಾಡಲು ಹೇಗೂ ಆಗುವುದಿಲ್ಲ ಎಂದು ಆಕೆ ರವಿಗೆ ಮನೆಯೊಳಗಿನ ಸಕಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಲು ಕಲಿಸಿಟ್ಟಿದ್ದರು. ಮುಂದೆ ಅದೃಷ್ಟವಿದ್ದರೆ ಮದುವೆ ಗಿದುವೆ ಆದರೆ ಹೆಂಡತಿ ಹೊರಗಡೆ ನಾಲ್ಕು ಕಾಸು ದುಡಿದರೆ ಇವನು ಈ ಕಡೆ ಮನೆ ನೋಡಿಕೊಳ್ಳಬಹುದಲ್ಲ ಎಂಬ ದೂರಾಲೋಚನೆಯ ಹೆಂಗಸಾಗಿದ್ದಳಾಕೆ. ಆದ ಕಾರಣ ಮನೆಯಲ್ಲಿ ಪ್ರತಿಭಾಗೆ ಮಗು ನೋಡಿಕೊಳ್ಳುವ ಕೆಲಸವೂ ಇರಲಿಲ್ಲ.
ಹಾಗಾಗಿ ಆಕೆ ಕೆಲಸದಿಂದ ಬಂದವಳೇ ಮನೆಯ ಪಕ್ಕದಲ್ಲಿ ಶಾರ್ಟ್‍ಹ್ಯಾಂಡ್ ಕಲಿಯಲು ಹೋಗುತ್ತಿದ್ದಳು. ಮೊದಲೇ ಚೆಲುವೆ, ಇದೀಗ ಕೆಲಸಕ್ಕೆ ಹೋಗಿ ನಾಲ್ಕು ಕಾಸು ದುಡಿವ ಆತ್ಮವಿಶ್ವಾಸದಿಂದಲೂ ಸರಳ ಅಲಂಕಾರದಿಂದಲೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಮೋಡದಿಂದ ಸುತ್ತುವರೆದಾಗ ಮಸುಕಾಗಿ ಕಾಣುವ ಚಂದ್ರ ನಿಚ್ಚಳ ಆಕಾಶದಲ್ಲಿ ವಿಶಿಷ್ಟವಾಗಿ ಕಾಣುವಂತೆ ಮಹಾನಗರದ ನಯನಾಜೂಕುಗಳನ್ನು ಕಲಿತು ಅದ್ವಿತೀಯವಾಗಿ ಕಾಣತೊಡಗಿದಳು. ಆಗತಾನೇ ಇಪ್ಪತ್ತೆರಡು ದಾಟಿದ ಹುಡುಗಿ ಮಗುವೊಂದರ ತಾಯಿ ಎಂದು ಆಣೆ ಮಾಡಿ ಹೇಳಿದರೂ ಯಾರೂ ನಂಬದ ಹಾಗಿದ್ದಳು. ಮೊದಲು ತನ್ನ ಪುಟ್ಟ ಹಳ್ಳಿಯಲ್ಲಿ, ನಂತರ ಮುಂಬಯಿಯ ಕೊಳಕು ಬೀದಿಯೊಂದರ ಇಕ್ಕಟ್ಟಾದ ಬಿಡಾರವೆಂಬ ಬಾವಿಯಲ್ಲಿ ಕಪ್ಪೆಯಂತೆ ಇದ್ದವಳಿಗೆ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ತನ್ನ ಕಛೇರಿಯ ಪಕ್ಕದ ಸಮುದ್ರದಂತೆ ಬದುಕು ದೊಡ್ಡದಾಗಿ ಕಂಡಿತ್ತು. ತನ್ನೊಳಗನ್ನು ಎಂದೂ ಮಾತಿನ ಮೂಲಕ ಸ್ಪರ್ಶಿಸಲಾಗದ, ಕೇಳುವ ಕಿವಿಯಾಗಿ ಸಾಂತ್ವನ ನೀಡಲಾಗದ ಗಂಡ, ಪೂರ್ತಿಯಾಗಿ ತಾನು ತನ್ನನ್ನೆಂದೂ ಅವನೆದುರು ತೆರೆದುಕೊಳ್ಳಲಾಗದ ವಾಸ್ತವ ಈಗೀಗ ಅವಳೆದುರು ಢಾಳಾಗಿ ಗೋಚರಿಸತೊಡಗಿತ್ತು. ಈ ವಾಸ್ತವದ ಬಿಸಿಲು ಸುಡಲಾರಂಭಿಸಿದ ಮೇಲೆ ಪ್ರತಿಭಾ ಒಂದೊಂದು ದಿನವನ್ನೂ ತಳಮಳದಿಂದ ಕಳೆಯಲಾರಂಭಿಸಿದಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗವು…
ತಾನಿನ್ನೂ ಖರೀದಿಸಬೇಕೆಂದುಕೊಂಡಿದ್ದ ವಸ್ತುವನ್ನು ಕಳೆದುಕೊಂಡ ಹಾಗೆ, ನೆನಪು ಮೂಡುವ ಮುನ್ನವೇ ಮಾಸುವ ಹಾಗೆ ಭ್ರಮಿಸಿ ಯೋಚಿಸಿ ನರಳಿ ತನ್ನ ತಲೆಬುಡವಿಲ್ಲದ ಯೋಚನೆಗೆ ತಾನೇ ಕಂಗೆಟ್ಟಳು. ಯೋಚಿಸಿ ಯೋಚಿಸಿ ತಲೆ ಸಿಡಿದು ಹೋಗಬಹುದೆಂದು ಅನ್ನಿಸಿದ ಕ್ಷಣವೊಂದರಲ್ಲಿ ಈಗ ನಡೆಯುತ್ತಿರುವ ಹಾದಿಯನ್ನು ಬಿಟ್ಟು ಬೇರೆ ಹಾದಿಯೆಡೆ ಹೊರಳಿಕೊಳ್ಳಲೂಬಹುದು ಎಂಬ ಯೋಚನೆ ಹುಟ್ಟಿಕೊಂಡಿತ್ತು. ಆದರೆ ತನ್ನನ್ನು ಹೊರದೂಡಿ ಮರೆತ ಹಾದಿಗೆ ಮರಳಲು ಅವಳು ತಯಾರಿರಲಿಲ್ಲ. ಅದಾದ ಕೆಲ ವಾರಗಳ ನಂತರ ಬಾಸ್ ದೆಹಲಿಯಲ್ಲಿ ಹೊಸ ಕಛೇರಿಯೊಂದನ್ನು ತೆರೆಯುವ ಮಾತಾಡುತ್ತಿದ್ದಾಗ ಕೇಳಿಸಿಕೊಂಡ ಅವಳಲ್ಲಿ ಹೊಸ ಕನಸೊಂದು ಮೊಳಕೆಯೊಡೆದಿತ್ತು. ಸಾಧ್ಯವಾದರೆ ತನ್ನನ್ನು ಹೊಸ ಕಛೇರಿಗೆ ಕಳಿಸುವಂತೆ ಒಂದು ಕೋರಿಕೆಯನ್ನು ಬಾಸ್ ಕಿವಿಗೆ ಹಾಕಿಯೂ ಇಟ್ಟಿದ್ದಳು. ಕೈಕಾಲು ಮೂಡದ ಆ ಅಸ್ಪಷ್ಟ ಕನಸಿಗಾಗಿಯೇ ಅವಳು ಇನ್ನಿಲ್ಲದ ಶೃದ್ಧೆಯಿಂದ ಶಾರ್ಟ್‍ಹ್ಯಾಂಡ್ ಟೈಪಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಳು. ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೂ ಹೋಗಿ ತಕ್ಕಮಟ್ಟಿಗೆ ಮಾತಾಡುವುದನ್ನೂ ಕಲಿತಳು, ಹೇಗೂ ಮರಾಠಿ, ಹಿಂದಿ ರೂಢಿಯಾಗಿತ್ತು. ಯುದ್ಧವಿಲ್ಲದ ಕಾಲದಲ್ಲೂ ಸೈನಿಕನೊಬ್ಬ ಕತ್ತಿವರಸೆಯ ತನ್ನ ಕೌಶಲ್ಯವನ್ನು ಸದಾ ಹೆಚ್ಚಿಸಿಕೊಳ್ಳುವಂತೆ, ಬೆಂಕಿಯಲ್ಲಿ ಬೆಂದು ಕತ್ತರಿಸಿಕೊಂಡು ಬಡಿಯಲ್ಪಟ್ಟು ಆಭರಣವಾದ ಚಿನ್ನ ಕೊಳ್ಳುವವರಿಗಾಗಿ ಕಾಯುವಂತೆ ದೆಹಲಿಯ ಕಚೇರಿಯ ಸುದ್ದಿ ಮತ್ತೆ ಯಾವಾಗ ಬಾಸ್ ಎತ್ತುತ್ತಾರೆಂದು ಎದುರು ನೋಡತೊಡಗಿದಳು.
ಭೂತವನ್ನು ಹೊತ್ತುಕೊಂಡು ತಾನು ಉಜ್ವಲ ಭವಿಷ್ಯವನ್ನು ಪ್ರವೇಶಿಸಲಾಗದೆಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಮತ್ತು ಮುಂಬಯಿ ಬಿಡುವವರೆಗೆ ಅತೀತ ತನ್ನ ಬೆನ್ನು ಬಿಡುವುದಿಲ್ಲ ಎಂದೂ ಅರಿವಿತ್ತು. ಅಷ್ಟೇ, ತನ್ನ ಕಥೆಯಲ್ಲಿ ಅತ್ತೆ, ಗಂಡ, ಮಗಳು, ತವರಿನವರು ಎಂಬೆಲ್ಲ ಪಾತ್ರಗಳನ್ನು ಇಟ್ಟುಕೊಳ್ಳುವ ಯಾವ ಇರಾದೆಯೂ ಪ್ರತಿಭಾಗೆ ಇರಲಿಲ್ಲ. ಏಕೆಂದರೆ ಅವಳು ಕನಸಿದ್ದ ಬಯಸಿದ್ದ ಬದುಕು ಇವರು ಯಾರಿಗೂ ಸಂಬಂಧಿಸಿರಲಿಲ್ಲ. ಜತೆಗೆ ಮತ್ತೊಬ್ಬ ವಕೀಲರ ಕಚೇರಿಯ ಮೂಲಕ ಆಕೆ ತನ್ನ ಹೆಸರನ್ನು ಕಾನೂನುಬದ್ಧವಾಗಿ ಮಧು ಎಂದು ಬದಲಾಯಿಸಿಕೊಂಡು ಒಂದು ಪುಟ್ಟ ಸ್ಥಳೀಯ ಮರಾಠಿ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಜಾಹೀರಾತು ಕೊಟ್ಟು ಅದನ್ನು ಜೋಪಾನವಾಗಿ ಕಾದಿಟ್ಟುಕೊಂಡಿದ್ದಳು. ಟ್ರ್ಯಾಕಿನಲ್ಲಿ ಓಡಲು ಸಿದ್ಧವಾಗಿ ನಿಂತ ಓಟಗಾರ್ತಿ ‘ರೆಡಿ ಸ್ಟಾರ್ಟ್’ ಎಂಬ ಆದೇಶಕ್ಕಾಗಿ ಕಾಯುತ್ತಿರುವಂತೆ ಆತಂಕಭರಿತ ಉದ್ವೇಗದಲ್ಲಿ ಪ್ರತಿಭಾ ತನ್ನ ಮುಂದಿನ ಹೆಜ್ಜೆಗಾಗಿ ತಾನೇ ಕಾಯುತ್ತಿದ್ದಳು.
ದೀಪಾವಳಿಗೆ ಎರಡು ದಿನ ಮುಂಚಿನಿಂದಲೇ ಪ್ರತಿಭಾ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಳು. ಮನೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಾನನ್ನು ಟ್ಯಾಕ್ಸಿಯಲ್ಲಿ ತೆಗೆದುಕೊಂಡು ಬಂದಳು. ಗಂಡನಿಗೆ ಅತ್ತೆಗೆ ಮಗಳಿಗೆ ನಾಲ್ಕು ನಾಲ್ಕು ಜತೆ ಬಟ್ಟೆ ತಂದಳು. ಜತೆಗೆ ಬೆಡ್‍ಶೀಟು, ಟವೆಲ್ಲುಗಳನ್ನೂ ತಂದಿಟ್ಟಳು. ಕರೆಂಟು ನೀರಿನ ಬಿಲ್ಲುಗಳನ್ನು ಮುಂಚಿತವಾಗಿ ಹೋಗಿ ಕಟ್ಟಿ ಬಂದಳು. ಇವಳು ಇಷ್ಟೆಲ್ಲ ಮಾಡುತ್ತಿರುವಾಗ ಅತ್ತೆ ಒಂದೇ ಸಮನೆ ಒಟಗುಡುತ್ತಿದ್ದರು, “ದುಡಿವಾಗ ನಾಕು ಕಾಸು ಉಳಿಸದೇ ಹೀಗೆ ಖರ್ಚು ಮಾಡಿದರೆ ಮುಂದೇನು ಗತಿ?”
ಅವತ್ತು ದೀಪಾವಳಿಯ ದಿನ. ಅವಳೇ ಎಲ್ಲರಿಗೂ ಹಬ್ಬದಡಿಗೆ ಮಾಡಿ ಬಡಿಸಿದಳು. ಮಗಳಿಗೆ ಹೊಸ ಬಟ್ಟೆ ತೊಡಿಸಿ ಖುಶಿ ಪಟ್ಟಳು. ಹತ್ತಿರದ ಸ್ಟುಡಿಯೋಗೆ ಹೋಗಿ ಮಗಳ ಫೋಟೋ ತೆಗೆಸಿ ಸಂಜೆಯೇ ತೊಳೆದು ಕೊಡಲು ಹೇಳಿದಳು. ಎಲ್ಲರಿಗೂ ಊಟ ಬಡಿಸಿಯಾದ ಮೇಲೆ ಮಗುವನ್ನು ಕಾಲ ಮೇಲೆ ಹಾಕಿಕೊಂಡು ಮಲಗಿಸುತ್ತಿದ್ದಾಗ ಗಂಡನೂ ಬಂದು ಇವಳನ್ನು ತಬ್ಬಿ ಹಿಡಿದು ಹೆಗಲಿಗೊರಗಿದ. ಪ್ರತಿಭಾಳ ಕಣ್ಣಿಂದ ಎರಡು ಹನಿಗಳುರುಳಿದವು. ಒಂದು ಕ್ಷಣ “ಈ ಕ್ಷಣದಲ್ಲಿಯೇ ಇದ್ದು ಬಿಡಲೇ” ಯೋಚಿಸಿದಳು. ಆದರೆ ಅದು ಆಗುಹೋಗದ ಮಾತೆಂಬುದು ಅವಳಿಗೂ ಗೊತ್ತಿದ್ದ ಕಾರಣ ಗಂಟಲೊಳಗೆ ಕಟ್ಟಿ ಬಂದ ಸಂಕಟವನ್ನು ಸದ್ದಾಗದಂತೆ ನುಂಗಿ ಒಂದು ದೀರ್ಘ ಉಸಿರೆಳೆದುಕೊಂಡು ಮಗಳ ಜತೆ ಗಂಡನ ತೋಳನ್ನೂ ಮೃದುವಾಗಿ ತಟ್ಟತೊಡಗಿದಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್
ಬೆಳಿಗ್ಗೆ ಇವರು ಏಳುವ ವೇಳೆಗಾಗಲೇ ತಡರಾತ್ರಿ ಬಿಡುವ ದೆಹಲಿಯ ರೈಲು ಬಹುದೂರ ತಲುಪಿತ್ತು. ಹುಡುಕುವುದಾದರೂ ಎಲ್ಲಿ? ಪ್ರತಿಭಾ ಕೆಲಸಮಾಡುವ ಕಚೆರಿಯ ವಿಳಾಸ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಮನೆಯಲ್ಲಿದ್ದ ಮದುವೆಯ ಒಂದಿಷ್ಟು ಫೋಟೋಗಳೂ ನಾಪತ್ತೆಯಾಗಿದ್ದವು. ಅವಳ ಫೋಟೋ ಆಗಲೀ ಕಾಗದಪತ್ರವಾಗಲೀ ಬಟ್ಟೆಬರೆಯಾಗಲೀ ಯಾವುದೂ ಇರಲಿಲ್ಲ. ಊರಿಗೆ ಫೋನ್ ಮಾಡಿದರೆ ತನ್ನೆಲ್ಲ ಫೋಟೋಗಳನ್ನು, ಕ್ಯಾಮರಾದ ರೋಲ್ ಸಮೇತ, ಕಾಪಿ ಮಾಡಿಸಿಕೊಡುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾಳೆ ಎಂದರು. ಚಾಣಾಕ್ಷ ಕಳ್ಳ ತನ್ನ ಯಾವುದೇ ಸುಳಿವು ಬಿಡದೆ ಇರಲು ತೋರುವ ಎಚ್ಚರಿಕೆಯನ್ನು ಎಲ್ಲದರಲ್ಲೂ ತೋರಿಸಿದ್ದಳು. ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ನದಿ ಹುಚ್ಚೆದ್ದು ದಿಕ್ಕು ಬದಲಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋದಂತೆ, ಹಳೆಯ ಕಥೆಯ ಪಾತ್ರಗಳ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲದೇ ಬರೆಯುತ್ತಿದ್ದ ಕತೆಯನ್ನು ಅರ್ಧಕ್ಕೇ ನಿಲ್ಲಿಸಿ ಹಾಳೆಯನ್ನು ಮುದ್ದೆ ಮಾಡಿ ಕಸದ ಬುಟ್ಟಿಗೆ ಬಿಸಾಕಿ ಹೊಸ ಕತೆ ಶುರು ಮಾಡಿದ ಕತೆಗಾರನಂತೆ, ಅತ್ತೆ, ಗಂಡ, ಮಗಳು, ಮನೆ ಎಲ್ಲವನ್ನೂ ಬಿಟ್ಟು ಪ್ರತಿಭಾ ಮುಂಬೈನ ಬೋರಿವಿಲಿಯ ಚಾಳಿನಿಂದ ನಾಪತ್ತೆಯಾಗಿದ್ದಳು.
ಲ್ಯಾಪ್‍ಟಾಪ್ ಮುಚ್ಚಿ ಕುರ್ಚಿಗೊರಗಿದಳು ಮಧು. ತನ್ನ ಅತೀತವನ್ನು ಯಾರೊಬ್ಬರಿಗೂ ಹೇಳದೇ ಇಪ್ಪತ್ನಾಲ್ಕು ವರ್ಷಗಳಿಂದ ಎದೆಯೊಳಗೇ ಇಟ್ಟುಕೊಂಡಿದ್ದಾಳಾಕೆ. ಪ್ರತಿಭಾ ಎನ್ನುವ ಹಳ್ಳಿಯ ಹುಡುಗಿ ಅವಳಿಗೇ ಅಪರಿಚಿತೆಯಾಗಿ ಬಹಳ ಕಾಲವಾಗಿದೆ. ಚಿತ್ರಲೇಖಾ ಎಂಬ ಕಳೆದುಹೋದ ಮುದ್ರೆಯುಂಗುರದ ನೆನಪೊಂದು ಇಲ್ಲದೇ ಹೋಗಿದ್ದರೆ ಪ್ರತಿಭಾ ಕಳೆದೇ ಹೋಗುತ್ತಿದ್ದಳೇನೋ! ದೆಹಲಿಯಲ್ಲಿ ಒಂದು ನೆಲೆ ಕಂಡುಕೊಂಡ ಮೇಲೆ ಮುಂಬೈಗೆ ಹೋಗಿ ಮಗಳನ್ನು ಕರೆದುಕೊಂಡು ಬರಬೇಕೆಂದಿದ್ದವಳ ಬದುಕಿನ ನಾಟಕದಲ್ಲಿ ರಜತನೆಂಬ ಪಾತ್ರ ಆಕಸ್ಮಿಕವಾಗಿ ಆಗಮಿಸಿ ಎಲ್ಲ ಹಿಂದುಮುಂದಾಗಿ ಹೋಯಿತು. ಅವಳು ಮುಂಬೈ ವಕೀಲರ ದೆಹಲಿಯ ಹೊಸ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಂಜೆಕಾಲೇಜಿನಲ್ಲಿ ಡಿಗ್ರಿ ಮಾಡುವಾಗ ಸಿಕ್ಕವನವ. ಅವನೂ ಪಕ್ಕದ ಸಂಜೆಕಾಲೇಜಿನಲ್ಲಿ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ. ಉತ್ತರಪ್ರದೇಶದ ಸಂಪ್ರದಾಯಸ್ಥ ಕುಟುಂಬದ ಹುಡುಗನಿಗೂ ಮಹಾರಾಷ್ಟ್ರದಿಂದ ಮಲತಾಯಿಯ ಕಾಟ ತಾಳದೇ ಓಡಿಬಂದ ಹುಡುಗಿಯೆಂದು ಹೇಳಿಕೊಂಡ ಮಧುಗೂ ಪ್ರೀತಿ ಹುಟ್ಟಿ ಮದುವೆಯೂ ಆಯಿತು. ಹಾಗಾಗಿ ಪ್ರತಿಭಾಗೆ ಮಧುವಿನ ಪಾತ್ರದ ಬಣ್ಣ ಕಳಚಲಾಗಲೇ ಇಲ್ಲ. ಹಾಗಂತ ಆಕೆಗೆ ಪ್ರತಿಭಾ ಮಧುವಾದ ಬಗ್ಗೆ ಹೆಮ್ಮೆಯಿಲ್ಲವೆಂದಲ್ಲ. ಆದರೆ ಆ ಬಣ್ಣದ ಆಳದಲ್ಲೆಲ್ಲೋ ಉಸಿರಾಡಲಾಗದೇ ಒದ್ದಾಡುತ್ತಿರುವ ಪ್ರತಿಭಾಳ ಬಗ್ಗೆ ಮಧುವಿಗೆ ಮರುಕ ಹುಟ್ಟುವುದಿದೆ. ಆಗಾಗ್ಗೆ ಚಿತ್ರಲೇಖಾಳೆಡೆಗಿನ ತನ್ನ ಕರ್ತವ್ಯದ ವೈಫಲ್ಯದ ತಪ್ಪಿತಸ್ಥ ಭಾವನೆಯಿಂದ ಸುಧಾರಿಸಿಕೊಳ್ಳಲಾಗದಷ್ಟು ಒದ್ದಾಡಿಬಿಡುವ ಪ್ರತಿಭಾಳನ್ನು ಸಂತೈಸಲಾಗದೇ ಮಧು ಕೂಡ ಕೊರಗುತ್ತಾಳೆ.
ರಜತನ ಸಣ್ಣ ಸ್ಟಾರ್ಟ್ ಅಪ್ ಬೇಗನೇ ವರ್ಷಕ್ಕೆ ಹತ್ತಾರು ಕೋಟಿ ವ್ಯವಹಾರ ಮಾಡುವಂತಾಯಿತು. ಮಧುವಿನ ಕಾಲ್ಗುಣದಿಂದಲೇ ಎಲ್ಲ ಎಂದು ಗಂಡ, ಗಂಡನ ಕುಟುಂಬದವರೆಲ್ಲರ ಅಂಬೋಣ. ಆಕೆಯೂ ಕಂಪನಿಯ ನಿರ್ದೇಶಕರಲ್ಲೊಬ್ಬಳು. ಒಮ್ಮೆಯಾದರೂ ಮುಂಬೈಗೆ ಹೋಗಿ ಮಗಳನ್ನು ಹುಡುಕಬೇಕು ಏನಾದರೂ ಕಥೆ ಕಟ್ಟಿ ತಾನೇ ತಂದುಸಾಕಬೇಕು ಎಂದೆಲ್ಲ ಅಂದುಕೊಂಡಿದ್ದು ಅದೆಷ್ಟೋ ಸಲ. ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಒಂದು ಎನ್‍ಜಿಓ ಕೂಡ ಶುರು ಮಾಡಿದ್ದಳು. ಆದರೆ ಒಂದು ಹೆಜ್ಜೆ ಪಕ್ಕಕ್ಕಿಟ್ಟರೂ ಗುಟ್ಟು ರಟ್ಟಾಗಿ ತಾನೇ ಕಟ್ಟಿಕೊಂಡ ಗಾಜಿನ ಮನೆಯಲ್ಲಿ ಬೆತ್ತಲಾಗುವ ಭಯ. ಹಾಗಾಗಿ ಯಾವ ಸಾಮಾಜಿಕ ಜಾಲತಾಣದಲ್ಲೂ ಅವಳಿಲ್ಲ. ಅವಳ ಎನ್‍ಜಿಓಗೆ ಪ್ರಶಸ್ತಿ ಬಂದಾಗಲೂ ಅವಳು ವೇದಿಕೆಗೆ ಹೋಗಲಿಲ್ಲ. ಕೇಳಿದರೆ ತನ್ನ ಮಲ ತಂದೆತಾಯಿಗೆ ಗುರುತು ಸಿಕ್ಕುವುದೇ ಬೇಡ ಎಂದಿದ್ದಳು. ಬತ್ತಿದ ಕೆರೆಯಲ್ಲಿ ಹೊಂಡ ತೋಡಿ ಹನಿಹನಿಯಾಗಿ ಒಸರುವ ನೀರಿಗಾಗಿ ತಾಳ್ಮೆಯಿಂದ ಕಾದು ಕೊಡ ತುಂಬಿಸಿಕೊಳ್ಳಲು ಯತ್ನಿಸುವ ಬರಗಾಲದೂರಿನ ಹೆಣ್ಣುಗಳಂತೆ ತನ್ನ ಮಗಳನ್ನು ಹುಡುಕಿ ಕರೆದುಕೊಂಡು ಬರಲು ದಶಕದಶಕಗಳ ಕಾಲ ಮಾಡಿದ ಪ್ರಯತ್ನ ಒಂದೇ ಎರಡೇ! ಸ್ವಂತ ಅಪ್ಪ ಅಮ್ಮನಂತೆ ಪ್ರೀತಿಸುವ ಅತ್ತೆ ಮಾವನಿಗೆ ಆಘಾತವಾಗಬಾರದೆಂದು ಎಷ್ಟೋ ಸಲ ಹೆಜ್ಜೆ ಹಿಂದಿಟ್ಟಳು. ಈ ಎರಡು ದಶಕದಲ್ಲಿ ಅವರೂ ಕೃಷ್ಣನ ಪಾದ ಸೇರಿ ಆಯಿತು. ತಾನೆಂದರೆ ದೇವತೆ ಎಂದುಕೊಂಡಿರುವ ರಜತನಿಗೆ ಸತ್ಯ ಹೇಳಿಬಿಡಲೇ ಎಂದು ತವಕಿಸುವ ನಾಲಿಗೆಯನ್ನು ಸಂಭಾಳಿಸುತ್ತ ಕತ್ತಿಯಂಚಿನ ಮೇಲೆ ನಡೆಯುವವಳಂತೆ ನಡೆದಳು. ಒಳಗೊಳಗೇ ನವೆಯುತ್ತಾ ನವೆಯುತ್ತಾ ಮೇಲ್ಗಡೆ ಚೆಂದದ ಚಿತ್ರದಂತೆ ಕಂಡರೂ ಆಗಾಗ್ಗೆ ಒಳಗೆ ಬಣ್ಣ ಕಲಸಿ ರಾಡಿಯಾದ ಅಸ್ತವ್ಯಸ್ತ ಕ್ಯಾನ್‍ವಾಸ್ ಆಗಿಬಿಡುವ ತನ್ನ ಬದುಕನ್ನು ನೆನೆದು ಮಧು ಅದೆಷ್ಟು ನಿಟ್ಟುಸಿರಿಟ್ಟಿದ್ದಳೋ. ಎಲ್ಲವೂ ತಾನು ಬಯಸಿದಂತೆಯೇ ಆಗಿದ್ದ ಬದುಕಿನಲ್ಲಿ ಚಿತ್ರಲೇಖಾಳ ಮುಗ್ಧ ಮುಖ ಒಮ್ಮೊಮ್ಮೆ ಎದೆಯಲ್ಲಿ ಹರಿತವಾದ ಚೂರಿಯನ್ನಾಡಿಸಿದಂತೆ ನೋಯಿಸುವುದು. ಮತ್ತು ಆ ಒಮ್ಮೊಮ್ಮೆ ದಿನದಲ್ಲಿ ಒಮ್ಮೆಯಾದರೂ ಬರುವುದು. ಇವತ್ತು ನಾಳೆ ಎಂದು ದಿನದಿನವೂ ಮಗಳನ್ನು ಹುಡುಕಲು ಯೋಚಿಸುವುದು ಮತ್ತೆ ಹಿಂಜರಿಯುವುದು ಮಾಡುತ್ತ ಭರ್ತಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಕರ್ನಾಟಕಕ್ಕೆ ಕಾಲಿಟ್ಟಿದ್ದಾಳೆ ಪ್ರತಿಭಾ. ಅದೂ ನಾಲ್ಕು ವರ್ಷ ಶ್ವಾಸಕೋಶಕ್ಕೆ ಸಂಬಂಧಿಸಿದ ಅಪರೂಪದ ಖಾಯಿಲೆಯಿಂದ ನರಳಿ ಇನ್ನಿಲ್ಲವಾದ ರಜತನ ಹದಿಮೂರನೇ ದಿನದ ಕ್ರಿಯಾಕರ್ಮವನ್ನು ಗೋಕರ್ಣದಲ್ಲಿಯೇ ಮಾಡಿಬರುತ್ತೇನೆಂದು ಹಠ ಹಿಡಿದು ಹತ್ತೊಂಭತ್ತರ ಹರಯದ ತನ್ನ ಏಕೈಕ ಪುತ್ರನನ್ನು ಕರೆದುಕೊಂಡು ಬಂದಿದ್ದಾಳೆ.
ಝೋಮು ಹಿಡಿದ ಕಾಲನ್ನು ತುಸುವೇ ಎತ್ತಿದರೂ ಉಂಟಾಗುವ ಸಹಿಸಲಸಾಧ್ಯವಾದ ಸಂಕಟದ ಹಾಗೆ, ಸಿಡಿಯುವ ತಲೆನೋವಿಗೆ ಯಾವ ಸದ್ದೂ ಹಿತವೆನಿಸದ ಹಾಗೆ, ಆಘಾತಗೊಂಡ ಮನಸ್ಸಿಗೆ ಏನೂ ಬೇಡೆನಿಸುವ ಹಾಗೆ, ಜ್ವರ ಬಂದ ನಾಲಿಗೆಗೆ ಯಾವುದೂ ರುಚಿಸದ ಹಾಗೆ, ಸ್ಲೇಟಿನ ತುಂಬ ಗೀಚಿದ ಮಗು ಬರೆಯಲು ಜಾಗವಿಲ್ಲವೆಂದು ಅಳುವಂತೆ ಚಿತ್ರಲೇಖಾ ಮೊಬೈಲ್ ಹಿಡಿದುಕೊಂಡು ಎಂದಿಗಿಂತ ಹೆಚ್ಚು ಮಂಕಾಗಿ ಕುಳಿತಿದ್ದಳು.
ಪ್ರತಿಭಾ ಮನೆ ಬಿಟ್ಟುಹೋಗಿದ್ದು, ಬಿಟ್ಟುಹೋದ ಮೇಲೆ ಏನಾಯಿತೆಂಬ ಯಾವ ನೆನಪೂ ಚಿತ್ರಳಿಗಿಲ್ಲ. ಅವಳಿಗೆ ನೆನಪಿರುವುದು ಮನೆ ಮನಸ್ಸು ತುಂಬಿದ್ದ ಮೌನ, ಮೌನ ಮತ್ತು ಮೌನ. ಮೊದಲೇ ಮುಂಬೈ ಮಹಾನಗರ. ಅವರವರ ತಾಪತ್ರಯವೇ ಅವರವರಿಗೆ. ಚಿತ್ರಳನ್ನು ಅಜ್ಜಿ ಮೂರು ವರ್ಷ ಹಾಗೂ ಹೀಗೂ ನೋಡಿಕೊಂಡರು. ಸದಾ ಕಣ್ಣೊರೆಸಿಕೊಳ್ಳುತ್ತ ಕೆಲಸ ಮಾಡುತ್ತಲೇ ಇರುತ್ತಿದ್ದ ಅಜ್ಜಿ, ಶೂನ್ಯವನ್ನೇ ದಿಟ್ಟಿಸುತ್ತಿರುತ್ತಿದ್ದ ಅಪ್ಪ ಇವರ ಜತೆ ಮಾತು ತುಟ್ಟಿಯಾಗಿದ್ದ ಮನೆಯಲ್ಲಿ ಐದು ವರ್ಷವಾಗುವವರೆಗೆ ಬೆಳೆದ ಅವಳಿಗೆ ಮಾತಾಡಲು ಬಂದಿದ್ದೇ ಒಂದು ಸೋಜಿಗ. ಕಿವಿ ಕೇಳದ ಚಿತ್ರಳ ಅಪ್ಪ ರಸ್ತೆ ಅಪಘಾತವೊಂದರಲ್ಲಿ ತೀರಿಕೊಂಡದ್ದೇ ತಡ, ಅಜ್ಜಿ ಹಾಸಿಗೆ ಹಿಡಿದವರು ಮತ್ತೆ ಮೇಲೇಳಲಿಲ್ಲ. ಯಾರೋ ದೂರದ ಸಂಬಂಧಿಕರು ಬಂದು ಐದು ವರ್ಷದ ಹುಡುಗಿಯನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮನೆಯಲ್ಲಿ ಒಂಟಿಯಾಗಿದ್ದ ಚಿತ್ರಲೇಖಾ ಒಮ್ಮೆಲೇ ಸಿಕ್ಕಿದ ನಲವತ್ತೂ ಚಿಲ್ಲರೆ ಮಕ್ಕಳ ಸಾಂಗತ್ಯದಿಂದ ಮತ್ತಷ್ಟು ಚಿಪ್ಪಿನೊಳಗೆ ಸೇರಿಕೊಂಡಳು. ನೀರೇ ಇಳಿಯದ ಗಂಟಲಲ್ಲಿ ಗಟ್ಟಿ ಚಕ್ಕುಲಿಯನ್ನು ಒಮ್ಮೆಲೇ ತುರುಕಿದಂತೆ ಚಡಪಡಿಸಿಹೋದಳು. ಅಮ್ಮನ ನೆನಪು ಇಲ್ಲದೇ ಹೋದರೂ, ತಂದೆಯ ಜತೆ ಅಂತಹ ಬಾಂಧವ್ಯ ಇರದಿದ್ದರೂ, ಅಜ್ಜಿಯ ನೆನಪು ಅವಳನ್ನು ಆಗಾಗ ಕಾಡುತ್ತಿರುತ್ತದೆ. ದಢೂತಿ ದೇಹದ ಅಜ್ಜಿ ಅಕ್ಕಿ, ಕುಂಬಳಕಾಯಿ, ಸಾಬೂದಾನಾ ಮುಂತಾದವುಗಳ ಸಂಡಿಗೆಗೆ ತಯಾರಿ ಮಾಡಿಕೊಂಡು ತಮ್ಮ ಮನೆಯೆದುರಿನ ಪುಟ್ಟ ಜಾಗದಲ್ಲಿ ಒಣಗಿಸಲು ಆಗದೇ ತುಸು ದೂರದಲ್ಲಿದ್ದ ಮನೆಯೊಂದರ ಟೆರೆಸ್ ಮೇಲೆ ಒಣಹಾಕಿ ಅವನ್ನು ಕಾಪಾಡಿಕೊಳ್ಳಲು ಪಡಬಾರದ ಪರಿಪಾಟಲು ಪಡುತ್ತಿದ್ದ ದೃಶ್ಯ ಸ್ಪಷ್ಟವಾಗಿಯೇ ಅವಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಮನೆಯವರು ಊರಲ್ಲಿ ಇಲ್ಲದಾಗ ಗೇಟಿಗೆ ಬೀಗ ಹಾಕಿರುತ್ತಿತ್ತು. ಅಂತಹ ಸಂದರ್ಭದಲ್ಲೊಮ್ಮೆ ಇನ್ನೊಬ್ಬರ ಮನೆಯ ಟೆರೆಸ್ ಮೇಲೆ ಹೋಗಲು ಅನುಮತಿ ಕೇಳಿ ಅವರು ಚೆನ್ನಾಗಿ ಬೈದು ಅಜ್ಜಿ ಮನೆಗೆ ಬಂದು ಕಣ್ಣೀರು ಹಾಕುತ್ತ ಗೋಳಾಡಿದ ನೆನಪೂ ಅವಳಿಗೆ ಮರೆತು ಹೋಗಿಲ್ಲ. ಹಗಲೆಲ್ಲ ಮೂಲೆ ಸೇರಿಕೊಂಡಿದ್ದು ಸಂಜೆಯಾದ ಕೂಡಲೇ ಕಾಡುವ ಒಂಟಿತನದ, ಅಸಹಾಯಕತೆಯ ಅನಾಥಭಾವವಲ್ಲ ಚಿತ್ರಲೇಖೆಯನ್ನು ಕಾಡುತ್ತಿರುವುದು. ಅದು ಪ್ರತಿ ಉಚ್ವಾಸ ನಿಚ್ವಾಸದಲ್ಲೂ ಬೆರೆತು ಹೋದ ತಾನೆಲ್ಲೂ ಸೇರದವಳು, ಎಲ್ಲಿಯೂ ನೆಲೆಯಿಲ್ಲದವಳೆಂಬ ಪರಕೀಯತೆಯ ಭಾವನೆ, ಕಬ್ಬಿನ ಹಾಲಿನೊಳಗಿನ ಸಿಹಿಯಂತೆ ಹಾಗಲಕಾಯಿಯ ಕಹಿಯಂತೆ ಬೇರ್ಪಡಿಸಲಾಗದೇ ಬೆರೆತು ಹೋದದ್ದು. ಈ ಬೆಸೆದುಹೋದ ಪರಕೀಯತೆಯೆಂಬ ಕಲ್ಪನೆಯೇ ಎಷ್ಟು ಪರಸ್ಪರ ವಿರುದ್ಧವಾದುದೆಂದು ಯೋಚಿಸಿ ಕ್ಷೀಣವಾಗಿ ಆಕೆ ತನ್ನಷ್ಟಕ್ಕೆ ತಾನು ನಗುವುದೂ ಉಂಟು. ತನ್ನ ಬಾಲ್ಯದ ನೆನಪಿನ ಕೌದಿಯ ಒಂದೇ ಒಂದು ಎಳೆಯಾದರೂ ಖುಶಿಯದ್ದು ಯಾಕಿಲ್ಲ ಎಂದು ಅವಳು ಆಗಾಗ ಕೇಳಿಕೊಳ್ಳುವುದಿದೆ. ಕೌದಿಯ ತುಂಬ ಸಂಕಟದ ಒದ್ದೆ ಎಳೆಗಳೇ ತುಂಬಿ ಹೋಗಿರುವುದರಿಂದ ಹಳೆಯ ನೆನಪುಗಳು ಅವಳನ್ನು ಎಂದೂ ಬೆಚ್ಚಗಾಗಿಸಿಲ್ಲ. ಪ್ರತಿಭಾ ಅದು ಹೇಗೆ ಗಟ್ಟಿ ಮನಸ್ಸು ಮಾಡಿ ತನ್ನನ್ನು ಬಿಟ್ಟು ಹೋದಳೆಂಬುದು ಅವಳಿಗೆ ಇಂದಿಗೂ ಅರ್ಥವಾಗದ ಸಂಗತಿ. ತಾಯಿಯ ಕುರಿತ ಉಕ್ತಿಗಳೆಲ್ಲ ಅದೆಷ್ಟು ಅತಿಶಯೋಕ್ತಿಯ ಮಾತುಗಳೆಂದು ಅನ್ನಿಸಿ ಬುಲ್‍ಶಿಟ್ ಎಂದುಕೊಳ್ಳುವಳು. ಹಾಗಾಗಿ ತಾಯಿಯ ಬಗ್ಗೆ ಯೋಚಿಸುವಾಗಲೆಲ್ಲ ಪ್ರತಿಭಾ ಎಂದೇ ಯೋಚಿಸುತ್ತಾಳೆಯೇ ಹೊರತು ಅಮ್ಮ ಎಂದು ಎಂದಿಗೂ ಮನಸಲ್ಲೂ ಹೇಳಿಕೊಂಡಿಲ್ಲ ಆಕೆ.
ಪ್ರತಿಭಾಳ ಅಕ್ಕನ ಮದುವೆಯಾಗಿ ಹದಿನೈದು ವರ್ಷವಾದರೂ ಮಕ್ಕಳಿಲ್ಲದೇ ದತ್ತು ತೆಗೆದುಕೊಳ್ಳಲು ಮಗುವನ್ನು ಹುಡುಕುತ್ತಿದ್ದಾಗ ಯಾರೋ ಈ ಹುಡುಗಿಯ ನೆನಪು ಮಾಡಿದರು. ಇವರು ಹೌದಲ್ಲ ಎಷ್ಟೆಂದರೂ ತಮ್ಮದೇ ರಕ್ತ, ಅಮ್ಮ ಮಾಡಿದ ಹಲ್ಕಾ ಕೆಲಸಕ್ಕೆ ಮಗಳೇನು ಮಾಡಿಯಾಳು ಎಂದು ಮಾತಾಡಿಕೊಂಡು ಹೋಗಿ ಹುಡುಕಿ ಅನಾಥಾಶ್ರಮದಲ್ಲಿದ್ದ ಚಿತ್ರಲೇಖೆಯನ್ನು ಅದು ಹೇಗೋ ಪತ್ತೆ ಮಾಡಿ ಅವಳ ಮುಲ್ಕಿ ಪರೀಕ್ಷೆ ಮುಗಿಯುವ ವೇಳೆಗೆ ಕರೆದುಕೊಂಡು ಬಂದರು. ಅಲ್ಲಿಗೆ ಅನಾಥಾಶ್ರಮದಲ್ಲಿ ಅವಳಿದ್ದುದು ಏಳು ವರ್ಷ. ಚಿತ್ರ ಹೂ ಅನ್ನಲಿಲ್ಲ, ಉಹೂ ಅನ್ನಲಿಲ್ಲ. ಕಾಡಿನ ನಡುವಿನ ಕಿರುದಾರಿ ಕರೆದುಕೊಂಡು ಹೋದತ್ತ ಹೋಗುವುದು ಬೇರೆ ದಾರಿಯೇ ಇಲ್ಲದವರ ಹಣೆಬರಹವೆಂದು ಅವಳು ನಿರ್ಧರಿಸಿಯಾಗಿತ್ತು. ಅನಾಥಾಶ್ರಮ ಬಿಟ್ಟು ಹೋಗಲು ಅವಳಿಗೆ ಬೇಜಾರೂ ಆಗಲಿಲ್ಲ, ಖುಶಿಯೂ ಆಗಲಿಲ್ಲ. ಏನೇ ಆದರೂ ದೊಡ್ಡಮ್ಮ ದೊಡ್ಡಪ್ಪನನ್ನು ಅಪ್ಪ ಅಮ್ಮ ಎಂದು ಕರೆಯಲು ಅವಳಿಗೆ ಆಗಲೇ ಇಲ್ಲ. ಬೆಂಗಳೂರಿನಲ್ಲಿ ಸಣ್ಣದೊಂದು ದರ್ಶಿನಿ ನಡೆಸುತ್ತಿದ್ದ ದೊಡ್ಡಪ್ಪ ದೊಡ್ಡಮ್ಮ ಅಂತಹ ಸ್ಥಿತಿವಂತರೇನೂ ಅಲ್ಲ. ಆದರೂ ಸಮಾಜದಲ್ಲಿ, ಮನೆಯೊಳಗೆ ತನ್ನ ಅಸ್ತಿತ್ವವೇ ಇಲ್ಲವೆಂಬಂತೆ ಮೌನಕ್ಕೆ ಆತುಕೊಂಡು ಬದುಕುತ್ತಿದ್ದ ಆಕೆಯನ್ನು ಬದಲಾಯಿಸಲು ಅವರು ತಮ್ಮಿಂದಾದ ಪ್ರಯತ್ನ ಪಟ್ಟರು. ಹಗಲು ಮುಗಿದರೂ ಮುಗಿಯದಂತಹ ಇರುಳು ಶುರುವಾದರೂ ತಿಳಿಯದಂತಹ ಒಂದು ಗೊಂದಲದ ಮುಸ್ಸಂಜೆಯಲ್ಲಿ ಹಚ್ಚಿಟ್ಟ ತುಯ್ದಾಡುವ ದೀಪದಂತಹ ಹುಡುಗಿಯಾಗಿದ್ದಳು ಚಿತ್ರಲೇಖೆ.
ಆದರೆ ಅದೆಷ್ಟೇ ಅಂತರ್ಮುಖಿಯಾದರೂ ಮೊದಲಿನಿಂದಲೂ ಅವಳು ಬುದ್ಧಿವಂತೆ. ತರಗತಿಯಲ್ಲಿ ಯಾವಾಗಲೂ ಮೊದಲ ಮೂರು ಸ್ಥಾನದಲ್ಲಿಯೇ ಇರುತ್ತಿದ್ದ ಯಾರೊಂದಿಗೂ ಬೆರೆಯದ ಚಿತ್ರಲೇಖಾ ಗೊತ್ತಿದ್ದವರಿಗೆ ಪಾಪದ ಹುಡುಗಿಯಾಗಿಯೂ ಒಂದು ಅಂತರದಿಂದ ನೋಡುವವರಿಗೆ ಅಹಂಕಾರಿಯಾಗಿಯೂ ಕಾಣುತ್ತಿದ್ದಳು. ಆದರೆ ಅವೆಲ್ಲ ಅವಳ ಹೊರಗಿನ ರೂಪಗಳು ಮಾತ್ರ ಆಗಿದ್ದವು. ಅವಳೊಳಗನ್ನು ಹೊಕ್ಕು ನೋಡುವ ಶಕ್ತಿ ಯಾರಿಗಾದರೂ ಇದ್ದಿದ್ದರೆ, ಎಷ್ಟು ಹತ್ತಿರ ತಂದರೂ ವಿರುದ್ಧ ದಿಕ್ಕಿಗೆ ಸೆಳೆಯಲ್ಪಡುವ ಆಯಸ್ಕಾಂತದ ಸಜಾತೀಯ ಧ್ರುವಗಳಂತೆ ಅವಳೊಳಗಿನ ಅವಳದೇ ವ್ಯಕ್ತಿತ್ವದ ಚೂರುಗಳು ಅವಳು ಅದೆಷ್ಟೇ ಪ್ರಯತ್ನ ಪಟ್ಟರೂ ಒಂದಾಗದೇ ಬೇರೆಬೇರೆಯಾಗಿಯೇ ಇರುವುದನ್ನು ನೋಡಬಹುದಿತ್ತು.
ಬೆಂಗಳೂರಿನಲ್ಲಿಯೇ ಹೈಸ್ಕೂಲು ಸೇರಿ ಸರಕಾರಿ ಕೋಟಾದಲ್ಲಿಯೇ ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಹಿಡಿದು ಮೂರು ವರ್ಷವಾಗಿದೆ. ಆದರೂ ಅವಳ ಎದೆಯ ತುಂಬ ಕಹಿ ನೆನಪುಗಳ ಜಾತ್ರೆಯೇ. ಜಾತ್ರೆ ಎಂದೇನೂ ಹೇಳುವಂತಿಲ್ಲ, ಏಕೆಂದರೆ ಜಾತ್ರೆಯಂತೆ ಗಮ್ಮತ್ತಿನ ಕ್ಷಣಗಳು ಅವಳ ನೆನಪುಗಳಲ್ಲಿ ಇಲ್ಲ. ನೆನಪುಗಳ ಶವಯಾತ್ರೆ ಎಂದು ಕರೆದರೆ ಸರಿಯಾದೀತೇನೋ. ಸ್ನೇಹಿತರಾರೂ ಇಲ್ಲದ ಚಿತ್ರಲೇಖಾ ತನ್ನ ಅಂತರಂಗವನ್ನು ಎಂದೂ ಎಲ್ಲೂ ತೋಡಿಕೊಳ್ಳದ ಕಾರಣಕ್ಕೆ ಯಾವಾಗಲೂ ಭಾರವಾದ ಕಲ್ಲೊಂದನ್ನು ಹೊತ್ತುಕೊಂಡಂತೆ, ದೂರದ ಮ್ಯಾರಾಥಾನ್ ಮುಗಿಸಿ ಬಂದು ಸುಸ್ತಾದ ಹೊಸ ಓಟಗಾರ್ತಿಂತೆ ಇರುತ್ತಿದ್ದಳು.
ತಾನು ಶೇರ್ ಮಾಡಿದ ಸ್ಕ್ರೀನ್‍ಶಾಟ್‍ಗೆ ‘ಹೌ ಶೇಮ್‍ಲೆಸ್’ ಎಂದು ದೊಡ್ಡ ಮಾವನ ಎರಡನೇ ಮಗ ಹಾಕಿದ ಮೆಸೇಜಿಗೆ ಇಪ್ಪತ್ಮೂರು ಲೈಕ್ ಬಿದ್ದದ್ದನ್ನು ಮತ್ತು ಚಿಗುರು ಮೀಸೆಯೂ ಮೂಡದ ಕಸಿನ್‍ಗಳು ‘ಶೇಮ್ ಆನ್ ಹರ್’ ಎಂಬ ಮೆಸೆಜುಗಳನ್ನು ಎಗ್ಗಿಲ್ಲದೇ ಹಾಕುತ್ತಿರುವುದನ್ನು ನೋಡಿದ ಚಿತ್ರಾಳಿಗೆ ತಾನು ಸ್ಕ್ರೀನ್ ಶಾಟ್ ಹಾಕಿ ಸರಿಯಾದ ಕೆಲಸ ಮಾಡಿದೆನಾ ತಪ್ಪು ಮಾಡಿದೆನಾ ಎಂಬ ಗೊಂದಲ ಕಾಡತೊಡಗಿತು. ದೊಡ್ಡಪ್ಪ ದೊಡ್ಡಮ್ಮನಿಗೆ ಬೇಜಾರಾಗಬಹುದೆಂಬ ಕಾರಣಕ್ಕೆ ಅವಳು ಇನ್ನೂ ‘ಹೋಂ ಅವರ್ ಕೋಸಿ ನೆಸ್ಟ್’ ಎಂಬ ಹೆಸರಿನ ಆ ಫ್ಯಾಮಿಲಿ ವಾಟ್ಸಾಪ್ ಗುಂಪಿನಲ್ಲಿ ಇದ್ದಾಳೆ ಅಷ್ಟೇ. ಸ್ವಂತ ಮಕ್ಕಳಿದ್ದಿದ್ದರೆ ತನ್ನನ್ನೀಗ ಸಾಕಿದ ದೊಡ್ಡಮ್ಮನಿಗೆ ತಾನೆಲ್ಲಿದ್ದೇನೆ ಎಂಬ ವಿಷಯ ಅಮುಖ್ಯವೇ ಆಗಿರುತ್ತಿತ್ತು ಎಂಬುದು ಚಿತ್ರಳಿಗೆ ಚೆನ್ನಾಗಿ ಗೊತ್ತು. ಯಾವ ಮಾವ ದೊಡ್ಡಮ್ಮ ಚಿಕ್ಕಮ್ಮನಿಗೂ ಕೂಡ ತನ್ನ ಮುಖ ನೋಡಬೇಕೆಂದು ಅನ್ನಿಸಿರಲಿಲ್ಲ ಎಂಬ ವಾಸ್ತವ ಅವಳನ್ನು ಘಾಸಿಗೊಳಿಸುವುದೂ ಈಗ ಹಳೆಯದಾಗಿ ಅವಳಿಗೆ ನೋವಾಗುವುದಿಲ್ಲ. ಹತ್ತಿರ ಹತ್ತಿರ ಮೂವತ್ತು ಜನರಿರುವ ಈ ವಾಟ್ಸಾಪ್ ಗುಂಪಿನಲ್ಲಿ ತಾನೊಬ್ಬಳು ಇಲ್ಲದಿದ್ದರೆ ಹರಿವ ತೊರೆಯಲ್ಲಿ ಒಂದು ತರಗೆಲೆ ಕಡಿಮೆಯಾದರೆ ಆಗುವ ವ್ಯತ್ಯಾಸವೇ ಆಗುತ್ತಿತ್ತೆಂಬುದು ಅವಳಿಗೆ ಗೊತ್ತಿದೆ. ಹರಿವ ನದಿಗೂ ಸಾಗರ ಸೇರುವ ನಂಬಿಕೆಯಿದೆ, ತರಗೆಲೆಗೂ ಮಣ್ಣಲ್ಲಿ ಮಣ್ಣಾಗುವುದು ಗೊತ್ತಿದೆ ಅದೇ ರೀತಿ ತಾನು ಯಾರ ಮನಸ್ಸಿನಲ್ಲೂ ಇಲ್ಲ ಎಂಬ ಸತ್ಯವೂ ಅವಳಿಗೆ ತಿಳಿದಿದೆ. ‘ಕಿವುಡ ಮೂಕನಿಗೆ ತನ್ನನ್ನು ಕಟ್ಟಿದ್ದೀರಿ ತಾನು ಇಲ್ಲಿರುವುದಿಲ್ಲ ಕರೆದುಕೊಂಡು ಹೋಗಿ’ ಎಂದು ಪ್ರತಿಭಾ ಬರೆದ ಪತ್ರ ಓದಿ ತಾನೆಷ್ಟು ಅತ್ತು ಕರೆದರೂ ಗಂಡ, ಗಂಡುಮಕ್ಕಳು ಕ್ಯಾರೇ ಎನ್ನದೇ ಕವಡೆ ಕಿಮ್ಮತ್ತು ಕೊಡದೇ ಇದ್ದುದನ್ನೂ ಅಜ್ಜಿ ಒಮ್ಮೆ ಅಳುತ್ತ ಚಿತ್ರಾಳಿಗೆ ಹೇಳಿದ ಮೇಲಂತೂ ಯಾರಲ್ಲೂ ಅವಳಿಗೆ ವಾತ್ಸಲ್ಯ ಮೊಳೆಯಲಿಲ್ಲ.
ಆದರೆ ಈಗ ಈ ಕ್ಷಣ ತನ್ನ ಸ್ಕ್ರೀನ್‍ಶಾಟಿಗೆ ಇದ್ದಬಿದ್ದವರ ಪ್ರತಿಕ್ರಿಯೆ ನೋಡಿದ ಮೇಲೆ ತನ್ನ ಬದುಕಿನ ವೃತ್ತದ ಪರಿಧಿ, ವ್ಯಾಸ ಎಲ್ಲವೂ ತಾನೇ ಆಗಿದ್ದ ಚಿತ್ರಾ, ಈಗ ತಾನಿರುವುದಕ್ಕಿಂತ ಕಿರಿಯಳಾಗಿದ್ದ ಪ್ರತಿಭಾ ಎಂಬ ಅಸಹಾಯಕ ಹುಡುಗಿಯ ಬಗ್ಗೆ ಒಂದು ಕ್ಷಣ ಕರುಣೆಯಿಂದ ಯೋಚಿಸತೊಡಗಿದಳು. ಇಪ್ಪತ್ತು ವರ್ಷ ಜತೆ ಇದ್ದವರು ತಿಳಿಸಾರಿನಲ್ಲಿನ ಬೇವಿನೆಲೆಯನ್ನು ತೆಗೆದು ಬಿಸಾಕಿದಂತೆ ಮರೆತುಬಿಟ್ಟಾಗ ಅವಳಾದರೂ ಏನು ಮಾಡಬಹುದಿತ್ತು? ಅದೇನೇ ಇದ್ದರೂ ತನ್ನನ್ನು ಎತ್ತಿಕೊಂಡು ಹೋಗಲಿಲ್ಲ, ಹೋದವಳು ಮತ್ತೆ ಬರಲಿಲ್ಲ ಎಂಬುದು ನೆನಪಾಗಿ ಮತ್ತೆ ಮನಸ್ಸು ಬಿಗಿದುಕೊಳ್ಳಲಾರಂಭಿಸಿದರೂ ಈಗ ಬಂದಿದ್ದಾಳಲ್ಲ ಎಂದು ಅದೇ ಮನಸ್ಸು ಗಂಟುಗಳನ್ನು ಸಡಿಲಗೊಳಿಸತೊಡಗಿತು. ಆಘಾತದಿಂದ ಗೋಳಾಡಿ ಫೋನ್ ಮಾಡಿ ಪತ್ರ ಬರೆದು ತವರಿಂದ ಬರುವ ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಹುಡುಗಿಯ ನೆನಪಾಗಿ ಕರುಳು ಹಿಂಡಿದಂತಾಗಿ ನಡುಗುವ ಕೈಗಳಿಂದ ಮೆಸೆಂಜರ್ ತೆರೆದು ಲ್ಯಾಪ್‍ಟಾಪಿನ ಎ ಅಕ್ಷರದ ಮೇಲೆ ಎಡಗೈನ ಕಿರುಬೆರಳಿಟ್ಟಳು ಚಿತ್ರಲೇಖಾ. ತಕ್ಷಣ ಅರೆ ಎಂದು ಅಚ್ಚರಿಪಟ್ಟು ಉದ್ವೇಗದಿಂದ ಮೆಲ್ಲನೆ ಕಂಪಿಸಿದಳು. ಒಂದು ಕ್ಷಣ ಎದೆ ಬೆಚ್ಚಗಾಗಿ ಎಂದೂ ದಕ್ಕದ ಹೊಸ ಅನುಭವಕ್ಕೆ ತಾನೇ ಬೆರಗಾದಳು. ಮುಂದಿನ ಅಕ್ಷರ ಒತ್ತುವ ಮುನ್ನ ಮತ್ತೇನೋ ಯೋಚಿಸಿ ವಾಟ್ಸಾಪ್ ತೆರೆದು ತಾನು ಗುಂಪಲ್ಲಿ ಹಂಚಿದ್ದ ಸ್ಕ್ರೀನ್‍ಶಾಟ್ ಅನ್ನು ಸೆಲೆಕ್ಟ್ ಮಾಡಿ ಡಿಲೀಟ್ ಫಾರ್ ಎವ್ರಿಒನ್ ಒತ್ತಿಬಿಟ್ಟಳು.
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್
ಗಂಡನಿಲ್ಲದ ಅವಳ ಹೆಸರು ಶರಾವತಿ. ಹೆಂಡತಿ ತೊರೆದ ಅವನ ಹೆಸರು ರತ್ನಾಕರ. ವರ್ಷಕ್ಕೊಮ್ಮೆ ಹೂ ಬಿಟ್ಟು ದಾರಿಯಲ್ಲಿ ಚೆಲ್ಲುವ ಪಿಂಕ್ ಟ್ರಂಪೆಟ್‌ನಂತೆ ಅವರ ನಡುವಿನ ಮಧುರ ಭೇಟಿ. ಓದಿ, ವಿಸ್ತಾರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕಥೆ.
:: ಚೈತ್ರಿಕಾ ಹೆಗಡೆ
ಶರಾವತಿ ಸಂಜೆಯಾಗುವುದನ್ನೇ ಕಾಯುತ್ತಿದ್ದಳು. ಊರಿನಂತೆ ಬೆಂಗಳೂರಿನಲ್ಲಿ ನಿಧಾನಕ್ಕೆ ಸಂಜೆಯಾಗುವುದಿಲ್ಲ. ಊರಲ್ಲಿದ್ದರೆ ಮೂರು ಗಂಟೆಗೆ ಚಹಾ ಕುಡಿದು, ತಲೆ ಬಾಚಿ, ಒಂದೆರಡು ಗಿದ್ನ ಅಡಕೆ ಸುಲಿದು, ಕೊಟ್ಟಿಗೆಗೆ ಹೋಗಿ ಹಾಲು ಕರೆದು, ಓರಿ ಬಾಗಿಲಿನಿಂದ ಒಳಗೆ ಬರುವಾಗ ಬೆಳಕು ಫೇರಿ ಕೀಳುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ ಮಧ್ಯಾಹ್ನದ ಮೇಲೆ ಮಲಗಿ, ಎದ್ದು, ನೀರಿಗೆ ಬಿದ್ದ ಚಹಾಪುಡಿ ಬಣ್ಣ ಬಿಡುವಷ್ಟರಲ್ಲಿ ಆಕಾಶದಲ್ಲೂ ಕೆಂಬಣ್ಣ! ಮಜಾ ಎಂದರೆ ಇವತ್ತು ಮಾತ್ರ ಶರಾವತಿಗೆ ಸಂಜೆ ಬೇಗ ಆಗುತ್ತಲೇ ಇಲ್ಲ ಅನಿಸುತ್ತಿತ್ತು. ನಾಲ್ಕುವರೆಗೇ ಚಹಾ ಕುಡಿದು, ಲೆಗ್ಗಿನ್ನು ಕುರ್ತಾ ಹಾಕಿ, ಜಡೆ ಕಟ್ಟಿಕೊಂಡು, ಸೇವಂತಿಗೆ ಎಸಳುಗಳ ಚಿಕ್ಕ ಮಾಲೆಯನ್ನು ಸಿಕ್ಕಿಸಿಕೊಂಡು, ವಾಕಿಂಗ್ ಶೂಗಳನ್ನು ತೊಟ್ಟು ರಸ್ತೆಗಿಳಿಯುವಾಗ ಇನ್ನೂ ಐದಕ್ಕೆ ಐದು ನಿಮಿಷ ಇತ್ತು! ಎಷ್ಟೊತ್ತಿಗೆ ರತ್ನಾಕರನನ್ನು ನೋಡುತ್ತೇನೋ ಎಂದು ಹಪಹಪಿಸುತ್ತ ಪಕ್ಕದ ಬೀದಿ ಕಡೆ ಹೆಜ್ಜೆ ಹಾಕಿದರೆ ಅವಳ ಸ್ವಾಗತಕ್ಕೆ ರತ್ನಾಕರನೇ ಹೂಗಳನ್ನು ಹಾಸಿ ಕಾಯುತ್ತಿರುವನೇನೋ ಎಂಬಂತೆ ಅವನ ಮನೆಯ ಬೀದಿಯ ತುಂಬ ತಿಳಿ ಗುಲಾಬಿ ಬಣ್ಣದ ಟ್ರಂಪೆಟ್ ಹೂಗಳು ಉದುರಿಬಿದ್ದಿದ್ದವು. ಹೂಗಳ ಮೇಲೆ ಹೆಜ್ಜೆ ಇಡದಂತೆ ನಿಗಾ ವಹಿಸುತ್ತ ‘ಗಾಯತ್ರಿ’ ಎಂಬ ಮನೆಯ ಬಳಿ ಬರುವಾಗ ಹೊಟ್ಟೆಯೊಳಗೆಲ್ಲ ವಿಚಿತ್ರ ಸಂಕಟ! ರತ್ನಾಕರ ಇವತ್ತಾದರೂ ಕಾದಂಬರಿಯನ್ನು ತೆರೆದು ನೋಡಿರಬಹುದೇ? ಎಂಬ ಹುಚ್ಚು ಕಾತರ. ಆದರೆ ರತ್ನಾಕರ ಅವನ ಮನೆಯ ಬಳಿ ಕಾಣಿಸದೇ ಹೋಗಿದ್ದರಿಂದ ಒಂದೋ ಮುಂದೆ ಹೋಗಿರಬಹುದು ಇಲ್ಲ ತಡವಾಗಿ ಬರಬಹುದೆಂದು ದೇವಸ್ಥಾನದ ಕಡೆ ತುಸು ನಿರಾಸೆಯಲ್ಲೇ ಹೊರಟಳು ಶರವಾವತಿ.
ಹೋದ ವರ್ಷ ಪುಟ್ಟುವಿಗೆ ಕೆಲಸ ಸಿಕ್ಕು ಆತ ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದಾಗ ಒಂದಷ್ಟು ದಿನಕ್ಕೆಂದು ಬಂದ ಶರಾವತಿ ಪುಟ್ಟುವಿನ ಹಠಕ್ಕೆ ಜೂನ್ವರೆಗೂ ಉಳಿದಿದ್ದಳು. ಆಗ ಪರಿಚಯವಾದವನು ರತ್ನಾಕರ. ಸ್ವಲ್ಪ ದಪ್ಪಗೆ, ಎಣ್ಣಗಪ್ಪಿನ ಐವತ್ತರ ಹರೆಯದ ರತ್ನಾಕರ ಇಂಥದ್ದೇ ಸಂಜೆಯಲಿ ಶರವಾತಿ ಪಕ್ಕದ ಬೀದಿಯ ಮಾಲಾ ಮತ್ತು ಸುಜಾತಾ ಜೊತೆ ವಾಕಿಂಗು ಮಾಡುತ್ತಿದ್ದಾಗ ಸಿಕ್ಕವನು. ಅವಳ ಹೆಸರು, ಊರು ಕೇಳಿ ‘ನಿಮ್ ಊರಿನ ಹತ್ತಿರ ಇರೋದು ಅಘನಾಶಿನಿ ನದಿ ಅಲ್ವಾ ಮತ್ಯಾಕೆ ಶರಾವತಿ ಅಂತ ಹೆಸರು ನಿಮ್ಗೆ?’ ಎಂದು ಪಕಪಕನೇ ನಕ್ಕವನು. ‘ಹುಟ್ಟಿದ್ದು ಶರಾವತಿ ನದಿ ಅಂಚಿನ ಹೊನ್ನಾವರದಲ್ಲಿ, ಅಲ್ಲಿಂದ ಹರ್ದು ಬಂದಿದ್ದು ಅಘನಾಶಿನಿ ಅಂಚಿನ ಬಾಳೆಹಳ್ಳಿಗೆ’ ಎನ್ನುತ್ತ ಇವಳೂ ನಕ್ಕಿದ್ದಳು. ಒಮ್ಮೊಮ್ಮೆ ತೀರ ಅಪರಿಚಿತರೊಬ್ಬರು ಏಕ್ದಮ್ ಆಪ್ತರು ಅನಿಸುವುದಕ್ಕೆ ಯಾವ ಜಾದೂ ಆಗುವುದೂ ಬೇಕಾಗುವುದಿಲ್ಲ! ಏನೂ ಕಾರಣವೇ ಇಲ್ಲದೆ ಹತ್ತಿರವಾಗಿಬಿಡುತ್ತಾರೆ.
ಶರಾವತಿಗೂ ರತ್ನಾಕರ ಹತ್ತಿರವಾಗಿದ್ದು ಹೀಗೆಯೇ. ಅವತ್ತಿನಿಂದ ಅವರಿಬ್ಬರೂ ಜೊತೆಗೇ ವಾಕಿಂಗ್ ಹೋಗುವುದು ಖಾಯಮ್ ಆಯಿತು! ಮಾಲಾ, ಸುಜಾತ, ಫಸ್ಟ್ ಕ್ರಾಸಿನ ಬಾಬು ಇವರೆಲ್ಲ ಬರಲಿ ಬಿಡಲಿ ಶರವಾತಿ ಬರುವುದು ಕಾಣಿಸಿದರೆ ರತ್ನಾಕರ ಅವಳ ಜೊತೆಯೇ ನಡೆಯುತ್ತಿದ್ದ. ಅಲ್ಲಿಂದ ಪಕ್ಕದ ಬೀದಿಗೆ ಹೋಗಿ ಬಲಕ್ಕೆ ತಿರುಗಿದರೆ ದೇವಸ್ಥಾನವೊಂದಿತ್ತು, ಅಲ್ಲೊಂದಷ್ಟು ಹೊತ್ತು ಕೂತು ಮರಳುವುದು ರೂಢಿ. ಒಮ್ಮೊಮ್ಮೆ ಮೇಯ್ನ್ ರೋಡಿಗೆ ಹೋಗಿ ನರ್ಸರಿ ಹೊಕ್ಕು ಗಿಡಗಳನ್ನು ಚೌಕಾಶಿ ಮಾಡಿ ಮಾಡಿ ರತ್ನಾಕರ ಕೊಳ್ಳುತ್ತಿದ್ದ. ಆಗೆಲ್ಲ ಶರಾವತಿಗೆ ‘ನಮ್ಮನೆಗೆ ಬನ್ನಿ ಚಂದ್ ಚಂದದ ಹೂವಿನ್ ಗಿಡ ಕೊಡ್ತೇನೆ, ಒಂದ್ ರೂಪಾಯೂ ಬೇಡ ಮತ್ತೆ’ ಎಂದು ಹೇಳಬೇಕೆನಿಸುತ್ತಿತ್ತು. ಆದರೆ ಅವನು ಕೊಳ್ಳುತ್ತಿದ್ದ ಕಳ್ಳಿ ಗಿಡಗಳನ್ನೆಲ್ಲ ಅವಳು ಅದೇ ಮೊದಲು ನೋಡಿದ್ದಾಗಿತ್ತು. ‘ಇದಕ್ಕೆ ಅಷ್ಟು ದುಡ್ ಕೊಟ್ರ? ಹೂವೂ ಬಿಡೂದಿಲ್ಲ’ ಎಂದಾಗ, ‘ಕ್ಯಾಕ್ಟಸ್ ನಂಗಿಷ್ಟ’ ಎಂದಿದ್ದ . ‘ನಾನಂತೂ ಹೂವಿನ ಮಳ್ಳು’ ಎಂದಿದ್ದಳು ಇವಳು. ‘ಬೆಂಗಳೂರಿನ ಮನೇಲಿ ಹೊತ್ತೇ ಹೋಗಲ್ಲ’ ಅಂದವಳಿಗೆ ‘ನಂಗೆ ಚಪಾತಿ ಮಾಡಿಕೊಡಿ ನನ್ನ ಹೆಂಡತಿಗೂ ಕೆಲಸ ಕಡಿಮೆಯಾಗತ್ತೆ, ಫ್ರೀಯಾಗೆನೂ ಬೇಡ, ಮತ್ತೆ ನೀವು ಇಲ್ಲಿ ಇರೋಷ್ಟು ದಿನ ಸಾಕು’ ಎಂದಿದ್ದ. ಪುಟ್ಟುವಿಗಿದು ಇಷ್ಟವಿಲ್ಲ ಎಂದು ಗೊತ್ತಿದ್ದರೂ ಶರಾವತಿ ಒಪ್ಪಿದ್ದಳು. ಅವತ್ತಿನಿಂದ ದಿನ ಆರು ಚಪಾತಿ, ಒಂದು ಬಗೆಯ ಪಲ್ಯ, ಜೊತೆಗೆ ಮೊಳಕೆ ಕಾಳು ತಯಾರಿಸಿ ರತ್ನಾಕರನ ಮನೆಗೆ ಕೊಟ್ಟು ಬರುತ್ತಿದ್ದಳು. ಆಗಲೇ ಗಾಯತ್ರಿಯ ಪರಿಚಯವಾಗಿತ್ತು. ಮನೆಯ ಗೋಡೆಗೆ ಅಂಟಿಕೊಂಡಿದ್ದ ಗಾಯತ್ರಿಯ ಮಂಡಲ ಚಿತ್ರಗಳು ಆಕರ್ಷಕ ಎನಿಸಿದ್ದವು. ರತ್ನಾಕರ ಬಿಡಿಸಿದ್ದ ಡೂಡಲ್ ಆರ್ಟ್ ಶರಾವತಿಗೆ ಅರ್ಥವೇ ಆಗಿರಲಿಲ್ಲ, ಅವನ ಪುಸ್ತಕಗಳ ಶೆಲ್ಫ್ ನೋಡಿ ಕಣ್ಣರಳಿಸಿದ್ದಳು. ‘ನಿಮಗ್ಯಾವ ಪುಸ್ತಕ ಬೇಕಾದ್ರೂ ತಗೊಂಡೋಗಿ, ತುಂಬ ಜನ ತಗೊಂಡೋಗ್ತಾರೆ ನಮ್ಮನೆಯಿಂದ’ ಎಂದಿದ್ದಕ್ಕೆ ಒಂದು ಕಾದಂಬರಿಯನ್ನು ತಗೊಂಡಿದ್ದಳು. ದಿನವೂ ರತ್ನಾಕರನ ಮನೆಗೆ ಹೋಗುತ್ತ, ಗಾಯತ್ರಿಯ ಜೊತೆ ಹರಟುತ್ತ, ಪದಬಂಧ ತುಂಬುತ್ತ, ಮತ್ತೆ ಐದೂವರೆಗೆ ರತ್ನಾಕರನೊಟ್ಟಿಗೆ ವಾಕಿಂಗು ಮಾಡಲು ರಸ್ತೆಗಿಳಿಯುತ್ತ, ಬೆಂಗಳೂರೆಂಬ ದೊಡ್ಡ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟಿಕೊಂಡ ಶರಾವತಿಗೆ ಎರಡು ತಿಂಗಳುಗಳು ಹೇಗೇ ಕಳೆದವೆಂದೇ ಗೊತ್ತಾಗಿರಲಿಲ್ಲ.
ಆದರೆ ಅವತ್ತೊಂದಿನ ಗಾಯತ್ರಿ ರತ್ನಾಕರ ಜೋರು ಜಗಳ ಮಾಡಿಕೊಂಡ ಮೇಲೆ ಅವರ ಮನೆಯೊಳಗೆ ಹೋಗಲಿಕ್ಕೇ ಮನಸ್ಸಾಗಿರಲಿಲ್ಲ. ಗಾಯತ್ರಿಯದು ಯಾವುದೋ ಕಂಪನಿ ಕೆಲಸ, ಒಮ್ಮೊಮ್ಮೆ ಆಫೀಸಿಗೆ ಹೋಗುವುದಿರುತ್ತದೆ ಎಂದು ಅವಳೇ ಹೇಳಿದ್ದಳು. ಆದರೆ ರತ್ನಾಕರನದ್ದು ಒಂದು ಕೆಲಸ ಅಂತ ಇರಲಿಲ್ಲ. ಒಂದಷ್ಟು ದಿನ ಪೇಪರಿಗೆ ಅಂಕಣ ಬರೆಯುತ್ತಾನೆ, ಇನ್ನೊಂದಷ್ಟು ದಿನ ಬುಕ್ ಪಬ್ಲಿಶಿಂಗ್, ಆಮೇಲೇ ತಿಂಗಳಾನುಗಟ್ಟಲೇ ಏನೂ ಕೆಲಸ ಮಾಡದೆ ಇದ್ದುಬಿಡುತ್ತಾನೆ, ಮನಸ್ಸು ಬಂದರೆ ಚಿತ್ರ ಬಿಡಿಸುತ್ತಾನೆ. ತಲೆ ಕೆಟ್ಟರೆ ಕಾರ್ ಎತ್ತಿಕೊಂಡು ಏನೂ ಎತ್ತ ಹೇಳದೇ ಮೂರ್ನಾಲ್ಕು ದಿನ ನಾಪತ್ತೆ. ಇದಿಷ್ಟು ಶರಾವತಿಗೆ ಅವನ ಒಡನಾಟದಿಂದ ಅರ್ಥವಾಗಿತ್ತು. ಈ ವಿಷಯಕ್ಕೇ ಸುಮಾರು ಸಲ ಗಾಯತ್ರಿ ರತ್ನಾಕರ ವಾದ ಮಾಡಿಕೊಂಡು ಅದು ಜಗಳದವರೆಗೂ ಹೋಗುತ್ತಿತ್ತು, ಆಗೆಲ್ಲ ಶರಾವತಿ ಹೊರಟರೆ ಒಂದೋ ಗಾಯತ್ರಿ ‘ಅಯ್ಯೋ ನೀವ್ ಕೂತ್ಕೊಳಿ ನಮ್ದಿದ್ದಿದ್ದೇ’ ಎಂದು ತಡೆಯುತ್ತಿದ್ದಳು, ಇಲ್ಲವೇ ರತ್ನಾಕರ ತಡೆಯುತ್ತಿದ್ದ. ಏನು ಮಾಡುವುದೆಂದೇ ತೋಚದೇ ಯಾವುದೋ ಪುಸ್ತಕ ಓದಿದಂತೆ ಮಾಡುತ್ತ ಅಲ್ಲೇ ಕೂತಿರುತ್ತಿದ್ದಳು. ಆದರೆ ಆ ದಿನ ದೊಡ್ಡ ಜಗಳವಾಗುತ್ತಿರುವಾಗ ಅಲ್ಲಿರಲಾಗದೇ ಹೊರಡಬೇಕಾಯಿತು, ಇಬ್ಬರಲ್ಲಿ ಯಾರೊಬ್ಬರೂ ತಡೆಯಲೂ ಇಲ್ಲ. ಮರುದಿನ ಎಂದಿನಂತೆ ಚಪಾತಿ ಮಾಡಿ ಗಾಯತ್ರಿಗೆ ಫೋನ್ ಮಾಡಿದರೆ ಉತ್ತರವಿರಲಿಲ್ಲ. ಶರವಾತಿ ಬಳಿ ರತ್ನಾಕರನ ಫೋನ್ ನಂಬರೂ ಇರಲಿಲ್ಲ. ಅದಾಗಿ ಒಂದು ವಾರದ ನಂತರ ರತ್ನಾಕರ ಸಿಕ್ಕಾಗಲೇ ಗಾಯತ್ರಿ ಅಮ್ಮನ ಮನೆಗೆ ಹೋದಳೆಂಬ ವಿಚಾರ ತಿಳಿದಿತ್ತು, ಹಿಂದೆ ಹೀಗೆ ಎಷ್ಟೋ ಸಲ ಹೋಗಿ ತಿಂಗಳುಗಟ್ಟಲೇ ಬಂದಿಲ್ಲ, ಯಾವತ್ತೋ ಒಂದಿನ ‘ಸಾರಿ ಡುಮ್ಮ’ ಅಂತ ಬಂದ್ಬಿಡ್ತಾಳೆ ಎಂದು ನಕ್ಕಿದ್ದ. ಆದರೆ ಗಾಯತ್ರಿ ತಿಂಗಳು ಕಳೆದರೂ ಬಂದಿರಲಿಲ್ಲ. ಶರಾವತಿ ರತ್ನಾಕರ ಮಾತ್ರ ಯಾವತ್ತಿನಂತೆ ವಾಕಿಂಗಿಗೆ ಹೋಗುತ್ತಿದ್ದರು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್
ಈ ಬೆಂಗಳೂರಿನಲ್ಲಿ ದಿನಗಳು ಪುಟಗಳಂತೆ ಸರಸರನೇ ಮಗಚುತ್ತಿವೆ ಅನಿಸಿದ್ದರೂ ಇಷ್ಟವಾದ ಪುಟದಲ್ಲೇ ಇದ್ದುಬಿಡಲಾಗುದಿಲ್ಲವಲ್ಲ! ಶರಾವತಿ ಊರಿಗೆ ಹೊರಡುವ ದಿನ ಬಂದಿತ್ತು. ಪುಟ್ಟು ‘ಇನ್ ಸ್ವಲ್ಪ ದಿನ ಉಳ್ಕಳೇ ಅಮ್ಮಾ’ ಎಂದಾಗ ‘ಶೀ.. ತ್ವಾಟಕ್ ಮದ್ ಹೊಡ್ಯಲ್ಲೆ ಬಪ್ಪರತಿಗೆ ಮನಿಗೋಗವು ಪುಟು, ಮತೇ ರಾಶಿ ಡೇರೆ ಗಿಡ ಮಾಡವು ಈಸಲ’ ಎಂದು ಹೊರಟಿದ್ದಳು, ಬ್ಯಾಗಿನ ಜೊತೆ ಅರ್ಥವೇ ಆಗದ ಸಣ್ಣದೊಂದು ನೋವನ್ನೂ ಎದೆಯೊಳಗೆ ತುಂಬಿಕೊಂಡು ಹೊರಟಿದ್ದು ಮಾತ್ರ ಊರಿಗೆ ಹೋದಮೇಲೇಯೇ ಅರಿವಾಗಿತ್ತು! ಪುಟ್ಟುವನ್ನು ಬಿಟ್ಟು ಹೊರಡುವುದು ಒಂದು ತ್ರಾಸಾದರೆ, ರತ್ನಾಕರ ನಾಳೆಯಿಂದ ಸಿಗುವುದಿಲ್ಲ ಎಂಬ ವಿಚಿತ್ರ ತಳವಳ ಶರವಾತಿಯನ್ನು ಆವರಿಸಿದ್ದು ಅವಳಿಗೇ ಅಚ್ಚರಿ ಎನಿಸಿತ್ತು. ಹಳೆ ಕೊಟ್ಟೆಯಲ್ಲಿದ್ದ ಡೇರೆ ಗಡ್ಡೆಗಳನ್ನು ಹೊಸ ಕೊಟ್ಟೆಗೆ ವರ್ಗಾಯಿಸಿ, ಮಣ್ಣು ಹಾಕಿ, ಸಾಲಾಗಿ ಅಂಗಳದಲ್ಲಿಟ್ಟು, ನೇತ್ರಳ ಬಳಿ ಮಾಡಿಸಿಕೊಂಡ ಒಂದೇ ನಮೂನಿಯ ಕೋಲುಗಳನ್ನು ಗಿಡದ ಆಸೆರೆಗೆಂದು ಊರುತ್ತಿದ್ದರೂ ಮನಸ್ಸು ಮಾತ್ರ ಬೆಂಗಳೂರಿನ ಬೀದಿಯಲ್ಲಿ ರತ್ನಾಕರನ ಜೊತೆಗೇ ಹೆಜ್ಜೆ ಹಾಕುತ್ತಿತ್ತು. ‘ವಾಕಿಂಗಿಗೆ ಚಪ್ಪಲಿ ಕಂಫರ್ಟ್ ಅಲ್ಲ ಶೂ ತಗೊಳಿ’ ಎಂದು ಪರಿಚಯವಾದ ಶುರುವಿನಲ್ಲೇ ಹೇಳಿದ್ದ. ಪುಟ್ಟು ಮರುದಿನವೇ ಶೂ ಕೊಡಿಸಿದ್ದ. ಬೆಂಗಳೂರಿನಲ್ಲಿ ಇರುವಷ್ಟು ದಿನವೂ ಅದನ್ನು ಹಾಕಿಯೇ ನಡೆದಿದ್ದಳು ಶರಾವತಿ. ವಾರಕ್ಕೊಂದು ಸಲವಾದರೂ ಅವುಗಳನ್ನು ತೊಳೆದುಕೊಳ್ಳುತ್ತಿದ್ದಳು, ಯುಟ್ಯೂಬ್ ನೋಡಿ ಲೇಸು ಪೋಣಿಸಿಕೊಳ್ಳುತ್ತಿದ್ದಳು. ಊರಿಗೆ ಬರುವಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಭದ್ರವಾಗಿಟ್ಟು ಬಂದಿದ್ದಳು. ಮನೆಗೆ ಬರುತ್ತಿದ್ದಂತೆ ಸವೆದು ಹೋದ ಕೊಟ್ಟಿಗೆ ಚಪ್ಪಲಿಗಳನ್ನು ಮೆಟ್ಟಿಕೊಂಡು ತೋಟದ ನಿತ್ಗಟ್ಟೆಯ ಮೇಲೇ ನಡೆಯುತ್ತ ರತ್ನಾಕರನ ಜೊತೆ ವಾಕಿಂಗು ಮಾಡಿದ ದಿನಗಳನ್ನು ಮೆಲಕು ಹಾಕುತ್ತಿದ್ದರೆ ಬೆಂಗಳೂರಿನಲ್ಲಿದ್ದ ಶರಾವತಿ ತಾನೇ ಹೌದೆ ಅನಿಸಿತ್ತು ಶರಾವತಿಗೆ..!
ಮನೆಯಲ್ಯಾವತ್ತೂ ಪತ್ತಲ ಉಡುತ್ತಿದ್ದ ಶರಾವತಿ ಬೆಂಗಳೂರಿಗೆ ಬಂದ ಮೇಲೇಯೇ ಕುರ್ತಾ ಲೆಗ್ಗಿನ್ನು ಹಾಕಲು ಕಲಿತುಕೊಂಡಿದ್ದಾಗಿತ್ತು. ಪುಟ್ಟುವಿನೊಟ್ಟಿಗೆ ಬೈಕಿನಲ್ಲಿ ಓಡಾಡುವಾಗ ಸೀರೆ ಕಷ್ಟವೆಂದು ಕುರ್ತಾಗಳನ್ನು ತಗೊಂಡಿದ್ದಳು. ಆದರೆ ಶರವಾತಿಯ ಆಸೆ ಕುರ್ತಾ ತೊಡವುದಾಗಲಿ, ಶೂಗಳನ್ನು ಹಾಕಿಕೊಳ್ಳುವುದಾಗಲಿ, ಬೈಕಿನಲ್ಲಿ ಸುತ್ತುವುದಾಗಲೀ, ಮಾಲಿನ ಎಸ್ಕಲೇಟರಿನಲ್ಲಿ ಎಡವದೇ ಕಾಲಿಟ್ಟು ಹೋಗಬೇಕೆನ್ನುವುದಾಗಲಿ ಆಗಿರಲಿಲ್ಲ. ಈ ಬೆಂಗಳೂರಿನಲ್ಲಾದರೂ ನಿರ್ಭಿಡೆಯಿಂದ ಹೂವನ್ನು ಸೂಡಿಕೊಳ್ಳಬೇಕೆಂಬುದು ಅವಳ ಕೆಟ್ಟ ಬಯಕೆಯಾಗಿತ್ತು. ಅಷ್ಟೇ! ಸತ್ಯ ಹೋದ ಮೇಲೇ ಅರಿಷಿಣ ಕುಂಕುಮವನ್ನಂತೂ ಯಾರೂ ಅವಳಿಗೆ ಹಚ್ಚುತ್ತಿರಲಿಲ್ಲ ಆದರೆ ಒಂದು ಹೂವು ಸೂಡಿಕೊಂಡರೂ ‘ಗಂಡ ಸತ್ತವು ಹೂ ಸೂಡ್ಕ್ಯಳ್ಳಾಗ’ ಎಂಬ ಮಾತು ಬಾಣದಂತೆ ಬರುತ್ತಿತ್ತು. ಇನ್ನು ಪೂಜೆ ಮುಗಿದ ಮೇಲೆ ಪ್ರಸಾದ ಕೊಡವಾಗಲೂ ಅವಳಿಗೆ ಹುಡುಕಿ ಹುಡುಕಿ ತುಳಸಿ ದಳವನ್ನೇ ಕೊಡುತ್ತಿದ್ದರು. ಮುತ್ತುಮಲ್ಲಿಗೆ ಜೊತೆ ಅಲ್ಲಲ್ಲಿ ಅಬ್ಬಲಿಗೆ ಹೂ ಹಾಕಿ ಮಾಲೆ ಮಾಡಿ ಮನೆಯ ಹೆಂಗಸರಿಗೆಲ್ಲ ಹಂಚಿ ತಾನೂ ಮುಡಿಯುತ್ತಿದ್ದವಳಿಗೆ, ಮಳೆಗಾಲದಲ್ಲಿ ಕಡ್ಡಿ ಡೇರೆ ಹೂಗಳನ್ನು ಆಸೆಯಿಂದ ಸೂಡಿಕೊಳ್ಳುತ್ತಿದ್ದವಳಿಗೆ, ಗುಲಾಬಿ ಹೂವನ್ನು ಎರಡು ಮೂರು ದಿನ ನೀರಿನಲ್ಲಿಟ್ಟು ಬಾಡದಂತೆ ನೋಡಿಕೊಳ್ಳುತ್ತಿದ್ದವಳಿಗೆ ಬದುಕಿನ ಎಲ್ಲ ಕನಸುಗಳೂ ಒಮ್ಮೇಲೇ ಬಾಡಿ ಹೋಗಿದ್ದು ಸತ್ಯ ತೀರಿ ಹೋದ ಮೇಲೆ! ಮತ್ತವು ಯಾವತ್ತೂ ಚಿಗುರುವುದಿಲ್ಲವೆಂದು ಚಿವುಟಿ ಚಿವುಟಿ ಅರ್ಥ ಮಾಡಿಸಿದ್ದು ಅವಳ ಮನೆಯವರೇ. ಸುಮ್ಮನೆ ಹೇಳಿಸಿಕೊಳ್ಳುವುದ್ಯಾಕೆಂದು ಹಬ್ಬ ಗಿಬ್ಬಗಳಲ್ಲಿ ದೇವರ ಮನೇಗೇ ಬರುತ್ತಿರಲಿಲ್ಲ, ವಿಶೇಷದ ಮನೆಗೂ ಹೋಗುತ್ತಿರಲಿಲ್ಲ, ಬಾವಂದಿರ ಮಕ್ಕಳ ಮದುವೆಯಲ್ಲೂ ಮಂಟಪದ ಬಳಿ ಸುಳಿದಿರಲಿಲ್ಲ. ಇನ್ನು ಹೂವಿನ ಆಸೆಯನ್ನಂತೂ ಬಿಟ್ಟೇ ಬಿಟ್ಟಿದ್ದಳು. ಆದರೆ ಬೆಂಗಳೂರು ಊರಿನ ಏಕತಾನತೆಯಿಂದ, ಇಷ್ಟು ವರ್ಷಗಳಿಂದ ಸಿಂಬೆಯಾಗಿ ರಾಶಿ ಬಿದ್ದ ಮೌನದಿಂದ, ಎಲ್ಲ ಇದ್ದೂ ಯಾರೂ ಇಲ್ಲದಂತೆ ಕಂಗೆಡಿಸುವ ಒಂಟಿತನದಿಂದ ತಪ್ಪಿಸಿಕೊಳ್ಳುವ ದಾರಿಯಾಗುತ್ತದೆ ಎಂದಷ್ಟೇ ಅಂದುಕೊಂಡವಳಿಗೆ, ಮನೆಯಲ್ಲಿದ್ದಾಗ ತನ್ನ ಹತ್ತಿರವೂ ಸುಳಿಯದೇ ದೊಡ್ಡಪ್ಪ , ಚಿಕ್ಕಪ್ಪ, ಅಣ್ಣಂದಿರ ಜೊತೆಗೇ ಬೆಳೆದುಬಿಟ್ಟ ಪುಟ್ಟುವಿನ ಹತ್ತಿರ ಮತ್ತೆ ತಾನು ಹೋಗುವಂತೆ ಮಾಡಿದ್ದೇ ಈ ಮಾಯಾನಗರಿ ಎಂದು ಕೃತಜ್ಞತೆ ಇಟ್ಟುಕೊಂಡವಳಿಗೆ ಈ ಊರು, ಈ ಊರಿನ ಯಾವುದೋ ಬೀದಿ ತಾನು ಯಾವತ್ತೂ ಕಾಣದ ಕನಸಿನ ಬೇರೊಂದನ್ನು ಎದೆಗೆ ಇಳಿಸುತ್ತದೆಯೆಂಬ ಅಂದಾಜೂ ಇರಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು
ಬೆಂಗಳೂರಿಗೆ ಬಂದಾಗ ಇಲ್ಲಿ ಎಲ್ಲರೂ ತನಗೆ ಅಪರಿಚಿತರೇ ತಾನೇ? ತಾನು ಹೂವು ಸೂಡಿಕೊಳ್ಳಲಿ ಬಿಡಲಿ ಯಾರ ತಕರಾರು ಇರುವುದಿಲ್ಲವಲ್ಲ ಎಂದು ಪುಟ್ಟುವಿನ ಬಳಿ ಹೂವು ತರಿಸಿಕೊಂಡು, ಫ್ರಿಜ್ಜಿನಲ್ಲಿಟ್ಟುಕೊಂಡು, ದಿನ ಅಷ್ಟಷ್ಟೇ ಹೂವುಗಳನ್ನೆತ್ತಿ ಒಂದೊಂದು ಥರದ ಮಾಲೆ ಮಾಡಿಕೊಂಡು, ಮಧ್ಯಾಹ್ನ ಪಟ್ಟಗೆ ಜಡೆ ಹಾಕಿ ಸೂಡಿಕೊಳ್ಳಲು ಶುರು ಮಾಡಿದ್ದಳು. ನಿಜ ಹೇಳಬೇಕೆಂದರೆ ಅವಳಿದ್ದ ಅಪಾರ್ಟ್ಮೆಂಟಿನ ಹಾಗೂ ಅಕ್ಕಪಕ್ಕದ ಮನೆಯ ಹೆಂಗಸರು ‘ನಿಮ್ಮ ಯಜಮಾನ್ರು?’ ಎಂದು ಕೇಳಿದಾಗ ‘ಅವರಿಲ್ಲ’ ಎನ್ನಲು ಬಾಯೇ ಬರದೇ ಅಥವಾ ಗಂಡ ಇಲ್ಲದವಳೆಂದು ಗೊತ್ತಾದರೆ ತಾನಿಷ್ಟಪಡುವ ಈ ಬೆಂಗಳೂರು ಬದಲೇ ಆಗಿಬಿಡಬಹುದೆಂಬ ಭಯಕ್ಕೋ ಏನೋ “ಯಜಮಾನ್ರು ಊರಲ್ಲಿದ್ದಾರೆ” ಎಂದುಬಿಟ್ಟಿದ್ದಳು. ಅಷ್ಟನ್ನು ಹೇಳುವುದು ಹೇಳಿ ಯಾಕಾದರೂ ಹಾಗೇ ಹೇಳಿದೆನೋ ಎಂದು ಒದ್ದಾಡಿದ್ದಳು. ಕೆಲವೊಂದನ್ನು ಹೇಳಿದ ಮೇಲೆ ಮತ್ತೆ ತಿದ್ದಲಾಗುವುದೇ ಇಲ್ಲ! ಆದರೆ ರತ್ನಾಕರ ಕೇಳಿದಾಗ ಮಾತ್ರ ನಿಜವನ್ನೇ ಹೇಳಿದ್ದಳು, ಆಗ ರತ್ನಾಕರ ಕೇಳಿದ್ದ ಪ್ರಶ್ನೆ ಶರವಾತಿಯ ಇಷ್ಟ ದಿನದ ಬದುಕನ್ನೇ ಅಲ್ಲಾಡಿಸಿಬಿಟ್ಟಿತ್ತು. ‘ನೀವ್ಯಾಕೆ ಮತ್ತೊಂದು ಮದ್ವೆ ಆಗ್ಲಿಲ್ಲ?’ ಎಂದು ಎಷ್ಟು ತಣ್ಣಗೆ, ಎಷ್ಟೊಂದು ಸಹಜವಾಗಿ, ಮತ್ತೆ ಒಂದಿಷ್ಟೂ ಕನಿಕರವಿಲ್ಲದೇ ಪೂರ್ತಿ ಕಾಳಜಿ ಮಾತ್ರದಿಂದ ಆ ಪ್ರಶ್ನೆಯೆತ್ತಿದ್ದನಲ್ಲ ಅವನು..? ಸತ್ಯ ತೀರಿ ಹೋದ ನಂತರದ ಈ ಹದಿನೆಂಟು ವರ್ಷಗಳಲ್ಲಿ ಯಾರೂ ಕೇಳದ, ಸ್ವತಃ ತನಗೇ ತಾನೂ ಕೇಳಿಕೊಳ್ಳದ ಪ್ರಶ್ನೆಯನ್ನು ರತ್ನಾಕರ ಕೇಳಿಬಿಟ್ಟಿದ್ದ. ಆದಿನ ರಾತ್ರಿ ಪೂರ ಶರಾವತಿಗೆ ರೆಪ್ಪೆಗೆ ರೆಪ್ಪೆ ಹಚ್ಚಲು ಆಗಿರಲೇ ಇಲ್ಲ. ‘ಹೌದು ತಾನ್ಯಾಕೆ ಮತ್ತೊಂದು ಮದುವೆ ಆಗಲಿಲ್ಲ?’ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿಕೊಂಡಿದ್ದಳು. ಮೊನ್ನೆ ಮೊನ್ನೆ ಪಕ್ಕದೂರಿನ ಸುಬ್ಬು ಮಾವಿನ ಮರದಿಂದ ಬಿದ್ದು ಹೋಗಿಬಿಟ್ಟಾಗ ಅವನ ಹೆಂಡತಿ ಮತ್ತೊಂದು ಮದುವೆ ಆದಳಲ್ಲ? ಅಷ್ಟೇ ಯಾಕೇ ತನ್ನ ಊರಿನ ಸುಮಾ ಕೂಡ ಮದುವೆ ಆಗಿ ಈಗ ಹುಬ್ಳಿಯಲ್ಲಿದ್ದಾಳೆ. ಗಂಡನ ಜೊತೆ ನಗುತ್ತಿರುವ ಫೊಟೋಗಳ ಸಾಲು ಸಾಲು ಸ್ಟೇಟಸನ್ನು ತಾನೇ ನೋಡುತ್ತಿರುತ್ತೇನಲ್ಲ..? ಮತ್ತೆ ತಾನ್ಯಾಕೆ? ಆಗಿನ ಕಾಲದಲ್ಲಿ ಈ ಎರಡನೆ ಮದುವೆ ಹೆಂಗಸರ ಪಾಲಿಗೆ ಚಾಲ್ತಿಯಲ್ಲಿರಲಿಲ್ಲ ಎಂದೇ..? ಯಾಕೇ? ಯಾಕೇ? ಎಂದು ಎಷ್ಟು ಕೇಳಿಕೊಂಡರೂ ಉತ್ತರವಿರಲಿಲ್ಲ., ಮತ್ತೆ ಮರುಕ್ಷಣವೇ ‘ಶೀ ಇದೆಂಥ ಮಳ್ಳು ಹಿಡತ್ತು ನಂಗೇ’ ಎಂದು ತಲೆ ಕೊಡವಿಕೊಂಡರೂ ಮನಸ್ಸಿಂದ ಆ ಪ್ರಶ್ನೆ ಹೋಗಿರಲಿಲ್ಲ.
ಬಾಳೆಹಳ್ಳಿ ಊರಿಗೆ ಶರಾವತಿ ಬಂದಿದ್ದು ಹೈಸ್ಕೂಲಿಗೆ ಹೋಗಲಿಕ್ಕಾಗಿತ್ತು. ಮನೆಯಲ್ಲಷ್ಟೇನೂ ಅನುಕೂಲವಿಲ್ಲದ ಕಾರಣ ಯಾರ್ಯಾರದ್ದೋ ಪರಿಚಯದಿಂದಾಗಿ ಇಷ್ಟು ದೂರದ ಊರಿಗೆ ಬಂದು ಮಾಬಲಣ್ಣನ ಮನೆಯಲ್ಲಿ ಉಳಿದು ಹೈಸ್ಕೂಲಿಗೆ ಹೋಗುತ್ತಿದ್ದಾಗ ಅದೇ ಊರಿನ ಸತ್ಯನ ಪರಿಚಯವಾಗಿ ಪ್ರೀತಿಯೂ ಆಗಿತ್ತು. ಊರಿನ ಹುಡುಗರ ಜೊತೆ ಲಗೋರಿ ಆಡುತ್ತ, ಹುಣಸೇಹಣ್ಣಿನ ಕಟ್ಟಮಿಟ್ಟ ಮಾಡಿ ಹೊಳೆಯಂಚಲ್ಲಿ ಕೂತು ತಿನ್ನುತ್ತ, ಶಾಲೆಗೆ ಹೋಗಿ ಬರುತ್ತಿದ್ದ ಶರಾವತಿಗೆ ಹೈಸ್ಕೂಲು ಮುಗಿಯುತ್ತಿದ್ದಂತೆಯೇ ಸತ್ಯನೊಟ್ಟಿಗೆ ಮದುವೆ ಮಾಡಿದ್ದರು. ನಾಲ್ಕು ಅಣ್ಣ ತಮ್ಮಂದಿರ ದೊಡ್ಡ ಕುಟುಂಬದಲ್ಲಿ ಶರಾವತಿ ಚಿಕ್ಕವಳೇ ಆದರೂ ಮನೆ ಕೆಲಸಗಳನ್ನೆಲ್ಲ ಕಲಿತು, ಹೊಂದುಕೊಂಡಿದ್ದಳು. ಅಡಕೆ ಸುಲಿಯುವುದನ್ನೂ ಕಲಿತಳು, ಸಂಜೆ ಹೊತ್ತಿಗೆ ಅಕ್ಕಪಕ್ಕದ ಮನೆಯವರೊಟ್ಟಿಗೆ ಚೌಕಾಬಾರ ಆಡುವಾಗ ಅವಳದ್ದೇ ಮೊದಲು ಪಟ್ಟ ಆಗುತ್ತಿತ್ತು, ಇನ್ನು ವೀಶೆಷಗಳಲ್ಲಿ ಇಸ್ಪೀಟು ಮಂಡಲವಿದ್ದಾಗ ದೊಡ್ಡ ಭಾವ ಕವಳ ತುಪ್ಪಿ ಬರಲು ಎದ್ದಾಗ ಅವನ ಕೈ ತಗೊಂಡು ಇಸ್ಪೀಟಿನ ಒಂದಾಟವನ್ನೂ ಆಡಿಬಿಡುತ್ತಿದ್ದಳು. ಅವಳದ್ದು ಚಿಕ್ಕ ವಯಸ್ಸಾಗಿದ್ದರಿಂದ ಅವಳು ಎಲ್ಲರಿಗೂ ಮಗಳಂತೆ ಇದ್ದಳು. ಸತ್ಯನೂ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ಶರು ಎಂದು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಬಾಣಂತನವೂ ಗಂಡನ ಮನೆಯಲ್ಲೇ ಆಗಿತ್ತು. ಆದರೆ ಬೈಕಿನಿಂದ ಬಿದ್ದು ಸತ್ಯ ಸತ್ತು ಹೋದ ಮೇಲೇ ಎಲ್ಲ ಬದಲಾಗಿಹೋಯಿತು. ಅವಳ ಜೊತೆ ಮನೆಯ ಭಾವ ಮೈದುನರು, ಊರಿನ ಗಂಡಸರು ಗಂಡ ಸತ್ತವಳ ಜೊತೆ ಸಲುಗೆಯಿಂದ ಮಾತಾಡಿದರೆ ಬೇರೆ ನಮೂನೇಯ ಹೆಸರು ಬೀಳುತ್ತದೆಯೆಂದು ಮೊದಲಿನಂತೆ ಮಾತಾಡುವುದನ್ನೇ ಬಿಟ್ಟುಬಿಟ್ಟರು. ಆ ಬದಲಾವಣೆಗೆ ಹೊಂದಿಕೊಳ್ಳಲು ಸುಮಾರು ದಿನಗಳೇ ಬೇಕಾಯ್ತು ಅವಳಿಗೆ. ಯಾವ ಗಂಡಸರ ಜೊತೆಯೂ ಮುಖಕ್ಕೆ ಮುಖ ಕೊಟ್ಟು ಎರಡಕ್ಕಿಂತ ಹೆಚ್ಚು ಮಾತಾಡುವಾಗ ಯಾರು ಏನಂದುಕೊಳ್ಳುವರೋ ಎಂದು ಯೋಚಿಸಬೇಕಾದ ಸ್ಥಿತಿ ಅವಳಿಗೆ ಅರಿವಿಲ್ಲದೇ ಏರ್ಪಾಡಾಗಿತ್ತು. ಆದರೆ ರತ್ನಾಕರನ ಜೊತೆ ಹೇಗೇ ಮಾತಿಗಿಳಿದೆ..? ಯೋಚಿಸುತ್ತಿದ್ದಳು. ಗಾಯತ್ರಿ ಬಿಟ್ಟು ಹೋಗಿದಕ್ಕೇ ರತ್ನಾಕರನ ಮೇಲೇ ಮಮತೆಯೇ..? ಅಥವಾ ತಾನು ಇನ್ನೊಂದು ಮದುವೆ ಆಗಬಹುದಿತ್ತು ಎಂಬ ಹೊಸ ಹೊಳಹು ಹುಟ್ಟುಹಾಕಿದ್ದಕ್ಕೇ ಅವನು ವಿಶೇಷ ಎನಿಸಿದನೇ? ಅಥವಾ ಕಾರಣವೇ ಇಲ್ಲದ ಸೆಳೆತವೊಂದು ಅವನನ್ನು ನೋಡಿದಾಗಿನಿಂದ ಇದೆಯೇ? ಉತ್ತರ ಸಿಕ್ಕಿರಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ
ಒಮ್ಮೆ ರತ್ನಾಕರನ ಜೊತೆ ನಡೆಯುತ್ತಿದ್ದಾಗ ರಸ್ತೆಯಲ್ಲಿ ಬಿದ್ದ ತಿಳಿ ಗುಲಾಬಿಯ ಹೂವೊಂದನ್ನು ಶರವಾತಿಯ ಕೈಲಿಡುತ್ತಾ ‘ಈ ಹೂವು ರಾಶಿ ರಾಶಿ ಬಿದ್ದಿದೆ ನೋಡಿ, ಬೇಕಿದ್ರೆ ಮಾಲೆ ಮಾಡ್ಕೊಂಡು ಮುಡ್ಕೊಳಿ’ ಎಂದು ಅವಳ ಹೂವಿನ ಮಳ್ಳನ್ನು ಆಡಿಕೊಂಡು ನಕ್ಕಿದ್ದ. ಅವನು ಮಾಡಿದ್ದು ತಮಾಶೆಯೇ ಆದರೂ ಸತ್ಯ ಹೋದ ಮೇಲೇ ಅವಳ ಕೈಗೊಬ್ಬರು ಹೂವು ಕೊಟ್ಟು ಮುಡಿದುಕೋ ಎಂದಿದ್ದು ಅದೇ ಮೊದಲಾಗಿತ್ತು. ಬಣ್ಣ ಬಿಟ್ಟು ತುಸು ಹಳಸಿದಂತೆ ಕಾಣುವ, ಗಟ್ಟಿ ಮುಟ್ಟಿದರೆ ಹಿಸಿದು ಹೋಗುವಷ್ಟು ಮೆತ್ತಗಿದ್ದ ಆ ಹೂವನ್ನು ಪ್ರೀತಿಯಿಂದ ನೋಡುತ್ತಾ ‘ಇದೆಂತ ಹೂವು’ ಎಂದು ಕೇಳಿದ್ದಳು. ಬೆಂಗಳೂರಿನ ಎಲ್ಲ ಬೀದಿಯಲ್ಲೂ ಗೊಂಚಲು ಗೊಂಚಲಾಗಿ ಹುಚ್ಚಂಪರಿ ಅರಳಿದ್ದ ಆ ಹೂಗಳನ್ನು ದಿನವೂ ನೋಡುತ್ತಿದ್ದರೂ ಅದರ ಹೆಸರೇನೆಂದು ಗೊತ್ತಿರಲಿಲ್ಲ ಅವಳಿಗೆ. ‘ಪಿಂಕ್ ಟ್ರಂಪೆಟ್’ ಎಂದಿದ್ದ ರತ್ನಾಕರ. ‘ನಂಗೆ ಇಂಥ ಹೆಸರೆಲ್ಲ ನೆನಪಿರಲ್ಲ’ ಎಂದು ಅವಳಂದಾಗ, ‘ತಬೆಬುಯಾ ಅಂತ ಇನ್ನೊಂದು ಹೆಸರಿದೆ ಆದ್ರೆ ಪಿಂಕ್ ಟ್ರಂಪೆಟ್ ನೆನಪಿಟ್ಕೊಳೋದೇ ಈಸಿ’ ಎಂದಿದ್ದ. ಆದರೆ ಶರವಾತಿಗೆ ಆ ಹೆಸರನ್ನು ನೆನಪಿಟ್ಟುಕೊಳ್ಳಲು ಹೆಚ್ಚು ಕಷ್ಟಪಡಬೇಕಾಗೇ ಇರಲಿಲ್ಲ. ಎಷ್ಟೋ ವರ್ಷಗಳ ಮೇಲೆ ಅವಳಿಗೊಬ್ಬರು ಹೀಗೇ ಆಪ್ತವಾಗಿ ಹೂವು ಕೊಟ್ಟಿದ್ದು, ಅದರಲ್ಲೂ ರತ್ನಾಕರ, ಅದರಲ್ಲೂ ಮುಡಿದುಕೋ ಎಂದು ಹೇಳುತ್ತ ಕೊಟ್ಟಿದ್ದು ಒಂದು ಅಪರೂಪದ ನೆನಪೇ ಆಗಿತ್ತು. ಅವಳ ಉಸಿರಿರುವಷ್ಟು ದಿನವೂ ಆ ಕ್ಷಣ ನೆನಪಿನಲ್ಲಿರುವಲ್ಲಿ ಅನುಮಾನವೇ ಇರಲಿಲ್ಲ. ಆ ಹೂವನ್ನು ರತ್ನಾಕರನಿಂದ ತಂದುಕೊಂಡಿದ್ದ ಕಾದಂಬರಿಯ ಪುಟದ ನಡುವಲ್ಲೇ ಇಟ್ಟಿದ್ದಳು. ಕಾದಂಬರಿಯನ್ನು ಓದಿ ಮುಗಿಸಿದ್ದರೂ, ದಿನಕ್ಕೊಮ್ಮೆಯಾದರೂ ಆ ಹೂವನ್ನು ನೋಡಿ ಸವರಿ ಪುಳಕಗೊಳ್ಳುವುದು ಮುಗಿಯಲಿಲ್ಲ. ಅವಳ ಜೊತೆ ಆ ಕಾದಂಬರಿ ಆ ಹೂವಿನ ಸಮೇತವಾಗಿ ಊರಿಗೂ ಹೋಗಿತ್ತು. ಭರ್ತಿ ಎಂಟು ತಿಂಗಳುಗಳ ಕಾಲ ಊರಿನಲ್ಲೇ ಮೆತ್ತಿನ ಕೋಣೆಯ ಕಪಾಟಿನ ಮೇಲ್ಬದಿಗೆ ತಣ್ಣಗಿತ್ತು.
ಪುಟ್ಟುವಿಗೆ ಫೋನು ಮಡಿದಾಗಲೆಲ್ಲ ‘ಗಾಯತ್ರಿ ವಾಪಾಸ್ ಬಂದ್ರಾ?’ ಎಂದು ಕೇಳುತ್ತಿದ್ದಳು. ‘ನಂಗೆಂತ ಗೊತ್ತಿದ್ದೆ ಅಮಾ?’ ಎಂದು ಪುಟ್ಟು ಅಲವತ್ತುಕೊಳ್ಳುತ್ತಿದ್ದರೆ ರತ್ನಾಕರನ ನಂಬರೂ ತನ್ನ ಬಳಿ ಇಲ್ಲವಲ್ಲ ಎಂದು ಹಳಹಳಿಸಿದ್ದಳು. ರತ್ನಾಕರನಿಗೂ ತಾನು ನೆನಪಾಗುತ್ತಿದ್ದರೆ ಗಾಯತ್ರಿ ಬಳಿ ನಂಬರ್ ತಗೊಂಡು ಫೋನ್ ಮಾಡಬಹುದಿತ್ತಲ್ಲ ಎಂದೂ ಅನಿಸುತ್ತಿತ್ತು. ಆದರೆ ಇದೆಲ್ಲದರ ಮಧ್ಯೆ ಒಂದಂತೂ ಖಾತ್ರಿಯಾಗಿತ್ತು, ತಾನು ರತ್ನಾಕರನನ್ನು ಇಷ್ಟಪಡುತ್ತಿದ್ದೇನೆ ಎಂಬುದು. ಇಷ್ಟ ಎಂದರೆ.. ಮದುವೆಯಾಗುವುದೇ? ಅಥವಾ ಇಷ್ಟ ಎಂದು ಹೇಳಿಕೊಳ್ಳುವುದೆ? ಹೇಳಿಕೊಳ್ಳದೇ ಸುಮ್ಮನಿರುವುದೇ? ಏನೂ ಈ ಇಷ್ಟ ಎಂದರೆ? ಬೆಳಗಿನ ಹೂ ಬಿಸಿಲಲ್ಲಿ ಅಟ್ಟ ಹತ್ತಿ, ಕಾಟನ್ನು ಸೀರೆ ಹಾಸಿ, ಕಾಳು ಬೇಳೆಗಳನ್ನು ಹರವುತ್ತಿದ್ದಾಗ ಅವನು ಎದುರಿಗೆ ಬಂದು ಕೂತಂತೆ ಭಾಸವಾಗುವುದೇ? ಹೊಳೆಯ ಮುರ್ಕಿಯಲಿ ಪೇಟೆಗೆ ಹೋಗಲು ಬಸ್ಸು ಕಾಯುತ್ತ ನಿಂತಾಗ ಅವನ ದನಿ ಕೇಳಿದಂತೆ ಬೆಚ್ಚಿ ತಿರುಗುವುದೇ? ದೊಡ್ಡ ಬ್ಯಾಣದ ಕಡೆ ಹೋದಾಗೆಲ್ಲ ಸತ್ಯನನ್ನು ಸುಟ್ಟ ಜಾಗ ಕಾಣುತ್ತಿದ್ದಂತೆ ನಿನ್ನೆಗಳಲ್ಲಿ ಮನಸ್ಸನ್ನು ಅದ್ದಿ ಹಿಂಡಲು ರತ್ನಾಕರನ ನೆನಪು ಬಿಡದಿರುವದೇ? ಏನು ಈ ಇಷ್ಟ ಎಂದರೆ? ಗೊತ್ತಿರಲಿಲ್ಲ. ಆದರೂ ಇಷ್ಟ ಅಷ್ಟೇ! ಅವನಿಂದ ದೂರವಿದ್ದಾಗ ಮನಸ್ಸು ಭಾರ, ಹತ್ತಿರದಲ್ಲಿದ್ದರೆ ಏನೋ ಹಿತ, ಅವನು ಪಕ್ಕದಲ್ಲಿ ನಡೆಯುವಾಗ ಒಂದು ಧೈರ್ಯ. ಅವನ ಅಸ್ಥವ್ಯಸ್ಥದ ಬದುಕಿನಲ್ಲಿ ತಾನೂ ಒಂದು ವಸ್ತುವಿನಂತೆ ಕಳೆದು ಹೋಗದೇ, ಆತನ ಹರಗಾಣವನ್ನೆಲ್ಲ ಪಟ್ಟಗಿಡುತ್ತ, ಅವನ ಆಲಸ್ಯವನ್ನು ಬೈಯ್ಯುತ್ತ, ಅವನು ಸುತ್ತುವ ಊರುಗಳಿಗೆ ಸಾಥಿಯಾಗುತ್ತ ಉಳಿದ ಬದುಕನ್ನು ಪ್ರೀತಿಯಿಂದ ಅವನಿಗಾಗಿ ಬದುಕಿಬಿಡಬೇಕಂಬ ಆಸೆ. ಅವಳಲ್ಲಿ ಇಷ್ಟವೆಂಬುದುಕ್ಕೆ ಇರುವ ವ್ಯಾಖ್ಯಾನ ಇದೇ! ತಾನ್ಯಾಕೆ ರತ್ನಾಕರನನ್ನು ಮದುವೆ ಆಗಬಾರದು ಎಂಬ ತಿಳಿ ಯೋಚನೆಯೊಂದು ನಿಧಾನಕ್ಕೆ ಇದರೊಟ್ಟಿಗೆ ಸೇರಿಕೊಂಡಿತು. ಆದರದು ಗಟ್ಟಿಯಾದ ನಿರ್ಧಾರವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ಮತ್ತೆ ಇದೆಲ್ಲ ಅವಳಂದುಕೊಂಡಷ್ಟೇನು ಸಸಾರವಲ್ಲ ಎಂಬುದರ ಅರಿವೂ ಇತ್ತು. ಗಂಡ ಇಲ್ಲದೇ ಹದಿನೆಂಟು ವರ್ಷ ಕಳೆದವಳಿಗೆ ಈಗೇನಾಯಿತ್ತಪ್ಪ ಎಂದು ಊರು ಮಾತಾಡಿಕೊಳ್ಳುತ್ತದೆ. ಬೆಂಗಳೂರೆಂದು ಕುಣಿಯುವುದೇ ಇದಕ್ಕಾಗಿ ಎಂಬವರೆಗೂ ಹೋಗಿ ಮುಟ್ಟುತ್ತದೆ. ರಸ್ತೆಯ ಒಂದು ತುದಿಯಲ್ಲಿ ತಾನು ಇನ್ನೊಂದು ತುದಿಯಲ್ಲಿ ಅವನು ನಡೆದ ನಿಶ್ಕಲ್ಮಶ ಹೆಜ್ಜೆಗಳನ್ನು ಯಾರಿಗೆ ತೋರಿಸಿ ಅರ್ಥ ಮಾಡಿಸುವುದು? ಮನೆಯವರಿಗಾದರೂ ಅರ್ಥವಾಗಬಹುದೆ? ಇನ್ನು ಅಪ್ಪನ ಮನೆಯವರ ಪ್ರತಿಕ್ರಿಯೆ ಏನಿರಬಹುದು? ಮುಖ್ಯವಾಗಿ ಪುಟ್ಟು ಇದನ್ನು ಹೇಗೇ ತೆಗೆದುಕೊಳ್ಳಬಹುದು? ಇನ್ನೊಂದೆರಡು ವರ್ಷಗಳುರುಳಿದರೆ ಅವನೇ ಮದುವೆಗೆ ಬರುತ್ತಾನೆ, ಈಗ ತಾನು ಮದುವೆ ಆಗುವುದೆ? ಹೀಗೇ ಸಾವಿರ ಪ್ರಶ್ನೆಗಳು. ರತ್ನಾಕರನ ಮಗ್ಗುಲಿಗೆ ಹೊರಳಿದರೆ ಅವನಿಗೆ ತಾನಿಷ್ಟವೋ ಇಲ್ಲವೋ ಎಂಬುದೇ ಖಾತ್ರಿಯಿಲ್ಲ. ಜೊತೆಗೆ ಗಾಯತ್ರಿ ಅವನು ಈಗ ಒಟ್ಟಾಗಿದ್ದರೆ ಎಂಬ ಭಯ ಬೇರೆ.. ಒಂದೊಂದು ಸಲ ತನ್ನ ಯೋಚನೆಯೇ ತಪ್ಪು ಎನಿಸಿ ಶರಾವತಿ ರತ್ನಾಕರನನ್ನು ಮರೆಯಲು ಯತ್ನಿಸಿದ್ದೂ ಇದೆ, ಆದರೆ ಮುರಿದು ಹೋದ ಪ್ರೀತಿಗಿಂತ, ಮರೆಯಬೇಕಾದ ಪ್ರೀತಿಗಿಂತ, ನಿವೇದಿಸಿಕೊಳ್ಳದ ಪ್ರೀತಿಯೇ ಹೆಚ್ಚು ನೋವು ಕೊಡುವುದು, ಭಾರ ಎನಿಸುವುದು, ಒಪ್ಪಲಿ ಬಿಡಲಿ ಹೇಳಿಕೊಂಡು ಬಿಡಬೇಕೆಂಬ ಹುಂಬು ಧೈರ್ಯ ಕೊಡುವುದು. ಏನಾದರಾಗಲಿ ಈ ಸಲ ಬೆಂಗಳೂರಿಗೆ ಹೋದಾಗ ರತ್ನಾಕರನ ಬಳಿ ಇದನ್ನು ಹೇಳಿಕೊಳ್ಳಲೇಬೇಕೆಂದು ನಿರ್ಧರಿಸಿದ್ದಳು.
ಒಂದಿನ ಅಡಕೆ ಸುಲಿಯುತ್ತಿದ್ದಾಗ ನೇತ್ರಳಿಗೆ ಹೇಳಿದಳು “ನೇತ್ರಾ ಯಾವತ್ತೂ ಕನ್ಸಲ್ ಬರ್ದೇ ಹೋಗಿದ್ ಸತ್ಯ ಹೆಗಡ್ರು ಮೊನ್ನೆ ಕನಸಲ್ ಬಂದ್ರು ಮಾರಾಯ್ತಿ, ಒಂಥರ ಹೆದ್ರಕೆ ಆಗೋತು.’ ನೇತ್ರಳಿಗೆ ಏನು ಹೇಳಬೇಕೋ ತೋಚದೆ ‘ಅಮ್ಮ ಹಂಗಿದ್ ಕನಸೆಲ್ಲ ಬೀಳ್ತಾ ಇರ್ತೈತಿ ಬಿಡ್ರೀ’ ಎಂದು ಅದನ್ನು ಸಹಜವಾಗಿ ತೆಗೆದುಕೊಳ್ಳುವಂತೆ ಮಾಡಲು ನೋಡಿದ್ದಳು. ಆದರೆ ಕುರ್ಚಿ ಕಟ್ಟಿಲ ಮೇಲೇ ಸತ್ಯ ಕುಳಿತ ಹಾಗೇ, ತನ್ನನ್ನೇ ಎವೆಯಿಕ್ಕದೇ ನೋಡಿದ ಹಾಗೇ ಬಿದ್ದ ಆ ವಿಚಿತ್ರ ಕನಸನ್ನು ನೆನೆಸಿಕೊಂಡಾಗಲೆಲ್ಲ ಶರಾವತಿಗೆ ನಡುಕ ಬರುತ್ತಿತ್ತು. ರತ್ನಾಕರನ ಕುರಿತು ತಾನು ಯೋಚಿಸುತ್ತಿರುವುದಕ್ಕೇ ಸತ್ಯ ಕನಸಲ್ಲಿ ಬಂದಿದ್ದು ಎನಿಸುತ್ತಿತ್ತು. ಇಷ್ಟು ವರ್ಷಗಳಲ್ಲಿ ಎಷ್ಟೇ ಹಂಬಲು ಮಾಡಿಕೊಂಡರೂ ಸತ್ಯನ ಮುಖ ಸರಿಯಾಗಿ ಕಣ್ಮುಂದೆ ಬರುತ್ತಿರಲಿಲ್ಲ. ಹೆಬ್ಬಾಗಿಲಿನ ಗೋಡೆಗಿದ್ದ ಅವನ ಫೋಟೋ ನಿಧಾನಕ್ಕೆ ಜಗುಲಿಗೆ ಸರಿದು, ಅಲ್ಲಿಂದ ಮೆತ್ತಿಗೆ ಸೇರಿ ಅಲ್ಲಿಂದ ಶರಾವತಿಯ ಕೋಣೆಯ ನಾಗಂದಿಗೆಯ ಪಾಲಾದಲಾಗಾಯ್ತು ದಿನ ಅವನನ್ನು ನೋಡುವುದೇ ಇರುತ್ತಿರಲಿಲ್ಲ, ಎಲ್ಲಾದರೂ ಕೋಣೆ ಚೊಕ್ಕ ಮಾಡುವಾಗ ಧೂಳು ಕೊಡವಿ ಇಡುತ್ತಿದ್ದಳಷ್ಟೆ. ಕಡೆ ಕಡೆಗೆ ಅದಕ್ಕೆ ಸುರುಳಿ ಸುರಿಳಿಯಾಗಿ ಹುಳ ಹಿಡಿದು ಸತ್ಯನ ಮುಖವೇ ಕಾಣದಂತಾಗಿತ್ತು. ಆದರೆ ಕನಸ್ಸಿನಲ್ಲಿ ಮಾತ್ರ ಎಷ್ಟು ನಿಚ್ಚಳವಾಗಿ ಸತ್ಯ ಕಾಣಿಸಿದ್ದನಲ್ಲ..! ಮತ್ತೆ ನೇತ್ರಳನ್ನು ಕೇಳಿಯೇ ಬಿಟ್ಟಳು ‘ನೀನೆಂತಕ್ಕೆ ಶಂಕ್ರ ಸತ್ತೋದ್ಮೇಲೆ ಇನ್ನೊಂದ್ ಮದ್ವೆ ಆಗ್ಲಿಲ್ಲ’ ಎಂದು. ’ಮಳ್ಳನ್ರ ಅಮಾ?’ ಎನ್ನುತ್ತ ದೊಡ್ಡ ನಗೆಯಾಡಿ ನೇತ್ರ ಮತ್ತೆಲ್ಲೋ ನೋಡಿದ್ದಳು. ತಾನು ಹಾಗೆ ಕೇಳಬಾರದಿತ್ತು ಎಂದು ಆಮೇಲೆ ಅನ್ನಿಸಿತ್ತು ಶರವಾತಿಗೆ. ತನ್ನಂತೆ ನೇತ್ರಳ ಎದೆಯೊಳಗೂ ಒಂದು ಬಿರುಗಾಳಿ ಹುಟ್ಟಿದರೆ ಎಂಬ ಭಯವೂ ಆಯಿತು.
ಶರಾವತಿಗೆ ಕೊಂಚ ಬಿಡುವಾಗುವುದೇ ಕೊನೆಕೊಯ್ಲು ಮುಗಿದ ಮೇಲೇ. ಆದರೆ ಅಟ್ಟದ ಮೇಲೆ ಅಡಕೆ ಇರುವಷ್ಟು ದಿನ ಎಲ್ಲಿಗೂ ಹೋಗಲಾಗುತ್ತಿರಲಿಲ್ಲ. ಭಾವಂದಿರು ಮತ್ತವರ ಮಕ್ಕಳೆಲ್ಲ ಆಲೆಮನೆಯತ್ತ ನಡೆದರೆ ಅಟ್ಟದ ಮೇಲಿನ ಅಡಕೆ ಒಬ್ಬಳಿಸುವ ಪಾಳಿ ಶರಾವತಿಯದೇ. ಆದರೂ ಇದೆಲ್ಲ ಮುಗಿದು ಯಾವತ್ತು ಬೆಂಗಳೂರಿಗೆ ಹೋಗುತ್ತೆನೋ ಎಂದು ಅವಳಿಗೂ ಅನಿಸುತ್ತಿತ್ತು. ಪುಟ್ಟುವೂ ಕರೆಯುತ್ತಿದ್ದ. ಫೆಬ್ರುವರಿ ಮೊದಲ ವಾರದಲ್ಲಿದ್ದ ಮಾವನ ಶ್ರಾದ್ಧ ಮುಗಿಸಿ ಕಡೆಗೂ ಬೆಂಗಳೂರಿನ ಬಸ್ಸು ಹತ್ತಿದ್ದಳು. ಹೋಗುವಾಗ ದೊಡ್ಡಕ್ಕ ‘ಈ ಸಲ ಚಾಲಿ ನಾವೇ ಸುಲ್ಯದಡ ಶರು’ ಎಂದಿದ್ದರ ಅರ್ಥ ಈ ಸಲ ಅವಳು ಮೂರ್ನಾಲ್ಕು ತಿಂಗಳುಗಳೆಲ್ಲ ಅಲ್ಲೇ ಉಳಿಯಬಾರದು ಎಂಬುದಾಗಿತ್ತು, ಅದು ಶರಾವತಿಗೂ ಗೊತ್ತಿತ್ತು.
ಬೆಂಗಳೂರಿಗೆ ಬರುತ್ತಿದ್ದಂತೆ ಮತ್ತದೆ ಅವಳಿಷ್ಟದ ದಿನಚರಿ. ಪುಟ್ಟುವನ್ನು ಆಫೀಸಿಗೆ ಕಳುಹಿಸುವ ಗಡಿಬಿಡಿಯ ಬೆಳಗುಗಳು, ಹೂವಿನ ಪರಿಮಳದ ಮಧ್ಯಾಹ್ನಗಳು, ಪಿಂಕ್ ಟ್ರಂಪೆಟ್ ಮರಗಳ ನೆರಳಲ್ಲಿ ಏನೇನೋ ಕತೆ ಹೇಳುತ್ತ ರತ್ನಾಕರನ ಜೊತೆ ಕಳೆವ ವಾಕಿಂಗಿನ ಸಂಜೆಗಳು, ಅವನ ಬಳಿ ಹೇಳುವುದೋ ಬೇಡವೋ ಎಂಬ ಜಿಜ್ಞಾಸೆಯ ರಾತ್ರಿಗಳು ಒಂದಕ್ಕೊಂದು ಖೋ ಕೊಟ್ಟು ಓಡುತ್ತಿದ್ದವು. ಬೆಂಗಳೂರಿಗೆ ಬಂದ ದಿನವೇ ರತ್ನಾಕರನ ಬಳಿ ‘ಗಾಯತ್ರಿಯವ್ರು..?’ ಎಂದು ಕೇಳಿದ್ದಕ್ಕೆ ‘ಮತ್ತೆ ಬರೋ ಆಲೋಚನೇಲಿ ಇಲ್ಲ, ಮೂರ್ನಾಲ್ಕು ಸಲ ಹೋಗಿ ಕರ್ದಿದ್ದಾಯ್ತು’ ಎಂದಿದ್ದ. ಪಾಪ ಅನ್ನಿಸಿದರೂ ಒಳಗೊಳಗೆ ಶರಾವತಿಗೆ ಖುಷಿಯೂ ಆಗಿತ್ತು ಎನ್ನದಿದ್ದರೆ ತಪ್ಪಾಗುತ್ತದೆ. ಮತ್ತಿದರಿಂದ ಅವನ ಬಳಿ ಎರಡನೇ ಮದುವೆ ಬಗ್ಗೆ ಕೇಳುವ ಧೈರ್ಯವೂ ಹೆಚ್ಚಾಗಿತ್ತು. ಒಂದಿನ ಅವಳ ಬಳಿ ಉಳಿದು ಹೋಗಿದ್ದ ಅವನ ಕಾದಂಬರಿಯನ್ನು ಮನೆಗೇ ಹೋಗಿ ಕೊಟ್ಟು ಬಂದಿದ್ದಳು. ‘ಶರಾವತಿ ರತ್ನಾಕರನನ್ನು ಸೇರಬಹುದಾ? ತನ್ನದೆಲ್ಲವನ್ನೂ ಬಗಲಲ್ಲಿ ಅವುಚಿಕೊಂಡೇ ಹರಿಯುತ್ತಾ.. ಅವನದೆಲ್ಲವನ್ನೂ ಇದ್ದಂತೇ ಒಪ್ಪಿಕೊಳ್ಳುತ್ತಾ.. ಶರಾವತಿ ರತ್ನಾಕರನನ್ನು ಸೇರಬಹುದಾ?’ ಎಂದು ಹಾಳೆಯೊಂದರಲ್ಲಿ ಬರೆದು ಅದರಲ್ಲಿಟ್ಟುಬಿಟ್ಟಿದ್ದಳು. ಅದೇ ಕಾದಂಬರಿಯಲ್ಲಿ ಬೆಚ್ಚಗಿದ್ದ ರತ್ನಾಕರನೇ ಕೊಟ್ಟ ಒಣಗಿದ ಪಿಂಕ್ ಟ್ರಂಪೆಟ್ ಹೂವಿಗೆ ಆ ಸಾಲುಗಳನ್ನೋದಿ ಬಣ್ಣ ಬಂದಿತ್ತೇ? ಗೊತ್ತಿಲ್ಲ. ಶೆಲ್ಫಿನಲ್ಲಿಡಲು ಹೋದಾಗ ಪತ್ರ ಸಿಗುತ್ತದೆ, ಓದುತ್ತಾನೆ ಎಂದು ಅಂದಾಜಿಸಿದ್ದ ಶರಾವತಿ ಓದಿ ಏನೂ ಹೇಳುತ್ತಾನೋ ಎಂಬ ಪುಕಪುಕಿಯಲ್ಲಿದ್ದಳು. ಆದರೆ ಮರುದಿನ ಸಿಕ್ಕಾಗ ಒಮ್ಮೆಯೂ ಪತ್ರದ ಪ್ರಸ್ತಾಪವೇ ಬರಲಿಲ್ಲ. ಆದರೂ ಶರಾವತಿ ಮಾತ್ರ ಕಾಯುತ್ತಲೇ ಇದ್ದಳು. ಮಧ್ಯೆ ಮಧ್ಯೆ ಗಾಯತ್ರಿಯ ವಿಷಯ ಬಂದಾಗಲೆಲ್ಲ ಶರಾವತಿ ಮಾತೇ ಆಡುತ್ತಿರಲಿಲ್ಲ. ಒಂದಷ್ಟು ದಿನ ಕಳೆದ ಮೇಲೆ ಸ್ವಪ್ನ ಬುಕ್ ಹೌಸಿಗೆ ಕರೆದುಕೊಂಡು ಹೋಗಿ ಆತ ಪುಸ್ತಕಗಳನ್ನು ಕೊಳ್ಳುತ್ತಿದ್ದಾಗ ಹುಚ್ಚು ಧೈರ್ಯ ಮಾಡಿ ಕೇಳಿಬಿಟ್ಟಳು ‘ನೀವು ಇನ್ನೊಂದ್ ಮದ್ವೆ ಆಗುದಿಲ್ವಾ?’ ಎಂದು. ಅವನೇ ಹಾಗೆ ತಣ್ಣಗೆ ಪ್ರಶ್ನೆ ಕೇಳಲು ಕಲಿಸಿಕೊಟ್ಟಿದ್ದು, ಮತ್ತು ನೇತ್ರಳ ಬಳಿ ಇದೇ ರೀತಿ ಪ್ರಶ್ನಿಸಿ ತಾಲೀಮೂ ಆಗಿದ್ದರಿಂದ ಹಿಂಜರಿಕೆಯಿಲ್ಲದೆ ಕೇಳಿದ್ದಳು. ರತ್ನಾಕರ ಒಂದಷ್ಟು ಕ್ಷಣ ಮೌನವಾಗಿದ್ದು ಕಡೆಗೆ ‘ಅಯ್ಯೋ ಒಂದ್ ಮದ್ವೆ ಸಾಕಾಗಿದೆ’ ಎಂದು ನಕ್ಕಿದ್ದ. ಅವನು ಹೀಗೆಯೇ ಎಲ್ಲ ಮಾತಿಗೂ ನಗುವನ್ನು ಅಂಟಿಸುತ್ತಾನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಮಾತಾಡುತ್ತಾನೆ. ಆದರೆ ಒಂದಷ್ಟು ಸೆಕೆಂಡು ಮೌನವಾಗಿದ್ದನಲ್ಲ? ಮುಖಕ್ಕೆ ಮುಖ ಕೊಡದೆ ಉತ್ತರಿಸಿದನಲ್ಲ? ಬೇರೆ ಕಾರಣವೇನಾದರೂ ಇರಬಹುದೆ? ಅದು ತಾನೇ? ಎಂದು ಹುಡುಕಾಡಿದ್ದಳು. ಆದರೆ ‘ಈ ಆಥರ್ ಬುಕ್ಕು ಗಾಯತ್ರಿಗಿಷ್ಟ, ಈ ಪೆನ್ನುಗಳು ಅವಳಿಗೆ ಮಂಡಲ ಬಿಡ್ಸೋಕೆ ಬೇಕಾಗತ್ತೆ’ ಎಂದು ಒಂದು ರಾಶಿ ಪೆನ್ನು ಪುಸ್ತಕಗಳನ್ನು ಕೊಂಡು ಕಾರಿಗೆ ಆತ ತುಂಬುತ್ತಿದ್ದರೆ ಈ ಇವುಗಳ ರಾಶಿಯಲ್ಲಿ ತನ್ನ ಪತ್ರವಿರುವ ಕಾದಂಬದರಿ ಕಳೆದು ಹೋಗುವ ಭಯವಾಯಿತು ಶರಾವತಿಗೆ. ತಾನೇ ದುಡುಕಿಬಿಟ್ಟೆ ಎನಿಸುತ್ತಿತ್ತು. ಅವರ ಮನೆಗೆ ಹೋಗಿ ಆ ಪುಸ್ತಕದಲ್ಲಿರುವ ಪತ್ರವನ್ನು ವಾಪಾಸು ತಂದುಬಿಡಲೇ? ಎನಿಸಿದರೂ ಇನ್ನೊಂದು ದಿನ ಕಾಯೋಣ ಕಾಯೋಣ ಎನ್ನುತ್ತಾ ಮುಂದೂಡಿ ದೂಡಿ ಊರಿಗೆ ಮರಳುವ ದಿನವೂ ಬಂದುಬಿಟ್ಟಿತ್ತು.
ಇವತ್ತು ರಾತ್ರಿಗೇ ಬಸ್ಸು ಬುಕ್ಕಾಗಿತ್ತು. ರತ್ನಾಕರನ ಬಳಿ ಊರಿಗೆ ಹೊರಟೆ ಎಂದದರೆ ಅವನಿಗೇನಾದರೂ ಇಷ್ಟೊತ್ತಿನ ಒಳಗೇ ಆ ಪತ್ರ ಸಿಕ್ಕಿ ತನ್ನ ಮನಸ್ಸು ಅರ್ಥವಾಗಿದ್ದರೆ ಅದಕ್ಕೆ ಉತ್ತರ ಕೊಟ್ಟೇ ಕೊಡುತ್ತಾನೆ ಎಂಬ ಆಸೆಯಲ್ಲಿ ದೇವಸ್ಥಾನದ ಬಳಿ ಕಪ್ಪಾಗುಗುವವರೆಗೂ ಕಾದಳು. ರತ್ನಾಕರ ಬರದಿದ್ದಕ್ಕೆ ವಾಪಾಸಾಗುವಾಗ ಅವನ ಮನೆ ಹೊಕ್ಕಳು. ಅವನೇನೋ ಬರೆಯುತ್ತಿದ್ದ. ಇವಳನ್ನು ನೋಡಿದ್ದೆ ‘ಕಾಫಿ ಕುಡಿಯೋಕೊಬ್ರು ಸಿಕ್ರು’ ಎಂದು ಎದ್ದ. ಶರಾವತಿ ಪದಬಂಧ ತುಂಬುತ್ತಾ ‘ಇವತ್ ನಾನು ಊರಿಗ್ ಹೊರ್ಟೆ’ ಎಂದಳು. ‘ಯಾಕೇ..? ಈಸಲ ಇಷ್ಟ್ ಬೇಗ’ ಎಂದು ಅಚ್ಚರಿಯಲ್ಲಿ ಕೇಳಿದ. ‘ಚಾಲಿ ಸುಲಿಯೋದುಂಟು, ಹೋದ್ವರ್ಷ ಮಿಷನ್ನಿಗೆ ಕಳ್ಸಿದ್ರಿಂದ ಗೋಟೇ ಹೆಚ್ಚಾಯ್ತು, ಮತ್ತೆ ಒಡಕು ಅಡಕೆನೇ ಜಾಸ್ತಿ , ಅದ್ಕೇ ಈ ಸಲ ನಾವೇ ಸುಲ್ದು ಮುಗಿಸ್ತೇವೆ’ ಎಂದಳು., ‘ಹಾಗಿದ್ರೆ ಮತ್ತೆ ಬರೋದು ಮುಂದಿನ ವರ್ಷನೇ ಅಲ್ವಾ?’ ಎಂದು ನಕ್ಕ. ಶರಾವತಿ ನಗಲಿಲ್ಲ. ‘ಯಾವುದಾದರೂ ಪುಸ್ತಕ ಬೇಕಿದ್ರೆ ತಗೊಂಡ್ಹೋಗಿ’ ಎಂದಾಗ ಶರಾವತಿಗೂ ಆ ಕಾದಂಬರಿಯಲ್ಲಿ ಪತ್ರ ಹಾಗೇ ಇದೆಯೇ ಎಂದು ನೋಡುವ ಕುತೂಹಲವಾಗಿ ಪುಸ್ತಕದ ಶೆಲ್ಫಿನಲ್ಲಿ ಆ ಕಾದಂಬರಿಯನ್ನು ಹುಡುಕೇ ಹುಡುಕಿದಳು, ಸಿಗಲಿಲ್ಲ. ರತ್ನಾಕರನನ್ನು ಕೇಳಿದರೆ ‘ನೀವ್ ತಂದ್ಕೊಟ್ಟ ಮರುದಿನನೇ ನನ್ ಫ್ರೆಂಡ್ ಒಬ್ರು ತಗೊಂಡೋದ್ರು’ ಎಂದುಬಿಟ್ಟ. ಇನ್ಯಾವತ್ತು ಆ ಪತ್ರ ಸಿಕ್ಕು ಏನು ಬಾನಗಡಿ ಆಗುವುದಿಯೋ ಎಂದು ಭಯವಾಯಿತು, ಒಂದುವೇಳೆ ಗಾಯತ್ರಿ ವಾಪಾಸು ಬಂದು ಅವಳ ಕೈಗೆ ಸಿಕ್ಕರೆ ಎಂದು ಢವ ಢವಗುಟ್ಟಿತು. ಪತ್ರ ಇಟ್ಟಿದ್ದೆ ಎಂದು ಹೇಳಿಬಿಡಲೇ? ಹೇಳುವುದಾರೂ ಹೇಗೇ? ಕೆಲವೊಂದನ್ನು ಬಾಯೊಡೆದು ಹೇಳಲು ಸಾದ್ಯವಿಲ್ಲ. ಅವನು ಮಾಡಿಕೊಟ್ಟಿದ್ದ ಕಾಫಿ ಕುಡಿಯುವಷ್ಟರಲ್ಲಿ ಮೈಯ್ಯೆಲ್ಲ ಬೆವೆತು ಅಲ್ಲಿರಲಾಗದೇ ಹೊರಟುಬಿಟ್ಟಳು. ಹಿಂದೆಯೇ ಬಂದ ರತ್ನಾಕರ ‘ಪರಿಚಯ ಆಗಿ ವರ್ಷ ಆದ್ರೂ ನಿಮ್ ನಂಬರೂ ಇಲ್ಲ, ಬೆಸ್ಟ್ ಫ್ರೆಂಡ್ಸ್ ಅನ್ನೋದು ದಂಡಕ್ಕೆ’ ಎಂದು ನಕ್ಕ. ಶರವಾತಿಯ ಕಣ್ಣಲ್ಲಿ ತೆಳ್ಳಗೆ ನೀರು ಆವರಿಸುತ್ತಿತ್ತು. ಅವಳ ನಂಬರನ್ನು ಸೇವ್ ಮಾಡಿಕೊಂಡು, ನಕ್ಕು, ‘ಪಿಂಕ್ ಟ್ರಂಪೆಟ್’ ಎಂದ. ಶರಾವತಿ ಅಪ್ರತಿಭಳಾಗಿ ನೋಡಲು ‘ಹಾಗೇ ಸೇವ್ ಮಾಡ್ಕೊಂಡಿದೀನಿ.. ನೀವೂ ಈ ಹೂವಿನ್ ಹಾಗೇ ಅಲ್ವಾ? ಫೆಬ್ರುವರಿ ಮಾರ್ಚ್ ಅಂದ್ರೆ ಬರ್ತೀರ, ಒಂದೆರಡ್ ತಿಂಗಳು ಅಬ್ಬರ ಮಾಡ್ತೀರ, ಹೊರಟೋಗ್ತೀರ.. ಮತ್ತೆ ನಿಮ್ಮನ್ನ ನೋಡಬೇಕಂದ್ರೆ ಇನ್ನೊಂದ್ ಪಿಂಕ್ ಟ್ರಂಪೆಟ್ ಸೀಸನ್ ಬರೋತನಕ ಕಾಯಬೇಕು’ ಎಂದು ಜೋರಾಗಿ ನಕ್ಕ. ಶರಾವತಿಯೂ ನೋವನ್ನೆಲ್ಲ ಒಳಗೆಳೆದುಕೊಂಡು ನೇತ್ರಳ ಹಾಗೇ ದೊಡ್ಡಕೆ ನಕ್ಕುಬಿಟ್ಟಳು..
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗವು…
ಬಡ್ಡಿಹಣವನ್ನು ಸುಟ್ಟು ಹಾಕಬೇಕು ಎಂದು ಒತ್ತಾಯಿಸಿದ ಮುಸ್ಲಿಯಾರರ ಮುಂದೆ ಹಲವು ಸವಾಲುಗಳು ಎದ್ದು ನಿಂತವು. ಅವರ ಮನದಲ್ಲಿ ಜಿನುಗುವ ದುಃಖವೊಂದು ಒಸರುತ್ತಿತ್ತು.
:: ಬಿ.ಎಂ ಹನೀಫ್
‘ಅಬ್ಬಾ.. ಇಲ್ಲಿ ಕೇಳಿ. 30 ವರ್ಷಗಳಿಂದ ಆ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡಿದ್ರೀ.. ಏನ್ ನಿಮ್ಮನೆಗೆ ಬಂದು ಜುಜುಬಿ ಶಾಲು ಹಾಕಿಯಾದ್ರೂ ಸನ್ಮಾನ ಮಾಡಿದ್ರಾ? 30 ವರ್ಷ ದುಡಿದದ್ದಕ್ಕೆ ಸರ್ವಿಸ್, ಗ್ರಾಚ್ಯುಟಿ ಕೊಡ್ತಾರಾ? ಇದ್ಯಾವುದೂ ಇಲ್ಲ. ಈಗಲೂ ಜುಜುಬಿ ಸಂಬಳ. ಅದೂ ಕುಗ್ರಾಮದಲ್ಲಿ ಕಾಡಿನ ನಡುವೆ ಬದುಕಬೇಕು. ಒಂದು ಸರಿಯಾದ ಆಸ್ಪತ್ರೆ ಇಲ್ಲ. ಇರೋದೊಂದು ಉರ್ದು ಶಾಲೆ. ಜಮಾತ್‌ನ ಒಳರಾಜಕೀಯದ ಸುಳಿಯಲ್ಲಿ ನೀವ್ಯಾಕೆ ಸಿಕ್ಕಿ ಬೀಳ್ತೀರಿ? ಸಾಕು ಜಮಾತನ್ನು ಉದ್ಧಾರ ಮಾಡಿದ್ದು. ಮುಂಬೈಗೆ ಬಂದು ಇಲ್ಲೇ ನಮ್ಜೊತೆಗೆ ಇದ್ದುಬಿಡಿ. ಉಮ್ಮನಿಗೆ ಹೇಳಿದ್ದೇನೆ, ಅವರು ಬರೋದಕ್ಕೆ ರೆಡಿ. ನಿಮ್ದೇ ಪ್ರಾಬ್ಲಮ್ಮು…!’
– ರಾತ್ರಿ ಫೋನ್ ಮಾಡಿದ ಮಗ ಸಿದ್ದೀಕ್ ಸಿಟ್ಟಿಗೆದ್ದು ಹೇಳಿದ ಮಾತುಗಳು ಅಬ್ದುಲ್ ಖಾದರ್ ಮುಸ್ಲಿಯಾರರ ಕಿವಿಯಲ್ಲಿ ಬೆಳಿಗ್ಗೆಯಿಂದಲೂ ಗುಂಯ್‌ಗುಡುತ್ತಿವೆ. ಒಂದು ವರ್ಷದಿಂದ ಇದನ್ನೇ ಸೌಮ್ಯವಾಗಿ ಹೇಳುತ್ತಿದ್ದ. ಈಗ ಅವನಿಗೂ ಹತಾಶೆ ಉಕ್ಕೇರಿದ್ದಕ್ಕೆ ಕಾರಣಗಳಿವೆ. ಜಮಾತಿನ ಪ್ರೆಸಿಡೆಂಟ್ ಕಂಟ್ರಾಕ್ಟರ್ ಅಬ್ದುಲ್ಲಾ ಹಾಜಿ ಮತ್ತು ತನ್ನ ನಡುವೆ ಕಳೆದ ಶುಕ್ರವಾರ ಜುಮಾ ನಮಾಜಿನ ಬಳಿಕ ಮಸೀದಿಯಲ್ಲಿ ನಡೆದ ಖಡಾಖಡಿ ಜಗಳದ ಸುದ್ದಿ ಅವನಿಗೂ ಮುಟ್ಟಿದೆ.
‘ಯಾವ ಸಬೂಬನ್ನೂ ಈ ಸಲ ನಾನು ಕೇಳಿಸಿಕೊಳ್ಳುವುದಿಲ್ಲ ಅಬ್ಬಾ. ಅಲ್ಲಿರೋದು ಮಸೀದಿಯವರ ಬಾಡಿಗೆ ಮನೆ, ಸ್ವಂತದ್ದಲ್ಲ. ಬಿಟ್ಟು ಬರಲು ಸಂಬಂಧಿಕರೂ ಇಲ್ಲವಲ್ಲ! ಇಲ್ಲಿ ಸಣ್ಣದಾದರೂ ಸ್ವಂತ ಫ್ಲ್ಯಾಟ್ ಇದೆ. ಮುಂದಿನ ತಿಂಗಳು ಬರುತ್ತೇನೆ. ಊರು ಬಿಡಲು ರೆಡಿಯಾಗಿ. 20 ವರ್ಷಗಳಿಂದ ಅಲ್ಲಿದ್ದೀನಿ ಅಂತೆಲ್ಲಾ ಎಮೋಷನಲ್ ಆಗಬೇಡಿ. ಮಸೀದಿ ಅಧ್ಯಕ್ಷರಿಗೆ ಈಗಲೇ ಹೇಳಿ. ಅವರು ಬೇಕಿದ್ರೆ ಬೇರೆ ಮುಸ್ಲಿಯಾರರ ವ್ಯವಸ್ಥೆ ಮಾಡಿಕೊಳ್ತಾರೆ.. ಅಷ್ಟೇ..’– ನಿರ್ಧಾರದ ಧ್ವನಿಯಲ್ಲಿ ಹೇಳಿ ಮರುಮಾತಿಗೂ ಅವಕಾಶವಿಲ್ಲದಂತೆ ಫೋನ್ ಕಟ್ ಮಾಡಿದ್ದ.
***
60 ದಾಟಿದ ಅಜಾನುಬಾಹು ಖಾದರ್ ಮುಸ್ಲಿಯಾರ್ ಕಣ್ಣು ಮುಚ್ಚಿಕೊಂಡು ಯೋಚನೆಯ ಮಡುವಿಗೆ ಬಿದ್ದರು. ಅರ್ಧ ಕಾಡು, ಅರ್ಧ ಊರು ಎನ್ನುವಂತಿದ್ದ ಈ ಪುಟ್ಟ ಗ್ರಾಮಕ್ಕೆ 30 ವರ್ಷಗಳ ಹಿಂದೆ ಅವರು ಬಂದಿಳಿದದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ. ಈ ಊರಿಗೇ ಬರಬೇಕೆಂದು ಬಂದವರಲ್ಲ. ಹೆದ್ದಾರಿಯಲ್ಲಿ ಬಸ್ಸಿಳಿದಾಗ ಕಂಡ ತಿರುವಿನಲ್ಲಿ ಊರಿನ ಬೋರ್ಡ್ ಕಾಣಿಸಿತು. ಇಲ್ಲೊಂದು ಪುರಾತನ ಮಸೀದಿ ಇದೆಯೆಂದೂ ಶೇಕಡಾ 90ರಷ್ಟು ಮುಸ್ಲಿಮರೇ ಇದ್ದಾರೆಂದೂ ಕೇಳಿದ್ದು ನೆನಪಿತ್ತು. ಅಷ್ಟೇ.. ಬೆಳ್ಳಂಬೆಳಿಗ್ಗೆಯ ಹೊತ್ತು ಪರಮ ದಯಾಮಯನು ದಾರಿ ತೋರಿಸಿದಂತೆ ಜಮಾತ್ ಪ್ರೆಸಿಡೆಂಟರ ಮನೆಯ ಮುಂದೆ ಬ್ಯಾಗು ಹಿಡಿದು ನಿಂತಿದ್ದರು.
ತೀಕ್ಷ್ಣ ಕಣ್ಣು. ಸಹೃದಯಿ. ಸದಾ ಉದ್ದನೆಯ ಬಿಳಿಜುಬ್ಬಾ, ಬಿಳೀ ಮುಂಡು ಮತ್ತು ತಲೆಗೊಂದು ಬಿಳಿ ಮುಂಡಾಸು. ಕಾಲಲ್ಲಿ ಚರ್ ಎನ್ನುವ ಚರ್ಮದ ಚಡಾವು. ಸ್ವಲ್ಪ ದೊಡ್ಡದೇ ಎನ್ನಬಹುದಾದ ಹೊಟ್ಟೆಯಿದ್ದರೂ, ಪ್ರತಿದಿನ ಐದು ಹೊತ್ತು ನಮಾಜಿನ ಸಾಷ್ಟಾಂಗದಲ್ಲಿ ನೆತ್ತಿ ನೆಲಕ್ಕೆ ಚುಂಬಿಸಿ ಮೇಲೇಳುವಾಗ ಎಂದೂ ಏದುಸಿರು ಬಿಟ್ಟಿಲ್ಲ ಎನ್ನುವಷ್ಟು ಕಳಕಳೆಯ ಗಟ್ಟಿ ಆರೋಗ್ಯ. ಸ್ವಚ್ಛಂದ ಗಾಳಿಗೆ ಅಲ್ಲಾಡಿ ನಿಲುವಂಗಿಯ ಮೊದಲ ಬಟನನ್ನು ಸದಾ ಬ್ರಶ್ಶು ಮಾಡುವ ನೀಳಗಡ್ಡ. ಅವರ ಜೊತೆಗೇ ಬಂದವರು ಬೆಳ್ಳಾನೆ ಬೆಳದಿಂಗಳ ಮೈಬಣ್ಣದ ತುಂಬು ಸುಂದರಿ ಧರ್ಮಪತ್ನಿ ನಫೀಸಮ್ಮ. ಎಲ್ಲಿಂದ ಬಂದರೆಂದು ಕೇಳಿದಾಗ, ಚಂದ್ರಗಿರಿ ನದಿಯಾಚೆಗಿನ ಕಾಡುಗುಡ್ಡದ ಕೊನೆಯ ಕೇರಳದ ಕುಗ್ರಾಮವೊಂದರ ಹೆಸರು ಹೇಳಿದ್ದರೂ, ಆ ಹೆಸರನ್ನು ಆವರೆಗೆ ಈ ಊರಿನ ಒಬ್ಬರೂ ಕೇಳಿರಲಿಲ್ಲ.
ನೂರು ವರುಷಗಳ ಹಿಂದೆ ಕಟ್ಟಿಸಿದ ಚಂದದ ಮರದ ಕೆತ್ತನೆಯ, ಆರುಮೂಲೆಗಳ, ಸಾವಿರದ ಆರುನೂರು ಹೆಂಚುಗಳ, ನೋಡಿದರೆ ಶೈವ ದೇವಸ್ಥಾನವೋ ಎಂಬಂತೆ ಕಾಣಿಸುವ ಪುರಾತನ ಮಸೀದಿಯಲ್ಲಿ ಇಮಾಮರಾಗಿ ಕೆಲಸ ಕೇಳಿ ಅಬ್ದುಲ್ ಖಾದರ್ ಮುಸ್ಲಿಯಾರರು ಬರುವುದಕ್ಕೂ, ಈ ಹಿಂದೆ ಇದ್ದ ಮುಸ್ಲಿಯಾರರು ಹೇಳದೆ ಕೇಳದೆ ಕೆಲಸ ಬಿಟ್ಟು ಹೋಗುವುದಕ್ಕೂ ಸರಿ ಹೋಗಿತ್ತು. ಪ್ರೆಸಿಡೆಂಟರೂ ಹೂಂ ಎಂದು ಮಾರು ದೂರದಲ್ಲಿದ್ದ ಮಸೀದಿಯ ಬಾಡಿಗೆ ಮನೆಯ ಕೀಲಿಕೈ ಕೊಟ್ಟರು. ಸುಲಭವಾಗಿ ಕೆಲಸವೊಂದು ಸಿಕ್ಕಿ ಹೊಟ್ಟೆ ಬಟ್ಟೆಗೆ ತಾಪತ್ರಯವಿಲ್ಲ ಎನ್ನುವಂತಾಯಿತು. ಬೆಳಿಗ್ಗೆ ಮತ್ತು ರಾತ್ರಿ ಮಕ್ಕಳಿಗೆ ಮಸೀದಿಯಲ್ಲೇ ಮುಸಾಬು, ಕಿತಾಬು ಓದಿಸುತ್ತಾ ಐದು ಹೊತ್ತಿನ ನಮಾಜಿಗೆ ಮುಂಚೂಣಿಯಲ್ಲಿ ಇಮಾಮರಾಗಿ ನಿಲ್ಲುತ್ತಾ ಕೆಲವೇ ತಿಂಗಳಲ್ಲಿ ಮುಸ್ಲಿಯಾರರು ಊರಿನವರೇ ಆಗಿಬಿಟ್ಟಿದ್ದರು. ವರ್ಷಗಳು ಉರುಳಿದರೂ, ಅವರ ಸಂಬಂಧಿಕರೆಂಬ ಒಂದು ನರಪಿಳ್ಳೆಯೂ ಈ ಊರಿಗೆ ಬಂದದ್ದಿಲ್ಲ. ಮುಸ್ಲಿಯಾರರೂ ಸಂಬಂಧಿಕರ ಮನೆಗೆಂದು ಒಂದು ದಿನವೂ ಹೋಗಿ ಬಂದವರಲ್ಲ. ಹೀಗೆ ಅಚಾನಕ್ಕಾಗಿ ಬಂದವರನ್ನು ನೋಡಿ ಕೆಲವರು ಊಹೆಗಳನ್ನು ಹರಿಯಬಿಟ್ಟದ್ದೂ ಸುಳ್ಳಲ್ಲ. ಅದರಲ್ಲೊಂದು – ‘ಯಾರೋ ನಂಬೂದಿರಿಯ ಮನೆಯ ಹೆಣ್ಣುಮಗಳನ್ನು ಪ್ರೀತಿಸಿ ನಿಖಾಹ್ ಮಾಡಿಕೊಂಡು ಊರು ಬಿಟ್ಟು ಓಡಿಬಂದಂತಿದೆ’ ಎಂಬ ಗುಸುಗುಸು. ನಫೀಸಾಳ ದಂತದ ಮೈಬಣ್ಣ ಮತ್ತು ಅಪರೂಪದ ನಿಲುವು ಕೂಡಾ ಅದಕ್ಕೆ ತಕ್ಕಂತೆಯೇ ಇತ್ತು. ಆದರೆ ಒಂದು ಮಾತು ಹೆಚ್ಚಿಲ್ಲ, ಒಂದು ಮಾತು ಕಡಿಮೆಯಿಲ್ಲ ಎಂಬಂತೆ ತಾನಾಯಿತು, ತನ್ನ ಕೆಲಸವಾಯಿತು ಎನ್ನುವ ಸ್ವಭಾವ ಆಕೆಯದ್ದು. ಆಡುವ ಬಾಯಿಗಳಿಗೆ ಯಾವತ್ತೂ ಮೇವು ಒದಗಿಸಲಿಲ್ಲ.
ಸದಾ ಸಮಾಧಾನದಿಂದ ಇರುತ್ತಿದ್ದ ಮುಸ್ಲಿಯಾರರು ಕೆಲವೊಮ್ಮೆ ಸಿಟ್ಟಿಗೆದ್ದಾಗ ಮಾತ್ರ ಇಸ್ಲಾಮಿನ ಎರಡನೇ ಖಲೀಫಾ ಉಮರ್ ಬಿನ್ ಖತ್ತಾಬರಂತೆ ರೌದ್ರಾವತಾರಿ ಆಗುತ್ತಿದ್ದುದುಂಟು. ಒಮ್ಮೆ ಮದ್ರಸಾದಲ್ಲಿ ಕುರಾನಿನ ಫಾತಿಹಾ ಎಂಬ ಪುಟ್ಟ ಅಧ್ಯಾಯವನ್ನು ಕಂಠಪಾಠ ಮಾಡದೆ ಕುಂಟುತ್ತಿದ್ದ ಒಂಭತ್ತು ವರ್ಷದ ಹುಡುಗನೊಬ್ಬನಿಗೆ ಹುಣಿಸೆ ಮರದ ಬಡಿಯಿಂದ ಹೇಗೆ ಬಡಿದರೆಂದರೆ, ಆತ ಮನೆಗೆ ಹೋಗುವಾಗ ಕುಂಟಲಾಗದೆ ಕುಂಟುತ್ತಾ ಹೋಗಿ, ಕ್ರುದ್ಧನಾದ ಅವನಪ್ಪ ಅದ್ದುರ್ರಹ್ಮಾನ್ ಮನೆಯಲ್ಲಿದ್ದ ಪಿಕಾಸಿಯ ಬಡಿಗೆಯನ್ನೇ ಕಿತ್ತು ಕೈಯಲ್ಲಿ ಹಿಡಿದು ಮಸೀದಿಗೆ ಬಂದು ಉಸ್ತಾದರ ತಲೆ ಒಡೆಯುತ್ತೇನೆಂದು ಶರಂಪರ ಜಗಳವಾಡಿದ್ದ. ಇನ್ನೊಮ್ಮೆ ಮಾರ್ನಮಿಯ ವೇಷದ ಸಮಯದಲ್ಲಿ ಮನೆ ಬಾಗಿಲಿಗೆ ಬಂದ ಪರವೂರಿನ ಸ್ತ್ರೀವೇಷಧಾರಿಯೊಬ್ಬ ‘ಎಲ್ಲಿದ್ದೀರಿ ಉಸ್ತಾದರೇ, ಅಲ್ಲಿ ನಮ್ಮ ಮಗು ಅಪ್ಪ ಬೇಕೂ ಅಂತ ನಿಮ್ಮನ್ನೇ ನೆನೆಸಿ ಅಳುತ್ತಿದೆಯಲ್ಲ…’ ಎಂದು ಕುಶಾಲು ಮಾತನಾಡಿ ಕುಣಿಯುತ್ತಾ ಕಾಸು ಕೇಳತೊಡಗಿದಾಗ ಸಿಟ್ಟಿಗೆದ್ದ ಉಸ್ತಾದರು ಕೈಗೆ ಸಿಕ್ಕಿದ ಹಿಡಿಸೂಡಿಯಲ್ಲಿ ಆ ವೇಷಧಾರಿಗೆ ರಪರಪನೆ ಬಾರಿಸಿ, ಆತ ಕಂಯ್ ಕುಂಯ್ ಎನ್ನುತ್ತಾ ನೆಲದಲ್ಲುರುಳಿ, ಎದ್ದು ಬಿದ್ದು ಹಿಂತಿರುಗಿ ನೋಡದೇ ಓಟಕಿತ್ತಿದ್ದ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್
ಕೆಲವೊಮ್ಮೆ ಐದಾರು ದಿನ ಯಾರ ಜೊತೆಗೂ ಮಾತನಾಡದೆ ಮುಸ್ಲಿಯಾರರು ಮೌನವಾಗಿರುವುದುಂಟು. ರಾತ್ರಿ ಅಂಗಳದಲ್ಲಿ ಕುರ್ಚಿಯೊಂದನ್ನು ಹಾಕಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಕೈಬೆರಳುಗಳಲ್ಲಿ ಏನನ್ನೋ ಲೆಕ್ಕ ಹಾಕುವುದುಂಟು. ಹೀಗೆ ಆಕಾಶ ನೋಡುತ್ತಾ ಕುಳಿತಿರುತ್ತಿದ್ದ ಉಸ್ತಾದರನ್ನು ಊರವನೊಬ್ಬ ಹೊಗಳುತ್ತಾ ‘ಇವರು ಖಗೋಳಶಾಸ್ತ್ರದ ಮಹಾಜ್ಞಾನಿಯೆಂದೂ, ಲಕ್ಷದ್ವೀಪದಿಂದ ಬಂದಿರುವ ಸೂಫಿಸಂತರೇ ಇರಬೇಕೆಂದೂ, ಸುಲೇಮಾನ್ ಎಂಬ ಕ್ರಿಸ್ತಪೂರ್ವ ನೆಬಿಯ ಕಾಲದ ವೃದ್ಧ ಜಿನ್ನೊಂದು ಇವರಿಗೆ ಹಸ್ತಗತವಾಗಿದೆಯೆಂದೂ’ ಊರೆಲ್ಲಾ ಪ್ರಚಾರ ಮಾಡತೊಡಗಿದ್ದ. ಇದ್ದರೂ ಇರಬಹುದೆಂದು ಅನೇಕರು ನಂಬತೊಡಗಿದ್ದ ಒಂದು ದಿನ, ಆ ಹೊಗಳುಭಟನನ್ನು ಮಸೀದಿಯ ಅಂಗಳದಲ್ಲೇ ಮುಸ್ಲಿಯಾರರು ಅಟ್ಟಾಡಿಸಿಕೊಂಡು ಎಲ್ಲೆಂದರಲ್ಲಿ ಗುದ್ದಿ, ‘ಇನ್ನೊಮ್ಮೆ ಇಂತಹ ಸುಳ್ಳು ಪ್ರಚಾರ ಮಾಡಿದರೆ, ಶುಕ್ರವಾರ ಜುಮಾ ನಮಾಜಿನ ದಿನ ಉಪನ್ಯಾಸಕ್ಕೆಂದು ಕೈಯಲ್ಲಿ ಹಿಡಿದುಕೊಳ್ಳುವ ಬಡ್ಡು ತಲವಾರಿನಿಂದಲೇ ಕೊರಳು ಕತ್ತರಿಸಿಬಿಡುತ್ತೇನೆಂದು’ ಅಬ್ಬರಿಸಿದ್ದರು. ಹೊಡೆತಕ್ಕೆ ನಡುಗಿಹೋಗಿದ್ದ ಆತ ಗೋಗರೆದು ಕ್ಷಮೆ ಕೇಳಿ ಬಚಾವಾಗಿದ್ದ. ಆದರೆ ಬಿಗಿಮುಷ್ಠಿಯ ಹೊಡೆತ ತಿಂದ ಬಳಿಕ ನಿಜಕ್ಕೂ ಅವರ ದೇಹದಲ್ಲಿ ಯಾವುದೋ ಒಂದು ಜಿನ್ನ್ ನೆಲೆಸಿದೆಯೆಂದು ಆತನಿಗೆ ಖಾತ್ರಿಯಾಗಿತ್ತು. ಅದನ್ನು ಊರಲ್ಲಿ ಯಾರ ಬಳಿಯೂ ಬಾಯಿಬಿಟ್ಟು ಹೇಳಲಾಗದೆ, ಒಳಗೂ ಇರಿಸಿಕೊಳ್ಳಲಾಗದೆ ಆತ ವೇದನೆ ಅನುಭವಿಸುತ್ತಿದ್ದ.
ಮುಸ್ಲಿಯಾರರ ಕಂಠಸಿರಿ ಅದ್ಭುತವಾಗಿತ್ತು. ಉಪನ್ಯಾಸಕ್ಕೆಂದು ನಿಂತರೆ ಮಲಾಮೆ ಮಿಶ್ರಿತ ಮಲಯಾಳಂನಲ್ಲಿ ಸುಶ್ರಾವ್ಯವಾಗಿ ಪ್ರವಾದಿ ನೂಹ್, ಈಸಾ, ಮೂಸಾ, ಹಾರೂನ್, ದಾವೂದ್, ಸುಲೈಮಾನ್ ಮುಂತಾದವರ ಕಿಸ್ಸಾಗಳಿಗೆ ನವರಸಗಳನ್ನು ತುಂಬಿ, ನಡುನಡುವೆ ನಫೀಸತ್ ಮಾಲಾ, ಮಂಕೂಸ್ ಮೌಲೂದುಗಳ ಹಾಡುಗಳನ್ನು ರಾಗವಾಗಿ ಹಾಡುತ್ತಾ ಇತಿಹಾಸದ ಪಾತ್ರಗಳಿಗೆ ಜೀವ ತುಂಬುತ್ತಿದ್ದುದನ್ನು ಕೇಳಿ ಜನರು ತನ್ಮಯರಾಗುತ್ತಿದ್ದರು. ಅವರ ಕುರಾನ್ ಪಾರಾಯಣವೂ ಮೃದುಮಧುರ. ಎರಡೂ ಅಂಗೈಗಳನ್ನು ಆಕಾಶಕ್ಕೆ ಎತ್ತಿ ಅವರು ಗದ್ಗದ ಕಂಠದಿಂದ ಕಣ್ಣಂಚಿನಲ್ಲಿ ನೀರು ಜಿನುಗಿಸುತ್ತಾ ದುವಾ ಮಾಡಿದರೆ ಅಲ್ಲಾಹು ಆ ಪ್ರಾರ್ಥನೆಗೆ ತಕ್ಷಣವೇ ಉತ್ತರ ಕೊಡುತ್ತಾನೆಂದು ಬಹುತೇಕರು ನಂಬಿದ್ದರು. ನಂಬಿಕೆಗೆ ಅನುಗುಣವಾಗಿಯೇ ಮುಸ್ಲಿಯಾರರ ದುವಾದ ಬಳಿಕ ಹಲವರ ವ್ಯಾಪಾರ ಕುದುರಿತ್ತು, ಕೈಯಲ್ಲಿ ಕಾಸು ಓಡಾಡುತ್ತಿತ್ತು. ಕೆಲವು ಮಹಿಳೆಯರು ತಮಗೆ ಮಕ್ಕಳಾದದ್ದೂ ಉಸ್ತಾದರ ವಿಶೇಷ ದುವಾದ ಫಲ ಎಂದು ನಂಬಿಕೊಂಡದ್ದುಂಟು. ಜಮಾತ್ ಕಮಿಟಿಯ ಪದಾಧಿಕಾರಿಗಳು ಮುಸ್ಲಿಯಾರರ ಫ್ಯಾನ್‌ಗಳೇ ಆಗಿದ್ದ ಹಿನ್ನೆಲೆಯಲ್ಲಿ ಅವರ ರೌದ್ರಾವತಾರದ ಘಟನೆಗಳಿಗೂ ಊರವರಿಂದ ಮಾಫಿ ದೊರಕುತ್ತಿತ್ತು. ಊರಲ್ಲಿರುವ ಕೆಲವು ಕೆಳಜಾತಿಯ ಅಮ್ಮಂದಿರು ಅಳುವ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಮಸೀದಿಯ ಅಂಗಳಕ್ಕೆ ಬರುತ್ತಿದ್ದರು. ಈ ಗುರುಗಳು ಅರಬೀಯಲ್ಲಿ ಮಣಮಣ ಮಂತ್ರ ಹೇಳಿ, ಕಂದಮ್ಮಗಳ ತಲೆಯ ಮೇಲೆ ಕೈಬೆರಳಾಡಿಸಿ ಇಸುಫ್… ಎಂದೊಮ್ಮೆ ಊದಿದರೆ ಮಕ್ಕಳು ಚಂಡಿ ಹಿಡಿದ ಅಳು ನಿಲ್ಲಿಸುತ್ತಿದ್ದುದನ್ನು ಕಣ್ಣಾರೆ ಕಂಡ ಅಮ್ಮಂದಿರೂ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗೆ ಊರವರಿಗೆಲ್ಲ ಪ್ರಿಯವಾಗಿದ್ದ ಮುಸ್ಲಿಯಾರರ ಮನಸ್ಸಿನಲ್ಲಿ ಮಾತ್ರ, ಆಮೆಯೊಂದು ಮರಳತೀರಕ್ಕೆ ಬಂದು ಗುಂಡಿ ತೋಡಿ ಮೊಟ್ಟೆಯಿಟ್ಟು ಮರಳಿ ಸಮುದ್ರಕ್ಕೆ ಓಡಿಹೋಗುವಂತೆ, ಜಿನುಗುವ ದುಃಖವೊಂದು ಒಸರುತ್ತಿತ್ತು. ಇಲ್ಲಿಗೆ ಬಂದು ನೆಲೆಸಿ ಐದು ವರ್ಷಗಳಾದರೂ ತನ್ನ ಪ್ರೀತಿಯ ನಫೀಸಾ ಒಂದು ಕರುಳಕುಡಿಯನ್ನು ಹೆತ್ತು ಕೊಡಲಿಲ್ಲವೇ ಎಂಬ ವೇದನೆಯು ಮುಸ್ಲಿಯಾರರ ಮನಸೊಳಗೇ ಮರಕುಟುಕದಂತೆ ಕುಟುಕುತ್ತಿತ್ತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು
ಕೊನೆಗೊಂದು ದಿನ ಅಲ್ಲಾಹು ಅವರ ವೇದನೆಗೂ ಪರಿಹಾರವೊಂದನ್ನು ಒದಗಿಸಿಕೊಟ್ಟಂತೆ ನಫೀಸಾ, ಶಾಬಾನ್ ತಿಂಗಳ 21ರಂದು ಬೆಳದಿಂಗಳ ತುಂಡಿನಂತಹ ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗುವನ್ನು ಇಸ್ಲಾಮಿನ ಪ್ರಕಾಂಡ ಪಂಡಿತನಾಗಿ ಬೆಳೆಸಬೇಕೆಂದು ಅಂದೇ ನಿರ್ಧರಿಸಿದ್ದ ಉಸ್ತಾದರು ಮಗುವಿಗೆ ಮೊದಲ ಖಲೀಫಾ ಅಬೂಬಕರ್ ಸಿದ್ದೀಕರ ಹೆಸರನ್ನೇ ಇಟ್ಟಿದ್ದರು. ಅಂಗಳಕ್ಕೆ ಒಯ್ದರೆ ಕಾಗೆ ಎತ್ತೊಯ್ಯಬಹುದು, ಮನೆಯೊಳಗೆ ಮಲಗಿಸಿದರೆ ಇರುವೆ ಕಚ್ಚಬಹುದು ಎಂಬಂಥ ಮುಚ್ಚಟೆಯಲ್ಲಿ ಮಗುವನ್ನು ಸದಾ ಹೆಗಲಲ್ಲಿ ಹೊತ್ತುಕೊಂಡು ಇಬ್ಬರೂ ಓಡಾಡಿದರು. ಮದ್ರಸಾ ಶಿಕ್ಷಣದ ಜೊತೆಜೊತೆಗೇ ಉರ್ದು ಶಾಲೆಯಲ್ಲಿ ಏಳನೇವರೆಗೆ ಓದಿದ ಸಿದ್ದೀಕನನ್ನು ಕಲ್ಲಿಕೋಟೆಯ ಅರೆಬಿಕ್ ಕಾಲೇಜಿಗೆ ಸೇರಿಸಬೇಕೆಂದು ಮುಸ್ಲಿಯಾರ್ ನಿರ್ಧರಿಸಿದ್ದರು. ನಫೀಸಾ ಬಿಲ್‌ಕುಲ್ ಒಪ್ಪಲಿಲ್ಲ. ತಿಂಗಳ ಕಾಲ ಗಂಡನ ಜೊತೆಗೆ ಮುನಿದು ಮನವೊಲಿಸಿದ ನಫೀಸಾ ಮಗನನ್ನು ಕೊನೆಗೂ 120 ಮೈಲಿ ದೂರದಲ್ಲಿದ್ದ ಮಂಗಳೂರಿನ ಖಾಸಗಿ ಹೈಸ್ಕೂಲಿಗೆ ಸೇರಿಸುವಲ್ಲಿ ಯಶಸ್ವಿಯಾದಳು. ಮಂಗಳೂರಿನಲ್ಲಿ ಯಾರು ಯಾರದೋ ಕೈಕಾಲು ಹಿಡಿದು ಮುಸ್ಲಿಂ ಹಾಸ್ಟೆಲ್‌ನಲ್ಲಿ ಕೂರಿಸಿದರು. ಹೊಟ್ಟೆಬಟ್ಟೆ ಕಟ್ಟಿ ಮಗನ ಓದಿಗೆ ದುಡ್ಡು ಹೊಂದಿಸಿದರು. ಎಸೆಸೆಲ್ಸಿ ಮುಗಿದ ಬಳಿಕ ಸಿದ್ದೀಕ್ ಅಲ್ಲೇ ಐಟಿಐ ಮಾಡುತ್ತೇನೆಂದ. ಕೋರ್ಸ್ ಮುಗಿಸಿದ ತಕ್ಷಣವೇ ಕೆಲಸ ಸಿಗುತ್ತದಂತೆ ಎಂದ. ಮುಸ್ಲಿಯಾರರು ತಾನು ದುಡಿದ ಅಲ್ಪಹಣವನ್ನು ಅಲ್ಲಲ್ಲಿಗೇ ಹೊಂದಿಸಿಕೊಂಡರು. ಹಾಗೆ ಮಂಗಳೂರಿನಲ್ಲಿ ಐಟಿಐ ಮುಗಿಸಿದ ಸಿದ್ದೀಕನನ್ನು ಮುಷ್ತಾಕ್ ಸಾಹೇಬ್ ಎಂಬವರೊಬ್ಬರು ಮುಂಬೈಗೆ ಕರೆದೊಯ್ದು ಫ್ಯಾಕ್ಟರಿಯೊಂದರಲ್ಲಿ ಕೆಲಸವನ್ನೂ ಕೊಡಿಸಿದರು. ಕರೆದೊಯ್ದವರು ಕೆಲಸ ಮಾತ್ರ ಕೊಡಿಸಲಿಲ್ಲ, ಮದುವೆಗೆಂದು ತನಗಿದ್ದ ಒಬ್ಬಳೇ ಮಗಳನ್ನೂ ಕೊಟ್ಟುಬಿಟ್ಟರು!
ಅದಾದದ್ದೂ ಸ್ವಲ್ಪ ವಿಚಿತ್ರವಾಗಿಯೇ. ಮುಂಬೈಯಿಂದ ಆಗಾಗ್ಗೆ ವ್ಯಾಪಾರಕ್ಕೆ ಮಂಗಳೂರಿಗೆ ಬರುತ್ತಿದ್ದ ಮುಷ್ತಾಕ್ ಸಾಹೇಬರು ಸಿದ್ದೀಕನ ಮುಸ್ಲಿಂ ಹಾಸ್ಟೆಲ್ ಪಕ್ಕದ ಹೋಟೆಲಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಸಹಜವಾಗಿ ಪರಿಚಯವಾಯಿತು. ಆಮೇಲಾಮೇಲೆ ಬರುವಾಗ ಅವರು ಸಿದ್ದೀಕನಿಗೆಂದು ಬಟ್ಟೆ ಬರೆ, ಸೆಂಟುಗಳನ್ನು ತರುವುದು ವಾಡಿಕೆಯಾಯಿತು. ಮೈಯದ್ದಿ ಬ್ಯಾರಿಯ ಮೂನ್‌ಲೈಟ್ ಹೋಟೆಲ್ಲಿಗೆ ಕರೆದೊಯ್ದು ಪರೋಟ ಮತ್ತು ಬೀಫ್ ಸುಕ್ಕ ತಿನ್ನಿಸುವುದೂ ಅಭ್ಯಾಸವಾಯಿತು. ನಿಕಟವಾದ ಮುಷ್ತಾಕ್ ಸಾಹೇಬರು ಐಟಿಐ ಮುಗಿಸಿದ ತಕ್ಷಣ ಮುಂಬೈಗೆ ಜೊತೆಯಲ್ಲಿ ಬರಬೇಕೆಂದೂ ಒಳ್ಳೆಯ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿದರು. ಅವರ ಪೂರ್ವಜರೂ ಮಂಗಳೂರಿನವರಂತೆ. ಉರ್ದು ಮನೆಮಾತು. ಇವರು ಬಾಲ್ಯದಲ್ಲೇ ಮನೆಬಿಟ್ಟು ಮುಂಬೈಗೆ ಹೋಗಿ ಅಲ್ಲೇ ಬದುಕು ಕಟ್ಟಿಕೊಂಡರಂತೆ. ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಬಳಿಕ ಮುಷ್ತಾಕ್ ಸಾಹೇಬರ ಏಕೈಕ ಪುತ್ರಿಯನ್ನು ಕಂಡು ಸಿದ್ದೀಕನಿಗೆ ಅಲ್ಲೇ ಸೆಟ್ಲ್ ಆಗುವುದರಲ್ಲಿ ಅರ್ಥವಿದೆ ಅನ್ನಿಸಿದ್ದೂ, ಅದನ್ನು ಊರಿಗೆ ಬಂದಾಗ ಹೆತ್ತವರಲ್ಲಿ ಯಾವ ಹಿಂಜರಿಕೆಯಿಲ್ಲದೇ ಹೇಳಿದ್ದನ್ನೂ ಬರೆಯಲು ಹೋದರೆ ಅದೇ ಇನ್ನೊಂದು ದೊಡ್ಡ ಕತೆಯಾಗುತ್ತದೆ. ಸೊಸೆಯ ಮುದ್ದುಮುಖದ ಫೋಟೊ ಮತ್ತು ಮಗನ ಪ್ರೇಮಮಯಿ ಮುಖವನ್ನು ನೋಡಿದ ಬಳಿಕ ನಫೀಸಾಗೂ ಮಗನ ಮಾತು ಸರಿಯೆನ್ನಿಸಿತ್ತು. ಆದರೆ ಮುಚ್ಚಟೆಯಿಂದ ಬೆಳೆಸಿದ ಮಗನನ್ನು ಹೀಗೆ ಯಾರೋ ಅಚಾನಕ್ಕಾಗಿ, ಕೋಳಿಮರಿಯನ್ನು ಹದ್ದು ಎಗರಿಸಿದಂತೆ ಕೊಂಡೊಯ್ದದ್ದು ಹೇಗೆಂದು ಆಕೆಗೆ ಅರ್ಥವಾಗಲಿಲ್ಲ. ಮಗನಿಲ್ಲದೇ ತಾವು ಊರಿನಲ್ಲೇ ಉಳಿಯುವುದೇ? ‘ಮುಂಬೈಗೆ ಬಂದು ಜೊತೆಗೇ ಇದ್ದುಬಿಡಿ’ ಎಂದು ಸಿದ್ದೀಕ ಒತ್ತಾಯಿಸಿದ. ಆದರೆ ಮುಸ್ಲಿಯಾರರು ಒಪ್ಪಲಿಲ್ಲ. ಎಲ್ಲಿಂದಲೋ ವಲಸೆ ಬಂದವನಿಗೆ ಗೌರವದ ಬದುಕು ಕೊಟ್ಟ ಊರಿದು, ಇದನ್ನು ಬಿಟ್ಟು ಇನ್ನೆಲ್ಲಿಗೂ ಬರುವುದಿಲ್ಲ ಎಂದು ಕಲ್ಲುಮನಸ್ಸು ಮಾಡಿಕೊಂಡರು. ಹಾಗೆ ಅವಸರವಸರವಾಗಿ ಊರ ಮಸೀದಿಯಲ್ಲೇ ನಿಖಾಹ್ ನಡೆಯಿತು. ಸಿದ್ದೀಕನಿಗೂ ಫ್ಯಾಕ್ಟರಿಯಲ್ಲಿ ಹೆಚ್ಚು ರಜೆ ಇರಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ
ವಯಸ್ಸಿಗೆ ಬಂದ ಮುದ್ದಿನ ಮಗ ತಮ್ಮನ್ನೊಂದು ಮಾತೂ ಕೇಳದೆ ಬದುಕಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಂಬೈಗೆ ಹಾರಿಹೋದದ್ದು ಮುಸ್ಲಿಯಾರರಲ್ಲಿ ಉಂಟು ಮಾಡಿದ ತಳಮಳ ಅಷ್ಟಿಷ್ಟಲ್ಲ. ಯಾರೊಂದಿಗೂ ಹೇಳುವ ಸ್ವಭಾವವೂ ಅವರದ್ದಲ್ಲ. ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ತಡರಾತ್ರಿಯವರೆಗೆ ಆಕಾಶದ ನಕ್ಷತ್ರಗಳನ್ನು ನೋಡುವುದು ಅವರಿಗೆ ಇನ್ನಷ್ಟು ಪ್ರಿಯವಾಯಿತು. ಮನುಷ್ಯನ ವಲಸೆ ಎನ್ನುವುದು ಎಷ್ಟು ವಿಚಿತ್ರ! ಹುಟ್ಟಿದೂರನ್ನು ಬಿಟ್ಟು ನಫೀಸಾಳನ್ನು ಕಟ್ಟಿಕೊಂಡು ಇಲ್ಲಿಗೆ ಬಂದೆ. ಬಳಿಕ ಹುಟ್ಟಿದೂರಿಗೆ ಒಮ್ಮೆಯೂ ಹೋಗಲಿಲ್ಲ. ಈಗ ಮಗ ಈ ಊರನ್ನು ಬಿಟ್ಟು ಮುಂಬೈಗೆ ವಲಸೆ ಹೋಗಿದ್ದಾನೆ. ಅಲ್ಲೇ ಬದುಕು ಕಟ್ಟಿಕೊಂಡಿದ್ದಾನೆ. ಮರಳಿ ಬರುವ ಸಾಧ್ಯತೆಯೇ ಇಲ್ಲ! ಮುಂಬೈಗೆ ಬನ್ನಿ ಎಂದೀಗ ಒತ್ತಾಯಿಸುತ್ತಿದ್ದಾನೆ. ಹಾಗೆ ಒತ್ತಾಯಿಸಲು ಬಲವಾದ ಕಾರಣವೂ ಕೂಡಿಬಂದಿದೆ.
****
ಮಸೀದಿಯಲ್ಲಿ ಅವತ್ತು ಪ್ರೆಸಿಡೆಂಟ್ ಅಬ್ದುಲ್ಲಾ ಹಾಜಿ ಮತ್ತು ಖಾದರ್ ಮುಸ್ಲಿಯಾರ್ ನಡುವಣ ಖಡಾಖಡಿ ಜಗಳಕ್ಕೆ ಮುಖ್ಯ ಕಾರಣ ಜಮಾತಿಗೆ ಬಂದ ಬ್ಯಾಂಕಿನ ಪತ್ರದಲ್ಲಿ ನಮೂದಿಸಿದ್ದ ಬಡ್ಡಿಯ ಹಣ ಐವತ್ತು ಸಾವಿರ ರೂಪಾಯಿ!
ಬೇರೆ ಮುಸ್ಲಿಂ ಜಮಾತ್‌ಗಳಲ್ಲಿ ಮುಸ್ಲಿಯಾರರೆಂದರೆ ಸಂಬಳಕ್ಕಿರುವವರೇ ಹೊರತು, ಜಮಾತ್ ಕಮಿಟಿಯಲ್ಲಿ ಸ್ಥಾನವಿರುವುದಿಲ್ಲ. ಆದರೆ ಊರಿನ ವಿಶೇಷವೆಂದರೆ ಮುಸ್ಲಿಯಾರರು ಜಮಾತ್ ಕಮಿಟಿಯ ಪರ್ಮನೆಂಟ್ ಉಪಾಧ್ಯಕ್ಷರು. ಅಧ್ಯಕ್ಷರು ಮತ್ತು ಕಮಿಟಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರೂ ಮುಸ್ಲಿಯಾರರು ಶಾಶ್ವತ ಉಪಾಧ್ಯಕ್ಷರೆಂದು ಜನರಲ್ ಬಾಡಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು.
ಪಕ್ಕದೂರಿನ ಬ್ಯಾಂಕಿನಲ್ಲಿ ಎಷ್ಟೋ ವರ್ಷಗಳ ಹಿಂದೆ ಇಟ್ಟಿದ್ದ ಫಿಕ್ಸೆಡ್ ಡೆಪಾಸಿಟ್‌ನ ಹಣವೊಂದು ಮರಿ ಹಾಕುತ್ತಾ ಹೋಗಿದ್ದುದನ್ನು ಜಮಾತಿನವರು ಗಮನಿಸಿರಲಿಲ್ಲ. ಹೊಸದಾಗಿ ಬ್ಯಾಂಕಿಗೆ ಬಂದ ಮುಸ್ಲಿಂ ಮ್ಯಾನೇಜರ್ ಗಮನಿಸಿ, ವಿವರವಾದ ಪತ್ರವೊಂದನ್ನು ಜಮಾತ್‌ಗೆ ಬರೆದಿದ್ದರು. ‘ಸಾಮಾನ್ಯವಾಗಿ ಮಸೀದಿಯವರು ಬಡ್ಡಿಯ ಹಣವನ್ನು ಪಡೆಯುವುದಿಲ್ಲ. ನಿಮ್ಮ ಬಡ್ಡಿ ಹಣವನ್ನು ಏನು ಮಾಡಬೇಕೆಂದು ಸೂಚಿಸಿ’ ಎಂದಿದ್ದ ಪತ್ರ, ಜಮಾತಿನಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ಜೊತೆಗೆ ಅಬ್ದುಲ್ಲಾ ಮತ್ತು ಮುಸ್ಲಿಯಾರರ ಮಧ್ಯೆ ಜಗಳವನ್ನೂ.
ಮೀಟಿಂಗಿನಲ್ಲಿ ಮುಸ್ಲಿಯಾರರು ಖಡಾಖಂಡಿತವಾಗಿ ಹೇಳಿದ್ದು– ‘ಇಸ್ಲಾಮಿನಲ್ಲಿ ಬಡ್ಡಿಯ ಹಣ ಹರಾಮ್. ಅದನ್ನು ಕೈಯಿಂದ ಮುಟ್ಟುವುದಲ್ಲ, ಕಣ್ಣೆತ್ತಿಯೂ ನೋಡುವಂತಿಲ್ಲ. ಬಡ್ಡಿಯ ಹಣ ತಿಂದವನು ಯಾವ ಕಾರಣಕ್ಕೂ ಉದ್ಧಾರ ಆಗುವುದಿಲ್ಲ. ಆ ಹಣದಲ್ಲಿ ಊಟ ಮಾಡಿದ ಅವನ ಸಂತಾನಕ್ಕೂ ಕಷ್ಟಗಳು ತಪ್ಪಿದ್ದಲ್ಲ. ಮರಣದ ಬಳಿಕ ಜಹನ್ನಮಾ ಎಂಬ ರೌರವ ನರಕದ ಬೆಂಕಿಯಲ್ಲಿ ಧಗಧಗನೆ ಆತ ಉರಿದು ನರಳುತ್ತಾನೆ..!’
ಮುಸ್ಲಿಯಾರರ ಮಾತು ಅಲ್ಲಿದ್ದ ಹಲವರ ಮುಖದಲ್ಲಿ ರಕ್ತ ಬತ್ತಿಸಿದ್ದು ಸುಳ್ಳಲ್ಲ. ಅಲ್ಲಿರುವ ಬಹುತೇಕರು ಬ್ಯಾಂಕಿನ ಸಾಲಕ್ಕೆ ಬಡ್ಡಿ ಕಟ್ಟುವವರೇ. ಮಂಗಳೂರಿನಲ್ಲಿ ಬ್ಯಾಂಕೊಂದರಲ್ಲಿ ಕ್ಲಾರ್ಕ್ ಆಗಿದ್ದ ಅಬ್ದುಲ್ಲಾ ಹಾಜಿಯ ಬಾಮೈದನೊಬ್ಬ ಅವತ್ತು ಸಭೆಯಲ್ಲಿದ್ದವನು ಮುಸ್ಲಿಯಾರರ ಮಾತಿಗೆ ಉರಿಯತೊಡಗಿದ್ದ. ಆದರೆ ಯಾರೂ ಎದುರು ಮಾತನಾಡುವಂತಿರಲಿಲ್ಲ.
ಕೊನೆಗೊಬ್ಬ ಕೇಳಿದ– ‘ಅದೇನೋ ಸರಿ ಮುಸ್ಲಿಯಾರರೇ, ಈಗ ಬಡ್ಡಿ ಹಣವನ್ನು ಏನು ಮಾಡಬೇಕು?’
‘ಷರೀಯತ್‌ನಲ್ಲಿ ಅದಕ್ಕೂ ದಾರಿಗಳಿವೆ. ಹಣವನ್ನು ಎಲ್ಲರೆದುರೇ ಬೆಂಕಿಯಲ್ಲಿ ಹಾಕಿ ಸುಡಬೇಕು. ಅಥವಾ ದೂರ ಸಮುದ್ರಕ್ಕೆ ತೆರಳಿ ಚೂರುಚೂರಾಗಿ ಕತ್ತರಿಸಿ ನೀರಿನಲ್ಲಿ ವಿಸರ್ಜಿಸಬೇಕು’ ಎಂದರು ಮುಸ್ಲಿಯಾರ್.
ಸಭೆಯಲ್ಲಿ ಗುಜುಗುಜು ಶುರುವಾಯಿತು.
‘ಸೈಲೆನ್ಸ್ ಪ್ಲೀಸ್..’ ಎಂದರು ಪ್ರೆಸಿಡೆಂಟ್ ಅಬ್ದುಲ್ಲಾ ಹಾಜಿ. ‘ನಮ್ಮ ಹಿಂದಿನವರು ಎಫ್‌ಡಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಹಣ ಇಟ್ಟಿದ್ದಾರೆ. ಅವರೇನೋ ಬಡ್ಡಿಯ ಆಸೆಗೆ ಇಟ್ಟದ್ದಲ್ಲ. ಯಾರೋ ದಾನಿಗಳು ಕೊಟ್ಟ ಡೊನೇಷನ್ನು ಅದು. ಬ್ಯಾಂಕಿನವರು ಅವರಾಗಿ ಬಡ್ಡಿ ಕೊಟ್ಟಿದ್ದಾರೆ. ನೋಟುಗಳನ್ನು ಸುಡುವುದಕ್ಕಿಂತ ಮಂಗಳೂರಿಗೆ ಹೋಗಿ ಬೋಟ್‌ನಲ್ಲಿ ಸಮುದ್ರದ ಮಧ್ಯೆ ನೀರಿಗೆಸೆಯೋಣ. ನಾನೇ ಕೊಂಡೊಯ್ಯುತ್ತೇನೆ. ನನ್ನ ಸ್ನೇಹಿತರೊಬ್ಬರ ಫಿಷಿಂಗ್ ಬೋಟಿದೆ. ಸಮಸ್ಯೆಯೇ ಇಲ್ಲ!’
‘ನಿಮಗೆ ಅಷ್ಟೆಲ್ಲ ಕಷ್ಟ ಯಾಕೆ? ಜಮಾತಿನ ಎಲ್ಲ ಸದಸ್ಯರ ಕಣ್ಣೆದುರೇ ಖರ್ಚಿಲ್ಲದೆ ಸುಟ್ಟು ಹಾಕಿದರೇನು ತೊಂದರೆ?’ ಮುಸ್ಲಿಯಾರರು ಪಟ್ಟು ಹಿಡಿದರು.
‘ಏನು.. ನನ್ನ ಮೇಲೆಯೇ ವಿಶ್ವಾಸವಿಲ್ಲವೇ? ನಾನೇನು ಕಳ್ಳನ ತರಹ ಕಾಣಿಸ್ತೀನಾ?’ ಪ್ರೆಸಿಡೆಂಟರು ಗರಂ ಆದರು.
‘ಹಾಗಂತ ನಾನೆಲ್ಲಿ ಹೇಳಿದೆ? ಇದು ಷರೀಯತ್ತಿಗೆ ಸಂಬಂಧಿಸಿದ ಪ್ರಶ್ನೆ. ಏನು ಮಾಡುವುದಿದ್ದರೂ ಎಲ್ಲರಿಗೂ ಗೊತ್ತಾಗಲಿ..’ ಮುಸ್ಲಿಯಾರರು ಪಟ್ಟು ಬಿಡಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು
‘ಮುಸ್ಲಿಯಾರರೇ.. ಬರೀ ಷರೀಯತ್ತಿನ ಪ್ರಶ್ನೆ ಅಲ್ಲವಿದು. ಕಾನೂನಿನ ಪ್ರಶ್ನೆಯೂ ಇದೆ. ಅದೆಲ್ಲ ನಿಮಗರ್ಥ ಆಗಲ್ಲ. ನೋಟುಗಳಿಗೆ ಬೆಂಕಿ ಹಾಕಿ ಪೊಲೀಸ್ ಕೇಸಾಗಿ, ನಮ್ಮನ್ನೆಲ್ಲ ಮತ್ತೆ ಸ್ಟೇಷನ್ನಿಗೆ ಓಡಾಡಿಸಬೇಕೆಂದು ಮಾಡಿದ್ದೀರಾ? ಕಳೆದ ವರ್ಷ ಹೀಗೇ ನಿಮ್ಮ ಮೂರ್ಖತನದಿಂದ ಜೈಲು ಪಾಲಾಗುತ್ತಿದ್ದಿರಿ. ಸ್ಟೇಷನ್ನಿಗೆ ಹೋಗಿ ಇನ್ಸ್‌ಪೆಕ್ಟರ್ ಕಾಲು ಹಿಡಿದು ನಿಮ್ಮನ್ನು ರಕ್ಷಿಸಿದವನು ನಾನು! ನನಗೇ ಉಲ್ಟಾ ಮಾತನಾಡ್ತೀರಾ?’ ಪ್ರೆಸಿಡೆಂಟರ ಧ್ವನಿ ತಾರಕಕ್ಕೆ ಏರಿತು.
ಇನ್ನೇನು ಮುಸ್ಲಿಯಾರರೂ ಸಿಟ್ಟಿಗೆದ್ದು ಕೂಗಾಡಿದರೆ ಏನೇನು ಅನಾಹುತವಾಗುತ್ತೋ ಅಂತ ಒಂದಿಬ್ಬರು ಸದಸ್ಯರು ಕುಳಿತಲ್ಲಿಂದ ಎದ್ದು ನಿಂತರು. ಎಲ್ಲರೂ ಮುಸ್ಲಿಯಾರರ ಬಿಗಿಯುತ್ತಿದ್ದ ಮುಷ್ಠಿಗಳತ್ತ ನೋಡುತ್ತಿದ್ದರು.
ಅಬ್ದುಲ್ಲಾ ಹಾಜಿ ಮತ್ತು ಮುಸ್ಲಿಯಾರರ ಸಂಘರ್ಷಕ್ಕೆ ಕಾರಣವಾದ ಆ ಹಳೆಯ ಪ್ರಕರಣಕ್ಕೆ ಹತ್ತು ತಿಂಗಳೂ ತುಂಬಿಲ್ಲ. ಮಸೀದಿಯ ಸುತ್ತಲೂ ಬೆಳೆದು ನಿಂತಿದ್ದ ತೇಗದ ತರಗೆಲೆಗಳು ನೆಲಕ್ಕುದುರುತ್ತಿದ್ದ ಚಳಿಗಾಲದ ದಿನಗಳವು. ಮುಸ್ಲಿಯಾರರು ಬೆಳಿಗ್ಗೆದ್ದು ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮುಗಿಸಿ, ಕುರಾನ್ ಪಠಿಸಿ, ಊರ ಹೊರಗಿನ ಹಳೇ ಕಾಲುಸಂಕದ ರಸ್ತೆಯಲ್ಲಿ ಎಂದಿನಂತೆ ವಾಕಿಂಗ್ ಹೊರಟಿದ್ದರು. ಚಳಿ ಸ್ವಲ್ಪ ಹೆಚ್ಚಿದ್ದುದರಿಂದಲೋ ಏನೋ ಅವತ್ತು ವಾಕಿಂಗಿಗೆ ಹೆಚ್ಚು ಜನರಿರಲಿಲ್ಲ. ನೀರಿಲ್ಲದ ಹಳ್ಳದ ಕಾಲುಸಂಕ ದಾಟಿದರೆ ಸ್ವಲ್ಪ ದೂರ ನಿರ್ಜನ ದಾರಿ. ಮುಳ್ಳುಕಂಟಿಗಳ ದಾರಿಯಲ್ಲಿ ಒಂದು ಪಾಳುಬಿದ್ದ ಮನೆಯಿತ್ತು. ಪಕ್ಕದಲ್ಲೊಂದು ಸಣ್ಣ ಬುಗುರಿ ಮರ. ಇನ್ನೂ ಸರಿಯಾಗಿ ಬೆಳಕು ಮೂಡಿರಲಿಲ್ಲ. ಮಸ್ಲಿಯಾರ್ ಬೀಸುಗಾಲಲ್ಲಿ ನಡೆಯುತ್ತಾ ಸಹಜವಾಗಿ ಬಲಕ್ಕೆ ನೋಡಿದರೆ ಮರದ ಕೊಂಬೆಗೆ ನೇತು ಬಿದ್ದಿದೆ ಒಂದು ಹೆಣ್ಣುಜೀವ!
ಮುಸ್ಲಿಯಾರಿಗೆ ಜೀವ ಧಿಗ್ಗೆಂದಿತು. ದೂರದಿಂದ ನೋಡಿದರೆ ಇನ್ನೂ ಜೀವ ಹೋಗಿಲ್ಲ ಎಂಬಂತಿತ್ತು. ನೇತಾಡುತ್ತಿದ್ದ ಎರಡೂ ಕೈಗಳು ಸ್ವಲ್ಪ ಚಲಿಸಿದಂತೆಯೂ, ಕಾಪಾಡಿ ಎಂಬಂತೆ ಬೆರಳುಗಳನ್ನು ಅಲ್ಲಾಡಿಸುತ್ತಿರುವಂತೆಯೂ ಕಾಣಿಸಿ ಮುಸ್ಲಿಯಾರರು ಮರದತ್ತ ಉಸಿರು ಬಿಗಿಹಿಡಿದು ಓಡಿದರು. ಆ ಹೆಣ್ಣುಜೀವದ ಎರಡೂ ತೊಡೆಗಳನ್ನು ಅಪ್ಪಿ ಹಿಡಿದು ಕುತ್ತಿಗೆಯ ಕುಣಿಕೆ ಸಡಿಲಾಗುವಂತೆ ದೇಹವನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದರು. ಒಬ್ಬರೇನು ಮಾಡಲಾಗುತ್ತದೆ? ಹೇಗೆ ಇಳಿಸುವುದೆಂದು ತಿಳಿಯದೆ ಗೊಂದಲದಿಂದ ಮುಸ್ಲಿಯಾರರು ಏದುಸಿರು ಬಿಡುತ್ತಾ ದೇಹವನ್ನು ಹಿಡಿದು ನಿಂತಿದ್ದಾಗ ಪಕ್ಕದ ಊರಿನಿಂದ ರಸ್ತೆಯಲ್ಲಿ ಈ ಕಡೆಗೆ ಬರುತ್ತಿದ್ದವನನೊಬ್ಬ ಕಿಟಾರನೆ ಕಿರುಚುತ್ತಾ ವಾಪಸ್ ಓಟಕಿತ್ತ! ಮುಸ್ಲಿಯಾರ್ ಗಾಬರಿಯಾದರೂ ಹೆಣ್ಣುಜೀವವನ್ನು ಬಿಡಲಿಲ್ಲ. ಮೇಲುಸಿರು ಬಿಡುತ್ತಾ ಎಷ್ಟೋ ಹೊತ್ತು ದಿಗ್ಮೂಢರಂತೆ ನಿಂತೇ ಇದ್ದರು. ಆಗಾಗ್ಗೆ ಕೊರಳೆತ್ತಿ ಆ ಹೆಣ್ಣು ಜೀವದ ಮುಖದ ಕಡೆಗೆ ನೋಡುತ್ತಿದ್ದರು.
ಪಕ್ಕದೂರಿನಲ್ಲಿ ಸುದ್ದಿ ಹಬ್ಬಿ, ಅಲ್ಲಿಂದ ಹತ್ತಿಪ್ಪತ್ತು ಮಂದಿ ಓಡೋಡಿ ಬಂದು ಬುಗುರಿ ಮರದ ಬಳಿ ಸೇರಿದರು. ಮುಸ್ಲಿಯಾರರ ಬಿಗಿಮುಷ್ಟಿಯಿಂದ ಮೃತದೇಹವನ್ನು ಬಿಡಿಸಿ ಮರದಿಂದ ಕೆಳಗಿಳಿಸಿದರು. ಮೈಮೇಲೆ ಪರಿವೆಯೇ ಇಲ್ಲದಂತಿದ್ದ ಮುಸ್ಲಿಯಾರ್ ಜನರ ಗುಂಪನ್ನು ಸೀಳಿ ಮಸೀದಿಯತ್ತ ಸರಸರನೆ ನಡೆದರು. ಈ ಮಧ್ಯೆ ಮುಸ್ಲಿಯಾರನ್ನು ನೋಡಿ ಓಡಿ ಹೋಗಿದ್ದ ವ್ಯಕ್ತಿ, ‘ಅವರು ಆಕೆಯ ಕತ್ತಿಗೆ ಉರುಳು ಹಾಕಿ ಕೊಂಬೆಗೆ ನೇತಾಡಿಸಿ ಹಗ್ಗ ಎಳೆಯುತ್ತಿದ್ದುದನ್ನು ‘ಕಣ್ಣಾರೆ’ ಕಂಡೆ ಎಂದು ಊರವರ ಮುಂದೆ ಬಣ್ಣಿಸಿ ಹೇಳತೊಡಗಿದ. ಜನರೂ ಕ್ರುದ್ಧರಾಗಿದ್ದರು. ಕೇಸರಿ ಲುಂಗಿಯವನೊಬ್ಬ ‘ನೋಡಲು ಸಂಭಾವಿತರಂತೆ ಕಾಣುತ್ತಾರೆ.. ಈ ಗಡ್ಡದವರೆಲ್ಲ ಮಾಡುವುದು ಇಂತಹ ಹಲ್ಕಾ ಕೆಲಸವೇ..’ ಎಂದು ಕಿಡಿಕಾರಿದ. ಗುಂಪು ಸೇರಿದವರಲ್ಲಿ ಅಬ್ದುಲ್ಲಾ ಹಾಜಿಯ ಮೇಸ್ತ್ರಿಯೂ ಇದ್ದವನು ಧಣಿಗಳ ಮನೆಗೋಡಿ ಸುದ್ದಿ ಮುಟ್ಟಿಸಿದ. ಮಸೀದಿಯಲ್ಲೂ ಜನ ಸೇರತೊಡಗಿದರು. ಸಣ್ಣ ಧ್ವನಿಯಲ್ಲಿ ಶುರುವಾದ ಎರಡೂ ಕಡೆಯವರ ಮಾತುಕತೆ ಸೂರ್ಯ ಮೇಲೇಳುತ್ತಿದ್ದಂತೆಯೇ ಜೋರಾಗಿ ಇನ್ನೇನು ಹೊಯ್‌ಕೈ ಆಗಬೇಕೆನ್ನುವಾಗ ಯಾರೋ ಒಬ್ಬ ಸತ್ತು ಮಲಗಿದ್ದ ಆ ಹೆಣ್ಣುಜೀವದ ಗಂಡನೆಂಬ ತೆಳ್ಳನೆಯ ಪ್ರಾಣಿಯನ್ನು ಎಳೆದುಕೊಂಡು ಬಂದ.
ರಾತ್ರಿಯಿಡೀ ಗಡಂಗಿನ ಹೊರಗೆ ಬರಿಮೈಯಲ್ಲಿ ಮಲಗಿದ್ದ ಆ ಗಂಡ ಎಳೆದೊಯ್ದು ಬಂದ ರಭಸಕ್ಕೆ ಮತ್ತಿನಿಂದ ಪೂರ್ತಿ ಎಚ್ಚರವಾಗಿದ್ದ. ಹೆಗಲ ಮೇಲಿದ್ದ ಸಣ್ಣ ಬೈರಾಸಿನಿಂದ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದ. ‘ರಾತ್ರಿ ಕಂಠಪೂರ್ತಿ ಕುಡಿದು ಹೆಂಡತಿಯನ್ನು ಬಾಸುಂಡೆ ಬರುವಂತೆ ಬಡಿದೆ. ಎಷ್ಟು ಹೊಡೆದರೂ ಅವಳು ಹಣ ಕೊಡಲಿಲ್ಲ. ಸಿಟ್ಟಿನಿಂದ ಕೂಗಾಡಿ ಜೀವ ಕಳೆದುಕೊಳ್ಳುತ್ತೇನೆಂದು ಚೀರುತ್ತಾ ಮನೆಯಿಂದ ಓಡಿ ಹೋದಳು. ನಾನು ಮತ್ತೆ ಗಡಂಗಿನ ಕಡೆಗೆ ತೆರಳಿದೆ.. ಬೆಳಿಗ್ಗೆ ಯಾರೋ ಬಂದು ಎಬ್ಬಿಸಿದಾಗಲೇ ವಿಷಯ ಗೊತ್ತಾದದ್ದು.. ’ ಎಂದಾತ ಕೈಮುಗಿದು ನಿಂತಿದ್ದ. ಅವತ್ತು ಎರಡೂ ಊರಿನವರಿಗೆ ಮುಸ್ಲಿಯಾರರ ಮೇಲಿನ ನಂಬಿಕೆ ಇಮ್ಮಡಿಯಾಗಿತ್ತು. ಆದರೆ ಅಬ್ದುಲ್ಲಾ ಹಾಜಿ ಮಾತ್ರ ‘ಈ ಮುಸ್ಲಿಯಾರ್ ನಮ್ಮ ಮಸೀದಿಗೆ ಬೇಡ. ನಾಳೆ ಪೊಲೀಸರು ಮಸೀದಿಗೆ ಬಂದು ತನಿಖೆಯ ಹೆಸರಲ್ಲಿ ಕಿರುಕುಳ ಕೊಡುತ್ತಾರೆ. ಅವರ ಸಂಬಳದ ಲೆಕ್ಕಾ ಚುಕ್ತಾ ಮಾಡಿ ಕಳಿಸಿಬಿಡೋಣ..’ ಎಂದು ಹಠ ಹಿಡಿದು ಕೂತಿದ್ದು ಊರವರಿಗೆ ಸರಿಯೆನ್ನಿಸಲಿಲ್ಲ. ಜಮಾತಿನ ಸದಸ್ಯರು ಪ್ರೆಸಿಡೆಂಟರ ಒತ್ತಡಕ್ಕೆ ಮಣಿದಿರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅಬ್ಬುಲ್ಲಾ ಹಾಜಿ ಗೊಣಗುತ್ತಾ ತನ್ನ ಒತ್ತಾಯದಿಂದ ಹಿಂದೆ ಸರಿದು, ಪೊಲೀಸ್ ಠಾಣೆಗೆ ತಾನೇ ಹೋಗಿ ಅಧಿಕಾರಿಗಳ ಜೊತೆಗೆ ಮಾತನಾಡಿ ಕೇಸು ಗೀಸು ಆಗದಂತೆ ತಡೆದಾಗಿತ್ತು.
ಈಗ ಬಡ್ಡಿಯ ಹಣದ ಚರ್ಚೆ ತಾರಕಕ್ಕೇರಿದಂತೆಯೇ ಅಬ್ದುಲ್ಲಾ ಹಾಜಿ ಹಳೆಯ ಪ್ರಕರಣಕ್ಕೆ ಜೀವ ಕೊಡಲು ಹೊರಟಿದ್ದು ಹಲವರಲ್ಲಿ ಕಸಿವಿಸಿ ಉಂಟುಮಾಡಿತು. ಮುಸ್ಲಿಯಾರರನ್ನು ಮಸೀದಿಯಿಂದ ಹೊರಗೆ ಅಟ್ಟಲೇಬೇಕೆಂದು ಹಾಜಿ ನಿರ್ಧರಿಸಿದಂತಿತ್ತು. ‘ಮುಸ್ಲಿಯಾರರೇ ಇಲ್ಲಿ ಕೇಳಿ. ಷರೀಯತ್ತು ನಿಮಗೆ ಮಾತ್ರ ಗೊತ್ತಿರುವುದಲ್ಲ. ಬಡ್ಡಿಯ ಹಣವನ್ನು ಬೆಂಕಿಗೆ ಹಾಕುವುದೋ, ಸಮುದ್ರದಲ್ಲಿ ವಿಸರ್ಜಿಸುವುದೋ ಸಾಧ್ಯವಿಲ್ಲದಿದ್ದರೆ ಇನ್ನೊಂದು ದಾರಿಯಿದೆ. ಆ ಹಣದಿಂದ ಸಾರ್ವಜನಿಕ ಪಾಯಿಖಾನೆ ಕಟ್ಟಿಸಬಹುದು. ಕಳೆದ ವಾರ ಮಂಗಳೂರಿನ ದೊಡ್ಡ ಮಸೀದಿಯಲ್ಲಿ ಖಾಜಿಯವರ ಉಪನ್ಯಾಸದಲ್ಲಿ ಅದನ್ನೇ ಹೇಳಿದ್ದಾರೆ. ಹೇಗೂ ಉರ್ದು ಶಾಲೆಯಲ್ಲಿ ಪಾಯಿಖಾನೆ ಇಲ್ಲ. ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ ಬೇಡುತ್ತಾರೆ. ಅದಕ್ಕೊಂದು ಪರಿಹಾರವೂ ಆಯಿತು. ಈಗಲೇ ಖಾಜಿಗಳಿಗೊಂದು ಫೋನ್ ಮಾಡಿ, ಅವರೇನು ಹೇಳುತ್ತಾರೋ ಅದರಂತೆ ಮಾಡುವ..’– ಅಬ್ದುಲ್ಲಾ ಹಾಜಿಯ ಧ್ವನಿ ತಾರಕಕ್ಕೆ ಏರಿತ್ತು.
ಮುಸ್ಲಿಯಾರರು ಇಕ್ಕಟ್ಟಿಗೆ ಸಿಲುಕಿದರು. ಬಡ್ಡಿಯ ಕುರಿತ ಈ ಫಿಕ್ಹ್ ವಿಧಿಯನ್ನು ಅವರೂ ಓದಿಕೊಂಡಿದ್ದವರೇ. ಅಬ್ದುಲ್ಲಾ ಹಾಜಿಯ ಹಣ ಮಾಡುವ ದಂಧೆಯ ಕುರಿತೂ ಅವರಿಗೆ ಮಾಹಿತಿಗಳಿದ್ದವು. ಆದರೆ ಅದನ್ನು ಊರವರ ಎದುರು ಸಾಕ್ಷಿಯಿಲ್ಲದೆ ಹೇಳಿದರೆ ಜನ ನಂಬಬೇಕಲ್ಲ? ‘ಉರ್ದು ಶಾಲೆಗೆ ಶೌಚಾಲಯ ಬೇಕಿದ್ದರೆ ಶಿಕ್ಷಣ ಇಲಾಖೆಗೆ ನಾವೇ ಅರ್ಜಿ ಸಲ್ಲಿಸುವ. ಈಗ ಜಮಾತಿಗೆ ಬರುವ ಬಡ್ಡಿ ಹಣವನ್ನು ಖುದ್ದಾಗಿ ತರಿಸಿಕೊಂಡು ಬೆಂಕಿಗೆ ಹಾಕುವುದೊಂದೇ ದಾರಿ. ಅದರ ಹೊರತಾಗಿ ಬೇರೆ ಯಾವುದಕ್ಕೂ ನಾನು ಒಪ್ಪುವುದಿಲ್ಲ’ ಎಂದಂದು ಉದ್ವೇಗದಿಂದ ಎದ್ದು ನಿಂತ ಮುಸ್ಲಿಯಾರ್, ಪಂಚೆಯನ್ನು ಸೊಂಟಕ್ಕೆ ಬಲವಾಗಿ ಕಟ್ಟಿಕೊಂಡರು.
‘ಯಾವುದೋ ಊರಿಂದ ಹಿಂದುಮುಂದಿಲ್ಲದೆ ಓಡಿಬಂದು ಮಸೀದಿಯಲ್ಲಿ ನೌಕರಿಗೆ ಸೇರಿಕೊಂಡ ನಿಮಗೇ ಮುಂಡಾಸಿನ ಅಹಂಕಾರ ಇಷ್ಟಿದೆಯೆಂದರೆ…, ಅದ್ಯಾವ ಗಂಡಸು ಬ್ಯಾಂಕಿಗೆ ಹೋಗಿ ಹಣ ತಂದು ಇಲ್ಲಿ ಮಸೀದಿಯ ಮುಂದೆ ಸುಟ್ಟು ಬಿಡುತ್ತಾನೋ ನಾನೂ ನೋಡ್ತೀನಿ. ಪೊಲೀಸ್ ಕಂಪ್ಲೇಂಟ್ ಕೊಟ್ಟು ಒದ್ದು ಒಳಗೆ ಹಾಕಿಸ್ತೀನಿ. ಅವತ್ತು ಹುಣಸೇ ಮರಕ್ಕೆ ನೇಣು ಹಾಕಿಕೊಂಡ ಆ ಕಾಫಿರ ಹೆಣ್ಣಿಗೂ ಈ ಮುಸ್ಲಿಯಾರಿಗೂ ಏನು ಸಂಬಂಧವಿತ್ತು ಎನ್ನುವುದೂ ನನಗೆ ಗೊತ್ತಿದೆ. ಎಲ್ಲವನ್ನೂ ಬಯಲು ಮಾಡ್ತೀನಿ. ಸೂಸೈಡ್ ಕೇಸಿನ ಫೈಲು ರಿಓಪನ್ ಮಾಡಿಸ್ತೀನಿ. ಈ ಮುಸ್ಲಿಯಾರ್ ಮುಂಡಾಸು ಬಿಚ್ಚಿ ಮಸೀದಿಯಲ್ಲಿ ಇಟ್ಟು ಊರು ಬಿಡುವಂತೆ ಮಾಡದಿದ್ದರೆ ನಾನು ತಲ್ವಾರ್ ಖಾದರ್ ಹಾಜಿಯ ಮಗನೇ ಅಲ್ಲ…’ ಎನ್ನುತ್ತಾ ಅಬ್ದುಲ್ಲಾ ಹಾಜಿಯೂ ಎದ್ದು ಶರ್ಟಿನ ತೋಳನ್ನು ಮಡಚತೊಡಗಿದ.
****
ಮುಂಬೈಯ ಅಂಧೇರಿಯಿಂದ ಜುಹೂಗೆ ಹೋಗುವ ದಾರಿಯಲ್ಲಿ ತಲೆಯೆತ್ತಿ ನಿಂತಿದ್ದ 40 ಮಹಡಿಗಳ ಹಳೆಯ ಕಟ್ಟಡವದು. 30ನೇ ಮಹಡಿಯ ಬಲಪಾರ್ಶ್ವದ 610 ನಂಬರಿನ ಮನೆಯ ಬಾಲ್ಕನಿಯಲ್ಲಿ ಕುಳಿತು ಅಬ್ದುಲ್ ಖಾದರ್ ಮುಸ್ಲಿಯಾರ್ ಶುಭ್ರ ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳನ್ನು ತದೇಕಚಿತ್ತರಾಗಿ ನೋಡುತ್ತಿದ್ದರು. ಅಬೂಬಕರ್ ಸಿದ್ದೀಕ್ ಅಪ್ಪನ ಮುಖವನ್ನೇ ದಿಟ್ಟಿಸುತ್ತಾ ಕುಳಿತಿದ್ದ.
‘ಅಬ್ಬಾ.. ನೀವು ಸತ್ಯದ ಪರವಾಗಿ ಗಟ್ಟಿಯಾಗಿ ನಿಲ್ಲಲು ಯಾವತ್ತೂ ಹೆದರಿದವರಲ್ಲ. ಅವತ್ತು ಮಸೀದಿಯ ಮೀಟಿಂಗಿನಲ್ಲಿ ಅಬ್ದುಲ್ಲಾ ಹಾಜಿ ಅಷ್ಟೊಂದು ಸೊಕ್ಕಿನಿಂದ ಮಾತನಾಡಿದಾಗ ನೀವು ಏನನ್ನೂ ಹೇಳದೆ ಹಠಾತ್ತಾಗಿ ಎದ್ದುಬಂದು ಮನೆ ಸೇರಿದ್ದೇಕೆ? ನೀವು ಹಾಗೆ ಬಿಟ್ಟುಕೊಡುವವರಲ್ಲವಲ್ಲ…?’
‘ಯಾಕೋ ಯಾವುದೂ ಬೇಡವೆನ್ನಿಸಿತು ಮೋನೇ. ಯಾವ ಜಗಳಕ್ಕೂ ಇಲ್ಲಿ ಅರ್ಥವಿಲ್ಲ. ಅಮ್ಮನ ಗರ್ಭದೊಳಗಿಂದ ಈ ಬಾಡಿಗೆಯ ಭೂಮಿಗೆ ವಲಸೆ ಬರುವವರು ನಾವು. ಸತ್ತ ಬಳಿಕ ಇಲ್ಲಿಂದ ಭೂಗರ್ಭದೊಳಕ್ಕೆ ಮತ್ತೆ ವಲಸೆ. ಈ ಮಹಾವಲಸೆಯ ನಡುವೆ ಊರಿಂದ ಊರಿಗೆ ಎಷ್ಟೊಂದು ವಲಸೆಗಳು! ಅಲ್ಲಿ ದೂರದಲ್ಲಿ ಕಾಣಿಸುತ್ತಿರುವ ಜುಹೂ ಏರ್‌ಪೋರ್ಟ್‌ನಲ್ಲಿ ಇಡೀ ರಾತ್ರಿ ಎಷ್ಟೊಂದು ವಿಮಾನಗಳು ಯಾವಯಾವುದೋ ದೇಶಗಳಿಂದ ವಲಸಿಗರನ್ನು ತಂದು ಇಳಿಸುತ್ತಿವೆ ನೋಡು! ಇವರಲ್ಲಿ ಎಷ್ಟು ಮಂದಿ ಕೆಲಸಕ್ಕಿದ್ದ ದೇಶವನ್ನು ತೊರೆದು ಬಂದವರೋ? ಎಷ್ಟು ಮಂದಿ ಹುಟ್ಟಿದ ದೇಶವನ್ನೇ ಬಿಟ್ಟು ವಲಸೆ ಹೋಗುವವರೋ..!’
‘ಅಬ್ಬಾ… ಮಾತು ಮರೆಸಬೇಡಿ. ಸತ್ಯ ಹೇಳಿ. ನೀವ್ಯಾಕೆ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಲು ಆ ಬಡ್ಡಿಯ ಹಣ ಕೊಡಲು ಒಪ್ಪಲಿಲ್ಲ? ಫಿಕ್ಹ್ ನಿಮಗೂ ಗೊತ್ತಿತ್ತಲ್ವಾ?’
‘ಅಬ್ದುಲ್ಲಾ ಹಾಜಿ ಪರಮನೀಚ. ಕಳೆದ ವರ್ಷ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಿಸಲೆಂದು 50,000 ರೂಪಾಯಿ ಸರ್ಕಾರದ ಅನುದಾನ ಪಡೆದು ನುಂಗಿ ಹಾಕಿದ್ದ. ಅದು ಜಿಲ್ಲಾ ಪಂಚಾಯ್ತಿಯಿಂದ ಎನ್‌ಕ್ವೈರಿಗೆ ಬಂದಿತ್ತು. ಎರಡು ವಾರದ ಹಿಂದೆ ನನ್ನ ಬಳಿ ಬಂದು ಇದನ್ನೆಲ್ಲ ಹೇಳಿ ಕಣ್ಣೀರು ಸುರಿಸಿ ದುವಾ ಮಾಡಲು ಬೇಡಿಕೊಂಡಿದ್ದ. ಈಗ ಮಸೀದಿಯ ಬಡ್ಡಿಯ ಹಣ ಸಿಕ್ಕಿದರೆ ಅದರಲ್ಲೇ ಪಾಯಿಖಾನೆ ಕಟ್ಟಿ ಸರಕಾರಕ್ಕೆ ಲೆಕ್ಕ ತೋರಿಸುವುದು ಅವನ ದುರುದ್ದೇಶವಾಗಿತ್ತು.’
‘ಅದನ್ಯಾಕೆ ನೀವು ಎಲ್ಲರೆದುರು ಹೇಳಲಿಲ್ಲ? ಅವನ ಸೊಕ್ಕು ಇಳಿಸಬಹುದಾಗಿತ್ತಲ್ಲ?’
‘ನನ್ನಲ್ಲಿ ಸಾಕ್ಷಿ ಇರಲಿಲ್ಲ ಮೋನೇ..? ಹಾಗೆಯೇ ಹೇಳಿದರೆ ಜನ ನಂಬುತ್ತಿದ್ದರಾ? ಜಮಾತಿನಲ್ಲಿ ಬಹುತೇಕ ಎಲ್ಲರೂ ಬ್ಯಾಂಕ್ ಬಡ್ಡಿಯ ವ್ಯವಹಾರ ಮಾಡುವವರೇ. ನಾನು ಇದನ್ನೆಲ್ಲ ಹೆಚ್ಚು ಮಾತನಾಡಿದರೆ ಅವರಿಗೆ ರುಚಿಸುವುದೂ ಇಲ್ಲ..’
‘ಅದ್ಸರಿ. ಅವತ್ತು ನೇಣು ಹಾಕಿಕೊಂಡ ಮಹಿಳೆ ಯಾರು? ಅಬ್ದುಲ್ಲಾ ಹಾಜಿಗೆ ಆ ವಿಷಯದಲ್ಲಾದರೂ ಎದುರುತ್ತರ ಕೊಡಬೇಕಿತ್ತಲ್ವಾ?’
‘ಮೋನೇ… ಕೆಲವು ದಾರುಣ ದುಃಖಗಳನ್ನು ಎದೆಯೊಳಕ್ಕೆ ಎಷ್ಟು ಒತ್ತಿ ಹಿಡಿದರೂ ಒಂದಲ್ಲ ಒಂದು ದಿನ ಅವು ಆಕಾಶಕ್ಕೆ ಚಿಮ್ಮುವುದನ್ನು ತಡೆಯಲಾಗದು….’ ದೀರ್ಘ ನಿಟ್ಟುಸಿರು ಬಿಡುತ್ತಾ ಮುಸ್ಲಿಯಾರ್ ನೆನಪಿನ ಲೋಕವೊಂದಕ್ಕೆ ಜಾರಿದರು. ‘ನಾನು ಅವತ್ತು ಬೆಳಿಗ್ಗೆ ನಸುಬೆಳಕಿನಲ್ಲಿ ಬಿರುಸಾಗಿ ನಡೆಯುತ್ತಿದ್ದೆ. ಸಣ್ಣದಾಗಿ ಮಂಜು. ಹಠಾತ್ತಾಗಿ ಹುಣಸೆ ಮರದಲ್ಲಿ ನೇತಾಡುತ್ತಿದ್ದ ದೇಹ ಕಾಣಿಸಿತು. ಒಮ್ಮೆಲೆ ಅಲ್ಲಿ ನನಗೆ ನನ್ನ ಹೆತ್ತು ಹೊತ್ತು ಬೆಳೆಸಿದ ಉಮ್ಮಾ ಕಾಣಿಸಿದಳು. 30 ವರ್ಷಗಳ ಹಿಂದೆ ಅವತ್ತೊಂದು ದಿನ… ನನ್ನ ಉಮ್ಮಾ ಹೀಗೆಯೇ ನಡುರಾತ್ರಿ ಮನೆಯ ಜಂತಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಳು. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ನಫೀಸಾಗೆ ಎಚ್ಚರವಾಗದ ನಿದ್ರೆ. ನಾನು ಪರವೂರಿಗೆ ವ್ಯಾಪಾರಕ್ಕೆಂದು ಹೋದವನು ಬೆಳಿಗ್ಗೆಯ ಜಾವ ರೈಲು ಇಳಿದು ಮನೆಯ ಬಳಿ ಬಂದಾಗ ಎದುರಿನ ಬಾಗಿಲು ಸ್ವಲ್ಪ ತೆರೆದಿತ್ತು. ಅವತ್ತೂ ಹಾಗೆಯೇ ಕತ್ತಲು.. ಸಣ್ಣಗೆ ಮಂಜು ಆವರಿಸಿತ್ತು. ಬಾಗಿಲನ್ನು ತಳ್ಳಿ ಮನೆಯೊಳಕ್ಕೆ ಹೋದರೆ ನನ್ನ ಉಮ್ಮಾ ನೇತಾಡುತ್ತಿದ್ದಳು… ಗಂಡನ ಜೊತೆ ಸಂಸಾರ ನಡೆಸಿದ್ದು ಎರಡೇ ವರ್ಷ. ಇದ್ದ ಒಬ್ಬನೇ ಮಗನಿಗಾಗಿ ಜೀವ ಸವೆಸಿದಳು. ಗಂಡ ತೀರಿಕೊಂಡು ವರ್ಷಗಳಾದ ಬಳಿಕ ಶುರುವಾದದ್ದು ಅಸಾಧ್ಯ ಹೊಟ್ಟೆನೋವು. ಅವಳಿಗೆ ಯಾವ ಔಷಧಿಯೂ ನಾಟುತ್ತಿರಲಿಲ್ಲ. ಕೆಲವೊಮ್ಮೆ ರಾತ್ರಿಯಿಡೀ ನರಳುತ್ತಿದ್ದಳು. ಅವತ್ತು ಸಹಿಸಲಾಗದೆ ನಿರ್ಧಾರ ಮಾಡಿಬಿಟ್ಟಿದ್ದಳು. ಆ ಹುಣಸೇ ಮರದಲ್ಲಿ ನೇತಾಡುತ್ತಿದ್ದ ದೇಹವನ್ನು ನನ್ನ ಅಮ್ಮನದ್ದೆಂದೇ ಭಾವಿಸಿ ನಾನು ದಿಗ್ಭ್ರಾಂತನಾಗಿದ್ದೆ. ಬಹಳ ಹೊತ್ತು ನಾನು ಈ ಲೋಕದಲ್ಲೇ ಇರಲಿಲ್ಲ…’ ದೀರ್ಘ ನಿಟ್ಟುಸಿರು ಬಿಟ್ಟು ಆಕಾಶ ನೋಡಿದರು ಮುಸ್ಲಿಯಾರ್.
ಸಿದ್ದೀಕ್ ಎರಡೂ ಹಸ್ತಗಳಲ್ಲಿ ತನ್ನ ಕಣ್ಣುಗಳನ್ನು ಉಜ್ಜಿ ಕೆನ್ನೆಯ ಮೇಲೆ ಹಸ್ತಗಳನ್ನು ನೀವುತ್ತಾ ಕೆಳಗಿಳಿಸಿ ಅಪ್ಪನನ್ನು ನೋಡಿ ದೀರ್ಘ ಉಸಿರೆಳೆದ. ‘ಅಬ್ಬಾ… ಉಮ್ಮನ ಬಗ್ಗೆ ಅಜ್ಜಿಗೆ ಅಸಹನೆ ಇತ್ತಾ? ಅವರಿಬ್ಬರಿಗೂ ಜಗಳವಾಗುತ್ತಿತ್ತಾ?’
‘ಹೌದು ಮೋನೇ. ನಿನ್ನ ಉಮ್ಮ, ನನ್ನ ನಫೀಸಾ ಕೂಡಾ ವಲಸೆ ಬಂದವಳೇ.. ಆ ಧರ್ಮದಿಂದ..’
ದೂರದ ಏರ್‌ಪೋರ್ಟಿನ ಆಕಾಶದಲ್ಲಿ ಮತ್ತೊಂದು ವಿಮಾನ ಹೊಟ್ಟೆಯ ತಳಭಾಗದಲ್ಲಿ ಬೆಳಕು ಮಿನುಗಿಸುತ್ತಾ ನಿಧಾನಕ್ಕೆ ಕೆಳಗಿಳಿಯತೊಡಗಿತ್ತು.
******
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ಪರಿಸರ11 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ